ಮೊದಲನೇ ಪ್ರಾಪಂಚಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯನ್ ಸೈನಿಕರಲ್ಲಿ ಮೂಲನಿವಾಸಿಗಳೂ ಇದ್ದರು. ಆದರೆ ಯುದ್ಧದ ನಂತರ ದೇಶದ ಸರಕಾರಗಳು ಅವರ ಹೆಸರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆಸ್ಟ್ರೇಲಿಯನ್ ಬಿಳಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಬಿರುದುಗಳು ಮತ್ತು ಸೌಲಭ್ಯ, ಸೌಕರ್ಯಗಳು ಲಭಿಸಿದವು. ಎರಡನೇ ಮಹಾಯುದ್ಧದ ನಂತರವೂ ಇದೇ ಕತೆಯಾಗಿದ್ದು ಈ ಬಾರಿ ಯುದ್ಧದಲ್ಲಿ ಭಾಗವಹಿಸಿದ್ದ ಮೂಲನಿವಾಸಿಗಳ ಹೆಸರುಗಳನ್ನೂ ಮಾತ್ರ ದಾಖಲಿಸಲಾಗಿತ್ತು. ಅವರಿಗೆ ಯಾವುದೇ ಬಿರುದು, ಸೌಲಭ್ಯ, ಸೌಕರ್ಯಗಳನ್ನು (ಆರ್ಥಿಕ, ಸಾಮಾಜಿಕ, ರಾಜಕೀಯ) ಕೊಡಲಿಲ್ಲವೆಂದು ದಾಖಲಾಗಿದೆ.
ಡಾ. ವಿನತೆ ಶರ್ಮ ಹೊಸ ಕೃತಿ “ಅಬೊರಿಜಿನಲ್‌ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್‌”ಯಿಂದ ಒಂದು ಬರಹ ನಿಮ್ಮ ಓದಿಗೆ

“ನಿಮ್ಮ ಭಾರತದಲ್ಲಿ ಒಬ್ಬ ಗಾಂಧಿಯ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಕೈಗೂಡಿತು. ಅಮೆರಿಕೆಯಲ್ಲಿ ಒಬ್ಬ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿದ. ಈಜಿಪ್ಟಿನಲ್ಲಿ ಸಾಮಾನ್ಯ ಜನರ ಚಳವಳಿಯ ದೆಸೆಯಿಂದ ಸ್ವಾತಂತ್ರ್ಯಕ್ಕೆ ಹೊಸರೂಪ ಬಂತು. ಈ ನಮ್ಮ ದೇಶದಲ್ಲಿ ಅಂತಹ ಒಂದು ಚಳವಳಿಯಾಗಬೇಕು. ಕ್ರಾಂತಿಯಾಗಬೇಕು. ಶಾಂತಿಮಂತ್ರದ ಸತ್ಯಾಗ್ರಹವಾಗಬೇಕು. ನಮ್ಮ ನಾಡಿನಲ್ಲಿ ನಮ್ಮವರಿಗೆ ಸ್ವಾತಂತ್ರ್ಯ ಸಿಕ್ಕಬೇಕು. ನಾನು ಸಾಯುವ ಮುನ್ನ ಅದನ್ನು ನೋಡಬೇಕು.”

ಅವರು ಆಗಾಗ ನನ್ನ ಮುಖವನ್ನು ದೃಷ್ಟಿಸುತ್ತಾ ಮಾತನಾಡುತ್ತಿದ್ದರು. ಅವರ ಮಾತು ನನ್ನನ್ನು ಮಾತ್ರ ಉದ್ದೇಶಿಸಿದ್ದಲ್ಲ, ಎನ್ನುವುದು ನನಗೆ ನಿಧಾನವಾಗಿ ಅರಿವಾಗುತ್ತಿತ್ತು. ಅದೊಂದು ಸ್ವಗತವಾಗಿತ್ತು. ಅವರು ಭಾವುಕರಾಗಿದ್ದರು ಅನ್ನಿಸಿತ್ತು. ವಿಶ್ವವಿದ್ಯಾಲಯದ ಸ್ಥಗಿತ, ಸಂಕುಚಿತ, ಜಾಗರೂಕತೆ ತುಂಬಿದ ಜಾಣ್ಮೆಯ ವಾತಾವರಣದಲ್ಲಿ ಚಳವಳಿ, ಕ್ರಾಂತಿ, ಸ್ವಾತಂತ್ರ್ಯದ ಮಾತು ಆಡುವುದು, ಕೇಳುವುದು ಬಹಳ ಅಪರೂಪ. ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ರೋಮಾಂಚನವಾಗಿತ್ತು. ‘ಇನ್ನಷ್ಟು ಹೇಳಿ, ಮಾತನಾಡಿ, ನಿಲ್ಲಿಸಬೇಡಿ’ ಎಂದು ಬೇಡಿಕೊಳ್ಳುವ ಮನಸ್ಸಾಗಿತ್ತು. ಸದಾ ಕಾಲ ಸತ್ತಂತೆ ಇರುವ ಈ ಸಮಾಜದಲ್ಲಿ ನರನಾಡಿಯನ್ನು ಬಡಿದೆಬ್ಬಿಸುವ ನುಡಿ ಹುಟ್ಟಬೇಕು. ಆಂದೋಲನವಾಗಬೇಕು. ‘ಹೇಳಿ ಜಾನ್, ನಿಮ್ಮ ಜನ ಅಂತಹದೊಂದು ಆಂದೋಲನವನ್ನು ಬರಮಾಡಿಕೊಳ್ಳಲು ಸಿದ್ಧರಾಗುತ್ತಿದ್ದಾರೆಯೇ?’ ನನ್ನ ಪ್ರಶ್ನೆ ಗಂಟಲಿನಲ್ಲಿಯೇ ಸಿಕ್ಕಿಕೊಂಡಿತ್ತು. ನನ್ನ ಜೀವ ತಟಪಟಾಯಿಸಿತ್ತು.

ಕೇವಲ ನಮ್ಮ ಮೂವರ ಸಭೆಗೆ ಬಂದು ಪಕ್ಕದಲ್ಲಿ ಕೂತಿದ್ದವರು ನನ್ನ ಮೇಲಿನ ಅಧಿಕಾರಿ. ಅವರಿಗೆ ತಮ್ಮ ಸ್ಥಾನದ ಅರಿವು ಇತ್ತೇ ವಿನಃ ಆ ಕ್ರಾಂತಿ, ಶಾಂತಿ ಪದಗಳ ಬಗ್ಗೆ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ನಮ್ಮ ಮೀಟಿಂಗ್ ಮುಗಿದು ಅಲ್ಲಿಂದ ಮರಳುವಾಗ ಮ್ಯಾನೇಜರ್ “ನಿನಗೆ ಜಾನ್ ಮಾತಾಡಿದ್ದೆಲ್ಲಾ ಅರ್ಥವಾಯಿತೇ? ಅವರು ಉಲ್ಲೇಖಿಸಿದ ಕ್ಯಾಪಿಟಲಿಸ್ಟ್, ನವ ಉದಾರವಾದಿ ಪದಗಳೆಲ್ಲ ನಮಗ್ಯಾಕೆ ಬೇಕಿತ್ತು? ಸುಮ್ಮನೆ ಅವರ ರಾಜಕೀಯದಲ್ಲಿ ನಮ್ಮನ್ನು ಸಿಕ್ಕಿಸುವುದು ಅವರ ಉದ್ದೇಶವಾಗಿತ್ತೇ ಎಂದು ನನ್ನ ಅನುಮಾನ. ನೀನು ಜಾಗರೂಕತೆಯಿಂದಿರು” ಎಂದು ಎಚ್ಚರಿಸಿದರು. ಅವರ ಮುಂದೆಯೇ ತಲೆ ಚಚ್ಚಿಕೊಳ್ಳಲಾಗದೆ ನಾನು ಪೇಲವ ನಗೆ ಬೀರಿ ಬುಡ ಭದ್ರ ಮಾಡಿಕೊಳ್ಳುವ ಸ್ಥಿತಿಯ ಬಗ್ಗೆ ಸ್ವಮರುಕ ಹುಟ್ಟಿತ್ತು.

ಜಾನ್ ಹೇಳುತ್ತಿದ್ದದ್ದು ಅವರ ಅಬೊರಿಜಿನಲ್-ಆಸ್ಟ್ರೇಲಿಯಾದ ಮೂಲ ನಿವಾಸಿಗಳ ಬಗ್ಗೆ. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳು ಆಸ್ಟ್ರೇಲಿಯಾ ದೇಶದ ಅತ್ಯಂತ ಕರಾಳ ಚರಿತ್ರೆಯನ್ನು ಕಂಡಿವೆ. ಬ್ರಿಟಿಷರು ತಮ್ಮ ವಸಾಹತುಶಾಹಿ ಬೇರುಗಳನ್ನು ಆಳವಾಗಿ ಬೆಳೆದುಕೊಳ್ಳುತ್ತಾ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಜನರ ಜೊತೆ ದ್ವೀಪವಾಸಿಗಳನ್ನು ಕೂಡ ಸೇರಿಸಿಕೊಂಡು ನಿರ್ದಯೆಯ ಶೋಷಣೆ ಮಾಡಲಾಗಿತ್ತು. ಅವರನ್ನು ಗುಲಾಮರಾಗಿಸಿಕೊಂಡು ದೇಶದ ಕಾರ್ಖಾನೆಗಳನ್ನು, ಕೈಗಾರಿಕೆಯನ್ನು, ಕೃಷಿಯನ್ನು, ಒಟ್ಟಾರೆ ದೇಶದ ಆರ್ಥಿಕತೆಯನ್ನು ವೃದ್ಧಿಸಲಾಗಿತ್ತು. ಇಪ್ಪತ್ತನೇ ಶತಮಾನದ ಬಹುಭಾಗ ‘ಬಿಳಿ ಆಸ್ಟ್ರೇಲಿಯಾ ಪಾಲಿಸಿ’ ಕಂಡಿತ್ತು. ಅಂದರೆ ದೇಶಪೂರ್ತಿ ಬಿಳಿಜನರೇ ಇರಬೇಕು, ಆಸ್ಟ್ರೇಲಿಯವೆಂದರೆ ಅದೊಂದು ಮುಂದುವರೆದ, ಪಾಶ್ಚಾತ್ಯ, ಬಿಳಿಯರ ಸಮಾಜ ಎಂದಾಗಬೇಕು ಎನ್ನುವ ಸರಕಾರ-ಪ್ರೇರಿತ, ಸರಕಾರವೇ ಜಾರಿಗೆ ತಂದಿದ್ದ ಕ್ರಮ. ಬಿಳಿಯರಲ್ಲದ ಇತರರ ಸ್ಥಾನಮಾನ ಯಾವಾಗಲೂ ಕೀಳು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಕೆಲ ರಾಜ್ಯಗಳಲ್ಲಿ ಮಾತ್ರ ಅವರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ದೇಶದ ಕ್ವೀನ್ಸ್ಲ್ಯಾಂಡ್ ಮತ್ತು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯಗಳಂತೂ ಮೂಲನಿವಾಸಿಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಇಡೀ ದೇಶದ ಜನಸಂಖ್ಯೆಯಲ್ಲಿ ಕೇವಲ ಒಂದು ಶತಭಾಗವಷ್ಟೇ ಇದ್ದ ಅವರು ಬದುಕಿರುವುದೇ ತಪ್ಪು ಎಂಬ ಮನೋಭಾವನೆಯಿತ್ತು ಎಂದು ಅನೇಕ ದಾಖಲೆಗಳು ಹೇಳುತ್ತವೆ.

ಮೊದಲನೇ ಪ್ರಾಪಂಚಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯನ್ ಸೈನಿಕರಲ್ಲಿ ಮೂಲನಿವಾಸಿಗಳೂ ಇದ್ದರು. ಆದರೆ ಯುದ್ಧದ ನಂತರ ದೇಶದ ಸರಕಾರಗಳು ಅವರ ಹೆಸರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆಸ್ಟ್ರೇಲಿಯನ್ ಬಿಳಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಬಿರುದುಗಳು ಮತ್ತು ಸೌಲಭ್ಯ, ಸೌಕರ್ಯಗಳು ಲಭಿಸಿದವು. ಎರಡನೇ ಮಹಾಯುದ್ಧದ ನಂತರವೂ ಇದೇ ಕತೆಯಾಗಿದ್ದು ಈ ಬಾರಿ ಯುದ್ಧದಲ್ಲಿ ಭಾಗವಹಿಸಿದ್ದ ಮೂಲನಿವಾಸಿಗಳ ಹೆಸರುಗಳನ್ನೂ ಮಾತ್ರ ದಾಖಲಿಸಲಾಗಿತ್ತು. ಅವರಿಗೆ ಯಾವುದೇ ಬಿರುದು, ಸೌಲಭ್ಯ, ಸೌಕರ್ಯಗಳನ್ನು (ಆರ್ಥಿಕ, ಸಾಮಾಜಿಕ, ರಾಜಕೀಯ) ಕೊಡಲಿಲ್ಲವೆಂದು ದಾಖಲಾಗಿದೆ. ಆದರೆ ಇವೆಲ್ಲವೂ ಸೈನ್ಯದಲ್ಲಿದ್ದ ಬಿಳಿ ಆಸ್ಟ್ರೇಲಿಯನ್ನರಿಗೆ ಲಭ್ಯವಾಗಿವೆ ಎನ್ನುವುದು ಬಹಳ ದುರದೃಷ್ಟಕರ.

ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಯಾವುದೇ ನಿರ್ಬಂಧನೆಯಿಲ್ಲದೆ, ಸಂಪೂರ್ಣವಾಗಿ ತಮ್ಮಗಳ ಹೆಸರನ್ನು ದಾಖಲಿಸಿಕೊಂಡು ರಾಷ್ಟ್ರೀಯ ಚುನಾವಣೆಗಳಲ್ಲಿ ಮತಚಲಾಯಿಸುವ ಹಕ್ಕು ಲಭಿಸಿದ್ದು ೧೯೮೪ರಲ್ಲಿ. ಇದನ್ನು ಮೊದಲ ಬಾರಿ ಓದಿದಾಗ ನನಗೆ ನಂಬಲಾಗಲಿಲ್ಲ. ವಿಶ್ವವಿದ್ಯಾಲಯದ ಪಂಡಿತರನ್ನು, ಸ್ನೇಹಿತರನ್ನು ಕೇಳಿ ಅದು ನಿಜವೆಂದು ತಿಳಿದಾಗ ನಾನು ಹುಟ್ಟಿ ಬೆಳೆದ ಸ್ವತಂತ್ರ ಭಾರತದ ಬಗ್ಗೆ ಬಹಳ ಹೆಮ್ಮೆಯಾಯ್ತು. ಅದೇ ಹೆಮ್ಮೆಯಿಂದ ನಾನು ಈಗಲೂ ಹೇಳುವುದು- ‘ನಾನು ಬಂದಿರುವುದು ಒಂದು ಪೋಸ್ಟ್-ಕೊಲೊನಿಯಲ್ ದೇಶದಿಂದ. ನಾನು ವಾಸಿಸುತ್ತಿರುವುದು ಕೊಲೊನಿಯಲ್ ಸಮಾಜ.’

ಆ ಮಾತನ್ನು ಹೇಳುವಾಗ ಮಹಾತ್ಮ ಗಾಂಧಿ ಮತ್ತೆ ಪ್ರಸ್ತುತರಾಗುತ್ತಾರೆ. ನೆನಪಿನ ಪರದೆಗಳನ್ನು ಸರಿಸುತ್ತ ಜಾನ್ ಮುಂದೆ ಬಂದು ನಿಲ್ಲುತ್ತಾರೆ. ಬ್ರಿಸ್ಬೇನ್ ನಗರದಲ್ಲಿ, ರಾಣಿರಾಜ್ಯದಲ್ಲಿ ನಿತ್ಯಜೀವನದಲ್ಲಿ ನಾನು ಪದೇಪದೇ ಅನುಭವಿಸುವ ರೇಸಿಸಮ್ ಪ್ರಸಂಗಗಳು, ಸಮಾಜದ ಮನೋಭಾವನೆಯ ಬಗ್ಗೆ ಇನ್ನಷ್ಟು ಜಿಗುಪ್ಸೆ ಮೂಡುತ್ತದೆ. ನನ್ನ ಅನುಭವಗಳನ್ನು ಸ್ನೇಹಿತರೊಡನೆ, ಸಹೋದ್ಯೋಗಿಗಳೊಡನೆ ಹಂಚಿಕೊಂಡಾಗ ಅವರು ಹೌಹಾರುತ್ತಾರೆ. ಕೆಲವರು ನಂಬುವುದೇ ಇಲ್ಲ. ಹೌಹಾರುವ ಕೆಲಮಂದಿ ‘ನೀನು ಸುಮ್ಮನಿರಬಾರದು. ಅದರ ಕುರಿತು ಮಾತನಾಡು, ಪತ್ರಿಕೆಗಳಿಗೆ ಬರೆದು ಹಾಕು, ಪೊಲೀಸರನ್ನು ಸಂಪರ್ಕಿಸು, ಸರಕಾರದ ಪ್ರತಿನಿಧಿಗಳನ್ನು ಸಂಪರ್ಕಿಸು, ನಿನ್ನದೇ ಸಾಂಸ್ಕೃತಿಕ ಜನಗುಂಪಿನ ಸಹಾಯವನ್ನು ಪಡಿ, ಸುಮ್ಮನಿರಬೇಡ,’ ಎಂದೆಲ್ಲ ಹೇಳುತ್ತಾರೆ. ಅವರ ಸಲಹೆಗಳಲ್ಲಿ ಹಲವನ್ನು ನಾನು ಈಗಾಗಲೇ ಜಾರಿಗೆ ತಂದಿದ್ದೀನಿ, ಏನೂ ಪ್ರಯೋಜನವಾಗಿಲ್ಲ.

ಪ್ರಯೋಜನವಾಗಲಿಲ್ಲವೆಂಬ ಕೊರಗಿನ ಕ್ಷಣಗಳಲ್ಲಿ ಜಾನ್ ಮತ್ತು ಗಾಂಧಿ ನೆನಪಾಗುತ್ತಾರೆ. ಆಗ ಗಾಂಧಿ ಉಪಯೋಗಿಸಿದ ಸತ್ಯಾಗ್ರಹ ಮತ್ತು ಅವರ ಉಪವಾಸಗಳು ನೆನಪಾಗುತ್ತವೆ. ಅವು ಈ ದೇಶಕ್ಕೆ, ಈ ಸಮಾಜಕ್ಕೆ ಸಲ್ಲುತ್ತವೆಯೇ ಎನ್ನುವ ಪ್ರಶ್ನೆಯೇಳುತ್ತದೆ.

ಇಪ್ಪತ್ತೊಂದನೇ ಶತಮಾನದ ಈ ೨೦೨೧ ವರ್ಷದಲ್ಲೂ ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಹೇಳಿಕೊಳ್ಳುವಂತಹ ಸಾಮಾಜಿಕ ನ್ಯಾಯವಿನ್ನೂ ಸಿಕ್ಕಿಲ್ಲ. ಅದಕ್ಕೆ ನಿದರ್ಶನವೆಂದರೆ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳವಳಿಯ ಕಾವು ಇರುವಾಗಲೇ ಆಸ್ಟ್ರೇಲಿಯಾದಲ್ಲಿ ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ರಕ್ಷಣೆಗಾಗಿ ಹಲವಾರು ಚಳವಳಿ ಪ್ರದರ್ಶನಗಳು ನಡೆದವು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ಮೂರು ಶತಭಾಗ ಮಾತ್ರ ಅಬೊರಿಜಿನಲ್ ಮತ್ತು ದ್ವೀಪವಾಸಿಗಳು. ಆದರೆ ಕಾರಾಗೃಹಗಳಲ್ಲಿ ಅವರ ಸಂಖ್ಯೆ ಅತ್ಯಂತ ಹೆಚ್ಚಿನದು- ಸುಮಾರು ೨೯ ಶತಭಾಗ. ಬಂಧಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅವರಲ್ಲಿ ಅನೇಕರು ಮಾಡಿದ ಅಪರಾಧವೆಂದರೆ ಆಂಗ್ಲೋ-ಯೂರೋಪಿಯನ್ ಸಂಸ್ಕೃತಿಗೆ ಒಗ್ಗಿಕೊಳ್ಳದೆ ತಮ್ಮ ಸಂಸ್ಕೃತಿ ಅನುಸಾರ ಇರುವ ನಡೆನುಡಿ ತೋರುವುದು. ದೇಶದಲ್ಲಿರುವುದು ಆಂಗ್ಲೋ-ಆಸ್ಟ್ರೇಲಿಯನ್ನರ ರಾಜಕೀಯ ಮತ್ತು ಸರಕಾರ. ಬ್ರಿಟನ್ನಿಂದ ಬಂದ ಎರವಲು ಕಾನೂನು ವ್ಯವಸ್ಥೆ. ಆ ವ್ಯವಸ್ಥೆಯ ಅಡಿಯಲ್ಲಿ ಬರುವ ಅನೇಕಾನೇಕ ಕಾನೂನುಗಳು ಅಬೊರಿಜಿನಲ್-ವಿರೋಧಿಯಾಗಿಯೇ ಇವೆಯೇನೋ.

ಹಾಗೆಂದುಕೊಂಡಾಗ ನನಗೆ ಶಾಲೆಯಲ್ಲಿ ಓದಿದ ಚರಿತ್ರೆ ನೆನಪಾಗುತ್ತದೆ. ನಾವು ಓದಿದ ಬ್ರಿಟಿಷರ ಆಳ್ವಿಕೆ, ದಬ್ಬಾಳಿಕೆ, ಒಡೆದು ಆಳುವ ರಾಜಕೀಯ, ಕುತಂತ್ರಗಳು, ಮತ್ತು ಭಾರತೀಯರನ್ನು ಗುಲಾಮೀ ಮನೋಭಾವದಿಂದ ನಡೆಸಿಕೊಂಡ ಪಠ್ಯವಸ್ತು ನೆನಪಾಗುತ್ತದೆ. ಅವರ ಕಾನೂನು ವ್ಯವಸ್ಥೆಯಲ್ಲಿ ಎಲ್ಲಾ ಭಾರತೀಯರೂ ಅಪರಾಧಿಗಳೇ ಆಗಿದ್ದರೇನೋ. ಹೆಚ್ಚುಕಡಿಮೆ ಅದೇ ವ್ಯವಸ್ಥೆ ಮತ್ತು ಮನೋಭಾವ ಆಸ್ಟ್ರೇಲಿಯಾದಲ್ಲಿ ಈಗಲೂ ಮನೆಮಾಡಿಕೊಂಡಿದೆ ಅನ್ನಿಸುವುದು ಅಸಹಜವಲ್ಲ.

ಅಬೊರಿಜಿನಲ್ ಮಕ್ಕಳನ್ನು ಅವರ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸುವುದು ಇನ್ನೂ ಅವ್ಯಾಹತವಾಗಿ ನಡೆದಿದೆ. ದೂರದ ಗ್ರಾಮೀಣ ಪ್ರದೇಶದಲ್ಲಿರುವ ಒಂದು ಅಬೊರಿಜಿನಲ್ ನೆಲೆಗೆ ತನಿಖೆಗೆಂದು ಹೋಗುವ ಸರಕಾರದ ಅಧಿಕಾರಿ ಅಲ್ಲಿ ವಾಸಿಸುತ್ತಿರುವ ಒಂದು ಕುಟುಂಬ ತನ್ನ ಪಟ್ಟಿಯ ಪ್ರಕಾರ ಶುಚಿ-ಶಿಸ್ತು ಇಲ್ಲವೆಂದು, ‘ನಮ್ಮಂತೆ’ ಇಲ್ಲ, ಬದುಕುತ್ತಿಲ್ಲವೆಂದು ದೂರು ಸಲ್ಲಿಸಿದರೆ, ಕುಟುಂಬದಲ್ಲಿರುವ ಮಕ್ಕಳನ್ನು ಬೇರ್ಪಡಿಸಿ ಸರಕಾರೀ ವ್ಯವಸ್ಥೆಗೆ ತಳ್ಳುವ ಸಾಧ್ಯತೆಯಿದೆ. ದುಃಖಿತರಾದ ಅಥವಾ ಕೋಪಗೊಂಡ ಕುಟುಂಬದ ತಂದೆತಾಯಿಗಳು, ಇತರೆ ಸದಸ್ಯರು ಕೋಪವನ್ನು ಪ್ರದರ್ಶಿಸಿದರೆ ಅವರಿಗೆ ಕಾರಾಗೃಹವಾಸ ತಪ್ಪಿದ್ದಲ್ಲ. ಕಾರಾಗೃಹದಲ್ಲಿರುವ ಅಬೊರಿಜಿನಲ್ ಯುವಜನತೆಯ ಸಾವು ಹೆಚ್ಚುತ್ತಿದೆ. ಹಲವಾರು ಸಾವುಗಳಿಗೆ ಅಧಿಕಾರಿಗಳೇ ಕಾರಣವೆಂದು ಅನೇಕ ದೂರುಗಳಿದ್ದರೂ ಅವಕ್ಕೆ ಪರಿಹಾರ ಸಿಕ್ಕಿಲ್ಲ.

ಜನಸಂಖ್ಯೆಯ ಕೇವಲ ಮೂರು ಶತಭಾಗವಿರುವ ಮೂಲನಿವಾಸಿಗಳು ರಾಷ್ಟ್ರೀಯ ಮಟ್ಟದಲ್ಲಿ ಕ್ರಾಂತಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಕಾಡುತ್ತದೆ. ಅಬೊರಿಜಿನಲ್ ನಾಯಕತ್ವ ಬಲವಾಗಲಿ, ಅವರು ಸತ್ಯಾಗ್ರಹವನ್ನು ಕೈಗೊಳ್ಳಲಿ ಎಂದು ನನ್ನ ಅಂತರ್ಗತ ಆಸೆ. ಅದೇನೇ ಇರಲಿ, ಇಂತಹ ‘ ಅಬೊರಿಜಿನಲ್ ಲೈವ್ಸ್ ಮ್ಯಾಟರ್’ ಚಳವಳಿಗಳು ಮತ್ತಷ್ಟು ಹೆಚ್ಚಲಿ.

ಮಹಾತ್ಮ ಗಾಂಧಿಯೇಕೋ ಈ ದೇಶದಲ್ಲಿ ಅಷ್ಟೊಂದು ಪ್ರಚಲಿತರಾಗಿಲ್ಲ. ದೇಶದ ಬಹುಪಾಲು ಜನತೆ ಶಿಕ್ಷಣಕ್ಕೆ ಮಹತ್ವ ಕೊಡುವುದಿಲ್ಲ ಎಂಬ ಕಾರಣವೇ? ಶಾಲಾಶಿಕ್ಷಣ ಮುಗಿಸಿ ಟ್ರೆಡೀಗಳಾಗುವ (ಪ್ಲಮ್ಬರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಬಿಲ್ದರ್, ಟೈಲರ್, ಮುಂತಾದವು) ಜನರಲ್ಲಿ ಉದ್ಯೋಗಕ್ಕೆ ಮಹತ್ವ ಕೊಡುವ ರಾಜಕಾರಣಿಗಳ ಬಗ್ಗೆ ಒಲವಿದೆ. ಉನ್ನತ ಶಿಕ್ಷಣಕ್ಕೆ, ಬೌದ್ಧಿಕ ಬೆಳವಣಿಗೆಗೆ ಅಷ್ಟೊಂದು ಉತ್ತೇಜನವಿಲ್ಲ. ಇವೆಲ್ಲ ಈ ಸಮಾಜವನ್ನು ಸತ್ತ ಹಾವಿನಂತೆ ಮಾಡಿವೆಯೇ? ಅಥವಾ, ಅಮೆರಿಕೆಯಲ್ಲಿ ಕಪ್ಪು ಜನರು ಎತ್ತಿದ ದನಿಯಷ್ಟು ಇಲ್ಲಿನ ಅಬೊರಿಜಿನಲ್ ಜನರ ದನಿ ಜೋರಾಗಿಲ್ಲವೇ? ಈ ನೆಲದ ನೋವು, ತಲ್ಲಣಗಳಿಗೆ ದನಿ ಕೊಡುವವರು ಯಾರು? ಎಲ್ಲರ ಸಾಮಾಜಿಕ ನ್ಯಾಯಕ್ಕಾಗಿ ಇಲ್ಲಿನ ಜನತೆಯನ್ನು, ಸಮಾಜವನ್ನು ಬಡಿದೆಬ್ಬಿಸುವ ಒಂದು ಹೊಸ ಆಂದೋಲನದ ಹಾಡು ಹುಟ್ಟಲಿ. ಜಾನ್ ಆಶಿಸಿದಂತೆ ಈ ನಾಡಿನಲ್ಲಿ ಒಬ್ಬ ಎಂ.ಕೆ.ಗಾಂಧಿ ಹುಟ್ಟಲಿ. ಸ್ವಗ್ರಾಮ ಕಲ್ಪನೆಯ ಕನಸು ಕೈಗೂಡಲಿ.

(ಕೃತಿ: ಅಬೊರಿಜಿನಲ್‌ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್‌, ಲೇಖಕರು: ಡಾ. ವಿನತೆ ಶರ್ಮ, ಪ್ರಕಾಶಕರು: ವಿವಿಡ್‌ಲಿಪಿ, ಬೆಲೆ: 200/-)