Advertisement
ಸಂದರ್ಶಕರಿಗೆ ಆಟ ಹಾಜರಾದವರಿಗೆ ಸಂಕಟ…: ಬಸವನಗೌಡ ಹೆಬ್ಬಳಗೆರೆ ಸರಣಿ

ಸಂದರ್ಶಕರಿಗೆ ಆಟ ಹಾಜರಾದವರಿಗೆ ಸಂಕಟ…: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ಘಟನೆಯಿಂದ ನಾನು ಕಲಿತ, ಪರರೂ ಅನುಸರಿಸಬಹುದಾದ ಒಂದು ಪಾಠವನ್ನು ನಾನಿಲ್ಲಿ ಹಂಚಿಕೊಳ್ಳ ಬಯಸುತ್ತೇನೆ. ನಾವು ಯಾವುದೇ ಸಂದರ್ಶನಕ್ಕೂ ಹಾಜರಾಗುವ ಮುನ್ನ ನಾವು ಅವರು ನೀಡಿದ್ದ ಸಮಯಕ್ಕಿಂತ ಮುಂಚಿತವಾಗಿ ಹೋಗಬೇಕು. ಅಲ್ಲದೇ ಅವರು ಕೋಪ ಬರುವಂತಹ ಯಾವುದೇ ಪ್ರಶ್ನೆಯನ್ನು ಕೇಳಿದ್ರೂ ಅವರು ನಿಮ್ಮ ಮಾತಿನ ಶೈಲಿ ಮತ್ತು ಸಹನೆ ಪರೀಕ್ಷಿಸುತ್ತಿದ್ದಾರೆ ಎಂದು ತಿಳಿಯಬೇಕು. ಸಾಧ್ಯವಾದಷ್ಟು ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬೇಕು. ಉತ್ತರ ಗೊತ್ತಿಲ್ಲದಿದ್ದಾಗ ಪ್ರಾಮಾಣಿಕವಾಗಿ ಗೊತ್ತಿಲ್ಲವೆಂದು ಹೇಳುವುದರ ಜೊತೆಗೆ ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಬೇಕೇ ಹೊರತು ತಪ್ಪು ಉತ್ತರ ಹೇಳಬಾರದು.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೆಂಟನೆಯ ಕಂತು ನಿಮ್ಮ ಓದಿಗೆ

ನಮ್ಮ ದೇಶದ ಬಹುತೇಕ ರಾಜ್ಯಗಳಿಗೆ ಹೋಗಲು ಹಿಂದಿ ಮಾತನಾಡಲು ಬಂದರೂ ಸಾಕು.  ನಮ್ಮ ರಾಜ್ಯದಲ್ಲೂ ಇದೇ ಪರಿಸ್ಥಿತಿ. ಆದರೆ ಬೇರೆ ರಾಜ್ಯಗಳಲ್ಲಿ ಬಹಳ ದಿನಗಳಿಂದ ಅಲ್ಲೇ ಇರಬೇಕಾದ ಪರಿಸ್ಥಿತಿ ಬಂದರೆ ಅಲ್ಲಿನ ಭಾಷೆ ಕಲಿಯಬೇಕು. ಆದರೆ ನಮ್ಮ ರಾಜ್ಯದವರು ಅನ್ಯ ರಾಜ್ಯದವರಿಗಿಂತ ಭಾಷೆಯ ವಿಷಯದಲ್ಲಿ ಉದಾರತೆ ತೋರಿಸ್ತಾರೆ. ಇದರಿಂದಾಗಿಯೇ ಕನ್ನಡ ಕಲಿಯದಿದ್ರೂ ನಡೆಯುತ್ತೆ ಎಂಬಂತಹ ಮನೋಸ್ಥಿತಿ ಅನ್ಯ ರಾಜ್ಯದಿಂದ ಬಂದಂತಹ ಕೆಲವರಿಗೆ ಬಂದಿರುತ್ತದೆ. ಅದಕ್ಕೆಂದೇ ಅವರು ಕನ್ನಡವನ್ನೇ ಕಲಿಯೋದಿಲ್ಲ. ಅವರದೇ ಭಾಷೆಯಲ್ಲಿ ವ್ಯವಹರಿಸ್ತಾರೆ!! ಇದಕ್ಕೆಂದೇ ತಮಾಷೆಯಾಗಿ ‘ಯಾವ ವ್ಯಕ್ತಿ ತೆಲುಗಿನವರ ಜೊತೆ ತೆಲುಗಿನಲ್ಲಿಯೂ, ತಮಿಳಿನವರ ಜೊತೆ ತಮಿಳಿನಲ್ಲಿಯೂ ಕನ್ನಡದವರ ಜೊತೆ ಇಂಗ್ಲೀಷಿನಲ್ಲಿಯೂ ಮಾತನಾಡುತ್ತಾನೋ ಅವನೇ ಕನ್ನಡಿಗ’ ಎಂದು ಹೇಳ್ತಾರೆ. ಈ ರೀತಿ ಭಾಷೆಯ ಬಗ್ಗೆ ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ ನಾನು ಮೆಡಿಕಲ್ ರೆಪ್ ಸಂದರ್ಶನಕ್ಕೆಂದು ಚೆನ್ನೈಗೆ ಹೋದಾಗ ಅಲ್ಲಿನವರು ತೋರುವ ಅವರ ಭಾಷೆ ಬಗ್ಗೆ ಅಭಿಮಾನ ನನಗೆ ಅಚ್ಚರಿಯನ್ನುಂಟು ಮಾಡಿತ್ತು. ನನಗೆ ಸರ್ಕಾರಿ ಸಿಟಿ ಬಸ್‌ನ ಡ್ರೈವರ್ ಒಬ್ಬ ನನ್ನ ಗಮ್ಯ ತಲುಪಲು ಚೂರು ಸಹಾಯ ಮಾಡಿದನೇ ಹೊರತು ಇತರೆಯವರು ಅಷ್ಟಾಗಿ ಸಹಕರಿಸಲಿಲ್ಲ. ನಾನು ವಿಳಾಸವನ್ನು ಇಂಗ್ಲೀಷಿನಲ್ಲಿ ಕೇಳಿದರೂ ಯಾರೂ ಪ್ರತಿಕ್ರಿಯೆ ಕೊಡಲಿಲ್ಲ. ಅಂತೂ ಇಂತೂ ಹೇಗೋ ಕಷ್ಟಪಟ್ಟು ನಾನು ಹೋಗಬೆಕೆಂದಿದ್ದ ಕಂಪೆನಿಯ ವಿಳಾಸ ಹುಡುಕಿಕೊಂಡು ಹೋದೆ. ಅಲ್ಲಿಗೆ ಹೋದಾಗ ನನಗಿಂತಲೂ ಮುಂಚಿತವಾಗಿ ಇತರೆಯವರೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದರು. ಅವರ ಹೊರನೋಟ ತುಂಬಾ ಚೆನ್ನಾಗಿತ್ತು. ತುಂಬಾ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಹೋದವರ ಪೈಕಿ ತುಂಬಾ ಸಿಂಪಲ್ ಆಗಿ ಇದ್ದವನು ನಾನೇ ಅಂದರೆ ಅತಿಶಯೋಕ್ತಿಯಲ್ಲ.

ನಮಗೆ ಅವರು ಮೊದಲು ಒಂದು ಅರ್ಜಿ ಕೊಟ್ಟು ನಮ್ಮ ಮಾಹಿತಿ ಬರೆಯಲು ತಿಳಿಸಿದರು. ನಂತರ ಅಲ್ಲೇ ಫ್ರೆಶ್ ಆಗಿ ತಿಂಡಿಯನ್ನೂ ತಿಂದೆವು. ಸಂದರ್ಶನ ಶುರು ಆಯ್ತು. ನನಗಿಂತ ಮೊದಲು ಒಬ್ಬ ಸಂದರ್ಶನ ಮುಗಿಸಿಕೊಂಡು ಗೊಣಗಿಕೊಳ್ಳುತ್ತಾ ಬಂದನು. ನಾನು ಯಾಕೆ? ಏನಾಯ್ತು? ಎಂದು ಕೇಳಿದಾಗ ಅವನು ಸಂದರ್ಶನ ಮಾಡುವವರಿಗೆ ಹಿಗ್ಗಾಮುಗ್ಗಾ ಬಯ್ಯತೊಡಗಿದ. ತನ್ನ ಮಾತು ಮುಂದುವರೆಸಿ “ನನ್ನ ಲೆವೆಲ್ ಬಗ್ಗೆ ಇವರಿಗೇನು ಗೊತ್ತು? ನಾನು ಹಂಗೆ, ನಾನು ಹಿಂಗೆ”  ಎಂದು ಬಡಾಯಿ ಕೊಚ್ಚಿಕೊಳ್ಳತೊಡಗಿದ. ನಾನು ಕುತೂಹಲಭರಿತನಾಗಿಲು ಕೇಳಲು ಅವನು “ಸಂದರ್ಶನ  ಮಾಡುವವರು ನನ್ನನ್ನು ಟೀಸ್ ಮಾಡಿ ಮಾತಾಡಿದರು. ಕೋಪ ಬರುವಂತೆ ಮಾತನಾಡಿದರು” ಎಂದು ಹೇಳಿದ. ನನಗೂ ‘ಹೇಗಪ್ಪಾ ಇವನು ಹೇಳೋದು ಕೇಳಿದ್ರೆ ಭಯವಾಗುತ್ತಲ್ಲಪ್ಪ. ದೇವರೇ ಕಾಪಾಡಪ್ಪಾ ತಂದೆ’ ಎಂದು ಮನದಲ್ಲಿಯೇ ದೇವರನ್ನು ಪ್ರಾರ್ಥಿಸಿಕೊಂಡೆ. ಅಷ್ಟರಲ್ಲಿ ನನ್ನ ಸರದಿ ಬಂತು.

ನಾನು ಸಂದರ್ಶನ ಮಾಡುವ ಕೊಠಡಿ ಬಳಿ ನಿಂತು ‘ನಾನು ಒಳಗೆ ಬರಬಹುದಾ?’  ಎಂದು ಕೇಳಿದೆ. ಆ  ರೂಮಿಂದ ‘ಯೆಸ್’ ಎಂಬ ಧ್ವನಿ ಬಂತು. ಒಳಗೆ ಹೋಗಿ ನೋಡ್ತೀನಿ ಸಂದರ್ಶನ ಮಾಡುವವರು ಒಬ್ಬರಲ್ಲ, ಅಲ್ಲಿ ಇರುವುದು ಮೂರು ಮಂದಿಯೆಂದು ನೋಡಿ ಮನದಲ್ಲಿ ಭಯ ಮೂಡಿತು. ತಕ್ಷಣ ಒಳಗೆ ಹೋದ ತಕ್ಷಣ ಅವರು ನನಗೆ ‘ನಿಮಗೇನಾದ್ರೂ ರೋಗವಿದ್ಯಾ?’ ಎಂದು ವ್ಯಂಗ್ಯವಾಗಿ ಕೇಳಿದ್ರು. ನಾನು ಆಗ “ಇದುವರೆಗೂ ಯಾವುದೇ ವಾಸಿಯಾಗದ ರೋಗ ಬಂದಿಲ್ಲ. ಯಾಕೆ?” ಎಂದು ಅವರದೇ ದಾಟಿಯಲ್ಲಿ ಉತ್ತರಿಸಿದೆ. ಅದಕ್ಕವರು “ನೀವು ನೋಡಲು ತುಂಬಾ ತೆಳ್ಳಗಿದ್ದೀರಿ. ನಿಮಗೆ ಮೆಡಿಕಲ್ ಕಿಟ್ ಹಿಡಿದುಕೊಂಡು ಹೋಗಲು ಆಗುತ್ತದೆಯೇ?” ಎಂದು ಮತ್ತೆ ಕುಟುಕಿದ ರೀತಿಯಲ್ಲಿ ಕೇಳಿದರು. ನಾನು ಕೋಪ ಮಾಡಿಕೊಳ್ಳದೇ “ಸರ್, ಒಬ್ಬ ವ್ಯಕ್ತಿಯ ಬುದ್ಧಿವಂತಿಕೆ ಅಥವಾ ಸಾಧನೆಯನ್ನು ಅವನ ಹೊರನೋಟದಿಂದ ಅಳೆಯಲು ಸಾಧ್ಯವಿಲ್ಲ” ಎಂದು ಹೇಳಿ ನಾನೇ ಅವರಿಗೆ ಒಂದು ಪ್ರಶ್ನೆ ಕೇಳಿದೆ. “ಸರ್ ನಿಮಗೆ ಕ್ರಿಕೆಟ್ ಇಷ್ಟವಾ?” ಎಂದು ಕೇಳಿದೆ. ಅವರು “ಹ್ಞೂಂ’ ಎಂದರು. ಅವರಿಗೆ ‘ನಿಮಗೆ ಅಜಿತ್ ಅಗರ್ಕರ್ ಗೊತ್ತಾ’ ಎಂದು ಕೇಳಿದೆ. ಅವರು ‘ಹ್ಞೂಂ’ ಎಂದರು.  ನಾನು “ಅಜಿತ್ ಅಗರ್ಕರ್  ನೋಡಲು ತೆಳ್ಳಗಿದ್ದರೂ  ವೇಗದಿ 50 ವಿಕೆಟ್ ತೆಗೆಯೋ ಸಾಧನೆ ಮಾಡಿದ್ದಾನೆ ಗೊತ್ತಾ? ಒಂದು ಪುಸ್ತಕವನ್ನು ಅದರ ಬೈಂಡ್ ನೋಡಿ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂದು ಹೇಳಲಾಗುವುದಿಲ್ಲ: ಅದನ್ನು ಓದಿ ನೋಡಿ ನಂತರ ತಿಳಿಯಬೇಕು” ಎಂದೆ. ಆಗ ಅವರು ನನ್ನ ಉತ್ತರದಿಂದ ತುಂಬಾ ಖುಷಿಯಾಗಿ ‘ಪ್ಲೀಸ್ ಕುಳಿತುಕೊಳ್ಳಿ’ ಎಂದರು. ಅವರು ಮಾರ್ಕೆಟಿಂಗ್ ಬಗ್ಗೆ ಬಹಳ ಪ್ರಶ್ನೆ ಕೇಳಿದರು. ನಾನು ಮಾರ್ಕೆಟ್ ಸರ್ವೇ ಮಾಡಿದ್ದ ನೋಟ್ ಬುಕ್ಕನ್ನು ಅವರಿಗೆ ತೋರಿಸಿದೆ. ಅವರು ತುಂಬಾ ಖುಷಿಪಟ್ಟರು. ಅಷ್ಟೇ ಅಲ್ಲದೇ ಮಾರ್ಕೆಟಿಂಗ್ ಬಗ್ಗೆ ನನಗೆ ತಿಳಿಸಿದರು. ಅವರ ಮಾತಿಗೆ ನಾನು ಧನಾತ್ಮಕವಾಗಿ ವರ್ತಿಸಿದೆ. ಎಲ್ಲಿಯೂ ನೆಗಟೀವ್ ಆಗಿ ಉತ್ತರ ಕೊಡಲಿಲ್ಲ. ಅವರು  ನೀವು ಹೊರಗೆ ಕುಳಿತುಕೊಳ್ಳಿ. ನಂತರ ಫಲಿತಾಂಶ ತಿಳಿಸುತ್ತೇವೆ.’ ಎಂದರು. ಅವರು ತಿಳಿಸುವ ಮೊದಲೇ ಅವರ ಮುಖಚರ್ಯೆಯಿಂದಲೇ ನಾನು ಆಯ್ಕೆ ಆಗಿದ್ದೇನೆ ಎಂಬ ನಂಬಿಕೆ ಬಂದಿತ್ತು.

ಈ ಘಟನೆಯಿಂದ ನಾನು ಕಲಿತ, ಪರರೂ ಅನುಸರಿಸಬಹುದಾದ ಒಂದು ಪಾಠವನ್ನು ನಾನಿಲ್ಲಿ ಹಂಚಿಕೊಳ್ಳ ಬಯಸುತ್ತೇನೆ. ನಾವು ಯಾವುದೇ ಸಂದರ್ಶನಕ್ಕೂ ಹಾಜರಾಗುವ ಮುನ್ನ ನಾವು ಅವರು ನೀಡಿದ್ದ ಸಮಯಕ್ಕಿಂತ ಮುಂಚಿತವಾಗಿ ಹೋಗಬೇಕು. ಅಲ್ಲದೇ ಅವರು ಕೋಪ ಬರುವಂತಹ ಯಾವುದೇ ಪ್ರಶ್ನೆಯನ್ನು ಕೇಳಿದ್ರೂ ಅವರು ನಿಮ್ಮ ಮಾತಿನ ಶೈಲಿ ಮತ್ತು ಸಹನೆ ಪರೀಕ್ಷಿಸುತ್ತಿದ್ದಾರೆ ಎಂದು ತಿಳಿಯಬೇಕು. ಸಾಧ್ಯವಾದಷ್ಟು ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬೇಕು. ಉತ್ತರ ಗೊತ್ತಿಲ್ಲದಿದ್ದಾಗ ಪ್ರಾಮಾಣಿಕವಾಗಿ ಗೊತ್ತಿಲ್ಲವೆಂದು ಹೇಳುವುದರ ಜೊತೆಗೆ ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಬೇಕೇ ಹೊರತು ತಪ್ಪು ಉತ್ತರ ಹೇಳಬಾರದು.

ಸಂದರ್ಶನ ಮುಗಿಸಿ ಕಂಪೆನಿಯ ಮುಂಭಾಗದಲ್ಲಿ ಇಟ್ಟಿದ್ದ ಆಸನದಲ್ಲಿ ಕುಳಿತಾಗ ಎಲ್ಲರ ಸಂದರ್ಶನ ಮುಗಿದ ನಂತರ ಆಯ್ಕೆಯಾದವರ ಹೆಸರಲ್ಲಿ ನನ್ನ ಹೆಸರೂ ಇದ್ದುದ್ದನ್ನು ಕೇಳಿ ಖುಷಿಯಾಯಿತು. ಆದರೆ ಅವರು “ನಾವು ನಿಮಗೆ ನಮ್ಮ ಕಂಪೆನಿಯಲ್ಲಿ ಒಂದು ವಾರವಿರಿಸಿಕೊಂಡು ತರಬೇತಿ ಕೊಡುತ್ತೇವೆ. ಇದರ ಜೊತೆಗೆ ಆಯಾ ದಿನ ಪರೀಕ್ಷೆ ಮಾಡುತ್ತೇವೆ. ಈ ಪರಿಕ್ಷೆಯಲ್ಲಿ ಯಾರು ಉತ್ತಮ ಸಾಧನೆ ಮಾಡುತ್ತಾರೋ ಅವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ” ಎಂದಾಗ ಇದೇನಪ್ಪಾ ಮತ್ತೂ ಪರೀಕ್ಷೆಗಳಾ? ಹೇಗಿರಬಹುದು?  ಎಂದು ಮನಸ್ಸಿನಲ್ಲಿ ಪ್ರಶ್ನೆ ಮೂಡಿತಾದರೂ ಏನೇ ಆಗಲಿ ಇದರಲ್ಲಿ ಚೆನ್ನಾಗಿ ಮಾಡಬೇಕು ಎಂದುಕೊಂಡು ಮಾನಸಿಕವಾಗಿ ತಯಾರಾದೆ.

ಕಂಪೆನಿಯಲ್ಲಿ ನಮಗೆ ಉಳಿಯಲು ಎಸಿ ರೂಮು ಕೊಟ್ಟಿದ್ದರು. ಚೆನ್ನೈನಲ್ಲಿ ಆ ರೂಮು ಬಿಟ್ಟು ಹೊರಗೆ ಹೋಗೋಕೆ ಸಾಧ್ಯವಾಗದಷ್ಟು ವಾತಾವರಣ ಬಿಸಿ ಇರುತ್ತಿತ್ತು. ಊಟ ವಸತಿ ಎಲ್ಲಾ ಕಂಪೆನಿಯದ್ದು. ಊಟ ತಿಂಡಿಯಂತೂ ತುಂಬಾ ರುಚಿಯಾಗಿರುತ್ತಿತ್ತು. ನನ್ನ ಜೊತೆಗೆ ಬೇರೆ ರಾಜ್ಯದ ಹುಡುಗರೂ ಇದ್ದರು. ಬೆಳಗ್ಗೆ 9:00 ಗಂಟೆಗೆ ತರಗತಿಗಳು ಪ್ರಾರಂಭವಾಗುತ್ತಿದ್ದವು. ತರಗತಿಯಲ್ಲಿ ನಮಗೆ ಜೀವಶಾಸ್ತ್ರದ ನಮ್ಮ ದೇಹದ ರಚನೆ ಅದಕ್ಕೆ ಬರುವ ರೋಗಗಳಿಗೆ ಕಾರಣ ಆ ರೋಗಗಳನ್ನು ವಾಸಿ ಮಾಡಲು ಈ ಕಂಪೆನಿಯ ಮಾತ್ರೆ ಸಿರಪ್‌ಗಳು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತುಂಬಾ ಚೆನ್ನಾಗಿ ವಿವರಿಸುತ್ತಿದ್ದರು. ನಾನಂತೂ ತುಂಬಾ ಆಸಕ್ತಿಯಿಂದ ಪಾಠವನ್ನು ಕೇಳುತ್ತಿದ್ದೆ. ಆಯಾ ದಿನದ ಅಂತ್ಯಕ್ಕೆ ಅಂದು ಮಾಡಿದ ಪಾಠದ ಬಗ್ಗೆ ಪರೀಕ್ಷೆ ಮಾರನೇ ದಿನಕ್ಕೆ ಇವರದೇ ಕಂಪೆನಿಯ ಮಾತ್ರೆಗಳಲ್ಲಿ ಇರಬಹುದಾದ ಅಂಶಗಳನ್ನು ಕಲಿತುಕುಕೊಂಡು ಬರಲು ತಿಳಿಸುತ್ತಿದ್ದರು. ನಾನು ತುಂಬಾ ಪ್ರಾಮಾಣಿಕವಾಗಿ ಅವನ್ನು ಕಲಿತುಕೊಂಡು ಹೋಗುತ್ತಿದ್ದೆ. ನಮ್ಮ ರೂಮಿನ ಇತರೆ ಹುಡುಗರು ಇದರ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿರಲಿಲ್ಲ.

ಇದೇ ರೀತಿ ಒಟ್ಟು 5 ದಿನ ನಮಗೆ ತರಬೇತಿ ಕೊಟ್ಟು ನಮಗೆ ಕಡೇ ದಿನ ಮತ್ತೆ ಸಂದರ್ಶನ ಇಟ್ಟುಕೊಂಡಿದ್ದರು. ನನಗೆ ಅವರು ಕೊಟ್ಟ ಟಾಸ್ಕ್ ಹೀಗಿತ್ತು. ಆ ಕಂಪೆನಿಯ ಒಂದು ಮಾತ್ರೆಯನ್ನು ಡಾಕ್ಟರ್ ಹತ್ತಿರ ಹೋಗಿ ಅದೇ ಮಾತ್ರೆ ಬರೆಯಲು ಹೇಗೆ ಒಪ್ಪಿಸುತ್ತೀರಿ ಎಂದು. ನಾನು ಕಲಿತಿದ್ದನ್ನು ಅವರಿಗೆ ಒಪ್ಪಿಸಿದೆ. ಅವರು ಅದಕ್ಕೆ ಕನ್ವಿನ್ಸ್ ಆಗಲಿಲ್ಲ. ಅವರು ನೀನು ಆ ವಿಷಯವನ್ನು ಬಿಟ್ಟು ‘ನೀನು ದೊಡ್ಡ ನಟಿಗೆ ಮುತ್ತು ಕೊಡಲು ಬಯಸಿ ಅವಳ ಬಳಿ ಹೇಗೆ ಕನ್ವಿನ್ಸ್ ಮಾಡುತ್ತೀಯಾ ‘ ಎಂದರು. ಅದಕ್ಕೆ ನಾನು ‘ಅವಳು ಖಂಡಿತಾ ನನ್ನ ಮನವಿಯನ್ನು ತಿರಸ್ಕರಿಸುತ್ತಾಳೆ. ಆದರೂ ಅವಳ ಮುಂದೆ ಬೇಡಿಕೊಳ್ಳುತ್ತೇನೆ’ ಎಂದೆ. ಅವರು ಈ ಉತ್ತರಕ್ಕೆ ಕನ್ವಿನ್ಸ್ ಆಗಲಿಲ್ಲ. ‘ನೀನು ರಜನೀಕಾಂತ್ ಫಿಲಂ ನೋಡಿದ್ದೀಯಾ?’ ಎಂದು ಕೇಳಿದರು. ಅದಕ್ಕೆ ನಾನು ‘ಇಲ್ಲ, ಆದರೆ ರಜನೀಕಾಂತ್ ಅಳಿಯನ ಫಿಲಂ ಕಾದಲ್ ಕೊಂಡೈನ್ ನೋಡಿದ್ದೇನೆ’ ಎಂದೆ. ಅವರಿಗೆ ಸಿಟ್ಟು ಬಂದಿರಬೇಕು. ‘ನಿನಗೆ ನಮ್ಮ ಕಂಪೆನಿಯಲ್ಲಿ ಕೆಲಸ ಕೊಡೋದಿಲ್ಲ’ ಎಂದರು. ಕೊನೆಗೆ ನಮಗೆ ಪ್ರತಿದಿನ ತರಗತಿ ತೆಗೆದುಕೊಳ್ಳುತ್ತಿದ್ದ ಲೆಕ್ಚರ್ ಬಂದು ‘ಈ ಹುಡುಗನನ್ನು ಆಯ್ಕೆ ಮಾಡಿಕೊಳ್ಳಿ. ಇವನಿಗೆ ತುಂಬಾ ಕಮಿಟ್ ಮೆಂಟ್ ಇದೆ’ ಎಂದರು. ಕೊನೆಗೆ ಅವರು ಮೆಡಿಕಲ್ ರೆಪ್ ಆಗಿ ಆಯ್ಕೆ ಪತ್ರವನ್ನು ನನಗೆ ಕೊಟ್ಟರು. ನನಗೆ ಆಗ ತುಂಬಾ ಖುಷಿಯಾಯ್ತು.

ನನ್ನ ಜೊತೆಗಿದ್ದ ವ್ಯಕ್ತಿಯು ಕೊನೇ ಸಂದರ್ಶನದಲ್ಲಿ ಆಯ್ಕೆಯಾಗಿರಲಿಲ್ಲ. ಕೊನೆಗೆ ರೂಮನ್ನು ಬಿಟ್ಟು ವಾಪಸ್ ಕರ್ನಾಟಕಕ್ಕೆ ಹೋಗಬೇಕು ಎಂದು ಬ್ಯಾಗ್ ರೆಡಿ ಮಾಡಿಕೊಳ್ಳುತ್ತಿದ್ದಾಗ ಅವನ ದುಃಖ ನೋಡಿ ನನಗೂ ಬೇಸರ ತರಿಸಿತು. ಒಂಚೂರು ಪ್ರಯತ್ನ ಪಟ್ಟಿದ್ದರೆ ಇವನೂ ಆಯ್ಕೆ ಆಗುತ್ತಿದ್ದ. “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ” ಎಂದು ನನಗೂ ಅನಿಸಿತು.

*****

ಓದಿದ್ದು ಶಿಕ್ಷಕ ವೃತ್ತಿಯ ಕೋರ್ಸು. ಆದರೆ ಕೆಲಸಕ್ಕೆ ಆಯ್ಕೆಯಾಗಿದ್ದು ಮಾರ್ಕೆಟಿಂಗ್ ಕೆಲಸ!! ಆದರೆ ಇದರ ಬಗ್ಗೆ ನನಗೆ ಕಿಂಚಿತ್ತೂ ಬೇಸರವಿರಲಿಲ್ಲ. ಒಟ್ಟಾರೆ ದುಡಿಮೆ ಮಾಡಬೇಕಷ್ಟೇ. ಸರ್ಕಾರಿ ಕೆಲಸವಂತೂ ಸಿಗೋಲ್ಲ. ಸಿಕ್ಕ ಈ ಮೆಡಿಕಲ್ ರೆಪ್ ಕೆಲಸವನ್ನು ತುಂಬಾ ಚೆನ್ನಾಗಿ ಮಾಡಿ ಇದರಲ್ಲೇ ಜೀವನ ಕಂಡ್ಕೋಬೇಕು ಅಂತಾ ನಾನು ಮನದಲ್ಲಿ ನಿಶ್ಚಯಿಸಿಕೊಂಡೆ.

ಬಹುತೇಕರ ಜೀವನದಲ್ಲಿ ಹೀಗೆಯೇ ಆಗುತ್ತೆ. ಅಂದುಕೊಳ್ಳುವುದೊಂದು, ಆಗೋದೊಂದು! ಬಯಸೋದೊಂದು, ಸಿಗೋದು ಮತ್ತೊಂದು! ಸಿಗದಿರುವುದನ್ನು ನೆನೆದು ಕೊರಗುವುದಕ್ಕಿಂತ ಸಿಕ್ಕಿದ್ದರಲ್ಲಿಯೇ ಖುಷಿ ಪಡುತ್ತಾ ಜೀವನ ಸಾಗಿಸುವುದರಲ್ಲಿ ಖುಷಿ ಕಾಣಬೇಕು ಅಲ್ವಾ?

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ