ಇದೊಂದು ಚಿಕ್ಕ ಕಾಳಜಿ, ಉಳಿದವರೆಲ್ಲರ ಉಪೇಕ್ಷೆಯ ನಡುವೆ ಆಕೆ ಮೆರೆದ ಸಣ್ಣ ಸಮಯ ಪ್ರಜ್ಞೆ ಎಂದು ಅನಿಸಬಹುದೇನೋ? ಆದರೆ ನೂರಾರು ಕೆಲಸಗಳ ನಡುವೆ ಮುಳುಗಿದಾಕೆ ತನ್ನದಲ್ಲದ ಧಾವಂತಕ್ಕಾಗಿ ಅವನ್ನೆಲ್ಲ ಬದಿಗಿಟ್ಟು ಸ್ವತಃ ಆಕ್ಸಿಜನ್ ಅಳವಡಿಸಿದ ಬೆಡ್ಡನ್ನು ದೂಡಿಕೊಂಡು ಬರುವುದು ಎಷ್ಟು ವಿರಳ ಹಾಗೂ ದೊಡ್ಡ ಮಾನವೀಯತೆಯೆನ್ನುವುದು ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ಬಳಿಕವಷ್ಟೇ ಅರ್ಥವಾಗುವ ಸೂಕ್ಷ್ಮ ಸತ್ಯ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯಲ್ಲಿ ಹೊಸ ಬರಹ ನಿಮ್ಮ ಓದಿಗೆ
ಸಿನಿಮಾಗಳಲ್ಲಿ ಅತ್ಯಂತ ಸುಲಭವಾಗಿ ಹಾಸ್ಯಕ್ಕೆ ಗುರಿಮಾಡಲೆಂದೇ ಕೆಲವೊಂದು ವೃತ್ತಿ, ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ವೃತ್ತಿಯವರೆಲ್ಲರೂ ಕೆಟ್ಟ ನಡವಳಿಕೆಯವರು ಎಂಬಂತೆ ಬಿಂಬಿಸುತ್ತ ಹೊಲಸು ಹಾಸ್ಯವನ್ನು ಬಲವಂತವಾಗಿ ಸೃಷ್ಟಿಸಲಾಗುತ್ತದೆ. ಮೊದಲಿನಿಂದಲೂ ಅಂಥ ಕೆಟ್ಟ ಅಭಿರುಚಿಗೆ ಈಡಾದವರಲ್ಲಿ ನರ್ಸುಗಳು ಪ್ರಮುಖರು.
ಜೀವನ್ಮರಣದ ಹೋರಾಟಕ್ಕೀಡಾದ ನಮ್ಮವರ ಜೊತೆ ಒಂದು ತಿಂಗಳಾದರೂ ಆಸ್ಪತ್ರೆಯಲ್ಲಿ ಕಳೆದ ಯಾರೇ ಆದರೂ ನರ್ಸುಗಳ ಬಗ್ಗೆ ಯಾವತ್ತೂ ತಪ್ಪಾಗಿ ಮಾತನಾಡಲಾರರು. ತನ್ನ ದೇಹದ ಬಗ್ಗೆ ಕೊಂಚವೂ ಕಾಳಜಿ ಮಾಡಲಾರದೆ ನಿತ್ರಾಣರಾಗಿ ಮಲಗಿರುವ ರೋಗಿಗಳ ಪಾಲಿಗೆ ಅಮ್ಮನಾಗಿ ಒದಗಿ ಬರುವವರು ನರ್ಸುಗಳು. ಅಪ್ಪ ಆಸ್ಪತ್ರೆಯಲ್ಲಿದ್ದ ಎರಡೂವರೆ ವರ್ಷಗಳ ಅವಧಿಯಲ್ಲಿ ಇಂಥಾ ಹಲವಾರು ನರ್ಸುಗಳ ಜೊತೆ ಒಡನಾಡಿದ್ದೇನೆ. ಅವರ ಕಾಳಜಿಗೆ ಬೆರಗಾಗಿದ್ದೇನೆ. ಅವರ ನಿರ್ಲಕ್ಷ, ಉಪೇಕ್ಷೆಗಳಿಗೆ ಜಗಳಾಡಿದ್ದೇನೆ. ಹೃದಯ, ಮೆದುಳು ಮುಂತಾದ ಸೂಕ್ಷ್ಮಾತಿ ಸೂಕ್ಷ್ಮ ಅಂಗಗಳ ಶಸ್ತ್ರ ಚಿಕಿತ್ಸೆಗೀಡಾಗಿ ಹಾಸಿಗೆ ಹಿಡಿದವರು ಗುಣಮುಖವಾಗುವಲ್ಲಿ ನರ್ಸುಗಳ ಕಾಳಜಿ, ಸೂಕ್ಷ್ಮತೆ ಅತ್ಯಂತ ಮಹತ್ವದ್ದಾಗಿರುತ್ತದೆ. ಅವರು ಕೊಂಚ ಉಪೇಕ್ಷೆ ಮಾಡಿದರೂ ರೋಗಿ ನಂಜು, ಜ್ವರಗಳಿಗೀಡಾಗುತ್ತಾನೆ.
ಅದು ಅಪ್ಪನನ್ನು ಮಣಿಪಾಲ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದ ಸಮಯ. ಆಕೆಯ ಹೆಸರು ಗೀತ. ಕುಂದಾಪುರದವಳು. ಸಂಜೆಗೋ, ಬೆಳಗ್ಗೆಗೋ, ಮಧ್ಯಾಹ್ನಕ್ಕೋ ತನ್ನ ಶಿಫ್ಟಿಗನುಸಾರವಾಗಿ ನರ್ಸಿನುಡುಗೆ ತೊಟ್ಟ ಆಕೆ ಒಳಬಂದಳೆಂದರೆ ಮೆದುಳು ರೋಗಿಗಳಿಂದ ತುಂಬಿದ ಇಡೀ ಧನ್ವಂತರಿ ವಾರ್ಡಿನ ತುಂಬ ಸಣ್ಣದೊಂದು ಸಂಚಲನ. ‘ಮಾತನಾಡುವುದನ್ನು ನಿಲ್ಲಿಸಿದ ಮರುಕ್ಷಣ ನಿನ್ನ ತಲೆ ಸಾವಿರ ಹೋಳಾಗಲಿ‘ ಎಂದು ಬೇತಾಳದಿಂದ ಶಪಿಸಿಕೊಂಡು ಇಲ್ಲಿಗೆ ಬಂದಿದ್ದಾಳೇನೋ ಎಂಬಂತೆ ಒಂದು ನಿಮಿಷವೂ ಸುಮ್ಮನಿರದೇ ರೋಗಿಯ ಮನೆಯವರ ಬಳಿ, ಅದಕ್ಕಿಂತ ಹೆಚ್ಚಾಗಿ ಏನೊಂದೂ ಗೊತ್ತಾಗದ ರೋಗಿಗಳ ಬಳಿ ಮಾತನಾಡುತ್ತಲೇ ಇರುತ್ತಿದ್ದಳು.
“ಅಲೋಕಾ, ಎಂತದಾ? ಬೆಳ್ಗೆ ಅಪ್ಪ-ಅಮ್ಮ ಊಟ ಹಾಕಿಲ್ಯನ? ನೆನ್ನೆ ನಾನು ಬಂದ್ಕೂಡ್ಲೇ ಮಾತಾಡಿದ್ದೆ. ಈಗೆಂತಕೆ ಎತ್ಲಗೋ ನೋಡ್ತೀದೀಯ“
“ಜನಾರ್ಧನ್ ಅವ್ರೇ.. ಓ ಜನಾರ್ಧನ್ ಅವ್ರೇ. ನಮ್ ಹೋಟ್ಲಿಗೆ ಬಾ ಅಂದೇಳಿ ಒಂದ್ ಕಾಫೀನೂ ಕೊಡ್ದೇ ಮನಿಕ್ಕಂಡ್ರೆ ಹೆಂಗೆ? ಏಳಿ ಬೇಗ.. ಬೆಳಗಾಯ್ತ್ ಮರ್ರೆ..”
“ಶೆಟ್ರೆ.. ನಿಮ್ ತಮ್ಮಂದು ಜಾಸ್ತಿ ಆಯ್ತ್ ಹೇಳ್ತಿದ್ದೆ ಹಾ.. ಈ ಗೀತಂಗೆ ಹೆಂಗೆಲ್ಲ ಮಕ್ಕರ್ ಮಾಡ್ತಿರ್. ನೀವ್ ನನ್ ಫ್ರೆಂಡಲ್ದ.. ನನ್ ಪರ ಎಂತದೂ ಹೇಳುದಿಲ್ಯ?”
“ಬಾಲಕೃಷ್ಣ ಅವ್ರೇ… ಓ ಅಲ್ಲಲ್ಲ ಇಲ್ ಕಾಣಿ.. ನಿನ್ನೆ ನಾ ಹ್ವಾಪ್ಕಿರೆ ನಾಳೆಯಿಂದ ನಾನೇ ಮಾತ್ರೆ ತಿಂತೆ ಅಂದಿದ್ದಲ್ದಾ ನೀವು? ಈಗೆಂತ ಎತ್ಲಗೋ ಕಾಣ್ತಾ ಮನಿಕ್ಕಂಡ್ರ್ಯಲೆ. ಇಲ್ಲೊಂದ್ ಹಳೇ ರೇಡ್ಯೋ ಇತ್. ರಿಪೇರಿ ಮಾಡ್ಕೊತ್ರಾ ಬಾಲಕೃಷ್ಣ ಅವ್ರೇ.. ನಾ ಹಾಡ್ ಕೇಂತ ಕೆಲ್ಸ ಮಾಡ್ತೆ..”
ಇದನ್ನೆಲ್ಲ ಆಕೆ ಮಾತನಾಡುತ್ತಿದ್ದದ್ದು ಪೂರ್ಣ ಅಥವಾ ಅರ್ಧ ಕೋಮಾದಲ್ಲಿರುವ ಅರೆ ಪ್ರಜ್ಞೆಯ ಮೆದುಳು ರೋಗಿಗಳ ಬಳಿ.
ಕೋರ್ಸಿನಲ್ಲಿ ಉಳಿದ ನರ್ಸುಗಳಿಗೆ ಹೇಳಿಕೊಡದ ಯಾವ ಅಮೂಲ್ಯವಾದ ಅಧ್ಯಾಯವೊಂದನ್ನು ಇವಳಿಗೆ ಕಲಿಸಿ ಕಳುಹಿಸಿದ್ದರೋ ಗೊತ್ತಿಲ್ಲ, ತನ್ನ ಯಾವೊಂದು ಮಾತಿಗೂ ತುಟಿಪಿಟಿಕ್ಕೆನ್ನದ ಕೋಮಾ ರೋಗಿಗಳ ಆಳದಲ್ಲೆಲ್ಲೋ ಇನ್ನಾದರೂ ಇರಬಹುದಾದ ಸುಪ್ತ ಪ್ರಜ್ಞೆಯ ಬಾಯಿ ಬಿಡಿಸಿಯೇ ತೀರುವೆನೆಂಬಂತೆ ಆಕೆ ಇಂಜಕ್ಷನ್ ಕೊಡುವಾಗ, ಪ್ಯಾಡು ಬದಲಿಸಲು ಸಹಾಯ ಮಾಡುವಾಗ, ಇನ್ನೇನೋ ಕೆಲಸಕ್ಕೆ ರೋಗಿಯ ಸಮೀಪ ಸುಳಿಯುವಾಗ ಮಾತನಾಡುತ್ತಲೇ ಇದ್ದಳು. ಧನ್ವಂತರಿ ವಾರ್ಡಿನಲ್ಲಿ ಕಳೆದ ಇಪ್ಪತ್ತೆರಡು ದಿನಗಳಲ್ಲಿ ಆಕೆಯ ಮಾತಿಗೆ ಓಗೊಟ್ಟು ಪ್ರತಿಕ್ರಿಯಿಸಿದ ರೋಗಿಯೆಂದರೆ ಅದು ನನ್ನ ಅಪ್ಪ ಒಬ್ಬನೇ! ಆದರೂ ಬೇಸರಗೊಳ್ಳದ ಆಕೆ ಈಗಷ್ಟೇ ಅರ್ಧಕ್ಕೆ ಮಾತು ನಿಲ್ಲಿಸಿ ಹೋಗಿದ್ದಳೇನೋ ಎಂಬಂತೆ ಕಣ್ಬಿಟ್ಟು ಮಲಗಿದ ಶಿಲಾಜೀವಗಳ ಜೊತೆ ಮಾತನಾಡುತ್ತಲೇ ಇರುತ್ತಿದ್ದಳು. ಮಾತು ಮಾತ್ರವಲ್ಲ, ಸೇವೆಯಲ್ಲೂ ಆಕೆಯದು ಶಿಸ್ತು. ಮಧ್ಯಾಹ್ನದೂಟ ಬರುವುದರೊಳಗೆ ರೋಗಿಗಳ ಕಡೆಯವರೆಲ್ಲ ಮಾತ್ರೆ ಕುಟ್ಟಿಕೊಂಡು ತಯಾರಿರಬೇಕು. ರೋಗಿಯ ಆಸುಪಾಸು ದಿವೀನಾಗಿರಬೇಕು. ಸೋಂಕು ಉಂಟು ಮಾಡಬಹುದಾದ ಒಂದೇ ಒಂದು ವಸ್ತು ಕಂಡರೂ ಆಕೆ ಭದ್ರಕಾಳಿಯಾಗುತ್ತಿದ್ದಳು. ಅದನ್ನು ಎತ್ತಿ ಮೇಲಿನ ಲಗ್ಗೇಜ್ ಬಾಕ್ಸಿಗೆ ಹಾಕುವ ತನಕ ಬಿಡದೇ ಕಾಡುತ್ತಿದ್ದಳು. ಎರಡು, ಮೂರು ದಿನಕ್ಕೊಮ್ಮೆ ನಾವು ಮನೆಯವರ ಸಹಾಯ ಪಡೆದು ಪ್ರತೀ ರೋಗಿಗೆ ಖುದ್ದು ತಲೆ ಸ್ನಾನ ಮಾಡಿಸುತ್ತಿದ್ದಳು. ಒಂದು ಬಕೀಟು ಹಾಗೂ ಟಬ್ ತಂದು, ಮಂಚದಲ್ಲೇ ತಲೆಯನ್ನು ಹೊರಗೆ ತಂದು, ಟಬ್ ಕೆಳಗಿಟ್ಟು, ತಲೆಗೆ ತಾನೇ ಶ್ಯಾಂಪೂ ಹಾಕಿ, ಶ್ಯಾಂಪೂ ತಯಾರಿರದಿದ್ದರೆ ನಮ್ಮನ್ನ ತಕ್ಷಣ ಓಡಿಸಿ ತರಿಸಿ, ಕೈಯಾರೆ ನೀವಿ ನೀವಿ ತಲೆ ಸ್ನಾನ ಮಾಡಿಸುತ್ತಿದ್ದಳು. “ಇಲ್ಕಾಣಿ, ಅದೆಷ್ಟ್ ಹಿರ್ಗ್ಲಾಗಿತ್ತೋ ಎಂತದೋ? ಸ್ನಾನ ಮಾಡ್ಸಿದ್ದೇ ಮಾಡ್ಸಿದ್. ಹೆಂಗ್ ಶಾಂತವಾಗಿ ಮನಿಕ್ಕಂಡ್ರ್ ಕಾಣಿ” ಎಂದು ತನ್ನ ಕೈಯಲ್ಲಿ ತಲೆ ನೀವಿಸಿಕೊಂಡು ನಿದ್ರೆಗೆ ಜಾರಿದ ರೋಗಿಯ ಮುಖದಲ್ಲಿ ಕೊಂಚ ಶಾಂತಿಯ ಕಂಡವಳಂತೆ ಖುಷಿಪಡುತ್ತಿದ್ದಳು.
ಅಂಥಾ ಗೀತಾ ಅಮ್ಮನಂತೆ ಕಂಡಿದ್ದು ಅಪ್ಪನಿಗೆ ಪಿಇಜಿ ಹಾಕುವಾಗಿನ ಶಸ್ತ್ರ ಚಿಕಿತ್ಸೆಯಲ್ಲಿ.

ಬಾಯಲ್ಲಿ ಊಟ ಮಾಡಲಾಗದ, ಮೂಗಿನ ರೈಲ್ಸ್ ಟ್ಯೂಬಿನಿಂದಾಗಿ ಕಫ ಹೆಚ್ಚಾಗುವ ಅರೆ ಪ್ರಜ್ಞೆಯ ರೋಗಿಗಳಿಗೆ ನೇರ ಹೊಟ್ಟೆಗೇ ಅಳವಡಿಸುವ ಕೃತಕ ಅನ್ನ ನಾಳವೇ ಪಿ.ಇ.ಜಿ. ಅಪ್ಪನಿಗೆ ಮೂಗಿನ ರೈಲ್ಸ್ ಟ್ಯೂಬಿನಿಂದ ವಿಪರೀತ ಕಫ ಉಂಟಾಗುತ್ತಿದ್ದರಿಂದ ಪಿಇಜಿ ಮಾಡಲು ನಿರ್ಧರಿಸಲಾಗಿತ್ತು. ಮೇಲೆ ಹೇಳಿದಂತೆ ಇದು ಹೊಟ್ಟೆಗೆ ರಂಧ್ರ ಕೊರೆಯುವ ನೋವಿನ ಚಿಕಿತ್ಸೆಯಾದ್ದರಿಂದ ಅದಕ್ಕೂ ಸ್ವಲ್ಪ ಮುಂಚೆ ಅಪ್ಪನಿಗೆ ಚಿಕ್ಕ ಪ್ರಮಾಣದ ಅನಸ್ತೇಶಿಯಾವನ್ನು ಕೊಡಲಾಯಿತು. ಅಪ್ಪನನ್ನು ನುಂಗಿ ಬಾಗಿಲು ಹಾಕಿಕೊಂಡ ಮಿನಿ ಆಪರೇಷನ್ ಥಿಯೇಟರ್ ನನ್ನನ್ನು ತನ್ನ ಮುಚ್ಚಿದ ಬಾಗಿಲನ್ನೇ ನೋಡುತ್ತಾ ಉಳಿಯುವಂತೆ ಹೊರಗೇ ಉಳಿಸಿತು. ಮೊದಲೇ ಜ್ವರ ಬರಬಾರದು, ರೋಗಿಗೆ ಸಂಪೂರ್ಣ ಜ್ಞಾನವಿರಬೇಕು ಎಂದೆಲ್ಲ ಹೆದರಿಸಿ ಶುರುಮಾಡಿದ ಚಿಕಿತ್ಸೆ. ಎಲ್ಲಿ ಏನಾಗುತ್ತದೋ ಎಂಬ ಭಯದಲ್ಲಿ ಕುಳಿತವನಿಗೆ ಆ ಇಡೀ ಬಾಗಿಲೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಂತೆ ಗೋಚರಿಸಿ ಕಾಡುತ್ತಿತ್ತು. ಬಹಳಷ್ಟು ಹೊತ್ತು ಕಾದ ಮೇಲೆ ತೆರೆದುಕೊಂಡ ಬಾಗಿಲಿನಲ್ಲಿ ಹೊರತಂದ ಅಪ್ಪನ ಮೈಗೆ ಬಿಪಿ, ಆಕ್ಸಿಜನ್ ಎಲ್ಲವನ್ನೂ ಅಳೆಯುವ ಯಂತ್ರಗಳು ಚುಚ್ಚಿಕೊಂಡಿದ್ದವು. ಸ್ವಲ್ಪ ಹೊತ್ತು ಇಲ್ಲೇ ಇರಿ. ವಾರ್ಡಿಗೆ ಕರ್ಕೊಂಡು ಹೋಗೋಕೆ ಕಾಂಪೌಂಡರ್ ಬರ್ತಾನೆ ಎಂದವರ ದಾರಿಯನ್ನೇ ಕಾಯುತ್ತಾ ಕಾಯುತ್ತಾ ನಿಮಿಷಗಳು ಕಳೆದವು. ಯಾರೂ ಪತ್ತೆಯಿಲ್ಲ. ಕೇಳಿದರೆ ಯಾವುದೋ ರೋಗಿಯನ್ನು ಕರೆದುಕೊಂಡು ಎಲ್ಲಿಗೋ ಹೋಗಿದ್ದಾನೆ, ಇನ್ನೂ ಸ್ವಲ್ಪ ಹೊತ್ತು… ಇಂಥವೇ ಉತ್ತರಗಳು.
ಬೆಳಗ್ಗೆಯಿಂದ ಏನನ್ನೂ ತಿನ್ನದ ಅಪ್ಪ. ಅದೆಷ್ಟು ಹಸಿದಿದ್ದಾನೋ? ಬೇಗ ಒಯ್ದು ಡ್ರಿಪ್ಪನ್ನಾದರೂ ಹಾಕಿದರೆ ಕೊಂಚ ಸಂಕಟ ಕಡಿಮೆಯಾದೀತೇನೋ? ಎಂದುಕೊಂಡು ಕಾಯುತ್ತಿರುವಾಗಲೇ ಅವನ ಬೆರಳಿಗೆ ಅಂಟಿಸಿದ ಆಕ್ಸಿ ಮೀಟರ್ ಚೀರಿಕೊಂಡಿತು. ಆಕ್ಸಿಜನ್ ಪ್ರಮಾಣ ಇಳಿಯುತ್ತಿದೆ! ಅದರಷ್ಟೇ ದೊಡ್ಡದಾಗಿ ಕೂಗಿಕೊಳ್ಳುತ್ತಾ ನಾನೂ ಒಳಗೆ ಹೋಗಿ ಹೇಳಿದರೆ ರೆಕಾರ್ಡುಗಳ ಸಂಭಾಳಿಸುವ ಸಿಬ್ಬಂದಿ ಏನಾಗಲ್ಲ ಇರ್ರೀ. ಬರ್ತಾರೆ ಎಂದು ಉಡಾಫೆಯಲ್ಲಿ ಉತ್ತರಿಸಿದ. ಇತ್ತ ಆಮ್ಲಜನಕ ತೊಂಬತ್ತರಿಂದ ಜಾರಿ ಎಂಬತೈದರ ತನಕ ಬಂದಾಗಿತ್ತು. ಇಲ್ಲಿ ಅಪ್ಪನ ಜೊತೆ ನಿಲ್ಲುವುದೋ, ಓಡಿ ಯಾರನ್ನಾದರೂ ಕರೆಯುವುದೋ ತಿಳಿಯದಾದಾಗ ಹೊಳೆದ ಹೆಸರು ಗೀತಾ.. ತಕ್ಷಣ ಆಕೆಯ ವಿಭಾಗದ ನಂಬರಿಗೆ ಕರೆ ಮಾಡಿ ಎಲ್ಲವನ್ನೂ ಹೇಳಿದೆ.
ಯಾವ ವಾರ್ಡ್ ಬಾಯ್‌ಗೂ ಕಾಯದೇ, ಇರುವ ಆಕ್ಸಿಜನ್ ಸ್ಟ್ರೆಚ್ಚರ್ರನ್ನು ತಾನೇ ದೂಡಿಕೊಂಡು ಓಡಿಬಂದಳು. ನಾವಿಬ್ಬರೇ ಅಪ್ಪನನ್ನು ಎತ್ತಿಮಲಗಿಸಿ ಬಾಯಿಗೆ ಆಕ್ಸಿಜನ್ ಮಾಸ್ಕ್ ಹಾಕಿದೆವು. ಪಿ.ಇ.ಜಿ. ನಾನಂದುಕೊಂಡಂತೆ ಸರಳವಾದ ಪ್ರಕ್ರಿಯೆಯಾಗಿರಲಿಲ್ಲ. ಬಾಯೊಳಗೆ ನುಗ್ಗಿ ಹೊಟ್ಟೆಯಲ್ಲಿ ಸೂಕ್ತ ಜಾಗಕ್ಕಾಗಿ ಹುಡುಕಿದ ಉಪಕರಣ ಅಪ್ಪನಲ್ಲಿ ಗಾಬರಿಯನ್ನೂ, ಯಾತನೆಯನ್ನೂ ಹುಟ್ಟುಹಾಕಿತ್ತು. ಅದರ ಮೇಲೆ ಕೊಟ್ಟ ಅನಸ್ತೇಶಿಯಾ ಈಗಾಗಲೇ ಪ್ರಜ್ಞೆ ಮಂದವಾದ ಅವನ ದೇಹದ ಸ್ವಯಂಚಾಲಿತ ಕ್ರಿಯೆಗಳನ್ನೂ ತಗ್ಗಿಸಿತ್ತು. ಅದರ ನೇರ ಪರಿಣಾಮವಾಗಿಯೇ ಅಪ್ಪನ ಉಸಿರಾಟ ಕುಸಿದಿತ್ತು. ವಾರ್ಡಿಗೆ ತಂದು, ಬೆಡ್‌ನ ಆಮ್ಲಜನಕದ ಕೊಳವೆಗೆ ಜೋಡಿಸುವ ತನಕ ಆತಂಕದಲ್ಲೇ ಇದ್ದ ಗೀತಾ ಆಕ್ಸಿ ಮೀಟರಿನ ಪ್ರಮಾಣ ನಾರ್ಮಲ್ಲಾದಾಗ ಅಬ್ಬಾ ಎಂದು ನಿಟ್ಟುಸಿರಿಟ್ಟಳು.
ಇದೊಂದು ಚಿಕ್ಕ ಕಾಳಜಿ, ಉಳಿದವರೆಲ್ಲರ ಉಪೇಕ್ಷೆಯ ನಡುವೆ ಆಕೆ ಮೆರೆದ ಸಣ್ಣ ಸಮಯ ಪ್ರಜ್ಞೆ ಎಂದು ಅನಿಸಬಹುದೇನೋ? ಆದರೆ ನೂರಾರು ಕೆಲಸಗಳ ನಡುವೆ ಮುಳುಗಿದಾಕೆ ತನ್ನದಲ್ಲದ ಧಾವಂತಕ್ಕಾಗಿ ಅವನ್ನೆಲ್ಲ ಬದಿಗಿಟ್ಟು ಸ್ವತಃ ಆಕ್ಸಿಜನ್ ಅಳವಡಿಸಿದ ಬೆಡ್ಡನ್ನು ದೂಡಿಕೊಂಡು ಬರುವುದು ಎಷ್ಟು ವಿರಳ ಹಾಗೂ ದೊಡ್ಡ ಮಾನವೀಯತೆಯೆನ್ನುವುದು ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ಬಳಿಕವಷ್ಟೇ ಅರ್ಥವಾಗುವ ಸೂಕ್ಷ್ಮ ಸತ್ಯ.

ಅಪ್ಪನೊಟ್ಟಿಗಿನ ಎರಡೂವರೆ ವರ್ಷಗಳ ಆಸ್ಪತ್ರೆ ವಾಸದಲ್ಲಿ ಇಂಥಾ ಅನೇಕ ನರ್ಸುಗಳನ್ನು ನೋಡಿದ್ದೇನೆ. ನಿತ್ರಾಣರಾಗಿ ಒಂದು ಕಾಲನ್ನು ಬದುಕಿನಲ್ಲಿ, ಇನ್ನೊಂದನ್ನು ಸಾವಿನಲ್ಲಿ ಚಾಚಿಕೊಂಡು ಮಲಗಿರುವ ಜೀವಂತ ಶಿಲೆಗಳ ನಡುವೆಯೇ ತಮ್ಮ ಕರ್ತವ್ಯ, ನಗು, ಲವಲವಿಕೆಗಳನ್ನು ಜಾರಿಯಲ್ಲಿಟ್ಟುಕೊಳ್ಳಬೇಕಾದ ವಿಚಿತ್ರ ಅನಿವಾರ್ಯತೆ ಅವರದ್ದು. ಮುಜುಗರ, ಹೇಸಿಗೆ ಯಾವುದೂ ಇಲ್ಲದೇ ಕಫ, ಮಲ, ರಕ್ತ ಎಲ್ಲವನ್ನೂ ಸ್ವಚ್ಛ ಮಾಡುವ ಅವರನ್ನು ವರ್ಣಿಸಲು ಮಾತೃ ಸ್ವರೂಪಿಯೆನ್ನುವ ಅರ್ಥಪೂರ್ಣ ಪದದ ಹೊರತು ಇನ್ಯಾವ ಪದವೂ ಇಲ್ಲ.
(ಸಾಂದರ್ಭಿಕ ಚಿತ್ರಗಳು)

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
