Advertisement
ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

ಮೂಕ ಗರ್ಭದೊಳು

ನನ್ನನ್ನೇ ಮರೆತು ಬಿಡುವ ಚಣ ದಕ್ಕಿದಾಗಲೇ
ಕೊಂಚ ನಿರಾಳವೆನಿಸಿತು
ದುಃಖ ದುಗುಡವ ಹಂಚಿಕೊಳ್ಳಲು
ನಾಲಿಗೆ ತಡವರಿಸಿತು
ಮಾತುಗಳು ಇನ್ನಿಲ್ಲವಾದಂತೆ
ಭಾಸವಾಯಿತು
ನನ್ನವರೆನ್ನುವವರ ಎದೆ ಎದೆ ಬಡಿದುಕೊಳ್ಳುವ ಪರಿ
ಅತ್ತು ಕರೆದಾಗಲೇ
ನನ್ನ ವಿಳಾಸವೂ ದೊರಕಿತು

ಇನ್ನಿಲ್ಲದಂತೆ ಕಾಡುವ ಇರುಳುಗಳು
ಹತಾರಗಳ ಹೊತ್ತು ಬಂದವು
ಕುತ್ತಿಗೆ ಕೊಯ್ಯುವ ನಿದರ್ಶನಗಳ ಧರಿಸಿ

ಮಾಗಿಹ ಗಾಯಗಳಿಗೆ
ಮದ್ದು ಅರಿಯಲಾರಂಭಿಸಿದವು
ಕುರುಡು ಹಗಲುಗಳು

ಮೂರ್ಚೆಹೋದಾಗಲೇ
ಕಾಲಚಕ್ರ
ಪ್ರೇಮ ಅಂಕುರಿಸಿತು
ಮೂಕ ಗರ್ಭದಲ್ಲೇ
ರೂಪ ಅರೂಪವಾಗಿ
ಬಿಂದು ನಾದವಾಗಿ
ಕಾಡಹತ್ತಿತು

ಕೈಹಿಡಿದು ನಡೆಸಿದವರು
ಬೀದಿಗೆ ಬಿಸಾಕಿದರು
ಮುಖದ ಬೆವರು
ಬೇರೊಂದು ಲೋಕವ ಹಿಡಿದಿಟ್ಟಿತು
ಮಸುಕು ಮಸುಕಾದ ನೋಟ
ಕಡು ಕತ್ತಲೆಯ ನೆಕ್ಕಿತು

ಕಾಲನ ಸುತ್ತಿಗೆ ಒಡೆತಕೆ
ಕಂಪಿಸಿದವು
ನೆರಳುಗಳು
ಅಳತೆಗೋಲುಗಳ ಭರಾಟೆಯಲ್ಲೂ

ಇಲ್ಲಿ
ಈ ಕ್ಷಣದಲ್ಲಿ
ಯಾವ ಓಲೆಗಳೂ
ಶೂನ್ಯವ ಹೊತ್ತು ಸಾಗುವುದಿಲ್ಲ
ಉಮ್ಮಳಿಸುವ ಪದಗಳ ಭಾರದಲ್ಲಿ
ದಣಿಯುತ್ತವೆ
ದಣಿಸುತ್ತವೆ
ಇನ್ನಿಲ್ಲವಾಗುವ ನನ್ನ ಗುರುತುಗಳ ಅಳಿಸುತ್ತ

ಬೆನ್ನಿಗಂಟಿರುವ ತಂಗಾಳಿಯ ರೆಕ್ಕೆಗಳು ಪಡಪಡಿಸುವಾಗ
ಗೋರಿಗಳ ಗಾಯಗಳು ಉಲ್ಬಣಿಸುವ
ಈ ಹೊತ್ತಿನಲ್ಲಿ
ಬೆಂಕಿಯಲ್ಲಿ ಅದ್ದಿದ ನನ್ನದೇ ಮುಖ
ಇನ್ನಿಲ್ಲದಂತೆ ಕಾಡುತ್ತದೆ
ಪರಿಚಯವ ಹೊತ್ತು ಬರುವ
ಅಬ್ಬೇಪಾರಿ ಬದುಕಿನಂತೆ

ಈ ಹಾಳು ಕಣ್ಣಿನಲ್ಲಿ
ಸುಳಿದು ಹೋಗುವ ಅರೆ ಕ್ಷಣದ
ಈ ಸಾವು
ಜ್ವಾಲಾಮುಖಿಯ ಹಡೆಯುತ್ತದೆ
ಚಿಳ್ಳೆಪಿಳ್ಳೆಗಳ ಹುರಿದು ಮುಕ್ಕಲು
ಹವಣಿಸುತ್ತದೆ
ತನ್ನದೇ ಆರದ ಜ್ವಾಲೆಗಳ ಹೊತ್ತು
ಅಪರಿಚಿತತೆಯನ್ನ ಮುಕ್ಕಳಿಸುತ್ತ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ