ಮಗುವಿಗೆ ಒಂದು ವರ್ಷ ತುಂಬಿದಾಗ ಮಾತನಾಡಲು ಶುರುಮಾಡಿತು. ಅವಳು ತನ್ನ ಮಗು ಅಮ್ಮ ಎನ್ನಲಿ ಎಂದು ಕಾಯುತ್ತಿದ್ದಳು. ಆದರೆ ಅದು “ಓನ್ಯಾಸಿ” ಎನ್ನತೊಡಗಿತು. ಇದ್ಯಾವ ಶಬ್ದ, ಭಾಷೆ ಎಂದು ಅವಳಿಗೆ ತಕ್ಷಣ ಹೊಳೆಯಲಿಲ್ಲ. ತನ್ನ ನೆನಪುಗಳನ್ನು ಹರವಿ ಪರಿಶೀಲಿಸಿದಾಗ ಅದು ರಾಜೀವ್ 747 ಅವಳಿಗೆ ಹೇಳಿದ ಮೊದಲ ಪದವಾಗಿತ್ತು. ನಾನೇ ಹೆತ್ತು ಹೊತ್ತು ಸಾಕಿದರೂ ಅವನ ಭಾಷೆ ಮಾತನಾಡುತ್ತಿದೆಯಲ್ಲ ಎಂದು ಅವಳಿಗೆ ದುಃಖವಾಯಿತು, ಸಿಟ್ಟೂ ಬಂತು. ಅವಳು ಎಷ್ಟೇ ತನ್ನ ಭಾಷೆ ಕಲಿಸಲೂ ನೋಡಿದರೂ ಅದು ಅವನ ಭಾಷೆಯನ್ನೇ ಮಾತನಾಡತೊಡಗಿತು. ಅವಳಿಗೂ ಸಾಕಾಗಿ ಹೋಯಿತು.
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”
ಜುನಿಪರ್ ಒಬ್ಬಳೇ ಇದ್ದಳು. ಪ್ರತಿ ದಿನ ಅವಳ ಜೊತೆ ಇರುತ್ತಿದ್ದ ಗೆಳತಿ ಸೋಫಿಯಾ ಅವತ್ತು ಇರಲಿಲ್ಲ. ಅವಳು ಹಿಂದಿನ ದಿನ ತನ್ನ ಗ್ರಹಕ್ಕೆ ಮರಳಿ ಹೋಗಿದ್ದಳು. ಎಂದೂ ಇರದ ಒಂಟಿತನ ಈಗ ಅವಳನ್ನು ಕಾಡುತಿತ್ತು. ಹೀಗೇ ಮನೆಯಲ್ಲೇ ಇದ್ದರೆ ತನ್ನ ತಲೆ ಸ್ಥಿಮಿತದಲ್ಲಿ ಇರುವುದಿಲ್ಲ ಎಂದೂ ಹೆಚ್ಚು ಕಡಿಮೆಯಾದರೆ ಸರಕಾರಕ್ಕೆ ಸೂಚನೆ ಹೋಗಬಹುದು ಅಂತ ಅಂದುಕೊಂಡು ಹೊರಬಿದ್ದಳು. ತನ್ನ ಕಾರಿಗೆ ದಾರಿಯನ್ನು ಹೇಳಿ ತಾನೆರಡು ಮಾತ್ರೆಗಳನ್ನು ನುಂಗಿ ಕಣ್ಣು ಮುಚ್ಚಿದಳು. ಕಾರು ಅವಳನ್ನು ಅವಳಿಷ್ಟದ ಬಾರಿಗೆ ಕರೆದೊಯ್ಯಿತು.
ಅವಳು ಕಾರಿನಿಂದ ಇಳಿದಳು. ಕಾರು ಪಾರ್ಕಿಂಗ್ ಜಾಗಕ್ಕೆ ಹೋಯಿತು. ಅವಳು ಬಾರ್ ಒಳಗೆ ನಡೆದು ಒಂದು ಮೂಲೆಯ ಖಾಲಿ ಖುರ್ಚಿ ನೋಡಿ ಹೋಗಿ ಕುಳಿತಳು. ವೇಟರ್ ಅವಳಿಷ್ಟದ ಬಿಯರ್ ತಂದಿಟ್ಟ. ಅವಳೊಂದು ಗುಟುಕು ಕುಡಿದು ಕಣ್ಮುಚ್ಚಿದಳು. ಇದೇ ಬಾರಿನಲ್ಲಿ ಅವಳು ಸೋಫಿಯಾಳನ್ನು ಭೇಟಿಯಾಗಿದ್ದು ಎರಡು ತಿಂಗಳ ಹಿಂದೆ. ಅವಳು ಇಲ್ಲಿ ಪ್ರವಾಸಕ್ಕೆಂದು ಬಂದಿದ್ದಳು. ಇಲ್ಲೇನಿದೆ ನೋಡುವುದಕ್ಕೆ ಎಂದು ಮೊದಲ ಭೇಟಿಯಲ್ಲಿ ಕೇಳಿದಾಗ “ಜೀವ ಹುಟ್ಟಿದ್ದೇ ಇಲ್ಲೇ ಎನ್ನುತ್ತಾರೆ, ಇಲ್ಲಿ ಎಲ್ಲವೂ ಗುರುತಿಸಲಾಗದಷ್ಟು ಗಾಯಗೊಂಡಿದ್ದರೂ ಆ ನೋವಿನ ವಾಸನೆ ನನಗೆ ಸಿಗುತ್ತಿದೆ” ಎಂದಿದ್ದಳು. ಬಹಳ ಫಿಲಾಸಫಿಕಲ್ ಅವಳು ಎಂದುಕೊಂಡಳು.
ಅವಳು ಹೇಳಿದ್ದೂ ಆಗಾಗ ನಿಜ ಎನಿಸುತ್ತದೆ. ಈಗ ಮೆಷೀನುಗಳಿಗೂ ನಮಗೂ ಏನಾದರೂ ವ್ಯತ್ಯಾಸ ಎನ್ನುವುದು ಉಳಿದಿದ್ದರೆ ಅದು ಈ ನೋವು, ಈ ಗಾಯ ಮಾತ್ರ. ಅವಳಿರುವ ಗ್ರಹ ಇನ್ನೂ ಹೊಸದಂತೆ, ಅಲ್ಲಿ ಈ ತರಹದ ಮನೆಯ ಭಾವ ಇಲ್ಲ. ಅದೀಗ ಹೊಸದಾಗಿ ಪಡೆದ ಬಾಡಿಗೆ ಮನೆಯಂತೆ ಎನಿಸುತ್ತದೆ ಎಂದಿದ್ದಳು ಅವಳು. ಎಲ್ಲ ಇದ್ದರೂ ಏನೋ ಖಾಲಿತನ. ಅವತ್ತು ಜುನಿಪರ್ ಕಂಠ ಪೂರ್ತಿ ಕುಡಿದಿದ್ದಳು. ಅದೇ ನಶೆಯಲ್ಲಿ ಅವಳ ಮೇಲೆ ತಪ್ಪಿ ಬಿಯರ್ ಚೆಲ್ಲಿದ್ದಳು. ಜುನಿಪರ್ ಅವತ್ತು ತನ್ನ ಮಗನನ್ನು ಕಳೆದುಕೊಂಡಿದ್ದಳು. ತನ್ನ ನೆನಪುಗಳನೆಲ್ಲ ಹೆಕ್ಕಿ ಆಯ್ದು ಅವನನ್ನು ಸೃಷ್ಟಿಸಿದ್ದಳು. ಕಿಡಿಗೇಡಿಗಳು ಅಂತರ್ಜಾಲಕ್ಕೆ ಅಪ್ ಲೋಡ್ ಮಾಡಿದ ಮರುಕ್ಷಣವೇ ಅವನನ್ನು ಕದ್ದು ಕೊಂದಿದ್ದರು. ಬಿಯರ್ ಚೆಲ್ಲಿದ್ದೇ ನೆಪವಾಗಿ ಜುನಿಪರ್ ತನ್ನೆಲ್ಲ ನೋವನ್ನು ಸೋಫಿಯಾಳಲ್ಲಿ ತೋಡಿಕೊಂಡಿದ್ದಳು. ಸೋಪಿಯಾ ಏನು ಹೇಳಬೇಕೆಂದು ತಿಳಿಯದೇ ಅವಳನ್ನು ಸಮಾಧಾನ ಮಾಡಿದ್ದಳು.
ಮುಂದಿನ ಕೆಲ ದಿನಗಳಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಬೆರ್ಪಡಿಸಲಾಗದಷ್ಟು ಹತ್ತಿರವಾದರು. ಜುನಿಪರ್ ಅವಳು ನೋಡಬೇಕೆಂದದ್ದನೆಲ್ಲಾ ತೋರಿಸಿದಳು. ಸಾವಿರ ವರ್ಷಗಳ ಹಿಂದೆ ಹೂಳಿದ ತನ್ನ ಜೀವಂತ ಮಗನ ಸಮಾಧಿಯೊಂದನ್ನು ಬಿಟ್ಟು. ಅದು ಅವಳ ಕಣ್ಣಲ್ಲೇ ಇತ್ತು. ಸೋಫಿಯಾ ಅದನ್ನು ಆಗಾಗ ನೋಡುತ್ತಿದ್ದಳು. ಅದನ್ನು ಕೇಳಿ ನೋಡುವ ಅಗತ್ಯ ಅವಳಿಗೆ ಇರಲಿಲ್ಲ. ಸೋಫಿಯಾ ಹೋಗುವಾಗ ಜುನಿಪರ್‌ಗೆ ಮತ್ತೊಮ್ಮೆ ಬಂದಾಗ ಇಬ್ಬರ ನೆನಪುಗಳನ್ನು ಹೆಕ್ಕಿ ತಯಾರಿಸಿದ ಮಗನನ್ನು ನಿನಗೆ ತಂದು ಕೊಡುವುದಾಗಿ ಹೇಳಿ ಹೋಗಿದ್ದಳು. ಇಬ್ಬರ ನೆನಪುಗಳನ್ನು ಬೆರೆಸಿ ತಯಾರಿಸಿದ ಮಗು ಎಷ್ಟು ಚೆನ್ನಾಗಿ ಇರಬಹುದು ಎಂದು ಜುನಿಪರ್ ಕನಸು ಕಾಣತೊಡಗಿದ್ದಳು.
“ಓನ್ಯಾಸಿ” ಎಂದು ಯಾರೋ ಅಂದಾಗ ಯೋಚನೆಗಳ ಲೋಕದಲ್ಲಿ ಬಿದ್ದ ಜುನಿಪರ್ ಎಚ್ಚರಗೊಂಡಳು. ಅವಳ ಮುಂದೆ ಒಬ್ಬ ಸುಂದರ ವ್ಯಕ್ತಿ ನಿಂತಿದ್ದ. ಇವಳು ಮುಗಳುನಕ್ಕು “ಹಾಯ್” ಎಂದಳು. ಅವನು “ಒಬ್ಬರೇ ಕೂತಿದ್ದು ನೋಡಿದೆ. ನಿಮ್ಮ ಜೊತೆ ಸ್ವಲ್ಪ ಕೂರಬಹುದಾ” ಎಂದ. ಎಷ್ಟೋ ವರ್ಷಗಳ ನಂತರ ಒಬ್ಬ ಪುರುಷ ಅವಳನ್ನು ಮಾತನಾಡಿಸಿದ್ದ. ಪುರುಷರಿಗೆ ಈಗ ಹೆಣ್ಣಿನ ಅವಶ್ಯಕತೆ ಇರಲಿಲ್ಲ. ಎಲ್ಲವೂ ಮೇಷಿನುಗಳ ಜೊತೆಯೇ ನಡೆಯುತ್ತಿತ್ತು. ಕೊನೆಗೂ ಅವರು ಮಕ್ಕಳನ್ನು ಬೆಳೆಸುವ, ಕುಟುಂಬವನ್ನು ಸಾಕುವ ಜವಾಬ್ದಾರಿಯಿಂದ ಮುಕ್ತಗೊಂಡಿದ್ದರು. ಇದೇ ಕಾರಣಕ್ಕೆ ಈ ಸನ್ನಿವೇಶ ಅವಳಿಗೆ ವಿಶೇಷ ಎನಿಸಿತ್ತು. “ಯೆಸ್ ಅಫ್ ಕೋರ್ಸ್” ಎಂದು ಅವನಿಗೆ ಕೂರಲು ಸನ್ನೆ ಮಾಡಿದಳು.
ಇಬ್ಬರ ನಡುವೆ ಒಂದು ವಿಚಿತ್ರ ಮೌನ ಆವರಿಸಿತು. “ನಾನು ಒಂದು ಅಸಲಿ ಹೆಣ್ಣಿನ ಜೊತೆ ಮಾತನಾಡಿ ಬಹಳ ವರ್ಷವಾಯಿತು. ಹೇಗೆ ಮಾತನಾಡಬೇಕು ಅಂತ ಗೊತ್ತಿಲ್ಲ. ಏನಾದರೂ ತಪ್ಪಾದರೆ ಕ್ಷಮಿಸಿ” ಎಂದ.
“ನಿಮಗೆ ಅದರ ಅಗತ್ಯವೇ ಇಲ್ಲವಲ್ಲ. ಆದರೂ ನಿಮ್ಮ ರೋಬೋಟ್‌ಗಳ ಜೊತೆ ಮಾತನಾಡಿ ಅಭ್ಯಾಸವಿರುತ್ತದಲ್ಲ. ಸಾರಿ ನಿಮ್ಮ ಸಂಗಾತಿಯ ಜೊತೆಗೆ” ಎಂದಳು.
“ಇಟ್ಸ್ ಓಕೆ. ಈ ಸಂಗಾತಿಗಳು ಬರೀ ಗಂಡಸಿನ ಮಾತು ಕೇಳಿ ಕೇಳಿ ಅವುಗಳಿಗೂ ಹೆಣ್ಣಿನ ನಿಜವಾದ ವರ್ತನೆ ಮರೆತು ಹೋಗಿದೆ ಎನಿಸುತ್ತೆ. ಈಗಿನ ಸಂಗಾತಿಗಳೆಲ್ಲ ಒಂದೇ ರೀತಿ ಎನಿಸುತ್ತವೆ”.
“ಓಹ್.. ಸಾರಿ ಟು ಹಿಯರ್… ಹಾಗಾದರೆ ಗಂಡಸರಿಗೆ ಈಗ ನಿಜವಾದ ಹೆಂಗಸರು ಬೇಕಾ?”
“ಗೊತ್ತಿಲ್ಲ. ಬಹುಶಃ ನಮಗೆ ಸಂಗಾತಿಗಳೇ ಸಾಕು ಎನಿಸುತ್ತೆ. ಆದರೂ ಕೆಲವೊಮ್ಮೆ ನಮ್ಮನ್ನು ಅಪ್ಪಿ ಮುದ್ದು ಮಾಡುವವರು, ನಮ್ಮ ಜೊತೆ ಜಗಳ ಕಾಯುವವರು ಬೇಕು ಎನಿಸುತ್ತೆ. ಒಂಥರ ಗೊಂದಲಮಯವಾಗಿದೆ ಇದು”
“ನಾವು ಹೇಳಿದ ಹಾಗೆ ಕೇಳಲ್ಲ, ನಿಮಗೆ ಬೇಕಾದ ಸುಖ ಕೊಡಲ್ಲ, ನಾವು ನಿಮಗೆ ಸಲೀಸಾಗಿ ಸಿಗಲ್ಲ ಅಂತಾನೇ ನೀವು ಸಂಗಾತಿಗಳನ್ನ ಸೃಷ್ಟಿಸಿ ನಮ್ಮನ್ನೆ ಧಿಕ್ಕರಿಸಿದರಲ್ಲ?”
“ಅದೂ ನಿಜವೇ. ಲುಕ್ಸ್ ಲೈಕ್ ವಿ ಆರ್ ಕವರ್ಡ್ಸ” ಎಂದು ವಿಷಾದದ ನಗೆ ನಕ್ಕ.
“ಐ ಬೆಟ್” ಎಂದು ಅವಳೂ ನಕ್ಕಳು. ಇಬ್ಬರೂ ಸೇರಿ ಮೈ ಮರೆಯುವಂತೆ ಕುಡಿದರು. ಏನೇನೋ ಮಾತನಾಡಿದರು. ಬಾರಿನಲ್ಲಿದ್ದ ಜನ ಅವನು ಸಂಗಾತಿಯ ಜೊತೆಯೇ ಮಾತನಾಡುತ್ತಿದ್ದಾನೆ ಎಂದುಕೊಂಡರು. ಎಂತಹ ವಿಪರ್ಯಾಸ ಅಲ್ಲವಾ?
ಇಬ್ಬರೂ ಬಾರಿನಿಂದ ಹೊರಬಿದ್ದಾಗ ಸೂರ್ಯ 347 ಮೇಲೆ ಬಂದಿದ್ದ. ಇಬ್ಬರೂ ಅವಳ ಕಾರಿನಲ್ಲಿ ಹೊರಟರು.
“ಬೈ ದ ವೇ ನನ್ನ ಹೆಸರು ರಾಜೀವ 747” ಎಂದ.
ಜುನಿಪರ್ ಅವಳು ನೋಡಬೇಕೆಂದದ್ದನೆಲ್ಲಾ ತೋರಿಸಿದಳು. ಸಾವಿರ ವರ್ಷಗಳ ಹಿಂದೆ ಹೂಳಿದ ತನ್ನ ಜೀವಂತ ಮಗನ ಸಮಾಧಿಯೊಂದನ್ನು ಬಿಟ್ಟು. ಅದು ಅವಳ ಕಣ್ಣಲ್ಲೇ ಇತ್ತು. ಸೋಫಿಯಾ ಅದನ್ನು ಆಗಾಗ ನೋಡುತ್ತಿದ್ದಳು. ಅದನ್ನು ಕೇಳಿ ನೋಡುವ ಅಗತ್ಯ ಅವಳಿಗೆ ಇರಲಿಲ್ಲ. ಸೋಫಿಯಾ ಹೋಗುವಾಗ ಜುನಿಪರ್‌ಗೆ ಮತ್ತೊಮ್ಮೆ ಬಂದಾಗ ಇಬ್ಬರ ನೆನಪುಗಳನ್ನು ಹೆಕ್ಕಿ ತಯಾರಿಸಿದ ಮಗನನ್ನು ನಿನಗೆ ತಂದು ಕೊಡುವುದಾಗಿ ಹೇಳಿ ಹೋಗಿದ್ದಳು.
“ಓಹ್…. ಜುನಿಪರ್” ಎಂದು ಕೈ ಕುಲಿಕಿ ಮುತ್ತನಿಟ್ಟನಿಟ್ಟಳು. ಮೆದುಳಿನ ಯಾವುದೋ ಮೂಲೆಯಲ್ಲಿ ಸಾವಿರಾರು ವರ್ಷಗಳಿಂದ ಅವಿತು ಕೂತಿದ್ದ ಆಸೆಯೊಂದು ಬುಗಿಲೆದ್ದಿತು. ಇಬ್ಬರ ದೇಹಗಳೂ ಒಂದಾದವು. ಇಬ್ಬರಿಗೂ ತಮ್ಮ ದೇಹಗಳು ನಿರ್ವಾತದಲ್ಲಿ ತೇಲಿದಂತೆ ಭಾಸವಾಯಿತು. ಕಣ್ಣಿನ ಮುಂದೆ ವಿಧ ವಿಧ ಬಣ್ಣಗಳು ತುಂಬಿಕೊಂಡವು. ಮಿಲನ ಮುಗಿದಾಗ ನಿರ್ವಾತದಿಂದ ದೇಹಗಳು ದೊಪ್ಪನೆ ಕಾರಿನ ಸೀಟಿಗೆ ಬಿದ್ದಂತೆ ಭಾಸವಾಯಿತು. ಅವತ್ತು ಅವನು ಅವಳ ಮನೆಯಲ್ಲೇ ಇದ್ದು ಅವಳು ಏಳುವ ಮುಂಚೆ ಹೊರಟು ಹೋದ. ಎಲ್ಲಾ ಗಂಡು ಜಾತಿಯಂತೆ.
ಅವನು ಅವಳ ಜೀವನದಲ್ಲಿ ಬಂದು ಹೋದ ಕೆಲ ತಿಂಗಳುಗಳ ನಂತರ ಅವಳಲ್ಲಿ ಬದಲಾವಣೆಗಳು ಶುರುವಾದವು. ಪರಿಶೀಲಿಸಿದಾಗ ಗರ್ಭಿಣಿ ಅಂತ ಗೊತ್ತಾಯಿತು. ಒಂದು ರುಂಡ, ಮುಂಡ ಮತ್ತು ದೇಹವಿರುವ ಜೀವ ತನ್ನಲ್ಲಿ ಬೆಳೆಯುತ್ತಿದೆ ಎಂದು ಅರಿವಾಗಿ ಅವಳಿಗೆ ಇನ್ನಿಲ್ಲದ ಖುಷಿಯಾಯಿತು. ಎಲ್ಲಾ ಕಾಲದ ತಾಯಿಗಳಿಗೆ ಇದೇ ಖುಷಿಯ ವಿಚಾರ ಎನಿಸುತ್ತೆ. ಸೋಫಿಯಾಗೆ ಹೇಳಿದಳು. ಅವಳೂ ಖುಷಿಪಟ್ಟಳು ಆದರೆ ಅವಳು ಆಗಲೇ ತಯಾರಿಸಿದ್ದ ಮಗುವಿನ ಬಗ್ಗೆ ಹೇಳಲಿಲ್ಲ. ಒಂಬತ್ತು ತಿಂಗಳಿಗೆ ಹೆರಿಗೆಯಾಯಿತು. ಗಂಡು ಮಗು. ಖುಷಿ ಹಂಚಿಕೊಳ್ಳಲು ಅವನನ್ನು ಹುಡುಕಿದಳು. ಅದೇ ಬಾರಿಗೆ ಸಾವಿರ ಸಲ ಹೋದರೂ ಅವನು ಸಿಗಲಿಲ್ಲ. ಗಂಡು ಜಾತಿ ನಮ್ಮನ್ನು ಧಿಕ್ಕರಿಸಿದ್ದು ಒಳ್ಳೆಯದೇ ಆಗಿತ್ತು ಎಂದುಕೊಂಡಳು. ಮಗು ಅವಳನ್ನೇ ಹೋಲುತ್ತಿತ್ತು.
ಮಗುವಿಗೆ ಒಂದು ವರ್ಷ ತುಂಬಿದಾಗ ಮಾತನಾಡಲು ಶುರುಮಾಡಿತು. ಅವಳು ತನ್ನ ಮಗು ಅಮ್ಮ ಎನ್ನಲಿ ಎಂದು ಕಾಯುತ್ತಿದ್ದಳು. ಆದರೆ ಅದು “ಓನ್ಯಾಸಿ” ಎನ್ನತೊಡಗಿತು. ಇದ್ಯಾವ ಶಬ್ದ, ಭಾಷೆ ಎಂದು ಅವಳಿಗೆ ತಕ್ಷಣ ಹೊಳೆಯಲಿಲ್ಲ. ತನ್ನ ನೆನಪುಗಳನ್ನು ಹರವಿ ಪರಿಶೀಲಿಸಿದಾಗ ಅದು ರಾಜೀವ್ 747 ಅವಳಿಗೆ ಹೇಳಿದ ಮೊದಲ ಪದವಾಗಿತ್ತು. ನಾನೇ ಹೆತ್ತು ಹೊತ್ತು ಸಾಕಿದರೂ ಅವನ ಭಾಷೆ ಮಾತನಾಡುತ್ತಿದೆಯಲ್ಲ ಎಂದು ಅವಳಿಗೆ ದುಃಖವಾಯಿತು, ಸಿಟ್ಟೂ ಬಂತು. ಅವಳು ಎಷ್ಟೇ ತನ್ನ ಭಾಷೆ ಕಲಿಸಲೂ ನೋಡಿದರೂ ಅದು ಅವನ ಭಾಷೆಯನ್ನೇ ಮಾತನಾಡತೊಡಗಿತು. ಅವಳಿಗೂ ಸಾಕಾಗಿ ಹೋಯಿತು.
ವರ್ಷಗಳ ಕಾಲ ಪಟ್ಟ ಖುಷಿಯೆಲ್ಲ ಮಣ್ಣು ಪಾಲಾಗಿತ್ತು. ಮತ್ತೆ ಈ ಗಂಡಸಿನ ಕಾಲು ಹಿಡಿಯುವ ಸ್ಥಿತಿ ಬಂದಿತ್ತು. ಮಗನನ್ನು ಹಿಡಿದುಕೊಂಡು ಅವನಿಗಾಗಿ ಜಗತ್ತಿನ ಮೂಲೆ ಮೂಲೆಯನ್ನು ಹುಡುಕಿದಳು. ಒಂದು ದಿನ ಅದೇ ಬಾರಿನಲ್ಲಿ ಅವನು ಸಿಕ್ಕ.
“ಹಾಯ್ ಜುನಿಪರ್” ಎಂದ
“ಓನ್ಯಾಸಿ, ಅಂದ್ರೇನು” ಎಂದು ಕೇಳಿದಳು ನೇರವಾಗಿ
“ಅದು ನಮ್ಮ ಗ್ರಹದ ಭಾಷೆ”
“ನನ್ನ ಮಗ ಅದನ್ನೇ ಮಾತಾಡ್ತಿದಾನೆ, ನಾನೂ ನೀನೂ ಕೂಡಿದ್ದು ನೆನಪಿದೆ ಅನ್ಕೊತಿನಿ”
“ಓಹ್… ಸಾರಿ.. ನೀನು ಅದನ್ನ ಸರ್ಕಾರಕ್ಕೆ ಕೊಡ್ತಿಯಾ ಅನ್ಕೊಂಡಿದ್ದೆ. ಈಗ ನನ್ನ ಮೇಲೆ ಏನೂ ಜವಾಬ್ದಾರಿ ಹಾಕಬೇಡ”
“ಜವಾಬ್ದಾರಿ ಹಾಕಬೇಡ ಎಂದರೆ ಹೇಗೆ? ನೀನು ನನಗೆ ನಿನ್ನ ಭಾಷೆ ಕಲಿಸಲೇಬೇಕು”
“ಅದು ನನ್ನ ಕಡೆಯಿಂದ ಆಗಲ್ಲ, ಇದೇ ಕಾರಣಕ್ಕೆ ನಾವು ನಿಮ್ಮನ್ನು ಧಿಕ್ಕರಿಸಿದ್ದು, ಇಲ್ಲದ ರಗಳೆಗಳನ್ನು ತಂದು ನಮ್ಮ ಮೇಲೆ ಹಾಕುತ್ತೀರಿ”
“ನಿಮ್ಮಂತಹ ಹೇಡಿಗಳಿಗೆ ಅದನ್ನು ಬಿಟ್ಟು ಬೇರೆ ದಾರಿಯೇನಿದೆ”
ಅವನು ರಪ್ಪನೆ ಕಪಾಳಕ್ಕೆ ಹೊಡೆದ. ಸಾವಿರ ವರ್ಷಗಳ ಕಾಲ ಬೆಳೆದು ನಿಂತ ನಾಗರೀಕತೆಯೊಂದು ದೊಪ್ಪನೆ ಕಾಲು ಮುರಿದುಕೊಂಡು ಬಿದ್ದಂತಾಯಿತು. ಅವಳು ಅಳುತ್ತ ಮಗನನ್ನು ಕರೆದುಕೊಂಡು ಮನೆಗೆ ಬಂದಳು. ಅವನು ಕುಡಿಯುತ್ತ ಅಲ್ಲೇ ಕುಳಿತ. ಈಗಲೂ ಬಾರಿನಲ್ಲಿದ್ದ ಜನ ಅವನು ಸಂಗಾತಿಯನ್ನೇ ಹೊಡೆದ ಎಂದು ಸುಮ್ಮನಾದರು.
ಮುಂದಿನ ಹಲವು ವರ್ಷಗಳವರೆಗೆ ಜುನಿಪರ್ “ಓನ್ಯಾಸಿ” ಪದದ ಮೇಲೆಯೇ ತನ್ನ ಮಗುವಿನ ಜಗತ್ತನ್ನು ಕಟ್ಟಿದಳು. ಅಳು, ನಗು, ಎಲ್ಲಕ್ಕೂ ಅದೊಂದೇ ಪದವಾಗಿತ್ತು. ಸೋಫಿಯಾಳಿಗೆ ಆಗಾಗ ಕರೆ ಮಾಡಿ ಆ ಪದದ ಅರ್ಥ ಸಿಕ್ಕರೆ ನೋಡೆಂದು ಕೇಳುತ್ತಿದ್ದಳು. ಒಂದು ದಿನ ಸೋಫಿಯಾಳಿಗೆ ಆ ಪದದ ಅರ್ಥ ಸಿಕ್ಕಾಗ ಅದನ್ನು ಜುನಿಪರ್‌ಗೆ ಹೇಳಲು ಹಲವು ದಿನಗಳು ಬೇಕಾದವು. ಕೊನೆಗೂ ಧೈರ್ಯ ಮಾಡಿ ಒಂದು ದಿನ ಹೇಳಿದಳು. ಅದನ್ನು ಕೇಳಿ ಜುನಿಪರ್ ಇಡೀ ದಿನ ಕೊಣೆಯ ಕದ ಹಾಕಿಕೊಂಡು ಅತ್ತಳು. ಓನ್ಯಾಸಿ ಎಂದರೆ ಅವನ ಭಾಷೆಯಲ್ಲಿ “ಏ ಗುಲಾಮಿ ಕುಲದವಳೇ” ಎಂಬ ಅರ್ಥವಂತೆ. ಕೊನೆಗೆ ಸಮಾಧಾನ ಮಾಡಿಕೊಂಡು ಕಣ್ಣೀರು ಒರೆಸಿಕೊಳ್ಳುತ್ತ ಹೊರಗೆ ಬಂದಾಗ ಮಗು “ಓನ್ಯಾಸಿ” ಎನ್ನುತ್ತ ಓಡಿ ಬಂದು ಅವಳನ್ನು ಅಪ್ಪಿಕೊಂಡಿತು.
ನೇತ್ಯಾತ್ಮಕ ನಿರೂಪಣಾ ಶೈಲಿ ಚೆನ್ನಾಗಿ ಮೂಡಿ ಬಂದಿದೆ ಇವರೆ.
ವಾಹ್ ಕಥೆ .. ಕಥೆ ಕಟ್ಟುವ ರೀತಿ…. ಕಥೆಯ ವಿಷಯ … ಎಲ್ಲವೂ ಚೆನ್ನಾಗಿದೆ. ನಾವು ಚಿಕ್ಕವರಿದ್ದಾಗ ಮಯೂರ ಮ್ಯಾಗಝೀನ್ನಲ್ಲಿ ಬರ್ತ್ತಿದ್ದ ವೈಜ್ಞಾನಿಕ ಕಥೆಗಳನ್ನು ಕುತೂಹಲದಿಂದ ಓದುತ್ತಿದ್ದ ಅನುಭವವನ್ನೇ ನೆನಪಿಸಿತು.