ಯಾವಾಗಲೂ ಕತೆಗಳ ಬಗ್ಗೆ ಧ್ಯೇನಿಸುತ್ತಾ, ಎಲ್ಲರ ಕತೆಗಳನ್ನೂ ಓದುತ್ತಾ, ಕೆಲವೊಮ್ಮೆ ಪ್ರತಿಕ್ರಿಯಿಸುತ್ತಾ, ಸಾಧ್ಯವಾದಾಗ ಲೇಖಕರ ಜೊತೆ ಸಂವಾದಿಸುತ್ತಾ, ತಾವು ಮಾತ್ರ ಶಬ್ದದ ಲಜ್ಜೆಯಲ್ಲಿ ಮುಳುಗಿರುವಂತೆ ಯಾಕಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಒಬ್ಬ ಲೇಖಕನ ಕೊಡುಗೆಯಿರುವುದು ಅವನ ಬರಹಗಳ ಸಂಖ್ಯೆಯಲ್ಲಲ್ಲ, ಗುಣಮಟ್ಟದಲ್ಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಾನು ಊಹಿಸುವಂತೆ, ಸೂಕ್ಷ್ಮಸಂವೇದನೆಯ ಕವಿಗಳು ಕವಿತೆ ಬರೆಯಲು ಹಿಂಜರಿಯುವಂತೆ, ಕಥನದ ಮೋಹದಲ್ಲಿರುವ ಕತೆಗಾರರೂ ಕತೆ ಬರೆಯಲು ಅಳುಕುತ್ತಾರೆ. ಬರೆದರೆ ಎಲ್ಲಿ ಕತೆ ಕಳೆದು ಹೋಗುತ್ತದೋ ಎನ್ನುವ ಭಾವ ಅದು.
ಕತೆಗಾರ ಶೇಷಾದ್ರಿ ಕಿನಾರ ಅವರ “ಅವತಾರ” ಕಥಾಸಂಕಲನಕ್ಕೆ ಕೆ.ವಿ.ತಿರುಮಲೇಶ್ ಬರೆದ ಮುನ್ನುಡಿ

 

ಕೆಲವೇ ಕತೆಗಳನ್ನು ಬರೆದು ಕಥಾಲೋಕದಲ್ಲಿ ಚಿರಸ್ಥಾಯಿಯಾದ ಹಲವಾರು ಕತೆಗಾರರು ಕನ್ನಡದಲ್ಲಿ ಇದ್ದಾರೆ. ರಾಘವೇಂದ್ರ ಖಾಸನೀಸ, ಬಿ.ಸಿ. ದೇಸಾಯಿ, ಜಿ.ಎಸ್. ಸದಾಶಿವ, ಕೆ. ಸದಾಶಿವ, ರಾಜಲಕ್ಷ್ಮಿ ಎನ್. ರಾವ್, ಕೊಡಗಿನ ಗೌರಮ್ಮ, ಬಾಗಲೋಡಿ ದೇವರಾಯ, ವೆಂಕಟರಾಜ ಪಾನಸೆ ಮುಂತಾದವರು. ಅವರು ಯಾರೂ ಈಗ ನಮ್ಮ ಮುಂದೆ ಇಲ್ಲ. ಆದರೆ ಅವರಂತೆಯೇ ಸಂಖ್ಯೆಯ ದೃಷ್ಟಿಯಿಂದ ಕಡಿಮೆ ಬರೆದಿದ್ದರೂ ಮೌಲ್ಯದ ದೃಷ್ಟಿಯಿಂದ ದೊಡ್ಡ ಮೊತ್ತದ ಕತೆಗಳನ್ನು ನೀಡಿರುವ ಹಾಗೂ ಯಾವುದೇ ಪ್ರಸಿದ್ಧಿ ಪ್ರಲೋಭನೆಗಳಿಗೂ ಒಳಗಾಗದೆ ನಮ್ಮ ಮುಂದೆಯೇ ಕಂಡೂ ಕಾಣದಂತೆ ಇರುವ ಶೇಷಾದ್ರಿ ಕಿನಾರ ಅವರು ಇದೇ ಗುಂಪಿಗೆ ಸೇರುತ್ತಾರೆ.

(ಶೇಷಾದ್ರಿ ಕಿನಾರ)

ಕಿನಾರ ಇದುವರೆಗೆ ಬರೆದಿರುವುದು ಕಡಿಮೆ, ಬರೆಯದೆ ಇರುವುದೇ ಹೆಚ್ಚು ಎಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ! ಸದ್ಯದ ಸಂಕಲನವೂ ಸೇರಿ ಅವರ ಹೆಸರಿಗಿರುವುದು ಒಟ್ಟು ಮೂರು ಪುಸ್ತಕಗಳು ಮಾತ್ರ. ಇದೇ ಅವರ ಜೀವಮಾನದ ಸಾಧನೆ ಎಂದು ಕಂಡರಾಗದವರು ಹೇಳಬಹುದಾದಂತೆ. 1981ರಲ್ಲಿ ಪ್ರಕಟವಾದ ಅವರ ಮೊದಲ ಕಥಾಸಂಕಲನ “ಛೇದ”ದಲ್ಲಿ ಹನ್ನೆರಡು ಕತೆಗಳಿದ್ದರೆ, 2003ರಲ್ಲಿ ಪ್ರಕಟವಾದ “ಕಂಡ ಜಗತ್ತು”ವಿನಲ್ಲಿ ಇರುವುದು ಹನ್ನೊಂದು ಕತೆಗಳು. ಈಗ, 2018ರಲ್ಲಿ ಪ್ರಕಟವಾಗುತ್ತಿರುವ ಈ ಮೂರನೆಯ ಸಂಕಲನದಲ್ಲಿ ಹತ್ತೊಂಬತ್ತು ಕತೆಗಳಿವೆ. ಎಂದರೆ ಈ ನಲುವತ್ತು ದಶಕಗಳ ದೀರ್ಘಾವಧಿಯಲ್ಲಿ ಕಿನಾರ ಬರೆದುದು ಕೇವಲ ನಲವತ್ತೆರಡು ಸಣ್ಣಪುಟ್ಟ ಕತೆಗಳನ್ನು, ಯಾವಾಗಲೂ ಕತೆಗಳ ಬಗ್ಗೆ ಧ್ಯೇನಿಸುತ್ತಾ, ಎಲ್ಲರ ಕತೆಗಳನ್ನೂ ಓದುತ್ತಾ, ಕೆಲವೊಮ್ಮೆ ಪ್ರತಿಕ್ರಿಯಿಸುತ್ತಾ, ಸಾಧ್ಯವಾದಾಗ ಲೇಖಕರ ಜೊತೆ ಸಂವಾದಿಸುತ್ತಾ, ತಾವು ಮಾತ್ರ ಶಬ್ದದ ಲಜ್ಜೆಯಲ್ಲಿ ಮುಳುಗಿರುವಂತೆ ಯಾಕಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಒಬ್ಬ ಲೇಖಕನ ಕೊಡುಗೆಯಿರುವುದು ಅವನ ಬರಹಗಳ ಸಂಖ್ಯೆಯಲ್ಲಲ್ಲ, ಗುಣಮಟ್ಟದಲ್ಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಾನು ಊಹಿಸುವಂತೆ, ಸೂಕ್ಷ್ಮಸಂವೇದನೆಯ ಕವಿಗಳು ಕವಿತೆ ಬರೆಯಲು ಹಿಂಜರಿಯುವಂತೆ, ಕಥನದ ಮೋಹದಲ್ಲಿರುವ ಕತೆಗಾರರೂ ಕತೆ ಬರೆಯಲು ಅಳುಕುತ್ತಾರೆ. ಬರೆದರೆ ಎಲ್ಲಿ ಕತೆ ಕಳೆದು ಹೋಗುತ್ತದೋ ಎನ್ನುವ ಭಾವ ಅದು. ಬರೆದಾದ ಮೇಲೆಯೂ ಕತೆ ಹೀಗಿರಬೇಕಾದುದಲ್ಲ ಎನ್ನುವ ಒಂದು ಆತಂಕ. ಕಲ್ಪನೆಯ ಪ್ರಜ್ವಲತೆ ಅದರ ಸಾಕಾರದಲ್ಲಿ ಇರುವುದಿಲ್ಲ. ಆದ್ದರಿಂದ ಮನಸ್ಸಿನಲ್ಲಿ ಇರುವುದನ್ನೆಲ್ಲ ಅದೇ ರೀತಿ ಸಾಕ್ಷಾತ್ಕಾರಗೊಳಿಸುವುದಕ್ಕೆ ಆಗುವುದಿಲ್ಲ. ಮಾಧ್ಯಮದೊಂದಿಗೆ ಕಲಾವಿದನಿಗಿರುವ ಸಮಸ್ಯೆ ಇದು.

ಕಿನಾರ ಹೀಗೆ ಬೆರಗಿನಲ್ಲಿರುವ ವ್ಯಕ್ತಿ. ಆದ್ದರಿಂದಲೇ ಅವರ ನಿರ್ಮಾಣ ಕಡಿಮೆ, ಆದರೆ ಅದರ ಗುಣ ಅಪ್ಪಟ. ಇದನ್ನು ಈಸ್ಥೆಟಿಸಿಸಂ ಎಂದು ಒತ್ತರಿಸುವುದು ಸುಲಭ; ಆದರೆ ನಿಜದಲ್ಲಿ ಹಾಗಲ್ಲ. ಕಿನಾರ ಬರೆಯುವುದು ಮನುಷ್ಯರ ಬಗ್ಗೆ, ತಾನು ಬರೆಯುವುದಕ್ಕೆ ನ್ಯಾಯ ಒದಗಿಸಬಲ್ಲೆನೇ ಇಲ್ಲವೇ ಎನ್ನುವುದು ಈ ಕತೆಗಾರನನ್ನು ಕಾಡುವ ಆತಂಕ ಎನಿಸುತ್ತದೆ. ಆದ ಕಾರಣ ಅವರ ಕತೆಗಳು ಒಂದೇ ವಸ್ತುವಿನ ಕುರಿತು ಬರೆದ ಬೇರೆ ಬೇರೆ ಕಥಾವೃತ್ತಿಗಳಂತೆ ಅನಿಸಿದರೆ ಆಶ್ಚರ್ಯವಿಲ್ಲ: ಸಾಮಾಜಿಕ ಮನುಷ್ಯನ ದಾರುಣತೆಯೇ ಈ ವಸ್ತು. ಇಷ್ಟು ಸಂಕ್ಷಿಪ್ತವಾಗಿ ಹೇಳಿದರೆ ಅವರ ಕತೆಗಳಲ್ಲಿನ ವಿಷಯ ವೈವಿಧ್ಯ, ಜೀವನ ಪ್ರೀತಿ, ಭಾಷಾ ಪ್ರೌಢಿಮೆ ಮತ್ತು ಒಟ್ಟಾರೆ ಶೈಲಿಗೆ ಅಪಚಾರವಾಗುವುದು ಎನ್ನುವುದು ನಿಜ. ಯಾಕೆಂದರೆ ಕಿನಾರ ಅವರ ಕತೆಗಳು ಒಂದು ಪಟ್ಟಿಗೆ ಸಿಗುವಂಥವಲ್ಲ.

ನಮ್ಮದೇ ಆದ ದಾರುಣ ಜಗತ್ತನ್ನು ಚಿತ್ರಿಸುವ ಕನ್ನಡದ ಆಧುನಿಕ ಕತೆಗಾರರ ಪರಂಪರೆಯೊಂದಿದೆ: ಅನಂತಮೂರ್ತಿ, ಲಂಕೇಶ್, ಕುಂವೀ, ಮೊಗಳ್ಳಿ ಗಣೇಶ್, ವೈದೇಹಿ, ಎಸ್. ದಿವಾಕರ್, ಸಾರಾ ಅಬೂಬಕರ್, ಬೊಳುವಾರು ಮಹಮ್ಮದ್ ಕುಂಞ ಮುಂತಾಗಿ. ಕಿನಾರ ಅದಕ್ಕೆ ಸೇರಿದವರು. ಅವರ ಅಂಥಾ ಪಾತ್ರಗಳನ್ನು ಗಮನಿಸಿರಿ: ಮುದುಕರು, ಮುದುಕಿಯರು, ದುಡಿದು ಹಣ್ಣಾದವರು, ಕೆಲಸವಿಲ್ಲದೆ ಅಲೆಯುವವರು, ಸಟ್ಟಾ ಆಡುವವರು, ನಿರ್ಗತಿಕರು, ನಿಸ್ಸಹಾಯಕರು, ರೋಗಿಗಳು, ನತದೃಷ್ಟರು, ಸ್ವಪ್ನಗಳನ್ನು ಕಾಣುವರು, ಸ್ವಪ್ನಗಳನ್ನು ಕಳೆದುಕೊಂಡವರು. ಇಂದಿನ ವಾರ್ತಾ ಮಾಧ್ಯಮಗಳು ಸಕ್ಸೆಸ್ ಸ್ಟೋರಿಗಳನ್ನು ಹೇಳುತ್ತವೆ: ಯಾರು ಎಂಥಾ ವಿಷಮ ಪರಿಸ್ಥಿತಿಗಳನ್ನು ಎದುರಿಸಿ ಹೇಗೆ ಎಷ್ಟು ಮುಂದೆ ಬಂದರು ಎಂದೆಲ್ಲ. ಸಕ್ಸೆಸ್ ಸ್ಟೋರಿಗಳು ನ್ಯೂಸ್ ವರ್ದಿ ಆಗಿರುತ್ತವೆ, ಫೈಲಿಯರ್ ಸ್ಟೋರಿಗಳು ಆಗಿರುವುದಿಲ್ಲ. ಹಿಸ್ಟರಿಯನ್ನು ಬರೆಯುವುದು ಗೆದ್ದ ಪಾರ್ಟಿಯೇ. ಆದರೆ ಸಾಹಿತ್ಯ ಇದೆಯಲ್ಲಾ, ಅದು ಸೋತ ಮನುಷ್ಯರ ಕತೆಗಳನ್ನು ಹೇಳುತ್ತದೆ. ಇದು ವಿಚಿತ್ರ, ಆದರೂ ನಿಜ. ಹಾಗಿದ್ದರೆ ಯಾಕೆ ನಾವದನ್ನು ಓದಬೇಕು? ಅಂಥ ಕತೆಗಳೇನೂ ನಮಗೆ ಜೀವನದಲ್ಲಿ ಗೆಲ್ಲುವುದು ಹೇಗೆಂದು ಹೇಳಿಕೊಡುವುದಿಲ್ಲ; ಅವಕ್ಕೆ ಯಾವ ಡೈಡಾಕ್ಟಿಕ್ (ಅರ್ಥಾತ್ ಬೋಧನಪರ) ಗುಣವೂ ಇರುವುದಿಲ್ಲ. ಆದರೆ ನಮ್ಮ ಮನಸ್ಸನ್ನು ಅವು ಸ್ಪರ್ಶಿಸುತ್ತವೆ.

ಶೇಷಾದ್ರಿ ಕಿನಾರ ಅವರು ಕಥಾಕ್ಷೇತ್ರವನ್ನು ಪ್ರವೇಶಿಸಿದ 1980ರ ಆಸುಪಾಸಿನ ಕಾಲ ಕನ್ನಡದ ಅಸಂಗತವಾದದ ಕಾಲವೂ ಆಗಿತ್ತು. ಅಸಂಗತ, ಸರ್ರಿಯಲಿಸಂ, ಮಾಯಾವಾಸ್ತವ ಎಲ್ಲವೂ ಒಂದು ವಿಶಾಲ ಮನಃಸ್ಥಿತಿಯ ಬೇರೆ ಬೇರೆ ಸ್ವರೂಪಗಳು. ಕಿನಾರ ಅವರ ಕತೆಗಳಲ್ಲಿ ಇವುಗಳ ಅಂಶಗಳನ್ನು ಕಾಣಬಹುದು. ಹಾಗೆಂದು ಅವರು ಯಾವುದೇ ಒಂದು ‘ಪಂಥ’ಕ್ಕೆ ಬದ್ಧರಾಗಿ ಬರೆದವರೂ ಅಲ್ಲ. ತಮಗನಿಸಿದುದನ್ನು ಅನಿಸಿದ ಹಾಗೆ ಬರೆಯುವ ಸ್ವಾತಂತ್ರ್ಯವನ್ನು ಅವರು ಉಳಿಸಿಕೊಂಡಿದ್ದಾರೆ. ಆದರೂ ಅಸಂಗತ್ವ ಅವರ ಕಥನದ ಸಾರ್ವತ್ರಿಕ ಗುಣದಂತೆ ಅನಿಸುತ್ತದೆ. ಪ್ರಸ್ತುತ ಸಂಕಲನದಲ್ಲಿನ “ಪಾತ್ರ” ಎಂಬ ಕತೆಯನ್ನು ನೋಡಿ. ಇದರಲ್ಲಿ ರಾಜಾರಾಯರು ರಸ್ತೆಯಲ್ಲಿ ನಡೆದುಹೋಗುತ್ತ ಒಂದು ಮದುವೆ ಮಂಟಪವನ್ನು ಪ್ರವೇಶಿಸುತ್ತಾರೆ. ಇವರು ಯಾರೆನ್ನುವ ವಿವರ ನಮಗಿಲ್ಲ. ವಯಸ್ಸಾದವರು ಎನ್ನುವುದಷ್ಟೇ ಗೊತ್ತು. ಈ ಮದುವೆ ಪರಿಸರದಲ್ಲಿ ಅಲ್ಲಿ ಸೇರಿದ ಹಲವರು ಅವರನ್ನು ತಮಗೆ ಬೇಕಾದ ಹಾಗೆ ಗುರುತಿಸಿಕೊಳ್ಳುತ್ತಾರೆ: ವರನ ದೊಡ್ಡಪ್ಪನಾಗಿ, ಇನ್ನು ಯಾರಿಗೋ ನೀಲಕಂಠ ಜೋಯ್ಸರಾಗಿ, ಆಗ ತಾನೆ ಬಂದಿಳಿದ ಒಬ್ಬಾಕೆಗೆ ಶಾಮಿ ಚಿಕ್ಕಪ್ಪನಾಗಿ. ಹಾಗಿದ್ದರೆ ನಿಜಕ್ಕೂ ರಾಜಾರಾಯರು ಯಾರು? ‘ನಿಜಕ್ಕೂ’ ಎಂಬ ಸ್ಥಿತಿಯೊಂದು ಇದೆಯೇ? ಇದ್ದರೆ ಅದು ಶುಷ್ಕ ದಾಖಲಾತಿಯಲ್ಲವೇ? ವಾಸ್ತವದಲ್ಲಿ ಮನುಷ್ಯ ಎಂದರೆ ಒಂದು ‘ಪಾತ್ರ’; ಅದು ನಾವು ಇತರರ ಜೊತೆ ಹೇಗೆ ಸಂಬಂಧಿಸಿಯೋ ಸಂಬಂಧಿಸದೆಯೋ ಇರುತ್ತೇವೆ ಎನ್ನುವುದರ ಮೇಲೆ ಹೊಂದಿಕೊಂಡಿದೆ.

ಇದೊಂದು ಬಹು ದೊಡ್ಡ ತಾತ್ವಿಕ ಚಿಂತನೆಯನ್ನು ಒಳಗೊಂಡ ವಿಚಾರ. ಇದೇ ನಿಟ್ಟಿನಲ್ಲಿ ರಾಯರನ್ನು (ಹಾಗೂ ನಮ್ಮನ್ನು) ಚಕಿತಗೊಳಿಸುವ ರಾಧೆ ಎನ್ನುವ ಸ್ತ್ರೀಯನ್ನು ಗಮನಿಸಿ: ವರನ ಸೋದರತ್ತೆ ಅವಳು, ರಾಧಾಬಾಯಿ. ನೆನಪಿನ ಗಣಿಯಿಂದ ರಿಯಾಲಿಟಿಯೇ ಎದ್ದು ಬಂದಂತೆ ಬಂದಿದ್ದಾಳೆ ಅವಳು. ಅವರನ್ನು ತನ್ನ ಹಳೆಯ ಪ್ರೇಮಿಯಂತೆ, ಆದರೆ ಇನ್ನೊಮ್ಮೆ ತನ್ನ ಪ್ರೇಮವನ್ನು ಜೀವಿಸುವಂತೆ, ಮಾತಾಡಿಸುತ್ತಾಳೆ. ರಾಜಾರಾಯರು ‘ನಿಜಕ್ಕೂ’ ಒಂದು ಕಾಲದಲ್ಲಿ ಅವಳ ಪ್ರೇಮಿಯಾಗಿದ್ದು ನಂತರ ತನಗೆ ಅಲಭ್ಯವೆಂದು ಅವಳೇ ಬಿಟ್ಟವರು. ಈಗ ಆಕಸ್ಮಿಕವಾಗಿ ಸಿಕ್ಕಿದಾಗ ಅವಳ ಮನಸ್ಸಿನಲ್ಲಿ ಸಿಕ್ಕಿತು, ಇಲ್ಲ ಪೂರ್ಣ ಕಳೆದು ಹೋಯಿತು ಎನ್ನುವ ಭಾವ. ಕಾಲವನ್ನು ಹಿಡಿಯುವಂತೆ ಏನೇನೋ ನೆನಪುಗಳನ್ನು ಮಾಡುತ್ತ ಹೋಗುತ್ತಾಳೆ. ಇತರರಿಗೆಲ್ಲ ಒಂದೊಂದು ಪಾತ್ರವಾಗಿ ಕಾಣಸಿದ ರಾಜಾ ರಾಯರು ರಾಧೆಗೆ ಮಾತ್ರ ನಿಜವಾದರೇ? ಅವರು ಕ್ಷಮಿಸು ರಾಧ ಎನ್ನುತ್ತಾರೆ. ಇಡೀ ಜೀವನದ ಕ್ಷಮೆ ಅದು.

ಕಿನಾರ ಬರೆಯುವುದು ಮನುಷ್ಯರ ಬಗ್ಗೆ, ತಾನು ಬರೆಯುವುದಕ್ಕೆ ನ್ಯಾಯ ಒದಗಿಸಬಲ್ಲೆನೇ ಇಲ್ಲವೇ ಎನ್ನುವುದು ಈ ಕತೆಗಾರನನ್ನು ಕಾಡುವ ಆತಂಕ ಎನಿಸುತ್ತದೆ. ಆದ ಕಾರಣ ಅವರ ಕತೆಗಳು ಒಂದೇ ವಸ್ತುವಿನ ಕುರಿತು ಬರೆದ ಬೇರೆ ಬೇರೆ ಕಥಾವೃತ್ತಿಗಳಂತೆ ಅನಿಸಿದರೆ ಆಶ್ಚರ್ಯವಿಲ್ಲ: ಸಾಮಾಜಿಕ ಮನುಷ್ಯನ ದಾರುಣತೆಯೇ ಈ ವಸ್ತು. ಇಷ್ಟು ಸಂಕ್ಷಿಪ್ತವಾಗಿ ಹೇಳಿದರೆ ಅವರ ಕತೆಗಳಲ್ಲಿನ ವಿಷಯ ವೈವಿಧ್ಯ, ಜೀವನ ಪ್ರೀತಿ, ಭಾಷಾ ಪ್ರೌಢಿಮೆ ಮತ್ತು ಒಟ್ಟಾರೆ ಶೈಲಿಗೆ ಅಪಚಾರವಾಗುವುದು ಎನ್ನುವುದು ನಿಜ.

ಕಿನಾರರ ಕಥಾಪಾತ್ರಗಳು ಕೇವಲ ಮನುಷ್ಯರು, ಯಾರಿಗೂ ಆದರ್ಶವಲ್ಲ. ಅವು ತಾವು ಅಮೂಲ್ಯವೆಂದು ಪರಿಗಣಿಸುವ ಏನೇನನ್ನೋ ಈಗಾಗಲೇ ಕಳೆದುಕೊಂಡಿರುತ್ತವೆ, ಇನ್ನಿರುವುದು ನೆನಪುಗಳು ಮಾತ್ರ. ಇವಕ್ಕೆ ಅವು ಅಂಟಿನಂತೆ ಅಂಟಿಕೊಂಡಿರುತ್ತವೆ, ಯಾಕೆಂದರೆ ಅವು ಈ ಪಾತ್ರಗಳ ಜೀವನದ ಭಾಗವಾಗಿರುತ್ತವೆ. ಕೆಲವು ಸಲ ಈ ನೆನಪುಗಳೂ ಮಾಯತೊಡಗಿರುತ್ತವೆ. ಆಗ ಉಂಟಾಗುವ ವಿಷಾದ ಅಷ್ಟಿಷ್ಟಲ್ಲ. “ಕಣ್ಮಾಯ ಕಣ್ ಚಿತ್ರ”ದ ಆನಂದರಾಯರು ತಮ್ಮ ಪ್ರೀತಿಯ ಪೆನ್ನು ಕಳೆದುಕೊಂಡಿದ್ದಾರೆ. ಅದು ಅವರ ಜೀವನ ಸಂಗಾತಿಯಂತಿದ್ದ ಪೆನ್ನು. ದಿನದ ಖರ್ಚಿನ ಲೆಕ್ಕ ಬರೆಯುತ್ತ ಅದರ ಜುಮ್ಲಾ ಸರಿಬರದೆ ಅವರು ಪೇಚಾಡುತ್ತಿದ್ದರು. ಕೊನೆಗೂ ತಾವು ಗೆಳೆಯನೊಂದಿಗೆ ಹೋಟೆಲಿಗೆ ಹೋಗಿ ಅವನ ಬಾಯಿಚಪಲ ಪೂರೈಸಿದ ಮೊಬಲಗು ಸೇರಿಸಿದಾಗ ಲೆಕ್ಕ ಸರಿಬರುತ್ತದೆ. ಆದರೆ ಬರೆದಿರಿಸಿದ ಪೆನ್ನು ಎಲ್ಲಿ ಹೋಯಿತು? ಮಧ್ಯಾಹ್ನ ಸೆಕೆಗೆ ಫ್ಯಾನ್ ಹಾಕಲು ಕರೆಂಟ್ ಇಲ್ಲ. ತಮ್ಮ ಸುಂದರ ನವಿಲು ಬೀಸಣಿಗೆ ಹುಡುಕಿದರೆ ಅದೂ ಸಿಗುವುದಿಲ್ಲ. ಅದನ್ನು ಹರಿಯಲು ತೊಡಗಿದವನು ಮೊಮ್ಮಗ; ನಂತರ ಅದರ ಕಣ್ಣುಗಳನ್ನು ಕಿತ್ತು ಮುಕ್ಕಲು ಸುರುಮಾಡಿದ್ದು ಮೊಮ್ಮಗಳು. ಇದನ್ನು ಕಂಡು ಸಹಿಸಲಾರದೆ ರಾಯರು ಮೊಮ್ಮಗಳಿಗೆ ತಪರಾಕಿ ಹಾಕುತ್ತಾರೆ. ಅದರ ಅರಚಾಟಕ್ಕೆ ಅಮ್ಮ ಅಜ್ಜಿ ಬಂದು ಬಿಡಿಸಿ ರಾಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದೆಲ್ಲದರಿಂದ ರೋಸಿಹೋದ ರಾಯರು ಜುಬ್ಬಾ ಹಾಕಿಕಂಡು ಬೀದಿಗಿಳಿದು ನಡೆಯುತ್ತಾರೆ. ಥಟ್ಟನೆ ಅವರಿಗೆ ಕಳೆದುಹೋದ ಪೆನ್ನಿನ ನೆನಪಾಗುತ್ತದೆ. ಅವರನ್ನು ಅತ್ಯಂತವಾಗಿ ಕಾಡುತ್ತಿರುವುದು ಆ ಪೆನ್ನು ಕಳೆದುಹೋದ ಸಂಗತಿ. ಯಾಕೆಂದರೆ ಆನಂದರಾಯರು ಇನ್ನೂ ಆನಂದನಾಗಿದ್ದು ಕಾಲೇಜಿಗೆ ಹೋಗುತ್ತಿದ್ದ ಕಾಲದಲ್ಲಿ ಒಮ್ಮೆ ಲೇಖನಿ ಮರೆತು ಪರೀಕ್ಷೆಗೆ ಬಂದು ಚಡಪಡಿಸುತ್ತಿದ್ದಾಗ ಕ್ಲಾಸ್ಮೇಟ್ ಹರಿಣಿ ಕೊಟ್ಟಿದ್ದ ಪೆನ್ನು ಅದು. ಆ ಕೈಯನ್ನವರು ಹಿಡಿದುಕೊಂಡಿದ್ದರು. ನಂತರ ಅವಳಿಗೆ ಪ್ರೇಮ ಪತ್ರಗಳನ್ನು ಬರೆಯಲು ಸುರುಮಾಡಿದರು. ಬೇಸಿಗೆ ರಜೆಯಲ್ಲಿ ಅವುಗಳ ಸಂಖ್ಯೆ ಜಾಸ್ತಿಯಾಗುತ್ತ ಹೋಯಿತು. ಅವೆಲ್ಲಾ ಚರಿತ್ರೆ-ಭೂಗೋಳ ಪಠ್ಯಪುಸ್ತಕಗಳನ್ನು ಸೇರುತ್ತಿದ್ದುವೇ ಹೊರತು ಹರಿಣಿಯನ್ನಲ್ಲ. ಅವರ ಪ್ರೀತಿಯ ಸಂಗತಿ ಅವಳಿಗೆ ಗೊತ್ತೇ ಇರಲಿಲ್ಲ. “ಆತನೇ ಒಂದು ಪೋಸ್ಟ್ ಡಬ್ಬ ತಯಾರಿಸಿದ. ಅದಕ್ಕೆ ಕಾಗದ ಹಾಕಿ, ಅದರಿಂದ ತೆಗೆದು ‘ಪೋಸ್ಟ್’ ಎಂದು ಕೂಗಿ, ಅದನ್ನು ಒಡೆದು ಓದಿ ಓದಿ ಮರುಳಾದ. ಆ ಮೇಲೆ ಹರಿಣಿ ಎಲ್ಲಿ? ಈತನೆಲ್ಲಿ? ಈ ಜನಸಾಗರದಲ್ಲಿ, ಗೋಲದಂಥ ಪ್ರಪಂಚದಲ್ಲಿ, ಮನೆಯಿಂದ ಮನೆಗೆ ಮನೆಗಳನ್ನು ಬದಲಾಯಿಸುತ್ತ, ಲಾಲಿ ಹೇಳುತ್ತಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತ ಅಕ್ಕಿ ಆರಿಸಿ, ಬೇಯಿಸಿ ಕೈ ತುತ್ತು ಹಾಕಿ ಮಕ್ಕಳನ್ನು ಪೊರೆದ ಹರಿಣಿ ಎಲ್ಲಿ? ತಾನೆಲ್ಲಿ? ಆಗ ಆನಂದ ಇದ್ದಾತ ಈಗ ಆನಂದರಾಯ…. ಆನಂದಜ್ಜ…. ಆ ಪೆನ್ನು ಜೀವದ ಹಾಗೆ ಅವರ ಜೀವಕ್ಕೆ ಅಂಟಿಕೊಂಡು ಬಂದಿತ್ತಲ್ಲ, ಅದು ಎಲ್ಲಿ ಕಾಣೆಯಾಗಿದೆ?”

ದಟ್ಟವಾದ ವಸ್ತುವಿವರಗಳು ಕಿನಾರ ಅವರ ಕಥನದ ಇನ್ನೊಂದು ಆಕರ್ಷಣೆ: ಕತೆಯನ್ನು ಬರೆಯಲು ಅವರು ಅಳುಕುವಂತೆ ಕಂಡರೂ ಒಮ್ಮೆ ಸುರುಮಾಡಿದರೆ ಅವರು ಬಿರುಸಾಗಿ ಕತೆ ಹೇಳುತ್ತಾರೆ. “ದಾನ” ಎಂಬ ಕತೆಯ ನಿರೂಪಣಾ ಕ್ರಮವನ್ನು ಗಮನಿಸಿ: ಒಂದು ಸಾಯಂಕಾಲದಿಂದ ರಾತ್ರಿಯ ತನಕ ನಡೆಯುವ ಈ ಕತೆಯಲ್ಲಿ ದನಗಳ ಹಟ್ಟಿಯಲ್ಲಿ, ಅಡುಗೆ ಕೋಣೆಯಲ್ಲಿ, ಚಾವಡಿಯಲ್ಲಿ ಏಕ ಕಾಲದಲ್ಲಿ ನಡೆಯುವ ಕ್ರಿಯೆಗಳನ್ನು ಅವರು ವಿವರಿಸುತ್ತಾರೆ. ಅವೆಲ್ಲವೂ ಚಿತ್ತಾಕರ್ಷಕವಾದ ವಸ್ತುವಿವರಣೆಗಳು; ನಮ್ಮ ಚಕ್ಷು, ಶ್ರವಣ, ಜಿಹ್ವಾ ಮುಂತಾದ ಎಲ್ಲಾ ಇಂದ್ರಿಯಗಳನ್ನೂ ಅವು ಚುರುಕುಗೊಳಿಸುತ್ತವೆ. ಹಟ್ಟಿಯಲ್ಲಿ ದನ ಕರೆಯುವ ಕ್ರಿಯೆ ನಡೆಯುತ್ತಿದ್ದರೆ, ಅಡುಗೆ ಕೋಣೆಯಲ್ಲಿ ಸಾರಿಗೆ ಒಗ್ಗರಣೆ ಬೀಳುತ್ತದೆ; ಚಾವಡಿಯಲ್ಲಿ ಮಕ್ಕಳು ಕೂತು ಪಾಠ ಓದುತ್ತಲೋ ಬರೆಯುತ್ತಲೋ ಇರುತ್ತವೆ. ಅವರಲ್ಲಿ ರಂಗನೆಂಬ ಹುಡುಗ ಮೊಸಳೆಯೊಂದನ್ನು ಚಿತ್ರಿಸುವುದು ನಿಜಕ್ಕೂ ಚಿತ್ರವತ್ತಾದ ಸಂಗತಿ. ಇದಕ್ಕೆಲ್ಲ ಅಧ್ಯಕ್ಷತೆ ವಹಿಸುವಂತೆ ಜಗನ್ನಾಥ ರಾಯರು ‘ಎಂದಿನಂತೆ’ ಜಗಲಿಯಲ್ಲಿ ದೊಡ್ಡದೊಂದು ಕುರ್ಚಿಯಲ್ಲಿ ಕೂತಿದ್ದಾರೆ.

ಇಲ್ಲಿ ಕಿನಾರ ಅಸಂಗತವೊಂದನ್ನು ತರುತ್ತಾರೆ: ಈ ದಿವಸ ಜಗನ್ನಾಥ ರಾಯರಿಗೆ ಕುಳಿತಲ್ಲಿಂದ ಏಳಲು ಸಾಧ್ಯವಾಗುತ್ತಿಲ್ಲ. ಅವರ ದೇಹ ಕುರ್ಚಿಗೆ ಅಂಟಿಕೊಂಡಿದೆ, ಹಾಗೂ ಏಳುವ ಶಕ್ತಿಯನ್ನೇ ಅವರು ಕಳೆದುಕೊಂಡಿದ್ದಾರೆ. ಮಕ್ಕಳೆಲ್ಲ ಎದ್ದು ಅವರನ್ನು ಜಗ್ಗಿ ಎಳೆದರೂ ಅವರು ಕುರ್ಚಿಯಿಂದ ಬೇರ್ಪಡುವುದಿಲ್ಲ. ಕತೆಯ ಕೊನೆಯಲ್ಲಿ ಈ ಕುರ್ಚಿಯನ್ನು ಪಂಚಾಯತ್ ಕಚೇರಿಗೆ ದಾನವಾಗಿ ಕೊಡುವ ಪ್ರಸ್ತಾಪವಿದೆ. ಅದರಲ್ಲಿ ಪಂಚಾಯತ್ ಅಧ್ಯಕ್ಷರು ಕುಳಿತುಕೊಳ್ಳುತ್ತಾರೆ, ಹಾಗೂ ಜಗನ್ನಾಥ ರಾಯರಿಗೆ ಕುರ್ಚಿಯಿಂದ ಬಿಡುಗಡೆಯಾಗುತ್ತದೆ. ಇದೊಂದು ಸಂಕೇತದಂತೆ ಬರುತ್ತದೆ. ಆದರೆ ಕತೆ ನಮ್ಮನ್ನು ಸೆಳೆಯುವುದು ಅದರ ವಿವರಣಶಕ್ತಿಯಿಂದ.

ಇಷ್ಟೇ ಅಥವಾ ಇದಕ್ಕಿಂತಲೂ ದಟ್ಟವಾದ ವಿವರಣೆ “ಅವತಾರ”ದಲ್ಲಿ ಬರುತ್ತದೆ. ಅದರಲ್ಲಿ ಕಪನೀಪತಿ ಮತ್ತು ರಂಗನಾಯಕಮ್ಮ ಎಂಬ ಅನಾಕರ್ಷಕ ದಂಪತಿಗಳಿಬ್ಬರು ದೆವ್ವದ ಮನೆಯಂಥ ಮನೆಗೆ ಬಾಡಿಗೆಗೆ ಬರುವುದು, ಆ ಕೊಳಕು ಮನೆಯನ್ನು, ಹಿತ್ತಿಲನ್ನು, ಮತ್ತು ಮುಖ್ಯವಾಗಿ ಬಾವಿಯನ್ನು ಅವರು ಶುಚಿಪಡಿಸಲು ಯತ್ನಿಸುವುದು ವಸ್ತು. ಆ ಬಾವಿಯದು ಹೊಲಸು ನೀರು; ಅದರ ಆಳವನ್ನು ಕಂಡವರಿಲ್ಲ. ಅದಕ್ಕೆ ಹಿಂದೆ ಯಾರೋ ಬಿದ್ದು ಈಗ ದೆವ್ವವಾದ ಸುದ್ದಿಯಿದೆ. ಯಾಕೆಂದರೆ ಆಗಾಗ ಅಲ್ಲಿಂದ ದೆವ್ವದ ಕೂಗು ಕೇಳಿಸುತ್ತಿರುತ್ತದೆ. ಬಾವಿಯನ್ನು ಶುಚಿಗೊಳಿಸಲು ಕಪನೀಪತಿ ಅದರೊಳಕ್ಕೆ ಇಳಿಯುತ್ತಾರೆ. ಅಲ್ಲಿ ಎದುರಾಗುವುದು ಕೆಸರು, ಹೇಸಿಗೆ, ಕೊಳೆ, ವಾಸನೆ. ಅಲ್ಲದೆ ಅದೇನೇನೋ ವಸ್ತುಗಳು—ಒಡಕು ಪಾತ್ರೆಪಗಡೆಗಳು, ಕೊಡಗಳು, ಆಟಿಕೆಗಳು ಇತ್ಯಾದಿ-ಸಿಗುತ್ತವೆ.

ಊರವರು ಅದು ತನ್ನದು, ಇದು ತನ್ನದು ಎಂದು ಜಗಳಾಡುತ್ತ ಅಲ್ಲಿ ಸೇರುತ್ತಾರೆ. ಬಾವಿಯೊಳಗೆ ನಿಧಿ ಏನಾದರೂ ಇರಬಹುದು ಎನ್ನುವ ಆಸೆಯೂ ಇರುತ್ತದೆ. ಕೊನೆಗೆ ಕಪನೀಪತಿ ಅಲ್ಲಿಂದ ತರುವ ಮಣ್ಣಿನ ಗುಪ್ಪೆಯೊಂದರಲ್ಲಿ ಅಲುಗಾಡುವ ವಸ್ತುವೊಂದು ಇರುತ್ತದೆ. ಅದು ಮತ್ತೇನಲ್ಲ, ಆದಿಮ ಅವತಾರವನ್ನು ಸೂಚಿಸುವ ಒಂದು ಆಮೆ. ಕತೆ ಹೀಗೆ ಅಂತ್ಯವಾಗುತ್ತದೆ. ಇಲ್ಲೂ ನಮ್ಮನ್ನು ದಿಗ್ಭ್ರಮೆಗೊಳಿಸುವುದು ಕಿನಾರ ಅವರಿಗೆ ವಸ್ತುವಿವರಗಳ ಮೇಲಿರುವ ಹಿಡಿತ. ಈ ನಿಟ್ಟಿನಿಂದ ನೋಡಿದರೆ, “ಅವತಾರ” ಅವರ ಕಥನಶೈಲಿಗೆ ಒಂದು ಮಾದರಿಯಾಗಿದೆ ಎನ್ನಬಹುದು. ತೀರ ಕೆಳಸ್ತರದ ಗಂಡು ಹೆಣ್ಣು; ಆ ಹೆಣ್ಣಿಗೆ ಬದುಕಿನ ದಾರುಣತೆಯಿಂದಾಗಿ ತಲೆಯೂ ಸರಿಯಿಲ್ಲ. ಕೊಳಕು ಪರಿಸರ, ಕೆಸರು, ರಾಡಿ, ಕ್ರಿಮಿ ಕೀಟಗಳು, ಒಡಕು ಪಾತ್ರೆ ಪಗಡೆಗಳು, ಮುರಿದ ಬಾಗಿಲು, ಬೀಗದ ಕೈಯಿಲ್ಲದ ಬೀಗ, ಗಬ್ಬು, ಕತ್ತಲು ಇತ್ಯಾದಿ. ಅರೇ! ತಪಸ್ಸು ಮಾಡಿದರೂ ಸಿಗದ ಇವೆಲ್ಲ ಕತೆಗಾರರಿಗೆ ಎಲ್ಲಿಂದ ಸಿಕ್ಕಿದುವು ಎಂದು ನಾವು ಸೋಜಿಗ ಪಡುತ್ತೇವೆ. ಯಾಕೆಂದರೆ ಕೇವಲ ಕಲ್ಪನೆಯಿಂದ ಮೂಡಿಸುವ ಸಂಗತಿಗಳೂ ಇವಲ್ಲ. ಎಲ್ಲೋ ಇವು ಕತೆಗಾರರು ಪಟ್ಟ ಬವಣೆಗಳ ಅಂಗವೂ ಆಗಿರಬೇಕು ಅನಿಸುತ್ತದೆ. ಕತೆಗಾರ ತನ್ನ ಕಥಾಲೋಕದೊಂದಿಗೆ ಬೆರೆಯುವುದೆಂದರೆ ಇದೇ.

ಕಿನಾರ ಅವರ ಕತೆಗಳನ್ನು ಓದುತ್ತ ನಾನೀ ಕುರಿತು ಯೋಚಿಸುವಂತಾಗಿದೆ. ಈ ಪದಸಂಪದ, ಈ ವಿವರವೈವಿಧ್ಯ, ಈ ತಾದಾತ್ಮ್ಯ ಒಬ್ಬ ಕತೆಗಾರನಿಗೆ ಹೇಗೆ ಸಾಧ್ಯವಾಗುತ್ತದೆ? ಕುಂವೀ, ಆಲನಹಳ್ಳಿ ಶ್ರೀಕೃಷ್ಣ, ದೇವನೂರು ಮಹಾದೇವ ಮುಂತಾದವರಲ್ಲೂ ನಾನಿದನ್ನು ಗಮನಿಸಿದ್ದೇನೆ. ನನಗನಿಸುವುದು ಇದು ಗ್ರಾಮಾಂತರ ಪ್ರದೇಶಗಳ ಮೌಖಿಕ ಸಂಸ್ಕೃತಿಯಿಂದ ಮಾತ್ರವೇ ಸಾಧ್ಯ ಎಂದು. ಕಿನಾರರಂಥ ಕತೆಗಾರರು ಮಾತಾಡಿದಂತೆ ಬರೆಯುತ್ತಾರೆ, ಹಾಗೆ ಬರೆದಾಗಲೇ ಅವರ ಕಥನವೈಭವ ತಾನೇ ತಾನಾಗುವುದು. ಪರಿಷ್ಕೃತ ಅಕ್ಷರ ಸಂಸ್ಕೃತಿ ಇನ್ನೇನನ್ನೋ ಆಗುಮಾಡುತ್ತದೆ, ಇಲ್ಲವೆಂದಲ್ಲ, ಆದರೆ ನಿಜವಾಗಿ ಕತೆ ಹೇಳುವುದು ಮೌಖಿಕ ಸಂಸ್ಕೃತಿಯೇ. ಕಿನಾರ ಈ ಸಂಸ್ಕೃತಿಯ ಒಂದು ಕೊಂಡಿ. ಅಂಥವರು ಕತೆ ಹೇಳುವಾಗ ನಾವು ಕೇಳುತ್ತ ಇರಬೇಕು, ಕೇಳುತ್ತಲೇ ಇರಬೇಕು. ಏನಿದರ ಅರ್ಥ, ಏನು ನಿಮ್ಮ ಉದ್ದೇಶ ಎಂದು ಮುಂತಾಗಿ ಪ್ರಶ್ನಿಸಿದರೆ ಕತೆ ನಿಂತುಬಿಡುತ್ತದೆ. ಕತೆಗಾರರಿಗೆ ನಾವು ಸಭಾಕಂಪನ ಉಂಟುಮಾಡಬಾರದು, ಮಾಡಿದರೆ ಅದೊಂದು ದೊಡ್ಡ ನಷ್ಟ. ಹಾಗಾಗದಿರಲಿ ಎಂದು ಆಶಿಸುತ್ತ ಕಿನಾರರ ಕಥನಕಲೆಗೆ ದೀರ್ಘಾಯಸ್ಸನ್ನು ಕೋರುತ್ತೇನೆ.