ಯುದ್ಧವಿಲ್ಲದ ನೆಲಕ್ಕಾಗಿ

ಮುದುಡಿ ಮುದ್ದೆಯಾಗಿದೆ
ದೀಪಾವಳಿಯ ಆಕಾಶಬುಟ್ಟಿ
ಮಣ್ಣಿನಲ್ಲಿ ಹೂತು ಹೋದ
ಮುರಿದ ನಿರುಮ್ಮಳ ಬಾಗಿಲೆದುರು

ಅಸ್ತವ್ಯಸ್ತ ಹಸಿರೆಲೆಗಳು
ಸುಟ್ಟ ಕರಕಲು ಪಾದಗಳು
ರಕ್ತಸಿಕ್ತ ನಕ್ಷತ್ರಗಳು
ಸ್ವಾಗತಿಸುತ್ತಿವೆ
ನೀರವ ಇರುಳ ದೀಪಗಳನ್ನ

ಬಟ್ಟಲುಗಣ್ಣಿಗೊ
ದೀಪಗಳನ್ನ ಚುಂಬಿಸುವ ಉಮೇದು
ಬತ್ತಿಯ ಸೊಡರ ತಾಕುವ ತವಕ

ಕಡು ಕತ್ತಲ ಗೂಡಿನಲ್ಲಿ
ಬೆಳಕನ್ನೇ
ಧ್ಯಾನಿಸುವ ಹೊತ್ತಿಗೆ
ನೆತ್ತಿಯಲಿ
ನೋವಿನ ಬೇರುಗಳೇ
ಚಿಗುರುತ್ತಿರುವಾಗ

ಆಕಾಶಬುಟ್ಟಿ
ತಲೆಯೆತ್ತಿ ನಿಲ್ಲಲೆಂದು
ದೀಪಗಳು ಉಸಿರಾಡಲೆಂದು
ಯುದ್ಧವಿಲ್ಲದ ನೆಲಕ್ಕಾಗಿ
ಕಿರುಬೆರಳಾದರೂ
ಟೊಂಕ ಕಟ್ಟಿ ನಿಲ್ಲಬೇಕಿತ್ತು

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು