ನಾಡಿಗರ ಕಾವ್ಯಪ್ರೇಮಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಅವರನ್ನು ಓದಿದ ಪ್ರತಿಯೊಬ್ಬನಿಗೂ ಗೊತ್ತು, ಬದುಕನ್ನು ಬಂಧಿಸಿರುವ ಎಲ್ಲ ಭಾವಗಳನ್ನೂ ಧಾರಾಳವಾಗಿ ಸುರಿಸುವ ಈ ಭಾವುಕ ನಿಗೂಢ ಮೌನಕ್ಕೆ ಶರಣಾದರೆ ಮರೆಯಲಾಗದ ಕವನವೊಂದು ಮೈತಳೆಯುವುದು ಖಚಿತ. ಒಂದು ಅನೂಹ್ಯ ವಿಷಾದದಲ್ಲಿ ಮುಳುಗಿದರೆಂದರೆ ಬದುಕಿನ ಪರಮ ಸತ್ಯದ ಮಗ್ಗುಲೊಂದನ್ನು ನಮ್ಮತ್ತ ಹೊರಳಿಸಿಬಿಡುವ ಮಾಯಕಾರ. ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ.
ವಾಸುದೇವ ನಾಡಿಗ್‌ ಬರೆದ ‘ಬಂದರಿಗೆ ಬಂದ ಹಡಗು’ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

 

ವಾಸುದೇವ ನಾಡಿಗ್ ಅವರ “ಬಂದರಿಗೆ ಬಂದ ಹಡಗು” ಆಗಸ್ಟ್ ತಿಂಗಳಲ್ಲಿ ಕನ್ನಡದ ಕಾವ್ಯ ಪ್ರೇಮಿಗಳಿಗೆ ದೊರೆತ ಅತಿ ದೊಡ್ಡ ಉಡುಗೊರೆ.

ಈ ಹಡಗು ಎಂಬ ಹೆಸರೇ ಸಾಕು, ಅಪರಿಮಿತ ಉತ್ಸುಕತೆಯನ್ನು ಹುಟ್ಟು ಹಾಕಲು. ಹಡಗು ಎಂದರೆ ಹಲವು ಅಗಾಧತೆಗಳೇ ಸರಿ. ಅದರೊಳಗಿನ ಸರಕುಗಳು ಅಪರೂಪದವು ಅಥವಾ ಅಮೂಲ್ಯವಾದವು ಎಂಬ ಊಹೆ ಹೊತ್ತು ಕಾದವನಿಗೆ ಮಾತ್ರ ಗೊತ್ತು ಅದರ ಬರವಿನ ಮಹತ್ವ. ಒಂದೊಳ್ಳೆಯ ಕವನ ಸಂಕಲನದ ನಿರೀಕ್ಷೆಯಲ್ಲಿ ಬಹುದಿನಗಳಿಂದ ಕಾದವರಿಗೆ ಈ ಹಡಗು ಹೊತ್ತು ತಂದಿದ್ದು ಮಾತ್ರ ಬಲು ದೊಡ್ಡ ಖಜಾನೆಯನ್ನೇ.

ಈ ‘ಒಲವಿನ ಕವಿ’ಗೆ ಕವನಗಳೇ ಉಸಿರು. ಈ ‘ಅಂತಃಕರಣದ ಕವಿ’ ಬದುಕುವುದೇ ಕವಿತೆಗಳನ್ನು. ಅಂತಃಕರಣದ ಕವಿ’ಯ ಪಕ್ವ ಪಾಕದಲ್ಲಿ ತಯಾರಾದ ಸವಿಗವನಗಳು.

ಈ ಪುಸ್ತಕ ಕೈಗೆ ಬಂದ ತಕ್ಷಣ ಮನಮೋಹಕ ಹಾಗೂ ನೂರು ಅರ್ಥ ಕೊಡುವ ಮುಖಪುಟದ ಕರ್ತೃ ಕೌoಡಿನ್ಯ. ಹೆಸರ ಮೇಲೆ ಮೆಲುವಾಗಿ ಬೆರಳಾಡಿಸಿ ಪುಟ ತೆರೆದರೆ, ಅಪಾರ ಪ್ರೀತಿಯಿಂದ ತಮ್ಮ ‘ಬೆರಳ ತುದಿಯ ಗಂಧ’ ಸೋಕಿಸಿ ಮುನ್ನುಡಿ ಎಂಬುದು ಕೇವಲ ಒಂದು ನೆಪವಷ್ಟೇ ಎನ್ನುತ್ತ ಶ್ರೀ ಮಾರುತಿ ದಾಸಣ್ಣವರ ತಮ್ಮ ಹಾಗೂ ನಾಡಿಗರ ನಡುವಣ ಆತ್ಮೀಯತೆಯ ಅಮೃತ ಸಿಂಚನಗೈಯುತ್ತ ಕವಿಯ ನಡೆ ನುಡಿ, ಗಂಭೀರ ಅಧ್ಯಯನ, ಅಧ್ಯಾಪನ, ಸೃಜನಗಳ ಆಳಕ್ಕೆ ಕನ್ನಡಿ ಹಿಡಿಯುತ್ತಾರೆ.

(ವಾಸುದೇವ ನಾಡಿಗ್‌)

ಮುಂದೆ ಸಾಗಿದರೆ ನಾಡಿಗರ ಈವರೆಗಿನ ಕವಿತೆಗಳ ಕುರಿತು “ಕಾವ್ಯ ಕಾರಣ” ಬರೆದ ಡಾ. ಎಚ್ ಎಸ್ ಸತ್ಯನಾರಾಯಣ ಅವರ ಬರಹ ಸತ್ಯವಾಗಿಯೂ ಮಂತ್ರಮುಗ್ಧವಾಗಿಸುವಂಥದ್ದು. ನಾಡಿಗರ ಸಮಗ್ರ ಚಿತ್ರಣವನ್ನು ಇಷ್ಟು ಒಪ್ಪವಾಗಿ, ಆಪ್ತವಾಗಿ ಚಿತ್ರಿಸಲು ಇನ್ನೆಂದೂ ಯಾರಿಗೂ ಸಾಧ್ಯವೇ ಇಲ್ಲವೆನ್ನುವಷ್ಟು ಅದ್ಭುತವಾಗಿ ಬರೆದ ಈ ಬರಹವನ್ನೋದಿದರೆ ಕವಿಯ ಬಗೆಗಿನ ಪ್ರೀತಿ ಹಾಗೂ ಗೌರವ ನೂರ್ಮಡಿಯಾಗುವುದು ಖಂಡಿತ.

ನಾಡಿಗರ ಕಾವ್ಯಪ್ರೇಮಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಅವರನ್ನು ಓದಿದ ಪ್ರತಿಯೊಬ್ಬನಿಗೂ ಗೊತ್ತು, ಬದುಕನ್ನು ಬಂಧಿಸಿರುವ ಎಲ್ಲ ಭಾವಗಳನ್ನೂ ಧಾರಾಳವಾಗಿ ಸುರಿಸುವ ಈ ಭಾವುಕ ನಿಗೂಢ ಮೌನಕ್ಕೆ ಶರಣಾದರೆ ಮರೆಯಲಾಗದ ಕವನವೊಂದು ಮೈತಳೆಯುವುದು ಖಚಿತ. ಒಂದು ಅನೂಹ್ಯ ವಿಷಾದದಲ್ಲಿ ಮುಳುಗಿದರೆಂದರೆ ಬದುಕಿನ ಪರಮ ಸತ್ಯದ ಮಗ್ಗುಲೊಂದನ್ನು ನಮ್ಮತ್ತ ಹೊರಳಿಸಿಬಿಡುವ ಮಾಯಕಾರ. ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ. ನೋವು ಕಾಡಿದಾಗಲೆಲ್ಲ ತನ್ನದೇ ಶುದ್ಧ ಅಂತಃಕರಣವನ್ನು ಹಂಚಿ ಸಂತೈಸುವ ಸಹೃದಯಿ. ಈ ಪದ ಪ್ರೇಮಿ ವಿರಕ್ತಭಾವದಲ್ಲಿ ದೇಹ, ಜೀವ, ಆತ್ಮಗಳ ಅಸೀಮ ವ್ಯಾಪಾರವನ್ನು ತೆರೆದಿಡುವ ಪ್ರಬುದ್ಧ.

ನಾಡಿಗರ ಶಕ್ತಿಯೇ ಅವರ ಸಂಯಮಭರಿತ ಭಾಷೆಯ ಬಳಕೆ. ಅವರ ಎದೆಯಲ್ಲಿ ಸಲೀಸಾಗಿ ಪಾಕಗಟ್ಟುವ ಪದಗಳು ತುಂಬ ಚೆಂದದ ಪುಷ್ಪಗಳಂತೆ ತಮ್ಮನ್ನು ತಾವೇ ಸಮರ್ಥವಾಗಿ ಹೆಣಿದುಕೊಳ್ಳುವ, ಓದುಗನ ಎದೆಮಾಲೆಯಾಗುವ ಪರಿಗೆ ಸೋಲದೆ ಇರಲಾಗದು. ಈ ಕಾವ್ಯ ಶಿಲ್ಪಿ ಬದುಕಿನ ಭ್ರಮೆ- ವಾಸ್ತವಗಳ ಸಂಪೂರ್ಣ ಅರಿವಿರುವ ಪ್ರಜ್ಞಾವಂತ. ಇತರ ಯಾರ ನೆರಳೂ ಸೋಕದ ತನ್ನದೇ ಆದ ಅಚ್ಚ ಕನ್ನಡದ “ನಾಡಿಗ ಶೈಲಿ”ಯಲ್ಲಿ ಕಾವ್ಯಧಾರೆ ಹರಿಸುತ್ತಿರುವ, ಕವನಗಳೇ ಬಾಳಾಗಿರುವ ಇವರ ಈ ಹಡಗಿನಲ್ಲಿ ಸಿಗುವ ರತ್ನಗಳು ನಿಜಕ್ಕೂ ಒಂದಕ್ಕಿಂತ ಒಂದು ಅನರ್ಘ್ಯ.

“ಅಕ್ಷರ ಪಾತ್ರೆ” ಎಂಬ ಮೊದಲ ಕವನವೇ
“ಕೈ ಹಿಡಿದು ಜುಲುಮೆ ಮಾಡಬೇಡಿ ಪದಗಳೆ
ನಾನು ಮಾಗದೆ ನಿಮಗೆ ಬಿಡುಗಡೆ ಇಲ್ಲ”
ನಾಡಿಗರ ಅಕ್ಷಯ ‘ಅಕ್ಷರ ಪಾತ್ರೆ’ಯಲ್ಲಿ ಪಕ್ವವಾದ ರಸ ಪಾಕ. ಇಲ್ಲಿ ಕವಿಯ ಕವಿಯ ಅಕ್ಷರ ಸಾಂಗತ್ಯದ ಮಹೋನ್ನತ ಸಲಿಗೆ ಹಾಗೂ ಬಾಂಧವ್ಯದ ಅರಿವು ರೋಮಾಂಚನ ಹುಟ್ಟಿಸುತ್ತದೆ.

“ನೀರಲಿ ಕಾಗದದ ದೋಣಿಯ ಬಿಡುವಂತೆ
ಸರಳ ರೇಖೆಯಂತಲ್ಲ ಬಾಳು
ಕೊರಳ ಪ್ರತಿ ಬಯಕೆಗೂ ಯೋಗ ಕೂಡುವುದಿಲ್ಲ” ಎಂಬ ಸಾಲುಗಳೆರಡು ಬದುಕು ಬರಿ ಭ್ರಮಾಲೋಕವಲ್ಲ ಎಂಬ ವಾಸ್ತವವನ್ನು ನಾಜೂಕಾಗಿ ಎದೆಯೊಳಗೆ ಸುರಿಯುವ ಸುಂದರ ಕುಸುರಿ.

“ಕವಿಯೊಬ್ಬನ ಸಾವು” ಎಂಬ ಕವನದಲ್ಲಿ
“ಕವಿಯೊಬ್ಬನ ಸಾವಿನಿಂದ
ಎಷ್ಟೊಂದು ಪದಗಳು ಅನಾಥವಾಗಿಬಿಟ್ಟವು” ಎನ್ನುವಲ್ಲಿ ‘ಕವಿಯ ಎದೆಯಲ್ಲಿ ಹುಟ್ಟಿ ಕೈಯಲ್ಲಿ ಬದುಕು ಕಾಣುವ ಪದಗಳು ಕವಿಯಿಲ್ಲದೆ ಅನಾಥವಾಗುವ ಚಿಂತನೆ ಚಿಂತೆ ಹುಟ್ಟಿಸಿಬಿಡುತ್ತದೆ.

“ನನ್ನ ಆಯ್ಕೆ”ಯಲ್ಲಿ
“ಪ್ರತಿ ಇರುಳ ನಿರ್ಜನ ರಸ್ತೆ ಈ ನಾನು
ಒಂದು ರೋಮಾಂಚನವನು ಹಗಲಿಂದ ಸಾಲ ಪಡೆದೆ” ಎಂಬ ಅತಿ ಹೊಸ ಸಾಲು ಓದುಗನಲ್ಲೂ ರೋಮಾಂಚನ ಹುಟ್ಟಿಸುವಲ್ಲಿ ಸಶಕ್ತ.

“ಇನ್ನು ಮುಂದೆ ಕವಿತೆಗಳು ಬರೀ ಕವಿತೆಗಳಲ್ಲ
ಕಾಲಕೆ ನಾನು ಕೊಡುವ ಉತ್ತರಗಳು ”
ಎನ್ನುವ ಸಾಲುಗಳು ಕವಿಗೆ ಕವಿತೆ ಹೇಗೆ ಬದುಕಾಗಿದೆ ಎಂಬ ಅರಿವು ಮೂಡಿಸುವಲ್ಲಿ ಸಮರ್ಥ. ಕವಿಯ ಪದಧ್ಯಾನವೇ ಅಷ್ಟು ಗಾಢ.

“ಸರಳತನ ದೌರ್ಬಲ್ಯ ಅಲ್ಲ” ಇನ್ನೊಂದು ಅನನ್ಯ ಕವನ.
“ತೆರೆದು ಕಳಚಿ ಬಿಸುಟು ಒರೆಸಿಕೊಂಡು ಬನ್ನಿ
ನಿಮ್ಮ ಎದುರಿಗೆ ನಿಂತವನ ಜೀವ
ಮತ್ತೆ ರೆಕ್ಕೆ ಜಾಡಿಸಿಕೊಂಡು ನಿಮ್ಮ ಎದೆಯಲಿ
ಗೂಡುಕಟ್ಟದಿದ್ದರೆ ಹೇಳಿ”
ಸ್ವವಿಕಾರಗಳ ಹಾಗೂ ಪರದೂಷಣೆಯ ವಿಷ ತ್ಯಜಿಸಿ ನಿಂತವನೆದೆಯಲ್ಲಿ ಕೂಡ ನೆಲೆನಿಲುವ ವಿಶ್ವಾಸ ಕೇವಲ ರಾಗ-ದ್ವೇಷ ರಹಿತ ನಿರ್ಮಲ ಚಿತ್ತಕ್ಕಷ್ಟೇ ಸಾಧ್ಯ.

ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ. ನೋವು ಕಾಡಿದಾಗಲೆಲ್ಲ ತನ್ನದೇ ಶುದ್ಧ ಅಂತಃಕರಣವನ್ನು ಹಂಚಿ ಸಂತೈಸುವ ಸಹೃದಯಿ.

ಬದುಕೇ ಹಾಗೆ, ಒಂದು ಬೀಳುವುದೆಂದರೆ ಇನ್ನೊಂದರ ಏಳುವಿಕೆ. ಈ ನಂಬಿಕೆಯ ತಕ್ಕಡಿ ಬದುಕನ್ನು ಹೇಗೋ ಸರಿದೂಗಿಸುವ ರೀತಿ “ಇರುವೆ ಎಲೆ ಮತ್ತು ನದಿ”ಯಲ್ಲಿ ಬಲು ಸುಂದರವಾಗಿ ಚಿತ್ರಿತವಾಗಿದೆ.

“ಇಬ್ಬನಿಯಲಿ ಮೀಯಲು ಕಲಿತವಗೆ
ಬದುಕಿನ ಮಾಯೆಯ ಭಯ ಇಲ್ಲವೇ ಇಲ್ಲ
ತ್ಯಕ್ತದ ಸತ್ಯ ಗೊತ್ತಾದ ಆತ್ಮಕೆ ಭವದ ಭಯವಿಲ್ಲ” ಎನ್ನತ್ತ ಭ್ರಮಾಲೋಕ ತ್ಯಜಿಸಿದ ಆತ್ಮದ ನಿರ್ಭಯತೆಯ ಗುಟ್ಟು ಬಿಚ್ಚಿಟ್ಟ ಪರಿ ಅನ್ಯಾದೃಶ.

ಸುರಿದ ಮಳೆ ಕೊರೆದ ಇಳೆಯ ನೋಟ “ನಿನ್ನ ಪರೀಕ್ಷೆಗೆ ಅನ್ಯರ ಎದೆಯಗ್ನಿ ಕುಂಡವೆ?” ಎಂಬ ಪ್ರಶ್ನೆಯಾಗಿ ಕವಿಮನವ ಕಲಕಿದೆ. ಸ್ವಾರ್ಥ ಸಾಧನೆಯ ಹಾದಿಯಲ್ಲಿ ಮನುಜ ತುಳಿಯದ ಹಾದಿಯಿಲ್ಲ. ಎದೆಯಲ್ಲಿ ಮಾರ್ದವ ಎಂಬುದೇ ಇಲ್ಲದೆ ಯಾರನ್ನು ಹೇಗೆ ಬೇಕಾದರೂ ನೋಯಿಸಬಹುದೇ, ಅದು ಸರಿಯೇ ಎಂದು ಅಂತಃಸಾಕ್ಷಿಯನ್ನು ಕೆಣಕುವ ಕಾಳಜಿಯಾಗಿ ವ್ಯಕ್ತವಾಗಿದೆ.

“ಪದ ಧ್ಯಾನ”ದಲ್ಲಿ
“ಎಣ್ಣೆ ತೀರಿದ ಸುದ್ದಿಯೂ ಪರಿಮಳವಾಗಿ ಹರಡಿತು
ನೆರೆಮನೆಯ ಹಣತೆ ಖಾಲಿಯಾಗಿರಬೇಕು” ಎಂದು ಒಂದು ಚಿಕ್ಕ ಮಿಂಚಿನ ಬಳ್ಳಿ ಕವಿಯ ಪದಗಳೊಂದಿನ ಅನುಸಂಧಾನಕೊಂದು ಪ್ರತಿಮೆಯಾಗಿ ನಿಲ್ಲುತ್ತದೆ.

ನಾಡಿಗರ ಪದ ಪದಗಳು ಅದೆಷ್ಟು ಸಶಕ್ತ ಎಂದರೆ ಸುಮ್ಮನೆ ಕುಳಿತು ಅವನ್ನು ಓದಿದರೆ ಸಾಕು. ಯಾವ ವಿವರಣೆಯನ್ನೂ ಬಯಸದ, ಓದಿದ ಕ್ಷಣವೇ ನಿರಂತರ ಧ್ಯಾನದಲ್ಲಿ ಮುಳುಗಿಸುವ ಗುಣವಿದೆ. ಒಮ್ಮೆ ಕೈಗೆತ್ತಿಕೊಂಡರೆ ಅರಿವಿಲ್ಲದಂತೆ ಕಡೆಯ ಪುಟದಲ್ಲೇ ವಿರಮಿಸಬೇಕು. ಆಮೇಲೆ ಕೂಡ ಸುಲಭಕ್ಕೆ ಬಿಡುಗಡೆ ನೀಡದ ಎದೆ ನೆಟ್ಟು ನಿಲ್ಲುವ ಕೆಲವು ಸಾಲುಗಳ ಭಾವ ತೀವ್ರತೆಯನ್ನು ನೋಡಿ:
“ಪಾರ್ಥನೂ ಸೇರಿ ಹಕ್ಕಿಯೊಳಗಿನ ಜೀವ ಯಾರಿಗೂ ಕಾಣದೆ ಹೋಯಿತು”
” ನಕ್ಷತ್ರಗಳ ಸಿಕ್ಕಿಸಿಕೊಂಡ ಗಗನದೆದೆ ಇದು”
“ಚಿತ್ರದ ಭಾರ ಹೊತ್ತ ಮೊಳೆಯನು
ಯಾರೂ ಗಮನಿಸಲಿಲ್ಲ”
“ವಿಪ್ಲವಗಳನ್ನು ಪಲ್ಲವಿಗಳಲಿ ಪೋಣಿಸಿ
ಕಾಡುವ ಹಾಡುಗಳಲಿ ಬರೀ ಪ್ರಾಣ ಅನುರಣ”
“ಬೆಟ್ಟಕ್ಕೆ ಛಳಿಯಾದರೆ ಇಳೆಯನೇ ಎಳೆದುಕೊಳ್ಳಬೇಕು”
“ನೀನು ನಿಂತ ಕ್ಷಣದಿಂದ ನಾನು ಏಕಾಂಗಿಯಾಗಿದ್ದೇನೆ
ನನ್ನ ಮರು ಪ್ರಯಾಣ ನಿನ್ನ
ನಿಲುಗಡೆಯಿಂದ ಶುರುವಾದೀತೆ?”
“ಈಚೀಚೆಗೆ ನಕ್ಕರೆ ಜನ ಕಾರಣ ಕೇಳುತ್ತಿಲ್ಲ
ನಗದೆ ಇದ್ದರೆ ಕತೆ ಕಟ್ಟಲು ಶುರುಮಾಡಿದ್ದಾರೆ”
“ಕವಿತೆ ಬರಿ ಪದವಲ್ಲ ಜೀವ ತೇರಿಗೆ ಬಿಗಿದ ಹಗ್ಗದೆಳೆತ”
“ಬಹುಷಃ ಕನಸುಗಳು ಬಾಗಿಲ ತಟ್ಟಿರಬೇಕು
ತೆರೆಯದೆ ನಾನು ಕಟುಕನಾದೆ”
“ಬಂದರಿಗೆ ಬಂದು ನಿಂತ ಹಡಗು ನಾನು
ಹಾಜರಾತಿ ಪುಸ್ತಕ ತೆರೆನೀರಿಗೆ ಒದ್ದೆಯಾಗಿದೆ”
“ಜೀವಾಧ್ಯಾಯಗಳ ಪರಿವಿಡಿ ಕೊನೆಗೆ ಬರೆದಿಡಬೇಕಿತ್ತು”
“ತರಗತಿ ಮುಗಿವ ಮುನ್ನ ಹಾಜರಾತಿ ಪೂರ್ಣವಾಗಲಿ”
“ಕವಿತೆಗೂ
ಇದೆ ಘನತೆ ಎಂಬ ಸತ್ಯ ಅರ್ಥವಾಗುವವರೆಗೂ
ಪದಗಳ ವೃಥಾ ಸಾವಿಗೆ ಕೊನೆ ಇಲ್ಲ”
“ಅವನ ಆವರಿಸಿದ ಬಳ್ಳಿಗಳಿಗೂ ನೆಲದಲೇ ಬೇರು”
ಸಾಕಲ್ಲವೆ ಈ ಸಾಲುಗಳು ಕವಿಯ ಗುರುತ್ವ ತೋರಲು?

ಯಾವ ಆಡಂಬರವಿಲ್ಲದ ಸಂಯಮಪೂರಿತ ಕವನಗಳ ಪ್ರೀತಿಗೆ ತನ್ನ ಇಡೀ ಬದುಕನ್ನೇ ಮೀಸಲಿಟ್ಟ ಅಪ್ಪಟ ಕನ್ನಡದ ಇಂಥ ಒಬ್ಬ ಕವಿ ಹಂಚಿಕೊಂಡ ದೇಶ ಕಾಲ ನಮ್ಮದು. ಕನ್ನಡ ಕವನಗಳ ಅಭ್ಯಾಸಿಗಳಿಗೆ ತವನಿಧಿ ಈ ಸಂಕಲನ. ಕನ್ನಡದ ಬಂದರಿಗೆ ಮತ್ತೆ ಮತ್ತೆ ಇಂತಹ ಸರಕುಗಳನ್ನು ಹೊತ್ತು ತರುವ ನಾಡಿಗರ ಹಡಗು ಬರುತ್ತಿರಲಿ.

(ಕೃತಿ: ಬಂದರಿಗೆ ಬಂದ ಹಡಗು (ಕವನ ಸಂಕಲನ), ಲೇಖಕರು: ವಾಸುದೇವ ನಾಡಿಗ್, ಪ್ರಕಾಶಕರು: ಗೋಮಿನಿ  ಪ್ರಕಾಶನ, ಬೆಲೆ: 120/-)