ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.
ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ “ನೋಟ್‌ಬುಕ್‌” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ

2022ನೇ ಸಾಲಿನ ವೀಚಿ ಸಾಹಿತ್ಯ ಪುರಸ್ಕಾರಕ್ಕೆ ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ ನೋಟ್‌ಬುಕ್‌’ ಆಯ್ಕೆಯಾಗಿದೆ. ಆಳವಾಗಿ ಚಿಂತಿಸಿ ಕಥೆಗಳನ್ನು ಪರಿಕಲ್ಪಿಸುವ ಗೋಜಿಗೆ ಹೋಗದ ಶಿವಲಿಂಗಪ್ಪ ಅವರು ಕಥೆಗಾಗಿ ಯಾವುದೇ ಚಿಂತನೆಯನ್ನೂ ಮಾಡಿಲ್ಲ, ಯಾವ ಭಾಷಾ ಮಾಧ್ಯಮದಿಂದಲೂ ಹೆಕ್ಕಿ ತಂದಿಲ್ಲ. ತಮ್ಮೂರಿನ ಪರಿಸರದಲ್ಲಿಯೇ ಆಯ್ದುಕೊಂಡಿದ್ದಾರೆ. ಸಂಕಲನದಲ್ಲಿ ಬರುವ ಕಥೆಗಳಲ್ಲಿನ ಪಾತ್ರಗಳೆಲ್ಲ ನಮ್ಮ ಸುತ್ತಲಿನವುಗಳೇ ಆಗಿರುವುದು ವಿಶೇಷ.

(ಡಾ.ಶಿವಲಿಂಗಪ್ಪ ಹಂದಿಹಾಳು)

ಎಂಟು ಕಥೆಗಳಿರುವ ಈ ಸಂಕಲನದಲ್ಲಿನ ಕಥೆಗಳು ದೀರ್ಘವಾಗಿ ಹರಡಿಕೊಂಡಿದ್ದರೂ ಬಳ್ಳಾರಿ ಭಾಷೆಯ ಸೊಗಡಿನಲ್ಲಿ ಪ್ರತ್ಯಕ್ಷ ಅನುಭವ ನೀಡುತ್ತವೆಯಾದ್ದರಿಂದ ಓದುಗರಿಗೆ ಎಲ್ಲಿಯೂ ಬೇಸರವಾಗದು. ‘ಮೊದ್ಲು ಈ ತಂದೇ ತಾಯಿಗಳಿಗೆ ಪಾಠ ಕಲಿಸಬೇಕು, ಆವಾಗ ಮಕ್ಕಳನ್ನು ಸಾಲಿಗೆ ಕಳುಸ್ತಾರ’ ಎನ್ನುವ ಖುಷಿ ಎಂಬ ಬಡ ಬಾಲಕಿಯ ಬಾಯಿಂದ ಬರುವ ಸಾಲುಗಳ ಸುತ್ತಲೇ ಇಡೀ ನೋಟ್‌ಬುಕ್‌ನ ಪುಟಗಳಲ್ಲಿನ ಕತೆಗಳು ಗಿರಕಿ ಹೊಡೆಯುತ್ತವೆ.

ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.

‘ಹೊಸಬಟ್ಟೆ’ ಎಂಬ ಕಥೆಯಲ್ಲಿನ ಶಾಲಾ ಹೆಣ್ಣು ಮಗುವೊಬ್ಬಳು ತನ್ನ ಅನುಕೂಲಸ್ಥ ಸ್ನೇಹಿತೆಯರಂತೆ ತಾನೂ ಹೊಸ ಬಟ್ಟೆ ತೊಡಬೇಕೆಂಬ ಆಸೆಯಿಂದ ರಜಾದಿನಗಳಲ್ಲಿ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಕೊನೆಯಲ್ಲಿ ತನ್ನ ತಮ್ಮನ ಚಿಕಿತ್ಸೆಗಾಗಿ ಖರ್ಚು ಮಾಡುವ ಸನ್ನಿವೇಶವು ಪುನೀತ್ ಅಭಿನಯದ ಬೆಟ್ಟದ ಹೂವು ಚಲನಚಿತ್ರದ ಕಥೆಯನ್ನು ಕ್ಷಣ ಕಾಲ ಕಣ್ಮುಂದೆ ತರುತ್ತದೆ.

‘ನಾನೂ ಶಾಲೆಗೆ ಸೇರಿದೆ’ ಕಥೆಯಂತೂ ತಂದೆಯನ್ನು ಕಳೆದುಕೊಂಡ, ತಾಯಿಯಿಂದಲೂ ದೂರವಾದ ಶಾಲಾ ವಯಸ್ಸಿನ ಹುಡುಗನೊಬ್ಬ ತನ್ನ ಮಾವನ ಮನೆಯಲ್ಲಿ ಜೀತದಾಳುವಿನಂತೆ ಕೆಲಸ ಮಾಡಿಕೊಂಡು ತನ್ನ ಓರಗೆಯವರು ಶಾಲೆಗೆ ಹೋಗುವುದನ್ನು ಕಂಡು ತಾನೂ ಶಾಲೆಗೆ ಸೇರಬೇಕೆಂಬ ಹಂಬಲದಿಂದ ಶಾಲಾ ಶಿಕ್ಷಕರ ಬಳಿಗೆ ಬಂದು, ಅವರ ಮನಗೆದ್ದು, ಸರ್ಕಾರಿ ಶಾಲೆಗೆ ದಾಖಲಾಗುವ ಮನೋಜ್ಞ ಚಿತ್ರಣವನ್ನು ಒಳಗೊಂಡಿದೆ.

ಸಂಕಲನದ ಶೀರ್ಷಿಕೆಯಾಗಿ ಬಳಸಿಕೊಂಡಿರುವ ‘ನೋಟ್‌ಬುಕ್‌’ ಕತೆಯು ಫ್ಯಾಂಟಸಿ ಬಗೆಯದಾಗಿದ್ದು ಓದುಗರಿಗೆ ಆಶ್ಚರ್ಯವೆನಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ, ಬಡ ಮಗುವೊಂದು ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಮನದಲ್ಲೇ ಬಯಸುವ ಅತಿಮಾನ ಸ್ವರೂಪಗಳು ಇಲ್ಲಿದ್ದು ಬೈಸಿಕಲ್‌ನ ಚಿತ್ರವೇ ನಿಜರೂಪ ತಾಳುವ ಮೂಲಕ ಅವು ವ್ಯಕ್ತವಾಗಿವೆ. ಇವಿಷ್ಟೇ ಅಲ್ಲದೇ ಶಿವಣ್ಣ ಮೇಷ್ಟ್ರು ಮತ್ತು ಮಳೆಬಿಲ್ಲು, ಕೂಸುಮೋಡ, ಖುಷಿ ಮತ್ತು ಲೈಟುಕಂಬ ಕಥೆಗಳು ಓದುಗರ ಆಸಕ್ತಿ ಮತ್ತು ಕುತೂಹಲವನ್ನು ಹಿಡಿದಿಡುತ್ತವೆ.

ಸ್ವತಃ ಶಾಲಾ ಶಿಕ್ಷಕರಾಗಿರುವ ಶಿವಲಿಂಗಪ್ಪ ಅವರು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು ತಮ್ಮ ಕಥೆಗಳನ್ನು ಮಕ್ಕಳಿಗೆ ವಿಶೇಷವಾಗಿ ತಲುಪಿಸಬೇಕೆಂಬ ಆಸ್ಥೆಯಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯೂಆರ್ ಕೋಡ್ ಬಳಕೆ ಮಾಡಿದ್ದಾರೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಮಟ್ಟಿಗೆ ಇದೊಂದು ಹೊಸ ಪ್ರಯೋಗವಾಗಿದ್ದು ಕನ್ನಡದ ಪ್ರಖ್ಯಾತ ರಂಗಭೂಮಿ ಕಲಾವಿದರು, ಕಿರುತೆರೆ ಕಲಾವಿದರು ಮತ್ತು ರಂಗಕರ್ಮಿಗಳಿಂದಲೇ ಕಥೆಗಳನ್ನು ಲಯಬದ್ಧವಾದ ಏರಿಳಿತಗಳೊಂದಿಗೆ ವಾಚನ ಮಾಡಿಸಿರುವುದು ಮತ್ತೊಂದು ವಿಶೇಷ. ಹಿರಿಯ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲರ ಹಿನ್ನುಡಿ, ಖ್ಯಾತ ಕಥೆಗಾರ ಕೇಶವ ಮುಳಗಿಯವರ ಬೆನ್ನುಡಿ ಹಾಗೂ ಚಿತ್ರಕಲಾವಿದ ಮುರಳೀಧರ ರಾಥೋಡ್ ಅವರ ಚಿತ್ರಗಳು ಸಂಕಲನಕ್ಕೆ ಮತ್ತಷ್ಟು ಹೊಳಪನ್ನು ತಂದಿವೆ. ಬಳ್ಳಾರಿಯ ಕವನ ಪ್ರಕಾಶನ ಹೊರತಂದಿರುವ, ಪ್ರತೀ ಪುಟವೂ ವರ್ಣಮಯವಾಗಿದೆ.

(ಕೃತಿ: ನೋಟ್‌ಬುಕ್‌ (ಮಕ್ಕಳ ಕಥಾ ಸಂಕಲನ), ಲೇಖಕರು: ಡಾ.ಶಿವಲಿಂಗಪ್ಪ ಹಂದಿಹಾಳು, ಪ್ರಕಾಶಕರು: ಕವನ ಪ್ರಕಾಶನ (9980346474), ಬೆಲೆ: 300/-)