ಒಂದೆಡೆ ಚೂನಿಯ ಸಾವಿನ ಬಗೆಗೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ, ಆನೆಯ ಮಾಂಸದ ರುಚಿಯ ಅನುಭವ ಹೇಗಿರಬಹುದೆಂಬ ಮಾತುಗಳೂ ಕೇಳಿ ಬಂದವು. ಪತ್ರಿಕೆಗಳಲ್ಲಿ, ಆನೆ ಮಾಂಸದ ತಿನುಸುಗಳ ರೆಸಿಪಿಗಳೂ ಪ್ರಕಟವಾದವು. ಚೂನಿಯ ಮಾಲಿಕರು ಅವನ ಅಸ್ತಿ ಪಂಜರದಿಂದ ಹಣ ಮಾಡಲು ಹವಣಿಸಿದರು. ೧೯೪೧ರಲ್ಲಿ, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ಜರ್ಮನ್ ವಿಮಾನಗಳು ಲಂಡನ್ ಮೇಲೆ ಬಾಂಬ್ ದಾಳಿ ಮಾಡಿದಾಗ, ಚೂನಿಯ ಅಸ್ತಿ ಪಂಜರ ಚೂರು ಚೂರಾಗಿ ಲಂಡನ್ನಿನ ಮಣ್ಣಿನೊಳಗೆ ಬೆರೆಯಿತು.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಚೂನಿ ಮತ್ತು ಹಾಥಿ ಎಂಬ ಎರಡು ನತದೃಷ್ಟ ಆನೆಗಳ ಕಥೆ

 

ಇಂದು ಅಫ್ಘಾನಿಸ್ತಾನ ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಆದರೆ, ನಮಗೆ ಅಫ್ಘಾನಿಸ್ತಾನ ಹೊಸ ದೇಶವೇನಲ್ಲ. ನಮ್ಮ ಪುರಾಣ ಮತ್ತು ಪುರಾತನ ಇತಿಹಾಸಗಳಲ್ಲಿ “ಗಾಂಧಾರ”ವೆಂದು ಕರೆಯಲ್ಪಡುವ ಈ ಪ್ರದೇಶದೊಂದಿಗೆ ನಮಗೆ ಸಾವಿರಾರು ವರ್ಷಗಳ ಸಂಬಂಧವಿದೆ. ಹಲವೊಮ್ಮೆ ಇದು ವೈರತ್ವದ ಸಂಬಂಧವಾದರೂ, ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸದಲ್ಲಿ, ಪರಸ್ಪರ ಮೈತ್ರಿಯ ಬಂಧಗಳೂ ಇಲ್ಲದಿಲ್ಲ. ಈ ಸ್ನೇಹವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು, ಸಹಜವಾಗಿಯೇ, ನಮ್ಮೆರಡು ದೇಶಗಳ ಸಾಮ್ರಾಟರು ಪರಸ್ಪರರಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದೂ ನಡೆದಿದೆ.

ಆನೆಗಳು ಅಫ್ಘಾನಿಸ್ತಾನದ ದೇಶೀಯ (Native) ಪ್ರಾಣಿಗಳಲ್ಲ. ಅಲ್ಲಿನ ಪ್ರಕೃತಿ ಮತ್ತು ಹವಾಮಾನ ಆನೆಗಳಿಗೆ ಒಗ್ಗುವಂತಹುದಲ್ಲ. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಅಫ್ಘಾನಿಸ್ತಾನದಲ್ಲಿ, ಪ್ರಥಮ ಬಾರಿಗೆ ಆನೆಗಳನ್ನು ನಾವು ನೋಡುವುದು ಮೌರ್ಯರ ಕಾಲದಲ್ಲಿ. ಅಲೆಕ್ಸಾಂಡರನ ದಂಡಯಾತ್ರೆಯ ನಂತರ, ಗಾಂಧರ್ವ ದೇಶವು ಗ್ರೀಕರ ಅಧೀನದಲ್ಲಿದ್ದಾಗ, ಕ್ರಿ.ಪೂ. ಮೂರನೆಯ ಶತಮಾನದಲ್ಲಿ, ಸಾಮ್ರಾಟ ಚಂದ್ರಗುಪ್ತ ಮೌರ್ಯನು ಗಾಂಧಾರದ ರಾಜ ಸೆಲ್ಯೂಕಸ್‌ನಿಗೆ ೫೦೦ ಆನೆಗಳನ್ನು ಉಡುಗೊರೆಯಾಗಿ ಕಳುಹಿಸುತ್ತಾನೆ. ಅದಕ್ಕೆ ಪ್ರತಿಯಾಗಿ, ಸೆಲ್ಯೂಕಸ್ ತನ್ನ ಮಗಳನ್ನೇ ಚಂದ್ರಗುಪ್ತನಿಗೆ ಧಾರೆ ಎರೆದು ಕೊಡುತ್ತಾನೆ.

ನಂತರದಲ್ಲಿ, ಗಾಂಧಾರ ದೇಶದ ಪುರುಷಪುರವನ್ನು ಕೇಂದ್ರವಾಗಿಸಿಕೊಂಡವರು ಕುಶಾನರು. ಇವರು ಬೌದ್ಧ ಧರ್ಮದಿಂದ ಪ್ರಭಾವಿತರಾದವರು. ಬೌದ್ಧಧರ್ಮದಲ್ಲಿ, ಆನೆಗೆ ಮಹತ್ವದ ಸ್ಥಾನವಿದೆ. ಸಿದ್ಧಾರ್ಥ ಗೌತಮನ ಜನ್ಮಕ್ಕೂ ಪವಿತ್ರವಾದ ಶ್ವೇತಗಜಕ್ಕೂ ಸಂಬಂಧವಿದೆ ಎಂಬ ನಂಬಿಕೆ ಬೌದ್ಧಧರ್ಮದಲ್ಲಿದೆ. ಹೀಗಾಗಿ, ಕುಶಾನರ ಕಾಲದ ಹಲವು ಶಿಲ್ಪಗಳಲ್ಲಿ ಆನೆಗಳನ್ನು ಕಾಣಬಹುದು. ಮತ್ತು ಅವರ ಕಾಲದಲ್ಲೂ, ಭಾರತದಿಂದ ಗಾಂಧಾರಕ್ಕೆ ಆನೆಗಳನ್ನು ಕಳುಹಿಸಿರಬಹುದೆಂದು ಊಹಿಸಬಹುದು.

ನಂತರದ ಶತಮಾನಗಳಲ್ಲಿ, ಅಫ್ಘಾನಿಸ್ತಾನದ ಗದ್ದುಗೆಗೆ ಏರಿದ ಘಜ಼ನಿ ಮತ್ತು ಗೋರಿ ಮಹಮ್ಮದರೂ ಸಹ ಭಾರತದಿಂದ ನೂರಾರು ಆನೆಗಳನ್ನು ಕೊಂಡೊಯ್ದಿದ್ದಾರೆ. ಇತಿಹಾಸಜ್ಞರು, ಹೇಳುವಂತೆ, ಘಜ಼ನಿ ಮತ್ತು ಗೋರಿ ಮಹಮ್ಮದರು ಭಾರತದ ಸಾಮಂತರುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ, ಪ್ರತಿ ವರ್ಷವೂ ಭಾರತದಿಂದ ಇಂತಿಷ್ಟು ಆನೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತಂತೆ.

ಹದಿನೈದನೆಯ ಶತಮಾನದ ವೇಳೆಗೆ, ಅಪ್ಘಾನಿಸ್ತಾನದಿಂದ ಬರುವ ಲೋದಿ ವಂಶಜರು, ಭಾರತದಿಂದ ಆನೆಗಳನ್ನು ಕೊಂಡೊಯ್ಯುವುದನ್ನು ನಿಲ್ಲಿಸಿ, ಆನೆಗಳಿಂದ ಸಮೃದ್ಧವಾದ ಭಾರತದಲ್ಲೇ ತಮ್ಮ ಸಾಮ್ರಾಜ್ಯ ಕಟ್ಟುತ್ತಾರೆ. ಹದಿನಾರನೆಯ ಶತಮಾನದಲ್ಲಿ, ಅಪ್ಘಾನಿಸ್ತಾನದಿಂದ ಬರುವ ಬಾಬರ್, ಇಬ್ರಾಹಿಂ ಲೋದಿಯೊಂದಿಗೆ ಕಾಳಗವೆಸಗುತ್ತಾನೆ. ಕ್ರಿ.ಶ.೧೫೨೬ರಲ್ಲಿ ನಡೆಯುವ ಪಾಣಿಪಟ್ ಕದನದಲ್ಲಿ, ಲೋದಿಯ ಸೈನ್ಯದ ನೂರಾರು ಆನೆಗಳು ಬಾಬರ್‌ನ ತೋಪು-ಸಿಡಿಮದ್ದನ್ನು ಎದುರಿಸುತ್ತವೆ. ಲೋದಿಯ ಆನೆಗಳು ಸೋಲುತ್ತವಾದರೂ, ತಾನು ಗೆದ್ದು, ಭಾರತದಲ್ಲಿ ಮುಘಲ್ ಸಾಮ್ರಾಜ್ಯವನ್ನು ಸ್ಥಾಪಿಸುವ ಬಾಬರ್, ಆನೆಗಳ ಮಹತ್ವವನ್ನು ಕಂಡುಕೊಳ್ಳುತ್ತಾನೆ. ಅವನ ಬಾಬರ್‌ನಾಮದಲ್ಲಿ, ಯಮುನೆಯ ತೀರದಲ್ಲಿ ಆನೆಗಳ ಸಂತಾನೋತ್ಪತ್ತಿಗೆಂದೇ ನಿರ್ಮಿಸಲಾದ ಕೇಂದ್ರಗಳ ಉಲ್ಲೇಖವಿದೆ. ಅಷ್ಟೇ ಅಲ್ಲ, ಆನೆ ಮತ್ತು ಘೇಂಡಾಮೃಗಗಳು ಮುಖಾಮುಖಿಯಾದರೆ ಗೆಲ್ಲುವುದು ಯಾರೆಂಬ ಕುತೂಹಲವೂ ಇದೆ. ಇಂತಹುದೇ ಕುತೂಹಲ ಸರಿ ಸುಮಾರು ಅದೇ ಸಮಯಕ್ಕೆ ಪೋರ್ಚುಗಲ್ಲಿನ ದೊರೆ ಮ್ಯಾನುಯೆಲ್‌ನಿಗೂ ಬಂದದ್ದು ಕುತೂಹಲದ ವಿಷಯ (ಈ ಸರಣಿಯ ಮೊದಲ ಲೇಖನವನ್ನು ಓದಿರಿ)

ಹತ್ತೊಂಬತ್ತನೆಯ ಶತಮಾನದ ವೇಳೆಗೆ, ಮುಘಲರ ನಂತರ ಭಾರತದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುವ ಬ್ರಿಟಿಷರು ಅಫ್ಘಾನಿಸ್ತಾನ-ಆನೆಗಳ ವಿಚಾರದಲ್ಲಿ, ಇನ್ನೂ ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುವ ಮುಂಚೆಯೇ, ಕ್ರಿ.ಶ.೧೮೦೯ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ ವಿಲಿಯಂ ಎಲ್ಫಿನ್‌ಸ್ಟನ್ ಅಫ್ಘಾನಿಸ್ತಾನದ ದೊರೆ ಶಾಹ್ ಶೂಜಾನಿಗೆ ಕಲ್ಕತ್ತಾದಿಂದ ಹದಿಮೂರು ಆನೆಗಳನ್ನು ಕಳುಹಿಸುತ್ತಾನೆ.

*****


ಆನೆಗಳ ಕೊಡುಗೆ ವಿಚಾರದಲ್ಲಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಭಾರತೀಯ ರಾಜರುಗಳೂ ಕಡಿಮೆ ಏನಲ್ಲ. ಟಿಪ್ಪು ಸುಲ್ತಾನ್ ಸಹ ಇಂತಹ ಕೊಡುಗೆಗಳನ್ನು ನೀಡಿದ್ದಾನೆ. ಮೇಲ್ಕೋಟೆಯ ದೇವಾಲಯ ಮತ್ತು ಶೃಂಗೇರಿಯ ಮಠಕ್ಕೆ, ಅವನು ಆನೆಗಳನ್ನು ಕೊಡುಗೆಯಾಗಿ ನೀಡಿರುವುದಕ್ಕೆ ದಾಖಲೆಗಳಿವೆ. ಆದರೆ, ಅವನು ವಿದೇಶಗಳಿಗೆ ಆನೆಯ ಉಡುಗೊರೆ ನೀಡಿದಂತಿಲ್ಲ. ಉದಾಹರಣೆಗೆ, ಕ್ರಿ.ಶ.೧೭೮೮ರಲ್ಲಿ, ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಫ್ರೆಂಚರ ಸಹಾಯ ಬೇಡಲು ತನ್ನ ರಾಯಭಾರಿಗಳನ್ನು ಟಿಪ್ಪು ಪ್ಯಾರಿಸಿಗೆ ಕಳುಹಿಸುತ್ತಾನೆ. ಫ್ರೆಂಚ್ ದೊರೆ ಹದಿನಾರನೆಯ ಲೂಯಿಯ ಆಸ್ಥಾನ ತಲುಪುವ ಟಿಪ್ಪುವಿನ ಮೂವರು ರಾಯಭಾರಿಗಳು ನವಿರಾದ ಮಸ್ಲಿನ್ ಬಟ್ಟೆ, ವಜ್ರ-ವೈಢೂರ್ಯಗಳ, ಮುತ್ತು-ರತ್ನಗಳ ಉಡುಗೊರೆಗಳನ್ನು ತಲುಪಿಸುತ್ತಾರೆ. ಆದರೆ, ಅವರ ಈ ಉಡುಗೊರೆಗಳು ಫ್ರೆಂಚರ ಮೇಲೆ ಅಷ್ಟಾಗಿ ಪ್ರಭಾವ ಬೀರುವುದಿಲ್ಲ. ಆದರೆ, ಅವರ ವೇಶ-ಭೂಷಣಗಳಿಗೆ ಫ್ರೆಂಚ್ ಸಮಾಜದ ಮೇಲ್ವರ್ಗದ ಜನರು ಮಾರುಹೊಗುತ್ತಾರೆ. ಆ ಕಾಲದ ಫ್ರಾನ್ಸಿನ ಫ್ಯಾಷನ್ ಪ್ರಿಯರು, ಟಿಪ್ಪುವಿನ ರಾಯಭಾರಿಗಳ ಉಡುಗೆಗಳ ಬಗೆಗೆ ಗಂಭೀರ ಚರ್ಚೆಗಳನ್ನೇ ಮಾಡುತ್ತಾರೆ. ಅವರ ಉಡುಗೆ-ತೊಡುಗೆಗಳಿಗೆ ಮಾರುಹೊಗುವ ಫ್ರೆಂಚ್ ಕಲಾವಿದೆ ಎಲಿಜ಼ಬೆತ್ ಲೆ ಬ್ರೂನ್, ಈ ರಾಯಭಾರಿಗಳ ಚಿತ್ರಗಳನ್ನು ರಚಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾಳೆ. ಇಂತಹ, ಚಿತ್ರಗಳು – ಅದರಲ್ಲೂ ಓರ್ವ ಮಹಿಳೆ ರಚಿಸುವದು! – ತಮ್ಮ ಧರ್ಮಕ್ಕೆ ವಿರುದ್ಧ ಎಂದು ಆಲೋಚಿಸುವ ಈ ರಾಯಭಾರಿಗಳು, ಮೊದಲಿಗೆ, ಅದಕ್ಕೆ ಒಪ್ಪುವುದಿಲ್ಲ. ಆದರೆ, ಲೆ ಬ್ರೂನ್, ಫ್ರೆಂಚ್ ದೊರೆಗೆ ಹತ್ತಿರದವಳು, ಲೂಯಿಯ ಪತ್ನಿ ಮೇರಿ ಆಂಟೋನಿಯೆಟ್‌ಳ ಚಿತ್ರವನ್ನು ರಚಿಸಿದಂತಹವಳು. ಅವಳ ಬೇಡಿಕೆಯನ್ನು ತಿರಸ್ಕರಿಸುವುದು ಸಾಧ್ಯವೇ?! ಕೊನೆಗೆ, ಅವರು “ಹೂ” ಅನ್ನಲೇ ಬೇಕಾಗುತ್ತದೆ.

ಲೆ ಬ್ರೂನ್ ಹೀಗೆ ರಚಿಸಿದ, ಒಂದು ಚಿತ್ರ ಇಂದಿಗೂ ಅಪಾರ ಪ್ರಸಿದ್ಧಿಯನ್ನು ಪಡೆದಿದೆ. ಅದು, ಟಿಪ್ಪು ಸುಲ್ತಾನನ ರಾಯಭಾರಿಗಳಲ್ಲಿ ಒಬ್ಬನಾದ ಮುಹಮ್ಮದ್ ದರ್ವಿಶ್ ಖಾನ್‌ನ ಚಿತ್ರ. ಹಲವರು ವಿಮರ್ಶಕರು ಹೇಳುವಂತೆ, ಎಲಿಜ಼ಬೆತ್ ಲೆ ಬ್ರೂನ್ ರಚಿಸಿರುವ ಉತ್ತಮ ಚಿತ್ರಗಳಲ್ಲಿ ಇದೂ ಒಂದು. ಭಾರತದಿಂದ ಬಂದಿದ್ದ ಪ್ರಭಾವಶಾಲಿ ಮುಸ್ಲಿಂ ಪುರುಷನೊಬ್ಬನ ಗಾಂಭೀರ್ಯದ ಮುಖ ಭಾವ ಮತ್ತು ಸುಸಂಸ್ಕೃತ ಉಡುಗೆಯ ಸೊಬಗನ್ನು, ಫ್ರೆಂಚ್ ಮಹಿಳೆಯೊಬ್ಬಳು, ತನ್ನ ಕ್ಯಾನ್‌ವಾಸಿನಲ್ಲಿ ಗ್ರಹಿಸಿರುವುದು ಅಪೂರ್ವವಾದದ್ದೆಂದೇ ಹೇಳಬಹುದು. ಚಿತ್ರ ರಚನೆಯಾಗುವಾವರೆಗೂ ಸುಮ್ಮನಿದ್ದ ದರ್ವೆಶ್ ಖಾನ್, ಅನಂತರದಲ್ಲಿ ತಗಾದೆ ತೆಗೆದು, ಆ ಚಿತ್ರವನ್ನು ಲೆ ಬ್ರೂನ್‌ಳಿಗೆ ಕೊಡಲು ಒಪ್ಪಿಕೊಳ್ಳಲಿಲ್ಲವಂತೆ. ಆದರೆ, ಲೆ ಬ್ರೂನ್, ದರ್ವೆಶ್ ಖಾನ್‌ನ ಸೇವಕನಿಗೆ ಲಂಚ ತೆತ್ತು, ಆ ಚಿತ್ರವನ್ನು ಹೇಗೋ ಪಡೆದುಕೊಂಡಳಂತೆ.

ಇಷ್ಟೆಲ್ಲಾ ಮಾಡಿದರೂ, ಕೊನೆಗೆ, ದರ್ವೆಶ್ ಖಾನ್ ಮತ್ತು ಅವನ ಸಂಗಡಿಗರು, ಫ್ರೆಂಚ್ ದೊರೆ ಲೂಯಿಯನ್ನು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಟಿಪ್ಪು ಸುಲ್ತಾನ ಪರವಾಗಿ ಸೆಳೆಯುವಲ್ಲಿ ಯಶಸ್ವಿಯಾಗುವುದಿಲ್ಲ. ಅವರು ವಾಪಸಾದ ಮೇಲೆ, ಅವರ ವೈಫಲ್ಯದ ಕುರಿತು ಕ್ರೋಧಿತನಾದ ಟಿಪ್ಪು, ಅವರ ತಲೆಯನ್ನೇ ತೆಗೆಯುತ್ತಾನೆ. ಫ್ರೆಂಚರಿಗೆ ಅವರು ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದರೆ, ಅವರ ಭವಿಷ್ಯ ಮತ್ತು ಭಾರತದ ಇತಿಹಾಸ ಬದಲಾಗುತ್ತಿತ್ತೇ?!

ಫ್ರೆಂಚರಿಗೆ ಆನೆಯನ್ನು ಕಳುಹಿಸದ ಟಿಪ್ಪು, ವಿದೇಶಗಳಿಂದ ಆನೆಗಳನ್ನು ತಾನು ಉಡುಗೊರೆಯಾಗಿ ಪಡೆಯುವುದರ ಕನಸನ್ನಂತೂ ಕಾಣುತ್ತಾನೆ.

ತಾನು ರಾತ್ರಿ ನಿದ್ದೆಯಲ್ಲಿ ಕಂಡ ಕನಸುಗಳನ್ನು, ಎದ್ದ ನಂತರ, ಪುಸ್ತಕವೊಂದರಲ್ಲಿ ಬರೆದು ಅದರ ಬಗೆಗೆ ಮತ್ತಷ್ಟು ಆಲೋಚನೆ ಮಾಡುವ ಪ್ರವೃತ್ತಿ ಟಿಪ್ಪು ಸುಲ್ತಾನನಿಗೆ ಇತ್ತು. ಟಿಪ್ಪುವಿನ ಮರಣದ ನಂತರ ಈ ಪುಸ್ತಕ, ಬ್ರಿಟಿಷರ ಕೈಗೆ ಸಿಕ್ಕಿತು. ಆ ಪುಸ್ತಕದಲ್ಲಿ, ಟಿಪ್ಪು ತಾನು ಕಂಡ ೩೭ ವಿವಿಧ ಕನಸುಗಳನ್ನು ದಾಖಲಿಸಿದ್ದಾನೆ. ಅದರಲ್ಲಿ, ಒಂಬತ್ತನೆಯದು, ಚೈನಾದ ಸಾಮ್ರಾಟ ಮೂರು ಬಿಳಿ ಆನೆಗಳನ್ನು ತನ್ನ ದೇಶದಿಂದ ಟಿಪ್ಪುವಿಗೆ ಕಾಣಿಕೆಯಾಗಿ ಕೊಡುವಂತಹ ಕನಸು.

ಅಂತಹದೊಂದು ಕನಸು ನನಸಾಗುವ ಮುನ್ನವೇ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧದ ಕದನದಲ್ಲಿ ಮರಣವನ್ನಪ್ಪುವುದು, ಬ್ರಿಟಿಷರು ಭಾರತದಲ್ಲಿ ತಮ್ಮ ಹಿಡಿತವನ್ನು ಬಿಗಿ ಪಡಿಸಿಕೊಳ್ಳುವುದು ಇವೆಲ್ಲಾ ಈಗ ಎಲ್ಲರಿಗೂ ತಿಳಿದ ಇತಿಹಾಸ.

ಟಿಪ್ಪುವನ್ನು ೧೭೯೯ರಲ್ಲಿ ಸೋಲಿಸುವ ಬ್ರಿಟಿಷ್ ಸೈನ್ಯ, ಮುಂದಿನ ಹತ್ತು ವರ್ಷಗಳು ಶ್ರೀರಂಗಪಟ್ಟಣದಲ್ಲಿಯೇ ನೆಲೆಸುತ್ತದೆ. ಆದರೆ, ೧೮೦೯ರ ಹೊತ್ತಿಗೆ, ಬ್ರಿಟಿಷ್ ಅಧಿಕಾರಿಗಳು, ತಮ್ಮ ಬಿಡಾರಕ್ಕೆ ಕೊಂಚ ತಂಪೆನಿಸುವ ಜಾಗವೊಂದನ್ನು ಹುಡುಕಲಾರಂಭಿಸುತ್ತಾರೆ. ಅವರಿಗೆ, ಬೆಂಗಳೂರು ತಕ್ಕುದಾದ ಜಾಗವೆಂದೆನ್ನಿಸುತ್ತದೆ. ಅಲ್ಲಿ ತಮ್ಮ ಕಂಟೋನ್ಮೆಂಟ್ ನಿರ್ಮಿಸಲಾರಂಭಿಸುತ್ತಾರೆ. ಸೈನಿಕರು, ಅಧಿಕಾರಿಗಳು, ಅವರ ಕುಟುಂಬ ವರ್ಗ ಇತ್ಯಾದಿ ಬೆಳೆದಂತೆ, ಅದನ್ನೆಲ್ಲಾ ನಿರ್ವಹಿಸಲು ಆಡಳಿತ ವ್ಯವಸ್ಥೆಯೂ ಬೆಳೆಯುತ್ತದೆ. ಆಡಳಿತ ವ್ಯವಸ್ಥೆಯ ವಿವಿಧ ಇಲಾಖೆಗಳಿಗೆ ಬೇಕಿರುವ ಕಛೇರಿಗಾಗಿ ಸೂಕ್ತವಾದ ಕಟ್ಟಡವೊಂದರ ನಿರ್ಮಾಣವೂ ಆರಂಭವಾಗುತ್ತದೆ.

ಮುಂದಿನ ಐವತ್ತು ವರ್ಷಗಳಲ್ಲಿ, ಬ್ರಿಟಿಷರು, ಇಡೀ ಭಾರತವನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ೧೮೬೯ರಲ್ಲಿ, ಭಾರತದ ಗವರ್ನರ್ ಜೆನೆರಲ್ ಆಗಿದ್ದ ಲಾರ್ಡ್ ಮೇಯೋನನ್ನು ಭೇಟಿ ಮಾಡಲು, ಅಫ್ಘಾನಿಸ್ತಾನದ ರಾಜ ಶೇರ್ ಅಲಿ, ಇಂದಿನ ಹರಿಯಾಣದಲ್ಲಿರುವ ಅಂಬಾಲ ಪಟ್ಟಣಕ್ಕೆ ಬರುತ್ತಾನೆ. ಅವನು ತನ್ನ ದೇಶಕ್ಕೆ ವಾಪಸಾಗುವಾಗ, ಮೇಯೋ ಅವನಿಗೆ ಉಡುಗೊರೆಗಳನ್ನು ಕೊಟ್ಟು ಕಳುಹಿಸುತ್ತಾನೆ: ಹತ್ತೊಂಬತ್ತು ಭಾರತೀಯ ಆನೆಗಳು!

ಬೌದ್ಧಧರ್ಮದಲ್ಲಿ, ಆನೆಗೆ ಮಹತ್ವದ ಸ್ಥಾನವಿದೆ. ಸಿದ್ಧಾರ್ಥ ಗೌತಮನ ಜನ್ಮಕ್ಕೂ ಪವಿತ್ರವಾದ ಶ್ವೇತಗಜಕ್ಕೂ ಸಂಬಂಧವಿದೆ ಎಂಬ ನಂಬಿಕೆ ಬೌದ್ಧಧರ್ಮದಲ್ಲಿದೆ. ಹೀಗಾಗಿ, ಕುಶಾನರ ಕಾಲದ ಹಲವು ಶಿಲ್ಪಗಳಲ್ಲಿ ಆನೆಗಳನ್ನು ಕಾಣಬಹುದು.

ಕೆಲ ವರ್ಷಗಳ ನಂತರ, ಲಾರ್ಡ್ ಮೇಯೋ, ಅಂಡಮಾನಿನಲ್ಲಿ ಬ್ರಿಟಿಷರು ನಿರ್ಮಿಸಿದ್ದ ಬಂದೀಖಾನೆಯನ್ನು ಪರಾಮರ್ಶಿಸಲು, ಪೋರ್ಟ್ ಬ್ಲೇರ್‌ನಲ್ಲಿ ಬಂದಿಳಿಯುತ್ತಾನೆ. ಬಂದೀಖಾನೆಯಲ್ಲಿ ಖೈದಿಯಾಗಿದ್ದ ಶೇರ್ ಅಲಿ ಅಫ್ರಿದಿ ಎನ್ನುವವನು ಲಾರ್ಡ್ ಮೇಯೋನನ್ನು ಕೊಲ್ಲುತ್ತಾನೆ. ಈ ಶೇರ್ ಅಲಿ ಅಫ್ರಿದಿ ಅಫ್ಘಾನಿಸ್ತಾನದವನೇ.

ಆ ಸಮಯದಲ್ಲಿಯೇ ಅಂಡಮಾನಿನಲ್ಲಿ (ಬ್ರಿಟಿಷರಿಗೆ) ಹೊಸದಾದ ಚಿಟ್ಟೆಯೊಂದರ ಪ್ರಭೇದ ಕಾಣುತ್ತದೆ. ಅದಕ್ಕೆ Papilio Mayo ಎಂದು ನಾಮಕರಣವಾಗುತ್ತದೆ. ಬೆಂಗಳೂರಿನಲ್ಲಿ, ಬ್ರಿಟಿಷರು ನಿರ್ಮಿಸುತ್ತಿದ್ದ ಕಟ್ಟಡದ ನಿರ್ಮಾಣವೂ, ಮೇಯೋನ ಮರಣದ ಕೆಲ ವರ್ಷಗಳ ನಂತರವೇ ಪೂರ್ಣವಾಗುತ್ತದೆ. ಮೇಯೋನ ಸ್ಮರಣಾರ್ಥ, ಅದಕ್ಕೆ, “ಮೇಯೋ ಹಾಲ್” ಎಂಬ ಹೆಸರನ್ನಿಡಲಾಗುತ್ತದೆ.

*****

ಇವೆಲ್ಲದರ ಮಧ್ಯೆಯೇ, ಬ್ರಿಟಿಷರ ಮನರಂಜನೆಗಾಗಿ, ಭಾರತದಿಂದ ಬ್ರಿಟನ್ನಿಗೆ ಆನೆಗಳನ್ನು ಕಳುಹಿಸುವ ಪರಿಪಾಠವೂ ಬೆಳೆಯುತ್ತದೆ. ಹೀಗೆ ಕಳುಹಿಸಿದ ಆನೆಗಳಲ್ಲಿ, ಚೂನಿ ಎಂಬ ಆನೆಯೂ ಒಂದು. 11 ಅಡಿ ಎತ್ತರ, ೭ ಟನ್ ತೂಕದ ಕಟ್ಟುಮಸ್ತಾದ ಪಳಗಿದ ಗಂಡಾನೆ ಅದು.

(ಚೂನಿ)

೧೮೧೧ರಲ್ಲಿ, ಚೂನಿ ಲಂಡನ್ ತಲುಪುತ್ತಾನೆ. ಅವನನ್ನು ಮೊದಲಿಗೆ ಹಲವಾರು ನಾಟಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ತನ್ನ ಮಾವುತರ ಅಣತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಅವನ ವಿನೀತ ಸ್ವಭಾವಕ್ಕೆ ಇಂಗ್ಲೀಷ್ ಸಮಾಜ ಮಾರುಹೊಗುತ್ತದೆ. ಅವನನ್ನು ನೋಡಿದ ನಂತರ, “ನನ್ನ ಹ್ಯಾಟ್ ತೆಗೆದು, ನನಗಾಗಿ ಬಾಗಿಲನ್ನೂ ತೆರೆಯುವ” ಚೂನಿಯೇ ತನ್ನ ಬಟ್ಲರ್ ಆಗಬಾರದಿತ್ತೇ ಎಂದು ಕವಿ ಬೈರನ್ ಉದ್ಗರಿಸಿದನಂತೆ!

ಆದರೆ, ಇದೆಲ್ಲಾ, ಕೆಲ ವರ್ಷಗಳ ನಂತರ ಬದಲಾಯಿತು. ಚೂನಿಗೆ ಪ್ರಾಯದ “ಮಸ್ತ್” ಏರಿತು. ಜೊತೆಗೆ ಹಲ್ಲು ನೋವು ಸಹ ಪ್ರಾರಂಭವಾಯಿತು. ೧೮೨೬ರ ಫೆಬ್ರುವರಿ ೨೬ರಂದು, ಅವನು ತನ್ನ ಎಂದಿನ ಮೆರವಣಿಗೆಯಲ್ಲಿ ಸಾಗುತ್ತಿದ್ದವನು, ಏನಾಯಿತೋ ಏನೋ, ಇದ್ದಕ್ಕಿದ್ದಂತೆ, ತನ್ನ ಮಾವುತರಲ್ಲೊಬ್ಬರ ಮೇಲೆ ಹಲ್ಲೆ ಮಾಡಿ, ಆ ಮಾಹುತನ ಸಾವಿಗೆ ಕಾರಣನಾದ. ಅಂದಿನವರೆಗೆ, ಅವನ ಸಾಧು-ಸ್ವಭಾವವನ್ನು ಕೊಂಡಾಡುತ್ತಿದ್ದ ಇಂಗ್ಲಿಷ್ ಸಮಾಜ ಒಮ್ಮೆಲೆ ಅವನ ವಿರುದ್ಧ ತಿರುಗಿ ಬಿತ್ತು. ಕೊಲೆಗಾರನಿಗೆ ಮರಣದಂಡನೆಯಷ್ಟೇ ಸರಿಯಾದ ಶಿಕ್ಷೆ ಎಂದು ನಿರ್ಧರಿಸಿ, ಮಾರ್ಚ್ ೧ರಂದು ಅವನಿಗೆ ವಿಷಪೂರಿತ ಆಹಾರ ನೀಡಲಾಯಿತು. ಆದರೆ, ಅವನು ಆ ಆಹಾರವನ್ನು ತಿನ್ನಲೊಪ್ಪಲಿಲ್ಲ. ಹೀಗಾಗಿ, ವಿಷಕ್ಕಿಂತ ಬಂದೂಕಿನಿಂದ ಸಾಯಿಸುವುದೇ ಸೂಕ್ತವೆಂದು, ಸೈನಿಕರನ್ನು ಕರೆತರಲಾಯಿತು.

ಚೂನಿ ತನ್ನ ಮೊಣಕಾಲ ಮೇಲೆ ಕುಳಿತರೆ, ಸೈನಿಕರಿಗೆ ಗುಂಡು ಹಾರಿಸಲು ಸುಲಭವಾಗುವುದೆಂದು ಅಲ್ಲಿದ್ದ ತಜ್ಞರು ಸೂಚಿಸಿದರು. ಚೂನಿಯ ಮಾವುತ, ಚೂನಿಗೆ ಮೊಣಕಾಲ ಮೇಲೆ ಕೂರುವಂತೆ ಅಣತಿ ಇತ್ತ. ಎಂದಿನಂತೆ, ಚೂನಿ, ವಿನೀತ ಭಾವದಿಂದ ತನ್ನ ಮೊಣಕಾಲುಗಳ ಮೇಲೆ ಕುಳಿತುಕೊಂಡ. ಸೈನಿಕರು ತಮ್ಮ ಬಂದೂಕುಗಳಿಂದ ಗುಂಡುಗಳನ್ನು ಹಾರಿಸಿದರು. ಗುಂಡುಗಳು ಅವನ ಹಣೆ, ಮೈ ಹೊಕ್ಕವಾದರೂ ಅವನು ಸಾಯಲಿಲ್ಲ. ಒಟ್ಟು ೧೫೨ ಗುಂಡುಗಳು ಅವನನ್ನು ಹೊಕ್ಕವು. ಅವನು ನೋವಿನಿಂದ ನರಳತೊಡಗಿದನಾದರೂ, ಸಾಯಲು ಸಿದ್ಧನಿರಲಿಲ್ಲ. ಕೊನೆಗೆ, ನುರಿತ ವೈದ್ಯರ ನಿರ್ದೇಶನದಂತೆ, ಕತ್ತಿ, ಭಲ್ಲೆಗಳಿಂದ ಅವನನ್ನು ಹತಗೊಳಿಸಲಾಯಿತು.

ಚೂನಿಯ ಈ ದಾರುಣ ಹತ್ಯೆಯ ಸುದ್ದಿಯನ್ನು, ಇಂಗ್ಲೀಷ್ ದಿನ ಪತ್ರಿಕೆಗಳು, ಚಿತ್ರಸಹಿತವಾಗಿ, ಕರುಣಾಜನಕವಾಗಿ ವರದಿ ಮಾಡಿದವು. ಇಂಗ್ಲೀಷ್ ಸಮಾಜ, ಮತ್ತೆ ತಿರುಗಿ ಬಿತ್ತು. ಈ ಬಾರಿ, ಚೂನಿಯಂತಹ ನತದೃಷ್ಟನನ್ನು ಕೊಂದವರ ವಿರುದ್ಧ!

ಒಂದೆಡೆ ಚೂನಿಯ ಸಾವಿನ ಬಗೆಗೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ, ಆನೆಯ ಮಾಂಸದ ರುಚಿಯ ಅನುಭವ ಹೇಗಿರಬಹುದೆಂಬ ಮಾತುಗಳೂ ಕೇಳಿ ಬಂದವು. ಪತ್ರಿಕೆಗಳಲ್ಲಿ, ಆನೆ ಮಾಂಸದ ತಿನುಸುಗಳ ರೆಸಿಪಿಗಳೂ ಪ್ರಕಟವಾದವು. ಚೂನಿಯ ಮಾಲಿಕರು ಅವನ ಅಸ್ತಿ ಪಂಜರದಿಂದ ಹಣ ಮಾಡಲು ಹವಣಿಸಿದರು. ಮುಂದಿನ ಸುಮಾರು ೧೨೫ ವರ್ಷಗಳ ಕಾಲ ಅವನ ಅಸ್ತಿ ಪಂಜರವನ್ನು ಪ್ರದರ್ಶಿಸಲಾಯಿತು. ೧೯೪೧ರಲ್ಲಿ, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ಜರ್ಮನ್ ವಿಮಾನಗಳು ಲಂಡನ್ ಮೇಲೆ ಬಾಂಬ್ ದಾಳಿ ಮಾಡಿದಾಗ, ಚೂನಿಯ ಅಸ್ತಿ ಪಂಜರ ಚೂರು ಚೂರಾಗಿ ಲಂಡನ್ನಿನ ಮಣ್ಣಿನೊಳಗೆ ಬೆರೆಯಿತು.

*****

೧೯೪೭ರಲ್ಲಿ ಭಾರತ ಬ್ರಿಟಿಷರಿಂದ ಸ್ವತಂತ್ರವಾಗುತ್ತದೆ. ೧೯೫೦ರಲ್ಲಿ ಗಣತಂತ್ರವೂ ಆಗುತ್ತದೆ. ಆದರೆ, ನಮ್ಮನ್ನಾಳುವವರು ಭಾರತದಿಂದ ವಿದೇಶಗಳಿಗೆ ಆನೆಗಳನ್ನು ಉಡುಗೊರೆಗಳನ್ನಾಗಿ ಕಳುಹಿಸುವುದು ನಿಲ್ಲಿಸುವುದಿಲ್ಲ. ನೂರಾರು ಅಥವಾ ಹತ್ತಾರು ಆನೆಗಳನ್ನು ಕಳುಹಿಸುವುದರ ಬದಲು, ಒಂದೊಂದು ಆನೆಯನ್ನಷ್ಟೇ ಕಳುಹಿಸುತ್ತಾರೆ. ಪ್ರಧಾನಿ ನೆಹರೂರವರು ೧೯೫೩ರಲ್ಲಿ ಚೈನಾಗೆ “ಆಶಾ” ಎಂಬ ಮರಿ ಆನೆಯನ್ನು ಕಳುಹಿಸಿದರೆ, ನಂತರದಲ್ಲಿ “ಇಂದಿರಾ” ಎಂಬ ಇನ್ನೊಂದು ಮರಿ ಆನೆಯನ್ನು ಜಪಾನಿಗೆ ಕಳುಹಿಸುತ್ತಾರೆ. ಇವೆರಡು ದೇಶಗಳಲ್ಲದೇ, ನೆಹರೂರವರ ಕಾಲದಲ್ಲಿ ಯೂರೋಪಿನ ಹಲವು ರಾಷ್ಟ್ರಗಳಿಗೂ, ಕೆನಡಾ, ನ್ಯೂಜ಼ಿಲೆಂಡ್‌ಗಳಿಗೂ ಭಾರತದ ಮರಿಯಾನೆಗಳನ್ನು ಕೊಡುಗೆಗಳನ್ನಾಗಿ ನೀಡಲಾಗುತ್ತದೆ.

ಇಲ್ಲಿ, ನಾವು ಇನ್ನೊಂದು ವಿಷಯವನ್ನು ಗಮನಿಸಬೇಕು. “ಆಶಾ”, ”ಇಂದಿರಾ” ಎಂಬ ಸ್ತ್ರೀನಾಮಗಳು ಕೇವಲ ಕಾಕತಾಳೀಯವೇನಲ್ಲ. ಭಾರತದಿಂದ ಉಡುಗೊರೆಗಳನ್ನಾಗಿ ಕಳುಹಿಸಿದ ಮರಿಯಾನೆಗಳೆಲ್ಲಾ ಬಹುಮಟ್ಟಿಗೆ ಹೆಣ್ಣಾನೆಗಳೇ! ಹೆಣ್ಣಾನೆಗಳು ಗಾತ್ರದಲ್ಲಿ ಕೊಂಚಮಟ್ಟಿಗೆ ಕಿರಿದು. ಅದಕ್ಕಿಂತ ಮುಖ್ಯವಾಗಿ ಅವಕ್ಕೆ ಸಹನಶೀಲತೆ ಹೆಚ್ಚು. ಹೀಗಾಗಿ, ಅವುಗಳ ಸಾಗಣೆ ಮತ್ತು ನಂತರದ ನಿರ್ವಹಣೆ ಸಲೀಸು! ಎಷ್ಟೆಂದರೂ ಹೆಣ್ಣೆಂದರೆ “ಎಮ್ಮ ಮನೆಯಂಗಳದಿ ಬೆಳೆದ ಹೂವಲ್ಲವೇ”?!!

ಆನೆಗಳು ಸಂಘಜೀವಿಗಳು. ಆನೆಗಳ ಪರಸ್ಪರ ಸ್ನೇಹ ಜೀವನದುದ್ದಕ್ಕೂ ಇರುವಂತಹುದು. ಅದರಲ್ಲೂ, ಹೆಣ್ಣಾನೆಗಳಂತೂ ಇಡೀ ಜೀವನವನ್ನು ತಮ್ಮ ಕುಟುಂಬದೊಂದಿಗೇ ಕಳೆಯುತ್ತವೆ. ಕಾಡಿನಲ್ಲಿ ಹುಟ್ಟುವ ಹೆಣ್ಣು ಮರಿಯಾನೆ, ಅಕ್ಕ-ತಂಗಿಯಾಗಿ, ಚಿಕ್ಕಮ್ಮ-ದೊಡ್ಡಮ್ಮನಾಗಿ, ತಾಯಿಯಾಗಿ ಕೊನೆಗೆ ಅಜ್ಜಿಯಾಗಿ, ತನ್ನೆಲ್ಲಾ ಅನುಭವಗಳನ್ನು-ನೆನಪುಗಳನ್ನು ತನ್ನ ಕುಟುಂಬದ ಇತರ ಆನೆಗಳೊಂದಿಗೆ ಹಂಚಿಯೇ ಮೃತಳಾಗುತ್ತದೆ. ಮಾನವ ಸಂಬಂಧಗಳಂತೆಯೇ, ಆನೆಗಳ ಭಾವ ಪ್ರಪಂಚದಲ್ಲೂ, ಬಾಂಧವ್ಯದ ಬೆಸುಗೆಗಳು ಸಂಕೀರ್ಣ ಮತ್ತು ವಿಸ್ತಾರ. ಮರಿಯಾನೆಯೊಂದರ ಭಾವ ಲೋಕದ ಬಗೆಗೆ ಕಿಂಚಿತ್ತೂ ಆಲೋಚಿಸದೆ, ಚೈನಾದಲ್ಲೂ, “ಆಶಾ”ಳಿಗೆ ಹುಲ್ಲು-ನೀರು ಕೊಟ್ಟೇ ಕೊಡುತ್ತಾರೆ ಎಂಬ ಆಶಾವಾದದಿಂದ, ಮರಿಯಾನೆಯೊಂದನ್ನು ಅದರ ಕುಟುಂಬದಿಂದ ಬೇರ್ಪಡಿಸಿ ಏಕಾಕಿಯಾಗಿ ಕಳುಹಿಸುವುದರ ನೈತಿಕತೆಯ ಅರಿವು ಆ ಕಾಲದಲ್ಲಿ ಯಾರಿಗೂ ಇರಲಿಲ್ಲವೆನ್ನಿಸುತ್ತದೆ.

ನೆಹರೂರವರ ನಂತರ ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗುತ್ತಾರೆ. ಅಫ್ಘಾನಿಸ್ತಾನದಲ್ಲೂ, ಹಲವಾರು ಮಹತ್ವದ ಬದಲಾವಣೆಗಳಾಗಿರುತ್ತವೆ. ಹೊಸದೊಂದು ಆಡಳಿತ ವ್ಯವಸ್ಥೆ ಅಲ್ಲಿ ಅಧಿಕಾರಕ್ಕೆ ಬಂದಿರುತ್ತದೆ. ಅಫ್ಘಾನಿಸ್ತಾನ, ನಮ್ಮ ಕಟ್ಟಾ ವೈರಿಯೆನಿಸಿದ ಪಾಕಿಸ್ತಾನದ “ಆ” ಬದಿಗೆ ಇರುವ ದೇಶ. ಹೀಗಾಗಿ, ಅಫ್ಘಾನಿಸ್ತಾನದೊಡನೆ, ಸ್ನೇಹ ಬೆಳೆಸಿದರೆ ನಮಗೆ ಒಳಿತೇ ತಾನೇ!

೧೯೭೨ರಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರ ನಿರ್ದೇಶನದ ಮೇರೆಗೆ, ರಾಷ್ಟ್ರಪತಿ ವಿ.ವಿ.ಗಿರಿಯವರು ಅಫ್ಘಾನಿಸ್ತಾನವನ್ನು ಭೇಟಿ ಮಾಡುತ್ತಾರೆ. ಮೈತ್ರಿ ಎಂದ ಮೇಲೆ ಉಡುಗೊರೆ ಇರದೆ?! ಭಾರತ-ಅಫ್ಘಾನಿಸ್ತಾನಗಳ ಮೈತ್ರಿಯನ್ನು ಬಲಪಡಿಸಲು, ವಿ.ವಿ.ಗಿರಿಯವರು ತಾವು ನೀಡುವ ಉಡುಗೊರೆಯನ್ನು ಘೋಷಿಸುತ್ತಾರೆ. ಎಂದಿನಂತೆ, ಅದೂ ಸಹ ಹೆಣ್ಣಾನೆಮರಿಯೇ!

ಈ ಬಾರಿ, ಅದು ನಮ್ಮ ಕರ್ನಾಟಕದ ಆನೆ ಮರಿ.

*****

ತನ್ನಷ್ಟಕ್ಕೆ ತಾನು ತನ್ನ ಕುಟುಂಬದೊಂದಿಗೆ ಬೆರೆತು ಆಡಿಕೊಂಡಿದ್ದ, ಕನ್ನಡದ ಮರಿಯಾನೆಯೊಂದನ್ನು ತನಗೆ ತಿಳಿದಿದ್ದ ಒಂದೇ ಪ್ರಪಂಚದಿಂದ ಇದ್ದಕ್ಕಿದ್ದಂತೆ ಬೇರ್ಪಡಿಸಲಾಗುತ್ತದೆ. ದೇಶ-ದೇಶಗಳ ಮೈತ್ರಿಯ ಮುಂದೆ, ಮರಿಯಾನೆಯೊಂದರ ಬಾಂಧವ್ಯ ಒಂದು ಲೆಕ್ಕವೇ?!

ಅವಳು ಕನ್ನಡದ ಆನೆಯಾದರೂ, ಕೇಂದ್ರ ಸರ್ಕಾರದ ಕೊಡುಗೆಯಾದ್ದರಿಂದ, ಅವಳಿಗೆ “ಹಾಥಿ” ಎಂದು ನಾಮಕರಣ ಮಾಡಿ ೧೯೭೩ರಲ್ಲಿ ಅವಳನ್ನು ಅಫ್ಘಾನಿಸ್ತಾನಕ್ಕೆ ಸಾಗಹಾಕಲಾಗುತ್ತದೆ.

(ಹಾಥಿ)

ಮುಂದಿನ ಎರಡು ದಶಕಗಳ ಕಾಲ, ಹಾಥಿ, ಕಾಬೂಲಿನ ಮೃಗಾಲಯದಲ್ಲಿ ಏನೆಲ್ಲಾ ನೋಡುತ್ತಾಳೆ! ಏನೆಲ್ಲಾ ಅನುಭವಿಸುತ್ತಾಳೆ!! ಎಲ್ಲವನ್ನೂ ಏಕಾಂಗಿಯಾಗಿಯೇ!!!

೧೯೭೯ರಲ್ಲಿ, ಸೋವಿಯೆತ್ ಯೂನಿಯನ್‌ನಿಂದ ಅಫ್ಘಾನಿಸ್ತಾನದ ಅಕ್ರಮಣ, ಅದರ ವಿರುದ್ಧ ತಿರುಗಿ ಬೀಳುವ ಮುಜಾಹಿದೀನ್‌ಗಳು, ಈ ಮುಜಾಹಿದೀನ್‌ಗಳಿಗೆ ಶಸ್ತ್ರಾಸ್ತ್ರದ ನೆರವು ನೀಡುವ ಅಮೆರಿಕ, ಈ ನೆರವಿನಲ್ಲಿ ಎಷ್ಟೋ ಪಾಲನ್ನು ತಾನೇ ಗುಳುಂ ಮಾಡುವ ಪಾಕಿಸ್ತಾನ, ೧೯೮೯ರ ಸೋವಿಯೆತ್ ಪತನ, ಪಾಕಿಸ್ತಾನದಿಂದ ತಾಲೀಬಾನ್ ಸೃಷ್ಟಿ, ಕಾಬೂಲಿನ ಗದ್ದುಗೆಗಾಗಿ ತಾಲೀಬಾನ್ ಮತ್ತು Northern Allianceಗಳ ಭೀಕರ ಹೋರಾಟ, ಇವೆಲ್ಲಕ್ಕೂ ಹಾಥಿ ಕಾಬೂಲಿನ ಮೃಗಾಲಯದಿಂದಲೇ ಮೂಕ ಸಾಕ್ಷಿಯಾಗುತ್ತಾಳೆ.

ಕಾಬೂಲು ಮೃಗಾಲಯ, ಕಾಬೂಲು ನಗರದ ಹೊರವಲಯದಲ್ಲಿದೆ. ಕಾಬೂಲಿಗಾಗಿ ಹೋರಾಟ ಹೆಚ್ಚಾದಂತೆ, ಎಷ್ಟೋ ಬಾರಿ ಆ ಮೃಗಾಲಯ ವೈರಿಗಳ ಮುಖಾಮುಖಿಯ ರಣರಂಗವಾಗುತ್ತದೆ. ಬಾಂಬ್, ರಾಕೆಟ್, ಬುಲೆಟ್‌ಗಳು ಯಾರ ವಿರುದ್ಧ ಯಾರೇ ಹಾರಿಸಿದರೂ, ಅವು ಬೀಳುತ್ತಿದ್ದುದು ಮೃಗಾಲಯದ ಮೇಲೆಯೇ. ಈ ದಾಳಿಗಳಲ್ಲಿ ಮೃಗಾಲಯದ ಸೌಕರ್ಯಗಳು ನಾಶವಾಗಿ ಪ್ರಾಣಿಗಳಿಗೆ ಕಾಲ-ಕಾಲಕ್ಕೆ ಆಹಾರ-ನೀರು ಒದಗಿಸುವುದೂ ಕಷ್ಟವಾಗತೊಡಗುತ್ತದೆ. ತಾಲಿಬಾನಿಗಳ ಮೇಲುಗೈ ಹೆಚ್ಚಾದಂತೆ, ಮೃಗಾಲಯದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ; ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ, ಮೃಗಾಲಯವನ್ನು “ಹರಾಮ್” ಎಂದು ಭಾವಿಸಿದ್ದ ಅವರು, ಅಲ್ಲಿದ್ದ ಪ್ರಾಣಿಗಳ ಬಗೆಗೆ ದಯೆ ತೋರುವ ಮನಸ್ಥಿತಿಯಲ್ಲಿರುವುದಿಲ್ಲ. (ನಂತರದಲ್ಲಿ, ಪ್ರವಾದಿ ಮಹಮ್ಮದರು ಬೆಕ್ಕುಗಳನ್ನು ಆತ್ಮೀಯತೆಯಿಂದ ನೋಡಿಕೊಂಡ ವಿಚಾರದ ಅರಿವಾದಮೇಲೆ, ತಾಲೀಬಾನ್‌ಗಳು ತಮ್ಮ ಮನವನ್ನು ಬದಲಿಸಿಕೊಂಡರಂತೆ)

ಈ ಸಮಯದಲ್ಲಿ ಕಾಬೂಲಿನ ಮೃಗಾಲಯಕ್ಕೆ ಭೇಟಿಯಿತ್ತ ಅಮೆರಿಕನ್ ಪತ್ರಕರ್ತನೊಬ್ಬನು ಹೇಳುವಂತೆ, ಹಾಥಿ ಕೃಷ ಶರೀರಿಯಾಗಿದ್ದಳು. ಅವಳ ಹಿಂಗಾಲನ್ನು ಕಬ್ಬಿಣದ ಸರಪಳಿಗಳಿಂದ ಬಂಧಿಸಲಾಗಿತ್ತು. ಹೀಗಾಗಿ ಅವಳಿಗೆ ಹೆಚ್ಚು ಚಲಿಸಲು ಸಾಧ್ಯವಿರಲಿಲ್ಲ. ಮೃಗಾಲಯದ ಸಿಬ್ಬಂದಿ ಬಹುಮಟ್ಟಿಗೆ ಮಾಯವಾಗಿದ್ದರಿಂದ ಅವಳ ಲಾಯವನ್ನು ಸ್ವಚ್ಛಮಾಡುವವರು ಇರಲಿಲ್ಲ. ತನ್ನ ಸಗಣಿಯ ಗುಪ್ಪೆಯ ಮೇಲೆಯೇ ಅವಳು ನಿಂತಿದ್ದಳು.

೧೯೯೩ರ ಏಪ್ರಿಲ್‌ನಲ್ಲಿ, ಒಂದು ದಿನ, ರಾಕೆಟ್ ಒಂದು, ಹಾಥಿಯ ಲಾಯಕ್ಕೇ ಬಡೆಯಿತು. ಸಿಡಿಗುಂಡುಗಳು ಹಾಥಿಯ ಮೈ, ಕಾಲ್ಗಳನ್ನು ಹೊಕ್ಕವು. ಮುಂದಿನ ಹತ್ತು ದಿನಗಳ ಕಾಲ, ತನಗಾದ ಗಾಯಗಳ ನೋವಿನಿಂದ ಅಪಾರವಾಗಿ ನರಳಿದ ಅವಳು, ಹನ್ನೊಂದನೆಯ ದಿನ ಮರಣವನ್ನಪ್ಪಿದಳು. ಏಕಾಂಗಿಯಾಗಿ.

*****

ಚೂನಿ, ಹಾಥಿಗಳಂತಹ ಆನೆಗಳ ಕತೆಗಳನ್ನು ಕೇಳಿದಾಗ ನಮಗೆ ದುಃಖವಾಗುತ್ತದೆ. ಕೆಲವೊಮ್ಮೆ, ನಮ್ಮ ಕಣ್ಣಂಚುಗಳೂ ತೇವವೂ ಆಗಬಹುದು. ಆನೆಗಳು ನೋವನ್ನು ಅನುಭವಿಸುವಾಗ ಸಹ, ಅವುಗಳ ಕಣ್ಣಿನಿಂದ ನೀರು ಸುರಿಯುವುದನ್ನು ಕಾಣಬಹುದು. ಆದರೆ, ಆನೆಗಳ ಕಣ್ಣೀರು, ಅವು ಅನುಭವಿಸುವ ಭಾವ ಪ್ರಪಂಚದಿಂದ ಮೂಡಿರುವಂತಹವೇ? ಅಥವಾ, ನಮಗೆ ದೈಹಿಕ ಗಾಯವಾದಾಗ ಅದರಿಂದ ಒಸರುವ ಕೆಂಪು ಬಣ್ಣದ ದ್ರವದಂತೆ ಕೇವಲ ಒಂದು ಯಾಂತ್ರಿಕ ಪ್ರತಿಕ್ರಿಯೆಯೇ?

ಪ್ರಾಣಿಗಳ ಭಾವ ಪ್ರಪಂಚವನ್ನು ಅರಿಯುವ ಯತ್ನಗಳು ಬಹಳ ಕಾಲದಿಂದ ನಡೆದಿವೆ. ಸ್ವತಃ ಚಾರ್ಲ್ಸ್ ಡಾರ್ವಿನ್, The Expression of the Emotions in Man and Animals ಎಂಬ ಪುಸ್ತಕವನ್ನೇ ಬರೆದಿದ್ದಾನೆ. ಈ ಪುಸ್ತಕದಲ್ಲಿ, ಆನೆಗಳ ಅಳುವಿನ ಬಗೆಗೆ ಒಂದು ಅಧ್ಯಾಯವನ್ನೇ ಮುಡುಪಿಟ್ಟಿದ್ದಾನೆ.

(ಮುಂದುವರೆಯುವುದು)