ಆ ನಾಯಿಯ ಬೊಗಳುವಿಕೆಯ ಹಿನ್ನೆಲೆಯಲ್ಲಿಯೇ ನಮ್ಮ ಮನೆಯ ಇದುರಿಗಿದ್ದ, ಅಕ್ಕಪಕ್ಕದ ಎಂಟು ಮನೆಗಳ ದಾಟಿಕೊಂಡು ಮಲಗಿದ್ದ ಇಕ್ಕಟ್ಟಾದ ಬೀದಿಯ ಆ ಕಡೆ ತುದಿಯಲ್ಲಿ ಪ್ರತ್ಯಕ್ಷವಾದ ಎರಡು ಪ್ಯಾಂಟ್ ತೊಟ್ಟ ಆನೆಕಾಲುಗಳಂತವು ಮತ್ತು ಅವುಗಳ ಹಿಂದೆ ಬಾಡಿಗಾರ್ಡುಗಳಂತೆ ನಾಲ್ಕು ಚಡ್ಡಿ ತೊಟ್ಟುಕೊಂಡ ಎರಡೆರಡೆಂಬಂತೆ ಎಂಟು ಕುದುರೆ ಕಾಲುಗಳಂತವುಗಳು ಇತ್ತ ಬರುತ್ತಿದ್ದವು. ಆ ಕಾಲುಗಳ ವೇಗದಲ್ಲಿಯೇ ನೆಲಕ್ಕೆ ಕುಟ್ಟುತ್ತಾ ಬೆತ್ತವು ಒಂದು ಬರುತ್ತಿದ್ದುದನ್ನು ಕೆಳಗಿನಿಂದ ಮೇಲಕ್ಕೆ ಕಣ್ಣಾಡಿಸಿದಾಗ ನಾನು ಅಡಿಯಿಂದ ಮುಡಿಯವರೆಗೂ ನಡುಗುತ್ತಾ ಕ್ಷಣದಲ್ಲಿಯೇ ಬೆವೆತುಬಿಟ್ಟೆ.
ಕಾಸಿಂ ನದಾಫ್ ಭೈರಾಪುರ ಬರೆದ ಶಾಲಾ ದಿನಗಳ ಒಂದು ನೆನಪು ನಿಮ್ಮ ಓದಿಗೆ

ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದ ನೆನಪು. ಅದೊಂದು ದಿನ ನಮ್ಮೂರ ಮಧ್ಯದಲ್ಲಿದ್ದ ಶಿವಣ್ಣನ ಚಾದಂಗಡಿಯ ಮುಂದಿದ್ದ ‘ಕತ್ತರಿ’ಯಲ್ಲಿ ಯಾವುದೋ ಊರಿನಿಂದ ಸರ್ಕಸ್ ಆಡಲು ದಂಪತಿಗಳಿಬ್ಬರು ಎರಡು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಬಂದಿದ್ದರು. ಶಾಲೆ ಮುಗಿಸಿಕೊಂಡು ಮನೆಗೆ ಬಂದ ನಾನು ಪಾಟೀಚೀಲ ಗೂಟಕ್ಕೆ ಸಿಗಾ ಹಾಕಿ ಅಲ್ಲಿಗೆ ಓಡಿ ಬಿಟ್ಟಿದ್ದೆ. ಅವರು ಹಚ್ಚಿಟ್ಟಿದ್ದ ಮೈಕು ‘ಏಳು ಗಂಟೆಗೆ ಸರ್ಕಸ್ಸು ತೋರಸತೀವಿ, ಆದ ಕಾರಣ ಊರಿನೆಲ್ಲಾ ಜನಗಳು ಬಂದು ನೋಡಿ ಆನಂದಿಸಿ’ ಎಂದು ಬಿತ್ತರಿಸುತ್ತಿತ್ತು. ಮಧ್ಯೆ ಮಧ್ಯೆದಲ್ಲಿ ಆಗತಾನೆ ತೆರೆಕಂಡಿದ್ದ ಚಲನಚಿತ್ರ ಗೀತೆಗಳ ತೆರೆತೆರೆಗಳು ತೇಲಿಬರುತ್ತಿದ್ದಂತೆ ನನ್ನ ಹಾಗೂ ನನ್ನ ವಾರಿಗೆಯ ಆಸುಪಾಸಿನ ಹುಡುಗರ ಎಳೆ ಕಿವಿಗಳಿಗೆ ಅಪ್ಪಳಿಸಿ ಹಬ್ಬವನ್ನುಂಟು ಮಾಡಿದ್ದರಿಂದ ಅಲ್ಲಿ ಕುಪ್ಪಳಿಸಿ ಕುಣಿಯುತ್ತಿದ್ದೆವು. ಹೀಗೆ ಆ ಕುಣಿತದ ಮತ್ತು ಸರ್ಕಸ್ ನೋಡುವ ತುಡಿತದ ಹುಮ್ಮಸ್ಸಿನಲ್ಲಿ ಅಂದು ಗಿರಿಯಪ್ಪ ಮಾಸ್ತರರು ಕೊಟ್ಟ ಲೆಕ್ಕಗಳು ನನ್ನ ಅರಿವಿನ ಲೆಕ್ಕಕ್ಕೆ ಬರದೆ ಪುಕ್ಕ ಕಳಚಿ ಬಿದ್ದ ಹಕ್ಕಿಗಳಂತೆ ಗೂಟಕ್ಕೆ ನೇತು ಹಾಕಿ ಬಂದಿದ್ದ ಪಾಟೀಚೀಲದ ನೋಟ್ ಬುಕ್ಕಿನಲ್ಲಿಯೇ ಬಂಧಿಯಾಗಿದ್ದವು.

ಸಂಜೆಯಾಗುತ್ತಿದ್ದಂತೆ ಸರ್ಕಸ್ಸು ನೋಡಲು ಕುಳಿತುಕೊಳ್ಳುವ ಜಾಗಕ್ಕಾಗಿ ಬಡಿದಾಡತೊಡಗಿದ್ದೆವು. ಮುಂದೆ ಕುಳಿತುಕೊಳ್ಳಲು ಜಾಗ ಸಿಕ್ಕ ಹುಡುಗುರು ಮೇಲೆದ್ದರೆ ಮತ್ತೇ ಸಿಗುವುದಿಲ್ಲವೆಂದು ಕುಳಿತ ಜಾಗ ಬಿಟ್ಟು ಮೇಲೇಳದಂತೆ ನೆಲಕ್ಕೆ ಅಂಟಿ ಬಿಟ್ಟಿದ್ದೆವು. ನಾನೂ ಮುಂದುಗಡೆಯೇ ಕುಳಿತುಕೊಂಡಿದ್ದರಿಂದ ನನ್ನ ಹಿಂದೆ ಕುಳಿತ ಹುಡುಗರನ್ನು ನೋಡಿ ಹಿಗ್ಗಿ ಎದೆಯುಬ್ಬಿಸಿ ಬೀಗಿದಂತೆ ಮಾಡುತ್ತಿದ್ದೆ. ಇನ್ನೇನು ಸರ್ಕಸ್ಸು ಚಾಲೂವಾಗುತ್ತದೆ ಎನ್ನುವಷ್ಟರಲ್ಲಿ ಎದ್ದ ತಮಟೆ ಸದ್ದಿಗೆ ಊರಿನ ಮಂದಿಯೆಲ್ಲಾ ಬಂದು ಜಮಾಯಿಸತೊಡಗಿದರು. ಸರ್ಕಸ್ಸು ಚಾಲೂವಾಗುವುದನ್ನೇ ಕುತೂಹಲದಿಂದ ನೋಡುತ್ತಾ ಕುಳಿತಿದ್ದಾಗ, ಅಷ್ಟರಲ್ಲಿ ಹತ್ತಿ ಗಂಟನ್ನು ತುಂಬಿಕೊಂಡು ಅದರ ಮೇಲೆ, ಹತ್ತಿ ಬಿಡಿಸಲೆಂದು ಮುಂಜಾನೆ ಹೊಲಕ್ಕೆ ಕರಕೊಂಡು ಹೋಗಿದ್ದ ನಾಲ್ವರು ಕೂಲಿ ಹೆಂಗಸರನ್ನು, ಹತ್ತಿಸಿಕೊಂಡು ಹಳ್ಳದ ಹಾದಿಯಿಂದ ಮನ್ನಾಪುರ ದೇವಪ್ಪಜ್ಜನ ಬಂಡಿ ಬಂತು. ಎತ್ತುಗಳೋ, ತಾವು ದಿನ ಅಡ್ಡಾಡುವ ಹಾದಿಯಲ್ಲಿ ಅಂದು ವಿಚಿತ್ರವಾಗಿ ಬದಲಾವಣೆ ತೋರುತ್ತಿದ್ದರಿಂದಲೋ, ಮುಂದೆ ಕಿರುಚಾಡುತ್ತಾ, ಬಡಿದಾಡುತ್ತಾ ಕುಳಿತುಕೊಂಡಿದ್ದ ನಾವುಗಳಾದ ಹುಡುಗರನ್ನು ಕಂಡೊ ಏನೋ…! ಅಥವಾ ತಮಟೆಯ ವಿಚಿತ್ರ ಸದ್ದಿಗೋ ಗೊತ್ತಿಲ್ಲ, ಆತ ಎತ್ತುಗಳನ್ನು ಮುಂದಕ್ಕೆ ನಡೆಸಲು ಎಷ್ಟು ಪ್ರಯತ್ನಿಸಿದರೂ ಹೆಜ್ಜೆ ಕಿತ್ತಿಡದಂತೆ ಆಟು ದೂರದಲ್ಲಿಯೇ ಬೆದರಿ ಗಕ್ಕನೆ ನಿಂತು ಬಿಟ್ಟಿದ್ದವು.

ಆ ಬಂಡಿ, ಆ ಹಾದಿಯಿಂದ ಕತ್ತರಿ (ನಾಲ್ಕು ಬೀದಿಗಳು ಕೂಡುವ ಸ್ಥಳ, ಸರ್ಕಲ್) ದಾಟಿಕೊಂಡು ಇನ್ನೊಂದು ಹಾದಿ ಹಿಡಿದು ಮನೆ ಸೇರಬೇಕಾಗಿದ್ದರಿಂದ, ಆ ಹಾದಿಯಲ್ಲೇ ನಮ್ಮದೆಂದು ಜಾಗ ಫಿಕ್ಸ್ ಮಾಡಿಕೊಂಡು ಕುಳಿತಿದ್ದ ನಮ್ಮನ್ನೆಲ್ಲರನ್ನು “ಬಂಡಿ ಬಂತು ಮ್ಯಾಕ್ ಏಳ್ರೀಲೇ” ಎಂದು ಕೂಗಿ ಹೆದರಿಸಿದ್ದರಿಂದ, ಕುಳಿತಿದ್ದ ನಾವೆಲ್ಲಾ ಹುಡುಗರು ಪುದುಪುದು ಎದ್ದು ನಮ್ಮ ಕುಳಿತ ಜಾಗಗಳ ಬಿಟ್ಟು ಪಕ್ಕಕ್ಕೆ ಸರಿದು ಬಂಡಿಗೆ ಹಾದಿ ಬಿಟ್ಟು ಕೊಟ್ಟೆವು. ತಮಟೆ ಸದ್ದು ಕೂಡ ಬಂದಾಯ್ತು. ಆ ಬಂಡಿಯು ನಾವು ಕುಳಿತುಕೊಂಡಿದ್ದ ಜಾಗ ದಾಟಿಕೊಂಡು ಮುಂದೆ ಹೋಗುವುದಷ್ಟೇ ತಡ, ಹುಡುಗರೆಲ್ಲಾ ಮುಂದೆ ಜಾಗ ಸಿಗಲೆಂದು ಎಲ್ಲರೂ ದಾಳಿ ಮಾಡಿದರು. ಒಬ್ಬರ ಮೇಲೊಬ್ಬರು ಬಿದ್ದು ಮತ್ತೆ ಗುದ್ದಾಡತೊಡಗಿದರು. ಮೊದಲು ಮುಂದೆ ಕುಳಿತಿದ್ದವರಲ್ಲಿ ಕೆಲಹುಡುಗುರು ಅಸ್ಥಿತ್ವ ಕಳೆದುಕೊಂಡರು. ಅದರಲ್ಲಿ ನಾನೂ ಒಬ್ಬನಾಗಿದ್ದೆ. ನಾನು ನನ್ನ ಮೊದಲು ಕುಳಿತ ಜಾಗದತ್ತ ‘ಬುಲೆಟ್ ರೈಲು’ ವೇಗದಲ್ಲಿ ಓಡಿದೆನಾದರೂ ನನಗೆ ಮೊದಲು ಕುಳಿತಿದ್ದ ಜಾಗ ಸಿಗಲೇ ಇಲ್ಲ. ತುಂಬಾ ನಿರಾಶೆಯಾಯಿತು. ಬಂಡಿಯು ಬಂದದ್ದನ್ನು ಶಪಿಸುತ್ತಾ ಬೇಸರದಿಂದ ನಿಂತುಕೊಂಡುಬಿಟ್ಟೆ. ಅಷ್ಟರಲ್ಲಿ ಬಂಡಿಯು ಕತ್ತರಿ ದಾಟಿಕೊಂಡು ಹೋಗುತ್ತಿದ್ದಂತೆ ಸರ್ಕಸ್ಸು ಶುರುವಾಯಿತು.

ಇಕ್ಕಟ್ಟಾದ ಕಬ್ಬಿಣದ ಬಳೆಗಳಲ್ಲಿ ತಮ್ಮ ಕಾಲುಗಳನ್ನು ಮತ್ತು ತಲೆಯನ್ನು ಒಟ್ಟೊಟ್ಟಿಗೆ ಅದರೊಳಕ್ಕೆ ತುರುಕಿ ಅದರಿಂದ ಬೆನ್ನಿನ ಮೂಲಕ ಸರಿಸುತ್ತ ತಪ್ಪಿಸಿಕೊಳ್ಳುವುದು, ಕಣ್ಣಿನಲ್ಲಿ ಸೂಜಿ ಚುಚ್ಚಿಕೊಳ್ಳುವುದು, ಏಳೆಂಟು ಅಡಿಯ ಎತ್ತರದ ಎರಡು ಕಂಬಗಳ ಮೇಲೆ ಅಡ್ಡಲಾಗಿ ಕಟ್ಟಿದ್ದ ಮತ್ತೊಂದು ಕಂಬದ ಮೇಲೆ ಹತ್ತಿ ಜಂಪಿಂಗ್ ಮಾಡುತ್ತಾ ಗಿರಗಿರನೆ ತಿರುಗುವುದು, ಆ ಸರ್ಕಸ್ಸು ಮಾಡುವವನು ಸೈಕಲ್ಲನ್ನು ಕೈಗಳ ಸಹಾಯವಿಲ್ಲದೆ ಹಲ್ಲಿನಿಂದ ಕಚ್ಚಿ ಎದೆಯ ಮೇಲ್ಮಟ್ಟದಿಂದ ಮೇಲಕ್ಕೆ ಎತ್ತಿ ತೋರಿಸುವುದು, ತಮ್ಮ ಮಾತುಗಳಿಂದ ನೋಡುವವರನ್ನ ಮಂಗಗಳಂತೆ ಹಲ್ಲು ಕಿಸಿದು ನಗಿಸುತ್ತ, ಮುಖದ ತುಂಬಾ ಬೆಳ್ಳಗೆ ಪೌಡರ್ ಮೆತ್ತಿಕೊಂಡು ಚಪಾತಿ ಆಟ ತೋರಿಸುವುದು, ಇನ್ನೂ ಹಲವಾರು ಭಂಗಿಯಲ್ಲಿ ದೇಹವನ್ನು ಬಗ್ಗಿಸುತ್ತಾ, ಸರ್ಕಸ್ಸು ಮಾಡುತ್ತಾ ನೋಡಬಂದ ಮಂದಿಗೆಲ್ಲಾ ಮನರಂಜನೆ ಕಣ್ಣಿಗೆ ಹಬ್ಬವನ್ನುಂಟುಮಾಡಿದ್ದರು.

ಸರ್ಕಸ್ಸಿನಲ್ಲಿ ನಮಗೆ ವಿಶೇಷವಾಗಿ, ಆಶ್ಚರ್ಯಕರವಾಗಿ ಕಂಡಿದ್ದೆಂದರೆ; ಕುಳಿತು ನೋಡುತ್ತಿದ್ದ ಹುಡುಗರಲ್ಲಿ ಒಬ್ಬನನ್ನು ಸರ್ಕಸ್ಸು ಮಾಡುವವನು “ಯಾರರ ಒಬ್ಬ ಹುಡುಗ ಬರ್ರಿ” ಎಂದು ನಮ್ಮತ್ತ ನೋಡಿ ಕರೆದಾಗ ಮುಂದೆಯೇ ಕುಳಿತಿದ್ದ ಕಾಜ ಆತನಲ್ಲಿಗೆ ಟಣಕ್ಕನೆ ಎದ್ದು ಹೋದ. ಸುತ್ತಲೂ ತುಂಬಿದ್ದ ಜನರ ಮಧ್ಯದಲ್ಲಿ ನಿಂತು ನೋಡಿದ ಕಾಜ ಒಂದಿಷ್ಟು ಕಂಡು ಭಯಗೊಂಡಂತಾಗಿದ್ದ. ಕಾಜನನ್ನು ಸರ್ಕಸ್ಸಿನವನು ಪರಿಚಯಮಾಡಿಕೊಂಡ ನಂತರ “ನೀನು ಕೋಳಿ ಏನೋ” ಅಂತ ಕೇಳಿದ. “ಅಲ್ಲೊ…, ನಾನು ಮನುಸ್ಯಾ” ಎಂದ ಕಾಜ. “ಮತ್ತೆ ನೀನು ತತ್ತಿ ಹಾಕ್ತೀಯಲ್ಲೊ ಕಾಜ” ಎಂದ ಸರ್ಕಸ್ಸಿನವನು. “ಇಲ್ಲ, ಇಲ್ಲೊ… ಮಾರಾಯಾ ನಾನು ತತ್ತಿ ಹಾಕಂಗಿಲ್ಲ” ಎಂದು ತಲೆ ಅಲ್ಲಾಡಿಸಿದ ಕಾಜ. ಆಗ, ಸರ್ಕಸ್ಸು ಮಾಡುವವನು ಕಾಜನ ಹೊಟ್ಟೆಯನ್ನು ಮುಟ್ಟಿ ಕೈಯಾಡಿಸುತ್ತಾ ಆಶ್ಚರ್ಯ ಎಂಬಂತೆ ಸುತ್ತಲ ಮಂದಿಯನ್ನು ನೋಡುತ್ತಾ “ಕಾಜ, ಎಷ್ಟು ಸುಳ್ಳು ಹೇಳತಿಯಾ… ನಿನ್ನ ಹೊಟ್ಟೆಯಲ್ಲಿ ತತ್ತಿ ಐತಿ. ನನಗೆ ಗೊತ್ತಾಗುತ್ತಾ… ಈಗ ಅದನ್ನು ಹೊರ ಹಾಕಿ ಇಲ್ಲಿದ್ದವರಿಗೆ ನೀನು ಕೋಳಿ ಹೌದೆಂದು ನಾನು ತೋರಿಸಿ ಕೊಡ್ತೀನಿ” ಎಂದವನೇ ಕೆಳಗಿದ್ದ ಮಣ್ಣನ್ನು ಎಡಗೈಯಲ್ಲಿ ಐದು ಬೆರಳಿಗೆ ಬರುವಷ್ಟು ತೆಗೆದುಕೊಂಡು ಮಂತ್ರ ಪಠಿಸಿದಂತೆ “ಒಂಡು.. ಎರಡು.. ಮೂಡು.. ಎಕ್..ಡ್ರೋ.. ತ್ರೀನ್.. ಒನ್.. ಟೂ.. ಟ್ರೀಈಈಈ…. ಛೂ….ಬಂಬಾ” ಎಂದು ಅವನ ಚಡ್ಡಿ ಒಳಕ್ಕೆ ಮಣ್ಣನ್ನು ತೂರಿಬಿಟ್ಟ. ಕುಳಿತು ನೋಡುತ್ತಿದ್ದ ಎಲ್ಲರೂ ‘ಓಯ್‌…’ ಎಂದು ಕೂಗುತ್ತಾ, ಬೆರಗಿನಿಂದ ಬಾಯಿ ಮೇಲೆ ಬೆರಳಿಟ್ಟು ಆಶ್ಚರ್ಯಚಕಿತರಾದರು. ‘ಕೇಹೋ….’ ಎಂದು ಮತ್ತೆ ಕ್ಯಾಕಿ ಹೊಡೆಯುತ್ತಾ ನಗೆಗಡಲಲ್ಲಿ ತೇಲತೊಡಗಿದರು.

ಕಾಜನ ಚಡ್ಡಿಯೊಳಗಿಂದ ತತ್ತಿ ಕೆಳಕ್ಕಿಳಿದಿತ್ತು. ಸರ್ಕಸ್ಸಿನವನು ಅದು ಕೆಳಕ್ಕೆ ಬಿಳುವದನ್ನು ಕ್ಯಾಚ್ ಹಿಡಿದು ಎಲ್ಲರಿಗೂ ಎತ್ತಿ ತೋರಿಸುತ್ತಾ “ನೋಡ್ರೀ ಈ ಕಾಜ ‘ನಾನು ಕೋಳಿ ಅಲ್ಲ’ ಅಂತ ಸುಳ್ಳು ಹೇಳ್ತಾನ. ಈ ತತ್ತಿ ಎಲ್ಲಿಂದ ಬಂತು ನೀವಾ ಕಣ್ಣಾರೆ ನೋಡಿದ್ರಲ್ಲ…” ಎಂದು ಸರ್ಕಸ್ಸಿನವನು ಅವನ ಕೈಗೆ ಮೆತ್ತಗೆ ತತ್ತಿ ಇಟ್ಟನು. ಎಲ್ಲರೂ ಆಶ್ಚರ್ಯದಿಂದ ಕಾಜನನ್ನು ನೋಡಿ ಬಿದ್ದು ಬಿದ್ದು ಕೊಕ್ಕಾಡಿ ಮತ್ತಷ್ಟು ನಗಲಾರಂಭಿಸಿದರು. ಕಾಜ ತನ್ನ ಚಡ್ಡಿಯೊಳಗಿಂದ ಕರುವಿನಂತೆ ಇಳಿದ ತತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತು ಬಲು ಬೆರಗಿನಿಂದ ದಿಟ್ಟಿಸಿ ನೋಡುತ್ತಿದ್ದನು. ನಾವು ಹುಡುಗರೆಲ್ಲರೂ “ಕೋಳಿ ಕೋಳಿ, ಕಾಜಾ ಕೋಳಿ…” ಎಂದು ಕೂಗುತ್ತಿದ್ದೆವು. ಕಾಜ ತಾನು, ಆತನ ಮಾತು ಕೇಳಿ ಎದ್ದು ಬಂದದ್ದೇ ದೊಡ್ಡ ತಪ್ಪೆನಿಸಿ, ಅವನು ತನ್ನನ್ನೇ ತಾನು ಮನಸ್ಸಿನಲ್ಲಿ ಬೈದುಕೊಂಡನೋ ಏನೋ, ಚೂರು ಕಸಿವಿಸಿಗೊಂಡವನಂತೆ ಸುತ್ತಲಿನ ಜನರತ್ತ ನೋಡಿ, ತತ್ತಿಯನ್ನು ಕೆಳಗಿಟ್ಟು, ಒಂದು ಕೈಯಿಂದ ತಲೆಕೆರೆದುಕೊಳ್ಳುತ್ತಾ, ಮತ್ತೊಂದು ಕೈಯಿಂದ ಹೊಟ್ಟೆ ಮುಟ್ಟಿಕೊಳ್ಳುತ್ತಾ, ಮತ್ತೊಮ್ಮೆ ಚಡ್ಡಿಯನ್ನು ಕೊಡವಿಕೊಳ್ಳುತ್ತಾ ಬಂದು ಕುಳಿತುಕೊಂಡಿದ್ದ. ಅಷ್ಟರಲ್ಲೇ ಸರ್ಕಸ್ಸು ಮುಗಿಯಿತೆಂಬಂತೆ ಆ ದಂಪತಿಗಳ ಎರಡು ಪುಟ್ಟ ಮಕ್ಕಳ ಕೈಯಲ್ಲಿ ಒಂದೊಂದು ತಾಟುಗಳು ಬಂದವು. ಅವುಗಳನ್ನು ಹಿಡಿದುಕೊಂಡು ನೋಡುತ್ತಿದ್ದ ಮಂದಿಗಳ ಕಡೆಗೆ ಬಂದರು. ನೋಡಬಂದಿದ್ದ ಬಹುತೇಕರು ತಕ್ಷಣ ಅಲ್ಲಿಂದ ಕಾಲ್ಕಿತ್ತರು. ಇದ್ದವರು ಐದು, ಹತ್ತು ರೂಪಾಯಿ, ಇಲ್ಲದವರು ಒಂದು ಎರಡು ರೂಪಾಯಿ ಚಿಲ್ಲರೆ ತಾಟಿಗಿಟ್ಟು ಸಹಕರಿಸಿದರು. ನನ್ನಲ್ಲಿ ಕೊಡಲು ರೊಕ್ಕಾ ಇಲ್ಲವಲ್ಲ ಎಂದು ಬೇಸರಿಸಿಕೊಂಡಿದ್ದೆ. ನಾನು ಆ ತಾಟುಗಳು ಜನರ ಕಚ್ಚಿಕೊಂಡು ಚಲಿಸಿದಂತೆ ದಿಟ್ಟಿಸುತ್ತಾ ನಿಂತಾಗ ಆ ಕಡೆ ಹೆಂಗಸರ ಗುಂಪಿನಲ್ಲಿ ನನ್ನವ್ವನೂ ತಮ್ಮನನ್ನು ಬಗಲಲ್ಲಿ ಹೊತ್ತುಕೊಂಡು ನೋಡಲು ಬಂದಿದ್ದು ನನಗೆ ಖುಷಿ ಕೊಟ್ಟಿತು. ಎರಡು ರೂಪಾಯಿ ಕೊಡುತ್ತಿರುವುದು ಕಂಡು ನಾನು ಹಿಗ್ಗಿದೆ.

ಸರ್ಕಸ್ಸು ನೋಡಿ ಮನೆಗೆ ಬಂದಾಗ ಹತ್ತು ಗಂಟೆಯಾಗಿತ್ತು. ಅಪ್ಪನಾಗಲೇ ತನ್ನ ಗೌಂಡಿ ಕೆಲಸಕ್ಕೆ ಹೋಗಿದ್ದಾತ ಎಣ್ಣೆ ಹೊಡೆದು ಜೋರಾಗಿ ಬಂದಿದ್ದ. ಸರ್ಕಸ್ಸನ್ನು ಅರ್ಧಂಬರ್ಧ ನೋಡಿ ಜೋಲಿಹೊಡೆಯುತ್ತಾ ಮನೆಗೆ ಬಂದು ಊಟಮಾಡದೆ ಮಲಗಿಕೊಂಡಿದ್ದ. ನಮಗೂ ಕಣ್ಣುಗಳಲ್ಲಿ ನಿದ್ದೆ ತೂಗುತ್ತಿತ್ತು. ಅಪ್ಪನನ್ನು ಊಟಕ್ಕೆ ಎಬ್ಬಿಸಿ ಅವ್ವನೊಂದಿಗೆ ಪುಟ್ಟ ತಮ್ಮ ಎಲ್ಲರೂ ಊಟ ಮಾಡಿ ಹಾಸಿಕೊಂಡು ಮಲಗುವಾಗ ನಾನು “ಯವ್ವಬೇ ಆ ಕಾಜನ ಚಡ್ಡಿ ಒಳಗಿಂದ ತತ್ತಿ ಹ್ಯಾಂಗ ಬಂತು ಅನ್ನೋದು ಗೊತ್ತಾಗ್ಲಿಲ್ಲ ನನಗ… ನಿನಗ ಗೊತ್ತಾತೇನಬೇ?…” ಎಂದು ಅವ್ವನನ್ನು ಕೇಳಿದೆ. “ಅಯ್ಯಾ ಅವ್ರು ಆ ರೀತಿ ಕಣ್ಕಟ್ಟು ಮಾಡಿರ್ತಾರಪಾ, ಹಂಗಾಗಿ ಆಟ ನೋಡಾರಿಗೆ ಯಾರ್ಗೂ ಗೊತ್ತಾಗದಿಲ್ಲ….” ಎಂದು ಅವ್ವ ಹೇಳುತ್ತಿದ್ದಂತೆಯೇ ಅಲ್ಲೇ ಫುಲ್ ಟೈಟಾಗಿ ಮಲಗಿದ್ದ ಅಪ್ಪನಿಗೆ ಕೇಳಿಸಿ “ಲೇ ನಿಮೌವರ್ ನೋಡಿ ಬಂದೀರಿಲ್ಲ… ದೊಡ್ಡ ಶ್ಯಾಣ್ಯಾರಾಗ್ಬಾಡ್ರೀ? ಸುಮ್ ಬೀಳ್ತೀರಾ, ಇಲ್ಲಾ ಎಲುಬು ಮುರೀಬಕಾ…” ಎನ್ನುತ್ತಾ ಮಿಸುಕಾಡಿದ. ಇನ್ನೊಂದು ಮಾತು ಮಾತನಾಡದೆ ನಾವು ‘ಗಪ್ ಚುಪ್’ ನಿದ್ದೆಗೆ ಜಾರಿದೆವು.

ಮರುದಿನ ಮುಂಜಾನೆ, ಚುಮುಚುಮು ಚಳಿಯಿಂದ ರಕ್ಷಣೆ ಎಂಬಂತೆ ಜೋಡು ಕೌದಿಯ ಚಕ್ರವ್ಯೂಹವನ್ನು ಒಂದು ಚಿಕ್ಕ ಇರುವೆ ಕೂಡ ಒಳ ನುಗ್ಗದಂತೆ ರಚಿಸಿಕೊಂಡು ಮಲಗಿದ್ದೆ. ನಮ್ಮ ಮನೆ ಹಿಂದಿದ್ದ ತಿಪ್ಪೆಯ ಮೇಲೆ ನಿಂತು ರಾಜಮ್ಮನ ಕೋಳಿ ಪುರುಸೊತ್ತಿಲ್ಲದೆ ಕೂಗತೊಡಗಿದ್ದುದು ಆ ಚಕ್ರವ್ಯೂಹ ಭೇದಿಸಿದಂತೆ ಕಿವಿ ಹೊಕ್ಕಿತ್ತು. ಎಚ್ಚರವಾದರೂ ಆ ಚಳಿಯಿಂದ ತಪ್ಪಿಸಿಕೊಳ್ಳಲು ಕಪ್ಪೆ ಆಕಾರದಲ್ಲಿ ದುಂಡಗೆ ಮುದುಡಿಕೊಂಡು ಮಲಗಿದ್ದ ನನಗೆ ಚಕ್ಕನೆ ನೆನಪಾದದ್ದು, ಗಿರಿಯಪ್ಪ ಮಾಸ್ತರರು ಮನೆಗೆಲಸವೆಂದು ಕೊಟ್ಟ ಆ ಎಂಟು ಲೆಕ್ಕಗಳು! ಕೂಡಿಸುವ, ಕಳೆಯುವ, ಗುಣಾಕಾರ, ಭಾಗಾಕಾರ ಈ ನಾಲ್ಕು ತಳಿಯ ಎರಡೆರೆಡೆಂಬಂತೆ ಎಂಟು ಲೆಕ್ಕಗಳನ್ನು ಮನೆಗೆಲಸವೆಂದು, ಅವುಗಳಿಗೆ ಉತ್ತರ ಮಾಡಿಕೊಂಡು ಬರಲು ಹೇಳಿದ್ದು, ಅಲ್ಲದೆ ಅವುಗಳಿಗೆ ‘ಸರಿಯಾದ ಉತ್ತರ ಯಾವನು ಬರಕಂಡು ಬರೂದಿಲ್ಲವೋ ಅವನ ಮೈ ಚರ್ಮ ಸುಲೀತೀನೆಂದು’ ಗುಡುಗಿದ್ದರು. ಅಷ್ಟೇ ಅಲ್ಲ ‘ಸರಿ ಉತ್ತರ ಬರೆದವರು ಇನ್ನೊಮ್ಮೆ ಬ್ಲ್ಯಾಕ್ ಬೋರ್ಡ್ ಮೇಲೆ ಬರೆದು ತೋರಿಸಬೇಕೆಂದು’ ಕಟ್ಟಾಜ್ಞೆ ಹೊರಡಿಸಿದ್ದರು ಕೂಡ.

ಆ ಎಂಟು ಲೆಕ್ಕಗಳು ಒಮ್ಮೆಲೆ ನನ್ನ ಮೇಲೆ ಎಂಟೂ ದಿಕ್ಕುಗಳಿಂದ ದಾಳಿಮಾಡಿದವೆಂಬಂತೆ ಕೌದಿಯ ಒಳಗಡೆಯೇ ಬೆಚ್ಚಿಬಿದ್ದಿದ್ದೆ. ಅವುಗಳ ದಾಳಿಯಿಂದ ದಿಕ್ತಪ್ಪಿದ ನಾನು ಫಕ್ಕನೆ ಕಣ್ಣು ತೆರೆದಾಗ ಸುತ್ತಲೂ ಕೌದಿಯೆಂಬುವ ಚಕ್ರವ್ಯೂಹದೊಳಗಿನ ಕತ್ತಲು ನನ್ನನ್ನು ತಬ್ಬಿಕೊಂಡಿತ್ತು. ದಿಗಿಲುಗೊಂಡವನಂತಾಗಿ ತಲೆ ದಿಂಬಿಗೂ ತಲೆಗೂ ಮಧ್ಯದಲ್ಲಿ ಬಿಗಿಗೊಳಿಸಿದ್ದ ಕೌದಿಗಳನ್ನು ಕಿತ್ತೊಗೆದು ಹೊರಜಗತ್ತನ್ನು ನೋಡಿದಾಗ ಕಿಟಕಿಯಿಂದ ಮನೆಯೊಳಕ್ಕೆ ಸೂರ್ಯನ ಕಿರಣಗಳು ಎದುರಿಗಿದ್ದ ಗೋಡೆಗೆ ಲಗ್ಗೆ ಇಟ್ಟಿದ್ದವು. ಆ ಗೋಡೆಯ ಗೂಟಕ್ಕೆ ನೇತಾಕಿದ್ದ ಪಾಟೀಚೀಲ ಆ ಎಳೆಬಿಸಿಲಿಗೆ ಸಣ್ಣಗೆ ಚಳಿ ಕಾಸುತ್ತಿತ್ತು. ಸಟ್ಟನೆ ಎದ್ದುಹೋಗಿ ಗೂಟಕ್ಕಿದ್ದ ಪಾಟೀಚೀಲ ಕೆಳಗಿಳಿಸಿಕೊಂಡು ನೋಟ್ ಬುಕ್ಕಿನಲ್ಲಿ ಉತ್ತರಗಳಿಲ್ಲದೆ ಅನಾಥವಾಗಿದ್ದ ಲೆಕ್ಕಗಳ ನೋಡಿದೆ. ಕೂಡಿಸುವ ಮತ್ತು ಕಳೆಯುವ ತಳಿಗಳ ಆ ಎರಡೆರೆಡು ಲೆಕ್ಕಗಳಿಗೆ ಚಕ್ಕನೆ ಉತ್ತರ ಬರೆದೆ. ಆದರೆ ದಶಸಾವಿರ ಸ್ಥಾನದಲ್ಲಿದ್ದ ಮೊತ್ತಕ್ಕೆ ನೂರರ ಸ್ಥಾನದಲ್ಲಿದ್ದ ಮೊತ್ತದಿಂದ ಗುಣಿಸಬೇಕಾದ ಎರಡು ಗುಣಾಕಾರ ಲೆಕ್ಕಗಳು ಮತ್ತು ಲಕ್ಷಸ್ಥಾನದಲ್ಲಿದ್ದ ಮೊತ್ತವನ್ನು ಹತ್ತರ ಸ್ಥಾನದಲ್ಲಿದ್ದ ಮೊತ್ತದಿಂದ ಭಾಗಿಸುವ ಎರಡು ಲೆಕ್ಕಗಳ ಉತ್ತರಗಳು ನನ್ನ ತಲೆಗೆ ಗಿರಿಗಿಟ್ಲೆ ಆಡಿಸತೊಡಗಿದ್ದವು. ಯಾವುದೋ ಅಂಕಿಗಳನ್ನು ಬರೆಯುವದು, ಗಜಿಬಿಜಿಯಾಗಿ ಪೆನ್ನಿನಿಂದ ಗೀಚ್ಹಾಕಿ ಆ ಅಂಕಿಗಳು ಕಾಣದಂತೆ ಪೆನ್ನಿನ ಮಸಿಯಲ್ಲಿ ಮತ್ತೆ ಮುಚ್ಚಿಬಿಡುವುದು ಮಾಡಿದೆ. ಹೀಗೆಯೇ ಎರಡು ಮೂರು ಪುಟಗಳಲ್ಲಿ ನೀಲಿ ಮಸಿಯಿಂದ ಗೀಚಾಡಿದೆ. ಏನು ಮಾಡಿದರೂ ಆ ಎರಡು ತಳಿಯ ಲೆಕ್ಕಗಳಿಗೆ ಸರಿ ಉತ್ತರ ನನ್ನ ತಲೆಗೆ ಶೋಧಿಸಲಾಗಲಿಲ್ಲ. ಕೊನೆಗೆ ಆ ಲೆಕ್ಕಗಳಿಗೆ ನಾನು ಸೋಲೊಪ್ಪಿಕೊಂಡುಬಿಟ್ಟಿದ್ದೆ. ಆ ಸೋಲಿನ ಉಡುಗೊರೆಯಾಗಿ ಇಂದು ಗಿರಿಯಪ್ಪ ಮಾಸ್ತರರ ಬೆತ್ತ ನನ್ನ ಮೈ ಮೇಲೆ ನಾಟ್ಯ ಮಾಡುವುದನ್ನು ತಪ್ಪಿಸಿಕೊಳ್ಳಲು ಅನ್ಯ ದಾರಿಯ ಹುಡುಕಲು ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟೆ.

ಚಡ್ಡಿಯ ಒಳಗಿಂದಲೂ ಒಂದು, ಎರಡುಗಳು ಒತ್ತಿ ಹೊರಬರಲೆತ್ನಿಸುತ್ತಿದ್ದುದ್ದರಿಂದ, ಅವುಗಳ ಒತ್ತಡದಿಂದ ಮೊದಲು ತಪ್ಪಿಸಿಕೊಳ್ಳಬೇಕೆಂದು ಅವಸರಿಸಿ ಪಾಟೀಚೀಲದಲ್ಲಿ ನೋಟ್ಬುಕ್ಕು ಮಡಚಿಟ್ಟು ಮತ್ತೆ ಗೂಟಕ್ಕೆ ಹಾಕಿ ಹೊರಬಂದಾಗ ಸೂರ್ಯನಾಗಲೇ ಆಗಸದಲ್ಲಿ ನಲವತ್ತು ಡಿಗ್ರಿ ಕೋನದ ಬಿಂದು ತೋರಿಸುವವನಂತೆ ಏರಿದ್ದ. ನಾನು ಚರಿಗೆ ತುಂಬಿಕೊಂಡು ಅವೇ ಲೆಕ್ಕದ ಗುಂಗಿನಲ್ಲಿ ಹೊಲದಕಡೆ ಅವಸರದ ಹೆಜ್ಜೆ ಹಾಕಿದ್ದೆ. ಇವತ್ತು ಗಿರೆಪ್ಪ ಮಾಸ್ತರರ ಬೆತ್ತದ ಬಾಸುಂಡೆಗಳು ನನ್ನ ಮೈಮೇಲೇಳದಂತೆ ಬಚಾವ್ ಆಗಲು ಶಾಲೆ ತಪ್ಪಿಸುವುದೊಂದೇ ದಾರಿ ಎಂದು ನಿಶ್ಚಯಿಸಿಬಿಟ್ಟಿ. ಶಾಲೆ ತಪ್ಪಿಸಿದರೆ ಅಪ್ಪ ಸುಮ್ಮನೆ ಬಿಡುತ್ತಾನೆಯೇ? ಎಂದು ಯೋಚಿಸುತ್ತಾ ಭಯಗೊಂಡಿದ್ದೆ. ಆಗಲೇ ಸುರೇಪಾನ ಹೊಲದಲ್ಲಿ ಬಂದು ನಿಂತು ಕೆಳಕ್ಕೆ ಚರಿಗೆ ಇಟ್ಟು ಎರಡನ್ನೂ ಹೊರ ಹಾಕಿ ನೀರು ಮುಟ್ಟಿಸಿ ಎದ್ದು ಮನೆಗೆ ಬಂದಿದ್ದೆ.

ಅಪ್ಪನಾಗಲೆ ಊಟ ಮಾಡುತ್ತಿದ್ದ. ನನ್ನನ್ನು ನೋಡಿದಾತ “ಯಾಕಪಾ ಇನ್ನೂ ಹೊತ್ತಾಗಿಲ್ಲನೂ ಸಾಲಿಗೆ ಹೋಗಾಕಾ…?” ತುತ್ತು ಬಾಯಾಡಿಸುತ್ತಾ ಕೇಳಿದ್ದ. “ಹ್ಮೂ ಹೊಕ್ಕೀನೀಗ” ಎಂದು ಆತನ ಹೆದರಿಕೆಯಾಗಿ ಒಲ್ಲದ ಮನಸ್ಸಿನಿಂದಲೇ ಅಂಗಿ ಬಿಚ್ಚತೊಡಗಿದೆ. ಒಂದು ಒಲೆಯ ಮೇಲೆ ಕಾಯಿಸಲಿಟ್ಟ ನೀರನ್ನು ಕೆಳಕ್ಕಿಳಿಸಿ ಒಂದಿಷ್ಟು ತಣ್ಣೀರು ಬೆರಕೆ ಹಾಕಿ ಕೊಟ್ಟ ಅವ್ವ ಒಲೆಯಲ್ಲಿದ್ದ ಕೆಂಡದ ತುಂಡೊಂದನ್ನು ಹೊರ ಎಳೆದು ನೀರು ಚಿಮುಕಿಸಿ ನನ್ನ ಕೈಗೆ ಕೊಟ್ಟಾಗ ಕಡ್ರ್ ಕುಡ್ರ್ ತಿಂದು ಸಣ್ಣಮಾಡಿ ಬಾಯಿಗೊಂದು ಬೆರಳ್ಹಾಕಿ ಗಸಗಸ ಹಲ್ಲು ತಿಕ್ಕುತ್ತಿರುವಾಗ ಅಪ್ಪ ಊಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದ. ನಾನು ಸಾಲೆ ತಪ್ಪಿಸಲು ಅಪ್ಪ ಕೆಲಸಕ್ಕೆ ಹೋದರೆ ಸುಲಭವೆಂದುಕೊಂಡು, ಅದನ್ನು ಖಾತ್ರಿಪಡಿಸಿಕೊಳ್ಳಲು ಕೇಳಲೋ ಬೇಡವೋ ಎಂಬಂತೆ ನಾಜೂಕಾಗಿ ನುಲಿಯುತ್ತ “ಯಪ್ಪ ಕೆಲ್ಸಕ್ಕ ಹೊಕ್ಕಿಯನೊ?” ಎಂದು ನಾನು ತಡವರಿಸುತ್ತಾ ಕೇಳಿದ್ದೆ. ಆತ ಅನುಮಾನದ ದೃಷ್ಟಿ ನನ್ನಮೇಲಿಟ್ಟು “ಹೊಕ್ಕೀನಿ ನೀನು ಬರ್ತೀಯನು” ಅಂದ. ನಾನು ಹಿಗ್ಗಿ ಹೋಗಿ “ಹ್ಞೂಂ” ಎಂಬಂತೆ ಗೋಣ್ಹಾಕಿ “ಬರ್ತಿನೋ… ಇವತ್ತೊಂದಿನ ನೀವು ಕೆಲ್ಸಾ ಮಾಡಾದು ನಾನು ನೋಡ್ತೀನಿ…” ನಾನು ಎನ್ನುತ್ತಿದ್ದಂತೆ, “ಲೇ ಮಂಗ್ಯಾ ಮೊದ್ಲ ಸಾಲಿ ಕಲೀಲೇ ಮುಂದೈತಿ ನೋಡಾದು ಮಾಡಾದು…” ಎಂದು ಜಬರಿಸಿಬಿಟ್ಟು ಅವ್ವ ಕಟ್ಟಿ ರೆಡಿಮಾಡಿಟ್ಟಿದ್ದ ಬುತ್ತಿಯನ್ನು, ಸಿಮೆಂಟ್ ಕೆಲಸದ ತ್ಯಾಪಿ, ಸುತ್ತಿಗೆ, ಗುಂಡು, ಅಳತೆ ಟೇಪು ಇರುವ ಕೈಚೀಲ ತೆಗೆದುಕೊಂಡು ಹಿರೆಸಿಂದೋಗಿಗೆ ಮನೆ ಕಟ್ಟುವ ಕೆಲಸಕ್ಕೆ ಅಪ್ಪ ಹೋದಮೇಲೆ, ನಾನು ಒಂದಿಷ್ಟು ಹಿಡಿತದಿಂದ ಸಡಿಲವಾದಂತೆನಿಸಿ ಬಚ್ಚಲಿನ ಕಡೆ ತಿರುಗಿದೆ.

ಜಳಕ ಮಾಡಿ ಟವೆಲ್ ಸುತ್ತಿಕೊಂಡು, ಮನೆಯ ಮೂಲೆಯೊಂದರಲ್ಲಿ ಕೂತಿದ್ದ ಟ್ರಂಕಿನ ಮೇಲಿನ ಬಟ್ಟೆ ಗಂಟಿನ ಕಡೆಗೆ ಬಂದಾಗ ಅವ್ವ ಆಗಲೇ ಗಂಟಿನಿಂದ ತೆಗೆದು ಅದರ ಮೇಲಿರಿಸಿದ್ದ ಕರಿನೀಲಿ ಚಡ್ಡಿ ಮತ್ತು ತಿಳಿನೀಲಿ ಬಣ್ಣದ ಅಂಗಿ ತೊಟ್ಟುಕೊಳ್ಳದೆ ನಾನು ಪರ್ಯಾಯವೆಂಬಂತೆ ಮೊಹರಂ ಹಬ್ಬಕ್ಕೆ ಮಾವನೂರಿಗೆ ಹೋದಾಗ ಹೊಲಿದು ಕೊಟ್ಟಿದ್ದ ಕೆಂಪು ಅಂಗಿ ಮತ್ತು ಮಹೇಶನಿಗೆ ಸಣ್ಣದಾಗುತ್ತ ಅಂತ ಅವರ ಅವ್ವ ನನಗೆ ವಾರದ ಹಿಂದೆ ಹಾಕಿಕೊಳ್ಳಲು ಕೊಟ್ಟಿದ್ದ ಕಟ್ಟಿಗೆ ಬಣ್ಣದ ಚಡ್ಡಿ ತೊಟ್ಟುಕೊಂಡು ಹೊರಬಂದಿದ್ದೆ. ಕಟ್ಟೆಗೆ ಕುಂತು ತಲೆಬಾಚಿಕೊಳ್ಳುತ್ತಿದ್ದ ಅವ್ವ ನನ್ನ ಉಟ್ಟುಕೊಂಡ ಬಟ್ಟೆ ಕಂಡು “ಯಾಕಪಾ ಸಾಲಿ ಬಟ್ಟಿ ಹಾಕ್ಕೆಳ್ಳದು ಬುಟ್ಟು ಇನ್ಯಾವ ಮೈಯಾಗ ಸಿಗಿಸಿಕೆಂಡು ನಿಂತೀಯಲ್ಲ ಮಾಸ್ತರ್ರು ಹೊಡೆಯಲ್ಲನು…. ಇವ್ನ ಹಾಕ್ಯಂಡೋದ್ರ” ಎಂದು ಕೇಳಿದಳು. ನಾನು ಶಾಲೆಯ ದಿನ ಶಾಲೆಯ ಬಟ್ಟೆ ತೊಟ್ಟುಕೊಳ್ಳದೆ ಬೇರೆ ಬಟ್ಟೆ ತೊಟ್ಟುಕೊಂಡಿದ್ದು ಅವ್ವನಿಗೆ ನಾನು ಶಾಲೆಗೆ ಎಳ್ಳು ನೀರು ಬಿಡಲು ಮುಂದಾಗಿರುವೆನೆಂದು ಪಕ್ಕಾ ಸೂಚನೆ ನೀಡುತ್ತಿದ್ದವು. ನಾನು ಅದೇ ರಾಗವನ್ನು ಎಳೆದೇಬಿಟ್ಟೆ “ಯವ್ವ ಇವತ್ತೊಂದಿನ ನಾನು ಸಾಲಿಗೆ ಹೋಗಲ್ಲೋಗು…” ಎಂದು. “ತಟ್ಟಲ್ಯನು ಒಂದು ಮಕಕ್ಕ… ಸಾಲಿಗೆ ಹೋಗ್ದಾ ಮನ್ಯಾಗ ಗೆಣಸ್ಗರಿತೀಯನು‌..?” ಎಂದು ಸಿಟ್ಟಾಗೆದ್ದಳು. “ಹಂಗಲ್ಲಬೇ ಯವ್ವ….” ಎಂದು ಉದ್ಗಾರವೆತ್ತುತ್ತಿದ್ದಂತೆ “ಹಂಗೂ ಇಲ್ಲ… ಹಿಂಗೂ ಇಲ್ಲ.. ಸರಳ ಸಾಲಿಗೋಗು, ನಿಮ್ಮಪ್ಪನಗೂಡ ಬಡಸ್ಗೊಳ್ಳೊ ಯಾಪಾರ ಮಾಡ್ಬ್ಯಾಡ ತಿಳೀತಿಲ್ಲ..” ಎಂದು ರೇಗಿ ಎಚ್ಚರಿಸಿದಳು. “ಯವ್ವ ಇವತ್ತು ಸಾಲ್ಯಾಗ ಸರು ಹೊಡೀತಾರ” ಎಂದು ಅಳುದ್ವನಿ ತೆಗೆದಿದ್ದೆ. ಕಣ್ಣಲ್ಲಿ ನೀರೂ ತುಂಬಿಕೊಂಡಿದ್ದವು. “ನೀ ಸುಮ್ನಾ ಸಾಲಿಗೆ ಹೋದ್ರ ಅವರ್ಯಾಕ ನಿನ್ನ ಹೊಡಿತಾರ…?” ಎಂದಳು. ನಾನು “ನಿನ್ನೆ ಲೆಕ್ಕ ಮಾಡ್ಕೆಂಡು ಬರ್ರಿ ಅಂತ ಲೆಕ್ಕ ಕೊಟ್ಟಿದ್ರು, ಉತ್ತ್ರ ಬರ್ದಿಲ್ಲ ಹೊಡಿತಾರ” ಅಂತ ದುಃಖಿಸಿ ದುಃಖಿಸಿ ಅಳಲು ಚಾಲೂ ಮಾಡಿದಾಗ, ನನ್ನ ಅಳುವಿಗೆ ಕರಗಿದ ಅವ್ವ ಮೃದುವಾದಳು. “ಮತ್ತ ಸಾಲ್ಯಾಗ ಅವ್ರು ಹೇಳಿದ ಕೆಲ್ಸ ಮಾಡ್ದಿದ್ರೆ ನೀನು ಶ್ಯಾಣ್ಯಾ ಆಗಿ ನೌಕರಿ ತಗಂಡು ನಮ್ಗ ಕೂಳು ಹಾಕಾದು ಯಾವಗಪ?” ಎಂದು ನನ್ನ ಕಣ್ಣಿರು ಒರೆಸುತ್ತಾ ಕೇಳಿದ್ದಳು. “ಇಲ್ಲಬೇ ಯವ್ವ, ಅವ್ರು ಹೇಳಿದ ಕೆಲ್ಸಾ ಮಾಡ್ತಿದ್ದ್ಯ, ಸರ್ಕಸ್ಸು ಆಡೋರ್ ನಿನ್ನೆ ಬಂದು ತಪ್ಪಿಸಿ ಬಿಟ್ರು… ಈಗ ಎಂಟರಾಗ ನಾಕು ಬಂದಾವು ಇನ್ನೂ ನಾಕು ಬರವಲ್ಲವು” ಎಂದು ಆ ಲೆಕ್ಕದ ಮೇಲೂ, ಮಾಸ್ತರರ ಬಿಗಿ ಕಾಯ್ದೆಗಳ ಮೇಲೂ, ದಳದಳ ಇಳಿಯುತ್ತಿದ್ದ ಸಿಂಬಳ ಕುಡಿಯಲು ಸುಳಿ ಸುಳಿದು ಬರುತ್ತಿದ್ದ ನೊಣಗಳಿಗೆ ಕೈಬೀಸಿ ಓಡಿಸುತ್ತಾ ಒಂದಿಷ್ಟು ಸಿಟ್ಟು ಉಕ್ಕಿ ಬಂತು. ಅವ್ವ ಕಣ್ಣೀರು ಮತ್ತು ಮೂಗಿನಿಂದ ಇಳಿಯುತ್ತಿದ್ದ ಸಿಂಬಳ ತನ್ನ ಸೆರಗಿನಿಂದ ಒರೆಸಿದ್ದಳು. ಕೊಬ್ಬರಿ ಎಣ್ಣಿ ಕೈಯಲ್ಲಿ ಹಾಕಿಕೊಂಡು ನನ್ನ ತಲೆಗೆ ಹಚ್ಚಿ ಬಾಚಿ ಕರಾಪು ತೆಗೆದಳು. ತಮ್ಮ ಇಸ್ಸಿ ಕುಂತು ಬಂದು ಅಂಗಿ ಎತ್ತಿಕೊಂಡು ಮುಂದೆ ನಿಂತಾಗ. ಅವನ ಮುಕುಳಿ ತೊಳೆಯಲು ನೀರು ತರಲು ಅವ್ವ ಒಳಗೆ ಹೋದಳು. ನಾನು ಒಳಬಂದು ತಾಟಿಗೆ ಪಲ್ಯ ಹಾಕಿಕೊಂಡು ರೊಟ್ಟಿ ಕೈಯಲ್ಲಿ ಹಿಡಿದು ಒಳಬಾಗಿಲಲ್ಲಿ ಕುಂತು ಉಣ್ಣಲು ಶುರುಮಾಡಿದ್ದೆ.

ಮನೆ ಹಿಂದಿನ ಬೆಟಗೇರಿ ಮಾರುತೆಪ್ಪನ ಹೊಲದಲ್ಲಿ ಶುರುವಿದ್ದ ಪಂಪ್ ಸೆಟ್‌ಗೆ ಅವ್ವ ಬಟ್ಟೆ ಒಗೆಯಲು ಹೋದಳು. ಇನ್ನೇನು ಕೈಯಲ್ಲಿದ್ದ ಎರಡೂ ತುತ್ತು ರೊಟ್ಟಿ ತುಣುಕು ತಿಂದು ಮುಗಿಸಿ ತಾಟಿಗೆ ಕೈತೊಳೆದು ಮೇಲೇಳಬೇಕು ಎನ್ನುವಷ್ಟರಲ್ಲಿದ್ದೆ. ನಮ್ಮ ಓಣಿಯ ನಾಯಿಯೊಂದು ಒಮ್ಮೆಲೆ, “ಅಡ್ರ್… ಅಡ್ರಡ್ರ್… ಬೌ… ಬೌಬೌ…” ಎಂದು ಬೊಗಳತೊಡಗಿತು. ಹಿಂದೆಯೇ “ಹಚ್ಚಾ.. ಹಚ್ಚಾ..” ಎಂದು ಪ್ರತಿಕ್ರಿಯೆ ಕೇಳಿಬರುತ್ತಿತ್ತು. ಆ ನಾಯಿಯ ಬೊಗಳುವಿಕೆಯ ಹಿನ್ನೆಲೆಯಲ್ಲಿಯೇ ನಮ್ಮ ಮನೆಯ ಇದುರಿಗಿದ್ದ, ಅಕ್ಕಪಕ್ಕದ ಎಂಟು ಮನೆಗಳ ದಾಟಿಕೊಂಡು ಮಲಗಿದ್ದ ಇಕ್ಕಟ್ಟಾದ ಬೀದಿಯ ಆ ಕಡೆ ತುದಿಯಲ್ಲಿ ಪ್ರತ್ಯಕ್ಷವಾದ ಎರಡು ಪ್ಯಾಂಟ್ ತೊಟ್ಟ ಆನೆಕಾಲುಗಳಂತವು ಮತ್ತು ಅವುಗಳ ಹಿಂದೆ ಬಾಡಿಗಾರ್ಡುಗಳಂತೆ ನಾಲ್ಕು ಚಡ್ಡಿ ತೊಟ್ಟುಕೊಂಡ ಎರೆಡೆರಡೆಂಬಂತೆ ಎಂಟು ಕುದುರೆ ಕಾಲುಗಳಂತವುಗಳು ಇತ್ತ ಬರುತ್ತಿದ್ದವು. ಆ ಕಾಲುಗಳ ವೇಗದಲ್ಲಿಯೇ ನೆಲಕ್ಕೆ ಕುಟ್ಟುತ್ತಾ ಬೆತ್ತವು ಒಂದು ಬರುತ್ತಿದ್ದುದನ್ನು ಕೆಳಗಿನಿಂದ ಮೇಲಕ್ಕೆ ಕಣ್ಣಾಡಿಸಿದಾಗ ನಾನು ಅಡಿಯಿಂದ ಮುಡಿಯವರೆಗೂ ನಡುಗುತ್ತಾ ಕ್ಷಣದಲ್ಲಿಯೇ ಬೆವೆತುಬಿಟ್ಟೆ. ಹೆದರಿ ಎರಡು ಹನಿ ಉಚ್ಚೆ ಕೂಡ ನನ್ನ ಚಡ್ಡಿಯಲ್ಲಿ ಸೆಲೆಹೊಡೆದಿದ್ದವು. “ಅಯ್ಯಯ್ಯಪ್ಪಾ ಹೆಡ್ಮಾಸ್ಟ್ರ ಶಿವಲಿಂಗಪ್ಸ್‌ರ್” ಎಂದುಕೊಂಡವನೇ ಮನೆಯಿಂದ ಎಸ್ಕೇಪ್ ಆಗಲು ಊಟ ಬಿಟ್ಟು ಮೇಲೆದ್ದು ಕೈತೊಳೆದುಕೊಳ್ಳದೆ ಬೆಕ್ಕಿನಂತೆ ಅವರಿಗೆ ಕಾಣದಂತೆ ಮೆಲ್ಲನೆ ಕಳ್ಳಹೆಜ್ಜೆಯಲ್ಲಿ ಹೊರಬರುವಷ್ಟರಲ್ಲಿ ಒಬ್ಬ ‘ಪಿಳ್ಳೆ ಬಾಡಿಗಾರ್ಡ್’ನ ಕಣ್ಣಿಗೆ ಬಿದ್ದು ಬಿಟ್ಟೆ. ಅವ “ಸೋರ ಇಲ್ಲೊಂದು ಬ್ಯಾಟಿ ತಪ್ಪಿಸ್ಗೊಂಡು ಹೊಂಟೈತ್ರೀ” ಎಂದು ಮಾಸ್ತರರಿಗೆ ನಾನು ಹೊರಬರುತ್ತಿದ್ದಂತೆ ತೋರಿಸಿಬಿಟ್ಟ.

ಕಾಜನ ಚಡ್ಡಿಯೊಳಗಿಂದ ತತ್ತಿ ಕೆಳಕ್ಕಿಳಿದಿತ್ತು. ಸರ್ಕಸ್ಸಿನವನು ಅದು ಕೆಳಕ್ಕೆ ಬಿಳುವದನ್ನು ಕ್ಯಾಚ್ ಹಿಡಿದು ಎಲ್ಲರಿಗೂ ಎತ್ತಿ ತೋರಿಸುತ್ತಾ “ನೋಡ್ರೀ ಈ ಕಾಜ ‘ನಾನು ಕೋಳಿ ಅಲ್ಲ’ ಅಂತ ಸುಳ್ಳು ಹೇಳ್ತಾನ. ಈ ತತ್ತಿ ಎಲ್ಲಿಂದ ಬಂತು ನೀವಾ ಕಣ್ಣಾರೆ ನೋಡಿದ್ರಲ್ಲ…” ಎಂದು ಸರ್ಕಸ್ಸಿನವನು ಅವನ ಕೈಗೆ ಮೆತ್ತಗೆ ತತ್ತಿ ಇಟ್ಟನು. ಎಲ್ಲರೂ ಆಶ್ಚರ್ಯದಿಂದ ಕಾಜನನ್ನು ನೋಡಿ ಬಿದ್ದು ಬಿದ್ದು ಕೊಕ್ಕಾಡಿ ಮತ್ತಷ್ಟು ನಗಲಾರಂಭಿಸಿದರು.

“ಹಿಡ್ಕರೀಲೇ ಅವನ್ನ.. ಎಲ್ಲಿ ಹೊಕ್ರು ಬಿಡಬ್ಯಾಡ್ರಿ… ಇವತ್ತವನ್ನ ಚಟ್ನಿ ಚಟ್ನಿ ಮಾಡಿ ಬಿಡ್ತೀನಿ…” ಎಂದು ಶಿವಲಿಂಗಪ್ಪ ಮಾಸ್ತರ ಗುಡುಗುತ್ತಿದ್ದಂತೆ ನಾನು ಇತ್ತ ಕಡೆಗೆ ಇನ್ನೊಂದು ಬೀದಿಗೆ ಬಿದ್ದು ಓಡತೊಡಗಿದೆ. ನನ್ನನ್ನು ಚಡ್ಡಿಯ ಆ ಎರಡು ಪಿಳ್ಳೆಗಳು ಬೆನ್ನಟ್ಟಿದ್ದವು. ನಾನು ಸಿಕ್ಕರೆ ಇವತ್ತು ಉಳಿಗಾಲವಿಲ್ಲ ಎಂಬಂತೆ ಹಿಂದೆ ಹಿಂದೆ ತಿರುಗಿ ನೋಡುತ್ತಾ, ವೇಗದಲ್ಲಿ ಬೆನ್ನಟ್ಟಿದ್ದ ಪಿಳ್ಳೆಗಳ ಮುಂದೆ ಮುಂದೆ ನಾನು ಮತ್ತಷ್ಟು ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಓಡುತ್ತಾ ಮುಂದಿನ ಓಣಿ ದಾಟಿ ಕೋಳಿ ರಾಮಪ್ಪಜ್ಜನ ಸೂರೆಪಾನ (ಸೂರ್ಯಕಾಂತಿ) ಹೊಲ ದಾಟಿ ಬೋಚನಹಳ್ಳಿ ಹನುಮಪ್ಪಜ್ಜನ ಆಳೆತ್ತರದ ಮೆಕ್ಕೆಜೋಳದಲ್ಲಿ ಹೊಕ್ಕುಬಿಟ್ಟೆ. ಆ ಎರಡು ಪಿಳ್ಳೆಗಳೂ ಹೊಕ್ಕು ಹುಡುಕಿ ಹುಡುಕಿ ಸಾಕಾಗಿ ಹೊರಬಂದು ಏದುಸಿರು ಹೊಡೆಯುತಿದ್ದವು.

ನಮ್ಮ ಮನೆಯ ಮುಂದಿನ ಮನೆಯ ನನ್ನ ದೋಸ್ತ ಪಕಾಶ, ಒಂದು ವಾರದಿಂದ ಶಾಲೆಯ ಕಡೆಗೆ ಮುಖಮಾಡದೆ ಅವರ ಅಪ್ಪ ‘ಬ್ಯಾಡಲೇ ತಮ್ಮ ಸಾಲಿಗೆ ಹೋಗು’ ಎಂದರೂ ಆತನ ಮಾತಿಗೆ ಸೊಪ್ಪು ಹಾಕದೆ ಜೊತೆಗೆ ಕುರಿ ಕಾಯಲು ಹೋಗುತ್ತಿದ್ದರಿಂದ, ಅವನ ಹಾಜರಿ ಇಲ್ಲದೆ ಸಿಟ್ಟಿಗೆದ್ದಿದ್ದ ಶಿವಲಿಂಗಪ್ಪ ಮಾಸ್ತರರು ಅವನನ್ನು ಹೊತ್ತೊಯ್ಯಲೆಂದು ಬಹಳ ರಾವಾಗಿ ಬಂದಿದ್ದರು. ಅಂತಹುದರಲ್ಲಿ ನಾನು ಗಿರೆಪ್ಪ ಮಾಸ್ತರರ ಬೆತ್ತದಿಂದ ಪಾರಾಗಲು ಶಾಲೆ ತಪ್ಪಿಸಬೇಕೆಂದುಕೊಂಡವನಿಗೆ, ಹೆಬ್ಬುಲಿ ಬೆತ್ತದ ಶಿವಲಿಂಗಪ್ಪ ಮಾಸ್ತರರ ಕಣ್ಣಿಗೆ ಬೀಳಬೇಕೆ!? ಅವರು ಪಕಾಶನವರ ಮನೆಗೆ ಬಂದು ನೋಡಿದರೆ ಅವರ ಮನೆಯ ಬಾಗಿಲಿಗೆ ಬೀಗ ಜಡಿದು ಆಗಲೇ ಕೂಲಿ ಕೆಲಸಕ್ಕೆ ಹೋಗಿದ್ದರು. ಪಕಾಶ ಅವರ ಅಪ್ಪನ ಹಿಂದೆ ಕುರಿಗೆ ಹೋಗಿದ್ದ. ಮತ್ತೆ ಮನೆ ಸೇರುವುದು ಕತ್ತಲಾದ ಮೇಲೆಯೇ. ಇದರಿಂದ ಇಂಗು ತಿಂದ ಮಂಗನಂತಾದ ಶಿವಲಿಂಗಪ್ಪ ಮಾಸ್ತರರು ಮತ್ತಷ್ಟು ಕೋಪಗೊಂಡಿದ್ದರು. ಅಂತಹುದರಲ್ಲಿ ಕಣ್ಣಿಗೆ ಮಣ್ಣುಗ್ಗಿದವನಂತೆ ಇತ್ತಕಡೆ ‘ಠಕ್ಕಚ್ಚಿ’ ಓಟ ಕಿತ್ತಿದ್ದ ನಾನು ಅವರ ಹಸಿದ ಬೆತ್ತಕ್ಕೆ ಪರ್ಯಾಯ ಬೇಟೆಯಾಗಿದ್ದೆ.

ಶಿವಲಿಂಗಪ್ಪ ಮಾಸ್ತರರು ತಮ್ಮ ಹಿಂದಿದ್ದ ಆ ಎರಡು ಪಿಳ್ಳೆ ಬಾಡಿಗಾರ್ಡುಗಳನ್ನು ಕಟ್ಟಿಕೊಂಡು ಬಲಗೈಯಲ್ಲಿ ಬೆತ್ತ ಹಿಡಿದು ಬರುತ್ತಿರುವಾಗ. ಮುಂದಿನ ಓಣಿ ದಾಟಿ ಮುಂದೆ ಬಂದಾಗ ಸೂರೆಪಾನದ ಹೊಲದ ಆಚೆಯಿಂದ “ಲೇ ಹೊರಗ ಬತ್ತೀಯಾ ಇಲ್ಲ ಶಿವಲಿಂಗಪ್ಪ ಸೊರನ್ನ ಕಕ್ಕಂಡು ಬರ್ಬೇಕಾ…?” ಎಂಬ ಧ್ವನಿ ಸೂರೆಪಾನ ಹೊಲದ ಆ ಕಡೆ ಬದುವಿನಿಂದ ಬಂದು ಕಿವಿಗೆ ಬಿದ್ದಿದ್ದೇ ತಡ ಅತ್ತ ನೋಟ ಹರಿಸಿದ ಶಿವಲಿಂಗಪ್ಪ ಮಾಸ್ತರರಿಗೆ ವಾತಾವರಣ ಏನೆಂಬುವುದು ಗೊತ್ತಾಗಿತ್ತು. ಒಳ್ಳೆ ರೋಷದಿಂದ ಆ ಎರಡು ಪಿಳ್ಳೆಗಳನ್ನು ಹಿಂದೆ ಹಾಕಿಕೊಂಡು ಮೆಕ್ಕೆಜೋಳದ ಹೊಲದತ್ತ ಬಂದಿದ್ದರು. ಭೀಮನಂತೆ ರೋಷದಿಂದ ಕೊತಕೊತನೆ ಕುದಿಯುತ್ತಿದ್ದ ಶಿವಲಿಂಗಪ್ಪ ಮಾಸ್ತರರು ಮೆಕ್ಕೆಜೋಳದ ಹೊಲದ ಬದುವಿನಲ್ಲಿ ನಿಂತು “ಲೇ ನೀನಾಗೀ ಹೊರಗ ಬರ್ತೀಯಾ ಇಲ್ಲಾ! ಇಡೀ ಸಾಲಿ ಹುಡುಗ್ರನ್ನ ಕರ್ಕಂಡು ಬಂದು ಒಳಗ ಹೊಗಿಸಿ ಹಿಡಿದು ತರಿಸಿ ಕೈಕಾಲು ಕಟ್ಟಿ ಹೊತ್ಗಂಡು ಹೋಗ್ಲಾ…?” ಎಂದು ಘರ್ಜಿಸಿದರು. ಆ ಘರ್ಜನೆಯನ್ನು ಕೇಳಿ ವೈಶಂಪಾಯನ ಸರೋವರದಲ್ಲಿ ಅವಿತು ಕುಳಿತು ಬೆವೆತು ಹೋಗಿದ್ದ ದುರ್ಯೋಧನನಂತೆ ನಾನೂ ಅಂದು ನೀರು ನೀರು ಆಗಿ ಹೋಗಿದ್ದೆ. ಆದರೆ ದುರ್ಯೋಧನನಂತೆ ಧೈರ್ಯದಿಂದ ಎದ್ದು ಹೊರ ಬರುವ ಗೋಜಿಗೆ ಹೋಗಲಿಲ್ಲ. “ಲೇ ಇನ್ನೊಮ್ಮೆ ಒಳಹೊಕ್ಕು ನೋಡಿ ಹಿಡ್ಕಂಡ ಬರ್ರಿಲೇ ಅವನ್ನ ಇವತ್ತು ಉಸುಲು.. ಉಸುಲ್ ತಗದ ಬಿಡ್ತೀನಿ” ಎಂದು ಶಿವಲಿಂಗಪ್ಪ ಮಾಸ್ತರರು ಸಿಡಿಲ್ದನಿಯಾದರು.

ನಾಲ್ಕೂ ಪಿಳ್ಳೆಗಳು ಮೆಕ್ಕೆಜೋಳದೊಳಕ್ಕೆ ದಾಳಿ ಮಾಡಿದ್ದರು. ನನ್ನನ್ನು ಎಲ್ಲಿ ಹಿಡಿದು ಶಿವಲಿಂಗಪ್ಪ ಮಾಸ್ತರರಿಗೆ ಎಡೆಯಾಗಿಸಿಬಿಡುತ್ತಾರೋ ಎಂಬ ಭಯದಲ್ಲೇ ಮತ್ತಷ್ಟು ಒಳ ಹೊಕ್ಕಿಕೊಂಡು ಕೊನೆಗೆ, ಆ ಹೊಲದ ಆ ಕಡೆ ಮೇರೆ ದಾಟಿ, ನಾ ಮೇಲೋ ನೀ ಮೇಲೋ ಎಂಬಂತೆ ಜಿದ್ದಿಗೆ ಬಿದ್ದು ಮೇಲಕ್ಕೆ ಎದ್ದು ಅದೂ ಆಳೆತ್ತರದ ಮೆಕ್ಕೆಜೋಳ ಬೆಳೆದು ನಿಂತಿದ್ದ ಹೊಳೆಯಾಚೆ ಯಲ್ಲಪ್ಪಜ್ಜನ ಹೊಲ ಹೊಕ್ಕಿಕೊಂಡಿದ್ದೆ. ಇತ್ತ ಮೇರೆಯಲ್ಲಿ ನಿಂತು ಆ ನಾಲ್ಕು ಬಾಡಿಗಾರ್ಡುಗಳನ್ನು ಒಳಗೆ ಹೊಗಿಸಿ “ಸಿಕ್ಕನನ್ರಿಲೇ ಅವ್ನು” ಎಂದು ಗಂಟಲು ಕಿತ್ತು ಬರುವಂತೆ ಒದರುತ್ತಿದ್ದ ಶಿವಲಿಂಗಪ್ಪ ಮಾಸ್ತರರ ಕಿರುಚಾಟ ಕೂಡ ಕೇಳಿಸದಂತೆ ಗವ್ವನ ಗವಿಯಲ್ಲಿ ಹೋದವನಂತೆ ನನಗೆ ಭಾಸವಾಗುತ್ತಿತ್ತು. ಒಳಗಡೆ ಏನೊಂದೂ ಶಬ್ದವಿರಲಿಲ್ಲ. ಒಂದೊಂದು ಮೆಕ್ಕೆಜೋಳದ ಬೆಳೆಯು ನನ್ನ ಎತ್ತರ ದಾಟಿಕೊಂಡು ಅಷ್ಟೇ ಎತ್ತರದಲ್ಲಿ ನನ್ನ ತಲೆಯಿಂದ ಮೇಲೆ ನಿಂತಿತ್ತು. ನಾನು ಮುಂದಕ್ಕೆ ಚಲಿಸಿದಂತೆಲ್ಲ ವಿಚಿತ್ರವಾಗಿ ಅವುಗಳ ಗರಿಗಳ ಸದ್ದು ಕೇಳಿಸುತ್ತಿತ್ತು. ನಿಂತ ತಕ್ಷಣ ಮುರಿದುಕೊಂಡು ಬಿದ್ದುಬಿಡುತ್ತಿದ್ದ ಮೌನ. ಅವುಗಳ ಎರಡರಲ್ಲಿ ತೂಗಿದ ಮನಸ್ಸು ಭಯಗೊಂಡು, ಹಿಂದೆ ನೋಡುತ್ತಾ ನೋಡುತ್ತಾ, ನಿಲ್ಲುತ್ತಾ ಎರಡು ಹೆಜ್ಜೆ ಭಯದಿಂದ ಮುಂದೆ ಇಡುತ್ತಾ ಅತ್ತಿತ್ತ ಸುತ್ತು ಕಣ್ಣಾಡಿಸಿದಾಗ ಆ ಮೌನದಲ್ಲಿ ಬಲಗಡೆಯಿಂದ ‘ಬುಡುಬುಡು….’ ಎನ್ನುವ ತೆಳ್ಳನೆಯ ದನಿ ಕೇಳಿಸಿತ್ತು. ಮತ್ತಷ್ಟು ಗಾಬರಿಗೊಂಡು ಅತ್ತ ಕಣ್ಣಾಡಿಸಿದಾಗ ನೀರಿನ ಪಂಪ್ ಸೆಟ್ ಕಂಡಿತ್ತು.

ಅದು ಆ ಹೊಲದ ನಡುಮಧ್ಯದಲ್ಲಿ ಇತ್ತು. ಆಗ ನಾನೆಲ್ಲಿದ್ದೇನೆ ಎಂಬುವುದು ನನಗೆ ತಿಳಿದಿತ್ತು. ಪಂಪ್ ಸೆಟ್ಟಿನಲ್ಲಿಗೆ ಹೋದಾಗ, ನೀರು ಸಣ್ಣಗೆ ಹರಿಯುತ್ತಿತ್ತು. ಬಾಯಾರಿಕೆ ಬಳಲಿಸುತ್ತಿತ್ತು ನನಗೆ. ಅವು ಉಪ್ಪುನೀರು. ಬೇರೆ ದಾರಿ ಇರಲಿಲ್ಲ; ಒಂದೆರಡು ಗುಟುಕು ಕುಡಿದಿದ್ದೆ. ಒಂತುಸು ಅಲ್ಲಿಯೇ ಕುಂತು ನೀರ ಆಟ ಆಡುತ್ತಿದ್ದೆ. ಸೂರ್ಯ ನೆತ್ತಿ ಮೇಲೆ ಬಂದಿದ್ದು ಗೊತ್ತಾಗಿದ್ದು, ‘ಆತ’ ನೆತ್ತಿ ಮೇಲೆ ಬಂದ ಮೇಲೇಯೇ! ಮೆಕ್ಕೆಜೋಳದ ಗರಿಗರಿಗಳಲ್ಲಿ ಸೂರ್ಯ ಹೊಲದ ನೆಲ ಕಾಣಲು ಹರಸಾಹಸ ಪಡುತ್ತಿದ್ದ.

ಅವ್ವ ಹೊಲದ ಬದುವಿನಲ್ಲಿ ನಿಂತು ನನ್ನ ಕೂಗುವ ಸಣ್ಣನೆಯ ಎಳೆಯು ಕಿವಿಗೆ ತಾಕಿತ್ತು. ಕೂಗು ಬಂದ ಕಡೆ ಅಲ್ಲಿಂದ ಎದ್ದು ಓಡಿದ್ದೆ. ನಾನು ಬಂದು ಅವ್ವನ ಮುಂದೆ ಕಣ್ಣು ತಿಕ್ಕಿಕೊಳ್ಳುತ್ತಾ ನಿಂತಾಗ “ಅದಕ್ಕ ನಾ ನಿನಗ ಹೇಳಿದ್ನಪಾ… ಸಾಲಿಗೆ ಹೋಗು ಅಂತ. ಹೋಗಿದ್ರ ಇದೆಲ್ಲಾ ರಂಪಾಟ ಆಕ್ಕಿತ್ತಾ… ನನ್ನ ಮಾತ ನೀಯೆಲ್ಲಿ ಕೇಳ್ತಿ… ನಡಿ ಮಾಸ್ತರ್ರು ಬಂದು ಬೈದಾಡಿ ನಿನ್ನ ಪಾಟಿಕೈಚೀಲ ತಗಂಡು ಹೋಗ್ಯಾರ. ನಿನ್ನ ಕಳ್ಸು ಅಂದಾರ.. ನಡಿ ನಾನ್ ಕಳ್ಸಿ ಬರ್ತೀನಿ” ಅಂತ ನನ್ನನ್ನು ಮನೆಗೆ ಕೈಹಿಡಿದು ಕರ್ಕೊಂಡು ಬಂದಿದ್ದಳು. ನನ್ನ ಬಟ್ಟೆ ಬಿಚ್ಚಿ ಶಾಲೆ ಬಟ್ಟೆ ತೊಡಿಸುವಾಗ ನನ್ನ ಮುಖ ಊದಿಕೊಂಡು ಪ್ರಾಣಸಂಕಟ ಉಕ್ಕುತ್ತಿತ್ತು. ನಡುಗು ಶುರುವಾಗಿ ಕಣ್ಣು ನೀರನ್ನು ಕರೆಯುತ್ತಿದ್ದೆವು.

ಹನ್ನೆರಡರ ವಿರಾಮದ ನಂತರ ಬೆಲ್ಲು ಬಾರಿಸಿತ್ತು. ಹುಡುಗರು, ಮಾಸ್ತರರು ಶಾಲಾ ಕೊಠಡಿ ಸೇರಿದ್ದರು. ಹೆಡ್ ಮಾಸ್ಟರ್ ಶಿವಲಿಂಗಪ್ಪ ಮಾಸ್ತರರು ಒಬ್ಬರೇ ಆಫೀಸು ರೂಂನಲ್ಲಿ ಕುಳಿತು ಬರೆಯುತ್ತಿದ್ದುದು ಕಿಟಕಿಯಲ್ಲಿ ಕಾಣಿಸಿತು. ಅವ್ವ ನನ್ನ ಕೈಹಿಡಿದು ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಶಿವಲಿಂಗಪ್ಪ ಮಾಸ್ತರರು ಚಂಡೆತ್ತಿ ನೋಡಿ ಕಣ್ಣು ಕೆಂಪಗಾಗಿಸಿ ಮೇಲೆದ್ದರು. “ಏನು ಇತ್ತಲೇ ಸಾಲಿ ಬಿಡುವಂತ ಕೆಲ್ಸಾ…?” ಎಂದು ಗೊರ್ರ ಗೊರ್ರ ಎನ್ನುವಂತೆ ನುಡಿಸಿ ಮುಂದಿದ್ದ ಗ್ಲಾಸಿನಲ್ಲಿಯ ನೀರು ಕುಡಿದು ಮತ್ತೆ ಗಂಟಲು ಸರಿಪಡಿಸಿಕೊಂಡು ನನ್ನತ್ತ ಬಂದಾಗ ನಾನು ಅವ್ವನ ಹಿಂದೆ ಸರಿದು ಅಂಟಿಕೊಂಡು ಮರೆಗೆ ನಿಂತಿದ್ದೆ. “ಸರ ನಿನ್ನೆ ಸರು ಲೆಕ್ಕ ಮಾಡ್ಕೆಂಡು ಬರ್ರಿ ಅಂತ ಹೇಳಿದ್ರಂತ. ನಿನ್ನೆ ಸರ್ಕಸ್ಸು ನೋಡ್ಯಾನರ್ರಿ… ಲೆಕ್ಕ ಮಾಡಿಲ್ಲಂತ, ಸಾಲಿಗ್ಯ ಹೋದ್ರ ಸರು ಹೊಡಿತಾರ ಅಂತಾ ಇವತ್ತು ಸಾಲಿಗ್ಯ ಹೋಗಲ್ಲಂತ ಹಟ ಮಾಡ್ಕೆಂಡು ಕುಂತುಬಿಟ್ಟರ್ರೀ. ಹೊಡ್ತಕ್ಕ ಸಲ್ಪು ಹೆದರ್ತಾನರ್ರೀ” ಎಂದು ಅವ್ವ ನನ್ನ ತಲೆ ನೇವರಿಸುತ್ತಾ ಸ್ವಲ್ಪ ನಗುತ್ತಲೇ ಹೇಳಿ ಮುಗಿಸಿದಳು. “ಅಲ್ಲಮ್ಮ ಹೊಡೀತಾರ ಅಂತ ಅಂವಾ ಅಳೋದು ಕೇಳಿ ನೀವು ಸುಮ್ನಾ ಬುಟ್ಬುಡೋದಾ… ಕತ್ತಿಗ್ಯ ಲತ್ತಿ ಪೆಟ್ಟು ಬಿದ್ರನಾ ಮಾತು ಕೇಳ್ತೈತಮ್ಮ. ಮಗ ಶ್ಯಾಣ್ಯಾ ಆಗ್ಬೇಕಂದ್ರ ಯಾಡು ಬಾರ್ಸಿ ಕಳಸ್ಬೇಕಮ್ಮ” ಎಂದು ರೇಗಿದ್ದ ಶಿವಲಿಂಗಪ್ಪ ಮಾಸ್ತರರು ನಾನು ಮೊದಲೇ ಮಾಡಿದ ಕೆಲಸ ನೆನಪಿಗೆ ಬಂತೊ ಏನೋ ಅತ್ತಿತ್ತ ಕಣ್ಣಾಡಿಸಿ ಬೆತ್ತ ನೋಡಿದ್ದರು. ಸಿಗಲಿಲ್ಲ. “ಆಯ್ತಮಾ ಅವ್ನ ಪಾಟೀಚೀಲ ಅವ್ನ ಕೋಲ್ಯಾಗ ಐತಿ ನೀನು ನಡಿಯಮ್ಮ” ಎಂದು ಹೇಳಿ ಮತ್ತೆ ಚೇರ್ ಮೇಲೆ ಕುಳಿತು ಬರೆಯ ಹತ್ತಿದಾಗ ನನ್ನನ್ನು ಕರೆದುಕೊಂಡು ಅವ್ವ ಬಾಗಿಲು ದಾಟಿ ಹೊರಬರುತ್ತಿದ್ದಂತೆ ಗಿರೆಪ್ಪ ಮಾಸ್ತರರು ಎದುರಾದರು. ನಮ್ಮನ್ನು ನೋಡಿ ಸುಮ್ಮನೆ ಒಳಕ್ಕೆ ಹೋದರು. ಅವ್ವ ಶಾಲಾ ಅಂಗಳದಲ್ಲಿ ನಿಲ್ಲಿಸಿ ಗಲ್ಲ ಸವರಿ ಒಂದು ರೂಪಾಯಿ ಕೊಟ್ಟು “ಸರ್ಗೆ ಹೇಳೈತಿಲ್ಲ ಅವ್ರು ಏನೂ ಮಾಡಲ್ಲ, ಪಾಟಿ ಗಂಟಿನತಾಲೆ ಕುಂದ್ರು… ನಾನ್ ಹೊಕ್ಕೀನಿ” ಎಂದು ಮನೆಗೆ ನಡೆದಿದ್ದಳು. ನಾನು ನನ್ನ ಮೂರನೇ ತರಗತಿ ಕೊಠಡಿ ಹೊಕ್ಕು ಕುಳಿತಿದ್ದೆ.

ನನ್ನ ಪಕ್ಕದಲ್ಲಿದ್ದ ಪ್ರಭುವನ್ನು ಕುತೂಹಲದಿಂದ “ಗಿರೆಪ್ಪ ಸರು ಲೆಕ್ಕ ಚೆಕ್ ಮಾಡಿದ್ರನು ಪಭು” ಎಂದು ಕೇಳಿದ್ದೆ. ಅವನು ಏನೂ ಹೇಳಲಿಲ್ಲ. ಮುಖ ಊದಿಕೊಂಡಿತ್ತು. ಅವನು ಬಡ್ತಾ ತಿಂದೇ ಕುಳಿತಿದ್ದ ಎಂಬುವುದನ್ನು ಅವನ ಪಾಟಿಚೀಲದ ಮೇಲೆ ಇದ್ದ ನೋಟ್ ಬುಕ್ಕನ್ನು ತೆರೆದು ನೋಡಿ ಖಚಿತಪಡಿಸಿಕೊಂಡಿದ್ದೆ. ನಾನು ಸ್ವಲ್ಪ ಹಿಗ್ಗಿನಿಂದ ಕೂತು, ಬಂದ ಒಂದು ಗಂಡಾಂತರದಿಂದ ಪಾರಾದವನಂತೆ ನನ್ನೊಳಗೆ ಉಲ್ಲಾಸ ತುಂಬತೊಡಗಿದ್ದೆ. ಅಷ್ಟರಲ್ಲಿ ಬಸ್ಸಪ್ಪ ಮಾಸ್ತರರು ಪಾಠ ಮಾಡಲು ಕೊಠಡಿ ಒಳ ಪ್ರವೇಶಿಸಿದರು. ಅವರ ಹಿಂದೆ ಐದನೇ ತರಗತಿಯ ಮಾರುತಿ ಬಂದು “ಇವನ್ನ ಕರಕಂಡು ಬರಾಕ ಶಿವಲಿಂಗಪ್ಪ ಸರು ಹೇಳಿ ಕಳಿಸ್ಯಾರ್ರೀ ಸೋರ…” ಎಂದು ನನ್ನ ಕಡೆ ಕೈ ತೋರಿಸಿ ಬಸಪ್ಪ ಸರ್ಗೆ ಹೇಳಿದ. ನಾನು ಹೌಹಾರಿ ಕುಂತಲ್ಲೇ ನಡುಗತೊಡಗಿದೆ. ಮೇಲೇಳಲು ಹಿಂದೇಟು ಹಾಕಿದಾಗ “ಲೇ ಸರ್ ಕರ್ಯಾಕತ್ತಾರಂತ ಹೊಕ್ಕೀಯಿಲ್ಲ!” ಎಂದು ಬಸ್ಸಪ್ಪ ಮಾಸ್ತರ ಜೋರಗೆ ಜಬರಿಸಿದಾಗ ನಾನು ಕಣ್ಣೀರು ತುಂಬಿಕೊಂಡು ಎದ್ದು ನಿಂತಿದ್ದೆ. ಮಾರುತಿ ನನ್ನ ಕೈ ಹಿಡಿದು ಕರೆದುಕೊಂಡು ಹೋಗಿ ಐದನೇ ತರಗತಿ ಕೊಠಡಿಯಲ್ಲಿ ಪಾಠ ಮಾಡುತ್ತಿದ್ದ ಶಿವಲಿಂಗಪ್ಪ ಮಾಸ್ತರರ ಮುಂದೆ ತಂದು ನಿಲ್ಲಿಸಿದ್ದ.

ಶಿವಲಿಂಗಪ್ಪ ಮಾಸ್ತರರು ತಮ್ಮ ಕೆಳ ತುಟಿಯ ಮೇಲೆ ನಾಲಿಗೆ ಚಾಚಿ, ನನ್ನ ಮೇಲಿನ ಸಿಟ್ಟನ್ನು ತಮ್ಮ ಮೇಲಿನ ಹಲ್ಲುಗಳಲ್ಲಿ ಹಾಕಿ, ನಾಲಿಗೆ ಕಟ್ಟಾಗಿಸುವಂತೆ ಕಡಿದು, ದೊಡ್ಡ ದೇಹದ ಶಿವಲಿಂಗಪ್ಪ ಮಾಸ್ತರರು ಗದೆಯಂತೆ ಬೆತ್ತ ಹಿಡಿದು ನನ್ನತ್ತ ಬಂದಿದ್ದರು. “ಹೊಡಿಬ್ಯಾಡ್ರೀ ಸೊರ ಹೊಡಿಬ್ಯಾಡ್ರೀ ಸೊರ…” ಎಂದು ಕಿರುಚಿಕೊಳ್ಳುತ್ತಾ ಎರಡು ಕೈ ಮುಂದೆ ಮಾಡಿ ಅಳುತ್ತಾ ಬೇಡಿಕೊಳ್ಳುತ್ತಾ ಕೆಳಕ್ಕೆ ಕುಂತು ಮುದುಡಿಕೊಂಡಿದ್ದೆ. “ಏನಲೇ ಪಿಕಣ್ಯಾ ಮೆಕ್ಕೆಜೋಳ ಹೊಲದಾಗ ಅಡಿಕ್ಯಂಡು ಕುಂತು ಆಟ ಆಡಿಸ್ತೀಯೇನಲೇ..?” ಎಂದು ನನ್ನ ಕೊಳ್ಳ ಪಟ್ಟಿ ಹಿಡಿದು ಮೇಲೆತ್ತಿದ್ದರು. “ಇಲ್ಲರ್ರೀ ಸೊರ ಇನ್ನೊಮ್ಯ ಹಿಂಗ ಮಾಡಲ್ಲರೀ.. ಸಾಲಿ ತಪ್ಸಲ್ಲರ್ರೀ…” ಎಂದು ಅಳುತ್ತಾ ತರಗುಡುತ್ತಿದ್ದಾಗ, “ಸಾಲ್ಯಾಗಾ ಕೊಟ್ಟ ಕೆಲ್ಸಾ ಮಾಡ್ದಾ ಊರಾಗ ತಿಂದು ತಿರುಗ್ತೀಯಾ… ಎಸ್ಟ್ ಒದರಬೇಕಲೇ ನಿನ್ನ… ಗಂಟಲು ಹರ್ಕಂಡು ಬೀಳುವರ ಗತಿ… ಲೇ ಒಂದಾ ಒಂದು ಎತ್ತಿ ಗುದ್ದಿಬುಟ್ಟರ ಪಾತಾಳ ಸೇರತಿ ಮಗನ…” ಎಂದು ಅವರ ಕೈ ಮೇಲೆ ಹೋದಾಗ ನಾನು ನಿಜಕ್ಕೂ ಪಾತಾಳಕ್ಕೆ ಹೋದೆನೋ ಎಂಬಂತೆ “ಕುಂಯ್ಯೋ…” ಎಂಬ ಸ್ವರ ನನಗೆ ಗೊತ್ತಿಲ್ಲದೆ ತನ್ನಿಂತಾನೇ ಹೊರಬಿತ್ತು. “ಇದೊಮ್ಯ ಬುಡ್ತೀನಿ, ಇನ್ನೊಮ್ಯ ಈ ರೀತಿ ಸಾಲಿ ಬುಟ್ಟಿ,.. ಈ ಬೋರ್ಡ್ ಮಗ್ಗುಲಿಗೆ, ಇಲ್ಲಿ ಐತಲ್ಲ ಈ ಜಾಗದಾಗ, ನಿನ್ನ ಮೈ.. ಮೈ ಚರ್ಮ ಸುಲಿದು ನಿಮ್ಮೂರು ನಕಾಶೆ ಮಾಡ್ಸಿ ನೇತಾಕ್ತೀನಿ…” ಎಂದು ಕೈ ಮಾಡಿ ಗೋಡೆ ಕಡೆಗೆ ತೋರಿಸಿ “ನಡಿ” ಎಂದು ಕೊಳ್ಳಪಟ್ಟಿ ಕೈ ಬಿಟ್ಟು ಬೆತ್ತದಿಂದ ಮೊಣಕಾಲು ಕೆಳಗೆ ಹಿಂದೆ ಒಂದು ಬಿಟ್ಟು ತಮ್ಮಲ್ಲಿನ ಸಿಟ್ಟನ್ನು ಶಾಂತಪಡಿಸಿದ್ದರು. ನಾನು “ಯವ್ವಲೇ ಯಪ್ಪಲೇ” ಎನ್ನುತ್ತಾ ಥಕ ಥಕ ಕುಣಿಯುತ್ತಾ ತುರಿಸಿಕೊಳ್ಳುತ್ತಾ ಹೊರಕ್ಕೆ ಓಡಿ ನನ್ನ ಕೊಠಡಿಗೆ ಬಂದು ಅಳುತ್ತಾ ಕುಳಿತಿದ್ದೆ. ಮಧ್ಯಾಹ್ನದ ಊಟದ ಗಂಟೆ ಬಾರಿಸುವ ತನಕ ಬಿಕ್ಕಳಿಕೆ ನಿಂತಿದ್ದಿಲ್ಲ.

ಪಕ್ಕದ ಊರಿಗೆ ವರ್ಗವಾಗಿ, ಈಗ ನಮ್ಮೂರಲ್ಲಿ ಶಿವಲಿಂಗಪ್ಪ ಮಾಸ್ತರರು ಶಾಲೆ ಕಲಿಸುವುದಕ್ಕೆ ಬರುವುದನ್ನು ಬಿಟ್ಟು ಬಹಳ ವರ್ಷಗಳಾದವು. ಆದರೆ ಅವರ ಈ ನೆನಪು ಮಾತ್ರ ನನ್ನೊಳಗೆ ಅಚ್ಚೊತ್ತಿದಂತಿದೆ. ಅವತ್ತಿನಿಂದಲೂ ನಾನು ಯಾವಾಗಲಾದರೂ ಶಾಲೆ ತಪ್ಪಿಸುವ ಪ್ರಸಂಗ ಬಂದಾಗಲೂ ಶಿವಲಿಂಗಪ್ಪ ಮಾಸ್ತರರು ನೆನಪಾಗಿ ಎಚ್ಚರಿಸುತ್ತಿರುತ್ತಿದ್ದರು. ಇತ್ತೀಚೆಗೆ ನಮ್ಮ ಮನೆಯ ಪಕ್ಕದಲ್ಲಿದ್ದ ಮನೆಯ ಹುಡುಗ, ವಾರದಿಂದ ಶಾಲೆ ಬಿಟ್ಟಿದ್ದರಿಂದ, ಅವನನ್ನು ಇದೆ ರೀತಿ ಹೊತ್ತೊಯ್ಯಲು ಒಬ್ಬ ಮಾಸ್ತರರು ಮತ್ತು ನಾಲ್ಕು ಪಿಳ್ಳೆ ಬಾಡಿಗಾರ್ಡುಗಳು ಓಣಿಯಲ್ಲಿ ಪ್ರತ್ಯಕ್ಷವಾಗಿದ್ದರು. ಅದನ್ನು ಕಂಡು ಮತ್ತೊಮ್ಮೆ ಮರುಕಳಿಸಿದಂತಾಗಿದ್ದವು, ಆ ಸರ್ಕಸ್ಸು ಮತ್ತು ತಪ್ಪಿದ ಎಂಟು ಲೆಕ್ಕಗಳೂ…