ಗುರುವಾರ ಬೆಳಗ್ಗೆ ಇದ್ದ ಒಂದು ಪ್ಯಾರಲಲ್ ಸೆಶನ್ ನಲ್ಲಿ ನನ್ನ ರಿಸರ್ಚ್ ವಿದ್ಯಾರ್ಥಿಯೊಬ್ಬರು ಅವರ ಅಧ್ಯಯನವನ್ನು ಪ್ರಸ್ತುತ ಪಡಿಸುತ್ತಿದ್ದರು. ಅವರಿಗೆ ಬೆಂಬಲ ಕೊಡಲು ನಾನಲ್ಲಿದ್ದೆ. ಅದಕ್ಕೂ ಮುಂಚೆ ನನಗಿದ್ದ ಮೀಟಿಂಗ್ ಗಳ ಅವಸರದಿಂದ ನಾನು ಅವತ್ತಿನ ಸೆಷನ್ಸ್ ವಿವರಗಳನ್ನು ಗಮನಿಸಿರಲಿಲ್ಲ. ನೋಡನೋಡುತ್ತಿದ್ದಂತೆ ನಿಧಾನವಾಗಿ ಕೊಠಡಿ ತುಂಬಿಕೊಳ್ಳಲು ಶುರುವಾಯ್ತು. ನಮ್ಮ ವಿಶ್ವವಿದ್ಯಾಲಯದ ಉಪ-ವೈಸ್ ಚಾನ್ಸಲರ್ ಬಂದು ಕೂತರು. ಗುರುತಿದ್ದ ಇಬ್ಬರು ಪ್ರೊಫೆಸರ್ ಗಳು ಬಂದರು. ನನ್ನ ಪಕ್ಕ ಖಾಲಿ ಇದ್ದ ಚುರ್ಚಿಯಲ್ಲಿ ಒಬ್ಬರು ಬಂದು ಕೂತರು. ಯಾರೆಂದು ನಾನು ನೋಡಲಿಲ್ಲ, ನೋಡಿದ್ದರೂ ಅವರ ಗುರುತು ಸಿಗುತ್ತಿರಲಿಲ್ಲ!
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಜಾಗತಿಕ ಹವಾಮಾನ ಬದಲಾವಣೆಯನ್ನು ಚರ್ಚಿಸಲು ಮತ್ತೊಮ್ಮೆ ಎಲ್ಲರೂ ಸೇರಿದ್ದಾರೆ. ನವೆಂಬರ್ ೯ ರಿಂದ ೨೦ ರ ವರಗೆ ಟರ್ಕಿ ದೇಶದ ಅಂಟಲ್ಯಾ ನಗರದಲ್ಲಿ ವಿಶ್ವಸಂಸ್ಥೆ ಪ್ರಾಯೋಜಿತ COP 31 ಸಮಾವೇಶ ನಡೆಯುತ್ತಿದೆ. ಸುಮಾರು ತೊಂಭತ್ತು ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ಈ ಬಾರಿ ಆಸ್ಟ್ರೇಲಿಯಾ ಸಮಾವೇಶದ ಮುಂಚೂಣಿಯಲ್ಲಿದ್ದು, ಕೇಂದ್ರ ಸರಕಾರದ ಹವಾಮಾನ ಬದಲಾವಣೆ ಮತ್ತು ಶಕ್ತಿ ಇಲಾಖೆ ಮಂತ್ರಿ ಕ್ರಿಸ್ ಬೊಎನ್ (Chris Bowen) ಸಂಧಾನ, ಮಾತುಕತೆ, ಸಮಾಲೋಚನೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಅವರಿಗೆ ಸಾಥ್ ಕೊಡಲು ದೇಶದ ಪ್ರಧಾನಮಂತ್ರಿ ಅಂತೋನಿ ಆಲ್ಬಾನೀಸಿ ಹೋಗಿದ್ದಾರೆ.
ಬಹುಶಃ ನಿಮಗೆ ಇದು ತಿಳಿದಿದೆ. ಜಾಗತಿಕ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ COP ಎಂದರೆ Conference of the Parties. ೧೯೯೨ ರಲ್ಲಿ ವಿಶ್ವಸಂಸ್ಥೆಯು, ಹಲವಾರು ದೇಶಗಳ ಒಮ್ಮತದೊಂದಿಗೆ, ಒಂದು ವಿಶೇಷ ಅಂತಾರಾಷ್ಟ್ರೀಯ ಒಡಂಬಡಿಕೆಯನ್ನು ಪ್ರಕಟಿಸಿತು. ಇದನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ ಒಪ್ಪಂದ (UN Framework Convention on Climate Change) ಎನ್ನುತ್ತಾರೆ. ಇದಾದ ಮೇಲೆ ಮತ್ತೊಂದು, ಪ್ಯಾರಿಸ್ ಅಗ್ರಿಮೆಂಟ್, ಒಪ್ಪಂದ ೨೦೧೫ ರಲ್ಲಿ ಪ್ರಕಟವಾಯ್ತು. ಭೂಮಿಯ ತಾಪಮಾನ ಏರಿಕೆಗೆ ಕಡಿವಾಣ ಹಾಕಿ ಅದನ್ನು ೧.೫ ಡಿಗ್ರಿ ಸೆಲ್ಷಿಯಸ್ ಒಳಗೆ ಇರುವಂತೆ ನೋಡಿಕೊಳ್ಳುವುದು ಎಲ್ಲರಿಗೂ ಮುಖ್ಯವಾದ ವಿಷಯ.
ಈ ಒಪ್ಪಂದ, ಒಡಂಬಡಿಕೆಗಳನ್ನು ಆಧರಿಸಿ, ಪ್ರತಿವರ್ಷವೂ ಒಂದೆಡೆ ಜನರು ಸೇರಿ ಹವಾಮಾನ ಬದಲಾವಣೆಯ ಬಗ್ಗೆ ಆಗಬೇಕಿರುವ ಕೆಲಸಗಳನ್ನು, ಪರಸ್ಪರ ಜವಾಬ್ದಾರಿಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಈ ವರ್ಷ ೩೧ ನೆ ಸರ್ತಿ ಭೇಟಿಯಾಗುತ್ತಿದ್ದಾರೆ. ಸರಕಾರಗಳು, ಸರಕಾರೇತರ ಸಂಸ್ಥೆಗಳು, ಆದಿವಾಸಿ-ಮೂಲ ಜನರು, ಜನಪ್ರತಿನಿಧಿಗಳು, ವಿಜ್ಞಾನಿಗಳು, ಯುವಜನರ ಪ್ರತಿನಿಧಿಗಳು, ಎಂಬಂತೆ ತರಾವರಿ ತಂಡಗಳು ಪಾಲ್ಗೊಳ್ಳುತ್ತವೆ. ಎಲ್ಲರೂ ಭೂಮಿಯ ಆರೋಗ್ಯದ ಬಗ್ಗೆ, ಏರುತ್ತಿರುವ ತಾಪಮಾನದ ಬಗ್ಗೆ ಮಾತನಾಡುತ್ತಾರೆ. ಅವ್ಯಾಹತವಾಗಿ ನಡೆದಿರುವ ಕಲ್ಲಿದ್ದಲು ಗಣಿಗಾರಿಕೆ, ಅರಣ್ಯನಾಶ, ಹೆಚ್ಚುತ್ತಿರುವ ವಾಹನಗಳು ಮತ್ತು ಪಳೆಯುಳಿಕೆ ಇಂಧನಗಳ ಬಳಕೆ, ಕಡಿವಾಣವಿಲ್ಲದ ತ್ಯಾಜ್ಯವಸ್ತುಗಳು ಹೀಗೆ ಹಲವಾರು ವಿಷಯಗಳ ಬಿಸಿಬಿಸಿ ಚರ್ಚೆ ನಡೆಯುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಇರುವ ಹದಿಮೂರನೆ ಗುರಿ ಹವಾಮಾನ ಸುಧಾರಣೆ (Goal 13 Climate Action).
ಚರ್ಚೆಗಳ ಕಾವು ಮಿತಿಮೀರದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಇರುವುದು ಸಂಧಾನ, ಸಮಾಲೋಚನಾಕಾರರಿಗೆ. ಇದೊಂದು ಮಹತ್ವದ ಪಾತ್ರ. ಏಕೆಂದರೆ COP ಸಮಾವೇಶ ಎಂದರೆ ಅಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಭುಗಿಲೇರುತ್ತವೆ. ಈ ದೇಶದ ಸರ್ಕಾರವು ಆ ದೇಶದ ಸರ್ಕಾರವನ್ನು ದೂಷಿಸುವುದು, ಅಭಿವೃದ್ಧಿ ಹೊಂದಿದ, ಅಭಿವೃದ್ಧಿಯತ್ತ ನಡೆಯುತ್ತಿರುವ ದೇಶಗಳು ಒಬ್ಬರಿಗೊಬ್ಬರು ಚುರುಕು ಮುಟ್ಟಿಸುತ್ತಾರೆ.
COP 31 ಸಮಾಲೋಚನೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಆಸ್ಟ್ರೇಲಿಯಾದ ಕೇಂದ್ರ ಮಂತ್ರಿ ಕ್ರಿಸ್ ಬೊಎನ್ ಅವರಿಗೆ ಚುರುಕು ತಾಗಿದೆ. ಬಿಸಿ ತಾಗಿಸಿದ್ದು ಸ್ವೀಡನ್ ದೇಶದ ಹೆಸರಾಂತ ಪರಿಸರ ಪರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್. ಆಸ್ಟ್ರೇಲಿಯಾದ ಹವಾಮಾನ ಸುಧಾರಣೆ ಕೆಲಸಗಳ ‘ನಿಧಾನ’ ಪ್ರಗತಿಯ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ‘even a snail would agree’ – ಬಸವನಹುಳು ಅಂತಾ ನಿಧಾನ ನಡಿಗೆಯ ಜೀವಿಯೂ ಕೂಡ ಒಪ್ಪುತ್ತದೆ, ಎಂದಿದ್ದಾರೆ. ಆಕೆಯ ಸಂಗಡ ಪರವಾಗಿ ಇದ್ದಿದ್ದು ಆಸ್ಟ್ರೇಲಿಯಾ, ನೇಪಾಳ, ಮುಂತಾದ ದೇಶಗಳ ಮೂಲಜನರ ಪ್ರತಿನಿಧಿಗಳು. ಆಸ್ಟ್ರೇಲಿಯಾ ಮೂಲಜನರ ಪ್ರತಿನಿಧಿ ರಿಕ್ಕಿ ಡಾಂಕ್ ತನ್ನ ಹೇಳಿಕೆಯಲ್ಲಿ ಪ್ರಧಾನಮಂತ್ರಿ ಆಲ್ಬಾನೀಸಿ ಜನರ ಅಭಿಪ್ರಾಯವನ್ನು ಮನ್ನಿಸಿ, ಕಲ್ಲಿದ್ದಲು ಇತರೆ ಪಳೆಯುಳಿಕೆ ಇಂಧನಗಳ ಉತ್ಪಾದನೆಯನ್ನು ನಿಲ್ಲಿಸಬೇಕು ಅಂದಿದ್ದಾರೆ. ಆಲ್ಬಾನೀಸಿ ಅವರು ತನ್ನ ಅಭಿಪ್ರಾಯ ಸೂಚಿಸಲು ಗ್ರೇಟಾ ಥನ್ಬರ್ಗ್ ಗೆ ಹಕ್ಕು ಇದೆ ಎಂದು ಪ್ರತಿಕ್ರಿಯಿಸಿ, ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡುವತ್ತ ತಮ್ಮ ಸರ್ಕಾರವು ಬದ್ಧವಾಗಿದೆ, ಪುನರ್ಬಳಕೆ ಶಕ್ತಿ ಉಪಯೋಗದ ಬಗ್ಗೆ ತಮ್ಮ ಗಮನವಿದೆ, ಎಂದರು.

(ನನ್ನ ರಿಸರ್ಚ್ ವಿದ್ಯಾರ್ಥಿಯ ಜೊತೆ ನಾನು)
ಜಾಗತಿಕವಾಗಿ ಹವಾಮಾನ ಬದಲಾವಣೆ ಯಾವ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವುದು ಕುತೂಹಲಕರ ಪ್ರಶ್ನೆ. ಈ ಪ್ರಶ್ನೆಯ ಜಾಡು ಹಿಡಿದು ಅನೇಕ ಪರಿಸರ ವಿಜ್ಞಾನಿಗಳು ಸಂಶೋಧನೆ, ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಅಂತಹ ಕೆಲ ಅಧ್ಯಯನಗಳ ರುಚಿ ನನಗೆ ಸಿಕ್ಕಿದ್ದು ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಬಿತ್ತರವಾದ Ages of Ice ಡಾಕ್ಯುಮೆಂಟರಿ. ನವೆಂಬರ್ ಮೂರನೇ ತಾರೀಕು ಮಂಗಳವಾರ ರಾತ್ರಿ ABC ಟೀವಿ ಚಾನೆಲ್ ನಲ್ಲಿ ಈ ಡಾಕ್ಯುಮೆಂಟರಿಯ ಮೊದಲ ಭಾಗ (ಮೂರು ಕಂತುಗಳಿವೆ) ಪ್ರಸಾರವಾಯ್ತು. ಈ ಮೊದಲ ಭಾಗದಲ್ಲಿ ಕಂಡಿದ್ದು ಭೂಗೋಳದ ಆ ತುದಿಯಿಂದ ಈ ತುದಿಯವರೆಗೆ ನಡೆಯುತ್ತಿರುವ ಅತ್ಯಂತ ರೋಚಕ ಅಧ್ಯಯನಗಳು. ಅಂಟಾರ್ಟಿಕಾದಿಂದ ಆರ್ಟಿಕ್ ವಿಸ್ತಾರದಲ್ಲಿ, ಹಿಮ ಹೆಪ್ಪುಗಟ್ಟಿದ ಪ್ರದೇಶಗಳಲ್ಲಿ ಸಂಶೋಧನೆ ನಡೆಸುತ್ತಾ, ಹವಾಮಾನ ಬದಲಾವಣೆಯ ಗುರುತುಗಳನ್ನು, ಆಧಾರವನ್ನು, ಸಾಕ್ಷಿಯನ್ನು ಸಂಗ್ರಹಿಸುತ್ತಿರುವ ವಿಜ್ಞಾನಿಗಳ ಕೆಲಸವನ್ನು ಟೀವಿ ಪರದೆಯ ಮೇಲೆ ನೋಡುತ್ತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯ್ತು. ತಮ್ಮ ದೈನಂದಿಕ ಆರಾಮಾದ ಜೀವನವನ್ನು ಬಿಟ್ಟುಕೊಟ್ಟು, ಅತ್ಯಂತ ಕಠಿಣ ಪರಿಸರದಲ್ಲಿ, ವಿಶೇಷ ಪೋಷಾಕುಗಳನ್ನು ಧರಿಸಿ, ಎದುರಾಗುವ ಎಲ್ಲಾ ಬಗೆಗಳ ಸವಾಲುಗಳನ್ನು ಎದುರಿಸಿ ಈ ಬಗೆಯ ಅಧ್ಯಯನಗಳನ್ನು ಮಾಡಲು ಗುಂಡಿಗೆ ಗಟ್ಟಿಯಿರಬೇಕು. ಅವರ ಕೆಲಸದಲ್ಲಿ ಅಪರಿಮಿತ ಸಾಹಸವಿತ್ತು. ಅಂತಃಶಕ್ತಿಯನ್ನು ಪ್ರಶ್ನಿಸುವ ಪರೀಕ್ಷೆಗಳು ಎದುರಾಗುತ್ತಿದ್ದವು. ಮನುಷ್ಯರ ಸಹಿಷ್ಣುತೆಯ ಪರಮಾವಧಿ ಉದಾಹರಣೆಗಳು ಇವು.
ಮಂಗಳವಾರ ನವೆಂಬರ್ ಮೂರರಂದು ಟೀವಿ ಪರದೆಯ ಮೇಲೆ ಈ ಡಾಕ್ಯುಮೆಂಟರಿಯನ್ನು ನೋಡಿದ್ದಾಯ್ತು. ನೋಡಲು ನನಗಿದ್ದ ಒಂದು ಮುಖ್ಯ ಕಾರಣ ವಿಜ್ಞಾನಿಗಳ ತಂಡವೊಂದರಲ್ಲಿ ಸಂಶೋಧನಾಕಾರರಾಗಿದ್ದ ನಮ್ಮ ವಿಶ್ವವಿದ್ಯಾಲಯದವರು. ವೆಬ್ಸೈಟ್ ಮುಖವಾಣಿ ಮುನ್ಸೂಚನೆಯಂತೆ ಮಂಗಳವಾರ ರಾತ್ರಿ ಪ್ರಸಾರವಾಗುವ ಡಾಕ್ಯುಮೆಂಟರಿಯ ಬಗ್ಗೆ ಅದಾಗಲೆ ನಮಗೆಲ್ಲ ತಿಳಿದಿತ್ತು. ಸರಿ, ಕಾರ್ಯಕ್ರಮವನ್ನು ನೋಡಿ ವಿಜ್ಞಾನಿಗಳಿಗೆ ಸೈ ಎಂದಿದ್ದಾಯ್ತು.
ಅದೇ ವಾರ ಐದನೇ ತಾರೀಕು ಗುರುವಾರ ಡಾಕ್ಯುಮೆಂಟರಿಯ ಸಂಶೋಧನಾ ತಂಡದಲ್ಲಿ ಕಂಡಿದ್ದ ನಮ್ಮ ವಿಶ್ವವಿದ್ಯಾಲಯದ ವಿಜ್ಞಾನಿ ಏಡ್ರಿಯನ್ ನನ್ನ ಪಕ್ಕದಲ್ಲಿ ಕೂತಿದ್ದರು!
ಆ ಸಂದರ್ಭ ಹೀಗಿತ್ತು. ಅಂದು ಗುರುವಾರ ನಮ್ಮ ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಕಾನ್ಫರೆನ್ಸ್ ಇತ್ತು. ನೂರಾರು ಬಗೆಬಗೆ ವಿಷಯಗಳಲ್ಲಿ ನಡೆಯುತ್ತಿರುವ ನಮ್ಮನಮ್ಮ ಅಧ್ಯಯನಗಳನ್ನು ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುವ ಅವಕಾಶ. ಗುರುವಾರ ಬೆಳಗ್ಗೆ ಇದ್ದ ಒಂದು ಪ್ಯಾರಲಲ್ ಸೆಶನ್ ನಲ್ಲಿ ನನ್ನ ರಿಸರ್ಚ್ ವಿದ್ಯಾರ್ಥಿಯೊಬ್ಬರು ಅವರ ಅಧ್ಯಯನವನ್ನು ಪ್ರಸ್ತುತ ಪಡಿಸುತ್ತಿದ್ದರು. ಅವರಿಗೆ ಬೆಂಬಲ ಕೊಡಲು ನಾನಲ್ಲಿದ್ದೆ. ನಾವಿಬ್ಬರೂ ಸ್ವಲ್ಪ ಬೇಗನೆ ಹೋಗಿ ಕೂತಿದ್ದೆವು. ಅದಕ್ಕೂ ಮುಂಚೆ ನನಗಿದ್ದ ಮೀಟಿಂಗ್ ಗಳ ಅವಸರದಿಂದ ನಾನು ಅವತ್ತಿನ ಸೆಷನ್ಸ್ ವಿವರಗಳನ್ನು ಗಮನಿಸಿರಲಿಲ್ಲ. ನೋಡನೋಡುತ್ತಿದ್ದಂತೆ ನಿಧಾನವಾಗಿ ಕೊಠಡಿ ತುಂಬಿಕೊಳ್ಳಲು ಶುರುವಾಯ್ತು. ನಮ್ಮ ವಿಶ್ವವಿದ್ಯಾಲಯದ ಉಪ-ವೈಸ್ ಚಾನ್ಸಲರ್ ಬಂದು ಕೂತರು. ಗುರುತಿದ್ದ ಇಬ್ಬರು ಪ್ರೊಫೆಸರ್ ಗಳು ಬಂದರು. ನನ್ನ ಪಕ್ಕ ಖಾಲಿ ಇದ್ದ ಚುರ್ಚಿಯಲ್ಲಿ ಒಬ್ಬರು ಬಂದು ಕೂತರು. ಯಾರೆಂದು ನಾನು ನೋಡಲಿಲ್ಲ, ನೋಡಿದ್ದರೂ ಅವರ ಗುರುತು ಸಿಗುತ್ತಿರಲಿಲ್ಲ! ಡಾಕ್ಯುಮೆಂಟರಿಯಲ್ಲಿ ಕಂಡಿದ್ದ ಮುಖಕ್ಕೂ, ನನ್ನ ಪಕ್ಕ ಕೂತಿದ್ದ ವ್ಯಕ್ತಿಯ ಮುಖಕ್ಕೂ ವ್ಯತ್ಯಾಸವಿತ್ತು.
ಗುರುವಾರ ಬೆಳಗ್ಗೆ ಮೊದಲ ರಿಸರ್ಚ್ ಅಧ್ಯಯನದ ಪ್ರೆಸೆಂಟೇಶನ್ ಆರಂಭವಾಯ್ತು. ಎರಡನೆಯದೂ ಆಯ್ತು. ಚೆನ್ನಾಗಿತ್ತು. ಸೆಶನ್ ನ ಅಧ್ಯಕ್ಷತೆ ವಹಿಸಿದ್ದವರು ಮೂರನೆಯ ಅಧ್ಯಯನದ ಪ್ರಸ್ತುತಿಯನ್ನು ಘೋಷಿಸಿದಾಗ ಅವರು ಹೇಳಿದ ಹೆಸರು ಪರಿಚಯವಿದೆ ಎನ್ನಿಸಿತು. ಅದನ್ನು ಕೇಳಕೇಳುತ್ತಿದ್ದಂತೆ ನನ್ನ ಪಕ್ಕ ಕೂತಿದ್ದವರು ಎದ್ದು ಹೋಗಿ ತಮ್ಮ ಸಂಶೋಧನೆಯ ಬಗ್ಗೆ ಪೀಠಿಕೆ ಕೊಟ್ಟರು. ಅವರು Adrian McCallum. ಏಡ್ರಿಯನ್ ಅವರ ಮುಖ್ಯ ಸಂಶೋಧನಾ ಕ್ಷೇತ್ರ ಹವಾಮಾನ ಬದಲಾವಣೆ. ದೂರದ ಗ್ರೀನ್ಲ್ಯಾಂಡ್, ಆರ್ಟಿಕ್ ಪ್ರದೇಶ, ಹಿಮಾಲಯ ಮುಂತಾದ ಹಿಮ ಹೆಪ್ಪುಗಟ್ಟಿದ ವಲಯಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅಂದು ಗುರುವಾರ ಅವರು ಮಾತನಾಡಿದ್ದು ತಮ್ಮ Ages of Ice ಸಂಶೋಧನೆಯ ಬಗ್ಗೆ. ಪ್ರೆಸೆಂಟೇಶನ್ ಮುಗಿಯಿತು. ಅನೇಕರು ಪ್ರಶ್ನೆಗಳನ್ನು ಕೇಳಿದರು. ನಂತರ ಬಂದು ಎಡ್ರಿಯನ್ ನನ್ನ ಪಕ್ಕದ ಖುರ್ಚಿಯಲ್ಲಿ ಕೂತರು.
ಅವರ ಪ್ರಸಿದ್ಧವಾದ, ಇಡೀ ಆಸ್ಟ್ರೇಲಿಯಾವೇ ಕೇಳಿದ್ದ, ನೋಡಿದ್ದ ಜಾಗತಿಕ ಮಟ್ಟದ ಸಂಶೋಧನೆ ಡಾಕ್ಯುಮೆಂಟರಿ ಅಲ್ಲಿದ್ದ ಎಲ್ಲರಲ್ಲೂ ಪುಳಕ ಹುಟ್ಟಿಸಿತ್ತು. ಎಲ್ಲರೂ ಅದೆ ಮೂಡಿನಲ್ಲಿದ್ದಾಗ ನಂತರ ಇದ್ದದ್ದು ನನ್ನ ವಿದ್ಯಾರ್ಥಿಯ ಪ್ರೆಸೆಂಟೇಶನ್. ಇವರ ಅಧ್ಯಯನವಿದ್ದದ್ದು ದಿನನಿತ್ಯದ ಸಾಮಾನ್ಯ ಆಸ್ಟ್ರೇಲಿಯನ್ನರ ಮನೆಗಳಲ್ಲಿ ಕಾಣಬರುವ asbestos ಪದಾರ್ಥದಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳು, ಆರೋಗ್ಯ ಸಮಸ್ಯೆಗಳು ಮತ್ತು ಪರಿಸರಕ್ಕೆ ಆಗುವ ಹಾನಿ. ಕಟ್ಟಡಗಳಲ್ಲಿ ಈ ವಿಷಕಾರಿ ಪದಾರ್ಥದ ಬಳಕೆಯಿಂದ ಮುಂದುವರೆಯುವ ಪರಿಣಾಮವೆಂದರೆ ತಾಪಮಾನ ಏರಿಕೆ ಮತ್ತು ಪರಿಸರ ಮಾಲಿನ್ಯ. ಇದೂ ಕೂಡ ಅವಶ್ಯವಾದ ಅಧ್ಯಯನ. ಪ್ರೆಸೆಂಟೇಶನ್ ನಂತರ ನಡೆದ ಪ್ರಶ್ನೋತ್ತರದಲ್ಲಿ ಒಬ್ಬರು asbestos exposure ಕುರಿತಾದ ಈ ಅಧ್ಯಯನದ ತುರ್ತಿನ, ಅದರ ಪ್ರಸ್ತುತತೆಯ ಬಗ್ಗೆ ಪ್ರಶಂಸಿಸಿದರು.

ಗುರುವಾರದ ರಿಸರ್ಚ್ ಕಾನ್ಫರೆನ್ಸ್, ಹವಾಮಾನ ಬದಲಾವಣೆ ಬಗ್ಗೆ ಎದ್ದ ಪ್ರಶ್ನೆಗಳು, ಸಿಕ್ಕಿದ, ಇನ್ನೂ ಸಿಕ್ಕದಿರುವ ಉತ್ತರಗಳ ಗುಂಗಿನಲ್ಲೆ ಮುಳುಗಿ ನಾನು ಮರುದಿನ ಮನೆಯಂಗಳದಲ್ಲಿ ಸುತ್ತಾಡಿದೆ. ಅನುಭಾವಕ್ಕೆ ತಾಕಿದ್ದು ಇತ್ತೀಚೆಗೆ ಬೇಕಾದಷ್ಟು ಬಿದ್ದ ಮಳೆಯಿಂದ ಸಂತುಷ್ಟರಾದ ಬಳ್ಳಿ, ಗಿಡ, ಮರಗಳು. ಅಲ್ಲಲ್ಲಿ ನಲಿದಾಡುತ್ತಿದ್ದ ಬಣ್ಣಬಣ್ಣದ ಹೂವಿಧಗಳು. ಅವಕ್ಕೆ ಮುತ್ತಿಕ್ಕುತ್ತಿದ್ದ ಜೇನ್ನೊಣಗಳು, ಚಿಟ್ಟೆಗಳು. ಮತ್ತಷ್ಟು ಹಸಿರು ಹುಟ್ಟಬೇಕು. ಮಳೆಯಾಗಬೇಕು. ಭೂತಾಯಿ ತಂಪಾಗಿರಬೇಕು. ಆಗಲ್ಲವೆ, ಹವಾಮಾನ ಆರೋಗ್ಯಕ್ಕೆ ನಮ್ಮ ಎರಡು ಕಾಸು ಕೊಡುಗೆ ಎನ್ನಿಸಿತು.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.


