ಕಾವ್ಯವನ್ನು ಸ್ಮಿತಾ ಭಾವಾಭಿವ್ಯಕ್ತಿಗೆ ಮಾಧ್ಯಮವಾಗಿ ಮಾತ್ರ ಬಳಸಿಕೊಂಡಿಲ್ಲ. ಬದುಕಿನ ಎಲ್ಲ ವಿಷಮತೆಗಳ ನಡುವೆಯೂ ಜೀವಚೈತನ್ಯದ ರಸವನ್ನಾಗಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಬಹುತೇಕ ಕವಿತೆಗಳು ಹೆಣ್ತನದ ಸೀಮಿತ ನೆಲೆಯಲ್ಲೇ ಮೂಡಿದೆ. ಜಗತ್ತಿನ ಅರ್ಧದಷ್ಟಿರುವ ಸ್ತ್ರೀ ಸಮೂಹದ ಅನುಭವಗಳಿಗೆ ಸೀಮಿತದ ಚೌಕಟ್ಟು ಹಾಕುವುದುಂಟು.  ಆದರೆ ಸ್ತ್ರೀ ಲೋಕ  ಈ ಎಲ್ಲ ಚೌಕಟ್ಟಿಗೂ ಮೀರಿ ಬೃಹತ್ ಆಲದ ಮರದಂತೆ ಬೀಳಲು ಬಿಟ್ಟು ತನ್ನೊಡಲೊಳಗೆ ಚಿಗುರುವ ಆಶ್ರಯ ಬಯಸುವ ಚೈತನ್ಯಗಳಿಗೆ ಆವಾಸವಾಗುತ್ತದೆ.
ಸ್ಮಿತಾ ಅಮೃತರಾಜ್ ಅವರ ‘ಮಾತು ಮೀಟಿ ಹೋಗುವ ಹೊತ್ತು’ ಕವನ ಸಂಕಲನದ ಕುರಿತು ನಾಗರೇಖಾ ಗಾಂವಕರ ಬರಹ. 

 

ಹೆಣ್ಣಿಗೆ ತನ್ನದೇ ಆದ ಪ್ರಪಂಚವಿದೆ. ಭಾವಲೋಕವಿದೆ. ಸಂವೇದನೆಗಳಿವೆ. ಪ್ರಜ್ಞೆಯಿದೆ. ಅದೆಷ್ಟು ಕೋಮಲವಾಗಿದೆಯೆಂದರೆ ತಾಳುವ, ಬಾಳುವ, ಸಹಿಸುವ, ಸೋಲುವ, ಓಲೈಸುವ, ರಮಿಸುವ, ಸಂಗತಿಗಳಲ್ಲಿ ಈ ಲೋಕ ಆನಂದಿಸುತ್ತವೆ. ನೋವನ್ನು, ಶೋಷಣೆಯನ್ನೂ, ಅನ್ಯಾಯವನ್ನೂ ಅತಿರೇಕ ಎಂದು ಗಣಿಸದೇ ಬದುಕಿನ ಭಾಗವಾಗಿಯೇ ಸೈರಿಸಿದ್ದು ಆಕೆಯಲ್ಲಿರುವ ಭೂ ತತ್ವದ ಸತ್ವ. ಆದರೆ ಈ ತಾಳ್ಮೆ, ಸಂಯಮ, ಭರಿಸುವ ಶಕ್ತಿಯನ್ನು ಈ ಜಗತ್ತಿನ ಪುರುಷ ಜಗತ್ತು ನಿರಂತರವಾಗಿ ತನ್ನ ಸಾಧನೆಯ, ಏಳ್ಗೆಯ ಏಣಿಯಂತೆ ಬಳಸಿಕೊಂಡಿದ್ದು ವಿಪರ್ಯಾಸ. ಸಮಾನತೆಯ ಅವಕಾಶವನ್ನು ವಂಚಿಸುತ್ತಾ, ಗೌರವ, ಮರ್ಯಾದೆ, ಗರತಿ ಇಂತಹ ಸಾಂಪ್ರದಾಯಿಕ ಪ್ರಭಾವ ಅಥವಾ ಪ್ರೇರಣೆಯನ್ನು ಆಕೆಯಲ್ಲಿ ಉತ್ತೇಜಿಸುತ್ತಾ ಅದೇ ಅವಳ ಬದುಕಿನ ಸಾರ್ಥಕ್ಯ ಎಂಬ ಭ್ರಮೆ ಬೇರು ಬಿಡುವಂತೆ ಮಾಡಲಾಗಿದೆ. ಪುರುಷ ಪ್ರಾಬಲ್ಯದ ಕಾರಣ ಮಹಿಳಾ ಲೋಕದ ಸಹಜ ಮತ್ತು ಸಾಂಪ್ರದಾಯಿಕ ಧೋರಣೆಗಳಲ್ಲಿ ಮಹತ್ವಾಕಾಂಕ್ಷೆಯನ್ನು ಮೊದಲಿನಿಂದಲೂ ನಿಷೇಧಾತ್ಮಕವಾಗಿಯೇ ಪರಿಗಣಿಸಲಾಗುತ್ತಿತ್ತು. ಮಹತ್ವಾಕಾಂಕ್ಷಿಗಳಾದ ಹೆಣ್ಣನ್ನು ಅಪನಂಬಿಕೆಯಿಂದ ಸಾಮಾಜಿಕ ಬದುಕಿಗೆ ಕಂಟಕಪ್ರಾಯದ ಪಾತ್ರದಂತೆ ಚಿತ್ರಿಸಲಾಗುತ್ತಿತ್ತು. ಇಂದಿಗೂ ಈ ಸ್ಥಿತಿ ಅಂತಹ ಬದಲಾವಣೆಗಳನ್ನು ಕಂಡಿಲ್ಲ. ಅವಳ ದನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಲೇ ಬಂದಿವೆ. ಆದರೂ ಸ್ತ್ರೀ ಸಂಕುಲ ಅದನ್ನು ಮೀರುವ ಪ್ರಯತ್ನವನ್ನು ಮಾಡುತ್ತಲೇ ಇದೆ.

ಇಷ್ಟು ಹೇಳಲು ಕಾರಣವಾದ ಸಂಗತಿಯೆಂದರೆ ಸ್ಮಿತಾ ಅಮೃತರಾಜ್ ಎಂಬ ಕವಿ ಪ್ರತಿಭೆಯೊಂದರ “ಮಾತು ಮೀಟಿ ಹೋಗುವ ಹೊತ್ತು” ಸಂಕಲನ.  ಅಪ್ಪಟ ಗೃಹಿಣಿಯೊಬ್ಬಳ ಒಳ ಪದರಗಳಲ್ಲಿ ಕಂಡೂ ಕಾಣದಂತೆ ಹುದುಗಿದ ನಿಟ್ಟುಸಿರ ದನಿ, ಒಳ ತುಡಿತಗಳು, ಸೂಕ್ಷ್ಮ ಪ್ರತಿಭಟನೆಯ ಅಭಿವ್ಯಕ್ತಿ ಇಲ್ಲಿದೆ.

(ಸ್ಮಿತಾ ಅಮೃತರಾಜ್)

ಕಾವ್ಯವನ್ನು ಸ್ಮಿತಾ ಭಾವಾಭಿವ್ಯಕ್ತಿಗೆ ಮಾಧ್ಯಮವಾಗಿ ಮಾತ್ರ ಬಳಸಿಕೊಂಡಿಲ್ಲ. ಬದುಕಿನ ಎಲ್ಲ ವಿಷಮತೆಗಳ ನಡುವೆಯೂ ಜೀವಚೈತನ್ಯದ ರಸವನ್ನಾಗಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಬಹುತೇಕ ಕವಿತೆಗಳು ಹೆಣ್ತನದ ಸೀಮಿತ ನೆಲೆಯಲ್ಲೇ ಮೂಡಿದೆ ಎಂಬ ವಿಚಾರ ಮುನ್ನುಡಿಯಲ್ಲಿ ಇದೆಯಾದರೂ ಜಗತ್ತಿನ ಅರ್ಧದಷ್ಟಿರುವ ಸ್ತ್ರೀ ಸಮೂಹದ ಅನುಭವಗಳಿಗೆ ಸೀಮಿತದ ಚೌಕಟ್ಟು ಹಾಕುವ ಪರಿಪಾಠಕ್ಕೆ ಒಂದು ಉದಾಹರಣೆ. ಆದರೆ ಸ್ತ್ರೀ ಈ ಎಲ್ಲ ಚೌಕಟ್ಟಿಗೂ ಮೀರಿ ಬೃಹತ್ ಆಲದ ಮರದಂತೆ ಬೀಳಲು ಬಿಟ್ಟು ತನ್ನೊಡಲೊಳಗೆ ಚಿಗುರುವ ಆಶ್ರಯ ಬಯಸುವ ಚೈತನ್ಯಗಳಿಗೆ ಆವಾಸವಾಗುತ್ತದೆ.

ಹಾಗಾಗೇ ಸಂಕಲನ ಮೊದಲ ಕವಿತೆ “ಆದರೂ ನಾವು ಮರವಾಗಿದ್ದೇವೆ” ಯಲ್ಲಿ ಸ್ಮಿತಾ ಎತ್ತಿದ ಸಂಗತಿ ಗಮನಾರ್ಹ. ಹೆಣ್ಣೊಬ್ಬಳ ಬದುಕಿನಲ್ಲಿ ಹುಟ್ಟಿದ ಮನೆ ಮತ್ತು ಕೊಟ್ಟ ಮನೆಗಳ ಅಲೆದಾಟ. ಎಲ್ಲಿಯೂ ಗಟ್ಟಿಯಾಗಿ ಬೇರೂರಲಾಗದ ಚಡಪಡಿಕೆ. ಆದರೂ ಆಕೆಯದು ಅಚಲ ಆತ್ಮಸ್ಥೈರ್ಯ.
“ಇನ್ನೇನು ಆಳಕ್ಕೆ ಬೇರನೂರಿ
ಭದ್ರವಾಗಿ ಬಿಡಬೇಕು
ಪಕ್ಕನೆ! ಬುಡದಿಂದ ಕಿತ್ತದಷ್ಟೇ ಗೊತ್ತು
ಅದೆಂಥಹಾ ಯಾತನೆ!”

ಬಹುಶಃ ಈ ನೋವು ಮರವೊಂದರ ನೋವಾಗಿರದೇ ಹೆಣ್ಣೆಂಬ ಹೆಮ್ಮರದ ನೋವಿದು. ತಂದೆಯ ಮನೆಯಿಂದ ಗಂಡನ ಮನೆಗೆ ಹೊರಟಾಗ ಅಭದ್ರತೆ ಕಾಡುವುದು ಆಕೆಗೆ ಸಹಜ. ಸ್ಥಳಾಂತರದ ಕಾನೂನು ಹೆಣ್ಣಿಗೆ ಮಾತ್ರ ಅನ್ವಯ. ಇನ್ನೇನು ಹೊಸ ಅಂಕಕ್ಕೆ ಸಿದ್ಧವಾಗಿ ಹೊಸ ಕನಸಿನ ಮೆರವಣಿಗೆಯಲ್ಲಿ ಹೊಸ ಬಯಲಿನ ಹಸಿ ಮಣ್ಣಿನಲ್ಲಿ ಬೇರಿಳಿಸಬೇಕು, ಎನ್ನುವಷ್ಟರಲ್ಲಿ ನೆಟ್ಟಲ್ಲೇ ಅಲುಗಾಡಿಸಿ, ಕಿತ್ತಿಡುವ ಪ್ರಯತ್ನ. ಇಂತಹ ಅಭದ್ರತೆಯ ನಡುವೆಯೂ, ಸಾತ್ವಿಕ ಆಶಾವಾದಿ ಮನೋಭಾವದಿಂದ
ಕವಿ ನುಡಿಯುತ್ತಾರೆ.

“ಇನ್ನಾದರೂ ನಾವು ಆಳಕ್ಕೆ ಬೇರನೂರಿ ಬಿಡಬಹುದೆಂದು
ಅಂದುಕೊಳ್ಳುತ್ತೇವೆ ಅಷ್ಟೇ.
ಆದರೂ ನಾವು ಮರವಾಗಿದ್ದೇವೆ
ಹಾಗಂತ ಎಲ್ಲರೂ ಅಂದುಕೊಂಡಿದ್ದಾರೆ
ಒಡಲ ಚಿಗುರು ಕುಡಿಗಳಿಗೆ ಮಾತ್ರ ನಿಜಕ್ಕೂ
ಮರವಾಗುವುದು ಹೇಗೆಂದು ಕಿವಿಯಲ್ಲುಸುರಿ
ಪಾಠ ಮಾಡುತ್ತಿದ್ದೇವೆ.” ಎನ್ನುತ್ತಾರೆ.

ಜೀವನವನ್ನು ಸಾಹಿತ್ಯದ ಮೂಲಕ ಅರಿಯುವ ಮತ್ತು ಅನಾವರಣಗೊಳಿಸುವ ಎರೆಡು ಅಂತಃಕರಣ ಮಹಿಳಾ ಲೇಖಕಿಯರದು. ತನ್ನೊಳಗಿನ ಕುದಿಯನ್ನು, ಬದುಕೆಂಬ ಕುಲುಮೆಯ ಉರಿಯನ್ನು ಎರಡನ್ನೂ ಸಮಭಾಗಿಸಿಕೊಂಡೇ ಆಕೆಯ ನಡಿಗೆಯಿದೆ. ಸಂಭಾವಿತ ಕುಟುಂಬಗಳಲ್ಲಿಯ ಕೆಂಡದ ಮೇಲಿನ ನಡಿಗೆಯಲ್ಲಿ ಆಕೆಯದು ಬಹುತೇಕ ಅರೆಬೆಂದ ಪಾದ. ಮುಕ್ತವಾಗಿ ವ್ಯಕ್ತಗೊಳಿಸಲಾಗದ ಹೊರನೋಟಕ್ಕೆ ತೃಪ್ತಿ ಎಂಬ ಹೊಳೆವ ಮೂಗು ಬೊಟ್ಟನ್ನು ತಿರುಪಿಸುತ್ತಾ ಗತ್ತಿನ ವಯ್ಯಾರ ಮಾಡುವ ಅದೆಷ್ಟೋ ಹೆಣ್ಣು ಜೀವಗಳ ಒಳಬಿಂಬದಲ್ಲಿ ಧರಿಸಿದ ಆ ತೃಪ್ತಿ ಎಂಬ ನತ್ತಿಗೆ ಒಳ ಸುತ್ತೇ ಇರದು. ಅಂತಹ ಅಸಹಾಯಕ ಪಿಸುಗುಡುವ ಸಾಲುಗಳನ್ನು ಈ ಸಂಕಲನದ ಉದ್ದಕ್ಕೂ ಕಾಣಬಹುದು.

‘ವಿಮೋಚನೆ’ ಕವಿತೆಯ ಸಾಲುಗಳಿವು.

“ಕಪಾಟು ತೆರೆದಾಗಲೆಲ್ಲಾ ಅವೇ
ಹಳೇ ಸೀರೆಗಳು ವಿಮೋಚನೆಗಾಗಿ
ನನ್ನೊಂದಿಗೆ ಅಹವಾಲು ಸಲ್ಲಿಸುತ್ತಲೇ ಇರುತ್ತವೆ.”

ಮಹತ್ವಾಕಾಂಕ್ಷಿಗಳಾದ ಹೆಣ್ಣನ್ನು ಅಪನಂಬಿಕೆಯಿಂದ ಸಾಮಾಜಿಕ ಬದುಕಿಗೆ ಕಂಟಕಪ್ರಾಯದ ಪಾತ್ರದಂತೆ ಚಿತ್ರಿಸಲಾಗುತ್ತಿತ್ತು. ಇಂದಿಗೂ ಈ ಸ್ಥಿತಿ ಅಂತಹ ಬದಲಾವಣೆಗಳನ್ನು ಕಂಡಿಲ್ಲ. ಅವಳ ದನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಲೇ ಬಂದಿವೆ. ಆದರೂ ಸ್ತ್ರೀ ಸಂಕುಲ ಅದನ್ನು ಮೀರುವ ಪ್ರಯತ್ನವನ್ನು ಮಾಡುತ್ತಲೇ ಇದೆ.

‘ಅರಳು ಗುಲಾಬಿಯ ಹಿಂದೆ’ ಕವಿತೆಯ ಸಾಲುಗಳಲ್ಲಿ ಸಂಘ಼ರ್ಷದ ಹಾದಿಯಲ್ಲೂ ಹೆಣ್ಣಲ್ಲಿರುವ ಬದುಕಿನ ಕುರಿತ ಅದಮ್ಯ ಹಂಬಲ ಓದುಗನ ಕಾಡದೇ ಇರದು.

“ಪ್ರತೀ ಪಾದ ಎತ್ತಿಟ್ಟಾಗಲೂ
ತಿವಿದು ನೂಕಿದರೂ
ಆಳಕ್ಕೆ ಚುಚ್ಚಿ ನೋಯಿಸಿದರೂ
ಹಂತಹಂತದ ಹೆಜ್ಜೆಯಲ್ಲೂ ಛಲ
ಧಿಮಾಕಿಗಿಷ್ಟು..! ಅಂತ ಹೀಗಳೆದರೂ
ನೋಡು.. ಬಿಡಲಿಲ್ಲ ಹಠ.”

ಸ್ತ್ರೀ ಸಂವೇದನೆಯಲ್ಲಿ ಸಕಾರಾತ್ಮಕತೆಯ ಹೂರಣ ಸಹಜ ಗುಣ. ಎಲ್ಲಾ ಕಳೆದು ಹೋದಾಗಲೂ, ಕಳೆದು ಹೋದ ಸಂಗತಿಗಳಲ್ಲಿಯೇ ಸತ್ವವನ್ನು ಉಳಿಸಿಕೊಳ್ಳುವ ಹಂಬಲ. ಸ್ಮಿತಾ ಕವಿತೆಗಳ ಓದುತ್ತಾ ಆಪ್ತ ಭಾವ, ಆರ್ದ್ರ ಭಾವಗಳು ಚಿಮ್ಮಿಯೂ ತಪ್ತ ಭಾವವೂ ಎದೆಯೊಳಗೆ ಮಿಡಿಯುತ್ತದೆ. ಹಾಗಿದ್ದೂ ಜೀವನ್ಮುಖಿ ನೋಟಗಳೆಡೆಗೆ ಕವಿತೆಗಳು ಸೆಳೆಯುತ್ತವೆ.

ಇಲ್ಲಿಯ ಕವಿತೆಗಳು ಚಿಂತನೆಗೆ ಹಚ್ಚುವುದಿಲ್ಲ. ಆದರ್ಶವನ್ನು ಬೋಧಿಸುವುದೂ ಇಲ್ಲ. ಆದರೆ ಬದುಕಿನ ಕನ್ನಡಿಯಂತೆ ಥಳಥಳ ಹೊಳೆಯುತ್ತವೆ. ಪ್ರತಿ ನಡುವಯಸ್ಸಿನ ಹೆಣ್ಣಿನ ಒಳಮನದ ಪಿಸುನುಡಿಯಂತೆ ಭಾಸವಾಗುತ್ತವೆ.

“ಮೂಗುತಿ ಎಂದರೆ
ಮೂಗು ಮುರಿಯುತ್ತಿದ್ದವಳು
ಪರಮಾಶ್ಚರ್ಯವೆಂಬಂತೆ ಇತ್ತೀಚೆಗೆ
ಮೂಗು ಚುಚ್ಚಿಸಿಕೊಂಡಳು
ಕಣ್ಣರಳಿಸಿದ್ದಕ್ಕೆ ಬದುಕು ಶುರುವಾಗುವುದೇ
ನಡು ಹರೆಯದಲ್ಲಿ ಕಣೇ ಅಂತ
ಹಗುರವಾಗಿ ನಕ್ಕಿದ್ದಳು.”

ಇತ್ತೀಚೆಗಷ್ಟೇ ಸದ್ದು ಮಾಡಿದ ಸ್ಮಿತಾರ ಇನ್ನೊಂದು ಕವಿತೆ “ಗೆರೆ”ಯನ್ನು ಹೆಸರಿಸಲೇಬೇಕು.

“ಮೀತಿಮೀರಿ ಬೆಳೆದು
ಗೆರೆಯೇ ಗೋಡೆಯಾದರೆ
ನನಗೆ-ನೀನು, ನಿನಗೆ- ನಾನು
ಕಾಣಿಸುವುದಾದರೂ ಎಂತು?”

ಸಂಬಂಧಗಳಲ್ಲಿ ಮೂಡುವ ಬಿರುಕನ್ನು ಬಹು ಸಮರ್ಥವಾಗಿ ಸರಳವಾಗಿ ಕವಿತೆಯಾಗಿಸಿದ ಅಪರೂಪದ ಕವಿತೆ. ಬಂಧಗಳನ್ನು ಸೂಕ್ಷö್ಮವಾಗಿ ವಿಶ್ಷೇಷಿಸುವ ಈ ಕವಿತೆ ಸುಂದರವಾದ ಗಟ್ಟಿ ಸಂಬಂಧದಲ್ಲೂ ಆಕಸ್ಮಿಕವಾಗಿ ಏಳುವ ಭಿನ್ನತೆಗಳು ನಿರ್ಲಕ್ಷ್ಯ ಮಾಡಿದರೆ ಗೋಡೆಯಾಗಿ ಮಾರ್ಪಟ್ಟು ಸಂಬಂಧಗಳನ್ನು ಬೇರ್ಪಡಿಸಬಹುದಾದ ಸಾಧ್ಯತೆಗಳನ್ನು ಹೇಳುತ್ತದೆ.

ಜಗದ ಚಿಂತೆಯ ಮೊದಲು ತನ್ನ ಒಡಲ ಉರಿಯನ್ನು, ಶಮನಮಾಡಿಕೊಡಿಕೊಳ್ಳುವ ಜೀವನ ಪ್ರೀತಿಯನ್ನು ವ್ಯಕ್ತಗೊಳಿಸುತ್ತವೆ ಇಲ್ಲಿಯ ಕವಿತೆಗಳು. ಮರ, ಭೂಮಿ, ಹಕ್ಕಿ, ಗುಲಾಬಿ, ಅಡುಗೆ ಮನೆ, ಅಜ್ಜಿ ಮುತ್ತಜ್ಜಿ, ಮಳೆ ಬರುವ ಕಾಲ, ಕುಕ್ಕರು ಕೂಗುವ ಸಮಯ, ಕಿಟಕಿ ಬಾಗಿಲು, ಬೇಲಿ, ನದಿ ಇತ್ಯಾದಿ ರೂಪಕಗಳು ಉಪಮೆಗಳು ಈ ಸಂಕಲನದ ಉದ್ದಕ್ಕೂ ಪುನರಾವರ್ತಿತವಾಗಿವೆ. ವಿಭಿನ್ನ ಅರ್ಥಸಾಧ್ಯತೆಗಳಿಗೆ ಕಾರಣವೂ ಆಗಿವೆ. ಧ್ವನಿವಂತಿಕೆಯಿಂದ, ಕಲಾವಂತಿಕೆಯಿಂದ ಹೊಸೆದ ಚಂದದ ಕವಿತೆಗಳಿಗಾಗಿ ಸ್ಮಿತಾ ಅಮೃತ್ ರಾಜ್ ಅವರಿಗೆ ಅಭಿನಂದನೆಗಳು.

(ಕೃತಿ: ಮಾತು ಮೀಟಿ ಹೋಗುವ ಹೊತ್ತು, ಲೇಖಕರು: ಸ್ಮಿತಾ ಅಮೃತರಾಜ್‌ ಸಂಪಾಜೆ, ಪ್ರಕಾಶನ: ಭಾವಸಿಂಚನಾ ಪ್ರಕಾಶನ, ಬೆಲೆ: 120/-)