ಕಥೆಗಳಲ್ಲಿ ಭಾಷೆಯದೇ ಒಂದು ತೂಕ. ಉತ್ತರ ಕರ್ನಾಟಕ ದ ಬದುಕಿನ ಸೊಗಡು ಭಾಷೆಯನ್ನು ಸಶಕ್ತವಾಗಿ ಬಳಸುವುದರೊಂದಿಗೆ ಪ್ರಾದೇಶಿಕತೆಯನ್ನು ತುಂಬಿಕೊಟ್ಟಿದ್ದಾರೆ ಲೇಖಕರು. ಸಣ್ಣಕತೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡೂ ಓದುಗರ ಕತೆಯ ಕುತೂಹಲಕ್ಕೆ ಓದಿಸಿಕೊಳ್ಳುವಿಕೆಗೆ ತೊಡಕಾಗದಂತೆ ಬರೆಯುವುದು ಕೂಡ ಲೇಖಕರ ಪ್ರತಿಭೆ. ಮಿಸೆಸ್ ಕೆಂಪೆ ಮತ್ತು ಅಶೋಕ, ಇಂಜೆಕ್ಷನ್ ಮೊದಲಾದ ಕಥೆಗಳಲ್ಲಿ ಭಾಷೆಯೆ ಮನುಷ್ಯ ಭಾವಗಳ ಹೃದ್ಯವಾಗಿಸಿವೆ.
ಸಿದ್ರಾಮ್‌ ಪಾಟೀಲ ಬರೆದ ‘ಜಂಗಮಕ್ಕಳಿವಿಲ್ಲʼ ಹೊಸ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ಬರೆದ ಲೇಖನ

 

ಜಂಗಮಕ್ಕಳಿವಿಲ್ಲ ಕಥಾಸಂಕಲನ ಹೆಸರೇ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡುವುದು ಅನ್ನೋದು ನಿಜ. ಚಿಗುರೆಲೆ ಪ್ರಕಾಶನ ಹೊರತಂದಿರುವ ಲೇಖಕರಾದ ಸಿದ್ರಾಮ್ ಪಾಟೀಲರ ಮೊದಲ ಕಥಾ ಸಂಕಲನ ಇದು.

ಇಲ್ಲಿನ ಕತೆಗಳು ಐಟಿ ಯ ಅಮಲಿನಲ್ಲಿ ತೇಲುತ್ತಿರುವ ಬೆಂಗಳೂರನ್ನು, ವೈದ್ಯಕೀಯ ವಿದ್ಯಾರ್ಥಿಗಳು ಎದುರಿಸುವ ಸಣ್ಣ ಸಣ್ಣ ಸವಾಲುಗಳನ್ನು, ಮನುಷ್ಯ ಅರ್ಥ ಮತ್ತು ಕಾಮದ ದಾಸನಾಗಿರುವ ಧಾವಂತದ ಬದುಕಿನ ಚಿತ್ರಣವನ್ನೂ ಹಳ್ಳಿಯಿಂದ ನಗರಕ್ಕೆ ವಲಸೆ ಬಂದ ಕನಸುಗಳ ಹೊತ್ತ ಯುವಜನತೆಯ ಭ್ರಮನಿರಸನವನ್ನೂ, ಊರಲ್ಲಿದ್ದು ಮಕ್ಕಳ ತಪ್ಪುಗಳ ನುಂಗಿ ಮಮತೆಯ ಪಟ್ಟಿಯ ಕಟ್ಟಿಕೊಂಡಿರೋ ಹೆತ್ತವರ ಸಂಕಟಗಳನ್ನೂ, ರೋಗ ರುಜಿನಗಳಿಗೆ ತುತ್ತಾದವರ ಸಂಕಟಗಳನ್ನೂ ವೈದ್ಯಲೋಕದ ಸವಾಲುಗಳನ್ನು, ಮನುಷ್ಯನ ದೈಹಿಕ ಮತ್ತು ಮಾನಸಿಕ ವಿಕಾರಗಳಿಗೆ ಕಾರಣಗಳನ್ನು ಹುಡುಕುತ್ತವೆ.

(ಸಿದ್ರಾಮ್‌ ಪಾಟೀಲ)

ಮೊದಲ ಕಥೆ “ಬಿಡಿ ಕೊಂಡಿಗಳು” ಶುರುವಿನಲ್ಲಿ ಆ! ಏನಿದು ಅಂತನ್ನಿಸುವ ಮೊದಲೇ ಕತೆಯ ಆಳಕ್ಕೆ ಒಯ್ದು ಕೊನೆಯಲ್ಲಿ ವಿಷಾದದ ಗಮ್ಯಕ್ಕೆ ನಿಲ್ಲಿಸಿಬಿಡುತ್ತದೆ. ಸೌಜನ್ಯ ಅನ್ನುವ ಮಗಳೂ ಮತ್ತೆ ಅವಳಪ್ಪ ಅಮ್ಮನ ಪಾತ್ರವೂ ಇವತ್ತಿನ ಸಮಾಜಕ್ಕೆ ಹಿಡಿದ ಸ್ಪಷ್ಟ ಕನ್ನಡಿಯಂತಿದೆ. ಯಾವೂರಲ್ಲಿ ಇಂತದ್ದೊಂದೂ ನಡೀತಿಲ್ಲ ಅಂತ ಕೇಳಿದ್ರೆ ಸಾವಿಲ್ಲದ ಮನೆಯ ಸಾಸಿವೆ ಹುಡುಕಿದಷ್ಟು ಕಷ್ಟ. ಲೇಖಕರ ಕಥನ ಶೈಲಿ ತುಂಬ ಸರಳ ಮತ್ತಷ್ಟೇ ನೇರ. ಎಲ್ಲಾ ಕತೆಗಳ ಗಮನಿಸುವಾಗ ನನಗನ್ನಿಸಿದ್ದೇನೆಂದರೆ ಕಥೆಗಳಿಗಿಂತ ಸಂಭಾಷಣೆಗಳಿಗೆ ತೂಕವಿದೆ. ಮತ್ತೆ ಸಂಭಾಷಣೆಯಲ್ಲಿಯೇ ಬಹುತೇಕ ಕತೆಗಳು ತಮ್ಮ ಎಲ್ಲ ನಿರೂಪಣೆಯನ್ನು ಮುಗಿಸಿಬಿಡುತ್ತವೆ.

ಉದಾಹರಣೆಗೆ ಸ್ಥಿತ್ಯಂತರ ಕತೆ. ಇಡೀ ಕತೆಗೆ ಸಂಭಾಷಣೆಯೇ ಜೀವಾಳ. ಕತೆಯೆನ್ನುವುದು ಎದುರಿಗೆ ನಡೆಯುತ್ತಿರುವ ದೃಶ್ಯದಂತೆ ಕಟ್ಟಿಕೊಡುವುದು ಲೇಖಕರ ಸಾಮರ್ಥ್ಯ. ಒಂದು ನಾಟಕವನ್ನೋ ಸಿನೆಮಾವನ್ನೋ‌ ನೋಡಿದಷ್ಟು ಗಾಢವಾಗಿ ಪ್ರತಿ ಕತೆಗಳನ್ನು ಚಿತ್ರಣವಾಗಿಸುವಲ್ಲಿ ಪಾಟೀಲರು ಯಶಸ್ವಿಯಾಗಿದ್ದಾರೆ.

“ಜಂಗಮಕ್ಕಳಿವಿಲ್ಲ” ಕತೆ ಹೆಸರಿನಂತೆ ಪುಸ್ತಕದ ಹೃದಯ ಭಾಗ. ಈ ಕತೆ ಕರ್ಣ ಮತ್ತು ದ್ರೌಪದಿಯ ಮನೋಲೋಕವನ್ನು ಹೊಸ ದೃಷ್ಟಿಕೋನದಿಂದ ತೆರೆದಿಡುತ್ತದೆ. ಈ ಪ್ರಯೋಗ ಹೊಸದಲ್ಲದಿದ್ದರೂ
ಈ ಪ್ರಯತ್ನ ಹೊಸತನದ್ದು ಹೌದು. ಅದನ್ನು ಚಂದವಾಗಿ ನೇಯ್ದಿದ್ದಾರೆ ಲೇಖಕರು. ಹಾಗಿದ್ದರೂ ಇನ್ನಷ್ಟು ಆಳಕ್ಕೆ ಇಳಿಸುವ ತಾಕತ್ತು ಈ ಕತೆಗಿತ್ತು ಅಂತಲೇ ನನಗನ್ನಿಸುತ್ತದೆ.

ಎಲ್ಲಾ ಕತೆಗಳ ಗಮನಿಸುವಾಗ ನನಗನ್ನಿಸಿದ್ದೇನೆಂದರೆ ಕಥೆಗಳಿಗಿಂತ ಸಂಭಾಷಣೆಗಳಿಗೆ ತೂಕವಿದೆ. ಮತ್ತೆ ಸಂಭಾಷಣೆಯಲ್ಲಿಯೇ ಬಹುತೇಕ ಕತೆಗಳು ತಮ್ಮ ಎಲ್ಲ ನಿರೂಪಣೆಯನ್ನು ಮುಗಿಸಿಬಿಡುತ್ತವೆ.

ಪಾಟೀಲರ ಎಲ್ಲ ಕತೆಗಳನ್ನು ಗಮನಿಸುವಾಗ ಅವರ ಸಾಮರ್ಥ್ಯವನ್ನು ಸ್ವಲ್ಪ ಕತೆಗಳ ಒಳನೋಟಕ್ಕೆ ಮಿತಿಗೊಳಿಸಿದ್ದಾರೆನೋ ಅನ್ನಿಸುತ್ತದೆ. ಒಂದು ಪ್ರಗಾಧ ಕತೆಯಾಗುವ ವಸ್ತುವನ್ನು ನಾಲ್ಕಾರು ಪೇಜುಗಳಿಗೆ ಮಿತಿಯಾಗಿಸಿಬಿಟ್ಟರೇನೋ ಅನಿಸಿದೆ. ಬಹುಶಃ ಕರ್ಣ ಮತ್ತು ದ್ರೌಪದಿ ಎಂಬ ಪಾತ್ರಗಳ ತೂಕ ಬಹಳ ವಿಸ್ತಾರ ಆಗಿರೋದ್ರಿಂದಲೂ ನನಗೆ ಹಾಗನ್ನಿಸಿರಬಹುದು.

ಸುಕನ್ಯಾ ಸಿಸ್ಟರ್, ಲೈಫ್ ಲೈನ್, ಇಂಜೆಕ್ಷನ್ ಮತ್ತು ಆಸ್ಪತ್ರೆ ವೈದ್ಯಕೀಯ ವೃತ್ತಿಯ ಕತೆಗಳು ಬಹುತೇಕ ಬದುಕಿನ ಮುಖಗಳು. ಸ್ವತಃ ವೈದ್ಯರಾದ ಲೇಖಕರು ಈ ಕತೆಗಳ ಮೂಲಕ ಹೇಳಬಹುದಾದ ಎಲ್ಲವನ್ನೂ ಸರಳವಾಗಿ ಹೇಳಿದ್ದಾರೆ‌. ಕತೆಗಳಿಗೆ ಮಾನವೀಯ ದೃಷ್ಟಿಕೋನಗಳಿವೆ. ಬದುಕಿನ ವಾಸ್ತವದ ದರ್ಶನವಿದೆ. ನೈತಿಕ ಮೌಲ್ಯಗಳ ಪರಿಚಯವಿದೆ. ಕಂಡುಕೊಳ್ಳಬೇಕಾದ ಅಥವಾ ಸಮಾಜ ಸಾಗುತ್ತಿರುವ ದಿಕ್ಕಿನ ಕಡೆಗೆ ವಿಷಾದದ ನೋಟವಿದೆ.

ಕಥೆಗಳಲ್ಲಿ ಭಾಷೆಯದೇ ಒಂದು ತೂಕ. ಉತ್ತರ ಕರ್ನಾಟಕ ದ ಬದುಕಿನ ಸೊಗಡು ಭಾಷೆಯನ್ನು ಸಶಕ್ತವಾಗಿ ಬಳಸುವುದರೊಂದಿಗೆ ಪ್ರಾದೇಶಿಕತೆಯನ್ನು ತುಂಬಿಕೊಟ್ಟಿದ್ದಾರೆ ಲೇಖಕರು. ಸಣ್ಣಕತೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡೂ ಓದುಗರ ಕತೆಯ ಕುತೂಹಲಕ್ಕೆ ಓದಿಸಿಕೊಳ್ಳುವಿಕೆಗೆ ತೊಡಕಾಗದಂತೆ ಬರೆಯುವುದು ಕೂಡ ಲೇಖಕರ ಪ್ರತಿಭೆ. ಮಿಸೆಸ್ ಕೆಂಪೆ ಮತ್ತು ಅಶೋಕ, ಇಂಜೆಕ್ಷನ್ ಮೊದಲಾದ ಕಥೆಗಳಲ್ಲಿ ಭಾಷೆಯೆ ಮನುಷ್ಯ ಭಾವಗಳ ಹೃದ್ಯವಾಗಿಸಿವೆ. ವೈದ್ಯಲೋಕದ ಕತೆಗಳು ಕೂಡ ಪ್ರಾದೇಶಿಕ ಭಾಷೆಯ ಒಳಗಿನಿಂದಲೇ ತೆರೆದುಕೊಂಡಿರುವುದು ಬಹುಶಃ ಲೇಖಕರು ನೆಲದ ಮಾತನ್ನೇ ಹೇಳ ಹೊರಟಿರುವಂತೆ ಆಪ್ತವಾಗಿದೆ.

“ಒಮ್ಮೊಮ್ಮೆ ಹಿಂಗೆಲ್ಲ ಯಾಕಾದ್ರು ಆಗುತ್ತೋ” ಇದೊಂತರ ವಿಭಿನ್ನ ಕತೆ. ಹಸಿರು ಕಪ್ಪೆ ಮನದಲ್ಲಿ ಉಳಿದು ಬಿಡುತ್ತಾಳೆ‌. ಕಾಡುತ್ತಾಳೆ. ಕಪ್ಪೆಯ ಮನೋವೃತ್ತಿಯ ಮೂಲಕ ಲೇಖಕ ಮನುಷ್ಯರ ಕತೆ ಹೇಳುತ್ತಿದ್ದಾರಾ ಅಥವಾ ಕಪ್ಪೆಯೇ ಹೇಳುತ್ತಿದೆಯೇ ಅಂತ ಗೊಂದಲಕ್ಕೆ ಬೀಳುವಷ್ಟು ಕತೆ ವಿಭಿನ್ನವಾಗಿದೆ.

ಬಹಳಷ್ಟು ಕಥೆಗಳ ಕಥಾ ವಸ್ತುಗಳು ಹೊಸತಲ್ಲದಿದ್ದರೂ ನಿರೂಪಣೆಯಲ್ಲಿ ಹೊಸತಾಗಿರುವುದರಿಂದ ಓದಿಸಿಕೊಳ್ಳುತ್ತವೆ. ಹೇಳಲೇಬೇಕಾದ ಇನ್ನೊಂದು ಅನಿಸಿಕೆಯೆಂದರೆ ಕಥೆಗಳು ಇನ್ನಷ್ಟು ಗಹನವಾಗಬಹುದಿತ್ತು. ಇಂದಿನ ಹೊಸ ಹೊಸ ಲೇಖಕರ ಕಥೆಗಳು ವಿಶ್ವದಗಲದ ವಸ್ತು ವಿಸ್ತಾರ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ ವಿಸ್ತಾರವಾದ ವಿಷಯ ವಸ್ತು ಲೇಖಕರಿಗೆ ದಕ್ಕಲಿ. ಮತ್ತಷ್ಟು ಸೂಕ್ಷ್ಮವಾಗಿ ಒಳನೋಟಗಳು ಕತೆಯಾಗಲಿ.

ಜಗತ್ತಿನ ವಾಸ್ತವದಲ್ಲಿ ನಿಂತು‌ ನಿರ್ವಿಕಾರವಾಗಿ ಓದಿಕೊಳ್ಳುವ ಮನುಷ್ಯನಿಗೆ ಚಂದದೊಂದು ಕಥಾ ಪ್ರಪಂಚ ಇದು. ಹಾಗೇ ಲೇಖಕರು ಇದಕ್ಕಿಂತ ಚೆನ್ನಾಗಿ ಬರೆಯಬಲ್ಲರು ಎಂಬ ಭರವಸೆಯಂತೂ ನನಗಿದೆ. ಮುಂದಿನ ದಿನಗಳಲ್ಲಿ ಪಾಟೀಲರ ಇನ್ನಷ್ಟು ಕಥೆಗಳ ಪ್ರಪಂಚ ತೆರೆದುಕೊಳ್ಳಲಿ ಎಂಬ ಆಶಯವಿದೆ.