ಸ್ವಂತವಾಗದ ಕೆಲವು ಕವಿತೆಗಳು
1
ಸ್ವಂತ
ಅಂದರೆ
ನಿನ್ನ
ನಾಟ್ಯದಲ್ಲಿ
ನನ್ನ
ಹೆಜ್ಜೆ ಕುಣಿಯುವುದು
ಸ್ವಂತಿಕೆ
ಅಂದರೆ
ನಿನ್ನ
ಎಂಜಲಲ್ಲಿ
ನನ್ನ
ಉಗುಳು ಇಲ್ಲದಿರುವುದು
2
ಕೈಹಿಡಿದ ಸಂಗಾತಿ
ನನ್ನ ನಡುವಯಸಲ್ಲಿ
ಮತ್ತೊಬ್ಬರ
ಸಂಗಾತ ಬಯಸಬಹುದು
ಆದರೆ ನನ್ನ ಕವಿತೆಗಳು
ಕೊನೆಯುಸಿರ ತನಕ
ನನ್ನ ಎದೆಯ
ತಬ್ಬಿಕೊಂಡೇ ಇರುತ್ತವೆ
3
ಅವಳು ಕೇಳುತ್ತಲೇ ಇರ್ತಾಳೆ
“ನನ್ ಬಗ್ಗೆ ಕವಿತೆ ಬರೀ”
ನಾನು ಹೇಳುತ್ತಲೇ ಇರ್ತೇನೆ
“ನನ್ ಹಾಗೆ ಗೀಚುವವರು ತುಂಬ ಜನ ಸಿಕ್ತಾರೆ”
ಅವಳು ಹೌಹಾರಿ ಉಸುರುತ್ತಾಳೆ
“ನಿಂಗೆ ಮಾತ್ರ ಬರೆಯಲು ಕೇಳಿದ್ದು”
ನಾನು ಹಾರಿಬಿದ್ದು ತೊದಲುತ್ತೇನೆ
“ನಿನಗೆ ತುಂಬ ಕವಿಗಳ ಪರಿಚಯವಿದೆ”
ಅವಳು ಸಿಡಿಯುತ್ತಾಳೆ
“ಅವರೆಲ್ಲ ನನ್ನ ಸೋದರರು, ಅಣ್ಣ, ತಮ್ಮ, ಅಂಕಲ್ಸು”
ನಾನು ಬೆಚ್ಚಿಬೀಳುತ್ತೇನೆ
“ಮತ್ಯಾಕೆ ಅವರ ಪೋಸ್ಟಿಗೆ ಡಿಯರ್, ಕಣೊ ಎಲ್ಲ ಕಾಮೆಂಟ್ ಹಾಕ್ತಿ”
ಅವಳು ತನ್ನ ಉಗುರುಗಳನ್ನು ಗೀರುತ್ತಾ
“ಎಲ್ಲ ಗಂಡಸರೂ ಅನುಮಾನದ ತುಂಡುಗಳು”
ಎಂದು ರಿಪ್ಲೈ ತೂರಿ ಬ್ಲಾಕು ಮಾಡುತ್ತಾಳೆ
4
ಸೂರ್ಯ ಕಿರಣವು ವೀರ್ಯದಂತೆ
ಹೊರಟಾಗ ಹೂವು ಆ ದಿಕ್ಕಿಗೆ ಮುಖಮಾಡುವುದು
ಹೂವು ಬಾಡಿದಾಗ ಏನೂ ಸಾಕ್ಷಿ ಕೊಡದೆ
ತೊಟ್ಟು ಕಳಚಿ ನೆಲಕೆ ಉದುರುವುದು
ನೆಲವ ತಬ್ಬಿ ಭಗ್ನವಾಗುತ್ತಾ ಆ ಹೂವ ಕೇಸರವ
ಮುತ್ತಿದ ಬೀಜಗಳು ಕಳಚಿ ನೆಲಕೆ ಉದುರುವವು
ಮೊಳಕೆ
ಗಿಡ
ಹೂವು
ಸೂರ್ಯ ಕಿರಣ ವೀರ್ಯದಂತೆ
ಬಾಡಿದಾಗ ಏನೂ ಸಾಕ್ಷಿ ಕೊಡದೆ.
ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.
(ಕಲಾಕೃತಿ: ಪ್ಯಾಬ್ಲೋ ಪಿಕಾಸೋ)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ