Advertisement
ಅಕ್ಕಮಹಾದೇವಿ ಮತ್ತು ಗೂಗಲ್ ಗುರು: ಎಲ್.ಜಿ.ಮೀರಾ ಅಂಕಣ

ಅಕ್ಕಮಹಾದೇವಿ ಮತ್ತು ಗೂಗಲ್ ಗುರು: ಎಲ್.ಜಿ.ಮೀರಾ ಅಂಕಣ

ಬದಲಾವಣೆಗಳಾಗುತ್ತಿರುವುದು ಕೇವಲ ಹೆಂಗಸರ ಬದುಕಿನಲ್ಲಲ್ಲ. ಕಳೆದ ಮೂವತ್ತು – ಮೂವತ್ತೈದು ವರ್ಷಗಳಲ್ಲಿ ಬದುಕಿನ ಎಲ್ಲ ಆಯಾಮಗಳಲ್ಲೂ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿವೆ. ನಮ್ಮ ಕುಟುಂಬ ವ್ಯವಸ್ಥೆ ಸಹ ಈ ಬದಲಾವಣೆಗಳಿಗೆ ಹೊರತಾಗಿಲ್ಲ. ಹೊಸಹೊಸ ರೀತಿಯ ಆರೋಗ್ಯ ಸಮಸ್ಯೆಗಳು, ಜೀವನಶೈಲಿಯ ಕಾಯಿಲೆಗಳು, ಒಟ್ಟುಕುಟುಂಬಗಳಿರಲಿ, ಬೀಜಕೇಂದ್ರ ಕುಟುಂಬಗಳೇ(ನ್ಯೂಕ್ಲಿಯರ್ ಫ್ಯಾಮಿಲಿ ಎನ್ನುವ ಅರ್ಥದಲ್ಲಿ) ಒಡೆದು ಹೊಸ ರೀತಿಯ ಸಹಜೀವನದ ವ್ಯವಸ್ಥೆಗಳು ಉಗಮವಾಗಿವೆ. ನಮ್ಮ ಯುವತಿಯರು ಯುವಕರು `ಆಯ್ಕೆ ಮಾಡಿಕೊಂಡ ಕುಟುಂಬ’(ಚೋಸನ್ ಫ್ಯಾಮಿಲಿ) ಎಂಬ ಹೊಸ ಪರಿಕಲ್ಪನೆಯನ್ನು ನಮಗೆ ಪರಿಚಯಿಸಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹನ್ನೊಂದನೆಯ ಬರಹ

ಭಾರತದ ದೇಶದ ಯಾವುದೇ ರಾಜ್ಯದಲ್ಲಿ ಐವತ್ತು ವರ್ಷಗಳ ಹಿಂದೆ ಹುಟ್ಟಿ ಬೆಳೆದಂತಹ ನನ್ನ ಪೀಳಿಗೆಯ ಸ್ತ್ರೀಯರಿಗೆ ಹೇಗೆ ಈ ದೇಶದ ಪಂಚಭೂತಗಳು ಸಹ ಪಿತೃಪ್ರಧಾನವಾಗಿದ್ದವು ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಅದು ಬದುಕು ಸದಾ ನಮ್ಮ ಮುಖಕ್ಕೆ ಹಿಡಿಯುತ್ತಿದ್ದ ಭಯಾನಕ ಕನ್ನಡಿಯಾಗಿತ್ತು. ಭಾಷೆ (ಕುಶಲೋಪರಿಯ ಮಾತಿನಿಂದ ಹಿಡಿದು ಸಾಹಿತ್ಯ-ತತ್ವಶಾಸ್ತ್ರಗಳ ತನಕದ ಇಡೀ ವಾಜ್ಞಯ), ಹಬ್ಬ ಮುಂತಾದ ಆಚರಣೆ, ಶಾಲಾಪಠ್ಯ, ಬಹುವಾಗಿ ಪ್ರಭಾವಿಸುತ್ತಿದ್ದ ಸಿನಿಮಾ ಮಾಧ್ಯಮ, ಭಾವಗೀತೆಗಳು ಎಲ್ಲದರಲ್ಲೂ ಪುರುಷಪ್ರಧಾನತೆಯು ತಾಂಡವವಾಡುತ್ತಿದ್ದ ಕಾಲ ಅದು. “ಜಾಣೆಯಾಗಿರು ನನ್ನ ಮಲ್ಲಿಗೆ ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ”, “ದೇವರಿಲ್ಲದ ಗುಡಿಗೆ ಪೂಜೆ ಉಂಟೇನು, ಹೂಬಿಡದ ಗಿಡಕೆ ನೀರೆರೆವರೇನು, ಹಾಲಿಲ್ಲದ ಹಸುವ ಪೋಷಿಪರೇನು, ತಾಯಾಗದವಳನ್ನು ಹೆಣ್ಣೆಂಬರೇನು?”, “ಮಕ್ಕಳಿಲ್ಲದ ಮೇಲೆ ಬದುಕು ಇನ್ನೇಕೆ” .. ಇಂತಹ ಹಾಡುಗಳೇ ಕಿವಿಯ ಮೇಲೆ ಸದಾ ಬೀಳುತ್ತಿದ್ದ ದಿನಗಳವು. “ಹೆಣ್ಣು ಎಂದರೆ ಹೀಗಿರಬೇಕು, ಹಣೆಯಲಿ ಕುಂಕುಮ ನಗುತಿರಬೇಕು” ಎಂಬ ಮಾರ್ಗದರ್ಶಿ ಸೂತ್ರಗಳು, “ನಾನೇನು ಬಳೆ ತೊಟ್ಕೊಂಡಿಲ್ಲ” ಎಂಬ ವೀರಾವೇಶದ ಮಾತುಗಳು, `ಎರಡು ಜಡೆ ಒಟ್ಟಿಗೆ ಸೇರಲ್ಲ’, `ಪತಿಯೇ ಪರದೈವ’, `ಹೆಣ್ಣಿನ ಜನ್ಮ ಪಾಪಿ ಜನ್ಮ’ ಎಂಬ ಮಾತುಗಳು ನಮ್ಮ ಪೀಳಿಗೆಯ ಹೆಣ್ಣುಗಳ ಒಡನಾಡಿಗಳಾಗಿದ್ದವು. ಇಂತಹ ಮನಃಸ್ಥಿತಿಯನ್ನು ಅಂಗೀಕರಿಸಿಕೊಂಡ ಹೆಣ್ಣುಮಕ್ಕಳು ಸ್ವತಂತ್ರ ಚಿಂತನೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಏಕೆಂದರೆ ಸ್ತ್ರೀಬಂಧನಕ್ಕೆ ಇದ್ದ ಪರಂಪರೆ ಬಹು ದೀರ್ಘ ಕಾಲದ್ದಲ್ಲವೆ?

ಶತಶತಮಾನಗಳ ಕಾಲ ಪ್ರಪಂಚದ ಅರ್ಧಭಾಗದಷ್ಟು ಜನಸಂಖ್ಯೆಯನ್ನು ಅರ್ಥಾತ್ ಸ್ತ್ರೀಯರನ್ನು ಲಿಂಗಭೇದ ಎಂಬ ಕೌಟುಂಬಿಕ, ಸಾಮಾಜಿಕ ಅಭ್ಯಾಸವು ಮನೆಯ ನಾಲ್ಕು ಗೋಡೆಗಳಲ್ಲಿ ಬಂಧಿಸಿಟ್ಟಿತ್ತು ಎಂಬುದು ಮನುಕುಲದ ಚರಿತ್ರೆಯಲ್ಲಿನ ಒಂದು ಕಹಿಸತ್ಯ. ಸ್ತ್ರೀಯರು ಯುದ್ಧೋತ್ಸಾಹಿ ಪುರುಷ ಸಂಸ್ಕೃತಿಯಲ್ಲಿ ಭೋಗವಸ್ತುಗಳಾಗಿದ್ದರು. ಪುರುಷರು ಯುದ್ಧದಲ್ಲಿ, ಜೂಜಿನಲ್ಲಿ ಗೆದ್ದಾಗ ಸೋತಾಗ ಇಟ್ಟಂತಹ ಪಣಗಳಾಗಿ ದಾನವಸ್ತುಗಳಾಗಿ ಅವರು `ಬಳಕೆ’ಯಾಗುತ್ತಿದ್ದುದನ್ನು ಇತಿಹಾಸದ ಪುಟಪುಟಗಳು ಬಿಚ್ಚಿಟ್ಟಿವೆ. ಹೆಣ್ಣನ್ನು ತಾಯಿ, ಪತ್ನಿ, ಸವತಿ, ಗಣಿಕೆ, ದಾಸಿ ಮುಂತಾದ ಅಧೀನ ಪಾತ್ರಗಳಲ್ಲಿಯೇ ಗುರುತಿಸಿಕೊಳ್ಳುತ್ತಿದ್ದುದು ದೀರ್ಘಕಾಲದ ರೂಢಿಯೇ ಆಗಿಬಿಟ್ಟಿತ್ತಲ್ಲವೇ? `ತಮ್ಮ ಸ್ಥಿತಿ ಹೀಗಿದೆ, ಆದರೆ ಬೇರೆ ರೀತಿಯೂ ಇರಬಹುದಿತ್ತು’ ಎಂಬುದು ಮಹಿಳೆಯರಿಗೆ ಗೊತ್ತಾದರೂ ಅದಕ್ಕಾಗಿ ಏನನ್ನಾದರೂ ಮಾಡುವ ಅವಕಾಶ, ಸ್ವಾತಂತ್ರ್ಯಗಳು ಗಂಡಾಳಿಕೆಯ ಸಮಾಜಗಳಲ್ಲಿ ಎಲ್ಲಿತ್ತು? ಭಾರತ ಉಪಖಂಡವೂ ಈ ಸನ್ನಿವೇಶಕ್ಕೆ ಹೊರತಲ್ಲ. ಇದಕ್ಕೆ ಇದ್ದ ಏಕೈಕ ಅಪವಾದವೆಂದರೆ ಮಧ್ಯಕಾಲದ ಭಕ್ತಿ ಚಳುವಳಿಗಳಲ್ಲಿನ ಆಧ್ಯಾತ್ಮಿಕ ಸಾಧಕಿಯರು. ಸ್ತ್ರೀಬಂಧನದ ಕಾಳರಾತ್ರಿಯ ಅಂಧಕಾರದಲ್ಲಿ ಒಬ್ಬ ಅಕ್ಕಮಹಾದೇವಿ, ಒಬ್ಬ ಮೀರಾಬಾಯಿ, ಒಬ್ಬ ಆಂಡಾಳ್, ಒಬ್ಬ ಲಲ್ಲೇಶ್ವರಿ – ಇಂಥವರು ನಮಗೆ ಸ್ವತಂತ್ರ ಚಿಂತನೆಯ ಬೆಳಕುಳ್ಳ ನಕ್ಷತ್ರಗಳಾಗಿ ಕಾಣಿಸುತ್ತಾರೆ. `ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’, `ಗೃಹಿಣಿ ಗೃಹಮುಚ್ಯತೆ’ ಎಂಬ ಸ್ತ್ರೀವಿರೋಧಿ ಚಿಂತನೆಯ ಪರಂಪರೆಯಲ್ಲಿ ಅಕ್ಕಮಹಾದೇವಿಯು `ನಾನಿದ್ದು ಫಲವೇನು ಜ್ಞಾನವಿಲ್ಲದನ್ನಕ್ಕ’ ಎಂದು ಹಾಡಿದ್ದು ಸಣ್ಣ ವಿಷಯವಲ್ಲ.

****

ಮೇಲಿನ ಮಾತನ್ನು ತುಸು ವಿವರಿಸಿಕೊಳ್ಳೋಣ. ಅಕ್ಕಮಹಾದೇವಿಯ ಒಂದು ಪ್ರಸಿದ್ಧ ವಚನವು ನನ್ನನ್ನು ಈ ದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿತು. ಆ ವಚನದ ಸಾಹಿತ್ಯ ಹೀಗಿದೆ – “ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ, ಧನವಿದ್ದು ಫಲವೇನು ದಯೆಯಿಲ್ಲದನ್ನಕ್ಕ, ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ, ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ, ನಾನಿದ್ದು ಫಲವೇನು ಜ್ಞಾನವಿಲ್ಲದನ್ನಕ್ಕ….. ಚನ್ನಮಲ್ಲಿಕಾರ್ಜುನಾ”. ನನಗೆ ಇದರಲ್ಲಿ ತುಂಬ ಸಂತೋಷ ಕೊಟ್ಟ ಸಾಲು ಅಂದರೆ `ನಾನಿದ್ದು ಫಲವೇನು ಜ್ಞಾನವಿಲ್ಲದನ್ನಕ್ಕ’ ಎಂಬ ಸಾಲು. ಇಲ್ಲಿ ಹೆಣ್ಣನ್ನು ಗಂಡಾಳಿಕೆಯ ನೋಟಕ್ರಮದ ಆಚೆ ಇಡಲಾಗಿದೆ. ಅವಳನ್ನು ತಾಯಿ, ಹೆಂಡತಿ, ಸೊಸೆ, ಅತ್ತಿಗೆ, ಪ್ರೇಮಿಕೆ ಎಂಬ ಪುರುಷಾವಲಂಬಿ ಪಾತ್ರಗಳಿಗಿಂತ ಭಿನ್ನವಾಗಿ `ಜ್ಞಾನವಿರಬೇಕಾದ ವ್ಯಕ್ತಿʼ ಎಂದು ನೋಡಲಾಗಿದೆ. 850 ವರ್ಷಗಳ ಮುಂಚೆಯೇ ಬಸವಣ್ಣ, ಅಲ್ಲಮ ಪ್ರಭು, ಸಿದ್ಧರಾಮ ಮುಂತಾದ ವಚನಕಾರರ ಜೊತೆಯಲ್ಲಿ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದ್ದವಳು ಅಕ್ಕ. ಸ್ತ್ರೀಶಕ್ತಿ, ಸಾಮರ್ಥ್ಯ, ದಿಟ್ಟತೆ, ಸ್ವತಂತ್ರಚಿಂತನೆಗಳ ಆದ್ಯಪ್ರತೀಕ ಅವಳು. ಯಾವ ಕಾಲಕ್ಕೂ ಬೆರಗು ಹುಟ್ಟಿಸುವ ವ್ಯಕ್ತಿತ್ವ ಅವಳದ್ದು.

ಅಕ್ಕಮಹಾದೇವಿಯು ನಮ್ಮ ಸಾಹಿತ್ಯ-ಸಂಸ್ಕೃತಿಗಳ ಪರಂಪರೆಯಲ್ಲಿ ಮರುಕಥನಕ್ಕೊಳಗಾಗಿರುವ ಕ್ರಮವು ಗುಣಗಾತ್ರಗಳಲ್ಲಿ ಗಮನೀಯವಾದದ್ದು ಹಾಗೂ ನಾವು ಒಂದು ಸಮುದಾಯವಾಗಿ ಜೀವನವನ್ನು ನಡೆಸುತ್ತಿರುವ ರೀತಿರೂಪಗಳಿಗೆ ದಿಕ್ಸೂಚಿಯೂ ಹೌದು. ಅದೆಷ್ಟು ಕವಿತೆ, ಲೇಖನ, ಕಥೆ, ಪ್ರಬಂಧ, ನಾಟಕ ಮತ್ತು ಕಾದಂಬರಿಗಳು ಅಕ್ಕನ ಬಗ್ಗೆ ರಚಿತವಾಗಿವೆ ಅಂದರೆ ಅದರ ಬಗ್ಗೆ ಅಧ್ಯಯನ ಮಾಡುವುದೇ ಒಂದು ಮಹಾಪ್ರಬಂಧದ ವಾಜ್ಞಯ ಸಾಮಗ್ರಿಯಾಗಿಬಿಡುತ್ತದೆ. ಅಕ್ಕನನ್ನು ಮೆಚ್ಚಿ ಅವಳ ಸ್ವತಂತ್ರ ಚಿಂತನೆ, ಧೈರ್ಯಗಳ ಬಗ್ಗೆ ಬೆರಗಾಗಿ ಬರೆಯದ ಕನ್ನಡ ಕವಿಯತ್ರಿಯೇ ಇಲ್ಲ ಅಂದರೆ ಉತ್ಪ್ರೇಕ್ಷೆಯಲ್ಲ. ಅಕ್ಕನಷ್ಟು ದಿಟ್ಟತೆ ಇಂದಿನ ಹೆಣ್ಣುಗಳಿಗೆ ಸಾಧ್ಯವೇ ಎಂದು ಅನುಮಾನಿಸುತ್ತಾ, `ನಿನ್ನ ನೆನಪಿನಲ್ಲಿ ನನ್ನ ಅಂಗಳದಲ್ಲಿ ಒಂದೆರಡು ಕದಳಿ ಬೆಳೆದುಕೊಳ್ಳುವ ತಂಗಿ ನಾನು’ ಎಂಬ ಭಾವವುಳ್ಳ ಕವಿತೆ ಬರೆದ ವೈದೇಹಿಯವರು ನೆನಪಾಗುತ್ತಾರೆ. ಅಕ್ಕಮಹಾದೇವಿ ಇಂದು ಅಂದಿನಂತೆ ಕಾಡಿನಲ್ಲಿ ಒಬ್ಬೊಬ್ಬಳೇ ಓಡಾಡಿದ್ದರೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಅನಾಥ ಹೆಣವಾಗಿಬಿಡುತ್ತಿದ್ದಳು ಎಂಬ ಭಯಾನಕ ಚಿತ್ರಣವುಳ್ಳ ಒಂದು ಕಥೆ ನೆನಪಾಗುತ್ತದೆ, ಮತ್ತು ಇದನ್ನು ಬರೆದವರು ಒಬ್ಬ ಸಮಕಾಲೀನ ಪುರುಷ ಲೇಖಕರು ಎಂಬುದನ್ನು ನಾವು ಗಮನಿಸಬೇಕು.

ಡಾ.ಎಚ್.ಎಸ್.ಅನುಪಮಾ ಅವರು ಅಕ್ಕಮಹಾದೇವಿ ಬದುಕಿ ಬಾಳಿ ಓಡಾಡಿದ್ದ ಸ್ಥಳಗಳ ಕಡೆಗೆ ಮರುನೋಟ ಬೀರುತ್ತ ಅವಳ ಇಡೀ ಬದುಕನ್ನು ಚಾರಿತ್ರಿಕ ವಾಸ್ತವವಾಗಿ ಮರುಚಿತ್ರಿಸಿದ ಬೃಹತ್ಕಾದಂಬರಿ ಪ್ರಕಟ ಆಗಿ ಹೆಚ್ಚು ವರ್ಷಗಳಾಗಿಲ್ಲ. ಅಕ್ಕಮಹಾದೇವಿಯು ಕನ್ನಡ ಮನಸ್ಸನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತಾಳೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಅಲ್ಲವೆ.

ಪುರುಷ ಮೌಲ್ಯಗಳ ಅಂತರಂಗೀಕರಣವನ್ನು ಮೀರುವುದು ಅಂದರೆ ಅಕ್ಕನ `ಜ್ಞಾನವನ್ನು’ ನಮ್ಮ ಬದುಕಿನ ಭಾಗವಾಗಿ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಹಣ್ಣಿನ ಮೇಲೆ ಹೊರಿಸಲಾಗುವ ಮೌಲ್ಯಗಳ ಒತ್ತಾಯವು ಎಷ್ಟು ಆಳವಾಗಿ ಬೇರೂರಿರುತ್ತದೆ ಅಂದರೆ ಅವು ತನ್ನೊಳಗೆ ಇವೆ ಎಂಬುದು ಸ್ವತಃ ಹೆಣ್ಣಿಗೆ ಎಷ್ಟೋ ಸಲ ಗೊತ್ತೇ ಆಗಿರುವುದಿಲ್ಲ. `ತನಗೆ ಮದುವೆ ಇಷ್ಟ ಇಲ್ಲ’ ಅನ್ನುವ ಮಗಳಿಗೆ ಹೆತ್ತ ತಾಯಿಯೇ ಶತ್ರುವಾಗುವುದು ಇದಕ್ಕೆ ಒಂದು ಉದಾಹರಣೆ. 

ಅಕ್ಕ ಬಲುದಿಟ್ಟೆ, ಸ್ತ್ರೀವ್ಯಕ್ತಿತ್ವದ ಮಹಾ ಬಿಡುಗಡೆಯ ಮುಂಗೋಳಿ ಎಂಬುದು ಸರಿಯೇ. ಎಂದೆಂದಿಗೂ ಕನ್ನಡನಾಡಿನ ಮಹಿಳೆಯರಿಗೆ ಅನನ್ಯ ಸ್ಫೂರ್ತಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಶರಣ ಚಳವಳಿಯ ಏರುಕಾಲ ಮುಗಿದ ನಂತರ ಕನ್ನಡ ನೆಲದಲ್ಲಿ ಅಕ್ಕನ ದಿಟ್ಟತೆಯ ಪರಂಪರೆಯು ಉಜ್ವಲವಾಗಿ ಮುಂದುವರಿಯಲಿಲ್ಲ ಅನ್ನುವುದು ಸಹ ಸತ್ಯ. ಮತ್ತೆ ಅಕ್ಕನ ದಿಟ್ಟತೆಯನ್ನು ಕಾಣುವುದಕ್ಕೆ ನಾವು ಈ ಶತಮಾನ ಅಂದರೆ ಇಪ್ಪತ್ತೊಂದನೇ ಶತಮಾನದ ತನಕ ಕಾಯಬೇಕಾಯಿತು ಎಂಬುದು ಈ ಲೇಖಕಿಯ ಅಭಿಪ್ರಾಯ. `ಅಣ್ಣಾ ನಾನು ಹೆಂಗೂಸಲ್ಲ’ ಎನ್ನುವ ಧೈರ್ಯ ಅಕ್ಕನ ನಂತರ ನಾವು ನೋಡುತ್ತಿರುವುದು ಈ ಶತಮಾನದಲ್ಲೇ ಅಲ್ಲವೆ.

`ನಾನು ಹೆಂಗೂಸಲ್ಲ’ ಎಂದು ಇಂದಿನ ಹೆಣ್ಣು ಹೇಳುತ್ತಿರುವುದು ಕೇವಲ ಒಂದು ದೃಷ್ಟಿಯಿಂದ ಅಲ್ಲ. ವ್ಯಾಪಾರ-ವ್ಯವಹಾರ, ಗಣಿತ-ಅರ್ಥಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಸೇನೆ, ಬಾಹ್ಯಾಕಾಶ ಪಯಣ, ವಾಹನ ದುರಸ್ತಿ ಮಾಡುವ ಗಾಡಿಖಾನೆ(ಗ್ಯಾರೇಜ್)ಯ ನಿರ್ವಹಣೆ ಮುಂತಾದ ಕೇವಲ ಪುರುಷರದು ಎಂದು ಹೇಳಲಾಗುತ್ತಿದ್ದ ಉದ್ಯೋಗ ಕ್ಷೇತ್ರಗಳಲ್ಲಿ ಹೆಣ್ಣು ಇಂದು ಕಾಲಿಟ್ಟು ಗೆಲ್ಲುತ್ತಿರುವುದು ಮಾತ್ರವಲ್ಲದೆ, ಮೂರನೇ ಲಿಂಗಿಗಳು ದನಿಯೆತ್ತಲು ಪ್ರಾರಂಭ ಮಾಡಿದ ಮೇಲೆ ಲಿಂಗದ ವ್ಯಾಖ್ಯಾನದಲ್ಲೂ ಒಂದು ಮೂಲಭೂತ ಬದಲಾವಣೆಯಾಗಿದೆ. `ನಾನು ಅವನಲ್ಲ ಅವಳು’, ಮತ್ತು ನಾನು ಅವಳಲ್ಲ ಅವನು’ ಎಂದು ನಮ್ಮ ಜನಸಂಖ್ಯೆಯ ಒಂದು ಸಣ್ಣ ಭಾಗವಾದರೂ ಸರಿ, ಹೇಳಲಾರಂಭಿಸಿದೆ ಎಂಬುದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ.

ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ಇಂತಹ ಮಹಿಳಾ ಮುನ್ನಡೆಯಲ್ಲಿ ತಂತ್ರಜ್ಞಾನವು ಮಹತ್ತರ ಪಾತ್ರ ವಹಿಸಿದೆ. ಸ್ತ್ರೀವಾದಿ ಚಳುವಳಿಗಳು ಮಹಿಳಾ ಮುನ್ನಡೆಗೆ ಎಷ್ಟು ಸಹಾಯ ಮಾಡಿವೆಯೋ ವಿಜ್ಞಾನ ಹಾಗೂ ತಂತ್ರಜ್ಞಾನದ ನೂತನ ಆವಿಷ್ಕಾರಗಳು ಸಹ ಅಷ್ಟೇ ಸಹಾಯ ಮಾಡಿವೆ. ಗರ್ಭನಿರೋಧಕ ಮಾತ್ರೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗಳು ಹೆಣ್ಣನ್ನು ನಿರಂತರ ಬಸಿರು-ಬಾಣಂತನಗಳ ಚಕ್ರದಿಂದ ಮುಕ್ತಗೊಳಿಸಿದವು ಎಂಬುದು ನಿರ್ವಿವಾದ. ಇದೇ ರೀತಿಯಲ್ಲಿ ವಾಹನ ನಿರ್ಮಾಣದಲ್ಲಿ ಆಗಿರುವ ಕ್ರಾಂತಿ, ಹೆಂಗಸರು ಗಾಡಿ ಓಡಿಸುವುದನ್ನು ಕಲಿತು ಪ್ರಯಾಣದ ವಿಷಯದಲ್ಲಿ ಸ್ವತಂತ್ರರಾದದ್ದು, ಮನೆಯನ್ನೇ ಕೆಲಸದ ಸ್ಥಳವನ್ನಾಗಿ ಮಾಡಿದ ಇಂದಿನ ಅಂತರ್ಜಾಲ ಪ್ರಪಂಚ, ಜಾಗತೀಕರಣದಿಂದಾಗಿ ಹೆಂಗಸರು ರಾತ್ರಿ ಪಾಳಿಗೆ ಕೆಲಸಕ್ಕೆ ಹೋಗುವ ವಿಷಯದಲ್ಲಿ ಸಮಾಜದ ಸಾಂಪ್ರದಾಯಿಕ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆ, ಮಾಹಿತಿ ತಂತ್ರಜ್ಞಾನವು ಇಡೀ ಪ್ರಪಂಚವನ್ನು ನಮ್ಮ ಬೆರಳ ತುದಿಯಲ್ಲಿ ತಂದಿಟ್ಟಿರುವ ರೀತಿ ಇವು ಹೆಣ್ಣಿನ ಬದುಕಿನಲ್ಲಿ ಮಾಡಿರುವಂತಹ ಬದಲಾವಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.

ಬದಲಾವಣೆಗಳಾಗುತ್ತಿರುವುದು ಕೇವಲ ಹೆಂಗಸರ ಬದುಕಿನಲ್ಲಲ್ಲ. ಕಳೆದ ಮೂವತ್ತು – ಮೂವತ್ತೈದು ವರ್ಷಗಳಲ್ಲಿ ಬದುಕಿನ ಎಲ್ಲ ಆಯಾಮಗಳಲ್ಲೂ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿವೆ. ನಮ್ಮ ಕುಟುಂಬ ವ್ಯವಸ್ಥೆ ಸಹ ಈ ಬದಲಾವಣೆಗಳಿಗೆ ಹೊರತಾಗಿಲ್ಲ. ಹೊಸಹೊಸ ರೀತಿಯ ಆರೋಗ್ಯ ಸಮಸ್ಯೆಗಳು, ಜೀವನಶೈಲಿಯ ಕಾಯಿಲೆಗಳು, ಒಟ್ಟುಕುಟುಂಬಗಳಿರಲಿ, ಬೀಜಕೇಂದ್ರ ಕುಟುಂಬಗಳೇ(ನ್ಯೂಕ್ಲಿಯರ್ ಫ್ಯಾಮಿಲಿ ಎನ್ನುವ ಅರ್ಥದಲ್ಲಿ) ಒಡೆದು ಹೊಸ ರೀತಿಯ ಸಹಜೀವನದ ವ್ಯವಸ್ಥೆಗಳು ಉಗಮವಾಗಿವೆ. ನಮ್ಮ ಯುವತಿಯರು ಯುವಕರು `ಆಯ್ಕೆ ಮಾಡಿಕೊಂಡ ಕುಟುಂಬ’(ಚೋಸನ್ ಫ್ಯಾಮಿಲಿ) ಎಂಬ ಹೊಸ ಪರಿಕಲ್ಪನೆಯನ್ನು ನಮಗೆ ಪರಿಚಯಿಸಿದ್ದಾರೆ. ಆಯ್ಕೆ ಮಾಡಿಕೊಂಡ ಕುಟುಂಬ ಎಂದರೆ ತಾವು ಹುಟ್ಟಿದ ಜಾತಿ, ಕುಟುಂಬ, ಸಮುದಾಯಗಳನ್ನು ತೊರೆದು, ಸಮಾನಮನಸ್ಕ ಸ್ನೇಹಿತರು ಪರಸ್ಪರರಿಗೆ ಆಸರೆಯಾಗುತ್ತಾ ಬಾಳುವುದು. ಇಲ್ಲಿ ಕುಟುಂಬ ಸದಸ್ಯರು ಸಮಾಜದತ್ತವಲ್ಲ, ಬದಲಾಗಿ ತಾವು ಆಯ್ದುಕೊಂಡವರು. ಮೊದಮೊದಲು ಮುಂಬೈ, ದೆಹಲಿ ಮುಂತಾದ ಮಹಾನಗರಗಳಲ್ಲಿ ಮಾತ್ರ ಈ ಸನ್ನಿವೇಶ ಕಾಣಿಸುತ್ತಿತ್ತು, ಆದರೆ ಈಗ ಜಿಲ್ಲಾಕೇಂದ್ರ, ತಾಲೂಕು ಮಟ್ಟದಲ್ಲೂ ಈ ಓಲುವೆ (ಟ್ರೆಂಡ್) ಕಾಣುತ್ತಿದೆ. ನಮ್ಮ ಸಮಾಜ ಎಷ್ಟು ಬದಲಾಗುತ್ತಿದೆ ಎಂಬುದಕ್ಕೆ ಇದು ಒಂದು ಸಾಕ್ಷಿ. ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಈ ಬದಲಾವಣೆಯ ಭಾಗವಾಗುತ್ತಿರುವುದು ತುಂಬ ಕುತೂಹಲ ಹುಟ್ಟಿಸುವ ವಿಷಯವಾಗಿದೆ.

ಇನ್ನೊಂದು ದೊಡ್ಡ ಕೌಟುಂಬಿಕ, ಸಾಮಾಜಿಕ ಬದಲಾವಣೆ ಅಂದರೆ ಮನೆಗಳಲ್ಲಿ ಅಡುಗೆಮನೆಗಿದ್ದ ಪ್ರಾಮುಖ್ಯ ಬಹಳ ಕಡಿಮೆಯಾಗುತ್ತಿರುವುದು. ವಾರಾಂತ್ಯದಲ್ಲಿ ಊಟಕ್ಕೆ ಹೊರಗೆ ಹೋಗುವುದು, ಹಬ್ಬಗಳಲ್ಲಿ ಸಹ ಹೋಟಲುಗಳಲ್ಲಿ ವಿಶೇಷ ಊಟಗಳನ್ನು ಮಾಡುವುದು, ಬೀದಿಗೆ ನಾಲ್ಕರಂತೆ ತಲೆಯೆತ್ತಿರುವ ವಿವಿಧ ನಮೂನೆಯ ತಿಂಡಿತಾಣಗಳು, ನಮ್ಮ ರಸ್ತೆಗಳಲ್ಲಿ ಸದಾ ಕಂಡುಬರುವ ಸ್ವಿಗ್ಗಿ, ಝೊಮ್ಯಾಟೊ. `ಬಿಸಿ ಬಿಸಿ ಡೆಲಿವರಿ’ ವಾಹನಗಳು, ಎಂಟಿಆರ್ ರೀತಿಯ ಬಿಸಿ ಮಾಡಿ ತಕ್ಷಣ ತಿನ್ನಬಹುದಾದ ಪೊಟ್ಟಣದೊಳಗಿನ ಸಿದ್ಧ ಆಹಾರಗಳು, ದಿನೇದಿನೇ ಹೆಚ್ಚಾಗುತ್ತಿರುವ ಆಹಾರ ಸರಬರಾಜು ವ್ಯವಸ್ಥೆ(ಕೇಟರಿಂಗ್)ಗಳು ನಮ್ಮ ಆಹಾರಕ್ರಮಗಳನ್ನು ಬಹುವಾಗಿ ಬದಲಾಯಿಸಿವೆ. ಹೀಗಾಗಿ `ಮಹಿಳೆ ಅಂದರೆ ಸದಾ ಅಡಿಗೆ ಮನೆಯಲ್ಲಿ ಇರಬೇಕಾದವಳು’ ಎಂಬ ಪರಿಕಲ್ಪನೆಯು ನಿಜಬದುಕಿನಲ್ಲಿ ನಮ್ಮ ಕಣ್ಣಮುಂದೆಯೇ ಶಕ್ತಿ ಕಳೆದುಕೊಳ್ಳುತ್ತಿದೆ.

*****

ಇದೆಲ್ಲದರ ಅರ್ಥವೇನು? ಅಕ್ಕ ಮಹಾದೇವಿ ಹೇಳಿದ `ನಾನಿದ್ದು ಫಲವೇನು ಜ್ಞಾನವಿಲ್ಲದನ್ನಕ್ಕ’ ಎಂಬ ಮಾತು ಇಂದಿನ ಮಹಿಳೆಯರಿಗೆ ಹೇಗೆ ಅನ್ವಯವಾಗುತ್ತಿದೆ? ತಮ್ಮ ವಿದ್ಯಾಭ್ಯಾಸ, ವೃತ್ತಿಸಾಧನೆಗಳನ್ನು ಮಹಿಳೆಯರು ಬಹಳ ಗಂಭೀರವಾಗಿ ಪರಿಗಣಿಸುತ್ತಿರುವುದು, ತಡವಾಗಿ ಮಾಡಿಕೊಳ್ಳುವ ಮದುವೆಗಳು, ಅಂಡಗಳನ್ನು ಶೇಖರಿಸಿಡುವುದು, ಬಾಡಿಗೆ ತಾಯ್ತನ, ಮದುವೆಯಾಗದೆಯೇ ಮಕ್ಕಳನ್ನು ದತ್ತು ಪಡೆದು ಬೆಳೆಸುವುದು, ಕಷ್ಟಗಳಾದಾಗ ಕುಟುಂಬ ಸದಸ್ಯರ ಸಲಹೆ ಸೂಚನೆಗಳ ಮೊರೆ ಹೋಗದೆ ಈಗಿನ ಯುವಪೀಳಿಗೆಯು ಮಾನಸಿಕ ಚಿಕಿತ್ಸಾ ಸಲಹೆಗಾರರ ಬಳಿ ಹೋಗುತ್ತಿರುವುದು (ಥೆರಪಿಸ್ಟ್‌) ….. ಎಷ್ಟೆಲ್ಲ ಭಿನ್ನ ರೀತಿಯ ಜೀವನಶೈಲಿಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವಲ್ಲ.

`ಜ್ಞಾನ’ವೆಂಬುದು ಗೂಗಲ್ ಮುಂತಾದ ಅಂತರ್ಜಾಲದ ಹುಡುಕುಯಂತ್ರಗಳ ಮೂಲಕ ಮಾಹಿತಿಗಳ ಮಹಾಪೂರದ ರೂಪದಲ್ಲಿ ನಮ್ಮ ಬದುಕಿಗೆ ಹರಿದು ಬರುತ್ತಿದೆ. ಆದರೆ ಮಾಹಿತಿಯೇ ಜ್ಞಾನವಲ್ಲ ಎಂಬುದು ಅಷ್ಟೇ ಸತ್ಯವಾದ ಮಾತು. ನಮ್ಮ ಇಂದಿನ ಮಹಿಳೆಯರು ಪರಂಪರಾನುಗತ ಜ್ಞಾನವ್ಯವಸ್ಥೆಗಳನ್ನು ಧಿಕ್ಕರಿಸಿ ಆಧುನಿಕ ಮಾಹಿತಿ ತಂತ್ರಜ್ಞಾನವು ನೀಡುತ್ತಿರುವ `ಜ್ಞಾನ’ವನ್ನು ನಂಬುತ್ತಿದ್ದಾರೆ. ಇದರ ಫಲವೇನಾಗುವುದೋ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಿದೆ.

ಒಟ್ಟಿನಲ್ಲಿ ಅಕ್ಕಮಹಾದೇವಿಯಿಂದ ಗೂಗಲ್‌ಗುರು ತನಕ ಸ್ತ್ರೀಬದುಕು ರೂಪುಗೊಂಡ ರೀತಿಯ ಅಧ್ಯಯನವು ಬಹಳ ಕುತೂಹಲ ಹುಟ್ಟಿಸುತ್ತದೆ. ಇಲ್ಲಿ ಎಷ್ಟು ಉತ್ತರಗಳಿವೆಯೋ ಅಷ್ಟೇ ಪ್ರಶ್ನೆಗಳೂ ಇವೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ