ಒಂದು ಮೆಟ್ಟಿಲು ಕೆಳಗೆ ನಿಂತು ನಸ್ತಾಸ್ಯ ದೀಪ ಎತ್ತಿ ಹಿಡಿದಿದ್ದಳು. ರಝುಮಿಖಿನ್ ತೀರ ಉದ್ವಿಗ್ನನಾಗಿದ್ದ. ಅರ್ಧಗಂಟೆಯ ಮೊದಲು, ಅವನು ರಾಸ್ಕೋಲ್ನಿಕೋವ್ ನನ್ನು ಮನೆಗೆ ಕರೆದುಕೊಂಡು ಬರುತ್ತಿರುವಾಗ ಅತಿ ಹೆಚ್ಚು ಮಾತಾಡಿದ್ದರೂ, ಹಾಗೆ ಮಾತಾಡುತಿದ್ದೇನೆ ಅನ್ನುವುದು ಸ್ವತಃ ಅವನಿಗೇ ಗೊತ್ತಿದ್ದರೂ ಅವನು ಎಚ್ಚರವಾಗಿಯೇ ಇದ್ದ, ಕುಡಿದಿದ್ದ ವೈನು ಕಡಮೆ ಬೆಲೆಯದಾದರೂ ಫ್ರೆಶ್ ಆಗಿದ್ದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಮೊದಲನೆಯ ಅಧ್ಯಾಯ
ರಾಸ್ಕೋಲ್ನಿಕೋವ್ ಎದ್ದು ಸೋಫಾದ ಮೇಲೆ ಕೂತ.
‘ಸಮಾಧಾನದ ಅಸಂಬದ್ಧ ಬಡಬಡ ಮಾತು ನಿಲ್ಲಿಸು,’ ಎಂದು ದುರ್ಬಲವಾಗಿ ಕೈ ಆಡಿಸುತ್ತ ರಝುಮಿಖಿನ್ ಗೆ ಸನ್ನೆ ಮಾಡಿದ. ಅಮ್ಮನ ಕೈ, ತಂಗಿಯ ಕೈ ಹಿಡಿದುಕೊಂಡ. ಒಬ್ಬೊಬ್ಬರ ಮುಖವನ್ನೂ ಸುಮಾರು ಎರಡೆರಡು ನಿಮಿಷ ಮಾತಿಲ್ಲದೆ ದಿಟ್ಟಿಸಿದ. ಅವನು ನೋಡುವ ರೀತಿ ಕಂಡು ಅಮ್ಮನಿಗೆ ಭಯವಾಯಿತು. ವೇದನೆಯಂಥ ತೀವ್ರವಾದ ಭಾವನೆ ಅವನ ಕಣ್ಣಿನಲ್ಲಿತ್ತು. ಹಾಗೆಯೇ ಹುಚ್ಚರ ಕಣ್ಣಿನಲ್ಲಿ ಕಾಣುವಂಥದೇನೋ ಅವನ ಕಣ್ಣಲ್ಲೂ ಇದ್ದ ಹಾಗಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಅಳುವುದಕ್ಕೆ ಶುರುಮಾಡಿದಳು.
ಅವ್ದೋತ್ಯ ರೊಮನೋವ್ನಾಳ ಮುಖ ಬಿಳಿಚಿತ್ತು. ಅಣ್ಣನ ಕೈಯಲ್ಲಿದ್ದ ಅವಳ ಕೈ ನಡುಗಿತ್ತು.
‘ಮನೆಗೆ ಹೋಗು… ಇವನ ಜೊತೆ…’ ಒಡಕಲು ದನಿಯಲ್ಲಿ ಮಾತಾಡುತ್ತ ರಝುಮಿಖಿನ್ ನನ್ನು ತೋರಿಸಿದ. ‘ನಾಳೆ ತನಕ, ನಾಳೆ ಎಲ್ಲಾನೂ… ನೀವು ಬಂದು ಬಹಳ ಹೊತ್ತಾಯಿತಾ?’
‘ಸಾಯಂಕಾಲ ಬಂದೆವು, ರೋದ್ಯ. ರೈಲು ತುಂಬಾ ಅಂದರೆ ತುಂಬಾ ಲೇಟಾಯಿತು. ಇನ್ನು ಮಾತ್ರ ನಿನ್ನ ಬಿಟ್ಟು ಹೋಗೋದಿಲ್ಲ, ರಾತ್ರಿ ಇಲ್ಲೇ ಇರತೇನೆ,’ ರಾಸ್ಕೋಲ್ನಿಕೊವ್ ನ ತಾಯಿ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಹೇಳಿದಳು.
‘ನನಗೆ ಹಿಂಸೆ ಕೊಡಬೇಡಿ,’ ರಾಸ್ಕೋಲ್ನಿಕೋವ್ ರೇಗಿಕೊಂಡು ಕೈ ಬೀಸುತ್ತ ಅಂದ.
‘ಇವನ ಜೊತೆ ನಾನಿರತೇನೆ, ಇವನ್ನ ಬಿಟ್ಟು ಅಲ್ಲಾಡಲ್ಲ. ನಮ್ಮನೆಯಲ್ಲಿರುವ ಜನ ಎಲ್ಲಿ ಬೇಕಾದರೂ ಹಾಳಾಗಲಿ. ಬೇಕಾದರೆ ಗೋಡೆ ಹತ್ತಲಿ, ಚಾವಣಿ ಏರಲಿ. ನಮ್ಮ ಚಿಕ್ಕಪ್ಪನ ಸುಪರ್ದಿಗೆ ಬಿಟ್ಟಿದೇನೆ ಅವರನ್ನ,’ ಅಂದ ರಝುಮಿಖಿನ್.
ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ರಝುಮಿಖಿನ್ ಕೈಯನ್ನು ಭದ್ರವಾಗಿ ಹಿಡಿದು, ‘ನಿನ್ನ ಋಣ ಹ್ಯಾಗೆ ತೀರಿಸಲಪ್ಪಾ,’ ಅಂದಳು ರಾಸ್ಕೋಲ್ನಿಕೋವ್ ಮತ್ತೆ ಬಾಯಿ ಹಾಕಿದ.
‘ನನ್ನ ಕೈಲಿ ಆಗಲ್ಲಾ, ಆಗಲ್ಲಾ! ನನ್ನ ಕೈಲಿ ಆಗಲ್ಲಾ!’ ರಾಸ್ಕೋಲ್ನಿಕೋವ್ ಕೆರಳಿ ಮತ್ತೆ ಮತ್ತೆ ಅದನ್ನೇ ಅನ್ನುತ್ತಿದ್ದ. ‘ಹಿಂಸೆ ಕೊಡಬೇಡಿ ನನಗೆ! ಸಾಕು! ಹೊರಟು ಹೋಗಿ! ನನ್ನ ಕೈಲಿ ಆಗಲ್ಲಾ!’
‘ಬಾಮ್ಮಾ, ಸದ್ಯ ನಾವೀಗ ಇಲ್ಲಿಂದ ಹೋಗೋದು ಒಳ್ಳೆಯದು. ಈಗಲೇ ನಮ್ಮನ್ನು ನೋಡಿ ಎಷ್ಟು ನೋವು ತಿನ್ನತಾ ಇದಾನೆ, ನೋಡಿದೆಯಲ್ಲಾ,’ ದುನ್ಯಾ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದಳು.
‘ಅವನನ್ನ ನೋಡಿ ಮೂರು ವರ್ಷ ಆಗಿದೆ. ನನ್ನ ಮಗನನ್ನ ಕಣ್ಣು ತುಂಬ ನೋಡಲೂ ಬಾರದಾ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಅಳುವುದಕ್ಕೆ ಶುರುಮಾಡಿದಳು.
‘ತಾಳಿ!’ ರಾಸ್ಕೋಲ್ನಿಕೋವ್ ಮತ್ತೆ ಅವರನ್ನು ತಡೆದ. ‘ನೀವು ಸುಮ್ಮನೆ ತೊಂದರೆ ಕೊಡತಾ ಇದೀರಿ. ನೆಟ್ಟಗೆ ಯೋಚನೆ ಮಾಡುವುಕ್ಕೂ ಆಗಲ್ಲ… ನೀನು ಪೀಟರ್ ಪೆಟ್ರೋವಿಚ್ ನನ್ನು ನೋಡಿದೆಯಾ?’
‘ಇಲ್ಲ, ರೋದ್ಯಾ. ಆದರೆ ನಾವು ಬಂದಿರೋದು ಅವನಿಗೆ ಗೊತ್ತು. ಪೀಟರ್ ಪೆಟ್ರೋವಿಚ್ ನಿನ್ನನ್ನು ನೋಡಕ್ಕೆ ಬಂದಿದ್ದ ಅಂತ ಕೇಳಿದೆವು, ಇವತ್ತು ಬೆಳಿಗ್ಗೆ. ಎಷ್ಟು ಒಳ್ಳೆಯವನಲ್ಲವಾ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಹಿಂಜರಿಯುತ್ತ ಅಂದಳು.
‘ಹೌದು, ಒಳ್ಳೆಯವನು… ಇನ್ನೊಂದು ಸಾರಿ ಬಂದರೆ ಒದ್ದು ಹೊರಗೆ ಹಾಕತೇನೆ ಅಂದೆ… ಇವತ್ತು ಚೆನ್ನಾಗಿ ಬೈದು ಓಡಿಸಿದೆ.’
‘ರೋದ್ಯಾ! ಹೌದಾ! ನಿಜವಾಗಲೂ! ಅಂದರೆ ನೀನು…’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಹೆದರುತ್ತ, ಮಗಳನ್ನು ನೋಡುತ್ತ, ಅಂದಳು.
ದುನ್ಯಾ ಅಣ್ಣನನ್ನೇ ನಿಟ್ಟಿಸಿ ನೋಡಿದಳು. ಇನ್ನೇನಾದರೂ ಹೇಳುತ್ತಾನೋ ಎಂದು ಕಾದಳು. ಬೆಳಗ್ಗೆ ನಡೆದ ಜಗಳದ ಬಗ್ಗೆ ನಸ್ತಾಸ್ಯಾ ಆಗಲೇ ತನಗೆ ಅರ್ಥವಾದಷ್ಟನ್ನು ಅವರಿಗೆ ಹೇಳಿದ್ದಳು. ಈಗ ತಾಯಿ ಮಗಳಿಬ್ಬರೂ ಮನಸ್ಸು ನೋವು ಮಾಡಿಕೊಂಡು ಮುಂದೇನೆಂದು ಕಾಯುತ್ತಿದ್ದರು.
‘ದುನ್ಯಾ, ಈ ಮದುವೆ ನಡೆಯವುದು ನನಗಿಷ್ಟವಿಲ್ಲ,’ ರಾಸ್ಲೋಲ್ನಿಕೋವ್ ಮಾತಾಡಲು ಪ್ರಯತ್ನಪಡುತ್ತ ಹೇಳಿದ. ಅವನು ನನಗೆ ಬೇಡ ಅಂತ ನಾಳೆ ಬೆಳಿಗ್ಗೆ ನೀನು ಹೇಳಬೇಕು. ಅದು ನೀನು ಮಾಡಬೇಕಾದ ಮೊದಲನೆಯ ಕೆಲಸ. ಅಲ್ಲಿಗೆ ಅವನು ಈ ವಿಚಾರ ಎಳೆದಾಡುವುದು ನಿಲ್ಲಿಸತಾನೆ.’
‘ಅಯ್ಯೋ, ದೇವರೇ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
‘ಎಂಥಾ ಮಾತಾಡತಾ ಇದೀಯಾ ಗೊತ್ತಾ ಅಣ್ಣಾ?’ ದುನ್ಯಾ ಸಿಟ್ಟಿನಿಂದ ಮಾತು ಶುರುಮಾಡಿದರೂ ತಕ್ಷಣವೇ ಸಿಟ್ಟು ತಡೆದುಕೊಂಡು, ‘ಪಾಪ, ಈಗ ನಿನಗೆ ಹುಷಾರಿಲ್ಲ, ಬಿಡು, ನಿನಗೆ ಸುಸ್ತಾಗಿದೆ,’ ಎಂದು ಸಣ್ಣದನಿಯಲ್ಲಿ ಅಂದಳು.
‘ಬಡಬಡಿಸುತ್ತಾ ಇದೇನಾ? ಇಲ್ಲ… ನೀನು ನನಗೋಸ್ಕರ ಪೀಟರ್ ಪೆಟ್ರೋವಿಚ್ ನ ಮದುವೆ ಆಗತಿದೀಯ. ಈ ನಿನ್ನ ತ್ಯಾಗ ನನಗೆ ಬೇಕಾಗಿಲ್ಲ. ಈ ಮದುವೆ ನಿನಗೆ ಇಷ್ಟವಿಲ್ಲ ಅಂತ ನಾಳೆ ಬೆಳಿಗ್ಗೇನೆ ನೀನು ಒಂದು ಕಾಗದ ಬರೆಯಬೇಕು. ನಾನು ಅದನ್ನ ಓದಿ ನೋಡತೇನೆ… ಅಲ್ಲಿಗೆ ಮುಗಿಯತ್ತೆ!’
‘ಆಗಲ್ಲ! ಹೀಗನ್ನುವುದಕ್ಕೆ ನಿನಗೇನು ಹಕ್ಕಿದೆ?’ ಘಾಸಿಗೊಂಡ ಹುಡುಗಿ ಜೋರಾಗಿ ಕೇಳಿದಳು.
‘ದುನ್ಯಾ ಪುಟ್ಟೀ, ನಿನಗೆ ಸಿಟ್ಟು ಜಾಸ್ತಿ. ಸುಮ್ಮನೆ ಇರು ಈಗ. ನಾಳೆ… ಅಲ್ಲಾ ನಿನಗೆ ಗೊತ್ತಿಲ್ಲವಾ…’ ಬೆದರಿದ ತಾಯಿ ದುನ್ಯಾಳದ ಹತ್ತಿರ ಧಾವಿಸಿ ಬಂದು, ‘ಈಗ ನಾವು ಹೋಗಣ, ನಡಿ,’ ಅಂದಳು.
‘ಬಡಬಡಿಸತಾ ಇದಾನೆ!’ ಕುಡಿದಿದ್ದ ರಝುಮಿಖಿನ್ ಕಿರುಚಿ ಮಾತಾಡಿದ. ‘ಇಲ್ಲಾಂದರೆ ಇಂತಾ ಮಾತು ಹೇಳಕ್ಕೆ ಸಾಧ್ಯವಾ? ನಾಳೆ ಹೊತ್ತಿಗೆ ನೆತ್ತಿಗೆ ಏರಿದ ಪಿತ್ತ ಇಳಿದಿರತ್ತೆ… ಅವನನ್ನ ಆಚೆ ಹೋಗು ಅಂತ ಇವನು ಕೂಗಾಡಿ ಕಳಿಸಿದ್ದು ನಿಜ. ಅವನಿಗೂ ಸಿಟ್ಟು ಬಂತು… ದೊಡ್ಡದಾಗಿ ಭಾಷಣ ಮಾಡಿಕೊಂಡು ಜಂಬ ಕೊಚ್ಚಿಕೊಳ್ಳತಾ ಇದ್ದ ಇಲ್ಲಿಗೆ ಬಂದು, ಆಗ ಇವನು ಸಿಟ್ಟು ಮಾಡಿ ಗಟ್ಟಿಸಿದ್ದಕ್ಕೆ ಬಾಲ ಮುದುರಿಕೊಂಡು ಹೊರಟು ಹೋದ…’
‘ನಿಜಾನಾ ಹಾಗಾದರೆ ನಾನು ಕೇಳಿದ್ದು?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಕೇಳಿದಳು.
‘ನಾಳೆ ಬರತೀವಣ್ಣಾ,’ ದುನ್ಯಾ ಮರುಕದ ದನಿಯಲ್ಲಿ ಅಂದಳು. ‘ನಡಿಯಮ್ಮಾ… ಬರತೇವಣ್ಣಾ ಗುಡ್ ಬೈ!’
‘ಕೇಳಮ್ಮಾ ಇಲ್ಲೀ,’ ತನ್ನಲ್ಲಿ ಉಳಿದಿದ್ದ ಶಕ್ತಿಯೆಲ್ಲ ಕೂಡಿಸಿಕೊಂಡು ಕೊನೆಯ ಪ್ರಯತ್ನ ಮಾಡಿದ ರಾಸ್ಕೋಲ್ನಿಕೋವ್. ‘ನಾನು ಸನ್ನಿ ಹಿಡಿದು ಬಡಬಡಿಸತಾ ಇಲ್ಲ. ಇದು ದುಷ್ಟ ಮದುವೆ. ಈ ಮದುವೆ ನಡೀಬಾರದು. ನನ್ನೂ ಬೇಕಾದರೆ ದುಷ್ಟ ಅಂದುಕೋ. ಅವನನ್ನ ಮದುವೆಯಾದರೆ ನೀನು ನನ್ನ ತಂಗೀನೇ ಅಲ್ಲ… ನಾನು ಬೇಕೋ ಅವನು ಬೇಕೋ ನೀವೇ ನಿರ್ಧಾರ ಮಾಡಿಕೊಳ್ಳಿ, ಇಬ್ಬರೂನೂ…ʼ
‘ನಿನಗೆ ತಲೆ ಕೆಟ್ಟಿದೆ. ನೀನು ದುಷ್ಟ. ನೀನು ಹೇಳಿದ್ದೇ ಆಗಬೇಕು,’ ರಝುಮಿಖಿನ್ ಗರ್ಜಿಸಿದ. ರಾಸ್ಕೋಲ್ನಿಕೋವ್ ಮಾತಾಡಲಿಲ್ಲ. ಉತ್ತರ ಕೊಡುವ ಸ್ಥಿತಿಯಲ್ಲೂ ಇರಲಿಲ್ಲವೇನೋ. ಸೋಫಾದ ಮೇಲೆ ಅಂಗಾತ ಮಲಗಿದ್ದವನು ಗೋಡೆಯ ಕಡೆ ತಿರುಗಿದ. ಪೂರಾ ದಣಿದು ಹೋಗಿದ್ದ. ದುನ್ಯಾ ರಝುಮಿಖಿನ್ ನನ್ನು ವಿಚಿತ್ರವಾಗಿ ನೋಡಿದಳು. ಅವಳ ಕಪ್ಪು ಕಣ್ಣು ಮಿನುಗಿದವು. ಆ ನೋಟಕ್ಕೆ ರಝುಮಿಖಿನ್ ಬೆಚ್ಚಿಬಿದ್ದ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ದಿಗ್ಭ್ರಮೆಗೊಂಡು ನಿಂತಿದ್ದಳು.
‘ನಾನು ಹೋಗಲ್ಲ. ಇಲ್ಲೇ ಎಲ್ಲಾದರೂ ಇರತೇನೆ. ದುನ್ಯಾನ ಮನೆಗೆ ಕರಕೊಂಡು ಹೋಗು,’ ಎಂದು ಎದೆಗುಂದಿದವಳ ಹಾಗೆ ಪಿಸುದನಿಯಲ್ಲಿ ರಝುಮಿಖಿನ್ ಗೆ ಹೇಳಿದಳು.
‘ನೀವು ಇಲ್ಲೇ ಇದ್ದರೆ ಎಲ್ಲಾ ಹಾಳಾಗತ್ತೆ,’ ರಝುಮಿಖಿನ್ ಕೂಡ ಪಿಸುದನಿಯಲ್ಲೆ ಉತ್ತರ ಕೊಟ್ಟ. ತಾಳ್ಮೆ ಕಳಕೊಂಡಿದ್ದ. ‘ಕೊನೇ ಪಕ್ಷ ಮೆಟ್ಟಿಲ ಮೇಲಾದರೂ ಹೋಗಿ ನಿಂತುಕೊಳ್ಳಣ. ನಸ್ತಾಸ್ಯಾ, ದೀಪ ತಗೋ!’ ರೂಮಿನಿಂದ ಹೊರಗೆ ಬಂದು ಮೆಟ್ಟಿಲ ಮೇಲೆ ನಿಂತಾಗ ಅವನು ಅರೆಪಿಸುದನಿಯಲ್ಲಿ ಮಾತಾಡಿದ. ‘ಆಗಲೇ ಇವನು ನನಗೂ ಡಾಕ್ಟರಿಗೂ ಹೊಡೆದೇಬಿಡತಿದ್ದ! ಇನ್ನೂ ಕೆರಳದೆ ಇರಲಿ ಅಂತ ಡಾಕ್ಟರು ಹೊರಟುಹೋದರು. ನೋಡಿಕೊಳ್ಳೋದಕ್ಕೆ ಅಂತ ನಾನು ಇಲ್ಲೇ ಇದ್ದೆ. ಯಾವ ಮಾಯದಲ್ಲೋ ಎದ್ದು ಬಟ್ಟೆ ಹಾಕಿಕೊಂಡು ಹೊರಟು ಹೋದ. ನೀವು ಅವನನ್ನ ರೇಗಿಸಿದರೆ ಮತ್ತೆ ಹಾಗೇ ಮಾಡತಾನೆ. ರಾತ್ರಿ ಬೇರೆ, ಅವನು ಏನಾದರೂ ಮಾಡಿಕೊಂಡರೆ?’
‘ಏನು ಮಾತು ಅಂತ ಆಡತಾ ಇದೀಯ?’
‘ನೀವಿಲ್ಲದೆ ನಿಮ್ಮ ಮಗಳು ಒಬ್ಬಳೇ ಇರುವುದಕ್ಕೆ ಆಗಲ್ಲ! ಎಂಥಾ ಜಾಗದಲ್ಲಿದೀರಿ ಗೊತ್ತ? ನಿಮಗೆ ಅಂತ ಒಳ್ಳೆಯ ಜಾಗ ಗೊತ್ತು ಮಾಡಕ್ಕೆ ಆ ದುಷ್ಟ ಪೀಟರ್ ಪೆಟ್ರೋವಿಚ್ ಗೆ ಆಗಲಿಲ್ಲವಾ?… ಅಲ್ಲಾ… ನಾನು ಕುಡಿದಿದೀನಿ, ಅದಕ್ಕೇ ಎಲ್ಲಾರನ್ನ ಬೈಯತಾ ಇದೀನಿ, ತಲೆಗೆ ಹಚ್ಚಿಕೊಳ್ಳಬೇಡಿ…’
‘ಓನರಮ್ಮನ ಹತ್ತಿರ ಹೋಗಿ ದುನ್ಯಾಗೂ ನನಗೂ ಇವತ್ತು ರಾತ್ರಿ ಇಲ್ಲೇ ಎಲ್ಲಾದರೂ ಮೂಲೇಲ್ಲಿ ಜಾಗ ಕೊಡಿ ಅಂತ ಬೇಡಿಕೊಳ್ಳತೇನೆ. ನನ್ನ ಮಗನನ್ನ ಹೀಗೆ ಬಿಟ್ಟು ಹೋಗಲ್ಲ, ಆಗಲ್ಲ.’
ಮಹಡಿಯ ಮೆಟ್ಟಿಲು ತಿರುಗುವಲ್ಲಿ ವಿಶಾಲವಾಗಿದ್ದ ಲ್ಯಾಂಡಿಂಗ್ ಮೇಲೆ ನಿಂತು ಮಾತಾಡುತ್ತಿದ್ದರು. ಓನರಮ್ಮನ ಮನೆಯ ಬಾಗಿಲ ಹತ್ತಿರವೇ ಇದ್ದರು. ಒಂದು ಮೆಟ್ಟಿಲು ಕೆಳಗೆ ನಿಂತು ನಸ್ತಾಸ್ಯ ದೀಪ ಎತ್ತಿ ಹಿಡಿದಿದ್ದಳು. ರಝುಮಿಖಿನ್ ತೀರ ಉದ್ವಿಗ್ನನಾಗಿದ್ದ. ಅರ್ಧಗಂಟೆಯ ಮೊದಲು, ಅವನು ರಾಸ್ಕೋಲ್ನಿಕೋವ್ ನನ್ನು ಮನೆಗೆ ಕರೆದುಕೊಂಡು ಬರುತ್ತಿರುವಾಗ ಅತಿ ಹೆಚ್ಚು ಮಾತಾಡಿದ್ದರೂ, ಹಾಗೆ ಮಾತಾಡುತಿದ್ದೇನೆ ಅನ್ನುವುದು ಸ್ವತಃ ಅವನಿಗೇ ಗೊತ್ತಿದ್ದರೂ ಅವನು ಎಚ್ಚರವಾಗಿಯೇ ಇದ್ದ, ಕುಡಿದಿದ್ದ ವೈನು ಕಡಮೆ ಬೆಲೆಯದಾದರೂ ಫ್ರೆಶ್ ಆಗಿದ್ದ. ಆದರೆ, ಈಗ, ಸಂಜೆಯಿಂದ ಕುಡಿದದ್ದೆಲ್ಲವೂ ಮತ್ತೊಮ್ಮೆ ಒಟ್ಟಿಗೆ ತಲೆಗೇರಿದಂತಾಯಿತು. ಈಗ ಇಬ್ಬರು ಹೆಂಗಸರ ಜೊತೆಯಲ್ಲಿ ನಿಂತಿದ್ದ, ಅವರಿಬ್ಬರ ಕೈ ಹಿಡಿದು ಅವರ ಮನವೊಲಿಸುತ್ತ, ತನ್ನ ವಾದವನ್ನು ಆಶ್ಚರ್ಯವಾಗುವಷ್ಟು ಪ್ರಾಮಾಣಿಕವಾಗಿ ಮಂಡಿಸುತ್ತಿದ್ದ. ಒಂದೊಂದು ಮಾತು ಆಡಿದಾಗಲೂ ಆಡಿದ ಮಾತಿಗೆ ಇನ್ನಷ್ಟು ಒತ್ತು ಕೊಡುವುದಕ್ಕೆ ಅನ್ನುವ ಹಾಗೆ ಅವನ ಕೈ ಇಕ್ಕುಳದ ಹಾಗೆ ಅವರ ಕೈಯನ್ನು ಬಿಗಿಯಾಗಿ ಒತ್ತುತ್ತಿತ್ತು. ಒಂದಿಷ್ಟೂ ಸಂಕೋಚವಿಲ್ಲದೆ ದುನ್ಯಾಳ ಕಣ್ಣನ್ನು ದಿಟ್ಟಿಸುತ್ತಿದ್ದ. ಒಂದೆರಡು ಬಾರಿ ನೋವು ಹೆಚ್ಚಾಗಿ ಅವರು ತಮ್ಮ ಕೈಗಳನ್ನು ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಯತ್ನಿಸಿದರು. ಅವರು ಯಾಕೆ ಹಾಗೆ ಕೊಸರಾಡುತ್ತಿದ್ದಾರೆ ಅನ್ನುವ ಯೋಚನೆಯೂ ಅವನಿಗೆ ಬರಲಿಲ್ಲ. ಬದಲಾಗಿ ಅವರಿಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ಎಳೆದುಕೊಂಡ. ಆ ಕ್ಷಣದಲ್ಲಿ ಅವರೇನಾದರೂ ‘ನಮಗೆ ಒಳ್ಳೆಯದಾಗಬೇಕಾದರೆ ನೀನು ಈಗಲೇ ಮಹಡಿ ಮೆಟ್ಟಿಲಿನಿಂದ ನೆಲಕ್ಕೆ ಧುಮುಕಬೇಕು,’ ಅಂದಿದ್ದರೂ ಅವನು ಹಿಂಜರಿಯದೆ, ಅವರ ಮಾತನ್ನು ನಡೆಸಿಬಿಡುತ್ತಿದ್ದ.
ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ತನ್ನ ಮಗ ರೋದ್ಯಾನ ಚಿಂತೆಯಿಂದ ಬಸವಳಿದಿದ್ದರೂ, ಈ ಯುವಕನ ವರ್ತನೆ ಸ್ವಲ್ಪ ವಿಚಿತ್ರ ಅನಿಸುತ್ತಿದ್ದರೂ, ಅವನು ಅವಳ ಕೈಯನ್ನು ನೋವಾಗುವ ಹಾಗೆ ಹಿಸುಕುತ್ತಿದ್ದರೂ, ರಝುಮಿಖಿನ್ ದೇವರೇ ಸರಿ ಅಂದುಕೊಳ್ಳುತಿದ್ದಳು, ಅವನ ವರ್ತನೆಯ ಸಣ್ಣಪುಟ್ಟ ವಿವರಗಳನ್ನು ನಿರ್ಲಕ್ಷಿಸಿದ್ದಳು. ದುನ್ಯಾಗೂ ಭಯವಾಗಿತ್ತಾದರೂ ಅವಳು ಸ್ವಭಾವತಃ ಧೈರ್ಯಸ್ಥೆಯಾದುದರಿಂದ, ತನ್ನಣ್ಣನ ಗೆಳೆಯನ ಉರಿಯುವ ಕಣ್ಣುಗಳನ್ನು ನೋಡಿದರೆ ಆಶ್ಚರ್ಯ ಬೆರೆತ ದಿಗಿಲು ಆಗುತ್ತಿದ್ದರೂ ಅಮ್ಮನನ್ನೂ ಎಳದುಕೊಂಡು ಧಗಧಗಿಸುವ ಬೆಂಕಿಯಂಥ ಅವನ ನೋಟದಿಂದ ತಪ್ಪಿಸಿಕೊಂಡು ಓಡಿಹೋಗಬೇಕು ಅನ್ನಿಸಿದರೂ ನಸ್ತಾಸ್ಯ ಈ ವಿಚಿತ್ರ ಹುಡುಗನ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದರಿಂದ ಅಲ್ಲಾಡದೆ ಹಾಗೇ ನಿಂತಿದ್ದಳು. ರಝುಮಿಖಿನ್ ಗೆ ತನ್ನೆದೆಯಲ್ಲಿರುವುದನ್ನೆಲ್ಲ ಒಮ್ಮೆಲೇ ಒದರಿಬಿಡುವ ಸ್ವಭಾವವಿತ್ತು. ಹಾಗಾಗಿ ಅವನ ಮಾತನ್ನು ಹತ್ತು ನಿಮಿಷ ಕೇಳಿಸಿಕೊಂಡವರಿಗೂ ಅವನ ಮೂಡು ಹೇಗಿದೆ, ಸ್ವಭಾವ ಎಂಥದು ಎಂದು ತಿಳಿದುಬಿಡುತ್ತಿತ್ತು.
‘ಓನರಮ್ಮನ ಹತ್ತಿರ ಹೋಗಿ ಕೇಳುವುದೆಲ್ಲಾ ಆಗದ ಮಾತು.’ ರಝುಮಿಖಿನ್ ಪುಸಲಾಯಿಸುವ ದನಿಯಲ್ಲಿ ಪುಲ್ಚೇರಿಯ ಅಲೆಕ್ಸಾಂಡ್ರೋವಾಗೆ ಹೇಳಿದ. ‘ನಾನು ಅವನನ್ನು ಹೆತ್ತ ಅಮ್ಮ ಅಂತ ನೀವು ಅನ್ನಬಹುದು, ನೀವು ಇಲ್ಲೇ ಇದ್ದರೆ ಅವನು ಕೆರಳಿ ಸನ್ನಿ ಹಿಡಿಯತ್ತೆ. ಆಮೇಲೇನಾಗತ್ತೋ ದೆವ್ವಕ್ಕೇ ಗೊತ್ತು. ಇಲ್ಲಿ ಕೇಳಿ, ನಸ್ತಾಸ್ಯಾ ಇಲ್ಲಿ ಅವನನ್ನ ನೋಡಿಕೊಳ್ಳತಾಳೆ, ನಿಮ್ಮಿಬ್ಬರನ್ನೂ ನಿಮ್ಮ ರೂಮಿಗೆ ಕರಕೊಂಡು ಹೋಗತೇನೆ ನಾನು. ಈ ಪೀಟರ್ಸ್‍ಬರ್ಗಿನಲ್ಲಿ ರಾತ್ರಿ ಹೊತ್ತಲ್ಲಿ ನೀವಿಬ್ಬರೇ ಹೋಗೋದು ಸರಿಯಲ್ಲ… ನಿಮ್ಮನ್ನ ಬಿಟ್ಟು ನಾನು ಸೀದಾ ಇಲ್ಲಿಗೆ ಓಡಿ ಬರತೇನೆ. ಮಾತು ಕೊಡತೇನೆ ನಿಮಗೆ. ಕಾಲು ಗಂಟೆ ಅಷ್ಟೇ. ಅವನು ಮಲಗಿದಾನಾ, ಚೆನ್ನಾಗಿದಾನಾ ಎಲ್ಲ ಸುದ್ದಿ ನಿಮಗೆ ತಿಳಿಸತೇನೆ. ಆಮೇಲೆ, ಕೇಳೀ ಇಲ್ಲಿ, ನಿಮಗೆ ಸುದ್ದಿ ಹೇಳಿದ್ದೇ ನಾನು ನಮ್ಮನೇಗೆ ಹೋಗಿ, ಅಲ್ಲಿ ಗೆಸ್ಟುಗಳಿದಾರೆ, ಇಷ್ಟೊತ್ತಿಗೆ ಎಲ್ಲಾ ಚೆನ್ನಾಗಿ ಕುಡಿದಿರತಾರೆ, ಝೋಸ್ಸಿಮೋವ್ ನ ಹುಡುಕಿ, ಅವನು ಡಾಕ್ಟರು, ಈಗ ನಮ್ಮನೇಲ್ಲಿರತಾನೆ, ಇಲ್ಲ ಕುಡಿದಿರಲ್ಲ ಅವನು, ಅವನನ್ನ ರೋದ್ಯಾ ಹತ್ತಿರಕ್ಕೆ ಕರಕೊಂಡು ಬರತೇನೆ. ಏನು ಹೇಳಿದ ಅಂತ ಸೀದಾ ನಿಮಗೆ ಸುದ್ದಿ ಮುಟ್ಟಿಸತೇನೆ. ಅಂದರೆ ಇನ್ನೊಂದು ಗಂಟೆ ಒಳಗೆ ನಿಮಗೆ ಅವನ ಪರಿಸ್ಥಿತಿ ಬಗ್ಗೆ ಎರಡು ವರದಿ ಸಿಕ್ಕಿರತ್ತೆ. ಅದರಲ್ಲಿ ಒಂದು ಡಾಕ್ಟರದ್ದು, ಗೊತ್ತಾಯಿತಾ. ನಾನು ಹೇಳುವುದಕ್ಕಿಂತ ಡಾಕ್ಟರು ಹೇಳುವುದು ಸಾವಿರ ಪಾಲು ಒಳ್ಳೆಯದಲ್ಲವಾ! ಅವನ ಆರೋಗ್ಯ ಸರಿ ಇಲ್ಲದಿದ್ದರೆ, ಆಣೆ ಮಾಡಿ ಹೇಳತೇನೆ, ನಾನೇ ನಿಮ್ಮನ್ನ ಇಲ್ಲಿಗೆ ಕರಕೊಂಡು ಬರತೇನೆ. ಅವನು ಚೆನ್ನಾಗಿದ್ದರೆ ನೀವು ಕಣ್ಣು ತುಂಬ ನಿದ್ದೆ ಮಾಡಬಹುದು. ಇಡೀ ರಾತ್ರಿ ನಾನು ಇಲ್ಲೇ ಬಾಗಿಲಲ್ಲೇ ಕೂತಿರತೇನೆ. ಡಾಕ್ಟರನ್ನ ಇಲ್ಲೇ ಓನರಮ್ಮನ ಮನೆಯಲ್ಲಿ ಮಲಗುವುದಕ್ಕೆ ಹೇಳತೇನೆ. ಬೇಕು ಅಂದರೆ ತಕ್ಷಣ ಕರಕೊಂಡು ಬರಬಹುದು. ಈಗ ಹೇಳಿ, ನೀವು ಇಲ್ಲಿದ್ದರೆ ವಾಸೀನೋ ಡಾಕ್ಟರು ಇದ್ದರೆ ವಾಸೀನೋ? ಬೇರೆ ಮಾತೇ ಇಲ್ಲ, ಡಾಕ್ಟರು ಇದ್ದರೇನೇ ಒಳ್ಳೆಯದು. ಸುಮ್ಮನೆ ನಿಮ್ಮ ರೂಮಿಗೆ ಹೋಗಿ. ಓನರಮ್ಮನ ಮನೆಯಲ್ಲಿರುವ ಪ್ರಶ್ನೆಯೇ ಇಲ್ಲ. ಬೇಕಾದರೆ ನಾನಿರಬಹುದು, ನೀವಿರಕ್ಕೆ ಆಗಲ್ಲ. ಯಾಕೆ ಅಂದರೆ… ಯಾಕೆ ಅಂದರೆ ಅವಳು ಪೆದ್ದಿ! ಅವಳಿಗೆ ನನ್ನ ಕಂಡರೆ ಇಷ್ಟ, ಅವದೋತ್ಯ ರೊಮನೋವ್ನಾರನ್ನ ನೋಡಿದರೆ ಹೊಟ್ಟೆಕಿಚ್ಚು. ನಿಮ್ಮ ಬಗ್ಗೇನೂ ಹೊಟ್ಟೆಕಿಚ್ಚಿರಬಹುದು, ಅವದೋತ್ಯ ಬಗ್ಗೆ ಗ್ಯಾರಂಟಿ ಇದೆ. ಈಯಮ್ಮ ಯಾವಾಗ ಹೇಗೆ ನಡಕೊಳ್ಳತಾಳೆ, ಹೇಳಕ್ಕಾಗಲ್ಲ. ವಿಚಿತ್ರ ಹೆಂಗಸು. ಸರಿ, ಹೊರಡಣ! ನನ್ನ ನಂಬತೀರಿ ತಾನೇ? ಸರಿ. ನನ್ನ ನಂಬತೀರೋ ಇಲ್ಲವೋ?’
‘ಅಮ್ಮಾ. ಹೋಗಣ, ಇವರು ಹೇಳಿದ ಹಾಗೇ ಮಾಡತಾರೆ. ಈಗಾಗಲೇ ಒಂದು ಸಾರಿ ಅಣ್ಣನ ಜೀವ ಉಳಿಸಿದಾರೆ. ಇವರು ಹೇಳಿದ ಹಾಗೇ ಡಾಕ್ಟರು ಬಂದು ಇಲ್ಲೇ ಇರುವುದಾದರೆ ಅದಕ್ಕಿಂತ ಇನ್ನೇನು ಬೇಕು?’ ಅಂದಳು ದುನ್ಯಾ.
‘ಅಂದರೆ… ನೀವು… ನೀವು ನನ್ನ ಅರ್ಥ ಮಾಡಿಕೊಂಡಿರಿ, ದೇವತೆ ನೀವು ದೇವತೆ!’ ರಝುಮಿಖಿನ್ ಪರವಶನಾಗಿ ಹೇಳಿದ.
‘ಹೊರಡಣ. ನಸ್ತಾಸ್ಯ, ಈಗಲೇ ಹೋಗಿ ಅವನ ಪಕ್ಕದಲ್ಲಿ ಕೂತಿರು. ದೀಪ ಇರಲಿ. ಇನ್ನು ಕಾಲು ಗಂಟೆಯಲ್ಲಿ ಬಂದುಬಿಡತೇನೆ.’
ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಗೆ ಪೂರಾ ನಂಬಿಕೆ ಬರದಿದ್ದರೂ ವಿರೋಧವನ್ನೇನೂ ತೋರಲಿಲ್ಲ. ರಝುಮಿಖಿನ್ ಇಬ್ಬರೂ ಹೆಂಗಸರ ತೋಳು ಹಿಡಿದು ಬೇಗ ಬೇಗ ಮೆಟ್ಟಿಲಿಳಿಸಿದ. ‘ಇವನು ನಿಪುಣ ಇರಬಹುದು, ಮರುಕದ ಮನಸ್ಸೂ ಇರಬಹುದು, ಆದರೂ ಈಗ ಹೇಳಿದ್ದನ್ನೆಲ್ಲ ಮಾಡುವ ಸ್ಥಿತಿಯಲ್ಲಿದ್ದಾನಾ!…’ ಅಂದುಕೊಳ್ಳುತ್ತ ಚಿಂತೆ ಮಾಡಿದಳು.
‘ಆಹಾ, ನಾನೆಂಥಾ ಸ್ಥಿತಿಯಲ್ಲಿದೀನಿ ಅಂತ ಯೋಚನೆ ಮಾಡತಾ ಇದೀರಿ, ಅಲ್ಲವಾ!’ ರಝುಮಿಖಿನ್ ಅವಳ ಚಿಂತೆಯನ್ನು ಊಹೆ ಮಾಡಿ, ಫುಟ್ ಪಾತಿನ ಮೇಲೆ ದೊಡ್ಡ ದೊಡ್ಡ ಹೆಜ್ಜೆ ಹಾಕಿಕೊಂಡು, ಅವರಿಬ್ಬರೂ ಹೆಂಗಸರಿಗೆ ಅವನ ಸಮಸಮ ನಡೆಯುವುದೇ ಕಷ್ಟವಾಗುವ ಹಾಗೆ ನಡೆದ. ಅವರಿಗೆ ನಡೆಯುವುದು ಕಷ್ಟವಾಗುತ್ತಿದೆ ಅನ್ನುವುದನ್ನು ಅವನು ಗಮನಿಸಲೂ ಇಲ್ಲ. ‘ನಾನ್ಸೆನ್ಸ್! ಅಂದರೆ… ಕುಡಿದಿದೀನಿ, ನಿಜ. ನಾನು ತೂರಾಡತಾ ಇರುವುದಕ್ಕೆ ಹೆಂಡ ಕಾರಣ ಅಲ್ಲ. ನಿಮ್ಮನ್ನ ನೋಡಿದ ತಕ್ಷಣ ನನ್ನ ತಲೆ ತಿರುಗಿ ಹೋಯಿತು… ಉಗೀರಿ ಮಖಕ್ಕೆ…. ನಾನ್ಸೆನ್ಸ್… ನನ್ನ ಮಾತು ಕಿವೀಗೆ ಹಾಕ್ಕೋಬೇಡಿ…. ನಾನು ನಿಮಗೆ ತಕ್ಕವನಲ್ಲ, ಅಲ್ಲವೇ ಅಲ್ಲ… ನಿಮ್ಮನ್ನ ರೂಮಿಗೆ ತಲುಪಿಸಿ, ಕಾಲುವೆ ಹತ್ತಿರ ಬಂದು, ತಲೆ ಮೇಲೆ ಎರಡು ಬಿಂದಿಗೆ ನೀರು ಹಾಕಿಕೊಳ್ಳತೇನೆ. ರೆಡಿ ಆಗತೇನೆ…. ನಿಮ್ಮಿಬ್ಬರ ಮೇಲೆ ನನಗೆಷ್ಟು ಪ್ರೀತಿ ಇದೆ ಅಂತ ನಿಮಗೆ ಗೊತ್ತಿದ್ದಿದ್ದರೆ? ಊಂ, ನಗಬೇಡಿ, ಸಿಟ್ಟು ಮಾಡಿಕೋಬೇಡಿ!… ಯಾರ ಮೇಲೆ ಬೇಕಾದರೂ ಸಿಟ್ಟು ಮಾಡಿಕೊಳ್ಳಿ, ನನ್ನ ಮೇಲೆ ಮಾತ್ರ ಬೇಡಾ! ನಾನು ಅವನ ಸ್ನೇಹಿತ, ಅದಕ್ಕೇ ನಿಮಗೂ ಸ್ನೇಹಿತ!… ಒಂಥರಾ ಗೊತ್ತಿತ್ತು ನನಗೆ, ಹೀಗಾಗತ್ತೆ ಅಂತ ಹೋದ ವರ್ಷವೇ ಅನಿಸಿತ್ತು! ಆಗ ಅನಿಸಿತ್ತು, ಈಗ ನೋಡಿದರೆ ನೀವು ನಕ್ಷತ್ರದ ಹಾಗೆ ಆಕಾಶದಿಂದ ಭೂಮಿಗೆ ಬಂದಿದ್ದೀರಿ… ಇಡೀ ರಾತ್ರಿ ನನಗೆ ಇನ್ನ ನಿದ್ದೆ ಬರಲ್ಲ… ಝೋಸ್ಸಿಮೋವ್ ಗೆ ಆತಂಕ ಇದೆ, ಇವತ್ತು ರಾತ್ರಿ ಬುದ್ಧಿಯ ಸ್ತಿಮಿತ ತಪ್ಪುತ್ತೆ ಅವನಿಗೆ ಅಂದಿದ್ದ… ಅದಕ್ಕೇ ಅವನು ರೇಗುವ ಹಾಗೆ ಏನೂ ಮಾಡಬಾರದು…
‘ಏನು ಹೇಳತಾ ಇದೀಯಪ್ಪಾ!’ ತಾಯಿ ಚೀರಿದಳು.
‘ಡಾಕ್ಟರೇ ಹಾಗೆ ಬಾಯಿಬಿಟ್ಟು ಹೇಳಿದರಾ?’ ಅವದೋತ್ಯಾ ಭಯಪಡುತ್ತ ಕೇಳಿದಳು.
‘ಹೇಳಿದ ಪಾಯಿಂಟು ಅದಲ್ಲ! ಎಂಥಾದ್ದೋ ಔಷಧಿ ಕೊಟ್ಟ, ಪೌಡರು. ನಾನೇ ನೋಡಿದೆ… ಆಮೇಲೆ ನೀವು ಬಂದಿರಿ… ಹ್ಞ!… ನೀವು ಒಂದು ದಿನ ತಡವಾಗಿ ಬಂದಿದ್ದರೆ ಚೆನ್ನಾಗಿರತಿತ್ತು! ನಾವು ಅಲ್ಲಿಂದ ಬಂದು ಒಳ್ಳೆ ಕೆಲಸ ಮಾಡಿದೆವು. ಇನ್ನೊಂದು ಗಂಟೆ ಹೊತ್ತಿನಲ್ಲಿ ಝೋಸ್ಸಿಮೋವ್ ಸ್ವತಃ ನಿಮಗೆ ಪೂರಾ ರಿಪೋರ್ಟು ಕೊಡತಾನೆ. ಅವನು ನನ್ನ ಹಾಗೆ ಖಂಡಿತ ಕುಡುಕ ಅಲ್ಲ. ನಾನೂ ಕುಡಿದಿರಲ್ಲ…. ಯಾಕೆ ಇಷ್ಟೊಂದು ಏರಿಸಿಕೊಂಡೆನೋ ಏನೋ… ಯಾಕೆ ಅಂದರೆ ಆ ಜನ ನನ್ನ ಜೊತೆ ವಾದ ಮಾಡಿದರು. ದೆವ್ವ ಹಿಡೀಲಿ ಅವರನ್ನ. ನಾನು ವಾದ ಮಾಡಲ್ಲ ಅಂತ ಆಣೆ ಮಾಡಿದ್ದೆ… ಎಂಥ ಕಚಡ ಮಾತಾಡತಾರೆ! ದೊಡ್ಡ ಜಗಳ ಆಗಬೇಕಾಗಿತ್ತು. ಚಿಕ್ಕಪ್ಪನ ಮೇಲೆ ಭಾರ ಹಾಕಿ, ನೋಡಿಕೋ ಅಂತ ಹೇಳಿ ಹೊರಟುಬಿಟ್ಟೆ…. ಪರ್ಸನಾಲಿಟೀನೇ ಇರಬಾರದು ಅಂತಾರೆ ಅವರು, ಗೊತ್ತಾ? ಪರ್ಸನಾಲಿಟಿ ಪೂರಾ ಕಳಕೊಂಡರೆ ಖುಷಿ ಅವರಿಗೆ. ತಾವು ಯಾರು ಅಂತ ತಮಗೇ ಗೊತ್ತಾಗಬಾರದು, ಅದೇ ಪ್ರಗತಿ, ಅವರ ಲೆಕ್ಕದಲ್ಲಿ. ಸ್ವಂತ ಸುಳ್ಳು ಹೇಳುವುದಕ್ಕಾದರೂ ಅವರಿಗೆ ಬಂದಿದ್ದರೆ…’
‘ಅಲ್ಲಪ್ಪಾ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಅಂಜುತ್ತ ಮಾತು ಶುರುಮಾಡಿದಳು. ಅವನಲ್ಲಿ ಉರಿಯುತ್ತಿದ್ದ ಬೆಂಕಿಗೆ ಎಣ್ಣೆ ಸುರಿಯುವುದಕ್ಕೆ ಅಷ್ಟು ಸಾಕಾಯಿತು..
‘ಏನಂದುಕೊಂಡಿದೀರಿ?’ ರಝುಮಿಖಿನ್ ದನಿಯನ್ನು ಇನ್ನೂ ಏರಿಸಿ ಚೀರಿದ. ‘ಅವರು ಸುಳ್ಳು ಹೇಳತಾರೆ ಅಂತ ನನಗೆ ಕೋಪ ಅಂದುಕೊಂಡಿದೀರಾ? ನಾನ್ಸೆನ್ಸ್! ಜನ ಸುಳ್ಳು ಹೇಳುವುದು ನನಗಿಷ್ಟ! ಸುಳ್ಳು ಅನ್ನುವುದು ಬೇರೆ ಯಾವ ಪ್ರಾಣಿಗೂ ಇರದ ಮನುಷ್ಯನಿಗೆ ಮಾತ್ರ ಇರುವ ಸವಲತ್ತು, ಅಧಿಕಾರ. ಸುಳ್ಳಿನ ಮೇಲೆ ಸುಳ್ಳು ಹೇಳತಾ ಇದ್ದರೆ ಸತ್ಯ ಸಿಗತ್ತೆ! ಮನುಷ್ಯನ್ನ ಮನುಷ್ಯ ಅಂತ ಮಾಡಿರುವುದೇ ಈ ಸುಳ್ಳು. ಹದಿನಾಕೋ ಏನೋ ಸುಳ್ಳು ಹೇಳದೆ ಒಂದು ಸತ್ಯವೂ ಸಿಗಲ್ಲ. ಹದಿನಾಕೋ ನೂರ ಹದಿನಾಕೋ ಇರಬಹುದು. ಸುಳ್ಳು ಅನ್ನೋದು ಮರ್ಯಾದಸ್ಥರ ದಾರಿ. ನಮಗೆ ನಮ್ಮದೇ ಥರ ಸುಳ್ಳು ಹೇಳಕ್ಕೂ ಬರಲ್ಲ! ಯಾರಾದರೂ ಸ್ವಂತದ ಥರ ಸುಳ್ಳು ಹೇಳಿದರೆ ಅವರ ಕಾಲಿಗೆ ಬಿದ್ದುಬಿಡತೀನಿ. ಬೇರೆಯವರ ಥರ ನಿಜ ಹೇಳುವುದಕ್ಕಿಂತ ನಮ್ಮ ನಮ್ಮದೇ ಥರ ಸುಳ್ಳು ಹೇಳುವುದೇ ವಾಸಿ. ನಿಜ ಹೇಳುವಾಗ ಮನುಷ್ಯರಾಗಿರತೀರಿ, ಸುಳ್ಳು ಹೇಳುವಾಗ ಗಿಣಿ ಆಗಿರತೀರಿ! ಸತ್ಯ ಸಾಯಲ್ಲ, ಬದುಕನ್ನ ಮಾತ್ರ ಮೊಳೆ ಹೊಡೆದು ಸಾಯಿಸಬಹುದು. ಬೇಕಾದಷ್ಟು ಉದಾಹರಣೆ ಇವೆ. ಏನು ಹೇಳತಾ ಇದ್ದೇ ನಾನು? ವಿಜ್ಞಾನ, ಪ್ರಗತಿ, ಸಂಶೋಧನೆ, ಆದರ್ಶ, ಉದಾರವಾದ ವಿಚಾರ, ಅನುಭವ, ಮತ್ತೆ ಎಲ್ಲಾದರಲ್ಲೂ, ಎಲ್ಲಾದರಲ್ಲೂ, ಒಂದೂ ಬಿಡದೆ ಎಲ್ಲಾ ವಿಷಯದಲ್ಲೂ ನಾವು ಇನ್ನೂ ಶಿಶುವಿಹಾರದ ಮಕ್ಕಳು! ಬೇರೆಯವರ ವಿಚಾರಗಳನ್ನ ಇಟ್ಟುಕೊಂಡು ಮುಂದೆ ಹೋಗೋದಕ್ಕೆ ನೋಡತೇವೆ—ನಮಗೆ ಅದರ ರುಚಿ ಹತ್ತಿಬಿಟ್ಟಿದೆ. ಅಲ್ಲವಾ? ನಾನು ಹೇಳಿದ್ದು ಸರಿ, ಅಲ್ಲವಾ?’ ರಝುಮಿಖಿನ್ ಜೋರಾಗಿ ಚೀರಿ ಇಬ್ಬರು ಹೆಂಗಸರ ಕೈಯನ್ನೂ ಬಲವಾಗಿ ಹಿಸುಕಿದ.
ಬಡಪಾಯಿ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ‘ಅಯ್ಯೋ, ದೇವರೇ! ನನಗೆ ಗೊತ್ತಿಲ್ಲಪ್ಪಾ!’ ಅಂದಳು.
‘ನಿಮ್ಮ ಮಾತನ್ನ ಪೂರ್ತಿ ಒಪ್ಪಕ್ಕಾಗದೇ ಇದ್ದರೂ, ನಿಜ ನೀವು ಹೇಳಿದ್ದು…’ ಅವದೋತ್ಯ ರೊಮನೋವ್ನ ಗಂಭೀರವಾಗಿ ಹೇಳಿದಳು. ತಟ್ಟನೆ ಚೀರಿದಳು. ಅವನು ಅವಳ ಕೈಯನ್ನು ಈಗ ಇನ್ನೂ ಬಿಗಿಯಾಗಿ ಒತ್ತಿದ್ದ.
‘ಸರಿಯಾ? ನಾನು ಹೇಳಿದ್ದು ಸರಿಯಾ? ಹಾಗಾದರೆ ನೀವು… ನೀವು… ನೀವು…’ ಪರವಶನಾಗಿ ಚೀರಿದ. ‘ಮರುಕ, ಪರಿಶುದ್ಧತೆ, ವಿಚಾರ, ಮತ್ತೆ ಮತ್ತೆ ಪರಿಪೂರ್ಣತೆಯ ಚಿಲುಮೆ ನೀವು! ಎಲ್ಲಿ, ನಿಮ್ಮ ಕೈ ನೀಡಿ, ಕೈ ನೀಡಿ… ಎಲ್ಲಿ, ನೀವೂ ಕೈ ನೀಡಿ! ಇಲ್ಲೇ, ಈಗಲೇ, ಮೊಳಕಾಲೂರಿ ನಿಮ್ಮ ಕೈಗಳಿಗೆ ಮುತ್ತಿಡತೇನೆ!’ ಫುಟ್‍ಪಾತಿನ ಮಧ್ಯೆ ಮೊಳಕಾಲೂರಿ ಕುಳಿತ. ಪುಣ್ಯಕ್ಕೆ ಆ ಜಾಗದಲ್ಲಿ ಜನಸಂಚಾರ ಇರಲಿಲ್ಲ.
‘ಸಾಕು! ದಮ್ಮಯ್ಯ, ಸುಮ್ಮನೆ ಇರಪ್ಪಾ, ಇದೇನು ಮಾಡತಿದ್ದೀಯ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಬೆದರಿದ್ದಳು.
‘ಏಳಿ, ಏಳಿ!’ ದುನ್ಯಾ ಭಯವಾಗಿದ್ದರೂ ನಗುತ್ತ ಅಂದಳು.
‘ಉಹ್ಞೂಂ, ಇಲ್ಲ! ಮೊದಲು ನಿಮ್ಮ ಕೈ ನೀಡಿ! ಹ್ಞಾ, ಧನ್ಯನಾದೆ! ಎದ್ದೆ, ಹೊರಡಣ ಇನ್ನ! ನಾನು ನಿಮಗೆ ತಕ್ಕವನಲ್ಲ, ಕುಡುಕ, ನಾಚಿಕೆ ಇಲ್ಲದವನು, ಪೆಕರ. ನಿಮ್ಮನ್ನ ಪ್ರೀತಿ ಮಾಡುವ ಯೋಗ್ಯತೆ ಇಲ್ಲ ನನಗೆ. ನಿಮ್ಮನ್ನ ಪೂಜೆ ಮಾಡತೇನೆ, ನಿಮ್ಮನ್ನ ಪೂಜೆ ಮಾಡುವುದು ಮನುಷ್ಯರ ಕರ್ತವ್ಯ! ಅದಕ್ಕೇ ಹೀಗೆ ಮಾಡಿದೆ!… ಇಗೋ ನಿಮ್ಮ ರೂಮು ಬಂತು. ನಿಮಗೆ ಇಂಥಾ ರೂಮು ಮಾಡಿದಾನಲ್ಲಾ! ಪೀಟರ್ ಪೆಟ್ರೊವಿಚ್ ನ ರಾಸ್ಕೋಲ್ನಿಕೋವ್ ಇವತ್ತು ಒದ್ದು ಓಡಿಸಿದ್ದು ಸರಿ ಅನ್ನೋದಕ್ಕೆ ಇದೊಂದೇ ಕಾರಣ ಸಾಕು! ಇಂಥಾ ಜಾಗದಲ್ಲಿ ರೂಮು ಮಾಡಿಕೊಡೋದಕ್ಕೆ ಎಷ್ಟು ಧೈರ್ಯ ಇರಬೇಕು ಅವನಿಗೆ! ಮಾನ ಹೋಗುವ ಕೆಲಸ ಮಾಡಿದಾನೆ. ಇಲ್ಲಿ ಎಂಥಾವರು ಇರತಾರೆ, ಗೊತ್ತಾ? ಮತ್ತೆ, ನೀವು ಅವನ ಮದುವೆ ಆಗುವವರಲ್ಲವಾ? ನಿಮ್ಮನ್ನ ಮದುವೆ ಆಗುವ ಗಂಡ ಎಂಥವನು ನೋಡಿದಿರಾ? ಹೇಳತೇನೆ, ಕೇಳಿ, ಲುಚ್ಛ ಅವನು, ಲುಚ್ಛ!’
‘ರಝುಮಿಖಿನ್ ಅವರೇ, ದಯವಿಟ್ಟು ಸ್ವಲ್ಪ ಎಚ್ಚರ ಇಟ್ಟುಕೊಂಡು ಮಾತಾಡಿ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮಾತಾಡಲು ಪ್ರಯತ್ನಪಟ್ಟಳು.
‘ಹೌದು, ಹೌದು, ನೀವು ಹೇಳಿದ್ದು ಸರಿ, ಎಚ್ಚರ ತಪ್ಪಿ ಮಾತಾಡಿದೆ. ನಾಚಿಕೆ ಆಗಬೇಕು ನನಗೆ!’ ಅನ್ನುತ್ತ ರಝುಮಿಖಿನ್ ನಾಲಗೆ ಕಚ್ಚಿಕೊಂಡ. ‘ಆದರೆ ನೋಡಿ, ನೀವು ಈ ಥರ ಮಾತಾಡಿದೆ ಅಂತ ನನ್ನ ಮೇಲೆ ಸಿಟ್ಟು ಮಾಡುವ ಹಾಗಿಲ್ಲ! ಇನ್ನೇನೂ ಇಲ್ಲ, ಪ್ರಾಮಾಣಿಕವಾಗಿ ಹೇಳತೇನೆ, ಇನ್ನೇನಾದರೂ ಕಾರಣ ಇದ್ದಿದ್ದರೆ ಕೆಟ್ಟತನ ಆಗತಿತ್ತು… ಹ್ಞ… ನಿಮ್ಮನ್ನ… ಹ್ಞ… ಹೋಗಲಿ ಬಿಡಿ, ಅದನ್ನ ಬಿಡಣ, ಯಾಕೆ ಅಂತ ಹೇಳಲ್ಲ… ಅಂಥ ಧೈರ್ಯ ಇಲ್ಲ ನನಗೆ… ಇವತ್ತು ಬೆಳಗ್ಗೆ ಅವನು ಬರತಿದ್ದ ಹಾಗೆ ನಮಗೆಲ್ಲ ಗೊತ್ತಾಗಿಹೋಯಿತು. ಪೀಟರ್ ಪೆಟ್ರೋವಿಚ್ ನಮ್ಮ ಥರದವನಲ್ಲ ಅಂತ. ಕ್ಷೌರದಂಗಡಿಗೆ ಹೋಗಿ ಕೂದಲು ಗುಂಗುರುಮಾಡಿಕೊಂಡು ಬಂದಿದ್ದ ಅಂತಲ್ಲ, ಬುದ್ಧಿವಂತ ಅಂತ ತೋರಿಸಿಕೊಳ್ಳತಾ ಇದ್ದ ಅಂತಲ್ಲ, ಅವನು ಪೋಲೀಸ್ ನಾಯಿ, ಸಟ್ಟಾ ವ್ಯಾಪಾರಿ ಅಂತ ಸಿಟ್ಟು; ತಂಚಾವಂಚಾ ಮಾಡುವ ಯಹೂದಿ ನನ್ಮಗ ಅಂತ ಸಿಟ್ಟು. ಅವನನ್ನ ಬುದ್ಧಿವಂತ ಅಂದುಕೊಂಡಿದೀರಾ? ಇಲ್ಲಾ, ಪೆದ್ದ ಅವನು, ಪೆದ್ದಾ! ಅಂಥವನು ನಿಮಗೆ ಸರಿಯಾದ ಜೋಡಿಯಾ? ಅಯ್ಯೋ, ದೇವರೇ!’ ತಟ್ಟನೆ ಮಾತು ನಿಲ್ಲಿಸಿದ. ಸ್ವಲ್ಪ ತಡೆದ.
ದುನ್ಯಾ ರಝುಮಿಖಿನ್ ನನ್ನು ವಿಚಿತ್ರವಾಗಿ ನೋಡಿದಳು. ಅವಳ ಕಪ್ಪು ಕಣ್ಣು ಮಿನುಗಿದವು. ಆ ನೋಟಕ್ಕೆ ರಝುಮಿಖಿನ್ ಬೆಚ್ಚಿಬಿದ್ದ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ದಿಗ್ಭ್ರಮೆಗೊಂಡು ನಿಂತಿದ್ದಳು.
ಆಗಲೇ ಅವರ ರೂಮಿನ ಹತ್ತಿರ ಬಂದಿದ್ದರು. ‘ನೋಡೀಮ್ಮಾ, ನಮ್ಮ ಮನೆಗೆ ಬಂದಿರುವವರೆಲ್ಲ ಕುಡಿಯುವವರಿರಬಹುದು, ಆದರೆ ಎಲ್ಲರೂ ಪ್ರಾಮಾಣಿಕರು. ಅವಾಗವಾಗ ಸುಳ್ಳು ಹೇಳತಾರೆ, ನಾನೂ ಸುಳ್ಳು ಹೇಳತೇನೆ, ಕೊನೆಗೆ ನಮ್ಮ ನಮ್ಮ ದಾರಿ ಹಿಡಿದು ಸತ್ಯ ಹುಡುಕುತ ಹೋಗತೇವೆ. ನಾವು ಸತ್ಯದ ದಾರಿ ಹುಡುಕುತೇವೆ, ಈ ಪೀಟರ್ ಪೆಟ್ರೊವಿಚ್ ಗೆ ಸತ್ಯದ ದಾರಿ ಬೇಕಾಗಿಲ್ಲ, ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಮನೆಗೆ ಬಂದಿರುವ ಜನಗಳನ್ನ ಬಾಯಿ ತುಂಬ ಬೈದೆ. ಆದರೂ ಅವರಿಗೆ ಗೌರವ ಕೊಡತೇನೆ. ಝೊಮ್ಯೋತೋವ್ ನ ವಿರೋಧಿಸತೇನೆ ಗೌರವ ಕೊಡಲ್ಲ, ಆದರೂ ಅವನ ಮೇಲೆ ಪ್ರೀತಿ ಇದೆ. ಅವನು ನಾಯಿಮರಿ ಥರದವನು. ಮೃಗದ ಥರ ಇರೋ ಝೋಸ್ಸಿಮೋವ್ ಕೂಡ ಪ್ರಾಮಾಣಿಕ, ವೈದ್ಯದ ಕಸುಬು ಬಲ್ಲವನು… ಸಾಕು, ಹೇಳಿದ್ದಾಯಿತು, ಕ್ಷಮಿಸಿದ್ದೂ ಆಯಿತು. ಕ್ಷಮೆ! ಹೌದಾ? ಹಾಗಾದರೆ ಹೋಗಣ! ಈ ಗಲ್ಲಿ ನನಗೆ ಗೊತ್ತು. ಒಂದು ಸಾರಿ ಇಲ್ಲಿಗೆ ಬಂದಿದ್ದೆ. ಏನೋ ದೊಡ್ಡ ಗುಲ್ಲಾಗಿತ್ತು. ಸರಿ, ನಿಮ್ಮ ರೂಮು ಯಾವುದು? ನಂಬರ್ ಎಷ್ಟು? ಎಂಟೂ? ಸರಿ, ಹೋಗಿ, ಬಾಗಿಲು ಹಾಕ್ಕೊಂಡು, ಚಿಲಕ ಹಾಕ್ಕೊಂಡು ಮಲಕ್ಕೊಳ್ಳಿ. ಯಾರನ್ನೂ ಒಳಕ್ಕೆ ಬಿಟ್ಟುಕೊಳ್ಳಬೇಡಿ. ಇನ್ನ ಕಾಲು ಗಂಟೆಯಲ್ಲಿ ವಾಪಸ್ಸು ಬರತೇನೆ, ಸುದ್ದಿ ತರತೇನೆ. ಆಮೇಲೆ ಇನ್ನರ್ಧ ಗಂಟೆಯಲ್ಲಿ ಝೋಸ್ಸಿಮೋವ್ ಜೊತೆ ಬರತೇನೆ, ನೋಡತಾ ಇರಿ! ಗುಡ್ ಬೈ! ಓಡಬೇಕು ನಾನೀಗ!’
‘ಅಯ್ಯೋ ದುನ್ಯಾ, ಎಲ್ಲಿಗೆ ಬಂತಮ್ಮಾ ನಮ್ಮ ಗತಿ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮಗಳ ಕಡೆಗೆ ತಿರುಗಿ ಕಳವಳಪಡುತ್ತ, ಭಯಪಡುತ್ತ ಕೇಳಿದಳು. ‘ಸಮಾಧಾನ ಮಾಡಿಕೋ ಅಮ್ಮ,’ ದುನ್ಯಾ ಹ್ಯಾಟು, ಕೇಪ್ ತೆಗೆಯುತ್ತ ಹೇಳಿದಳು, ‘ಸ್ವತಃ ದೇವರೇ ಈ ಮನುಷ್ಯನನ್ನ ನಮ್ಮ ಹತ್ತಿರ ಕಳಿಸಿದಾನೆ. ಅವನು ಕುಡಕೊಂಡೇ ಸೀದ ಇಲ್ಲಿಗೆ ಬಂದಿದ್ದರೂ ಪರವಾಗಿಲ್ಲ, ಹೇಳತೇನಿ ಕೇಳು, ನಮ್ಮಣ್ಣನಿಗೆ ಇದುವರೆಗೆ ಅವನು ಮಾಡಿರುವ ಉಪಕಾರ ನೋಡಿದರೆ ನಾವು ಅವನನ್ನ ನಂಬಬಹುದು.’
‘ಅವನು ವಾಪಸ್ ಬರತಾನೋ ಇಲ್ಲವೋ, ದೇವರಿಗೇ ಗೊತ್ತು, ದುನ್ಯಾ. ನಮ್ಮ ರೋದ್ಯಾನ ಬಿಟ್ಟುಬಂದೆನಲ್ಲಾ, ಎಂಥಾವಳಿರಬೇಕು ನಾನು? ಅವನು ಹಾಗಿರತಾನೆ, ಹೀಗಿರತಾನೆ ಅಂತ ಏನೇನೋ ಅಂದುಕೊಂಡಿದ್ದೆ ಈ ಥರದಲ್ಲಿ ಅವನನ್ನ ನೋಡತೇನೆ ಅಂದುಕೊಂಡಿರಲಿಲ್ಲ. ಎಷ್ಟು ಕಠಿಣವಾಗಿ ಮಾತಾಡಿದ, ಅಲ್ಲವಾ?’
ಅವಳ ಕಣ್ಣಲ್ಲಿ ನೀರು ಬಂದವು..
‘ಇಲ್ಲಾಮ್ಮ, ಹಾಗಲ್ಲ. ಅಳತಾ ಇದ್ದೆಯಲ್ಲಾ ಅದಕ್ಕೇ ಸರಿಯಾಗಿ ನೋಡಲಿಲ್ಲ ನೀನು. ಕಾಯಿಲೆ ಬಿದ್ದಿದಾನಲ್ಲಾ ಅವನ ಮನಸು ಕೆಟ್ಟುಹೋಗಿದೆ, ಅಷ್ಟೇ. ಇನ್ನೇನೂ ಇಲ್ಲ,’ ಅಂದಳು ದುನ್ಯಾ.
ದರಿದ್ರ ಕಾಯಿಲೆ. ಏನಾದರೂ ಆದರೆ ಏನು ಗತಿ ಅಂತ ಚಿಂತೆ ಆಗಿದೆ,’ ಅಂದಳು ತಾಯಿ. ಮಗಳ ಮನಸಿನಲ್ಲಿ ಏನಿದೆಯೋ ತಿಳಿಯಲು ತಡಕಾಡುವ ಹಾಗೆ ದುನ್ಯಾಳ ಕಣ್ಣನ್ನು ದೃಷ್ಟಿಸಿ ನೋಡಿದಳು. ಅಣ್ಣನ್ನ ಸಮರ್ಥಿಸುತ್ತ, ಅವನ ನಡವಳಿಕೆಯನ್ನು ಕ್ಷಮಿಸಿದವಳ ಹಾಗೆ ದುನ್ಯಾ ಆಡಿದ ಮಾತಿನಿಂದ ತಾಯಿಗೆ ಅರ್ಧ ನಿರಾಳವಾಗಿತ್ತು. ಮಗಳನ್ನು ಇನ್ನೂ ಸ್ವಲ್ಪ ಕೆದಕಿ ನೋಡಬೇಕೆಂದು ‘ಹ್ಞೂಂ, ಕಾಯಿಲೆ. ಏನಾಗತ್ತೋ ಏನೋ! ನಾಳೆ ಹೊತ್ತಿಗೆ ನಿನ್ನನ್ನ ಖಂಡಿತ ಚೆನ್ನಾಗಿ ಮಾತಾಡಿಸತಾನೆ,’ ಅಂದಳು.
‘ಆ ವಿಚಾರ ನಾಳೇನೂ ಅದನ್ನೇ ಹೇಳತಾನೆ, ನನಗೆ ಗೊತ್ತು,’ ಅನ್ನುತ್ತ ತಾಯಿಯ ಮಾತಿಗೆ ತಡೆ ಹಾಕಿದಳು ದುನ್ಯಾ. ಮಗಳ ಮದುವೆಯ ಆ ವಿಚಾರದ ಬಗ್ಗೆಯೇ ತಾಯಿಗೆ ಚಿಂತೆ ಇತ್ತು, ಅದನ್ನ ಬಾಯಿಬಿಟ್ಟು ಕೇಳಲು ಅಂಜುತ್ತಿದ್ದಳು. ದುನ್ಯಾ ಹೋಗಿ ಅಮ್ಮನ ಕೆನ್ನೆಗೆ ಮುತ್ತಿಟ್ಟಳು. ಅಮ್ಮ ಏನೂ ಮಾತಾಡದೆ ಮಗಳನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ರಝುಮಿಖಿನ್ ಯಾವಾಗ ಬರುತ್ತಾನೋ ಎಂದು ಕಾಯುತ್ತ ಕೂತಳು. ಮಗಳೂ ತನ್ನ ಹಾಗೇ ನಿರೀಕ್ಷೆ ಇಟ್ಟುಕೊಂಡು, ಎದೆಯ ಮೇಲೆ ಕೈ ಕಟ್ಟಿಕೊಂಡು, ಯೋಚನೆ ಮಾಡುತ್ತ, ರೂಮಿನಲ್ಲಿ ಮೂಲೆಯಿಂದ ಮೂಲೆಗೆ ಹೆಜ್ಜೆ ಹಾಕುವುದನ್ನು ಬೆದರುತ್ತ ನೋಡಿದಳು. ಯೋಚನೆಯಲ್ಲಿ ಮುಳುಗಿ ಹೀಗೆ ಹೆಜ್ಜೆಹಾಕುವ ಮಗಳನ್ನು ಮಾತಾಡಿಸುವುದಕ್ಕೆ ತಾಯಿ ಯಾವಾಗಲೂ ಹೆದರುತ್ತಿದ್ದಳು.
ರಝುಮಿಖಿನ್ ಹಾಸ್ಯಾಸ್ಪದವಾಗಿದ್ದ, ಅವನು ಕುಡಿದಿದ್ದ ವೈನು ಅವನ ಭಾವನೆಗಳನ್ನು ಕೆರಳಿಸಿ ದುನ್ಯಾ ಬಗ್ಗೆ ಅವನಿಗಿದ್ದ ಅಪೇಕ್ಷೆ ಹೊತ್ತಿ ಉರಿದಿತ್ತು ಅನ್ನುವುದು ನಿಜ. ದುನ್ಯಾಳನ್ನು ವಿಶೇಷವಾಗಿ ಈಗ, ಕೈ ಕಟ್ಟಿಕೊಂಡು, ವಿಷಣ್ಣವಾದರೂ ಚಿಂತಾಮಗ್ನ ಮುಖ ಹೊತ್ತು ರೂಮಿನಲ್ಲಿ ಹೆಜ್ಜೆ ಹಾಕುತ್ತ ಇರುವುದನ್ನು ಯಾರೇ ನೋಡಿದ್ದರೂ, ರಝುಮಿಖಿನ್ ನ ವಿಚಿತ್ರ ಮನಸ್ಥಿತಿಯನ್ನು ಕ್ಷಮಿಸಿಬಿಡುತ್ತಿದ್ದರು. ದುನ್ಯಾ ತುಂಬ ಚಂದವಾಗಿದ್ದಳು, ಎತ್ತರವಾಗಿ, ತೆಳ್ಳಗೆ ಬಲವಾಗಿದ್ದ ಹುಡುಗಿ. ಆತ್ಮವಿಶ್ವಾಸದ ಹೆಣ್ಣು, ಗಂಭೀರ ಸ್ವಭಾವದವಳು, ಮೃದು ಮನಸಿನವಳು ಅನ್ನುವುದು ಅವಳನ್ನ ನೋಡಿದರೇ ತಿಳಿಯುತ್ತಿತ್ತು. ಕಂದು ಬಣ್ಣದ ತಲೆಗೂದಲು, ಆ ಬಣ್ಣಕ್ಕಿಂತ ಸ್ವಲ್ಪ ತೆಳುವಾದ ಕಂದು ಮುಖ, ಹೆಮ್ಮೆ ಮಿನುಗುವ ಕಪ್ಪು ಕಣ್ಣಿನಲ್ಲಿ ಮರುಕ, ಕರುಣೆಗಳ ಹೊಳಪೂ ಇತ್ತು. ಸ್ವಲ್ಪ ಬಿಳಿಚಿದ ಹಾಗಿದ್ದರೂ ಕಾಯಿಲೆಯವಳ ಹಾಗೆ ಕಾಣುತ್ತಿರಲಿಲ್ಲ. ಮುಖದಲ್ಲಿ ಹೊಳಪಿತ್ತು, ಆರೋಗ್ಯವಾಗಿರುವ ಹುಡುಗಿ ಅನಿಸುತ್ತಿತ್ತು.
ಅವಳ ಬಾಯಿ ಪುಟ್ಟದು, ಕೆಳ ತುಟಿ ಕೆಂಪಾಗಿ, ಇದೀಗ ಅರಳಿದ ಹೂವಿನ ದಳ ಅನಿಸುತ್ತ ಸ್ವಲ್ಪವೇ ಸ್ವಲ್ಪ ಉಬ್ಬಿ ಮುಂದೆ ಬಂದಿತ್ತು. ಅವಳ ಗಲ್ಲದ ಹಾಗೇ. ಇದೊಂದು ಅಂಶ ಮಾತ್ರ ಅವಳ ಮುಖದ ಒಟ್ಟಾರೆ ಚೆಲುವಿಗೆ ದೃಷ್ಟಿಬೊಟ್ಟಿನ ಹಾಗಿತ್ತು. ಹಾಗೆಯೇ ಅವಳ ಚೆಲುವಿಗೆ ವಿಶೇಷ ಲಕ್ಷಣವನ್ನು ಕೊಟ್ಟು ಸ್ವಲ್ಪ ನಾನತ್ವವನ್ನೂ ತೋರುವ ಹಾಗಿತ್ತು. ಅವಳ ಮುಖದಲ್ಲಿದ್ದ ಸಂತೋಷದ ಭಾವದ ಜೊತೆಗೆ ಗಾಂಭೀರ್ಯ ಬೆರೆತಿತ್ತು. ಅವಳ ಕಿರು ನಗು ಯೌವನನದ ಸಂತೋಷದ ಮುಕ್ತ ನಗುವಾಗಿ ಅರಳುತ್ತ ಇಡೀ ಮುಖವನ್ನು ಬೆಳಗುತ್ತಿತ್ತು. ಹೀಗಿರುವಾಗ ಉತ್ಸಾಹ ತುಂಬಿರುವ, ಪ್ರಾಮಾಣಿಕನಾದ, ಸರಳ, ಸದೃಢನಾದ, ಜಾನಪದ ನಾಯಕನಂಥ, ಕುಡಿದು ಮತ್ತೇರಿದ್ದ ರಝುಮಿಖಿನ್ ತಾನೆಂದೂ ಕಂಡಿರದ ಇಂಥ ಹೆಣ್ಣಿಗೆ ಮೊದಲ ನೋಟದಲ್ಲೇ ಮರುಳಾದದ್ದು ಏಕೆಂದು ತಿಳಿಯುತ್ತದೆ.
ಅವಳು ಬಹು ಕಾಲದ ನಂತರ ತನ್ನಣ್ಣನನ್ನು ಖುಷಿಯಾಗಿ ಪ್ರೀತಿಯಿಂದ ನೋಡುತ್ತಿರುವ ಕ್ಷಣದಲ್ಲಿ ದುನ್ಯಾ ರಝುಮಿಖಿನ್ ಕಣ್ಣಿಗೆ ಮೊದಲ ಬಾರಿ ಕಾಣುವಂತೆ ವಿಧಿಯೇ ಸಂಚು ಮಾಡಿತ್ತು. ಅಣ್ಣನ ಕ್ರೂರವಾದ ಆಜ್ಞೆಗೆ ಪ್ರತಿಕ್ರಿಯೆಯಾಗಿ ಅವಳ ತುಟಿ ಸಿಟ್ಟಿನಲ್ಲಿ ಕಂಪಿಸುವುದನ್ನೂ ನೋಡಿದ್ದ, ಅವಳಿಗೆ ಶರಣಾಗಿದ್ದ.
ರಝುಮಿಖಿನ್ ಕುಡಿದು ತಲೆಗೇರಿದ್ದಾಗ ಈ ತಾಯಿ ಮಗಳ ಜೊತೆಯಲ್ಲಿ ರಾಸ್ಕೋಲ್ನಿಕೋವ್ ನ ಮನೆಯ ಮೆಟ್ಟಿಲಿಳಿಯುವಾಗ ‘ಓನರಮ್ಮನ ದುನ್ಯಾಳ ಬಗ್ಗೆ ಮಾತ್ರವಲ್ಲ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಬಗ್ಗೆ ಕೂಡ ಹೊಟ್ಟೆಕಿಚ್ಚು ಪಡುತ್ತಾಳೆ,’ ಎಂದು ಆಡಿದ ಅಸಂಬದ್ಧ ಮಾತುಗಳಲ್ಲಿ ನಿಜವನ್ನೇ ಹೇಳಿದ್ದ. ಪುಲ್ಚೇರಿಯ ಅಲೆಕ್ಸಾಂಡ್ರೋವಾಗೆ ಆಗಲೇ ನಲವತ್ತಮೂರು ವರ್ಷವಾಗಿದ್ದರೂ ಮುಖದಲ್ಲಿ ಅವಳ ಸೌಂದರ್ಯದ ಕುರುಹು ಇನ್ನೂ ಉಳಿದಿತ್ತು. ಮನಸನ್ನು ಸ್ಪಷ್ಟವಾಗಿ, ಶುದ್ಧವಾಗಿ ಇರಿಸಿಕೊಂಡ, ಭಾವದ ತೀವ್ರತೆಯನ್ನೂ ಉತ್ಸಾಹವನ್ನೂ ಹೃದಯದಲ್ಲಿ ಉಳಿಸಿಕೊಂಡ ಪ್ರಾಮಾಣಿಕ ಹೆಂಗಸರು ಕಾಣುವ ಹಾಗೆ ಅವಳೂ ಆಗಿದ್ದ ವಯಸಿಗಿಂತ ಕಿರಿಯಳಾಗಿ ಕಾಣುತ್ತಿದ್ದಳು (ಮನಸಿನಲ್ಲಿ ಸ್ಪಷ್ಟತೆಯನ್ನು ಹೃದಯದಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದೊಂದೇ ಪ್ರಾಯ ಕಳೆದ ಮೇಲೂ ಸೌಂದರ್ಯವನ್ನು ಉಳಿಸಿಕೊಳ್ಳುವ ದಾರಿ ಎಂದೂ ನಾವಿಲ್ಲಿ ಹೇಳಬಹುದು).
ಅವಳ ತಲೆಗೂದಲು ತೆಳ್ಳಗಾಗಿ ನೆರೆಯಲು ಶುರುವಾಗಿತ್ತು. ಕಣ್ಣಿನ ಸುತ್ತ ಪುಟ್ಟ ನಿರಿಗೆಗಳು ಮೂಡಿದ್ದವು. ಚಿಂತೆ, ದುಃಖಗಳ ಕಾರಣದಿಂದ ಕೆನ್ನೆ ಸ್ವಲ್ಪ ಹಳ್ಳಬಿದ್ದ ಹಾಗಿತ್ತು. ಆದರೂ ಅವಳ ಮುಖ ಚಂದವಾಗಿತ್ತು. ಉಬ್ಬಿದ ಕೆಳತುಟಿಯ ಭಾವವೊಂದನ್ನು ಬಿಟ್ಟರೆ ಉಳಿದಂತೆ ಅವಳ ಮುಖವು ಇಪ್ಪತ್ತು ವರ್ಷಗಳ ನಂತರದ ದುನ್ಯಾಳ ಮುಖದ ಭಾವಚಿತ್ರ ಅನಿಸುತ್ತಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಭಾವುಕಳಾದರೂ ಭೋಳೆಯಲ್ಲ; ಹೆದರಿಕೆಯ ಸ್ವಭಾವವೂ ಇತ್ತು, ಹೊಂದಿಕೊಳ್ಳುವ ಗುಣವೂ ಇತ್ತು. ತನ್ನ ನಂಬಿಕೆಗೆ ವಿರುದ್ಧವಾದುದನ್ನೂ ಒಪ್ಪುವಂಥವಳು ಅವಳು. ಆದರೂ ಒಂದು ಮಿತಿಯನ್ನು ದಾಟಿದರೆ ಪ್ರಾಮಾಣಿಕತೆ, ತತ್ವ, ದೃಢವಿಶ್ವಾಸಗಳಿಂದ ಎಂಥ ಪರಿಸ್ಥಿತಿ ಬಂದರೂ ಕದಲದವಳು ಅವಳು.
ರಝುಮಿಖಿನ್ ಹೋಗಿ ಸರಿಯಾಗಿ ಇಪ್ಪತ್ತು ನಿಮಿಷ ಕಳೆದ ಮೇಲೆ ಬಾಗಿಲು ತಟ್ಟುವ ಸದ್ದು ಕೇಳಿಸಿತ್ತು. ಅವನು ವಾಪಸು ಬಂದಿದ್ದ.
‘ಒಳಕ್ಕೆ ಬರಕ್ಕೆ ಟೈಮಿಲ್ಲ,’ ಬಾಗಿಲು ತೆರೆಯುತ್ತಿದ್ದ ಹಾಗೇ ಆತುರವಾಗಿ ಹೇಳಿದ. ‘ಅವನು ಗೊರಕೆ ಹೊಡೆಯುತ್ತ ನೆಮ್ಮದಿಯಾಗಿ ನಿದ್ದೆ ಮಾಡತಾ ಇದಾನೆ, ದೇವರ ದಯವಿದ್ದರೆ ಇನ್ನೂ ಹತ್ತು ಗಂಟೆಯಷ್ಟು ಹೊತ್ತು ಹೀಗೇ ಮಲಗತಾನೆ. ನಸ್ತಾಸ್ಯಾ ಅವನ ಜೊತೆ ಇದಾಳೆ. ನಾನು ವಾಪಸ್ ಬರುವವರೆಗೂ ಅಲ್ಲೇ ಇರು ಅಂತ ಹೇಳಿದೇನೆ. ಈಗ ಹೋಗಿ ಝೋಸ್ಸಿಮೋವ್ ನನ್ನು ಎಳಕೊಂಡು ಬರತೇನೆ. ಪರಿಸ್ಥಿತಿ ಹೇಗಿದೆ ಅಂತ ಅವನೇ ನಿಮಗೆ ಹೇಳತಾನೆ. ಆಮೇಲೆ ನೀವೂ ಬನ್ನಿ, ತೀರ ಸುಸ್ತಾಗಿಲ್ಲದೆ ಇದ್ದರೆ,’ ಅಂದ
‘ಎಷ್ಟು ಜಾಣ, ಎಷ್ಟು ಅಚ್ಚುಕಟ್ಟಾಗಿ ಕೆಲಸಮಾಡತಾನೆ!’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಉದ್ಗಾರ ತೆಗೆದಳು. ಅವಳಿಗೆ ತುಂಬ ಖುಷಿಯಾಗಿತ್ತು.
‘ಒಳ್ಳೆಯವನು ಅನಿಸತ್ತೆ!’ ಬೆಚ್ಚನೆ ದನಿಯಲ್ಲಿ ಹೇಳಿದ ದುನ್ಯಾ ಮತ್ತೆ ರೂಮಿನಲ್ಲಿ ಅತ್ತ ಇತ್ತ ಹೆಜ್ಜೆ ಹಾಕುವುದಕ್ಕೆ ಶುರು ಮಾಡಿದಳು.
ಸುಮಾರು ಒಂದು ಗಂಟೆ ಕಳೆದ ಮೇಲೆ ಹೆಜ್ಜೆ ಸದ್ದು, ಬಾಗಿಲು ಬಡಿದ ಸದ್ದು ಕೇಳಿಸಿದವು, ಈ ಬಾರಿ ಮಾತ್ರ ಇಬ್ಬರೂ ಹೆಂಗಸರು ರಝುಮಿಖಿನ್ ಮಾತಿನಲ್ಲಿ ಪೂರ್ಣ ವಿಶ್ವಾಸವಿಟ್ಟುಕೊಂಡು ಅವರು ಬರುವುದನ್ನೇ ಕಾಯುತ್ತಿದ್ದರು. ಅವನು ಹೇಳಿದ ಹಾಗೇ ಝೋಸ್ಸಿಮೊವ್ ನನ್ನು ಎಳೆದುಕೊಂಡು ಬಂದಿದ್ದ. ಮನೆಯಲ್ಲಿ ನಡೆಯುತ್ತಿದ್ದ ಸಂಭ್ರಮವನ್ನು ಬಿಟ್ಟು ರಾಸ್ಕೋಲ್ನಿಕೋವ್ ನನ್ನು ನೋಡಲು ಝೋಸ್ಸಿಮೋವ್ ಒಪ್ಪಿದ್ದ. ಕುಡುಕ ರಝುಮಿಖಿನ್ ಮಾತನ್ನು ನಂಬದೆ ಹೆಂಗಸರನ್ನು ನೋಡಲು ಹಿಂಜರಿದಿದ್ದ. ಆದರೆ ಇಲ್ಲಿಗೆ ಬಂದ ತಕ್ಷಣ ಅವನ ಹಿಂಜರಿಕೆ ಮಾಯವಾಯಿತಷ್ಟೇ ಅಲ್ಲ, ಭವಿಷ್ಯವಾಣಿಯನ್ನು ನುಡಿಯುವ ಪ್ರವಾದಿಯನ್ನು ಕಾಯುವ ಹಾಗೆ ತನಗಾಗಿ ಕಾಯುತ್ತಿದ್ದ ಹೆಂಗಸರನ್ನು ನೋಡಿ ಹೆಮ್ಮೆಯೂ ಉಬ್ಬಿತ್ತು. ಸರಿಯಾಗಿ ಹತ್ತು ನಿಮಿಷ ಅಲ್ಲಿದ್ದು ಪುಲ್ಚೇರಿಯ ಅಲೆಕ್ಸಾಂಡ್ರೋವಾಳ ಮನಸ್ಸಿಗೆ ಪೂರಾ ಸಮಾಧಾನ ತಂದಿದ್ದ.
ಅವನ ಮಾತಿನಲ್ಲಿ ಅಸಾಮಾನ್ಯ ಸಹಾನುಭೂತಿ ಇತ್ತು, ಮಾತಿನ ಮೇಲೆ ಹಿಡಿತವಿತ್ತು, ಬಹು ಮುಖ್ಯವಾದ ಸಮಾಲೋಚನೆ ನಡೆಸುತ್ತಿರುವ ಇಪ್ಪತ್ತೇಳು ವರ್ಷದ ಡಾಕ್ಟರಿಗೆ ಇರುವಂಥ ಉತ್ಸಾಹ ತುಂಬಿದ ಗಾಂಭೀರ್ಯವಿತ್ತು. ರೋಗಿಯ ಆರೋಗ್ಯದ ವಿಷಯವೊಂದನ್ನು ಬಿಟ್ಟು ಬೇರೆ ಇನ್ನೊಂದು ಮಾತಾಡಲಿಲ್ಲ ಅವನು. ಇಬ್ಬರು ಹೆಂಗಸರೊಡನೆ ಖಾಸಗಿ ವಿಚಾರ ಮಾತನಾಡಿ ವೈಯಕ್ತಿಕ ಸಂಬಂಧ ಬೆಳೆಸಿಕೊಳ್ಳುವ ಬಯಕೆಯೂ ಇರಲಿಲ್ಲ. ಒಳಕ್ಕೆ ಬರುತ್ತಿದ್ದ ಹಾಗೇ ದುನ್ಯಾಳ ಕೋರೈಸುವ ಚೆಲುವನ್ನು ಗಮನಿಸಿದ್ದ. ಆಮೇಲೆ ಅವಳಿಗೆ ಗಮನ ಕೊಡದೆ ಅಲ್ಲಿರುವಷ್ಟೂ ಹೊತ್ತು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಜೊತೆಯಲ್ಲಷ್ಟೇ ಮಾತಾಡಿದ್ದ. ಇದೆಲ್ಲದರಿಂದ ಅವನಿಗೆ ಒಳಗೊಳಗೇ ತೃಪ್ತಿಯಾಗಿತ್ತು. ರೋಗಿಯನ್ನು ಕುರಿತ ಹಾಗೆ, ‘ಈಗಿರುವವಂತೆ ಅವನ ಪರಿಸ್ಥಿತಿ ತೃಪ್ತಿಕರವಾಗಿದೆ,’ ಅಂದ.
ಇತ್ತೀಚಿನ ತಿಂಗಳುಗಳಲ್ಲಿ ಆದ ಹಣಕಾಸಿನ ತೊಂದರೆಯ ಜೊತೆಗೆ ಯಾವುದೋ ನೈತಿಕ ಕಾರಣವೂ ರೋಗಕ್ಕೆ ಕಾರಣವಾಗಿರಬಹುದು ಅಂದ. ದೈಹಿಕ, ಮಾನಸಿಕ, ಆರ್ಥಿಕ ಕಾರಣಗಳ ಜೊತೆಗೆ ಕಳವಳ, ಭಯ, ಚಿಂತೆ, ಗುಂಗು ಹತ್ತಿದ ಹಾಗೆ ಕಾಡುವ ಯಾವುದೋ ಒಂದು ಆಲೋಚನೆ, ಇವೆಲ್ಲ ಸೇರಿ ಅವನ ಆರೋಗ್ಯ ಕೆಟ್ಟಿದೆ ಅಂದ. ದುನ್ಯಾ ಗಮನಕೊಟ್ಟು ಕೇಳುತ್ತಿರುವುದನ್ನು ಗಮನಿಸಿದ ಝೋಸ್ಸಿಮೋವ್ ಸ್ವಲ್ಪ ವಿವರಣೆ ಸೇರಿಸಿದ. ‘ಹುಚ್ಚು ಇದ್ದರೂ ಇರಬಹುದೇನೋ ಅನ್ನುವ ಅನುಮಾನ’ದ ಬಗ್ಗೆ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಕಳವಳಪಡುತ್ತ, ಅಂಜುತ್ತ ಕೇಳಿದ ಪ್ರಶ್ನೆಗೆ ಸಮಾಧಾನವಾಗಿ, ಪ್ರಾಮಾಣಿಕವಾಗಿ ನಗುತ್ತಾ ತನ್ನ ಮಾತನ್ನು ಯಾರೋ ಅತಿಯಾಗಿ ಉತ್ಪ್ರೇಕ್ಷೆ ಮಾಡಿದ್ದಾರೆ ಎಂದು ಹೇಳಿದ. ಹಾಗಿದ್ದರೂ ಯಾವುದೋ ಒಂದು ವಿಚಾರ ರೋಗಿಯನ್ನು ಬಿಡದೆ ಹಿಡಿದುಕೊಂಡಿದೆ, ಇದನ್ನು ಮಾನೋಮೇನಿಯ ಅನ್ನುತ್ತಾರೆ ಎಂದು ವಿವರಿಸಿದ.
ತಾನು ಈಗ ಮನಶ್ಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ ಎಂದ. ರೋಗಿಯು ಹೆಚ್ಚುಕಡಮೆ ನಿನ್ನೆಯವರೆಗೂ ಸನ್ನಿಯ ಸ್ಥಿತಿಯಲ್ಲಿದ್ದ ಅನ್ನುವುದನ್ನು ಮರೆಯಬಾರದು, ಈಗ ಮನೆಯವರು ಬಂದಿರುವುದರಿಂದ ಅವನ ಮನಸ್ಸು ಬೇರೆ ಕಡೆಗೆ ತಿರುಗಿ ಒಳ್ಳೆಯದೇ ಆಗುತ್ತದೆ ಎಂದ. ಯಾವುದೇ ಹೊಸ ಆಘಾತ ಆಗದ ಹಾಗೆ ನೋಡಿಕೊಳ್ಳಬೇಕು ಎಂಬ ಮಾತು ಸೇರಿಸಿದ. ಆಮೇಲೆ ಎದ್ದು ನಿಂತು ಇಬ್ಬರಿಗೂ ಸ್ನೇಹಪೂರ್ಣವಾಗಿ ಗಂಭೀರವಾಗಿ ವಂದಿಸಿ, ಒಳ್ಳೆಯದಾಗಲೆಂದು ಅವರ ಆಶೀರ್ವಾದ ಪಡೆದು, ತಾನಾಗಿ ಕೇಳದಿದ್ದರೂ ದುನ್ಯಾ ಮುಂದೆ ಚಾಚಿದ ಪುಟ್ಟ ಕೈಯನ್ನು ಕುಲುಕಿ, ಅವಳ ಕೃತಜ್ಞತೆಯ ಮಾತುಗಳನ್ನು ಕೇಳಿ, ತನ್ನ ಬಗ್ಗೆ ತಾನೇ ಅತೀವ ತೃಪ್ತಿಪಡುತ್ತ, ಖುಷಿಯಾಗಿ ಹೊರಟುಹೋದ.
‘ನಾಳೆ ಬೆಳಗ್ಗೆ ಮಾತಾಡಣ, ಈಗ ಮಲಕ್ಕೊಳ್ಳಿ, ಬೆಳಿಗ್ಗೆ ಆದಷ್ಟು ಬೇಗ ಬಂದು ಸುದ್ದಿ ತಿಳಿಸತೇನೆ,’ ಎಂದು ಸೇರಿಸಿ ಝೋಸ್ಸಿಮೋವ್ ನ ಹಿಂದೆಯೇ ಹೊರಟ ರಝುಮಿಖಿನ್.
‘ಹ್ಞಾ, ಹೊತ್ತುಕೊಂಡು ಹೋಗಬೇಕು ಅನ್ನುವಷ್ಟು ಚೆನ್ನಾಗಿದಾಳಲ್ಲವಾ ಹುಡುಗೀ?’ ಅವರಿಬ್ಬರೂ ರಸ್ತೆಗಿಳಿದ ತಕ್ಷಣ ಝೋಸ್ಸಿಮೋವ್ ತುಟಿ ಚಪ್ಪರಿಸುತ್ತ ಹೇಳಿದ.
‘ಹೊತ್ತುಕೊಂಡು ಹೋಗಬೇಕು ಅಂದೆಯಾ?’ ರಝುಮಿಖಿನ್ ಅರಚಿದ. ಝೋಸ್ಸಿಮೋವ್ ನ ಕತ್ತು ಹಿಸುಕಲು ಹೋದ. ಅವನನ್ನು ಗೋಡೆಗೆ ಒತ್ತಿ ಹಿಡಿದು, ‘ಮೈಮೇಲೆ ಎಚ್ಚರ ಇರಲಿ, ಇನ್ನೊಂದು ಸಲ ಇಂಥ ಮಾತಾಡಿದರೆ, ಹುಷಾರ್! ಕೇಳಿಸಿತಾ?’ ಅಂದ.
‘ಒಳ್ಳೇ ಕುಡುಕನ ಸಹವಾಸ!’ ಅನ್ನುತ್ತ ಝೋಸ್ಸಿಮೋವ್ ಅವನ ಕೈಯಿಂದ ಬಿಡಿಸಿಕೊಳ್ಳಲು ನೋಡಿದ. ರಝುಮಿಖಿನ್ ತಾನೇ ಅವನನ್ನು ಬಿಟ್ಟ. ಝೋಸ್ಸಿಮೋವ್ ಅವನ ಮುಖವನ್ನು ಗಮನಿಸಿನೋಡಿದ, ಅವನೊಳಗಿಂದ ನಗು ಸಿಡಿಯಿತು. ರಝುಮಿಖಿನ್ ತೋಳು ಇಳಿಬಿಟ್ಟುಕೊಂಡು ತಲೆ ತಗ್ಗಿಸಿ, ಗಂಭೀರವಾದ ಚಿಂತೆಯಲ್ಲಿ ಮುಳುಗಿದ್ದ.
‘ನಾನೊಂದು ಕತ್ತೆ, ನೀನೂ ಅಷ್ಟೇ, ಇನ್ನೊಂದು ಕತ್ತೆ!’ ಮಳೆ ಮೋಡದ ಹಾಗೆ ಗುಡುಗಿದ.
‘ಇಲ್ಲ, ಬ್ರದರ್, ನಾನು ಕತ್ತೆ ಅಲ್ಲ, ನನಗೆ ಅಂಥ ಹುಚ್ಚು ಕನಸೇನೂ ಇಲ್ಲ.’
ಇಬ್ಬರೂ ಮಾತಿಲ್ಲದೆ ನಡೆದರು. ರಾಸ್ಕೋಲ್ನಿಕೋವ್ ನ ಮನೆಯ ಹತ್ತಿರ ಬಂದಾಗ, ಅದುವರೆಗೂ ಗಾಢವಾದ ಚಿಂತೆಯಲ್ಲಿ ಮುಳುಗಿದ್ದ ರಝುಮಿಖಿನ್ ಮೌನ ಮುರಿದ.
‘ನೋಡು, ಝೋಸ್ಸಿಮೋವ್, ನೀನು ಒಳ್ಳೆಯವನು. ಆದರೂ ನಿನಗೆ ಹೆಂಗಸರ ಚಪಲ ಜಾಸ್ತಿ. ನಿನ್ನ ಮನಸ್ಸು ತುಂಬಾ ವೀಕು. ಸ್ವಂತ ಸುಖಕ್ಕೆ ಏನೂ ಕಡಮೆ ಆಗದ ಹಾಗೆ ನೋಡಿಕೊಳ್ಳುತ್ತೀಯ. ಹೀಗೇ ಮುಂದುವರೆದರೆ ಕೊಳಕು ಕೆಸರು ಮೆತ್ತಿಕೊಳ್ಳುತ್ತೀಯ ನೀನು. ಅದು ಹೇಗೆ ನೀನು ಸ್ವಾರ್ಥವಿಲ್ಲದ ಒಳ್ಳೆಯ ಡಾಕ್ಟರಾಗಿದ್ದೀಯೊ ಅರ್ಥವೇ ಆಗಲ್ಲ ನನಗೆ. ಒಳ್ಳೆಯ ನಿದ್ದೆಯಲ್ಲಿದ್ದಾಗ ನಿನ್ನನ್ನು ಎಬ್ಬಿಸಿದರೂ ಬೇಜಾರು ಮಾಡಿಕೊಳ್ಳದೆ ಪೇಷೆಂಟನ್ನು ನೋಡುವುದಕ್ಕೆ ಹೊರಡತೀಯ. ಇನ್ನೊಂದೆರಡು ವರ್ಷ ಕಳೆದಮೇಲೂ ಹೀಗೇ ಇರತೀಯೇನೋ ನೋಡತೇನೆ. ಇರಲಿ ಬಿಡು. ಏನು ಹೇಳಕ್ಕೆ ಬಂದೆ ಅಂದರೆ, ನೀನು ಇವತ್ತು ರಾತ್ರಿ ಇಲ್ಲೇ, ರಾಸ್ಕೋಲ್ನಿಕೋವ್ ಮನೆಯಲ್ಲಿರಬೇಕು. ಅಲ್ಲಿ ಜಾಗ ಇಲ್ಲ ಅಂತ ಓನರಮ್ಮನ್ನ ಒಪ್ಪಿಸಿ, ಬಹಳ ಕಷ್ಟವಾಯಿತು ಅವಳನ್ನ ಒಪ್ಪಿಸುವುದಕ್ಕೆ, ಅವರ ಅಡುಗೆ ಮನೆಯಲ್ಲಿ ನಿನಗೆ ಏರ್ಪಾಟು ಮಾಡಿಸಿದೇನೆ. ಅವಳ ಪರಿಚಯ ಮಾಡಿಕೊಳ್ಳುವುದಕ್ಕೆ ಒಳ್ಳೆಯ ಚಾನ್ಸು. ಅಯ್ಯೋ, ನೀನು ಅಂದುಕೊಂಡಿರುವ ಥರದಲ್ಲಿ ಅಲ್ಲಾ ಬ್ರದರ್!’
‘ಏನೂ ಅಂದುಕೊಂಡೇ ಇಲ್ಲ ನಾನು,’ ಅಂದ ಝೋಸ್ಸಿಮೋವ್
‘ಬ್ರದರ್, ಈ ಹೆಂಗಸಿಗೆ ನಾಚಿಕೆ ಜಾಸ್ತಿ, ಮಾತು ಕಡಮೆ, ಮರ್ಯಾದಸ್ಥೆ. ಪವಿತ್ರವಾಗಿಯೇ ಉಳಿಯಬೇಕು ಅಂತ ಭಯಂಕರವಾದ ನಂಬಿಕೆ, ಹಟ. ಇಷ್ಟೆಲ್ಲಾ ಇದ್ದರೂ ನಾಲ್ಕು ನಿಟ್ಟುಸಿರು ಬಿಟ್ಟರೆ ಸಾಕು ಮೇಣದ ಹಾಗೆ ಕರಗಿ ಹರಿದು ಹೋಗುವ ಅಪೂರ್ವ ಸುಂದರಿ, ನನ್ನನ್ನ ಅವಳಿಂದ ಕಾಪಾಡು, ಈ ಲೋಕದ ಎಲ್ಲಾ ದೆವ್ವಗಳ ಸಾಕ್ಷಿಯಾಗಿ ಕೇಳತೇನೆ, ನಾನು ಜೀವಮಾನ ಪರ್ಯಂತ ನಿನ್ನ ಋಣದಲ್ಲಿರತೇನೆ, ಬ್ರದರ್!’
ಝೋಸ್ಸಿಮೋವ್ ಮೊದಲಿಗಿಂತ ಜೋರಾಗಿ ನಕ್ಕ.
‘ನೆಗೆದು ಬಿದ್ದೆ ನೀನು! ಸರಿ, ಅವಳನ್ನ ಕಟ್ಟಿಕೊಂಡು ನನಗೇನಾಗಬೇಕು?’ ಅಂದ.
‘ಹೇಳತೇನೆ, ಅದು ಅಷ್ಟು ಕಷ್ಟ ಏನಲ್ಲ. ಅವಳ ಪಕ್ಕದಲ್ಲಿ ಕೂತು ಬಾಯಿಗೆ ಬಂದದ್ದು ಮಾತಾಡು. ಅಲ್ಲದೆ ನೀನು ಡಾಕ್ಟರು, ಅವಳಿಗೆ ಇರುವ ಯಾವುದರೂ ನೋವಿಗೆ ಔಷಧ ಕೊಡು. ನೀನು ಕಳಕೊಳ್ಳೋಂಥದ್ದು ಏನಿಲ್ಲ. ಅವಳ ಹತ್ತಿರ ಪಿಯಾನೋ ಇದೆ, ನಾನು ಅದನ್ನ ನುಡಿಸತಾ ಯಾವುದಾದರೂ ನಿಜವಾದ ರಶಿಯನ್ ಹಾಡು ಹೇಳತೇನೆ: ‘ಕಂಬನಿಯಲಿ ಮುಳುಗೇಳುವೆ ನಾನೂ’ ಅಂತ. ಅವಳಿಗೆ ಅಂಥ ಹಾಡು ಇಷ್ಟ. ಸರಿ, ಎಲ್ಲಾ ಶುರುವಾಗಿದ್ದು ಹಾಡಿನಿಂದ. ನೀನು ಬಿಡು ಪಿಯಾನೋ ನುಡಿಸುವುದರಲ್ಲಿ ಎತ್ತಿದ ಕೈ, ರಬಿನ್‍ಸ್ಟೇನ್ ಥರ… ಖಂಡಿತ ನಿನಗೆ ಬೇಜಾರಾಗಲ್ಲ.’
‘ಏನು, ನೀನು ಅವಳಿಗೇನಾದರೂ ಮಾತುಕೊಟ್ಟಿದೀಯಾ? ರಸೀದಿ, ಪ್ರಾಮಿಸರಿ ಇಂಥದೇನಾದರೂ? ಅವಳನ್ನ ಮದುವೆ ಆಗತೇನೆ ಅಂತ ಮಾತು ಗೀತು …?’
‘ಏನಿಲ್ಲ, ಏನಿಲ್ಲ, ಅಂಥದೇನೂ ಇಲ್ಲ! ಅವಳು ಅಂಥವಳಲ್ಲ! ಸಿವಿಲ್ ಕೌನ್ಸಿಲರ್ ಚಬರೋವ್ ಒಂದು ಕೈ ನೋಡಿ ಸುಮ್ಮನಾದ.’
‘ಹಾಗಾದರೆ ಬಿಟ್ಟಾಕು ಅವಳನ್ನ!’
‘ಹಾಗೆಲ್ಲ ಮಾಡಕ್ಕಾಗಲ್ಲ!’
‘ಯಾಕೇ?’
‘ಯಾಕೋ, ನನ್ನ ಕೈಲಾಗಲ್ಲ, ಅಷ್ಟೇ! ಗೋಜಲು ಗೋಜಲು, ಬ್ರದರ್!’
‘ಮತ್ತೆ ಅವಳ ಮನಸ್ಸಲ್ಲಿ ಆಸೆ ಯಾಕೆ ಹುಟ್ಟಿಸತಾ ಇದೀಯ?’
‘ನಾನೇನೂ ಆಸೆ ಹುಟ್ಟಿಸಲಿಲ್ಲ. ನಾನೇ ಪೆದ್ದ, ಅವಳ ಬಲೆಗೆ ಬಿದ್ದೆ. ಅವಳಿಗೆ ನೀನಾದರೂ ಅಷ್ಟೇ, ನಾನಾದರೂ ಅಷ್ಟೇ. ಯಾರಾದರೂ ಒಬ್ಬರು ಅವಳ ಪಕ್ಕ ಕೂತು ನಿಟ್ಟುಸಿರು ಬಿಡತಾ ಇದ್ದರೆ ಸಾಕು, ಮೇಣದ ಹಾಗೆ ಕರಗಿ ನೀರಾಗಿ ಹೋಗತಾಳೆ. ನೋಡು ಬ್ರದರ್, ಎಲ್ಲಾನೂ ಈಗ ಇಲ್ಲಿ ವಿವರಿಸಕ್ಕೆ ಆಗಲ್ಲ. ನೀನು ಜಾಣ, ಗಣಿತ ಬರತ್ತೆ, ಅವಳ ಪಕ್ಕ ಕೂತು ಇಂಟೆಗ್ರಲ್ ಕ್ಯಾಲ್ಕುಲಸ್ ಬಗ್ಗೆ ಮಾತಾಡು. ದೇವರಾಣೆಗೂ ನಾನು ಜೋಕ್ ಮಾಡತಾ ಇಲ್ಲ, ಸೀರಿಯಸ್ಸಾಗಿ ಹೇಳತಾ ಇದೇನೆ. ವಿಷಯ ಯಾವುದಾದರೂ ಎಲ್ಲಾನೂ ಒಂದೇ ಅವಳಿಗೆ. ನಿನ್ನ ನೋಡತಾಳೆ, ಉಸಿರು ಬಿಡತಾಳೆ ಹೀಗೇ ಒಂದು ವರ್ಷ ಕಳೀತಾಳೆ. ಒಂದು ಸಾರಿ ನಾನು ಅವಳ ಜೊತೆ ಕೂತು, ಬಹಳ ಹೊತ್ತು, ಸರಿಯಾಗಿ ಎರಡು ದಿನ, ಪ್ರಶ್ಯಾದ ಲೋಕಸಭೆ ಬಗ್ಗೆ ಮಾತಾಡಿದ್ದೆ. (ಅವಳ ಹತ್ತಿರ ಮಾತಾಡಕ್ಕೆ ಇನ್ನೇನಿರತ್ತೆ ಅಂತೀನಿ) ನಿಟ್ಟುಸಿರು ಬಿಟ್ಟಳು, ಬೆವೆತಳು. ಪ್ರೀತಿ ಬಗ್ಗೆ ಮಾತ್ರ ಉಸಿರೆತ್ತಬೇಡ. ಪ್ರೀತಿ ಅಂದರೆ ಮೈಯೆಲ್ಲ ನಡುಗಿ ಮೂರ್ಛೆ ಬೀಳುವಷ್ಟು ನಾಚಿಕೆ ಅವಳಿಗೆ. ಆದರೆ ಅವಳಿಂದ ದೂರ ಇರುವುದಕ್ಕೆ ಸಾಧ್ಯವೇ ಇಲ್ಲ ಅನ್ನುವ ಹಾಗೆ ನಟನೆ ಮಾಡು, ಅಷ್ಟು ಸಾಕು. ಬಹಳ ಆರಾಮಾಗಿರಬಹುದು, ಮನೆಯಲ್ಲಿದ್ದ ಹಾಗೇನೇ—ಓದು, ಕೂತುಕೋ, ಮಲಕ್ಕೋ, ಬರಿ… ಸ್ವಲ್ಪ ಹುಷಾರಾಗಿದ್ದರೆ ಬೇಕಾದರೆ ಮುತ್ತೂ ಕೊಡು…’
‘ಅವಳ ವಿಚಾರ ನನಗೆ ಯಾಕೆ ಬೇಕು?’
‘ಅದನ್ನ ನಿನಗೆ ಅರ್ಥ ಆಗೋ ಹಾಗೆ ಹೇಳಕ್ಕೆ ಬರಲ್ಲ ನನಗೆ! ನೀವಿಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ. ಇವತ್ತಲ್ಲ, ಯಾವತ್ತಿನಿಂದಲೋ ಈ ಯೋಚನೆ ಮಾಡಿದೇನೆ. ಒಂದಲ್ಲಾ ಒಂದು ದಿನ ನೀನು ಮದುವೆ ಆಗಲೇಬೇಕಲ್ಲವಾ? ನೋಡು ಬ್ರದರ್ ಇದು ತುಪ್ಪುಳದ ಹಾಸಿಗೆಯ ತತ್ವ. ಒಂದು ಥರ ಚುಂಬಕ ಶಕ್ತಿ, ಲಂಗರು, ನಿಸರ್ಗ ಸೃಷ್ಟಿಸಿರುವ ರೇವು, ಭೂಮಿಯ ಹೊಕ್ಕುಳ, ಇವತ್ತಿಗೂ ಜಗತ್ತಿನ ತಳಹದಿಯಾಗಿರುವ ಮೂರು ಮೀನು, ರೊಟ್ಟಿಗಳ, ಬಾಡೂಟಗಳ, ಸಂಜೆಯ ಸಮೋವರ್ ಗಳ ಮೆಲ್ಲುಸಿರುಗಳ, ಬೆಚ್ಚನೆ ಸ್ವೆಟರು ಹಾಸಿಗೆ, ಒಲೆಗಳ ಸಾರಸರ್ವಸ್ವ—ಸಾವಿನ ಮತ್ತು ಬದುಕಿನ ಸುಖಗಳನ್ನು ಏಕಕಾಲದಲ್ಲಿ ಅನುಭವಿಸುವ ಸ್ಥಿತಿ! ಸರಿ, ಬ್ರದರ್, ಈ ತಲೆಹರಟೆ ಮಾತೆಲ್ಲ ಸಾಕು. ಈಗ ಮಲಗುವ ಹೊತ್ತು. ರಾತ್ರಿ ಆಗಾಗ ನನಗೆ ಎಚ್ಚರವಾಗತ್ತೆ ಆವಾಗೆಲ್ಲ ಹೋಗಿ ಅವನನ್ನ ನೋಡಿಕೊಂಡು ಬರತೇನೆ. ಇದೆಲ್ಲಾ ಏನೂ ಅಲ್ಲದೇನೂ ಇರಬಹುದು, ಎಲ್ಲಾ ಫೈನ್ ಆಗೂ ಇರಬಹುದು. ನೀನು ಚಿಂತೆ ಮಾಡಬೇಡ. ಹೋಗಿ ನೋಡಬೇಕು ಅನಿಸಿದರೆ ನೋಡು. ಏನಾದರೂ ವಿಶೇಷ ಕಂಡರೆ, ಸನ್ನಿ, ಅಥವಾ ಜ್ವರ, ಅಥವಾ ಇಂಥದೇನಾದರೂ, ತಕ್ಷಣ ನನ್ನ ಎಬ್ಬಿಸು. ನನಗೇನೋ ಏನೂ ಆಗಲ್ಲ ಅನಿಸತ್ತಪ್ಪ…’
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.