ಲೋಗನಾಥನ್, “ಓ ಅದಕ್ಕೆ ನನಗೆ ಗೊತ್ತಿಲ್ಲ. ಮಹಾಭಾರತದಲ್ಲಿ ಐದು ಜನ ಅಣ್ಣತಮ್ಮಂದಿರು. ನೀವು ನೋಡಿದರೆ ಎಂಟು ಜನ” ಎಂದ. ಪಕ್ಕದಲ್ಲಿದ್ದ ಮಣಿ, “ಸರ್ ಅವರೆಲ್ಲರ ಹೆಸರುಗಳು ಏನೇನು ಅಂತ ಗೊತ್ತ ಸರ್?” ಎಂದ. ಲೋಗನಾಥನ್, “ಗೊತ್ತಿಲ್ಲ” ಎಂದ. ಮಣಿ “ಕರ್ಣನ್, ಧರ್ಮರಾಯನ್, ಭೀಮನ್, ಅರ್ಜುನನ್, ನಖುಲನ್ ಮತ್ತು ಸಹದೇವನ್” ಎನ್ನುತ್ತಿದ್ದಂತೆ, ಲೋಗನಾಥನ್ “ಇನ್ನೂ ಮೂವರ ಹೆಸರು?” ಕೇಳಿದರು. ಗೋವಿಂದ, “ಮೊದಲ ಇಬ್ಬರು ಸತ್ತೋದರಂತೆ ಸರ್. ಐದು ಜನ ಗಂಡು ಮಕ್ಕಳಾದ ಮೇಲೆ ನಾನು ಹುಟ್ಟಿ, ನನಗೆ ಗೋವಿಂದಾ ಅಂತ ಹೆಸರು ಇಟ್ಟ ಮೇಲೆ ನಮ್ಮಮ್ಮನಿಗೆ ಮಕ್ಕಳಾಗುವುದು ನಿಂತೋಯಿತಂತೆ” ಎಂದ ಗೋವಿಂದನೆ ಬಿದ್ದೂಬಿದ್ದು ನಕ್ಕ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ
ಅಧ್ಯಾಯ – 9
ಗಣಿಯಲ್ಲಿ ಮಣಿಗೆ ದೊರಕುವ ಸಂಬಳ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ. ಅದು ಕೊನೆಯವರೆಗೂ ಹಾಗೇ ಇರುತ್ತದೆ ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತು. ಈ ಕಾರ್ತಿಕ್ ಏನಾದರು ಚೆನ್ನಾಗಿ ಓದಿ ಯಾವುದಾದರೂ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರೆ ಹಾಗೇನಾದರು ನಮ್ಮ ಬದುಕು ಸುಧಾರಿಸಬಹುದು ಎನ್ನುವ ಭರವಸೆಯನ್ನು ಸೆಲ್ವಿ ಇಟ್ಟುಕೊಂಡಿದ್ದಾಳೆ. ಹೀಗೆ.. ಸೆಲ್ವಿ ತಲೆಯಲ್ಲಿ ಏನೇನೊ ಆಲೋಚನೆಗಳು ಮುಗಿಬಿದ್ದು ಕಾಡತೊಡಗಿದವು. ಸೆಲ್ವಿ ಈ ಆಲೋಚನೆಗಳಲ್ಲಿ ಕೋಮಲ ಎದುರಿಗೆ ಇರುವುದನ್ನೇ ಮರೆತುಬಿಟ್ಟಿದ್ದಳು. ಒಂದು ತೊಟ್ಟು ಕಣ್ಣೀರು ಅವಳ ಕಣ್ಣಿನಿಂದ ಬಹಳ ಕಷ್ಟವಾಗಿ ಅಕ್ಕಿಯ ಮೇಲೆ ಬಿದ್ದಿತು. ಇದನ್ನು ಗಮನಿಸಿದ ಕೋಮಲ, “ಅಮ್ಮ” ಎಂದು ಭುಜ ಹಿಡಿದು ಅಲ್ಲಾಡಿಸಿದಳು. ಸೆಲ್ವಿ ತಲೆ ಎತ್ತಲಿಲ್ಲ. ಕೋಮಲ, “ಸಾರಿ ಅಮ್ಮ” ಎಂದಳು. ತಲೆ ಎತ್ತಿದ ಸೆಲ್ವಿ, “ನೀನು ಹೇಳಿದ್ದು ಅಕ್ಷರಃ ಸರಿ ಮಗಳೆ. ನನಗೆ ಆ ಕಾಲದಲ್ಲಿ ಬುದ್ಧಿ ಇರಲಿಲ್ಲ” ಎಂದು ಕೋಮಲಳ ಕೈ ಹಿಡಿದುಕೊಂಡಳು. ಕೋಮಲಳ ಮಾತು ಸೆಲ್ವಿಯ ಕಣ್ಣು ತೆರೆಸಿದಂತಿತ್ತು.
***
ಭಾನುವಾರ ಮಧ್ಯಾಹ್ನ ಮಾಂಸಾಹಾರ ಊಟ ಮಾಡಿ ಒಂದು ನಿದ್ದೆ ಎಳೆದ ಮಣಿ ಸಾಯಂಕಾಲ ಮನೆ ಹೊರಕ್ಕೆ ಬಂದು ಕಲ್ಲು ಬಂಡೆ ಮೇಲೆ ಕುಳಿತುಕೊಂಡು, “ಸೆಲ್ವಿ ಒಂದಷ್ಟು ಟೀ ಮಾಡು” ಎನ್ನುವುದರೊಳಗೆ ಗೋವಿಂದ ಕಾಣಿಸಿಕೊಂಡು, “ನಿಮ್ಮ ಗೋವಿಂದ ಮಾವ ಬಂದರು” ಎಂದ. ಗೋವಿಂದ ಬಂದು ಮಣಿ ಪಕ್ಕದಲ್ಲಿ ಕಲ್ಲಿನ ಮೇಲೆ ಕುಳಿತುಕೊಂಡ. ಅದೇ ಸಮಯಕ್ಕೆ ಹಿರಿಯ ಮಾಜಿ ಮುಖಂಡರಾದ ಲೋಕನಾಥನ್ ಬಿಳಿ ಪಂಚೆ, ಬಿಳಿ ಜುಬ್ಬಾ ಮತ್ತು ಹೆಗಲು ಮೇಲೆ ಒಂದು ಬಿಳಿ ಟವೆಲ್ ಹಾಕಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಗೋವಿಂದ, ಮಣಿ ಇಬ್ಬರೂ ಎದ್ದು ನಿಂತುಕೊಂಡರು. ಗೋವಿಂದ, “ತಲೈವರೆ, ಬಹಳ ದಿನಾ ಆಯಿತು, ನಿಮ್ಮನ್ನು ನೋಡಿ. ದಯವಿಟ್ಟು ಬನ್ನಿ” ಎಂದ. ಲೋಗನಾಥನ್, “ದಿನಾಗಲೂ ಸ್ಮಿಥ್ ರೋಡ್‌ನಲ್ಲಿ ವಾಕ್ ಹೋಗ್ತಾ ಇದ್ದೆ. ಸರಿ ಈ ದಿನ ಈ ಕಡೆ ಹೋಗಿ ಬರೋಣ ಅಂತ ಬಂದೆ” ಎಂದರು. ಮಣಿ, “ಒಳ್ಳೇದಾಯಿತು ಬನ್ನಿ ಸರ್” ಎಂದು ಮನೆ ಒಳಗೆ ಹೋಗಿ ಕುರ್ಚಿ ತಂದು ಮನೆ ಮುಂದೆ ಹಾಕಿದ. ಲೋಗನಾಥನ್, “ನೀವು ಸೆಲ್ವಮ್ ಅವರ ಮಗ ಮಣಿ ಅಲ್ಲವೇ?” ಕೇಳಿ, ಮಣಿ, “ಹೌದು ಸರ್” ಎಂದ.
ಲೋಗನಾಥನ್, “ಈ ಸಾಯಂಕಾಲ ನಿಮ್ಮ ಜೊತೆ ಕುಳಿತು ಮಾತನಾಡಿಕೊಂಡು ಹೋಗ್ತೀನಿ” ಎನ್ನುತ್ತಾ ಕುರ್ಚಿಯಲ್ಲಿ ಕುಳಿತುಕೊಂಡರು. ನಿಂತಿದ್ದ ಮಣಿ ಮತ್ತು ಗೋವಿಂದನನ್ನು ನೋಡಿದ ಲೋಗನಾಥನ್, “ನೀವೂ ಕುಳಿತುಕೊಳ್ಳಿ” ಎಂದರು. ಮಣಿ, “ಸರ್ ಟೀ, ಕಾಫಿ ಏನು ಕುಡಿತೀರ?” ಎಂದಿದ್ದಕ್ಕೆ, ನೀವು ಏನು ಕುಡಿತೀರೊ ಅದನ್ನೇ ನನಗೂ ಕೊಡಿ” ಎಂದರು ಲೋಗನಾಥನ್. ಮಣಿ, “ಸಕ್ಕರೆ” ಎಂದಿದ್ದಕ್ಕೆ “ಇರ್ಲಿ. ತೊಂದರೆ ಇಲ್ಲ. ಸದ್ಯಕ್ಕೆ ಯಾವ ಸಕ್ಕರೆ ಹುಡುಗಿಯೂ ನನ್ನ ಹಿಂದೆ ಬಿದ್ದಿಲ್ಲ” ಎಂದು ನಕ್ಕರು. ಮಣಿ ಮನೆ ಒಳಕ್ಕೆ ಹೋಗಿ ಸೆಲ್ವಿಗೆ ಹೇಳಿಬಂದ. ಗುಡಿಸಿಲುಗಳು ಎಳೆ ಬಿಸಿಲನ್ನು ಕಾಯುತ್ತಿದ್ದವು. ಭಾನುವಾರ ರಸ್ತೆಗಳಲ್ಲಿ ಜನರ ಓಡಾಟ ಮಾಮೂಲಿ ದಿನಗಳಿಗಿಂತ ಹೆಚ್ಚಾಗಿತ್ತು. ಯುವಕರು ಮೈದಾನದಲ್ಲಿ ಮತ್ತು ಸಣ್ಣ ಮಕ್ಕಳು ಗುಡಿಸಿಲುಗಳ ಮುಂದೆ ಆಟವಾಡುತ್ತಿದ್ದರು. ಎದುರಿಗೆ ಸ್ವಲ್ಪ ದೂರದಲ್ಲಿ ರಸ್ತೆಯ ಪಕ್ಕದಲ್ಲಿದ್ದ ಒಂದು ಕಲ್ಲಿನ ಮುಂದೆ ನಿಂತುಕೊಂಡಿದ್ದ ಇಬ್ಬರು ಯುವಕರು ಕಲ್ಲಿನ ಮೇಲಿರುವ ಹೆಸರನ್ನು ಓದಿ ಓದಿ ನಗುತ್ತಿದ್ದರು. ಅವರು ನಗುತ್ತಿರುವುದನ್ನು ಮಣಿ, ಗೋವಿಂದ ಮತ್ತು ಲೋಗನಾಥನ್ ಮೂವರೂ ಗಮನಿಸಿದರು.
ಆ ಕಲ್ಲಿನ ಮೇಲೆ “ಮಚ್ಚೆಮೂಖನ್ (ಮಚ್ಚೆ ಮೂಗಿನವ) ರಸ್ತೆ” ಎಂದು ಬರೆದಿದೆ. ಒಬ್ಬ, “ಇದೇನೊ ಮಚ್ಚೆಮೂಖನ್?” ಎಂದರೆ, ಇನ್ನೊಬ್ಬ, “ಅವನ ಮೂಗಿನ ಮೇಲೆ ಮಚ್ಚೆ ಇರಬೇಕು?” ಎಂದ. ಮೊದಲನೆಯವನು, “ಅದು ಸರಿ ಮಚ್ಚೆಮೂಖನ್ ಅನ್ನೊ ಹೆಸರನ್ನು ಈ ರಸ್ತೆಗೆ ಇಟ್ಟಿದ್ದಾರೆ ಎಂದರೆ ಏನೊ ವಿಶೇಷ ಇರಲೇಬೇಕು” ಎಂದ. ಲೋಗನಾಥನ್, ಮಣಿ ಮತ್ತು ಗೋವಿಂದನ್ ಕಡೆಗೆ ನೋಡಿ “ಮಚ್ಚೆಮೂಖನ್ ಬಗ್ಗೆ ನಿಮಗೆ ಗೊತ್ತ?” ಎಂದರು. ಮಣಿ, ಗೋವಿಂದನ್ ಕಡೆಗೆ ನೋಡಿ “ಇವರ ತಾತನಂತೆ ಸರ್” ಎಂದ. ಲೋಗನಾಥನ್, “ಹೌದಾ!?” ಆಶ್ಚರ್ಯದಿಂದ ಕೇಳಿದರು. ಗೋವಿಂದ, “ಹೌದು ಸರ್. ಇಲ್ಲಿ ಇರುವ ಹಳಬರು ಹೇಳ್ತಾರೆ” ಎಂದ. ಲೋಗನಾಥನ್, “ಓ ಹಾಗಾದರೆ ನೀವು ಕುಪ್ಪನ್ ಮಗನಾ?” ಎಂದರು. ಗೋವಿಂದ, “ಹೌದು! ಸರ್” ಎಂದ. ಲೋಗನಾಥನ್ ಎಷ್ಟು ವರ್ಷಗಳಿಂದ ನಾನು ಈ ಏರಿಯಾದಲ್ಲಿ ಇದ್ದೀನಿ. ನನಗೆ ನೀವು ಗೊತ್ತೆ ಇಲ್ಲವಲ್ಲ? ಹಾಗಾದರೆ ಭೀಮನ್ ನಿಮಗೆ ಚಿಕ್ಕವನಾ ದೊಡ್ಡವನಾ?” ಎಂದಿದ್ದಕ್ಕೆ ಗೋವಿಂದ “ನಮ್ಮ ದೊಡ್ಡಣ್ಣ ಸರ್. ನಾವು ಒಟ್ಟು ಎಂಟು ಜನ ಗಂಡು ಮಕ್ಕಳು” ಎಂದ.
ಲೋಗನಾಥನ್, “ಓ ಅದಕ್ಕೆ ನನಗೆ ಗೊತ್ತಿಲ್ಲ. ಮಹಾಭಾರತದಲ್ಲಿ ಐದು ಜನ ಅಣ್ಣತಮ್ಮಂದಿರು. ನೀವು ನೋಡಿದರೆ ಎಂಟು ಜನ” ಎಂದ. ಪಕ್ಕದಲ್ಲಿದ್ದ ಮಣಿ, “ಸರ್ ಅವರೆಲ್ಲರ ಹೆಸರುಗಳು ಏನೇನು ಅಂತ ಗೊತ್ತ ಸರ್?” ಎಂದ. ಲೋಗನಾಥನ್, “ಗೊತ್ತಿಲ್ಲ” ಎಂದ. ಮಣಿ “ಕರ್ಣನ್, ಧರ್ಮರಾಯನ್, ಭೀಮನ್, ಅರ್ಜುನನ್, ನಖುಲನ್ ಮತ್ತು ಸಹದೇವನ್” ಎನ್ನುತ್ತಿದ್ದಂತೆ, ಲೋಗನಾಥನ್ “ಇನ್ನೂ ಮೂವರ ಹೆಸರು?” ಕೇಳಿದರು. ಗೋವಿಂದ, “ಮೊದಲ ಇಬ್ಬರು ಸತ್ತೋದರಂತೆ ಸರ್. ಐದು ಜನ ಗಂಡು ಮಕ್ಕಳಾದ ಮೇಲೆ ನಾನು ಹುಟ್ಟಿ, ನನಗೆ ಗೋವಿಂದಾ ಅಂತ ಹೆಸರು ಇಟ್ಟ ಮೇಲೆ ನಮ್ಮಮ್ಮನಿಗೆ ಮಕ್ಕಳಾಗುವುದು ನಿಂತೋಯಿತಂತೆ” ಎಂದ ಗೋವಿಂದನೆ ಬಿದ್ದೂಬಿದ್ದು ನಕ್ಕ. ಲೋಗನಾಥ್, “ಏನು ವಿಚಿತ್ರಾನಪ್ಪ? ಈ ವಿಷಯ ನನಗೆ ಗೊತ್ತೇ ಇಲ್ಲವಲ್ಲ. ಎಲ್ಲರೂ ಬದುಕಿದ್ದರೆ ಅವರಿಗೆ ಹೆಸರಿಡಲು ಇನ್ನೊಂದು ಮಹಾಭಾರತವೇ ನಡೆದೋಗುತ್ತಿತ್ತು” ಎಂದ. ಒಳಗಿದ್ದ ಕನಕ, ಸೆಲ್ವಿ, ಕೋಮಲ ಕೂಡ ನಗುವನ್ನು ತಡೆದುಕೊಳ್ಳಲಾಗದೆ ಜೋರಾಗಿ ನಗುತ್ತಿದ್ದರು.
ಕೋಮಲ ಒಂದು ತಟ್ಟೆಯಲ್ಲಿ ಮೂರು ಟೀ ಕಪ್ಪುಗಳನ್ನು ತಂದು ಕೊಟ್ಟಳು. ಹಿಂದೆಯೇ ಬಂದ ಸೆಲ್ವಿ ಕೈಮುಗಿದು “ವಣಕ್ಕಂ ಸರ್” ಎಂದಳು. ಮಣಿ, “ನನ್ನ ಪತ್ನಿ ಕಲೈಸೆಲ್ವಿ” ಎಂದು ಪರಿಚಯಿಸಿದ. ಲೋಗನಾಥನ್, “ವಣಕ್ಕಂ ಮಗಳೆ” ಎಂದು ಎದ್ದುನಿಂತು ಕೈಮುಗಿದರು. ಮಣಿ, “ಕುಳಿತುಕೊಳ್ಳಿ ಸರ್. ನೀವ್ಯಾಕೆ ಎದ್ದು ನಿಲ್ತೀರ?” ಎಂದ. ಲೋಗನಾಥನ್, “ಕಲೈಶೆಲ್ವಿ ತುಂಬಾ ಒಳ್ಳೆ ಹೆಸರು. ಅಸಲಿ ತಮಿಳೆಸರು” ಎಂದರು. ಮತ್ತೆ ಮಣಿ, “ಈಕೆ ಕಾರ್ಮಿಕ ಮುಖಂಡ ಅಯ್ಯಪ್ಪನ ಏಕೈಕ ಮಗಳು” ಎಂದ. ಲೋಗನಾಥನ್, “ಓ ಹಾಗಾದರೆ ನಾನು ನಿಮ್ಮ ಮದುವೆಗೆ ಬಂದಿದ್ದನಲ್ಲ? ನನಗೂ ವಯಸ್ಸಾಯಿತು ನೋಡು” ಎಂದು ಜ್ಞಾಪಿಸಿಕೊಂಡು ನಕ್ಕರು. ಸೆಲ್ವಿ ತಲೆ ಬಗ್ಗಿಸಿಕೊಂಡಳು. ಮಣಿ, “ಅಮ್ಮ ಅಮ್ಮ” ಎಂದಿದ್ದೆ, ಮನೆ ಒಳಗಿದ್ದ ಕನಕ ಎದ್ದು ಹೊರಕ್ಕೆ ಬಂದರು. ಮಣಿ ತನ್ನ ತಾಯಿಯನ್ನು “ನಮ್ಮ ತಾಯಿ ಕನಕಮ್ಮ. ಸೆಲ್ವಮ್ ಅವರ ಏಕೈಕ ಪತ್ನಿ” ಎಂದು ನಗುತ್ತಾ ಪರಿಚಯಿಸಿದ. ಲೋಗನಾಥನ್ ಮತ್ತೆ ಎದ್ದು ನಿಂತು “ಹೌದಾ! ಇವರು ಸೆಲ್ವಮ್ ಅವರ ಏಕೈಕ ಪತ್ನೀನಾ? ತುಂಬಾ ಅದೃಷ್ಟವಂತೇನಮ್ಮ ನೀವು. ನಮ್ಮ ಕ್ಯಾಂಪ್‌ಗಳಲ್ಲಿ ಒಬ್ಬೊಬ್ಬರಿಗೆ ಇಬ್ಬರು ಮೂವರು ಪತ್ನಿಯರು ಇರ್ತಾರೆ” ಎಂದ ಜೋರಾಗಿ ನಕ್ಕರು. ನಂತರ ಸೆಲ್ವಿ, ಕನಕ ಮನೆ ಒಳಕ್ಕೆ ಹೋದರು.
(ಹಿಂದಿನ ಕಂತು: ಮಿಂಚಿಹೋದ ಕಾಲ….:)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.