ಉತ್ತರವಿನ್ನೆಲ್ಲಿ…!??
ತಂಬೆಲರ ತನಿಗಾಳಿ ತಂಪಿಲ್ಲ ಇನಿಯಾ..
ಸುಡುತಿಹುದು ನನ್ನೊಳಗೆ ಸುಪ್ತವಾಗಿ..
ಆ ಪೂರ್ಣ ಚಂದಿರನು, ವಿರಹಿಗಳ ಅರಿಯು
ಬಿಸಿಯುರಿಯು ತನುವೆಲ್ಲಾ ತಪ್ತವಾಗಿ..
ಮೋಹಿಸುವ ಕೊಳಲುಲಿಯು..,
ಕಿವಿಯಲುಸುರಿ, ಅನುರಣಿಸಿ ನಿರತ..!
ಕೇಳದಾಗಿದೆ ಬಾಹ್ಯ ನಿನ್ನಲೇ ಅನವರತ..!
ಸೊಕ್ಕು ಇವಳಿಗೆ ಎನುತ
ಮೂದಲಿಸಿ, ಮೂತಿ ಮುರಿವರು
ಲಲನೆಯರು ಹೀನೈಸುತ..!
ಕೈಬೀಸಿ ಕರೆದಂತೆ ಯಮುನೆಯಾ ಹರಿವು..
ಮೈಮನವು ತಪಿಸುತೆ
ಕ್ಷಣವೀಗ ಯುಗವು..!
ಎದೆಗೊರಗಿ ಕಣ್ಮುಚ್ಚಿ ಸೋತ ಒಲವು..!
ನಿನ್ನುಸಿರ ಗಾಳಿಗೆ ಮೊಗವರಳಿ ನಾಚಿ
ನೀನುಣಿಸಿದಾ ತುತ್ತು
ರಸಕವಳ ಮಧುಬನದಿ..!
ನಡು ಬಳಸಿ ಕಚಗುಳಿಸಿ ಕುಣಿದ ಹೆಜ್ಜೆ..!
ನೀನೇ ಕಟ್ಟಿದ ಗೆಜ್ಜೆ, ಮುತ್ತು ಮೆತ್ತಿದ ಲಜ್ಜೆ..!
ಬಿಗುಮೌನ, ಬೆರೆತ ಕಣ್ಣುಗಳು
ನಿನ್ಹೆಸರ ಗುನುಗುತ್ತಾ ಕಳೆದ ರಾತ್ರಿಗಳು..!
ಹುಚ್ಚುಕೋಡಿಯ ಮನಕೆ ಹೆಚ್ಚೇನು ಬೇಕು!?
ಗುಳಿಕೆನ್ನೆ ಕಿರುನಗೆಯಲ್ನೀ ಸೆಳೆಯೆ ಸಾಕು..
ಬಂಧಿ ಬಿಗಿದಿಹೆಯಿಲ್ಲಿ
ಮರಳಿ ಹೋಗಲಿ ಎಲ್ಲಿ..!?
ಮಯಿಲು ಕಾದಿವೆ ನುಲಿವ ಕೊಳಲೆಲ್ಲಿ..?
ಮಧುರ ಮೋಹನನೆಲ್ಲಿ!?
ಪ್ರಶ್ನೆ ನಾನಾಗಿರಲು ಉತ್ತರವಿನ್ನೆಲ್ಲಿ..!?
ಅರ್ಚನಾ ಎಚ್ ಬೆಂಗಳೂರಿನವರು
ಕತೆ ಮತ್ತು ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ
ದಸರಾ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಇವರ ರಚನೆಗಳಿಗೆ ಲಭಿಸಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಬಹು ಚಂದದ ವಿರಹಗೀತೆಯಾದರೂ ಪದಭಾವದಲೆಯಲಿ ತೇಲಿಸುತ್ತದೆ…
ಧನ್ಯವಾದಗಳು ಸರ್..
Nice
ವಿರಹದುರಿಯ ಉಣಬಡಿಸುತ್ತಿದೆ ಕವನ.
ಧನ್ಯವಾದಗಳು ಸರ್…
” ಗುಳಿಕೆನ್ನೆ ಕಿರುನಗೆಯಲಿ ಸೆಳೆಯೇ ಸಾಕು ” ಒಂದು ಚೆಂದದ ಕವಿತೆ… 👏👏👏
ಧನ್ಯವಾದಗಳು ಸರ್…