ಪಂಪ ಭಾರತದಲ್ಲಿನ ಒಂದು ಸಂದರ್ಭದಲ್ಲಿ ಬಂದಿರುವ ಶೃಂಗಾರ ರಸವನ್ನು ನೋಡುವುದಕ್ಕಿಂತ ಮುಂಚಿತವಾಗಿ ಆದಿಪುರಾಣದಂತಹಾ ಆಗಮಿಕ ಕಾವ್ಯದ ಪ್ರಾರಂಭದಲ್ಲಿ ತನ್ನ ಬಗೆಗೆ ಹೇಳಿಕೊಳ್ಳುವ ಎರಡು ಕಂದ ಪದ್ಯಗಳು ಬಹಳ ಮುಖ್ಯ ಅನಿಸುತ್ತದೆ. ಕವಿ ರಸಿಕನಾಗದ ಹೊರತು ಕಾವ್ಯ ರಸಾನ್ವಿತವಾಗಲಾರದೆಂಬ ಮೀಮಾಂಸಕರ ಮತದಂತೆ, ಪಂಪನು ವೈರಾಗ್ಯೋದಯವೇ ಪ್ರಮುಖವಾದ ವಸ್ತುವಾದ ಕಾವ್ಯದಲ್ಲಿ ಹೇಳಿಕೊಳ್ಳುವಾಗ ಮೇಲಿನ ಕಂದ ಪದ್ಯಗಳ ಬರುತ್ತದೆ. ಮೊದಲನೆಯದರಲ್ಲಿ ಹೆಣ್ಣು ಮತ್ತು ಅವಳ ಅಂಗಗಳಲ್ಲಿನ ವಸ್ತು ಭೂಷಣಾದಿಗಳಿಗೆ ತನ್ನನ್ನು ಹೋಲಿಸಿಕೊಂಡು ಹೊಗಳಿಕೊಳ್ಳುತ್ತಲೇ ಮತ್ತೊಂದರಲ್ಲಿ ಹೆಣ್ಣು ಯಾವ ಭೂಭಾಗದಲ್ಲಿ ಹೇಗೆ ಅಲಂಕರಿಸಿಕೊಳ್ಳುತ್ತಾಳೆ, ಅಲ್ಲಿಯ ಭೂಭಾಗದ ವಿಶೇಷ ಉಡುಗೆ ತೊಡುಗೆಗಳೇನು ಅನ್ನುವುದನ್ನು ತಿಳಿಸುತ್ತಲೇ ಅವುಗಳಿಗೆ ತನ್ನನ್ನು ಸಮೀಕರಿಸಿಕೊಳ್ಳಯತ್ತಾನೆ.
ಆರ್. ದಿಲೀಪ್ ಕುಮಾರ್ ಬರೆದ ಲೇಖನ

ಪಂಪ ಕನ್ನಡದ ಆದಿಕವಿ. ಕೇವಲ ಅವನ ಕಾವ್ಯ ಮೊದಲು ಸಿಕ್ಕಿದ್ದರಿಂದ ಮಾತ್ರವಲ್ಲದೆ ತನ್ನ ಭಾಷಾ ಶಕ್ತಿ, ನವಪದ ನಿರ್ಮಾಣ ಶಕ್ತಿಯಿಂದ ಕನ್ನಡಕ್ಕೊಂದು ಪರಂಪರೆಯನ್ನು ಹಾಕಿಕೊಟ್ಟಿದ್ದರಿಂದಲೇ ಕನ್ನಡಕ್ಕೆ ಆದಿಕವಿ. ಪಂಪನ ಕಾಲ ಅವನೇ ಹೇಳಿಕೊಂಡಿರುವಂತೆ ದುಂದುಬಿ ಸಂವತ್ಸರ ಕ್ರಿ. ಶ. ೯೦೨ ಕ್ಕೆ ಸರಿ ಹೊಂದುತ್ತದೆ ಎನ್ನುವುದು ವಿದ್ವಾಂಸರ ಮತ. ಈತ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕಾವ್ಯವನ್ನು ಆಂದ್ರ ನಾಡಿನ ಚಾಲುಕ್ಯರಾಜ ಅರಿಕೇಸರಿಯ ಆಸ್ಥಾನದಲ್ಲಿ ರಚನೆ ಮಾಡಿದವನು. ವೈದಿಕ ಮತವನ್ನು ಅನುಸರಿಸಿದ ವಂಶದಯಲ್ಲಿಯೇ ಬಂದವನಾಗಿದ್ದು, ಆನಂತರ ಪಂಪನ ತಂದೆ ಭೀಮಪ್ಪಯ್ಯನು ‘ಜಿನೇಂದ್ರ ಧರ್ಮಮೇ ವಲಂ’ ಎಂದು ನಂಬಿ ಅಲ್ಲಿಗೆ ಹೋಗಿ ಜೈನಧರ್ಮದಲ್ಲಿಯೇ ಬದುಕಿದವನು. ಆ ಕಾರಣದಿಂದ ಈತನೂ ಜೈನಮತವನ್ನೇ ಒಪ್ಪಿದವನು.

ಭವಕ್ಕೆ ರಾಜ ಅರಿಕೇಸರಿಯಲ್ಲಿ ಆಶ್ರಿತನಾಗಿ ಮಹಾಭಾರತದ ಕಥೆಯನ್ನು ಅನುಸರಿಸಿ ವಿಕ್ರಮಾರ್ಜುನ ವಿಜಯ ಕಾವ್ಯವನ್ನು ಬರೆದ. ಮಹಾಭಾರತದಲ್ಲಿನ ಅರ್ಜುನನಿಗೆ ಅರಿಕೇಸರಿಯನ್ನು ತಗುೞ್ಚಿ ( ಅಭೇದ ಕಲ್ಪಿಸಿ ) ಕಾವ್ಯ ಬರೆದನು. ಮತ್ತೊಂದು ಅವನ ಭಾವದ ಕಾವ್ಯ ಜೈನ ಧರ್ಮದ ಮೊದಲನೆಯ ತೀರ್ಥಂಕರನಾದ ಆದಿದೇವನನ್ನು ಕುರಿತು ಆದಿಪುರಾಣವನ್ನು ಬರೆದನು. ಕನ್ನಡದಲ್ಲಿ ಹೀಗೆ ಒಂದು ಕಾವ್ಯ ಲೌಕಿಕಕ್ಕೆ ಮತ್ತೊಂದು ಕಾವ್ಯ ಆಗಮಿಕಕ್ಕೆಂದು ಕಾವ್ಯ ರಚನಾ ಪ್ರತಿಭೆಯನ್ನೇ ಎರಡಾಗಿ ವಿಭಾಗಿಸಿಕೊಂಡು ಬರೆದವರಲ್ಲಿ ಸಿಕ್ಕಿರುವ ಮೊದಲಿಗ. ಆ ಕಾರಣದಿಂದಲೇ ಪಂಪನನ್ನು ಮಾರ್ಗಕವಿ, ಯುಗಪ್ರವರ್ತಕ ಕವಿ ಎಂದು ಕರೆದು ಗೌರವಿಸಲಾಗಿದೆ. ಮುಂದಿನ ಎಲ್ಲಾ ಕವಿಗಳೂ ಈ ಹಾದಿಯನ್ನೇ ಹಿಡಿದಿರುವುದು ಇವನಿಂದ ಆಗಿರುವ ಅಪಾರ ಪ್ರಮಾಣದ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಇವನು ಹಾಕಿಕೊಟ್ಟ ಮಾರ್ಗಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಉಳಿದ ಕವಿಗಳೂ ಋಣಿಯೇ ಆಗಿದ್ದಾರೆ. ಪಂಪನ ಕಾವ್ಯಗಳೊಂದಿಗೆ ಸಂವಾದ ವಾಗ್ವಾದ ಮಾಡುತ್ತಲೇ ಹಳಗನ್ನಡ ಕಾವ್ಯ ಪರಂಪರೆಯಲ್ಲಿನ ಎಷ್ಟೊ ಕವಿಗಳು ತಮ್ಮನ್ನು ಕಾವ್ಯಗಳ ಮೂಲಕ ಕಂಡುಕೊಂಡಿದ್ದಾರೆ. ಹೊಸಗನ್ನಡದಲ್ಲಿ ಮಹಾಕಾವ್ಯ ಬರೆದ ಕವಿಗಳೂ ಇದರಿಂದ ಹೊರತೇನಲ್ಲ. ಪಂಪನ ವೈಯುಕ್ತಿಕ ವಿಷಯವನ್ನು ಆತನೇ ತನ್ನ ಆದಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಅದಲ್ಲದೆ ಅವನ ತಮ್ಮ ಜಿನವಲ್ಲಭನು ಕೆತ್ತಿಸಿರುವ ಗಂಗಾಧರಂ ಶಾಸನವೂ ಅವನ ಬದುಕಿನ ಬಗೆಗೆ ಬೆಳಕು ಚೆಲ್ಲುತ್ತದೆ.

ಪಂಪ ಭಾರತದಲ್ಲಿನ ಒಂದು ಸಂದರ್ಭದಲ್ಲಿ ಬಂದಿರುವ ಶೃಂಗಾರ ರಸವನ್ನು ನೋಡುವುದಕ್ಕಿಂತ ಮುಂಚಿತವಾಗಿ ಆದಿಪುರಾಣದಂತಹಾ ಆಗಮಿಕ ಕಾವ್ಯದ ಪ್ರಾರಂಭದಲ್ಲಿ ತನ್ನ ಬಗೆಗೆ ಹೇಳಿಕೊಳ್ಳುವ ಎರಡು ಕಂದ ಪದ್ಯಗಳು ಬಹಳ ಮುಖ್ಯ ಅನಿಸುತ್ತದೆ.

ವನಿತಾಕಟಾಕ್ಷಕುವಲಯ
ವನಚಂದ್ರಂ ಯುವತಿಜಘನಕಾಂಚೀರತ್ನಂ l
ಸ್ತನಭರವಿನಮ್ರಗಣಿಕಾ
ಸ್ತನತಟಹಾರಂ ಸರಸ್ವತೀಮಣಿಹಾರಂ ll

ಕೇರಳಾವಿಟೀಕಟೀಸೂ
ತ್ರಾರುಣಮಣಿ ಮಲಯಯುವತಿದರ್ಪಣಾಂಧ್ರಿ l
ನೀರಂಧ್ರಬಂಧುನಸ್ತನ
ಹಾರನುದಾರಂ ಸರಸ್ವತೀಮಣಿಹಾರಂ ll

ಕವಿ ರಸಿಕನಾಗದ ಹೊರತು ಕಾವ್ಯ ರಸಾನ್ವಿತವಾಗಲಾರದೆಂಬ ಮೀಮಾಂಸಕರ ಮತದಂತೆ, ಪಂಪನು ವೈರಾಗ್ಯೋದಯವೇ ಪ್ರಮುಖವಾದ ವಸ್ತುವಾದ ಕಾವ್ಯದಲ್ಲಿ ಹೇಳಿಕೊಳ್ಳುವಾಗ ಮೇಲಿನ ಕಂದ ಪದ್ಯಗಳ ಬರುತ್ತದೆ. ಮೊದಲನೆಯದರಲ್ಲಿ ಹೆಣ್ಣು ಮತ್ತು ಅವಳ ಅಂಗಗಳಲ್ಲಿನ ವಸ್ತು ಭೂಷಣಾದಿಗಳಿಗೆ ತನ್ನನ್ನು ಹೋಲಿಸಿಕೊಂಡು ಹೊಗಳಿಕೊಳ್ಳುತ್ತಲೇ ಮತ್ತೊಂದರಲ್ಲಿ ಹೆಣ್ಣು ಯಾವ ಭೂಭಾಗದಲ್ಲಿ ಹೇಗೆ ಅಲಂಕರಿಸಿಕೊಳ್ಳುತ್ತಾಳೆ, ಅಲ್ಲಿಯ ಭೂಭಾಗದ ವಿಶೇಷ ಉಡುಗೆ ತೊಡುಗೆಗಳೇನು ಅನ್ನುವುದನ್ನು ತಿಳಿಸುತ್ತಲೇ ಅವುಗಳಿಗೆ ತನ್ನನ್ನು ಸಮೀಕರಿಸಿಕೊಳ್ಳಯತ್ತಾನೆ.

ಕೇರಳದ ವಿಟಿಗಳ ಸೊಂಟದ ಡಾಬಿನಲ್ಲಿರುವ ಕೆಂಪಾದ ರತ್ನ, ಮಲಯ ದೇಶದ ಯುವತಿಯರು ಬಳಸುವ ಕೈಗನ್ನಡಿ, ವಿಶಾಲವಾದ ಎದೆಯುಳ್ಳ ಆಂಧ್ರ ದೇಶದ ಯುವತಿಯರ ಎದೆಯ ಮೇಲಿನ ಹಾರವೆಂದು ತನ್ನನ್ನು ವರ್ಣಿಸಿಕೊಳ್ಳುವಾಗಲೇ ಪಂಪನ ಕಾವ್ಯ ಶಕ್ತಿಯ ಹಿಂದೆ ಕೆಲಸ ಮಾಡಿರುವ ರಸಿಕತೆಯನ್ನು ಗಮನಿಸಬೇಕು. ಅದರಲ್ಲಿಯೂ ಬಹಳ ಮುಖ್ಯವಾಗಿ ಮೊದಲನೆಯ ಕಂದದಲ್ಲಿ ಬರುವ ‘ಸ್ತನಭರವಿನಮ್ರಗಣಿಕಾ ಸ್ತನತಟಹಾರಂ’ (ಎದೆಯ ಭಾರದಿಂದ ಬಾಗಿರುವ ವೇಶ್ಯೆಯರ ಎದೆಯ ತಟದಲ್ಲಿರುವ ರತ್ನಹಾರವಾಗಿರುವವನು ) ಅನ್ನುವ ಮಾತಂತೂ ಅವನಲ್ಲಿನ ರಸಿಕತೆಗೆ ಬಹುದೊಡ್ಡ ಸಾಕ್ಷಿ.

ತನ್ನನ್ನು ಹೊಗಳಿಕೊಂಡಂತೆ ತನ್ನ ಕಾವ್ಯ ಜೀವಸತ್ವದ ಮೂಲ ಗುಣವನ್ನು, ಅದರ ತಿರುಳನ್ನು ಸ್ತ್ರೀಯ ಸಂಗದೊಂದಿಗೇ ಹುಟ್ಟುವ ಭಾವಗುಣದೊಂದಿಗೇ ನಿರ್ವಚಿಸಿಕೊಳ್ಳುತ್ತಾನೆ.

ಕವಿತಾರಹಸ್ಯಮಂ ಸ
ತ್ಕವಿಯಱಿಗುಮನೇಕಮೂಕನೇಡಂ ಜಡನಂ l
ಬವನಱಿಗುಮೆ ವಿಟನರಿಗುಂ
ಕುವಿಟಂ ಸ್ತ್ರೀರತರಹಸ್ಯದೊಳಱಿದಪನೇ ll ಆಪು ೨೦ ll

ಕವಿತೆಯ ರಹಸ್ಯವನ್ನು ಸತ್ಕವಿಗಳು ಮಾತ್ರ ಅರಿಯಬಹುದು. ಹುಟ್ಟು ಕಿವುಡನಾದವನು ಮೂಕ, ಕಿವುಡ, ಜಡರು ಅರಿಯಬಲ್ಲರೆ? ಸ್ತ್ರೀಯೊಂದಿಗಿನ ರತಿ ರಹಸ್ಯವನ್ನು ರಸಿಕನಾದ ವಿಟನು ಮಾತ್ರವೇ ಅರಿವನೇ ಹೊರತು, ಕುವಿಟನಾದವನು ಅರಿಯಲಾರನು ಅನ್ನುವಾಗ ಹುಟ್ಟು ಕುರುಡರು, ಜಡರು, ಕಿವುಡರು (ಕಾವ್ಯ ನಾದ ಮತ್ತು ಲಯದಿಂದ ಹುಟ್ಟುವುದು ಕರ್ಣದಿಂದಲೇ ಅನುಭವಕ್ಕೆ ಬರುವುದು. ಓದುವವರೆವಿಗೂ ಅಕ್ಷರ ಮತ್ತು ಪದಗಳು ಮುಖ್ಯ, ಓದಿದ ನಂತರ ಒಳಗೆ ಭಾವ ಜಾಗೃತವಾದಾಗ ಭಾಷೆಗಿಂತ ಭಾವ ದೊಡ್ಡದು ಅನಿಸಿಬಿಡುವುದು ಸಾಮಾನ್ಯ ಅನುಭವ) ಏನನ್ನು ತಾನೆ ಅರಿಯರು ಅನ್ನುವಾಗಲೂ ಸ್ತ್ರೀ ಮಾಡುವ ಸದ್ದುಗಳೊಂದಿಗೇ ಕಾವ್ಯವನ್ನು ಗ್ರಹಿಸುವ, ಅದರೊಂದಿಗೆ ಸಮೀಕರಿಸುವ ಪಂಪನ ರಸಿಕತೆ ಅದ್ಭುತ ಅನಿಸುತ್ತದೆ. (ಭೋಜರಾಜನು ತನ್ನ ‘ಶೃಂಗಾರ ಪ್ರಕಾಶ’ ಕಾವ್ಯದಲ್ಲಿ ಏನ ‘ಶೃಂಗಂ ರಿಯತೇ ಗಮ್ಯತೇ ಸ ಶೃಂಗಾರಃ’ ಅಂದಿದ್ದಾನೆ. ಅದರ ಅರ್ಥ ಯಾವುದು ಸುಖಾನುಭವದ ತುತ್ತತುದಿಯನ್ನು ಮುಟ್ಟಿಸುವುದೋ ಅದು ಶೃಂಗಾರ. ಪಂಪನಿಗೆ ಅದು ವನಿತೆಯ ಪಕ್ಕದಲ್ಲಿ ಸಿಕ್ಕಿದೆ)

ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿನ ನಾಲ್ಕನೆಯ ಆಶ್ವಾಸದಲ್ಲಿ ಬಹಳ ಪ್ರಾಧಾನ್ಯತೆಕೊಟ್ಟ ಪಂಪ ಬರೆಯುವ ಪದ್ಯಗಳು ಬಹಳ ಮುಖ್ಯವಾದವು. ಇದು ಅರ್ಜುನ ಸುಭದ್ರೆಯರು ಬೆಳಗು ಒಬ್ಬರನ್ನೊಬ್ಬರು ನೋಡಿ ಅಗಲಿ, ರಾತ್ರಿಯ ಸಂದರ್ಭದಲ್ಲಿನ ಸುಭದ್ರೆಯು ಅರ್ಜುನನನ್ನು ನೆನಪಿಸಿಕೊಳ್ಳುತ್ತಲೇ ಅವಳಲ್ಲಾಗುವ ಮಾನಸಿಕ ದೈಹಿಕ ಬದಲಾವಣೆಯ ವಿಪ್ರಲಂಭ ಶೃಂಗಾರದ ಪದ್ಯಗಳು.

ಕೇರಳದ ವಿಟಿಗಳ ಸೊಂಟದ ಡಾಬಿನಲ್ಲಿರುವ ಕೆಂಪಾದ ರತ್ನ, ಮಲಯ ದೇಶದ ಯುವತಿಯರು ಬಳಸುವ ಕೈಗನ್ನಡಿ, ವಿಶಾಲವಾದ ಎದೆಯುಳ್ಳ ಆಂಧ್ರ ದೇಶದ ಯುವತಿಯರ ಎದೆಯ ಮೇಲಿನ ಹಾರವೆಂದು ತನ್ನನ್ನು ವರ್ಣಿಸಿಕೊಳ್ಳುವಾಗಲೇ ಪಂಪನ ಕಾವ್ಯ ಶಕ್ತಿಯ ಹಿಂದೆ ಕೆಲಸ ಮಾಡಿರುವ ರಸಿಕತೆಯನ್ನು ಗಮನಿಸಬೇಕು.

ಶೃಂಗಾರ ರಸದಲ್ಲಿ ಅತೀ ಸೂಕ್ಷ್ಮ ರಚನೆ ಸಾಧ್ಯವಾಗಿರುವುದು ವಿಪ್ರಲಂಭ ಶೃಂಗಾರದಲ್ಲಿಯೇ. ವಿಪ್ರಲಂಭ ಹೆಸರೇ ಹೇಳುವಂತೆ ದೂರವಾದ ನಲ್ಲ ನಲ್ಲೆಯರ ವಿರಹತಾಪದ ಪರಿಯನ್ನು ಚಿತ್ರಿಸುವುದರಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. ಕೆಲವೊಮ್ಮೆ ಸಂಭೋಗ ಶೃಂಗಾರದಂತೆ ಭಾಸವಾಗುತ್ತದೆಯಾದರೂ ಸಮಾಗಮ ನಡೆಯದೆ, ಆಸೆ ಅಳಿಯದೆ, ದೇಹ ಮನಸ್ಸಿನ ಕಾಮನೆಗಳು ಹೆಚ್ಚಾಗಿ ಮೇಲೆ ಬರುವುದು ಈ ರಸದ ವಿಶೇಷತೆ.

ಕನ್ನೆತನಂಗೆಯ್ಯಲ್ ಬಗೆ
ಗುನ್ನಾಣ್ ಮಿಗೆ ಮನಮುಮಿೞ್ದುವರಿಯಲ್ ಬಗೆಗಂ l
ಕನ್ನಡಿಕುಂ ತನ್ನಳಿಪಂ
ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್ ll ೫೫ ll

ನುಡಿಯಿಸಿ ಕೇಳ್ಗುಂ ಹರಿಗನ
ಪಡೆಮಾತನ ಮಾತು ತಪ್ಪೊಡಂ ಮತ್ತಮದಂ l
ನುಡಿಸಿಸುಗುಂ ಮೊದಲಿಂದಾ
ನುಡಿ ಪಱಿಪಡೆ ಮುಳಿದು ನೋಡುಗುಂ ಕೆಳದಿಯರಂ ll ೫೬ ll

ಅಱೆಮರುಳಂತುಟೆ ಸೊರ್ಕಿನ
ತೆಱದಂತುಟೆ ಮನಮೊಱಲ್ವುದೆರ್ದೆಯುರಿವುದು l
ಮೆಯ್ಯೆಱಗುವುದು ಪದೆವುದಾನಿದ
ನೆಱೆಯೆನಿದೇಕೆಂದು ಕನ್ನೆ ತಳವೆಳಗಾದಳ್ ll ೫೭ ll

ಸುಭದ್ರೆಯು ನಿಂತ ನಿಲುವು ಒಣಗಿದ ಮರದ ಗೊಂಬೆಯ ಹಾಗೆ ಕಾಣುತ್ತಿತ್ತು. ಯಾವ ಕ್ಷಣದಲ್ಲಾದರೂ ವಿರಹದ ಕಿಚ್ಚು ಹೆಚ್ಚಾಗಿ ತಾನೆ ಸುಟ್ಟುಹೋಗುವ ಸಂಭವವಿತ್ತು ಅನ್ನುವ ಪಂಪ ಹಿಂದಿನ ಪದ್ಯದಲ್ಲಿ “ಮರವಟ್ಟು” ಅನ್ನುವ ಪದವನ್ನು ಬಳಸಿ, ಒಂದು ಅತ್ಯದ್ಭುತ ಪ್ರತಿಮೆಯಾಗಿ ಸುಭದ್ರೆಯ ಚಿತ್ರವನ್ನು, ಅವಳ ಮನಸ್ಸಿನ ಚಿತ್ರವನ್ನೂ ಓದುಗರಿಗೆ ಕೊಡುತ್ತಾನೆ.

ಮೇಲಿನ ಪದ್ಯಗಳಲ್ಲಿ ಮೊದಲನೆಯದು ಕನ್ನೆತನದಲ್ಲಿರುವ ಸುಭದ್ರೆಯು ಕನ್ನೆಯಾಗಿಯೇ ಉಳಿದರೂ ತಬ್ಬಿಬ್ಬಾಗುತ್ತಾಳೆ ಅನ್ನುವಾಗ ಪಂಪ ಸ್ಪಷ್ಟವಾಗಿ, ಪ್ರಜ್ಞಾಪೂರ್ವಕವಾಗಿ ಈ ಭಾಗವನ್ನು ವಿಪ್ರಲಂಭ ಶೃಂಗಾರವಾಗಿ ನಡೆಸಿದ್ದಾನೆ ಅನಿಸುತ್ತದೆ.

ಪದ್ಯ ೫೫ ರಲ್ಲಿ ಮನಸ್ಸು ದೇಹಗಳ ಜೊತೆ ಪ್ರಾರಂಭವಾಗುವ ತಲ್ಲಣಗಳಲ್ಲಿ ಸಿಕ್ಕ ಸುಭದ್ರೆಯು ಮಾನಸಿಕವಾಗಿ ಅಭದ್ರಳಾಗುವ ಸ್ಥಿತಿಯನ್ನು ತಿಳಿಸುತ್ತಿದೆ. ಅವಳ ತಬ್ಬಿಬ್ಬಾದ ಸ್ಥಿತಿಯನ್ನು ತನ್ನಲ್ಲೆ ತಾನು ನಿಂತು ತಲೆಕೆಳಗಾಗುವ ಚಿತ್ರವನ್ನು ಪಂಪ ಕಟ್ಟಿಕೊಡುವಾಗ ಕನ್ನಡಿಯಂತೆ ತನ್ನ ಮನಸ್ಸಿನ ಪ್ರೀತಿ ಪ್ರತಿಫಲಿತಾಗುವುದು ಇಲ್ಲಿನ ಮುಖ್ಯ ವಿಷಯ.

ಪದ್ಯ ೫೬ ರಲ್ಲಿ ದೇಹ ಮನಸ್ಸುಗಳು ಮುಂದುವರೆದು (“ಶಬ್ದದಿ ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳ್ ಉದ್ಭಾವಿಪ” ಕೇಶೀರಾಜನ ಶಬ್ಧಮಣಿ ದರ್ಪಣದ ಶ್ಲೋಕದ ಸಾಲು) ತಾನು ಆಲಿಸುವ ಪ್ರಿಯಕರನ ಬಗೆಗಿನ ಮಾತಿನ ಬಗೆಗೆ ಚಲಿಸುತ್ತದೆ. ತನ್ನ ಕೆಳದಿಯರು ಅರ್ಜುನನ ಬಗೆಗೆ ಮಾತಾಡುತ್ತಿದ್ದರೆ ಕೇಳಿಸಿಕೊಂಡು ಸಂತಸ ಪಡುತ್ತಿದ್ದವಳು, ಇದ್ದಕ್ಕಿದ್ದ ಹಾಗೆ ಅವರ ಮಾತು ನಿಲ್ಲಿಸಿದರೆ ಕುಪಿತಳಾಗುವ ಚಿತ್ರ ಇದರಲ್ಲಿದೆ. “ಮುಳಿದು ನೋಡುಗುಂ ಕೆಳದಿಯರಂ” ಅನ್ನುವಾಗ ಕೇಳುವಿಕೆಯ ಜೊತೆ ಜೊತೆಗೇ ನೋಡುವಿಕೆಯೂ ಕೆಲಸ ಮಾಡುವುದು ಇಲ್ಲಿ ಬಹಳ ಮುಖ್ಯವಾದದ್ದು. ಮೇಲಿನ ಪದ್ಯದಲ್ಲಿ ದೇಹ ಮನಸ್ಸು ಕೆಲಸ ಮಾಡಿದೆ. ಇಲ್ಲಿ ಕಣ್ಣು ಮತ್ತು ಕವಿ ಅಂಗಗಳೊಂದಿಗೆ ಸಂಘರ್ಷ ಪ್ರಾರಂಭವಾಗುತ್ತದೆ.

ಪದ್ಯ ೫೭ ರಲ್ಲಿ ಹಿಂದಿನ ದೇಹ – ಮನಸ್ಸು, ಮಾತು – ನೋಟಗಳಿಂದುಂಟಾದ ವಿರಹದ ಸ್ಥಿತಿಯು ಉನ್ಮತ್ತತೆಗೆ ಕರೆದುಕೊಂಡು ಹೋಗುವ ಚಿತ್ರ ಇದರಲ್ಲಿದೆ. ಇದನ್ನು ಬಿಡಿಸಿ ನೋಡಿದಷ್ಟು ಕಾವ್ಯದ ಸೊಗಸು ಹೆಚ್ಚಾಗುತ್ತದೆ. ವಿಪ್ರಲಂಭ ಶೃಂಗಾರದ ಸ್ಥಿತಿಯ ಸ್ಪಷ್ಟ ಚಿತ್ರಣ ಇಲ್ಲಿ ದೊರೆಯುತ್ತದೆ. ಹುಚ್ಚು ಕೆರಳಿದಂತೆ, ಮಿತಿಮೀರಿದ ಸೊಕ್ಕು ನೆತ್ತಿಗೇರಿದಂತೆ, ಎದೆ ಸುಡುತ್ತಿದೆ, ಮೈ ಕುದಿಯುತ್ತಿದೆ, ಜೀವ ಏನನ್ನೋ ಬಯಸುತ್ತಿದೆ, ಇದೇನಿದು ತನಗೇ ತಾನು ತಿಳಿಯದೆ ಭ್ರಾಂತಳಾಗುತ್ತಾಳೆ. ಪ್ರೇಮ ಅನ್ನುವುದು ಹುಚ್ಚು ಕೆರಳಿ ಮುಂದೆ ಬಂದು ನಿಲ್ಲುವ ಹಾಗೆ, ಜ್ವರ ಬಂದು ದೇಹ ಕಾಯುವಂತೆ, ಸೊಕ್ಕು ನೆತ್ತಿಗೇರಿದಂತೆ ಅನ್ನುವಾಗ ಪಂಪ ಸಾಮಾನ್ಯ ಮನುಷ್ಯರ ಅನುಭವಕ್ಕೆ ಬಂದಿರುವ ಅನುಭವವನ್ನೇ ಉದಾಹರಣೆಯಾಗಿ ಬಳಸಿ ಅಮೂರ್ತವಾದ ಕಾಮವನ್ನು ಅದರ ತೀವ್ರತೆಯನ್ನು ಸ್ಪಷ್ಟವಾಗಿ ಓದುಗರಿಗೆ ಬರುವ ಹಾಗೆ ಮಾಡುತ್ತಿದ್ದಾನೆ. ಇದು ಯಶಸ್ವಿಯಾದ ಕವಿಯೊಬ್ಬ ಕಟ್ಟಿಕೊಡುವ ವಸ್ತು ಪ್ರತಿರೂಪವೆಂದರೂ ತಪ್ಪಾಗಲಾರದು.

ಪಂಪ ಹಿಂದಿನ ಪದ್ಯಗಳಲ್ಲಿನ ದೇಹ – ಮನಸ್ಸು, ಮಾತು – ನೋಟ ಇವುಗಳಲ್ಲಿ ಇರುವ ವ್ಯವಸ್ಥಿತ ಸಂಬಂಧವನ್ನೇ ಹಾಳುಗೆಡಹುವ ಕಾಮದ ಕಾರ್ಯವನ್ನು ಅದರಿಂದ ಉಂಟಾಗುವ ಪರಿಣಾಮವನ್ನು ಹೇಳುತ್ತಿದ್ದಾನೆ. ಈ ಸ್ಥಿತಿಯು ಅವಳ ನಿಂತ ನಿಲುವಿನಿಂದ ಹಿಡಿದು, ಅವಳ ಮನೋಭಾವವನ್ನೂ ಅವಳೇ ಅರಿಯದ ಹಾಗೆ ಆಗಿರುವ ಸ್ಥಿತಿಯನ್ನು ತಿಳಿಸುತ್ತಾನೆ.

ಕೊನೆಯದಾಗಿ ಒಂದು ವೃತ್ತವನ್ನು ನೋಡಿದರೆ ವಿಪ್ರಲಂಭ ಶೃಂಗಾರದ ತೀವ್ರತೆ ತಿಳಿಯುತ್ತದೆ.

ಆನೆಯನೇಱಿ ಸೌಷ್ಠವದೆ ಬರ್ಪ
ಅರಿಕೇಸರಿಯೊಂದು ಗಾಡಿಯುದ್ಧಾನಿ ತಗುಳ್ದು
ಕಣ್ಣೊಳೆ ತೊೞಲ್ದು
ಎರ್ದೆಯೊಳ್ ತಡಮಾಡೆ
ಬೇಟದ ಉದ್ಧಾನಿಯನ್ ಆನೆ
ಮನ್ಮಥ ಮಹೀಭುಜನ್ ಓವದೆ
ತೋಱಿ ಕೊಟ್ಟುದೊಂದು ಆನೆಯೆ ತನ್ನನ್
ಆನೆಗೊಲೆ ಕೊಂದಪುದೆಂದು ಲತಾಂಗಿ ಬೆರ್ಚಿದಳ್ ll ಉ ೫೮ ll

ಅರ್ಜುನನು ದ್ವಾರಕೆಗೆ ಬರುವಾಗ ಆನೆಯ ಮೇಲೆ ಬಂದಂತಹಾ ಒಂದು ಚಿತ್ರವನ್ನು ಪಂಪ ಕೊಡುತ್ತಾನೆ. ಅಷ್ಟೇ ಆಗಿದ್ದರೆ ಸಾಮಾನ್ಯ ಅನ್ನಬಹುದಿತ್ತು, ಆದರೆ ಮುಂದಿನ ಮಾತು ಬಹಳ ಮುಖ್ಯ. ಆ ಆನೆಯನ್ನು ಮನ್ಮಥನು ತನ್ನಕಡೆಗೇ ಛೂಬಿಟ್ಟನೋ ಎನ್ನುವಂತೆ, ಅದು ತನ್ನನ್ನು ಕೊಲ್ಲುವಂತೆ ಬರುತ್ತಿದೆ ಅನ್ನುವಾಗ ಏಕಕಾಲದಲ್ಲಿ ಅರ್ಜುನನನ್ನು ಮತ್ತು ಕಾಮವನ್ನು ಎರಡನ್ನೂ ಬೃಹದಾಕಾರವಾಗಿರುವುದು ಎನ್ನುವುದನ್ನು ತಿಳಿಸುತ್ತಿರುವಾಗ, ಆ ಆನೆಯ ಕಾಲಡಿಗೆ ಸಿಕ್ಕ ಚಿತ್ರವಾಗಿ ಸುಭದ್ರೆಯನ್ನು ನೆನೆದರೆ ಅವಳ ಸ್ಥಿತಿ ತಿಳಿಯುತ್ತದೆ. ನಮ್ಮಲ್ಲಿ ಮದಗಜ ಅನ್ನುವ ಒಂದು ಪದವನ್ನು ಬಳಸುತ್ತೇವೆ, ಅ ಪದದ ಕಡೆಗೆ ಗಮನ ಕೊಡುವಂತೆ ಪಂಪ ಮಾಡುತ್ತಾನೆ. ಬರುವವನಲ್ಲಿಯೂ ಇರುವ ಕಾಮದಿಂದ ಕೂಡಿದ ಮದ, ನೋಡುವವಳಲ್ಲಿಯೂ ಇರುವ ಕಾಮದ ಮದ, ಇವೆರಡೂ ಸೇರಿ ಉಂಟಾಗುವ ಚಿತ್ರಣ ಕಾವ್ಯ ಪಠ್ಯವೇ ಸೃಜಿಸುವ ಅರ್ಥವೇ ಬೃಹತ್ತಾಗಿ ನಿಲ್ಲುತ್ತದೆ.

ಇಲ್ಲಿ ಬಹಳ ಮುಖ್ಯ ಅನಿಸುವುದು ಎರಡು ಸಂಗತಿಗಳು ಒಂದು “ಆನೆ” ಅನ್ನುವಲ್ಲಿ ಆ ಪದ ಹುಟ್ಟಿಸುವ ಧ್ವನಿ. ಮೊದಲ ಬಾರಿ “ಆನೆ” ಅನ್ನುವ ಪದ ಬಂದಾಗ ‘ಗಜ’ವಾಗಿ ಅರ್ಥವಾದದ್ದು, ಎರಡನೆಯ ಬಾರಿ “ಆನೆ” ಅಂದಾಗ ‘ನಾನು’ ಅನ್ನುವ ಅರ್ಥವನ್ನು ಕೊಡುತ್ತದೆ. ಇದೇ ಪಂಪನು ನಾಲ್ಕನೆಯ ಆಶ್ವಾಸದಲ್ಲಿಯೆ ಬನವಾಸಿಯ ವರ್ಣನೆ ಮಾಡುವಾಗ “ಆರಂಕುಸಮಿಟ್ಟೊಡಂ” ಅನ್ನುವಾಗ ಮನಸ್ಸೆನ್ನುವುದು ಒಂದು ಆನೆ ಅನ್ನುವ ಅರ್ಥ ಬರುತ್ತದೆ.

ಇಲ್ಲಿ ಅನೆಯನ್ನು ಏರಿ ಬರುತ್ತಿದ್ದಾನೆ ಅರ್ಜುನ ಅನ್ನುವಾಗ ಅವಳ ಮನಸ್ಸಿನಲ್ಲಿಯೂ ಏರಿದ್ದಾನೆ ಆನೆಯಾಗಿ ಅನ್ನುವ ಹಾಗೆ ಭಾಸವಾಗುವ ಚಿತ್ರವನ್ನು ಪಂಪ ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾನೆ. ಮತ್ತೊಂದು ಶೃಂಗಾರ ವರ್ಣನೆ ಮಾಡುವಾಗ ಅರ್ಜುನ ಸುಭದ್ರೆಯರ ವಿರಹವನ್ನು ಹೇಳುವಾಗ ವ್ಯಾಸರ ಹಾಗೆ ‘ಅರ್ಜುನ’ ಎಂದು ಬಳಸದೆ “ಬರ್ಪರಿಕೇಸರಿಯೊಂದು” ಅನ್ನುವಾಗ ಏಕಕಾಲದಲ್ಲಿ ಅರಿಕೇಸರಿಯನ್ನು ಅರ್ಜುನನ್ನು ಹೊಗಳಿದ ಹಾಗೆ ಆಗಿ ಯಾವ ಚ್ಯುತಿಯೂ ಬಾರದ ಹಾಗೆ ಕಾವ್ಯವನ್ನು ಮುನ್ನಡೆಸುತ್ತಾನೆ. ಈ ಕಾರಣಕ್ಕಾಗಿಯೇ ಬಹಳ ಪ್ರಜ್ಞಾಪೂರ್ವಕವಾಗಿ ನಿರ್ವಹಣೆಯಾಗಿರುವ ಮಹತ್ತರ ರಾಜಕೀಯ ಕಾವ್ಯವೆಂದು ಪಂಪ ಭಾರತವನ್ನು ಕರೆಯುವುದು.