ಪ್ರತಿಯೊಂದು ಜೀವಿ ತನ್ನ ಅಸ್ತಿತ್ವದಿಂದ ವಿಶೇಷ ಅನ್ನಿಸಿಕೊಳ್ಳುವುದು ತಾನು ಮಾಡುವ ಸೇವೆಯಿಂದ ಎಂದು ನಂಬಿ ನಡೆಯುವ ಈ ಸನ್ಯಾಸಿನಿಯರು ಜಗತ್ತಿನ ಪಾಪ ತುಳಿಯುವ ಕಾಯಕ ತಮ್ಮದು ಎಂದು ನಂಬಿದವರು. ಹಾಗೆ ನೋಡಿದರೆ ಲಲ್ಲೇಶ್ವರಿ, ಅಕ್ಕಮಹಾದೇವಿ, ಮೀರಾ, ಸೂಫಿ ಸಂತ ಮಹಿಳೆಯರಾದ ಉಲೇಮ ರಬಿಯ ನಫೀಜಾ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳಿಗೆ ಮುಖಾಮುಖಿಯಾಗುತ್ತಲೇ ಜನ ಜೀವನದ ಸಂಕಷ್ಟಗಳಿಗೆ ಸ್ಪಂದಿಸುತ್ತ ಸಾಧನೆಯ ಪಥದಲ್ಲಿ ಮುನ್ನಡೆದವರು.
ಬಿ.ಎಂ. ರೋಹಿಣಿ ಹಾಗೂ ಮೋಲಿ ಮಿರಾಂದ ಬರೆದ “ಧರ್ಮ ಭಗಿನಿಯರು” ಕೃತಿಯ ಕುರಿತು ದೇವಿಕಾ ನಾಗೇಶ್ ಬರಹ
ಕಾರುಣ್ಯದ ಕಡಲು- ಕ್ರೈಸ್ತ ಭಗಿನಿಯರು ‘ಜಗವ ಬೆಳಗುವ ದೀಪ ನೀನು ತುಂಬಿಕೊಳ್ಳುವ ಖಾಲಿ ಪಾತ್ರೆ ನಾನು’ ಜಲಾಲುದ್ದೀನ್ ರೂಮಿಯವರ ಮಾತುಗಳು ಗಂಡು-ಹೆಣ್ಣು ಸಂಬಂಧದ ವಿಸ್ತಾರವನ್ನು ಧರ್ಮಾತೀತವಾದ ಬದುಕಿನ ಇನ್ನೊಂದು ಮಗ್ಗುಲಿಗೆ ಸೆಳೆಯುತ್ತದೆ. ಅತ್ಯಂತ ಸುಖದ ಸುಪತ್ತಿಗೆಯಲ್ಲಿ ತೇಲುತ್ತಿರುವಾಗ ಪ್ರಪಂಚದ ನಶ್ವರತೆಯ ಅರಿವಾಗಿ ಸನ್ಯಾಸಕ್ಕೆ ಮೊರೆ ಹೋದವರ ಬಗ್ಗೆ ಜೈನ, ಬೌದ್ಧ, ಧರ್ಮಗಳು ಮಾತನಾಡುತ್ತವೆ. ಈ ಎರಡು ಅತೀತಗಳ ನಡುವೆ ಬದುಕಿನ ಕಟು ವಾಸ್ತವಗಳಿಗೆ ಮುಖಾಮುಖಿಯಾಗಿ ಸೇವೆಯಲ್ಲಿ ದೇವರನ್ನು ಕಂಡವರು ಈ ಧರ್ಮ ಭಗಿನಿಯರು. ಹಿರಿಯ ಲೇಖಕಿ ಬಿ. ಎಂ. ರೋಹಿಣಿ ಮತ್ತು ಮೋಲಿ ಮಿರಾಂದ ಅವರ ಸಂಯುಕ್ತ ಪ್ರಯತ್ನದ ಫಲವಾಗಿ ಮೂಡಿ ಬಂದ ಕೃತಿ “ಧರ್ಮ ಭಗಿನಿಯರು.” ಈ ಶ್ರಮಕ್ಕೆ ಒಂದು ರೀತಿಯ ತಪಸ್ಸು ಬೇಕು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಕೆಲವು ಕ್ರೈಸ್ತ ಸನ್ಯಾಸಿನಿಯರ ಮೂಲವನ್ನು ಅರಸಿಕೊಂಡು ಹೋದಾಗ ಇವರಿಗೆ ಸಿಕ್ಕಿದ ಅಚ್ಚರಿಗಳ ಸೇರಿಕೆಯೇ ಈ ಗ್ರಂಥ. ಧ್ಯಾನವನ ಪ್ರಕಾಶನ ಸಂಸ್ಥೆಯಿಂದ ಮೂಡಿ ಬಂದಿರುವ ಈ ಕೃತಿಯು ಒಂದು ಸಂಗ್ರಹಯೋಗ್ಯ ಹೊತ್ತಿಗೆಯಾಗಿದೆ. ಹಲವು ಲೋಪಗಳ ನಡುವೆಯೂ ಕಿರುದಾರಿಗಳನ್ನು ಹುಡುಕಿಕೊಂಡು ದೃಢವಾದ ಹೆಜ್ಜೆಗಳನಿಡುತ್ತ ತಾವು ಹುಟ್ಟಿದ ನೆಲ ಬಿಟ್ಟು ದೇವರ ಸಂಕಲ್ಪವೆಂದು ನಂಬಿ ಈ ಕ್ರೈಸ್ತ ಭಗಿನಿಯರು ದೇಶ ವಿದೇಶಗಳಿಗೆ ಹೋಗಿ ನಮ್ಮ ತುಳುನಾಡಿಗೂ ಬಂದರು. ಹೀಗೆ ಬಂದ ಕ್ರೈಸ್ತ ಸನ್ಯಾಸಿನಿಯರ ಬೇರುಗಳು ಎಲ್ಲಿಯವು ಎನ್ನುವ ಹುಡುಕಾಟದ ಜೊತೆಗೆ ಪ್ರಾರಂಭದ ದಿನಗಳಲ್ಲಿ ಅವರು ಎದುರಿಸಿದ ಸವಾಲುಗಳ ಕಿರು ಚಿತ್ರಣವನ್ನು ಈ ಹೊತ್ತಿಗೆ ಮಾಡಿಕೊಡುತ್ತದೆ.

(ಬಿ.ಎಂ. ರೋಹಿಣಿ)
ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಬದಲಾವಣೆಗಳು, ವೈದ್ಯಕೀಯ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಇವುಗಳಲ್ಲಿ ಕ್ರೈಸ್ತ ಭಗಿನಿಯರ ಕೊಡುಗೆಗಳನ್ನು ಈ ಗ್ರಂಥ ದಾಖಲಿಸುತ್ತದೆ. ಎರಡು ಶತಮಾನಗಳ ಹಿಂದೆ ಈ ಕ್ರೈಸ್ತ ಸನ್ಯಾಸಿನಿಯರು ತಮ್ಮ ಚರ್ಚ್ ಸೋದರರ ಆಮಂತ್ರಣವನ್ನು ಮನ್ನಿಸಿ ಕಡಲು ಮಾರ್ಗವಾಗಿ ಭಾರತದ ನೆಲಕ್ಕೆ ಕಾಲಿಟ್ಟಾಗ ಇವರನ್ನು ಇಲ್ಲಿ ರತ್ನಗಂಬಳಿ ಹಾಕಿ ಯಾರೂ ಸ್ವಾಗತಿಸಿರಲಿಲ್ಲ. ಆಗ ಇವರು ಇಲ್ಲಿ ಕಾಲಿಟ್ಟ ಉದ್ದೇಶ ಧರ್ಮ ಪ್ರಚಾರವೇ ಆಗಿತ್ತು. ಆದರೆ ಆ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಇವರು ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡರು. ಇಲ್ಲಿನ ಜನರ ಜೀವನದಲ್ಲಿ ಬೆರೆಯುವ ಸಲುವಾಗಿ ಇಲ್ಲಿನ ಭಾಷೆ ಕಲಿತರು. ಈ ಮಿಷಿನರಿಗಳ ಒಡನಾಟದಲ್ಲಿ ತಮ್ಮ ಬಾಲ್ಯವನ್ನು ಕಳೆದ ಬಿ.ಎಂ.ರೋಹಿಣಿಯವರು ತಮ್ಮ ಮುಗ್ಧ ಕಣ್ಣುಗಳಲ್ಲಿ ಇವರನ್ನು ಕಂಡವರು.
ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದರು. ನಂತರ ಬೆಥನಿ ಸಂಸ್ಥೆಯಲ್ಲಿ ಉದ್ಯೋಗಕ್ಕೂ ಸೇರಿಕೊಂಡರು, ಪ್ರೌಢರಾಗಿ ಪಕ್ವಗೊಂಡರು. ಇದೀಗ ಬದುಕಿನ ಇಳಿ ಸಂಜೆಯಲ್ಲಿದ್ದಾರೆ. ತನ್ನ ಕೈ ಹಿಡಿದು ಮುನ್ನಡೆಸಿದ ಬೆಥನಿ ಸಂಸ್ಥೆಗಾಗಿ (ಕಾಂಗ್ರೆಗೇಶನ್ ಆಫ್ ದಿ ಸಿಸ್ಟರ್ಸ್ ಆಫ್ ಲಿಟಲ್ ಪ್ಲವರ್ ಆಫ್ ಬೆಥನಿ ಮಂಗಳೂರು) ಏನಾದರೂ ಮಾಡಬೇಕು ಎಂಬ ಉದ್ದೇಶ ಅವರ ಮನಸ್ಸಿನಲ್ಲಿ ಹಿಂದಿನಿಂದಲೂ ಆಳವಾಗಿ ಇತ್ತು. ಅದಕ್ಕೆ ಕಾರಣವೂ ಈ ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ ತುಳುನಾಡಿನ ಹಳ್ಳಿಯ ಮೂಲೆ ಮೂಲೆಗಳಲ್ಲಿ ಶಿಕ್ಷಣವನ್ನು ನೀಡಿದ ಸಂಸ್ಥೆ. ಈ ಸಂಸ್ಥೆ ಪ್ರಾರಂಭದಲ್ಲಿ ಸ್ಥಾಪನೆಯಾದದ್ದು ಕೂಡ ಬಡ ಹಿನ್ನೆಲೆಯಿಂದ ಬಂದ ಕ್ರೈಸ್ತ ಸನ್ಯಾಸಿನಿಯರಿಗೆ ಧರ್ಮ ದೀಕ್ಷೆ ಕೊಟ್ಟು ಅವರನ್ನು ಸೇವೆಯಲ್ಲಿ ಮುನ್ನಡೆಸಲು ಎನ್ನುವ ವಿಚಾರ ಒಂದು ರೀತಿಯಲ್ಲಿ ಕುತೂಹಲಕಾರಿಯಾಗಿರುವಂಥದ್ದು. ಬಿ ಎಂ ರೋಹಿಣಿಯವರ ಈ ಸಂಕಲ್ಪಕ್ಕೆ ಸಹಾಯ ಹಸ್ತ ನೀಡಿದವರು ಮೋಲಿ ಮಿರಾಂದ. ಇವರು ಕೂಡ ಬೆಥನಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಎನ್ನುವುದು ಒಂದು ವಿಶೇಷ. ಮೋಲಿ ಜೊತೆಗಿದ್ದದರಿಂದ ತನ್ನ ಕೆಲಸ ಹೂ ಎತ್ತಿದಷ್ಟು ಸರಾಗವಾಯಿತು ಎಂದು ಬಾಯಿ ತುಂಬಾ ಹೇಳಿಕೊಳ್ಳುವ ಬಿ.ಎಂ. ರೋಹಿಣಿ ನಮ್ಮ ನಡುವಿನ ಆಶ್ಚರ್ಯ ಯಾವುದೇ ದೂರು ದುಮ್ಮಾನಗಳಿಲ್ಲದೆ ಜಗತ್ತನ್ನು ಸುಖಾ ಸುಮ್ಮನೆ ಪ್ರೀತಿಸುವ ತಾಳ್ಮೆ, ಆತ್ಮಸ್ಥೈರ್ಯ ಮತ್ತು ನೈತಿಕತೆಯನ್ನು ನಾವು ಇವರನ್ನು ನೋಡಿ ಕಲಿಯಬೇಕು.
“ಮನುಜ ಮತ ವಿಶ್ವಪಥ” ಕುವೆಂಪುರವರು ನಮಗೆ ತೆರೆದಿಟ್ಟ ಮಾರ್ಗವಿದು. ಕ್ರೈಸ್ತ ಸನ್ಯಾಸಿನಿಯರು ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಸೇವೆಯಲ್ಲಿ ಕೈಯಾಡಿಸದ ಕ್ಷೇತ್ರವಿಲ್ಲ. ಅನಾಥಾಶ್ರಮ, ವೃದ್ಧಾಶ್ರಮ, ಅಂಗವಿಕಲರಿಗೆ ವೃತ್ತಿ ತರಬೇತಿ ಕೇಂದ್ರ, ದಾರಿ ತಪ್ಪಿದ ಮಹಿಳೆಯರಿಗೆ ಪುನರ್ವಸತಿ ಕೇಂದ್ರ, ಅನಾಥ ಅಪಾಯದಂಚಿನಲ್ಲಿರುವ ಮಕ್ಕಳ ಸಂರಕ್ಷಣೆ, ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ, ಮಹಿಳಾ ಸಹಾಯವಾಣಿ, ಸ್ವಾಧಾರ, ಅಲ್ಪಾವಧಿ ವಸತಿ ಗ್ರಹ, ಕ್ಷಯ ರೋಗಿಗಳಿಗೆ, ಕುಷ್ಟರೋಗಿಗಳಿಗೆ ಪುನರ್ವಸತಿ ಕೇಂದ್ರ…. ಹೀಗೆ ಸೇವಾ ಕ್ಷೇತ್ರದಲ್ಲಿ ಭಾರತದಲ್ಲಿ ಹಲವು ಪ್ರಥಮಗಳನ್ನು ತೆರೆದಿಟ್ಟ ದಿಟ್ಟೆಯರು ಇವರು.
ಈ ಭಗಿನಿಯರಲ್ಲಿ ಸಾಹಿತ್ಯದ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ, ವಕೀಲರು, ಚಿತ್ರ ಕಲಾವಿದರು, ಡಾಕ್ಟರ್, ಇಂಜಿನಿಯರರು ಹೀಗೆ ಇವರು ಅಭಿವೃದ್ಧಿಯ ವಿವಿಧ ರಂಗಗಳಲ್ಲಿ ಸೇವೆ ಮಾಡಿ ತಮ್ಮ ಪ್ರತಿಭೆಯನ್ನು ಮೆರೆದವರು ಇದ್ದಾರೆ. ಹೆಣ್ಣಿಗೆ ಆತ್ಮವೇ ಇಲ್ಲ; ಜಗತ್ತಿಗೆ ಪಾಪವನ್ನು ತಂದವಳು ಅವಳು ಎಂದು ಕ್ರೈಸ್ತ ಧರ್ಮ ನಂಬುತ್ತಿದ್ದ ಕಾಲ ಒಂದಿತ್ತು. ಹೆಣ್ಣು ತಾಯಿಯಾದರೆ ಮಾತ್ರ ಅವಳಿಗೆ ಮೋಕ್ಷ ಸಿಗುತ್ತದೆ ಎನ್ನುವುದು ಈ ಸಮುದಾಯದವರ ಸಾಮಾನ್ಯ ಭಾವನೆ. ಈ ಸವಾಲುಗಳ ನಡುವೆಯೂ ಏಸುಕ್ರಿಸ್ತನನ್ನೇ ಪತಿಯೆಂದು ಭಾವಿಸಿ ಸೇವಾ ದೀಕ್ಷೆ ಪಡೆದುಕೊಂಡವರು ಕ್ರೈಸ್ತ ಸನ್ಯಾಸಿನಿಯರು. “ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ ಮಣ್ಣು ಮಾಯೆ ಎಂಬರು… ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ” ಹೀಗೆಂದವನು ಅಲ್ಲಮಪ್ರಭು. ಕಾಯಕವೇ ಕೈಲಾಸ ಎಂದು ನಂಬಿದ್ದ ಬಸವಣ್ಣ 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ತೆರೆದರು. ಸ್ತ್ರೀ ಪುರುಷರಿಬ್ಬರೂ ಇದನ್ನು ಜ್ಞಾನದ ಹರವಿಗೆ ಸಮಾನ ವೇದಿಕೆಯಾಗಿ. ಹಂಚಿಕೊಂಡರು. ಇಲ್ಲಿ ಎಲ್ಲರೂ ಜಾತಿ, ಮತ, ಧರ್ಮ, ಲಿಂಗಾತೀತವಾಗಿ ವಿಚಾರಗಳನ್ನು ಮಂಡಿಸುವ ಅವಕಾಶಗಳಿತ್ತು. ಜಗತ್ತಿನ ಎಲ್ಲಾ ಧರ್ಮಗಳ ಮೌಲ್ಯಕ್ಕೆ ಕನ್ನಡಿ ಹಿಡಿಯುವಂತೆ ಇದ್ದ ಈ ವೇದಿಕೆಯನ್ನು ಆ ಕಾಲದ ಜನಸಾಮಾನ್ಯರು ಸಶಕ್ತವಾಗಿ ಬಳಸಿಕೊಂಡರು. ಮಾಡಲು ಕೆಲಸವಿಲ್ಲ ಎಂದರೆ ಅವರ ಬೊಗಸೆಯಲ್ಲಿ ಹಣತೆ ಇಡು ಎನ್ನುತ್ತಾನೆ ಜಲಾಲುದ್ದೀನ್ ರೂಮಿ.
ವಿದೇಯತೆಯನ್ನು ಮೂಲ ಮಂತ್ರವಾಗಿಸಿಕೊಂಡವರು ಕ್ರೈಸ್ತ ಭಗಿನಿಯರು. ಧರ್ಮಗಳ ಮೂಲ ಆಶಯ ಪ್ರೀತಿಯ ಕಣ್ಣಿನಿಂದ ಜಗತ್ತನ್ನು ನೋಡುವುದು ನೊಂದವರ ಅಸಹಾಯಕರ ಕಣ್ಣೀರು ಒರೆಸುವುದು. ಆಸೆಯೇ ದುಃಖಕ್ಕೆ ಮೂಲ ಎನ್ನುವುದನ್ನು ಮನಗಂಡ ಗೌತಮ ಬುದ್ಧ…. ಸಾರಿದ ಸಂದೇಶ ಇದುವೇ. ‘ಪ್ರಾರ್ಥನೆ ಇಲ್ಲದಿರುತ್ತಿದ್ದರೆ ನಾನು ಹುಚ್ಚನಾಗುತ್ತಿದ್ದೆ’ ಎನ್ನುತ್ತಾರೆ ಮಹಾತ್ಮ ಗಾಂಧಿ. ಜಗತ್ತಿನ ಅನುಭಾವ ಪರಂಪರೆ ನಡೆದು ಬಂದ ದಾರಿಯ ಕಿರು ಚಿತ್ರಣ ನೀಡುವ ಸಂದೇಶಗಳು ಇವು. ಕ್ರೈಸ್ತ ಭಗಿನಿಯರು ಗಂಡಸರ ಜಗತ್ತಿಗೆ ಪರಿಚಿತವಾಗಿದ್ದ ಹೆರಿಗೆ ಕೋಣೆ ಹೊಕ್ಕರು, ದಾದಿಯರಾದರು. ಲೈಂಗಿಕ ಕಾರ್ಯಕರ್ತರಿಗೆ ಆಸರೆ ನೀಡಿದರು. ಬೀದಿಯಲ್ಲಿರುವ ಶಿಕ್ಷಣ ವಂಚಿತ ಮಕ್ಕಳನ್ನು ಶಾಲೆಗೆ ಸೇರಿಸಿದರು. ಪ್ರತಿಯೊಂದು ಜೀವಿ ತನ್ನ ಅಸ್ತಿತ್ವದಿಂದ ವಿಶೇಷ ಅನ್ನಿಸಿಕೊಳ್ಳುವುದು ತಾನು ಮಾಡುವ ಸೇವೆಯಿಂದ ಎಂದು ನಂಬಿ ನಡೆಯುವ ಈ ಸನ್ಯಾಸಿನಿಯರು ಜಗತ್ತಿನ ಪಾಪ ತುಳಿಯುವ ಕಾಯಕ ತಮ್ಮದು ಎಂದು ನಂಬಿದವರು. ಹಾಗೆ ನೋಡಿದರೆ ಲಲ್ಲೇಶ್ವರಿ, ಅಕ್ಕಮಹಾದೇವಿ, ಮೀರಾ, ಸೂಫಿ ಸಂತ ಮಹಿಳೆಯರಾದ ಉಲೇಮ ರಬಿಯ ನಫೀಜಾ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳಿಗೆ ಮುಖಾಮುಖಿಯಾಗುತ್ತಲೇ ಜನ ಜೀವನದ ಸಂಕಷ್ಟಗಳಿಗೆ ಸ್ಪಂದಿಸುತ್ತ ಸಾಧನೆಯ ಪಥದಲ್ಲಿ ಮುನ್ನಡೆದವರು.

ಇದು ಬದುಕೇ ಎಂದರೆ ಅವರಿಗೆ ಅದು ಬದುಕಾಗಿತ್ತು. ಇದು ಆಧ್ಯಾತ್ಮವೇ ಎಂದರೆ ಅದು ಅವರಿಗೆ ಆಧ್ಯಾತ್ಮವಾಗಿತ್ತು. ಎರಡನ್ನೂ ಹೌದು ಎನ್ನುತ್ತಲೇ ಯಾವುದೇ ತಕರಾರಿಲ್ಲದೆ ಬದುಕನ್ನು ಪ್ರೀತಿಸುತ್ತಾ ಮೊಂಬತ್ತಿಯಂತೆ ಕರಗಿ ಜೀವನವನ್ನು ಮುಗಿಸಿದವರು. “ಧರ್ಮ ಭಗಿನಿಯರು” ಕೃತಿ ಕರ್ನಾಟಕದಲ್ಲಿ ನೆಲೆಯಾಗಿರುವ ಕ್ರೈಸ್ತ ಸನ್ಯಾಸಿನಿಯರ ಪರಿಚಯವನ್ನು ನೀಡುತ್ತದೆ. ಇಲ್ಲಿ ಒಟ್ಟು 14 ಧರ್ಮ ಪ್ರಾಂತ್ಯಗಳ ವ್ಯಾಪ್ತಿಯ 121 ಕ್ರೈಸ್ತ ಸನ್ಯಾಸಿನಿಯರ ಸಭೆಗಳಿವೆ. ಇದರಲ್ಲಿ ಲೋಕ ಹಿತಕ್ಕಾಗಿ ಸಂಪೂರ್ಣ ದೇವರ ಸೇವೆಯಲ್ಲಿ ನಿರತರಾದ ಡಿಸ್ಕಾಲ್ಸೇಡ್ ಕಾರ್ಮೆಲೈಟ್ ಸಿಸ್ಟರ್ಸ್ (ಬಿತರ್ಲಿ ಮದರ್ಸ್)ಗಳದ್ದು ಒಂದು. ಇವರು ತಮ್ಮ ಅವಿರತ ಪ್ರಾರ್ಥನೆಯಿಂದಲೇ ಜಗತ್ತಿನ ಸಂಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂಬ ಗಾಢ ನಂಬಿಕೆಯಿಂದ ಬದುಕುತ್ತಿರುವವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವೆ, ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡ 51 ಕ್ರೈಸ್ತ ಸನ್ಯಾಸಿನಿಯರ ಸಂಸ್ಥೆಗಳಿವೆ. ಇವುಗಳಲ್ಲಿ 12 ಇಟಲಿ ಮೂಲದವು, 18 ಫ್ಯಾನ್ಸ್ ಮೂಲದವು. ಸ್ಪೇನ್, ಸ್ವಿಜರ್ಲ್ಯಾಂಡ್ ತಲಾ ಎರಡೆರಡು. ವಿಯೆನ್ನಾ, ಸ್ವೀಡನ್, ಜರ್ಮನ್, ಬೆಲ್ಜಿಯಂ, ರೋಮ್, ನೆದರ್ಲ್ಯಾಂಡ್, ಮಾಲ್ವದ್ವೀಪ, ದಕ್ಷಿಣ ಅಮೇರಿಕಾ, ಪೆರು ತಲಾ ಒಂದೊಂದು. ಉಳಿದವು ಭಾರತ ಮೂಲದವು. ಭಾರತ ಮೂಲದ ಕ್ರೈಸ್ತ ಸನ್ಯಾಸಿನಿಯರಲ್ಲಿ ಮೂರು ಮಂಗಳೂರು ಮೂಲದವು. ವಿಶೇಷತೆ ಏನೆಂದರೆ ಭಾರತ ಮೂಲದವೂ ಕೂಡ ಜಗತ್ತಿನ ಉದ್ದಗಲ ಧರ್ಮ ಪ್ರಚಾರದಲ್ಲಿ ಸೇವೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ನೂರು ಜುಟ್ಟು ಸೇರುತ್ತದೆ, ಮೂರು ಜಡೆ ಸೇರಲಾರದು ಎಂಬ ಸುಳ್ಳು ಆರೋಪಗಳು ಮಹಿಳೆಯರ ಬಗ್ಗೆ ಇರುವುದು ಆಗಾಗ್ಗೆ ಕೇಳಿ ಬರುತ್ತದೆ. ಆದರೆ ದಾಖಲೆ ನಿರ್ಮಿಸಿದ ಸಾವಿರಾರು ವರ್ಷ ಬಾಳಿರುವ ಮಹಿಳೆಯರ ಒಂದಷ್ಟು ಸಂಸ್ಥೆಗಳು ಈ ಆರೋಪಗಳನ್ನು ಹುಸಿಗೊಳಿಸುತ್ತವೆ. ಕ್ರೈಸ್ತ ಸನ್ಯಾಸಿನಿಯರ ಸಂಸ್ಥೆಗಳ ವಿಶೇಷತೆ ಏನೆಂದರೆ ಸೇವೆಯಲ್ಲಿ ತೊಡಗಿಕೊಂಡು ಬದುಕು ಸವೆದು ವೃದ್ಧರಾದ ಹಿರಿಯರನ್ನು ಅವರ ಸಾವಿನವರೆಗೆ ಆತ್ಮದ ಘನತೆಯೊಂದಿಗೆ ಬದುಕುವ ಅನುಕೂಲ ಮಾಡಿಕೊಟ್ಟಿರುವುದು. ಈ ಭಗಿನಿಯರು ತಮ್ಮ ಹಾಗೆ ಬದುಕು ಸವೆಸಿದ ವೃದ್ಧರನ್ನು ಜೊತೆಗೆ ಇರಿಸಿಕೊಂಡು ಸಲಹಿದ್ದಾರೆ. ಅವಿಭಕ್ತ ಕುಟುಂಬಗಳು ವಿಭಿನ್ನ ಕಾರಣಗಳಿಗಾಗಿ ಕಡಿಮೆಯಾಗುತ್ತಿರುವ ಈ ಹೊತ್ತು ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಅವಗಣನೆಗೆ ಒಳಪಟ್ಟಿರುವುದು ನಾವು ಕಾಣುತ್ತಿದ್ದೇವೆ. ಕುಟುಂಬ ವ್ಯವಸ್ಥೆಯೇ ಶಿಥಿಲವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅವಿವಾಹಿತರಾಗಿ ಉಳಿಯಬಯಸುವ ಗಂಡು-ಹೆಣ್ಣು ಮಕ್ಕಳ ಸಂಖ್ಯೆಗಳು ಎಲ್ಲಾ ಜಾತಿ, ಮತ, ಧರ್ಮ, ಸಮುದಾಯಗಳಲ್ಲೂ ಹೆಚ್ಚಾಗುತ್ತಿದೆ. ಇವರಿಗೆ ನೂರಾರು ಅವಕಾಶಗಳು ಸೇವೆಗೆ ಒದಗಿ ಬರುತ್ತಿವೆ. ಜಗತ್ತಿನ ಎಲ್ಲಾ ಧರ್ಮಗಳ ಮೂಲ ಆಶಯ ಒಂದೇ ಆಗಿದ್ದರೂ ಒಡೆದು ಆಳುವ ತಂತ್ರಗಾರಿಕೆ, ಕೋಮು ಗಲಭೆ ಯಾಕೆ ಹುಟ್ಟಿಕೊಳ್ಳುತ್ತದೆ ಎಂದು ಯೋಚಿಸಿದಾಗ ದಿಗಿಲು ಹುಟ್ಟುತ್ತದೆ.
ಜೀವಪರ ಮೌಲ್ಯಗಳು, ಪ್ರೀತಿ, ಸಾಮರಸ್ಯ, ಸಹಬಾಳ್ವೆಯ ತತ್ವ ಗುಡಿಯಲ್ಲಿರಲಿ, ಮಸೀದಿಯಲ್ಲಿರಲಿ, ಮಂದಿರದಲ್ಲಿರಲಿ, ಮಠದಲ್ಲಿರಲಿ, ಚರ್ಚಿನಲ್ಲಿರಲಿ ಇದು ಲೋಕಮಾನ್ಯವೇ. ನಾವು ಯಾರೂ ಯುದ್ಧ, ಜಿದ್ದನ್ನು ಬಯಸುವವರಲ್ಲ. ಬೌದ್ಧ ಬಿಕ್ಕುಣಿಯರು, ಜೈನ ಸನ್ಯಾಸಿನಿಯರು, ಶರಣೆಯರು ಸೂಫಿ ಸಂತ ಮಹಿಳೆಯರು, ಕ್ರೈಸ್ತ ಸನ್ಯಾಸಿನಿಯರು ಬದುಕು ಕಟ್ಟುವ ಕಾಯಕದಲ್ಲಿ ಪ್ರೀತಿ ಹಂಚುತ್ತಾ ದೇವರನ್ನು ಕಂಡವರು. ಐದನೇ ಶತಮಾನಕ್ಕೂ ಪೂರ್ವದಲ್ಲಿ ಸ್ಥಾಪನೆಯಾದ ಕ್ರೈಸ್ತ ಭಗಿನಿಯರ ಸೇವಾ ಸಂಸ್ಥೆಗಳು ಯುದ್ಧ, ಕಾಯಿಲೆ, ಪ್ರಾಕೃತಿಕ ವಿಕೋಪಗಳಿಂದ ಜಗತ್ತು ತಲ್ಲಣಿಸುತ್ತಿದ್ದ ಸಂಕ್ರಮಣ ಕಾಲದಲ್ಲಿ ಜನ ಜೀವನದ ಸಂಕಷ್ಟ ಅರಿತು ಸೇವೆಗೆ ಮುನ್ನುಗ್ಗಿದವರು. ದಯೆಯೇ ಧರ್ಮದ ಮೂಲ ಎನ್ನುವಂತೆ ದೀನದಲಿತರ ಸೇವೆಯಲ್ಲಿ ಬೆರಗು ಪಡುತ್ತಲೇ ದೇವರನ್ನು ಕಂಡವರು. ಫ್ರೆಂಚ್ ಕ್ರಾಂತಿ, ಕೈಗಾರಿಕಾ ಕ್ರಾಂತಿಯಿಂದ ತತ್ತರಿಸುತ್ತಿದ್ದಾಗ ನಿರುದ್ಯೋಗಿಗಳಿಗೆ, ಕುಶಲಕರ್ಮಿಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಅವರ ಕಣ್ಣೀರು ಒರಸಿ ಕೈಹಿಡಿದು ಜೊತೆಗೆ ಮುನ್ನಡೆಸಿದವರು.

ನಮ್ಮ ಇತಿಹಾಸದಲ್ಲಿ ಚರ್ಚ್ ಕಟ್ಟಲು ಹಿಂದುಗಳು ಭೂಮಿ ನೀಡಿದ ಉದಾಹರಣೆಗಳಿವೆ. ಹಿಂದೂಗಳಿಗಾಗಿ ಕ್ರೈಸ್ತ ಮಿಷನರಿಗಳು ದೇವಸ್ಥಾನ ಕಟ್ಟಲು ನೆರವಾದ ಉದಾಹರಣೆಗಳಿವೆ. 12ನೇ ಶತಮಾನದಲ್ಲಿ ವೈದಿಕ ಸಂಸ್ಕೃತಿಯ ಕಪಿ ಮುಷ್ಟಿಯಿಂದ ಬೇಸತ್ತು ತಳ ಸಮುದಾಯದವರನ್ನು ಅಸ್ಪೃಶ್ಯರನ್ನು ತಮ್ಮ ಧರ್ಮದೊಳಗೆ ಬರಮಾಡಿಕೊಂಡವರು ಜೈನ, ಬೌದ್ಧ, ಶರಣರು. ವಿಷಾದವೆಂದರೆ ಈ ಯಾವುದೇ ಧರ್ಮಗಳೂ ತಮ್ಮ ಸಹಜೀವಿ ಮಹಿಳೆಯರನ್ನು ಧಾರ್ಮಿಕ ವಿಧಿ ವಿಧಾನಗಳ ಭಾಗವಾಗುವುದಕ್ಕೆ ಒಪ್ಪಲಿಲ್ಲ. ಮಹಿಳೆಯರ ಮುಟ್ಟಿನ ಕಾರಣ ಹೇಳಿ ಪುರುಷಷಾಹಿ ವ್ಯವಸ್ಥೆ ಇವರನ್ನು ಅಂಚಿಗೆ ತಳ್ಳುತ್ತಿರುವುದು ಕಾಲ ಕಂಡ ಸತ್ಯ. ಧರ್ಮಗಳು ಜನಸಾಮಾನ್ಯರ ಪಾಲಿನ ಅಫೀಮು ಎಂದು ನಂಬಿದ ನಾಡಿನಲ್ಲಿ ಸೇವೆ ಮಾಡುತ್ತಲೇ ಸದ್ಗತಿ ಕಂಡವರೂ ಇದ್ದಾರೆ. ಆದ್ದರಿಂದ ಎಲ್ಲಾ ಧರ್ಮಗಳ ಮಠಾಧಿಪತಿಗಳನ್ನು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳೂ ಓಲೈಸುತ್ತವೆ. ಪಾದ ಪೂಜೆ ಮಾಡುತ್ತದೆ. ಜನತಾ ಸೇವೆಯೇ ಜನಾರ್ಧನ ಸೇವೆ ಎನ್ನುವ ನುಡಿ ಮುತ್ತು ಬಳಕೆಯಲ್ಲಿರುವುದು ಇದೇ ಕಾರಣದಿಂದ. ಈ ತಂತ್ರಗಾರಿಕೆ ಧಾರ್ಮಿಕ ಸಾಮಾಜಿಕ, ಆರ್ಥಿಕ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಜ್ಞಾಪೂರ್ವಕವಾಗಿ ಹರಿದಾಡುತ್ತದೆ. ಈ ಎಲ್ಲ ವಿಪರ್ಯಾಸಗಳ ನಡುವೆ ನಿಂತು ವ್ಯವಸ್ಥೆಯೊಳಗೆ ಹುದುಗಿರುವ ಸತ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಇವು ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚಬೇಕು.

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.

