ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು. ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ “ಬಲೂನು”

ಭುಸ್ಸೆಂದು ಕಪ್ಪುಕಪ್ಪಾಗಿ ಬಿಸಿಯುಸಿರು ಬಿಡುತ್ತ ತಿರುವುಗಳು ತುಂಬಿದ ಹಾದಿಯನ್ನು ಹತ್ತಿ ಸಾಗಿದ ಕೆಂಪು ಬಸ್ಸು ಕರೆಕ್ಟಾಗಿ ಎಂಟೂ ಇಪ್ಪತ್ತಕ್ಕೆ ಅಡ್ಕದ ಬಸ್ ಸ್ಟಾಪಿಗೆ ಬಂದು ನಿಂತಿತು. ಬ್ಯಾಗು ಹೊತ್ತುಕೊಂಡು ಅದರಿಂದಿಳಿದವಳು ಅಲ್ಲೇ ನಿಂತು ಸುತ್ತ ಕಣ್ಣಾಡಿಸಿದಳು.

ವರ್ಷವರ್ಷ ಅಪ್ಪ-ಅಮ್ಮನೇ ಬೆಂಗಳೂರಿಗೆ ಬರುತ್ತಿದ್ದರು. ತನಗೆ ರಜಗಳ ಕೊರತೆಯಿದ್ದು, ಮಗನಿಗೆ ರಜದಲ್ಲೂ ಕ್ಲಾಸುಗಳು, ಕ್ಯಾಂಪುಗಳು ಇತ್ಯಾದಿ ಇದ್ದ ಕಾರಣ ಊರಕಡೆಗೆ ಐದು ವರ್ಷದಿಂದೀಚೆಗೆ ತಲೆ ಹಾಕಿರಲಿಲ್ಲ. ಬಂದಾಗೆಲ್ಲ ಕಾರಲ್ಲಿ ಬರುತ್ತಿದ್ದ ಕಾರಣ ಅಡ್ಕದ ಪುಟ್ಟ ಪೇಟೆಯಾಗಲೀ, ಮನುಷ್ಯರಾಗಲೀ ಗಮನಕ್ಕೆ ಬರುತ್ತಿರಲಿಲ್ಲ.

ಇವತ್ತು ನೋಡುತ್ತಿರುವಾಗ ಎಲ್ಲವೂ ಹೊಸಹೊಸದಾಗಿದೆ. ಎಂದೋ ನೋಡಿದ ಬಣ್ಣಮಾಸಿದ ಬಸ್ಟಾಪು ಕೇಸರಿ ಬಣ್ಣ ಮೆತ್ತಿಕೊಂಡಿದೆ. ಅದರ ಪಕ್ಕದ ಆಲದ ಮರ ಇನ್ನಷ್ಟು ದೊಡ್ಡದಾಗಿ ನೆರಳು ನೆರಳಾಗಿ ಹಬ್ಬಿದೆ. ಆಗ ಮೂರ್ನಾಕು ಪುಟ್ಟ ಅಂಗಡಿಗಳಿದ್ದ ಅಡ್ಕ ಈಗ ಎರಡು ಕಮರ್ಶಿಯಲ್ ಕಾಂಪ್ಲೆಕ್ಸುಗಳು ಹುಟ್ಟಿಕೊಂಡು ದೊಡ್ಡದಾಗಿದೆ. ಟೈಲರ್ ಶಾಪುಗಳು, ಮೊಬೈಲು ಅಂಗಡಿ, ಹೋಟೆಲು, ಮೆಡಿಕಲ್ಲು, ದಿನಸಿ ಅಂಗಡಿ, ಒಂದು ಪುಟಾಣಿ ಸುಪರ್ ಮಾರ್ಕೆಟು – ತರತರದ ಅಂಗಡಿಗಳಿದ್ದು ಹೆಚ್ಚಿನವಕ್ಕೆ ಈಗಷ್ಟೇ ಬೆಳಗಾಗುತ್ತಿದೆ.

ಇಲ್ಲಿಂದ ಮನೆಗೆ ಐದು ಕಿಲೋಮೀಟರ್. ಬಸ್ಸಲ್ಲಿ ಹೋಗುವುದಾ ಇಲ್ಲ ಆಟೋ ಮಾಡಲಾ? ಆಟೋ ಆದರೆ ಸೀದಾ ಮನೆಗೇ ಹೋಗುತ್ತದೆ. ಬಸ್ಸಾದರೆ ಮತ್ತೊಂದು ಕಿಲೋಮೀಟರ್ ನಡೆಯಬೇಕು, ಲಗೇಜ್ ಜೊತೆಗೆ ಕಷ್ಟವಾಗ್ತದೇನೋ…

ಯೋಚನೆ ಮಾಡುತ್ತ ಆಟೋ ಸ್ಟಾಂಡಿನಲ್ಲಿ ನಿಂತಿದ್ದ ಎರಡು ಆಟೋಗಳ ಕಡೆ ಕಣ್ಣು ಹಾಯಿಸಿದಳು. ಡ್ರೈವರುಗಳಿಬ್ಬರೂ ಇವಳೆಡೆಗೇ ನೋಡುತ್ತಿದ್ದರು. ಅವರಲ್ಲೊಬ್ಬ ಗಡ್ಡ ಬಿಟ್ಟುಕೊಂಡು ಎಡಬದಿಗೆ ಕ್ರಾಪ್ ಮಾಡಿಕೊಂಡಿದ್ದ ಚೂಪುಕಣ್ಣಿನಾತ. ಇವಳು ಅವನ ಕಡೆ ನೋಡಿದಾಗ ಅದಕ್ಕೇ ಕಾಯ್ತಿದ್ದವನ ಹಾಗೆ ನಕ್ಕ. ಇವನನ್ನೆಲ್ಲೋ ನೋಡಿದ್ದೀನಲ್ಲ? ಅಷ್ಟರಲ್ಲಿ ಇನ್ನೊಬ್ಬ ಆಟೋ ಡ್ರೈವರ್ ಅವಳೆಡೆಗೆ ಸರಿದು ಬಂದ.

ಕೇಳಿದ: “ನೀವು ಗಣೇಶ ಮಾಷ್ಟ್ರ ಮಗಳಲ್ಲವಾ?”

“ಹೌದು…” ಅಂದಳು, ಹೇಗೆ ಗೊತ್ತು ಅನ್ನುವ ಪ್ರಶ್ನೆಯನ್ನು ನುಂಗಿಕೊಂಡಳು. ಚಿಕ್ಕ ಊರು, ಎಲ್ಲರಿಗೂ ಎಲ್ಲರನ್ನೂ ಗೊತ್ತಿರ್ತದೆ.

“ಅಕ್ಕಾ ನಾನು ಶ್ಯಾಮ, ನಿಮಿಗೆ ನನ್ನ ಗುರ್ತ ಸಿಕ್ಲಿಲ್ವಾ?”

ಓಹೋ… ಇವನನ್ನು ನೋಡಿದ್ದು ಎಂದೋ ಚಿಕ್ಕಂದಿನಲ್ಲಿ. ತೋಟದ ಕೆಲಸಕ್ಕೆ ಲಚ್ಚಿಮಿ ಬರುವಾಗ ಅಮ್ಮನ ಜತೆ ಇವನೂ ಬಂದು ಆಟವಾಡಿಕೊಂಡಿರುತ್ತಿದ್ದ. “ಹಾ… ಶ್ಯಾಮ, ನೀನು ಚಿಕ್ಕವನಿರುವಾಗ ನೋಡಿದ್ದಲ್ವಾ, ಗುರ್ತು ಸಿಗ್ಲಿಲ್ಲ,” ಅಂತ ನಕ್ಕಳು.

“ಮನೆಗೆ ಹೋಗೂದಲ್ವ, ನಾ ಬಿಡ್ತೇನೆ ನಿಮ್ಗೆ, ಬನ್ನಿ,” ಅಂತ ಕರೆದಾಗ ಅವಳಿಗೂ ಸಮಸ್ಯೆ ಪರಿಹಾರವಾದಂತಾಯಿತು. ಅವಳ ಲಗೇಜ್ ಎತ್ತಿ ದುರ್ಗಾಪರಮೇಶ್ವರಿ ಅಂತ ಬರೆದ ಆಟೋದ ಹಿಂದೆ ಕಂಪಾರ್ಟ್ಮೆಂಟಲ್ಲಿಟ್ಟು ಅವಳನ್ನೂ ಹತ್ತಿಸಿಕೊಂಡು ಹೊರಟ ಶ್ಯಾಮ.

ದಟ್ಟ ಕಾಡಿನ ನಡುವೆ ಗುಡ್ಡ ಹತ್ತಿ ಇಳಿದು ಹಾವಿನಂತೆ ಹಾಯುವ ಕಿತ್ತುಹೋದ ಐದು ಕಿಲೋಮೀಟರ್ ಡಾಂಬರು ಹಾದಿಯುದ್ದಕ್ಕೂ ಅವನ ಕಥೆ ಹೇಳಿಕೊಂಡ. ಅಪ್ಪ ತೀರಿಕೊಂಡಿದ್ದು, ಅಕ್ಕಂದಿರ ಮದುವೆ ಜವಾಬ್ದಾರಿ ಎಲ್ಲ ಇವನ ಮೇಲೆಯೇ ಬಂದು ಡಿಗ್ರಿ ಓದಲಾಗದೆ ಕೈಬಿಟ್ಟಿದ್ದು. ಆಮೇಲೆ ಅದೇ ಊರಿನ ಕಾಪರೇಟಿವ್ ಬ್ಯಾಂಕಿನಲ್ಲಿ ಸಾಲ ತಗೊಂಡು ಆಟೋ ತಗೊಂಡಿದ್ದು ಇತ್ಯಾದಿ.

ಅವನ ಮಾತೇನೋ ಕೇಳುತ್ತಿದ್ದರೂ ಅವಳಲ್ಲಿನ ಕುತೂಹಲ ಮಾತ್ರ ಹೆಡೆಬಿಚ್ಚಿ ಕೂತಿತ್ತು. ಕೊನೆಗೆ ಕೇಳಿಯೇ ಬಿಟ್ಟಳು, “ಅಲ್ಲಿದ್ದ ಇನ್ನೊಂದು ಆಟೋ ಯಾರ್ದು?”
“ಮೋಞಿ ಬ್ಯಾರಿ ಮಗ ಅಬೂಬಕರ್ ದು,” ಅಂತಂದ ಶ್ಯಾಮ.

ಓಹ್, ಅಬೂಬಕರ್… ಇಪ್ಪತ್ತು ವರ್ಷಗಳ ಹಿಂದೆ ನೋಡಿದ್ದು ಅವನನ್ನ. ಎಷ್ಟು ಬದಲಾಗಿದ್ದಾನೆ…

ಒಂಬತ್ತು ಗಂಟೆಗೆ ಹತ್ತು ನಿಮಿಷ ಇದ್ದಂತೆ ಆಟೋ ಮನೆ ಮುಟ್ಟಿತು. ಹೇಳದೆಯೇ ಬಂದವಳನ್ನು ಕಂಡು ಅಮ್ಮ-ಅಪ್ಪನಿಗೆ ಆಶ್ಚರ್ಯ ಖುಷಿ ಒಟ್ಟಿಗೇ ಆಯ್ತು.

“ಎಲ್ಲಿ, ಒಬ್ಳೇ ಬಂದ್ಯಾ ಕೂಸೆ, ಪುಳ್ಳಿ ಎಲ್ಲಿ” ಅಂತ ಅಪ್ಪ ಕೇಳಿದರು. “ಮಂಗ್ಳೂರಲ್ಲಿ ಆಫೀಸಿನವರ ಕಡೆಯಿಂದ ಕಾನ್ಫರೆನ್ಸ್ ಉಂಟಪ್ಪ, ಅದಕ್ಕೇ ಅರ್ಜೆಂಟಿಗೆ ಒಬ್ಳೇ ಬಂದೆ, ಮಗ ಬೆಂಗ್ಳೂರಲ್ಲೇ ಇದಾನೆ ಅವನಪ್ಪನೊಟ್ಟಿಗೆ, ನಾ ನಾಡಿದು ವಾಪಸ್ ಹೋಗ್ಬೇಕು,” ಅಂದಳು.

ಲಗೇಜು ಒಳಗಿಟ್ಟು ಅಮ್ಮ ಮಾಡಿಕೊಟ್ಟ ಚಾ ಕುಡಿದ ಶ್ಯಾಮ ತಿಂಡಿ ಕೊಡಹೊರಟರೆ “ಇಲ್ಲ ಅಕ್ಕ, ಭಜನಾಮಂಡಳಿ ಮೀಟಿಂಗ್ ಉಂಟು, ಲೇಟ್ ಆಯ್ತು,” ಅಂದ.

ಎಂತ ಭಜನಾಮಂಡಳಿ ಅಂತ ಕೇಳಿದ್ದಕ್ಕೆ ಶ್ಯಾಮ ಹೇಳಿದ. “ದುರ್ಗಾಪರಮೇಶ್ವರಿ ಭಜನಾಮಂಡಳಿ ಅಂತ ಅಕ್ಕ. ಎರಡು ವರ್ಷ ಆಯ್ತು ಸುರುವಾಗಿ. ಪ್ರತಿ ಶುಕ್ರವಾರ ಭಜನೆ ಮಾಡ್ತೇವೆ. ಈ ವರ್ಷ ಯಕ್ಷಗಾನ ಉಂಟು. ಊರಲ್ಲಿ ಏನೇ ಧಾರ್ಮಿಕ ಕಾರ್ಯಕ್ರಮ ಇದ್ರೂ ಸಹಾಯ ಮಾಡ್ತೇವೆ.”

ಗ್ರಾಮ ಪಂಚಾಯತು ಅಧ್ಯಕ್ಷರಿಗೆ ಇವರನ್ನು ಕಂಡರೆ ಪ್ರೀತಿಯಿರುವುದರಿಂದ ಗವರ್ಮೆಂಟಿನ ಬೇರೆ ಬೇರೆ ಯೋಜನೆಗಳನ್ನ ಜನಗಳಿಗೆ ತಲುಪಿಸಲಿಕ್ಕೂ ಇವರನ್ನು ಸೇರಿಸಿಕೊಳ್ಳುತ್ತಾರಂತೆ. “ಅಂತೂ ವರ್ಷ ಇಡೀ ಬಿಸಿ ಇರ್ತೇವೆ ಅಕ್ಕ” ಅಂತಂದ.

ನೂರೈವತ್ತು ರೂಪಾಯಿ ಆಟೋಚಾರ್ಜ್ ತಗೊಂಡು “ನನ್ನ ನಂಬರು ಅಣ್ಣೇರ ಹತ್ರ ಇದೆ, ಬೇಕಾದಾಗ ಫೋನ್ ಮಾಡಿ ಅಕ್ಕ,” ಅಂತ ಹೇಳಿ ಹೊರಟುಹೋದ.

ಅವ ಹೋದಮೇಲೆ ಅಮ್ಮ ಇನ್ನೊಂದು ವಿಷಯ ಗುಟ್ಟಿನ ದನಿಯಲ್ಲಿ ಹೇಳಿದರು. ಪಕ್ಕದ ಊರಿನಲ್ಲಿ ಒಬ್ಬ ಬ್ಯಾರಿ ಆಟೋ ಡ್ರೈವರ್ ಕಾಲೇಜು ಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಚಙ್ಗಾಯ ಮಾಡಿ (ಪಟಾಯಿಸಿ) ಕೆಡಿಸಿಬಿಟ್ಟನಂತೆ. ಇದು ಊರೆಲ್ಲ ಗೊತ್ತಾಗಿ ದೊಡ್ಡ ಗಲಾಟೆಯೇ ಆಯಿತಂತೆ. ಆಮೇಲೆ ಎರಡು ದಿನ ಬಿಟ್ಟು ಅವನ ಹೆಣ ಮಂಜೂರಿನ ಹತ್ತಿರವಿರುವ ಬೀಚಲ್ಲಿ ಸಿಕ್ಕಿತಂತೆ. ಆ ಹುಡುಗಿ ಮನೆಯೊಳಗಿಂದ ಆಚೆಗೇ ಬಂದಿಲ್ಲವಂತೆ. ಇದಾದ ಸಮಯದಲ್ಲಿ ಭಜನಾಮಂಡಳಿಯ ಹುಡುಗರೆಲ್ಲ ಮನೆಮನೆಗೆ ಬಂದು ಯಾರೂ ‘ಅವರ’ ಆಟೋಗಳಲ್ಲಿ ಹೋಗಬೇಡಿ, ಹೆಚ್ಚು ಕಮ್ಮಿ ಆದರೆ ಕಷ್ಟ, ಯಾವ ಆಟೋದಲ್ಲಿ ದೇವರ ಹೆಸರು ಅಥವಾ ಧ್ವಜ ಇರುತ್ತದೆಯೋ ಅಂತದಕ್ಕೆ ಮಾತ್ರ ಹತ್ತಬೇಕು ಅಂತ ತಾಕೀತು ಮಾಡಿ ಹೋಗಿದ್ದರಂತೆ. ಇವೆಲ್ಲ ವಾಟ್ಸಾಪಿನಲ್ಲಿಯೂ ಬಂದಿತ್ತಂತೆ.

ಅಮ್ಮ ಕತೆ ಹೇಳಲು ಶುರು ಮಾಡಿದರೆ ಹೊತ್ತು ಹೋಗಿದ್ದೇ ಗೊತ್ತಾಗೂದಿಲ್ಲ. ಅದರಲ್ಲಿ ಅರ್ಧಕ್ಕರ್ಧ ಗಾಳಿಸುದ್ದಿ ಅಂತ ಗೊತ್ತಿದ್ದರೂ ಒಂದು ದಿನಕ್ಕೆ ಬಂದವಳಿಗೆ ಅಮ್ಮನ ಕೈಲಿ ವಾದ ಯಾಕೆ ಅಂತ ಎಲ್ಲದಕ್ಕೂ ಹೂಂಕುಟ್ಟುತ್ತ ಕೇಳಿದಳು. ಅಪ್ಪ ಕೇಳಿದ ಲೋಕಾಭಿರಾಮದ ಪ್ರಶ್ನೆಗಳಿಗೆ ಉತ್ತರ ನೀಡುತ್ತ, ಮರುದಿನದ ಕಾನ್ಫರೆನ್ಸಿಗೆ ಬೇಕಾದ ವಿಚಾರಗಳನ್ನು ರೆಡಿ ಮಾಡುತ್ತ, ಅಮ್ಮನ ಕೈಲಿ ಉಪಚಾರ ಮಾಡಿಸಿಕೊಳ್ಳುತ್ತ ಊರ ಸುದ್ದಿಯೆಲ್ಲ ಕೇಳುತ್ತ ದಿನ ಕಳೆಯಿತು.

ನಾಳೆ ಮಂಗಳೂರಿಗೆ ಹೋಗಬೇಕಲ್ಲ. ಆಟೋದಲ್ಲಿ ಅಡ್ಕದ ತನಕ ಹೋಗಿ ಅಲ್ಲಿಂದ ಬಸ್ಸಲ್ಲಿ ಹೋಗುವುದು ಒಳ್ಳೇದು. ಅಮ್ಮನ ಹತ್ತಿರ ಆಟೋ ಕರೆಯಲು ಹೇಳಿದಳು. ಆಮೇಲೆ ಅದೇನೋ ಹೊಳೆದಂತಾಗಿ ಅಮ್ಮನಿಗೆ ಕೇಳಿದಳು: “ನೀನು ಯಾವಾಗ್ಲೂ ಹೋಗೂದು ಯಾರ ಆಟೋದಲ್ಲಿ ಅಮ್ಮ?”

ಅಮ್ಮ ಹೇಳಿದ್ಲು. “ಈಗೆಲ್ಲಾ ಶ್ಯಾಮನ ಆಟೋನೇ.”

“ಹಂಗಾರೆ ಮೊದಲೆಲ್ಲ?”

“ಅಬೂಬಕರ್ ಅಂತ.. ಅವ ನಿನ್ನ ಕ್ಲಾಸ್ ಮೇಟ್ ಅಂತೆ ಅಲ್ವಾ, ಒಂದ್ ಸರ್ತಿ ಹೇಳಿದ್ದ ನಂಗೆ.. ಅವ ಚಂದಕ್ಕೆ ಮಾತಾಡ್ತಿದ್ದ. ತುಂಬ ಸಹಾಯ ಮಾಡ್ತಿದ್ದ. ಅವನಪ್ಪ ಅಂಗಡಿ ಮೋಞಿಬ್ಯಾರಿ, ನೆನಪುಂಟಲ್ಲ… ಬೇಕಾದಾಗೆಲ್ಲ ಅಬೂಬಕರ್ ಅಥವಾ ಶ್ಯಾಮ ಇಬ್ರಲ್ಲಿ ಒಬ್ರಿಗೆ ಫೋನ್ ಮಾಡ್ತಿದ್ದೆ. ಈಗ ಅಬೂಬಕರ್ ಗೆ ಫೋನ್ ಮಾಡೂದಿಲ್ಲ, ಆ ಹುಡುಗಿ ಗಲಾಟೆ ಎಲ್ಲ ಆದಮೇಲೆ.”

ಅವಳು ಕೆಲ ಸೆಕೆಂಡು ಅಳೆದು ಸುರಿದು ಕೊನೆಗಂದಳು: “ಅಬೂಬಕರಿಗೇ ಫೋನ್ ಮಾಡಮ್ಮ, ನಾಳೆ ಅವನ ಆಟೋದಲ್ಲಿಯೇ ಹೋಗ್ತೇನೆ. ಕ್ಲಾಸ್ಮೇಟಲ್ವಾ, ಮಾತಾಡಿದ ಹಾಗೂ ಆಯ್ತು.”

“ಶ್ಯಾಮನಿಗೇ ಹೇಳೂದು ಬೇಡ್ವಾ?”

“ಯಾಕಮ್ಮ ಅಬೂಬಕರ್ ಸರಿಯಿಲ್ವಾ, ನಿನ್ ಜತೆ ಏನಾದ್ರೂ ಗಲಾಟೆ ಆಗಿತ್ತಾ?” ಅಂತ ಕೇಳಿದಳು. ಅಮ್ಮ “ಹಾಗೇನಿಲ್ಲ, ಅವನಿಗೇ ಹೇಳ್ತೇನೆ,” ಅಂದರು. ಅಬೂಬಕರ್ ಗೆ ಫೋನ್ ಮಾಡಿ “ಇದು ಗಣೇಶ ಮಾಸ್ತ್ರ ಮನೆಯಿಂದ, ನಾಳೆ ಬೇಗ ಆರೂವರೆಗೆ ಮನೆ ಹತ್ರ ಬಾ,” ಅಂದರು. ಫೋನಿಟ್ಟು ಬರುತ್ತಾನಂತೆ ಅಂತಂದು ಅಡಿಗೆಮನೆಗೆ ನಡೆದರು.

ಯೋಚನೆ ಮಾಡುತ್ತ ಆಟೋ ಸ್ಟಾಂಡಿನಲ್ಲಿ ನಿಂತಿದ್ದ ಎರಡು ಆಟೋಗಳ ಕಡೆ ಕಣ್ಣು ಹಾಯಿಸಿದಳು. ಡ್ರೈವರುಗಳಿಬ್ಬರೂ ಇವಳೆಡೆಗೇ ನೋಡುತ್ತಿದ್ದರು. ಅವರಲ್ಲೊಬ್ಬ ಗಡ್ಡ ಬಿಟ್ಟುಕೊಂಡು ಎಡಬದಿಗೆ ಕ್ರಾಪ್ ಮಾಡಿಕೊಂಡಿದ್ದ ಚೂಪುಕಣ್ಣಿನಾತ. ಇವಳು ಅವನ ಕಡೆ ನೋಡಿದಾಗ ಅದಕ್ಕೇ ಕಾಯ್ತಿದ್ದವನ ಹಾಗೆ ನಕ್ಕ.

ಸಂಧ್ಯಾವಂದನೆ ಮುಗಿಸಿ ಬಂದ ಅಪ್ಪನ ಜತೆ ಕೂತು ಅವಳು ಊಟ ಮುಗಿಸಿದಳು. ಮೋಞಿ ಬ್ಯಾರಿ ಅಪ್ಪನ ಬೀಡಿ ದೋಸ್ತಿ ಕೂಡ. ಪ್ರತಿ ರಂಜಾನಿನ ಸಮಯ ಖರ್ಜೂರ ಗೋಡಂಬಿ ಎಲ್ಲ ತಂದುಕೊಡೋರು, ಇತ್ತೀಚೆಗೆ ನಿಂತಿದೆಯಂತೆ ಆ ಪದ್ಧತಿ, ಅಪ್ಪ ನೆನಪಿಸಿಕೊಂಡರು. “ಅವನಿಗೂ ವಯಸ್ಸಾಯ್ತು, ನಂಗೂ ವಯಸ್ಸಾಯ್ತು, ಇನ್ನೆಲ್ಲಿಗೆ ಆಚೀಚೆ ಓಡಾಡೂದು?”

ಅಪ್ಪನ ಮಾತು ಕೇಳುತ್ತಿದ್ದರೂ ಅವಳ ತಲೆ ಇನ್ನೆಲ್ಲೋ ಓಡಾಡ್ತಿತ್ತು.

ಅಬೂಬಕರ್ ಆಟೋನೇ ಬೇಕಂತ ಯಾಕೆ ಕರೆಸಿದೆ ತಾನು? ಬೆಳಿಗ್ಗೆ ಅವನ ಹೆಸರು ಕೇಳಿದಾಗಿಂದ ಮನಸಿನೊಳಗೆ ಸುಳಿದಾಡುತ್ತಿರುವ ಚಳಿಗಾಳಿಯ ಗುರಿಯೇನು?

*****

ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು.
ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ. ಒಂದು ಸಲವೂ ಬುಗ್ಗೆ ಊದಿ ಅವನಿಗೆ ತೋರಿಸುವ ಅವಕಾಶ ಮಾತ್ರ ಅವಳಿಗೆ ಸಿಕ್ಕಿರಲಿಲ್ಲ.

ಬಸ್ಸಲ್ಲಿ ಶಾಲೆಗೆ ಹೋಗಬೇಕಾದರೆ ಅವಳಿಗಿಂತ ಕರೆಕ್ಟಾಗಿ ಎರಡು ಸೀಟು ಹಿಂದೆ ನಿಂತಿರುತ್ತಿದ್ದ, ಬಸ್ಸಿನ ಕನ್ನಡಿಯಲ್ಲಿ ಅವಳನ್ನೇ ನೋಡುತ್ತಿರುತ್ತಿದ್ದ. ಬಸ್ಸು ಖಾಲಿ ಇದ್ದಾಗ ಅವಳ ಹಿಂದಿನ ಸೀಟಲ್ಲಿ ಜಾಗ ಹಿಡಿದು ಕೂತು ಅವಳನ್ನು ಎದುರುಗಡೆಯ ಅಥವಾ ಸೈಡಿನ ಕನ್ನಡಿಯಲ್ಲಿ ನೋಡುತ್ತಿದ್ದ. ಅವಳು ಕನ್ನಡಿಯಲ್ಲಿಯೇ ಅವನನ್ನು ನೋಡಿದ ತಕ್ಷಣ ದೃಷ್ಟಿ ತಪ್ಪಿಸಿಕೊಳ್ಳುತ್ತಿದ್ದ.

ಮೊದಮೊದಲು ಇದೊಂದು ಆಟವಾಗಿತ್ತು. ಆಮೇಲೆ ಅವಳಿಗೂ ಅವನು ಕನ್ನಡಿಯಲ್ಲಿ ನನ್ನನ್ನು ನೋಡಲಿ, ನಾನೂ ಅವನನ್ನು ನೋಡಬೇಕು ಅಂತನಿಸಲು ಶುರುವಾದಾಗ ಮಾತ್ರ ಸ್ವಲ್ಪ ಭಯವಾಗ್ತಿತ್ತು. ಅಜ್ಜಿಗೆ ಕೋಪ ಬಂದಾಗ, “ಹೆಣ್ಣೆ ನೀ ಒಂದಿನ ಬ್ಯಾರಿಯೊಟ್ಟಿಗೆ ಓಡಿ ಹೋಗ್ತೀ ನೋಡು,” ಅನ್ನುತ್ತಿದ್ದರಲ್ಲ, ಅದು ಗಂಟೆಯಂತೆ ಕಿವಿಯಲ್ಲಿ ಕೇಳಿಸುತ್ತಿತ್ತು. ಅಕ್ಕಪಕ್ಕದಲ್ಲಿದ್ದವರಿಗೆ ಯಾರಿಗಾದರೂ ಈ ಕಣ್ಣಾಟಗಳು ಗೊತ್ತಾದರೆ ಚೆನ್ನಾಗಿರುವುದಿಲ್ಲ ಅಂತ ಅರಿವು ಇದ್ದ ಕಾರಣ ಎಲ್ಲವೂ ಹದತಪ್ಪದೆ ಸಾಗಿತು.

ಶಾಲೆಯಲ್ಲಿ ಕತೆ ಬೇರೆಯೇ ಇತ್ತು. ಕೊಎಜುಕೇಶನ್ ಆದರೂ ಆ ಕಾಲಕ್ಕೆ ಹುಡುಗರು-ಹುಡುಗಿಯರು ಮಾತಾಡುವುದು ಅಪರೂಪ. ಹಾಗಾಗಿ ಇವರಿಬ್ಬರು ಶಾಲೆಯೊಳಗೆ ಭಯಂಕರ ಸೀರಿಯಸ್. ನೋಡುವುದು ಇರಲಿ, ಒಬ್ಬರಿಗೊಬ್ಬರು ಓಡಾಡಿದ ಗಾಳಿಯೂ ತಾಗದಷ್ಟು ದೂರದಲ್ಲಿರ್ತಿದ್ರು. ಅವ ಓದಿನಲ್ಲಿ ಅಷ್ಟೇನೂ ಇಲ್ಲದಿದ್ದರೂ ಕಬಡ್ಡಿಯಲ್ಲಿ, ಕ್ರಿಕೆಟಿನಲ್ಲಿ ಜೋರು. ಅವ ಆಡ್ತಿರಬೇಕಾದ್ರೆ ಇವಳು ದೂರದಲ್ಲಿ ಬೇರೆ ಹುಡುಗಿಯರ ಜತೆ ನಿಂತು ನೋಡಿ ಮನಸಿನಲ್ಲಿಯೇ ಸಪೋರ್ಟ್ ಮಾಡ್ತಿದ್ಲು. ಹೂವಿನೊಳಗೆ ಪರಿಮಳ ಎಲ್ಲಿದೆಯೆಂದು ಕೇಳಿದರೆ ಹೇಳಲಾಗುವುದೇ? ಅವರ ನಡುವಿನ ಅರೇಂಜ್ಮೆಂಟು ಹಾಗಿತ್ತು. ಇದ್ದೂ ಇಲ್ಲದ ಹಾಗೆ, ಮುಟ್ಟಿಯೂ ಮುಟ್ಟದ ಹಾಗೆ.

ಒಂಬತ್ತನೇ ಕ್ಲಾಸಿನ ಕೊನೆಯಲ್ಲಿ ವಾರ್ಷಿಕೋತ್ಸವದ ದಿವಸ ಇವಳಿಗೆ ಕ್ಲಾಸಲ್ಲಿ ಎಲ್ಲರಿಗಿಂತ ಮಾರ್ಕ್ಸ್ ಜಾಸ್ತಿ ಬಂದಾಗ, ಸ್ಟೇಜ್ ಮೇಲೆ ಹೋಗಿ ದತ್ತಿ ಬಹುಮಾನಗಳು ಪಡೆಯುವಾಗ ಅವನ ಕಣ್ಣುಗಳು ದೂರದಿಂದಲೇ ನಗುತ್ತ ಖುಷಿಪಡುತ್ತಿರುವುದು ಅರಿವಾಗಿ ಮೆತ್ತಗೆ ಬೆವರಿದ್ದಳು.

ವಾರ್ಷಿಕೋತ್ಸವದ ಮರುದಿನ ಶಾಲೆಯಲ್ಲಿ ಅವಳು ಲೈಬ್ರರಿಯಲ್ಲಿ ಯಾವುದೋ ಪುಸ್ತಕ ಹುಡುಕುತ್ತಿರಬೇಕಾದರೆ ಅಬೂಬಕರ್ ಕಾಣಿಸಿದ. ಎಂದೂ ಲೈಬ್ರರಿಗೆ ಮುಖ ಮಾಡಿ ನಿಲ್ಲದವ ಇವತ್ತು ಇಲ್ಲಿ ಯಾಕೆ ಅಂತ ಅವಳು ಯೋಚಿಸುತ್ತಿರಬೇಕಾದರೆ ಅವಳ ಎದುರಿಗೇ ಬಂದ. ಕೈಯಲ್ಲೊಂದು ಪೊಟ್ಟಣವಿತ್ತು. ತಗೋ ಎಂಬಂತೆ ಕೈಚಾಚಿದ. ಮುಖದಲ್ಲಿ ಎಂದಿನ ನಗುವಿರಲಿಲ್ಲ. ಅವಳು ಗಲಿಬಿಲಿಯ ನಡುವೆಯೇ ಕೈಚಾಚಿ ಅದನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಅವಳ ಮುಖ ನೋಡಿ, ತಕ್ಷಣ ತಿರುಗಿ ಪುಸ್ತಕಗಳನ್ನು ನೋಡುವಂತೆ ನಟಿಸುತ್ತಾ ಕಪಾಟುಗಳನ್ನು ದಾಟಿ ಹೊರಟೇಹೋದ.

ಅವಳ ಎದೆಬಡಿತ ಜೋರಾಯ್ತು. ಏನಿರ್ತದೋ ಪೊಟ್ಟಣದಲ್ಲಿ, ಐ ಲವ್ಯೂ ಅಂತ ಬರೆದಿರುವ ಪ್ರೇಮ ಪತ್ರ ಇರಬಹುದಾ ಅಂತ ಸ್ಟ್ರಾಂಗಾಗಿ ಸಂಶಯ ಬಂತು. ಆದರೆ ಅವ ಅಷ್ಟೆಲ್ಲ ಬರೆಯುವಷ್ಟು ಜೋರಾಗಿರ್ತಾನಾ ಅಂತ ಗೊತ್ತಿರಲಿಲ್ಲ. ಇಲ್ಲಿ ತೆರೆಯುವುದು, ಓದುವುದು ಬೇಡ ಎಂದು ಮೆಲ್ಲಗೆ ಯೂನಿಫಾರ್ಮಿನ ಜೇಬಿಗೆ ಅದನ್ನು ಜಾರಿಸಿದಳು.

ಬಸ್ಸಿಂದ ಮನೆಗೆ ಹೋಗುವ ದಾರಿಯಲ್ಲಿ ಮರವೊಂದರ ಕೆಳಗೆ ಕುಳಿತು ಪೊಟ್ಟಣ ಬಿಚ್ಚಿ ನೋಡಿದಳು. ಎರಡು ಮಿಠಾಯಿ ಮತ್ತೆ ಒಂದು ಬಲೂನು. ಅಷ್ಟೇ. ಪತ್ರವೇನೂ ಇರಲಿಲ್ಲ. ಆದರೆ ಬಲೂನು ಮಾತ್ರ… ಹಾರ್ಟ್ ಶೇಪಲ್ಲಿತ್ತು.

ಈತರದ್ದಕ್ಕೆ ಅವಳು ತಯಾರಾಗಿಯೇ ಇದ್ದರೂ ಅದನ್ನು ನೋಡಿದ ಕ್ಷಣ ಮಾತ್ರ ಅವಳಿಗೆ ಎಂದೂ ಮರೆಯಲಾಗದು. ಕಾಲಡಿಯಲ್ಲಿನ ನೆಲವೆಲ್ಲ ಅಲೆಗಳು ಸೆಳೆದುಕೊಂಡ ಮರಳಂತೆ ಕುಸಿದುಕೊಂಡು ಹೋಗಿ, ಎಲ್ಲವೂ ವೇಗವಾಗಿ ಕೊಚ್ಚಿ ಹೋದಂಗಾಗಿ, ಎದೆಯೊಳಗೆ ಏನೇನೋ ಆಗಿ… ಹೇಳತೀರದ ಸಿಹಿವೇದನೆ, ಸಂಭ್ರಮ.

ಆಮೇಲೆ ದಾರಿಯುದ್ದಕ್ಕೂ ಮತ್ತು ಮನೆಯಲ್ಲೂ ಯೋಚನೆಗಳೋ ಯೋಚನೆಗಳು. ನಾಳೆ ಸಿಗ್ತಾನೆ ಮತ್ತೆ, ನಾನೇನಾದರೂ ಹೇಳಬೇಕು ಅಂತ ಅಂದ್ಕೊಂಡಿರ್ತಾನಾ? ಏನು ಹೇಳುವುದು? ಹೇಳಬೇಕೇ ಬೇಡವೇ? ನಾನಿನ್ನೂ ಒಂಬತ್ತನೇ ಕ್ಲಾಸು, ಏನು ಹೇಳಬಹುದು ಹೇಳಿದರೆ? ತಲೆಬಿರಿಯುವಷ್ಟು ಯೋಚನೆ ಮಾಡಿ ಮಾಡಿ ಮಾಡಿ ಕೊನೆಗೊಂದು ನಿರ್ಧಾರಕ್ಕೆ ಬಂದಳು. ಒಂದು ಪೇಪರಲ್ಲಿ ಬರೆದಳು. “ನಂಗೆ ಮಿಠಾಯಿ, ಬಲೂನ್ ತುಂಬಾ ಇಷ್ಟ ಅಂತ ನಿಂಗೆ ಹೇಗೆ ಗೊತ್ತು? ನಂಗೆ ನಿನ್ ಜತೆ ಮಾತಾಡ್ಬೇಕು.”

ಮರುದಿನ ಮೂಡುಕೆಂಪಾದಾಗ ರಾತ್ರಿಯಿಡೀ ನಿದ್ದೆಮಾಡದೆ ಇವಳ ಕಣ್ಣೂ ಕೆಂಪಾಗಿತ್ತು. ಬರೆದ ಪತ್ರವನ್ನು ಅವನಿಗೆ ಕೊಡಲಿಕ್ಕೆಂದು ಲಂಗದ ಜೇಬಿನಲ್ಲಿ ಹಾಕಿಕೊಂಡು ಸಿದ್ಧವಾಗಿ ಶಾಲೆಗೆ ಹೋದಳು. ಆದರೆ ಅವ ಮಾತ್ರ ಎಲ್ಲೂ ಕಾಣಲಿಲ್ಲ.

ಅವ ಮತ್ತೆಂದೂ ಶಾಲೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಶಾಲೆ ಬಿಟ್ಟು ಎಲ್ಲಿಯೋ ಹೋದನೆಂದು ಎಲ್ಲರೂ ಹೇಳುತ್ತಿದ್ದುದು ಕೇಳುತ್ತಿತ್ತು. ಸ್ವಲ್ಪ ದಿನ ಇವಳಿಗೆ ಖಾಲಿಖಾಲಿಯೆನಿಸಿತು. ಆ ಬಲೂನು ಸುಮ್ಮನೇ ಕೊಟ್ಟಿರಬೇಕು, ಅದಕ್ಕೆ ನಾನೇ ಏನೋ ಅರ್ಥ ಕಟ್ಟಿಕೊಂಡೆ ಅನಿಸಿತು. ಹಾಗೇನಾದರೂ ಸೀರಿಯಸ್ ಇದ್ದಿದ್ರೆ ಬರೆದೋ ಬಾಯಲ್ಲೋ ತಿಳಿಸಿರುತ್ತಿದ್ದನೇನೋ. ತಾನು ಬರೆದ ಚೀಟಿ ಅಮ್ಮ ಅಪ್ಪನಿಗೆ ಸಿಕ್ಕಿದರೆ ಏನಾದೀತೋ ಅಂತ ಹೆದರಿ ಹರಿದು ಬಿಸಾಕಿದಳು. ಆ ಮೇಲೆ ಹತ್ತನೇ ತರಗತಿ ಶುರುವಾಯ್ತು. ಓದುವುದು ಬರೆಯುವುದರ ನಡುವೆ ಅಬೂಬಕರ್ ಹಳೆಯ ಪುಸ್ತಕದ ನಡುವೆ ಸೇರಿಸಿಟ್ಟ ಹೂವಿನ ಹಾಗೆ ಕಳೆದುಹೋದ.

ಇವೆಲ್ಲಾ ಆಗಿ ಇಪ್ಪತ್ತು ವರ್ಷಗಳಾಗಿವೆ. ಬಾಳ ಹಾದಿಯಲ್ಲಿ ಅವೆಷ್ಟೋ ನಿಲ್ದಾಣಗಳು ಬಂದುಹೋಗಿವೆ. ನೆನೆದಷ್ಟೂ ಮುಗಿಯದಷ್ಟು ಪ್ರೀತಿಮಳೆ ಸುರಿಸುವ ಗಂಡ, ಹೋದಲ್ಲಿ ಬಂದಲ್ಲಿ ಹಿಂದೆ ಮುಂದೆ ಸುತ್ತುವ ಮಗ… ಈಗ ಹಳೆಯದೆಲ್ಲ ಬರಿಯ ಮಿಠಾಯಿ ನೆನಪು ಮಾತ್ರ. ರೈಲಲ್ಲಿ ಹೋಗ್ತಾ ಯಾವುದೋ ಸ್ಟೇಶನಲ್ಲೊಂದು ಅಂಗಡಿ, ಅದರಲ್ಲಿ ಮಿಠಾಯಿಗಳು. ಇಳಿದು ತಿಂತೀವಿ. ಅದೇ ಸ್ಟೇಶನ್ ನನ್ನ ಫೈನಲ್ ಸ್ಟೇಶನ್ ಅಂತ ಅಂದ್ಕೊಂತೀವಾ? ಈ ಥರ ಮಿಠಾಯಿ ಸ್ಟೇಶನ್ ಅವೆಷ್ಟೋ? ಅವನೂ ಮುಂದೆ ಹೋಗಿರ್ತಾನೆ. ನಾನೂ ಕೂಡ. ನೆನಪುಗಳಷ್ಟೇ ಮಿಂಚುಹುಳಗಳ ಥರ ಹೊಳೀತಿರ್ತವೆ.

ಅವತ್ತು ಕಾಣೆಯಾದ ಹುಡುಗ ನಾಳೆ ಸಿಗ್ತಾನೆ. ಆವತ್ತು ಮಾತಾಡಬೇಕೆಂದುಕೊಂಡಿದ್ದು ಚರಿತ್ರೆಯ ಕಸದಬುಟ್ಟಿ ಸೇರಿದೆ. ಈಗ ಮಾತಾಡಲಿಕ್ಕೇನಾದರೂ ಉಳಿದಿದೆಯಾ? ನನಗ್ಯಾಕೆ ಈ ಹುಚ್ಚು ಬುದ್ಧಿ? ಯೋಚಿಸುತ್ತ ಮಲಗಿದವಳಿಗೆ ಹಿಂದಿನ ರಾತ್ರಿ ನಿದ್ದೆಯಿಲ್ಲದೆ ಸುಸ್ತಾಗಿತ್ತಲ್ಲ, ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

*****

ಬೆಳಿಗ್ಗೆ ಆರೂವರೆಗೆ ಸರಿಯಾಗಿ ಆಟೋ ತಗೊಂಡು ಬಂದ ಅಬೂಬಕರ್. ಲ್ಯಾಪ್ಟಾಪ್ ಬ್ಯಾಗ್ ಇಟ್ಟುಕೊಂಡು ಆಟೋ ಹತ್ತಿದಳು. ಕಳಿಸಿಕೊಡಲು ನಿಂತಿದ್ದ ಅಮ್ಮನಿಗೆ “ಬರ್ತೀನಮ್ಮ.” ಅಂದಳು. “ಬರಲಾ ಅಕ್ಕ,” ಅಬೂಬಕರ್ ಕೂಡ ಅಂದ, ಆಟೋ ಹೊರಡಿಸಿದ.

ಎರಡು ನಿಮಿಷಗಳಾಯ್ತು. ಪದವಿಗೆ ಹೋಗಲು ಬೇಕಾದ್ದು ಇಪ್ಪತ್ತು ನಿಮಿಷ. ಅವನು ತುಟಿಪಿಟಕ್ ಅನ್ನದೆ ಡ್ರೈವ್ ಮಾಡುತ್ತಿದ್ದ. ಹೋಗುವ ಹಾದಿಯ ಅಕ್ಕಪಕ್ಕದ ಮರಗಳಿಂದ ಹೆಸರು ತಿಳಿಯದ ಹಕ್ಕಿಗಳು ಹಾಡು ಶುರುಮಾಡಿದ್ದವು. ಜೇನ್ನೊಣಗಳು ರೊಯ್ಯನೆ ಹಾರುತ್ತಿದ್ದವು. ಆದರೆ ಅವರ ನಡುವೆ ಆಟೋದ ಗಡಗಡ ಶಬ್ದ, ಅಸಹಜವೆನಿಸುವಂತಹ ಮೌನದ ಜೊತೆಗೆ ಅದ್ಯಾವುದೋ ಗಾಜಿನ ಗೋಡೆ ಬಂದು ಕುಳಿತಂತೆ ಅನಿಸಿತು ಅವಳಿಗೆ. ಅದನ್ನು ಮುರಿಯಬೇಕೆಂಬ ಆತುರಕ್ಕೆ ತಾನೇ ಮಾತು ಶುರುಮಾಡಿದಳು.

“ಮೋಞಿ ಬ್ಯಾರಿ ಹೇಗಿದ್ದಾರೆ?”
“ಚೆನ್ನಾಗಿದ್ದಾರೆ. ವಯಸ್ಸಾಯ್ತು ಹಾಗಾಗಿ ಆಚೆಗೆ ಬರೂದು ಕಮ್ಮಿ.”
“ಅಂಗಡಿ ವ್ಯಾಪಾರ ಎಲ್ಲ ಹೇಗುಂಟು ಈಗ?”

“ಜನ ಎಲ್ಲದಕ್ಕೂ ಜಾಸ್ತಿ ಅಡ್ಕಕ್ಕೇ ಹೋಗ್ತಾರೆ, ಜತೆಗೆ ನಾರಾಯಣ ಮೂಲ್ಯನ ಅಂಗಡಿ ಬಂದಾಗಿಂದ ನಮ್ಮ ಅಂಗಡಿಗೆ ವ್ಯಾಪಾರ ಕಮ್ಮಿಯಾಯ್ತು. ಅಂಗಡಿ ಮುಚ್ಚಿ ಒಂದು ವರ್ಷ ಆಯ್ತು.”

ಹೀಗೆ ಚಿಕ್ಕಪುಟ್ಟದೆಲ್ಲ ಮಾತಾಡಿ ಆದ ಮೇಲೆ ಮುಖ್ಯವಾದ ಪ್ರಶ್ನೆಗೆ ಉತ್ತರ ಬೇಕಿತ್ತು.
“ನೀನು ಶಾಲೆ ಬಿಟ್ಟು ಎಲ್ಲಿಗೆ ಹೋಗಿದ್ದೆ?”

“ಅಣ್ಣನ ಜತೆ ದುಬೈಗೆ ಹೋದೆ, ಅಲ್ಲಿ ಒಂದು ಹೋಟೆಲಲ್ಲಿ ಸಪ್ಲೈಯರ್ ಆಗಿದ್ದೆ. ಒಂದು ನಾಕು ವರ್ಷ ದುಡಿದೆ, ಆಮೇಲೆ ಅಲ್ಲಿರ್ಲಿಕ್ಕಾಗ್ಲಿಲ್ಲ, ವಾಪಸ್ ಬಂದೆ.”
ನೀವು ಏನು ಮಾಡ್ತಿದೀರಿ ಅಂತ ಕೇಳಿದ. ಹತ್ತನೇ ಕ್ಲಾಸಾದ ಮೇಲೆ ಪಿಯುಸಿ, ಡಿಗ್ರಿ, ಮಾಸ್ಟರ್ಸ್ ಎಲ್ಲ ಮುಗಿಸಿ ಕೆಲಸ ಸಿಕ್ಕಿ ಬೆಂಗಳೂರಿಗೆ ಹೋದವರೆಗಿನ ಕತೆ ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕಾದರೆ ಪದವು ಬಂತು. “ಸಂಜೆ ಇರ್ತೀಯಾ, ನಾ ಬರೂದು ಆರು ಗಂಟೆಯಾಗ್ಬಹುದು,” ಅಂತ ಕೇಳಿದಳು. ಇರ್ತೀನಿ ಅಂದ.

*****

ಕಾನ್ಫರೆನ್ಸಿನಲ್ಲಿ ಅವಳ ಪ್ರೆಸೆಂಟೇಶನ್ ಮುಗಿದ ಮೇಲೆ ಉಳಿದಿದ್ದೆಲ್ಲ ಬೋರಿಂಗ್ ಆಗಿತ್ತು. ಎಲ್ಲಾ ಮುಗಿಸಿ ಮನೆಗೆ ವಾಪಸ್ ಹೊರಟು, ಆರೂಕಾಲು ಸಮಯಕ್ಕೆ ಅಡ್ಕದಲ್ಲಿ ಬಂದಿಳಿದಳು. ಶ್ಯಾಮ ಮತ್ತೆ ಅಬೂಬಕರ್ ಇಬ್ಬರ ಆಟೋಗಳೂ ಅಲ್ಲಿದ್ದು ಅವಳಿಗೆ ಫಜೀತಿಗಿಟ್ಟುಕೊಂಡಿತು. ಆಗಿದ್ದಾಗಲಿ ಎಂದು ಅಬೂಬಕರ್ ಆಟೋಕ್ಕೆ ಹತ್ತಿದಾಗ ಶ್ಯಾಮ ಅವಳನ್ನೇ ನೋಡುತ್ತಿದ್ದುದರ ಅರಿವಾಗಿತ್ತು.

ಹೇಗಿತ್ತು ಹೋದ ಕೆಲಸ ಅಂತ ಕೇಳಿದ ಅಬೂಬಕರ್. ಚೆನ್ನಾಗಿತ್ತು ಅಂದಳು. ಶಾಲೆ ಅದು ಇದು ಅವರು ಇವರು ಅಂತ ಕಾಡುಹರಟೆ ಶುರುವಾಯಿತು.
ಕತ್ತಲು ಕವಿಯಲಾರಂಭಿಸಿತ್ತು, ಕಾಡಿನೊಳಗಿಂದ ಮಿಡತೆಗಳ ಕಿರುಚಾಟ ತೂರಿಬರುತ್ತಿತ್ತು. ಅರ್ಧದಾರಿಗೆ ಬಂದಿರಬಹುದು, ಅಬೂಬಕರ್ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ ಗಾಡಿ ಯಾಕೋ ಸ್ವಲ್ಪ ನಿಧಾನ ಮಾಡಿದ.

ಸ್ವಲ್ಪ ದೂರದಲ್ಲಿ ಯಾರೋ ಇಬ್ಬರು ಕಾವಿಬಣ್ಣದ ಪಂಚೆಯುಟ್ಟವರು ನಿಂತಿದ್ದುದು ಕಾಣಿಸಿತು. ಆಟೋ ನಿಲ್ಲಿಸುವಂತೆ ಸನ್ನೆ ಮಾಡಿದರು, ನಿಲ್ಲಿಸಿದ. ಅವರು ಆಟೋದೊಳಗೆ ಕಣ್ಣುತೂರಿಸಿದರು. ಅವರಲ್ಲೊಬ್ಬ “ನೀವು ಯಾರು, ಎಲ್ಲಿಗೆ ಹೋಗ್ತಿದೀರಿ,” ಅಂತ ಕೇಳಿದ.

“ಗಣೇಶ ಮಾಸ್ತ್ರ ಮಗಳು, ಮನೆಗೆ ಹೋಗ್ತಾ ಇದೇನೆ.”

“ಹೀಗೆ ಒಬ್ಬೊಬ್ರೇ ಯಾಕೆ ಹೋಗ್ತಿದೀರಿ?” ಅಂತ ನೇರವಾಗಿಯೇ ಕೇಳಿದ ಒಬ್ಬ, ಅಬೂಬಕರನ್ನೇ ನೋಡುತ್ತ.

“ಇಲ್ಲ, ಇವ ನನ್ನ ಕ್ಲಾಸ್ಮೇಟು, ಚಿಕ್ಕಂದಿನಿಂದಲೇ ಚೆನ್ನಾಗಿ ಪರಿಚಯ, ನಮ್ಮ ಮನೆಗೆಲ್ಲ ಬರ್ತಾ ಇದ್ದ ಇವನು, ಇವನಪ್ಪ ನಮ್ಮಪ್ಪ ಫ್ರೆಂಡ್ಸು,” ಅಂದಳು. ಹಾಗೇ ನೀವು ಯಾರು ಅಂತ ಕೇಳಿದಳು.

ಅವರಲ್ಲೊಬ್ಬ “ನಾವು ದುರ್ಗಾಪರಮೇಶ್ವರಿ ಭಜನಾ ಮಂಡಳಿಯವ್ರು..” ಅಂದ. “ನೀವು ಒಬ್ರೇ ಇದ್ರಿ ಅಲ್ವಾ, ಅದಿಕ್ಕೆ ನಿಲ್ಲಿಸಿ ಕೇಳಿದ್ದು” ಅಂತ ಒತ್ತಿ ಹೇಳಿದ.
ಅಬೂಬಕರ್ ಸೌಜನ್ಯದಿಂದ ನಕ್ಕ, “ಜಾಗ್ರತೆ ಕರ್ಕೊಂಡು ಹೋಗ್ತೇನೆ ಅಣ್ಣ,” ಅಂದ.

ಅವರಿಗಿನ್ನೇನು ಹೇಳಬೇಕು ಗೊತ್ತಾಗಲಿಲ್ವೇನೋ ಅನ್ನುವಂತೆ, “ಸರಿ, ಜಾಗ್ರತೆ ಹೋಗಿ,” ಅಂತ ಬದಿಗೆ ಸರಿದರು, ಆಟೋ ಮುಂದೆ ಸಾಗಿತು.
ಅವಳು ನಡೆದುದನ್ನು ನೆನೆಸಿಕೊಳ್ಳುತ್ತ ಕೂತಿದ್ದಳು. ತಲೆಯಲ್ಲಿ ಏನೇನೋ ಲೆಕ್ಕಾಚಾರ ನಡೆದಿತ್ತು.

ಸ್ವಲ್ಪ ಹೊತ್ತಿನ ಮೇಲೆ ಮೌನ ಮುರಿದ ಅಬೂಬಕರ್, ನಗುತ್ತ ಕೇಳಿದ, “ನಾನು ನಿಮ್ಮನೆಗೆ ಯಾವಾಗ ಬಂದದ್ದು?”

ಅವಳೂ ನಗು ಜೋಡಿಸಿದಳು. “ಅಮ್ಮ ಹೇಳ್ತಿದ್ರು ನೀನ್ ಬರ್ತಿದ್ದೆ ಅಂತ.”

“ಅದು ಈಗ, ಆಗ ಅಲ್ವಲ್ಲ?”

“ಆಗ ಅಂತಂದ್ರೆ ಯಾವಾಗ?” ಅವನ ಪ್ರಶ್ನೆಯಲ್ಲಿ ತುಂಟತನವೆಲ್ಲ ಹೆಪ್ಪುಗಟ್ಟಿದಂತೆನಿಸಿ ಅವಳಿಗೆ ಎದೆಯೊಳಗೆ ಏನೋ ಭಾರವಾದದ್ದು ಕೂತಂತೆನಿಸಿತು.

ಆದರೆ ಆಷ್ಟಕ್ಕೆಲ್ಲ ಮಾತು ಮರೆತಂತೆ ಕೂತರೆ ಹೇಗೆ?

“ಈಗೇನು ಹೇಳ್ಬಾರದಿತ್ತಾ, ಸ್ಸಾರಿ…” ಅಂತ ಪ್ರತ್ಯುತ್ತರ ಕೊಟ್ಟವಳನ್ನು ಆಟೋದ ಕನ್ನಡಿಯಲ್ಲಿಯೇ ನೋಡಿ ನಕ್ಕ ಅಬೂಬಕರ್. ಇವಳೂ ಕನ್ನಡಿಯಲ್ಲಿಯೇ ಅವನನ್ನು ನೋಡಿ ನಕ್ಕಳು.

ಆ ಕ್ಷಣಕ್ಕೆ ಆಟೋದ ಕನ್ನಡಿ ಬಸ್ಸಿನ ಕನ್ನಡಿಯಾಯಿತು. ನೆನಪುಗಳು ಮತ್ತೆ ಗರಿಬಿಚ್ಚಿ ಕುಣಿದವು. ಕಾಣದ ಗಾಜಿನ ಗೋಡೆ ಸೀಳಿ ಬಂದ ತಂಗಾಳಿಯೊಂದು ಅವರ ನಡುವಲ್ಲಿ ಹಿತವಾಗಿ ಮನೆಮಾಡಿತು. ಮಾತಾಡಿದರೆ ಎಲ್ಲಿ ಆ ಕ್ಷಣದ ನವಿರು ಕಳೆದುಹೋಗುತ್ತದೋ, ಆಗಷ್ಟೇ ಅರಳಿದ ಹೂವೊಂದರ ಕೋಮಲ ಪಕಳೆಗಳು ಎಲ್ಲಿ ಬಾಡಿಹೋಗುವವೋ ಎಂದು ಹೆದರಿದವರಂತೆ ಇಬ್ಬರೂ ಸುಮ್ಮನಾದರು.

ಸ್ವಲ್ಪ ಹೊತ್ತಿನ ಮೌನದ ನಂತರ ಮತ್ತೆ ಅವನೇ ಮಾತು ಮುಂದುವರಿಸಿದ. ಅವನ ಮನೆಯಲ್ಲಿ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಇವರು ಹೋಗುತ್ತಿದ್ದ ಸ್ಕೂಲಿಗೇ ಹೋಗುತ್ತಿದ್ದಾರೆ, ದೊಡ್ಡವ ಮೂರನೇ ಕ್ಲಾಸು, ಚಿಕ್ಕವಳು ಒಂದನೇ ಕ್ಲಾಸು. ಜೀವನಕ್ಕೆ ಆಟೋ. ಮತ್ತೆ ಮನೆಯಲ್ಲಿ ಜೇನು ಸಾಕಿದ್ದಾನೆ, ಜೇನು ವ್ಯಾಪಾರ ಮಾಡ್ತಾರೆ. “ಆತರದ್ದು ಜೇನು ಚೆನ್ನಾಗಿರ್ತದೆ, ಬೆಂಗ್ಳೂರಲ್ಲಿ ಎಷ್ಟು ದುಡ್ಡು ಕೊಟ್ರೂ ಸಿಗೂದಿಲ್ಲ”, ಅಂದಳು.
ಅಷ್ಟರಲ್ಲಿ ಮನೆ ಬಂತು.

“ನಾಳೆ ಸಂಜೆ ನಾ ಹೊರಡ್ತೇನೆ. ಮನೆಯಿಂದ ಮಂಜೂರಿಗೆ ಡ್ರಾಪ್ ಮಾಡ್ತೀಯಾ,” ಅಂತ ಕೇಳಿದಳು. ಬರ್ತೇನೆ ಅಂದ. ದುಡ್ಡು ನಾಳೆ ತಗೊಳ್ತೇನೆ ಅಂತ ಹೊರಟುಹೋದ. ಅಮ್ಮ ಶ್ಯಾಮನಿಗೆ ಕರೆದ ಹಾಗೆ ಕರೆದು ಕಾಫಿ ಕೊಡಲಿಲ್ಲ ಅನ್ನುವುದು ಅವಳು ಗಮನಿಸದಿರಲಾಗಲಿಲ್ಲ.

ಹಾಗೆಯೇ ಹಾದಿಯಲ್ಲಿ ಸಿಕ್ಕ ಕಾವಿಧಾರಿಗಳು ಯಾಕೆ ಹಾಗಂದರು, ಏನಾಯ್ತು ಅನ್ನುವುದರ ಬಗ್ಗೆ ಇಬ್ಬರೂ ಮಾತಾಡಲಿಲ್ಲ ಅನ್ನುವುದೂ ಅವಳಿಗೆ ತಲೆಯಲ್ಲುಳಿಯಿತು.

*****

ಮರುದಿವಸ ಸಂಜೆ ಅವಳು ಮಂಗಳೂರಿಗೆ ಹೋಗಿ ಬೆಂಗಳೂರು ಬಸ್ ಹಿಡಿಯಬೇಕಿತ್ತು. ಸಂಜೆ ಐದೂವರೆಗೆ ಬಂದ ಅಬೂಬಕರ್. ಅಮ್ಮ-ಅಪ್ಪ ಕಟ್ಟಿಕೊಟ್ಟ ಉಪ್ಪಿನಕಾಯಿ, ಹಪ್ಪಳ ಎಲ್ಲ ಎತ್ತಿಕೊಂಡು ಬಾಯ್ ಹೇಳಿ ಆಟೋ ಹತ್ತಿ ಕೂತಳು, ಹೊರಟರು.

ನೆನ್ನೆಯ ನೆನಪು ಹಿತವಾಗಿ ಕಾಡ್ತಿತ್ತು. ಮಾತುಗಳ ರೂಪ ಕೊಡಲು ಆಗದಿದ್ದ ವಿಚಾರ ಮನದಲ್ಲಿ ಹಾಗೇ ಕೂತಿತ್ತು. ಇವತ್ತು ಏನು ಮಾತಾಡುವುದೋ ಗೊತ್ತಾಗಲಿಲ್ಲ. ಏನಾದ್ರೂ ಕೇಳಲಾ ಅಂತ ಮನಸೆಂದರೆ, ಬೇಡ ಸುಮ್ಮನಿರು ಅಂತ ಬುದ್ಧಿ ತಿವಿಯಿತು. ಬೇಕಾದ್ದೆಲ್ಲ ಇದೆ ಜೀವನದಲ್ಲಿ, ಆದರೂ ಹೃದಯವನ್ನ ಬಣ್ಣದ ಚಿಟ್ಟೆಯಂತೆ ಹಾರಬಿಡ್ತಿದೀಯ ಅಂತ ತನಗೆ ತಾನೇ ಬೈದುಕೊಂಡಳು.

ಆತನೇ ಮಾತು ಶುರುಮಾಡಿದ. ಇತ್ತೀಚಿನ ದಿನಗಳಲ್ಲಿ ಊರು ಹೇಗೆ ಬದಲಾಗಿದೆ ಅಂತ ಹೇಳಿದ. ಮನುಷ್ಯ ಮನುಷ್ಯರ ನಡುವೆ ಬೆಳೆದಿರುವ ಗೋಡೆಗಳು… ಕಾರಣವಿಲ್ಲದೇ ಸಂಶಯದಿಂದ ಇರಿಯುವ ಕಣ್ಣುಗಳು… ಬಡವರ ಹೊಟ್ಟೆಮೇಲೆ ಹೊಡೆಯುವ ಸುಳ್ಳುಸುದ್ದಿಗಳು… ಅವನೂ ಮಂಜೂರಿನಲ್ಲಿ ಹೆಣ ಸಿಕ್ಕ ಕತೆ ಹೇಳಿ ಅದರಿಂದ ಬೇರೆ ಮುಸ್ಲಿಂ ಮತ್ತೆ ಹಿಂದೂ ಆಟೋ ಡ್ರೈವರುಗಳ ಜೀವನ ಹೇಗೆ ಬದಲಾಯಿತು ಅಂತ ಬಿಡಿಸಿ ಬಿಡಿಸಿ ಹೇಳಿದ. ರಾಜಕೀಯ ಮತ್ತೆ ಧರ್ಮಗಳಿಗೆ ಸಂಬಂಧಿಸಿದ ಮಾತೆಂದರೆ ಮೂರು ಮೈಲು ದೂರ ಸರಿಯುತ್ತಿದ್ದ ಆಕೆಗೆ ಇದಕ್ಕೆ ಏನು ಹೇಳಬೇಕೆಂದು ತಿಳಿಯಲಿಲ್ಲ.

ಇನ್ನು ಸ್ವಲ್ಪ ದಿನಕ್ಕೆ ಹೊಟ್ಟೆಪಾಡು ನಡೆಯಬೇಕಾದರೆ ಈ ಊರು ಬಿಟ್ಟು ಕಾಸರಗೋಡಿಗೋ ಮಂಜೂರಿಗೋ ಹೋಗುವುದು ಬೇಸರದ ವಿಚಾರವಾದರೂ ಅನಿವಾರ್ಯವಾಗುತ್ತದೋ ಏನೋ ಅಂತಂದಾಗ ಅವನ ಜೀವನಕ್ಕೆ ತಟ್ಟಿದ ಬಿಸಿಯ ಅರಿವು ಅವಳಿಗಾಯಿತು. ಅವನ ಸುಂಟರಗಾಳಿಯೊಳಗೆ ಸಿಕ್ಕ ನಾವೆಯಂತ ಬದುಕು ತನ್ನ ಏರ್ ಕಂಡೀಶನ್ಡ್ ಜಗತ್ತಿಗಿಂತ ತುಂಬಾ ದೂರದಲ್ಲಿರುವುದರ ಅರಿವು ಬಿಸಿಗಾಳಿಯಂತೆ ಅವಳಿಗೆ ರಾಚಿತು. ಏನು ಹೇಳಬೇಕೋ ತಿಳಿಯದಿರುವಾಗ ಏನೇ ಹೇಳಿದ್ರೂ ಕೃತಕವಾಗಿರ್ತದೆ ಅಂತ ಸುಮ್ಮನಿದ್ದಳು.

“ಇವೆಲ್ಲ ಹೇಳಿ ನಿಮ್ಗೆ ಬೋರ್ ಮಾಡಿದ್ನೇನೋ ಸಾರಿ,” ಅಂದ.

“ಇಲ್ಲ ಬೋರ್ ಆಗಿಲ್ಲ, ನಂಗೆ ಈತರ ಸಮಸ್ಯೆಗಳು ಗೊತ್ತೇ ಇಲ್ವಲ್ಲ, ಏನ್ ಮಾಡಿದ್ರೆ ಸರಿ ಅಂತ ಗೊತ್ತಿಲ್ಲ, ಏನು ಹೇಳ್ಬೇಕು ಅಂತ್ಲೂ ಗೊತ್ತಿಲ್ಲ,” ಅಂತಂದಳು. ಅವನೂ ತಲೆಯಲ್ಲಾಡಿಸಿದ.

ಆಮೇಲೆ ಸಣ್ಣಪುಟ್ಟ ವಿಚಾರಗಳು ಮಾತಾಡ್ತ ಮಾತಾಡ್ತ ಹಾದಿ ಮುಂದೆ ಸಾಗಿ, ಬೇಡಬೇಡವೆಂದರೂ ಮಂಜೂರು ಬಂತು. ಬಸ್ಟ್ಯಾಂಡಿನಾಚೆಗೆ ಆಟೋ ನಿಲ್ಲಿಸಿದ. ಅವಳು ಇಳಿದಳು. ಲಗೇಜ್ ಇಳಿಸಿದ್ದಾಯಿತು. ಎರಡೂ ದಿನದ್ದು ಸೇರಿಸಿ ದುಡ್ಡು ಕೊಟ್ಟಳು. ಬನ್ನಿ ಒಳಗೆ ಬಿಡ್ತೇನೆ ಅಂತ ಲಗೇಜಿಗೊಂದು ಕೈ ಸೇರಿಸಿಕೊಂಡು ಬಸ್ಟ್ಯಾಂಡಿನೊಳಗೆ ಬಂದ ಅಬೂಬಕರ್. ಅವಳನ್ನು ಬಸ್ಸಿಗೆ ಹತ್ತಿಸಿದ. ಈಗ ಬಂದೆ ಅಂತ ಆಚೆಗೆ ಹೋಗಿ ಬಂದವನ ಕೈಲಿ ಒಂದು ಪುಟಾಣಿ ಬಟ್ಟೆ ಬ್ಯಾಗಿತ್ತು. ಅದನ್ನವಳಿಗೆ ಕಿಟಿಕಿಯಿಂದಲೇ ಕೊಟ್ಟ.

ಅವಳಿಗಾಗ ದೇಜಾವೂ ಫೀಲಿಂಗ್… ಏನಿದು ಅಂತ ಕೇಳಬೇಕಂತಲಾಗಲೀ, ತೆಗೆದು ನೋಡಬೇಕೆಂತಲಾಗಲೀ ಅನಿಸಲಿಲ್ಲ. ಮಾತು ಮರೆತುಹೋಗಿತ್ತು. ಅದನ್ನು ಮಡಿಲಲ್ಲಿಟ್ಟುಕೊಂಡು ಬಸ್ಸಿನಾಚೆಗೆ ಕೆಂಪಗಾಗುತ್ತಿದ್ದ ಆಕಾಶವನ್ನೂ ಅವನನ್ನೂ ನೋಡುತ್ತ ಅವಳು ಕುಳಿತರೆ ಅವ ಕಿಟಿಕಿಯಲ್ಲಿ ಕಾಣುತ್ತಿದ್ದ ಅವಳ ಕೈಯ ಉಂಗುರ ನೋಡುತ್ತ ನಿಂತಿದ್ದ. ಈ ಮೌನದಲ್ಲಿ ವರ್ಷಾನುಗಟ್ಟಲೆಯ ಬಾಂಧವ್ಯಕ್ಕಿರುವ ಬೆಚ್ಚನೆಯಿತ್ತು.

ಹೀಗೆ ಅದೆಷ್ಟು ಹೊತ್ತು ಕಳೆಯಿತೋ. ಇದ್ದಕ್ಕಿದ್ದಂತೆ ತೂರಿಬಂದ ಕಂಡಕ್ಟರನ ಸೀಟಿ ಶಬ್ದಕ್ಕೆ ಮ್ಯಾಜಿಕ್ ಒಡೆದುಹೋಯಿತು. ಅವನೇ ಕೈಬೀಸಿ ನಕ್ಕ, ಸಿಗುವ ಇನ್ನೊಮ್ಮೆ ಅಂದ. ಅವಳೂ ಬಾಯ್ ಮಾಡುತ್ತಿದ್ದಂತೇ ಬಸ್ ಹೊರಟಿತು.

ಬಸ್ ಸ್ಟ್ಯಾಂಡ್ ತಿರುವು ದಾಟಿ ಬಸ್ ಆಚೆಗೆ ಹೋಗುತ್ತಿದ್ದಂತೆ, ಬರೀ ಪಡೆದುಕೊಳ್ಳುವುದೇ ಆಯಿತಲ್ಲ ಇವನ ಕೈಲಿ, ಎಂದೂ ಏನೂ ಕೊಡಲೇ ಇಲ್ಲವೆಂದು ತೀವ್ರವಾಗಿ ಅನಿಸಿಬಿಟ್ಟು ಹೇಳಲರಿಯದ ಭಾವವೊಂದು ಕಾಡಿತು.

ಹಾಗೇ ಬ್ಯಾಗಿಗೆ ಕಟ್ಟಿದ್ದ ದಾರ ಬಿಚ್ಚಿ ಏನಿದೆ ಅಂತ ನೋಡಿದರೆ ಒಳಗಿತ್ತು, ಅವಳಂದುಕೊಂಡ ಹಾಗೆಯೇ, ಅದೇ ಹಳೆಯ ಅವಳಿಗಿಷ್ಟದ ಮಿಠಾಯಿ ಒಂದು ಡಜನ್… ಮತ್ತೆ ಹೊಸದಾಗಿ ಒಂದು ಜೇನಿನ ಬಾಟಲ್.

ಹಾರ್ಟ್ ಶೇಪಿನ ಬಲೂನ್ ಮಾತ್ರ ಇರಲಿಲ್ಲ.