ತೀರಾ ಸಣ್ಣ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅತ್ಯಂತ ಕೆಟ್ಟ ಬಾಲ್ಯ, ತಂದೆ-ತಾಯಿ ಪ್ರೀತಿ ಸಿಗದೇ ಅನಾಥ ಪ್ರಜ್ಞೆ ಹೊತ್ತು ಬೆಳೆದ ಮೇರಿ, ಮೂಕಿಯಾದಳು. ಮನುಷ್ಯರೊಂದಿಗೆ ಮಾತು ಮರೆತು ಪ್ರಕೃತಿಯೊಂದಿಗೆ ಜೀವಿಸಿದಳು. ಕಾಡಿನಲ್ಲಿ ಮೈಲಿಗಟ್ಟಲೆ ಗುರಿಯಿರದೆ ಸುತ್ತಾಡುವುದು ಈ ಕವಿಯ ಮೆಚ್ಚಿನ ಕೆಲಸವಾಗಿತ್ತು. ಇದನ್ನ ಹವ್ಯಾಸ ಅನ್ನಲಾರೆ, ದಿನವೂ ಕಾಡಿನೊಳಗೆ ಅಡ್ಡಾಡಿ ಬರುವುದು ಉಸಿರಾಟದಷ್ಟೇ ಅವಶ್ಯಕವಾಗಿತ್ತು ಈಕೆಗೆ. “ಈ ಪ್ರಪಂಚದಲ್ಲಿ ನಾನು ಓಡಾಡೋದು ಪ್ರೀತಿಸಲು” ಎಂದೇ ಹೇಳುತ್ತಾರೆ ಮೇರಿ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಮೇರಿ ಆಲಿವರ್(1935-2019) ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

“ಕಾವ್ಯ ಮಣ್ಣಿನ ಕಸುವು, ಕವಿತೆ ಬರಿದೆ ಮಾತಲ್ಲ ಕೊರೆವ ತಂಪಿನ ಅಗ್ನಿದಿವ್ಯ, ಪಾತಾಳದಲ್ಲಿ ಕಳೆದು ಹೋದವರ ಮೇಲೆತ್ತುವ ಬಳ್ಳಿ, ಹಸಿದವರ ಕಿಸೆಯೊಳಗಿನ ತುಂಡು ರೊಟ್ಟಿ” ಎಂದು ಹೇಳುವ ಮೇರಿ ಆಲಿವರ್ ಹುಟ್ಟಿದ್ದು ಸೆಪ್ಟೆಂಬರ್ ೧೦, ೧೯೩೫ ಅಮೆರಿಕಾದ ಓಹಿಯೋದಲ್ಲಿ. ಪ್ರತಿಷ್ಠಿತ ಪುಲಿಟ್ಜಾರ್ ಪ್ರಶಸ್ತಿ ಪಡೆದ ಮೇರಿ ಹದಿನೈದಕ್ಕಿಂತಲೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕಾವ್ಯದ ಕಡುಮೋಹಿಯಾದ ಮೇರಿಯವರ ಕಾವ್ಯದ ಮೂಲ ದ್ರವ್ಯ ಪ್ರಕೃತಿ. ಪ್ರಕೃತಿಯಿಂದ ಮನುಷ್ಯ ಕಲಿಯ ಬೇಕಾದ್ದು ಬಹಳಷ್ಟಿದೆ. ಸಣ್ಣ ಸಣ್ಣ ಸಂಗತಿಗಳನ್ನ ಪ್ರಕೃತಿ ಅದೆಷ್ಟು ಶಕ್ತವಾಗಿ ಹೇಳುವಂತೆಯೇ ಮೇರಿ ಆಲಿವರ್ ಪದ್ಯಗಳೂ ಕೂಡ…

ತೀರಾ ಸಣ್ಣ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅತ್ಯಂತ ಕೆಟ್ಟ ಬಾಲ್ಯ, ತಂದೆ-ತಾಯಿ ಪ್ರೀತಿ ಸಿಗದೇ ಅನಾಥ ಪ್ರಜ್ಞೆ ಹೊತ್ತು ಬೆಳೆದ ಮೇರಿ, ಮೂಕಿಯಾದಳು. ಮನುಷ್ಯರೊಂದಿಗೆ ಮಾತು ಮರೆತು ಪ್ರಕೃತಿಯೊಂದಿಗೆ ಜೀವಿಸಿದಳು. ಕಾಡಿನಲ್ಲಿ ಮೈಲಿಗಟ್ಟಲೆ ಗುರಿಯಿರದೆ ಸುತ್ತಾಡುವುದು ಈ ಕವಿಯ ಮೆಚ್ಚಿನ ಕೆಲಸವಾಗಿತ್ತು. ಇದನ್ನ ಹವ್ಯಾಸ ಅನ್ನಲಾರೆ, ದಿನವೂ ಕಾಡಿನೊಳಗೆ ಅಡ್ಡಾಡಿ ಬರುವುದು ಉಸಿರಾಟದಷ್ಟೇ ಅವಶ್ಯಕವಾಗಿತ್ತು ಈಕೆಗೆ. “ಈ ಪ್ರಪಂಚದಲ್ಲಿ ನಾನು ಓಡಾಡೋದು ಪ್ರೀತಿಸಲು” ಎಂದೇ ಹೇಳುತ್ತಾರೆ ಮೇರಿ.

ಕವಿ ಎಡ್ನಾ ವಿನ್ಸನ್ಟ್ ಮಿಲ್ಲಾಯ್ ರಿಂದ ಬಹಳಷ್ಟು ಪ್ರೇರಿತರಾದ ಮೇರಿ, ತಮ್ಮ ಹದಿಹರೆಯದರಲ್ಲಿ ಎಡ್ನಾ ವಿನ್ಸನ್ಟ್ ಮನೆಯಲ್ಲಿ ಅವರ ತಂಗಿಯ ಸಹಾಯಕಿಯಾಗಿ ಕೆಲವು ವರ್ಷಗಳ ಕಾಲ ಅವರ ಮನೆಯಲ್ಲಿದ್ದುಕೊಂಡು ಕೆಲಸ ಮಾಡಿದ್ದರು. ಮೇರಿ ಆಲಿವರ್ ಕವಿತೆಗಳು ನನಗೊಂದು ಭರವಸೆ ತುಂಬಿದವು, ನಾವು ನಮಗಾದ ನೋವುಗಳ ಅಡಿಯಾಳಾಗಿ ಇರಬೇಕಿಲ್ಲ. ನಾವು ಏನಾಗಬೇಕು, ನಮಗಾದ ನೋವಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ನಮ್ಮ ಆಯ್ಕೆಯಾಗಬೇಕು. ಇವಳ ಪದ್ಯಗಳು ಬಹಳ ಹೊತ್ತು ಕತ್ತಲಲ್ಲಿ ನಿಲ್ಲುವಂಥವಲ್ಲ. ನೋವಿನ ಘಳಿಗೆಗಳಲ್ಲೇ ಕರಗಿ ಹೋಗದೆ, ಹರಿಯುವ ನದಿಯಂತೆ ಹರಿದು ಹೋಗುವಂಥವು.

ಸಣ್ಣವಳಿದ್ದಾಗ ಚರ್ಚಿಗೆ ಹೋಗುವುದೇ ಒಂದು ಬೆರಗಿನ ಸಂಗತಿಯಾಗಿದ್ದರೂ, ಚರ್ಚಿನ ಹೊರಗೆ ಕಾಣುವ ಆಧ್ಯಾತ್ಮಿಕ ಜಗತ್ತು ಹೆಚ್ಚು ಆಪ್ತ ಎಂದು ಹೇಳುವ ಮೇರಿ, ರೂಮಿ ತನ್ನನ್ನು ತೀರಾ ಪ್ರಭಾವಿಸಿದ ಸೂಫಿ ಸಂತಕವಿ ಎಂದು ಹೇಳಿಕೊಂಡ, ರೂಮಿಯ ಹಲವಾರು ಸಾಲುಗಳನ್ನ ಇವರ ಕವಿತೆಗಳಲ್ಲಿ ನಡುನಡುವೆ ಕಲ್ಲುಸಕ್ಕರೆಯಂತೆ ಸಿಗುವುದು ಆಹ್ಲಾದಕರ. ಪದ್ಯವಲ್ಲದೆ ಗದ್ಯವನ್ನೂ ಸಹಿತ ಪದ್ಯದಂತೆಯೇ ಬರೆದ ಮೇರಿ, ಕೊನೆಕೊನೆಯ ಸಂಕಲನಗಳು A Thousand Mornings (2012), Dog Songs (2013), Blue Horses (2014), Felicity (2015), Upstream: Selected Essays (2016), and Devotions: The Selected Poems of Mary Oliver (2017).

ನನ್ನ ಪ್ರಿಯಕವಿ ಹೇಳ್ತಾನೆ “ಮಾತು ಕವಿತೆ ಆಗುವುದಿಲ್ಲ” ಎಂದು ಆದರೆ ಮೇರಿ ಆಲಿವರ್ ಕವಿತೆಗಳೆಲ್ಲ ನೇರ ಓದುಗನನ್ನ ಬಡಿದು ಮಾತನಾಡಿಸುತ್ತವೆ. ಇವರ ಪದ್ಯಗಳು ಓದುಗನನ್ನ ಸೀದಾ ಹೆಸರಿಡಿದು ಕರೆಯುತ್ತವೆ, ಕರೆದು ಪಕ್ಕಕ್ಕೆ ಕೂರಿಸಿಕೊಂಡು ಮಾತು ಹೇಳುತ್ತವೆ. ನಿಜ, ಮಾತು ಕವಿತೆಯಾಗುವುದಿಲ್ಲ. ಆದರೆ, ಇವರ ಕವಿತೆ ಮಾತನಾಡುತ್ತವೆ…

ಈ ಕಾಲದ ಶ್ಯಾಣೆತನದೊಂದಿಗೆ
ನಾನೇನು ಆರಾಮಾಗಿ ಸುಖದಿಂದಿಲ್ಲ
ಬಾಯಿ ತೆರೆದರೆ ಕಂಪ್ಯೂಟರುಗಳದೇ ಮಾತು,
ಬಾಂಬು ರಕ್ತದೋಕುಳಿ ಸುದ್ದಿ
ಈ ಮುಂಜಾನೆ ನನ್ನ ಹಚ್ಚಹಸುರ ಹೊದ್ದ ಹೊಲದಲ್ಲಿ
ಅಡಗಿದ್ದ ಗೂಡು ನೋಡಿದೆ
ನಾಲ್ಕು ಮುದ್ದಾದ ಮೊಟ್ಟೆ
ಮೈ ಮೇಲೆ ಕಪ್ಪು ಚುಕ್ಕೆ
ಮುಟ್ಟಿ ನೋಡಿದೆ, ಮೆಲ್ಲಗೆ ಹೊರಡುವಾಗ
ಈ ಬೆಂದ ಕಾಳೂರಿನ ಎಲ್ಲಾ ಕರೆಂಟು ದೀಪಗಳು
ಒಮ್ಮೆಲೆ ಹೊತ್ತಿಕೊಳ್ಳುವಾಗಿನ ಖುಷಿಗಿಂತ ಹೆಚ್ಚು ಖುಷಿಯೊಂದಿಗೆ

“ಈ ಬದುಕಿಗೆ, ನಾನು ಸುಮ್ಮನೆ ಬಂದು ಹೋಗುವ ಅತಿಥಿ ಆಗಲಾರೆ”, ಎಂದು ಹೇಳುವ ಮೇರಿ ದೀರ್ಘ ೫೦ ವರುಷಗಳ ಕಾಲ ಬರೆದವರು. ಕವಿತೆ ತಾನಾಗಿಯೇ ಹುಟ್ಟುವಂಥದ್ದು, ಕವಿತೆಗೆ ಯಾವ ಕೈಪಿಡಿ, ಶಿಬಿರಗಳ ತಾಲೀಮು ಬೇಕಿಲ್ಲ. ಹಾಗೆ ನೋಡಿದರೆ ಯಾವುದೇ ಕಲೆ ಉಸಿರಾಟದಷ್ಟೇ ಸಲೀಸಾಗಿ ಕಲಾವಿದನಿಗೆ ಬರುವಂಥದ್ದು. ಆದರೆ ಒಂದಿಷ್ಟು ಕುಸುರಿ ಕೆಲಸ ಕಲೆತು ಪ್ರಾವೀಣ್ಯತೆ ಪಡೆಯುವದರಲ್ಲಿ ಮತ್ತಷ್ಟು ಅಂದಗೊಳಿಸಬಹುದು ಎಂದು ನಂಬಿದ ಮೇರಿ ಆಲಿವರ್ “ಎ ಹ್ಯಾಂಡ್ಬುಕ್ ಆನ್ ಪೊಯೆಟ್ರಿ” ಬರೆದರು.

ಪ್ರಕೃತಿಯೊಂದಿಗೆ ನಿಕಟ ಸಂಬಂಧ ಇದ್ದಂಥ ಅಮೆರಿಕಾದ ಕವಿಗಳಾದ Marianne Moore, Elizabeth Bishop, Edna St. Vincent Millay, and Walt Whitman. ರವರ ಸಾಲಿಗೆ ಸೇರುವ ಮೇರಿ ಆಲಿವರ್ ೨೦೧೯ರಲ್ಲಿ ತನ್ನ ೮೩ನೆ ವಯಸ್ಸಿಗೆ ಕ್ಯಾನ್ಸರ್‌ಗೆ ಶರಣಾಗಿ ತಾನು ಪ್ರೀತಿಸುವ ಪ್ರಕೃತಿಯಲ್ಲಿ ಲೀನವಾದಳು. ಇಲ್ಲಿಯ ಅನುವಾದಗಳು ಬಹುತೇಕ ಫೆಲಿಸಿಟಿ ಸಂಕಲನದಿಂದ ಆಯ್ದ ಪದ್ಯಗಳಾಗಿದ್ದು, ಈ ಸಂಕಲನದ ಪದ್ಯಗಳು ನನ್ನನ್ನು ಬಹುವಾಗಿ ಸೆಳೆದದ್ದರಿಂದ ಕೆಲವು ಪದ್ಯಗಳನ್ನು ಕನ್ನಡಕ್ಕೆ ತರುವ ಪ್ರಯತ್ನವಾಗಿದೆ…

೧. ಪುಟ್ಟ ಗುಮ್ಮ
(The little beast)

ಆ ಮುದ್ದು ಪುಟ್ಟ ಗುಮ್ಮ, ಕವಿತೆ
“ಮಾನಸೀಕ ಮಹರಾಯ!”*
ಬಹಳ ಖಾಯಾಸಿನಿಂದ**
ಸೇಬು ತಿನ್ನು ಅಂತ ಕೊಟ್ಟರೆ
ಬಾಡೂಟ ಬೇಡುವುದು

ಹೊಳೆದಂಡೆಯಲಿ ತಣ್ಣಗೆ
ನಾನು ನಡೆಯಬೇಕೆಂದರೆ
ಇದಕ್ಕೋ ತಾನು ತೊಟ್ಟ ಅಂಗಿಯೆಲ್ಲ ಕಳಚಿ
ನೀರೊಳಗೆ ಧುಡುಂ ಎಂದು
ಸುರಂಗ ಹೊಡಿಬೇಕೆನ್ನುವ ಹಠ

ನಾನು ಸಣ್ಣ ಸಣ್ಣ ಪದ ಬಳಸಿ
ಮುಖ್ಯವಾದ ಅರ್ಥ ಕೊಡಬೇಕೆಂದಾಗೆಲ್ಲಾ
ಅದು, ನಿಘಂಟನ್ನೇ ಕಿರುಚುತ್ತಾ ಓದಿ
ಈ ಪದಗಳಿಗೂ
ಈಗಲೇ ಅವಕಾಶ ಕೊಡಬೇಕು ಅನ್ನುತ್ತೆ

ಇನ್ನೂ ಕೊನೆಗೆ ಧನ್ಯವಾದ
ಹೇಳಿ ಪದ್ಯ ಮುಗಿಸಬೇಕೆಂದಾಗೆಲ್ಲಾ
ತನ್ನ ಕರಡಿ ಪಾದಗಳಿಂದ
ಕೋಣೆ ಸುತ್ತ ಕೇಕೇ ಹಾಕಿ ಥಕಥಕಥಕ ಕುಣಿದು
ನನಗೆ ಮತ್ತಷ್ಟು ಸಿಟ್ಟು ತರಿಸುವುದು

ಒಮ್ಮೊಮ್ಮೆ
ನಿನ್ನ ಬಗ್ಗೆ ಆಲೋಚನೆ ಮಾಡುತ್ತಾ
ಮುಖದ ಮೇಲೆ ಅನಾಯಾಸ ಮಂದಹಾಸ ಕಾಣುವಾಗ
ಅದು ತೆಪ್ಪಗೆ ಕೂರುತ್ತೆ
ಗಲ್ಲಕ್ಕೆ ಒಂದು ಪಂಜೊತ್ತಿ
ಸುಮ್ಮನೆ ಆಲಿಸುತ್ತಾ ಕೂರುತ್ತೆ

(*ತಮ್ಮದೇ ವಿಚಾರ,
ಮನಸು ಇರೋ ಮೂಡಿ ಮನುಷ್ಯರು.
**ಇಷ್ಟ ಪಟ್ಟು)

೨. ಮರಗಳು ಮಾತನಾಡುತ್ತವೆಯೇ?
(Do the trees speak)

ಗಾಳಿ ಕರೆವಾಗ ಮರಗಳು
ತಿರುಗಿ ಮಾತನಾಡುತ್ತವೆಯೇ?
ನಮ್ಮಂತೆಯೇ ಸೂರ್ಯನೊಂದಿಗೆ
ಮಾತನಾಡುತ್ತವೆಯೇ?
ನನಗೇನೋ ಹೌದೆನ್ನಿಸುವುದು
ಇನ್ನೂ ಇದಕ್ಕೆಲ್ಲಾ ಪುರಾವೆ ಕೇಳಿದರೆ
ನಾನು ಹೇಳುವುದಿಷ್ಟೇ
‘ಸುಮ್ಮನೆ ಕಿವಿಯಾಗಿ’

ಅಷ್ಟೇ ಅಲ್ಲ

ಎಲ್ಲಾ ಸರಿಯಿರುವ ಕಾಲಕ್ಕೆ
ಮರಗಳ ಮಾತು ಕೇಳಬಹುದು
ಆಮೇಲೂ ಕೇಳಬಹುದು
ಸಾಮಿಲ್ಲಿನಲಿ* ಮರಗಳು
ಬೋರಾಡಿ ಅಳುವುದನ್ನು

(*ಸಾಮಿಲ್-Sawmill-
ಮರದ ದಿಮ್ಮಿ ಗರಗಸದಿಂದ ಕತ್ತರಿಸುವ ಕಾರ್ಖಾನೆ.)

೩. ಸಿಳ್ಳೆ ಹಾಕುವ ಹಿಂಡು ಹಂಸ
(Whistling Swans)

ಪ್ರಾರ್ಥಿಸುವಾಗ ತಲೆ ಬಾಗ್ತೀಯೋ, ಇಲ್ಲ
ನೆತ್ತಿ ಮೇಲಿನ ನೀಲಿ ಬಯಲು ದಿಟ್ಟಿಸಿ ನೋಡ್ತೀಯೋ?
ಆಯ್ಕೆ ನಿನ್ನದೇ
ತೂರಿಬರಬಹುದು ಪ್ರಾರ್ಥನೆ ಎಲ್ಲಾ ದಿಕ್ಕುಗಳಿಂದ
ಚಿಂತೆಬೇಡ ಭಾಷೆ ಯಾವುದಾದರೇನು
ದೇವರಿಗೆ ಎಲ್ಲವೂ ಅರ್ಥವಾಗುತ್ತೆ
ಗದ್ದಲ ಹಾಕುವ ಹಂಸಗಳು
ಉತ್ತರಕೆ ಮುಖ ಮಾಡಿ ಹಾರುವಾಗಲೂ
ದೇವರು ಕೇಳಿಸಿಕೊಳ್ಳುವನು ಅರ್ಥ ಮಾಡಿಕೊಳ್ಳುವನು
ರೂಮಿ ಹೇಳ್ತಾನೆ, ‘ಆತ್ಮವಿರುವ ಕುರಿತು ಯಾವ ಸಾಕ್ಷಿಯು ಇಲ್ಲ’
ಮರಳಿ ಬರುವ ವಸಂತ ಹೂದೋಟದಲಿ
ಹೂನಗೋದು ಸಾಕಲ್ಲವೇ ಸಾಕ್ಷಿಗೆ
ಹೌದು, ಗೊತ್ತಿದೆ ನನಗೆ
ದೇವರು ಮೌನ ಮುರಿಯುವುದಿಲ್ಲ
ಸಾವಿರಾರು ಧ್ವನಿಗಳಿರುವಾಗ
ಅದೊಂದು ಸಮಸ್ಯೆಯೇ?
ಅಷ್ಟಕ್ಕೂ, ನಿನಗೆ ಅನ್ನಿಸುವುದಿಲ್ಲವೇ
ಹಂಸಗಳಿಗೆ ಎಲ್ಲಾ ಸಂಗತಿಗಳ ಕುರಿತು
ನಮಗೆ ತಿಳಿದಷ್ಟೂ ತಿಳಿದಿದೆ ಅಂತ?
ಹಂಸ ಹಾರುವಾಗ
ಸುಮ್ಮನೆ ಅದರ ಹಾಡು ಆಲಿಸು,
ಗಮನಿಸು, ಸಾಧ್ಯವಾದಷ್ಟೂ ಕಲಿ

೪. ನಾನಿರುವ ಲೋಕ
(The world I live in)

ತರ್ಕ, ಪುರಾವೆಗಳ ವ್ಯವಸ್ಥಿತ ಮನೆಯೊಳಗೆ
ಬಂಧಿಯಾಗಿ ಇರಲು ನಾ ಒಲ್ಲೆ
ನಾನು ನಂಬಿರುವ ನೆಲ
ಅದಕಿಂತಲೂ
ವಿಶಾಲವಾಗಿದೆ
ಅಷ್ಟಕ್ಕೂ ‘ಇರಬಹುದು’
ಅನ್ನುವುದರಲ್ಲಿ ತಪ್ಪೇನು?

ಆಗೀಗ
ನಾ ಕಂಡಿದ್ದನ್ನು ಹೇಳಿದರೆ
ನಂಬೋದಿಲ್ಲ ನೀವು
ಈಗ ಇಷ್ಟು ಮಾತ್ರ ಹೇಳುವೆ:
ನಿನ್ನ ತಲೆಯಲ್ಲಿ
ದೇವತೆಗಳಿದ್ದರೆ ಮಾತ್ರ
ದೇವತೆಯ ಕಾಣಬಲ್ಲೇ ನೀವು

೫. ಈ ಮುಂಜಾನೆ
(This Morning)

ಈ ಮುಂಜಾನೆ
ಕೆಂಪು ಹಕ್ಕಿಗಳ ತತ್ತಿಯೊಡೆದು
ಆಗಲೆ ಮರಿಗಳು ಗುಟುಕಿಗಾಗಿ ಚಿಲಿಪಿಲಿಗುಟ್ಟಿವೆ

ಎಲ್ಲಿಂದ ಬರುತ್ತೆ ಅಂತ ಅವಕ್ಕೆ ಗೊತ್ತಿಲ್ಲ
ಸುಮ್ಮನೆ ಕಿರುಚುತ್ತವೆ
“ಇನ್ನೂ ಬೇಕು! ಇನ್ನೂ ಬೇಕು!”
ಅವುಗಳಿಗೆ ಬೇರೆ
ಯಾವ ಚಿಂತೆಯೂ ಇಲ್ಲ ನೋಡಿ
ಇನ್ನೂ ಕಣ್ಣೇ ತೆರೆದಿಲ್ಲ,
ಅವರಿಗಾಗಿ ಕಾದಿರುವ ಆಕಾಶ,
ಆ ಸಾವಿರಾರು,
ಲಕ್ಷಾಂತರ ಮರಗಳ ಅಂದಾಜಿಲ್ಲ
ರೆಕ್ಕೆ ಇದೆಯೆಂದೇ ಗೊತ್ತಿಲ್ಲ
ಸುಮ್ಮನೆ ಹಾಗೇ,
ಯಾವುದೋ ಪಕ್ಕದೂರಿನ ಜಾತ್ರೆಯೆನ್ನುವಂತೆ
ಇಲ್ಲಿ ಈ ಪವಾಡ ನಡೆದಿದೆ

೬. ಯಾವುದೂ ತಲೆ ಕೆಡಸಿಕೊಳ್ಳದಿರುವಷ್ಟು ಸಣ್ಣ ಸಂಗತಿಯಲ್ಲ
(Nothing Is Too Small Not to Be Wondered About)

ಮಿಡತೆ ತಲೆ ಕೆಡಸಿಕೊಳ್ಳುವುದಿಲ್ಲ
ಸ್ವರ್ಗ ಇದೆಯೇ ಅಂತ
ಇದ್ದರೂ,
ಅವನಿಗಲ್ಲಿ ಜಾಗವಿದೆಯೋ ಇಲ್ಲವೋ ಅಂತ

ಈಗ ಎಲೆಗಳುದುರೋ ಕಾಲ,
ಪ್ರಣಯಕಾಲ ಮುಗಿದಿದೆ
ಈಗಲೂ ಹಾಡುವನು
ಅವಕಾಶವಿದ್ದರೆ,
ಬಾಗಿಲ ಕೆಳಗಿನ ಸಂದಿನಿಂದ
ಮನೆಯೊಂದನ್ನು ಪ್ರವೇಶಿಸುವನು
ಆಮೇಲೆ ಆ ಮನೆ ತೀರಾ ತಣ್ಣಗಾಗುವುದು

ಮೆಲ್ಲಗೆ,
ಇನ್ನೂ ಮೆಲ್ಲಗೆ ಹಾಡುವನು
ಆಮೇಲೆ ಧ್ವನಿಯೇ ಬರುವುದಿಲ್ಲ

ಇದೆಲ್ಲ ಏನೋ ಹೇಳುತ್ತೆ,
ನನಗೂ ಗೊತ್ತಿಲ್ಲ
ಹಾಗೆಂದ ಮಾತ್ರಕ್ಕೆ ಜೀವನವಿಡೀ
ಅವನೊಬ್ಬ ಒಳ್ಳೆಯ ಮಿಡತೆಯಂತೆ
ಬದುಕಿದ ಅಂತ ಹೇಳೋಕಾಗೋಲ್ಲ ಬಿಡಿ

೭. ಒಂದು ಭಯಂಕರ ಬಿರುಗಾಳಿ
(The wildest storm)

ನಾನು ಎಂದೂ ಕಾಣದ
ಒಂದು ಭಯಂಕರ ಬಿರುಗಾಳಿ ನಿನ್ನೆ
ಪಶ್ಚಿಮದಿಂದ ಪೂರ್ವಕ್ಕೆ ರಪ್ಪೆಂದು ಪಾಸಾಯಿತು
ಅದೊಂದು ಒರಟಾದ ಅರಚುವ
ಮುಗಿಲ ಪಿಶಾಚಿ ಇರಬೇಕು

ಓದಲಾಗದ ಕೆಂಡದಕ್ಷರಗಳಲಿ
ಮಿಂಚು ಏನನ್ನೋ ಅಚ್ಚುಹಾಕುವಾಗ
ಆಲಿಕಲ್ಲು ಎಸೆಯುವುದು
ವಿಕಾರವಾಗಿ ನಗುವುದು

ಊಹೂಂ,
ಅದು ನಗುವೇ ಅಲ್ಲ
ಎಚ್ಚರಿಕೆ ಗಂಟೆ-
ಅದೇನು ಬಲ,
ಅಧಿಕಾರದ ಬಗ್ಗೆಯೇ ಇರಬಹುದೇನೋ…

ಏನಿರಬಹುದು?
ಏನಿರಬಹುದು?
ನಿಮಗೇನು ಅನ್ನಿಸುವುದು ಅದೇನಿರಬಹುದು?