ನನ್ನ ಕನಸಿನ ಹೀರೋ ಹೀಗೆ ಬೀಡಿ, ಸಿಗರೇಟು ಸೇದುವಷ್ಟು ಹೊಲಸು ಮನುಷ್ಯನಾಗಿರಲು ಶಕ್ಯವೇ ಇಲ್ಲ. ಇವನಲ್ಲ. ಇವನಲ್ಲ. ನನಗೆ ಹಸಿವಾಗತೊಡಗಿತ್ತು. ಗೆಳತಿಯ ಮನೆಗೆ ಹೋಗಿ ಬರುವೆನೆಂದು ಮನೆಯಲ್ಲಿ ಹೇಳಿದ್ದೆ. ಏನೂ ತಿಂದಿರಲಿಲ್ಲ. ಬಿಸಿಲು ಮತ್ತು ಆತಂಕವೂ ತಲೆಯೆತ್ತತೊಡಗಿತ್ತು. ಸುಭಾಷ್ ಚಂದ್ರರು ಕಾಣೆಯಾದದ್ದು ಎಲ್ಲಿ? ಅವರು ಇಷ್ಟುದೂರ ಈ ಬಾಗಲಕೋಟೆಗೆ ಅಡವಿಯಲ್ಲಿ ತಿರುಗಾಡುತ್ತಾ ಬಂದಿರಲು ಸಾಧ್ಯವೇ?

ಲೇಖಕಿ ವೀಣಾ ಶಾಂತೇಶ್ವರ ಆತ್ಮಕಥನದ ಮತ್ತೊಂದು ಅಧ್ಯಾಯ.

 

ಆ ಊರು ಅವಿಭಜಿತ ವಿಜಾಪುರ ಜಿಲ್ಲೆಯ ಮುಖ್ಯ ತಾಲೂಕು ಕೇಂದ್ರವಾಗಿದ್ದ ಬಾಗಲಕೋಟೆ. ಹನ್ನೆರಡು ತಿಂಗಳೂ ಅಲ್ಲಿ ಬೇಸಿಗೆಯೇ. ಅಂತಹ ಒಂದು ಬೇಸಿಗೆಯ ಮೇ ತಿಂಗಳಲ್ಲಿ ರವಿವಾರ ಮುಂಜಾನೆ ಬೇಗನೇ ಎದ್ದು ನಾನು ಮನೆಯಿಂದ ಹೊರಬಿದ್ದೆ. ನಮ್ಮ ಮನೆ ಊರ ಹೊರಗಿನ ಎಕ್ಸ್‌ಟೆನ್‌ಶನ್‌ದಲ್ಲಿ ಇದ್ದುದರಿಂದ ಒಂದು ಮೈಲು ನಡೆಯುವಷ್ಟರಲ್ಲೇ ನಾನು ಊರು ದಾಟಿದ್ದೆ. ಊರಾಚೆಯ ಅಡವಿ ಪ್ರವೇಶಿಸಿದ್ದೆ. ಬಯಲು ಸೀಮೆಯ ಅಡವಿ ಎಂದರೆ ಬರೀ, ಜಾಲಿ ಮರಗಳು, ಮುಳ್ಳುಕಂಟೆಗಳು, ಅಲ್ಲಲ್ಲಿ ಬೇವಿನ ಮರಗಳು, ಬೋಳು ಗುಡ್ಡಗಳು, ಕರಿ ಕಲ್ಲುಬಂಡೆಗಳು, ಆಚೆಗೆ ಸದಾ ಬಡವಾಗಿಯೇ ಹರಿಯುತ್ತಿದ್ದ, ಮಳೆಗಾಲದಲ್ಲಿ ಮಾತ್ರ ಮೈದುಂಬಿಕೊಳ್ಳುತ್ತಿದ್ದ, ಘಟಪ್ರಭಾ ನದಿ. ನಾನು ಒಬ್ಬಳೇ ಕಾತರದ ಕಣ್ಣುಗಳಿಂದ ಅತ್ತಿತ್ತ ನೋಡುತ್ತ, ಯಾವುದರ ಖಬರು ಇಲ್ಲದೆ ಮುಂದೆ-ಮುಂದೆ ನಡೆಯುತ್ತ ಹೋಗಿದ್ದೆ. ಯಾಕೆಂದರೆ –

ಯಾಕೆಂದರೆ ಆ ದಿನ ನನಗೆ ಸುಭಾಷಚಂದ್ರ ಬೋಸರನ್ನು ಹುಡುಕಿ ತೆಗೆಯಬೇಕಾಗಿತ್ತು. ಇತಿಹಾಸದ ಪುಸ್ತಕದಲ್ಲಿ ಓದಿದ್ದೆ; ನಮ್ಮ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಎರಡುನೂರು ವರ್ಷಕಾಲ ನಲುಗಿದ್ದು, ಸ್ವಾತಂತ್ರ್ಯಕ್ಕಾಗಿ ನಮ್ಮವರು ದಂಗೆಯೆದ್ದಿದ್ದು, ಸುಭಾಷ್‌ಚಂದ್ರ ಬೋಸರು ಹೋರಾಟಕ್ಕಾಗಿ ಸೇನೆ ಕಟ್ಟಿದ್ದು, ಗಾಂಧೀಜಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭವಾದದ್ದು, ಕೊನೆಗೂ ಸ್ವಾತಂತ್ರ್ಯ ದೊರೆತದ್ದು, ಆದರೆ ಈ ಮಧ್ಯೆ ಸುಭಾಷಚಂದ್ರರು ರಹಸ್ಯಪೂರ್ಣ ರೀತಿಯಲ್ಲಿ ಕಾಣೆಯಾದದ್ದು – ಇತ್ಯಾದಿ, ಇತ್ಯಾದಿ.

ನನ್ನ ತಾಯಿ ಯಾವಾಗಲೂ ಸುಭಾಷ್‌ಚಂದ್ರರ ಧೈರ್ಯ-ಸಾಹಸದ ಕತೆಗಳನ್ನು ಹೇಳುತ್ತಿದ್ದರು. ಕೊನೆಗೆ ಪ್ರತಿಸಲವೂ ಒಂದು ಮಾತು ಸೇರಿಸುತ್ತಿದ್ದರು – “ದೇಶ ಸ್ವತಂತ್ರವಾದ ನಂತರ ಸುಭಾಷ್‌ಚಂದ್ರರೇ ಪ್ರಧಾನ ಮಂತ್ರಿಯಾಗಿದ್ದರೆ ಇಷ್ಟೊತ್ತಿಗೆ (ಅದು ೧೯೫೦ರ ದಶಕ) ನಿರುದ್ಯೋಗ, ಅನಕ್ಷರತೆ, ಬಡತನ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿರುತ್ತಿದ್ದವು. ಇವತ್ತಿನ ನಮ್ಮ ಸಮಾಜಕ್ಕೆ ಅತ್ಯಂತ ಘಾತುಕಕಾರಿಯಾಗಿರುವ ಲಂಚ, ಭ್ರಷ್ಟಾಚಾರ, ಮೋಸ, ಸ್ವಾರ್ಥ ಇತ್ಯಾದಿ ಅನಿಷ್ಟಗಳು ಹೇಳ ಹೆಸರಿಲ್ಲದಂತಾಗಿರುತ್ತಿದ್ದವು. ನಾವು ಭಾರತವಾಸಿಗಳು ಅಭಿವೃದ್ಧಿ ಹೊಂದಿದವರೆಂದು ಹೆಮ್ಮೆಪಟ್ಟುಕೊಳ್ಳಬಹುದಿತ್ತು. ಆದರೇನು….”
“ಹೌದೆ? ಹಾಗಿದ್ದರೆ ನಾವೇಕೆ ಅವರನ್ನೇ ಪ್ರಧಾನಮಂತ್ರಿಯನ್ನಾಗಿ ಮಾಡಲಿಲ್ಲ?”
“ಯಾಕೆಂದರೆ ದುರ್ದೈವದಿಂದ ಅವರು ಕಾಣೆಯಾದರು.”

ಇಲ್ಲ, ಬಹುಶಃ ಅವರು ಸತ್ತಿಲ್ಲ ಎಂದು ಅನೇಕರು ಹೇಳುತ್ತಾರೆ – ನನ್ನ ತಂದೆಯ ಅಭಿಪ್ರಾಯ ಇಂದಿಗೂ ಅವರು ಭಾರತದ ಕಾಡುಗಳಲ್ಲಿ ವೇಷಮರೆಸಿ ಸಂಚರಿಸುತ್ತಿದ್ದಾರೆಂದು ಹೇಳುತ್ತಾರೆ. ಆದರೆ ಅದನ್ನೆಲ್ಲಾ ನಂಬಲಿಕ್ಕಾಗದು. ಏಕೆ ನಂಬಬಾರದು? ಈಗಲೂ ಹುಡುಕಿದರೆ ಸುಭಾಷ್‌ಚಂದ್ರರು ಸಿಗಬಹುದಲ್ಲವೆ? ಏಕೆ ಸಿಗಲಾರರು? ಶುದ್ಧ ಮನಸ್ಸಿನಿಂದ ಪ್ರಾಮಾಣಿಕ ಕಾರಣದಿಂದ ಜನಹಿತಕ್ಕಾಗಿ ಏನು ಕೇಳಿದರೂ ದೇವರು ಕೊಡುತ್ತಾನೆಂದು ಸಹ ತಾಯಿ ಹೇಳಿದ್ದರು. ಆದ್ದರಿಂದ ನಮ್ಮ ದೇಶದ ಉದ್ಧಾರಕ್ಕಾಗಿ ಸುಭಾಷ್‌ಚಂದ್ರರನ್ನು ಹುಡುಕಿದರೆ ಸಿಗಲೇ ಬೇಕಲ್ಲ.

“ದೇಶ ಸ್ವತಂತ್ರವಾದ ನಂತರ ಸುಭಾಷ್‌ಚಂದ್ರರೇ ಪ್ರಧಾನ ಮಂತ್ರಿಯಾಗಿದ್ದರೆ ಇಷ್ಟೊತ್ತಿಗೆ (ಅದು ೧೯೫೦ರ ದಶಕ) ನಿರುದ್ಯೋಗ, ಅನಕ್ಷರತೆ, ಬಡತನ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿರುತ್ತಿದ್ದವು. ಇವತ್ತಿನ ನಮ್ಮ ಸಮಾಜಕ್ಕೆ ಅತ್ಯಂತ ಘಾತುಕಕಾರಿಯಾಗಿರುವ ಲಂಚ, ಭ್ರಷ್ಟಾಚಾರ, ಮೋಸ, ಸ್ವಾರ್ಥ ಇತ್ಯಾದಿ ಅನಿಷ್ಟಗಳು ಹೇಳ ಹೆಸರಿಲ್ಲದಂತಾಗಿರುತ್ತಿದ್ದವು. ನಾವು ಭಾರತವಾಸಿಗಳು ಅಭಿವೃದ್ಧಿ ಹೊಂದಿದವರೆಂದು ಹೆಮ್ಮೆಪಟ್ಟುಕೊಳ್ಳಬಹುದಿತ್ತು. ಆದರೇನು….”

ಬಿಸಿಲು ಏರುತ್ತಿತ್ತು. ಅಡವಿಯಲ್ಲಿ ಯಾವ ಮನುಷ್ಯರ ಸುಳಿವೂ ಇರಲಿಲ್ಲ. ನಾನು ನನ್ನದೇ ಯೋಚನೆಯಲ್ಲಿ ಮುಳುಗಿದ್ದಂತೆ ಮುಂದೆ ಹೋಗುತ್ತಲೇ ಇದ್ದೆ. ಯಾವ ಗಳಿಗೆಯಲ್ಲಾದರೂ ಸುಭಾಷ್‌ಚಂದ್ರರು ಎದುರಿಗೆ ಬರಬಹುದು. ಅವರ ಕಾಲಿಗೆ ಬಿದ್ದು ಬೇಡಿಕೊಳ್ಳುವುದೇ ಸರಿ. ನೀವು ಕಾಡುಬಿಟ್ಟು ಊರಿಗೆ ಬರ್ರಿ. ನೀವೇ ಪ್ರಧಾನಮಂತ್ರಿಯಾಗಿರಿ. ನಿಮ್ಮ ರಾಷ್ಟ್ರೀಯ ಸೇನೆಯನ್ನು ಮತ್ತೆ ಕಟ್ಟಿರಿ. ಎಲ್ಲ ಲಂಚಕೋರ ಭ್ರಷ್ಟರಾಜಕಾರಣಿಗಳನ್ನು ಅಂಡಮಾನ ಜೈಲಿಗೆ ಕಳಿಸಿರಿ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗುವ ಹಾಗೆ ಮಾಡಿರಿ. ದುಷ್ಟಶಕ್ತಿಗಳನ್ನು ದಮನ ಮಾಡಿರಿ. ನಮ್ಮ ದೇಶವನ್ನು ಉದ್ಧರಿಸಿರಿ; ಅವರು ಒಪ್ಪಬಹುದು….

ದಾರಿಯ ಪಕ್ಕದಲ್ಲೊಂದು ದೊಡ್ಡ ಬೇವಿನ ಮರ. ಅದರ ನೆರಳಲ್ಲಿ ಒಬ್ಬ ಆಜಾನುಬಾಹು ವ್ಯಕ್ತಿ ಕೂತಿದ್ದ. ಗಡ್ಡ ಬೆಳೆದಿತ್ತು. ಬಟ್ಟೆ ಹರಿದಿತ್ತು. ಆದರೆ ತೀಕ್ಷ್ಣ ಕಣ್ಣುಗಳು, ಕೈಯಲ್ಲಿ ದೊಡ್ಡದೊಂದು ಬಡಿಗೆ. ಗಂಭೀರ ಮುಖಮುದ್ರೆ – ಏನೋ ಗಹನವಾದ ಯೋಚನೆಯಲ್ಲಿದ್ದ ಹಾಗೆ. ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಹಾಗೆ.
-ಇರಬಹುದೇ?
ನನ್ನ ನಡಿಗೆ ನಿಧಾನವಾಯಿತು. ನಾನು ಆ ವ್ಯಕ್ತಿಯಿಂದ ತುಸುದೂರ ನಿಂತು ಅವನನ್ನೇ ಸೂಕ್ಷ್ಮವಾಗಿ ಪರಿಶೀಲಿಸುತ್ತ ನೋಡಿದೆ. ಅಷ್ಟರಲ್ಲೇ ಅವನು ಅಂಗಿಯ ಕಿಸೆಯಿಂದ ಒಂದು ಮೋಟುಬೀಡಿ ತೆಗೆದು ಹೊತ್ತಿಸಿಕೊಂಡು ಬಾಯೊಳಗಿಟ್ಟು ಸೇದಿ ಬುಸ್ ಅಂತ ಹೊಗೆಬಿಟ್ಟು ಗಾಳಿಯನ್ನೂ ಕಲುಷಿತಗೊಳಿಸಿದ.

ಬಿಸಿಲು ಏರುತ್ತಿತ್ತು. ಅಡವಿಯಲ್ಲಿ ಯಾವ ಮನುಷ್ಯರ ಸುಳಿವೂ ಇರಲಿಲ್ಲ. ನಾನು ನನ್ನದೇ ಯೋಚನೆಯಲ್ಲಿ ಮುಳುಗಿದ್ದಂತೆ ಮುಂದೆ ಹೋಗುತ್ತಲೇ ಇದ್ದೆ. ಯಾವ ಗಳಿಗೆಯಲ್ಲಾದರೂ ಸುಭಾಷ್‌ಚಂದ್ರರು ಎದುರಿಗೆ ಬರಬಹುದು. ಅವರ ಕಾಲಿಗೆ ಬಿದ್ದು ಬೇಡಿಕೊಳ್ಳುವುದೇ ಸರಿ. ನೀವು ಕಾಡುಬಿಟ್ಟು ಊರಿಗೆ ಬರ್ರಿ. ನೀವೇ ಪ್ರಧಾನಮಂತ್ರಿಯಾಗಿರಿ. ನಿಮ್ಮ ರಾಷ್ಟ್ರೀಯ ಸೇನೆಯನ್ನು ಮತ್ತೆ ಕಟ್ಟಿರಿ. ಎಲ್ಲ ಲಂಚಕೋರ ಭ್ರಷ್ಟರಾಜಕಾರಣಿಗಳನ್ನು ಅಂಡಮಾನ ಜೈಲಿಗೆ ಕಳಿಸಿರಿ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗುವ ಹಾಗೆ ಮಾಡಿರಿ.

ಛೀ, ಛೀ, ಅಸಹ್ಯ. ನನ್ನ ಕನಸಿನ ಹೀರೋ ಹೀಗೆ ಬೀಡಿ, ಸಿಗರೇಟು ಸೇದುವಷ್ಟು ಹೊಲಸು ಮನುಷ್ಯನಾಗಿರಲು ಶಕ್ಯವೇ ಇಲ್ಲ. ಇವನಲ್ಲ. ಇವನಲ್ಲ.. ನನಗೆ ಹಸಿವಾಗತೊಡಗಿತ್ತು. ಗೆಳತಿಯ ಮನೆಗೆ ಹೋಗಿ ಬರುವೆನೆಂದು ಮನೆಯಲ್ಲಿ ಹೇಳಿದ್ದೆ. ಏನೂ ತಿಂದಿರಲಿಲ್ಲ. ಬಿಸಿಲು ಮತ್ತು ನಡಿಗೆಯ ಆಯಾಸದಿಂದ ಬೆವರು ಹನಿಯತೊಡಗಿತ್ತು. ಮನಸ್ಸಿನ ಮೂಲೆಯಲ್ಲೊಂದು ಆತಂಕವೂ ತಲೆಯೆತ್ತತೊಡಗಿತ್ತು. ಹೀಗೇ ಎಷ್ಟೆಂದು ಹೋಗುವುದು? ಸುಭಾಷ್‌ಚಂದ್ರರು ಕಾಣೆಯಾದದ್ದು ಎಲ್ಲಿ? ಅವರು ಇಷ್ಟುದೂರ ಈ ಬಾಗಲಕೋಟೆಗೆ ಅಡವಿಯಲ್ಲಿ ತಿರುಗಾಡುತ್ತಾ ಬಂದಿರಲು ಸಾಧ್ಯವೇ? ಅವರಿಗೇನಾದರೂ ಭಾರತದ ಪ್ರಧಾನಮಂತ್ರಿಯಾಗುವ ಉದ್ದೇಶವಿದ್ದಿದ್ದರೆ ಇಷ್ಟುದಿನ ಅದೃಶ್ಯರಾಗಿರುತ್ತಿದ್ದರೇಕೆ?

ಆದರೆ ಈ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ. ಭಾರತದ ನಶೀಬು ಚೆನ್ನಾಗಿದ್ದರೆ ಅವರು ಖಂಡಿತ ಒಂದು ದಿನ ಪ್ರತ್ಯಕ್ಷರಾಗುತ್ತಾರೆ. ದೇಶದ ಚುಕ್ಕಾಣಿ ಹಿಡಿದಿರುವ ಎಲ್ಲಾ ಸ್ವಾರ್ಥಿಗಳನ್ನು ಸ್ವಹಿತ ಸಾಧಕರನ್ನು ದೇಶಕಂಟಕರನ್ನು ಸರಿಯಾದ ರೀತಿಯಲ್ಲಿ ಶಿಕ್ಷಿಸಿ ದೇಶವನ್ನು ರಕ್ಷಿಸುತ್ತಾರೆ. ಅವರೊಬ್ಬರೇ ಈ ಕೆಲಸ ಮಾಡಬಲ್ಲರು. ಅವರೊಂದಿಗೆ ವಲ್ಲಭಬಾಯಿ ಪಟೇಲರೂ ಇದ್ದಿದ್ದರೆ ಚೆನ್ನಾಗಿತ್ತು. ಆದರೆ ಅವರಿಲ್ಲವಲ್ಲ…

ಎದುರಿನ ಕಾಲುದಾರಿಯಲ್ಲಿ ಒಂದು ಜೋಡೆತ್ತಿನ ಗಾಡಿ ಬರುತ್ತಿತ್ತು. ಸಮೀಪದ ಹಳ್ಳಿಯಿಂದ. ಅದು ಸಮೀಪ ಬರುತ್ತಿದ್ದಂತೆ ಅದಕ್ಕೆ ದಾರಿ ಮಾಡಿಕೊಡಲೆಂದು ಪಕ್ಕಕ್ಕೆ ಸರಿದು ನಿಂತೆ. ಗಾಡಿಯಲ್ಲಿ ಕೂತಿದ್ದ ರುಮಾಲುಧಾರಿ ಹಿರಿಯರೊಬ್ಬರು ಅಷ್ಟು ದೂರದಿಂದ ನನ್ನನ್ನೇ ನೋಡುತ್ತಲಿದ್ದವರು ಹತ್ತಿರ ಬಂದಾಗ ಗಾಡಿ ನಿಲ್ಲಿಸಲು ಹೇಳಿದರು. “ಏನ್‌ಯವ್ವಾ ತಾಯಿ, ನಮ್ಮ ಎಲಬುರ್ಗಿ ಸಯೇಬರ ಮಗಳು ಹೌದಲ್ಲೊ? ಇಲ್ಲ್ಯಾಕ ಬಂದೀಯವಾ?” ಅಂದರು. – ಸುಭಾಷ್‌ಚಂದ್ರರನ್ನು ಹುಡುಕುತ್ತಾ ಬಂದೆ ಎಂದು ಅವರಿಗೆ ಹೇಳಲಿಲ್ಲ. ಅವರು ಜುಲುಮೆಯಿಂದ ತಮ್ಮ ಗಾಡಿಯಲ್ಲಿ ಕೂಡ್ರಿಸಿಕೊಂಡು ನನ್ನನ್ನು ನಮ್ಮ ಮನೆಗೆ ತಂದುಬಿಟ್ಟರು.

ಆಗಲೇ ಮಧ್ಯಾಹ್ನವಾಗಿದ್ದರಿಂದ ನನ್ನನ್ನು ಹುಡುಕಿ ಗಾಬರಿಯಾಗಿದ್ದ ತಂದೆ-ತಾಯಿಗೆ ನಾನು ಎಲ್ಲಿಗೆ ಏಕೆ ಹೋಗಿದ್ದೆನೆಂದು ನಿಜವನ್ನೇ ಹೇಳಿದೆ. “ಅಯ್ಯೋ ಹುಚ್ಚಿ, ಸುಭಾಷ್‌ಚಂದ್ರರು ವಿಮಾನ ಅಪಘಾತದಲ್ಲಿ ಸತ್ತುಹೋಗಿ ವರ್ಷಗಳೇ ಕಳೆದವಲ್ಲ” ಅಂದರು. – ನಾನು ನಂಬಲಿಲ್ಲ.
-ನನಗಾಗ ಎಂಟು ವರ್ಷ ವಯಸ್ಸು.

 

 

(ಕೊಲಾಜ್ ಕಲೆ: ರೂಪಶ್ರೀ ಕಲ್ಲಿಗನೂರ್)