ಶಾಲೆಗಳು ಮುಚ್ಚುವುದು, ರಸ್ತೆಗಳು ಖಾಲಿಯಾಗುವುದು, ಮನೆಯ ಹಿಂದೋಟದಲ್ಲಿ ಬಯಲುಗಳಲ್ಲಿ ಮಕ್ಕಳ ಕೇಕೆ ಕೇಳುವುದು, ದೂರ ಪ್ರಯಾಣದ ಬಸ್ಸುಗಳಲ್ಲಿ ಜನಪ್ರಿಯ ಪ್ರವಾಸಿ ತಾಣಗಳಿಗೆ ಹಾರುವ ವಿಮಾನಗಳಲ್ಲಿ ಜನ ಕಿಕ್ಕಿರಿಯುವುದು ಕೂಡ ಸಮ್ಮರ್ ಹಾಲಿಡೇಯಲ್ಲಿಯೇ. ಈಗ ನಿರಾಳವಾಗಿ ಎಲ್ಲರೂ ರಸ್ತೆಯಲ್ಲಿ ವಾಹನ ಓಡಿಸಿಕೊಂಡಿದ್ದಾರೆ. ಮಕ್ಕಳಿದ್ದವರ ಜೀವನ ಶೈಲಿಯನ್ನು ದೂರದಲ್ಲಿ ಕಂಡೇ ತಮಗೆ ಮಕ್ಕಳೇ ಬೇಡ ಎಂದು ತೀರ್ಮಾನ ಮಾಡಿಕೊಂಡವರು ಇಂತಹ ಸಮಯದಲ್ಲೊಂದು ನಿಟ್ಟುಸಿರು ಬಿಡುವುದೂ ಇದೆ..
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಇಲ್ಲೀಗ ಬೇಸಿಗೆ ರಜೆಯ ಗುಂಗು. ಸಮ್ಮರ್ ಬ್ರೇಕ್ ಅಥವಾ ಸ್ಕೂಲ್ ಹಾಲಿಡೇ ಅಂತಲೂ ಈ ಸಮಯವನ್ನು ಕರೆದು ಕೊಂಡಾಡುವವರಿದ್ದಾರೆ. ನಿತ್ಯವೂ ತೆರೆಯುವ ದುಡಿಯುವ ದಣಿಯುವ ಆಫೀಸು ಅಂಗಡಿ ಆಸ್ಪತ್ರೆ ಪೆಟ್ರೋಲ್ ಪಂಪ್ ಇತ್ಯಾದಿಗಳ ವಠಾರದಲ್ಲೇ ಇದ್ದು ನಳನಳಿಸುವ ಶಾಲೆಗಳು ಮುಸಿಮುಸಿ ನಗುತ್ತ ಈಗ ಬೇಸಿಗೆ ರಜೆಗೆಂದು ಬಾಗಿಲು ಹಾಕುವ ತರಾತುರಿಯಲ್ಲಿವೆ.

ಶಾಲೆಗಳು ಮುಚ್ಚುವುದು, ರಸ್ತೆಗಳು ಖಾಲಿಯಾಗುವುದು, ಮನೆಯ ಹಿಂದೋಟದಲ್ಲಿ ಬಯಲುಗಳಲ್ಲಿ ಮಕ್ಕಳ ಕೇಕೆ ಕೇಳುವುದು, ದೂರ ಪ್ರಯಾಣದ ಬಸ್ಸುಗಳಲ್ಲಿ ಜನಪ್ರಿಯ ಪ್ರವಾಸಿ ತಾಣಗಳಿಗೆ ಹಾರುವ ವಿಮಾನಗಳಲ್ಲಿ ಜನ ಕಿಕ್ಕಿರಿಯುವುದು ಕೂಡ ಸಮ್ಮರ್ ಹಾಲಿಡೇಯಲ್ಲಿಯೇ. ಒಂದು ವೇಳೆ ಶಾಲೆ ಇರುವ ದಿನಗಳಾಗಿದ್ದರೆ ಇಡೀ ರಸ್ತೆಯ ಅರ್ಧದಷ್ಟು ಟ್ರಾಫಿಕ್ ಬಹುಶಃ ಶಾಲಾ ಮಕ್ಕಳನ್ನು ಬಿಡುವ, ಕರೆದುಕೊಂಡು ಬರುವವರದೇ ಆದ್ದರಿಂದ ಈಗ ನಿರಾಳವಾಗಿ ಎಲ್ಲರೂ ರಸ್ತೆಯಲ್ಲಿ ವಾಹನ ಓಡಿಸಿಕೊಂಡಿದ್ದಾರೆ. ಮಕ್ಕಳಿದ್ದವರ ಜೀವನ ಶೈಲಿಯನ್ನು ದೂರದಲ್ಲಿ ಕಂಡೇ ತಮಗೆ ಮಕ್ಕಳೇ ಬೇಡ ಎಂದು ತೀರ್ಮಾನ ಮಾಡಿಕೊಂಡವರು ಇಂತಹ ಸಮಯದಲ್ಲೊಂದು ನಿಟ್ಟುಸಿರು ಬಿಡುವುದೂ ಇದೆ.

ಶಾಲೆಗಳು ಮುಚ್ಚುವುದು ಎಂದರೆ ಎಲ್ಲ ಶಾಲೆಗಳೂ ಒಂದೇ ದಿನ ಮುಚ್ಚುತ್ತದೆ ಅಂತಲೂ ಅಲ್ಲ. ಜುಲೈ ತಿಂಗಳ ಪ್ರತಿ ವಾರಾಂತ್ಯದಲ್ಲೂ ಒಂದಿಷ್ಟು ಶಾಲೆಗಳು ಮುಚ್ಚುತ್ತಾ ತಿಂಗಳ ಮೂರನೆಯ ವಾರಾಂತ್ಯದ ಹೊತ್ತಿಗೆ ಈ ದೇಶದ ಎಲ್ಲ ಶಾಲೆಗಳೂ ಬಾಗಿಲು ಹಾಕಿರುತ್ತವೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಹೊಸ ತರಗತಿಗಳಿಗೆ ತೆರೆಯುವ ತನಕವೂ. ಮತ್ತೆ ಹಾಗೆ ಮುಚ್ಚಿದ ಶಾಲೆಯ ಮಕ್ಕಳ ಹೆತ್ತವರು, ಕಣ್ಣೆದುರು ಕುಣಿಯುತ್ತಿರುವ ಬಿಸಿಲು ಹಾಗು ಮಕ್ಕಳ ರಜೆಗಳನ್ನು ಜೊತೆಜೊತೆಗೆ ಹೇಗೆ ಸಂಭಾಳಿಸುವುದು ಎಂದು ಪ್ರತಿವರ್ಷದ ಬೇಸಿಗೆ ರಜೆಯಲ್ಲೂ ಜಿಜ್ಞಾಸೆಯಲ್ಲಿರುತ್ತಾರೆ.

ಬೇಸಿಗೆ ರಜೆ, ಆ ಸಮಯದ ವಿಹಾರದ ಯೋಜನೆ, ವಿಹಾರ ಮುಗಿಸಿ ಬಂದ ಮೇಲೆ ಶಾಲೆ ಮತ್ತೆ ಶುರು ಆಗುವ ತನಕವೂ ಮಕ್ಕಳ ಲಾಲನೆ ಆಂಗ್ಲರ ಬದುಕಿನ ಬಹು ಮಹತ್ವದ ವಿಷಯಗಳು. ಹಾಗಾಗಿ ಶಾಲೆ ಮುಚ್ಚಿದ ದಿನಗಳಲ್ಲಿ ಬೆಳಗಿಂದ ಸಂಜೆಯವರೆಗೆ ಅಥವಾ ಶಾಲೆ ಇರುವ ದಿನಗಳಲ್ಲಿ ಶಾಲೆ ತೆರೆಯುವ ಮೊದಲು, ಬಿಟ್ಟ ಮೇಲೆ ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಪರಿಣಿತರಾದ ಸಂಸ್ಥೆಗಳು ಇಲ್ಲಿ ಎಲ್ಲೆಲ್ಲೂ ಇವೆ. ಮತ್ತೆ “ಚೈಲ್ಡ್ ಕೇರ್” ಎನ್ನುವ ಉದ್ಯಮವನ್ನೂ ಸೃಷ್ಟಿಸಿವೆ.

“ಚೈಲ್ಡ್ ಕೇರ್” ನೀಡುವ ವ್ಯಕ್ತಿಗಳು ಸಂಸ್ಥೆಗಳು ಸ್ಕೂಲ್ ಹಾಲಿಡೇ ಸಮಯಕ್ಕೆ ಚುರುಕಾಗುತ್ತಾರೆ. ಮಕ್ಕಳನ್ನು ಆಡಿಸುವುದು ಒಂದು ಕಲೆಯೇ. ಎಂತಹ ಹಠಮಾರಿ ಮಕ್ಕಳನ್ನೂ ಕುಣಿಸಿ ರಮಿಸಿ ನಗಿಸುವ ಅಜ್ಜ ಅಜ್ಜಿಯಂದಿರು ಇಂತಹ ಸಮಯದಲ್ಲಿ ನೆನಪಾಗುತ್ತಾರೆ. ಸಂಯಮ, ಸಹನೆ, ಉತ್ಸಾಹಗಳ ಜೊತೆಗೆ ಈ ದೇಶದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ “ಆರೋಗ್ಯ ಮತ್ತು ಸುರಕ್ಷತೆ” ಗಳ ಎಚ್ಚರ, ಮಕ್ಕಳು ಕೆಲ ಗಂಟೆಗಳನ್ನು ಕಳೆಯಲು ಸೂಕ್ತವಾದ ಸ್ಥಳಾವಕಾಶ ಮತ್ತೆ ಈ ಕೆಲಸಕ್ಕೆ ಯೋಗ್ಯ ಎನ್ನುವ ಒಂದು ಸರ್ಟಿಫಿಕೇಟ್ ಇವಿಷ್ಟು ಸೇರಿದರೆ ನಾವು ನೀವೂ ಈ ದೇಶದಲ್ಲಿ ಹಾಲಿಡೇ ಕ್ಲಬ್ ತೆರೆಯಬಹುದು.

ತೆವಳುವ ಮಗು, ತೊದಲುವ ಶಿಶು, ಅಂಬೆಗಾಲಿಡುವ ಮಕ್ಕಳು, ಅಂಗನವಾಡಿಯ ಪ್ರಾಥಮಿಕ ಶಾಲೆಯವು ಹೀಗೆ ಬೆಳವಣಿಗೆಯ ಬೇರೆ ಬೇರೆ ಹಂತದ ಮಕ್ಕಳನನ್ನು ನೋಡಿಕೊಳ್ಳುವ ಹೊಣೆಗಾರಿಕೆಗೆ ಈ ಬೇಸಿಗೆ ರಜೆಯಲ್ಲಿ ಬೇಡಿಕೆ ಇದೆ. ಮಕ್ಕಳನ್ನು ಆಡಿಸುವುದು, ಓಡಿಸುವುದು, ಓದಿಸುವುದು ಈಜಿಸುವುದು ತೀರಾ ಸಣ್ಣ ಮಕ್ಕಳಾದರೆ ಉಣ್ಣಿಸುವುದು ಮಲಗಿಸುವುದು ಏಳಿಸುವುದು ಕೂಡ ಮಾಡಿಸುತ್ತ ಮಕ್ಕಳನ್ನು ಸುಧಾರಿಸುವ ಕೌಶಲ್ಯಗಳು ಬೇಸಿಗೆ ರಜೆಯಲ್ಲಿ ಪರೀಕ್ಷೆಗೊಳಪಡುತ್ತವೆ. ಎಲ್ಲೂ ರಜೆಗೆ ಹೋಗದ ಮಕ್ಕಳ ಅಪ್ಪ ಅಮ್ಮಂದಿರು ಇಬ್ಬರೂ ಕೆಲಸ ಮಾಡುವವರಾಗಿದ್ದರೆ ಮಕ್ಕಳನ್ನು ಇಂತಹ “ಹಾಲಿಡೇ ಕ್ಲಬ್” ಅಲ್ಲಿ ಅನಿವಾರ್ಯವಾಗಿ ಬಿಟ್ಟು ಹೋಗುತ್ತಾರೆ ಮತ್ತು ಈ ಹಾಲಿಡೇ ಕ್ಲಬ್ ಗಳ ದುಬಾರಿ ದಿನವೆಚ್ಚವನ್ನು ಎಣಿಸಿ ಬೆವರೊರೆಸುತ್ತಿರುತ್ತಾರೆ. ಇಲ್ಲಿನ ಮಕ್ಕಳು ಕಾದುಕಾದು ಒಲಿಯುವ ಈ ದೀರ್ಘ ರಜೆ ಯಾಕಾದರೂ ಬರುತ್ತದೋ ಎಂದು ಕೆಲವು ಅಪ್ಪ ಅಮ್ಮಂದಿರು ಗೊಣುಗುವುದೂ ಇದೆ.

ಯಾರಿಗೆಷ್ಟು ಖುಷಿಯಾಗಲಿ ಆಗದಿರಲಿ ಶಾಲಾ ಮಕ್ಕಳ ಮಟ್ಟಿಗೆ ವರ್ಷದ ಅತಿಉದ್ದದ ಬೆಚ್ಚಗಿನ ಹವೆಯ ರಜೆ ಜುಲೈ ಆಗಸ್ಟ್ ತಿಂಗಳುಗಳೇ. ಶಾಲೆ ಮುಚ್ಚುವ ದಿನ ತಮ್ಮ ಸಹಪಾಠಿಗಳಿಗೆ ಗೆಳೆಯ ಗೆಳತಿಯರಿಗೆ ತಮ್ಮ ರಜೆಯ ಯೋಜನೆಯನ್ನು ಹೇಳಿ ಮನೆ ಸೇರಿದ ಮಕ್ಕಳು ಸುಮಾರು ಒಂದೂವರೆ ತಿಂಗಳ ಕಾಲ ಶಾಲೆಯನ್ನು ಮರೆಯುತ್ತಾರೆ. ಭಾರತದಲ್ಲಿ ಏಪ್ರಿಲ್ ಮೇ ತಿಂಗಳುಗಳಂತೆ ಇಲ್ಲಿನ ಮಕ್ಕಳಿಗೆ ಜುಲೈ ಆಗಸ್ಟ್ ಗಳು. ವರ್ಷದಲ್ಲಿ ಅತಿ ಹೆಚ್ಚು ಪ್ರಯಾಣ ಪ್ರವಾಸಗಳನ್ನು ಕಾಣುವ ಸಮಯವೂ ಇದಿರಬಹುದು. ಈ ಸಮಯದಲ್ಲೇ ಮಕ್ಕಳ ವಿಹಾರ ಯಾತ್ರೆಗಳು ನಡೆಯಬೇಕು ಎಂದು ಇಲ್ಲಿನ ಸರಕಾರ ಕಾನೂನು ಕೌನ್ಸಿಲ್ ಗಳು ಸಹ ಬಯಸುತ್ತವೆ. ಯಾವ ಮಕ್ಕಳು ಎಂದು ಪ್ರವಾಸಕ್ಕೋ ಇನ್ನೆಲ್ಲಿಗೋ ಹೋದರೆ ಈ ಸ್ಥಳೀಯಾಡಳಿತ ಸಂಸ್ಥೆಗಳಿಗೇನು ಉಸಾಬರಿ ಎಂದು ಉಡಾಫೆ ಮಾಡುವ ಹಾಗಿಲ್ಲ. ಐದನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರೆಗಿನ ಕಡ್ಡಾಯ ಶಿಕ್ಷಣದ ಕಾನೂನಿರುವ ದೇಶದಲ್ಲಿ ಶಾಲಾ ದಿನಗಳಲ್ಲಿ ಶಾಲೆ ತಪ್ಪಿಸುವವರ ಬಗ್ಗೆ ಇಲ್ಲಿನ ಕೌನ್ಸಿಲ್ ಗಳ ಕಟ್ಟೆಚ್ಚರ ಹಾಗು ಕಣ್ಗಾವಲು ಇವೆ. ಕಾರಣ ಇಲ್ಲದೆ ಶಾಲೆಗೆ ಬಾರದ ಅಥವಾ ಶಾಲೆಯ ಮೆಟ್ಟಿಲನ್ನೇ ಹತ್ತದ ಮಕ್ಕಳಿದಿದ್ದರೆ ಅವರ ಹೆತ್ತವರನ್ನು ಪೊಲೀಸರು ಹುಡುಕಿ ಬಂದ ಘಟನೆಗಳೂ ಇಲ್ಲಿವೆ.

ಬೇಸಿಗೆ ರಜೆ, ಆ ಸಮಯದ ವಿಹಾರದ ಯೋಜನೆ, ವಿಹಾರ ಮುಗಿಸಿ ಬಂದ ಮೇಲೆ ಶಾಲೆ ಮತ್ತೆ ಶುರು ಆಗುವ ತನಕವೂ ಮಕ್ಕಳ ಲಾಲನೆ ಆಂಗ್ಲರ ಬದುಕಿನ ಬಹು ಮಹತ್ವದ ವಿಷಯಗಳು. ಹಾಗಾಗಿ ಶಾಲೆ ಮುಚ್ಚಿದ ದಿನಗಳಲ್ಲಿ ಬೆಳಗಿಂದ ಸಂಜೆಯವರೆಗೆ ಅಥವಾ ಶಾಲೆ ಇರುವ ದಿನಗಳಲ್ಲಿ ಶಾಲೆ ತೆರೆಯುವ ಮೊದಲು, ಬಿಟ್ಟ ಮೇಲೆ ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಪರಿಣಿತರಾದ ಸಂಸ್ಥೆಗಳು ಇಲ್ಲಿ ಎಲ್ಲೆಲ್ಲೂ ಇವೆ.

ಕಡ್ಡಾಯ ಶಿಕ್ಷಣ ಎನ್ನುವುದು ಇಲ್ಲಿ ರಾಜಿ ಮಾಡಿಕೊಳ್ಳಲಾಗದ ನಿಯಮ ಸಿದ್ಧಾಂತ. ಮತ್ತೆ ಹೀಗೆ ಸಾರ್ವತ್ರಿಕ ರಜೆಯ ಸಮಯದಲ್ಲಿ ಮಾತ್ರ ಮಕ್ಕಳು ರಜೆಗೆ ಹೋಗಬಹುದು ಎನ್ನುವುದು ಸ್ವಲ್ಪ ಇತ್ತೀಚಿಗೆ ಗಂಭೀರವಾಗಿ ಅನುಷ್ಠಾನಕ್ಕೆ ಬಂದಿರುವ ಯೋಚನೆ. ಆದರೆ ಶಾಲೆಯೇ ಮುಚ್ಚಿದ ಸಮಯವಲ್ಲದೆ ಬೇರೆ ಸಮಯದಲ್ಲಿ ತುರ್ತು ಕಾರಣವಿಲ್ಲದೇ ಮಕ್ಕಳು ಗೈರುಹಾಜರಾಗುವಂತಿಲ್ಲ ಎನ್ನುವುದು ಕೆಲವು ಹೆತ್ತವರಿಗೆ ಆಪ್ತವಾಗುವ ಸಲಹೆಯೊ ನಿರ್ದೇಶನವೊ ಅಲ್ಲ. ಬ್ರಿಟನ್, ಯುರೋಪ್ ಗಳಲ್ಲಿ ಜೂನ್ ಜುಲೈ ಆಗಸ್ಟ್ ಸಮಯಗಳಲ್ಲೇ ಬೇಸಿಗೆ ರಜೆ ಇರುವುದರಿಂದ ಯಾರು ಎಲ್ಲಿ ಹೋಗಬೇಕೆಂದರೂ ವಿಮಾನದರ ದುಬಾರಿ ಇರುತ್ತವೆ, ಹೋಟೆಲು ವಸತಿಗಳ ಬೆಲೆ ಆಕಾಶಕ್ಕೇರಿರುತ್ತವೆ. ಜನಜಂಗುಳಿಯ, ಅತಿವೆಚ್ಚದ ಬೇಸಿಗೆರಜೆಯನ್ನು ತಪ್ಪಿಸಿ ವರ್ಷದ ಬೇರೆ ಸಮಯದಲ್ಲಿ ಮಕ್ಕಳನ್ನು ತಿರುಗಾಡಲು ಕರೆದುಕೊಂಡು ಹೋಗುವುದು ಹೆತ್ತವರಿಗೆ ಅನುಕೂಲವೂ ಹೌದು. ವರ್ಷದ ಬೇರೆ ಸಮಯದಲ್ಲಿ ಬರುವ ಮಧ್ಯಾವಧಿ ರಜೆಗಳ ಸಮಯಕ್ಕೆ ಕಿಸೆಯಿಂದ ಇನ್ನಷ್ಟು ರಜೆ ಸೇರಿಸಿಕೊಂಡು ಅಥವಾ ಮಾಮೂಲಿ ವಾರಾಂತ್ಯಕ್ಕೆ ಮತ್ತಿಷ್ಟು ದಿನ ರಜೆ ಕೂಡಿಸಿಕೊಂಡು ಅಡ್ಡಾಡಲು ಹೋಗುವದು ಸ್ವಲ್ಪ “ಮಿತವ್ಯಯಿ ಹಾಲಿಡೇ” ಆಗಬಹುದು. ಹಾಗೆಂದು ಮಕ್ಕಳು ತಮಗೆ ಬೇಕೆಂದಾಗ ಶಾಲೆ ತಪ್ಪಿಸಿದರೆ ಮಕ್ಕಳ ಶಿಕ್ಷಣದ ನಿಟ್ಟಿನಿಂದ ಒಳ್ಳೆಯದಲ್ಲ ಎನ್ನುವ ಕಾರಣದಿಂದ ಅಲ್ಲಲ್ಲಿನ ಶಾಲೆಗಳ ಮೇಲೆ ಅವುಗಳ ಕೌನ್ಸಿಲ್ ಗಳು ನಿಗಾ ಇಟ್ಟಿರುವುದೂ ತಪ್ಪಲ್ಲ.

ತೀರಾ ಸಣ್ಣ ತರಗತಿಯ ಮಕ್ಕಳು ಅಂದರೆ ಹೆಚ್ಚಾಗಿ ಆಡುತ್ತಲೇ ಪಾಠ ಕಲಿಯುವ ಪ್ರಾಥಮಿಕ ಶಾಲಾ ಶಿಕ್ಷಣದ ಮಕ್ಕಳ ಮಟ್ಟಿಗೆ ಇಂತಹ ಕಟುಕಾನೂನು ಅನವಶ್ಯಕ. ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ನಿರ್ಧರಿಸಲು ಶಕ್ತರು ಎನ್ನುವುದು ಕೆಲವು ಹೆತ್ತವರ ವಾದ. ಇನ್ನು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಎಳ್ಳಷ್ಟೂ ಕಾಳಜಿ ಕಾತರ ತೋರದ ಹೆತ್ತವರು ಇಂತಹ ಕಾನೂನಿನ ಚೌಕಟ್ಟಿರುವುದರಿಂದಲೇ ಮಕ್ಕಳನ್ನು ನಿತ್ಯವೂ ಶಾಲೆಗೆ ಕಳುಹಿಸುವುದು ಎನ್ನುವುದು ಕೌನ್ಸಿಲ್ ಗಳ ಪ್ರತಿವಾದ.

ಶಿಕ್ಷಣದ ಹೊಣೆಗಾರಿಕೆಯ ನಿಯಮಾವಳಿಗಳು ಕದಡುವ ವಾದವಿವಾದಗಳು ಆಗಾಗ ಸುದ್ದಿಗೆ ಬಂದು ತಣ್ಣಗಾಗುತ್ತಿರುವ ನಡುವೆ ಪ್ರತಿ ಶಾಲೆಯೂ ಅಲ್ಲಿನ ಮಕ್ಕಳ ಹಾಜರಿಯನ್ನು ಪ್ರತಿವರ್ಷವೂ ಅವರ ಕೌನ್ಸಿಲ್ ಗೆ ಸಲ್ಲಿಸುತ್ತವೆ. ಯಾವ ಮಗು ಶಾಲೆಗ ಬಂದ ದಿನಗಳೆಷ್ಟು, ಹುಷಾರಿಲ್ಲದ ದಿನಗಳು ಯಾವುವು, ತಪ್ಪಿಸದ ದಿನಗಳ ಲೆಕ್ಕ ಎಲ್ಲವೂ ಆಯಾ ಕೌನ್ಸಿಲ್ ತಲುಪುತ್ತವೆ. ಜೊತೆಗೆ ಕೌನ್ಸಿಲ್ ಗಳು ಶಾಲಾ ಅವಧಿಯಲ್ಲಿ ಒಂದೋ ಎರಡೋ ವಾರ ತೀರಾ ಅನಿವಾರ್ಯ ಕಾರಣಗಳಿಗೆ ಮಕ್ಕಳು ಶಾಲೆ ತಪ್ಪಿಸಬಹುದು ಎನ್ನುವ ನಿಯಮದ ಆವರಣದಲ್ಲಿ ಎಲ್ಲ ಮಕ್ಕಳ ಹಾಜರಾತಿಯನ್ನು ಗಮನಿಸುತ್ತದೆ. ಕಣ್ಣು ತಿರುಗಿಸುತ್ತಾ ತರಗತಿಯಲ್ಲಿಮಾತಾಡುವ ಮಕ್ಕಳನ್ನು ಹುಡುಕಿ ಹೆಸರು ಬರೆದು ಮೇಷ್ಟ್ರಿಗೆ ಮುಟ್ಟಿಸುವ ಕಟ್ಟುನಿಟ್ಟಿನ ಕ್ಲಾಸ್ ಲೀಡರ್ ತರಹ ಕಾಣಿಸುತ್ತದೆ. ಶಾಲೆ ತಪ್ಪಿಸುವ ನಿಯಮಗಳನ್ನು ಮೀರಿ ಶಾಲಾ ಅವಧಿಯಲ್ಲಿ ಅನಾವಶ್ಯಕ ರಜೆ ತೆಗೆದುಕೊಂಡರೆ ಹೆತ್ತವರಿಗೆ ನೋಟೀಸು ಬರುತ್ತದೆ, ದಂಡ ಬೀಳುತ್ತದೆ, ಶಾಲೆಯ ಕಳಪೆ ಕಾರ್ಯನಿರ್ವಹಣೆಯ ನಿದರ್ಶನವೆಂದೂ ದಾಖಲಾಗುತ್ತವೆ.

೨೦೧೫ರಲ್ಲಿ ಇಂಗ್ಲೆಂಡ್ ನಲ್ಲಿ ತಂದೆಯೊಬ್ಬ ಆರು ವರ್ಷದ ಮಗಳನ್ನು ಶಾಲೆ ತಪ್ಪಿಸಿ ಅಮೆರಿಕಾದ ಫ್ಲೋರಿಡಾದ ಡಿಸ್ನಿ ಲ್ಯಾಂಡ್ ಗೆ ರಜೆಗೆಂದು ಕರೆದೊಯ್ದಿದ್ದ. ಅವನಿಗೆ ಇಲ್ಲಿನ ಕೌನ್ಸಿಲ್ ನೂರಿಪ್ಪತ್ತು ಪೌಂಡುಗಳ (ಸುಮಾರು ಹತ್ತು ಸಾವಿರ ರೂಪಾಯಿ) ದಂಡ ವಿಧಿಸಿತ್ತು. ಇಂತಹ ಸಂದರ್ಭದಲ್ಲಿ ದಂಡ ವಿಧಿಸಲ್ಪಡುವುದು ಇಲ್ಲಿ ಸಾಮಾನ್ಯವೇ ಆದರೂ ಈ ಘಟನೆಯಲ್ಲಿ ಹುಡುಗಿಯ ತಂದೆ ಕೌನ್ಸಿಲ್ ನ ಕ್ರಮವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದ. ಎರಡು ವರ್ಷಗಳ ಕಾಲ ಬೇರೆ ಬೇರೆ ಮಟ್ಟದ ನ್ಯಾಯಾಲಯಗಳಲ್ಲಿ ನಡೆದ ಕಾನೂನು ಸಮರದಲ್ಲಿ ತಂದೆಗೆ ಸೋಲಾಯಿತು ಕೌನ್ಸಿಲ್ ಗೆ ಜಯವಾಯಿತು.

ಶಾಲೆ, ಮಕ್ಕಳು, ಹೆತ್ತವರು, ರಜೆ, ಕಡ್ಡಾಯ ಶಿಕ್ಷಣಗಳ ಸುತ್ತಲಿನ ಚರ್ಚೆಗಳನ್ನು ಕಾನೂನು ಸಮರವನ್ನು ಬಹುದಿನ ಜೀವಂತವಿಟ್ಟ ಈ ಘಟನೆ ದೇಶದ ತೆರಿಗೆದಾರರಿಗೆ ನೂರನಲವತ್ನಾಲ್ಕು ಸಾವಿರ ಪೌಂಡ್ ಗಳ (ಸುಮಾರು ಒಂದೂಕಾಲು ಕೋಟಿ ರೂಪಾಯಿ) ಕನ್ನ ಹಾಕಿತು ಎಂದು ವರದಿಗಳು ಹೇಳುತ್ತವೆ. ಮಗಳ ವಿದ್ಯಾಭ್ಯಾಸದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿದ ಈ ತಂದೆ ಎಂದು ಎರಡು ಸಾವಿರ ಪೌಂಡ್ ದಂಡ ವಿಧಿಸಲ್ಪಟ್ಟಿತು (ಸುಮಾರು ಒಂದು ಲಕ್ಷದ ಎಂಭತ್ತು ಸಾವಿರ ರೂಪಾಯಿ). ತನ್ನ ಮಗಳ ರಜೆ ಎಂದು ಹೇಗೆ ಬೇಕೆಂದು ತಾನು ತೀರ್ಮಾನ ಮಾಡುತ್ತೇನೆ ಎನ್ನುವ ತಂದೆಯ ವಾದಕ್ಕೆ ಸೋಲಾಯಿತು. ಈ ಘಟನೆಯ ನಂತರ ಶಾಲಾ ದಿನಗಳಲ್ಲಿ ರಜೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಆಗಿದೆ ಎನ್ನುವ ಬಗ್ಗೆ ದಾಖಲೆ ಇಲ್ಲ. ಶಾಲೆ ತಪ್ಪಿಸಿದ ವಿಷಯವಾಗಿ ಹೆತ್ತವರಿಗೆ ಪ್ರತಿವರ್ಷವೂ ಸಾವಿರಗಟ್ಟಲೆ ನೋಟೀಸುಗಳನ್ನು ಕೌನ್ಸಿಲ್ ಗಳು ಜಾರಿ ಮಾಡುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ “ರಜೆದಂಡ” ದಲ್ಲಿ ಹೆಚ್ಚು ಹೆಚ್ಚು ಹಣವನ್ನು ಕೌನ್ಸಿಲ್ ಗಳು ಸಂಗ್ರಹಿಸುತ್ತಲಿವೆ ಎಂದೂ ಅಂಕಿಅಂಶಗಳು ಹೇಳುತ್ತವೆ. ದಂಡ ತೆತ್ತರೂ ದುಬಾರಿ ಬೇಸಿಗೆ ರಜೆಯಲ್ಲದ ಸಮಯದಲ್ಲೇ ಸಂಸಾರ ಮಕ್ಕಳ ಜೊತೆ ವಿಹಾರಕ್ಕೆ ಹೋಗುವುದು ಉಳಿತಾಯದ ಉಪಾಯ ಎಂದು ತಿಳಿಯುವವರೂ ಅನಿವಾರ್ಯತೆಯಲ್ಲೋ ಖುಶಿಯಲ್ಲೋ ಕಾನೂನು ಮುರಿಯುವವರೂ ಇಲ್ಲಿದ್ದಾರೆ.

ಬೇಸಿಗೆ ರಜೆ, ಸಮ್ಮರ್ ಬ್ರೇಕ್ ಎಂದು ಕರೆಸಿಕೊಳ್ಳುವ ಕಾಲ ಬಾಗಿಲಿನಲ್ಲಿ ಬಿಸಿಲಿನಂತೆ ಹೊಳೆಯುತ್ತ ನಿಂತಿದೆ. ಸ್ಕೂಲ್ ಹಾಲಿಡೇಯ ಗುಂಗು ಅವಸರ ಓಡಾಟ ಕಾಣುತ್ತಿದೆ. ಅತಿವೆಚ್ಚದ ಹಾಲಿಡೇ ಕ್ಲಬ್, ದುಬಾರಿ ಖರ್ಚಿನ ವಿಹಾರಗಳು ಅಥವಾ ಕಾನೂನು ಮೀರಿ ಇನ್ನ್ಯಾವಾಗಲೋ ಪ್ರವಾಸಕ್ಕೋ ರಜೆಗೋ ಹೋಗುವ ಆಯ್ಕೆಗಳು ವಾದಗಳು ಮತ್ತೆ ಈ ಬೇಸಿಗೆಯಲ್ಲೂ ಕಾಡುತ್ತಿವೆ.