Advertisement
ಅಲಾರಾಂ ಹಾಗೂ ಓದುವ ವೇಳೆಯ ಕುರಿತು ಒಂದಷ್ಟು ಮಾತು… ಬಸವನಗೌಡ ಹೆಬ್ಬಳಗೆರೆ ಸರಣಿ

ಅಲಾರಾಂ ಹಾಗೂ ಓದುವ ವೇಳೆಯ ಕುರಿತು ಒಂದಷ್ಟು ಮಾತು… ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮಜ್ಜನ ಮನೆಯಲ್ಲಿ ಇದ್ದಾಗ, ನಮ್ಮಜ್ಜ ನನ್ನನ್ನು ಬೆಳಗ್ಗೆ ಏಳಿಸುವ ಅಲಾರಾಂನಂತೆ ಕೆಲಸ ಮಾಡುತ್ತಿದ್ದರು. ಆದರೆ ಯಾವಾಗ ಹಾಸ್ಟೆಲ್ ಸೇರಿದೆನೋ ಅಲ್ಲಿ ಹಾಸ್ಟೆಲ್ ವಾರ್ಡನ್ ಪೀಪಿಯನ್ನು ಊದಿ ಏಳಿಸುತ್ತಿದ್ದರು. ಆಗ ನಮ್ಮ ಮಲ್ಲಾಡಿಹಳ್ಳಿಯ ಹಾಸ್ಟೆಲ್ಲಿನಲ್ಲಿ ತುಂಬಾ ಶಿಸ್ತು ಇತ್ತು. ನಾವು ಕಡ್ಡಾಯವಾಗಿ ಬೆಳಗ್ಗೆ 5 ಕ್ಕೆ ಏಳಲೇಬೇಕಾಗಿತ್ತು. ಏಳದಿದ್ದರೆ ಕೋಲು ಹಿಡಿದುಕೊಂಡು ಬರುತ್ತಿದ್ದರು. ಒಂದೊಮ್ಮೆ ಮಲಗಿರುವುದನ್ನು ಕಂಡರೆ ಕುಂಡೆಯ ಮೇಲೆ ಬಾರಿಸುತ್ತಾ ಹೋಗುತ್ತಿದ್ದರು, ಬೆಳಗ್ಗೆ ಎದ್ದು ಕೆಲವರು ಓದುತ್ತಾ ಕುಳಿತರೆ ಕೆಲವರು ಬ್ರಷ್ ಮಾಡಲು ಹೋಗುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತನೆಯ ಕಂತು ನಿಮ್ಮ ಓದಿಗೆ

“ಬೆಳಗ್ಗೆ ಬೇಗ ಎದ್ದು ಓದಿದ್ರೆ ನೆನಪಿನಲ್ಲಿ ಉಳಿಯುತ್ತೆ; ಬೆಳಗ್ಗೆ ಬೇಗ ಏಳೋದನ್ನು ರೂಢಿ ಮಾಡಿಕೊಳ್ಳಿ” ಎಂದು ನಮ್ಮ ಪ್ರೈಮರಿ ಮೇಷ್ಟ್ರು ಹೇಳ್ತಿದ್ರು. ನಾನು ಅವರು ಹೇಳೋದನ್ನು ಕೆಲವು ದಿನ ಫಾಲೋವ ಮಾಡ್ತಿದ್ದೆ. ಆದರೆ ಸ್ವಲ್ಪ ದಿನ ಕಳೆದ ಮೇಲೆ ಮತ್ತೆ ಯಥಾ ಪ್ರಕಾರ ‘ನಾಯಿ ಬಾಲ ಡೊಂಕು’ ಎಂಬಂತೆ ಮತ್ತೆ ಏಳುತ್ತಿದ್ದುದು 7 ಕ್ಕೆ!! ನನ್ನ ಅಜ್ಜ, ನನ್ನ ಕ್ಲಾಸ್‌ಮೇಟ್ ಒಬ್ಬ ಅಷ್ಟೊತ್ತಿಗಾಗಲೇ ಗೆಜ್ಜೆಗಳನ್ನು ಕಟ್ಟಿದ ಎತ್ತುಗಳನ್ನು ಹಿಡಿದುಕೊಂಡು ಹೋಗುತ್ತಿದ್ದುದನ್ನು ನೋಡಿ “ಏಳಲೇ 7 ಘಂಟೆಯಾದರೂ ಬಿದ್ಕೊಂಡು ಇರ್ತೀಯ. ನಿನ್ನ ಕ್ಲಾಸ್‌ಮೇಟ್ ವೀರೇಶ ನೋಡೋ. ಎತ್ತು ಇಟ್ಕೊಂಡು ಹೋಗ್ತಾ ಇದಾನೆ. ದೊಡ್ಡವನಾದ ಮೇಲೆ ನೀನು ಅದ್ಹೆಂಗೋ ದುಡ್ಕೊಂಡು ತಿನ್ತೀಯಾ?” ಅಂತಾ ಕೂಗ್ತಾ ಇದ್ರು. “ವೀರೇಶಂಗೆ ಸರಿಯಾಗಿ ಓದೋಕೆ ಬರೋಲ್ಲ. ನಾನು ಓದಿ ಕೆಲಸ ತೆಗೋತೀನಿ” ಎಂದು ಗೊಣಗುತ್ತಾ ಎದ್ದುಬಿಡ್ತಾ ಇದ್ದೆ. ನನಗೆ ಆಗ ಸಿಟ್ಟು ಬರ್ತಾ ಇದ್ದಿದ್ದು ನನ್ನಜ್ಜನ ಮೇಲೆ ಅಲ್ಲ. ‘ಝಲ್ ಝಲ್’ ಎಂದು ಜೋರಾಗಿ ಶಬ್ದ ಮಾಡುತ್ತಾ ಎತ್ತು ಹಿಡಿದುಕೊಂಡು ಹೋಗ್ತಾ ಇದ್ದನಲ್ವಾ ಆ ವೀರೇಶನ ಮೇಲೆ! ಶಾಲೆಗೆ ಹೋಗಿ ವೀರೇಶನಿಗೆ ಬಯ್ಯೋ ಮೂಲಕ ಸಿಟ್ಟು ತೋರಿಸ್ತಾ ಇದ್ದೆ! ಆದರೂ ಅವನು ಎತ್ತಿನ ಗೆಜ್ಜೆ ತೆಗೆಯಲಿಲ್ಲ. ನನಗೆ ಬಯ್ಗುಳ ತಪ್ಪಲಿಲ್ಲ!

ದಿನಾ ಬಯ್ಯಿಸಿಕೊಳ್ಳೋದ್ಯಾಕೆ ಅಂತಾ ನಾನು ಬೆಳಗ್ಗೆ 5 ಘಂಟೆಗೆ ಏಳೋಕೆ ರೂಢಿ ಮಾಡಿಕೊಂಡೆ. ಆಗ ನಮ್ಮಜ್ಜನ ಊರಿನಲ್ಲಿ ಅಷ್ಟೊತ್ತಿಗೆ ದೇವಸ್ಥಾನದ ಮೈಕಿನಲ್ಲಿ ಭಕ್ತಿ ಗೀತೆಗಳನ್ನು ಹಾಕ್ತಾ ಇದ್ರು. ಅದರಲ್ಲಿ ಹಾಕುತ್ತಿದ್ದ ಡಾ. ರಾಜ್ ಕುಮಾರ್ ಹಾಡಿರುವ ಮಂಜುನಾಥ ಸ್ವಾಮಿಯ ಗೀತೆಗಳು, ಅಯ್ಯಪ್ಪ ಸ್ವಾಮಿ, ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ ಗೀತೆಗಳನ್ನು ಕೇಳಿ ಆನಂದಿಸಲು ಏಳಲು ಶುರು ಮಾಡಿದೆ. ಆಗ ನಮ್ಮನೆಯಲ್ಲಿ ಬೇಗ ಏಳುತ್ತಿದ್ದುದು ನಮ್ಮಜ್ಜ ಹಾಗೂ ನಮ್ಮಜ್ಜಿ. ಎಮ್ಮೆ, ಎತ್ತು, ಆಕಳು ಸೇರಿ 10 ಜಾನುವಾರುಗಳ ಸಗಣಿ ಹೊಡೆಯೋದು, ಆ ಸಗಣಿ ಪುಟ್ಟಿಯನ್ನು ಮನೆಯಿಂದ ದೂರದಲ್ಲಿದ್ದ ತಿಪ್ಪೆಗೆ ಹಾಕೋ ಕೆಲಸವನ್ನು ನಮ್ಮಜ್ಜ ಮಾಡ್ತಾ ಇದ್ದರು. ನಮ್ಮಜ್ಜಿ ಹಸು, ಎಮ್ಮೆಗಳ ಹಾಲು ಹಿಂಡಿಕೊಳ್ಳುವ ಕೆಲಸ ಮಾಡ್ತಿದ್ರು. ನಾನು ಮಾತ್ರ ಹಾಡುಗಳ ಮೇಲೆ ಅರ್ಧ ಮನಸ್ಸಿಟ್ಟು ಇನ್ನರ್ಧ ಮನಸ್ಸನ್ನು ಓದಿನ ಮೇಲೆ ಗಮನಹರಿಸಿ ಓದ್ತಿದ್ದೆ! ಕೆಲವೊಮ್ಮೆ ಸಗಣಿ ಹೊಡೆಯೋ ಕೆಲಸ ನನಗೂ ಬೀಳುತ್ತಿತ್ತು.

ಇದೇ ಸಮಯದಲ್ಲಿ ಟೀ ಯನ್ನು ಕಾಸುತ್ತಿದ್ದರು. ನಾನು ಈ ಸಮಯದಲ್ಲೇ ‘ಟೀ’ ಗೂ ರೂಢಿಯಾಗಿ ಪ್ರತಿದಿನವೂ 5 ಘಂಟೆಗೆ ಏಳಲು ಶುರು ಮಾಡಿದೆ! 6 ಘಂಟೆಗೆ ಸರಿಯಾಗಿ ಮನೆಯಲ್ಲಿದ್ದ ದೊಡ್ಡದಾದ ಫಿಲಿಪ್ಸ್ ರೇಡಿಯೋ ಆನ್ ಮಾಡಿದಾಗ ಬರುತ್ತಿದ್ದ ಸಂಸ್ಕೃತ ವಾರ್ತೆ, ವಂದೇ ಮಾತರಂ ಗೀತೆ, ನಂತರ ಬರುತ್ತಿದ್ದ ವಾರ್ತೆಗಳನ್ನು ಕೇಳಲಿಕ್ಕೆ ಆನಂದವಾಗೋದು. ಆದರೂ ಮನುಷ್ಯಂಗೆ ಸೋಮಾರಿತನ ನೋಡಿ. ಚಳಿ ಇದ್ದಾಗ ಬೆಳಗ್ಗೆ ಏಳೋಕೆ ಆಗ್ತಾ ಇರಲಿಲ್ಲ. ಮತ್ತೆ ಯಾರಾದರೂ ಬೇಗ ಏಳುವುದರ ಬಗ್ಗೆ ತಿಳಿಸಿದಾಗ ಮತ್ತೆ ಬೇಗ ಏಳುತ್ತಿದ್ದೆ. ನಮ್ಮಲ್ಲಿ ಒಳ್ಳೆಯ ಹವ್ಯಾಸಗಳು ಬೆಳೆದು ನಮ್ಮ ವ್ಯಕ್ತಿತ್ವಕ್ಕೆ ಘನತೆ ಬರಬೇಕೆಂದರೆ ನಾವು ಒಳ್ಳೇ ವ್ಯಕ್ತಿಗಳ ಸಂಪರ್ಕದಲ್ಲಿ ಯಾವಾಗಲೂ ಇರಬೇಕಂತೆ. ಅಪರೂಪಕ್ಕೊಮ್ಮೆ ಈ ರೀತಿ ಇದ್ದರೆ ಆಗುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಒಂದು ನಿದರ್ಶನ ಹೇಳುವುದಾದರೆ:

ಒಮ್ಮೆ ಒಬ್ಬ ವ್ಯಕ್ತಿ ‘ವ್ಯಕ್ತಿತ್ವ ವಿಕಸನ ಶಿಬಿರ’ ಸೇರಿದನಂತೆ. ಅದು ಮುಗಿದ ನಂತರ ಗುರುಗಳು “ನೀವು ಆಗಾಗ್ಗೆ ಇಲ್ಲಿಗೆ ಬಂದು ಹೋಗಿ” ಎಂದರಂತೆ. ಆದರೆ ಅವನು ಮಾತ್ರ ಅಲ್ಲಿಗೆ ಬಹಳ ದಿನಗಳಾದರೂ ಬರಲಿಲ್ಲವಂತೆ. ತರಬೇತಿಗೆ ಹೋದರೂ ಉಪಯೋಗವಾಗಲಿಲ್ಲವಲ್ಲ ಎಂದುಕೊಂಡು ಸುಮಾರು ದಿನಗಳಾದ ಮೇಲೆ ಗುರುಗಳ ಬಳಿ ಹೋಗಿ ತನ್ನ ಅಳಲನ್ನು ತೋಡಿಕೊಂಡನಂತೆ. ಆಗ ಗುರುಗಳು ಇದ್ದಿಲನ್ನು ತೆಗೆದುಕೊಂಡು ಬರಲು ತಿಳಿಸಿದರಂತೆ. ಅದನ್ನು ಕೊಂಡೊಯ್ದಾಗ ಅವರು ಅವನಿಗೆ ಅದನ್ನು ಒಲೆಯ ಬಳಿ ಕರೆದೊಯ್ದು ಅದನ್ನು ಕಬ್ಬಿಣದ ಹಿಡಿಕೆಯಲ್ಲಿ ಒಲೆಯ ಬೆಂಕಿಗೆ ಹಿಡಿಯಲು ತಿಳಿಸಿದರಂತೆ. ಅವನು ಅದೇ ರೀತಿ ಮಾಡಿದನಂತೆ. ಅದು ಅ ಕ್ಷಣಕ್ಕೆ ಕೆಂಪಾಗುತ್ತಿದ್ದುದು ಮತ್ತೆ ವಾಪಾಸ್ ಕಪ್ಪಾಗುತ್ತಿತ್ತು. ಆಗ ಮತ್ತೆ ಬೆಂಕಿ ಕಡಿಮೆಯಾಗಿ ಕಪ್ಪಾದ ಇದ್ದಿಲನ್ನು ಪುನಃ ಬೆಂಕಿಗೆ ಹಿಡಿಯಲು ತಿಳಿಸುತ್ತಿದ್ದರು. ಆಗ ಮತ್ತೆ ಅದು ಕೆಂಪಾಗುತ್ತಿತ್ತು. ಮತ್ತೆ ಕಪ್ಪಾದ ಇದ್ದಿಲನ್ನು ಹಾಗೆಯೇ ಇಡಲು ತಿಳಿಸಿದರಂತೆ. ಅವನು ಅದೇ ರೀತಿ ಮಾಡಿದಾಗ ಅದರ ಬಿಸಿ ಕಡಿಮೆಯಾಗಿ ಕಪ್ಪಾಗಿಯೇ ಉಳಿದಿದ್ದುದನ್ನು ನೋಡಿ ಗುರುಗಳು ‘ಅರ್ಥವಾಯ್ತಾ’ ಎಂದು ಕೇಳಿದರಂತೆ. ಆದರೆ ಆ ವ್ಯಕ್ತಿ ‘ಅರ್ಥವಾಯ್ತುʼ ಎಂದಾಗ ‘ಏನು ಅರ್ಥವಾಯ್ತು ಹೇಳು?’ ಎಂದಾಗ ಅವನು ‘ಸ್ವಾಮಿ, ಇದ್ದಿಲು, ಕೆಂಡದ ಸಂಪರ್ಕದಲ್ಲಿರುವ ತನಕ ಮಾತ್ರ ಕೆಂಪಾಗಿರುತ್ತೆ. ಆದರೆ ಸಂಪರ್ಕ ತಪ್ಪಿದ ತಕ್ಷಣ ಅದು ಮೂಲ ಗುಣಕ್ಕೆ ಬರುತ್ತೆ” ಎಂದನಂತೆ. ಆಗ ಗುರುಗಳು “ನಾವೂ ಅಷ್ಟೇ. ಉತ್ತಮ ವಿಷಯ, ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರೆ ಮಾತ್ರ ನಾವು ಉತ್ತಮರಾಗಿರಬಹುದು” ಎಂದು ಹೇಳಿದಾಗ ಅಂದಿನಿಂದ ಅವನು ಅವರ ಸಂಪರ್ಕದಲ್ಲಿ ನಿರಂತರವಾಗಿದ್ದನಂತೆ. ನಾವು ನಮ್ಮ ಮಕ್ಕಳಿಗೆ ಯಾವುದಾದರೂ ಕಲಿಕೆ ಸಾಧಿಸಬೇಕೆಂದರೆ ಅಥವಾ ಅವರಲ್ಲಿ ಯಾವುದಾದರೂ ಅಭ್ಯಾಸವನ್ನು ಬೆಳೆಸಬೇಕೆಂದರೆ ನಿರಂತರವಾಗಿ ಅದನ್ನು ಪಾಲಿಸಲು ತಿಳಿಸಬೇಕು… ಆಗ ಅದು ನಮಗೆ ರೂಢಿಯಾಗಿಬಿಡುತ್ತಂತೆ. ಉತ್ತಮರ ಸಂಗ ಮಾಡುವುದೂ ಕೂಡ ಬೆಳವಣಿಗೆಗೆ ಸಹಾಯಕ. ಇದಕ್ಕೆ ಇಂಗ್ಲೀಷಿನಲ್ಲಿ Tell me about your friends, I will tell you who are you ಎಂಬ ಮಾತು ಹೇಳಲಾಗಿದೆ.

ನಮ್ಮಜ್ಜನ ಮನೆಯಲ್ಲಿ ಇದ್ದಾಗ, ನಮ್ಮಜ್ಜ ನನ್ನನ್ನು ಬೆಳಗ್ಗೆ ಏಳಿಸುವ ಅಲಾರಾಂನಂತೆ ಕೆಲಸ ಮಾಡುತ್ತಿದ್ದರು. ಆದರೆ ಯಾವಾಗ ಹಾಸ್ಟೆಲ್ ಸೇರಿದೆನೋ ಅಲ್ಲಿ ಹಾಸ್ಟೆಲ್ ವಾರ್ಡನ್ ಪೀಪಿಯನ್ನು ಊದಿ ಏಳಿಸುತ್ತಿದ್ದರು. ಆಗ ನಮ್ಮ ಮಲ್ಲಾಡಿಹಳ್ಳಿಯ ಹಾಸ್ಟೆಲ್ಲಿನಲ್ಲಿ ತುಂಬಾ ಶಿಸ್ತು ಇತ್ತು. ನಾವು ಕಡ್ಡಾಯವಾಗಿ ಬೆಳಗ್ಗೆ 5 ಕ್ಕೆ ಏಳಲೇಬೇಕಾಗಿತ್ತು. ಏಳದಿದ್ದರೆ ಕೋಲು ಹಿಡಿದುಕೊಂಡು ಬರುತ್ತಿದ್ದರು. ಒಂದೊಮ್ಮೆ ಮಲಗಿರುವುದನ್ನು ಕಂಡರೆ ಕುಂಡೆಯ ಮೇಲೆ ಬಾರಿಸುತ್ತಾ ಹೋಗುತ್ತಿದ್ದರು, ಬೆಳಗ್ಗೆ ಎದ್ದು ಕೆಲವರು ಓದುತ್ತಾ ಕುಳಿತರೆ ಕೆಲವರು ಬ್ರಷ್ ಮಾಡಲು ಹೋಗುತ್ತಿದ್ದರು. ನಮಗೆ 6 ಕ್ಕೆ ಸೂರ್ಯ ನಮಸ್ಕಾರ, ಯೋಗಾಸನ ಮಾಡಿಸುತ್ತಿದ್ದರು. ತಪ್ಪಿಸಿಕೊಳ್ಳಲು ಅವಕಾಶವೇ ಇರಲಿಲ್ಲ.

ಕೆಲವರು ಮಾತ್ರ ಬೆಳಗಿನ ಜಾವ 3 ಕ್ಕೆ ಎದ್ದು ಓದಲೆಂದು ಏಳುತ್ತಿದ್ದರು. ಹೀಗೆ ಎದ್ದೇಳಲು ಅವರು ತಮ್ಮ ಬಳಿ ಅಲಾರಾಂ ಇಟ್ಟುಕೊಂಡಿದ್ದರು. ಕೆಲವರ ಬಳಿ ಕಮ್ಮಿ ಬೆಲೆಯ ಅಲಾರಾಂ; ಕೆಲವರ ಬಳಿ ಹೆಚ್ಚು ಬೆಲೆಯ ಅಲಾರಾಂ ಇರುತ್ತಿತ್ತು. ಆಗ ತುಂಬಾ ಫೇಮಸ್ ಇದ್ದ ಅಲಾರಾಂ ‘ಆರ್ಪಾಟ್ ಅಲಾರಾಂʼ. ನನ್ನ ಬಳಿ ಅಲಾರಾಂ ಇರಲಿಲ್ಲ. ಆದರೆ ನಾನು 8 ನೇ ತರಗತಿಯಲ್ಲಿದ್ದಾಗ ನನ್ನ ಸೀನಿಯರ್‌ಗಳಾದ 10 ನೇತರಗತಿಯಲ್ಲಿದ್ದ ಯಶವಂತ, ಆಗ ರ್ಯಾಂಕ್ ಸ್ಟೂಡೆಂಟ್ ಆಗಿದ್ದ ಬಿಜಿ ಚಂದ್ರಶೇಖರಯ್ಯ (ಈಗ ವೈದ್ಯನಾಗಿದ್ದಾನೆ) ನ ಜೊತೆ ಜಾಸ್ತಿ ಇರ್ತಿದ್ದೆ. ಅವನು ಬೇಗ ಏಳಲು ಹಾಸ್ಟೆಲ್ ಮೈದಾನದಲ್ಲಿ ಕಡ್ಡಿ ಚಾಪೆಯ ಮೇಲೆ ಮಲಗುತ್ತಿದ್ದ. ಯಾಕೆಂದರೆ ಬೆಳಗಿನ ಜಾವ 3 ಘಂಟೆಯಾಗುವುದರಷ್ಟರೊಳಗಾಗಿ ಇಬ್ಬನಿಯಿಂದ ಚಾಪೆ ತುಂಬಾ ಹಸಿಯಾಗಿ ಎಚ್ಚರಗೊಳ್ಳುವಂತೆ ಮಾಡುತ್ತಿತ್ತು. ನಾವು ಎದ್ದಾಗ ಆ ಸಮಯದಲ್ಲಿ ಹಲವರ ಅಲಾರಾಂಗಳು ಶಬ್ದ ಮಾಡುತ್ತಿದ್ದವು. ಆದರೆ ಕೆಲವರು ಹಾಗೆಯೇ ಆಫ್ ಮಾಡಿ ಮಲಗುತ್ತಿದ್ದರು!! ಈಗಂತೂ ಬಿಡಿ. ಅಲಾರಾಂಗಳು ಕಣ್ಮರೆಯಾಗಿವೆ. ಮೊಬೈಲ್‌ಗಳೇ ಅಲಾರಾಂನಂತೆ ಕೆಲಸ ಮಾಡುತ್ತಿವೆ.

ಬೇಗ ಎದ್ದು ಓದಿದರೆ ನೆನಪಿನಲ್ಲಿರುತ್ತೆ ಎಂಬುದು ಎಲ್ಲರ ವಿಷಯದಲ್ಲೂ ನಿಜವಲ್ಲ ಅಂತಾ ಅನಿಸುತ್ತೆ. ಯಾಕೆಂದರೆ ಪಿಯುಸಿಯಲ್ಲಿದ್ದಾಗ ನಾನಿದ್ದ ಹಾಸ್ಟೆಲ್ಲಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಹುಡುಗರು ರಾತ್ರಿಯೆಲ್ಲಾ ಓದಿ ಬೆಳಗಿನ ಜಾವ ಮಲಗುತ್ತಿದ್ದರು!! ಆದರೆ ಅವರ ಸ್ಕೋರ್ ಮಾತ್ರ ಸೂಪರ್ ಆಗಿರುತ್ತಿತ್ತು. ಇನ್ನೂ ಕೆಲವರು ಯಾವಾಗ ಎದ್ದು ಓದಿದರೂ ‘ನನಗೆ ಓದಿದ್ದು ನೆನಪೇ ಇರೋದಿಲ್ಲ’ ಎಂದು ಕೊರಗುತ್ತಿರುತ್ತಾರೆ. ನನಗೂ ಅಷ್ಟೇ. ಸುದೀರ್ಘವಾಗಿ ಇರುವ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಆಗುವುದಿಲ್ಲ. ಆದರೆ ಓದಿದ ವಿಜ್ಞಾನ ಹಾಗೂ ಗಣಿತ ಮರೆಯೋದೇ ಇಲ್ಲ. ಆದರೆ ಸಮಾಜ ವಿಜ್ಞಾನದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳೋಕೆ ಕಷ್ಟ ಪಡುತ್ತೇನೆ. ಟಿಸಿಹೆಚ್ ಸೇರಿದಾಗ ಆ ಕೋರ್ಸಿನಲ್ಲಿರುವ ಬರೀ ಥಿಯರಿ ಇರುವ ವಿಷಯಗಳನ್ನು ನೆನಪಿನಲ್ಲಿಡೋಕೆ ನನಗೆ ಪ್ರಯಾಸವೆನಿಸುತ್ತಿತ್ತು. ಆಗ ಮೊದಲ ವರ್ಷದ ಟಿಸಿಹೆಚ್‌ನಲ್ಲಿದ್ದಾಗ ನಮ್ಮ ಕಾಲೇಜಿಗೆ ಜ್ಞಾಪಕ ಶಕ್ತಿಯ ಬಗ್ಗೆ ತರಬೇತಿ ಕೊಡಲು ಒಬ್ಬರು ಬಂದರು. ಅವರು ಒಂದು ದಿನದ ಶುಲ್ಕವು ಸಾವಿರಾರು ರೂಪಾಯಿ ಎಂದಾಗ ನಮ್ಮ ಪ್ರಾಂಶುಪಾಲರು ಪ್ರತಿಯೊಬ್ಬರಿಂದ ಹಣ ಸಂಗ್ರಹಿಸಿ ಒಂದು ದಿನ ಆ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದರು. ಅವರು ಹೇಳಿದ ಹಲವು ಅಂಶಗಳು ನನಗೆ ನನ್ನ ನೆನಪಿನ ತಂತ್ರವನ್ನು ಬೆಳೆಸಲು ಸಹಕಾರಿಯಾದವು.

ಕುರುಡು ವಿಧಾನದ ಮೂಲಕವೂ ನಾವು ನೆನಪಿನಲ್ಲಿಟ್ಟುಕೊಳ್ಳಬಹುದಾದ ವಿಧಾನಗಳನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಅನುಭವ ಆಧಾರಿತ ಕಲಿಕೆ ಮಾಡಿದರೆ ಕಲಿತಿದ್ದನ್ನು ಮರೆಯುವುದಿಲ್ಲ. ಎಲ್ಲರಿಗೂ ಒಂದೇ ವಿಧಾನವು ಅನ್ವಯವಾಗೋಲ್ಲ. ಕೆಲವರು ಕೇಳಿ ಕಲಿತರೆ, ಕೆಲವರು ನೋಡಿ ಕಲೀತಾರೆ. ಕೆಲವರು ಮಾಡಿ ಕಲಿಯುತ್ತಾರೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಟಿಸಿಹೆಚ್‌ನಲ್ಲಿದ್ದಾಗ ಮಕ್ಕಳಿಗೆ ಟೀಚಿಂಗ್ ಪ್ರಾಕ್ಟೀಸ್ ಹಾಕಿದಾಗ ನಾವು ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದೆವು. ಆಗ ನನಗೆ ‘ಸಮಾಜ ವಿಜ್ಞಾನ’ ವಿಷಯ ಪಾಠ ಮಾಡುವಾಗ ನಾವು ನೋಡಿಕೊಂಡು ಪಾಠ ಮಾಡುವಂತಿರಲಿಲ್ಲ ಎಂಬ ನಿಯಮ ಇದ್ದುದರಿಂದ ನಾನು ಮೊದಲೇ ಹೋಗಿ ಬೋರ್ಡ್ ಬಳಿಯ ಗೋಡೆಯೊಂದರ ಮೇಲೆ ಯಾರಿಗೂ ಗೊತ್ತಾಗದಂತೆ ಪಾಠ ಮಾಡುವ ಮುಖ್ಯ ಅಂಶಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ! ಎಲ್ಲರಿಗೂ ಎಲ್ಲಾ ವಿಷಯಗಳು ಇಷ್ಟ ಆಗೋದಿಲ್ಲ. ಕೆಲವರಿಗೆ ಕೆಲವು ವಿಷಯಗಳು ಇಷ್ಟ ಆಗುತ್ತವೆ ಕೆಲವು ಕಷ್ಟ ಆಗುತ್ತವೆ. ಇದು ಆ ವಿಷಯವನ್ನು ಬೋಧಿಸುವ ಶಿಕ್ಷಕರ ಮೇಲೆ ಅವಲಂಬಿಸಿದೆ. ಆದ್ದರಿಂದ ನಾವು ಮಕ್ಕಳಿಗೆ ಆಸಕ್ತಿದಾಯಕವಾಗಿ ಬೋಧಿಸಬೇಕು. ಮಕ್ಕಳ ಕಲಿಕೆಯ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಹಿಂದಿ ಚಲನಚಿತ್ರಗಳಾದ ‘ತಾರೇ ಜಮೀನ್ ಪರ್’ ಹಾಗೂ ‘3 ಈಡಿಯಟ್ಸ್’ ಇವು ಮಕ್ಕಳ ಕಲಿಕೆಯ ವಿಷಯವನ್ನು ತುಂಬಾ ಚೆನ್ನಾಗಿ ತಿಳಿಸಿವೆ. ಇದನ್ನು ನೋಡಿ ಸರಿಯಾಗಿ ಅರ್ಥೈಸಿಕೊಂಡರೆ ಯಾವ ಮಗುವಿಗೂ ಕಲಿಸುವುದು ಭಾರ ಎಂದು ನಾವು ಅಂದುಕೊಳ್ಳುವುದಿಲ್ಲ. ಖುಷಿಯ ಕಲಿಕೆ ಮಕ್ಕಳದಾಗಲಿ. ಆ ಮೂಲಕ ಅವರ ಮೊಗದಲ್ಲಿ ಸಂತಸ ತರಲಿ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

4 Comments

  1. ಶರಣಪ್ಪ ಗೌಡರ

    ನಿಮ್ಮ ಬರವಣಿಗೆ ತುಂಬಾ ಚನ್ನಾಗಿ ದೆ. ಒಳ್ಳೆಯ ಹವ್ಯಾಸ ಮತ್ತು ರೂಡಿ ಗಳನ್ನ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ನಾವು ನಮ್ಮ ಗುರಿ ತಲುಪುತ್ತೆವೆ. ಅದೇ ನಮ್ಮ ಒಡನಾಟ ವು ಸಹ ಉತ್ತಮ ರ ಜೊತೆ ಇದ್ದಾಗ ಉತ್ತಮ ಗುಣಗಳು ನಮ್ಮಲ್ಲಿ ಬೆಳೆತ್ತವೆ.

    Reply
  2. Venkatesh

    ತುಂಬಾ ಚೆನ್ನಾಗಿದೆ . ಇನ್ನೂ ಹೀಗೆ ಮುಂದುವರಿಯಲಿ.

    Reply
  3. ಎಸ್. ಪಿ. ಗದಗ

    ಓದಿನ ಖುಷಿ ಕೊಡುತ್ತಿರುವ ಅಂಕಣ.

    Reply
  4. ಜಿ.ಎಸ್.ಶಶಿಧರ

    ನಿಮ್ಮ ಬರವಣಿಗೆ ಧಾಟಿ ಓದಿಸಿಕೊಂಡು ಹೋಗುತ್ತದೆ. ನಿಮ್ಮನ್ನು ಬಾಲ್ಯದಲ್ಲಿ ಆ ವಿರೇಶನ ಎತ್ತುಗಳ ಕಾಲ್‌ ಗೆಜ್ಜೆಗಳ ದನಿ ನಿಮ್ಮ ಕಾಡಿದಂತೆ, ದೇಸಿ style ನಲ್ಲಿ ನಮ್ಮ ಜೊತೆ ಕುಳಿತು ನೀವು ಮಾತಾಡಿದಂತೆ ಕಾಡುವುದು ನಿಮ್ಮ ಬರಹ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ