Advertisement
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”

ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”

ಹನ್ನೆರಡರ ಸುಮಾರಿಗೆ ಎಲ್ಲರೂ ಒಟ್ಟಾದರು. ಸೀನಪ್ಪ ಎಲ್ಲ ರೆಡಿ ಮಾಡಿಟ್ಟಿದ್ದ; ಇನ್ನೊಂದು ಅರ್ಧ ಗಂಟೆ ಒಳಗೆ ಎಲ್ಲಾ ಮುಗಿಸಿ ಬಿಡುವ ಸೂಚನೆ ಇತ್ತು. ಆಗ ಶುರುವಾಯಿತು ಏನೋ ಗಲಿಬಿಲಿ. ಸೀನಪ್ಪ ಬಂದ “ಸಾರ್ ನಾನು ಹೊರಗಿರುತ್ತೇನೆ ನಾನಾಗಲೇ ತೋರಿಸಿದ್ದೆನಲ್ಲ ಕೌಂಟರ್ ಎರಡರಲ್ಲಿ ದೇವರಾಜ ಅನ್ನುವವರನ್ನ, ಅವರೆಲ್ಲ ಮಾಡಿಕೊಡುತ್ತಾರೆ” ಎಂದ. ಬಾಯಿಗೆ ಕೈ ಅಡ್ಡ ಇಟ್ಟು “ಲೋಕಾಯುಕ್ತರು ಬಂದಿದ್ದಾರೆ ಹಾಗಾಗಿ ಸ್ವಲ್ಪ ತಡ ಆಗಬಹುದು, ಒಂದು ಮೂತ್ತರಿಂದ  ಎರಡೂ ಮೂವತ್ತು ಊಟದ ಸಮಯ. ಅದು ಕೂಡ ಸ್ವಲ್ಪ ಹಿಂದೆ ಮುಂದೆ ಆಗಬಹುದು. ನಾನು ಆಮೇಲೆ ಸಿಗುವೆ” ಎಂದು ಹೊರಗೆ ಧಾವಿಸಿದ. ಗಂಡ ಹೆಂಡತಿಗೆ ಸ್ವಲ್ಪ ಗಾಭರಿ ಆಯಿತು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸ್ಲಾ..ಟ್!” ನಿಮ್ಮ ಈ ಭಾನುವಾರದ ಓದಿಗೆ

ಒಂದು ವಾರದಿಂದ ಪರಾಶರ ಒಂದು ರೀತಿಯ ಟೆನ್ಶನ್‌ನಲ್ಲೇ ಇದ್ದಾನೆ. ಹೊಸ ಮನೆಯ ರಿಜಿಸ್ಟ್ರೇಷನ್ ಇಂದು ನಾಳೆ ಎಂದು ಮುಂದು ಹೋಗುತ್ತಲೇ ಇದೆ. ಲೋನ್ ಕೊಡುವ ಬ್ಯಾಂಕ್‌ನವರು ತುದಿಗಾಲಲ್ಲಿ ನಿಂತಿದ್ದಾರೆ. ಆಗಾಗ “ಪಾರ್ಟಿ ಯಾವಾಗ ಬರ್ತಾರೆ ಸರ್” ಎನ್ನುವ ಕರೆ ಅವರಿಂದ ಬರ್ತಾನೆ ಇದೆ. ಹೌದು, ಪರಾಶರ ಈಗಲೂ ಸ್ವಂತ ಮನೆಯಲ್ಲೇ ಇರುವುದು. ಅನೇಕ ಅನುಕೂಲಗಳನ್ನು ಮುಖ್ಯವಾಗಿ ಹೆಂಡತಿ, ಮಕ್ಕಳಿಗೆ ಆಫೀಸು, ಶಾಲೆಗಳ ದೃಷ್ಟಿಯಿಂದ ಮನೆ ಬದಲಾಯಿಸಲು ನಿರ್ಧರಿಸಿದ್ದ.  ಅಚಾನಕ್ಕಾಗಿ ಅವನಿಗೆ ಗೆಳೆಯನೊಬ್ಬ ಕರೆ ಮಾಡಿ ತಿಳಿಸಿದ, ಗೆಳೆಯ ಇರುವ -ಇವನಿಗೆ ಬೇಕಾದ ದಿಕ್ಕಿನಲ್ಲಿಯೇ- ಅಪಾರ್ಟ್ಮೆಂಟಿನಲ್ಲಿ ಒಂದು ಫ್ಲಾಟ್, ಅಲ್ಲಿಗೆ ಹೋಲಿಸಿದಾಗ ತುಸು ಕಡಿಮೆಗೆ ಸಿಗುತ್ತಿರುವುದಾಗಿಯೂ, ತಾನೇ ಮುಂದೆ ನಿಂತು ಎಲ್ಲಾ ದಾಖಲೆ ಪರಿಶೀಲಿಸಿ ಸಣ್ಣಪುಟ್ಟ ಬದಲಾವಣೆ ರಿಪೇರಿಯನ್ನು ಮಾಡಿಸಿ ಕೊಡುವುದಾಗಿ ಗೆಳೆಯ ತಿಳಿಸಿದಾಗ ಇವನು ಒಮ್ಮೆಗೆ “ಹೂಂ” ಎನ್ನಲಿಲ್ಲ. ಪುನಃ ಇನ್ನೊಂದೆರಡು ಬಾರಿ ದಿಲೀಪನ ಫೋನ್ ಬಂದಾಗ ‘ಸರಿ’ ಎಂದು ಒಂದು ದಿನ ಹೆಂಡತಿ ಮಕ್ಕಳ ಸಮೇತ ಹೊಸ ಮನೆ ನೋಡಿ ಬರಲು ನಿರ್ಧರಿಸಿ, ಮೊದಲ ಸಲ ನೋಡುವಾಗ ದಿನ ವಾರ ನಕ್ಷತ್ರ ನೋಡದಿದ್ದರೂ ರಾಹುಕಾಲ ಆದರೂ ಗಮನಿಸೋಣ ಎಂದ ಶ್ರೀಮತಿಯ ಮಾತಿಗೂ ಅರೆ ಮನಸ್ಸಿನಿಂದ ‘ಹೂಂ’ ಎಂದು ಒಂದು ದಿನ ನಿಕ್ಕಿ ಮಾಡಿ ಹೊರಟ ಪರಾಶರ. ಆದರೆ ಆ ದಿನ ಮಧ್ಯಾಹ್ನ ಇದ್ದ ಮೀಟಿಂಗ್ ಬೆಳಿಗ್ಗೆಯೇ ಬದಲಾಗಿದ್ದುದರಿಂದ ದಿಲೀಪ ಆ ಮನೆಯ ಚಾವಿ ತನ್ನ ಗೆಳೆಯ ವಿಘ್ನೇಶ್ ಬಳಿ ಕೊಟ್ಟಿರುವುದಾಗಿಯೂ, ಇವರು ಅಲ್ಲಿಗೆ ಹೋಗುವಾಗ ವಿಘ್ನೇಶ್ ಗೇಟ್ ಬಳಿಯೇ ಕಾಯುತ್ತಿರುವುದಾಗಿ ಹೇಳಿದಾಗ ಇದೇನಪ್ಪ ಮೊದಲೇ ವಿಘ್ನ ಎಂದುಕೊಂಡ, ಕೂಡಲೇ ಶ್ರೀಮತಿ ಹಾಗೇನು ಇಲ್ಲ ಸಾಕ್ಷಾತ್ ಗಣಪತಿಯೇ ನಮಗೆ ಮನೆಬಾಗಿಲು ತೆರೆದು ತೋರಿಸುತ್ತಿರುವುದು ಎಂದು ಸಮಜಾಯಿಶಿ ಕೊಟ್ಟಳು.

ಹೀಗೆ (ಆ) ಈ ಮನೆ ನೋಡಿ, ಮೊದಲ ನೋಟಕ್ಕೆ ಪ್ರೀತಿ ಉಕ್ಕಿ, ತಮ್ಮ ಈಗಿರುವ ಮನೆಯಲ್ಲಿನ ಲೋಪ ದೋಷಗಳನ್ನೆಲ್ಲ ಎದ್ದು ಕಂಡುಬಂದದ್ದು ವಿಪರ್ಯಾಸವಲ್ಲದೆ ಮತ್ತೇನು?!  ಮನೆ ಇಷ್ಟವಾಗಿ ವಿಘ್ನೇಶ್ವರ, ದಿಲೀಪರ ಮುಖಾಂತರ ಕೆನಡಾದಲ್ಲಿದ್ದ ಮಾಲೀಕ ಅನಿವಾಸಿ ಭಾರತೀಯ ಗುರುತೇಜನ್ನು ಸಂಪರ್ಕಿಸಿ, ಅವನು “ನಾನು ಕೊನೆಯ ಬೆಲೆ ಹೇಳಿದ್ದೇನೆ, ದಿಲೀಪ್, ವಿಘ್ನೇಶ್ ನನಗೂ ಆತ್ಮೀಯರೇ; ಹಾಗಾಗಿ ನಿಮಗಾದರೆ ಒಂದಷ್ಟು ಕಡಿಮೆ ಮಾಡೋಣ” ಎಂದು ಹೇಳಿ ಒಂದು ಮೊತ್ತ ನಿರ್ಧರಿಸಿ, ಇನ್ನೊಂದು ವಾರದಲ್ಲಿ ಟೋಕನ್ ಅಡ್ವಾನ್ಸ್ ಕೊಟ್ಟು, ನಂತರ ಎರಡು ತಿಂಗಳಲ್ಲಿ ಉಳಿದದ್ದು ಚುಕ್ತಾ ಮಾಡಿ ಮನೆಗೆ ಬರುವುದಾಗಿ ಮಾತಾಯಿತು. ಮುಖ್ಯವಾಗಿ ಗುರುತೇಜ್ ಇಲ್ಲಿಗೆ ಬರುವ ದಿನಾಂಕ ನಿಗದಿಯಾಗದೆ ಉಳಿದದ್ದು ಡೋಲಾಯಮಾನವಾಗಿತ್ತು.

ಈಗಿರುವ ಮನೆಯನ್ನು ಉಳಿಸಿಕೊಂಡು ಹೊಸದನ್ನು ಕೊಳ್ಳುವ ಆಲೋಚನೆ ಮೂಡಿತಾದರೂ ಅದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಹೀಗೆ ಮಾಡಿದರೆ ಹೇಗೆ? ಹಾಗೆ ಮಾಡಿದರೆ ಹೇಗೆ ಎಂದು ಹಲವು ಹತ್ತು ರೀತಿ ಯೋಚಿಸಿ, ಬರು ಬರುತ್ತಾ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಬೆಂಗಳೂರಿನ ಜೀವನದ ಖರ್ಚು ಎಲ್ಲಾ ಗಮನಿಸಿ ಬರುವುದೆಲ್ಲ ಬರೀ ಇಎಂಐ ಗೆ ಹೋದರೆ ನೆಮ್ಮದಿ ಇಲ್ಲದ ಹಾಗೆ ಆಗುತ್ತದೆ. ಈ ಮನೆಕೊಟ್ಟು ಫ್ಲಾಟ್‌ಗೆ ಹೋಗಿ ಬೇಕಾದರೆ ಸಾಧ್ಯವಾದಾಗ ಬೇರೆ ರೀತಿಯ ಉಳಿತಾಯ ಮಾಡೋಣ ಮಕ್ಕಳ ಭವಿಷ್ಯಕ್ಕೆ ಎಂದು ನಿರ್ಧರಿಸಿದ್ದರು.

ಅದರಂತೆಯೇ ಇದ್ದ ಮನೆಯನ್ನು ಪರಿಚಿತರೊಬ್ಬರು ಕೊಳ್ಳಲು ಮುಂದೆ ಬಂದು ಎಲ್ಲವೂ ಸುಸೂತ್ರವಾಗಿ ಮುಗಿಯುತ್ತಾ ಬಂತು. ಗುರುತೇಜ್‌ಗೂ ಟೋಕನ್ ನಂತರ ಅಡ್ವಾನ್ಸ್ ಕೊಟ್ಟು ದಾಖಲೆ ಪಡೆದುಕೊಂಡರು. ಮುಖ್ಯವಾಗಿ ಗುರುತೇಜ್‌ಗೆ ರಜೆಯ ಸಮಸ್ಯೆ. ಕೆನಡಾದಿಂದ ಬೆಂಗಳೂರಿಗೆ ಬರುವ ದಿನಾಂಕ ಇಂದು ನಾಳೆ ಎಂದು ಮುಂದು ಹೋಗುತ್ತಲೇ ಇತ್ತು. ಒಮ್ಮೆಯಂತೂ ಫ್ಲೈಟ್ ಬುಕ್ ಮಾಡಿ, ಕ್ಯಾನ್ಸಲ್ ಮಾಡಿದ್ದ; ಅವನಿಗಿದ್ದ ಕೆಲಸದ ಹೊರೆಯಿಂದ. ಪರಾಶರನಿಗೆ ಎರಡೂ ರಿಜಿಸ್ಟ್ರೇಷನ್ ಒಟ್ಟಿಗೆ ಆದರೆ ಅನುಕೂಲ. ಇದನ್ನು ಕೊಟ್ಟು ಅದನ್ನು ತೆಗೆದುಕೊಂಡ ನೆಮ್ಮದಿ. ಸೂಕ್ತ ದಿನ ಗೃಹಪ್ರವೇಶ ಮಾಡಬಹುದು ಎಂದು. ಕೊನೆಗೂ ಹಾಗೆ ಮಾಡಲಾಗದೆ ಇದ್ದ ಮನೆಯನ್ನು ರಿಜಿಸ್ಟ್ರೇಷನ್ ಮಾಡಿ ಕೊಡಲೇಬೇಕಾಯಿತು. “ಸಾರ್ ಆ ಮನೆ ರಿಜಿಸ್ಟರ್ ಆಗಿ, ನೀವು ಹೋಗುವವರೆಗೂ ಇಲ್ಲಿಯೇ ಇರಿ. ನನಗೆ ಅವಸರ ಏನೂ ಇಲ್ಲ” ಎಂದಿದ್ದ ಈ ಮನೆ ಕೊಂಡಿದ್ದ ಉಮೇಶ್ ರೈ. ಇವರಿಗೆ ಸಂಕೋಚ. ಅನಿವಾರ್ಯವಾದರೆ ಬಾಡಿಗೆ ಕೊಟ್ಟು ಇರೋಣ ಎಂದು ಹಾಗೆ ಹೇಳಿದಾಗ, ಅಯ್ಯೋ ಎಲ್ಲಿಯಾದರೂ ಉಂಟೆ ಒಂದಲ್ಲ ಎರಡು ತಿಂಗಳು ಇರಿ ಬಾಡಿಗೆ ಏನು ಬೇಡ ಎಂದು ಖಡಾ ಖಂಡಿತವಾಗಿ ಹೇಳಿದಾಗ ಇವರಿಗೊಂದು ರೀತಿ ಸಂಕೋಚ ಹೆಚ್ಚಾಯಿತು. ಏನು ಮಾಡಲು ಸಾಧ್ಯ ಒಂದಷ್ಟು ದಿನ ಸ್ವಂತ ಮನೆಯ ವಾಸದ ಭಾಗ್ಯ ಇರಲಿಕ್ಕಿಲ್ಲ ಎಂದು ಸುಮ್ಮನಾಗಿದ್ದರು. ಆದರೆ ಗುರುತೇಜನ ಮೇಲೆ ಒತ್ತಡ ಹೆಚ್ಚಿಸಲು ಶುರು ಮಾಡಿದರು.

ಕೊನೆಗೂ ರಿಜಿಸ್ಟ್ರೇಷನ್ ದಿನ ನಿಕ್ಕಿಯಾಯಿತು. ಪರಾಶರನ ಗೆಳೆಯನೊಬ್ಬ ಸೂಚಿಸಿದ ಏಜೆಂಟ್ ಒಬ್ಬರನ್ನು ಸಂಪರ್ಕಿಸಿ, ವ್ಯವಹಾರ ಕುದುರಿಸಿ ಬುಧವಾರ ಬೆಳಗ್ಗೆ 11ರ ಸ್ಲಾಟ್ ಸಿಕ್ಕಿದೆ ಎಂದು ಅವನು ಹೇಳಿದ ಮೇಲೆ, ಗಂಡ-ಹೆಂಡತಿ ಆ ದಿನದ ದಿನಚರಿಯನ್ನು ಹೊಂದಿಸಿಕೊಂಡು ಸಿದ್ಧರಾದರು.  ಪರಾಶರ ಮನಸ್ಸಿನಲ್ಲಿ ಲೆಕ್ಕ ಹಾಕಿದ. ಬುಧವಾರ ಹನ್ನೆರಡರಿಂದ ಒಂದೂ ಮೂವತ್ತು ರಾಹುಕಾಲ, ಹಾಗಾಗಿ ರಿಜಿಸ್ಟ್ರೇಷನ್ ಮುಗಿದಿರುತ್ತದೆ. ಹೆಂಡತಿ ಕಡೆಯಿಂದ ಸಮಸ್ಯೆಯಾಗಲಿಕ್ಕಿಲ್ಲ. ಅವನಿಗೆ ಗೊತ್ತಿರಲಿಲ್ಲ ಇದೇ ವಿಷಯ ಶ್ರೀಮತಿಯ ತಲೆಯಲ್ಲಿಯೂ ಓಡಿತ್ತು.  ತೀರಾ ಮುಹೂರ್ತ ನೋಡಲು ಸಾಧ್ಯವಿಲ್ಲ ಕೊನೆಗೆ ರಾಹುಕಾಲವನ್ನಾದರೂ ನೋಡಬಾರದೆ! ದೇವರ ದಯೆ ಅದರೊಳಗೆ ಮುಗಿದಿರುತ್ತೆ.!!

ಮನೆಯಿಂದ ರಿಜಿಸ್ಟ್ರಾರ್ ಕಚೇರಿಗೆ ಅರ್ಧ ಗಂಟೆ ಕಾರಿನಲ್ಲಿ. ಹತ್ತೂವರೆಗೆ ಅಲ್ಲಿದ್ದು ಬಿಡೋಣ ಎಂದು ನಿರ್ಧರಿಸಿದರು.  ಇನ್ನೂ ಎರಡು ದಿನ ಇತ್ತು ಆಗ ನೆನಪಾಯಿತು ಪರಾಶರನಿಗೆ ಅಲ್ಲೇ ಹತ್ತಿರದಲ್ಲಿ ಶ್ರೀಮತಿಯ ಸೋದರತ್ತೆ ಶಾರದಕ್ಕನ ಮನೆ ಇರುವುದು. ಅವರು ತುಂಬಾ ಸಲ -ಫಂಕ್ಷನ್‌ಗಳಲ್ಲಿ ಸಿಕ್ಕಾಗ- ಕರೀತಾ ಇರ್ತಾರೆ. ಬೆಳಗಿನ ತಿಂಡಿಗೆ ಅವರ ಮನೆಗೆ ಹೋಗಿಬಿಡೋಣ. ಒಮ್ಮತದ ನಿರ್ಧಾರ ಆಯಿತು.  ಫೋನ್ ಮಾಡಿ ತಿಳಿಸಿ, ಅವರು ಸಂತಸಪಟ್ಟು ಬರಲು ಹೇಳಿ ಕಾಯ್ತಾ ಇರುವುದಾಗಿ ತಿಳಿಸಿದರು. ಆದರೆ ಮಂಗಳವಾರ ಮಧ್ಯಾಹ್ನ ಅವರಿಂದ ಫೋನ್ ಶ್ರೀಮತಿಗೆ. ಸಾರಾಂಶ ಅವರಿಗೆ ತೀರಾ ಬೇಕಾದವರೊಬ್ಬರ ಸಾವಾಗಿದೆ. -ಅವರು ಶ್ರೀಮತಿಗೂ ತಿಳಿದವರೇ- ಹಾಗಾಗಿ ಈ ಸಂಜೆಯೇ ಹೋಗಿ ಬಂದುಬಿಡುತ್ತೇನೆ ನಾಳೆ ಬೆಳಗ್ಗೆ ತಪ್ಪಿಸಬೇಡಿ ಎಂದು. ಸರಿ ಎಂದಳು. ಮಾರನೇ ಬೆಳಗ್ಗೆ ಶಾರದಕ್ಕನವರ ಫೋನ್, ಬೆಂಗಳೂರಿನಲ್ಲಿ ಕೆಲವರು ಸಮಯ ಪಾಲನೆ ಮಾಡುವುದಿಲ್ಲ ಟ್ರಾಫಿಕ್ ನೆವ ಇದ್ದೇ ಇರುತ್ತದೆ. ಇನ್ನು ಕೆಲವರು ಕೆಲಸದ ಭರದಲ್ಲಿ ಹೇಳಿಯೂ ಹೋಗುವುದಿಲ್ಲ. ಹಾಗಾಗಿ ಕನ್ಫರ್ಮ್ ಮಾಡಿಕೊಳ್ಳಲು ಫೋನ್ ಮಾಡಿರಬಹುದು ಎಂದುಕೊಂಡು ಪರಾಶರ ರಿಸೀವ್ ಮಾಡಿದ. ಆ ಕಡೆಯಿಂದ ಶಾರದಕ್ಕ “ಪುಟ್ಟ ಬರ್ತಿದೀರಿ ತಾನೇ ತಪ್ಪಿಸಬೇಡಿ ನಾನು ಸ್ವಲ್ಪ ಹೊರಗೆ ಹೋಗಿರುತ್ತೇನೆ. ಅದೇ ನಿನ್ನೆ ಶ್ರೀಮತಿಗೆ ಹೇಳಿದೆನಲ್ಲ ನನಗೆ ಅಲ್ಲಿ ಹೋಗಿ ಬರಲಾಗಲಿಲ್ಲ, ಅದಕ್ಕೆ ಸರಿಯಾಗಿ ಅವರಿಗೆ ಕ್ರಿಮೆಟೋರಿಯಂ ನಲ್ಲಿ ‘ಸ್ಲಾಟ್’ ಸಿಗಲಿಲ್ಲವಂತೆ. ಇಂದು ಬೆಳಗ್ಗೆ ಎಂಟಕ್ಕೆ ಸಿಕ್ಕಿದೆಯಂತೆ, ‘ಒಳ್ಳೆಯದಾಯಿತು’! ನಾನು ಬೇಗ ಹೋಗಿ ನೋಡಿಕೊಂಡು ಬಂದುಬಿಡುತ್ತೇನೆ. ಮನೆಯಲ್ಲಿ ಮಗಾ ಸೊಸೆ ಇರುತ್ತಾರೆ. ಬಂದುಬಿಡಿ” ಎಂದು ಫೋನ್ ಕಟ್ ಮಾಡಿದರು. ಶ್ರೀಮತಿಗೆ ವಿಷಯ ತಿಳಿಸಿದ.

ಎರಡು ಮಿಸ್ಟ್ಡ್ ಕಾಲ್ ಕಾಣಿಸಿತು. ಗುರುತೇಜ್ ನದು. ತಕ್ಷಣ ಇವನೇ ಕಾಲ್ ಮಾಡಿದ. “ಫ್ಲೈಟ್ ತಡವಾಗಿ ಮನೆ ಸೇರಿದ್ದೇ ಬೆಳಗಿನ ಜಾವ ನಾಲ್ಕು ಗಂಟೆಗೆ. ಆದಷ್ಟು ಬೇಗ ರೆಡಿಯಾಗಿ ಹನ್ನೊಂದಕ್ಕೆ ಅಲ್ಲಿರುತ್ತೇನೆ. ಹೆಚ್ಚೆಂದರೆ ಅರ್ಧ ಗಂಟೆ ತಡವಾಗಬಹುದು. ನೀವೆಲ್ಲ ಸಿದ್ಧ ಮಾಡಿಟ್ಟುಕೊಳ್ಳಿ, ಬಂದುಬಿಡ್ತೇನೆ” ಎಂದ. ಗಂಡ ಹೆಂಡತಿ ಮಾತಾಡಿಕೊಂಡರು. ಶ್ರೀಮತಿ ಬೇಡವೆಂದರೂ ಪರಾಶರ ಏಜೆಂಟ್ ಸೀನಪ್ಪನಿಗೆ ಫೋನ್ ಮಾಡಿದ. “ಹೇಳಿ ಸಾರ್, ಎಲ್ಲಾ ರೆಡಿ ಇರುತ್ತೆ ಬಂದುಬಿಡಿ ಒಂದರ್ಧ ಗಂಟೆ ಮುಂಚೇನೆ” ಎಂದ. ಪರಾಶರ ವಿಷಯ ತಿಳಿಸಿದ. ಸೀನಪ್ಪ “ಹೌದಾ ಒಂದು ಕೆಲಸ ಮಾಡಿ, ನಾನು ಸ್ವಲ್ಪ ಮುಂದೆ ತಳ್ತೀನಿ ಬನ್ನಿ ಪರವಾಗಿಲ್ಲಾ” ಎಂದ. ಇಂತಹವು ಅವನಿಗೆಷ್ಟೋ!!  ಮೊದಲೇ ಸಣ್ಣಪುಟ್ಟದಕ್ಕೆ ಆತಂಕ ಮಾಡಿಕೊಳ್ಳುವ ಪರಾಶರನಿಗೆ ಗಲಿಬಿಲಿ ಶುರುವಾಯಿತು. ಪುನಹ ಸೀನಪ್ಪನ ಫೋನ್. “ಆರಾಮಾಗಿ ಬನ್ನಿ ಹನ್ನೆರಡರ ಸ್ಲಾಟ್ ಫಿಕ್ಸ್ ಮಾಡಿದ್ದೀನಿ” ಅಂದ. ಗಂಡ ಹೆಂಡತಿ ಮುಖ ಮುಖ ನೋಡಿಕೊಂಡರು. ಅಯ್ಯೋ ಈ ರಾಹುಕಾಲ ಗುಳಿಕ ಕಾಲ ಎಲ್ಲ ನಾವು ಮಾಡಿಕೊಂಡಿರುವುದು, ದೇವರಿಗಿಂತ ದೊಡ್ಡದು ಯಾವುದೂ ಇಲ್ಲಾ. ಅವನು ಇಟ್ಟ ಹಾಗೆ ಎಂದುಕೊಂಡರು.

ಸುಮಾರು ಒಂಬತ್ತೂವರೆಗೇ ಶಾರದಕ್ಕನ ಮನೆ ತಲುಪಿದ್ದರು. ಶಾರದಕ್ಕನೇ ಮನೆ ಗೇಟ್ ಬಳಿ ಕೂದಲು ಒಣಗಿಸುತ್ತಾ ನಿಂತುಕೊಂಡಿದ್ದರು. ಖುಷಿಯಿಂದ “ಬನ್ನಿ ಬನ್ನಿ” ಎಂದು ಸ್ವಾಗತಿಸಿದರು. ಅವರು ಹೇಳಿದ ಹಾಗೆ ಮಗ ಸೊಸೆ ಮನೆಯಲ್ಲಿದ್ದರು. ಕೈಯಲ್ಲಿ ಲ್ಯಾಪ್ಟಾಪ್ ಹಿಡಿದುಕೊಂಡೆ ಒಂದೊಂದು ರೂಮಿನಿಂದ ಹೊರ ಬಿದ್ದು ಹಾಯ್ ಎಂದು, “ಒಂದು ಹತ್ತು ನಿಮಿಷ ಬರುತ್ತೇವೆ” ಎಂದು ಒಬ್ಬರು, “ಒಂದು ಮೀಟಿಂಗ್‌ನಲ್ಲಿದ್ದೇನೆ” ಎಂದು ಇನ್ನೊಬ್ಬರು ಅವರವರ ರೂಮ್ ಸೇರಿದರು. ಇವರಿಗೂ ಇದು ಅಭ್ಯಾಸ ಆಗಿರುವುದರಿಂದ ಮುಜುಗರವೇನು ಆಗಲಿಲ್ಲ. ಶಾರದಕ್ಕ ತಿಂಡಿ ತಟ್ಟೆಗೆ ಹಾಕುತ್ತಾ ಮಾತು ಮುಂದುವರಿಸಿದರು. “ನಿನ್ನೆ ಸಂಜೆ ಹೋಗಲಾಗಲಿಲ್ಲ, ಬೆಳಗ್ಗೆ ಬೇಗ ಎದ್ದು ತಿಂಡಿಗೆ ರೆಡಿ ಮಾಡಿಟ್ಟು ಆಟೋದಲ್ಲಿ ಹೋಗಿ ಅಲ್ಲಿ ನಿಲ್ಲಿಸಿ ನೋಡಿಕೊಂಡು ಬಂದುಬಿಟ್ಟೆ. ಮೊದಲು ಹತ್ತು ಗಂಟೆ ಸ್ಲಾಟ್ ಸಿಕ್ಕಿತ್ತಂತೆ ಆಮೇಲೆ ಹನ್ನೊಂದು ಎಂದರಂತೆ. ನಾನು ಕಾಯಲಿಲ್ಲ, ಸುಮ್ಮನೆ ನೋಡಿಕೊಂಡು ನಾಗರಾಜನ ಹೆಂಡತಿಗೆ ಸಾಂತ್ವನ ಹೇಳಿ ಬಂದುಬಿಟ್ಟೆ. ಪಾಪ ಇನ್ನೂ ಐವತ್ತೈದಂತೆ, ಹಾರ್ಟ್‌ ಅಟ್ಯಾಕ್.”  ವಿವರಣೆ ನೀಡುತ್ತಲೇ ಇಡ್ಲಿ, ಚಟ್ನಿ, ಸಾಂಬಾರ್ ಜೊತೆಗೆ ಕೇಸರಿ ಬಾತ್ ಬಡಿಸುತ್ತಿದ್ದರೆ, ‘ಹನ್ನೊಂದರ ಸ್ಲಾಟ್’ ಅನ್ನುವ ಪದ ಮಾತ್ರ ಇವರಿಬ್ಬರಿಗೆ ಹೆಚ್ಚು ತಟ್ಟಿದ್ದು. ಸದ್ಯ ರಿಜಿಸ್ಟ್ರೇಷನ್ ಒಂದು ಗಂಟೆ ಮುಂದೆ ಹೋಗಿದ್ದು, ‘ಹನ್ನೊಂದರ ಸ್ಲಾಟ್’ ತಮಗೆ ತಪ್ಪಿದ್ದು ಒಳ್ಳೆಯದಾಯಿತೇನೋ ಎಂಬ ಭಾವ ಪರಸ್ಪರ ಮುಖ ನೋಡಿಕೊಂಡ ಅವರಿಬ್ಬರ ಕಣ್ಣುಗಳಲ್ಲಿತ್ತೇ.?!  ಏನೋ…ಪ್ಪ…   “ಅಯ್ಯೋ ಸ್ವೀಟ್ ಎಲ್ಲಾ ಯಾಕೆ ಮಾಡಿದ್ರಿ” ಎಂದಳು ಶ್ರೀಮತಿ. “ಅಯ್ಯೋ ಅದರಲ್ಲೇನು ಅಪರೂಪಕ್ಕೆ ಬಂದಿದ್ದೀರಾ” ಎಂದು ಪ್ರೀತಿಯಿಂದ ಬಡಿಸಿದರು.

ಶಾರದಕ್ಕನ ಮನೆಯಿಂದ ಆಫೀಸ್ ಹತ್ತಿರವೇ, ಆದರೂ ಇರಲಿ ಎಂದು ಹನ್ನೊಂದು ಗಂಟೆಗೆಲ್ಲ ತಲುಪಿ, ಹೊರಗೆ ಕಲ್ಲು ಬೆಂಚಿನ ಮೇಲೆ ಕುಳಿತರು. ಗುರುತೇಜ್‌ನ ಮೆಸೇಜ್ ಇತ್ತು ಪರಾಶರನಿಗೆ. ಆದಷ್ಟು ಬೇಗ ಬರುವುದಾಗಿಯೂ, ಹೋಟೆಲ್‌ನಿಂದ ಹೊರಡುತ್ತಿರುವುದಾಗಿಯೂ ತಿಳಿಸಿದ್ದ. ಹಾಗೆಯೇ ವಿಘ್ನೇಶ್ವರ ಬರುತ್ತಿರುವುದಾಗಿಯೂ ತಾನು ಬರಲು ಸಾಧ್ಯವಾಗುತ್ತಿಲ್ಲ ಎಂದು ದಿಲೀಪ ಮೆಸೇಜ್ ಮಾಡಿದ್ದ. ಪರಾಶರ ಸೀನಪ್ಪನ ಹುಡುಕಾಟದಲ್ಲಿದ್ದ. ಶ್ರೀಮತಿ ಯಥಾ ಪ್ರಕಾರ ಟೆನ್ಶನ್ ಕಡಿಮೆ ಮಾಡಿಕೊಳ್ಳಲು ಮೊಬೈಲ್ ಮೊರೆ ಹೋಗಿದ್ದಳು. ಆಗ ನೆನಪಾದಳು ಕುಮುದಾ! ಹೌದು ಶ್ರೀಮತಿಯ ಅಕ್ಕನ ಮಗಳು ತಿರುಪತಿಗೆ ಹೊರಟಿದ್ದಳು. ಆ ಬಗ್ಗೆ ಹೋದ ವಾರವೇ ಮೆಸೇಜ್ ಹಾಕಿದ್ದಳು. ಸರಿಯಾಗಿ ಯಾವ ದಿನವೆಂದು ನೆನಪಿರಲಿಲ್ಲ, ಹಾಗಾಗಿ ಯಾವುದಕ್ಕೂ ಇರಲಿ ಎಂದು ಫೋನ್ ಮಾಡಿಯೇ ಬಿಟ್ಟಳು ತೆಗೆಯುತ್ತಾಳೋ ಇಲ್ಲವೋ ಎಂಬ ಅಳುಕಿನಲ್ಲಿಯೇ. ಇವಳಿಗೆ ಅಚ್ಚರಿ ಎರಡು ಸಲ ರಿಂಗ್ ಆಗುವುದರೊಳಗೆ ಫೋನ್ ರಿಸೀವ್ ಮಾಡಿ “ಹೇಳಿ ಚಿಕ್ಕಿ ಏನ್ ಸಮಾಚಾರ” ಎಂದಳು ಕುಮುದಾ. ಕುಶಲದ ನಂತರ ತಿಳಿದಿದ್ದೇನೆಂದರೆ ಅವಳು ಕುಟುಂಬ ಸಮೇತ  ತಿರುಪತಿಯಲ್ಲಿದ್ದಳು. ಐದು ನಿಮಿಷ ಕಳೆದಿದ್ದರೆ ಫೋನ್‌ಗೆ ಸಿಕ್ಕುತ್ತಿರಲಿಲ್ಲ, ರೂಮ್ನಲ್ಲಿಯೇ ಲಗೇಜ್ ಜೊತೆ ಫೋನ್ ಬಿಟ್ಟು ಹೊರಡುತ್ತಿದ್ದಾರೆ. ಅವರಿಗೆ ಅಲಾಟ್ ಆಗಿದ್ದದ್ದು ವಿಶೇಷ ದರ್ಶನದ ‘12:30ರ ಸ್ಲಾಟ್’ ಯಾವುದಕ್ಕೂ ಇರಲಿ ಎಂದು; ಸ್ವಲ್ಪ ಬೇಗ ಕ್ಯೂನಲ್ಲಿ ನಿಂತರೆ ಕೆಲವೊಮ್ಮೆ ಬೇಗ ದರ್ಶನವಾಗುತ್ತದೆ ಎಂದು ಹೊರಡುತ್ತಿದ್ದರು. ಸದ್ಯ ಫೋನ್‌ಗೆ ಸಿಕ್ಕಿದಳಲ್ಲ ಎಂಬ ಖುಷಿಯಲ್ಲಿ ಶ್ರೀಮತಿ “ಹಾಗೆಯೇ ನಮ್ಮ ಕಾಣಿಕೆ ನೂರು ರೂಪಾಯಿ ಹುಂಡಿಗೆ ಹಾಕಿಬಿಡು ನಾನು ಈಗಲೇ ಜೀಪೇ ಮಾಡುವೆ” ಎಂದಾಗ “ಅವಸರವೇನಿಲ್ಲ ಚಿಕ್ಕಿ ನಾನು ಹಾಕಿರುತ್ತೇನೆ ನೀವು ಆಮೇಲೆ ಕಳಿಸಿ” ಎಂದು ಕುಮುದಾ ಹೇಳಿದರೂ ಶ್ರೀಮತಿ ಕೂಡಲೇ ನೂರು ರೂಪಾಯಿ ಕಳಿಸಿ ನೆಮ್ಮದಿ ಕಂಡುಕೊಂಡಳು.

ಹನ್ನೆರಡರ ಸುಮಾರಿಗೆ ಎಲ್ಲರೂ ಒಟ್ಟಾದರು. ಸೀನಪ್ಪ ಎಲ್ಲ ರೆಡಿ ಮಾಡಿಟ್ಟಿದ್ದ; ಇನ್ನೊಂದು ಅರ್ಧ ಗಂಟೆ ಒಳಗೆ ಎಲ್ಲಾ ಮುಗಿಸಿ ಬಿಡುವ ಸೂಚನೆ ಇತ್ತು. ಆಗ ಶುರುವಾಯಿತು ಏನೋ ಗಲಿಬಿಲಿ. ಸೀನಪ್ಪ ಬಂದ “ಸಾರ್ ನಾನು ಹೊರಗಿರುತ್ತೇನೆ ನಾನಾಗಲೇ ತೋರಿಸಿದ್ದೆನಲ್ಲ ಕೌಂಟರ್ ಎರಡರಲ್ಲಿ ದೇವರಾಜ ಅನ್ನುವವರನ್ನ, ಅವರೆಲ್ಲ ಮಾಡಿಕೊಡುತ್ತಾರೆ” ಎಂದ. ಬಾಯಿಗೆ ಕೈ ಅಡ್ಡ ಇಟ್ಟು “ಲೋಕಾಯುಕ್ತರು ಬಂದಿದ್ದಾರೆ ಹಾಗಾಗಿ ಸ್ವಲ್ಪ ತಡ ಆಗಬಹುದು, ಒಂದು ಮೂತ್ತರಿಂದ  ಎರಡೂ ಮೂವತ್ತು ಊಟದ ಸಮಯ. ಅದು ಕೂಡ ಸ್ವಲ್ಪ ಹಿಂದೆ ಮುಂದೆ ಆಗಬಹುದು. ನಾನು ಆಮೇಲೆ ಸಿಗುವೆ” ಎಂದು ಹೊರಗೆ ಧಾವಿಸಿದ. ಗಂಡ ಹೆಂಡತಿಗೆ ಸ್ವಲ್ಪ ಗಾಭರಿ ಆಯಿತು. ಆದರೆ ಶ್ರೀಮತಿಗೆ ಹೇಗೂ ‘ಒಂದೂ ಮೂವತ್ತು’ ದಾಟಿ ಬಿಡಲಿ ಎನ್ನುವ ಆಸೆ. ಗಲಿಬಿಲಿ, ಗಜಿಬಿಜಿ ಶಾಂತವಾದಂತಾಯಿತು. ಯಾರೋ ಒಬ್ಬರು ಇವರ ಹೆಸರು ಕರೆದು ಕೌಂಟರ್ ನಂಬರ್ ಎರಡಕ್ಕೆ ಹೋಗಿ ಅವರು ಹೇಳಿದ ಕಡೆಗಳೆಲ್ಲ ಸಹಿ ಮಾಡಿ ಕೊಟ್ಟಾಗ ಒಂದೂ ಇಪ್ಪತ್ತು. “ಊಟಕ್ಕೆ ಹೋಗಿ ಬರ್ತೇವೆ, ಸೀನಪ್ಪ ಹೊರಗೆ ಸಿಕ್ತಾನೆ” ಎಂದು ಇವರನ್ನು ಹೊರಗೆ ಕಳಿಸಿದಾಗ ಒಂದೂ ಮೂವತ್ತು!

ಸೀನಪ್ಪ ಹೊರಗಿದ್ದ “ಇನ್ನೊಂದು ಹತ್ತು ನಿಮಿಷ ನಾನೇ ಎಲ್ಲಾ ತಂದುಕೊಡುತ್ತೇನೆ” ಎಂದ. ಪರಾಶರ ಅವನಿಗೆ ಕೊಡುವುದನ್ನೆಲ್ಲ ಕೊಟ್ಟು, ಎಲ್ಲರೂ ಹೊರಗೆ ಊಟ ಮಾಡಿ ಹೋಗಲು ನಿರ್ಧರಿಸಿದಾಗ ಗುರುತೇಜ್ ತನಗೆ ಬೇರೆ ಕೆಲಸ ಇರುವುದಾಗಿ ಆದಷ್ಟು ಬೇಗ ಹೊರಡುವುದಾಗಿ ತಿಳಿಸಿದ. ಸೀನಪ್ಪನನ್ನು ಸೇರಿಸಿ ಒಟ್ಟು ನಾಲ್ಕು ಜನಕ್ಕಾಗಿ ಗೂಗಲ್‌ನಲ್ಲಿ ಹೋಟೆಲ್ ಹುಡುಕಿದಾಗ, ಇವರು ಆಗಾಗ ಹೋಗಲು ಬಯಸಿ ಹೋಗಲಾಗದೆ ಇದ್ದ ಹೋಟೆಲ್ ‘ಸ್ವಾಧಾಮೃತ’ 2 km ಹತ್ತಿರದಲ್ಲಿ ಇತ್ತು. ಅವರಿಗೆ ಫೋನ್ ಮಾಡಿ ನಾಲ್ಕು ಸೀಟ್ ರಿಸರ್ವ್ ಮಾಡಿದರು. ಸುಮಾರು ಮೂರರ ಹೊತ್ತಿಗೆ (ಸ್ಲಾಟ್!) ಅಲ್ಲಿರುವುದಾಗಿ ಹೇಳಿದಾಗ, ಆ ಕಡೆಯಿಂದ ಬಂದ ಉತ್ತರ “ಸರಿ ಸರ್ ಟೇಬಲ್ ನಂಬರ್ 4 ನಿಮಗೆ ರಿಸರ್ವ್ ಆಗಿರುತ್ತೆ. 500 ಹಾಕಿ ಈ ನಂಬರ್ಗೆ ನೀವು ಮೂರು ಕಾಲರ ಒಳಗೆ ಬರದಿದ್ದರೆ ಫರ್ಫೀಟ್ ಆಗುತ್ತೆ. ಬಂದರೆ ನಿಮ್ಮ ಬಿಲ್ಲಲ್ಲಿ ಮೈನಸ್ ಆಗುತ್ತೆ ಎಂದ. ಸರಿಯೆಂದು ದಾಖಲೆಗಾಗಿ ಕಾಯತೊಡಗಿದರು.

ಹೇಳಿದಹಾಗೆ ಸೀನಪ್ಪ ಹತ್ತು ನಿಮಿಷದಲ್ಲಿ ದಾಖಲೆಗಳನ್ನು ತಂದು ಕೊಟ್ಟ. ಒಮ್ಮೆ ಪರೀಕ್ಷಿಸಿ ಹೊರಟು ಮೂರಕ್ಕೆ ಸರಿಯಾಗಿ ಹೋಟೆಲ್ ತಲುಪಿದರು. ರಿಜಿಸ್ಟ್ರೇಷನ್ ಆಗಿದ್ದರಿಂದ ನಿರಾಳ. ಇನ್ನೊಂದು ಹತ್ತು ನಿಮಿಷ ತಡವಾಗಿದ್ದರೆ ರಾಹುಕಾಲ ಮುಗಿದಿರುತ್ತಿತ್ತು?! ಯಥಾ ಪ್ರಕಾರ ಎಲ್ಲರ ಕೈಗೂ ಮೊಬೈಲ್ ಬಂತು. ಶ್ರೀಮತಿಯ ಫೋನ್ ಸೈಲೆಂಟ್ ಮೋಡ್‌ನಲ್ಲಿ ಇದ್ದುದರಿಂದ ಎರಡು ಮಿಸ್ಡ್  ಕಾಲ್ ಈಗ ನೋಡಿದಳು. ಒಂದು ಯಾವುದೋ ಸ್ಪಾಮ್, ಇನ್ನೊಂದು ಮೃದುಲಾಳದು. ಒಂದು ಕಾಲದ ಗೆಳತಿ; ತಡವಾಗಿ ಮದುವೆಯಾಗಿತ್ತು, ಇನ್ನಷ್ಟು ತಡವಾಗಿ ಗರ್ಭಿಣಿಯಾಗಿದ್ದಳು. ಕಳೆದ ತಿಂಗಳು ಇವಳೇ ಹೋಗಿ ಭೇಟಿಯಾಗಿದ್ದಳು. ಡೆಲಿವರಿ ಆಗಿರಬಹುದೇ? ಕುತೂಹಲದಿಂದ ಫೋನ್ ಮಾಡಿಯೇಬಿಟ್ಟಳು. ಫೋನ್ ತೆಗೆದದ್ದು ಮೃದಲಾಳ ಅಮ್ಮ ಮಾತಾಡಿ ಮಗಳ ಕೈಲಿ ಕೊಟ್ಟರು. ವಿಷಯ ಇಷ್ಟೇ -ತಿಂಗಳು ತುಂಬಿದೆ, ಇನ್ನೂ ನೋವು ಕಂಡಿಲ್ಲ, ಇನ್ನೊಂದೆರಡು ಮೂರು ದಿನ ಆಗಬಹುದು ಎಂದಿದ್ದಾರೆ ಡಾಕ್ಟರ್. ಹೇಗಿದ್ದರೂ ಸಿಸೇರಿಯನ್. ನಾಡಿದ್ದು ಜನವರಿ 1. ಅದೇ ದಿನ ಆಗಲಿ ಎಂದು ಅವಳ ಮನೆಯವರೆಲ್ಲರ ಬಯಕೆ. ಆದರೆ ಆ ದಿನಕ್ಕೆ ಈಗಾಗಲೇ ಕೆಲವರು ಬುಕ್ ಮಾಡಿಕೊಂಡಿದ್ದಾರೆ. ಆ ನರ್ಸಿಂಗ್ ಹೋಮ್‌ನಲ್ಲಿ ಎರಡು ಓ.ಟಿ. ಇದೆಯಂತೆ. ಹಾಗಾಗಿ ಇವಳಿಗೂ ಅದೇ ದಿನಕ್ಕೆ ಬೆಳಗ್ಗೆ 10.30 ರ “ಸ್ಲಾಟ್” ಬುಕ್ ಮಾಡಿಕೊಂಡಿದ್ದಾರೆ. ಅನಿವಾರ್ಯ ಪರಿಸ್ಥಿತಿ ಬರದಿದ್ದರೆ ಮಗುವಿನ ಜನನದ ಸಮಯ ಫಿಕ್ಸ್ ಆಗಿದೆ! “ಸರಿ ಕಣಪ್ಪ”!! ಎಂದುಕೊಂಡಳು ಶ್ರೀಮತಿ; ಹಾಗೂ ಅವಳ ಮಾತು ಕೇಳಿ ಪರಾಶರನೂ!! ಆಗ ಪರಾಶರ ಹೇಳಿದ “ನನಗೂ ಒಂದು ಮಿಸ್ಡ್ ಕಾಲ್ ಇದೆ ಜಮಖಂಡಿ ದೊಡ್ಡಮ್ಮನ ಮಗನದು. ಊಟ ಮುಗಿಸಿ ಹೋಗುವಾಗ ದಾರಿಯಲ್ಲಿ ಮಾಡುವೆ ಎಂದ.

ಪರಾಶರ ತನ್ನ ಕಂಪನಿಯ ಹೊಸ ಬ್ರಾಂಚ್ ಹುಬ್ಬಳ್ಳಿಯಲ್ಲಿ ಶುರುವಾದಾಗ ಒಂದು ನಾಲ್ಕು ತಿಂಗಳು ಅಲ್ಲಿರಬೇಕಿತ್ತು ಈಗ್ಗೆ ಐದು ವರ್ಷಗಳ ಹಿಂದೆ. ಹೋಟೆಲ್‌ನಲ್ಲಿ ರೂಮ್ ಮಾಡಿಕೊಂಡಿರುವುದು ಎಂದಾಗಿತ್ತು. ಆದರೆ ಗೆಳೆಯ ಮಾಧವ ಬಿಡಲಿಲ್ಲ; ತನ್ನ ಮನೆಯಲ್ಲಿ ಇರಲು ಒತ್ತಾಯಿಸಿದ್ದ. ಹಾಗೆ ಅಲ್ಲಿದ್ದಾಗ ಪರಿಚಯ ಆಗಿದ್ದದ್ದೆ ಮಾಧವನ ದೊಡ್ಡಮ್ಮ ಸೋನಕ್ಕ. ಅವರಿಗೆ ಪತಿ ಇಲ್ಲ, ಒಬ್ಬನೇ ಮಗ. ಯಾವಾಗಲೂ ಟೂರ್‌ನಲ್ಲಿ ಇರುತ್ತಾನೆ ಮೆಡಿಕಲ್ ರೆಪ್ ಆದುದರಿಂದ. ಅವರಿಗೆ ಪತಿ ಕಡೆಯಿಂದ ಬಂದದ್ದೆ ಈ ಜಮಖಂಡಿ ಎನ್ನುವ ಸರ್ ನೇಮ್. ಮಾಧವನ ಮನೆಯಿಂದ ಒಂದು ಫರ್ಲಾಂಗ್ ದೂರದಲ್ಲಿ ಅವರ ಸ್ವಂತ ಮನೆ. ಮಗ ಊರಲ್ಲಿ ಇಲ್ಲದಿರುವಾಗ ಮಾಧವನ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು.  ಪರಾಶರ ಬೇಗ ಅವರಿಗೆ ಹತ್ತಿರವಾದ, ಅಷ್ಟು ಕಕ್ಕುಲಾತಿಯ ಜೀವ ಅದು. ಆಗಾಗ ಇವನಿಗಾಗಿಯೇ ಏನಾದರೂ ವಿಶೇಷ ಮಾಡಿ ತಂದು ಕೊಡುತ್ತಿದ್ದರು. ನಂತರ ಅವರ ಮಗ ಬೆಂಗಳೂರಿನಲ್ಲಿ ಫಾರ್ಮಸಿ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಗ. ಬೆಂಗಳೂರಿಗೆ ಅಮ್ಮನನ್ನು ಕರೆದುಕೊಂಡು ಬಂದಿದ್ದ. ಅವನಿಗೆ ಮದುವೆಯೂ ಆಗಿತ್ತು. ಆಗಾಗ ಪರಾಶರ ಅವರ ಮನೆಗೆ ಹೋಗಿ ಬಂದು ಮಾಡುತ್ತಿದ್ದ. ಅವರ ಮಗನೇ ಅಮ್ಮ ತುಂಬಾ ನೆನಪು ಮಾಡ್ತಾ ಇದ್ದಾರೆ ಯಾವಾಗ ಬರ್ತಿ ಎನ್ನುತ್ತಿದ್ದ. ಈಗ್ಗೆ ಕೆಲವು ತಿಂಗಳಿಂದ ಅವರಿಗೆ ವಯೋಸಹಜ ಖಾಯಿಲೆಗಳು ಹೆಚ್ಚಾಗಿ ಆಗಾಗ ಆಸ್ಪತ್ರೆಗೆ ಎಡತಾಕುವುದು ನಡೆಯುತ್ತಿತ್ತು.

ಹೇಳಿದಂತೆ ಪರಾಶರ ಊಟ ಮುಗಿಸಿ ಹೊರಟಾಗ ಆ ನಂಬರಿಗೆ ಫೋನ್ ಮಾಡಿದ. ಜಮಖಂಡಿ ದೊಡ್ಡಮ್ಮನ ಮಗ ಫೋನ್ ತೆಗೆದುಕೊಂಡ. ಅಲ್ಲಿನ ವಿಷಯ ಸಾರಾಂಶ ಇಷ್ಟೇ. ಕಳೆದ ತಿಂಗಳು ಬೇರೆ ಕಾಯಿಲೆಯ ಚೆಕಪ್‌ಗೆ ಹೋಗಿದ್ದಾಗ ಮೆದುಳಿನ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಈಗಾಗಲೇ ಕೊನೆಯ ಘಟ್ಟ. ಜೊತೆಗೆ ಹೃದಯವು ಕ್ಷೀಣವಾಗಿದೆ. ಕಳೆದ ವಾರ ಆಸ್ಪತ್ರೆಗೆ ಸೇರಿಸಿದ್ದಾರೆ. ನಿನ್ನೆಯಿಂದ ಜ್ಞಾನವಿಲ್ಲ. ಎಲ್ಲಾ ನಳಿಕೆಗಳ ಮೂಲಕವೇ. ಇನ್ನೇನು ಬಾಕಿ ಉಳಿದಿಲ್ಲ, ನಾವು ಮಾಸ್ಕ್ ತೆಗೆಯುವವರೆಗಷ್ಟೇ ಜೀವ. ಎಲ್ಲರಿಗೂ ತಿಳಿಸಿಬಿಡಿ ಎಂದಿದ್ದಾರೆ. ನಾಳೆ ವೈಕುಂಠ ಏಕಾದಶಿ ಹಾಗಾಗಿ ಒಳ್ಳೆಯ ಸಮಯ (ಸ್ಲಾಟ್!) ನೋಡಿ ಡಾಕ್ಟರ್‌ಗೆ ಹೇಳಿಬಿಡೋಣ ಅಂದುಕೊಂಡಿದ್ದಾರೆ. ಹಾಗಾಗಿ ಇವನಿಗೂ ಫೋನ್ ಬಂದಿದೆ. “ಸರಿ ನಾಳೆ ಬೆಳಿಗ್ಗೆಯೇ ಹೋಗಿ ಬಂದು ಬಿಡೋಣ ಇಬ್ಬರು” ಎಂದ ಪರಾಶರ ಶ್ರೀಮತಿಯ ಬಳಿ.

About The Author

ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ