ತನ್ನನ್ನು ಹೆಣ್ಣಾಗಿಸಿರುವ, ಆಗಿಸುತ್ತಿರುವ ಲೋಕದ ಮೌಲ್ಯಗಳ ಜೊತೆಗೆ ಜಗಳವಾಡದೆ ತಾನು ‘ಅದಲ್ಲದ’ ಅಸಮ್ಮತಿಯನ್ನು ದಾಖಲಿಸುವ ವಿಧಾನ ಈ ಕವಿತೆಗಳಲ್ಲಿ ‘ನೆಲದ ಮರೆಯ ನಿದಾನ’ದಂತೆ ಹುದುಗಿಕೊಂಡಿದೆ. ಆದರೆ ಹೀಗೆ ಹೆಣ್ಣು ತನ್ನ ಜೀವದಂಬಲವನ್ನು ಗಂಡು ಅರಿಯಬೇಕು ಎಂದು ತಪನಪಡುವ- ಯಾತನೆಯನ್ನು ಗಂಡು ಲೋಕ ಒಳಒಳಗೆ ಸಂಭ್ರಮಿಸುತ್ತಿರುವ, ಸುಖಿಸುತ್ತಿರುವ ಸೂಕ್ಷ್ಮತೆಯನ್ನು ವಸುಂಧರಾ ತಮ್ಮ ಮುಂದಿನ ಕವಿತೆಗಳನ್ನು ಕಟ್ಟುವಾಗ ಗಮನಿಸುತ್ತಾರೆ ಎನ್ನುವ ಭರವಸೆಯೂ ಈ ಕವಿತೆಗಳ ಒಳಗೆ ಇದೆ.
ವಸುಂಧರಾ ಕೆ. ಎಂ ಅವರ ಚೊಚ್ಚಲ ಕವನ ಸಂಕಲನ “ಮರೆತು ಬಿಟ್ಟದ್ದು” ಕೃತಿಗೆ ಕೆ.ವೈ ನಾರಾಯಣಸ್ವಾಮಿ ಬರೆದ ಮುನ್ನುಡಿ

 

ವಸುಂಧರಾ ಅವರ ಮೊದಲ ಕವಿತಾ ಸಂಕಲನವಿದು. ಸುಮಾರು ನಲ್ವತ್ತು ಕವಿತೆಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಈ ಕವಿತೆಗಳ ವಿಶೇಷಣವೆಂದರೆ‘ಕಾಂತ ಸಂಮಿತ ನಿರೂಪಣೆಯ ಕ್ರಮ’ ಎನ್ನಬಹುದು. ಹೂದೋಟವನ್ನು ಹೊಕ್ಕವರಿಗೆ ಹಲವು ಬಣ್ಣದ ಆಕಾರದ ಚಂದದ ಹೂಗಳು ಕಣ್ಣಿಗೆ ಬೀಳುವ ಮುನ್ನ ಹೂದೋಟದ ಆಹ್ಲಾದಕರವಾದ ಪರಿಮಳ ಮನಸ್ಸನ್ನು ಮುದಗೊಳಿಸುವಂತೆ ಈ ಕವಿತೆಗಳಲ್ಲಿನ ಭಾವತೀವ್ರತೆ ಓದುಗರ ಹೃದಯವನ್ನು ತಟ್ಟುತ್ತದೆ. ಪುರುಷಾಳ್ವಿಕೆಯ ಕಾಲದಿಂದಲೂ ಲೋಕಾಂತದಲ್ಲಿ ಮೌನವಾಗಿಸಿರುವ ಹೆಣ್ಣು ತನ್ನೊಳಗೆ ತಾನು ಪಿಸು ನುಡಿಯ ಮೂಲಕ ಸಂವಾದಿಸುತ್ತಿರುವ ಹಲವು ವಿನ್ಯಾಸಗಳನ್ನು ಇಲ್ಲಿ ಕಾಣಬಹುದು.

ವಸುಂಧರಾ ಅವರ ಕವಿತೆಗಳಲ್ಲಿ ಕಾಣುವ ಮತ್ತೊಂದು ವಿಶಿಷ್ಟತೆ ಹಲವು ಕಾಲದ ಹೆಣ್ಣು ಪಾತ್ರಗಳ ಅನಾವರಣ, ಇಲ್ಲಿನ ಬಹು ಪಾಲು ಕವಿತೆಗಳಲ್ಲಿ ಪುರಾಣ ಕಾಲದ ಹೆಣ್ಣಿನಿಂದ ಹಿಡಿದು ಆಧುನಿಕ ಕಾಲದ ಹೆಣ್ಣುಗಳವರೆಗೆ ನಿರೂಪಿಸಲಾಗಿದೆ. ಆದರೆ ಪ್ರಶ್ನೆಗಳು ಮಾತ್ರ ಹಳೆಯವೇ ಆಗಿವೆ, ಆಧುನಿಕವೂ ಆಗಿವೆ. ಈ ಕವಿತೆಗಳಾದರೂ ಹೆಣ್ಣೋಟದ ಮೂಲಕ ಹಾದು ಬರುವ ವಿವಿಧ ಕಾಲಘಟ್ಟಗಳ ಹೆಣ್ಣುಗಳ ಮಾದರಿ, ಯೋಚಿಸುವ ವಿನ್ಯಾಸ ಮತ್ತು ಆದರ್ಶ ಹೆಣ್ಣಿನ ಕಲ್ಪಿತದ ಸಿಪ್ಪೆ ಸುಲಿಯುವ ಜವಾಬ್ದಾರಿಯನ್ನು ಈ ನಿರೂಪಣೆಗಳು ಮಾಡುತ್ತಿವೆ. ಆದ ಕಾರಣ ನಮಗೆ ಇಲ್ಲಿ ಸೀತೆ, ದ್ರೌಪದಿ, ಊರ್ಮಿ¼, ರಾಧೆ ಅಂತಹ ಪುರಾಣ ಪಾತ್ರಗಳ ಜೊತೆಗೆ ಹೇಗೋ ಹಾಗೇ ಯಶೋಧರೆ, ಅಕ್ಕ, ಅಮೃತಮತಿ ಮುಂತಾದ ಚಾರಿತ್ರಿಕ ಪಾತ್ರಗಳ ಜೊತೆಗೂ ಸಂವಾದಕ್ಕೆ ಆಹ್ವಾನವೂ ಇದೆ. ಸಂವಾದಕ್ಕೆ ತಕ್ಕ ಆಸ್ಪದವೂ ಇದೆ. ಆದರೆ ವಸುಂಧರಾ ಅವರ ಈ ನಿರೂಪಣೆಗಳು ತಾನು ಸಂವಾದಿಸಬೇಕು ಎನ್ನುವ ಪುರುಷ ಪಾತ್ರಗಳನ್ನು ಕರೆದು ಎದುರಿಗೆ ಕೂರಿಸಿಕೊಂಡು ಕೋರ್ಟಮಾರ್ಷಲ್ ನಡೆಸುವುದಿಲ್ಲ. ಬದಲಿಗೆ ಜೊತೆ ನಡೆಯುತ್ತಾ ಹೆಣ್ಣು-ಗಂಡು ಜೊತೆ ನಡೆಯುವ ಅನಿವಾರ್ಯತೆಯನ್ನು ಮನಗಾಣಿಸುತ್ತಲೇ ತಾನು ನಡೆಯುತ್ತಿರುವ ನಡಿಗೆ ಭಿನ್ನವೆಂದು ಸಂಗಾತಿಗೆ ತಿಳಿ ಹೇಳುವ ಆಪ್ತತ್ತೆಯು ಇಲ್ಲಿನ ಪ್ರಧಾನ ಚಲನೆಯಾಗಿದೆ. ಹೀಗೆ ಕಾವ್ಯ ಕಟ್ಟುವ ವಿದ್ಯಮಾನವು ಕನ್ನಡದ ಮಹಿಳಾ ಕವಿತೆ ಬೆಳವಣಿಗೆಯಲ್ಲಿ ಈಗಾಗಲೇ ದಾಟಿ ಬಂದಿರುವ ಹಂತವಾಗಿದೆ. ಈಗಿನ ಕನ್ನಡ ಮಹಿಳಾಕಾವ್ಯ ಗಂಡು ಭಾಷಾ ನಿರೂಪಣೆಯಿಂದ ಬಿಡಿಸಿಕೊಳ್ಳುವ ಸೂಕ್ಷ್ಮತೆಗಳನ್ನು ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಈ ಕವಿತೆಗಳಿಗೆ ಒದಗಿ ಬರುತ್ತಿರುವ ಅರ್ಥದ ನೆಲೆಗಳ ವಿಸ್ತಾರವು ರೆಕ್ಕೆ ಕತ್ತರಿಸಿದ ಹಕ್ಕಿಯಂತಾಗಿದೆ. ಹಗೆ ಮತ್ತು ಅಸಹನೆ ಇರದ ಈ ಕವಿತೆಗಳ ಕಟ್ಟುವಿಕೆ ಹೃದ್ಯವಾಗಿವೆ.

ವಸುಂಧರಾ ಅವರ ಕವಿತೆಗಳಲ್ಲಿ ಅಂತಸ್ಥವಾಗಿರುವ ಮತ್ತೊಂದು ನೆಲೆಯೂ ಕೂಡ ಈ ಕವಿತೆಗಳನ್ನು ಅರ್ಥೈಸಲು ನಮಗೆ ನೆರವು ನೀಡುತ್ತದೆ. ತನ್ನನ್ನು ಹೆಣ್ಣಾಗಿಸಿರುವ, ಆಗಿಸುತ್ತಿರುವ ಲೋಕದ ಮೌಲ್ಯಗಳ ಜೊತೆಗೆ ಜಗಳವಾಡದೆ ತಾನು ‘ಅದಲ್ಲದ’ ಅಸಮ್ಮತಿಯನ್ನು ದಾಖಲಿಸುವ ವಿಧಾನ ಈ ಕವಿತೆಗಳಲ್ಲಿ ‘ನೆಲದ ಮರೆಯ ನಿದಾನ’ದಂತೆ ಹುದುಗಿಕೊಂಡಿದೆ. ಆದರೆ ಹೀಗೆ ಹೆಣ್ಣು ತನ್ನ ಜೀವದಂಬಲವನ್ನು ಗಂಡು ಅರಿಯಬೇಕು ಎಂದು ತಪನಪಡುವ- ಯಾತನೆಯನ್ನು ಗಂಡು ಲೋಕ ಒಳಒಳಗೆ ಸಂಭ್ರಮಿಸುತ್ತಿರುವ, ಸುಖಿಸುತ್ತಿರುವ ಸೂಕ್ಷ್ಮತೆಯನ್ನು ವಸುಂಧರಾ ತಮ್ಮ ಮುಂದಿನ ಕವಿತೆಗಳನ್ನು ಕಟ್ಟುವಾಗ ಗಮನಿಸುತ್ತಾರೆ ಎನ್ನುವ ಭರವಸೆಯೂ ಈ ಕವಿತೆಗಳ ಒಳಗೆ ಇದೆ.

“ಅಭಿಮಾನ ನನಗುಂಟು ಮಮತೆಯೊಡನೆ ಕೈ ಹಿಡಿಯಲು ಬಾ ಜೋಡಿ ಎತ್ತಾಗಿ ಬಾಳನೊಗಕೆ” ಈ ಹಾರೈಕೆ ಅನಾದಿಯದಾದರೂ ಇಂಥ ಪಯಣ ಇನ್ನೂ ಆರಂಭಗೊಂಡಿಲ್ಲವೆಂದು ಕವಿತೆಗಳೇ ಹೇಳುತ್ತಿವೆ. ಗಂಡು ಲೋಕ ತನ್ನ ಸಹ ಪಯಣಿಗಳ ಜೊತೆ ನಡೆಯದೆ ತಾನಿಟ್ಟ ಹೆಜ್ಜೆಗಳಲ್ಲಿ ಹೆಜ್ಜೆ ಇಟ್ಟು ನಡೆಯಬೇಕು ಎಂಬ ಒತ್ತಾಯದ ಕಾಳಜಿಯನ್ನು ಹೆಣ್ಣುಲೋಕದ ಮುಂದಿರಿಸಿದೆ, ಅಷ್ಟೇ ಅಲ್ಲ ಅದನ್ನು ಆದರ್ಶ ನಡೆಯಾಗಿಸಿದೆ. ಆದರೆ ಶರತ್ತುಬದ್ಧವಾದ ಈ ಪ್ರೀತಿಯಲ್ಲಿ ಹುದುಗಿರುವ ಅವಲಂಬನೆಯ ಆಯಾಮವು ಕವಿತೆಗೆ ಕಾಣಿಸಬೇಕು. ಆಗ ಅದು ಕವಿತೆ ಮಾತ್ರವಾಗದೆ ಕಾಣ್ಕೆಯೂ ಆಗುತ್ತದೆ. ಇಂಥ ಪವಾಡ ಕನ್ನಡ ಮಹಿಳಾ ಕವಿತೆಯಲ್ಲಿ ಸಂಭವಿಸಿದೆ.

ಕನ್ನಡದಲ್ಲಿ ಕಳೆದ ಮುವತ್ತು ವರ್ಷಗಳಲ್ಲಿ ನಡೆದಿರುವ ಹೆಣ್ಣಿನ ಬದುಕಿನ ಅನನ್ಯತೆಯನ್ನು, ಘನತೆಯನ್ನು ಕುರಿತ ಚರ್ಚೆಗಳು ಕನ್ನಡದ ಕವಿತೆಯಲ್ಲಿ ಮೈತಳೆಯುತ್ತಿರುವ ಮಾಯಾವರಣಕ್ಕೆ ವಸುಂಧರಾ ಅವರು ಶೀಘ್ರ ಪ್ರವೇಶ ಪಡೆದರೆ ಅವರ ಕಾವ್ಯಕಟ್ಟುವ ಶಬ್ಧಯಾನದ ಕೌಶಲ್ಯಕ್ಕೆ ಅರ್ಥಯಾನದ ಸಹಚರ್ಯೆಯೂ ತಾನಾಗಿಯೇ ಲಭಿಸುವುದು. ಈ ನಿಟ್ಟಿನಲ್ಲಿ ಅಕ್ಕ, ವೈದೇಹಿ, ಸವಿತಾ ನಾಗಭೂಷಣ, ಲಲಿತಾ ಸಿದ್ಧಬಸವಯ್ಯ, ವಿನಯ ವಕ್ಕುಂದ, ಕವಿತಾ ರೈ, ಪಿ. ಚಂದ್ರಿಕಾ ಮುಂತಾದ ಕವಿಗಳ ಕವಿತೆಗಳ ಅಭ್ಯಾಸ ಅವಶ್ಯಕವೆಂದು ನನಗೆ ತೋರುತ್ತಿದೆ.

ವಸುಂಧರಾ ಅವರ ಕವಿತೆಗಳಲ್ಲಿ ಮೂರು ಮುಖ್ಯವಾದ ಹೆಣ್ಣಿನ ಅವಸ್ಥೆಗಳು ಶೋಧಕ್ಕೆ ಒಳಗಾಗಿರುವುದನ್ನು ಕಾಣುತ್ತೇವೆ. ಮೊದನೆಯದು ಆತ್ಮಸಂಗಾತವನ್ನು ನಿರೀಕ್ಷಿಸುವ ನಿರೂಪಣೆಗಳು. ಆದರ್ಶಮಯವಾದ ಹೆಣ್ಣು-ಗಂಡಿನ ಸಂಬಂಧವನ್ನು ವಿವರಿಸುವ ಮಾದರಿಯಿದು. ಈ ಬಗೆಯ ನಿರೂಪಣೆಗಳೇ ವಸುಂಧರಾ ಅವರ ಕವಿತೆಯ ಪ್ರಧಾನ ದನಿಯಾಗಿರುವುದನ್ನು ಗುರುತಿಸಬಹುದು. ಎರಡನೆಯ ನಿರೂಪಣೆಗಳು ತಾಯ್ತನದ ಅನುಭವಗಳನ್ನು ಕವಿತೆಯಾಗಿಸಲು ಹಂಬಲಸುತ್ತಿರುವ ಕವಿತೆಗಳು. ಮೂರನೆಯ ನಿರೂಪಣೆಯ ಮಾದರಿ, ಹೆಣ್ಣು ಗಮನಿಸುವ ಹೊರಲೋಕದ ವ್ಯಾಪಾರಗಳಿಗೆ ಪ್ರತಿಕ್ರಿಯಿಸುತ್ತಿರುವ ಕವಿತೆಗಳು. ಈ ಮಾದರಿಗಳನ್ನು ಬರೆಯುವಾಗ ಮೊದಲನೆಯ ಮಾದರಿಗೆ ತಮ್ಮ ಕನಸನ್ನು ಆಶ್ರಯಿಸುತ್ತಾರೆ. ಎರಡನೆಯ ಮಾದರಿಗೆ ತಮ್ಮ ಬದುಕಿನಲ್ಲಿ ಮಗುವಾಗಿ ಉಂಡ ಹಾಗೂ ತಾಯಿಯಾಗಿ ನೀಡಿದ ಅನುಭವವನ್ನೆ ಆಧರಿಸಿ ಬರೆಯುತ್ತಾರೆ. ಇನ್ನು ಮೂರನೆಯ ಮಾದರಿಯಾದ ಲೋಕ ವಿಮರ್ಶೆಯನ್ನು ಬರೆಯುವಾಗ ತಾವು ಶೈಕ್ಷಣಿಕವಾಗಿ ಪಡೆದ ಜ್ಞಾನವನ್ನು ತಮ್ಮ ತಿಳಿವಿನ ಚೌಕಟ್ಟಾಗಿ ಬಳಸುತ್ತಾರೆ. ಈ ಮಾದರಿಗಳು ವಸುಂಧರಾ ಅವರಿಗೆ ಮಾತ್ರ ಸೀಮಿತವಾಗದೆ ಇಂದಿನ ಮಹಿಳಾ ಕಾವ್ಯದ ಮುಖ್ಯವಾದ ನೆಲೆಯೂ ಆಗಿರುವುದು ಅಭ್ಯಾಸ ಯೋಗ್ಯವಾದ ಸಂಗತಿಯಾಗಿದೆ. ಈ ಮಾದರಿಗಳಲ್ಲಿ ಬಳಕೆಯಾಗಿರುವ ಕನ್ನಡ ಭಾಷಿಕ ಪ್ರಯೋಗಗಳು ಹೆಚ್ಚು ಏಕರೂಪಿ ಕನ್ನಡವಾಗಿರುವ ಅಪಾಯವನ್ನು ವಸುಂಧರಾ ಅವರು ಕಾವ್ಯ ಕಟ್ಟುವ ಈ ಪಯಣದಲ್ಲಿ ಬೇಗನೆ ಅರಿತುಕೊಳ್ಳಲಿ ಎಂಬ ಹಾರೈಕೆ ನನ್ನದು.

ಮಂಡ್ಯದ ಹಳ್ಳಿಗಳ ನುಡಿ ವರಸೆಯ ದನಿಗಳು ಕವಿತೆಗೆ ವಿಲಕ್ಷಣವಾದ ಸೌಂದರ್ಯವನ್ನು ತಂದುಕೊಡುತ್ತವೆ ಎಂಬುದನ್ನು ವಸುಂಧರಾ ಅರಿತರೆ ಅವರ ಕಾವ್ಯಕ್ಕೆ ಮಣ್ಣಿನ ಗಂಧಗಮಲು ಅನಾಯಾಸವಾಗಿ ದೊರುಕುತ್ತದೆ.

ವಸುಂಧರಾ ಅವರ ಕವಿತೆಗಳ ಸ್ಥಾಯಿಗುಣ ಸಹ ಹೃದಯ ಸಂವಾದ. ‘ಧೀಮಂತ ನಗ್ನತೆ’ ಎಂಬ ಚಿಕ್ಕ ಪದ್ಯ ತನ್ನ ಅನನ್ಯ ಒಳನೋಟದಿಂದ ಗಮನ ಸೆಳೆಯುತ್ತಿದೆ. ಜೈನಧರ್ಮದ ಅಹಿಂಸಾ ಪರಮೋಧರ್ಮ ಎಂಬ ತತ್ವದಂತೆ ಗೆದ್ದರೂ ಅಣ್ಣನಿಗೆ ಪದವಿ-ಪಟ್ಟಗಳನ್ನು ಬಿಟ್ಟುಕೊಟ್ಟ ಬಾಹುಬಲಿ ಗೊಮ್ಮಟನಾಗಿ ಅವತರಿಸಿದ್ದು ಕಾಲ ವಿಸ್ಮಯ. ನನಗೆ ನೆನಪಿರುವ ಹಾಗೆ ಬುದ್ಧನೊಂದಿಗೆ ಸಂವಾದಕ್ಕೆ ಎಲ್ಲಾ ಮಹಿಳಾ ಕವಿಗಳು ಪ್ರಯತ್ನಸಿರುವುದು ಕಂಡುಬರುತ್ತದೆ. ಯಶೋಧರೆಯನ್ನು ಪ್ರತಿನಿಧಿಸಿಯೋ ಅಥವಾ ತಮ್ಮ ಮೇಲೆಯೇ ಆಕೆಯನ್ನು ಆಹ್ವಾನಿಸಿಕೊಂಡು ತಥಾಗತನೊಂದಿಗೆ ತರ್ಕ ಹೂಡಿದ ಕವಿತೆಗಳು ಸಾಕಷ್ಟು ಕಾಣಿಸುತ್ತವೆ. ಆದರೆ ಗೊಮ್ಮಟ್ಟನನ್ನು ಕುರಿತು ನಿನ್ನ ತಪಸ್ಸಿನ ಸಂದರ್ಭದಲ್ಲಿ ನಿನಗೆ ನಿನ್ನನ್ನು ಪ್ರೀತಿಸಿದ ಮುಖ ನೆನಪಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದ ಕವಿತೆ ಇಲ್ಲವೆಂದೇ ಹೇಳಬೇಕು.

ಎಷ್ಟು ಕಠಿಣನೋ ನೀನು
ಮಹಾ ಮೌ(ಮು)ನಿ
ಕಾಡಲಿಲ್ಲವೇನಾಗ ಒಲುವಿನೊಂದು ಮುಖ?
ಕಡೆಯಾಯ್ತೆ ನಿನಗೆ ಸಿರಿಯೊಳಗಣ ಸುಖ?

ಈ ಸಾಲುಗಳಲ್ಲಿ ನಲ್ಮೆಯ ಹೆಣ್ಣನ್ನು ಬಾಹುಬಲಿಯೂ ಕೂಡ ತಾನು ವಿಸರ್ಜಿಸಬೇಕಾದ ಪದಾರ್ಥವೆಂದು ಬಗೆದ ಎಂಬ ಆರೋಪವನ್ನು ಕೇಳಲಾಗುತ್ತಿದೆ. “ನೆಲಸಲಿ ನಿನ್ನ ವಕ್ಷದೊಳೆ ಭಟಖಡ್ಗ ಮಂಡಲ”ವೆಂದು ಮಣ್ಣುನ್ನೂ, ಚಂಚಲೆ ರಾಜ್ಯಲಕ್ಷ್ಮಿಯೆಂದು ಹೆಣ್ಣನ್ನು, ನಿರಾಕರಿಸುವ ಬಾಹುಬಲಿಯ ನಡೆಯಲ್ಲಿ ತಿರಸ್ಕಾರಕ್ಕಿಂತ ಹೆಣ್ಣನ್ನು ಅಧಿಕಾರ ಲಾಂಛನವಾದ ಮಣ್ಣು ಮತ್ತು ಹೊನ್ನುಗಳಿಗೆ ಸಮೀಕರಿಸಿದ್ದನ್ನು ಕವಿತೆ ಆಕ್ಷೇಪಿಸುವುದು ಹೊಸ ಪ್ರಶ್ನೆಯಾಗಿದೆ. ಕಡೆಯಾಯ್ತೆ ನಿನಗೆ ಸಿರಿಯೊಳಗಣ ಸುಖ ಎಂಬ ಪ್ರಯೋಗ ಉತ್ಪಾಧಿಸುವ ವಿಷಾದ ನೀರಿಗೆ ಬಿದ್ದ ಕಲ್ಲು ಎಬ್ಬಿಸುವ ತರಂಗ ತೆರೆಗಳಂತೆ ಹಲವು ಅರ್ಥಗಳನ್ನು ಹೊಳೆಯಿಸುತ್ತದೆ. ಈ ಕವಿತೆ ಆಕಾರದಲ್ಲಿ ಪುಟ್ಟದಾಗಿದ್ದರೂ ಅದು ಉಂಟುಮಾಡುವ ಪರಿಣಾಮದಲ್ಲಿ ಮಾತ್ರ ಅದ್ಭುತವಾಗಿದೆ.

ಈ ಕಾಂತಸಂಮಿತವಾದ ಕವಿತೆಗಳಲ್ಲಿ ಕಾಣಿಸುವ ಹೆಣ್ಣಿನ ಚಿತ್ರವನ್ನು ನೀವು ಒಮ್ಮೆ ಕಣ್ಣು ಮುಚ್ಚಿ ಕಲ್ಪಿಸಿಕೊಂಡರೆ ಆಕೆ ವಿವಾಹಿತಳೂ ವಿದ್ಯಾವಂತಳೂ ಆಗಿಯೂ ವಿವಾಹ ಮತ್ತು ಕುಟುಂಬ ಎಂಬ ಮೌಲ್ಯಗಳನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿರುವುದು ಕಣ್ಮುಂದೆ ಬರುತ್ತದೆ. “ಧನಸ್ಸು ಮುರಿವಂತೆ ನನ್ನ ಮನಸ್ಸು ಮುರಿದೆ”ಎನ್ನುವ ಸೀತೆ, “ನಾನು ನಿಮ್ಮಂತೆ ಬುದ್ಧಳಾಗಲಿಲ್ಲ ಭಗವಾನ್ ಮಿಗಿಲು ಬದ್ಧತೆಯ ತಾಯಿ ಆದೆ”ಎನ್ನುವ ಯಶೋಧರೆ, ನಿನ್ನವರಾಗಿದ್ದರೇನು ಮುಂದೆ ನೂರು ಮಂದಿ ಕೌರವರ ಕೊಂದವರು”ಎಂದು ಪ್ರಶ್ನಿಸುವ ದ್ರೌಪತಿ ಪ್ರಶ್ನಿಸಲಾಗಿರುವ ತಮ್ಮ ಎದುರಿಗಿರುವ ರಾಮ ಬುದ್ಧ ಪಾಂಡವರನ್ನು ಮಾತ್ರ ಉದ್ದೇಶಿಸಿ ಕೇಳಿದ್ದಲ್ಲ. ವಿವಾಹ ಮತ್ತು ಕುಟುಂಬದ ಮೌಲ್ಯ ವ್ಯವಸ್ಥೆ ಹಾಗೂ ಸಂಬಂಧದ ಸ್ವರೂಪವನ್ನು ಪರೀಕ್ಷಿಸಿ ನೋಡುವ ಉದ್ದೇಶವನ್ನು ಇಲ್ಲಿ ಗುರುತಿಸಬೇಕು.

(ಡಾ ಕೆ ವೈ ನಾರಾಯಣಸ್ವಾಮಿ)

ಈ ಸಂಕಲನದ ಕೆಲವು ಕವಿತೆಗಳು ಏಕಾಂತದ ಮೌನದಲೆಗಳಿಂದ ಆಗಾಗ ಎಚ್ಚರಗೊಂಡು ತಾನು ಬದುಕುತ್ತಿರುವ ಲೋಕವನ್ನು ನೋಡುವುದುಂಟು. ಅಂತಹ ಲೋಕಾಂತ ಸಂಗತಿಗಳು ಇಲ್ಲಿ ಕವಿತೆ ರೂಪ ಧರಿಸಲು ಪ್ರಯತ್ನಿಸಿವೆ. ತಂತ್ರಜ್ಞಾನ ಯುಗದ ಮಕ್ಕಳ ಕನ್ನಡ ಕಲಿಕೆಯನ್ನು ಕುರಿತ ‘’ಕನ್ನಡ ಕಂದ”- ಮಂಡ್ಯದಲ್ಲಿ ಜನಪದವಾಗಿ ಉಳಿದಿರುವ ಗಾಂಧಿಯ ನೆನಪಿನ ‘ಗಾಂಧೀ’ ಕುರಿತ ಎರಡು ಪದ್ಯಗಳು ಹಾಗೂ ನೇಗಿಲ ಯೋಗಿಯನ್ನು ನೆನಪಿಗೆ ತರುವ ಕಪ್ಪುಜನರು, ಎಂಬ ಕವಿತೆಗಳನ್ನು ಪರಿಶೀಲಿಸಬಹುದು. ಲೋಕವನ್ನು ಕಾವ್ಯಾನುಭೂತಿಯಾಗಿಸಲು ಅನುಭವ ಮಾತ್ರ ಸಾಲದು ಇದಕ್ಕೆ ಅಗತ್ಯವಾದ ಲೋಕದೃಷ್ಟಿಯನ್ನು ಕವಿ ತಮ್ಮ ವ್ಯುತ್ಪತ್ತಿ ಜ್ಞಾನದಿಂದ ಮುಂದಿನ ಸಂಕಲನದ ಹೊತ್ತಿಗೆ ಪಡೆಯುತ್ತಾರೆ ಎನ್ನುವ ನಂಬಿಕೆ ನನಗಿದೆ.

ಈ ಸಂಕಲನದ ಹಲವು ಉತ್ತಮ ಕವಿತೆಗಳನ್ನು ಕುರಿತು ಚರ್ಚೆ ಬೆಳೆಸಬಹುದು. ಓದುಗರು ಈ ಕವಿತೆಗಳ ಲೋಕವನ್ನು ಮುಕ್ತ ಮನಸ್ಸಿನಿಂದ ಪ್ರವೇಶ ಮಾಡಲು ಅನುವು ಮಾಡಿಕೊಡಲು ನಾನು ಅಂತ ಕವಿತೆಗಳನ್ನು ಹೆಸರಿಸಿ ಸುಮ್ಮನಾಗುತ್ತೇನೆ. :ಮೌನ ಮುತ್ತು: ಉರಿ- ಮಿಂಚು, ನಮ್ಮ ಹೆಸರೊಟ್ಟಿಗೆ, ಮಳೆ ಮತ್ತು ನಾನು, ಕಾಯಬೇಕಿದ ಕಾಲ, ಸ್ವಾಭಿಮಾನ ಮುಂತಾದ ಕವಿತೆಗಳು ಯಾವ ಕವಿಯಾದರೂ ಹೆಮ್ಮೆ ಪಡುಬಹುದಾದ ರಚನೆಗಳಾಗಿವೆ. ವಸುಂಧರಾ ಈ ಕವಿತಾ ಸಂಕಲನವನ್ನು ಯಾವ ಸಂಕೋಚವೂ ಇಲ್ಲದೆ ಕನ್ನಡ ಓದುಗರ ಕೈಗಿಡಬಹುದು ಎಂದು ಶಿಫಾರಸ್ಸು ಮಾಡುತ್ತೇನೆ.

ಈ ಸಂಕಲನದ ಕವಿತೆಗಳನ್ನು ಒಟ್ಟಿಗೆ ಓದುವ ಮೊದಲ ಅವಕಾಶವನ್ನು ನನಗೆ ನೀಡಿದ ಹಾಗೇ ಈ ಕವಿತೆಗಳ ಕುರಿತು ಕವಿತೆಗಳೇ ಹೊಳೆಯಿಸಿದ ಕೆಲ ಚಿಂತನೆಗಳನ್ನು ಹಂಚಿಕೊಳ್ಳುಲು ಈ ಮೊದಲ ಮಾತನ್ನು ಬರೆದುಕೊಡಲು ಕೇಳಿದ ವಸುಂಧರಾ ಅವರ ಕನ್ನಡ ಕಾವ್ಯ ಪ್ರಯಾಣ ಧೀರ್ಘವಾಗಿರುವಂತೆ ಕನ್ನಡ ಕವಿತೆಗೆ ಕೆಲವು ಕಡಲ ಮುತ್ತುಗಳನ್ನು ಹೊತ್ತು ತರಲೆಂದು ಹಾರೈಸುತ್ತೇನೆ. ವಸುಂಧರಾ ಅವರನ್ನು ಪರಿಚಯಿಸಿ ಈ ಕವಿತೆಗಳಿಗೆ ನಾಲ್ಕು ಮಾತುಗಳನ್ನು ಬರೆಯಲು ಕಾರಣನಾದ ಅನುಗಾಲದ ಗೆಳೆಯ ದಿಲಾವರ ರಾಮದುರ್ಗನಿಗೆ ವಂದನೆಗಳು.