ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ.
ಮನು ಗುರುಸ್ವಾಮಿ ಬರೆದ “ಅವಳೂ ಕತೆಯಾದಳು” ಕೃತಿಗೆ ಡಾ. ವಿಜಯಕುಮಾರಿ ಎಸ್ ಕರಿಕಲ್ ಬರೆದ ಮುನ್ನುಡಿ

ಮನು ನನ್ನ ವಿದ್ಯಾರ್ಥಿ. ಆತ ನೋಡುವುದಕ್ಕೆ ಅಷ್ಟೇನೂ ಅಬ್ಬರವಲ್ಲ. ಕುಳ್ಳಗೆ ತೆಳ್ಳಗೆ ಸೌಮ್ಯವಾಗಿ ಇರುವ ಈ ಹುಡುಗನ ಒಳಗೊಬ್ಬ ಕಲಾವಿದ ಇದ್ದಾನೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಒಂದು ದಿನ ಅವನೊಂದು ಕಥೆ ತಂದು ಮುನ್ನುಡಿ ಬರೆದು ಕೊಡಿ ಎಂದು ಕೇಳುವವರೆಗೆ ಅವನು ಎಲ್ಲರೊಳಗೆ ಒಬ್ಬನಾಗಿದ್ದ. ಕಥೆ ತಂದು ಕೈಗಿತ್ತಾಗ ಮತ್ತೇನು ಬರೆದಿದ್ದೀಯ ಎಂದು ಕೇಳಲು ಕವಿತೆ, ನಾಟಕ ಇತ್ಯಾದಿ ಬರೆದಿರುವುದಾಗಿ ತನ್ನ ಸಾಹಿತ್ಯ ಕೃಷಿಯ ಬಗೆಗೆ ಹೇಳಿಕೊಂಡ.

ಈ ನೀಳ್ಗತೆಗೆ ಮುನ್ನುಡಿ ಬರೆದು ಕೊಡುವಂತೆ ಬಂದು ನನಗೆ ಕತೆಯ ಪ್ರತಿಯನ್ನು ಕೊಟ್ಟಾಗ, ಒಂದೇ ಕತೆಯನ್ನು ಪುಸ್ತಕ ಮಾಡುವ ಈ ಹುಡುಗನದು ಹುಚ್ಚುತನವೆ ಎಂದುಕೊಂಡೆ. ನನ್ನ ಕೆಲಸ ಕಾರ್ಯಗಳ ಮಧ್ಯೆ ಓದಲು ಕೆಲದಿನ ತೆಗೆದುಕೊಂಡೆ. ಆಗಾಗ ಬಂದು ಮೇಡಂ ಕಥೆ ಓದಿದ್ದೀರಾ ಎಂದು ಕೇಳಿ ನೆನಪಿಸುತ್ತಿದ್ದ. ಕಥೆಯೇನೋ ಓದಿದೆ ಆದರೆ ಬರೆಯುವಲ್ಲಿ ಮತ್ತೆ ವಿಳಂಬವಾಯಿತು. ನನ್ನ ಈ ವಿಳಂಬ ಮನೋಭಾವವನ್ನು ಸಹಿಸಿಕೊಂಡ ಮನು ಅವರ ತಾಳ್ಮೆಗೆ ಮೊದಲು ಒಂದು ಸಲಾಂ ಹೇಳಲೇಬೇಕು. ಬಹುಶಃ ನನಗೆ ಮುನ್ನುಡಿ ಬರೆಯಲು ಕೊಟ್ಟದ್ದು ಬಿಸಿ ತುಪ್ಪದಂತಾಗಿರಬೇಕು. ಆಡಲಾರ ಅನುಭವಿಸಲಾರ ಇದೀಗ ಆ ಕತೆಯೇ ನನ್ನನ್ನು ಕಾಡಿ ಬರೆಯುವುದಕ್ಕೆ ಪ್ರೇರೇಪಿಸಿದೆ. ಆದರೆ ಒಳಗಿನ ಪಾತ್ರಗಳು ಕಣ್ಣ ಮುಂದೆ ಕುಣಿಯತೊಡಗಿದಾಗ ಇನ್ನು ಬರೆಯದೇ ಇರಲಾರೆ ಎನಿಸಿ ಬರೆಯಲು ಕುಳಿತೆ.

(ಮನು ಗುರುಸ್ವಾಮಿ)

ಅವಳು ಕತೆಯಾದಳು ಎಂಬುದು ಈ ಕಥೆಯ ಹೆಸರು. ಹೆಸರಿನಿಂದಲೇ ಇದೊಂದು ಸ್ತ್ರೀ ಕೇಂದ್ರಿತ ಕತೆಯೆಂಬುದು ತಿಳಿದುಬಿಡುತ್ತದೆ. ಅಂತೆಯೇ ಇಲ್ಲಿ ಒಬ್ಬ ಹುಡುಗಿಯ ಕತೆಯಿದೆ. ಬಹುಶಃ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಎಂಬ ಹೆಸರೂ ನೆನಪಿಗೆ ಬರುತ್ತದೆ. ಆದರೆ ಇಲ್ಲಿಯ ಕತೆಯೇ ಬೇರೆ. ಮನುವಿನ ಈ ವಯಸ್ಸು ಪ್ರೇಮಕತೆಗಳನ್ನು ಬರೆಯುವಂಥದ್ದು. ಹಾಗಾಗಿ ಯಾವುದೋ ಪ್ರೇಮಕಥೆಯೇ ಇರಬಹುದು ಎಂದುಕೊಂಡರೆ ಅದು ಸುಳ್ಳು ಎಂಬುದು ಕತೆ ಓದುತ್ತಾ ಹೋದಂತೆ ಗಮನಕ್ಕೆ ಬರುತ್ತದೆ.

ಲೇಖಕ ‘ಮನು’ ಕತೆಯ ಆರಂಭದಲ್ಲಿಯೇ ಕತೆಯ ಕುರಿತು ಆಡಿರುವ ‘ಮನದ ಮಾತು’ ಈ ಕತೆಯ ಉದ್ದೇಶವನ್ನು ತೆರೆದಿಟ್ಟಿದೆ. ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ. ಅದರಲ್ಲೂ ಹಳ್ಳಿಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂಬುದು ನಮಗೆಲ್ಲ ತಿಳಿದ ವಿಷಯ. ಹುಡುಗಿಗೆ ಹದಿನೆಂಟು ತುಂಬುವುದನ್ನೇ ಕಾಯುವ ತಂದೆ ತಾಯಿಗಳು ಮಗಳಿಗೆ ಮದುವೆ ಮಾಡಿ ಅವಳನ್ನೊಂದು ದಡಕ್ಕೆ ಸೇರಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದೇ ಹೆಚ್ಚು. ಪ್ರೀತಿ ಪ್ರೇಮ ಎಂಬ ಹುಚ್ಚಿನಲ್ಲಿ ಮಕ್ಕಳು ಮನೆತನದ ಮರ್ಯಾದೆಗೆ ದಕ್ಕೆ ತಂದಾರೊ ಎಂಬ ಆತಂಕ ಮಕ್ಕಳು ಹೊರಗೆ ಕಾಲಿಟ್ಟಾಗ ಏನಾದರೂ ಅವಘಡ ಸಂಭವಿಸುತ್ತದೆಯೋ ಎಂಬ ಭಯ ತಂದೆ ತಾಯಿಯರನ್ನು ಕಾಡುತ್ತಿರುತ್ತದೆ. ಇದೇ ಅಂಶವನ್ನು ಬಹಳ ನಾಜೂಕಾಗಿ ಹೆಣಿದಿರುವುದೇ ಈ ಕತೆಯ ವಿಶೇಷ. ಇದಿಷ್ಟೇ ಅಲ್ಲ ದೇವಿಕ ಎಂಬ ಹುಡುಗಿಯ ಬದುಕು ಕಥೆಯಾಗುವ ಮಟ್ಟಿಗೆ ಆಕೆಯ ಜೀವನದಲ್ಲಿ ನಡೆಯುವ ಘಟನೆಗಳಿವೆಯಲ್ಲ ಅವು ಅನಿರೀಕ್ಷಿತವಾದವು. ಒಂದು ಸಣ್ಣಕತೆಯ ವೈಶಿಷ್ಟ್ಯವೇ ಅದು. ಅನಿರೀಕ್ಷಿತ ತಿರುವಿನಲ್ಲಿ ಕತೆ ಸಮಾಪ್ತಿಗೊಳ್ಳುವುದು. ಕತೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಸಂಬಂಧಗಳ ಸಂಕೀರ್ಣ ಜಾಲವನ್ನು ನಿಭಾಯಿಸುವ ರೀತಿ ಈ ಕತೆಯಲ್ಲಿ ಸಹಜವಾಗಿ ಮೂಡಿಬಂದಿದೆ.

ಚಿಕ್ಕಚೊಕ್ಕದಾದ ಎರಡು ಕುಟುಂಬಗಳ ಚಿತ್ರಣದೊಂದಿಗೆ ಕತೆ ಬಿಚ್ಚಿಕೊಳ್ಳುತ್ತದೆ. ಅಣ್ಣ ತಂಗಿಯರು ಒಂದೇ ಊರಿನಲ್ಲಿ ವಾಸಿಸುತ್ತಿದ್ದಾರೆ. ತಂಗಿಯ ಗಂಡ ತೀರಿಹೋಗಿದ್ದಾನೆ. ಅವಳ ಒಬ್ಬನೇ ಮಗ ಬೆಳೆದು ನಿಂತಿದ್ದಾನೆ. ತಂದೆ ತಾಯಿ ಇಲ್ಲದ ಕಾರಣ ಓದನ್ನು ಮೊಟಕುಗೊಳಿಸಿ ಉದ್ಯೋಗಕ್ಕೆ ಸೇರಿರುವ ಆತ ತಾಯಿಯ ಮಾತು ಮೀರದವನು. ತಾಯಿಗೆ ಮಗನ ಮೇಲೆ ಸಹಜವಾಗಿ ಅತಿಶಯ ಪ್ರೀತಿ ಇದೆ.

ಅಣ್ಣ ಬಸವಗೌಡನ ಮನೆಯಲ್ಲಿ ಅವನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ತಂದೆ ತಾಯಿ ಇಬ್ಬರಿಗೂ ತಮ್ಮ ಮಕ್ಕಳ ಮೇಲೆ ಅಪಾರ ಪ್ರೀತಿಯಿದೆ. ಮಕ್ಕಳು ಕೂಡ ತಮ್ಮ ತಂದೆ ತಾಯಿಯ ಮಾತಿನೊಳಗೆ ಕಣ್ಣಂಜಿಕೆಯಲ್ಲಿದ್ದರೂ ಪ್ರೀತಿಗೇನೂ ಕೊರತೆ ಇಲ್ಲ. ಇಬ್ಬರೂ ಶಾಲೆಗೆ ಹೋಗುವವರು. ಹಿರಿಯ ಮಗಳು ದೇವಿಕಳನ್ನು ತನ್ನ ತಂಗಿಯ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಬಸವೇಗೌಡನಿಗೆ. ಆದರೆ ತಾನು ಚೆನ್ನಾಗಿ ಓದಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಏನಾದರೂ ಸಾಧಿಸಬೇಕೆಂಬ ಹಠ ದೇವಿಕಳದು. ಅವಳಿಗೆ ತಾಯಿಯ ಬೆಂಬಲವೂ ಇದೆ. ಇತ್ತ ಸೋದರತ್ತೆಗೆ ದೇವಿಕಳನ್ನು ತನ್ನ ಮಗನಿಗೆ ತಂದುಕೊಳ್ಳುವ ಇಚ್ಛೆಯಿದೆಯಾದರೂ ತನ್ನ ಅತ್ತಿಗೆಗೆ ಅದು ಇಷ್ಟವಿಲ್ಲ ಎಂಬ ಮನದಾಳದ ಮಾತು ಅರಿವಿರುವುದರಿಂದ ಏನನ್ನೂ ಮಾತನಾಡಲಾಗದೆ ಮನದ ಉಮ್ಮಾಳದಲ್ಲಿದ್ದಾಳೆ. ಆಕೆಯ ಮಗನಿಗೂ ದೇವಿಕಳನ್ನು ಮದುವೆಯಾಗಬೇಕೆಂಬ ಹಂಬಲವಿದ್ದರೂ ಅದನ್ನು ಮಾತನಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾನೆ. ಇದ್ಯಾವುದರ ಪರಿವೆಯೂ ಇಲ್ಲದ ದೇವಿಕಳ ತಂಗಿ ಆರಾಮಾಗಿದ್ದಾಳೆ.


ಈ ಕಣ್ಣಮುಚ್ಚಾಲೆಯಾಟದಲ್ಲಿ ದೇವಿಕ ಮತ್ತು ಅವಳ ತಾಯಿ ಗೆಲುವು ಪಡೆಯುತ್ತಾರೆ. ದೇವಿಕ ಮುಂದೆ ಓದುವುದಕ್ಕೆ ತಂದೆ ಬಸವಗೌಡನ ಅನುಮತಿ ಸಿಗುತ್ತದೆ. ಕಾಲೇಜು ಸೇರಿದ ದೇವಿಕ ಓದು ಬರಹದಲ್ಲಿ ತಲ್ಲೀನಳಾದರೂ ಅವಳದೇ ಮನಸ್ಥಿತಿಯ ರಾಜಶೇಖರನೆಂಬ ಯುವಕನೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗುತ್ತದೆ. ಆದರೆ ದೇವಿಕ ಸಂದಿಗ್ಧತೆಯಲ್ಲಿದ್ದಾಳೆ. ಅವಳಿಗೆ ತನ್ನ ಪ್ರೀತಿಗಿಂತ ಜವಾಬ್ದಾರಿ ದೊಡ್ಡದೆನಿಸುತ್ತದೆ. ಪ್ರೀತಿಯನ್ನು ನಯವಾಗಿ ನಿರಾಕರಿಸುತ್ತಾಳೆ. ಪದವಿ ಮುಗಿದೊಡನೆ ತಂದೆ ಅವಳ ಮದುವೆಗೆ ಅವಸರಿಸುತ್ತಾನೆ. ಅಂತೆಯೇ ಲಾಯರ್ ವರನಿಗೆ ಕೊಟ್ಟು ಮಗಳ ಮದುವೆ ಮಾಡಿ ನಿರಾಳವಾಗುತ್ತಾನೆ. ಅವಳ ಬದುಕು ಸುಖವಾಗಿ ಸಾಗಿದೆ. ವರ್ಷ ತುಂಬುವುದರಲ್ಲಿ ಮಗು ಮಡಿಲು ತುಂಬಿದೆ. ಒಳ್ಳೆಯ ಮನೆತನದ ಯಾವುದಕ್ಕೂ ಕೊರತೆಯಿಲ್ಲದ ಜೀವನ. ಈ ಮಧ್ಯೆ ಪತಿಗೆ ಅನಾರೋಗ್ಯ ಕಾಡುತ್ತದೆ. ಅದನ್ನು ತೋರಗೊಡವುದಿಲ್ಲ. ಆದರೆ ದೇವಿಕಳ ಮುಂದಿನ ಭವಿಷ್ಯವೇನು ಎಂಬ ಚಿಂತೆ ಆವರಿಸಿ ಆತ ಅವಳ ಮನದಾಳ ತಿಳಿಯುತ್ತಾನೆ. ಆಕೆಗೆ ಐಎಎಸ್ ಮಾಡುವ ಅಪೇಕ್ಷೆ ಇದ್ದುದ್ದನ್ನು ತಿಳಿದ ಆತ ಅವಳ ಗುರಿ ಸೇರಿಸಲು ನಿರ್ಧರಿಸುತ್ತಾನೆ. ಆಕೆಯ ಓದಿನ ಹಂಬಲ ಅರಿತ ಪತಿ ಅವಳಿಚ್ಛೆಯಂತೆ ಐಎಎಸ್ ಗೆ ಸಿದ್ಧತೆ ಮಾಡಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡುತ್ತಾನೆ. ಪತಿಯ ಈ ಬಗೆಯ ಬದಲಾವಣೆಯ ಹಿಂದಿರುವ ಕಾರಣವನ್ನರಿಯದೆ ದೇವಿಕ ತನ್ನ ಓದಿನಲ್ಲಿ ಮಗ್ನಳಾಗಿ ಹಿಡಿದ ಛಲ ಸಾಧಿಸಿದಳು. ಅಷ್ಟರಾಗಲೇ ಅವಳ ಕಾಲೇಜು ಜೀವನದ ಗುಟ್ಟು ಪತಿಗೆ ತಿಳಿದಾಗ ಆತನಿಗೆ ಸಮಾಧಾನವಾಗುತ್ತದೆ. ರಾಜಶೇಖರನೊಂದಿಗೆ ಅವಳನ್ನು ಸೇರಿಸಬೇಕೆಂದು ಯೋಚಿಸುವಷ್ಟರಲ್ಲಿ ಆತ ತೀರಿಹೋದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ.

ಅಂದು ಜಡಿಮಳೆ ಸುರಿಯುವ ಹೊತ್ತು. ದೇವಿಕಳ ಅತ್ತೆ ಹುಷಾರಿಲ್ಲದೆ ಮಲಗಿರುವುದರಿಂದ ಡಾಕ್ಟರನ್ನು ಕರೆತರಲು ಹೊರಟ ಪತಿರಾಯ. ಮನೆಯಲ್ಲಿ ಅತ್ತೆ ಆರೈಕೆ ಮಾಡುತ್ತಿರುವ ದೇವಿಕ ಅಡುಗೆ ಮನೆಯ ಒಳಗಿದ್ದಾಳೆ. ಒಂದೆಡೆ ಕಾಲಿಂಗ್ ಬೆಲ್ ಮೊಳಗಿದರೆ ಇನ್ನೊಂದೆಡೆ ಪೋನ್ ರಿಂಗಣಿಸಿದೆ. ಈ ಎರಡನ್ನೂ ದೇವಿಕ ಅಟೆಂಡ್ ಮಾಡಬೇಕು. ಮೊದಲು ಬಾಗಿಲು ತೆರೆದು ಪೋಸ್ಟ್ ಮ್ಯಾನ್‌ನಿಂದ ಕವರ್ ಪಡೆದಿದ್ದಾಳೆ. ಅದು ಅವಳ ಐಎಎಸ್ ಅಧಿಕಾರಿಯಾಗಿ ನೇಮಕವಾದ ಆದೇಶಪತ್ರ. ಇತ್ತ ಫೋನಿನಲ್ಲಿ ತನ್ನ ಪತಿ ತೀರಿಹೋದ ಸುದ್ದಿ; ಈ ಎರಡೂ ಏಕಕಾಲಕ್ಕೆ ಅಪ್ಪಳಿಸಿದ ಹೊತ್ತು ಕತೆ ಮುಗಿದಿದೆ.

ಇದು ಒಂದು ಹೆಣ್ಣಿನ ಸಾಹಸಗಾಥೆಯನ್ನು ಚಿತ್ರಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶದ ಅನೇಕ ಹೆಣ್ಣುಮಕ್ಕಳ ಜೀವನವನ್ನು ಪ್ರತಿನಿಧಿಸುವ ಕತೆಯಿದು. ಬಹುಶಃ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಬಗೆಯ ವಿಧಿಯಾಟ. ಹೆಣ್ಣುಮಕ್ಕಳಿಗೆ ಓದು, ವಿದ್ಯೆ, ಉದ್ಯೋಗದ ಅವಕಾಶಗಳು ಎಷ್ಟು ಮಹತ್ವದ್ದು ಎನ್ನುವುದನ್ನು ಬಹಳ ನವಿರಾಗಿ ಈ ಕತೆ ನಿರೂಪಿಸುತ್ತದೆ.

ಕತೆಯ ಗತಿ ನಿಧಾನವಾಗಿದೆ. ಒಂದೊಂದೇ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಕತೆ ಕೇವಲ ವರದಿಯಾಗದೆ ಕಲಾತ್ಮಕ ರೂಪ ಪಡೆಯುವಲ್ಲಿ ಯಶಸ್ವಿಯಾಗಿದೆ. ಒಂದೊಂದು ಸಂದರ್ಭದಲ್ಲೂ ಒಂದೊಂದು ರೂಪಕ ಆ ಹೊತ್ತಿನ ಮುನ್ಸೂಚನೆಯನ್ನು ಕೊಡುವಂತಿರುವುದು ಅದರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಕತೆ ಆರಂಭವಾಗುವುದು ಅದು ಪುಟ್ಟಕ್ಕನ ಹಟ್ಟಿ ಎಂಬುವುದರಿಂದ. ಬಸವೇಗೌಡನ ಪತ್ನಿ ದೇವಿಕಳ ತಾಯಿ ಪುಟ್ಟಕ್ಕ. ಇಲ್ಲಿ ಆ ಮನೆ ಪುಟ್ಟಕ್ಕನದು. ಬಸವೇಗೌಡ ಮತ್ತು ಪುಟ್ಟಕ್ಕನ ನಡುವೆ ಮಗಳ ಭವಿಷ್ಯ ಕುರಿತಂತೆ ನಡೆಯುವ ವಾಗ್ವಾದ, ಅದರಲ್ಲಿ ಪುಟ್ಟಕ್ಕನ ಗೆಲುವು ಕಾಣುತ್ತದೆ. ಇತ್ತ ಪ್ರೀತಿ, ತ್ಯಾಗ ಮುಂತಾದ ಸಂಗತಿಗಳು ಸಂದರ್ಭಕ್ಕನುಗುಣವಾಗಿ ಬರುತ್ತವೆ. ಬಸವೇಗೌಡನ ತಂಗಿ ತಾಯವ್ವನ ಮಗ ಅರುಣ ದೇವಿಕಳನ್ನು ಮದುವೆಯಾಗ ಬಯಸುವ ಗುಪ್ತಪ್ರೇಮಿ. ಆದರೆ ಆತ ದೇವಿಕಳ ಮನದ ಆಸೆ ತಿಳಿದು ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾನೆ. ತಾನು ಇನ್ಯಾರನ್ನೊ ಮೆಚ್ಚಿರುವುದಾಗಿ ಸುಳ್ಳು ಹೇಳಿ ಬಸವೇಗೌಡನನ್ನು ನಂಬಿಸುತ್ತಾನೆ.

ದೇವಿಕಳೇನೂ ಭಾವನೆಗಳಿಲ್ಲದ ಕೊರಡಲ್ಲ. ಕಾಲೇಜಿನಲ್ಲಿ ತನ್ನ ಮನೋಧರ್ಮವನ್ನು ಹೋಲುವ ರಾಜಶೇಖರನಲ್ಲಿ ಒಲವು ಮೂಡುತ್ತದೆ. ಇಬ್ಬರಲ್ಲೂ ಪ್ರೇಮವಂಕುರಿಸಿದರೂ ತನ್ನ ತಂದೆಯ ಅನುಮಾನ ನಿಜವಾಗಬಾರದು ಎಂಬ ಕಾರಣಕ್ಕೆ ಪ್ರೇಮ ನಿರಾಕರಿಸುವ ದೇವಿಕಳ ಅಸಹಾಯಕ ಸ್ಥಿತಿ ಮನಕರಗಿಸುತ್ತದೆ. ರಾಜಶೇಖರನ ತ್ಯಾಗ ಇಲ್ಲಿ ಎದ್ದು ಕಾಣುತ್ತದೆ. ತಂದೆಗೆ ಕೊಟ್ಟ ಮಾತಿನಂತೆ ತಾನಾಯಿತು ತನ್ನ ಓದಾಯ್ತು ಎಂದು ಬದುಕುವ ಬದ್ಧತೆ ದೇವಿಕಳದು.

ಈ ಎಲ್ಲವನ್ನೂ ಮೀರಿದ ವಿಧಿಲಿಖಿತವೆಂಬುದೊಂದಿದೆಯಲ್ಲ…. ಅದು ದೇವಿಕಳ ಬಾಳಿನಲ್ಲಿ ಆಟವಾಡಿದ ಪರಿಗೆ ಅವಳ ಬದುಕು ಛಿದ್ರವಾಗಬೇಕು. ಆದರೆ ಅಷ್ಟರಲ್ಲಿ ಈ ವಿಧಿಲಿಖಿತ ಮುನ್ಸೂಚನೆ ಪಡೆದ ಆಕೆಯ ಪತಿ ಅದಕ್ಕೊಂದು ಸರಿಯಾದ ದಾರಿ ಹುಡುಕಿ ದೇವಿಕಳ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರೂ ಆತ ಮಾತ್ರ ವಿಧಿವಶನಾಗುತ್ತಾನೆ. ಹೀಗೆ ಕತೆ ಮುಕ್ತಾಯಗೊಳ್ಳುತ್ತದೆ. ಒಂದು ಕೈಯಲ್ಲಿ ಉಜ್ವಲ ಭವಿಷ್ಯವಿದೆ ಇನ್ನೊಂದು ಕೈಯಲ್ಲಿ ಬದುಕು ಮುರುಟಿಹೋದ ವಿಚಾರವಿದೆ. ಇವೆರಡರ ಮಧ್ಯದಲ್ಲಿ ದೇವಿಕ ದಿಕ್ಕುತೋಚದೆ ನಿಂತಿದ್ದಾಳೆ. ಸಂಭ್ರಮ ಮತ್ತು ಸಂಕಟಗಳೆರಡೂ ಒಟ್ಟಿಗೆ ಅಪ್ಪಳಿಸಿದ ಸ್ಥಿತಿಯಿದು.

(ಡಾ. ವಿಜಯಕುಮಾರಿ ಎಸ್ ಕರಿಕಲ್)

ಈ ಕತೆಯು ಸರ್ವಸಾಕ್ಷಿ ಪ್ರಜ್ಞೆಯಲ್ಲಿ ನಿರೂಪಣೆಗೊಂಡಿದೆ. ಕತೆಗಾರ ಕತೆಯ ಹೊರಗೆ ನಿಂತು ಘಟನೆಗಳನ್ನು ನಿರೂಪಿಸುತ್ತಾನೆ. ಈ ಕತೆಗೆ ಒಂದು ನಿರ್ದಿಷ್ಟ ಉದ್ದೇಶವಿರುವುದು ಸ್ಪಷ್ಟ. ಆ ಉದ್ದೇಶ ಈಡೇರಿಕೆಗಾಗಿ ಘಟನೆಗಳು ದುಡಿಯುತ್ತವೆ. ಇಲ್ಲಿಯ ಪಾತ್ರಗಳು ಕತೆಗಾರನ ಉದ್ದೇಶಕ್ಕೆ ತಕ್ಕಂತೆ ಬೆಳೆಯುತ್ತವೆ. ಹಾಗೆಂದು ಕತೆಗಾರನ ಉದ್ದೇಶ ಅಲ್ಪತನದಲ್ಲ. ಸ್ತ್ರೀಪರವಾದ ಕಾಳಜಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನ್ನ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡಬೇಕಾದ ಪ್ರಸಂಗ, ಇಂತವುಗಳ ಸೂಕ್ಷ್ಮ ನಿರೂಪಣೆ ಇಂತವುಗಳ ಸೂಕ್ಷ್ಮ ನಿರೂಪಣೆಯಿರುವುದನ್ನು ಇಲ್ಲಿ ಕಾಣಬಹುದು.

ಕತೆಯ ಮುಖ್ಯ ಗುಣವೆಂದರೆ ಕತೆಯ ಘಟನೆಗಳಿಗೆ ಸಮಾನಾಂತರವಾಗಿ ಬರುವ ಕೆಲವು ಸಂಗತಿಗಳು. ಬೆಣ್ಣೆಗಾಗಿ ಕಾಯುವ ಬೆಕ್ಕು, ಬಲಿಯನ್ನು ಹಿಡಿಯಲು ಯತ್ನಿಸುವ ಹಲ್ಲಿ, ಇತ್ತ ಕತೆಯ ಪಾತ್ರವಾದ ಪುಟ್ಟಕ್ಕ ಸಿಟ್ಟಿನ ರಭಸದಲ್ಲಿ ಎದ್ದಾಗ ಆ ಎರಡೂ ತಮ್ಮ ಗುರಿ ಮರೆತು ಓಟ ಕೀಳುವ ಚಿತ್ರಣ, ಬಸವೇಗೌಡ ಹಾಗೂ ತಾಯವ್ವನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ವಸ್ತುಪ್ರತಿರೂಪವನ್ನು ಈ ಕತೆ ತುಂಬ ಚೆನ್ನಾಗಿ ಒಳಗೊಂಡಿರುವುದು ಕತೆಯ ಓಟ ಅನಿರೀಕ್ಷಿತ ಅಂತ್ಯ, ದ್ವಂದ್ವಗಳಲ್ಲಿ ಸಿಲುಕಿದ ಮನಸ್ಥಿತಿ ಇದೆಲ್ಲವೂ ಈ ನೀಳ್ಗತೆಯ ಜೀವಾಳವಾಗಿದೆ.


ಒಟ್ಟಾರೆ ಮನು ಅವರ ಈ ಕತೆ ಭರವಸೆ ಹುಟ್ಟಿಸುತ್ತದೆ. ಮುಂದಿನ ದಿನಗಳಲ್ಲಿ ಒಬ್ಬ ಉತ್ತಮ ಕಥೆಗಾರನಾಗುವ ಲಕ್ಷಣಗಳು ಈ ಕತೆಯಲ್ಲಿ ಕಾಣಿಸುತ್ತಿದೆ. ಮನು ಈ ಕೃತಿಯ ಮೂಲಕ ಕನ್ನಡ ಕಥಾಲೋಕ ಪ್ರವೇಶಿಸುತ್ತಿದ್ದಾರೆ. ಅವರನ್ನು ಕನ್ನಡ ಓದುಗಲೋಕ ಹಾರ್ದಿಕವಾಗಿ ಬರಮಾಡಿಕೊಳ್ಳಲೆಂದು ಹಾರೈಸುತ್ತೇನೆ. ಉತ್ತಮ ಕತೆಗಳು ಮನು ಅವರಿಂದ ಮೂಡಿಬರಲಿವೆ ಎಂಬ ಆಶಾಭಾವನೆಯಲ್ಲಿ ಅವರ ಉತ್ತರೋತ್ತರ ಬೆಳವಣಿಗೆಗೆ ಹಾರೈಸುವೆ.

(ಕೃತಿ: ಅವಳೂ ಕತೆಯಾದಳು (ನೀಳ್ಗತೆ), ಲೇಖಕರು: ಮನು ಗುರುಸ್ವಾಮಿ, ಪ್ರಕಾಶಕರು: ಶ್ರೀಕ್ಷೇತ್ರ ಪ್ರಕಾಶನ, ಬೆಲೆ: 100/-)