Advertisement
ಹಕ್ಕಿಗಳ ಗೂಡು: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಕ್ಕಿಗಳ ಗೂಡು: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಲವಾರು ಹಕ್ಕಿಗಳು ಒಟ್ಟಿಗೆ, ಸಮೂಹವಾಗಿ ಕಾಲೊನಿಯನ್ನು ಕಟ್ಟಿಕೊಳ್ಳುವುದೂ ಉಂಟು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಹೀಗೆ ಸಾಮಾನ್ಯವಾಗಿ ಎಲ್ಲ ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಗೂಡುಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವು ಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಿಯೇ ಆಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಹಂಚಿಕೊಳ್ಳುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಹೆಣ್ಣುಹಕ್ಕಿ ಗೂಡು ಕಟ್ಟುವ ಕಾರ್ಯ ಮಾಡಿದರೆ, ಗಂಡುಹಕ್ಕಿ ಅಗತ್ಯ ಸಾಮಗ್ರಿಗಳನ್ನು ತಂದು ಪೂರೈಸುವ ಕೆಲಸ ವಹಿಸಿಕೊಳ್ಳುತ್ತದೆ. ಅಪವಾದಗಳು ಇಲ್ಲದಿಲ್ಲ.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಹಕ್ಕಿಗಳ ಗೂಡು, ಅವುಗಳ ಕಟ್ಟುವಿಕೆಯ ಕುರಿತ ಬರಹ ಇಲ್ಲಿದೆ

ಹಕ್ಕಿಗಳು ಗೂಡುಕಟ್ಟುವುದು ವಾಸಮಾಡಲಿಕ್ಕಲ್ಲ – ಪ್ರತಿಯೊಂದು ಪಕ್ಷಿಗೂ ಅದು, ಮೊಟ್ಟೆಯಿಟ್ಟು, ಮರಿಮಾಡಿ, ಮರಿಗಳನ್ನು ಬೆಳೆಸುವ ಸಲುವಾಗಿ ಮಾತ್ರ. ಹಕ್ಕಿಗಳು ಗೂಡುಕಟ್ಟುವ ವಾಸ್ತುಶಿಲ್ಪ ಒಂದು ಅದ್ಭುತವಾದ, ವಿಶಿಷ್ಟವಾದ, ಹುಟ್ಟರಿವಿನಿಂದ ಬಂದ ಸಹಜ ಪ್ರವೃತ್ತಿ.

ಹಲವು ಸಾಮಾನ್ಯ ಪಕ್ಷಿಗಳ ಗೂಡನ್ನು ನೀವು ಕಂಡಿರುತ್ತೀರ. ಗುಬ್ಬಚ್ಚಿ, ಗಿಳಿ, ಮೈನಾಗಳು ಮರ, ಕಟ್ಟಡ, ಮುಂತಾದ ಸ್ಥಳಗಳಲ್ಲಿ ಸ್ವಾಭಾವಿಕವಾಗಿ ದೊರಕುವ ಸಂದುಗೊಂದುಗಳಲ್ಲಿ ಅಥವಾ ಈ ಮೊದಲು ಇತರ ಹಕ್ಕಿಗಳು ಮಾಡಿದ ರಂಧ್ರಗಳಲ್ಲಿ ಗೂಡು ಕಟ್ಟುತ್ತವೆ. ಹದ್ದು, ಗಿಡುಗ, ಮುಂತಾದ ಹಕ್ಕಿಗಳು ಬರೇ ಕಸ, ಒಣ ಕಡ್ಡಿ-ರೆಂಬೆಗಳನ್ನು ಬಳಸಿ ಮರದ ತುತ್ತತುದಿಯಲ್ಲಿ ಕೊಂಬೆಗಳ ನಡುವೆ ಅಟ್ಟಣಿಗೆಯಂತಹ ಗೂಡುಗಳನ್ನು ತಯಾರಿಸುತ್ತವೆ.

ಕೊಂಬೆಗಳ ಕವಲಿನಲ್ಲಿ ತಟ್ಟೆ ಅಥವಾ ಬಟ್ಟಲು ಆಕಾರದ ಗೂಡುಗಳನ್ನು ಒಣ ಹುಲ್ಲು, ಎಲೆ, ಮುಂತಾದ ಕಸ-ಕಡ್ಡಿಗಳಿಂದ ಕಟ್ಟಿ, ಅದರೊಳಗೆ ಮೃದುವಾದ ಹತ್ತಿಯನ್ನಿರಿಸಿ ಹಲವಾರು ಪಕ್ಷಿಗಳು ಮೊಟ್ಟೆಯಿಡುತ್ತವೆ. ಸತ್ತ ಮರ ಮತ್ತು ಮಣ್ಣಿನ ಬದುಗಳನ್ನು ಕೊರೆದು ಸುರಂಗದಂತೆ ಮಾಡಿದ ಗೂಡುಗಳನ್ನು ಮಿಂಚುಳ್ಳಿ ಹಾಗೂ ಪತ್ರಂಗಗಳು ಕಟ್ಟಿಕೊಳ್ಳುತ್ತವೆ. ನಾರು-ಬೇರು, ಮೃದುವಾದ ಹತ್ತಿಯಿಂದ ನಾಜೂಕಾಗಿ ನೇಯ್ದ ಗೂಡನ್ನು ಸೂರಕ್ಕಿ ಕಟ್ಟುತ್ತದೆ. ಈ ಎಲ್ಲ ಗೂಡುಗಳಿಗೂ ಅತ್ಯಂತ ಅವಶ್ಯವಾದ ಕಚ್ಚಾ ವಸ್ತು, ಜೇಡರ ಬಲೆ!

ಇನ್ನು ನೀರಿನಲ್ಲಿ ವಾಸ ಮಾಡುವ ದೇವನಕ್ಕಿಗಳು ನೀರ ಮೇಲೆ ತೇಲಾಡುವ ತಾವರೆ ಮುಂತಾದ ಎಲೆಗಳ ಮೇಲೆಯೇ ತಮ್ಮ ಗೂಡನ್ನು ಕಟ್ಟುತ್ತವೆ. ನೀಳಗಾಲು ಹಕ್ಕಿಗಳು ಮತ್ತು ಟಿಟ್ಟಿಭಗಳು ಯಾವುದೇ ಗೂಡು ಕಟ್ಟದೆ, ಮೊಟ್ಟೆಗಳನ್ನು ನೇರವಾಗಿ ನೆಲದ ಮೇಲೇ ಇಟ್ಟು ಕಾಪಾಡುತ್ತವೆ. ಇವು ತಯಾರಿಸಿದ ಗೂಡುಗಳು ಹೊರನೋಟಕ್ಕೆ ಅತ್ಯಂತ ಸಮರ್ಥವಾಗಿ ಮರೆಮಾಚಿರುತ್ತವೆ.

ಕವಲುತೋಕೆ ಹಾಗೂ ಬಾನಾಡಿಗಳು ಮಣ್ಣು, ಎಲೆಗಳನ್ನು ಎಂಜಲಿನೊಂದಿಗೆ ಹಿಟ್ಟಿನ ಹಾಗೆ ಅರೆದು, ಅದನ್ನು ಪಾಳು ಬಿದ್ದ ಕಟ್ಟಡ, ಬಾವಿ ಮುಂತಾದುವುಗಳ ಗೋಡೆಗಳಿಗೆ ಮೆತ್ತಿ ಅದರೊಳಗೆ ಮೃದುವಾದ ಹತ್ತಿಯನ್ನು ಕಲೆಹಾಕಿ ಗೂಡು ಕಟ್ಟುತ್ತವೆ. ಇನ್ನು ಗಂಡು ಮಂಗಟ್ಟೆಹಕ್ಕಿಗಳು ಹೆಣ್ಣುಹಕ್ಕಿಯನ್ನು ಒಂದು ದೊಡ್ಡ ಪೊಟರೆಯೊಳಗೆ ಕುಳ್ಳಿರಿಸಿ, ಬರೇ ಕೊಕ್ಕು ಹೊರಗೆ ಕಾಣುವಂತೆ ಮಣ್ಣಿನಿಂದ ಮುಚ್ಚಿ ಬಿಡುತ್ತದೆ. ಅಲ್ಲಿಂದ ಮೂರು-ನಾಲ್ಕು ತಿಂಗಳುಗಳ ಕಾಲ, ಹೆಣ್ಣು ಹಕ್ಕಿ ಮೊಟ್ಟೆಯಿಟ್ಟು, ಕಾವು ಕೊಟ್ಟು, ಮರಿಗಳು ದೊಡ್ಡದಾಗುವವರೆಗೆ ಒಬ್ಬಂಟಿಯಾಗಿ ಇಡೀ ಸಂಸಾರಕ್ಕೆ ಆಹಾರವನ್ನು ಪೂರೈಸುತ್ತದೆ!

ಎರಡು ಪ್ರಸಿದ್ಧವಾದ ಹಕ್ಕಿಗಳ ಗೂಡುಗಳ ವಿಶಿಷ್ಟತೆಯ ಬಗ್ಗೆ ಹೇಳಲೇ ಬೇಕು. ಮೊದಲನೆಯದಾಗಿ ಸಿಂಪಿಗ ಹಕ್ಕಿ. ಎರಡು ಆಯ್ದ ಎಲೆಗಳನ್ನು ಒಂದಕ್ಕೊಂದು ಜೋಡಿಸಿ, ಅದರ ಅಂಚುಗಳನ್ನು ನಾರಿನಿಂದ ಹೊಲೆದು, ಒಂದು ಪೊಟ್ಟಣವನ್ನು ಮಾಡುತ್ತದೆ. ಅದರೊಳಗೆ ನಾರು, ಹತ್ತಿ ಮುಂತಾದುವುಗಳನ್ನಿರಿಸಿ ಮೃದುವಾದ ಗೂಡುಕಟ್ಟುವ ಕುಶಲಕಲೆ ಅತ್ಯಂತ ಆಶ್ಚರ್ಯಕರ! ಎರಡನೆಯದು ಗೀಜಗ ಪಕ್ಷಿ. ಒಂದು ಬಾಗಿದ ಮರದ ಕೊಂಬೆಯ ತುದಿಯಲ್ಲಿ ಹುಲ್ಲು, ನಾರು ಮತ್ತು ಹತ್ತಿಯನ್ನು ಬಳಸಿ, ತನ್ನ ಕೊಕ್ಕು ಕಾಲ್ಬೆರಳಿನ ಸಹಾಯದಿಂದ ಅವುಗಳನ್ನು ಒಂದಕ್ಕೊಂದು ಹೆಣೆದು ರಚಿತವಾದ ಗೀಜಗನ ಗೂಡು ವಿಶ್ವ ಪ್ರಸಿದ್ಧವಾಗಿದೆ. ಇದು ಸಂಪೂರ್ಣವಾಗಿ ಗಂಡು ಗೀಜಗನ ಕಾರ್ಯಕುಶಲತೆ!

ಹಲವಾರು ಹಕ್ಕಿಗಳು ಒಟ್ಟಿಗೆ, ಸಮೂಹವಾಗಿ ಕಾಲೊನಿಯನ್ನು ಕಟ್ಟಿಕೊಳ್ಳುವುದೂ ಉಂಟು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಹೀಗೆ ಸಾಮಾನ್ಯವಾಗಿ ಎಲ್ಲ ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ.

ಗೂಡುಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವು ಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಿಯೇ ಆಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಹಂಚಿಕೊಳ್ಳುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಹೆಣ್ಣುಹಕ್ಕಿ ಗೂಡು ಕಟ್ಟುವ ಕಾರ್ಯ ಮಾಡಿದರೆ, ಗಂಡುಹಕ್ಕಿ ಅಗತ್ಯ ಸಾಮಗ್ರಿಗಳನ್ನು ತಂದು ಪೂರೈಸುವ ಕೆಲಸ ವಹಿಸಿಕೊಳ್ಳುತ್ತದೆ. ಅಪವಾದಗಳು ಇಲ್ಲದಿಲ್ಲ.

ಇವೆಲ್ಲಕ್ಕಿಂತ ವಿಚಿತ್ರವೆಂದರೆ, ಕೋಗಿಲೆಯ ಕುಟುಂಬಕ್ಕೆ ಸೇರಿದ ಹಕ್ಕಿಗಳು, ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾವುಕೊಟ್ಟು, ಗುಟುಕುನೀಡಿ, ಮರಿಗಳನ್ನು ಸಾಕಿ ಸಲಹುವ ಯಾವುದೇ ಗೋಜಿಗೆ ಹೋಗದೆ, ಉಪಾಯದಿಂದ ಹರಟೆಮಲ್ಲಗಳ ಗೂಡಿನಲ್ಲಿ ತಮ್ಮ ಮೊಟ್ಟೆಗಳನ್ನಿಟ್ಟು ನಿಶ್ಚಿಂತೆಯಿಂದ ಇದ್ದುಬಿಡುತ್ತವೆ! ಪಾಪ, ಈ ಹರಟೆಮಲ್ಲ ಹಕ್ಕಿಗಳು ಕಪಟವರಿಯದೆ, ಕೋಗಿಲೆಯ ಮೊಟ್ಟೆಯನ್ನೂ ತಮ್ಮದೇ ಮೊಟ್ಟೆಯೆಂದು ಭಾವಿಸಿ ಅವುಗಳನ್ನು ಸಲಹುತ್ತವೆ!

ಇಷ್ಟೆಲ್ಲ ಪಾಡುಪಟ್ಟು, ಗೂಡು ಕಟ್ಟಿ ಮರಿಗಳನ್ನು ಬೆಳೆಸುವ ಕಾರ್ಯ, ಹಕ್ಕಿಗಳ ವಾರ್ಷಿಕ ಜೀವನಚಕ್ರದಲ್ಲಿ ಅತಿ ಮುಖ್ಯವಾದ ಭಾಗ. ಮೊಟ್ಟೆಯಿಟ್ಟು, ಕಾವುಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವುದು ಸಾಮಾನ್ಯ ಕೆಲಸವೇನಲ್ಲ. ಇಷ್ಟಾದರೂ ಕ್ರೂರ ಪಕ್ಷಿ-ಪ್ರಾಣಿಗಳ ಹಸಿದ ಬಾಯಿಂದ, ನೈಸರ್ಗಿಕ ಪ್ರಕೋಪಗಳಿಂದ ಬದುಕಿ ಉಳಿಯುವ ಮರಿಗಳ ಸಂಖ್ಯೆ ಬಹಳ ಕಡಿಮೆ.

ಒಂದು ಗೂಡಿಗೆ ಎರಡರಿಂದ ಎಂಟು ಮೊಟ್ಟೆಗಳು ಸಾಮಾನ್ಯ. ಮರಿಹಕ್ಕಿಗಳಿಗೆ ಸಾಧಾರಣವಾಗಿ ಮೈಮೇಲೆ ರೆಕ್ಕೆಗಳು ಬೆಳೆದಿರುವುದಿಲ್ಲ, ಕಣ್ಣುಗಳು ಕಾಣಿಸುವುದಿಲ್ಲ- ಬಹಳ ನಾಜೂಕು ಮತ್ತು ಅಸಹಾಯಕ ಜೀವಿಗಳು. ಹೆತ್ತವರ ರಕ್ಷಣೆ-ಪೋಷಣೆ, ಬಹು ಅಗತ್ಯ. ಇವು ಪ್ರತಿದಿನ ತಮ್ಮ ದೇಹದ ಭಾರಕ್ಕಿಂತ ಹೆಚ್ಚು ಆಹಾರವನ್ನು ತಿಂದು ಬೆಳೆಯುತ್ತವೆ. ಎರಡು-ಮೂರು ವಾರಗಳಲ್ಲಿ ನಡೆಯಲು, ಕುಪ್ಪಳಿಸಲು, ಹಾರಲು, ಆಹಾರವನ್ನು ತಾವೆ ಸಂಪಾದಿಸಲು ಕಲಿಯುತ್ತವೆ.

ಇಷ್ಟು ಕಷ್ಟ-ಕಾರ್ಪಣ್ಯಗಳ ನಡುವೆ ಕಟ್ಟಿ ಬೆಳೆಸಿದ ಸಂಸಾರವನ್ನು ಮಧ್ಯದಲ್ಲಿಯೇ ನಾಶ ಮಾಡುವ ಕಾರ್ಯವನ್ನು ಬೇಟೆಹಕ್ಕಿಗಳಿಗಿಂತ ಹೆಚ್ಚಾಗಿ ಮನುಷ್ಯರೇ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ