ಆರ್ಟ್ಸ್ ಗೇಮ್‌ಗಳು ಗೇಮಿಂಗ್ ಪ್ರಕಾರಗಳಲ್ಲಿ ವಿಶಿಷ್ಟವಾದವು. ಆಟದ ವಿಶಿಷ್ಟತೆ ಇಲ್ಲಿ ಮುಖ್ಯವಾಗುವುದಿಲ್ಲ. ಕಲೆಯೇ ಪ್ರಮುಖ. ನೋಡುವುದಕ್ಕೆ ಆಕರ್ಷಕವಾಗಿರುವ, ಬಹಳ ಕ್ರಿಯೇಟಿವ್ ಆಗಿರುವ ಗೇಮ್‌ಗಳಿವು. ವಿಡಿಯೋ ಗೇಮ್ಸ್ ಮೂಲಕ ನಮ್ಮ ಆಸಕ್ತಿಯ ಕೆಲವು ವಿಷಯಗಳನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯವಿದೆ. ಇವುಗಳು ಶೈಕ್ಷಣಿಕ ಗೇಮ್‌ಗಳು. ಭಾಷೆ, ಗಣಿತ, ಟೈಪಿಂಗ್ ಕುರಿತಾದ ಸರಳ ಗೇಮ್‌ಗಳು ಇದಕ್ಕೆ ಉದಾಹರಣೆಗಳು. ವ್ಯಾಯಾಮದಂತಹ ಚಟುವಟಿಕೆ ಮಾಡಲು ಅವಕಾಶ ಮಾಡಿಕೊಡುವ ಗೇಮ್‌ಗಳನ್ನು ಎಕ್ಸರ್ ಗೇಮ್ ಎನ್ನಲಾಗುತ್ತದೆ. ವೈ ಫಿಟ್ ಗೇಮ್ ಈ ಮಾದರಿಯ ಗೇಮ್ ಆಗಿದೆ.
ಮೊದಲ ವಿಡಿಯೋ ಗೇಮ್‌ನಿಂದ ಇಲ್ಲಿಯವರೆಗೂ ಅದು ದೈತ್ಯ ಉದ್ಯಮವಾಗಿ ಬೆಳೆದುಬಂದ ದಾರಿಯ ಕುರಿತು ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಇದು ವಿಡಿಯೋ ಗೇಮ್ ಪುರಾಣ
ಆಟಗಳನ್ನು ಆಡುವುದು ಮನುಷ್ಯರ ಸಹಜ ಗುಣ. ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕವಾದ ಆಟಗಳನ್ನು ಆಡಲಾಗುತ್ತಿತ್ತು. ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವ ಈ ಕಾಲದಲ್ಲಿ ವಿಡಿಯೋ ಗೇಮ್‌ಗಳ ಮೂಲಕ ಅದು ಸಾಧ್ಯವಾಗುತ್ತಿದೆ. ಅದೆಷ್ಟೋ ವಿಡಿಯೋ ಗೇಮ್‌ಗಳು ನಮ್ಮ ಮೊಬೈಲಿನಲ್ಲಿ, ಕಂಪ್ಯೂಟರ್‌ನಲ್ಲಿ ಸೇವ್ ಆಗಿರುತ್ತವೆ. ಕೆಲಸ ಬೋರ್ ಎನಿಸಿದಾಗ, ಓದಿ ಓದಿ ಸುಸ್ತಾದಾಗ ವಿಡಿಯೋ ಗೇಮ್‌ಗಳ ಮೊರೆ ಹೋಗುತ್ತೇವೆ. ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ವಿಡಿಯೋ ಗೇಮ್‌ಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಾದ್ದು ಸಾಕಷ್ಟಿದೆ.
ಮನಸ್ಸಿಗೆ ಖುಷಿ ಕೊಡುವ ಕಾರಣಕ್ಕಾಗಿ ವಿಡಿಯೋ ಗೇಮ್‌ಗಳು ತಯಾರಾಗಿವೆ. ಹೊಸದನ್ನು ಸೃಷ್ಟಿಸಬೇಕೆಂಬ ಮನುಷ್ಯರ ಮನಸ್ಸು ವಿಡಿಯೋ ಗೇಮ್‌ಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿದೆ. ವಿಡಿಯೋ ಗೇಮ್‌ಗಳನ್ನು ಆಡುವುದಕ್ಕೆ ಸಹಾಯ ಮಾಡುವ ಉಪಕರಣಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಆರಂಭದಲ್ಲಿ ಟಿ.ವಿ.ಯನ್ನು ಬಳಸಿಕೊಂಡು ವಿಡಿಯೋ ಗೇಮ್ ಆಡಲಾಗುತ್ತಿತ್ತು. ಅದಾದ ಮೇಲೆ ವಿಡಿಯೋ ಗೇಮ್ ಯಂತ್ರಗಳು ಬಂದವು. ಬಳಿಕ ಕಂಪ್ಯೂಟರ್‌ಗಳ ಮೂಲಕ ಇದು ಸಾಧ್ಯವಾಯಿತು. ಪರ್ಸನಲ್ ಕಂಪ್ಯೂಟರ್‌ಗಳಲ್ಲಿನ ವಿಡಿಯೋ ಗೇಮ್‌ಗಳು ಜನರಿಗೆ ಖುಷಿ ಕೊಡಲಾರಂಭಿಸಿದವು. ಹೋಮ್ ಕನ್ಸೋಲ್‌ಗಳ ಬಳಕೆಯಿಂದ ಆಟದ ವಿಧಾನ ಬದಲಾಯಿತು. ಹೋಮ್ ಕನ್ಸೋಲ್ ಎನ್ನುವುದು ಟಿ.ವಿ.ಗೆ ಅಥವಾ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಬಹುದಾದ ಎಲೆಕ್ಟ್ರಾನಿಕ್ ಉಪಕರಣ. ಇದನ್ನು ವಿಡಿಯೋ ಗೇಮ್‌ಗಳಿಗಾಗಿಯೇ ಡಿಸೈನ್ ಮಾಡಲಾಗುತ್ತಿತ್ತು. ಎಕ್ಸ್‌ಬಾಕ್ಸ್, ಪ್ಲೇ ಸ್ಟೇಷನ್, ನಿಂಟೆಂಡೋ ಪ್ರಮುಖ ಹೋಮ್ ಕನ್ಸೋಲ್‌ಗಳಾಗಿವೆ. ಆ ನಂತರ ಬಂದದ್ದು ಹ್ಯಾಂಡ್- ಹೆಲ್ಡ್ ಕನ್ಸೋಲ್. ಇದು ಹೋಮ್ ಕನ್ಸೋಲ್‌ನಂತಹದ್ದೇ ಎಲೆಕ್ಟ್ರಾನಿಕ್ ಸಾಧನ. ಆದರೆ ಕೈಯ್ಯಲ್ಲಿ ಹಿಡಿಯಬಹುದಾದಷ್ಟು ಚಿಕ್ಕದು. ಸಣ್ಣ ಸ್ಕ್ರೀನ್, ಸ್ಪೀಕರ್, ಸ್ವಿಚ್‌ಗಳು, ಜಾಯ್‌ಸ್ಟಿಕ್ ಇಷ್ಟನ್ನು ಒಂದು ಹ್ಯಾಂಡ್- ಹೆಲ್ಡ್ ಕನ್ಸೋಲ್ ಹೊಂದಿರುತ್ತದೆ. ಮೊದಲಿಗೆ ಈ ಹ್ಯಾಂಡ್- ಹೆಲ್ಡ್ ಕನ್ಸೋಲ್‌ಗಳಿಂದ ಒಂದೇ ಗೇಮನ್ನು ಆಡಬಹುದಿತ್ತು. ಆದರೆ ನಂತರ ಹಲವು ಗೇಮ್‌ಗಳನ್ನು ಆಡುವುದಕ್ಕೆ ಸಾಧ್ಯವಾಯಿತು. 2000ನೇ ಇಸವಿಯ ಬಳಿಕ ಮೊಬೈಲ್ ಫೋನ್‌ಗಳ ಯುಗ. ಕೈಯ್ಯಲ್ಲಿರುವ ಮೊಬೈಲ್‌ಗಳೇ ಜನರಿಗೆ ಗೇಮಿಂಗ್ ಖುಷಿಯನ್ನು ಕೊಡಲಾರಂಭಿಸಿವೆ. ಅಂಗೈ ಅಗಲದ ಪರದೆಯ ಮೂಲಕ ವಿಡಿಯೋ ಗೇಮ್ ಪ್ರಪಂಚವನ್ನು ಪ್ರವೇಶಿಸುವ ಜನರು ತಮ್ಮದೇ ಆದ ಸಂತಸವನ್ನು ಕಂಡುಕೊಳ್ಳುತ್ತಿದ್ದಾರೆ.
ವಿಡಿಯೋ ಗೇಮ್ ಆಡುವುದನ್ನು ಗೇಮಿಂಗ್ ಎಂದು ಕರೆಯಲಾಗುತ್ತದೆ. ವಿಡಿಯೋ ಗೇಮ್ ಆಡುವವರು ಗೇಮರ್ಸ್. ವಿಡಿಯೋ ಗೇಮ್ ಆಡುವುದನ್ನೇ ವೃತ್ತಿಯಾಗಿ ತೆಗೆದುಕೊಂಡವರು ಪ್ರೊಫೆಶನಲ್ ಗೇಮರ್ಸ್. ಮನರಂಜನೆಗಾಗಿಯೇ ಇರುವ ವಿಡಿಯೋ ಗೇಮ್‌ಗಳನ್ನು ಕೋರ್ ಗೇಮ್‌ಗಳು ಎನ್ನಲಾಗುತ್ತದೆ. ಯುದ್ಧ, ಧಾಳಿ, ಕೊಲ್ಲುವುದು, ಬಡಿಯುವುದು ಇವ್ಯಾವುಗಳ ಅಬ್ಬರ ಇಲ್ಲದೆ, ತುಂಬಾ ಸಾಫ್ಟ್ ಆಗಿ ಮನಸ್ಸಿಗೆ ಖುಷಿ ನೀಡುವ ವಿಡಿಯೋ ಗೇಮ್‌ಗಳು ಕ್ಯಾಶುಯಲ್ ಗೇಮ್ಸ್. ಕ್ಯಾಂಡಿ ಕ್ರಶ್, ಚೆಸ್ ಮೊದಲಾದವು ಈ ರೀತಿಯ ಆಟಗಳು. ಆ್ಯಕ್ಷನ್ ಗೇಮ್ಸ್‌ಗಳಲ್ಲಿ ಓಡುವುದು, ಹಾರುವುದು, ಬೀಳುವುದು, ಶೂಟ್ ಮಾಡುವುದು, ಫೈಟ್ ಮಾಡುವುದು ಮೊದಲಾದ ಟಾಸ್ಕ್‌ಗಳಿರುತ್ತವೆ. ‘ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಷನ್’ ಹಾಗೂ ‘ಗಿಟಾರ್ ಹೀರೋ’ ಎನ್ನುವ ಆಕ್ಷನ್ ಗೇಮ್‌ಗಳಲ್ಲಿ ಆಟಗಾರ ಹಾಡಿನ ಲಯಕ್ಕೆ ಸರಿಯಾಗಿ ನೃತ್ಯ ಮಾಡಬೇಕಾಗುತ್ತದೆ. ಅಡ್ವೆಂಚರಸ್ ಗೇಮ್‌ಗಳಲ್ಲಿ ಶಸ್ತ್ರಗಳನ್ನೋ, ಉಪಕರಣಗಳನ್ನೋ ಬಳಸಿಕೊಂಡು ಆಟಗಾರ ಗೆಲುವನ್ನು ಪಡೆಯಬೇಕು. ರೋಲ್ ಪ್ಲೇಯಿಂಗ್ ಗೇಮ್‌ಗಳು ಅತ್ಯಂತ ಜನಪ್ರಿಯ ಗೇಮ್‌ಗಳಲ್ಲಿ ಎರಡನೇ ಸ್ಥಾನದಲ್ಲಿವೆ. ಒಂದು ಪಾತ್ರವನ್ನು ವಹಿಸುತ್ತಾ, ಪಾತ್ರವನ್ನು ಬದಲಾಯಿಸುತ್ತಾ ಆಡುವ ರೀತಿಯಲ್ಲಿ ಈ ಆಟಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಸ್ಟ್ರಾಟಜಿ ಗೇಮ್‌ಗಳಲ್ಲಿ ತಂತ್ರಗಳಿಗೆ ಪ್ರಾಮುಖ್ಯತೆ. ಗೋಪುರವನ್ನು ರಕ್ಷಿಸುವುದು, ಬುದ್ಧಿ ಬಳಸಿಕೊಂಡೇ ಶತ್ರುಗಳನ್ನು ಹಿಮ್ಮೆಟ್ಟಿಸುವುದು ಈ ರೀತಿಯ ತಂತ್ರಗಳು ಕಂಡುಬರುತ್ತದೆ. ಸ್ಪೋರ್ಟ್ಸ್ ಗೇಮ್‌ಗಳಲ್ಲಿ ಕ್ರಿಕೆಟ್, ಫುಟ್‌ಬಾಲ್, ಗಾಲ್ಫ್, ಬೇಸ್‌ಬಾಲ್, ಸಾಕರ್ ಇಂತಹ ಕ್ರೀಡೆಗಳನ್ನು ಅನುಕರಿಸಲಾಗುತ್ತದೆ. ಇಂತಹ ಆಟಗಳಲ್ಲಿ ಎದುರಾಳಿ ಆಟಗಾರರು ಕಂಪ್ಯೂಟರ್‌ನ ನಿಯಂತ್ರಣದಲ್ಲಿರುತ್ತಾರೆ. ಅಂದರೆ ಕಂಪ್ಯೂಟರ್ ನಮ್ಮ ಜೊತೆ ಆಡುತ್ತಿರುತ್ತದೆ. ಇದನ್ನು ಒಬ್ಬರೇ ಆಡಬಹುದು. ತಂಡವಾಗಿಯೂ ಆಡಬಹುದು. ಪಝಲ್ ಅಥವಾ ಲಾಜಿಕ್ ಆಟಗಳು ನಡೆಯುವುದು ಒಂದೇ ಪರದೆಯಲ್ಲಿ ಅಥವಾ ಪ್ಲೇಫೀಲ್ಡ್‌ನಲ್ಲಿ. ಇಲ್ಲಿ ಆಟ ಮುಂದುವರಿಸಲು ಸಮಸ್ಯೆ ಬಗೆಹರಿಸಬೇಕು, ಪಾಯಿಂಟ್ ಗಳಿಸಲು ಟೈಮರ್ ಮುಗಿಯುವ ಮೊದಲು ಪ್ರಶ್ನೆಗೆ ಉತ್ತರಿಸಬೇಕು. ಕೆಲವು ಸಲ ಇನ್ನೊಬ್ಬ ಪ್ಲೇಯರ್ ಉತ್ತರ ನೀಡುವ ಮೊದಲು ಉತ್ತರ ನೀಡಬೇಕಾಗಿರುತ್ತದೆ. ವಿಡಿಯೋ ಗೇಮ್‌ಗಳಲ್ಲಿ ಅತ್ಯಂತ ಸರಳ ಗೇಮ್‌ಗಳೆಂದರೆ ಐಡಲ್ ಗೇಮ್ಸ್. ಐಡಲ್ ಗೇಮ್‌ಗಳಲ್ಲಿ ಐಕಾನ್ ಮೇಲೆ ಮತ್ತೆ ಮತ್ತೆ ಕ್ಲಿಕ್ ಮಾಡುವುದು, ಚಿತ್ರಗಳನ್ನು ಪ್ರೆಸ್ ಮಾಡುವುದು ಈ ರೀತಿಯ ಸುಲಭ ಟಾಸ್ಕ್‌ಗಳಿರುತ್ತವೆ.
ಆರ್ಟ್ಸ್ ಗೇಮ್‌ಗಳು ಗೇಮಿಂಗ್ ಪ್ರಕಾರಗಳಲ್ಲಿ ವಿಶಿಷ್ಟವಾದವು. ಆಟದ ವಿಶಿಷ್ಟತೆ ಇಲ್ಲಿ ಮುಖ್ಯವಾಗುವುದಿಲ್ಲ. ಕಲೆಯೇ ಪ್ರಮುಖ. ನೋಡುವುದಕ್ಕೆ ಆಕರ್ಷಕವಾಗಿರುವ, ಬಹಳ ಕ್ರಿಯೇಟಿವ್ ಆಗಿರುವ ಗೇಮ್‌ಗಳಿವು. ವಿಡಿಯೋ ಗೇಮ್ಸ್ ಮೂಲಕ ನಮ್ಮ ಆಸಕ್ತಿಯ ಕೆಲವು ವಿಷಯಗಳನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯವಿದೆ. ಇವುಗಳು ಶೈಕ್ಷಣಿಕ ಗೇಮ್‌ಗಳು. ಭಾಷೆ, ಗಣಿತ, ಟೈಪಿಂಗ್ ಕುರಿತಾದ ಸರಳ ಗೇಮ್‌ಗಳು ಇದಕ್ಕೆ ಉದಾಹರಣೆಗಳು. ವ್ಯಾಯಾಮದಂತಹ ಚಟುವಟಿಕೆ ಮಾಡಲು ಅವಕಾಶ ಮಾಡಿಕೊಡುವ ಗೇಮ್‌ಗಳನ್ನು ಎಕ್ಸರ್ ಗೇಮ್ ಎನ್ನಲಾಗುತ್ತದೆ. ವೈ ಫಿಟ್ ಗೇಮ್ ಈ ಮಾದರಿಯ ಗೇಮ್ ಆಗಿದೆ.
ವಿಡಿಯೋ ಗೇಮ್ ಬೆಳೆದು ಬಂದ ದಾರಿ
ನಾವೆಲ್ಲರೂ ಇಂದು ಬಹಳ ಅಚ್ಚುಕಟ್ಟಾಗಿ, ಸಿಸ್ಟಮ್ಯಾಟಿಕ್ ಆಗಿ, ನಮ್ಮಿಷ್ಟದ ವಿಡಿಯೋ ಗೇಮ್‌ಗಳನ್ನು ನಮ್ಮಿಷ್ಟದ ಸ್ಥಳದಲ್ಲಿ ಆಡುವುದಕ್ಕೆ ಸಾಧ್ಯವಿದೆ. ಇಂತಹ ಅಚ್ಚುಕಟ್ಟುತನ ರೂಪುಗೊಳ್ಳುವುದರ ಹಿಂದೆ ಹಲವಾರು ವರ್ಷಗಳ ಪರಿಶ್ರಮ ಇದೆ. ಹಲವಾರು ಜನ ತಂತ್ರಜ್ಞರು ಕುತೂಹಲ- ಆಸಕ್ತಿಯಿಂದ ನಡೆಸಿದ ಸಂಶೋಧನೆ- ಅನ್ವೇಷಣೆಗಳಿಂದಾಗಿ ವಿಡಿಯೋ ಗೇಮ್‌ಗಳು ಹಂತಹಂತವಾಗಿ ಅಭಿವೃದ್ಧಿಯನ್ನು ಸಾಧಿಸಿವೆ.
ವಿಡಿಯೋ ಗೇಮ್‌ಗಳು ಆರಂಭಗೊಂಡದ್ದು 1947ರಲ್ಲಿ. ಥಾಮಸ್ ಗೋಲ್ಡ್‌ಸ್ಮಿತ್ ಜೂನಿಯರ್ ಮತ್ತು ಎಸ್ಟಲ್ ರೇ ಮ್ಯಾನ್ ಇವರು ಟಿ.ವಿ.ಯನ್ನು ಬಳಸಿಕೊಂಡು ಮೊದಲ ಎಲೆಕ್ಟ್ರಾನಿಕ್ ಗೇಮನ್ನು ಆಡುತ್ತಾರೆ. 1950ರಿಂದ 1970ರವರೆಗಿನ ವಿಡಿಯೋ ಗೇಮ್ ಇತಿಹಾಸವನ್ನು ‘ಟಿಂಕರಿಂಗ್’ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ. ವಿಡಿಯೋ ಗೇಮ್‌ಗಳ ಇತಿಹಾಸವು ಕಂಪ್ಯೂಟರ್‌ನ ವಿಕಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ. 1950ರ ದಶಕದಲ್ಲಿ ದೊಡ್ಡದಾದ ಕೊಠಡಿ ಗಾತ್ರದ ಕಂಪ್ಯೂಟರ್‌ಗಳ ಮೂಲಕ ಸರಳವಾದ ಲೆಕ್ಕಾಚಾರಗಳನ್ನು ಮಾತ್ರ ಮಾಡಬಹುದಿತ್ತು. ವಿಡಿಯೋ ಗೇಮ್ ಆಡುವುದು ಸಾಧ್ಯ ಇರಲಿಲ್ಲ. 1952ರಲ್ಲಿ ಅಲೆಕ್ಸಾಂಡರ್ ಡೌಗ್ಲಾಸ್ ಎಂಬವರು ತಮ್ಮ ಪಿಎಚ್.ಡಿ. ಮಹಾಪ್ರಬಂಧದಲ್ಲಿ ‘ಓಕ್ಸೋ’ ಎನ್ನುವ ಕಂಪ್ಯೂಟರ್ ಗೇಮ್ ಒಂದರ ಬಗ್ಗೆ ಬರೆಯುತ್ತಾರೆ. 1958ರಲ್ಲಿ ಕಾಣಿಸಿಕೊಂಡ ‘ಟೆನ್ನಿಸ್ ಫಾರ್ ಟು’ ಇದು ಸಂಪೂರ್ಣವಾಗಿ ಮನರಂಜನೆಗಾಗಿ ಪ್ರೋಗ್ರಾಮ್ ಮಾಡಲಾದ ಮೊದಲ ವಿಡಿಯೋ ಗೇಮ್ ಆಗಿತ್ತು. ಎರಡು ಜನರು ಬೆಳಕಿನ ಸ್ಥಳವನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಹೊಡೆದು ಕಳುಹಿಸುವಂತಹ ಆಟವನ್ನು ಈ ವಿಡಿಯೋ ಗೇಮ್ ಒಳಗೊಂಡಿತ್ತು.
1970ರ ಸರಿಸುಮಾರಿಗೆ ವಿಡಿಯೋ ಗೇಮ್ ಯಂತ್ರಗಳು ಆರಂಭಗೊಳ್ಳುತ್ತವೆ. 1972ರಲ್ಲಿ ‘ಅಟಾರಿ’ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಕಂಪನಿಯು ಮುಂದಿನ ದಶಕದಲ್ಲಿ ವೀಡಿಯೊ ಗೇಮ್ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿತು. ಇದು ರೂಪಿಸಿದ ‘ಪಾಂಗ್’ ಅನ್ನುವ ವಿಡಿಯೋ ಗೇಮ್ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಯಶಸ್ಸನ್ನು ಕಂಡ ಮೊದಲ ವಿಡಿಯೋ ಗೇಮ್ ಆಗಿದೆ. ಈ ವಿಡಿಯೋ ಗೇಮ್ ‘ಟೆನ್ನಿಸ್ ಫಾರ್ ಟು’ ವಿಡಿಯೋ ಗೇಮ್‌ನಂತೆಯೇ ಇತ್ತು. ಇದರಲ್ಲಿ ಇಬ್ಬರು ಆಟಗಾರರು ಚೆಂಡನ್ನು ಹೊಡೆಯುವುದಕ್ಕೆ ಪ್ರಯತ್ನಿಸುತ್ತಾರೆ. ಇದು ಆಟದ ರೀತಿ. ಇದಕ್ಕಾಗಿ ವೀಡಿಯೊ ಗೇಮ್ ಯಂತ್ರವನ್ನು ಕಂಡುಹಿಡಿದದ್ದರಿಂದ ಅತೀ ಕಡಿಮೆ ಹಣಕ್ಕೆ ವಿಡಿಯೊ ಗೇಮ್ ಹೆಚ್ಚಿನ ಜನರಿಗೆ ಸಿಗುವಂತಾಗುತ್ತದೆ. ಮನೆಯಲ್ಲೇ ಆರಾಮಾಗಿ ಕೂತುಕೊಂಡು, ಆಟದ ಮಜಾ ಅನುಭವಿಸುವ ವಿಡಿಯೋ ಗೇಮ್ 1972ರಲ್ಲಿ ತಯಾರಾಗುತ್ತದೆ. ಅದರ ಹೆಸರು ‘ಒಡಿಸ್ಸಿ’.
1977ರಿಂದ 1993ರ ಕಾಲವನ್ನು ವಿಡಿಯೋ ಗೇಮ್‌ಗಳ ‘ಸುವರ್ಣ ಯುಗ’ ಅಂತ ಕರೆಯಲಾಗುತ್ತದೆ. ಈ ಸಮಯದಲ್ಲಿ ಹೊಸ ಹೊಸ ಅನ್ವೇಷಣೆಗಳು, ಪೈಪೋಟಿಗಳು ಜೋರಾಗುತ್ತವೆ. ಹಲವಾರು ಕಂಪೆನಿಗಳು ವಿಡಿಯೋ ಗೇಮ್ ಆರಂಭಿಸುವುದಕ್ಕೆ ಆಸಕ್ತಿ ತೋರಿಸುತ್ತಾರೆ. ಜಪಾನಿನ ‘ನಿಂಟೆಂಡೊ’ ಎನ್ನುವ ಕಂಪೆನಿ ತನ್ನ ಮೊದಲ ಹೋಮ್ ವಿಡಿಯೋ ಗೇಮ್ ಸಿಸ್ಟಮ್‌ಗಳನ್ನು ಬಿಡುಗಡೆ ಮಾಡುತ್ತದೆ. ‘ಮ್ಯಾಗ್ನಾವೋಕ್ಸ್’ ಕಂಪೆನಿ ‘ಒಡಿಸ್ಸಿ- 2’ ಎನ್ನುವ ವಿಡಿಯೋ ಗೇಮನ್ನು ಪರಿಚಯಿಸುತ್ತದೆ. ಇದೇ ಸಂದರ್ಭದಲ್ಲಿ ‘ಟೈಟೊ’ ಕಂಪೆನಿ ತಯಾರಿಸಿದ ಹೊಸ ವಿಡಿಯೋ ಗೇಮ್ ‘ಸ್ಪೇಸ್ ಇನ್ವೇಡರ್ಸ್’. ‘ಪಕ್ ಮ್ಯಾನ್’ ವಿಡಿಯೋ ಗೇಮ್ ನಮಗೆಲ್ಲರಿಗೂ ಗೊತ್ತಿದೆ. ನಾಮ್ಕೋ ಕಂಪೆನಿಯ ಈ ವಿಡಿಯೋ ಗೇಮ್ ಜಪಾನಿನಲ್ಲಿ ಆರಂಭಗೊಳ್ಳುತ್ತದೆ. ಆಮೇಲೆ ಉಳಿದ ದೇಶಗಳಿಗೂ ತಲುಪುತ್ತದೆ. ‘ಸಿಂಕ್ಲೇರ್ ಝಡ್ ಎಕ್ಸ್ 80’ ಎನ್ನುವುದು ಕಡಿಮೆ ಖರ್ಚಿನ ಹೋಮ್ ವಿಡಿಯೋ ಗೇಮ್‌ಗಳಲ್ಲಿ ಮೊದಲನೆಯದು.
ಇಂದಿಗೂ ಮುಖ್ಯವಾಗಿರುವ ಹಲವು ಕ್ಲಾಸಿಕ್ ವಿಡಿಯೋ ಗೇಮ್‌ಗಳು ಹೊರಬಂದದ್ದು 1980ರಲ್ಲಿ. ವಿಡಿಯೋ ಗೇಮಿಂಗ್ ಉದ್ಯಮದ ದೈತ್ಯ ಸಂಸ್ಥೆ ಅಂತ ಹೆಸರು ಪಡೆದ ‘ಪಾರ್ಕರ್ ಬ್ರದರ್ಸ್’ ಕಂಪೆನಿ 1982ರಲ್ಲಿ ವಿಡಿಯೋ ಗೇಮ್ ಮಾರುಕಟ್ಟೆಗೆ ಕಾಲಿಡುತ್ತದೆ. ಇದು ಕೆಲವು ವಿಡಿಯೋ ಗೇಮ್‌ಗಳನ್ನು ಪರಿಚಯಿಸುತ್ತದೆ. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಅಂದರೆ 1983ರಲ್ಲಿ ವಿಡಿಯೋ ಗೇಮ್ ಉದ್ಯಮವು ನಷ್ಟವನ್ನು ಅನುಭವಿಸುತ್ತದೆ. ಹಲವು ಕಂಪನಿಗಳು ಒಂದೆರಡು ವರ್ಷಗಳಲ್ಲಿ ದಿವಾಳಿಯಾಗುತ್ತವೆ. ಆ ಸಂದರ್ಭದಲ್ಲಿ ‘ಪಾರ್ಕರ್ ಬ್ರದರ್ಸ್’ ಕಂಪೆನಿಯ ಟೆಕ್ನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಿಚರ್ಡ್ ಸ್ಟೆರ್ನ್ಸ್ “ಈಗಿನಿಂದ ಎರಡು ಅಥವಾ ಮೂರು ವರ್ಷಗಳ ನಂತರ, ವೀಡಿಯೊ ಗೇಮ್‌ಗಳು ಇತಿಹಾಸ ಸೇರಿಕೊಳ್ಳುತ್ತವೆ” ಎಂದು ಹೇಳುತ್ತಾರೆ. ಆದರೆ ಈ ಬಗೆಯ ಆತಂಕಗಳು ಆ ಬಳಿಕ ದೂರವಾದದ್ದು ವಿಡಿಯೋ ಗೇಮ್‌ಗಳ ಬೆಳವಣಿಗೆಯಲ್ಲಿ ಬಹಳ ಮುಖ್ಯ.
1984ರ ನಂತರ ವಿಡಿಯೋ ಗೇಮ್ ಉದ್ಯಮದಲ್ಲಿ ಸ್ಪರ್ಧೆಯನ್ನು ಕಾಣಬಹುದು. ಕಂಪೆನಿಯ ಒಳಗಡೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡು ಹಿಂದಿಗಿಂತಲೂ ಚೆನ್ನಾಗಿ ವಿಡಿಯೋ ಗೇಮ್‌ಗಳ ತಯಾರಿ ನಡೆಯುತ್ತದೆ. 1985ರಲ್ಲಿ ‘ನಿಂಟೆಂಡೊ’ ಕಂಪೆನಿ ‘ನಿಂಟೆಂಡೋ ಎಂಟರ್ಟೈನ್ಮೆಂಟ್ ಸಿಸ್ಟಮ್’ನ್ನು ಜನರೆದುರು ತೋರಿಸಿಕೊಡುತ್ತದೆ. ನಂತರ ಇದನ್ನು ಅಫೀಶಿಯಲ್ ಆಗಿ ಉತ್ತರ ಅಮೇರಿಕಾದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆಗ ಇದರ ಬೆಲೆ 125 ಡಾಲರ್‌ಗಳು. ‘ನಿಂಟೆಂಡೋ ಎಂಟರ್ಟೈನ್ಮೆಂಟ್ ಸಿಸ್ಟಮ್‌ಗಾಗಿಯೇ ‘ಸೂಪರ್ ಮಾರಿಯೋ ಬ್ರದರ್ಸ್’ ಎನ್ನುವ ವಿಡಿಯೋ ಗೇಮ್ ಬಿಡುಗಡೆ ಆಗುತ್ತದೆ. ಇದು ಇಡೀ ಪ್ರಪಂಚದಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟ ಕಾಣುತ್ತದೆ. 1986ರಲ್ಲಿ ಅಮೇರಿಕಾದಲ್ಲಿ ‘7800 ಪ್ರೋಸಿಸ್ಟಮ್’ ಬಿಡುಗಡೆ ಆಗುತ್ತದೆ. ಇದೇ ಅವಧಿಯಲ್ಲಿ ವಿಡಿಯೋ ಗೇಮ್ ಡಿಸೈನರ್ ಆಗಿದ್ದ ಕ್ರಿಸ್ ಕ್ರಾ ಫೋರ್ಡ್ ಅವರ ಮನೆಯಲ್ಲಿ ಮೊದಲ ‘ಕಂಪ್ಯೂಟರ್ ಗೇಮ್ ಡೆವಲಪರ್ಸ್ ಕಾನ್ಫರೆನ್ಸ್’ ನಡೆಯುತ್ತದೆ. ಈ ಕಾನ್ಫರೆನ್ಸ್ ‘ಸಿಂಪೋಸಿಯಮ್’ ಎಂದೇ ಪ್ರಸಿದ್ಧ. ಇದಾದ ಮುಂದಿನ ವರ್ಷ ಜಪಾನ್‌ನ ‘ನಿಂಟೆಂಡೋ ಎಂಟರ್ಟೈನ್ಮೆಂಟ್ ಸಿಸ್ಟಮ್’ ಕಂಪೆನಿ ಪರ್ಸನಲ್ ಕಂಪ್ಯೂಟರ್‌ಗಳಿಗೆ ಹೊಂದಿಕೊಳ್ಳುವ ವಿಡಿಯೋ ಗೇಮನ್ನು ಆರಂಭಿಸುತ್ತದೆ. ‘ಅಮಿಗಾ’ ವಿಡಿಯೋ ಗೇಮ್ ಸರಣಿಯ ಯಶಸ್ವೀ ವಿಡಿಯೋ ಗೇಮ್ ‘ಅಮಿಗಾ 500’ ಇದೇ ವರ್ಷ ಬಿಡುಗಡೆಯಾಗುತ್ತದೆ. ವಿಡಿಯೋ ಗೇಮ್ ಉದ್ಯಮವನ್ನು ಜನಪ್ರಿಯಗೊಳಿಸುವುದಕ್ಕಾಗಿಯೇ ಅಮೇರಿಕಾದಲ್ಲಿ ‘ನಿಂಟೆಂಡೊ ಪವರ್’ ಎನ್ನುವ ಮ್ಯಾಗಝಿ಼ನ್ ಆರಂಭವಾಗುತ್ತದೆ. ಇದನ್ನು ಆರಂಭಿಸಿದ್ದು ‘ನಿಂಟೆಂಡೋ ಆಫ್ ಅಮೇರಿಕಾ’ ಕಂಪೆನಿ. ಹೀಗೆ ಆರಂಭಗೊಂಡ ಮ್ಯಾಗಝಿನ್ 3.6 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡುತ್ತದೆ.
ನಿಂಟೆಂಡೊ ಸೂಪರ್ ಫ್ಯಾಮಿಕಾಮ್ ಸಿಸ್ಟಮ್‌ಗಾಗಿ ಆಡಿಯೊ ಚಿಪ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಮೂಲಕ ‘ಸೋನಿ’ ಕಂಪೆನಿ ವೀಡಿಯೊ ಗೇಮ್ ಉದ್ಯಮವನ್ನು ಪ್ರವೇಶಿಸುತ್ತದೆ. ಮೊದಲ ಬಣ್ಣದ ಪೋರ್ಟೇಬಲ್ ವಿಡಿಯೋ ಗೇಮ್ ಸಿಸ್ಟಮ್ ‘ಅಟಾರಿ ಲಿಂಕ್ಸ್’. ಇದನ್ನು 1989ರಲ್ಲಿ ಪರಿಚಯಿಸಲಾಯಿತು. ಇದರ ಬೆಲೆ 149 ಡಾಲರ್‌ಗಳು.
‘ನಾಟ್ಸ್ ಆ್ಯಂಡ್ ಕ್ರಾಸ್’ ವಿಡಿಯೋ ಗೇಮನ್ನು ‘ಮೊದಲ ನೈಜ ಗ್ರಾಫಿಕಲ್ ಕಂಪ್ಯೂಟರ್ ಗೇಮ್’ ಎಂದು ಪರಿಗಣಿಸಲಾಗಿದೆ. ‘ರೆಟ್ರೊಮೊಡೊ’ ಇದು ಮೊದಲ ಮಲ್ಟಿಪ್ಲೇಯರ್ ವಿಡಿಯೋ ಗೇಮ್. ‘ಮಝೆ಼ವಾರ್’ 1974ರಲ್ಲಿ ಕಾಣಿಸಿಕೊಂಡ ಮೊದಲ “ಗ್ರಾಫಿಕ್ ವರ್ಚುವಲ್ ವರ್ಲ್ಡ್” ಆಗಿದ್ದು, ಶೂಟರ್‌ಗಳು ಒಬ್ಬರಿಗೊಬ್ಬರು ಬುಲೆಟ್ ಹಾರಿಸುತ್ತಾ ತಿರುಗುವ ರೀತಿಯಲ್ಲಿ ಈ ಆಟವಿತ್ತು. ‘ಅಡ್ವೆಂಚರ್’ ಎನ್ನುವುದು ಹಲವು ಜನ ಫ್ಲೇಯರ್ಸ್ ಇರುವ ವಿಡಿಯೋ ಗೇಮ್ ಆಗಿದೆ. ಇಲ್ಲಿ ಆಟಗಾರರು ಗುಹೆಯನ್ನು ಹುಡುಕುತ್ತಾರೆ. ಜೊತೆಗೆ ಡ್ರ‍್ಯಾಗನನ್ನು ಕೊಲ್ಲುತ್ತಾರೆ. 1980ರ ದಶಕದಲ್ಲಿ ಹೋಮ್ ಕಂಪ್ಯೂಟರ್‌ಗಳು ಹಾಗೂ ಟಿ.ವಿ.ಗಳಿಗೆ ಸಂಪರ್ಕ ಕಲ್ಪಿಸಿ ಆಡುವ ವಿಡಿಯೋ ಗೇಮ್‌ಗಳು ಹೆಚ್ಚು ಜನಪ್ರಿಯಗೊಂಡವು. ಜೊತೆಗೆ ದೃಶ್ಯಗಳು ಆಕರ್ಷಕವಾಗಿರುವ ಅಂದರೆ ವಿಶ್ಯುವಲೈಸ್ಡ್ ಆಗಿರುವ ವಿಡಿಯೋ ಗೇಮ್‌ಗಳನ್ನು ಜನ ಇಷ್ಟಪಡತೊಡಗಿದರು.
1990ನೇ ಇಸವಿಯ ನಂತರ ವಿಡಿಯೋ ಗೇಮ್ ಉದ್ಯಮ ಮತ್ತಷ್ಟು ಜನಪ್ರಿಯವಾಯಿತು. ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯಿಂದಾಗಿ ಮೊದಲಿಗಿಂತಲೂ ಆಕರ್ಷಕವಾಗಿ ವಿಡಿಯೋ ಗೇಮ್‌ಗಳನ್ನು ರೂಪಿಸುವುದಕ್ಕೆ ಸಾಧ್ಯವಾಯಿತು. ‘ಏಜ್ ಆಫ್ ಎಂಪೈರ್ಸ್’ ಗೇಮ್‌ನಲ್ಲಿ ಸಂಪೂರ್ಣ ನಾಗರಿಕತೆಯ ಚಿತ್ರಣ ಕಂಡುಬರುತ್ತದೆ. ‘ಕಮಾಂಡ್ ಆ್ಯಂಡ್ ಕಾಂಕರ್‌ನಲ್ಲಿ ಯುದ್ಧದ ಚಿತ್ರಣವಿದೆ. ‘ಟಾಂಬ್ ರೈಡರ್’ನಲ್ಲಿ ಐತಿಹಾಸಿಕ ಕಲಾಕೃತಿಗಳ ಹುಡುಕಾಟವಿದೆ. ‘ಮಂಕಿ ಐಲ್ಯಾಂಡ್’ನಲ್ಲಿ ಕಡಲುಗಳ್ಳರ ನಿಧಿ ಕಂಡುಬರುತ್ತದೆ. ಈ ಬಗೆಯ ಚಿತ್ರಣ ಈ ಮೊದಲಿನ ವಿಡಿಯೋ ಗೇಮ್‌ಗಳಲ್ಲಿ ಕಂಡುಬಂದಿದ್ದರೂ ಸಹ ಇಲ್ಲಿನಷ್ಟು ಆಕರ್ಷಕವಾಗಿರಲಿಲ್ಲ. ಇಲ್ಲಿ ಗ್ರಾಫಿಕ್ಸ್ ಬಳಸಿದ್ದರಿಂದ ವಿಶೇಷ ಆಕರ್ಷಣೆ ಒದಗಿಬಂದಿತ್ತು. ಈ ಕಾಲಘಟ್ಟದ ವಿಡಿಯೋ ಗೇಮ್ ಕ್ಷೇತ್ರದಲ್ಲಿ ನಿಂಟೆಂಡೊ, ಸೋನಿ ಹಾಗೂ ಫಿಲಿಪ್ಸ್ ಕಂಪೆನಿಗಳು ಅದ್ಭುತವಾಗಿ ಗುರುತಿಸಿಕೊಂಡವು. ಕಂಪ್ಯೂಟರ್, ವಿಡಿಯೋ ಗೇಮ್ ಯಂತ್ರಗಳಲ್ಲಿ ಮಾತ್ರವೇ ಆಡುವುದಕ್ಕೆ ಸಾಧ್ಯವಿದ್ದ ವಿಡಿಯೋ ಗೇಮ್‌ಗಳನ್ನು ಸಿ.ಡಿ.ಯ ಮೂಲಕವೂ ಆಡುವುದಕ್ಕೆ ಸಾಧ್ಯವಾಗಿಸಿದ್ದು ಈ ಕಂಪೆನಿಗಳ ಹೆಗ್ಗಳಿಕೆ.
1994ರಿಂದ ಇವತ್ತಿನವರೆಗಿನ ಕಾಲಘಟ್ಟವನ್ನು ವಿಡಿಯೋ ಗೇಮ್ಸ್ ಕ್ಷೇತ್ರದಲ್ಲಿ ‘ಆಧುನಿಕ ಯುಗ’ ಎಂದು ಕರೆಯಲಾಗಿದೆ. ಈ ಅವಧಿಯಲ್ಲಿ ‘ಗೇಮ್ ಪ್ರೋ’ ಎನ್ನುವ ವಿಡಿಯೋ ಗೇಮ್ ಮ್ಯಾಗಝಿ಼ನ್‌ನ ಒಂದೇ ಸಂಚಿಕೆ 5 ಲಕ್ಷ ಪ್ರತಿಗಳಷ್ಟು ಮಾರಾಟ ಆಗುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಗಳನ್ನು ಮಾರಾಟ ಮಾಡಿದ ಮೊದಲ ಮ್ಯಾಗಝಿ಼ನ್ ಇದಾಗಿದೆ. ವಿಡಿಯೋ ಗೇಮ್‌ಗಳ ಕುರಿತಾಗಿ ಜನರಿಗಿದ್ದ ಆಸಕ್ತಿಯನ್ನು ಈ ಮೂಲಕ ಗಮನಿಸಬಹುದು. ಜಪಾನ್‌ನಲ್ಲಿ ಸೋನಿ ಪ್ಲೇ ಸ್ಟೇಷನ್ ಆರಂಭಗೊಂಡದ್ದು ಇದೇ ಸಮಯದಲ್ಲಿ. ಜಪಾನ್‌ನ ಟೋಕಿಯೊದಲ್ಲಿ ನಿಂಟೆಂಡೊ ಕಂಪೆನಿ ‘ವರ್ಚುವಲ್ ಬಾಯ್’ ಎನ್ನುವುದನ್ನು ಘೋಷಿಸುತ್ತದೆ. ಇದು ಕಪ್ಪು ಹಿನ್ನೆಲೆಯಲ್ಲಿ ಕೆಂಪು ಬಣ್ಣದ 3ಡಿ ಚಿತ್ರಗಳನ್ನು ಪ್ರದರ್ಶಿಸುವ ಹೊಸ ವೀಡಿಯೊ ಗೇಮ್ ಸಿಸ್ಟಮ್ ಆಗಿರುತ್ತದೆ. ಇದು ಅಮೇರಿಕಾದಲ್ಲಿ 179.95 ಡಾಲರ್ ಬೆಲೆಗೆ ಬಿಡುಗಡೆ ಆಗುತ್ತದೆ. ಆದರೆ ಹೆಚ್ಚು ಮಾರಾಟ ಆಗದ ಕಾರಣ ನಷ್ಟ ಅನುಭವಿಸುವಂತಾಗುತ್ತದೆ. ‘ಪಿಪ್ಪಿನ್’ ವಿಡಿಯೋ ಗೇಮ್ ಸಿಸ್ಟಮನ್ನು ಪರಿಚಯಿಸಿದ್ದು ಆ್ಯಪಲ್ ಕಂಪ್ಯೂಟರ್ ಕಂಪೆನಿ. ಈ ವ್ಯವಸ್ಥೆಯನ್ನು ‘ಡಿಜಿಟಲ್ ಎಂಟರ್‌ಟೈನ್‌ಮೆಂಟ್’ ಕಂಪೆನಿ ತನ್ನದೇ ಆದ ‘ವರ್ಲ್ಡ್ ಎಂಟರ್‌ಟೈನ್‌ಮೆಂಟ್ ಸಿಸ್ಟಮ್’ಗಾಗಿ ಅಳವಡಿಸಿಕೊಳ್ಳುತ್ತದೆ. ಜಪಾನ್‌ನಲ್ಲಿ ನಿಂಟೆಂಡೊ ಮತ್ತು ಸೇಂಟ್ ಗಿಗಾ ಕಂಪೆನಿಗಳು ‘ಟೆಲಿವಿಷನ್ ಸ್ಯಾಟೆಲ್ಲಾವ್ಯೂ ಸೇವೆ’ಯನ್ನು ಘೋಷಿಸಿದ್ದರಿಂದಾಗಿ 1995ರಿಂದ ಕೇಬಲ್ ಸೇವೆಯ ಮೂಲಕ ಜನರು ವಿಡಿಯೋ ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಿತ್ತು.
ಇದೇ ವರ್ಷ ಲಾಸ್ ಏಂಜಲೀಸ್‌ನಲ್ಲಿ ನಡೆದ ‘ಮೊದಲ ಎಲೆಕ್ಟ್ರಾನಿಕ್ ಎಂಟರ್ಟೈನ್ಮೆಂಟ್ ಎಕ್ಸ್‌ಪೋ’ದಲ್ಲಿ ಮುನ್ನೂರ ಐವತ್ತು ಗೇಮ್ ಕಂಪನಿಗಳು ವಿಡಿಯೋ ಗೇಮ್ ಸಿಸ್ಟಮ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳಿಗಾಗಿ 1,300 ವಿಡಿಯೋ ಗೇಮ್‌ಗಳನ್ನು ತೋರಿಸುತ್ತವೆ. 1996ರಲ್ಲಿ ನಿಂಟೆಂಡೊ ವಿಶ್ವದಾದ್ಯಂತ ‘ನಿಂಟೆಂಡೊ 64’ ಎನ್ನುವ ಗೇಮ್ ಸಿಸ್ಟಮ್‌ಅನ್ನು ಹಾಗೂ ಅಮೇರಿಕಾದಲ್ಲಿ ಗೇಮ್ ಬಾಯ್ ಕಂಪೆನಿ ‘ಪಾಕೆಟ್ ಪೋರ್ಟೇಬಲ್ ಗೇಮ್ ಸಿಸ್ಟಮ್’ನ್ನು ಬಿಡುಗಡೆ ಮಾಡುತ್ತದೆ. ‘ಕ್ಯಾಪ್ ಕಾಮ್’ ಕಂಪೆನಿ ರೂಪಿಸಿದ ‘ರೆಸಿಡೆಂಟ್ ಎವಿಲ್’ ವಿಡಿಯೋ ಗೇಮ್ ಬದುಕುಳಿಯುವ, ಭಯಾನಕ ವಿಷಯದ ಗೇಮ್‌ಗಳ ಸರಣಿಯನ್ನು ಹೊಂದಿರುತ್ತದೆ. ‘ಟಾಂಬ್ ರೈಡರ್’ ವಿಡಿಯೋ ಗೇಮನ್ನು ಬಿಡುಗಡೆ ಮಾಡಿದ್ದು ‘ಈಡೋಸ್’. ಇದು 3ಡಿ ವಿಡಿಯೋ ಗೇಮ್ ಆಗಿರುತ್ತದೆ. ‘ಡಿಜಿಪೆನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಎಂಬ ಕಾಲೇಜಿನಲ್ಲಿ ಕಂಪ್ಯೂಟರ್ ಮತ್ತು ವಿಡಿಯೋ ಗೇಮ್ ಕೋರ್ಸ್ ಆರಂಭಗೊಂಡದ್ದು 1996ರಲ್ಲಿ. ಜಪಾನ್‌ನಲ್ಲಿ ಸೋನಿ ಕಂಪೆನಿಯು ‘ನೆಟ್ ಯಾರೋಜ್’ ಹೆಸರಿನ ‘ಪ್ರೋಗ್ರಾಮೇಬಲ್ ಪ್ಲೇಸ್ಟೇಷನ್ ವಿಡಿಯೋ ಗೇಮ್ ಸಿಸ್ಟಮ್ಅನ್ನು 1997ರಲ್ಲಿ ಮಾರಾಟ ಮಾಡಲಾರಂಭಿಸುತ್ತದೆ. ಜೊತೆಗೆ ಸಂಗೀತ ಆಧಾರಿತ ಆಟಗಳನ್ನು ಜನಪ್ರಿಯಗೊಳಿಸುವ ‘ಪರಪ್ಪ ದಿ ರ‍್ಯಾಪರ್’ನ್ನು ಬಿಡುಗಡೆ ಮಾಡುತ್ತದೆ.
1999ರಲ್ಲಿ ಸೋನಿ ಕಂಪ್ಯೂಟರ್ ಎಂಟರ್‌ಟೈನ್‌ಮೆಂಟ್, ಜಪಾನ್‌ನಲ್ಲಿ ‘ಪಾಕೆಟ್‌ಸ್ಟೇಷನ್ ಹ್ಯಾಂಡ್‌ಹೆಲ್ಡ್’ ವಿಡಿಯೋ ಗೇಮ್ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಇವುಗಳ ಬೆಲೆ ಸುಮಾರು 25 ಡಾಲರ್‌ಗಳು. ಜಪಾನ್‌ನ ಟೋಕಿಯೋದಲ್ಲಿ, ಸೋನಿ ತನ್ನ ಮುಂದಿನ ಪ್ಲೇಸ್ಟೇಷನ್ ವಿಡಿಯೋ ಗೇಮ್ ಸಿಸ್ಟಮ್‌ನ ವಿಶೇಷಣಗಳನ್ನು 1500 ಜನ ಅತಿಥಿಗಳ ಎದುರು ಅನಾವರಣಗೊಳಿಸುತ್ತದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ನಡೆದ ‘ಗೇಮ್ ಡೆವಲಪರ್‌ಗಳ ಸಮ್ಮೇಳನದಲ್ಲಿ, ಬಿಲ್ ಗೇಟ್ಸ್ ಮೈಕ್ರೋಸಾಫ್ಟ್‌ನ ಎಕ್ಸ್‌ಬಾಕ್ಸ್ ವಿಡಿಯೋ ಗೇಮ್ ಯೋಜನೆಗಳನ್ನು ಪ್ರಕಟಿಸಿದರು. 2001ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯು ಎಕ್ಸ್ ಬಾಕ್ಸ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಹಾರ್ಡ್ ಡಿಸ್ಕ್ ಅನ್ನು ಬಳಸುವ ಮತ್ತು ಆನ್‌ಲೈನ್ ಗೇಮಿಂಗ್ ಅನ್ನು ಪರಿಣಾಮಕಾರಿಯಾಗಿ ಜನಪ್ರಿಯಗೊಳಿಸಲು ಸಹಕಾರಿಯಾಗಿರುತ್ತದೆ. ಇದು ಜಾರಿಗೆ ಬಂದದ್ದು 2002ರಲ್ಲಿ. ಎಕ್ಸ್ ಬಾಕ್ಸ್ ಆನ್ಲೈನ್ ಗೇಮಿಂಗ್ ಸೇವೆಯು ಅಮೇರಿಕಾದಲ್ಲಿ ಆರಂಭವಾಗಿ ಒಂದು ವರ್ಷದ ನಂತರ ಇಡೀ ಯುರೋಪಿಗೆ ಈ ಸೇವೆ ವಿಸ್ತರಿಸಿಕೊಳ್ಳುತ್ತದೆ. ‘ಬ್ಲಿಝಾರ್ಡ್ ಎಂಟರ್ಟೈನ್ಮೆಂಟ್’ ಸಂಸ್ಥೆ ತಯಾರಿಸಿದ ‘ವರ್ಲ್ಡ್ ಆಫ್ ವಾರ್ ಕ್ರಾಫ್ಟ್’ ಅತೀ ಬೇಗ ಲಕ್ಷಾಂತರ ಜನ ಬಳಕೆದಾರರನ್ನು ಹೊಂದಿದ ಅತ್ಯಂತ ಪ್ರಸಿದ್ಧವಾದ ವಿಡಿಯೋ ಗೇಮ್ ಆಗಿದೆ.
21ನೇ ಶತಮಾನದ ಆರಂಭದಲ್ಲಿ ಇಂಟರ್‌ನೆಟ್ಟನ್ನು ಬಳಸುವವರ ಸಂಖ್ಯೆ ಈಗಿನಂತೆ ಇರಲಿಲ್ಲ. ಆನ್‌ಲೈನ್ ಗೇಮ್‌ಗಳ ಪರಿಚಯವೂ ಜನರಿಗೆ ಅಷ್ಟಾಗಿ ಇರಲಿಲ್ಲ. ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದದ್ದು ಲ್ಯಾನ್(ಐಂಓ). ಅಂದರೆ ಲೋಕಲ್ ಏರಿಯಾ ನೆಟ್‌ವರ್ಕ್. ಪಾರ್ಟಿಗಳಲ್ಲಿ ಜೊತೆ ಸೇರುತ್ತಿದ್ದ ಆಟಗಾರರು ತಮ್ಮ ಸ್ವಂತ ಕಂಪ್ಯೂಟರ್‌ಗಳನ್ನು ತಂದು, ಲೋಕಲ್ ಏರಿಯಾ ನೆಟ್‌ವರ್ಕ್ ಮೂಲಕ ರಾತ್ರಿಯಿಡೀ ವಿಡಿಯೋ ಗೇಮ್ ಆಡುತ್ತಿದ್ದರು. ಇಂತಹ ಪಾರ್ಟಿಗಳಲ್ಲಿ ಸದ್ದು ಮಾಡಿದ್ದು ಕೌಂಟರ್ ಸ್ಟ್ರೈಕ್ ಎನ್ನುವ ಆಟ. ಇದರಲ್ಲಿ ಆಟಗಾರರು ಭಯೋತ್ಪಾದಕರು ಅಥವಾ ಭಯೋತ್ಪಾದನಾ ವಿರೋಧಿ ಘಟಕದ ಸದಸ್ಯರ ಪಾತ್ರವನ್ನು ವಹಿಸುತ್ತಾರೆ. ಒಬ್ಬರನ್ನೊಬ್ಬರು ಕೊಲ್ಲಲು ಯುದ್ಧತಂತ್ರಗಳನ್ನು ಬಳಸುತ್ತಾರೆ. ಈ ಗೇಮ್ ಭಯೋತ್ಪಾದಕರ ಕುರಿತಾಗಿ ಇದ್ದ ಕಾರಣಕ್ಕೆ ಒಂದಷ್ಟು ವಿವಾದಕ್ಕೂ ಒಳಗಾಯಿತು.
ಇಂಟರ್‌ನೆಟ್ ಬಳಕೆ ಹೆಚ್ಚಾದಂತೆ ಆನ್‌ಲೈನ್ ವಿಡಿಯೋ ಗೇಮಿಂಗ್ ಜನಪ್ರಿಯವಾಯಿತು. ತಂತ್ರಜ್ಞಾನದ ಬಳಕೆಯಿಂದ ಉತ್ತಮ ಗ್ರಾಫಿಕ್ಸ್ ತಂತ್ರಜ್ಞಾನಗಳು ವಿಡಿಯೋ ಗೇಮ್ ಪ್ರಪಂಚವನ್ನು ಮತ್ತಷ್ಟು ಉತ್ತಮಗೊಳಿಸಿದವು. ಓಪನ್ ವರ್ಲ್ಡ್ ಆಟಗಳನ್ನು ಪರಿಚಯಿಸಲಾಯಿತು. ಇದರಲ್ಲಿ ಆಟಗಾರರು ಕಾಲ್ಪನಿಕ ಪ್ರಪಂಚಗಳನ್ನು ತಮ್ಮದೇ ಆದ ರೀತಿಯಲ್ಲಿ ಹುಡುಕುತ್ತಾರೆ. ಆಟಗಾರ ತಾನು ಸಾಗಬೇಕಾದ ದಾರಿಯನ್ನು ಮುಕ್ತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ. ಈ ಗೇಮಿಂಗ್ ಪರಿಕಲ್ಪನೆಯನ್ನು ‘ಸ್ಯಾಂಡ್‌ಬಾಕ್ಸ್’ ಎಂದು ಕರೆಯಲಾಗುತ್ತದೆ.
2010ನೇ ಇಸವಿಯ ನಂತರದ ಕಾಲಘಟ್ಟ ವಿಡಿಯೋ ಗೇಮ್‌ಗಳ ಕ್ಷೇತ್ರದಲ್ಲಿ ಯಾರೂ ಊಹಿಸಲಾಗದ ಬದಲಾವಣೆಯನ್ನು, ಬೆಳವಣಿಗೆಯನ್ನು ಹುಟ್ಟುಹಾಕಿದೆ. ಎಲ್ಲಿಯಾದರೂ, ಯಾವುದೇ ಸಮಯದಲ್ಲಿಯೂ ಗೇಮ್ ಆಡಬಹುದಾಗಿದೆ. ವಿಡಿಯೋ ಗೇಮ್‌ಗಳು ಶತಕೋಟಿ ಡಾಲರ್‌ಗಳ ವ್ಯವಹಾರವಾಗಿ ಬದಲಾಗಿವೆ. ಚಲನಚಿತ್ರ ಮತ್ತು ಸಂಗೀತ ಉದ್ಯಮಕ್ಕಿಂತಲೂ ಹೆಚ್ಚಿನ ಲಾಭ ಈ ಕ್ಷೇತ್ರದಲ್ಲಿದೆ. ಹೆಚ್ಚಿನ ಜನರು ನಿಯಮಿತವಾಗಿ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದಾರೆ. ಕೇವಲ ಮಕ್ಕಳು, ಯುವಕ- ಯುವತಿಯರು ಮಾತ್ರವೇ ವಿಡಿಯೋ ಗೇಮ್ ಆಡುತ್ತಿದ್ದ ದಿನಗಳು ಕಳೆದುಹೋಗಿವೆ. ವಯಸ್ಸಾದ ಜನರು ತಮ್ಮ ಆಸಕ್ತಿಗೆ ತಕ್ಕಂತಹ ಗೇಮ್‌ಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಮನರಂಜನೆ ನೀಡುವ ಗೇಮ್‌ಗಳು ಮಾತ್ರವಲ್ಲ, ನಮ್ಮ ಬುದ್ಧಿಶಕ್ತಿಗೆ ಠಕ್ಕರ್ ಕೊಡುವ ಗೇಮ್‌ಗಳೂ ಸಾಕಷ್ಟಿವೆ. ವಿಡಿಯೋ ಗೇಮ್ ಆಡುವವರು ತಾವು ಆಟವಾಡುವುದನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವ ಅವಕಾಶವೂ ಇದೆ. ಆಟದ ವಿವರಣೆಯನ್ನು ಒದಗಿಸುವ, ಧ್ವನಿ ರೂಪದಲ್ಲಿ ಸಲಹೆ ನೀಡುವ ಅತ್ಯಂತ ಉತ್ಕೃಷ್ಟ ಸೌಲಭ್ಯಗಳೂ ಇವೆ. ರೆಕಾರ್ಡ್ ಮಾಡಿಕೊಂಡ ಗೇಮ್‌ನ ವಿಡಿಯೋ ದೃಶ್ಯಾವಳಿಯನ್ನು ಯೂಟ್ಯೂಬ್‌ನಲ್ಲಿ ಹಾಕುವುದರಿಂದ ಲಕ್ಷಾಂತರ ಜನ ಅದನ್ನು ನೋಡುವಂತಾಗಿದೆ.
ಭಾರತದಲ್ಲಿ ಗೇಮಿಂಗ್ ಉದ್ಯಮ
ಭಾರತದಲ್ಲಿ ವಿಡಿಯೋ ಗೇಮಿಂಗ್ ಒಂದು ಉದಯೋನ್ಮುಖ ಮಾರುಕಟ್ಟೆಯಾಗಿದೆ. ಭಾರತವು ಆನ್‌ಲೈನ್ ಗೇಮಿಂಗ್‌ನಲ್ಲಿ ಒಳ್ಳೆಯ ಬೆಳವಣಿಗೆಯನ್ನು ಕಾಣುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಗೇಮಿಂಗ್ ಉದ್ಯಮ ಉನ್ನತ ಸ್ಥಿತಿಯಲ್ಲಿರುವುದು ಸಂತಸದ ಸಂಗತಿ. 2019ರಲ್ಲಿ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯು 6,200 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಸುಮಾರು 300 ಮಿಲಿಯನ್ ಗೇಮರ್‌ಗಳು ಇದ್ದಾರೆ. ವಿಶ್ವದ ಅಗ್ರ ಐದು ಮೊಬೈಲ್ ಗೇಮಿಂಗ್ ಮಾರುಕಟ್ಟೆಗಳಲ್ಲಿ ಭಾರತವೂ ಒಂದು. 2022ರ ಹೊತ್ತಿಗೆ ವಿಡಿಯೋ ಗೇಮ್ ಆಡುವವರ ಸಂಖ್ಯೆ 510 ಮಿಲಿಯನ್‌ಗಳಷ್ಟು ಇರಲಿದೆ ಎಂಬ ಊಹೆ ತಜ್ಞರದ್ದು.
ಭಾರತದಲ್ಲಿ ವಿಡಿಯೋ ಗೇಮ್ ಆಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದಾಗಿ ಪ್ರಪಂಚದ ಪ್ರಸಿದ್ಧ ವಿಡಿಯೋ ಗೇಮ್ ಕಂಪನಿಗಳು ಭಾರತದ ಕಡೆಗೆ ಮುಖ ಮಾಡಿವೆ. ಭಾರತದಲ್ಲಿ ಇನ್ವೆಸ್ಟ್ ಮಾಡಲು ಆಸಕ್ತಿ ತೋರಿಸುತ್ತಿವೆ. ಯೂಬಿಸಾಫ್ಟ್, ಮೈಕ್ರೋಸಾಫ್ಟ್ ಗೇಮ್ಸ್ ಮೊದಲಾದ ಜಗತ್ಪ್ರಸಿದ್ಧ ಗೇಮ್ ಸ್ಟುಡಿಯೋಗಳು ಭಾರತದಲ್ಲಿ ಕಚೇರಿ ಆರಂಭಿಸಿವೆ. ಭಾರತದ್ದೇ ಆಗಿರುವ ಗೇಮ್ ಸ್ಟುಡಿಯೋಗಳು ಸಹ ಬೆಳೆಯುತ್ತಿವೆ. ಗೇಮಿಂಗ್ ಕುರಿತಾಗಿ ಜನರ ಆಸಕ್ತಿ ಹೆಚ್ಚುತ್ತಲೇ ಇದೆ.
ಒಂದು ಕಾಲಕ್ಕೆ ಭಾರತದಲ್ಲಿ ವಿಡಿಯೋ ಗೇಮ್‌ಗಳು ಲಭ್ಯವಿದ್ದದ್ದು ವಿಡಿಯೋ ಗೇಮ್ ಪಾರ್ಲರ್‌ಗಳಲ್ಲಿ ಮಾತ್ರ. ಗೇಮ್ ಆಡಬೇಕಾದರೆ ಮೆಷಿನ್ ಒಂದಕ್ಕೆ ನಾಣ್ಯವನ್ನು ಹಾಕಬೇಕಿತ್ತು. ನಾಣ್ಯ ಹಾಕಿದಂತೆಲ್ಲಾ ಆಡುವ ಅವಕಾಶ ಸಿಗುತ್ತಿತ್ತು. 1990ರ ದಶಕದಲ್ಲಿ ಗೇಮ್ ಕನ್ಸೋಲ್‌ಗಳ ಬಳಕೆ ಆರಂಭವಾಯಿತು. ಇಂತಹ ಗೇಮ್ ಕನ್ಸೋಲ್‌ಗಳು ಸೂಪರ್ ಮಾರಿಯೋ ಬ್ರದರ್ಸ್, ಕಾಂಟ್ರಾ ಇಂತಹ ಆಕರ್ಷಕ ಗೇಮ್‌ಗಳನ್ನು ಒಳಗೊಂಡಿದ್ದವು. ಈ ಗೇಮ್ ಕನ್ಸೋಲ್‌ಗಳಿಂದಾಗಿ ಜನರು ತಮ್ಮ ಮನೆಯೊಳಗೆ ಕುಳಿತು ವಿಡಿಯೋ ಗೇಮ್ ಆಡಬಹುದಿತ್ತು. ಇದು ಭಾರತದಲ್ಲಿ ವಿಡಿಯೋ ಗೇಮ್‌ಗಳ ಜನಪ್ರಿಯತೆ ಶುರುವಾದ ಕಾಲಘಟ್ಟ.
1995ರಿಂದ 2000ನೇ ಇಸವಿಯವರೆಗೆ ಪರ್ಸನಲ್ ಕಂಪ್ಯೂಟರ್‌ಗಳು ಹಾಗೂ ಸೋನಿ ಪ್ಲೇಸ್ಟೇಷನ್‌ಗಳ ಮಾರಾಟ ಅತ್ಯಂತ ಹೆಚ್ಚಾಗಿತ್ತು. ಹೆಚ್ಚಿನ ಜನರು ಗೇಮ್ ಕನ್ಸೋಲ್‌ಗಳ ಬದಲಿಗೆ ಪರ್ಸನಲ್ ಕಂಪ್ಯೂಟರ್‌ಗಳ ಮೂಲಕ ಗೇಮಿಂಗ್ ಮೋಜನ್ನು ಅನುಭವಿಸಲಾರಂಭಿಸಿದರು. 2000ನೇ ಇಸವಿಯ ನಂತರ ಜಾಸ್ತಿ ಜನರು ಮೊಬೈಲ್ ಬಳಸುವ ರೀತಿಯನ್ನು ತಿಳಿದುಕೊಂಡದ್ದರಿಂದ ಗೇಮಿಂಗ್‌ನಲ್ಲಿ ದೊಡ್ಡ ಬೆಳವಣಿಗೆ ಉಂಟಾಯಿತು. ಒಂದು ಕಾಲದಲ್ಲಿ ಸೈಬರ್ ಕೆಫೆಗಳು ಭಾರತದ ವಿಡಿಯೋ ಗೇಮ್ ಮಾರುಕಟ್ಟೆಯ ಬೆಳವಣಿಗೆಗೆ ಕೊಡುಗೆ ನೀಡಿವೆ. ಆದರೆ ಈಗ ಸೈಬರ್ ಕೆಫೆಗಳಲ್ಲಿ ವಿಡಿಯೋ ಗೇಮ್ ಆಡುವವರ ಸಂಖ್ಯೆ ಕಡಿಮೆಯಾಗಿದ್ದು, ಹೆಚ್ಚಿನ ಜನರು ಮೊಬೈಲ್ ಇಲ್ಲವೇ ತಮ್ಮ ಮನೆಯ ಕಂಪ್ಯೂಟರ್‌ಗಳಿಂದಲೇ ಗೇಮ್ ಆಡುತ್ತಿದ್ದಾರೆ. ಈಗ ಭಾರತದಲ್ಲಿ ವಿಡಿಯೋ ಗೇಮ್ ಸ್ಟುಡಿಯೋಗಳು ಹೆಚ್ಚಾಗಿ ಸ್ಥಾಪನೆ ಆಗುತ್ತಿವೆ. 2009ರಲ್ಲಿ ಭಾರತದಲ್ಲಿದ್ದ ಗೇಮ್ ಸ್ಟುಡಿಯೋಗಳ ಸಂಖ್ಯೆ 15. ಈಗ 275 ಸ್ಟುಡಿಯೋಗಳಿವೆ. 15,000 ಗೇಮ್ ಡೆವಲಪರ್‌ಗಳು ಜನರಿಗೆ ಮನರಂಜನೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ.
ಭಾರತದಲ್ಲಿಯೇ ಸಂಪೂರ್ಣವಾಗಿ ರಚಿಸಲಾದ ಮೊದಲ ವಿಡಿಯೋ ಗೇಮ್ ಹನುಮಾನ್ ಬಾಯ್ ವಾರಿಯರ್. ಹನುಮಂತ ದೇವರ ಕಥೆಯನ್ನು ಆಧರಿಸಿ ಈ ಗೇಮನ್ನು ತಯಾರಿಸಲಾಗಿದೆ. ಈ ಆಟವನ್ನು ಅಭಿವೃದ್ಧಿಪಡಿಸಿದ್ದು ಹೈದರಾಬಾದ್‌ನಲ್ಲಿರುವ ‘ಅರೋನಾ ಟೆಕ್ನಾಲಜೀಸ್ ಲಿಮಿಟೆಡ್’ ಗೇಮಿಂಗ್ ಸ್ಟುಡಿಯೋ. ಬೆಂಗಳೂರು ಮೂಲದ ‘ಟೆಂಟ್‌ವರ್ಕ್ಸ್ ಇಂಟರಾಕ್ಟಿವ್’ ಕಂಪೆನಿ ಭಾರತದ ಮೊದಲ ಕಂಪ್ಯೂಟರ್ ಗೇಮ್ ‘ಸಿಟಿ ಬ್ಲಾಕ್ ಬಿಲ್ಡರ್’ನ್ನು ತಯಾರಿಸಿದೆ. ಈ ಗೇಮ್ ‘ಕಲ್ಚರ್ಡ್ ವಲ್ಚರ್ಸ್ ಮ್ಯಾಗಝಿ಼ನ್’ನ ಪ್ರಶಸ್ತಿಯನ್ನೂ ಪಡೆದಿದೆ. ‘ಓಗ್ರೆ ಹೆಡ್’ ಸ್ಟುಡಿಯೋ 2017ರಲ್ಲಿ ತಯಾರಿಸಿದ ‘ಅಸುರ’ ಗೇಮನ್ನು ಭಾರತದವರು ಮಾತ್ರ ಅಲ್ಲ, ಅಮೇರಿಕಾ, ಚೀನಾ ಮತ್ತು ಜಪಾನ್ ದೇಶಗಳ ಜನರೂ ಇಷ್ಟಪಟ್ಟಿದ್ದಾರೆ. 2017ರ ‘ನ್ಯಾಸ್ಕಾಮ್ ಗೇಮ್ ಡೆವಲಪ್‌ಮೆಂಟ್ ಕಾನ್ಫರೆನ್ಸ್’ನಲ್ಲಿ ‘ವರ್ಷದ ಗೇಮ್’ ಪ್ರಶಸ್ತಿಯನ್ನು ಇದು ಪಡೆದುಕೊಂಡಿದೆ.
‘ಹೋಲಿ ಕೌ ಪ್ರೊಡಕ್ಷನ್ಸ್’ ಹಾಗೂ ‘ನೋಡಿಂಗ್ ಹೆಡ್ಸ್ ಗೇಮ್ಸ್’- ಈ ಎರಡು ಗೇಮ್ ಸ್ಟುಡಿಯೋಗಳು ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಗೇಮ್‌ಗಳನ್ನು ತಯಾರಿಸುತ್ತಿವೆ. ‘ನೋಡಿಂಗ್ ಹೆಡ್ಸ್ ಗೇಮ್ಸ್’ ಬಿಡುಗಡೆ ಮಾಡಿದ ‘ರಾಜಿ: ಆ್ಯನ್ ಎನಿಶಿಯೆಂಟ್ ಎಪಿಕ್’ ಎನ್ನುವ ಗೇಮ್ ಭಾರತದ ಜನಪದದಿಂದ ಪ್ರಭಾವ ಪಡೆದಿದೆ. ಈ ಗೇಮ್‌ನ್ನು ಜಗತ್ತಿನ ಹಲವಾರು ಜನ ಇಷ್ಟಪಟ್ಟಿದ್ದಾರೆ.
ಗುಜರಾತ್ ಮೂಲದ ಗೇಮಿಂಗ್ ಸ್ಟುಡಿಯೋ ಆಗಿರುವ ‘ಸ್ಟುಡಿಯೋ ಓಲಿಯೋಮಿಂಗಸ್’ ಭಾರತದ ಇತಿಹಾಸ ಮತ್ತು ರಾಜಕೀಯದ ಬಗ್ಗೆ ಕಾಮೆಂಟ್ ಮಾಡುವ ವಿಡಿಯೋ ಗೇಮ್‌ಗಳನ್ನು ರಚಿಸುತ್ತದೆ. ಲೀನಾ ಕೇಜ್ರಿವಾಲ್ ಮತ್ತು ಸತ್ಯಜಿತ್ ಚಕ್ರವರ್ತಿ ನಿರ್ಮಿಸಿದ ‘ಮಿಸ್ಸಿಂಗ್- ಗೇಮ್ ಫಾರ್ ಎ ಕಾಸ್’ ಇದು ರೋಲ್ ಪ್ಲೇಯಿಂಗ್ ವಿಡಿಯೋ ಗೇಮ್ ಆಗಿದೆ. ಈ ಗೇಮ್‌ನಲ್ಲಿ ಆಟಗಾರರು ಮಾನವ ಕಳ್ಳಸಾಗಣೆಗೊಳಗಾದವರ ಜೀವನವನ್ನು ಆಟದ ಮೂಲಕವೇ ತಿಳಿದುಕೊಳ್ಳಲು ಸಾಧ್ಯವಿದೆ. ಮಾನವ ಕಳ್ಳಸಾಗಣೆ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುವುದಕ್ಕಾಗಿಯೇ ಈ ವಿಡಿಯೋ ಗೇಮನ್ನು ರಚಿಸಲಾಗಿದೆ. ಸುಮಾರು 5 ಲಕ್ಷ ಜನರು ಈ ಗೇಮನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಭಾರತದ ವಿಡಿಯೋ ಗೇಮ್‌ಗಳು ಮನರಂಜನೆಯನ್ನು ಮಾತ್ರವಲ್ಲ, ಇಡೀ ಜಗತ್ತಿಗೆ ಒಳ್ಳೆಯ ಸಂದೇಶವನ್ನೂ ನೀಡುತ್ತಿವೆ ಎನ್ನುವುದು ಸತ್ಯ.
21ನೇ ಶತಮಾನದ ಆರಂಭದಲ್ಲಿ ಇಂಟರ್‌ನೆಟ್ಟನ್ನು ಬಳಸುವವರ ಸಂಖ್ಯೆ ಈಗಿನಂತೆ ಇರಲಿಲ್ಲ. ಆನ್‌ಲೈನ್ ಗೇಮ್‌ಗಳ ಪರಿಚಯವೂ ಜನರಿಗೆ ಅಷ್ಟಾಗಿ ಇರಲಿಲ್ಲ. ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದದ್ದು ಲ್ಯಾನ್(ಐಂಓ). ಅಂದರೆ ಲೋಕಲ್ ಏರಿಯಾ ನೆಟ್‌ವರ್ಕ್. ಪಾರ್ಟಿಗಳಲ್ಲಿ ಜೊತೆ ಸೇರುತ್ತಿದ್ದ ಆಟಗಾರರು ತಮ್ಮ ಸ್ವಂತ ಕಂಪ್ಯೂಟರ್‌ಗಳನ್ನು ತಂದು, ಲೋಕಲ್ ಏರಿಯಾ ನೆಟ್‌ವರ್ಕ್ ಮೂಲಕ ರಾತ್ರಿಯಿಡೀ ವಿಡಿಯೋ ಗೇಮ್ ಆಡುತ್ತಿದ್ದರು. ಇಂತಹ ಪಾರ್ಟಿಗಳಲ್ಲಿ ಸದ್ದು ಮಾಡಿದ್ದು ಕೌಂಟರ್ ಸ್ಟ್ರೈಕ್ ಎನ್ನುವ ಆಟ.
ಭಾರತದ ಗೇಮಿಂಗ್ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕಂಪೆನಿಗಳು ಹಲವು. ಹೈಪರ್‌ಲಿಂಕ್ ಇನ್ಫೋಸಿಸ್ಟಮ್ ಕಂಪೆನಿ 2ಡಿ ಮತ್ತು 3ಡಿ ಗೇಮ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಂಪ್ಯೂಟರ್ ಹಾಗೂ ಮೊಬೈಲ್‌ಗಾಗಿ ಅತ್ಯುತ್ತಮ ಆ್ಯಪ್‌ಗಳನ್ನು ತಯಾರಿಸುತ್ತಿದೆ. ಜನರ ಜೊತೆಗೆ ಒಳ್ಳೆಯ ಕಮ್ಯೂನಿಕೇಶನ್, ಟೈಮ್ ಕೀಪ್ ಅಪ್, ಒಳ್ಳೆಯ ಸರ್ವಿಸ್ ಮೊದಲಾದವು ಈ ಕಂಪೆನಿಯ ಧನಾತ್ಮಕ ಅಂಶಗಳು. ಭಾರತೀಯ ಮೂಲದ ಮಲ್ಟಿ ನ್ಯಾಷನಲ್ ಕಂಪೆನಿ ಆಗಿರುವ ಇನ್ಫೋಸಿಸ್ ಲಿಮಿಟೆಡ್ ವಿಡಿಯೋ ಗೇಮ್ ಆ್ಯಪ್‌ಗಳನ್ನು ತಯಾರಿಸಲು ಬೇರೆ ದೇಶಗಳ ಕಂಪೆನಿಗಳಿಗೆ ಸಹಕಾರ ನೀಡುತ್ತದೆ. ಕಂಪನಿಯು ಜಗತ್ತಿನ ತುಂಬೆಲ್ಲಾ 123 ವಿಡಿಯೋ ಗೇಮ್ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. 3ಡಿ ಗೇಮ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ ಅನುಭವಿ ಗೇಮ್ ಡೆವಲಪರ್‌ಗಳು ಈ ಕಂಪೆನಿಯಲ್ಲಿದ್ದಾರೆ. ಝೆನ್ಸಾರ್ ಟೆಕ್ನಾಲಜೀಸ್ ಎನ್ನುವುದು 1991ರಲ್ಲಿ ಶುರುವಾದ ಪ್ರಮುಖ ಮೊಬೈಲ್ ಆ್ಯಪ್ ಮತ್ತು ವೆಬ್ ಡೆವಲಪ್‌ಮೆಂಟ್ ಕಂಪೆನಿ. ಈ ಕಂಪನಿ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, 20 ದೇಶಗಳಲ್ಲಿ ಇದರ ಕಚೇರಿ ಇದೆ. ಎಫ್.ಜಿ. ಫ್ಯಾಕ್ಟರಿ ಕಂಪೆನಿಯು ಬೇರೆ ಕೆಲವು ವೆಬ್ ಸೇವೆಗಳ ಜೊತೆಗೆ ಗೇಮ್ ಮನರಂಜನೆಯನ್ನೂ ನೀಡುತ್ತಿದೆ. 2ಡಿ, 3ಡಿ, ಗ್ರಾಫಿಕ್ಸ್, ಆ್ಯನಿಮೇಷನ್ ಗೇಮ್‌ಗಳ ತಯಾರಿಗಾಗಿ 300 ಯೋಜನೆಗಳನ್ನು ಆರಂಭಿಸಿದೆ. ಭಾರತದ ಅತ್ಯಂತ ಪ್ರಸಿದ್ಧ ಐಟಿ ಕಂಪನಿಗಳಲ್ಲಿ ಒಂದಾಗಿರುವ ಟಿ.ಸಿ.ಎಸ್. ಕಂಪನಿ ಮೊಬೈಲ್ ಆ್ಯಪ್‌ಗಳು, ಗೇಮ್ ಡೆವಲಪ್‌ಮೆಂಟ್, ವಿ.ಆರ್. ಗೇಮ್‌ಗಳು, ಕ್ಲೌಡ್ ಸೊಲ್ಯೂಷನ್‌ಗಳು, ಎಂಟರ್‌ಪ್ರೈಸ್ ಅಪ್ಲಿಕೇಶನ್‌ಗಳು, ಆಟೊಮೇಷನ್ ಮತ್ತು ಎ.ಐ. ಈ ತರಹದ ಸೇವೆಗಳನ್ನು ಒದಗಿಸುತ್ತಿದೆ. 1968ರಲ್ಲಿ ಸ್ಥಾಪನೆಗೊಂಡ ಕಂಪೆನಿ ಈಗ 46 ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಮಹೀಂದ್ರಾ ಗ್ರೂಪ್‌ನ ಅಂಗಸಂಸ್ಥೆ ಟೆಕ್ ಮಹೀಂದ್ರಾ. ಹೆಚ್ಚಿನ ಎಲ್ಲಾ ಕೈಗಾರಿಕೆಗಳಿಗೆ ಐಟಿ ಸೇವೆ ನೀಡುತ್ತಿದೆ. ಈ ಕಂಪನಿಯ ಉದ್ಯೋಗಿಗಳ ಸಂಖ್ಯೆ 1 ಲಕ್ಷದ 25 ಸಾವಿರ. ಯುನಿಮಸ್ ಸ್ಟುಡಿಯೋಸ್ 2008ರಲ್ಲಿ ಆರಂಭಗೊಂಡ ಕಂಪೆನಿ. ಜನರ ಆಸಕ್ತಿ- ಬೇಡಿಕೆಗಳಿಗೆ ಸರಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ. ಟಿಮುಝ್, ಎಚ್ ಡಾಟಾ ಸಿಸ್ಟಮ್ಸ್ ಕಂಪೆನಿಗಳೂ ಕೂಡಾ ಗೇಮ್‌ಗಳನ್ನು ತಯಾರಿಸುತ್ತಿದ್ದು, ಕ್ಯಾಶ್ಯುವಲ್ ಗೇಮ್ಸ್, ಪಝಲ್ಸ್, ರೇಸಿಂಗ್ ಗೇಮ್ಸ್, ಆಕ್ಷನ್- ಅಡ್ವೆಂಚರಸ್ ಗೇಮ್ಸ್, ಸೈಂಟಿಫಿಕ್ ಗೇಮ್‌ಗಳನ್ನು ತಯಾರಿಸುತ್ತಿವೆ.
ಕೆಲವು ಜನಪ್ರಿಯ ವಿಡಿಯೋ ಗೇಮ್‌ಗಳು
ಗೂಗಲ್‌ನಲ್ಲಿ ಇಂದಿಗೂ ನಂಬರ್ 1 ಗೇಮ್ ಯಾವುದು ಎಂದು ಸರ್ಚ್ ಮಾಡಿದರೆ ಸಿಗುವ ಉತ್ತರ ‘ಮೈನ್ ಕ್ರಾಫ್ಟ್’. ಇದು 3ಡಿ ವಿಡಿಯೋ ಗೇಮ್. ಇದನ್ನು ಅಭಿವೃದ್ಧಿಪಡಿಸಿದ್ದು ‘ಮೊಜಾಂಗ್ ಸ್ಟುಡಿಯೋಸ್’. ಅಭಿವೃದ್ಧಿಪಡಿಸಿದವರು ಸ್ವೀಡನ್ ದೇಶದ ಮಾರ್ಕಸ್ ಪರ್ಸನ್. ಮೈನ್ ಕ್ರಾಫ್ಟ್‌ನ ಮೂಲ ಆವೃತ್ತಿಯನ್ನು ಜಾವಾ ಆವೃತ್ತಿ ಎಂದು ಕರೆಯಲಾಗುತ್ತದೆ. ಇದನ್ನು ಮೇ 2009ರಲ್ಲಿ ಅಭಿವೃದ್ಧಿಪಡಿಸಲಾಯಿತು. ಗೇಮ್ ಹೇಗಿದೆ ಎಂದು ಪರೀಕ್ಷಿಸುವ ಆವೃತ್ತಿ ಬಿಡುಗಡೆ ಆದದ್ದು ಯೂಟ್ಯೂಬ್‌ನಲ್ಲಿ. ಅಂತಿಮ ಆವೃತ್ತಿ ಬಿಡುಗಡೆ ಆದದ್ದು ನವೆಂಬರ್ 2011ರಲ್ಲಿ. ಪ್ರಪಂಚದ ಮೊದಲ ವಿಡಿಯೋ ಗೇಮ್ ಶುರು ಆದಂದಿನಿಂದ ಇಂದಿನವರೆಗೂ ಅತೀ ಹೆಚ್ಚು ಮಾರಾಟವಾದ ವೀಡಿಯೊ ಗೇಮ್ ಯಾವುದು ಎಂದರೆ ಅದಕ್ಕೂ ಉತ್ತರ- ಮೈನ್ ಕ್ರಾಫ್ಟ್. ಈ ಗೇಮ್‌ನ 238 ಮಿಲಿಯನ್ ಕಾಪಿಗಳು ಮಾರಾಟವಾಗಿವೆ. ಸುಮಾರು 140 ಮಿಲಿಯನ್ ಜನರು ಪ್ರತೀ ತಿಂಗಳು ಇದನ್ನು ಬಳಸುತ್ತಿದ್ದಾರೆ.
ಪ್ರಪಂಚಕ್ಕೆ ಕ್ರಿಕೆಟನ್ನು ಪರಿಚಯಿಸಿದ್ದು ಇಂಗ್ಲೆಂಡ್. ಆದರೆ ಗೇಮಿಂಗ್ ಪ್ರಪಂಚಕ್ಕೆ ಕ್ರಿಕೆಟನ್ನು ಪರಿಚಯಿಸಿದ್ದು ಭಾರತ. ‘ವರ್ಲ್ಡ್ ಕ್ರಿಕೆಟ್ ಚಾಂಪಿಯನ್‌ಶಿಪ್’ ಎನ್ನುವುದು 3ಡಿ ಕ್ರಿಕೆಟ್ ಮೊಬೈಲ್ ಆಟಗಳ ಸರಣಿಯಾಗಿದೆ. ಇದನ್ನು ಅಭಿವೃದ್ಧಿಪಡಿಸಿದ್ದು ಚೆನ್ನೈ ಮೂಲದ ‘ನೆಕ್ಸ್ಟ್ ವೇವ್ ಮಲ್ಟಿಮೀಡಿಯಾ’ ಕಂಪೆನಿ. ಇದನ್ನು 2011ರಲ್ಲಿ ಬಿಡುಗಡೆ ಮಾಡಲಾಯಿತು. ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್ ಮಾಡಲಾದ ಕ್ರಿಕೆಟ್ ಗೇಮ್ ಇದು.
2011ರಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ‘ಎಲ್ಡರ್ ಸ್ಕ್ರಾಲ್ಸ್ ವಿ: ಸ್ಕೈರಿಮ್’ ಇದು ಆ್ಯಕ್ಷನ್ ರೋಲ್- ಪ್ಲೇಯಿಂಗ್ ವಿಡಿಯೋ ಗೇಮ್ ಆಗಿದೆ. ಇದು ಸರಣಿ ರೂಪದ ಗೇಮ್ ಆಗಿದೆ. ಈ ಆಟದಲ್ಲಿ ಆಟಗಾರ ಡ್ರ್ಯಾಗನ್ ಅನ್ನು ಹುಡುಕಬೇಕು ಮತ್ತು ಸೋಲಿಸಬೇಕು. ಡ್ರ್ಯಾಗನ್ ಇಡೀ ಜಗತ್ತನ್ನೇ ನಾಶಮಾಡುವ ಉದ್ದೇಶದಲ್ಲಿದೆ. ಅಂತಹ ಡ್ರ್ಯಾಗನನ್ನು ಕೊಂದು, ಜಗತ್ತನ್ನು ಉಳಿಸುವುದು ಆಟಗಾರರ ಮುಂದಿರುವ ಸವಾಲು. ‘ಬೆಥೆಸ್ಡಾ ಸ್ಟುಡಿಯೋಸ್’ ಅಭಿವೃದ್ಧಿಪಡಿಸಿದ ಈ ಗೇಮ್‌ನ 30 ಮಿಲಿಯನ್ ಕಾಪಿಗಳು ಮಾರಾಟವಾಗಿವೆ.
ಮಹಾರಾಷ್ಟ್ರದ ‘ನೋಡಿಂಗ್ ಹೆಡ್ಸ್ ಗೇಮ್ಸ್’ ಕಂಪೆನಿ ಅಭಿವೃದ್ಧಿಪಡಿಸಿದ ‘ರಾಜಿ’ ಎನ್ನುವ ಗೇಮ್ ಬಗ್ಗೆ ನಾವು ನೀವೆಲ್ಲ ತಿಳಿದುಕೊಳ್ಳಲೇಬೇಕು. ಹಿಂದೂ ಪುರಾಣವನ್ನು ಮೂಲವಾಗಿಟ್ಟುಕೊಂಡು ತಯಾರಿಸಲ್ಪಟ್ಟ ಗೇಮ್ ಇದು. ಬಿಡುಗಡೆ ಆದದ್ದು 2020ರಲ್ಲಿ. ಆಧುನಿಕತೆ ಹಾಗೂ ಪುರಾಣಗಳ ಸಮ್ಮಿಶ್ರಣವೇ ಈ ಆಟ. ರಾಜಿ ಹಲವಾರು ತೊಂದರೆಗಳನ್ನು ಎದುರಿಸಿ ದೇವರ ಸಹಾಯದಿಂದ ಅವೆಲ್ಲವುಗಳಿಂದಲೂ ಪಾರಾಗುವ ಕಥೆಯಿಂದ ಈ ಗೇಮ್ ಸ್ಫೂರ್ತಿ ಪಡೆದಿದೆ. ‘ದಿ ಗೇಮ್’ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ವಿಡಿಯೋ ಗೇಮ್ ಎನ್ನುವುದು ಇದರ ಹೆಗ್ಗಳಿಕೆ.
ಒಬ್ಬರೇ ವಿಡಿಯೋ ಗೇಮ್ ಆಡುವುದು ಬೋರ್. ನಾನು ನನ್ನ ಫ್ರೆಂಡ್ಸ್ ಜೊತೆ ಸೇರಿಕೊಂಡು ಆಟ ಆಡಬೇಕು ಎನ್ನುವ ಮನಸ್ಸು ನಮಗಿದ್ದರೆ ‘ಕೌಂಟರ್ ಸ್ಟ್ರೈಕ್: ಗ್ಲೋಬಲ್ ಒಫೆನ್ಸಿವ್’ ಆಟವನ್ನು ಆಡಬೇಕು. ಇದು ಮಲ್ಟಿ ಪ್ಲೇಯರ್ ಗೇಮ್ ಆಗಿದೆ. ಬಿಡುಗಡೆ ಆದದ್ದು 2012ರಲ್ಲಿ. ಈ ಗೇಮ್‌ನ ಆರಂಭದ ಮೂರು ಸರಣಿಗಳು ಯಶಸ್ವಿಯಾಗಿದ್ದು, ಇದು ನಾಲ್ಕನೇ ಸರಣಿ. ಇದೂ ಕೂಡಾ ಯಶಸ್ಸು ಕಂಡಿದೆ. ಈ ಗೇಮ್‌ನಲ್ಲಿ ಎರಡು ತಂಡಗಳು. ಒಂದು ತಂಡ ಭಯೋತ್ಪಾದಕರದ್ದು. ಇನ್ನೊಂದು ತಂಡ ಭಯೋತ್ಪಾದಕರನ್ನು ಕೊಲ್ಲುವವರದ್ದು. ಈ ಎರಡೂ ತಂಡದವರು ತಮ್ಮ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕು. ಜೊತೆಗೆ ತಮಗೆ ಯಾವ ಟಾಸ್ಕ್ ಇದೆಯೋ ಅದನ್ನು ಪೂರ್ತಿ ಮಾಡಬೇಕು. ಇದು ಆಟದ ರೀತಿ. ಹಲವಾರು ಜನ ಒಂದೇ ಸಮಯಕ್ಕೆ ಆಡಬಹುದಾದ ಈ ಗೇಮ್ ತಿಂಗಳಿಗೆ ಸುಮಾರು 11 ಮಿಲಿಯನ್ ಆಟಗಾರರ ಗಮನ ಸೆಳೆಯುತ್ತಿದೆ.
‘ಪಬ್ಜಿ’ ಆಟದ ಹೆಸರು ಕೇಳದವರು ಬಹುಶಃ ಯಾರೂ ಇಲ್ಲ. ‘ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್ಸ್’ ಎನ್ನುವ ಉದ್ದನೆಯ ಹೆಸರಿದ್ದರೂ ಪಬ್ಜಿ ಅನ್ನುವ ಪುಟ್ಟ ಹೆಸರೇ ಹೆಚ್ಚು ಪ್ರಸಿದ್ಧ. ಇದು ಆನ್‌ಲೈನ್ ಮಲ್ಟಿಪ್ಲೇಯರ್ ಬ್ಯಾಟಲ್ ರಾಯಲ್ ಗೇಮ್. ಅರ್ಥಮಾಡಿಕೊಳ್ಳಲು ಬಹಳ ಸರಳವಾದ ಆಟ. ಪ್ಯಾರಾಚೂಟನ್ನು ಬಳಸಿಕೊಂಡು ಪ್ರತಿ ಆಟಕ್ಕೆ ನೂರು ಆಟಗಾರರು ಯುದ್ಧಭೂಮಿಗೆ ಇಳಿಯುತ್ತಾರೆ ಮತ್ತು ಹೋರಾಡುತ್ತಾರೆ. ಶಸ್ತ್ರಾಸ್ತ್ರಗಳು ಮತ್ತು ಬೇರೆ ಸಾಧನಗಳನ್ನು ನಾವು ಪಡೆದುಕೊಳ್ಳಬಹುದು. ಧ್ವನಿಯ ಮೂಲಕ ಆಟಗಾರರಿಗೆ ಸೂಚನೆ ನೀಡುವ ಅವಕಾಶವೂ ಇದೆ. ಅತ್ಯಂತ ಜನಪ್ರಿಯವಾದ ಈ ಆಟವನ್ನು ಸಧ್ಯಕ್ಕೆ ಭಾರತದಲ್ಲಿ ನಿಷೇಧಿಸಲಾಗಿದೆ.
‘ಆ್ಯಂಗ್ರಿ ಬರ್ಡ್ಸ್’ ಎನ್ನುವುದು ‘ರೋವಿಯೊ ಎಂಟರ್‌ಟೈನ್‌ಮೆಂಟ್’ ರಚಿಸಿದ ಆ್ಯಕ್ಷನ್ ವಿಡಿಯೋ ಗೇಮ್. ಹಲವಾರು ಸರಣಿಗಳಲ್ಲಿ ನಿರ್ಮಾಣಗೊಂಡ ಆಟ. ರಿಲೀಸ್ ಆದದ್ದು 11 ಡಿಸೆಂಬರ್ 2009ರಲ್ಲಿ. ಈ ಇಸವಿಯಲ್ಲಿ ಹಲವು ಕಡೆಗಳಲ್ಲಿ ಹಂದಿ ಜ್ವರ ಇತ್ತು. ಈ ಕಾರಣಕ್ಕಾಗಿ ವಿಡಿಯೋ ಗೇಮ್ ಡೆವಲಪರ್ಸ್ ಹಂದಿಗಳನ್ನು ಈ ಗೇಮ್‌ನ ಪ್ರಮುಖ ಪಾತ್ರಗಳಾಗಿ ಬಳಸಿಕೊಂಡರು. ಮೊಟ್ಟೆಗಳನ್ನು ಹಸಿರು ಬಣ್ಣದ ಹಂದಿಗಳಿಂದ ಉಳಿಸಲು ಪ್ರಯತ್ನಿಸುವ, ಕೋಪಗೊಂಡ ಒಂಭತ್ತು ಪಕ್ಷಿಗಳ ಗುಂಪು ಆಟದ ಪ್ರಮುಖ ಆಕರ್ಷಣೆ. ಸ್ವಲ್ಪ ಹಾಸ್ಯಮಯ ಶೈಲಿಯಲ್ಲಿರುವ ಈ ಗೇಮ್ ಈ ಕಾರಣಕ್ಕೇ ಜನಪ್ರಿಯತೆ ಪಡೆದುಕೊಂಡಿದೆ. 300 ಕೋಟಿಗಿಂತಲೂ ಹೆಚ್ಚು ಡೌನ್‌ಲೋಡ್ ಆಗಿರುವುದು ಈ ಆಟದ ಜನಪ್ರಿಯತೆಗೆ ಸಾಕ್ಷಿ.
ಹೆಚ್ಚು ಕಡಿಮೆ ಆಂಗ್ರಿ ಬರ್ಡ್ಸ್ ಆಟದ ಹೆಸರಿನಂತೆಯೇ ಇರುವ ಆನ್‌ಲೈನ್ ಬ್ರೌಸರ್ ಗೇಮ್ ಒಂದಿದೆ. ಅದರ ಹೆಸರು ‘ಆ್ಯಂಗ್ರಿ ಬ್ರೈಡ್ಸ್’. ಒಂದು ವೇಳೆ ಈ ಹೆಸರನ್ನು ಕನ್ನಡಕ್ಕೆ ಅನುವಾದಿಸಿದರೆ ‘ಕೋಪಗೊಂಡ ವಧುಗಳು’ ಎಂದಾಗುತ್ತದೆ. ಹೌದು, ವರದಕ್ಷಿಣೆ ಕಿರುಕುಳದಿಂದ ನೊಂದ ವಧುಗಳನ್ನು ಕುರಿತಾದ ಗೇಮ್ ಇದು. ಭಾರತದಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ಎಚ್ಚರ ಮೂಡಿಸುವುದು ಇದರ ಉದ್ದೇಶ. ತಯಾರಿಸಿದ್ದು ಮ್ಯಾಟ್ರಿಮೋನಿ ವೆಬ್‌ಸೈಟ್ ಆಗಿರುವ ‘ಶಾದಿ.ಕಾಂ’ ಗೇಮ್‌ನ ಮೊದಲ ಪುಟದಲ್ಲಿ ಎಂಟು ಕೈಗಳ ಮಹಿಳೆಯ ಚಿತ್ರವಿದೆ. ದುರ್ಗಾದೇವಿಯಂತೆ ಕಾಣುವ ಮಹಿಳೆಯ ಚಿತ್ರದ ಕೆಳಗೆ ಎಲ್ಲರೂ ಯೋಚಿಸಬಹುದಾದ ಒಂದು ಬರಹ ಇದೆ- ‘ಮಹಿಳೆ ನಿಮಗೆ ಶಕ್ತಿ, ಕಾಳಜಿ ಮತ್ತು ಪ್ರೀತಿಯನ್ನು ನೀಡುತ್ತಾಳೆ; ವರದಕ್ಷಿಣೆ ಅಲ್ಲ’. ಈ ಆಟದಲ್ಲಿ ಆಟಗಾರರು ಹೆಚ್ಚು ವರದಕ್ಷಿಣೆ ಕೇಳುವ ಮದುವೆ ಗಂಡುಗಳಿಗೆ ಶೂಟ್ ಮಾಡಬೇಕು. ಆಟಗಾರ ಸರಿಯಾಗಿ ಶೂಟ್ ಮಾಡುತ್ತಾ ಹೋದಂತೆ ವರದಕ್ಷಿಣೆಯ ಮೊತ್ತ ಕಡಿಮೆ ಆಗತೊಡಗುತ್ತದೆ. ಈ ಮೊತ್ತ ಸೊನ್ನೆ ಆದಾಗ ಮುಂದಿನ ಲೆವೆಲ್ ಪ್ರವೇಶಿಸಲು ಸಾಧ್ಯ. ಈ ಗೇಮ್ ಮನರಂಜನೆಗಿಂತಲೂ ಹೆಚ್ಚಾಗಿ ವರದಕ್ಷಿಣೆಯ ಪಿಡುಗು ನಮ್ಮ ಸಮಾಜದಿಂದ ತೊಲಗಬೇಕೆಂಬ ಉದ್ದೇಶ ಹೊಂದಿದೆ.
ನಾವು ನೀವೆಲ್ಲ ಚಿಕ್ಕವರಿದ್ದಾಗಿನಿಂದಲೂ ಆಡುತ್ತಿದ್ದ ಆಟ ಲೂಡೋ. ಇದನ್ನು ಈಗ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಆಡಬಹುದು. ಈ ಸೌಲಭ್ಯವನ್ನು ಒದಗಿಸಿಕೊಟ್ಟಿರುವುದು ಮುಂಬಯಿಯ ‘ಗೇಮೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್’ ಎಂಬ ಸ್ಟುಡಿಯೋ. ‘ಲೂಡೋ ಕಿಂಗ್’ ಹೆಸರಿನ ಈ ಆಟ ನಮ್ಮಲ್ಲಿ ಅನೇಕರಿಗೆ ಬಾಲ್ಯದ ನೆನಪನ್ನು ತರುವುದಂತೂ ಖಂಡಿತ. ಫೆಬ್ರವರಿ 20, 2016ರಂದು ಬಿಡುಗಡೆ ಆದ ಇದು ಆ್ಯಪಲ್ ಆ್ಯಪ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ಈ ಎರಡರಲ್ಲೂ ‘ಟಾಪ್ ಫ್ರೀ ಗೇಮ್ಸ್’ ವಿಭಾಗದಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. 500 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದ ಮೊದಲ ಭಾರತೀಯ ಗೇಮಿಂಗ್ ಅಪ್ಲಿಕೇಶನ್ ಆಗಿದೆ. 30 ದೇಶಗಳಲ್ಲಿ ಆಡಲಾಗುವ, 14 ಭಾಷೆಗಳಲ್ಲಿ ಲಭ್ಯ ಇರುವ ಜನಪ್ರಿಯ ಆಟ ಇದು.
ಈಗಾಗಲೇ ಇರುವ ಗೇಮ್‌ಗಳು ನಮಗೆ ಬೇಡ. ನಾವೇ ವಿಡಿಯೋ ಗೇಮ್ ತಯಾರಿಸಬೇಕು. ಅದನ್ನು ನಾವು ಮಾತ್ರವಲ್ಲ, ಬೇರೆಯವರೂ ಆಡುವಂತಾಗಬೇಕು ಎನ್ನುವ ಇಚ್ಛೆ ನಮ್ಮದಾಗಿದ್ದರೆ ಅದಕ್ಕೂ ಅವಕಾಶ ಇದೆ. ‘ರಾಬ್ಲಾಕ್ಸ್’ ಎನ್ನುವುದು ಈ ರೀತಿಯಲ್ಲಿ ಗೇಮರ್‌ಗಳು ತಮ್ಮಿಷ್ಟದ ಆಟವನ್ನು ಕ್ರಿಯೇಟ್ ಮಾಡಲು ಅವಕಾಶ ಒದಗಿಸುತ್ತದೆ. ರಾಬ್ಲಾಕ್ಸ್ ಎನ್ನುವುದು ಆನ್‌ಲೈನ್ ಮಲ್ಟಿಪ್ಲೇಯರ್ ಪ್ಲಾಟ್‌ಫಾರ್ಮ್ ವ್ಯವಸ್ಥೆಯಾಗಿದೆ. ಇಲ್ಲಿ ಬಳಕೆದಾರರು ತಮ್ಮದೇ ಆದ ಆಟಗಳನ್ನು ಕ್ರಿಯೇಟ್ ಮಾಡಬಹುದು. ಇತರ ಬಳಕೆದಾರರು ಕ್ರಿಯೇಟ್ ಮಾಡಿದ ಗೇಮ್‌ಗಳನ್ನು ಆಡಬಹುದು. ರೇಸಿಂಗ್ ಆಟ ನಮಗಿಷ್ಟವಾಗಿದ್ದರೆ ಅದನ್ನು ರಚಿಸಬಹುದು. ಅಡ್ವೆಂಚರಸ್ ಆಗಿದ್ದರೆ ಆ ಬಗೆಯ ಆಟ. 100 ಮಿಲಿಯನ್ ಜನ ರಾಬ್ಲಾಕ್ಸ್‌ಗಳನ್ನು ಬಳಸುತ್ತಿದ್ದಾರೆ.
ವಿಡಿಯೋ ಗೇಮ್ ಖುಷಿಯನ್ನು ಮಾತ್ರವಲ್ಲ; ಅನ್ನವನ್ನೂ ಕೊಡುತ್ತದೆ
ನಮಗೆ ಏನು ಇಷ್ಟ ಇದೆಯೋ ಅದುವೇ ನಮ್ಮ ಉದ್ಯೋಗವೂ ಆಗಿಬಿಟ್ಟರೆ ಬಹಳ ಚೆನ್ನಾಗಿ ಕೆಲಸ ಮಾಡಬಹುದು. ನಮ್ಮ ಆಸಕ್ತಿಯ ಕ್ಷೇತ್ರದಲ್ಲಿಯೇ ದುಡಿಯುತ್ತಾ ನಮ್ಮ ಬದುಕನ್ನು ಕಟ್ಟಿಕೊಳ್ಳಬಹುದು. ವಿಡಿಯೋ ಗೇಮ್ ಉದ್ಯಮದಲ್ಲಿ ಹಲವು ಕೆಲಸಗಳಿವೆ.
ಆಟಗಳನ್ನು ತಯಾರು ಮಾಡುವುದು ಗೇಮ್ ಡಿಸೈನರ್‌ನ ಮುಖ್ಯ ಕೆಲಸ. ಗೇಮ್‌ನಲ್ಲಿ ಇರುವ ಎಲ್ಲಾ ಅಂಶಗಳನ್ನು ಸಂಯೋಜನೆ ಮಾಡಬೇಕು. ಅಂದರೆ ಗೇಮ್‌ನ ಸೆಟ್ಟಿಂಗ್, ನಿಯಮಗಳು, ಆಟದಲ್ಲಿ ಬರುವ ಮರ-ಗಿಡ, ಪ್ರಾಣಿಪಕ್ಷಿ ಈ ರೀತಿಯ ಗ್ರಾಫಿಕ್ಸ್‌ಗಳು, ಪಾತ್ರಗಳು, ವಾಹನಗಳು, ಶಸ್ತ್ರಾಸ್ತ್ರಗಳು ಈ ಎಲ್ಲವುಗಳ ವಿನ್ಯಾಸ ಮಾಡಬೇಕು. ಒಂದು ಒಳ್ಳೆಯ ವಿಡಿಯೋ ಗೇಮ್ ತಯಾರಾಗಬೇಕಾದರೆ ಗೇಮ್ ಡಿಸೈನರ್ ಅದನ್ನು ಮೊದಲೇ ತನ್ನ ಮನದಲ್ಲಿ ಕಲ್ಪಿಸಿಕೊಳ್ಳುತ್ತಾರೆ. ನಂತರ ತನ್ನ ಟೀಮ್ ಸಹಾಯ ಪಡೆದು ಆಟವನ್ನು ತಯಾರಿಸುತ್ತಾರೆ. ಗೇಮ್ ಡಿಸೈನರ್ ಆಗಬೇಕಾದರೆ ಗೇಮ್ ಡಿಸೈನ್‌ನಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಸೈನ್ನ್ಸ್‌ನಲ್ಲಿ ಬಿ.ಟೆಕ್. ಪದವಿ ಪಡೆದವರೂ ಕೂಡಾ ಗೇಮ್ ಡಿಸೈನರ್ ಆಗಬಹುದು.
ವಿಡಿಯೋ ಗೇಮ್ ಆರ್ಟಿಸ್ಟ್‌ಗಳು ಆಟದಲ್ಲಿ ಬರುವ ಬೇರೆ ಬೇರೆ ಪಾತ್ರಗಳ ಚಿತ್ರ ಬಿಡಿಸುತ್ತಾರೆ. ಗೇಮ್ ಡಿಸೈನರ್‌ನ ಕಲ್ಪನೆಯನ್ನು ಚಿತ್ರದ ರೂಪದಲ್ಲಿ ತರುವುದು ವಿಡಿಯೋ ಗೇಮ್ ಕಲಾವಿದರು. ಚಿತ್ರಗಳ ಸರಣಿಯನ್ನು ಸಾಫ್ಟ್‌ವೇರ್ ಮೂಲಕ ಬಿಡಿಸಬೇಕು.
ಆಟದಲ್ಲಿನ ಪಾತ್ರಗಳು, ವಸ್ತುಗಳು, ಪರಿಸರ ಮತ್ತು ಬೇರೆ ಬೇರೆ ದೃಶ್ಯಗಳನ್ನು ಆ್ಯನಿಮೇಟ್ ಮಾಡುವುದು ಗೇಮ್ ಆ್ಯನಿಮೇಟರ್ ಅಥವಾ ವಿಶ್ಯುವಲ್ ಆರ್ಟಿಸ್ಟ್‌ಗಳ ಕೆಲಸ. ಪಾತ್ರವು ಜಿಗಿಯುವಂತೆ, ಕುಣಿಯುವಂತೆ, ಕುಳಿತುಕೊಳ್ಳುವಂತೆ, ನಿಲ್ಲುವಂತೆ ಮಾಡುವುದೆಲ್ಲವೂ ಇವರೇ. ವಿಡಿಯೋ ಗೇಮ್‌ನ ಆ್ಯನಿಮೇಷನ್ ಆ್ಯಂಡ್ ಆರ್ಟ್ ವಿಭಾಗದಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್, 3ಡಿ ಮಾಡೆಲರ್, 2ಡಿ ಆರ್ಟಿಸ್ಟ್ ಎನ್ನುವ ಹುದ್ದೆಗಳಿರುತ್ತವೆ. ಈ ಕೆಲಸ ಪಡೆಯಬೇಕಾದರೆ ಕಂಪ್ಯೂಟರ್ ಗ್ರಾಫಿಕ್ಸ್, ಆರ್ಟ್, ಆನಿಮೇಷನ್, ಇಲ್ಟ್ರೇಶನ್‌ನಲ್ಲಿ ಪದವಿ ಹೊಂದಿರಬೇಕು.
ವಿಡಿಯೋ ಗೇಮ್ ಪ್ರೋಗ್ರಾಮರ್‌ಗಳು ಆಟಕ್ಕೆ ಟೆಕ್ನಿಕಲ್ ಕೋಡ್‌ಗಳನ್ನು ರಚಿಸುತ್ತಾರೆ. ಗೇಮ್‌ನಲ್ಲಿ ಬರುವ ಬೇರೆ ಬೇರೆ ಚಲನೆಗಳನ್ನು, ಬದಲಾವಣೆಗಳನ್ನು ಕಂಪ್ಯೂಟರ್ ಭಾಷೆಗೆ ಹೊಂದಿಕೊಳ್ಳುವಂತೆ ಮಾಡುವುದು ಇವರ ಕೆಲಸ. ಈ ಉದ್ಯೋಗ ಪಡೆಯಬೇಕಾದರೆ ಗೇಮ್ ಪ್ರೋಗ್ರಾಮಿಂಗ್, ಗೇಮ್ ಡೆವಲಪ್‌ಮೆಂಟ್‌ನಲ್ಲಿ ಡಿಗ್ರಿ ಮಾಡಿರಬೇಕು.
ಆ್ಯಕ್ಷನ್ ಗೇಮ್‌ಗಳಲ್ಲಿ ಬುಲೆಟ್ ಶಬ್ಧ ಕೇಳುತ್ತದೆ. ಕೆಲವು ಗೇಮ್‌ಗಳಲ್ಲಿ ಪೋಲೀಸರ ವಾಹನದ ಸೈರನ್ ಕೇಳಿಬರುತ್ತದೆ. ಈ ಧ್ವನಿಗಳನ್ನು ಕೇಳಿದಾಗ ನಿಜವಾಗಿಯೂ ಯಾರೋ ಶೂಟ್ ಮಾಡುತ್ತಿದ್ದಾರೆ, ಪೋಲೀಸ್ ವಾಹನವೇ ಬಂದಿದೆ ಎಂದುಕೊಳ್ಳುವಂತಾಗುತ್ತದೆ. ಇಷ್ಟು ನೈಜವಾಗಿ ವಿಡಿಯೋ ಗೇಮ್‌ಗಳಿಗೆ ಧ್ವನಿ ಕೊಡುವವರು ಸೌಂಡ್ ಡಿಸೈನರ್‌ಗಳು ಮತ್ತು ಆಡಿಯೊ ಎಂಜಿನಿಯರ್‌ಗಳು. ಸೌಂಡ್ ಟ್ರ್ಯಾಕ್‌ಗಳನ್ನು ಮತ್ತು ಸೌಂಡ್ ಎಫೆಕ್ಟ್‌ಗಳನ್ನು ಇವರು ಕೊಡುತ್ತಾರೆ. ಇದರಿಂದ ಗೇಮ್ ಇನ್ನಷ್ಟು ಆಕರ್ಷಕವಾಗುತ್ತದೆ. ಕೆಲವು ಗೇಮ್‌ಗಳಲ್ಲಿ ಸಂಭಾಷಣೆಯಿರುತ್ತದೆ. ಗೇಮ್‌ನ ಪಾತ್ರಗಳಿಗೆ ಧ್ವನಿ ನೀಡುವವರು ವಾಯ್ಸ್ ಓವರ್ ಕಲಾವಿದರು. ಸೌಂಡ್ ಇಂಜಿನಿಯರಿಂಗ್ ಅಥವಾ ಆಡಿಯೋಗ್ರಫಿಯಲ್ಲಿ ಪದವಿ ಪಡೆದಿದ್ದರೆ ಸೌಂಡ್ ಡಿಸೈನರ್‌ಗಳಾಗಿ, ಆಡಿಯೊ ಎಂಜಿನಿಯರ್‌ಗಳಾಗಿ ಕೆಲಸ ಮಾಡಬಹುದು.
ಗೇಮಿಂಗ್‌ನಲ್ಲಿ ಸ್ಕ್ರಿಪ್ಟ್ ರೈಟಿಂಗ್ ಕೆಲಸ ಇರುತ್ತದೆ. ಪಾತ್ರಗಳ ಸಂಭಾಷಣೆಗಳನ್ನು ಬರೆಯುವುದರ ಜೊತೆಗೆ ಗೇಮ್‌ನಲ್ಲಿ ಬರುವ ಬೇರೆ ಬೇರೆ ಸುಳಿವುಗಳು ಇತ್ಯಾದಿಗಳನ್ನು ಬರೆಯಬೇಕು. ಸೂಚನೆಗಳು, ಆಟದ ಮೆನು ಇವುಗಳನ್ನು ಬರೆಯುವ ಜವಾಬ್ದಾರಿಯೂ ಸ್ಕ್ರಿಪ್ಟ್ ರೈಟರ್‌ಗಳದ್ದು.
ವಿಡಿಯೋ ಗೇಮ್ ನಿರ್ಮಾಣಕ್ಕೆ ಹಣ ಹಾಕುವವರು ವೀಡಿಯೊ ಗೇಮ್ ಪ್ರೊಡ್ಯೂಸರ್‌ಗಳಾಗಿರುತ್ತಾರೆ. ವಿಡಿಯೋ ಗೇಮ್‌ನ ಖರ್ಚುವೆಚ್ಚಗಳನ್ನು ನೋಡಿಕೊಳ್ಳುವ ಜೊತೆಗೆ ಮಾರ್ಕೆಟಿಂಗ್ ಕೆಲಸಗಳನ್ನೂ ಮಾಡುತ್ತಾರೆ.
ಯಾವ ತರಹದ ಗೇಮ್‌ಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ? ಈಗಿನ ಟ್ರೆಂಡ್ ಹೇಗಿದೆ? ಯಾವ ಗೇಮ್ ಬಿಡುಗಡೆ ಮಾಡಿದರೆ ಹೆಚ್ಚು ಲಾಭ ಮಾಡಿಕೊಳ್ಳಬಹುದು? ಈ ಎಲ್ಲಾ ಮಾಹಿತಿಗಳನ್ನು ಗೇಮ್ ಡೆವಲಪರ್‌ಗಳಿಗೆ ಕೊಡುವುದು ಮಾರುಕಟ್ಟೆ ಸಂಶೋಧನಾ ವಿಶ್ಲೇಷಕರು. ಇವರು ಸಮೀಕ್ಷೆ ಮಾಡಿ ಮಾಹಿತಿಯನ್ನು ಗೇಮ್ ತಯಾರು ಮಾಡುವ ಕಂಪೆನಿಗಳಿಗೆ ಕೊಡುತ್ತಾರೆ. ಗೇಮ್ ಮಾರಾಟ ಮಾಡುವುದಕ್ಕೆ ಹೊಸ ಹೊಸ ತಂತ್ರಗಳನ್ನು ರೂಪಿಸುವುದು ಕೂಡಾ ಮಾರುಕಟ್ಟೆ ಸಂಶೋಧನಾ ವಿಶ್ಲೇಷಕರು. ಗೇಮ್‌ಗಳ ಬೆಲೆ ಎಷ್ಟಿರಬೇಕು ಎನ್ನುವುದನ್ನೂ ಇವರೇ ನಿರ್ಧಾರ ಮಾಡುತ್ತಾರೆ.
ಯಾವುದೋ ಒಂದು ರಾಷ್ಟ್ರದಲ್ಲಿ ತಯಾರಾದ ವಿಡಿಯೋ ಗೇಮ್ ಅನ್ನು ಕೇವಲ ಆ ರಾಷ್ಟ್ರದ ಜನರು ಮಾತ್ರ ಆಡುವುದಲ್ಲ. ಪ್ರಪಂಚದ ಇನ್ನ್ಯಾವುದೋ ಮೂಲೆಯ ಆಟಗಾರರನ್ನೂ ಅದು ತಲುಪುತ್ತದೆ. ಹಾಗಿರುವಾಗ ಗೇಮ್‌ನಲ್ಲಿ ಬಳಕೆ ಆಗಿರುವ ಭಾಷೆಯನ್ನು ಅನುವಾದಿಸಬೇಕಾಗುತ್ತದೆ. ಆಟದ ಸೂಚನೆ, ಸಂಭಾಷಣೆ ಈ ಎಲ್ಲವುಗಳನ್ನು ಭಾಷಾಂತರ ಮಾಡಬೇಕು. ಇದಕ್ಕಾಗಿ ಗೇಮಿಂಗ್ ಕಂಪೆನಿ ಅನುವಾದಕರನ್ನು ನೇಮಿಸಿಕೊಳ್ಳುತ್ತದೆ. ಇಂಗ್ಲಿಷ್ ಭಾಷೆಯ ಜೊತೆಗೆ ಇತರ ಪ್ರಾದೇಶಿಕ ಭಾಷೆಗಳ ತಿಳುವಳಿಕೆ ಇರುವವರು ಭಾಷಾಂತರಕಾರರಾಗಬಹುದು.
ವಿಡಿಯೋ ಗೇಮ್ ಕಂಪನಿಗಳು ಮತ್ತು ವಿಡಿಯೋ ಗೇಮ್ ಆಡುವವರ ಮಧ್ಯೆ ಸೇತುವೆಯ ಹಾಗೆ ಇರುವವರು ತಾಂತ್ರಿಕ ಸಹಾಯಕ ಸಿಬ್ಬಂದಿಗಳು. ವಿಡಿಯೋ ಗೇಮ್‌ಗಳಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಬಂದಾಗ ಜನರು ಇವರನ್ನು ಇಮೇಲ್, ಫೋನ್ ಅಥವಾ ಆನ್‌ಲೈನ್ ಚಾಟ್ ಮೂಲಕ ಸಂಪರ್ಕ ಮಾಡುತ್ತಾರೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಇವರದ್ದು.
ಯಾವ ವಿಡಿಯೋ ಗೇಮ್ ಹೇಗಿದೆ? ಒಳ್ಳೆಯ ವಿಡಿಯೋ ಗೇಮ್ ಯಾವುದು? ನಿಮ್ಮಿಷ್ಟದ ವಿಡಿಯೋ ಗೇಮ್‌ನಲ್ಲಿ ಏನು ಬದಲಾವಣೆಗಳಾದರೆ ಒಳ್ಳೆಯದು? ಎಂದೆಲ್ಲಾ ಕಮೆಂಟ್ ಮಾಡುವಷ್ಟು ಬುದ್ಧಿವಂತಿಕೆ ನಿಮಗಿದೆಯಾ? ಹಾಗಿದ್ದರೆ ನೀವು ವಿಡಿಯೋ ಗೇಮ್ ಪರೀಕ್ಷಕರಾಗಿ ಕೆಲಸ ಪಡೆಯಬಹುದು. ವಿಡಿಯೋ ಗೇಮ್ ಟೆಸ್ಟರ್‌ಗಳ ಕೆಲಸ ಏನೆಂದರೆ, ವಿಡಿಯೋ ಗೇಮ್‌ಗಳು ಮಾರುಕಟ್ಟೆಗೆ ಬರುವ ಮೊದಲು ಅವುಗಳನ್ನು ಆಡುವುದು, ಅವುಗಳಲ್ಲಿ ಏನು ಒಳ್ಳೆಯದಿದೆ- ಏನು ತಪ್ಪುಗಳಿವೆ ಎಂದು ಹೇಳುವುದು. ಆಟವನ್ನು ಮತ್ತಷ್ಟು ಚೆನ್ನಾಗಿಸಲು ಯಾವ ಬದಲಾವಣೆ ಮಾಡಿದರೆ ಒಳ್ಳೆಯದು ಎಂದು ವಿಡಿಯೋ ಗೇಮ್ ಪ್ರೋಗ್ರಾಮರ್‌ಗಳಿಗೆ ಇವರು ತಿಳಿಸಬೇಕಾಗುತ್ತದೆ. ಬಿ.ಟೆಕ್./ ಬಿ.ಇ. ಮಾಡಿದವರು, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಗ್ರಿ ಪಡೆದವರು ಈ ಕೆಲಸಕ್ಕೆ ಸೇರಬಹುದು. ಭಾರತೀಯ ಪರೀಕ್ಷಾ ಮಂಡಳಿಯಿಂದ ‘ಸರ್ಟಿಫೈಡ್ ಟೆಸ್ಟರ್’ ಎಂಬ ಸರ್ಟಿಫೀಕೇಟ್ ಪಡೆದರೆ ಹೆಚ್ಚು ಅವಕಾಶಗಳು ಸಿಗುತ್ತವೆ.
ಒಂದು ಚಲನಚಿತ್ರವನ್ನು ನಾವು ನೋಡುವ ಮೊದಲು ಆ ಚಲನಚಿತ್ರದ ರಿವ್ಯೂ ಹೇಗಿದೆ ಎಂದು ಗಮನಿಸುತ್ತೇವೆ. ಈಗಾಗಲೇ ಸಿನಿಮಾ ನೋಡಿದವರು ಏನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಆಮೇಲೆ ಸಿನಿಮಾ ನೋಡುವುದಕ್ಕೆ ಹೋಗುವುದೋ ಬೇಡವೋ ಎಂದು ನಿರ್ಧರಿಸುತ್ತೇವೆ. ವಿಡಿಯೋ ಗೇಮ್‌ಗಳೂ ಕೂಡಾ ಹೆಚ್ಚು ಮಾರಾಟ ಆಗಬೇಕಾದರೆ ಹೀಗೆ ವಿಮರ್ಶೆ ಮಾಡುವವರ ಅಗತ್ಯವಿದೆ. ವಿಡಿಯೋ ಗೇಮ್‌ಗಳ ಬಗ್ಗೆ ಅಭಿಪ್ರಾಯ ತಿಳಿಸುವವರು ವಿಡಿಯೋ ಗೇಮ್ ಪತ್ರಕರ್ತರು ಮತ್ತು ವಿಮರ್ಶಕರು. ಇವರು ಗೇಮ್ ಆಡಿ ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ನಂತರ ಅದನ್ನು ಜನರಿಗೆ ಸರಳವಾಗಿ ವಿವರಿಸುತ್ತಾರೆ. ಇದರಿಂದ ಜನರು ವಿಡಿಯೋ ಗೇಮ್ ಆಡುವುದಕ್ಕೆ ಮೊದಲೇ ಗೇಮ್‌ನ ಮಾಹಿತಿ ದೊರಕುತ್ತದೆ. ವಿಡಿಯೋ ಗೇಮ್ ಪತ್ರಕರ್ತರಾಗುವವರು ಮಾಸ್ ಕಮ್ಯುನಿಕೇಶನ್ ಆ್ಯಂಡ್ ಜರ್ನಲಿಸಮ್(ಎಂ.ಸಿ.ಜೆ.)ನಲ್ಲಿ ಡಿಗ್ರಿ ಪಡೆದಿರಬೇಕು.
ವಿಡಿಯೋ ಗೇಮ್ ಡಿಸೈನರ್, ಆನಿಮೇಟರ್, ಪ್ರೋಗ್ರಾಮರ್ ಈ ಎಲ್ಲ ಕೆಲಸ ಗಿಟ್ಟಿಸಿಕೊಳ್ಳುವ ಡಿಗ್ರಿ ನಮಗಿಲ್ಲ. ವಿಡಿಯೋ ಗೇಮ್ ಆಡಿ ಅದು ಹೇಗಿದೆ ಎಂದು ಜಡ್ಜ್ ಮಾಡುವುದೆಲ್ಲ ನಮ್ಮಿಂದಾಗುವ ಕೆಲಸವಲ್ಲ. ನಮಗೆ ವಿಡಿಯೋ ಗೇಮ್ ಆಡುವುದು, ಗೆಲ್ಲುವುದು ಅಷ್ಟೇ ಗೊತ್ತು ಎಂದು ಅಂದುಕೊಂಡಿರುವವರೂ ವಿಡಿಯೋ ಗೇಮ್ ಇಂಡಸ್ಟ್ರಿಯಲ್ಲಿ ಉದ್ಯೋಗ ಪಡೆಯಬಹುದು. ವಿಡಿಯೋ ಗೇಮ್ ಆಡುವುದೂ ಕೂಡಾ ಇಂದು ಕೋಟಿಗಟ್ಟಲೆ ಆದಾಯ ತರುವ ಕೆಲಸವಾಗಿದೆ. ಈ ಕೆಲಸ ಮಾಡುವವರು ‘ಪ್ರೊಫೆಶನಲ್ ಗೇಮರ್’ ಎನಿಸಿಕೊಳ್ಳುತ್ತಾರೆ.
ವಿಡಿಯೋ ಗೇಮ್‌ಗಳ ಮೋಜಿನ ಕಥೆಗಳು
ನಾವು ಕುತೂಹಲದಿಂದ ಆಡುವ ಅದೆಷ್ಟೋ ವಿಡಿಯೋ ಗೇಮ್‌ಗಳ ಹಿಂದೆ ಅಷ್ಟೇ ಕುತೂಹಲಕರವಾದ, ಸ್ವಾರಸ್ಯಪೂರ್ಣವಾದ ಸಂಗತಿಗಳಿವೆ. ಇವುಗಳು ನಮಗೆ ಮೋಜು ನೀಡುವುದಂತೂ ಖಚಿತ.
• ‘ಬ್ಯಾಟ್‌ಮ್ಯಾನ್’ ವಿಡಿಯೋ ಗೇಮ್‌ನ್ನು ಮೊದಲಿಗೆ ತಯಾರಿಸಿದಾಗ ರಿದಮ್ಯಾಟಿಕ್ ಆಗಿರುವ ಆ್ಯಕ್ಷನ್ ಆಟವಾಗಿತ್ತು. ಆದರೆ ಆ ಬಳಿಕ 2ಡಿ ಗೇಮ್ ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
• ‘ಸೂಪರ್ ಮಾರಿಯೋ’ ಗೇಮ್‌ನ ಪಾತ್ರಗಳು ಪ್ರಸಿದ್ಧ ಸಂಗೀತಗಾರರಿಂದ ತಮ್ಮ ಹೆಸರುಗಳನ್ನು ಪಡೆದುಕೊಂಡಿವೆ. ಈ ಆಟದಲ್ಲಿ ಬರುವ ಇಗ್ಗಿ, ಲುಡ್ವಿಗ್ ಹಾಗೂ ಲೆಮ್ಮಿ ಪಾತ್ರಗಳು ಪ್ರಸಿದ್ಧ ಸಂಗೀತಗಾರರ ಹೆಸರಿನ ಮೂಲಕ ಬಂದಿವೆ. ‘ಸೂಪರ್ ಮಾರಿಯೋ ವರ್ಲ್ಡ್’ನ ಡೈನೋಸರ್‌ಗಳಿಗೆ ‘ರೆಜ್ನರ್’ ಎಂದು ಹೆಸರಿಡಲಾಗಿದೆ. ಇದು ‘ನೈನ್ ಇಂಚ್ ನೈಲ್ಸ್’ ಎಂಬ ಸಂಗೀತ ತಂಡ ಕಟ್ಟಿಕೊಂಡಿರುವ ಟ್ರೆಂಟ್ ರೆಜ್ನರ್ ಅವರ ಹೆಸರಿನಿಂದ ಬಂದಿದೆ.
• ‘ಅಟಾರಿ’ ಕಂಪೆನಿ ತಯಾರಿಸಿರುವ ‘ದಿ ಎಕ್ಸ್ಟ್ರಾ ಟೆರೆಸ್ಟ್ರಿಯಲ್’ ವಿಡಿಯೋ ಗೇಮ್ ಅತ್ಯಂತ ಕೆಟ್ಟ ಗೇಮ್ ಎಂದು ಗುರುತಿಸಿಕೊಂಡಿದೆ. ಕಂಪನಿಯ ಸಿಬ್ಬಂದಿ ಮಾರಾಟವಾಗದ ಆಟದ ಪ್ರತಿಗಳನ್ನು ಮರುಭೂಮಿಯಲ್ಲಿ ಹೂತುಹಾಕಿದ್ದರಂತೆ. ಡ್ಯಾಕುಮೆಂಟರಿ ಫಿಲಂನ ಸಿಬ್ಬಂದಿಗಳು ಅವುಗಳನ್ನೆಲ್ಲ ಅಗೆದು ತೆಗೆದರಂತೆ. ಹೀಗೊಂದು ದಂತಕಥೆಯಿದೆ.
• ‘ಅಸ್ಯಾಸಿನ್ಸ್ ಕ್ರೀಡ್’ ಗೇಮ್ ಸರಣಿಯನ್ನು ವಿನ್ಯಾಸ ಮಾಡುವಾಗ ‘ಪ್ರಿನ್ಸ್ ಆಫ್ ಪರ್ಷಿಯಾ: ಅಸ್ಯಾಸಿನ್ಸ್’ ಎಂಬ ಹೆಸರಿತ್ತು. ಜೆರುಸಲೆಮ್‌ನ ರಾಜಕುಮಾರನನ್ನು ಮಹಿಳೆಯೊಬ್ಬಳು ರಕ್ಷಿಸುವ ರೀತಿಯಲ್ಲಿ ಆಟವನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಇದರಲ್ಲಿ ರಾಜಕುಮಾರನಿಗೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಈ ಕಾರಣಕ್ಕಾಗಿ ಆಟದ ರೀತಿಯನ್ನು ಬದಲಾಯಿಸಲಾಯಿತು.
• ‘ಹ್ಯಾಲೊ 4’ ಗೇಮ್‌ನಲ್ಲಿರುವ ಹಾಸ್ಯಮಯ ಸಂಭಾಷಣೆ ತಯಾರಾದ ರೀತಿ ತುಂಬಾ ಚೆನ್ನಾಗಿದೆ. ಹಾಸ್ಯನಟರಾದ ಆ್ಯಂಡಿ ರಿಕ್ಟರ್ ಮತ್ತು ಕಾನನ್ ಒಬ್ರೇನ್ ಅವರು ಬಾಹ್ಯಾಕಾಶ ನೌಕೆಗೆ ಸಾಮಾಗ್ರಿಗಳನ್ನು ತುಂಬಿಸುವ ಕೆಲಸಗಾರರಿಗಾಗಿ ಹಾಸ್ಯಮಯ ಧ್ವನಿ ನೀಡಿದ್ದರು. ಈ ಹಾಸ್ಯಮಯ ಧ್ವನಿಯನ್ನೇ ‘ಹ್ಯಾಲೊ 4’ ಆಟದಲ್ಲಿ ಬಳಸಲಾಗಿದೆ.
• ‘ಬರ್ನ್ ಔಟ್ ಪ್ಯಾರಡೈಸ್’ ಆಟದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರಚಾರದ ಜಾಹೀರಾತು ಇದೆ. ಈ ಗೇಮ್ ತಯಾರಿಸುತ್ತಿದ್ದಾಗ ಬರಾಕ್ ಒಬಾಮಾ 2008ರ ಅಧ್ಯಕ್ಷೀಯ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದರು. ಆಟದಲ್ಲಿ ಒಬಾಮಾ ಕುರಿತು ಪ್ರಚಾರ ಮಾಡುವುದಕ್ಕೆ ಅವಕಾಶ ದೊರಕಿತು. ಈ ಆಟದಲ್ಲಿನ ಬಿಲ್‌ಬೋರ್ಡ್‌ನಲ್ಲಿ ‘ವೋಟ್ ಫಾರ್ ಚೇಂಜ್’ ಪ್ರಚಾರ ಚಿಹ್ನೆಯಿದೆ. ಇದು ಒಬಾಮಾ ಅವರ ಕುರಿತಾದ ಪ್ರಚಾರವನ್ನು ಸೂಚಿಸುತ್ತದೆ.
• ಭೂಮಿ ಮೇಲೆ ಮಾತ್ರವಲ್ಲ, ಅಂತರಿಕ್ಷದಲ್ಲಿಯೂ ವಿಡಿಯೋ ಗೇಮ್ ಆಡಿದ್ದಾರೆ. ‘ಗೇಮ್‌ಬಾಯ್ಸ್ ಟೆಟ್ರಿಸ್’ ಅಂತರಿಕ್ಷದಲ್ಲಿ ಆಡಲಾದ ಮೊದಲ ವಿಡಿಯೋ ಗೇಮ್. ಆಡಿದ್ದು 1993ರಲ್ಲಿ. ರಷ್ಯಾದ ಗಗನಯಾತ್ರಿ ಸೆರೆಬ್ರೊವ್ ಎ. ಅಲೆಕ್ಸಾಂಡರ್ ಇದನ್ನು ಆಡಿದವರು. ಈ ಆಟ ನಂತರ ಹರಾಜಿನಲ್ಲಿ ಈ ವಿಡಿಯೋ ಗೇಮ್ 1,220 ಡಾಲರ್‌ಗಳಿಗೆ ಮಾರಾಟವಾಯಿತು.
• ವಿಡಿಯೋ ಗೇಮ್ ಆಡುವುದನ್ನೇ ಕೆಲಸ ಮಾಡಿಕೊಂಡವರಿದ್ದಾರೆ. ಇಂಥವರನ್ನು ‘ಪ್ರೊಫೆಶನಲ್ ಗೇಮರ್’ ಎನ್ನಲಾಗುತ್ತದೆ. ಸಣ್ಣ ಪ್ರಾಯದ ಪ್ರೊಫೆಶನಲ್ ಗೇಮರ್- ವಿಕ್ಟರ್ ಡಿ ಲಿಯಾನ್. ಇವರನ್ನು ‘ಲಿಟ್ಲ್ ಪಾಯ್ಸನ್’ ಎಂದೂ ಕರೆಯಲಾಗುತ್ತದೆ. ಪ್ರೊಫೆಶನಲ್ ಗೇಮರ್ ಆದಾಗ ಅವರ ವಯಸ್ಸು ಕೇವಲ 11 ವರ್ಷ.
• ಕೆಲವರು ವಿಡಿಯೋ ಗೇಮನ್ನು ಎಷ್ಟು ಇಷ್ಟಪಡುತ್ತಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ವ್ಯಕ್ತಿಯೊಬ್ಬರು ವಿಡಿಯೋ ಗೇಮ್ ಪಾತ್ರವೊಂದನ್ನು ಮದುವೆಯಾಗಿದ್ದಾರೆ. ಜಪಾನ್‌ನ 27 ವರ್ಷದ ವ್ಯಕ್ತಿಯೊಬ್ಬರು ‘ಲವ್ ಪ್ಲಸ್’ ಗೇಮ್‌ನಲ್ಲಿ ಬರುವ ‘ನೇನೆ ಅನೆಗಾಸಾಕಿ’ ಎಂಬ ಪಾತ್ರವನ್ನು ಆನ್‌ಲೈನ್‌ನಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ.
• ‘ದಿ ಕ್ಯಾಬಿನ್ ಇನ್ ದಿ ವುಡ್ಸ್’ ಸಿನಿಮಾದ ಕೊನೆಯ ಕೆಲವು ಕ್ಷಣಗಳಲ್ಲಿ ರಾಕ್ಷಸರ ಗುಂಪೊಂದನ್ನು ತೋರಿಸಲಾಗುತ್ತದೆ. ಇದರಲ್ಲಿ ಕಾಣಿಸಿಕೊಳ್ಳುವ ಬೂಮರ್ ಮತ್ತು ಮಾಟಗಾತಿ ಪಾತ್ರಗಳು ‘ಲೆಫ್ಟ್ 4 ಡೆಡ್’ ಎಂಬ ವಿಡಿಯೋ ಗೇಮ್ ಸರಣಿಯಿಂದ ಬಂದಿವೆ.
• ‘ಫಿಫಾ 2001’ ಗೇಮ್‌ನ ಸಿ.ಡಿ. ಬಹಳ ವಿಶಿಷ್ಟ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಫಿಫಾ ಗೇಮ್ ಎನ್ನುವುದು ಫುಟ್‌ಬಾಲ್‌ಗೆ ಸಂಬಂಧಿಸಿದ ಗೇಮ್ ಆಗಿದೆ. ಇದರ ಸಿ.ಡಿ.ಯನ್ನು ಉಜ್ಜಿದರೆ ಫುಟ್‌ಬಾಲ್ ಗ್ರೌಂಡ್‌ನ ಪಿಚ್‌ನ ವಾಸನೆ ಬರುತ್ತದೆ.
• ‘ಮೆಗಾ ಮ್ಯಾನ್’ ಗೇಮ್‌ನ್ನು ಜಪಾನಿನಲ್ಲಿ ವಿನ್ಯಾಸ ಮಾಡಿದಾಗ ಇಟ್ಟ ಹೆಸರು ‘ರಾಕ್ ಮ್ಯಾನ್’. ಆದರೆ ಈ ಗೇಮ್ ಅಮೇರಿಕಾಕ್ಕೆ ಬಂದಾಗ ಆ ಹೆಸರನ್ನು ಬದಲಾಯಿಸಲಾಯಿತು.
• ‘ಮಾರಿಯೋ ಬ್ರದರ್ಸ್’ ಗೇಮ್‌ನಲ್ಲಿ ಅಣ್ಣ ತಮ್ಮನ ಪಾತ್ರಗಳು ಬರುತ್ತವೆ. ಇವರಲ್ಲಿ ಒಬ್ಬನಿಗೆ ಕೊನೆಯ ಹೆಸರಿಲ್ಲ ಎನ್ನುವುದು ಕೆಲವರ ಗ್ರಹಿಕೆ. ಆದರೆ ಅವನಿಗೂ ಕೊನೆಯ ಹೆಸರಿದೆ. ಲುಯಿಗಿ ಮಾರಿಯೋ ಎನ್ನುವುದು ಒಬ್ಬನ ಹೆಸರಾದರೆ ಮಾರಿಯೋ ಮಾರಿಯೋ ಎನ್ನುವುದು ಇನ್ನೊಬ್ಬನ ಹೆಸರಾಗಿದೆ. 1983ರಲ್ಲಿ ಈ ಗೇಮ್ ಅದೆಷ್ಟು ಜನಪ್ರಿಯ ಆಗಿತ್ತೆಂದರೆ ಆ ಸಮಯದಲ್ಲಿ ಹೆಚ್ಚಿನ ತಂದೆ ತಾಯಿ ತಮ್ಮ ಮಕ್ಕಳಿಗೆ ಮಾರಿಯೋ ಎನ್ನುವ ಹೆಸರನ್ನೇ ಇಡುತ್ತಿದ್ದರು.
• ಅತ್ಯಂತ ಹೆಚ್ಚು ಸಮಯ ವಿಡಿಯೋ ಗೇಮ್ ಆಡಿದವರು ಅಮೇರಿಕಾದ ಕ್ಯಾರಿ ಸ್ವಿಡೆಕಿ. ಇವರು 2015ನೇ ಇಸವಿಯ ಜುಲೈ 11 ರಿಂದ ಜುಲೈ 17ನೇ ತಾರೀಖಿನವರೆಗೆ, ‘ಜಸ್ಟ್ ಡ್ಯಾನ್ಸ್’ ಎನ್ನುವ ವಿಡಿಯೋ ಗೇಮ್ ಆಡಿ ವಿಶ್ವದಾಖಲೆ ಬರೆದಿದ್ದಾರೆ. ಅವರು ಆಡಿದ್ದು ಬರೋಬ್ಬರಿ 138 ಗಂಟೆ 34 ಸೆಕೆಂಡುಗಳು.
• ನೀವು ‘ವರ್ಲ್ಡ್ ಆಫ್ ವಾರ್‌ಕ್ರಾಫ್ಟ್’ ಗೇಮ್‌ನಲ್ಲಿ ಎಷ್ಟು ಲೆವೆಲ್ ಪೂರ್ಣಗೊಳಿಸಿದ್ದೀರಿ? ಹತ್ತು? ಇಪ್ಪತ್ತು? ಐವತ್ತು? ಡಬಲ್ಲೀಜೆಂಟ್ ಎನ್ನುವ ಆಟಗಾರರೊಬ್ಬರು ವರ್ಲ್ಡ್ ಆಫ್ ವಾರ್‌ಕ್ರಾಫ್ಟ್‌ನಲ್ಲಿ 90ನೇ ಲೆವೆಲ್ ಪೂರ್ತಿ ಮಾಡಿದ್ದಾರೆ.
• ‘ಮೈನ್ ಕ್ರಾಫ್ಟ್’ ಗೇಮ್‌ನಲ್ಲಿ 3ಡಿ ಜಗತ್ತು ಇರೋದು ನಿಮಗೆಲ್ಲಾ ಗೊತ್ತಿರಬಹುದು. ಇಲ್ಲಿ ಕಾಣುವ ನೆಲದ ಮೇಲ್ಮೈ ವಿಸ್ತೀರ್ಣ ಭೂಮಿಗಿಂತ 9 ಮಿಲಿಯನ್ ಪಟ್ಟು ದೊಡ್ಡದು.
• ಚೀನೀ ವಿಡಿಯೋ ಗೇಮ್ ಡೆವಲಪರ್ ಆಗಿರುವ ಕ್ಸಿಂಗನ್ ಚೆನ್ ಅವರು ‘ಜೆನೋವಾ ಚೆನ್’ ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಾರೆ. ‘ಫೈನಲ್ ಫ್ಯಾಂಟಸಿ’ ಗೇಮ್‌ನಿಂದ ಸ್ಫೂರ್ತಿ ಪಡೆದಿರುವ ಅವರು ಆ ಗೇಮ್‌ನಲ್ಲಿ ಬರುವ ‘ಜೆನೋವಾ’ ಎನ್ನುವ ಪಾತ್ರದ ಹೆಸರನ್ನೇ ಇಟ್ಟುಕೊಂಡಿದ್ದಾರೆ.
• ‘ಪೋಕ್‌ಮನ್ ರೆಡ್ ಆ್ಯಂಡ್ ಬ್ಲೂ’ ವಿಡಿಯೋ ಗೇಮ್‌ನಲ್ಲಿ ಮೂರು ಪಕ್ಷಿಗಳಿವೆ. ಅವುಗಳ ಹೆಸರು ಆರ್ಟಿಕುನೊ, ಜಾಪ್ಡೋಸ್ ಮತ್ತು ಮೊಲ್ಟ್ರೆಸ್. ಅಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಒಂದು, ಎರಡು, ಮೂರು ಎಂದರ್ಥ!
• ಹೆಚ್ಚು ಯಶಸ್ವಿಯಾದ ‘ಗೋಲ್ಡನ್ ಐ 007’ ಗೇಮ್‌ನ್ನು ಅಭಿವೃದ್ಧಿಪಡಿಸಿದ್ದು ಈ ಹಿಂದೆ ಯಾವುದೇ ವಿಡಿಯೋ ಗೇಮ್‌ಗಳಿಗಾಗಿ ಕೆಲಸ ಮಾಡದ ತಂಡ. ಇದರ 10 ಮಂದಿ ಗೇಮ್ ಡೆವಲಪರ್‌ಗಳಲ್ಲಿ 8 ಮಂದಿ ವಿಡಿಯೋ ಗೇಮ್‌ಗಳನ್ನು ತಯಾರಿಸುವ ಅನುಭವವೇ ಇಲ್ಲದವರು.
• ‘ಪ್ಯಾಕ್ ಮ್ಯಾನ್’ ಗೇಮ್ ಡೆವಲಪರ್ ಆದ ಟೋರ್ ಇವಾಟ್ವಾನಿ ಅವರು ಮಹಿಳೆಯರು ಇಷ್ಟಪಡುವ ಗೇಮನ್ನು ತಯಾರಿಸಬೇಕು ಎಂದುಕೊಂಡಿದ್ದರು. ಪ್ಯಾಕ್ ಮ್ಯಾನ್ ಯಾವಾಗಲೂ ಏನನ್ನಾದರೂ ತಿನ್ನುವುದರಿಂದ ಅದರಿಂದ ಪ್ರೇರಣೆಗೊಂಡು ಮಹಿಳೆಯರೂ ಕೂಡಾ ಯಾವಾಗಲೂ ಏನನ್ನಾದರೂ ತಿನ್ನುತ್ತಾರೆ ಎನ್ನುವುದು ಅವರ ಯೋಚನೆಯಾಗಿತ್ತು. ಅವರು ಈ ಗೇಮ್‌ಅನ್ನು ಮೊದಲು ಆಲೋಚಿಸಿದ್ದು ಪಿಜ್ಜಾ ತಿನ್ನುವಾಗಲೇ!
• ಹಾಲಿವುಡ್ ನಟ ರಾಬಿನ್ ವಿಲಿಯಮ್ಸ್ ಅವರು ವಿಡಿಯೋ ಗೇಮ್‌ಗಳ ದೊಡ್ಡ ಅಭಿಮಾನಿ. ಜನಪ್ರಿಯ ವಿಡಿಯೋ ಗೇಮ್‌ಗಳ ಪಾತ್ರದ ಹೆಸರನ್ನೇ ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ.
• ದಕ್ಷಿಣ ಕೊರಿಯಾದಲ್ಲಿ ‘ಸಿಂಡ್ರೆಲ್ಲಾ ಕಾನೂನು’ ಇದೆ. ಈ ಕಾನೂನಿನ ಪ್ರಕಾರ, ಮಧ್ಯರಾತ್ರಿಯ ನಂತರ 16 ವರ್ಷದೊಳಗಿನವರು ಆನ್‌ಲೈನ್ ವೀಡಿಯೊ ಗೇಮ್ ಆಡುವಂತಿಲ್ಲ.
• ಜಪಾನಿನ ಜನಪ್ರಿಯ ಗೇಮ್ ಡೆವಲಪರ್ ಗುನ್ಪೈ ಯೋಕೊಯಿ ಅವರು ಮೊದಲು ಜಪಾನಿನ ನಿಂಟೆಂಡೋ ಕಂಪೆನಿಯಲ್ಲಿ ದ್ವಾರಪಾಲಕರಾಗಿ ಕೆಲಸ ಮಾಡುತ್ತಿದ್ದರು. ಬೋರ್ ಆದಾಗ ಅವರು ತಯಾರು ಮಾಡಿದ ಒಂದು ಆಟಿಕೆ ನಿಂಟೆಂಡೊ ಅಧ್ಯಕ್ಷರ ಕಣ್ಣಿಗೆ ಬಿತ್ತು. ಕೊನೆಗೆ ಗುನ್ಪೈ ಯೋಕೊಯಿ ಅವರು ‘ಗೇಮ್ ಬಾಯ್’ನಂತಹ ಪ್ರಸಿದ್ಧ ವಿಡಿಯೋ ಗೇಮ್‌ಗಳನ್ನು ಅಭಿವೃದ್ಧಿಪಡಿಸಿದರು.
• ‘ಸಿಮ್ ಸಿಟಿ 3000’ ವಿಡಿಯೋ ಗೇಮ್‌ನ್ನು ಮೂಲವಾಗಿಟ್ಟುಕೊಂಡು ಒಬ್ಬ ವ್ಯಕ್ತಿ ‘ಮ್ಯಾಗ್ನಸಂಟಿ’ ಎಂಬ ಪಟ್ಟಣವನ್ನೇ ರಚಿಸಿದ್ದಾನೆ. ಈ ನಗರದಲ್ಲಿ ಯಾವುದೇ ಅಪರಾಧ ನಡೆದಿಲ್ಲ. ಮಾಲಿನ್ಯ ಇಲ್ಲ. 6 ಮಿಲಿಯನ್‌ನಷ್ಟು ಜನರು ಇಲ್ಲಿದ್ದಾರೆ. ಈ ನಗರವನ್ನು ಕಟ್ಟುವುದಕ್ಕೆ ಮೂರು ವರ್ಷಗಳಷ್ಟು ಸಮಯಾವಕಾಶವನ್ನು ತೆಗೆದುಕೊಳ್ಳಲಾಗಿದೆ.
• ‘ಪೋಕ್‌ಮನ್’ ಗೇಮ್ ಸೃಷ್ಟಿಕರ್ತರಾದ ಸತೋಶಿ ತಾಜಿರಿ ಅವರು ಬಾಲ್ಯದಲ್ಲಿ ಮರಿಹುಳುಗಳು ಚಿಟ್ಟೆಗಳಾಗಿ ಬದಲಾಗುವುದನ್ನು ನೋಡಿದ್ದರು. ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಪೋಕ್‌ಮನ್ ಆಟವನ್ನು ಕಲ್ಪಿಸಿಕೊಂಡರು.
• ಹಲವು ವಿಡಿಯೋ ಗೇಮ್‌ಗಳಲ್ಲಿ ಕಂಡುಬರುವ ‘ಮಾರಿಯೋ’ ಎನ್ನುವ ಹೆಸರು ಬಂದದ್ದು ಹೇಗೆ ಗೊತ್ತಾ? ನಿಂಟೆಂಡೋ ಕಂಪೆನಿಯ ಭೂಮಾಲೀಕರ ಹೆಸರು ಮಾರಿಯೋ ಸೆಗಾಲೆ. ಅದೇ ಹೆಸರನ್ನು ವಿಡಿಯೋ ಗೇಮ್ ಪಾತ್ರಗಳಿಗೆ ಇಡಲಾಗಿದೆ. ನೂರ ಇಪ್ಪತ್ತಕ್ಕೂ ಹೆಚ್ಚು ವಿಡಿಯೋ ಗೇಮ್‌ಗಳಲ್ಲಿ ಪಾತ್ರಗಳಿಗೆ ಮಾರಿಯೋ ಎನ್ನುವ ಹೆಸರಿದೆ.
• ಅಮೇರಿಕನ್ನರು ವಿಡಿಯೋ ಗೇಮ್‌ಗಳನ್ನು ಬಹಳ ಇಷ್ಟಪಡುತ್ತಾರೆ. ಅಮೇರಿಕನ್ ಕುಟುಂಬಗಳಲ್ಲಿ ಮೂರನೇ ಎರಡರಷ್ಟು ಜನರು ವಿಡಿಯೋ ಗೇಮ್ ಆಡುತ್ತಾರೆ. ಇವರಲ್ಲಿ 60 ಶೇಕಡಾದಷ್ಟು ಪುರುಷರು. 40 ಶೇಕಡಾದಷ್ಟು ಮಹಿಳೆಯರು.
• 1990ರಲ್ಲಿ ಬಿಡುಗಡೆ ಆದ ‘ಗೋಲ್ಡನ್ ಆ್ಯಕ್ಸ್’ ವಿಡಿಯೋ ಗೇಮ್‌ಗೆ ಧ್ವನಿ ಕೊಟ್ಟದ್ದು ಧ್ವನಿ ಕಲಾವಿದರಲ್ಲ; ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಖೈದಿಗಳು.
• ‘ಹೋಮ್ ಫ್ರಂಟ್’ ಇದು ಉತ್ತರ ಕೊರಿಯಾ ಬೇರೆ ರಾಷ್ಟ್ರಗಳ ವಿರುದ್ಧ ಮಾಡಿದ ಯುದ್ಧವನ್ನು ಹೊಂದಿರುವ ವೀಡಿಯೊ ಗೇಮ್. ಇದರಲ್ಲಿ ಕೊರಿಯಾದ ಕಿಮ್ ಜೊಂಗ್ ಇಲ್ ಸಾವಿನ ವರ್ಷದ ಬಗ್ಗೆ ಹಾಗೂ ಉತ್ತರ ಕೊರಿಯಾದ ಪರಮಾಣು ಪರೀಕ್ಷೆಯ ಬಗ್ಗೆ ಸೂಚನೆಯಿದೆ.
• ‘ಗ್ರ್ಯಾಂಡ್ ಥೆಪ್ಟ್ ಆಟೋ’ ಗೇಮ್ ಸರಣಿ ವಿವಾದಕ್ಕೊಳಗಾಗಿತ್ತು. ಈ ಸಂದರ್ಭದಲ್ಲಿ ಲೇಟರ್ ಜ್ಯಾಕ್ ಥಾಂಪ್ಸನ್ ಎಂಬವರಿಗೆ ವಿಧಿಸಿದ ದಂಡ ಬರೋಬ್ಬರಿ 1 ಲಕ್ಷ ಡಾಲರ್‌ಗಳು. ವಿಪರ್ಯಾಸವೆಂದರೆ, ಅವರ ವಿರುದ್ಧ ಯಾವುದೇ ಸರಿಯಾದ ಸಾಕ್ಷ್ಯ ಇರಲಿಲ್ಲ.
• ‘ಗ್ರ್ಯಾಂಡ್ ಥೆಫ್ಟ್ ಆಟೋ: ಸ್ಯಾನ್ ಆ್ಯಂಡ್ರಿಯಾಸ್’ ಈ ವಿಡಿಯೋ ಗೇಮ್‌ಗೆ 861 ಜನರು ಧ್ವನಿ ಕೊಟ್ಟಿದ್ದಾರೆ. ಹೀಗೆ ಧ್ವನಿ ಕೊಟ್ಟವರಲ್ಲಿ ಹೆಚ್ಚಿನವರು ಈ ಗೇಮ್ ಸರಣಿಯ ಅಭಿಮಾನಿಗಳಾಗಿದ್ದರು. ಧ್ವನಿ ಕೊಡುವುದಕ್ಕೆ ಅವರಿಗೇ ಆಸಕ್ತಿಯಿತ್ತು.
• 2011ರಲ್ಲಿ ಇಂಗ್ಲೆಂಡ್‌ನ 46 ವರ್ಷದ ವ್ಯಕ್ತಿಯೊಬ್ಬರು 13 ವರ್ಷದ ಹುಡುಗನನ್ನು ಕಂಡ ತಕ್ಷಣ ಆ ಹುಡುಗನ ಮೇಲೆ ದಾಳಿ ಮಾಡಿದ್ದರು. ಯಾಕೆಂದರೆ ಆ ಹುಡುಗ ‘ಕಾಲ್ ಆಫ್ ಡ್ಯೂಟಿ’ ವಿಡಿಯೋ ಗೇಮ್‌ನಲ್ಲಿ ಅದೆಷ್ಟೋ ಸಲ ಇವರನ್ನು ಕೊಂದಿದ್ದ. ವಿಡಿಯೋ ಗೇಮನ್ನೇ ನಿಜಜೀವನ ಅಂದುಕೊಂಡರೆ ಇಂತಹ ಅನಾಹುತಗಳೆಲ್ಲಾ ಆಗುವ ಸಾಧ್ಯತೆಯಿದೆ.
• ‘ಮಾರಿಯೋ’ ಗೇಮ್ ಸರಣಿಯಲ್ಲಿ ‘ಬೂ’ ಎನ್ನುವ ಪಾತ್ರ ಇದೆ. ಈ ಪಾತ್ರ ಹೀಗೆಯೇ ಇರಬೇಕು ಅಂತ ಕಲ್ಪಿಸಿಕೊಂಡದ್ದು ಗೇಮ್‌ನ ಸಹಾಯಕ ನಿರ್ದೇಶಕರಾಗಿದ್ದ ತಕಾಶಿ ತೇಜುಕಾ ಅವರು. ಅವರಿಗೆ ಆ ಕಲ್ಪನೆ ಬಂದದ್ದು ಅವರ ಹೆಂಡತಿಯಿಂದ. ಆಟದಲ್ಲಿ ಮಾರಿಯೋ, ಬೂ ಅನ್ನು ನೋಡಿದಾಗ ಬೂ ಸಣ್ಣದಾಗುತ್ತದೆ. ಮಾರಿಯೋ ಆ ಕಡೆ ತಿರುಗಿಕೊಂಡಾಗ ಬೂ ದೊಡ್ಡದಾಗಿ, ಭಯಂಕರವಾಗಿ ಬೆಳೆಯುತ್ತದೆ. ತಕಾಶಿ ತೇಜುಕಾ ಅವರ ಹೆಂಡತಿಯೂ ಹಾಗೇ ಇದ್ದರಂತೆ!
• ‘ಫೋಲ್ಡ್ ಇಟ್’ ಎಂಬ ಆನ್‌ಲೈನ್ ವಿಡಿಯೋ ಗೇಮ್‌ಅನ್ನು ಬಳಸಿಕೊಂಡು ಏಡ್ಸ್ ವೈರಸ್‌ನ ರಚನೆಯೊಂದನ್ನು 10 ದಿನಗಳಲ್ಲಿ ಡಿಕೋಡ್ ಮಾಡಲಾಗಿದೆ. 15 ವರ್ಷ ಪ್ರಯತ್ನಪಟ್ಟ ವಿಜ್ಞಾನಿಗಳಿಂದಲೂ ಇದು ಆಗಿರಲಿಲ್ಲ. ವಿಜ್ಞಾನಕ್ಕೆ ಸಾಧ್ಯವಾಗದೇ ಇದ್ದುದನ್ನು ವಿಡಿಯೋ ಗೇಮ್ ಸಾಧ್ಯವಾಗಿಸಿದ್ದು ಅದೆಂತಹ ಅಚ್ಚರಿ ಅಲ್ವಾ?
• ‘ಮಾರಿಯೋ ಪಾರ್ಟಿ’ ವಿಡಿಯೋ ಗೇಮ್ ಆಡಿದ ಅದೆಷ್ಟೋ ಮಕ್ಕಳಿಗೆ ಚರ್ಮದ ಅಲರ್ಜಿ ಆಗಿತ್ತು. ಚರ್ಮದ ಮೇಲೆ ಗುಳ್ಳೆ ಬಂದಂತಾಗಿತ್ತು. ಕೊನೆಗೆ ಗೇಮ್ ಅಭಿವೃದ್ಧಿಪಡಿಸಿದ ನಿಂಟೆಂಡೊ ಕಂಪೆನಿಯೇ ತಪ್ಪು ಮಾಡಿದೆ ಎಂದು ದೃಢವಾಯಿತು.
ವಿಡಿಯೋ ಗೇಮ್‌ನಿಂದಾಗಿ ಒಳ್ಳೆಯದೂ ಇದೆ; ಕೆಟ್ಟದ್ದೂ ಇದೆ. ವಿಡಿಯೋ ಗೇಮ್ ಆಡುತ್ತಲೇ ಇದ್ದರೆ, ಅದೊಂದು ವ್ಯಸನವಾದರೆ ಸಮಸ್ಯೆ ಖಂಡಿತವಾಗಿಯೂ ಆಗುತ್ತದೆ. ಮನಸ್ಸಿನ ಖುಷಿಗಾಗಿ ಸ್ವಲ್ಪ ಸಮಯ ಮಾತ್ರ ಆಡುತ್ತೇವೆ ಎಂದರೆ ಯಾವ ತೊಂದರೆಯೂ ಇರುವುದಿಲ್ಲ. ಇದೇ ಖುಷಿಯಲ್ಲಿ ಒಂದು ಗೇಮ್ ಆಡೋಣ. ಏನಂತೀರಿ?
ವಿಶ್ವನಾಥ ಎನ್ ನೇರಳಕಟ್ಟೆ
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.