ಸಿಹಿತಿನಿಸಿನ ಪೆಟ್ಟಿಗೆಯಲ್ಲಿ ಲಂಚದ ಹಣವನ್ನು ತರಿಸಿಕೊಳ್ಳುತ್ತಿದ್ದವನಾತ. ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇ
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹಿಂದಿಯ ‘ಸೆಕ್ಟರ್ -36’ ಸಿನಿಮಾದ ವಿಶ್ಲೇಷಣೆ

ಮಾನವ ಮೂಳೆ ಮಾಂಸದ ತಡಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ

ಮನುಷ್ಯನ ದೇಹವನ್ನು ಮೂಳೆ ಮಾಂಸಗಳು ಕಟ್ಟಿದರೆ, ಆಕಾರವನ್ನು ನೀಡುವುದು ಮನಸ್ಸೆಂಬ ಮಾಯೆ. ಸುತ್ತಲೂ ಬಣ್ಣ ಹಚ್ಚಿಕೊಂಡು ಮಿನುಗುತ್ತಿದ್ದರೂ, ಒಳಗೆ ತುಕ್ಕು ಆವರಿಸಿದ್ದರೆ, ಕುಸಿತ ನಿಶ್ಚಿತ. ದೂರದರ್ಶನ ಮಾತು ಕೇಳುವುದು, ಕಿರು ಇಂಚುಗಳ ರಿಮೋಟ್‌ನದ್ದು. ಅದು ಕೆಟ್ಟಾಗ, ದೂರದರ್ಶನವು ಯಾರ ಹಿಡಿತಕ್ಕೂ ಲಭಿಸದೆ ಅರಚುತ್ತಲೇ ಇರುತ್ತದೆ. ದೇಹವೂ ಅಷ್ಟೇ; ಮನಸ್ಸು ಮರ್ಕಟವಾದಾಗ ಅದು ದಾರಿ ತಪ್ಪುತ್ತದೆ. ಕ್ರೌರ್ಯ, ದುರಹಂಕಾರ, ಕೆಟ್ಟತನ ಇತ್ಯಾದಿ ಅವಗುಣಗಳು ಮುತ್ತಿಕೊಳ್ಳುತ್ತಾ ಸಾಗುತ್ತದೆ. ಹಳೆಯ ಬಸ್ಸು ಎತ್ತರವ ಏರಲು ಏದುಸಿರು ಬಿಡುವಂತೆ, ಹಣ್ಣೊಂದು ಕೊಳೆಯುತ್ತಿದ್ದಂತೆಯೇ ಸುವಾಸನೆಯಿಂದ ದುರ್ವಾಸನೆಯತ್ತ ಪರಿವರ್ತನೆಯಾಗುವಂತೆ, ಗಂಟೆಗಳು ರದ್ದಿಯಾಗುತ್ತಿದ್ದಂತೆಯೇ ರುಚಿಕರ ತಿನಿಸುಗಳು ಕಳೆಗುಂದುವಂತೆಯೇ ಮನಸ್ಸು ಕೊಳೆಯ ಬಳಿದುಕೊಂಡು ಕಳೆದು ಹೋಗುತ್ತದೆ. ಇಂತಹ ಮನಸೊಂದರ ಭೀಕರ ಕ್ರೌರ್ಯಭರಿತ ಸಂಗತಿಗಳ ಅನಾವರಣವೇ ‘ಸೆಕ್ಟರ್ 36’.

ಆತ ಪ್ರೇಮ್ ಸಿಂಗ್. ಸಿರಿವಂತ, ಸ್ಥಿತಿವಂತ ಬಸ್ಸಿಯ ಮನೆಯಲ್ಲಿ ಕೆಲಸದ ಆಳು. ‘ಕೌನ್ ಬನೇಗಾ ಕರೋಡ್ ಪತಿ’ ಅವನ ಮೆಚ್ಚಿನ ಕಾರ್ಯಕ್ರಮ. ಅಲ್ಲಿಗೆ ಬರುವ ಸ್ಪರ್ಧಿಗಳೆಲ್ಲ ಉತ್ತರಗಳನ್ನು ತಪ್ಪಾಗಿ ನೀಡುತ್ತಿರುವಾಗ ತಾನು ಮಾತ್ರ ಸರಿಯಾದ ಉತ್ತರವನ್ನು ನೀಡುತ್ತಾ, ಅಲ್ಲಿಗೆ ಸ್ಪರ್ಧಿಯಾಗಿ ಹೋಗುವ ಕನಸನ್ನು ಕಾಣುತ್ತಿದ್ದ. ಅನಂತರ ಊರಲ್ಲಿದ್ದ ತನ್ನ ಪತ್ನಿಯೊಂದಿಗೆ ಮಾತು ಹರಿಸಿ ನಿದ್ದೆಗೆ ಜಾರುತ್ತಿದ್ದ. ಇತ್ತ ಅವನಿದ್ದ ಪ್ರದೇಶ ಸೆಕ್ಟರ್ 36 ರ ಇನ್ಸ್ಪೆಕ್ಟರ್ ರಾಮ್ ಚರಣ್ ಪಾಂಡೆ, ಪರಮ ಅಪ್ರಾಮಾಣಿಕ. ಕಠಿಣ ವಾಸ್ತವದ ಮಾತಲ್ಲಿ ಮುಳುಗುವ ಮನುಷ್ಯ. ಸಿಹಿತಿನಿಸಿನ ಪೆಟ್ಟಿಗೆಯಲ್ಲಿ ಲಂಚದ ಹಣವನ್ನು ತರಿಸಿಕೊಳ್ಳುತ್ತಿದ್ದವನಾತ. ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇ? ಅಂತೆಯೇ ಅಲ್ಲಿನ ಜನರು. ಇತ್ತ ಸೆಕ್ಟರ್ 36 ರಲ್ಲಿ ಕೊಳಚೆ ನೀರು ಹರಿದು ಬರುವ ನಾಲೆಯಲ್ಲಿ ಮಾನವನ ದೇಹದ ಭಾಗಗಳು ದೊರಕಲು ಆರಂಭವಾಗುತ್ತದೆ. ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಲೇ ಸಾಗುತ್ತದೆ. ಆದರೆ ಪಾಂಡೆಯ ಅಮಾನುಷ ಉಪೇಕ್ಷೆ ಕಳೆದುಕೊಂಡವರ ನೋವು, ಆಕ್ರೋಶ ದ್ವಿಗುಣಗೊಳ್ಳಲು ಕಾರಣವಾಗುತಿತ್ತು. ಇತ್ತ ರಾಮ ನವಮಿಯಂದು ರಾವಣನ ದಹನ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದರ ಅಂಗವಾಗಿ ನಡೆಯುವ ನಾಟಕದಲ್ಲಿ ಇನ್ಸ್‌ಪೆಕ್ಟರ್ ಪಾಂಡೆ ಹಾಗೂ ಆತನ ಕಾನ್‌ಸ್ಟೇಬಲ್‌ಗಳ ಪಾತ್ರವಿತ್ತು. ಇತ್ತ ಕಾರ್ಯಕ್ರಮ ನೋಡಲು ಆಗಮಿಸಿದ ಪಾಂಡೆಯ ಸಣ್ಣ ಮಗಳ ಅಪಹರಣ ಯತ್ನವಾಗುತ್ತದೆ. ಇದನ್ನು ಗಮನಿಸಿ, ಆ ಅಪಹರಣಕಾರನ ಹಿಂದೆ ಓಡುವ ಪಾಂಡೆಗೆ ಅವನನ್ನು ಹಿಡಿಯಲಾಗುವುದಿಲ್ಲ. ಆದರೆ ಮಗಳನ್ನು ಕಾಪಾಡುತ್ತಾನೆ. ಈ ಘಟನೆಯಿಂದ ನೊಂದ ಪತ್ನಿ ಪಾಂಡೆಗೆ ‘ನಮ್ಮ ಮಗಳನ್ನೇ ಕಾಪಾಡಲು ಸಾಧ್ಯವಾಗಲಿಲ್ಲ ಇನ್ನು ಊರನ್ನೇನು ಕಾಯುವುದು ನೀವು’ ಎಂದು ಚುಚ್ಚು ಮಾತುಗಳನ್ನಾಡುತ್ತಾಳೆ. ಈ ಮಾತುಗಳು ಪಾಂಡೆಗೆ ನಾಟುತ್ತವೆ. ನೇರವಾಗಿ ಸ್ಟೇಷನ್ನಿಗೆ ಬಂದು, ಕಾಣೆಯಾದ ಚುಂಕಿ ಎಂಬುವವಳ ಪತ್ತೆಗೆಂದು ಹೊರಡುತ್ತಾನೆ. ಹೀಗೆ ಆರಂಭವಾದ ಹೋರಾಟದಲ್ಲಿ ಲಭಿಸಿದ್ದು ಪ್ರೇಮ್ ಎಂಬ ಕ್ರೌರ್ಯವೇ ಮೈವೆತ್ತ ಮೃಗ, ಬಸ್ಸಿ ಎಂಬ ದೇಹದಾಹಿ ರಕ್ಕಸನ ಬಾಯಾರಿಕೆಗೆ ಸುಟ್ಟ ಅನಾಥ ಕನಸುಗಳು. ಹಾಗಾದರೆ ಆ ಕಾಣೆಯಾಗುವಿಕೆ, ಕೊಲೆಗಳಿಗೆ ಕಾರಣವೇನು? ಅಂತಹ ಭೀಕರತೆಯ ಅನಿವಾರ್ಯತೆಯೇನು? ಇವೆಲ್ಲವುಗಳ ಕಾರ್ಮೋಡಭರಿತ ಸಾದೃಶ್ಯವೇ ‘ಸೆಕ್ಟರ್ 36’.

ಭಾರತೀಯ ಚಿತ್ರ ಇತಿಹಾಸದಲ್ಲಿ ಸೈಕೋ ಆಧಾರಿತ ಕ್ರೈಮ್ ಥ್ರಿಲ್ಲರ್‌ಗಳು ಬಹು ಸಂಖ್ಯೆಯಲ್ಲಿ ಬಂದಿವೆ. ಅವುಗಳಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ‘ರಾಚಸನ್’. ಇಲ್ಲಿ ತನ್ನ ಸಣ್ಣ ವಯಸ್ಸಿನಲ್ಲಿ ಹುಡುಗಿಯೊಬ್ಬಳಿಂದ ಅದ ದೈಹಿಕಾಧಾರಿತ ಅವಮಾನ, ಆತನನ್ನು ಮಾನಸಿಕ ರೋಗಿಯನ್ನಾಗಿಸಿ ಆತ ಸೈಕೋ ಆಗಿ ಬದಲಾಗಲು ಕಾರಣಕರ್ತವಾಗುತ್ತದೆ. ಮುಂದೆ ಆತ ಹಲವು ಹುಡುಗಿಯರ ಅಪಹರಣ ಮತ್ತು ಕೊಲೆಗಯ್ಯುತ್ತಾನೆ. ಇದರ ತನಿಖೆಯ ಕಥೆಯೇ ‘ರಾಚಸನ್’. ಅಷ್ಟು, ಕುತೂಹಲ ಭರಿತ ಕಥೆಯಿಲ್ಲದಿದ್ದರೂ ಪರಮ ಭೀಬತ್ಸ್ಯ ಮತ್ತು ಭಯಾನಕ ಚಿತ್ರಕಥೆ ಮತ್ತು ದೃಶ್ಯಗಳ ಸಂಕಲನ ಸೆಕ್ಟರ್ 36 ರಲ್ಲಿದೆ. ಶೌಚಾಲಯದ ನೆಲದ ಮೇಲೆ ಹರಿವ ನೆತ್ತರು, ಅಲ್ಲಲ್ಲಿ ನಿಂತು ನಡೆವ ಕರಿ ನೀರಿನೊಳಗೆ ಅದ್ದಿದ ದೇಹದ ಭಾಗಗಳು, ಕತ್ತಿಯ ತಿವಿತಕ್ಕೆ ಸಿಲುಕಿ ಉಸಿರು ಚೆಲ್ಲಿದ ಮಾಂಸದ ಚೂರುಗಳು ಎಲ್ಲವೂ ಎದೆ ನಡುಗಿಸುವಂಥದ್ದು. ಆದರೆ, ಇಲ್ಲಿ ಈ ಭೀಕರತೆಯನ್ನು ಮೀರಿದ ಸಮಾಜದ ಕಟು ವಾಸ್ತವಗಳನ್ನು ಯಾವ ಮುಲಾಜು ಇಲ್ಲದೇ ಬೆತ್ತಲುಗೊಳಿಸಲಾಗಿದೆ. ‘ದುಡ್ಡಿದ್ದರೆ ದುನಿಯಾ’ ಎಂಬ ಮಾತು ಅದೆಷ್ಟು ವಾಸ್ತವ ಎಂಬುದು ಇಲ್ಲಿ ಢಾಳಾಗಿ ಗೋಚರವಾಗುತ್ತದೆ. ವಿಶೇಷತಃ ಪಾಂಡೆಯ ಮಾತುಗಳಲ್ಲಿ. ಮಕ್ಕಳು ಕಾಣೆಯಾದ ಬಗ್ಗೆ ದೂರು ನೀಡಲು ಬಂದಾಗ ‘ಸ್ಲಮ್ಮಿನ ಮಕ್ಕಳವರು. ಹಣವಿಲ್ಲ, ಕನಸುಗಳಿಲ್ಲ, ಭವಿಷ್ಯವೇ ಇಲ್ಲ. ಇಂತಹ ಮಕ್ಕಳು ಕಾಣೆಯಾದರೆ ಹುಡುಕುವುದೊಂದು ಕಸುಬಷ್ಟೇ. ಯಾರಿಗೂ ಬೇಡ ಈ ಮಕ್ಕಳ ಜೀವ ‘ ಎನ್ನುವ ಸಮಯಕ್ಕೆ, ಸಿರಿವಂತ ಮನೆತನದ ಬಾಲಕನೊಬ್ಬನ ಅಪಹರಣವನ್ನು ಕೆಲ ಸಮಯದಲ್ಲೇ ಪೊಲೀಸರು ಭೇದಿಸಿದ ಸುದ್ದಿ ದೂರದರ್ಶನದಲ್ಲಿ ಬರುತ್ತದೆ… ಮತ್ತದೇ ವಾಸ್ತವಿಕತೆಯನ್ನು ಸಾರುತ್ತಾ. ಹಣ, ಅಧಿಕಾರಕ್ಕಷ್ಟೇ ಇಲ್ಲಿ ಬೆಲೆ. ಉಳಿದೆಲ್ಲವೂ ಯಾರಿಗೂ ಬೇಡದ ವಸ್ತುಗಳಷ್ಟೇ ಎಂಬ ಸಮಾಜದ ನಡುವಿನ ಘೋರ ಸತ್ಯಗಳನ್ನು ಪ್ರೇಮ್, ಬಸ್ಸಿ, ಪಾಂಡೆ ಎಂಬ ಮೂರು ಪಾತ್ರಗಳನ್ನು ಇಟ್ಟುಕೊಂಡು ಸುಂದರವಾಗಿ ಕಟ್ಟಿಕೊಡಲಾಗಿದೆ. ಒಂದೆಡೆ ಸೈಕೋ ಮನೋಭಾವನೆಯ ಭೀಬತ್ಸ್ಯ ಅನಾವರಣ, ಇನ್ನೊಂದೆಡೆ ಬೆಲೆಯೇ ಇಲ್ಲದ ಬದುಕುಗಳ ಚಿತ್ರಣ. ಇದುವೇ ಈ ಚಿತ್ರದ ಒಟ್ಟು ಹೂರಣ.

ಪ್ರೇಮ್ ಆಗಿ ವಿಕ್ರಾಂತ್ ಮಸಿ ಅಮೋಘ ಅಭಿನಯ. ’12ತ್ ಫೇಲ್’ ನಲ್ಲಿ ಪ್ರೇರಣಾದಾಯಿಯಾಗಿ ನಟನೆ ಮಾಡಿದ್ದ ಅವರು ಇಲ್ಲಿ ಪರಮ ವಿಕ್ಷಿಪ್ತ ವ್ಯಕ್ತಿಯಾಗಿ ಕಾಡುತ್ತಾರೆ. ವಿಶೇಷತಃ, ವಿಚಾರಣೆಯಲ್ಲಿ ತನ್ನ ಅಪರಾಧಗಳನ್ನು ಒಪ್ಪಿಕೊಳ್ಳುವಾಗ, ತೋರುವ ಹಾವ ಭಾವಗಳು, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಬಲು ಆರಾಮದಾಯಕವಾಗಿ ಉತ್ತರಿಸುವ ಶೈಲಿ ಎಲ್ಲವೂ ಅತ್ಯದ್ಭುತ. ಇವರಿಗೆ ಸಮರ್ಥ ಪೈಪೋಟಿ ನೀಡಿದ್ದು ಇನ್ಸ್ಪೆಕ್ಟರ್ ಆಗಿ ದೀಪಕ್ ದೋಬ್ರಿಯಾಲ್. ಪರಿವರ್ತನಾ ಹಂತ, ತನಿಖಾ ಶೈಲಿ, ಕೆಲವೊಮ್ಮೆ ಭಾವ ರಹಿತ ಮತ್ತು ಕೆಲವೊಮ್ಮೆ ಕ್ಷಣ ಮಾತ್ರದ ಭಾವ ಉದ್ದೀಪನ ಹೀಗೆ ಅದ್ಭುತ ಅಭಿನಯ ಅವರದ್ದು.’ ಜಗತ್ತು ನಡೆಯುವುದು ನ್ಯೂಟನ್ನಿನ 3 ನೇ ತತ್ವದ ಮೇಲೆ. ಪ್ರತಿಯೊಂದು ಕ್ರಿಯೆಗೂ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ರಾವಣ ಸೀತೆಯ ಅಪಹರಣ ಮಾಡಿದ, ಪರಿಣಾಮ ಸ್ವರ್ಣ ಲಂಕೆ ಶಿಥಿಲವಾಯಿತು’ ಎಂದು ಇನ್ಸ್ಪೆಕ್ಟರ್ ಪಾಂಡೆ ನೀಡುವ ವಿವರಣೆಯು ಚಿತ್ರದ ಪೀಕ್ ಪಾಯಿಂಟ್. ಉಳಿದೆಲ್ಲರದ್ದು ಪಾತ್ರದೊಳಗಿನ ಜೀವಿಸುವಿಕೆ. ಚಿತ್ರದ ಮಹತ್ವದ ವ್ಯಕ್ತಿಯೆಂದರೆ ಸೌರಭ್ ಗೋಸ್ವಾಮಿ. ಕ್ರೌರ್ಯ, ಮುಗ್ಧತೆ, ಭೀಬತ್ಸ್ಯ, ಹುಚ್ಚುತನ ಇವೆಲ್ಲವೂ ತರಹೇವಾರಿ ಬಣ್ಣಗಳನ್ನು ಬಳಿದುಕೊಂಡು ಕಾಡುವಂತೆ ಸೌರಭ್ ಕಣ್ಣುಗಳಲ್ಲಿ ಸೆರೆಯಾಗಿದೆ. ಇನ್ನು 2006 ರಲ್ಲಿ ನೋಯಿಡಾದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಕಥೆಯನ್ನು, ನಿರ್ದೇಶಕ ಆದಿತ್ಯ ನಿಂಬಾಳ್ಕರ್ ಪರಿಣಾಮಕಾರಿ ಚಿತ್ರ ಕಥೆಯಾಗಿ ನಿರೂಪಿಸಿದ್ದಾರೆ. ಒಟ್ಟಾರೆಯಾಗಿ, ರಸ್ತೆಯೊಂದು ದುರಸ್ತಿ ಸ್ಥಿತಿಯಲ್ಲಿದ್ದಾಗ, ಸಾಗುವ ವಾಹನಗಳಿಗೆ ಹೇಗೆ ಗಂಭೀರ ಹಾನಿಯನ್ನು ಮಾಡುತ್ತದೆಯೋ, ಹಾಗೆಯೇ ಮನುಷ್ಯನ ಮನಸ್ಥಿತಿ ಹದೆಗೆಟ್ಟಾಗ, ದೇಹವೆಂಬುದು ತನ್ನ ಮಿತಿಯನ್ನು ಮೀರಿದ ವಿಕೃತಿಯನ್ನು ಯಾವ ಭಾವನೆಗಳ ಎಲ್ಲೆಯೂ ಇಲ್ಲದೆ ಹೊರಹಾಕುತ್ತದೆ ಎಂದು ತೋರಿಸುವ ಮನ ಕಲಕುವ ಚಿತ್ರವೇ ‘ಸೆಕ್ಟರ್ 36’.

ಮುಗಿಸುವ ಮುನ್ನ :

‘ಕಾನೂನು ಎಲ್ಲರಿಗೂ ಒಂದೇ’ ಎಂಬ ಮಾತು ಚಾಲ್ತಿಯಲ್ಲಿದ್ದರೂ, ಬಡವ ಮಾತ್ರ ನ್ಯಾಯಕ್ಕಾಗಿ ಹೋರಾಡುತ್ತಲೇ ಇರುತ್ತಾನೆ. ಯಾರೋ ಮಾಡಿದ ತಪ್ಪಿಗೆ, ಇನ್ಯಾರೋ ಬಲಿಯಾಗುತ್ತಲೇ ಸಾಗುತ್ತಾರೆ. ದುಡ್ಡು ಆಟವಾಡುತ್ತಲೇ ಇರುತ್ತದೆ. ಅದೆಷ್ಟೋ ಬಡ ಕನಸುಗಳು ಬೆಳಕು ಕಾಣುವ ಮುನ್ನವೇ ಕಮರುತ್ತದೆ. ಕೋಟಿಗಟ್ಟಲೆ ಜನರ ಮಧ್ಯೆ ಸಾಮಾನ್ಯರ ಬದುಕು, ಮುಂಬೈನ ಲೋಕಲ್ ಟ್ರೇನಿನಂತೆ ಯಾರ ಕಣ್ಣಿಗೂ ತಾಜಾವೆನಿಸಿಕೊಳ್ಳದೇ, ಓಡುತ್ತಿರುತ್ತದೆ. ‘ಸರ್ವೇ ಜನ ಸುಖಿನೋ ಭವಂತು’ ಎನ್ನುತ್ತಾ ಆಶಾಭಾವದಿಂದಿರುವದಷ್ಟೇ ನಮ್ಮ ಕೈಯ್ಯಲ್ಲಿ ಸದ್ಯಕ್ಕೆ ಸಾಧ್ಯವಿರುವ ಸಂಗತಿ……………!