ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ.
ವಿನಾಯಕ ಅರಳಸುರಳಿ ಕಥಾಸಂಕಲನ “ಮರ ಹತ್ತದ ಮೀನು”ಕ್ಕೆ ಎ.ಆರ್‌. ಮಣಿಕಾಂತ್ ಬರೆದ ಮುನ್ನುಡಿ

ಒಮ್ಮೊಮ್ಮೆ ಹಾಗಾಗಿ ಬಿಡುತ್ತದೆ. ನಾವು ಓದಿದ, ದೃಶ್ಯರೂಪದಲ್ಲಿ ನೋಡಿದ ಅಥವಾ ಅವರಿವರಿಂದ ಕೇಳಿದ ಪ್ರಸಂಗಗಳು ನಮ್ಮ ಪರಿಸರದ, ಪರಿಚಯದ, ಬಂಧುಗಳ ಅಥವಾ ಊರಲ್ಲಿರುವ ಕುಟುಂಬದ ಪೈಕಿ ಒಬ್ಬರ ಬದುಕಿನ ಕಥೆಯನ್ನೇ ಹೋಲುವಂತೆ ಇರುತ್ತವೆ. ಓದುತ್ತ/ನೋಡುತ್ತ/ಕೇಳುತ್ತ ಹೋದಂತೆಲ್ಲ ಅರರೆ, ಇದು ಡಿಟ್ಟೊ ಅವರ ಕಥೆಯನ್ನೇ ಹೋಲುವಂತಿದೆಯಲ್ಲ? ಕೆಲವು ಸ್ಥಳಗಳ ಮತ್ತು ಪಾತ್ರಗಳ ಹೆಸರನ್ನು ಬದಲಿಸಿದರೆ ಇವರ ಕಥೆ ಇದ್ದದ್ದು ಅವರ ಕಥೆ ಆಗಿಬಿಡುತ್ತದಲ್ಲ ಅನಿಸುತ್ತದೆ. ಒಂದು ಕಥೆ ಅಥವಾ ಪ್ರಸಂಗ ಓದುಗನಿಗೆ ಇಂಥ ಫೀಲ್‌ ಕೊಟ್ಟರೆ ಅದು ಗೆದ್ದಂತೆ!

(ವಿನಾಯಕ ಅರಳಸುರಳಿ)

ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗ ಬೇಕಾಗುತ್ತದೆ. ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ. ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ. ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ.

ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ, ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಹಲವು ಸಂದರ್ಭಗಳಲ್ಲಿ ಎಲ್ಲರ ಮೇಲೂ ಉಂಟಾಗುವ ಅನುಮಾನ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ.. ಹೀಗೆ ಮುನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಥೆಗಳಲ್ಲೂ ಬರುತ್ತವೆ. ಕೆಲವು ಕಥೆಗಳನ್ನು ಮೊದಲ ಎರಡು ಪುಟ ಓದಿದರೆ ಆನಂತರದಲ್ಲಿ ಕಥೆ ಸಾಗುವ ಹಾದಿಯನ್ನು, ಕಥೆಯ ಅಂತ್ಯವನ್ನು ಊಹಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ.

ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದಾಗ ಮನುಷ್ಯ ಅದೆಷ್ಟು ಅಸಹಾಯಕನಾಗುತ್ತಾನೆ, ಸಿಟ್ಟು ಬಂದಾಗ, ಬೇಸರಗೊಂಡಾಗ ಹೇಗೆ ವ್ಯಗ್ರನಾಗುತ್ತಾನೆ, ಅವಕಾಶ ಸಿಕ್ಕರೆ ಕಾಣದ ದೇವರನ್ನೂ ಹೇಗೆಲ್ಲಾ ನಿಂದಿಸುತ್ತಾನೆ ಎಂಬುದಕ್ಕೆ ‘ಕೆಂಪು ಕುಂಕುಮ, ಕಪ್ಪು ಕುಂಕುಮʼ, ‘ಸಕಲ ಕಲಾವಲ್ಲಭʼ, ‘ಒಣಮರದ ಹಸಿರೆಲೆʼ ಕಥೆಗಳು ಸಾಕ್ಷಿ ಒದಗಿಸಬಲ್ಲವು. ಏಕಕಾಲಕ್ಕೆ ಡಿಫೆರೆಂಟ್‌ ಮತ್ತು ಸಿನಿಮೀಯ ಅನ್ನಿಸಿಬಿಡುವ ‘ಭೂಮಿʼ ಹೆಸರಿನ ಕಥೆಯೊಂದಿದೆ. ತಾಯಿಯನ್ನು ಉಳಿಸಿಕೊಳ್ಳಲು, ಉಡಾಳ ಸ್ವಭಾವದವನನ್ನು ಮದುವೆಯಾಗಲು ಸಮ್ಮತಿಸುವ ಹೆಣ್ಣೊಬ್ಬಳ ಕಥೆ ಅದು. ಅದರಲ್ಲಿ ನಾಯಕಿ ಹೇಳುತ್ತಾಳೆ:

“ಅಮ್ಮನಿಗೆ ಕ್ಯಾನ್ಸರ್‌ ಎರಡನೇ ಸ್ಟೇಜ್‌ ತಲುಪಿದೆ ಮನೂ. ಅವಳ ಚಿಕಿತ್ಸೆಗೆ ತಿಂಗಳಿಗೆ ನಲವತ್ತು ಸಾವಿರ ಬೇಕು. ಈ ಚಿಕಿತ್ಸೆ ಎಷ್ಟು ವರ್ಷ ಬೇಕಾದರೂ ಮುಂದುವರಿಯಬಹುದಂತೆ. ಮರುಕಳಿಸಲೂಬಹುದಂತೆ. ಇದು ನನ್ನ ಶಕ್ತಿ ಮೀರಿದ ಖರ್ಚು ಕಣೋ. ಇದರಲ್ಲಿ ಅರ್ಧವನ್ನು ಅವರು ಕೊಟ್ಟರೂ ಸಾಕು. ಅಮ್ಮನನ್ನು ಉಳಿಸಿಕೊಳ್ಳಬಹುದು. ಅವತ್ತೇ ಹೇಳಿದ್ದೆನಲ್ಲಾ? ಅವರು ಇದಕ್ಕೆ ಒಪ್ಪಿದ್ದಾರೆ ಪಾಪ ಅಮ್ಮ……. ಇಲ್ಲಿಯತನಕ ಬದುಕಿನಲ್ಲಿ ಸ್ವಲ್ಪ ಖುಷಿಯನ್ನೂ ನೋಡಿಲ್ಲ. ನನಗೋಸ್ಕರ ನನ್ನ ಸುಭದ್ರ ಭವಿಷ್ಯಕ್ಕೋಸ್ಕರ ದೊಡ್ಡಪ್ಪ ಮತ್ತು ಅವನ ಮನೆಯವರ ಹಿಂಸೆಗಳನ್ನು ಸಹಿಸಿಕೊಂಡು ಅವರ ಮನೆಯಲ್ಲಿದ್ದಳು. ಈಗ ಮತ್ತೆ ನನ್ನ ಆಸೆ, ನಿರೀಕ್ಷೆಗಳಿಗೋಸ್ಕರ ಅವಳನ್ನು ಸಾವಿನ ಬಾಯಿಗೆ ದೂಡಲೇನು? ಅವಳು ಜೀವಂತ ಜೊತೆಗಿದ್ದರೆ ಅದಕ್ಕಿಂತ ಬೇರೆ ಸುಖ ನನ್ನ ಪಾಲಿಗೆ ಬೇರೇನಿದೆ ಹೇಳು? ಅದಕ್ಕೆ ಅವರನ್ನು ಒಪ್ಪಿಕೊಂಡೆ….”

ಅಮ್ಮನನ್ನು ಉಳಿಸಿಕೊಳ್ಳಲು, ಅಮ್ಮನ ಮೊಗದ ನಗೆಯನ್ನು ನೋಡಲು ತನ್ನ ಬದುಕನ್ನೇ ಪಣಕ್ಕಿಡುವ ‘ಭೂಮಿʼ ಹೆಸರಿನ ನಾಯಕಿ, ಇಲ್ಲಿ ಭೂಮಿ ತೂಕದ ಹೆಣ್ಣಾಗಿ ಹೊಳೆಯುತ್ತಾಳೆ. ಮನಸ್ಸಿಗೆ ಇಳಿಯುತ್ತಾಳೆ. ಕಥೆಯನ್ನು ಓದಿ ಮುಗಿಸಿದ ಅದೆಷ್ಟೋ ಸಮಯದವರೆಗೂ ಮನದಲ್ಲೇ ಉಳಿಯುತ್ತಾಳೆ.

ಇವೆಲ್ಲವೂ ಈ ಸಂಕಲನವನ್ನು ಇಷ್ಟಪಡುವುದಕ್ಕೆ ಇರುವ ಕಾರಣಗಳು. ಹಾಗಂತ ಕೊರತೆಗಳು ಇಲ್ಲವೆಂದಲ್ಲ. ಯಾವುದೇ ಕಥೆಯನ್ನು ಓದಲು ಹೊರಟಾಗ ಅದರ ಪಾತ್ರಗಳು ಹೀಗಿದ್ದರೆ ಚೆನ್ನಾಗಿತ್ತು, ಪಾತ್ರಗಳ ಮಾತು ಹೀಗಿದ್ದರೆ ಚೆನ್ನಾಗಿತ್ತು ಎಂಬ ಯೋಚನೆ ಆಗಾಗ್ಗೆ ಓದುಗರಿಗೆ ಬರುತ್ತದೆ. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕಥೆಗಳು ಸಾಗಿದಾಗ, ಕಥೆಯನ್ನು ‘ಎಳೆಯಲಾಗುತ್ತಿದೆʼ ಅನ್ನಿಸಿದಾಗ ಸಣ್ಣದೊಂದು ಅಸಹನೆ ಜೊತೆಯಾಗಿ ಬಿಡುತ್ತದೆ. ಒಂದೆರಡು ಕಥೆಗಳನ್ನು ಓದುವಾಗ ಹಾಗೂ ಅನಿಸುತ್ತದೆ. ಆದರೆ, ಓದುಗರ ನಿರೀಕ್ಷೆಗೆ ವಿರುದ್ಧವಾಗಿ ಸಾಗುವುದೇ ಕಥೆಯೊಂದು ಸಾಗಬೇಕಿರುವ ರೀತಿ ಅಂದುಕೊಂಡಾಗ ಈ ಸಂಕಲನದ ಕಥೆಗಳ ಕುರಿತು ಮೆಚ್ಚುಗೆ ಮತ್ತು ಪ್ರೀತಿ ಉಂಟಾಗಲು ಕಾರಣವಾಗುತ್ತದೆ.

(ಎ.ಆರ್‌. ಮಣಿಕಾಂತ್)

ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಮತ್ತೊಂದು ವಿಶೇಷವಿದೆ. ಇಲ್ಲಿನ ಪಾತ್ರಗಳೆಲ್ಲ ತಮಗೆ ತಾವೇ ಒಂದು ಚೌಕಟ್ಟು ಹಾಕಿಕೊಂಡಂತೆ ವರ್ತಿಸುತ್ತವೆ. ಸಂದರ್ಭಕ್ಕೆ ತಕ್ಕಂತೆ ಅವುಗಳ ಮಾತು ಮೆದುವಾಗುತ್ತದೆ. ಒರಟಾಗುತ್ತದೆ. ವ್ಯಂಗ್ಯಕ್ಕೆ ತಿರುಗುತ್ತದೆ. ಬಯ್ದು ಬುದ್ಧಿ ಹೇಳುತ್ತದೆ. ಯಾವುದೋ ಒಂದು ಗುರುತರ ಹೊಣೆ ಹೊತ್ತಿವೆಯೇನೋ ಎಂಬಂತೆ ವರ್ತಿಸುತ್ತಾ ತಮ್ಮ ಪಾತ್ರದ ಅವಧಿ ಮುಗಿಯುತ್ತಿದ್ದಂತೆ ಏಕ್ದಂ ಮಾಯವಾಗುತ್ತವೆ. ಚಿಟ್ಟೆಯಂತೆ ಚಿಗರೆಯಂತೆ…

ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ.

ತೀವ್ರ ಸಂಕೋಚ, ವಿನಯ, ಅತಿಯಾದ ಭಾವುಕತೆ, ಕಳೆದುಕೊಂಡಿದ್ದಕ್ಕೆ ಪರಿತಪಿಸುವ ಮನಸ್ಸಿನ ವಿನಾಯಕರಿಗೆ ಈ ಸಂಕಲನದ ಕಥೆಗಳು ಅವರನ್ನು ಕೈ ಹಿಡಿದು ನಡೆಸಲಿ ಎಂಬುದು ನನ್ನ ಆಶಯ ಮತ್ತು ಹಾರೈಕೆ.