“ಇತಿಹಾಸದ ಕಥೆಗಳು ನಮಗೆ ಉಪಯೋಗಿಯಾಗುವುದು ಹೇಗೆ? ಹಗೆಗಲ್ಲ, ಅದು ಬಗೆಯನ್ನು ಬೆಳಗಬೇಕು”. ಆಗಿಹೋದ ದುರಂತಗಳು, ದೌರ್ಜನ್ಯಗಳು ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಮಾನವೀಯತೆಯ ಮಹತ್ವವನ್ನು, ವಿಶಾಲ ಮನೋಭಾವದ ಸೌಂದರ್ಯವನ್ನು, ಮಹತ್ವವನ್ನು, ಜೀವನಧರ್ಮವನ್ನು ವರ್ತಮಾನಕ್ಕೆ ಮಾತ್ರವಲ್ಲ ಭವಿಷ್ಯಕ್ಕೂ ಒಂದು ಪಾಠವನ್ನು ಕೊಡುವಂತಿರಬೇಕು. ಇತಿಹಾಸದ ಅಧ್ಯಯನವು ನಮ್ಮ ಅರಿವಿನ ಹೆಚ್ಚಳಿಕೆ ಮತ್ತು ಪಾಠಕ್ಕೆ ಮಾಪನವಾಗಬೇಕೇ ಹೊರತು ನಾವಿಲ್ಲದಿದ್ದ ಕಾಲಘಟ್ಟದಲ್ಲಿ ಯಾರೋ ದಾಖಲಿಸಿರುವ ವಿಷಯಗಳಿಂದ ಉದ್ರಿಕ್ತರಾಗಿ, ಭಾವೋದ್ವೇಗವನ್ನು ಹೊಂದಿ ಶೋಕ ಸಾಗರದಲ್ಲಿ ಮುಳುಗಿಯೋ, ದ್ವೇಷದ ಉರಿಯಲ್ಲಿ ಬೆಂದೋ ಅಂಧತ್ವವನ್ನು ಹೊಂದಿದರೆ ಮತ್ತೆ ಅದೇ ಇತಿಹಾಸ ಮರುಕಳಿಸುವ ಸಾಧ್ಯತೆಯೇ ಹೆಚ್ಚು!
ನವೀನ್ ಗಂಗೋತ್ರಿ ಕಥಾಸಂಕಲನ “ಕಥಾಗತ”ದ ಕುರಿತು ತೇಜಸ್ವಿನಿ ಹೆಗಡೆ ಬರಹ
ಸ್ಮೃತಿ ಎಂದರೆ ಕೇವಲ ನೆನಪು ಎಂದರ್ಥ ಮಾತ್ರವಲ್ಲ; ಅರಿವು, ಜಾಗೃತಿ, ಭೂತಗಾಲದ ಹೊಳಹು ಎಂದೂ ಆಗುತ್ತದೆ. ಪಯಣ ಸಾಗುತ್ತಿರುವಾಗ, “ರಸ್ತೆ ತಿರುವು ಇದೆ ನಿಧಾನ ಸಾಗಿರಿ” ಎಂಬ ಎಚ್ಚರಿಕೆಯ ಫಲಕವಿದ್ದರೆ ಒಂದು ಜಾಗೃತಿ ಮೂಡಿ ಡ್ರೈವ್ ಮಾಡುತ್ತೇವೆ… ಇದರಿಂದ ಉಂಟಾಗಬಲ್ಲ ಅಪಘಾತ ತಡೆಯಲ್ಪಡುತ್ತದೆ… ಆ ರೀತಿಯ ಬೋರ್ಡ್ ಹಾಕಿಸುವುದರ ಹಿಂದೆಯೂ ಅಷ್ಟೆ.. ಈ ಹಿಂದೆ ನಡೆದ ಅನೇಕ ಅಪಘಾತಗಳ ಅರಿವಿದ್ದಿರುತ್ತದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಮುನ್ನಡೆದರೆ, ಉಡಾಫೆ ತೋರಿದರೆ ಆಗುವ ಅನಾಹುತಕ್ಕೆ ನಮ್ಮ ವಿಸ್ಮೃತಿ ಕಾರಣವಾಗುತ್ತದೆ. ಅದೇ ರೀತಿ ಪಯಣದ ಸಂದರ್ಭದಲ್ಲಿ ನಮಗೆದುರಾಗುವ ಅಥವಾ ನಮ್ಮ ಮೊದಲು ಈ ದಾರಿಯಲ್ಲಿ ಸಾಗಿರುವವರ ಒಳ್ಳೆಯ ಅನುಭವ, ನೆನಪುಗಳನ್ನು ಅರಿಯದೇ ಹೋದರೆ ಆ ತಾಣಗಳ ಸೌಂದರ್ಯವನ್ನು ನಾವು ಆಸ್ವಾದಿಸಲಾಗದು, ಆ ಸ್ಥಳಗಳಿಗೆ ಭೇಟಿಕೊಡಲಾಗದು.
ಒಳಿತು-ಕೆಡಕು ಎರಡನ್ನೂ ಅರಿತಿದ್ದರೆ ನಮ್ಮ ತಿಳಿವಿನ ವಿಸ್ತಾರ ಹೆಚ್ಚುವುದು. ಹೀಗಾಗಿ “Ignorance is bliss” ಎನ್ನುವುದು ಸಾರ್ವಕಾಲಿಕ ಮಾನ್ಯವಲ್ಲ, ಇದೊಂಥರ ಎಸ್ಕೇಪಿಸ್ಮ್ ಕೋಟ್ ಅನ್ನಬಹುದೇನೋ. ಈ ನಿಟ್ಟಿನಲ್ಲಿ ನಮ್ಮ ಹಿನ್ನಲೆ, ಗತಕಾಲದ ದುರಂತಗಳು, ಅವುಗಳ ಹಿಂದಿನ ಕಾರಣ, ಗತವೈಭವಗಳ ರಮ್ಯ ನೋಟ, ಅದಕ್ಕೆ ಮಾನವನ ಯಾವೆಲ್ಲ ಉದಾತ್ತ ಚಿಂತನೆಗಳು, ಬದುಕುವ ರೀತಿ-ನೀತಿಗಳು ಕೊಡುಗೆ ನೀಡಿದ್ದವು – ಇವೆಲ್ಲವುಗಳ ಅಧ್ಯಯನ, ಅಧ್ಯಾಪನ, ಚಿಂತನ, ವಿಮರ್ಶೆ, ಮರು ಮೆಲುಕುಗಳು ಆಗುತ್ತಲೇ ಇರಬೇಕಾಗುತ್ತದೆ. ಆಗಷ್ಟೇ ಕಳೆದು ಹೋದ ವೈಭವಗಳನ್ನು ಮತ್ತೆ ಸ್ಥಾಪಿಸುವ ಕನಸಿನ ಬೀಜವನ್ನು ಯಾರಾದರೂ ಬಿತ್ತಬಹುದು, ನಡೆದು ಹೋದ ಘೋರ ದುರಂತಗಳ ಎಚ್ಚರಿಕೆಯನ್ನು ನೀಡುತ್ತಾ ಸಾಗಿ, ಮತ್ತೆ ಅಂತಹ ಇತಿಹಾಸ ಮರುಕಳಿಸದಂತೇ ತುಸುವಾದರೂ ತಡೆಯಬಹುದು. ಈ ನಿಟ್ಟಿನಲ್ಲಿ ಲೇಖಕ, ಸಂಶೋಧಕ, ನವೀನ ಗಂಗೋತ್ರಿ ಅವರ “ಕಥಾಗತ” ಪುಸ್ತಕವನ್ನು ಕೇವಲ ಸಾಹಿತ್ಯಾಸಕ್ತರು ಮಾತ್ರವಲ್ಲ, ಇತಿಹಾಸದ ಕುರಿತು ಆಸಕ್ತಿ ಉಳ್ಳವರೂ ಓದಬೇಕು.
ಈ ಪುಸ್ತಕದ ಕಥಾನಕವೊಂದರಲ್ಲಿ ಬರುವ ಸಾಲೊಂದು ಹೀಗಿದೆ: “ಇತಿಹಾಸದ ಕಥೆಗಳು ನಮಗೆ ಉಪಯೋಗಿಯಾಗುವುದು ಹೇಗೆ? ಹಗೆಗಲ್ಲ, ಅದು ಬಗೆಯನ್ನು ಬೆಳಗಬೇಕು” ಎಂದು. ಇದು ಅಕ್ಷರಶಃ ನಿಜ. ಆಗಿಹೋದ ದುರಂತಗಳು, ದೌರ್ಜನ್ಯಗಳು ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಮಾನವೀಯತೆಯ ಮಹತ್ವವನ್ನು, ವಿಶಾಲ ಮನೋಭಾವದ ಸೌಂದರ್ಯವನ್ನು, ಮಹತ್ವವನ್ನು, ಜೀವನಧರ್ಮವನ್ನು ವರ್ತಮಾನಕ್ಕೆ ಮಾತ್ರವಲ್ಲ ಭವಿಷ್ಯಕ್ಕೂ ಒಂದು ಪಾಠವನ್ನು ಕೊಡುವಂತಿರಬೇಕು. ಇತಿಹಾಸದ ಅಧ್ಯಯನವು ನಮ್ಮ ಅರಿವಿನ ಹೆಚ್ಚಳಿಕೆ ಮತ್ತು ಪಾಠಕ್ಕೆ ಮಾಪನವಾಗಬೇಕೇ ಹೊರತು ನಾವಿಲ್ಲದಿದ್ದ ಕಾಲಘಟ್ಟದಲ್ಲಿ ಯಾರೋ ದಾಖಲಿಸಿರುವ ವಿಷಯಗಳಿಂದ ಉದ್ರಿಕ್ತರಾಗಿ, ಭಾವೋದ್ವೇಗವನ್ನು ಹೊಂದಿ ಶೋಕ ಸಾಗರದಲ್ಲಿ ಮುಳುಗಿಯೋ, ದ್ವೇಷದ ಉರಿಯಲ್ಲಿ ಬೆಂದೋ ಅಂಧತ್ವವನ್ನು ಹೊಂದಿದರೆ ಮತ್ತೆ ಅದೇ ಇತಿಹಾಸ ಮರುಕಳಿಸುವ ಸಾಧ್ಯತೆಯೇ ಹೆಚ್ಚು!
ಆಗಿರುವಂಥದ್ದು ಆಗದಂತಿದ್ದರೆ ಸಂಶೋಧನೆಗೆ ಮಹತ್ವ. ‘ಗತಂ ನ ಶೋಚಯೇತ್ ಪ್ರಾಜ್ಞಃ’ (ಪ್ರಾಜ್ಞನಾದವನು ಗತಿಸಿ ಹೋಗಿದ್ದರ ಬಗ್ಗೆ ದುಃಖಿಸುವುದಿಲ್ಲ) ಎಂದು ಸುಭಾಷಿತವೊಂದು ಹೇಳಿದೆ. ಈ ಒಂದು ಅರಿವಿನ ದೀವಿಗೆಯಡಿಯಲ್ಲಿಯೇ ಓರ್ವ ಇತಿಹಾಸದ ವಿದ್ಯಾರ್ಥಿಯ ಅಧ್ಯಯನ ಸಾಗಿದರೆ ಭವಿಷ್ಯತ್ತಿಗೆ ಆತ ಕೊಡಬಲ್ಲ ಕೊಡುಗೆ ಅಪಾರ. ಇದರರ್ಥ ಆಗಿ ಹೋಗಿದ್ದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿಯೋ, ಮುಚ್ಚಿಟ್ಟೋ… ಆಗದೇ ಇದ್ದಂಥದ್ದನ್ನು ವಿಜೃಂಭಿಸಿ ಹೇಳುವುದೋ- ಎರಡೂ ಅಷ್ಟೇ ಅಪಾಯಕಾರಿ ಹಾಗೂ ಅಪರಾಧವೂ ಹೌದು! ಈ ಒಂದು ಹಿನ್ನಲೆಯಲ್ಲಿ ವಾಸ್ತವಿಕತೆಯ ಚಿತ್ರಣವಿತ್ತ ಇತಿಹಾಸಕಾರರ ಗ್ರಂಥಗಳನ್ನೆಲ್ಲ ಅಭ್ಯಸಿಸಿ, ಅಲ್ಲಿದ್ದದ್ದನ್ನೇ ನಮ್ಮ ಮುಂದೆ ಆಕರ್ಷಕ ಕಥಾನಕ ಶೈಲಿಯಲ್ಲಿ ಹರವಿಡುವ ಒಂದು ಮಹತ್ತರ ಹೆಜ್ಜೆಯನ್ನು ‘ಕಥಾಗತ’ ಪುಸ್ತಕವು ಮಾಡಿದೆ ಎನ್ನಬಹುದು.
ಕಥಾಗತ : ಇದೊಂದು ಸಾಮಾಜಿಕ ಅಥವಾ ಕಾಲ್ಪನಿಗೆ ಕಥೆಗಳ ಗುಚ್ಛವಲ್ಲ. ಸಾಕ್ಷ್ಯಚಿತ್ರಗಳು ಯಾವ ರೀತಿ ಹಿನ್ನಲೆಯ ನೋಟವನ್ನು ಕಟ್ಟಿಕೊಡುತ್ತವೋ ಅದೇ ರೀತಿ ಇಲ್ಲಿರುವವೆಲ್ಲ ಸಾಕ್ಷ್ಯಕಥನಗಳು ಎನ್ನಬಹುದು. ಒಟ್ಟೂ 8 ನೀಳ್ಗತೆಗಳನ್ನೊಳಗೊಂಡಿರುವ ಈ ಪುಸ್ತಕವು ನಮ್ಮ ನಾಡಿನ ಪ್ರಸಿದ್ಧ ರಾಜ ಮನೆತನಗಳ ಆಳ್ವಿಕೆಯ ಕುರಿತು ಮಾತ್ರವಲ್ಲ, ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಆಳ್ವಿಕೆಯ ಚಿತ್ರಣ, ಆ ಕಾಲದ ಜನಜೀವನ, ಸಾಹಿತ್ಯಿಕ, ಶಿಲ್ಪ ಕಲೆ, ರಾಜಕೀಯ ಒಳನೋಟಗಳು, ಪೋರ್ಚುಗೀಸರ, ಬ್ರಿಟೀಶರ, ಮೊಘಲರ ದಾಳಿಗಳಿಂದ ನಲುಗಿದ ಮಾನವೀಯತೆ, ಜೀವಸಂಕುಲ, ಇದರ ಪರಿಣಾಮ ಹೇಗೆ ವರ್ತಮಾನವನ್ನೂ ಪ್ರಭಾವಿಸುತ್ತಿದೆ… ವಿಜಯನಗರ, ಕದಂಬ ಸಾಮ್ರಾಜ್ಯ, ಪಲ್ಲವರು, ಚೋಳರು, ಹರ್ಷವರ್ಧನ, ಆದಿಲ್ ಶಾಹ್… ಹೀಗೆ ಎಲ್ಲ ಪ್ರಮುಖ ರಾಜಾಳ್ವಿಕೆಯ ಕಿರುನೋಟವನ್ನು ಸಶಕ್ತವಾಗಿ ನೀಡುತ್ತಾ ಸಾಗುತ್ತದೆ.
ನಮ್ಮ ಹಿನ್ನಲೆ, ಗತಕಾಲದ ದುರಂತಗಳು, ಅವುಗಳ ಹಿಂದಿನ ಕಾರಣ, ಗತವೈಭವಗಳ ರಮ್ಯ ನೋಟ, ಅದಕ್ಕೆ ಮಾನವನ ಯಾವೆಲ್ಲ ಉದಾತ್ತ ಚಿಂತನೆಗಳು, ಬದುಕುವ ರೀತಿ-ನೀತಿಗಳು ಕೊಡುಗೆ ನೀಡಿದ್ದವು – ಇವೆಲ್ಲವುಗಳ ಅಧ್ಯಯನ, ಅಧ್ಯಾಪನ, ಚಿಂತನ, ವಿಮರ್ಶೆ, ಮರು ಮೆಲುಕುಗಳು ಆಗುತ್ತಲೇ ಇರಬೇಕಾಗುತ್ತದೆ. ಆಗಷ್ಟೇ ಕಳೆದು ಹೋದ ವೈಭವಗಳನ್ನು ಮತ್ತೆ ಸ್ಥಾಪಿಸುವ ಕನಸಿನ ಬೀಜವನ್ನು ಯಾರಾದರೂ ಬಿತ್ತಬಹುದು, ನಡೆದು ಹೋದ ಘೋರ ದುರಂತಗಳ ಎಚ್ಚರಿಕೆಯನ್ನು ನೀಡುತ್ತಾ ಸಾಗಿ, ಮತ್ತೆ ಅಂತಹ ಇತಿಹಾಸ ಮರುಕಳಿಸದಂತೇ ತುಸುವಾದರೂ ತಡೆಯಬಹುದು.
ಹಂಪೆಯ ವಿರೂಪಾಕ್ಷ ದೇವಾಲಯ ನಿರ್ಮಾಣಗೊಂಡ ಹಿನ್ನಲೆ, ವಿಜಯನಗರ ಸಾಮ್ರಾಜ್ಯದ ವೈಭೋಗ, ಪತನ… ಹಾಗೆಯೇ, ಬೇಲೂರಿನ ಚೆನ್ನಕೇಶವ ದೇವಸ್ಥಾನವನ್ನು ನಿರ್ಮಿಸಿದ ಸಂದರ್ಭ, ಆ ಕಾಲದ ಪ್ರಸಿದ್ಧ ಶಿಲ್ಪಿಗಳ ಕಿರುಪರಿಚಯ, ಯಾವ ರೀತಿ ಅಂದಿನ ಪ್ರಸಿದ್ಧ ಶಿಲ್ಪಿಗಳು ಅಪರೂಪದ ಕೆತ್ತನೆಗೆ ಚಾಲನೆ ನೀಡಿದರು, ನಿರ್ವಹಿಸಿದರು… ಓರ್ವ ರಾಜತ್ವದ ಜೊತೆಗೆ ಸತ್ವಗುಣ ಸಮೀಕರಣಗೊಂಡಾಗ ಅದು ಹೇಗೆ ಪ್ರಜಾರಂಜಕ ಆಳ್ವಿಕೆಯಾಗುತ್ತದೆ ಮತ್ತು ಅದೇ ರಾಜನು ತಮೋಗುಣವನ್ನು ವಿಜೃಂಭಿಸಿಕೊಂಡರೆ ಯಾವೆಲ್ಲ ರೀತಿಯಲ್ಲಿ ಪ್ರಜಾಭಜಂಕ ಆಗಬಲ್ಲ… ರಾಣಿ ಶಾಂತಲೆಯ ಅಪರೂಪದ ಪರಿಕಲ್ಪನೆಯಲ್ಲಿ ಯಾವ ರೀತಿ ಸಿಂಗಾರ ಕನ್ನಿಕೆಯರು ಬೇಲೂರಿನ ದೇವಳದ ಗೋಡೆಯ ಕೆತ್ತನೆಯನ್ನೇರಿ ಜಗತ್ಪ್ರಸಿದ್ಧರಾದರು…. ಪಲ್ಲವರ ಕಾಲದಲ್ಲಿ ಮಹಾಬಲಿಪುರದಲ್ಲಿ ಅರಳಲ್ಪಟ್ಟ ಶಿಲಾಪಲ್ಲವಗಳು, ಆ ವಾಸ್ತುಶಿಲ್ಪದೊಳಗಿರುವ ಅಮೂರ್ತ/ಅಪೂರ್ಣ ಕೆತ್ತನೆಗಳಿಗೆ ಕಾರಣಗಳೇನು – ಹೀಗೆ ಇವೆಲ್ಲ ಮತ್ತು ಇನ್ನೂ ಹಲವು ವಿಷಯಗಳು, ಐತಿಹಾಸಿಕ ಸಂಗತಿಗಳೆಲ್ಲ ಹದವಾದ ಕಥಾನಕದ ಪಾಕದಲ್ಲಿ (ಅಂದರೆ, ಅತ್ತ ಪೂರ್ತಿ ಕಥನ ಶೈಲಿಯ ಜಾಡು ಹಿಡಿಯದೇ ಇತ್ತ ಒಣ ವಿಶ್ಲೇಷಣೆಯ ಪ್ರಬಂಧವಾಗದೇ) ಗತದ ಕಥೆ ಹೇಳುವ ಸಾಕ್ಷ್ಯಗಳಾಗಿವೆ.
‘ಚಿನ್ನದ ಅಂಚಿನ ರೇಶಿಮೆ ದಾರಿ’, ‘ಮಾಗಧಿಯ ಕಂಗಳಲ್ಲಿ’ – ಈ ಕಥೆಗಳು ಆ ಕಾಲದ ಭಾರತೀಯ ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ವ್ಯಾಪಾರ, ಶೈಕ್ಷಣಿಕ ನಿಲುವು – ಇವೆಲ್ಲವುದರ ಹಿರಿಮೆಯನ್ನು, ಸಾಧನೆಯನ್ನು, ಜಗತ್ತಿಗೆ ಭಾರತೀಯರು ನೀಡಿದ ಮಹತ್ತರ ಕೊಡುಗೆಗಳನ್ನು ಸಾರುವ ಕಥೆಗಳು. ಗಣಿತಶಾಸ್ತ್ರಕ್ಕೆ ಬಹುಮುಖ್ಯ ಕೊಡುಗೆ ನೀಡಿದ ಆರ್ಯಭಟ, ಶೀಲಭದ್ರಾಚಾರ್ಯರಂತಹ ಅಪರೂಪದ ಅಧ್ಯಾಪಕರನ್ನು ಹೊಂದಿದ್ದ ನಲಂದಾ ವಿಶ್ವವಿದ್ಯಾಲಯ ಯಾವ ರೀತಿ ಪಾಲಿ, ಸಂಸ್ಕೃತ, ಜೈನ ಮುಂತಾದ ಸಾಹಿತ್ಯ ಗ್ರಂಥಗಳ ಸಾಗರವಾಗಿತ್ತು, ಅದರ ಗತವೈಭವ ಹೇಗೆಲ್ಲ ಇದ್ದಿತ್ತು, ಅಲ್ಲಿ ಯಾವೆಲ್ಲ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು ಮತ್ತು ಜಗತ್ತಿನ ವ್ಯಾಪಾರಕ್ಕೆ ಇವು ಕೊಟ್ಟ ಅಮೂಲ್ಯ ಕೊಡುಗೆಗಳೇನು ಎನ್ನುವುದನ್ನು ಈ ಎರಡು ಕಥೆಗಳು ಮನಮುಟ್ಟುವಂತೆ ನಿರೂಪಿಸುತ್ತವೆ.
“ಅಭಿಪ್ರಾಯಭೇದಗಳೆಲ್ಲ ಕೊಲೆಯಲ್ಲಿಯೇ ಉತ್ತರ ಕಂಡುಕೊಳ್ಳುವುದಾದರೆ ನಾಗರಿಕತೆಗೇನು ಬೆಲೆ?” ಎಂದು ಪ್ರಶ್ನಿಸುವ ಮೂಲಕ ಲೇಖಕರು ಓದುಗರಲ್ಲೊಂದು ಜವಾಬ್ದಾರಿಯನ್ನು, ನಾಗರೀಕ ಪ್ರಜ್ಞೆಯನ್ನು ಉದ್ದೀಪನಗೊಳಿಸುತ್ತಾರೆ.
ಇತಿಹಾಸವನ್ನು ತಿಳಿಯಬೇಕು ಯಾವ ಸಿದ್ಧಾಂತ ತನಗೆ ಒಳಿತು ಎನ್ನುವುದನ್ನು ಮನಗಾಣಲು. “ತಾನುಳಿಯಬೇಕು”, “Survival of the fittest” ಎನ್ನುವುದೇ ಪ್ರಕೃತಿಯ ಮೂಲ ಸಿದ್ಧಾಂತ ನಿಜ. ಇದರ ಸುತ್ತ ಮಾನವ `ತಾನು ಉಳಿಯ ಬೇಕು, ತನ್ನ ಜೊತೆ ಉಳಿದವರೂ ಉಳಿದು ಬಾಳಬೇಕು’, `ತಾನು ಮಾತ್ರ ಉಳಿಯಬೇಕು, ಬಾಕಿದ್ದೆಲ್ಲ ಅಳಿಯಬೇಕು’, `ತಾನುಳಿಯಬೇಕು, ಇದಕ್ಕಾಗಿ ಬಾಕಿದೆಲ್ಲ ತನ್ನ ಅಡಿಯಾಳಾಗಬೇಕು’ ಎನ್ನುವ ವಿವಿಧ ಸೈದ್ಧಾಂತಿರ ಸ್ವರೂಪ ಹುಟ್ಟಿಸಿಕೊಂಡ ಎನ್ನುವುದನ್ನೇ ಹಲವು ವಿಧದದಲ್ಲಿ ನಮಗೆ ಕಾಣಿಸಲು ಹೊರಡುತ್ತಾರೆ ನವೀನ್ ಗಂಗೋತ್ರಿ. ಯಾವುದು ಮನುಕುಲಕ್ಕೆ ಹಿತ ಈ ಮೂರರಲ್ಲಿ ಎನ್ನುವುದು ಪ್ರಾಜ್ಞ ಇತಿಹಾಸಕಾರ, ಅಧ್ಯಯನಕಾರ, ಓದುಗ ಮಾತ್ರ ಅರಿಯಬಹುದು.
ಚೀನಾದ ಅನೇಕ ಯಾತ್ರಿಗಳು, ಬೌದ್ಧ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬುದ್ಧದ ತವರಾದ ಭಾರತಕ್ಕೆ ಬಂದು, ಇಲ್ಲಿಯ ಸಾಂಸ್ಕೃತಿಕ ಜೀವನದೊಳು ಬೆರೆತು, ಪಾಲಿ, ಸಂಸ್ಕೃತ, ಹಿಂದಿ ಎಲ್ಲವನ್ನೂ ಕಲಿತು ಆ ಕಾಲದ ಭಾರತವನ್ನು ತಮ್ಮ ಅನುಭವದಲ್ಲಿ ನೇಯ್ದು ಭವಿಷ್ಯತ್ತಿಗೆ ನೀಡಿದ ‘ಹು ಎನ್ ತ್ಸಾಂಗ್’ ಅಂತಹ ಚೀನಾ ಯಾತ್ರಿಕರ ಕುರಿತು ಸಮಗ್ರ ಚಿತ್ರಣ ದೊರಕುತ್ತದೆ. ಅಲ್ಲದೇ, ಚೀನಾಕ್ಕೂ ನಮಗೂ ಈ ಹಿಂದೆ ಎಂತಹ ನಂಟಿತ್ತು, ಅಲ್ಲಿಯ ಪ್ರಜೆಗಳು ಪ್ರಭುತ್ವದ ದಬ್ಬಾಳಿಕೆಯನ್ನು ಮೀರಿ ಯಾವರೀತಿಯ ಸೌಹಾರ್ದ ಬಂಧವನ್ನು ಬೆಸೆದಿದ್ದರು ಮತ್ತು ಇದಕ್ಕೆ ಬೌದ್ಧ ತತ್ವದ ಪ್ರಭಾವದ ಕೊಡುಗೆ ಏನು ಎಂಬುದನ್ನು ನಾವು ಮನಗಾಣುತ್ತೇವೆ.
“ಒಬ್ಬ ಸಂಶೋಧಕನಿಗೆ ಅಭಿಪ್ರಾಯಕ್ಕಿಂತ ಫ್ಯಾಕ್ಟ್‌ಗಳು ಮುಖ್ಯವಾಗಬೇಕು. ಅಭಿಮಾನಕ್ಕಿಂತ ವಾಸ್ತವ ಮುಖ್ಯವಾಗಬೇಕು. ಐಡಿಯಾಲಜಿಕಲ್ ಓರಿಯಂಟೇಶನ್ನುಗಳಿಗೆ ಬದಲಾಗಿ ಸತ್ಯವನ್ನು ಕಾಣುವ ಸಂತುಲಿತ ದೃಷ್ಟಿಯಿರಬೇಕು. ಅದಿಲ್ಲವಾದರೆ ನೀವು ರಾಜಕಾರಣಿಯೋ, ರಾಜಕೀಯ ನಾಯಕರ ಬಾಲವೋ, ಅಥವಾ ಧ್ರುವೀಕರಣ ಹೋರಾಟದ ಮುನ್ನೆಲೆಯ ನಾಯಕನೋ ಆಗಬಹುದಾಗಿದೆ – ಸಂಶೋಧನೆಗೆ ಅನರ್ಹರಾಗುತ್ತೀರಷ್ಟೇ.” ಎಂದು ಕಥೆಯೊಂದರ ಪಾತ್ರವಾದ ಪ್ರೊ. ತಮಿಳರಸನ್ ಮಾತುಗಳು ಸದಾ ಸ್ಮರಣೀಯ.
ಲೇಖಕರು ಪ್ರತಿ ಕಥೆಯ ಕೊನೆಗೆ ತಾವು ಮಾಹಿತಿಗಳನ್ನು ಸಂಗ್ರಹಿಸಿದ ಆಕರಗಳನ್ನು ನಮೂದಿಸಿದ್ದು, ಅವರ ಅಪಾರ ಸಂಶೋಧನೆಯ, ಸಮಗ್ರ ಅಧಯನದ ಫಲ ಈ ಎಂಟು ಕಥೆಗಳು ಎಂಬುದಕ್ಕೆ ಇವು ಸಾಕ್ಷಿಗಳಾಗಿವೆ. ಈ ಅಧ್ಯಯನದ ಪ್ರೌಢಿಮೆಯು ಕಥಾಗತದುದ್ದಕ್ಕೂ ಎದ್ದು ಕಾಣುತ್ತಾ ಸಾಗಿದೆ, ನಿರೂಪಣೆಯೊಳಗಿನ ಸಂಯಮ, ಭಾಷಾ ಪಾಂಡಿತ್ಯ ನಮ್ಮ ದೇಶದ ಈ ಐತಿಹಾಸಿಕ ಕಥೆಗಳಿಗೆ ಕಲಶವನ್ನಿಟ್ಟಿದೆ.
(ಕೃತಿ: ಕಥಾಗತ (ಕಥಾಸಂಕಲನ), ಲೇಖಕರು: ನವೀನ ಗಂಗೋತ್ರಿ, ಪ್ರಕಾಶಕರು: ಸ್ವಸ್ತಿ ಪ್ರಕಾಶನ, ಬೆಲೆ: 160/-)
ತೇಜಸ್ವಿನಿ ಹೆಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿ. ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು. ಚಿಗುರು (ಕವಿತೆಗಳು), ಜೋತಯ್ಯನ ಬಿದಿರು ಬುಟ್ಟಿ (ಕಥಾಸಂಕಲನ), ಸಂಹಿತಾ (ಕವಿತೆಗಳು), ಹಂಸಯಾನ (ಕಾದಂಬರಿ) ಇವರ ಪ್ರಕಟಿತ ಕೃತಿಗಳು