Advertisement
ಆಪತ್ಬಾಂಧವನಿಂದ ಕರಗಿದ ಕಾರ್ಮೋಡ: ಎಚ್. ಗೋಪಾಲಕೃಷ್ಣ ಸರಣಿ

ಆಪತ್ಬಾಂಧವನಿಂದ ಕರಗಿದ ಕಾರ್ಮೋಡ: ಎಚ್. ಗೋಪಾಲಕೃಷ್ಣ ಸರಣಿ

ಹೆಂಡತಿ ನೂರು ಕ್ಯಾಂಡಲ್ ಕೆಂಪು ಬಲ್ಬಿನ ಹಾಗೆ ಕಂಡಳು. ಅವಳನ್ನು ಒಳಗೆ ಕರೆದು ಸಮಾಧಾನ ಪಡಿಸಿ ಓನರಿಣಿಯನ್ನು ಮನೆಗೆ ಸಾಗಹಾಕುವ ಪ್ಲಾನ್ ತಲೆಯಲ್ಲಿ ಮೊಳಕೆ ಹೊಡೆಯುತ್ತಿತ್ತು. ಎಂಟ್ರಿ ಹೇಗಾಯಿತು ಅಂದರೆ ರಾತ್ರಿ ಒಂಬತ್ತರ ಕತ್ತಲು, ಹತ್ತಿರದ ಕೆರೆಯಿಂದ ಕಪ್ಪೆಗಳ ವಟಗುಟ್ಟುವಿಕೆ, ಜೀರುಂಡೆ ಧ್ವನಿ ಮತ್ತು ಮನೆಯಿಂದ ಮೂರುನಾಲ್ಕು ಕಿಮೀ ದೂರದ ರೈಲು ಹಳಿ ಮೇಲೆ ರೈಲು ಹೋಗುತ್ತಿರುವ, ಎಂಜಿನು ವಿಶಲ್ ಹಾಕುವ ಶಬ್ದ. ನರಿ ಕೂಗು ಕೇಳುತ್ತೆ ಅಂತ ನನಗಿಂತ ಮೊದಲು ಬಂದವರು ಹೇಳುತ್ತಿದ್ದರು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆಂಟನೆಯ ಕಂತು

ಕಳೆದ ಸಂಚಿಕೆ ಅಂತ್ಯಕ್ಕೆ ಈ ಮಾತು ಹೇಳಿದ್ದೆ…

ಓನರಿಣಿ ಒಳಗೆ ಬಂದ ಐದಾರು ನಿಮಿಷದ ನಂತರ ನನ್ನಾಕೆ ಹೊರಬಂದಳು, ಅಡಿಗೆಮನೆಯಿಂದ…..

ಮುಂದೇನಾಯಿತು ಎನ್ನುವುದನ್ನು ನಿಮಗೆ ವಿಷದವಾಗಿ ಹೇಳಲೇಬೇಕು. ಅದರ ನೆನಪು ಈಗಲೂ ಹೇಗೆ ಬ್ರೈನ್‌ನಲ್ಲಿ ಅಡಗಿದೆ ಅಂದರೆ ಆಗ ನಡೆದ ಒಂದೊಂದು ಮಾತು ಸಂಭಾಷಣೆ ಅಕ್ಷರ ಸಮೇತ ಮೆದುಳಲ್ಲಿ ಇಂಬೆಡ್ ಆಗಿದೆ….

ಇಗೋ ಈಗ ಮುಂದಕ್ಕೆ…

ಓನರಿಣಿ ಹತ್ತು ದುರ್ಯೋಧನಗಳ ಗತ್ತಿನಲ್ಲಿ ಬಂದು ಹಳೆಯ ಸ್ಟೀಲ್ ಚೇರ್ ಮೇಲೆ ಕೂತಳು.(ದುರ್ಯೋಧನಗಳ ಎನ್ನುವ ಪ್ರಯೋಗ ವ್ಯಾಕರಣ ಬದ್ಧವಲ್ಲ ಮತ್ತು ಗಳು ಎನ್ನುವ ಪ್ರತ್ಯಯ ನಪುಂಸಕ ಲಿಂಗಕ್ಕೆ ಮಾತ್ರ ಉಪಯೋಗಿಸಬೇಕು ಎಂದು ಮೊನ್ನೆ ಓದಿದ್ದೆ. ನಮ್ಮ ಏರಿಯಾದಲ್ಲಿ ಕೆಲವರಿಗೆ ಕನ್ನಡ ಹೇಳಿಕೊಡುವ ಕೆಲಸ ಹೊತ್ತಿದ್ದೇನೆ. ಅಲ್ಲಿ ವ್ಯಾಕರಣ ಪಾಠ ಮಾಡುವ ಸಂದರ್ಭಗಳಲ್ಲಿ ನಗು ಉಕ್ಕಿ ಉಕ್ಕಿ ಹರಿಯುತ್ತದೆ. ಅಣ್ಣಂದಿರು ತರಹ ಮರಕ್ಕೆ ಬಹುವಚನ ಏನು? ಮರಂದಿರು ತಾನೇ…. ಇದು ಒಂದು ಉದಾಹರಣೆ. ಕನ್ನಡ ಕಲಿಸುವುದರ ತಮಾಷೆ ಬಗ್ಗೆ ಬೇರೆ ಯಾವಾಗಲಾದರೂ ನನ್ನ ಜ್ಞಾನ ಹರಿಯ ಬಿಡುತ್ತೇನೆ. ಮೊನ್ನೆ ಓದಿದ್ದ ಕನ್ನಡ ವ್ಯಾಕರಣ ನೆನಪಿಗೆ ಬಂತಾ? ಅದರಿಂದ ದುರ್ಯೋಧನಗಳು ಬಗ್ಗೆ ಹೇಳಿದೆ ಅಷ್ಟೇ…)
ಐದಾರು ನಿಮಿಷದ ನಂತರ ನನ್ನಾಕೆ ಆಚೆ ಬಂದಳು ಅಂದೆ. ನನ್ನ ಮನೆಯ ಹಾಲ್‌ನಿಂದ ಅಡುಗೆ ಮನೆಗೆ ಒಂದೂವರೆ ಹಾಪ್ ಅಷ್ಟೇ.. ಐದೂವರೆ ಚದರದ ಮನೆ ಅಂದೆ, ನೂರು ಸುತ್ತು ಹಾಕುವುದಕ್ಕೆ ಎರಡು ನಿಮಿಷ ಸಾಕು. ಅಂತಹದ್ದರಲ್ಲಿ ಐದಾರು ನಿಮಿಷ ಬೇಕಾಯಿತು ಆಚೆ ಬರುವಷ್ಟರಲ್ಲಿ ಎಂದರೆ ಮನಸಿನಲ್ಲಿ ಅದೇನೇನು ರಿಹರ್ಸಲ್ ಆಗಿತ್ತು ಗೊತ್ತಿಲ್ಲ. ಹಾಗೆ ನೋಡಿದರೆ ಈ ಯೋಚನೆ ನನಗೆ ಅಂದಿನ ಪ್ರಸಂಗ ತಿರುವಿ ತಿರುವಿ ಪುನರ್ಲೋಕನ ಮಾಡುತ್ತಿರುವ ಈ ವೇಳೆಯಲ್ಲಿ ಬಂದದ್ದು. ಅವತ್ತು ಈ ಯೋಚನೆ ಬಂದಿರಲಿಲ್ಲವೇ ಅಂದರೆ ಊಹೂಂ ಇಲ್ಲ, ಖಂಡಿತ ಇಲ್ಲ. ಮನೆ ಒಳಗೆ ಅದೇನೋ ಕೆಲಸದಲ್ಲಿ ಮುಳುಗಿದಾಳೆ ಅಂತ ಅವತ್ತು ಅನಿಸಿದ್ದು! ನೀನು ಒಳಗೆ ಬರ್ತೀಯ ಅಂತ ಕಾದಿದ್ದೆ, ನೀನೆಲ್ಲಿ ಬರ್ತೀಯ. ಅವಳ ಹತ್ರ ಕಿಸ ಕಿಸ ಅಂತ ಹಲ್ಲು ಬಿಡ್ತಾ ಕೂತಿದ್ದೆ ತಾನೇ? ಹೆಂಡತಿ ಸಪೋರ್ಟಿಗೆ ಅಂತ ನೀನು ಯಾವತ್ತಾದರೂ ಬಂದಿದ್ದೀಯಾ…. ಈ ಪೂಜೆ ನನಗೆ ಆಮೇಲೆ ಆಗಿದ್ದು.

ಮತ್ತೆ ಟು ದ ಟ್ರ್ಯಾಕ್.

ಹೆಂಡತಿ ಆಚೆ ಬಂದಳು. ಓನರಿಣಿ ಕುರ್ಚಿ ಮೇಲೆ ಅಗಲವಾಗಿ ಹರಡಿಕೊಂಡು ಕೂತಿದ್ದಳು. ಇನ್ನೊಂದು ಮುರುಕಲು ಸ್ಟೂಲ್ ಮೇಲೆ ನಾನು, ನನ್ನಾಕೆ ಒಳ ಬಾಗಿಲ ಬಳಿ ನೇರವಾಗಿ ಆಡಿಯನ್ಸ್‌ಗೆ ಕಾಣುವ ರೀತಿ ನಿಂತಿದ್ದಳು. ಸ್ಟೇಜ್ ಮೇಲೆ ನೀವು ಈ ಪ್ರಸಂಗ ಕಲ್ಪಿಸಿಕೊಂಡರೆ ನಮ್ಮ ನಮ್ಮ ಪೊಸಿಶನ್ ನಿಮಗೆ ಗೊತ್ತಾಗಲಿ ಅಂತ ಈ ವಿವರ, ಹೇಳಿ ಕೇಳಿ ನಾನು ಐದು ವರ್ಷ ಸ್ಟೇಜ್ ಮೇಲೆ ಓಡಾಡಿದ ಅನುಭವಸ್ಥ ಅಲ್ಲವೇ..!

ಹೆಂಡತಿ ಮಾತು ಶುರು ಮಾಡುವ ಮೊದಲೇ ಓನರಿಣಿ ಬಾಯಿ ತೆರೆದಳು..

“ಮನೆ ಬೀಗದ ಕೈ ಕೊಟ್ಟು ಬರಬೇಕು ಅಂತ ಗೊತ್ತಾಗಲಿಲ್ಲವಾ(ಗೊತ್ತಾಗಲಿಲ್ಲವಾ ಅಥವಾ ಜ್ಞಾನ ಇಲ್ಲವಾ ಎಂದು ಕೇಳಿರಬೇಕು, ಕೊಂಚ ಮೆಮೊರಿ ಇಲ್ಲಿ ಎಡವಿದೆ)… ಇದು ಓ (ಇನ್ನುಮುಂದೆ ಈ ಸಂಭಾಷಣೆ ಪೂರ್ತಿ ಓನರಿಣಿಯನ್ನು ಓ ಎಂದು ಗುರುತಿಸಲಾಗುವುದು). ಇದು ನಾರ್ಮಲ್ ವಾಯ್ಸ್ ಅಲ್ಲ. ಕೋಪದ ದನಿ.

ಯಾವ ಮನೆದು ಬೀಗದ ಕೈ..? ಇದು ನನ್ನಾಕೆ (ಇನ್ನುಮುಂದೆ ಈ ಸಂಭಾಷಣೆ ಪೂರ್ತಿ ನನ್ನಾಕೆಯನ್ನು ಹೆಂ ಎಂದು ಗುರುತಿಸಲಾಗುವುದು)
ಆಯಮ್ಮ ಬಂದು ಬೀಗದ ಕೈ ಕೇಳಿದರೆ ಅವಳ ಮನೆಯದೆ ಇರಬೇಕು ಅಂತ ನನಗೆ ಅರ್ಥ ಆಯಿತು. ಇನ್ಯಾವುದಾದರೂ ಬೇರೆ ಕೀ ತಂದು ಇಟ್ಟಿತ್ತಾ ಈ ಯಮ್ಮ ಅಂತ ಡೌಟ್ ಬಂತು, ನನ್ನಾಕೆ
ಯಾವ ಮನೆದು ಬೀಗದ ಕೈ..? ಅಂತ ಕೇಳಿದಾಗ!
ಕುತೂಹಲದಿಂದ ಮುಂದಿನ ಮಾತುಕತೆ ಕಡೆ ಕಿವಿಕೊಟ್ಟೆ.
ಇನ್ಯಾವ ಕೀ ನಮ್ಮನೆದು… ಇದು ಓ
ಯಾವುದು ನಿಮ್ಮನೆ..? ಇದು ಹೆಂ
ನಿನಗೆ ಬಾಡಿಗೆ ಅಂತ ಕೊಟ್ಟಿದ್ದೇನಲ್ಲಾ ಅದು…ಇದು ಓ
ಮಾತು ಏಕವಚನಕ್ಕೆ ತಿರುಗಿತ್ತು. ಬೇರೆ ಯಾವ ಟರ್ನ್ ತಗೊಳ್ಳತ್ತೆ..?
ನನಗೆ ನೀನ್ಯಾವಾಗ ಬಾಡಿಗೆ ಕೊಟ್ಟಿದ್ದೆ….? ಇದು ಹೆಂ.
ಓನರಿಣಿಗೆ ಮೆಣಸಿನಕಾಯಿ ಇಟ್ಟ ಹಾಗೆ ಆಯಿತು. ಆಗಿರಲೇಬೇಕು.

ವಾದಗಳು ಕೌಂಟರ್ ವಿವಾದಗಳು ಸಾಕಷ್ಟು ಹೊತ್ತು ನಡೆಯಿತು. ನಾನು ಮಧ್ಯೆ ಪ್ರವೇಶ ಮಾಡದೇ ತಟಸ್ಥ ಧೋರಣೆ ಅನುಸರಿಸಿದ್ದೆ. ಓನರಿಣಿ ಪರ ಮಾತಾಡಿದರೆ ಜೀವಮಾನ ಪೂರ್ತಿ ಹಂಗಿಸಿಕೊಳ್ಳ ಬೇಕಾಗಬಹುದು ಎಂದು ಒಳಗೆಲ್ಲೋ ನನ್ನ ಅಂತರಾತ್ಮ, ಆತ್ಮ ಎಚ್ಚರಿಸಿರಬೇಕು, ಅದು ಗೊತ್ತಿಲ್ಲ. ಹೆಂಡತಿ ವಾದಕ್ಕೆ ಬೆಂಬಲ ಕೊಡೋಣ ಅಂದರೆ ನಿನಗೇನೂ ಗೊತ್ತಿಲ್ಲ, ಬಾಯಿಮುಚ್ಚಿಕೊಂಡು ತೆಪ್ಪಗೆ ಕುಕ್ಕರಿಸ್ಕೋ(ಇದು ಲೆಕ್ಕವಿಲ್ಲದಷ್ಟು ಸಲ ಆಗಿದೆ)ಅಂತ ಓನರಿಣಿ ಎದುರೇ ಅಂದರೆ ನಾನು ಇಷ್ಟು ದಿವಸ ಬಹಳ ಕಷ್ಟದಿಂದ ಬೆಳೆಸಿಕೊಂಡು ಕಾಪಾಡಿಕೊಂಡು ಬಂದ ನನ್ನ ಮರ್ಯಾದೆ, ಪ್ರೆಸ್ಟೀಜ್ ಇವಕ್ಕೆ ಧಕ್ಕೆ ಆದರೆ…. ಅದಕ್ಕೇ ಸೈಲೆಂಟ್ ಸ್ಪೆಕ್ಟೇಟರ್ ಆಗಿಬಿಟ್ಟೆ.

ಒಟ್ಟಿನಲ್ಲಿ ವಾದ ವಿವಾದದ ಜಿಸ್ಟ್ ಅಂದರೆ;
ಬಾಡಿಗೆಗೆ ಮನೆ ಕೊಟ್ಟಿರೋದು ನನಗಲ್ಲ ಅದರಿಂದ ಕೀ ನನ್ನ ಹತ್ತಿರ ಕೇಳಬೇಡ. ಬಾಡಿಗೆಗೆ ನಾವು ಬಂದಿದ್ದು ನಾಲ್ಕನೇ ತಾರೀಖು, ಅದರಿಂದ ಅದರ ಹಿಂದಿನ ದಿವಸದ ತನಕ ನಿನಗೆ ಕೀ ಕೊಡೋ ರೂಲ್ಸ್ ಇಲ್ಲ.
ಕೀ ಕೊಡು ಅಂತ ನೀನು ಮನೆ ಹತ್ರ ಬರಬಾರದು. ನಿನ್ನ ಮನೆಗೇ ಬಂದು ಕೊಡ್ತಾರೆ…
ಇದು ಯಾರ ಡೈಲಾಗ್ ಅಂತ ನಿಮಗೆ ಗೊತ್ತಾಗಿರಬೇಕು.
ಓನರಿಣಿ ವಾದ ಏನಿತ್ತು ಅಂದರೆ…
ಮನೆ ಖಾಲಿ ಆಯ್ತಾ ಕೀ ಕೊಡಬೇಕು. ಇಂತಹದೇ ದಿವಸ ಕೊಡ್ತೀವಿ ಅಂತ ಹೇಳುವ ಹಾಗಿಲ್ಲ. ಬೇರೆ ಬಾಡಿಗೆ ಅವರಿಗೆ ಮನೆ ತೋರಿಸಬೇಕು…
ಈ ಧಾಟಿಯಲ್ಲಿತ್ತು.

ರಾತ್ರಿ ಎಂಟರ ಸಮಯ, ಸಾಕಷ್ಟು ಜೋರು ಕಂಠದಲ್ಲಿ ವಿಚಾರ ವಿನಿಮಯ ಆಗಿತ್ತು. ಇಬ್ಬರದ್ದೂ ಅದೇ ಹಠ. ಕೀ ಇವತ್ತೇ ಬೇಕು ಅಂತ ಆಕೆ. ಕೀ ಇವತ್ತು ಕೊಡಲ್ಲ ಅಂತ ನಮ್ಮದು. ಕೀ ಬಿಸಾಕಿ ಕೈ ತೊಳೆದು ಕೊಂಡರೆ ಆಯ್ತು, ಇದಕ್ಕೇಕೆ ಈ ಕೊಸರಾಟ ಅಂತ ನನ್ನ ಒಳಮನಸ್ಸು ಅಭಿಪ್ರಾಯ ಪಡ್ತಿದೆ. ಆದರೆ ನನ್ನಾಕೆ ಮೈಂಡ್ ಯಾವರೀತಿ ಓಡುತ್ತಿದೆ ಅಂತ ಗೊತ್ತಾಗ್ತಾ ಇಲ್ಲ. ಹೆಣ್ಣಿನ ಮನಸು ಅರಿಯುವುದು ಯಾವ ಬೃಹಸ್ಪತಿಗೂ ಸಾಧ್ಯ ಇಲ್ಲ ಎನ್ನುವ ಒಂದು ಸುಪ್ರಸಿದ್ಧ ಕೋಟ್ ನೆನಪಿಗೆ ಬಂತು. ತುಂಬಾ ಅನುಭವಸ್ಥ ಈ ಮಾತು ಹೇಳಿದವನು ಅನಿಸಿತು. ಉಸಿರು ಹಿಡಿದು ಬಾಯಿ ಮುಚ್ಚಿ ಕೂತೆ.

ಹಗ್ಗ ಹರಿಯಲಿಲ್ಲ, ಕೋಲು ಮುರಿಯಲಿಲ್ಲ ನೋಡಿ ಆಗ ಓನರಿಣಿ ಅಮ್ಮ “ಕೀ ಕೊಟ್ಬಿಡಿ ನಾನು ಹೋಗ್ತೀನಿ….” ಅಂತ ಡಿಮ್ಯಾಂಡ್ ನನ್ನೆದುರು ಇಟ್ಟಳು.

“ಕೀ ಮುಟ್ಟಲಿ ಅವನು, ಅವನ ಕೈ ಕತ್ತರಿಸಿ ಬಿಡ್ತೀನಿ..” ಇದು ನನ್ನಾಕೆ. ಇದು ಬರೀ ಭಯ ಹುಟ್ಟಿಸುವ ಹೇಳಿಕೆ ಅಲ್ಲ, ಕೋಪದಲ್ಲಿ ಚಾನ್ಸ್ ಸಿಕ್ಕಿದೆ ಅಂತ ಕೈ ಕತ್ತರಿಸಿದರೂ ಕತ್ತರಿಸಿ ಬಿಟ್ಟಾಳು.. ಇದು ನನ್ನ ಅನುಭವ!

ಕೈ ಕತ್ತರಿಸಿದರೆ ಭಿಕ್ಷೆ ಬೇಡುವ ಜಾಗ ಬೇರೆ ಹುಡುಕಬೇಕು. ಅಣ್ಣಮ್ಮ ದೇವಸ್ಥಾನ? ಸೇಂಟ್ ಪ್ಯಾಟ್ರಿಕ್ ಚರ್ಚ್? ಮಾರ್ಕೆಟ್ ನ ಜುಮ್ಮಾ ಮಸೀದಿ? ರಾಗಿ ಗುಡ್ಡ? ಬಸವಣ್ಣ? ರಾಘವೇಂದ್ರ ಸ್ವಾಮಿ ಮಠ?

ಎಲ್ಲಿ ಹೆಚ್ಚಿಗೆ ಭಿಕ್ಷೆ ಸಿಗಬಹುದು? ಸಿಗೋ ಭಿಕ್ಷೆ ನನ್ನ ಸಂಬಳದಷ್ಟು ಬರುತ್ತಾ? ಮನೆ ಸಾಲ ತೀರಿಸೋದು ಹೇಗೆ…. ತಲೆ ತುಂಬ ಈ ರೀತಿಯ ಸಾವಿರದ ಮೂರು ಯೋಚನೆಗಳು ಹಾದುಹೋದವು..!

ಈ ತಾಪತ್ರಯ ಬೇಕಾ ನಿನಗೆ ಅಂತ ಆತ್ಮ ಕೇಳಿತು. ತಲೆ ಅಲ್ಲಾಡಿಸಿ ಬೇಡ ಅಂದೆ. ಆದರೆ ಓನರಿಣಿ ನನ್ನನ್ನೇ ನೋಡ್ತಾ ಇದ್ದಾಳೆ, ಕೀ ಕೊಡ್ತಾನೆ ಅಂತ ಎಕ್ಸ್ಪೆಕ್ಟ್ ಮಾಡ್ತಾ ಇದ್ದಾಳೆ! ಕತ್ತರಿಸಲ್ಪಟ್ಟ ನನ್ನ ಮೊಂಡುಗೈ ಕಣ್ಣಮುಂದೆ ಬಂದು ಹಾಗೆ ಹೀಗೆ ಕೈ ಆಡಿಸಿತು..

ನೋಡಿ ಅಮ್ಮಾ ನೀವು ಈಗ ಹೋಗಿ ಕೀ ನಾನು ನಿಮ್ಮ ಹಸ್ಬೆಂಡ್‌ಗೆ ಕೊಡ್ತೀನಿ ಅಂತ ಖಾಝಿ ನ್ಯಾಯ ಮಾಡಿ ಸಿಚುಅಷನ್ ಕಂಟ್ರೋಲ್‌ಗೆ ಬಂತು ಅಂದು ಕೊಂಡೆನಾ… ಆದರೆ ಅದಾಗಲಿಲ್ಲ.

ಅಡ್ವಾನ್ಸ್ ವಾಪಸ್ ಕೊಡುವರೆಗೂ ಕೀ ಕೊಡಲ್ಲ ಅಂತ ನನ್ನಾಕೆ ಒಂದು ಬಾಣ ಬಿಟ್ಟಳು.
ಬಾಡಿಗೆಗೆ ಬೇರೆಯವರು ಬಂದು ಅವರು ಅಡ್ವಾನ್ಸ್ ಕೊಟ್ಟಮೇಲೆ ಇದು ನಿಮ್ಮ ಅಡ್ವಾನ್ಸ್ ವಾಪಸ್‌ ಅಂತ ಅಂದಳು ಓನರಿಣಿ.
ಅಡ್ವಾನ್ಸ್ ಕೊಡು ಕೀ ತಗೊಂಡು ಹೋಗು. ಅಲ್ಲಿವರೆಗೂ ಕೀ ಕೊಡಲ್ಲ…. ಇದು ನನ್ನಾಕೆ.
ಸರಿ ಪರಿಸ್ಥಿತಿ ನನ್ನ ಕೈ ಮೀರ್ತಿದೆ ಅನಿಸಿತು. ಮೀರ್ತಿದೆ ಏನು, ಪರಿಸ್ಥಿತಿ ನನ್ನ ಕೈ ಮೀರಿ ಸಾವಿರ ಯೋಜನ ದೂರ ಹೋಗಿತ್ತು…
ಹೆಂಡತಿಯನ್ನು ಒಳಗೆ ಕೂಗಿ ಅವಳಿಗೆ ಕನ್ವಿನ್ಸ್ ಮಾಡಿ ಕೀ ಕೊಡೋಣ ಅಂತ ಯೋಚಿಸಿ ಹೆಂಡತಿ ಕಡೆ ನೋಡಿದೆ. ಅವಳ ಮುಖ ನೂರು ಕ್ಯಾಂಡಲ್‌ನ ಕೆಂಪು ದೀಪ ಬಲ್ಬ್ ತರಹ ಕಾಣಬೇಕೇ…

ಇಂತಹ ಸಂದಿಗ್ಧ ಸಮಯದಲ್ಲಿ ನೀವೇನು ಮಾಡ್ತಾ ಇದ್ದಿರಿ.. ಅಂತ ನನಗೆ ತಿಳಿಯದು. ಸುಮಾರು ನಮ್ಮಂತಹ ಕಾಮನ್ ಮ್ಯಾನ್‌ಗಳು ದೇವರ ಕೋಣೆ ಹೊಕ್ಕು ಪರಿಹಾರ ಕೇಳ್ತಾರೆ ಅಂತ ಓದಿದ್ದೆ. ನನ್ನದೇನಿದ್ದರೂ ಪುಸ್ತಕದ ಬದನೆಕಾಯಿ ಮತ್ತು ಅನುಭವ ಶೂನ್ಯ. ಲೊಳಲೊಟ್ಟೆ ಅನುಭವ. ಎಲ್ಲಾ ಲೊಳಲೊಟ್ಟೆ ಬುಕ್ ವರ್ಮ್ ಮತ್ತು ದೇವರನ್ನು ಇದು ಕೇಳಬಹುದು ಅಥವಾ ಕೇಳಬಾರದಾ ಎನ್ನುವ ದ್ವಂದ್ವ. ಇದು ಯಾಕೆ ಅಂದರೆ ನಾನು ಮತ್ತು ನಮ್ಮ ವಂಶ ದ್ವೈತಿಗಳದ್ದು!

ಅದಕ್ಕಿಂತ ಹೆಚ್ಚಾಗಿ ನಮ್ಮ ಹೊಸಾ ಮನೆ, ಈಗತಾನೇ ಕಟ್ಟಿರೋದು, ಅದರಲ್ಲಿ ದೇವರಿಗೆ ಅಂತ ಪ್ರತ್ಯೇಕ ಕೋಣೆ, ರೂಮೂ ಇರಲಿಲ್ಲ. ಅದು ಅಡುಗೆಮನೆಯಲ್ಲಿ ಒಂದು ಗೂಡಿನಲ್ಲಿತ್ತು. ಗೂಡಿಗೆ ಬಾಗಿಲು ಇಲ್ಲ, ಯಾಕೆ ಅಂದರೆ ಕಾಸಿಲ್ಲ ಅಂತ ಗೂಡಿಗೆ ಬಾಗಿಲು ಮಾಡಿಸಿರಲಿಲ್ಲ! ಗೂಡಿನಲ್ಲಿ ಎರಡು ಮೂರು ಫೋಟೋ ಒಂದು ಆರು ಇಂಚಿನ ಆಂಜನೇಯ ವಿಗ್ರಹ. ಅದೂ ಹೇಗೆ ಅಂದರೆ ಆಂಜನೇಯನ ತಲೆ ಅಂಟಿಸಿಕೊಂಡಿದ್ದ ಒಂದು ಗಂಟೆ ಇತ್ತು. ಫೋಟೋಗಳು ಯಾರೋ ಕೊಟ್ಟವು, ಗಂಟೆ ನಾನೇ ಕೊಂಡು ತಂದಿದ್ದು. ಮಕ್ಕಳ ಎದುರು ಅದನ್ನು ಹಾಗೆ ಹೀಗೆ ಆಡಿಸಿ ಅದರ ಶಬ್ದ ಕೇಳಿ ಖುಷಿ ಪಡುತ್ತ ಇದ್ದದ್ದು ನಾನು. ಆಗ ಅದಕ್ಕೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ ಕೊಟ್ಟಿದ್ದೆ… ಇನ್ನೊಂದು ಏನಪ್ಪಾ ಅಂದರೆ ನನಗೆ ಆಗ ಇಷ್ಟೆಲ್ಲಾ ರಾದ್ಧಾಂತ ನಡೆದಾಗ ದೇವರು ನೆನಪೇ ಆಗಲಿಲ್ಲ! ಈ ಕತೆ ನಡೆದು ಹೆಚ್ಚು ಕಮ್ಮಿ ನಾಲ್ಕು ದಶಕದ ಮೇಲೇ ಆಗಿದೆ. ಆವಾಗ ಕಟ್ಟಿದ ಮನೆ ಮೂರು ಸಲ ನವೀಕರಣ ಆಗಿದೆ ಮತ್ತು ಆಗಾಗ್ಗೆ ಸಣ್ಣಪುಟ್ಟ ರಿಪೇರಿಗಳು ಆಗಿವೆ. ದೇವರ ಗೂಡು ಅಡಿಗೆ ಮನೆಯಿಂದ ಶಿಫ್ಟ್ ಆಗಿರೋದು ಬಿಟ್ಟರೆ ಪಾಪ ಅದಕ್ಕೊಂದು ಪ್ರತ್ಯೇಕ ರೂಮು ಅಂತ ಅದೂ ಕೇಳಿಲ್ಲ ಮತ್ತು ನಾವೂ ಮಾಡಿಲ್ಲ. ಅಳುವ ಮಗುವಿಗೆ ಹಾಲು ಸಿಗುತ್ತೆ ಅಂತ ಕೇಳಿದ್ದೆ. (ಅದು ಯಾಕೋ ಅಳುವ ಕಡಲೊಳು ನಗೆಯ ಹಾಯಿ ದೋಣಿ… ಹಾಡು ನೆನಪಿಗೆ ಬರ್ತಿದೆ) ದೇವರ ವಿಷಯದಲ್ಲಿ ಇದು ನಿಜ ಆಗಿಬಿಟ್ಟಿದೆ. ಅಪ್ಪಾ ಹುಲು ಮಾನವಾ ನನಗೊಂದು ರೂಮು ಕೊಡೋ ಅಂತ ಅದು ನನ್ನನ್ನು ಕೇಳಲಿಲ್ಲ, ನಾವೂ ಕೊಡಲಿಲ್ಲ. ಅದು ಯಾವುದೋ ತಮಿಳು ಸಿನಿಮಾದಲ್ಲಿ ದೇವರು ತನಗೆ ಏನೇನು ಅನುಕೂಲ ಬೇಕು ಅಂತ ಕೇಳಿ ಕೇಳಿ ಮಾಡಿಸಿಕೊಳ್ಳುತ್ತಾ? ನನ್ನ ವಿಷಯದಲ್ಲಿ ಹಾಗೆ ಆಗಲಿಲ್ಲ! ಯಾಕೆ ಅಂದರೆ ನನ್ನ ಮನೆಯಲ್ಲಿ ತಮಿಳು ದೇವರು ಇರಲಿಲ್ಲ, ಇದ್ದದ್ದು ಅಚ್ಚ ಕನ್ನಡ ದೇವರು ಕನ್ನಡ ಕುಲ ಪುಂಗವ ಹನುಮ!

ನಲವತ್ತು ಐವತ್ತು ವರ್ಷದ ನಂತರ ತನ್ನ ಭಕ್ತ ತನ್ನನ್ನು ನೆನೆಸಿಕೊಳ್ಳುತ್ತಾನೆ ಅಂತ ದೇವರಿಗೆ ಆಗಲೇ ಅವತ್ತೇ ಹೊಳೆದಿತ್ತು ಅಂತ ಕಾಣುತ್ತೆ, (ಇದು ಪೂರ್ತಿ ನನ್ನ ಊಹೆ ಇವರೇ)ಏಕೆಂದರೆ ಅವನು ದೇವರು, ತ್ರಿಕಾಲ ಜ್ಞಾನಿ. ಇದು ಯಾಕೆ ಹೇಳೋದಿಕ್ಕೆ ಬಂದೆ ಅಂದರೆ ನನ್ನಾಕೆ ಮತ್ತು ಓನರಿಣಿ ಮಧ್ಯೆ ಡೆಡ್ ಲಾಕ್ ಆಗಿತ್ತು ಮತ್ತು ಆಗ ಒಂದು ಅನಿರೀಕ್ಷಿತ ಪಾತ್ರ ಪ್ರವೇಶವಾಯಿತು.

ಹೆಂಡತಿ ನೂರು ಕ್ಯಾಂಡಲ್ ಕೆಂಪು ಬಲ್ಬಿನ ಹಾಗೆ ಕಂಡಳು. ಅವಳನ್ನು ಒಳಗೆ ಕರೆದು ಸಮಾಧಾನ ಪಡಿಸಿ ಓನರಿಣಿಯನ್ನು ಮನೆಗೆ ಸಾಗಹಾಕುವ ಪ್ಲಾನ್ ತಲೆಯಲ್ಲಿ ಮೊಳಕೆ ಹೊಡೆಯುತ್ತಿತ್ತು(ಇದು ಒಡೆಯುತ್ತಿತ್ತು ಎಂದೂ ಇರಬಹುದು. ಹಂಸಕ್ಷೀರ ನ್ಯಾಯ [ಇದರ ಬಗ್ಗೆ ಅಂದರೆ ಹಂಸ ಕ್ಷೀರ ನ್ಯಾಯದ ಬಗ್ಗೆ ಯಾವಾಗಲಾದರೂ ಹೇಳುತ್ತೇನೆ]ಉಪಯೋಗಿಸಿ ಸರಿ ಅನಿಸಿದ್ದು ಆರಿಸಿಕೊಳ್ಳಿ.choice is yours).

ಎಂಟ್ರಿ ಹೇಗಾಯಿತು ಅಂದರೆ ರಾತ್ರಿ ಒಂಬತ್ತರ ಕತ್ತಲು, ಹತ್ತಿರದ ಕೆರೆಯಿಂದ ಕಪ್ಪೆಗಳ ವಟಗುಟ್ಟುವಿಕೆ, ಜೀರುಂಡೆ ಧ್ವನಿ ಮತ್ತು ಮನೆಯಿಂದ ಮೂರುನಾಲ್ಕು ಕಿಮೀ ದೂರದ ರೈಲು ಹಳಿ ಮೇಲೆ ರೈಲು ಹೋಗುತ್ತಿರುವ, ಎಂಜಿನು ವಿಶಲ್ ಹಾಕುವ ಶಬ್ದ. ನರಿ ಕೂಗು ಕೇಳುತ್ತೆ ಅಂತ ನನಗಿಂತ ಮೊದಲು ಬಂದವರು ಹೇಳುತ್ತಿದ್ದರು. ಆದರೆ ಸುಳ್ಳು ಯಾಕೆ ಹೇಳಲಿ ನಾನು ನರಿಯನ್ನು ನೋಡಿಲ್ಲ ಮತ್ತು ಅದರ ಕೂಗು ಸಹ ಕೇಳಿಲ್ಲ. ಇದು ಸತ್ಯ ಸರ..

ಇವುಗಳ ಮಧ್ಯೆ ಗೋಪಾಲ್ ಗೋಪಾಲ್ ಗೋಪಾಲ್ ಸಾರ್ ಎನ್ನುವ ಶಬ್ದ. ಹೆಂಡತಿಗೆ ಸ್ವಲ್ಪ ಸೌಂಡ್ ಕಡಿಮೆ ಮಾಡು ಎಂದು ಸನ್ನೆ ಮಾಡಿ ಬಾಗಿಲು ತೆರೆದು ಆಚೆ ಬಂದೆನಾ…

ಅಲ್ಲಿ ಮನೆ ಮುಂದೆ ಓನರಿಣಿ ಯಜಮಾನ ಅಂದರೆ ಗಂಡ ನಿಂತಿದೆ! ಐದಡಿ ಎತ್ತರ, ಐದಡಿ ಅಗಲ ಕಪ್ಪು ಫುಟ್ಬಾಲ್ ಮುಖ ಮತ್ತು ಅದರ ಹಣೆ ನಡುವೆ ಮೂರು ಸೆಂಟಿಮೀಟರ್ ಅಗಲದ ಗಂಧ ಇತ್ತು. ಚೌಕ ಚೌಕದ ಲುಂಗಿ ಅದರ ಮೇಲೆ ಟೈಟ್ ಆಗಿರುವ ಬಿಳೀ ಬುಷ್ ಶರ್ಟು, ಶರ್ಟಿನ ತಳಭಾಗದಲ್ಲಿ ಗುಂಡಿ ಬಿಚ್ಚಿಕೊಂಡು ಹೊರಗೆ ಬಂದಿರುವ ಗುಂಡು ಗುಂಡು ಗುಡಾಣ…

ಈ ವಯ್ಯನ ಹತ್ತಿರ ಈವರೆಗೆ ನಾನು ಮಾತು ಆಡಿದ್ದಿಲ್ಲ. ದೂರದಿಂದ ನೋಡಿದ್ದೆ ಮತ್ತು ಒಂದು ಸಲ ಅವರ ಮನೆಗೆ ಹೋಗಿದ್ದಾಗ ಈ ಯಪ್ಪ ಪಟ್ಟೆ ಪಟ್ಟೆ ಚೆಡ್ಡಿ ಸ್ಯಾಂಡೋ ಬನಿನು ಹಾಕಿಕೊಂಡಿದ್ದ. ಕೈಯಲ್ಲಿ ಉದ್ದನೆ ಸಿಗರೇಟು ಇತ್ತು. ಬಾಗಿಲು ತೆಗೆದು ಒರು ಮಿನಿಟ್ ಅಂತ ನನಗೆ ಹೇಳಿ ಒಳಗೆ ಹೋಗಿದ್ದ, ಹೆಂಡತಿಯನ್ನು ಕಳಿಸಲು.

ಇಂಥ ಸಮಯದಲ್ಲಿ ಇವನ ಎಂಟ್ರಿ ಅಂದರೆ ಇಡೀ ರಾತ್ರಿ ಜಗಳ ಮುಂದುವರೆಯುತ್ತದೆ ಅನಿಸಿಬಿಟ್ಟಿತು ಇವರೇ. ಅವನೂ ಸಹ ರೌಡಿ ಎಲಿಮೆಂಟ್ ಅಂತ ಹೆಸರು ಮಾಡಿದ್ದ. ಎರಡೆರಡು ಮದುವೆ ಆದವರು ತಮ್ಮನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ರೌಡಿ ಆಗಲೇ ಬೇಕು ಎಂದು ನಾನು ನಂಬಿದ್ದೆ. ಈ ನಂಬಿಕೆಗೆ ಪೂರಕವಾಗಿ ನನಗೆ ತಿಳಿದ ಸುಮಾರು ಎರಡು ಹೆಂಡಿರ ಗಂಡರು ಮನೇಲಿ ಹೇಗೋ ಹೊರಗಡೆ ರೌಡಿಗಳೇ ಆಗಿದ್ದರು.

ಹಿಂದೆ ಹೇಳಿದ ಹಾಗೆ ಆಗಿನ್ನೂ ಸೆಲ್ ಪೋನ್ ಹುಟ್ಟಿರಲಿಲ್ಲ ಮತ್ತು ಲ್ಯಾಂಡ್ ಲೈನ್ ದೊಡ್ಡ ಸಾಹುಕಾರರ ಮನೆಯಲ್ಲಿ ಮಾತ್ರ ಇತ್ತು. ಅದರಿಂದ ಓನರಿಣಿ ಫೋನ್ ಮಾಡಿ ಗಂಡನನ್ನು ಕರೆಸಿದ್ದಾಳೆ ಎನ್ನುವ ಸಂಶಯ ಹುಟ್ಟಲಿಲ್ಲ.

ಬನ್ನಿ ಇವರೇ ಒಳಗೆ ಬನ್ನಿ… ಅಂತ ಒಳಗೆ ಕೂಗಿದೆ. ನಾನು ಕೂತಿದ್ದ ಸ್ಟೂಲು ಅವರಿಗೆ ಕೊಟ್ಟು ಕೂಡಿಸಿದ ಕೆಲಸ ಮಾಡಿದೆ. ನಾನು ಅಲ್ಲೇ ಇದ್ದ ಹಾಸಿಗೆ ಸುರುಳಿ ಮೇಲೆ ಕೂತೆ.

ಓನರಿಣಿ ಮುಖದಲ್ಲಿ ಆಶ್ಚರ್ಯ ಗಲಿಬಿಲಿ ಎದ್ದು ಕಾಣಿಸಿತು. ಆಕೆ ಗಂಡ ಮನೆ ಚೆನ್ನಾಗಿದೆ ಅಂತ ಮಾತು ಶುರುಮಾಡಿದ. ಹೆಂಡತಿ ಇಷ್ಟು ಹೊತ್ತಾದರೂ ಬರಲಿಲ್ಲ, ಕತ್ತಲು ಬೇರೆ ಆಗಿದೆ ಅಂತ ಬಂದೆ ಅಂದ. ಆತ ಆಗ ಅಲ್ಲಿ ಮೋರ್ ಜಂಟಲ್ಮನ್ ತರಹ ಕಾಣಿಸಿದ. ಕಾಫಿ ಕೊಟ್ಟರೆ ಕುಡಿದ. ಅವನ ಹೆಂಡತಿ ಕಾಫಿ ಪೇಡ ಹೂಟಿ ಮಾಡಬೇಕು ಅಂದಳು! ಹೆಂಡತಿ ಕಡೆ ತಿರುಗಿ ಏಳು ಹೋಗೋಣ ಅಂದ, ತಮಿಳಿನಲ್ಲಿ.

ಅವಳಿಗೆ ಕೀ ಇಲ್ಲದೇ ಹೋಗಬಾರದು ಅನ್ನುವ ಹಠ ಹುಟ್ಟಿತ್ತು ಅಂತ ಹೇಳಿದೆ ಅಲ್ಲವೇ. ಈಗ ಹೇಗೆ ನಿಭಾಯಿಸುತ್ತಾಳೆ ಅಂತ ಕಾದೆ. ತಮಿಳಿನಲ್ಲಿ ಅವರಿಬ್ಬರು ಅದೇನೋ ಗುಸು ಗುಸು ಮಾತು ಆಡಿದರು. ತಮಿಳು ನಾನು ಕಲಿತಿರಲಿಲ್ಲ. ಅವರಿಬ್ಬರ ಮಾತು ಏನು ಅಂತಲೂ ಅರ್ಥ ಆಗಲಿಲ್ಲ. ತಮಿಳು ಬಂದಿದ್ದರೆ ಅವರಿಬ್ಬರೂ ಅದೇನು ಮಾತಾಡಿದರು ಅಂತ ತಿಳಿಯಬಹುದಿತ್ತೇ ಅಂತ ಮುಂದೆ ಎಷ್ಟೋ ಸಲ ಅನಿಸಿದೆ. ಕಾರಣ ಹೆಣ್ಣು ಹುಲಿ ಹಾಗೆ ಬಂದವಳು ಗಂಡು ಹುಲಿ (ಅವಳ ಯಜಮಾನ) ಪಿಸಪಿಸ ಅಂದ ಕೂಡಲೇ ಅದೇನೋ ಮಂತ್ರ ಹಾಕಿದಾಗ ಆಗುವ ಹಾಗೆ ಆದಳು. ಗಂಡ ಕಾಫಿ ಲೋಟ ಕೆಳಗಿಟ್ಟ. ಜೇಬಿನಿಂದ ಒಂದು ಬಣ್ಣ ಬಣ್ಣದ ಕವರ್ ತೆಗೆದ. ಇಬ್ಬರನ್ನೂ ಸೇರಿಸಿ ಕವರ್ ಮುಂದೆ ಮಾಡಿದ. ಕವರ್ ಬೇಡ ಅಂದೋರು ಉಂಟೇ?

ಕವರ್ ಕೈಗೆ ತಗೊಂಡೆ ಅವರಿಗೆ ಎಲೆಅಡಿಕೆ ತಾಂಬೂಲ ಆಯ್ತಾ…? ಅವನ ಹೆಂಡ್ರು ತಾಂಬೂಲ ಬೇಡ ಅನ್ನಲಿಲ್ಲ, ಇಸ್ಕೊಂಡಳು.
ಎಲ್ಲೋ ಒಂದು ಕೂನಿ (ಕೂಣಿ) ಕೂನೀ ಅಂದರೆ ಕೊಲೆ (ಅದೇನು ಸರ್ಕಸ್ ಮಾಡಿದರೂ ಖ ಗೆ ಊ ಕಾರ ಅಂಟಿಸುವ ಕಾರ್ಯ ನನ್ನ ಮೊಬೈಲ್ ನಲ್ಲಿ ಆಗ್ತಾ ಇಲ್ಲ, ಕ್ಷಮಿಸಿ) ಆಗುವ ಹಾಗಿದ್ದ ಸಂದರ್ಭ, ಕವಿಗಳು ಹೇಳುವ ಹಾಗೆ ಮೋಡ ಕರಗಿದ ಹಾಗೆ ಕರಗಿತು.

ಗಂಡಸು ಹೊರಡುತ್ತಾ ಗೋಪಾಲ್ ನಾಳೆ ನಾಳಿದ್ದು ಯಾವಾಗ ಆಗುತ್ತೋ ಆಗ ಕೀ ತಂದುಬಿಡಿ. ಅಡ್ವಾನ್ಸ್ ಚೆಕ್ ಕೊಡ್ತೀನಿ ಫ್ಯಾಕ್ಟರಿ ಲೇ ಸಿಗೋಣ. ನಿಮ್ಮ ಟೈಮ್ ನನ್ನ ಟೈಮ್ ಸರಿಹೋಗಲ್ಲ…ಅಂದ!

ಹೀಗೆ ಒಂದು ದೊಡ್ಡ ರಾಮಾಯಣವೋ ಮಹಾಭಾರತವೋ ಆಗಬಹುದಾಗಿದ್ದ ಸಂಗತಿ ಠುಸ್ ಪಟಾಕಿ ಆಗಿ ಬಿಡ್ತು. ಇವತ್ತಿಗೂ ನನಗೆ ಆಶ್ಚರ್ಯ ಅಂದರೆ ಹೆಂಗಸು ಅದು ಹೇಗೆ ಗಂಡಸಿನ ಆ ಗುಸುಗುಸು ಗೆ ಒಪ್ಪಿದಳು, ಅದೇನು ಮಂತ್ರ ಹಾಕಿದ ಅಂತ… ಅವನು ಹಾಕಿದ ಮಂತ್ರ ನನಗಾದರೂ ಅವನು ಹೇಳಿಕೊಡಬೇಕಿತ್ತು …… ಅಂತ ಅದೆಷ್ಟೋ ಸಾವಿರ ಸಲ ಅನಿಸಿದೆ!

ಗಂಡ ಚೆಕ್ ಕೊಡ್ತಾನೆ ಅಂದರೆ ಅಡ್ವಾನ್ಸ್ ಹಣ ಇವಳಿಗೇ ಮಿಕ್ಕಿತು ಅಂತ ತೆಪ್ಪಗಾಗಿರಬೇಕು ಅಂತ ನನ್ನಾಕೆ ನಂತರ ತೀರ್ಪು ಕೊಟ್ಟಳು. ಇವಳು ಕಗ್ಗತ್ತಲೆಯ ರಾತ್ರಿಯಲ್ಲಿ ನಡೆದು ಹೊರಟರೆ ಅರ್ಧ ಡಜನ್ ಜನ ಇವಳನ್ನು ನೋಡಿ ಹಾರ್ಟ್ ಅಟ್ಯಾಕ್ ಆಗಿರೋರು, ಅದಕ್ಕೇ ಗಂಡ ಬಂದಿದ್ದು ಗೊತ್ತಾ ಅಂತ ಶರಾ ಹಾಕಿದಳು!

ಇದ್ದರೂ ಇರಬಹುದು ಹೆಣ್ಣಿನ ಮನಸು ಹೆಣ್ಣಿಗೇ ತಾನೇ ಅರ್ಥ ಆಗೋದು?

ಒಂದೆರೆಡು ದಿವಸದ ನಂತರ ಅವರ ಸೆಕ್ಷನ್ ಹುಡುಕಿ ಹೋಗಿ ಬೀಗದ ಕೈ ಕೊಟ್ಟೆ, ಚೆಕ್ ಕೊಟ್ಟ. ಮಿಸೆಸ್ ಸ್ವಲ್ಪ ಒರಟು ಏನೂ ಅಂದ್ಕೋಬೇಡಿ… ಅಂದ!

ಮಾರನೇ ದಿವಸದಿಂದ ನಮ್ಮ ಹೊಸಮನೆಯಲ್ಲಿ ಜೀವನ ಶುರು ಆಯಿತು.

ಆಗಿನ್ನೂ ಡೈರಿ ಹಾಲು ಇರಲಿಲ್ಲ. ಮನೆ ಹತ್ತಿರವೇ ಹೊಲ ಮನೆ ಇದ್ದು ಹಸು ಸಾಕುತ್ತಿದ್ದ ಒಬ್ಬರು ಹಾಲು ಕೊಡಲು ಶುರುಮಾಡಿದರು. ಮನೆಯಿಂದ ಅರ್ಧ ಕಿಮೀ ದೂರದಲ್ಲಿ ತಿಂಡಲು ಹಳ್ಳಿ. ಅಲ್ಲಿ ಇನ್ನೂ ತೋಟಗಳು, ಹೊಲಗಳು ಇದ್ದವು. ಅಲ್ಲಿ ತರಕಾರಿ ಬೆಳೆಯುತ್ತಾ ಇದ್ದರು.ಅಲ್ಲಿಂದ ತರಕಾರಿ ತಂದು ಮಾರುತ್ತಿದ್ದರು. ಬೇಸಿಕ್ ನೀಡ್ಸ್ ಒಂದೊಂದೇ ಪೂರೈಕೆ ಆಗುತ್ತಿತ್ತು.

ಫ್ಯಾಕ್ಟರಿಯಿಂದ ಮೂರು ಕಿಮೀ ನನ್ನ ಹೊಸಾ ಮನೆ. ಎಂದಿನ ಹಾಗೆ ಎರಡು ಶಿಫ್ಟು. ಒಂದೇ ಶಿಫ್ಟ್‌ನಲ್ಲಿ ಹೋಗುವ ಅವಕಾಶ ಸಿಗಲಿಲ್ಲ. ಅದರಿಂದ ಎರಡೂ ಶಿಫ್ಟ್ ಹೋಗುತ್ತಿದ್ದೆ. ಮೊದಲನೆಯದು ಅಂದರೆ ಬೆಳಿಗ್ಗೆ ಶಿಫ್ಟು ಆರುವರೆಯಿಂದ ಮೂರು, ಎರಡನೆಯದು ಮಧ್ಯಾಹ್ನ ಎರಡು ಮುಕ್ಕಾಲರಿಂದ ರಾತ್ರಿ ಹನ್ನೊಂದು. ಸುತ್ತ ಮುತ್ತ ಮನೆಗಳು ಇಲ್ಲ, ಹತ್ತಿರದಲ್ಲಿ ಕೆರೆ. ಕರೆಂಟ್ ಹೋದರೆ ಎರಡು ದಿವಸ ಮೂರು ದಿವಸ ಕತ್ತಲಲ್ಲೇ ಕೊಳೆಯಬೇಕಾದ ಪರಿಸ್ಥಿತಿ. ಹೆಂಡತಿಯೇನೋ ಗಟ್ಟಿಗಿತ್ತಿ, ನಿಭಾಯಿಸುವ ಶಕ್ತಿ ಹೊಂದಿದ್ದಳು. ಆದರೆ ಅವಳ ತವರುಮನೆ ಅವರಿಗೆ ಆತಂಕವೋ ಆತಂಕವೋ ಆತಂಕ. ಇದಕ್ಕೆ ಅಂದರೆ ಆತಂಕ ಪರಿಹಾರಕ್ಕೆ ಒಂದು ದಾರಿ ಅವರೇ ಕಂಡುಕೊಂಡಿದ್ದರು. ನನಗೆ ನೈಟ್ ಶಿಫ್ಟ್ ಸಮಯದಲ್ಲಿ ನನ್ನ ಮಾವ ಬಂದು ಇರುತ್ತಿದ್ದರು!

ಅವರಿಗೂ ಸುತ್ತಲಿನ ಹಳ್ಳಿಗಳ ಮತ್ತು ಮನೆ ಮುಂದೆ ಓಡಾಡುತ್ತಿದ್ದ ಜನಗಳ ಪರಿಚಯ ಆಯಿತು. ಸಹಜವಾಗಿ ಮನುಷ್ಯ ಸಂಘ ಜೀವಿ. ಎಂತಹ ಕಡೆ ಬಿಟ್ಟರೂ ಅಡ್ಜೆಸ್ಟ್ ಆಗುತ್ತಾನೆ ಎಂದು ಸಮಾಜಶಾಸ್ತ್ರಿಗಳು ಹೇಳುತ್ತಾರೆ. ನಾವು ಅವರ ಮಾತು ಕೇಳದೇ ಇರಲು ಸಾಧ್ಯವೇ? ನಿಧಾನಕ್ಕೆ ಹೊಸ ಪರಿಸರಕ್ಕೆ ಹೊಂದುತ್ತಾ ಹೊಂದಿಕೊಳ್ಳುತ್ತಾ ಬಂದೆವು.

ನನಗಿಂತ ಸ್ವಲ್ಪ ಮೊದಲು ಬಂದು ಸೇರಿದ್ದ ನಮ್ಮ ಫ್ಯಾಕ್ಟರಿಯ ಸಹೋದ್ಯೋಗಿಗಳ ಪರಿಚಯ ನಿಕಟವಾಯಿತು. ನಿಕಟ ಆಗಲೇ ಬೇಕಿತ್ತು, ಕಾರಣ ಫ್ಯಾಕ್ಟರಿ ಅವರಲ್ಲದೆ ಬೇರೆ ಯಾರೂ ಇಲ್ಲಿಗೆ ವಾಸಕ್ಕೆ ಬಂದಿರಲಿಲ್ಲ. ಮೂರು ನಾಲ್ಕು ಬೇರೆ ಬೇರೆ ಕಾರ್ಖಾನೆಗಳ ಬಡಾವಣೆಗಳು ಇಲ್ಲಿ ಇದ್ದವು. ಆದರೆ ನಮ್ಮ ಕಾರ್ಖಾನೆ ಹೌಸ್ ಬಿಲ್ಡಿಂಗ್ ಸಂಘವೇ ಮೊದಲು ಇಲ್ಲಿ ಕಾರ್ಯಾರಂಭ ಮಾಡಿದ್ದು ಮತ್ತು ನಮ್ಮ ಜನವೇ ಮೊದಮೊದಲು ಬಂದು ಇಲ್ಲಿ ವಾಸಿಸಲು ಶುರುಮಾಡಿದ್ದು. ಅದರಿಂದ ಒಂದು ರೀತಿಯ ಪ್ರಾಮುಖ್ಯತೆ ನಮ್ಮ ಕಾರ್ಖಾನೆಗೆ ಸಂದಿತು. ಹೊಸ ಬಡಾವಣೆ ಅಭಿವೃದ್ಧಿ ಹೊಂದಲು ಅದಕ್ಕೆ ಪೂರಕವಾಗಿ ಬೆಂಬಲವಾಗಿ ನಿಲ್ಲಲು ಹಲವಾರು ಸರ್ಕಾರಿ ಅರೆಸರ್ಕಾರಿ ಸಂಸ್ಥೆಗಳು ಹಲವು ಬಾರಿ ನೇರವಾಗಿ, ಹಲವುಬಾರಿ ಪರೋಕ್ಷವಾಗಿ ನೆರವಾಗುತ್ತವೆ. ಬೆಂಗಳೂರಿನ ಹೊಸ ಹೊಸಾ ಬಡಾವಣೆಗಳು ಆಗ ಬೆಳೆದ ಕತೆಯೇ ಒಂದು ರೀತಿ ವಿಶಿಷ್ಟ ಮತ್ತು ರೋಚಕವಾದದ್ದು. ನಮ್ಮ ಬಾಳು, ನಮ್ಮ ಜೀವನ, ನಮ್ಮ ಜೀವನಕ್ಕೆ ಒಂದು ಅರ್ಥ ಬಂದಿದ್ದು ಇಂತಹ ಕಡೆಯಿಂದ.. ಇದರ ಹಲವಾರು ಮಜಲುಗಳು ಕ್ಯೂ ನಿಂತಿವೆ, ತಮ್ಮ ಮುಂದೆ ಬಿಚ್ಚಿಕೊಳ್ಳಲು, ಪ್ರದರ್ಶನಗೊಳ್ಳಲು, ಅವುಗಳ ಕತೆ ಹೇಳಲು…. ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ…. ಸರಿ ತಾನೇ ಸರ, ಸರಿ ತಾನೇ ಮೇಡಂ……

ಇನ್ನೂ ಇದೆ…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ