ಯಾವ ಹೊಳೆಯನ್ನು ದಾಟಬಹುದು

ಅಲೆಯುತ್ತಿದೆ ಗುರುತಿಲ್ಲದ ಪತ್ರ
ಯಾವ ಬಾಗಿಲನ್ನು ತಟ್ಟುತ್ತದೆಯೊ
ಯಾವ ಇರುಳನ್ನು ತಾಕುತ್ತದೆಯೊ

ಅಲೆಯುತ್ತಿದೆ ಗುರುತಿಲ್ಲದ ಪತ್ರ
ಕೊಲ್ಲುತ್ತಿದೆ ತನ್ನನ್ನೆ ಸುಳಿವಿಲ್ಲದೇ
ಅಪಹಾಸ್ಯದ ತಕ್ಕಡಿಯಲಿ ಮಿಂದು
ಮತ್ತೆಲ್ಲೊ ಉದುರುತ್ತದೆ
ಕಾಲ್ಚೆಂಡಾಗುತ್ತದೆ
ಡಸ್ಟಬಿನ್ನಿನ ಕೂಸಾಗುತ್ತದೆ
ಕೂಗಿಗೊ ಕೈಗೂಸಾಗುತ್ತದೆ

ಅಲೆಯುತ್ತಿದೆ ಗುರುತಿಲ್ಲದ ಪತ್ರ
ಹುಟ್ಟಿಗೊ ಹೊಟ್ಟು ಸುರುವಿ
ಬದುಕಿಗೊ ಕತ್ತರಿಯಾಡಿಸಿ
ಸುತ್ತ ಸುತ್ತುವ ಒಣಡಬರಿಯ ಮಾತು
ಹುಚ್ಚಾಗಿಸುತ್ತದೆ

ಅಲೆಯುತ್ತಿದೆ ಗುರುತಿಲ್ಲದ ಪತ್ರ
ಯಾವ ಓಣಿಯೂ
ಯಾವ ಪೇಟೆಯೂ
ಯಾವ ಊರೂ
ಅರ್ಥವಿಲ್ಲದ ಪತ್ರದ ಸಾರಕ್ಕಾಗಿ ಗೊಣಗಾಟವಿಲ್ಲ
ಕೂಗಾಟವಿಲ್ಲ

ಅಲೆಯುತ್ತಿದೆ ಗುರುತಿಲ್ಲದ ಪತ್ರ
ನೇತ್ರದ ನೆತ್ತರಲಿ ಅರಳುತ್ತಿವೆ ಅಕ್ಷರಗಳು
ಉಸಿರು ಅರಹುತ್ತಿದೆ ಬಟ್ಟೆಯ ಸತ್ವವ
ಸಾಂತ್ವನದ ಬೆಟ್ಟ ಬಯಲ ಕಿರುಬೆರಳ ಸಂಜ್ಞೆಯಲಿ

ಅಲೆಯುತ್ತಿದೆ ಗುರುತಿಲ್ಲದ ಪತ್ರ
ಯಾವ ನೀರವ ನಟ್ಟಿರುಳು ಎಚ್ಚರಿಸಿರಬಹುದು
ಯಾವ ಸಂಚು ನೆರಳ ಓಟವನ್ನೆ ನುಂಗಬಹುದು

ಅಲೆಯುತ್ತಿದೆ ಗುರುತಿಲ್ಲದ ಪತ್ರ
ಯಾವ ಹೊಳೆಯನ್ನು ದಾಟಬಹುದು
ಅಲೆಯ ಅನುಮತಿಗಾಗಿ ಅಂಗಲಾಚಿ
ಮುಳ್ಳಿನ ಬೇಲಿಗೊ ನೆತ್ತರ ಹಪಾಹಪಿ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು