ಕವಿತೆ ಏಕಾಂತದ ನಿಶ್ಯಬ್ದ ನಿತಾಂತ ಧ್ಯಾನ. ತನ್ನ ಗಾಯನ ಪ್ರಸ್ತುತಿ ಇವತ್ತಿಗಿಂತ ನಾಳೆ ಚಂದವಿರಬೇಕು ಎಂದು ಪ್ರತಿಯೊಬ್ಬ ಗಾಯಕನು ಹಂಬಲಿಸುತ್ತಾನೆ, ಹಗಲೂ ಇರುಳೂ ರಿಯಾಝ್ ನಲ್ಲಿ ತೊಡಗುತ್ತಾನೆ. ಶಿಲ್ಪಿಯೊಬ್ಬ ಆರಿಸುವ ಕಲ್ಲಿನಿಂದ ಹಿಡಿದು ಕೆತ್ತಿ ಕೆತ್ತಿ ಸುಂದರ ಕಲಾಕೃತಿಯನ್ನಾಗಿ ಮಾಡಲ್ಲಿಯವರೆಗೂ ವಿರಮಿಸುವುದಿಲ್ಲ. ಇದು ಸಾಹಿತ್ಯವೂ ಸೇರಿದಂತೆ ಎಲ್ಲ ಕಲಾಪ್ರಕಾರಗಳಿಗೂ ಕಲಾವಿದರಿಗೂ ಅನ್ವಯಿಸುವಂತದ್ದು. ಹೀಗೆ ಪ್ರತಿಯೊಬ್ಬ ಕಲಾವಿದನ ತುಡಿತವೂ ಇಂದಿಗಿಂತ ನಾಳೆಯನ್ನು ಉತ್ತಮಪಡಿಸಿಕೊಳ್ಳಬೇಕೆನ್ನುವುದೇ ಆಗಿರುತ್ತದೆ ಮತ್ತು ಪ್ರತಿಯೊಬ್ಬ ಕಲಾವಿದನಿಗೂ ಕಲಾಜಗತ್ತಿಗೆ ತನ್ನದೆನ್ನುವ ಹೊಸದೇನನ್ನಾದರೂ ಕೊಡಬೇಕೆನ್ನುವ ಹಂಬಲವಿರುತ್ತದೆ.
ಆಶಾ ಜಗದೀಶ್ ಅಂಕಣ

 

ಹಳಬರನು ಕೇಳದಿರಿ ನೀವೆಂದಿನವರೆಂದು
ಹೊಸಬರನು ಹೊಗಳದಿರಿ ನೀವಿಂದಿನವರೆಂದು
ಒಬ್ಬರ ವಿಳಾಸದಲಿ ಇನ್ನೊಬ್ಬರಿರಬಹುದು
ಒಟ್ಟಾರೆ ಮಾತು ಅನ್ಯಾಯ!
ಮಂಜು ಸರಿದು, ಬೆಳಕು ಹರಿದು, ಬಯಲಾಗಿದೆ ಜೀವನ
ಕೋಳಿ ಕೂಗಲಿ ಬಿಡಲಿ ಗಡಿಯಾರ ಸರಿಯಾಗಿದೆ

ಕೆ.ಎಸ್.ನ. ರ ಈ ಕವಿತೆ ಅದೆಷ್ಟು ಆಪ್ತವಾಗಿ ಬದಲಾಗದ ಸತ್ಯವೊಂದನ್ನು ಹೇಳುತ್ತಿದೆ…

ಭೂಮಿಯೊಂದು ಬಾಡಿಗೆ ಮನೆ, ನಾವೆಲ್ಲ ಬಾಡಿಗೆದಾರರು, ಏನನ್ನೂ ತರದೆ ಇಲ್ಲಿ ಬಂದು ಇರುವಷ್ಟು ದಿನ ಇದ್ದು, ಇಲ್ಲಿರುವುದನ್ನೇ ಬಳಸಿ, ಹೊರಡುವಾಗ ಇದ್ದುದೆಲ್ಲವ ಇಲ್ಲಿಯೇ ಮತ್ತೊಬ್ಬ ಬಾಡಿಗೆದಾರನಿಗೊಪ್ಪಿಸಿ ಏನನ್ನೂ ಒಯ್ಯದೆ ಖಾಲಿ ಕೈಗಳಲ್ಲಿ ಮರಳುವುದು….

ಕಾವ್ಯದ ಮಟ್ಟಿಗೂ ಇದು ನಿಜ. ಹಿಂದಿನವರು ಇಂದಿನವರ ಸಮನ್ವಯತೆಯಲ್ಲಿ ಮುಂದೆ ಸಾಗುತ್ತದೆ ಕಾವ್ಯ. ಇದ್ದುದನ್ನೆ ಮತ್ತೆ ಮತ್ತೆ ಅನ್ವೇಶಿಸುವುದು. ಕಾವ್ಯವೆನ್ನುವ ನದಿ ಹಾದಿ ಬದಲಿಸುವ ವಿವಿಧ ಪಾತ್ರಗಳು ನಾವೆಲ್ಲ. ಒಟ್ಟಾರೆ ಮಾತು ಅನ್ಯಾಯ…. ಯಾರೇ ಕೂಗಲಿ ಯಾರೇ ಮೌನವಾಗುಳಿಯಲಿ ಕಾಲದ ಗಡಿಯಾರ ನಿಲ್ಲುವುದಿಲ್ಲ. ಇಂದು ಇವನು ನಿಂತಿರುವ ಜಾಗ ಹಿಂದೆ ಯಾರದ್ದೋ ಆಗಿತ್ತು, ಮುಂದೆ ಇನ್ಯಾರದ್ದೋ ಆಗಲಿದೆ. ಇದು ಅಂತಿಮ ಸತ್ಯ. ನಶ್ವರದ ಬದುಕಲ್ಲಿ ನಾನು ಎನ್ನುವ ಅಹಮ್ಮಿಗಾಗಲಿ, ನಾನು ಎನ್ನುವ ದೇಹಕ್ಕಾಗಲಿ ಯಾವ ಸ್ಥಾನವೂ ಇಲ್ಲ.

ನನ್ನ ಪಾಲಿಗೆ ಕಾವ್ಯ, ಅನುಕ್ಷಣ ಸಾಂದ್ರಗೊಳ್ಳುವ ಸತ್ಯ. ಕಾವ್ಯದ ಪರಿವಿಡಿಗೆ ಹಾಜರಿ ಹಾಕದೆ ಇರಲಿ ಹೇಗೆ ಎನಿಸುವಂತಹ ಅನಿವಾರ್ಯ ಸ್ಥಿತಿಯಲ್ಲಿ ನನ್ನಲ್ಲಿ ಕವಿತೆ ಹುಟ್ಟುತ್ತದೆ. ಪ್ರಕೃತಿಯಲ್ಲಿ ಇರುವ ಅಸಂಖ್ಯಾತ, ಗಮನಕ್ಕೂ ಬಾರದ, ಎಲೆಯ ಹಿಂಭಾಗದಲ್ಲಿ ಮರೆಮಾಚಿ ಇಟ್ಟ, ಕೋಟಿ ಮೊಟ್ಟೆಗಳ ಸಾಲಿನಂತಹ ಸಣ್ಣ ಸಣ್ಣ ವಿಸ್ಮಯಗಳಂತೆ ಕವಿತೆಗಳು… ಇವೆಯೆಂದರೆ ಇವೆ, ಇಲ್ಲವೆಂದರೆ ಇಲ್ಲ. ಇರುವ ಅಥವಾ ಇಲ್ಲದಿರುವುದನ್ನು ಅರುಹಿಕೊಳ್ಳುವ ಇರಾದೆ ಇಲ್ಲ. ಮತ್ತು ಹೊರ ಬರುವುದಷ್ಟನ್ನೇ ಜೀವ ಹಿಡಿವ ದಾರಿಯಾಗಿಸಿಕೊಂಡ ಕವಿತೆಗಳ ರಾಶಿ ಗಾಳಿಯಾಗಿ ನೀರಾಗಿ ನಮ್ಮೊಳಗೆ ಹರಿಯುವುದನ್ನು ತಡೆಯುವುದು ಹೇಗೆ…

ಕವಿತೆ ಏಕಾಂತದ ನಿಶ್ಯಬ್ದ ನಿತಾಂತ ಧ್ಯಾನ. ತನ್ನ ಗಾಯನ ಪ್ರಸ್ತುತಿ ಇವತ್ತಿಗಿಂತ ನಾಳೆ ಚಂದವಿರಬೇಕು ಎಂದು ಪ್ರತಿಯೊಬ್ಬ ಗಾಯಕನು ಹಂಬಲಿಸುತ್ತಾನೆ, ಹಗಲೂ ಇರುಳೂ ರಿಯಾಝ್ ನಲ್ಲಿ ತೊಡಗುತ್ತಾನೆ. ಶಿಲ್ಪಿಯೊಬ್ಬ ಆರಿಸುವ ಕಲ್ಲಿನಿಂದ ಹಿಡಿದು ಕೆತ್ತಿ ಕೆತ್ತಿ ಸುಂದರ ಕಲಾಕೃತಿಯನ್ನಾಗಿ ಮಾಡಲ್ಲಿಯವರೆಗೂ ವಿರಮಿಸುವುದಿಲ್ಲ. ಇದು ಸಾಹಿತ್ಯವೂ ಸೇರಿದಂತೆ ಎಲ್ಲ ಕಲಾಪ್ರಕಾರಗಳಿಗೂ ಕಲಾವಿದರಿಗೂ ಅನ್ವಯಿಸುವಂತದ್ದು. ಹೀಗೆ ಪ್ರತಿಯೊಬ್ಬ ಕಲಾವಿದನ ತುಡಿತವೂ ಇಂದಿಗಿಂತ ನಾಳೆಯನ್ನು ಉತ್ತಮಪಡಿಸಿಕೊಳ್ಳಬೇಕೆನ್ನುವುದೇ ಆಗಿರುತ್ತದೆ ಮತ್ತು ಪ್ರತಿಯೊಬ್ಬ ಕಲಾವಿದನಿಗೂ ಕಲಾಜಗತ್ತಿಗೆ ತನ್ನದೆನ್ನುವ ಹೊಸದೇನನ್ನಾದರೂ ಕೊಡಬೇಕೆನ್ನುವ ಹಂಬಲವಿರುತ್ತದೆ. ಈ ಹಂಬಲ ತುಡಿತ ಯಾವಾಗ ಆತ್ಮದ ತುರ್ತಾಗಿ ಬದಲಾಗುತ್ತದೋ ಆಗ ನಿಜವಾದ ಕಲೆ ಹುಟ್ಟುತ್ತದೆ. ಮತ್ತದು ನಾವಳಿದ ಮೇಲೂ ಉಳಿದು ಬಾಳುತ್ತದೆ.

ಆದರೆ ಧಿಡೀರ್ ದೋಸೆ, ಧಿಡೀರ್ ಚಿತ್ರಾನ್ನಗಳಂತಹ ಇನ್ಸ್ಟಂಟ್ ಫುಡ್ಡುಗಳಂತೆ ಇವತ್ತು ಕವಿತೆಗಳು ಹುಟ್ಟುತ್ತಿವೆ. ನಾನಾ ಪದಾರ್ಥಗಳನ್ನು ಹುರಿದು, ಪುಡಿಮಾಡಿ, ಮಸಾಲೆ ತಯಾರಿಸಿಕೊಂಡು, ನಂತರ ರುಚಿಕಟ್ಟಾದ ಅಡುಗೆ ಮಾಡುವ ಪದ್ಧತಿ ಮಾಯವಾಗಿ ಫಾಸ್ಟ್ ಫುಡ್ಡಿನ ಕಾಲ ಬಂದು ನಮ್ಮೆದುರು ನಿಂತಿದೆ. ಇವತ್ತು ರಾತ್ರೋ ರಾತ್ರಿ ಸಾಹಿತಿಯೆಂದು ಕರೆಸಿಕೊಂಡುಬಿಡುವ ಪ್ರಚಾರಪ್ರಿಯರಿಂದಾಗಿ ಸಾಹಿತ್ಯದ ಬಗೆಗಿನ ಧೋರಣೆ ಬದಲಾಗುತ್ತಿದೆ. ವರ್ತಮಾನದ ಕಾವ್ಯವೇನು? ಕಾವ್ಯದ ಇತಿಹಾಸವೇನು? ಮುಂದಿನ ಕಾವ್ಯದ ನಡೆ ಹೇಗಿರಬೇಕು? ಎನ್ನುವ ಗ್ರಹಿಕೆ, ಪೂರ್ವತಯಾರಿ, ಚಿಂತನೆ ಮೊದಲ ಬಾರಿ ಕಾವ್ಯದ ನದಿಗೆ ಬಿದ್ದ ಎಲ್ಲರಿಗೂ ಈಜಿ ಗಮ್ಯ ತಲುಪಲಿಕ್ಕೆ ಗಾಳಿ ಊದಿದ ರಬ್ಬರ್ ರಿಂಗಿನಂತೆ ಬೇಕಿರುತ್ತದೆ. ಕಾಡುಹಕ್ಕಿಯ ಗಾಯನಕ್ಕೆ ಯಾವ ಸಂಸ್ಕಾರವಿರುವುದಿಲ್ಲ. ಅದು ಪ್ರಕೃತಿ. ಅದಕ್ಕೆ ಅದರದೇ ಆದ ಸೊಗಡಿರುತ್ತದೆ ನಿಜ. ಆದರೆ ಒಂದೇ ಒಂದು ಸ್ವರ ಸಂಗೀತವಾಗುವುದಿಲ್ಲವಲ್ಲ. ಯಾವುದೇ ಕಲೆಯಿರಲಿ ಅದರಲ್ಲಿ ಪ್ರಬುದ್ಧತೆ ಸಾಧಿಸಲಿಕ್ಕೆ ಅದರ ಬಗ್ಗೆ ಆಳವಾದ ಜ್ಞಾನ ಇರಬೇಕಾಗಿರುತ್ತದೆ. ಇಲ್ಲದಾಗ ಒಂದಷ್ಟು ದೂರ ಹುರುಪಿನಿಂದ ಸಾಗಿ ಬಹುಬೇಗ ಆಯಾಸಗೊಂಡುಬಿಡುವ ಸಾಧ್ಯತೆ ಇರುತ್ತದೆ.

ಆದರೆ ಇಂದಿಗೂ ಕವಿತೆಯನ್ನು ಉಸಿರಿನಂತೆ ಭಾವಿಸುವವರೂ ನಮ್ಮೊಡನಿದ್ದಾರೆ. ಕವಿತೆಯ ಬಗ್ಗೆ ಏನೇ ಇರಲಿ ಎಲ್ಲೇ ಇರಲಿ ಹಿಂಡಿ ಹೀರೇಕಾಯಿ ಮಾಡುವವರೆಗೂ ರಸ ಹೀರುವವರಿದ್ದಾರೆ. ಇವರ ಬದಿಯಲ್ಲೇ ಇತರೆ ಸಾಹಿತ್ಯ ಪ್ರಕಾರಗಳಿಗಿಂತ ಕವಿತೆ ಬಹಳ ಸರಳ ಸುಲಭ ಎಂದು ತಿಳಿಯುವವರೂ ಇದ್ದಾರೆ. ಆದರೆ ಕವಿತೆ ಸುಲಭ ಎನ್ನುವುದಕ್ಕಿಂತ ಕವಿತೆಯನ್ನು ಬರೆಯುತ್ತೇನೆ ಎಂದು ನಮ್ಮನ್ನು ನಾವು ನಂಬಿಸಿಕೊಂಡುಬಿಡುವುದು ಸುಲಭವೇನೊ.

ನನ್ನ ಓದಿನ ಹರವು ಬರಹವಾಗಿ ಹೊರಪ್ರವೇಶ ಪಡೆದಿದ್ದಿರಬಹುದು. ನನ್ನ ಮೊದಲ ಓದು ಪಂಚತಂತ್ರ ಕಥೆಗಳು, ಈಸೋಪನ ಕತೆಗಳು, ದಿನಕ್ಕೊಂದು ಕತೆ, ಅರೇಬಿಯನ್ ಕತೆ…. ಹೀಗೆ ಶುರುವಾದದ್ದು ಎಲ್ಲೆಲ್ಲೋ ಅಲೆದಾಡಿಸಿ ಏನೇನನ್ನೋ ಓದಿಸಿತು. ಇದನ್ನೇ ಇಂಥದ್ದನ್ನೇ ಓದಬೇಕೆಂದೇನೂ ಇರಲಿಲ್ಲವಾದರೂ ಓದಿದ್ದು ನನ್ನೊಳಗಿಳಿಯಿತು. ಸಾಹಿತ್ಯದ ವಾತಾವರಣ ನನ್ನ ಮನೆಯಲ್ಲಿಲ್ಲದಿದ್ದರೂ ಓದಿನ ಬಗ್ಗೆ ಪ್ರೀತಿ ಇತ್ತು. ಅದೇ ನನ್ನನ್ನು ನಿರಂತರ ಓದಿಸಿತು.

ಬರೆಯಬೇಕು ಅಂತ ಅನ್ನಿಸಲು ಶುರುವಾದಾಗ ಸಣ್ಣ ಪುಟ್ಟ ಎಂಟ್ಹತ್ತು ಸಾಲುಗಳ ಕವಿತೆಗಳನ್ನು ಬರೆಯಲು ಶುರುಮಾಡಿದೆ. ಕವಿತೆಯನ್ನೇ ಏಕೆ ಬರೆದೆ ಗೊತ್ತಿಲ್ಲ. ಅಲ್ಲಿಯವರೆಗೂ ಪಠ್ಯಪುಸ್ತಕದ ಕವಿತೆಗಳು ಮತ್ತು ಹಾಡಬಹುದಾದ ಗೀತೆಗಳ ಹೊರತಾಗಿ ಕವಿತೆಗಳನ್ನು ಓದಿರದಿದ್ದ ನನ್ನಲ್ಲಿ ಕವಿತೆ ಹೇಗೆ ಹುಟ್ಟಿತು ಅನ್ನುವುದೊಂದು ಸೋಜಿಗವೇ… ಹೀಗೇ ಕವಿತೆ ಎಲ್ಲರಲ್ಲೂ ಹುಟ್ಟುತ್ತದಾ?! ಎಷ್ಟೋ ಬಾರಿ ದಿನವೊಂದರಲ್ಲಿ ಹಲವಾರು ಕವಿತೆಗಳನ್ನು ಪ್ರಯತ್ನಿಸಿದ್ದಿದೆ. ಮತ್ತೆ ಕೆಲವು ದಿನಗಳು ನಿಜಕ್ಕೂ ಬಂಜರು. ಏನೂ ಹುಟ್ಟುವುದಿಲ್ಲ. ನನ್ನ ಜೀವನದ ಕೆಲವು ವರ್ಷಗಳೇ ಹಾಗೆ ಬಂಜರಾಗಿವೆ. ಆ ಸಮಯದಲ್ಲಿ ನಾ ಏನೂ ಬರೆದಿಲ್ಲ. ಹಾಗಾಗಿ ಕವಿತೆಯನ್ನು ಸುಲಭ ಅನ್ನಲು ನನಗೆ ಸಾಧ್ಯ ಆಗುವುದಿಲ್ಲ.

ಮತ್ತೆ ಕವಿತೆಗಳು ಅಂದರೆ ಹೇಗೆ ಇರಬೇಕು ಎಂದೆಲ್ಲಾ ಯೋಚಿಸುತ್ತಿದ್ದೆ, ನಾನು ಬರೆಯುತ್ತಿರುವುದು ನಿಜಕ್ಕೂ ಕವಿತೆಗಳಾ ಎನ್ನುವ ಅನುಮಾನವಿರುತ್ತಿತ್ತು ನನ್ನಲ್ಲಿ. ಈ ಎಲ್ಲ, ಪ್ರಾಥಮಿಕ ಅನುಮಾನಗಳು ಕವಿತೆಯ ಬಗ್ಗೆ ಹೆಚ್ಚೆಚ್ಚು ತಿಳಿದಂತೆ ಮಾಯಗಾಗುತ್ತಾ ಹೋದವು. ಆದರೆ ಈಗಲೂ ಆಗಾಗ ಕೆಲ ಅನುಮಾನಗಳು ಬೆನ್ನು ಬೀಳುತ್ತವೆ. ಎಲ್ಲ ಕವಿತೆಗಳೂ ಪರಿಪೂರ್ಣವಾ? ಎಲ್ಲ ಕವಿತೆಗಳೂ ಪರಿಪೂರ್ಣವಾಗಿರಬೇಕಾದ ಅವಶ್ಯಕತೆ ಅಥವಾ ಅನಿವಾರ್ಯತೆ ಇದೆಯಾ? ಒಂದು ಕವಿತೆಯ ಗುಣಮಟ್ಟಕ್ಕಿರುವ ಮಾನದಂಡಗಳೇನು? ಪರಿಪೂರ್ಣವಲ್ಲದ ಕವಿತೆಗಳ ಭವಿಷ್ಯವೇನು? ತಾಂತ್ರಿಕ ಅಂಶಗಳಷ್ಟೇ ಮುಖ್ಯವಾ? ಅಥವಾ ಕವಿತೆ ತನ್ನ ಶ್ರೋತೃಗಳನ್ನು ಓದುಗರನ್ನು ಮುಟ್ಟುವುದು ತಟ್ಟುವುದು ಮುಖ್ಯವಾ?! ಹೀಗೆ ಇನ್ನು ಏನೇನೋ ಪ್ರಶ್ನೆಗಳು.
ಬೇಂದ್ರೆಯವರು ಒಂದು ಕಡೆ ಹೇಳುತ್ತಾರೆ,

ಇಂದಿಗೂ ಕವಿತೆಯನ್ನು ಉಸಿರಿನಂತೆ ಭಾವಿಸುವವರೂ ನಮ್ಮೊಡನಿದ್ದಾರೆ. ಕವಿತೆಯ ಬಗ್ಗೆ ಏನೇ ಇರಲಿ ಎಲ್ಲೇ ಇರಲಿ ಹಿಂಡಿ ಹೀರೇಕಾಯಿ ಮಾಡುವವರೆಗೂ ರಸ ಹೀರುವವರಿದ್ದಾರೆ. ಇವರ ಬದಿಯಲ್ಲೇ ಇತರೆ ಸಾಹಿತ್ಯ ಪ್ರಕಾರಗಳಿಗಿಂತ ಕವಿತೆ ಬಹಳ ಸರಳ ಸುಲಭ ಎಂದು ತಿಳಿಯುವವರೂ ಇದ್ದಾರೆ. ಆದರೆ ಕವಿತೆ ಸುಲಭ ಎನ್ನುವುದಕ್ಕಿಂತ ಕವಿತೆಯನ್ನು ಬರೆಯುತ್ತೇನೆ ಎಂದು ನಮ್ಮನ್ನು ನಾವು ನಂಬಿಸಿಕೊಂಡುಬಿಡುವುದು ಸುಲಭವೇನೊ.

“ಅಂದ ಚಂದದ ನೀಟುಗಾರಿಕೆಯ ಕಾವ್ಯ ನಮಗಷ್ಟು ಬೇಕಾಗಿಲ್ಲ, ವಸ್ತು ವಸ್ತುವಿನ ಅಂತರಂಗದ ಮೊಗ್ಗೆಗಳನ್ನರಳಿಸುವ, ಪ್ರಕೃತಿಯ ಅಂತರ್ಗತವಾದ ಚೈತನ್ಯವನ್ನು ಮೂರ್ತಿವತ್ತಾಗಿ ತೋರಿಸುವ, ಅಕ್ಷರಾತ್ಮನ, ಅಂತರಾತ್ಮನ, ಅವಿದಿತರಸಗಳ ಅನಂತಲೀಲಾನಾಟ್ಯದ ಪ್ರೇಕ್ಷಕರನ್ನಾಗಿ ನಮ್ಮನ್ನು ಮಾಡುವ, ನಶ್ವರದೊಳಗಿನ ಈಶ್ವರನನ್ನು ಅಂತಃಚಕ್ಷುವಿಗೆ ಪ್ರತ್ಯಕ್ಷೀಕರಿಸುವ ಕಾವ್ಯ ನಮಗೆ ಬೇಕಾದ ಕಾವ್ಯ”

(ಸಾಹಿತ್ಯದ ವಿರಾಟ್ ಸ್ವರೂಪ: ಪು.237)

ಎಂದು. ಇದು ನಮ್ಮೆಲ್ಲ ಪ್ರಶ್ನೆಗಳನ್ನು ಸಂತೈಸುವ ಮಾತು ಎನಿಸುತ್ತದೆ. ಯಾವಾಗ ನಾವು ಸತ್ಯಕ್ಕೆ ನೈಜತೆಗೆ ಮುಖಾಮುಖಿಯಾಗುತ್ತೇವೋ, ಕಾವ್ಯ ಮತ್ತು ಕವಿ ಎರಡೂ ಯಾವಾಗ ಅದೈತಕ್ಕೊಳಗಾಗುತ್ತವೋ ಆಗ ಅಲ್ಲಿ ಒಣ ಶಾಸ್ತ್ರ ಅರ್ಥ ಕಳೆದುಕೊಂಡು ಕವಿ, ಕವಿತೆಯ ಶರಣಾಗತನಾಗಿ ಒಂದಾಗುತ್ತಾನೆ. ಪ್ರಶ್ನೆಗಳು ಮೌನವಾಗುತ್ತವೆ. ಎಲ್ಲ ಉತ್ತರಗಳೂ ನಮ್ಮೊಳಗೇ ಉದಿಸಿದಂತಾಗಿ, ಮನಸ್ಸು ಅಲೆ ಕಳೆದುಕೊಂಡು ತಣ್ಣಗೆ ಸಮಾಧಾನಿಯಾಗಿಬಿಡುತ್ತದೆ. ಇದು ನಾವು ಕವಿಯಾಗಿ ಸಾಧಿಸಬೇಕಿರುವುದು. ಜ್ಞಾನೋದಯಕ್ಕಾಗಿ ಕಾಡು ಮೇಡು ಅಲೆದ ಬುದ್ಧನಂತೆ ಇರಬೇಕು ನಾವು. ಸಂಗೀತದಲ್ಲಿ ಶ್ರುತಿ ಮಾತಾ ಲಯ ಪಿತಾ ಎಂದು ಹೇಳಿಕೊಡುತ್ತಾರೆ. ಹಾಗಾದರೆ ಶ್ರುತಿ ಎಂದರೇನು? ಲಯ ಎಂದರೇನು? ಇದನ್ನು ಯಾವ ಗುರುವೂ ಯಾವ ವಿಶ್ವವಿದ್ಯಾಲಯವೂ ಹೇಳಿಕೊಡಲು ಸಾಧ್ಯವಿಲ್ಲ. ಅದು ಅನುಭವ ಗ್ರಾಹ್ಯ. ಅದನ್ನು ಆಯಾ ಕಲಿಕಾರ್ಥಿಯೇ ತನ್ನ ಸಾಧನೆಯಿಂದ ಕಂಡುಕೊಳ್ಳಬೇಕಾದಂಥದ್ದು. ಕವಿತೆಯೂ ಹಾಗೇ… ಅಂತಃಚಕ್ಷುವಿಗೆ ಗೋಚರಿಸುವಂತದ್ದು.

ಕವಿಯ ಮನಸಲ್ಲಿ ಕವಿತೆಯ ಬೀಜ ಹೇಗೆ ಮೊಳಕೆಯೊಡೆಯುತ್ತದೆ….. ಮೇಲ್ಮಣ್ಣ ಪದರ ಹೊದ್ದು ನೆಲದ ಕಾವಿನಲ್ಲಿ, ಒತ್ತಡದಲ್ಲಿ, ಹಸಿಯಲ್ಲಿ ಹೇಗೆ ಬೀಜವೊಂದು ರಾತ್ರಿ ಕಳೆದು ಬೆಳಗಾಗುವಷ್ಟರೊಳಗೆ ಮೊಳಕೆಯೊಡೆಯುತ್ತದೋ ಹಾಗೆ ಕವಿತೆ ಹುಟ್ಟಬೇಕು. ಬರಿ ಒಂದು ತಿನ್ನುವ ವಿಷಯವನ್ನೇ ತೆಗೆದುಕೊಳ್ಳಿ. ಏನು ತಿನ್ನುವುದು ಊಟವಾ ತಿಂಡಿಯಾ? ಊಟವಾದರೆ ಅನ್ನವಾ ಮುದ್ದೆಯಾ ಚಪಾತಿಯಾ? ನಾರ್ತಾ, ಸೌತಾ? ತಿಂಡಿಯಾದರೆ ಮುಗೀತು… ಹನುಮಂತನ ಬಾಲದಂತಾ ಅವುಗಳ ಮೆನು ಮುಗಿಯುವುದೇ ಇಲ್ಲ. ಆದರೆ ಇನ್ನೊಂದು ಸಂದರ್ಭ. ನೀವೀಗ ಎಲ್ಲೊ ಬಂಧಿಸಿಡಲ್ಪಟ್ಟಿದ್ದೀರಿ, ಹತ್ತಾರು ದಿನದಿಂದ ಊಟವನ್ನೇ ಕೊಟ್ಟಿಲ್ಲ, ಈಗ ನಿಮ್ಮ ಮುಂದೆ ಏನೋ ಒಂಚೂರು ತಿನ್ನುವ ವಸ್ತುವನ್ನು ಇಡಲಾಗಿದೆ… ಈಗೇನು ಮಾಡುತ್ತೀರಿ?! ಇದು ನಾರ್ತಾ ಸೌತಾ? ವೆಜ್ಜಾ ನಾನ್ವೆಜ್ಜಾ? ತಿಂಡಿನಾ ಊಟನಾ? …. ಅಂತೆಲ್ಲಾ ಕೇಳ್ಕೋತಾ ಕೂರ್ತೀರಾ… ಅಥವಾ ಸಿಕ್ಕಿದ್ದನ್ನು ಮೊದ್ಲು ತಿಂದು ಮುಗಿಸ್ತೀರಾ…?! ಈಗ ಬಹುಶಃ ನಮಗೆಲ್ಲ ಆ ತೀವ್ರತೆ ಎಂತಹ ಬಗೆಯದ್ದು ಎಂದು ಅರ್ಥವಾಗಿರುತ್ತದೆ. ಕವಿತೆಯೂ ಸಹ ಹುಟ್ಟಲಿಕ್ಕೆ ಇಂತಹ ತೀವ್ರತೆಯನ್ನು ಬಯಸುತ್ತದೆ.

ಇತ್ತೀಚೆಗೆ ಲಯಬದ್ಧ ಕವಿತೆಗಳು ಮರೆಯಾಗುತ್ತಾ ನಾವೆಲ್ಲ ಗಪದ್ಯಗಳನ್ನು ಬರೆಯುತ್ತಿದ್ದೇವೆ (ಗಪದ್ಯಗಳು- ಗದ್ಯ ಮಾದರಿಯ ಪದ್ಯಗಳು). ಗಪದ್ಯಗಳು ಹಿಂದೆ ಇರಲಿಲ್ಲ ಅಂತಲ್ಲ. ಅಷ್ಟೊಂದು ಜನಪ್ರಿಯವಾಗಿರಲಿಲ್ಲ ಅಥವಾ ಗಪದ್ಯಗಳನ್ನು ಬರೆದು ಯಶಸ್ವಿಯಾದವರ ಸಂಖ್ಯೆ ಕಡಿಮೆ ಇತ್ತು. ಆದರೆ ಇವತ್ತಿನ ಹೊಸ ಪೀಳಿಗೆ ಅನುಸರಿಸುತ್ತಿರುವ ಬಹು ಚಾಲ್ತಿಯಲ್ಲಿರುವ ಮಾದರಿ ಇದು. ಆದರೆ ಗಪದ್ಯದ ಒಳಗೂ ಒಂದು ಲಯವಿದೆ. ಆ ಲಯವನ್ನು ನಾವೆಲ್ಲ ಅಭ್ಯಾಸಬಲದಿಂದ ಕಂಡಿಟ್ಟುಕೊಳ್ಳಬೇಕು. ಇಲ್ಲವಾದರೆ ಗದ್ಯಕ್ಕೂ ಪದ್ಯಕ್ಕೂ ವ್ಯತ್ಯಾಸವಿಲ್ಲದಂತಾಗಿ ಪದ್ಯವೂ ಗದ್ಯದ ಕತ್ತರಿಸಿಟ್ಟ ಭಾಗವೆನ್ನಿಸಿಬಿಡುತ್ತದೆ. ಸರಳವಾಗಿ ಎಲ್ಲವೂ ಅರ್ಥವಾಗಿಬಿಡಬೇಕೆನ್ನುವುದಾದರೆ ಗದ್ಯವನ್ನೇ ಬರೆಯಬಹುದಲ್ಲ. ಕನಿಷ್ಟ ಒಂದು ಮಾರ್ಮಿಕತೆ, ರೂಪಕ, ವಾಚ್ಯಗೊಳ್ಳದಂತೆ ಒಂದು ಸಣ್ಣ ಎಚ್ಚರಿಕೆ ಇಲ್ಲದ ಕವಿತೆಗಳು ಕಾವ್ಯವಾಗಿ ಉಳಿಯುವುದಾ… ಯೋಚಿಸಬೇಕಿದೆ. ಹಾಗಂತ ರೂಪಕಗಳ ವಜ್ಜೆಯನ್ನು ನಿರಾಕರಿಸಲಾಗುವುದಿಲ್ಲ. ಗಪದ್ಯಗಳ ರೀತಿಯಲ್ಲಿಯೇ ಕಥನ ಕವನಗಳು, ಭಾವಗೀತೆಗಳಲ್ಲಿಯೂ ಗದ್ಯವನ್ನು ಹೋಲುವ ಭಾಷಾ ಬಳಕೆಯಾಗುತ್ತಿದೆ. ಆದರೆ ಲಯ ಪ್ರಾಸ ರಿದಮ್ಮನ್ನು ಸಂಪೂರ್ಣ ಕಳೆದುಕೊಂಡ ಭಾವಗೀತೆಗಳು ಯಶಸ್ವಿಯಾಗುವುದು ಕಷ್ಟ.

ಕೆಲವೊಮ್ಮೆ ಯಾವುದೇ ಯಶಸ್ವೀ ಕವಿತೆಯಿರಲಿ ಅದು ತನ್ನ ಆಕೃತಿಯನ್ನು ತನ್ನ ಅಭಿವ್ಯಕ್ತಿಯನ್ನು ತಾನೇ ನಿರ್ಧರಿಸುತ್ತದೆ ಅನಿಸಿಬಿಡುತ್ತದೆ. ಕಾರಣ ಕೆಲವು ಕವಿತೆಗಳು ಇದ್ದಕ್ಕಿದ್ದಂತೆ ಹುಟ್ಟಿ ಬಿಡುತ್ತವೆ ಇನ್ನು ಅವುಗಳನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವಷ್ಟು ಚಂದವಾಗಿ. ಆದರೆ “ಭವನಿಮಜ್ಜನ” ಮತ್ತು “ಲಘಿಮಾ ಕೌಶಲ” ಒಬ್ಬ ಕವಿಗಿರಬೇಕಾದ ಮೂಲ ಗುಣಗಳು. ಸಂದರ್ಭದ ತೀವ್ರತೆಯಲ್ಲಿ ಭಾವುಕ ಪ್ರಲಾಪವಾಗಿಸುವ ಬದಲು ಕವಿತೆಯನ್ನು ಪಾಕಗಟ್ಟಿಸಲಿಕ್ಕೆ ಈ ಗುಣಗಳು ಬೇಕು.

ಕವಿತೆಯನ್ನು ಬರೆಯುವವರಲ್ಲಿಯೂ ಇಷ್ಟೇ ವಿಧ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಹಾಡು ಪಾಡು ಒಂದೊಂದು ನಮೂನಿ. ಮನೋಭಾವವೆಷ್ಟು ವೈವಿಧ್ಯವೋ ಅಷ್ಟೇ ವಿಧದ ಕಾವ್ಯ ಗ್ರಹಿಕೆಯೂ ಇರಲಿಕ್ಕೆ ಸಾಧ್ಯ. ಅವರವರು ನಂಬಿ ನಿಂತ ಸಿದ್ಧಾಂತಗಳಿಗನುಗುಣವಾಗಿ ಮನೋಭೂಮಿಕೆಗನುಗುಣವಾಗಿ ಅವರವರ ಕಾವ್ಯವೂ ಭಿನ್ನವಾಗಿ ರೂಪುಗೊಳ್ಳುತ್ತವೆ.

“ನನ್ನ ಕೃತಿ ಕಲೆಯಲ್ಲ, ನಾನು ಕವಿಯಲ್ಲ” ಎನ್ನುತ್ತಾರೆ ಕುವೆಂಪು. ಹಾಗಾದರೆ ಇದರರ್ಥ ಏನು… ಅವರ ಪಾಲಿಗೆ ಕಲೆಗಾಗಿ ಕಲೆಯಲ್ಲ, ಸಚ್ಚಿದಾನಂದಕ್ಕಾಗಿ ಕಲೆ, ಬಾಳ್ವೆಗಾಗಿ ಕಲೆ. ಸತ್ಯ ಶಿವ ಸುಂದರಕ್ಕೆ ಅವರು ಬೆಲೆ ಕೊಡುತ್ತಾರೆ. ಶಿವಶೂನ್ಯವಾದ ಸೌಂದರ್ಯ ಅವರ ದೃಷ್ಟಿಯಲ್ಲಿ ಬೆಲೆಯಿಲ್ಲದ್ದು.

“ಪೃಥ್ವಿಯಲಿ ಕ್ಲೇಶ ಕಷ್ಟಗಳೆಲ್ಲ ಕೊನೆಮುಟ್ಟಿ
ಸರ್ವರೂ ರಸದ್ರಷ್ಟರಾಗಿ ದರ್ಶನ ಪಡೆದು
ಕಾವ್ಯದಾಸ್ವಾದನೆಗೆ ಸೌಂದರ್ಯ ಸಾಧನೆಗೆ
ಕಲೆಯ ಆರಾಧನೆಗೆ ಮನವೀಯುವಾ ಪುಣ್ಯ
ಸ್ವರ್ಗವೆಂದೈತರುವುದೋ ಕಾಣೆ!”

ಎನ್ನುವುದು ಕುವೆಂಪು ಅವರ ಕೊರಗು. ಇದು ಕಾವ್ಯದ ಬಗ್ಗೆ ಅವರ ಗ್ರಹಿಕೆ ಮತ್ತು ತಹತಹಿಕೆ. ಅವರ ಈ ಮನೋಭಾವವನ್ನು ಅವರ ಎಲ್ಲ ಕೃತಿಗಳುದ್ದಕ್ಕೂ ನೋಡಬಹುದಾಗಿದೆ. ಹೀಗೆ ಪ್ರತಿಯೊಬ್ಬ ಕವಿಯು ತನ್ನ ಅಭಿಮಾನ ಮತ್ತು ಅಸ್ಮಿತೆಗನುಗುಣವಾಗಿ ಕಾವ್ಯ ರಚನೆಯಲ್ಲಿ ತೊಡಗುತ್ತಾನೆ.

ಮನೆ ಕಟ್ಟಲು ಹೇಗೆ ಇಟ್ಟಿಗೆ ಗಾರೆ ಸಿಮೆಂಟು ಮರಳು ಎಂಬೆಪ್ಪತ್ತಾರು ಸಾಧನ ಸಲಕರಣೆಗಳು ಬೇಕಿರುತ್ತವೋ ಹಾಗೆ ಕಾವ್ಯದ ಹೊರಮೈ ಒಳಮೈ ಕಟ್ಟುವಿಕೆಗೂ ಧ್ವನಿ, ಪ್ರತಿಮೆ, ಉಪಮೆ, ಆಕೃತಿ, ಪ್ರತಿಭೆ, ಲಯ, ರೂಪಕ ಅಂತೆಲ್ಲಾ ಕರೆಸಿಕೊಳ್ಳುವ ಹತ್ತು ಹಲವು ತಾಂತ್ರಿಕ ಅಂಶಗಳ ಬಗ್ಗೆ ಅರಿವಿರಬೇಕು. ಹಾಗಾದರೆ ಕಾವ್ಯವೆಂದರೇನು ಅದನ್ನು ಕಟ್ಟುವುದು ಹೇಗೆ ಎನ್ನುವುದನ್ನು ಕಮ್ಮಟಗಳಲ್ಲಿ ಕಾಲೇಜಿನಲ್ಲಿ ಯಾರಾದರೂ ಹೇಳಿಕೊಟ್ಟು ಬರೆಯಲು ಸಾಧ್ಯವಿದ್ದಿದ್ದರೆ ಇವತ್ತು ಆಸೆಪಟ್ಟವರೆಲ್ಲರೂ ಕವಿಗಳಾಗಬಹುದಿತ್ತೇನೋ. ಆದರೆ ಕಾವ್ಯ ಕಿನ್ನರಿ ಯಾರಿಗೆ ಒಲಿಯುತ್ತಾಳೋ ಹೇಳುವುದು ಕಷ್ಟ. ಒಂದು ಭಾಷೆಯ ಸೌಂದರ್ಯ ಮತ್ತು ಲಯವನ್ನು ಬಳಸಿಕೊಂಡು ಕವಿತೆ ಹುಟ್ಟುತ್ತದೆ. ಗದ್ಯ ಏನನ್ನು ಅನುಭವಿಸಬೇಕೆನ್ನುವುದನ್ನು ಹೇಳಿದರೆ, ಪದ್ಯ ಓದುಗನಲ್ಲಿ, ನಿರ್ಧಿಷ್ಟವಲ್ಲದ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದಾದ ಹಲವಾರು ಭಾವಗಳನ್ನು ಹುಟ್ಟುವಂತೆ ಮಾಡುತ್ತದೆ. ಕವಿತೆ ಒಂದು ಭಾಷೆಯ ಸೌಂದರ್ಯ ಸಾಧನ. ಯಾವುದನ್ನು ಶುಷ್ಕ ಪದಗಳಿಂದ, ಭಾವರಹಿತ ಮಾತುಗಳಿಂದ ಮುಟ್ಟಲಾಗುವುದಿಲ್ಲವೋ ಅದನ್ನು, ಮನಸುಗಳನ್ನು ಮೃದುಗೊಳಿಸಬಲ್ಲ, ಕಲ್ಲೆದೆಯನ್ನೂ ಹೂವಾಗಿಸಬಲ್ಲ, ಬತ್ತಿದ ಎದೆಗಳಲ್ಲಿ ಒಲವ ಚಿಲುಮೆ ಚಿಮ್ಮಿಸಬಲ್ಲ ಕವಿತೆಗಳಿಂದಲ್ಲದೆ ಯಾವುದರಿಂದ ತಾನೆ ಮುಟ್ಟಬಹುದು….