ಮೂರನೇ ತರಗತಿ ಮಗುವಿನಿಂದ ಲಕ್ಷದವರೆಗೂ ಸಂಖ್ಯಾ ಬರವಣಿಗೆಯನ್ನು ನಿರೀಕ್ಷಿಸಿದ್ದು ನನ್ನ ಪ್ರಮಾದ ಎಂದು ತಕ್ಷಣವೇ ಹೊಳೆಯಿತು. ಆ ವಿದ್ಯಾರ್ಥಿಯ ಬಳಿ ಹೋದೆ, ಆ ಮಗು‌ಭಯದಿಂದ ಥರಥರ ನಡುಗುತ್ತಾ “ಕಲಿತುಕೊಳ್ಳುವೆ ಮಿಸ್ ಹೊಡಿಬೇಡಿ, ಬೈಬೇಡಿ” ಅಂದಳು. ಆ ಕ್ಷಣ ಕಣ್ಣಾಲಿಗಳು ತುಂಬಿ ಅವಳ ಕೈ ಮೇಲೆ ನನ್ನ ಪೌರುಷದ ಹನಿಗಳು ಬಿದ್ದು ಅವಳ ಕೈಯನ್ನ ತೊಳೆದವು. ಆ ಕಣ್ಣೀರ ಹನಿಗಳು ನಾನು ತಾಳ್ಮೆ ಕಳೆದುಕೊಂಡಿದ್ದರಿಂದ ಪ್ರತಿಫಲಗಳಾಗಿ ನನ್ನನ್ನು ಅಣಕಿಸಿದವು.
ಅನುಸೂಯ ಯತೀಶ್ ಬರೆಯುವ ಮಕ್ಕಳೊಂದಿಗಿನ ಶಿಕ್ಷಕಿಯ ಅನುಭವ ಕಥನದ ಹೊಸ ಸರಣಿ “ಬೆಳೆಯುವ ಮೊಳಕೆ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ನಾನಾಗ ನಾಲ್ಕನೇ ತರಗತಿ ಓದುತ್ತಿದ್ದೆ. ನಮ್ಮ ಊರಿಗೆ ಶಿಕ್ಷಕಿಯೊಬ್ಬರು ವರ್ಗಾವಣೆಯಾಗಿ ಬಂದರು. ಆಗೊಮ್ಮೆ ನಮ್ಮ ಊರಿನಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ಊರಿನ ಜನರೆಲ್ಲ ಸೇರಿದ್ದರು. ಶಿಕ್ಷಕಿಗೂ ಆಹ್ವಾನ ಬಂದಿತ್ತು. ನಮ್ಮೆಲ್ಲರನ್ನು ಕರೆದುಕೊಂಡು ಶಿಕ್ಷಕಿ ಅಲ್ಲಿಗೆ ಹೋದರು. ಅಲ್ಲಿ ನಮ್ಮ ಶಿಕ್ಷಕಿಗೆ ಜನರು ಅದೆಂತ ಅದ್ಭುತ ಗೌರವ ನೀಡಿದರೆಂದರೆ ಅಂತಹ ಆತಿಥ್ಯವನ್ನು ನಾನು ಆ ಮೊದಲು ಕಂಡೇ ಇರಲಿಲ್ಲ. ಆಗ ನಾನು ಕೂಡ ಶಿಕ್ಷಕಿ ಆಗಬೇಕು, ಇದೇ ರೀತಿ ಗೌರವ ಆದರಗಳಿಗೆ ನಾನು ಪಾತ್ರಳಾಗಬೇಕೆಂಬ ಬೀಜ ಆ ಎಳೆಯ ವಯಸ್ಸಿನಲ್ಲೇ ನನ್ನ ಎದೆಯೊಳಗೆ ನಾಟಿಯಾಯಿತು. ನನ್ನ ಅಪ್ಪನಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ. ಅಪ್ಪನಿಗೂ ನಾನು ಶಿಕ್ಷಕಿಯಾಗಬೇಕೆಂಬುದು ಕನಸಾಗಿತ್ತು. ನಮ್ಮ ಸಂಬಂಧದಲ್ಲಿ ಬಹುಪಾಲು ಶಿಕ್ಷಕರು ಇದ್ದದ್ದೇ ಇದಕ್ಕೆ ಕಾರಣ. ಅಪ್ಪ ಆಗಾಗ ಹೇಳುತ್ತಿದ್ದರು “ನಿನಗೆ ಮನೆಯ ಕೆಲಸಗಳಂತೂ ಮಾಡಲು ಬರುವುದಿಲ್ಲ, ಬಿಳಿ ಕಾಗದದ ಮೇಲೆ ಕರಿ ಗೀಟು ಇಡುವುದನ್ನಾದರೂ ಚೆನ್ನಾಗಿ ಕಲಿ ಮಗಳೇ. ಶಿಕ್ಷಕಿಯಾಗಿ ಕಪ್ಪು ಹಲಗೆಯ ಮುಂದೆ ನಿಲ್ಲುವುದನ್ನು ನಾನು ನೋಡಬೇಕು” ಎನ್ನುತ್ತಿದ್ದರು. ಇದು ನನ್ನ ಕನಸನ್ನ ಚಿಗುರಿಸಿತು. ಜೊತೆಗೆ ಅಕ್ಕನ ಒತ್ತಾಸೆಯೂ ಇದೇ ಆಗಿತ್ತು.

ಕಾಲೇಜು ಸೇರಿದಾಗ ನನ್ನ ಗುರುಗಳಾದ ಶ್ರೀ ಮಾಗಡಿ ರಂಗಯ್ಯನವರು “ನೀನು ತುಂಬಾ ಪ್ರತಿಭಾವಂತೆ, ಮೇಲಾಗಿ ಅಂತಃಕರಣವುಳ್ಳ ಹೆಣ್ಣು ಮಗಳು. ನೀನು ಶಿಕ್ಷಕರ ವೃತ್ತಿಗೆ ಹೇಳಿ ಮಾಡಿಸಿದ ಹಾಗಿರುವೆ ಚೆನ್ನಾಗಿ ಓದು ಶಿಕ್ಷಕಿಯಾಗು” ಎಂದು ಹುರಿದುಂಬಿಸಿದರು. ಅವರೆಲ್ಲರ ನಿರೀಕ್ಷೆಗಳು ನನ್ನನ್ನು ಶಿಕ್ಷಕ ವೃತ್ತಿಯವರೆಗೂ ಕರೆತಂದು ನಿಲ್ಲಿಸಿದವು.

ಅಂದು ನನ್ನ ವೃತ್ತಿ ಬದುಕಿನ ಮೊದಲ ದಿನ. ಮನದೊಳಗೆ ಕಾಮನಬಿಲ್ಲಿನ ತಹರೆವಾರಿ ರಂಗು ತುಂಬಿಕೊಂಡು ಕೊಠಡಿಯೊಳಗೆ ಪ್ರವೇಶಿಸಿದೆ. ತುಂಬಾ ಹಿಂದುಳಿದ ಪ್ರದೇಶವದು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಯೋಜನೆಯಡಿ ಊರಿಗೊಂದು ಶಾಲೆ ಮಾಡಿದ್ದರಿಂದ ಅಲ್ಲೊಂದು ಶಾಲೆ ತಲೆಯೆತ್ತಿತ್ತು. ಹೊಸ ಶಾಲೆಯಾದ್ದರಿಂದ ಕಟ್ಟಡದ ಕಾಮಗಾರಿ ಇನ್ನೂ ಸಾಗುತ್ತಿತ್ತು. ಅದುವರೆಗೂ ಶಾಲೆ ಆ ಊರಿನ ದೊಡ್ಡ ಸಮುದಾಯ ಭವನದಲ್ಲಿ ನಡೆಯುತ್ತಿತ್ತು. ಆ ಕೋಣೆ ಸುಮಾರು 30 ಅಡಿ ಅಗಲ, 50 ಅಡಿ ಉದ್ದವಿತ್ತು. ನಮ್ಮ ಹೈಸ್ಕೂಲ್‌ನಲ್ಲಿ ಕಾರ್ಯಕ್ರಮಗಳನ್ನು ಮಾಡಲು ಮೀಸಲಾಗಿದ್ದ ಹಾಲ್‌ಗಿಂತ ದೊಡ್ಡದಾಗಿತ್ತು. ಮೊದಲೇ ನಾನು ಬರುವ ನಿರೀಕ್ಷೆಯಲ್ಲಿದ್ದ ಆ ಶಾಲಾ ಮಕ್ಕಳು ನಾನು ಶಾಲಾ ಕೊಠಡಿ ಪ್ರವೇಶಿಸಿದಾಗ ಪ್ರಥಮ ಬಾರಿ ನನ್ನೆಡೆ‌ ಬೀರಿದ ಆತ್ಮೀಯ ನೋಟ ನನ್ನನ್ನು ಆವರಿಸಿಕೊಂಡಿತು.

ಆ ವಿಶಾಲ ಕಟ್ಟಡದಲ್ಲಿ ಗಾಳಿ ಬೆಳಕು ಹೇರಳವಾಗಿ ಇತ್ತು. ಬೆಳಕಿಗಾಗಿ ಥೆರೇಸ್‌ನಲ್ಲಿ ತೆರೆದಿದ್ದ ಗಾಜಿನ ಕಿಟಕಿಗಳಲ್ಲಿ ಬಿಸಿಲು ನೇರವಾಗಿ ನುಸುಳುತ್ತಿತ್ತು. ಅಲ್ಲಿ ಬಿಸಿಲು ಕೋಲುಗಳದೇ ಸಾಮ್ರಾಜ್ಯ. ಮಕ್ಕಳದು ಹುಡುಗಾಟಿಕೆ ಬುದ್ಧಿ ಅಲ್ವಾ? ಅಲ್ಲಿದ್ದ ಮಕ್ಕಳಲ್ಲಿ ಹತ್ತಾರು ಜನ ಎದ್ದು ಹೋಗಿ ಆ ಕೊಠಡಿಯ ತುಂಬ ಮೂಡಿದ್ದ ಬಿಸಿಲು ಕೋಲುಗಳಲ್ಲಿ ಕಾಣುತ್ತಿದ್ದ ಧೂಳಿನ ಕಣಗಳನ್ನು ಹಿಡಿಯುತ್ತಾ ಸಂಭ್ರಮಿಸುತ್ತಿದ್ದರು.
ಅಂಗೈ ಅಗಲಿಸಿ, ಧೂಳಿನ ಕಣಗಳನ್ನು ಮುಷ್ಟಿಯೊಳಗೆ ಬಂಧಿಸುವುದು, ತೆರೆದು ನೋಡುವುದು, “ಅಯ್ಯೋ ಸಿಗಲಿಲ್ಲ” ಎಂದು ಮತ್ತೆ ಮತ್ತೆ ಪ್ರಯತ್ನಿಸುವುದು. ಈಗಲೂ ಆ ದೃಶ್ಯ ನನ್ನೊಳಗೆ ಅಳಿಯದ ಅಚ್ಚೆಯಾಗಿದೆ.

ಶಾಲೆಯೊಳಗೆ ಪ್ರವೇಶಿಸುತ್ತಿದ್ದಂತೆ ಸರ್ಕಾರದಿಂದ ಉಚಿತವಾಗಿ ನೀಡುವ ಯೂನಿಫಾರ್ಮ್‌ನಲ್ಲಿ ಮಕ್ಕಳು ಕಂಗೊಳಿಸುತ್ತಿದ್ದರು. ಅವರು ಗಾಢ ನೀಲಿ ಬಣ್ಣದ ಲಂಗ ಮತ್ತು ನಿಕ್ಕರ್ ಹಾಗೂ ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ಅ ದೃಶ್ಯ ಕಂಡೊಡನೆ ನನ್ನ ಮನವು ಬಾಲ್ಯದ ಶಾಲಾ ದಿನಗಳ ಬಾಗಿಲು ಬಡಿದು ಒಳ ಪ್ರವೇಶಿಸಿತು. ಆಗಿನ್ನು ಉಚಿತ ಸಮವಸ್ತ್ರ ಶಾಲೆಗಳಿಗೆ ನೀಡುತ್ತಿರಲಿಲ್ಲ. ಆಗೆಲ್ಲ ಶಾಲೆ ಪ್ರಾರಂಭವಾಗಿ ಎರಡು ಮೂರು ತಿಂಗಳವರೆಗೂ ಶಿಕ್ಷಕರಿಂದ “ಯೂನಿಫಾರ್ಮ್ ಹೊಲಿಸಿಕೊಳ್ಳಿ, ಬಣ್ಣದ ಬಟ್ಟೆಗಳಲ್ಲಿ ಶಾಲೆಗೆ ಬರುವಂತಿಲ್ಲ…” ಎಂಬ ಆದೇಶ ಶಾಲಾ ಪ್ರಾರ್ಥನೆಯಂತೆ ನಿತ್ಯ ಪಠಣವಾಗುತ್ತಿತ್ತು. ಸಿರಿವಂತರ ಮಕ್ಕಳು ಮಾತ್ರ ಸಮಯಕ್ಕೆ ಸರಿಯಾಗಿ ಯೂನಿಫಾರ್ಮ್ ಧರಿಸಿಕೊಂಡು ಶಾಲೆಗೆ ಬರುತ್ತಿದ್ದರು. ಇದೇ ಕಾರಣ ಕೇಳಿ ಕೇಳಿ ಸಾಕಾಗಿದೆ.. ಎಂಬ ಗುರುಗಳ ಮಾತು ಕೇಳದೆ ಪುಸ್ತಕ ತೆರೆದ ನೆನಪೇ ಇಲ್ಲ. ಇದು ಸಾಲದು ಎಂಬಂತೆ ಅನುಕೂಲಸ್ಥ‌ ಹುಡುಗರ ಕೀಟಲೇ ಬೇರೆ ಜೊತೆಯಾಗುತ್ತಿತ್ತು. ನಾವೆಲ್ಲ ‌ಈಗಿನ ಮಕ್ಕಳಂತೆ ಸೂಕ್ಷ್ಮ ಮನಸ್ಥಿತಿಯವರು ಆಗಿರಲಿಲ್ಲ. ಅವೆಲ್ಲ ಅವಮಾನ ಎಂದು ನಮಗೆಂದು ಅನಿಸಲೇ ಇಲ್ಲ. ಮನೆಯ ಪರಿಸ್ಥಿತಿಯ ಕೈಗೊಂಬೆಗಳು ನಾವು ಎಂಬ ಅರಿವು ಬಹಳವಿತ್ತು. ಅಂತೂ ಬೆಳೆದ ಅವರೆಕಾಯಿಯನ್ನೋ, ತೊಗರಿ ಕಾಯಿಯನ್ನೋ ಮಾರಿ ಬಂದ ಹಣದಲ್ಲಿ ಯೂನಿಫಾರ್ಮ್ ಹೊಲಿಸಿಕೊಡುವಷ್ಟರಲ್ಲಿ ಅರ್ಧ ವರ್ಷ ಮುಗಿದು ಹೋಗಿರುತ್ತಿತ್ತು. ವಾರದ ನಾಲ್ಕು ದಿನಗಳು ಅದನ್ನೇ ಹಾಕಿ ಒಗೆದು, ಹಾಕಿ ಒಗೆದು ಬಣ್ಣ ಮಾಸಿರುತ್ತಿತ್ತು. ಆದರೂ ನಮ್ಮ ಕಣ್ಣುಗಳಲ್ಲಿನ ಆತ್ಮವಿಶ್ವಾಸದ ರಂಗು ಮಾತ್ರ ಮಾಸುತ್ತಲೇ ಇರಲಿಲ್ಲ.

ಯೂನಿಫಾರ್ಮ್ ಎಂಬ ಶಬ್ದ ಕಿವಿಗೆ ಬಿದ್ದರೆ ಈಗಲೂ ನಗು ಬರುತ್ತದೆ. ಮೇಷ್ಟ್ರರ ಬಾಯಿಯ ಉಚ್ಚಾರಣೆಯ ದೋಷವೋ? ನಮ್ಮ ಗ್ರಹಿಕೆಯ ಸೋಲೋ? ತಿಳಿಯದು. ನಮ್ಮ ಬಾಯಿಂದ “ನೀಲಿಫಾರಂ” ಎಂದೇ ಹೇಳಲ್ಪಡುತ್ತಿತ್ತು. ಅದರಲ್ಲಿ ನಮ್ಮ ತಪ್ಪಾದರೂ ಏನಿದೆ? ಆಗತಾನೇ ನಾವು ಇಂಗ್ಲಿಷ್ ಕಲಿಯಲು ಆರಂಭ ಮಾಡಿದ್ದೆವು. ಆ ಯೂನಿಫಾರ್ಮ್ ಬಣ್ಣ ನೀಲಿಯಾಗಿತ್ತು. ಅದು ನೀಲಿಫಾರಂ ಆಗಿ ನಮ್ಮೆಲ್ಲರ ಬಾಯಲ್ಲಿ ನಲಿದಾಡುತ್ತಿತ್ತು. ಮೇಡಂ, ನಮಸ್ತೆ ಹೊಸ ಟೀಚರ್ ಬರುತ್ತಾರೆ ಅಂದಿದ್ದರು. ನೀವೇನಾ, ಬನ್ನಿ ಒಳಗೆ ಎಂದು ಆ ಶಾಲೆಯ ಮುಖ್ಯ ಶಿಕ್ಷಕರು ಕರೆದಾಗಲೇ ನೆನಪಿನ ಪುಟವನ್ನು ಜಿಗಿದು ವಾಸ್ತವ ಪ್ರಪಂಚಕ್ಕೆ ನಾನು ಕಾಲಿಟ್ಟಿದ್ದು.

ಅಂತೂ ಮುಖ್ಯ ಶಿಕ್ಷಕರ‌ ಆಪ್ತ ಮಾತುಕತೆಯ ನಂತರ ತರಗತಿ ಪ್ರವೇಶಿಸಿದೆ. ಶಿಕ್ಷಕ ತರಬೇತಿಯಲ್ಲಿ ಶಿಕ್ಷಕರ ಜವಾಬ್ದಾರಿಗಳೇನು? ಹೇಗೆ ಬೋಧಿಸಬೇಕು? ಸಮಾಜಕ್ಕೆ ಎಂತಹ ಪ್ರತಿಭೆಗಳನ್ನು ಕಾಣಿಕೆಯಾಗಿ ನೀಡಬೇಕು ಎಂಬೆಲ್ಲ ಥಿಯರಿ ಕೇಳಿದ್ದೆವು. ನಾನು ಈಗಲೇ ಹೋಗಿ ಅವುಗಳನ್ನೆಲ್ಲ ಒಮ್ಮೆಗೆ ಸಾಧಿಸಿ ಬಿಡಬೇಕೆಂಬ ಹುಮ್ಮಸ್ಸು, ಬಿಸಿ ರಕ್ತ ನನ್ನಲ್ಲಿ ಅದಮ್ಯ ಚೈತನ್ಯ ತುಂಬಿತು. ಎಲ್ಲವನ್ನು ಇಂದೆ ಕಲಿಸಿ ಬಿಡುತ್ತೇನೆ ಎಂಬ ಆತ್ಮವಿಶ್ವಾಸದೊಂದಿಗೆ ಶಾಲೆ ಪ್ರವೇಶಿಸಿದೆ. ತರಬೇತಿಯಲ್ಲಿ ಕಲಿತ ಥಿಯರಿಗಿಂತ ಪ್ರಾಯೋಗಿಕ ಜ್ಞಾನ ಬಹು ಮುಖ್ಯ ಎಂಬುದನ್ನ ಅರ್ಥ ಮಾಡಿಸುವ ಘಟನೆ ಅಂದೆ ನಡೆದುಹೋಯಿತು.

ಮಕ್ಕಳೆಲ್ಲ ಟೀಚರ್ ನಾಳೆಯಿಂದ ಮಾಸ್ಟರ್ ಜೊತೆಗೆ ನೀವು ನಮಗೆ ಪಾಠ ಮಾಡುತ್ತೀರಾ ಅಂದರು. ಹೌದು ಮಕ್ಕಳೇ ಮಾಡ್ತೀನಿ ಅಂದಾಗ ಎಲ್ಲರ ಮುಖದಲ್ಲಿ ಹೊಸ ಹುರುಪು, ಹೊಳಪು ಕಂಡಿತು. ಮಕ್ಕಳು ಪುಸ್ತಕವನ್ನು ತಂದು ಟೇಬಲ್ ಮೇಲೆ ಇಟ್ಟು “ಟೀಚರ್ ಪಾಠ ಮಾಡಿ” ಅಂದರು. ಮಕ್ಕಳೇ ನಾನು ನಾಳೆಯಿಂದ ನಿಮಗೆ ಪಾಠ ಮಾಡ್ತೀನಿ. ಈಗ ನೀವು ಏನನ್ನ ಕಲಿತಿದ್ದೀರಾ ಅನ್ನೋದು ನನಗೆ ತಿಳಿಯಬೇಕಲ್ವಾ ಎಂದು ಪ್ರಶ್ನಿಸಿದೆ. ನಿಮಗೆಲ್ಲ ಏನು ಬರುತ್ತೆ ಹೇಳಿ ನೋಡೋಣ ಅಂದೆ. ಮಕ್ಕಳೆಲ್ಲ ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ತಾವು ಕಲಿತಿದ್ದನ್ನೆಲ್ಲ ವರದಿ ಒಪ್ಪಿಸಿದರು. ಎಲ್ಲರ ಮನಸ್ಸಲ್ಲೂ ಒಂದೇ ಭಾವ; ನಾನು ಟೀಚರಿಗೆ ಇಷ್ಟ ಆಗಬೇಕು, ಹೊಸ ಟೀಚರ್ ಇಂದ ಗುಡ್ ಎನಿಸಿಕೊಳ್ಳಬೇಕು ಎನ್ನುವ ಭಾವ ಎದ್ದು ಕಾಣುತ್ತಿತ್ತು. ಮಕ್ಕಳ ಕಲಿಕಾ ಉತ್ಸಾಹ ನೋಡಿ ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಈ ಹೊಸ ಅನುಭವ ನನಗೊಂದು ರೀತಿಯ ರೋಮಾಂಚನ ಉಂಟು ಮಾಡಿತು. ನಾನೀಗ ಶಿಕ್ಷಕಿ, ಇದು ನನ್ನ ಶಾಲೆ, ಇವರೆಲ್ಲ ನನ್ನ ಮಕ್ಕಳು ಎಂಬುದನ್ನು ನೆನೆದು ಪುಳಕಗೊಂಡೆ, ಮನಸ್ಸು ಸಂತೋಷದಿಂದ ಆಗಸದಲ್ಲಿ ತೇಲಾಡಿತು. ದೇಹಕ್ಕೆ ಮಾತ್ರ ರೆಕ್ಕೆ ಇರಲಿಲ್ಲ ಅಷ್ಟೇ.

ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ ಎಲ್ಲದರಲ್ಲೂ ಇದುವರೆಗೂ ಆಗಿರುವ ಪಾಠಗಳ ವರದಿ ಒಪ್ಪಿಸಿದರು. ಆಯ್ತು ಮಕ್ಕಳೇ ಈಗ ಯಾವ ವಿಷಯ ಪಾಠ ಮಾಡೋಣ? ನಿಮಗೆ ಯಾವುದು ತುಂಬಾ ಇಷ್ಟ? ಎಂದೆ. ಎಲ್ಲರೂ ಗಣಿತ ಗಣಿತ ಎಂದು ಒಕ್ಕೊರಲಿನಿಂದ ಕಿರುಚಿದರು. ಅವರ ಕಿರುಚಾಟ ನನಗೆ ಒಂದಿಷ್ಟು ಕಿರಿಕಿರಿ ಎನಿಸಿತು. ಕಾರಣ ನಾವು ಶಿಕ್ಷಕ ತರಬೇತಿಯ ಪ್ರಾಯೋಗಿಕ ಪಾಠ ಬೋಧನೆಯಲ್ಲಿ ತೊಡಗಿದಾಗ ಮೊದಲೇ ಅವರ ಶಿಕ್ಷಕರ ನೀತಿ ಬೋಧೆಯಲ್ಲಿ ಗಪ್ ಚಿಪ್ ಆಗಿ ಕುಳಿತು ಪಾಠ ಕೇಳುತ್ತಿದ್ದ ಮಕ್ಕಳ ಮುಂದೆ ಇವರ ಆರ್ಭಟ ಜೋರೆನಿಸಿತು. ‌ಆದರೂ ‘ಗಣಿತ ಎಂದರೆ ಕಬ್ಬಿಣದ ಕಡಲೆ’ ಎಂಬ ಮಾತುಗಳೇ ಜನಜನಿತವಾಗಿರುವ ಕಾಲದಲ್ಲಿ ಗಣಿತಕ್ಕೆ ಭಯ ಪಡದೆ ಇಷ್ಟಪಡುವ ಮಕ್ಕಳನ್ನು ಕಂಡು ಹೆಮ್ಮೆಯ ಭಾವ ಮೂಡಿತು. ಸರಿ ಮಕ್ಕಳೇ ಗಣಿತದಲ್ಲಿ ಏನೇನು ಬರುತ್ತೆ ಎಂದೆನು. ಅದು ಮೂರನೇ ತರಗತಿ. ಮಕ್ಕಳು ತಾವು ಕಲಿತ ವಿಷಯಗಳನ್ನು ಹೇಳುತ್ತಾ ಸಾಗಿದರು. ನಾನು ಅವುಗಳನ್ನು ಕಪ್ಪು ಹಲಗೆಯ ಮೇಲೆ ಪಟ್ಟಿ ಮಾಡುತ್ತಾ ಹೋದೆ. ಮಕ್ಕಳು ಇಷ್ಟೆಲ್ಲಾ ಕಲಿತಿರುವುದು ನೋಡಿ ನನ್ನ ಬಾಲ್ಯ ನೆನೆದು ಸಂಕೋಚವೆನಿಸಿತು. ನಾನು ಐದನೇ ತರಗತಿಯಲ್ಲಿಯೂ ಇಷ್ಟೊಂದು ಕಲಿತಿರಲಿಲ್ಲ. ಇಂದಿನ ಮಕ್ಕಳು ಎಷ್ಟು ಜಾಣರು ಎನಿಸಿತು.

ಮಕ್ಕಳೇ ನಿಮಗೆಲ್ಲ ಸಂಖ್ಯೆಗಳು ಎಲ್ಲಿವರೆಗೂ ಬರುತ್ತೆ ಎಂದೆ. ಕೆಲವರು 100, ಕೆಲವರು 500, ಮತ್ತೆ ಕೆಲವರು 900 ಎಂದರು. ಸರಿ ಬನ್ನಿ ಕಪ್ಪು ಹಲಗೆಯ‌ ಮೇಲೆ ಬರೆಯಿರಿ ಎಂದಿದ್ದೆ ತಡ ನಾಗವೇಣಿ ಎಂಬ ವಿದ್ಯಾರ್ಥಿನಿ ಎಲ್ಲರನ್ನೂ ತಳ್ಳಿಕೊಂಡು ಮುನ್ನುಗ್ಗಿ ಬಂದು ನನ್ನ ಕೈಲಿದ್ದ ಸೀಮೆ ಸುಣ್ಣವನ್ನು ಕಸಿದುಕೊಂಡಳು. “ಟೀಚರ್ ನನಗೆ ಒಂದು ಲಕ್ಷದವರೆಗೂ ಬರೆಯಲು ಬರುತ್ತೆ ನಾನೇ ಮೊದಲು ಬರಿಬೇಕು” ಎಂದಳು. ಲಕ್ಷ ಎನ್ನುವ ಮಾತು ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು‌. ಸರಿ ಹೇಳು ನೋಡೋಣ ಎಂದೆ. ಇಲ್ಲ ಮಿಸ್ ಅದನ್ನ ಹೇಳುವುದಿಲ್ಲ. ಬೋರ್ಡ್ ಮೇಲೆ ನಾನೇ ಬರೆಯುತ್ತೇನೆ ಅಂದಳು. ಮತ್ತಷ್ಟು ಖುಷಿ ಆಯ್ತು.

ಅಲ್ಲಿದ್ದ ಮಕ್ಕಳಲ್ಲಿ ಹತ್ತಾರು ಜನ ಎದ್ದು ಹೋಗಿ ಆ ಕೊಠಡಿಯ ತುಂಬ ಮೂಡಿದ್ದ ಬಿಸಿಲು ಕೋಲುಗಳಲ್ಲಿ ಕಾಣುತ್ತಿದ್ದ ಧೂಳಿನ ಕಣಗಳನ್ನು ಹಿಡಿಯುತ್ತಾ ಸಂಭ್ರಮಿಸುತ್ತಿದ್ದರು. ಅಂಗೈ ಅಗಲಿಸಿ, ಧೂಳಿನ ಕಣಗಳನ್ನು ಮುಷ್ಟಿಯೊಳಗೆ ಬಂಧಿಸುವುದು, ತೆರೆದು ನೋಡುವುದು, “ಅಯ್ಯೋ ಸಿಗಲಿಲ್ಲ” ಎಂದು ಮತ್ತೆ ಮತ್ತೆ ಪ್ರಯತ್ನಿಸುವುದು. ಈಗಲೂ ಆ ದೃಶ್ಯ ನನ್ನೊಳಗೆ ಅಳಿಯದ ಅಚ್ಚೆಯಾಗಿದೆ.

ಆ ಕಪ್ಪು ಹಲಗೆ ಸುಮಾರು ನಾಲ್ಕು ಅಡಿ ಉದ್ದ, ಆರು ಅಡಿ ಅಗಲವಿತ್ತು. ಅವಳು ಬೋರ್ಡಿನ ಮೇಲೆ ನಮೂದಿಸಿದ್ದ ಡೇಟು, ದಾಖಲಾತಿ, ಹಾಜರಾತಿಗಳನ್ನೆಲ್ಲ ಅಳಿಸಿದಳು. “ನಾನು ಯಾಕಮ್ಮ, ಅದನ್ನೆಲ್ಲ ಅಳಿಸುವೆ.. ಕೆಳಗೆ ಬರೆ” ಅಂದೆ. ಇರಿ ಟೀಚರ್, ಎನ್ನುತ್ತಾ ನನ್ನ ಮಾತು ಕಿವಿಯ ಮೇಲೆ ಹಾಕಿಕೊಳ್ಳದೆ ಬರೆಯ ತೊಡಗಿದಳು. ಕಪ್ಪು ಹಲಗೆಯ ಮೇಲ್ಬಾಗದ ತುದಿಯಲ್ಲಿ ಸಂಖ್ಯೆ 1ನ್ನು ಬರೆದು ಅದರ ಮುಂದೆ ಸೊನ್ನೆಗಳನ್ನು ಬರೆಯುತ್ತ ಹೋದಳು. ಆ ಸಾಲು ಮುಗಿದಂತೆ ಕೆಳಗಿನ ಸಾಲಲ್ಲಿ ಸೊನ್ನೆ ಮುಂದುವರಿಸಿದಳು. ನಾನು “ನಾಗವೇಣಿ, ನಾಗವೇಣಿ, ಸಾಕು ನಿಲ್ಲಿಸು” ಎಂದು ಕೂಗುತ್ತಲೇ ಇದ್ದೆ. ಅವಳು ಒಂದು ಲಕ್ಷ ಬರೆಯುವುದರೊಳಗೆ ಮುಗ್ಧಳಾಗಿದ್ದಳೇ ವಿನಃ ನನ್ನ ಮಾತಿನ ಕಡೆ ಗಮನ ನೀಡಲಿಲ್ಲ. ಅಂತೂ ಇಂತೂ ಕಪ್ಪು ಹಲಗೆ ಸೊನ್ನೆಯಿಂದ ಪೂರ್ಣಗೊಂಡಿತು. ದೂರದಿಂದ ನೋಡಲು ಆಗಸದ ತಾರೆಗಳಂತೆ ಕಂಡರೂ ಅವಳು ಬರೆದಿದ್ದನ್ನು ನೋಡಿ ಕೋಪ ಉಕ್ಕಿತು.

ನಾನು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಬರೆದಿದ್ದು ಮುಗಿಯಿತಾ? ಅಂದೆ. ಇಲ್ಲ ಮಿಸ್ ಬೋರ್ಡ್ ತುಂಬಾ ಚಿಕ್ಕದು. ಅದಕ್ಕೆ ಅರ್ಧ ಲಕ್ಷ ಆಯಿತು ಇನ್ನ ಅರ್ಧಲಕ್ಷ ಬರೆಯಬೇಕು ಎನ್ನುತ್ತಾ ಕೊಠಡಿಯ ಇನ್ನೊಂದು ಬದಿಯಲ್ಲಿದ್ದ ಕಪ್ಪು ಹಲಗೆಯ ಕಡೆಗೆ ಓಡಿದಳು. ನನ್ನ ರಕ್ತ ಕುದಿಯಿತು. ಕೋಪವೇಶ ಒಟ್ಟಿಗೆ ಬಂದವು. ಬಾ ಕುಳಿತುಕೋ ಇದೇನಾ ನೀನು ಬರೆಯೋದು, ಒಂದು ಲಕ್ಷಕ್ಕೆ ಎಷ್ಟು ಸೊನ್ನೆ ಅಂತಾನೇ ಗೊತ್ತಿಲ್ಲ ಅಂತಹುದರಲ್ಲಿ ನಾನೇ ಮೊದಲು ಬರೆಯಬೇಕು, ಲಕ್ಷದವರೆಗೂ ಎಂದು ಎಲ್ಲರನ್ನೂ ದಬ್ಬಿಕೊಂಡು ಓಡಿ ಬಂದೆ ಎಂದು ಗದರಿದೆ.

ನಾನು ಕಟ್ಟಿದ್ದ ಆಶಾ ಗೋಪುರ ಒಮ್ಮೆಲೇ ಕುಸಿದು ಬಿದ್ದಂತಾಯಿತು. ಆ ಮಗುವಿನ ಮುಖದಲ್ಲಿ ಅವಮಾನದ ಛಾಯೆ ಎದ್ದು ಕಾಣುತ್ತಿತ್ತು. ನಾ ಕಪ್ಪು ಹಲಗೆ ಬಳಿ ಹೋಗಲೇಬಾರದೆಂಬ ಬೇಸರದ ಗೆರೆ ಕೂಡ ಕಾಣಿಸಿತು. ಒಂದೇ ನಿಮಿಷದಲ್ಲಿ ನನ್ನ ತಪ್ಪು ನನಗೆ ಅರಿವಾಯಿತು. ಆ ಮಗುವಿನ ತಪ್ಪಾದರೂ ಏನಿದೆ? ನಾನು ಶಿಕ್ಷಕಿಯಾಗಿ ನನಗೆ ಆ ಮಗುವಿನ ವಯಸ್ಸಿನ ಪರಿವಿರಬೇಕಿತ್ತು. ಮೂರನೇ ತರಗತಿ ಮಗುವಿನಿಂದ ಲಕ್ಷದವರೆಗೂ ಸಂಖ್ಯಾ ಬರವಣಿಗೆಯನ್ನು ನಿರೀಕ್ಷಿಸಿದ್ದು ನನ್ನ ಪ್ರಮಾದ ಎಂದು ತಕ್ಷಣವೇ ಹೊಳೆಯಿತು. ಆ ವಿದ್ಯಾರ್ಥಿಯ ಬಳಿ ಹೋದೆ, ಆ ಮಗು‌ಭಯದಿಂದ ಥರಥರ ನಡುಗುತ್ತಾ “ಕಲಿತುಕೊಳ್ಳುವೆ ಮಿಸ್ ಹೊಡಿಬೇಡಿ, ಬೈಬೇಡಿ” ಅಂದಳು. ಆ ಕ್ಷಣ ಕಣ್ಣಾಲಿಗಳು ತುಂಬಿ ಅವಳ ಕೈ ಮೇಲೆ ನನ್ನ ಪೌರುಷದ ಹನಿಗಳು ಬಿದ್ದು ಅವಳ ಕೈಯನ್ನ ತೊಳೆದವು. ಆ ಕಣ್ಣೀರ ಹನಿಗಳು ನಾನು ತಾಳ್ಮೆ ಕಳೆದುಕೊಂಡಿದ್ದರಿಂದ ಪ್ರತಿಫಲಗಳಾಗಿ ನನ್ನನ್ನು ಅಣಕಿಸಿದವು.

ಆ ಮಗುವಿಗೆ ಗದರಿದ್ದು ನೋಡಿ ಉಳಿದ ಮಕ್ಕಳು ಭಯ ಬಿದ್ದವು ಅನಿಸುತ್ತೆ. ಅದುವರೆಗೂ ಕೊಠಡಿಯೊಳಗೆ ಕೇಳುತ್ತಿದ್ದ ಮಕ್ಕಳ ಗದ್ದಲ, ಗುಜುಗುಜು, ಶಬ್ದ, ನಗು ಉಲ್ಲಾಸ ಉತ್ಸಾಹ ಎಲ್ಲವೂ ಮಾಯವಾಗಿ ಇಡೀ ತರಗತಿ ನಿಶಬ್ದವಾಗಿ ನೀರವ ಮೌನ ಆವರಿಸಿತು. ಮಕ್ಕಳ ಕಲರವದಿಂದ ಆಹ್ಲಾದಕರವಾಗಿದ್ದ ತರಗತಿ ನನ್ನ ದುಡಿಕಿನಿಂದ ಕಳಾಹೀನವಾಗಿ ನೀರಸವೆನಿಸತೊಡಗಿತು. ಆ ವಾತಾವರಣ ಉಸಿರುಗಟ್ಟುವಂತಾಯಿತು. ‌ಬಹುಬೇಗ ಎಚ್ಚೆತ್ತುಕೊಂಡ ನಾನು‌ ತಕ್ಷಣ ಆ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಸಾರಿ ಪುಟ್ಟ, ಇದರಲ್ಲಿ ನಿನ್ನದೇನು ತಪ್ಪಿಲ್ಲ. ತಪ್ಪೆಲ್ಲ ನನ್ನದೇ ಅಂದೇ. ನಮಗೂ ಆ ಮಗು ಕತ್ತೆತ್ತಿ ನನ್ನ ಮುಖವನ್ನು ಒಮ್ಮೆ ನೋಡಿ ಮುಗುಳ್ನಕ್ಕಿತು. ಸಾವಿರ ಬಲ್ಬುಗಳು ಒಟ್ಟಿಗೆ ಬೆಳಗಿದಂಥ ಅನುಭೂತಿ ಮಗುವಿನ ಕಂಗಳಲ್ಲಿ ಕಾಣಿಸಿತು.

“ನೀವು ಸಾರಿ ಹೇಳಬೇಡಿ, ನಮ್ಮಮ್ಮ ಮಿಸ್ ಹೇಳಿದ್ದನ್ನೆಲ್ಲ ಕೇಳಬೇಕು ಅಂದಿದ್ದಾರೆ…” ಅಂದಾಗ ಮಕ್ಕಳು ನನಗಿಂತ ಎಷ್ಟು ಜಾಣರು, ಪ್ರಬುದ್ಧ ಮನಸು ಅವರದು ಎನಿಸಿತು. ನಾವೇ ಅಪ್ರಬುದ್ಧವಾಗಿ ಬಿಡುತ್ತೇವೆ ಅನಿಸಿತು. ಕೆಲವೊಮ್ಮೆ ನನ್ನ ಅವಿವೇಕದ ವರ್ತನೆಯಿಂದ ನನಗೆ ನಾಚಿಕೆಯಾಯಿತು.

ಆಮೇಲೆ ಹುಡುಗಿಯನ್ನು ಸಮಾಧಾನದಿಂದ ಕರೆದು ಹತ್ತಿರ ಕೂಡಿಸಿಕೊಂಡು ನಿನಗೆ ಒಂದು ಲಕ್ಷಕ್ಕೆ ಇಷ್ಟೊಂದು ಸನ್ನೆ ಹಾಕಬೇಕು ಅಂತ ಯಾರು ಹೇಳಿಕೊಟ್ಟರು? ಅಂದಾಗ ಮಗುವಿನ ಉತ್ತರ ಹೀಗಿತ್ತು. “ನಮ್ಮ ಅಪ್ಪ ಅಮ್ಮ ನಮ್ಮ ಅತ್ತೆಯ ಮದುವೆ ಮಾಡಲು ಒಂದು ಲಕ್ಷ ದುಡ್ಡು ಬೇಕೆಂದು ಮಾತನಾಡುತ್ತಿದ್ದರು. ನಾನು ಒಂದು ಲಕ್ಷ ಅಂದ್ರೆ ಎಷ್ಟು ಅಂತ ನಮ್ಮಪ್ಪನ ಕೇಳಿದೆ ನಿನಗೆ ಅದನ್ನ ಎಣಿಸೋಕೆ ಬರುವುದಿಲ್ಲ.. ಅಷ್ಟೊಂದು ದೊಡ್ಡದು ಅಂತ ಹೇಳುದ್ರು.‌ ಮತ್ತೆ ಸ್ಕೂಲ್ ಅಲ್ಲಿ ಮಾಸ್ಟರ್ ಒಂದರ ಮುಂದೆ ಒಂದು ಸೊನ್ನೆ ಹೆಚ್ಚಿಸುತ್ತಾ ಹೋದರೆ ಅದರ ಬೆಲೆ ಹೆಚ್ಚಾಗುತ್ತೆ ಅಂತ ಹೇಳಿದ್ರಲ್ಲ ಮಿಸ್. ಅದಕ್ಕೆ ನಾನು ಒಂದು ಲಕ್ಷ ಹೆಚ್ಚು ಸೊನ್ನೆ ಹಾಕಿ ಬರ್ದೇ ಅಂದಳು.

ಇದರಲ್ಲಿ ಅವಳ ತಪ್ಪಾದರೂ ಏನಿದೆ? ಒಂದು ಲಕ್ಷ ಅಂದರೆ ಹೆಚ್ಚು ಹಣ ಅನ್ನುವ ಕಲ್ಪನೆ ಮಗುವಿಗಿದೆ. ಆದರೆ ಅದನ್ನು ಸಂಖ್ಯೆಯಲ್ಲಿ ವ್ಯಕ್ತಪಡಿಸುವದನ್ನು ಮಾತ್ರ ಕಲಿಯಬೇಕಿದೆ. ಅದನ್ನು ಕಲಿಸುವುದು ಶಿಕ್ಷಕರಾದ ನಮ್ಮ ಜವಾಬ್ದಾರಿ. ಆಗ ನಮ್ಮ ಗುರುಗಳು ಹೇಳಿದ ಮಾತು ನೆನಪಿನಾಳದಲ್ಲಿ ಸುಳಿದುಹೋಯಿತು. “ಮಕ್ಕಳ ತಲೆ ಖಾಲಿ ಕೊಡವಲ್ಲ, ಅದೊಂದು ತುಂಬಿದ ಗಡಿಗೆ. ಅದರಲ್ಲಿ ಮಗು ತನ್ನ ಅನುಭವಗಳನ್ನು, ತಾನು ನೋಡಿದ್ದನ್ನು, ಕೇಳಿದ್ದನ್ನು ಯಥಾವತ್ತಾಗಿ ತುಂಬಿಕೊಂಡು ಬಂದಿರುತ್ತದೆ. ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಜೋಡಿಸಿ‌ ಔಪಚಾರಿಕ ಶಿಕ್ಷಣವನ್ನ ನೀಡುವುದು ನಮ್ಮ ಜವಾಬ್ದಾರಿ.” ಹೌದು ಆ ಕೆಲಸ ನನ್ನಿಂದಲೇ ಆಗಬೇಕು. ಅದು ಸಾಧ್ಯವಾಗಬೇಕಾದರೆ ನಾನು ತಾಳ್ಮೆಯಿಂದ ವರ್ತಿಸಬೇಕು. ಮಕ್ಕಳ ಮನಸ್ಥಿತಿಯನ್ನು ಅರಿಯಬೇಕು ಎಂದು ತೀರ್ಮಾನಿಸಿದೆ.

ನನ್ನ ತಪ್ಪನ್ನು ಬಹುಬೇಗ ಅರಿತ ನಾನು ಮೊದಲ ದಿನವೇ ಮಕ್ಕಳ ದೃಷ್ಟಿಯಲ್ಲಿ ವಿಲನ್ ಆಗಿಬಿಡುವ ಅವಕಾಶದಿಂದ ತಪ್ಪಿಸಿಕೊಳ್ಳುವುದು ನನ್ನ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಬಹು ಅಗತ್ಯವೆನಿಸಿತು. ಈಗಾಗಲೇ ಹೆದರಿ ಕುಳಿತಿದ್ದ ಮಕ್ಕಳನ್ನ ಭಯ ಮುಕ್ತಗೊಳಿಸಿ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿ ಅವರಲ್ಲಿ ನವ ಚೈತನ್ಯ ತುಂಬಬೇಕು ಎನಿಸಿತು.

ಆಗ ಮಕ್ಕಳಿಗೆ ನಿಮಗೆಲ್ಲಾ ಹಾಡು ಹೇಳಲು ಬರುತ್ತಾ ಅಂದೆ. ಎಲ್ಲಾ ಮಕ್ಕಳು ಕೋರಸ್‌ನಲ್ಲಿ “ಹೂಂ ಮಿಸ್… ಬರುತ್ತವೆ” ಎಂದು ಖುಷಿಯಾಗಿ ಕಿರುಚಿದರು. ಮುದುಡಿ ಹೋಗಿದ್ದ ಸಂಭ್ರಮ ಆಗ ಮರುಸ್ಥಾಪನೆಯಾಗಿತ್ತು. ಬನ್ನೀ ಮಕ್ಕಳೇ, ನಿಮಗೆಲ್ಲ ನಾನು ಒಂದು ಹಾಡು ಹೇಳಿ ಕೊಡ್ತೀನಿ ಅಂದೆ. ಎಲ್ಲ ಮಕ್ಕಳು ನನ್ನನ್ನು ಸುತ್ತಲೂ ಆವರಿಸಿಕೊಂಡರು. ಮಿಸ್ ಡಾನ್ಸ್‌ ಅನ್ನೂ ಹೇಳಿ ಕೊಡಿ ಎಂದ ಹುಡುಗನೊಬ್ಬ. ಅಶ್ವಿನಿ ಚೆನ್ನಾಗಿ ಡ್ಯಾನ್ಸ್ ಮಾಡ್ತಾಳೆ ಮಿಸ್, ನನಗೆ ಮಾಡಕ್ ಬರಲ್ಲ ಅಂದಳು ಮತ್ತೊಬ್ಬಳು. ಅಂತೂ ವಿದ್ಯಾರ್ಥಿಗಳ ಸಂಭ್ರಮ ಕಂಡು ತರಗತಿಯನ್ನು ನನ್ನ ತೆಕ್ಕೆಗೆ ತೆಗೆದುಕೊಂಡ ತೃಪ್ತಿ ಕಾಣಿಸಿತು.

“ಅಜ್ಜಿ ಬರುವಳಟ್ಟಿಗೆ
ಕಾಲೆರಡು ಸೊಟ್ಟಗೆ
ಅಜ್ಜಿ ಬರುವಳಟ್ಟಿಗೆ….”
ಎಂಬ ಅಭಿನಯ ಗೀತೆ ಹೇಳಿಕೊಟ್ಟೆ.
ಮಕ್ಕಳೆಲ್ಲ ಕುಣಿದು ಕುಪ್ಪಳಿಸಿದರು. ಆಗ ಒಬ್ಬ ಹುಡುಗ ಹತ್ತಿರ ಬಂದು ನೀವು ಬಹಳ ಚಂದ ಇದ್ದೀರಿ ಟೀಚರ್, ಮತ್ತೆ ನಮ್ಮ ಅವ್ವನ ಥರ ಕಾಣುತೀರಿ. ಚೆನ್ನಾಗಿ ಡ್ಯಾನ್ಸ್ ಮಾಡ್ತೀರಾ ಅಂದ. ಅವನ ದೃಷ್ಟಿಯಲ್ಲಿ ನಾನು ಅವ್ವನ ಸ್ಥಾನ ತುಂಬಿದ್ದು ನನ್ನ ವಿಶ್ವಾಸವನ್ನು ಹೆಚ್ಚಿಸಿತು. ಇನ್ನೊಂದು ಹಾಡು ಹೇಳ್ಕೊಡಿ ಮಿಸ್ ಅಂತ ಮತ್ತೊಂದು ವಿದ್ಯಾರ್ಥಿ ಕೇಳಿದಾಗ ಏ, ಸುಮ್ಮನೆ ಇರೋ‌. ಟೀಚರ್‌ಗೆ ಡ್ಯಾನ್ಸ್ ಮಾಡಿ ಸಾಕಾಗುತ್ತೆ ಎಂದಳು. ಟೀಚರ್ ಬಗ್ಗೆ ಅವಳ ಕಾಳಜಿ, ಪ್ರೀತಿ ನೋಡಿ ಹೆಮ್ಮೆ ಎನಿಸಿತು. ಅವಳು ಹೆಣ್ಣಲ್ಲವೇ ಭೂಮಿ ತೂಕದವಳು. ಪ್ರೀತಿ ಕಾಳಜಿ ಅವಳ ಅಂತರ್ಯದಲ್ಲೇ ಮಿಳಿತವಾಗಿರುತ್ತದೆ.

ಹೆಚ್ಚು ಓದಿದವರು ತನ್ನ ಓದಿಗೆ ಸಂಬಂಧಿಸಿದ ಯಾವುದೇ ವೃತ್ತಿಯನ್ನಾದರೂ ಮಾಡಬಹುದು. ಆದರೆ ಶಿಕ್ಷಕ ವೃತ್ತಿ ತುಂಬಾ ವಿಭಿನ್ನವಾದದು. ಅದು ಮಾತ್ರ ತರಬೇತಿಯನ್ನೇ ಬಯಸುತ್ತದೆ. ಶಿಕ್ಷಕ ತರಬೇತಿಯಲ್ಲಿ ಟೀಚಿಂಗ್ ಮೆಥೆಡ್ ಮತ್ತು ಚೈಲ್ಡ್ ಸೈಕಾಲಜಿಗಳನ್ನ ನಿಗದಿಪಡಿಸಿರುವುದು ಮಕ್ಕಳ ಮನಸ್ಥಿತಿ ಅರಿತು ಅವರ ವಯೋಮಾನಕ್ಕನುಗುಣವಾಗಿ ಬೋಧಿಸುವುದಕ್ಕಾಗಿಯೇ ಅಲ್ಲವೇ? ಶಿಕ್ಷಕರ ಜವಾಬ್ದಾರಿ ಅದರ ಸಂಪೂರ್ಣ ಚಿತ್ರಣ ಮೊದಲ ದಿನದ ನನಗೆ ಮೂಡಿತು. ಈ ಘಟನೆ ವೃತ್ತಿ ಬದುಕಿನ ಮೊದಲ ದಿನ ಮಕ್ಕಳಿಗೆ ಪಾಠ ಮಾಡಲು ಹೋಗಿ ನನಗೆ ಮಕ್ಕಳಿಂದ ಪಾಠ ಕಲಿತ ಅನುಭವ ನೀಡಿತ್ತು.