ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ ಮೂಲಪುರುಷರಾಗಿದ್ದಾರೆ. `ಎ ಹಿಸ್ಟರಿ ಆಫ್ ರಷ್ಯನ್ ಲಿಟರೇಚರ್’ನಲ್ಲಿ ಮರ್‍ಸ್ಕೀ ಅನ್ನುವವನು ಹೇಳುವಂತೆ: ಬುನಿನ್ನನ ಭಾಷೆ `ಕ್ಲಾಸಿಕಲ್’, ಮಿತವಾದ್ದು, ಸಮಚಿತ್ತವಾದ್ದು, ಮೂರ್ತವಾದದ್ದು… ಬಹುಶಃ ಆಧುನಿಕ ರಷ್ಯನ್ ಲೇಖಕರಲ್ಲಿ ಟರ್ಜನೇವ್, ಗಂಚರೋಫ್ `ಕ್ಲಾಸಿಕ್ಸ್’ಗಳಿಂದ ಪ್ರಶಂಸಿಲ್ಪಟ್ಟವನೆಂದರೆ, ಅದು ಬುನಿನ್ ಮಾತ್ರ.’
ರಷ್ಯಾದ ಹೆಸರಾಂತ ಲೇಖಕ ಇವಾನ್ ಬುನಿನ್‌ನ ಒಂದಷ್ಟು ಕಥೆಗಳನ್ನು ಕಥೆಗಾರ ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದದ್ದು, ಈ ಸಂಕಲನಕ್ಕೆ ಬುನಿನ್ ಕುರಿತಾಗಿ ಬರೆದ ಅವರ ಮಾತುಗಳು ಇಲ್ಲಿವೆ
1891ರ ಜನವರಿ ತಿಂಗಳಿನ ಅದೊಂದು ದಿನ ರಷ್ಯಾದ ಹೆಸರಾಂತ ಲೇಖಕ ಆಂಟನ್ ಚೆಕಾಫ್‍ಗೆ ತನ್ನದೇ ಪ್ರಾಂತ್ಯದ ಯುವ ಪತ್ರಿಕೋದ್ಯಮಿಯೊಬ್ಬನಿಂದ ಪತ್ರವೊಂದು ಬರುತ್ತದೆ. ಅದರಲ್ಲಿ, `ನೀವು ನನ್ನ ಇಷ್ಟದ ಲೇಖಕರು. ನೇರ ನಡೆನುಡಿಯವರೂ ತುಂಬಾ ಒಳ್ಳೆಯವರೂ ಅಂತ ನನ್ನ ಕೆಲ ಸ್ನೇಹಿತರು ನಿಮ್ಮ ಬಗ್ಗೆ ಹೇಳಿದ್ದಾರೆ. ಹಾಗಾಗಿ ನನ್ನ ಆಯ್ಕೆ ನೀವಾಗಿದ್ದೀರಿ. ನಿಮಗೆ ಬಿಡುವಿದ್ದಲ್ಲಿ, ನನ್ನಂಥವನ ಕೆಲವು ಬರವಣಿಗೆಗಳನ್ನು ಕಣ್ಣಾಡಿಸಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವ ಮನಸಿದ್ದಲ್ಲಿ ದಯಮಾಡಿ ತಿಳಿಸಿ. ನಾನು ನನ್ನ ಕೆಲವು ಕಥೆಗಳನ್ನು ನಿಮಗೆ ಕಳಿಸುತ್ತೇನೆ. ಹಾಗೆಯೇ ನಿಮ್ಮಂದ ಅವುಗಳ ಬಗ್ಗೆ ಒಂದೆರಡು ವಿಮರ್ಶಾತ್ಮಕ ಮಾತುಗಳನ್ನು ಕೇಳಲು ಇಚ್ಛಿಸುತ್ತೇನೆ. ಅಂತೆಯೇ ಇಂಥದ್ದೊಂದು ಒತ್ತಾಯಪೂರ್ವಕ ಅಂಗಲಾಚಿಕೆಗಾಗಿ ಕ್ಷಮೆ ಯಾಚಿಸುತ್ತೇನೆ,’ ಎಂಬುದಾಗಿ ಬರೆಯಲ್ಪಟಿರುತ್ತದೆ. ಆ ನಂತರ ಆ ಪತ್ರವನ್ನು ಬರೆದವನು ಹಾಗೂ ಬರೆಸಿಕೊಂಡವರು ಇಬ್ಬರೂ ಜೀವಮಾನವಿಡೀ ಒಳ್ಳೆಯ ಗೆಳೆಯರಾಗಿಬಿಡುತ್ತಾರೆ. ಅದೇರೀತಿ, ಚೆಕಾಫ್‌ನ ಪ್ರಭಾವದಿಂದಾಗಿ ಅವನು ಮುಂದೆ ಒಳ್ಳೆಯ ಲೇಖಕನಾಗಿ, ರಷ್ಯಾಕ್ಕೆ ಸಾಹಿತ್ಯಕ್ಕಾಗಿ ಮೊಟ್ಟ ಮೊದಲ ನೊಬೆಲ್ ಬಹುಮಾನವನ್ನೂ ತಂದುಕೊಡುತ್ತಾನೆ. ಆ ಲೇಖಕ ಬೇರಾರೂ ಅಲ್ಲ, ಅವನೇ ಇವಾನ್ ಅಲೆಕ್ಸಿವೀಚ್ ಬುನಿನ್.
ಬುನಿನ್ 1870 ಅಕ್ಟೋಬರ್ 10ರಂದು ರಷ್ಯಾದ ವಾರೋನೆಶ್ ಎಂಬ ನಗರದಲ್ಲಿ ಹುಟ್ಟುತ್ತಾನೆ. ಅವನ ಅಪ್ಪ ಅಲೆಕ್ಸೀ ನಿಕೋಲಯೇವಿಚ್ ಒಬ್ಬ ಜಮೀನುದಾರ. ಶ್ರೀಮಂತ ಕುಟುಂಬದಿಂದ ಬಂದಿದ್ದ ಅವನಿಗೆ ತೂಲ ಮತ್ತು ಒರೇಲ್ ಪ್ರಾಂತ್ಯದಲ್ಲಿ ಹಲವು ಎಸ್ಟೇಟುಗಳಿದ್ದವು. ತನ್ನ ಕಾರ್ಯಸಾಧುವಲ್ಲದ ವ್ಯವಹಾರದಿಂದಾಗಿ, ಜೊತೆಗೆ ಜೂಜು ಮತ್ತು ಕುಡಿತದ ಹುಚ್ಚಿನಿಂದಾಗಿ ಒಂದಾದ ಮೇಲೊಂದರಂತೆ ಎಸ್ಟೇಟುಗಳನ್ನು ಕಳೆದುಕೊಂಡಿದ್ದಲ್ಲದೆ, ಬುನಿನ್ ಪ್ರಾಯಕ್ಕೆ ಬರುವ ಹೊತ್ತಿಗಾಗಲೇ ಅವನು ನಿರ್ಗತಿಕ ಸ್ಥಿತಿಗೆ ತಲುಪಿಬಿಟ್ಟಿದ್ದ. ಅಲೆಕ್ಸೀ ನಿಕೋಲಯೇವಿಚ್ ಹಾಗೂ ಅವನ ಹೆಂಡತಿ ಲೂದ್ಮೀಲಾ ಅಲೆಕ್ಸಾಂಡ್ರೋವ್ನಾ ದಂಪತಿಗಳಿಗೆ ಒಂಭತ್ತು ಮಂದಿ ಮಕ್ಕಳು. ಅವರಲ್ಲಿ ನಾಲ್ಕು ಮಾತ್ರ ಉಳಿದುಕೊಂಡಿದ್ದವು. ಬುನಿನ್‍ಗೆ ಯೂಲಿ ಹಾಗೂ ಇವ್ಗೇನಿ ಎಂಬ ಇಬ್ಬರು ಅಣ್ಣಂದಿರೂ ಮರಿಯಾ ಎಂಬ ತಂಗಿಯೂ ಇದ್ದಳು.
ಅಲೆಕ್ಸೀ ನಿಕೋಲಯೇವಿಚ್‌ನನ್ನು ದುಶ್ಚಟಗಳಿಂದ ಬಿಡಿಸುವ ಸಲುವಾಗಿ ಹಾಗೂ ಸಂಸಾರದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ 1874ರಲ್ಲಿ ಇಡೀ ಕುಟುಂಬ ವಾರೋನೇಶ್‌ನಿಂದ ಸುಮಾರು ನೂರಾ ಮುವ್ವತ್ತು ಕಿಲೋಮೀಟರಿನಷ್ಟು ದೂರದಲ್ಲಿದ್ದ ಒರೇಲ್ ಪ್ರಾಂತ್ಯದ ಎಲ್ಯತ್ಸ್‌ನ ಬ್ಯೂಟಕಿಯಲ್ಲಿದ್ದ ತಮ್ಮ ಪುಟ್ಟ ಎಸ್ಟೇಟ್‌ನಲ್ಲಿ ಹೋಗಿ ನೆಲೆಸುತ್ತದೆ. ಬುನಿನ್ 1881 ರವರೆಗೂ ಇಲ್ಲಿಯೇ ಉಳಿಯತ್ತಾನೆ. ಆಗವನು ನಕೊಲೈ ಓಸಿಪೊವಿಚ್ ಅನ್ನುವ ಹವ್ಯಾಸಿ ವರ್ಣಚಿತ್ರಕಾರ ಹಾಗೂ ಸಂಗೀತಗಾರನಿಂದ ಖಾಸಗಿ ಶಿಕ್ಷಣ ಪಡೆದುಕೊಳ್ಳುತ್ತಾನೆ. ಅವನು ತನ್ನ ವಿದ್ಯಾರ್ಥಿಗಳಿಗೆ ರಷ್ಯನ್ ಭಾಷೆಗೆ ತರ್ಜುಮೆಗೊಂಡಿದ್ದ ಹೋಮರನ ಒಡಿಸ್ಸಿ ಮತ್ತು ಸರ್ವಾಂಟೇಸನ ಡಾನ್ ಕ್ವಿಕ್ಸೋಟನ್ನು ಓದಿಸುವ ಮೂಲಕ ಅವರನ್ನು ಓದಿನ ಗೀಳಿಗೆ ಬೀಳಿಸುತ್ತಾನೆ. ಚಾಸರ್‍ನಿಂದ ಟೆನ್ನೀಸನ್‍ವರೆಗೆ ಅನ್ನುವ ಕವಿತಾ ಸಂಕಲನ ಬುನಿನ್ ಮೊಟ್ಟ ಮೊದಲು ಓದಿದ ಪುಸ್ತಕವಾಗಿರುತ್ತದೆ. ಅದನ್ನು ಓದಿದ ಮೇಲೆ ಬುನಿನ್ ತಾನೂ ಕವಿಯಾಗಬೇಕುನ್ನುವ ತುಡಿತಕ್ಕೆ ಬೀಳುತ್ತಾನೆ. ಬುಹುಪಾಲು ಸಮಯವನ್ನು ಮನೆಯಿಂದ ಹೊರಗೇ ಕಳೆಯುತ್ತಿದ್ದ ಬುನಿನ್ ಸೇವಕರು, ರೈತರು ಮುಂತಾದವರ ನಿಕಟ ಸಂಪರ್ಕಕ್ಕೊಳಗಾಗಿ ನಿಜವಾದ ಹಳ್ಳಿಯ ಬದುಕಿನ ಬಗ್ಗೆ ಅವನಿಗೆ ಅಪಾರ ಅರಿವು ಉಂಟಾಗುತ್ತದೆ. ಅಂತೆಯೇ ಪಕೃತಿ ಬಗೆಗಿನ ಇನ್ನಿಲ್ಲದ ಪ್ರೀತಿಗೂ ಅದು ಕಾರಣವಾಗುತ್ತದೆ.
1881ರ ಆಗಸ್ಟ್‌ನಲ್ಲಿ ಬುನಿನ್ ಎಲ್ಯತ್ಸ್‌ನಲ್ಲಿ ಸ್ಕೂಲಿಗೆ ಸೇರಿ ಅಲ್ಲಿನ ಹಾಸ್ಟೆಲಿನಲ್ಲಿಯೇ ಉಳಿಯುತ್ತಾನೆ. ರಜಾ ದಿನಗಳಲ್ಲಿ ತನ್ನ ಹಳ್ಳಿಗೆ ಬಂದು ಹೋಗುತ್ತಿದ್ದದ್ದು ಬಿಟ್ಟರೆ ಸುಮಾರು ನಾಲ್ಕೂವರೆ ವರ್ಷಗಳಷ್ಟು ಕಾಲ ಅಲ್ಲಿಯೇ ಇರುತ್ತಾನೆ. 1883ರಲ್ಲಿ ಬುನಿನ್ ಕುಟುಂಬ ಪಿತ್ರಾರ್ಜಿತ ಆಸ್ಥಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಬ್ಯೂಟಕಿಯಿಂದ ಅದೇ ಪ್ರಾಂತ್ಯದಲ್ಲಿದ್ದ ಆಝಿರ್ಕಿ ಎಂಬ ಸಣ್ಣ ಸಣ್ಣ ಸರೋವರಗಳಿದ್ದ ಪುಟ್ಟ ಹಳ್ಳಿಯೊಂದಕ್ಕೆ ಸ್ಥಳಾಂತರಗೊಳ್ಳುತ್ತದೆ. ಬುನಿನ್ ಓದಿನಲ್ಲಿ ಅಷ್ಟು ಚುರುಕಾಗಿರಲಿಲ್ಲ. ಹಂಗಾಗಿ ಗಣಿತದಲ್ಲಿ ಫೇಲಾಗಿ ಮೂರನೆಯ ಕ್ಲಾಸನ್ನು ಮತ್ತೆ ಓದಬೇಕಾಗುತ್ತದೆ. ನಂತರ 1886ರಲ್ಲಿ ಹಾಜರಾತಿ ಇಲ್ಲದ ಕಾರಣಕ್ಕೆ ಅವನು ಆ ಸ್ಕೂಲಿನಿಂದ ಖಾಯಮ್ಮಾಗಿ ಹೊರದಬ್ಬಲ್ಪಡುತ್ತಾನೆ. ನಂತರ ಅಣ್ಣ ಯೂಲಿಯೊಂದಿಗೆ ಓದುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಯೂಲಿಯೊಂದಿಗೆ ಖಾರ್ಕಾವ್‍ನಲ್ಲಿ ಕೆಲಕಾಲವಿದ್ದು ನಂತರ ಬುನಿನ್ ಒರೇಲ್‍ಗೆ ಹೋಗುತ್ತಾನೆ. ಅಲ್ಲಿ ಸುಮಾರು ನಾಲ್ಕು ವರ್ಷಗಳ ಲಿಬರಲ್ ಪಾಪ್ಯುಲಿಸ್ಟರು ನಡೆಸುತ್ತಿದ್ದ `ದ ಓರ್ಯಾಲ್ ಹೆರಾಲ್ಡ್’ ಅನ್ನುವ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಅಲ್ಲಿಂದಲೇ ಬುನಿನ್ ಚೆಕಾಫ್‍ಗೆ ಪತ್ರವನ್ನು ಬರೆದದ್ದು. ಅಲ್ಲಿ ಅವನೊಳಗಿನ ತಳಮಳ ಹಾಗೂ ಪ್ರವಾಸದ ಬಯಕೆಗಳು ದಾಖಲಾಗಲು ಪ್ರಾರಂಭಗೊಳ್ಳುತ್ತವೆ. ಅಲ್ಲಿಂದ ಈ ಯುವ ಲೇಖಕ ಯೂಕ್ರೇನಿನ ಪೋಲ್ಟವಾಕ್ಕೆ ಹೋಗುತ್ತಾನೆ. ಜೆಮ್ಸ್‍ತ್ವೋನಲ್ಲಿ ಮೊದಲು ಸಂಖ್ಯಾಶಾಸ್ತ್ರಜ್ಞನಾಗಿಯೂ, ನಂತರ ಲೈಬ್ರರಿಯನ್ ಆಗಿಯೂ ಕೆಲಸ ಮಾಡುತ್ತಾನೆ. ಈ ಸಂದರ್ಭಗಳು ಹಾಗೂ ಒರೇಲ್‍ನಲ್ಲಿನ ಸಂದರ್ಭಗಳು ಅವನ `ಲಿಕಾ’ ಅನ್ನುವ ಕಿರು ಕಾದಂಬರಿಯಲ್ಲಿ ಆತ್ಮಕಥಾನಕ ಮಾದರಿಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲ್ಪಟ್ಟಿವೆ. `ದ ಓರ್ಯಾಲ್ ಹೆರಾಲ್ಡ್’ನಲ್ಲಿ ಕೆಲಸ ಮಾಡುತ್ತಿದ್ದಂಥ ಹೊತ್ತಲ್ಲಿ ಅಲ್ಲಿಯೇ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಎಲ್ಯತ್ಸ್‍ನ ವೈದ್ಯನೊಬ್ಬನ ಮಗಳಾಗಿದ್ದ ವರ್ವಾರಾ ಪೆಷಾಂಕಳ ಪರಿಚಯವಾಗುತ್ತದೆ. ನಂತರ ಅವರಿಬ್ಬರೂ `ಲಿವಿಂಗ್ ಟುಗೆದರ್’ನಲ್ಲಿರುತ್ತಾರೆ. ಆದರದು ತುಂಬಾ ದಿನ ಬಾಳಿಕೆ ಬರುವುದಿಲ್ಲ. ವರ್ವಾರಾ ಪೆಷಾಂಕ ಬುನಿನ್‍ನೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುತ್ತಾಳೆ. ನಂತರ ಬುನಿನ್‍ನ ಖಾಸಾ ಗೆಳೆಯ ಅರ್ಸೇನಿ ಬಿಬಿಕಾಫ್ ಅನ್ನುವ ಶ್ರೀಮಂತ ಯುವಕನನ್ನು ಮದುವೆಯಾಗುತ್ತಾಳೆ. ಬುನಿನ್ ಅಲ್ಲಿಂದ ಪೀಟರ್ಸ್‍ಬರ್ಗ್ ಮತ್ತು ಮಾಸ್ಕೋಗೆ ಹೋಗುತ್ತಾನೆ.
ಬುನಿನ್ನನಿಗೆ ಖ್ಯಾತಿ ಎಂಬುದು ಬಹು ಬೇಗ ಬರುತ್ತದೆ. 1887ರಲ್ಲಿ ಪೀಟರ್ಸ್‍ಬರ್ಗ್‍ನ ನಿಯತಕಾಲಿಕೆ ಪತ್ರಿಕೆಯೊಂದರಲ್ಲಿ ಪದ್ಯಗಳು ಪ್ರಕಟವಾಗತೊಡಗಿದಂತೆ ಅವನ ಹೆಸರು ಸಾಹಿತ್ಯಲೋಕಕ್ಕೆ ಪರಿಚಿತವಾಗತೊಡಗಿತು. ಆಗ ಅವನಗಿನ್ನೂ ಹದಿನೇಳು ವರ್ಷ. ಅಲ್ಲಿಂದ ನಾಲ್ಕು ವರ್ಷಕ್ಕೆ ಬುನಿನ್ನನ ಮೊದಲ ಕವನ ಸಂಕಲನ ಪ್ರಕಟಗೊಳ್ಳುತ್ತದೆ. ಅದಾದ ಮೇಲೆ 1893ರಲ್ಲಿ ಅವನ ಮೊದಲ ಗದ್ಯ ಬರಹ `ಟಾಂಕಾ’ ಪ್ರಕಟಗೊಳ್ಳುತ್ತದೆ. 1895ರಲ್ಲಿ ಪೀಟರ್ಸ್‍ಬರ್ಗ್‍ಗೆ ಹೋದ ನಂತರ ಅಲ್ಲಿ ಬುನಿನ್‍ಗೆ ಹೆಸರಾಂತ ಪ್ರಕಾಶಕರು ಹಾಗೂ ಲೇಖಕರ ಒಡನಾಟ ಸಿಕ್ಕುತ್ತದೆ. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಇದ್ದು, ಅಲ್ಲಿಂದ ಮಾಸ್ಕೋಗೆ ಹೋಗುತ್ತಾನೆ. ಅಲ್ಲಿ 1897ರಲ್ಲಿ ಅವನ ಕಥಾ ಸಂಲನವೊಂದು ಪ್ರಕಟಗೊಂಡು ಎಲ್ಲರಿಂದಲೂ ಪ್ರಶಂಸೆಗೊಳ್ಳಲ್ಪಡುತ್ತದೆ.
1903ರಲ್ಲಿ ಲಾಂಗ್‍ಮನ್ನನ `ಸಾಂಗ್ ಆಫ್ ಹಯವಾಥಾ’ ದ ಅದ್ಭುತ ಕಾವ್ಯಾತ್ಮಕ ಅನುವಾದಕ್ಕಾಗಿ ರಷ್ಯನ್ ಅಕಾಡೆಮಿ ಬುನಿನ್ನನಿಗೆ `ಪುಷ್ಕಿನ್ ಪ್ರಶಸ್ತಿ’ಯನ್ನು ನೀಡುತ್ತದೆ. ಆ ನಂತರ ಈ ಅನುವಾದಿತ ಕೃತಿ ಹಲವು ಸಲ ಮರು ಮುದ್ರಣಗೊಂಡು ತುಂಬಾ ಪ್ರಸಿದ್ಧಿಯಾಗುತ್ತದೆ. 1909ರಲ್ಲಿ ಅದೇ ಅಕಾಡೆಮಿ ಅವನನ್ನು ಸದಸ್ಯನನ್ನಾಗಿ ಆಯ್ಕೆ ಮಾಡುತ್ತದೆ. ಮಾಸ್ಕೋದಲ್ಲಿ ಬುನಿನ್ `ವೆಡ್ನೆಸ್‍ಡೇ’ ಅನ್ನುವ ಸಾಹಿತ್ಯ ಬಳಗವನ್ನು ಸೇರಿಕೊಳ್ಳುತ್ತಾನೆ. ಆ ಕಾಲದ ಹೆಸರಾಂತ ಲೇಖಕರಾದ ಮ್ಯಾಕ್ಸಿಂ ಗಾರ್ಕಿ, ಅಲೆಕ್ಸಾಂಡರ್ ಇವಾನೋವಿಚ್ ಕುಪ್ರಿನ್, ಲಿಯೋನಿಡ್ ಆಂಡ್ರೇವ್ ಮುಂತಾದವರೆಲ್ಲಾ ಆ ಬಳಗದ ಸದಸ್ಯರಾಗಿರುತ್ತಾರೆ. 1904ರಲ್ಲಿ ಸಾಯುವುದಕ್ಕೆ ಮುಂಚೆ ಚೆಕಾಫ್ ಕೂಡಾ ಅದರ ಸದಸ್ಯನಾಗಿದ್ದ. ಆ ಹೊತ್ತಲ್ಲಿ ಸಾಹಿತಿಕ ನಿಯತಕಾಲಿಕೆಗಳು ಮ್ಯಾಕ್ಸಿಂ ಗಾರ್ಕಿಯ ಸಂಪಾದಕತ್ವದಲ್ಲಿ ಬಹತೇಕ ಯುವ ಲೇಖಕರುಗಳ ಕೃತಿಗಳನ್ನು ಪ್ರಕಟಿಸಿದವು.
ಪ್ರವಾಸ ಮಾಡುವುದು ಬುನಿನ್ನನ ಬಹುಕಾಲದ ಬಯಕೆ ಮಾತ್ರ ಆಗಿರಲಿಲ್ಲ, ಅದು ಅವನ ದರ್ದು ಕೂಡಾ ಆಗಿತ್ತು. ಅದನ್ನವನು ತುಂಬಾ ದೊಡ್ಡ ಪ್ರಮಾಣದಲ್ಲೇ ಮಾಡುತ್ತಾನೆ. ಹಂಗಾಗಿ, ಮೊದಲನೆಯ ಮಹಾಯುದ್ಧಕ್ಕೂ ಮುಂಚೆ ರಷ್ಯಾ, ಯೂರೋಪ್ ಹಾಗೂ ಏಷ್ಯಾಗಳನ್ನು ಸುತ್ತುತ್ತಾನೆ. ನಂತರ ಉಡೆಸ್ಸಾದಲ್ಲಿ ನೆಲೆಸಬೇಕೆಂಬುದಾಗಿ ಬಯಸುತ್ತಾನೆ. ಅಂತೆಯೇ 1898ರಲ್ಲಿ ಯನಾ ಸಕಾನಿ ಅನ್ನುವ ಹೆಸರಿನ `ಸದರ್ನ್ ರೆವ್ಯೂ’ ಅನ್ನುವ ಪತ್ರಿಕೆಯ ಪ್ರಕಾಶಕನ ಮಗಳನ್ನು ಮದುವೆಯಾಗುತ್ತಾನೆ. ಅದು 1900ರಲ್ಲಿ ಮುರಿದು ಬೀಳುತ್ತದೆ. ಆ ಹೊತ್ತಿಗೆ ಅವರಿಗೊಬ್ಬ ಮಗನಿರುತ್ತಾನೆ. ಆ ಮಗ ತನ್ನ ಐದನೆಯ ವಯಸ್ಸಿನಲ್ಲಿ ತೀರಿಹೋಗುತ್ತಾನೆ. ಮೊದಲ ಮದುವೆಯ ವಿಫಲತೆಯಿಂದ ಕಂಗಾಲಾದ ಬುನಿನ್ ಇನ್ನಿಲ್ಲದಂತೆ ಪ್ರವಾಸ ಮಾಡುತ್ತಾನೆ. 1905ರಲ್ಲಿ ಬುನಿನ್‍ಗೆ ವೆರಾ ನಿಕ್‍ಲಾಯೆನ್ನಾ ಎಂಬುವಳೊಂದಿಗೆ ಮತ್ತೊಂದು ಸಂಬಂಧ ಶುರವಾಗುತ್ತದೆ. ಅವಳೇ ಮುಂದೆ ಅವನ ಎರಡನೆಯ ಹೆಂಡತಿಯೂ ಆಗುತ್ತಾಳೆ. ತುಂಬಾ ದಿನ ಒಟ್ಟಿಗೇ ಇದ್ದು, ಮೊದಲನೆಯ ಹೆಂಡತಿಯಿಂದ ಕಾನೂನಿನ ಪ್ರಕಾರ ವಿಚ್ಛೇದನ ದೊರೆತ ಮೇಲೆ ಜೂನ್ 20,1922ರಲ್ಲಿ ಮದುವೆಯಗುತ್ತಾರೆ. ವೆರಾ ನಿಕ್‍ಲಾಯೆನ್ನಾ ಅವನ ಮುಂದಿನ ಎಲ್ಲಾ ಪ್ರವಾಸಗಳಲ್ಲೂ ಜೊತೆಗಿರುತ್ತಾಳೆ.
ಏಷ್ಯಾದ ವಿಲಕ್ಷಣ ಅಪರಿಚಿತತೆ ಅವನ ಕಲ್ಪನಾಶಕ್ತಿಯನ್ನು ಇನ್ನಿಲ್ಲದಂತೆ ಸಮ್ಮೋಹನಗೊಳಿಸಿಬಿಡುತ್ತದೆ. ಪೌರಾಸ್ತ್ಯ ದೇಶಗಳೊಂದಿಗಿನ ಇಂಥ ತೀವ್ರ ಸಮ್ಮೋಹಕತೆಯ ಪ್ರಭಾವವನ್ನು ಪ್ರಧಾನವಾಗಿ ನಾವು ಬುನಿನ್ನನ ಕಾವ್ಯದಲ್ಲೂ, ಕೊಂಚ ಸಣ್ಣ ಪ್ರಮಾಣದಲ್ಲಿ ಅವನ ಗದ್ಯ ಬಹಗಳಲ್ಲೂ ಕಾಣಬಹುದು. ರಷ್ಯಾದ ಬಾಲ್ಶೇವಿಕ್ ಕ್ರಾಂತಿಯ ನಂತರ 1919ರಲ್ಲಿ ಬುನಿನ್ ಫ್ರ್ಯಾನ್ಸ್‍ಗೆ ವಲಸೆ ಹೋಗಿ ಪ್ಯಾರಿಸ್‍ನಲ್ಲಿ ವಾಸಿಸತೊಡಗುತ್ತಾನೆ. ತಾನೇ ವಿಧಿಸಿಕೊಂಡ ದೇಶಭ್ರಷ್ಟತೆಯ ಗಡೀಪಾರಿನ ಉದ್ದಕ್ಕೂ ಲೇಖಕ ತನ್ನ ತಾಯ್ನಾಡಿಗಾಗಿ ಇನ್ನಿಲ್ಲದಂತೆ ಹಂಬಲಿಸುತ್ತಾನೆ. ವಲಸೆಯ ದಿನಗಳಲ್ಲಿ ಕೂಡಾ ಬುನಿನ್ನನ ಬರಹಗಳು ಸಂಪೂರ್ಣವಾಗಿ ರಷ್ಯಾವನ್ನೇ ಧ್ಯಾನಿಸುತ್ತವೆ. ಅಲ್ಲಿನ ಬದುಕು, ಕಾಡು, ಮೇಡು ಮುಂತಾದವುಗಳೆಲ್ಲಾ ಬುನಿನ್ನನ ಬರಹಗಳಲ್ಲಿ ಅಜರಾಮರವಾಗಿ ಚಿತ್ರಿಸಲ್ಪಟ್ಟಿವೆ. ಸೋವಿಯತ್ ಪಬ್ಲಿಕೇಶನ್‍ಗಾಗಿ ಮೊದಲ ಬಾರಿಗೆ ತನ್ನ ಬರಹಗಳನ್ನೆಲ್ಲಾ ಒಂದೆಡೆ ಸಂಪಾದಿಸಿಕೊಟ್ಟ ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್8, 1953ರಲ್ಲಿ ಬುನಿನ್ ತೀರಿಕೊಳ್ಳುತ್ತಾನೆ.
1887ರಲ್ಲಿ ಪೀಟರ್ಸ್‍ಬರ್ಗ್‍ನ ನಿಯತಕಾಲಿಕೆ ಪತ್ರಿಕೆಯೊಂದರಲ್ಲಿ ಪದ್ಯಗಳು ಪ್ರಕಟವಾಗತೊಡಗಿದಂತೆ ಅವನ ಹೆಸರು ಸಾಹಿತ್ಯಲೋಕಕ್ಕೆ ಪರಿಚಿತವಾಗತೊಡಗಿತು. ಆಗ ಅವನಗಿನ್ನೂ ಹದಿನೇಳು ವರ್ಷ. ಅಲ್ಲಿಂದ ನಾಲ್ಕು ವರ್ಷಕ್ಕೆ ಬುನಿನ್ನನ ಮೊದಲ ಕವನ ಸಂಕಲನ ಪ್ರಕಟಗೊಳ್ಳುತ್ತದೆ. ಅದಾದ ಮೇಲೆ 1893ರಲ್ಲಿ ಅವನ ಮೊದಲ ಗದ್ಯ ಬರಹ `ಟಾಂಕಾ’ ಪ್ರಕಟಗೊಳ್ಳುತ್ತದೆ.
1917ರ ರಷ್ಯನ್ ಕ್ರಾಂತಿಗೂ ಎರಡು ದಶಕಗಳಿಗೂ ಮೊದಲು ವ್ಯಾಪಕವಾದ ವೈವಿಧ್ಯತೆಯಿಂದ ಕೂಡಿದ್ದ ಸಾಹಿತಿಕ ಚಳವಳಿಗಳು ಹಾಗೂ ಗುಂಪುಗಳು ರಷ್ಯಾದಲ್ಲಿ ಪ್ರವರ್ಧಮಾನದಲ್ಲಿದ್ದವು. ಸಂಕೇತವಾದಿಗಳ ಅತಿಯಾದ ಅತೀಂದ್ರೀಯ ಭಾವಗೀತಾತ್ಮಕತೆ, ಪರಿಪೂರ್ಣತಾವಾದಿಗಳ ನವಕ್ಲಾಸಿಕಲ್ ವಾದ, ಮ್ಯಾಕ್ಸಿಂ ಗಾರ್ಕಿಯ ನೇರ ರಾಜಕೀಯ ಹಾಗೂ ಸಾಮಾಜಿಕ ಪತ್ರಿಕೋದ್ಯಮ, ಮತ್ತವನ `ಝ್ನ್ಯಾನಿಯಾ’ ಗುಂಪು ಹಾಗೂ ಲಿಯೋನಿಡ್ ಆಂಡ್ರೇವ್ ಮತ್ತು ಮಿಹೈವೂ ಅರತ್ಸ್‍ಬಾಶೇವ್‍ನ ಜಡ ನಿರಾಶಾವಾದ ಮತ್ತು ಸಂವೇದನಾ ಸಿದ್ಧಾಂತಗಳ ನಡುವೆ ಬುನಿನ್ ಭಿನ್ನವಾಗಿ ನಿಲ್ಲುತ್ತಾನೆ. ಈ ಚಳುವಳಿಗಳೆಲ್ಲವೂ ಏಕ ಕಾಲದಲ್ಲಿ ಒಂದೆಡೆಯಲ್ಲೇ ಇದ್ದರೂ ಒಂದಕ್ಕೊಂದು ಸೋಕಿಸಿಕೊಳ್ಳದೆ, ಒಂದರಿಂದ ಒಂದು ಪ್ರಭಾವಕ್ಕೊಳಗಾಗದೆ ಹೇಗೆ ಸ್ವತಂತ್ರವಾಗಿದ್ದವೋ ಹಾಗೆ ತನ್ನ ಸುತ್ತಲೂ ನಡೆಯುತ್ತಿದ್ದ ಯಾವುದೇ ಸಾಹಿತಿಕ ಚರ್ಚೆಗಳಿಂದ ದೂರ ಉಳಿದ ಬುನಿನ್ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬರೆಯುತ್ತಾ ಹೋಗುತ್ತಾನೆ. ನಿಜವಾಗಿಯೂ ಅವನು ಅವುಗಳಿಗೆಲ್ಲಾ ಸರಿ ಹೊಂದುತ್ತಲೂ ಇರಲಿಲ್ಲ. ಅಂತೆಯೇ ಆ ನಿಟ್ಟಿನಲ್ಲಿ ಅವನು ಪ್ರಯತ್ನಿಸಲೂ ಇಲ್ಲ. ಆದಾಗ್ಯೂ, ಅವನು ಸಮಕಾಲೀನ ಸಾಹಿತಿಕ ಹಾಗೂ ಇತರೆ ವಿದ್ಯಾಮಾನಗಳಿಂದ ಮತ್ತು ಸಾಹಿತಿಗಳಿಂದ ಪೂರಾ ವಿಮುಖನಾಗಿರಲಿಲ್ಲ. ಅಲೆಕ್ಸಾಂಡರ್ ಇವಾನೋವಿಚ್ ಕುಪ್ರಿನ್ ಮತ್ತು ಲಿಯೋನಿಡ್ ಆಂಡ್ರೇವ್‍ನ ಜೊತೆಗೂಡಿ `ಝ್ನ್ಯಾನಿಯಾ’ ನಿಯತಕಾಲಿಕೆಯೊಂದಿಗೆ ಗುರುತಿಸಿಕೊಂಡಿದ್ದಲ್ಲದೆ, ಅದರ ಸಂಪಾದಕ ಮ್ಯಾಕ್ಸಿಂ ಗಾರ್ಕಿಯ ಅತ್ಯಂತ ಆತ್ಮೀಯ ಗೆಳೆಯನೂ ಆಗಿದ್ದನು. ಗಾರ್ಕಿ ಹಾಗೂ ಬುನಿನ್ ಇಬ್ಬರಿಗೂ ಚೆಕಾಫ್‍ನ ಜೊತೆ ಗಾಢ ಗೆಳೆತನವಿದ್ದುದಲ್ಲದೆ, ಅವನ ಬರಹಗಳಿಂದ ಇಬ್ಬರೂ ತುಂಬಾ ಪ್ರಭಾವಿತರಾಗಿದ್ದರು. 1910ರಲ್ಲಿ ಪ್ರಕಟಗೊಂಡ ಅಂತೆಯೇ ಆ ಕಾಲದ ತುಂಬಾ ಪ್ರಧಾನ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದ ಬುನಿನ್‍ನ `ದ ವಿಲೇಜ್’ ಕಾದಂಬರಿಯಲ್ಲಿ ನಿಸ್ಸಂಶಯವಾಗಿ ಗಾರ್ಕಿಯ ಪ್ರೇರಣೆಯನ್ನು ಗುರುತಿಸಬಹುದಾಗಿದೆ. ಆ ಮೂಲಕ ಬುನಿನ್‍ನನ್ನು ಗದ್ಯ ಮತ್ತು ಪದ್ಯಗಳಲ್ಲಿ ತನ್ನದೇ ಆದ `ದನಿ’ಯನ್ನು ಕಂಡುಕೊಳ್ಳುವುದರ ಮೂಲಕ ಕವಿಯಾಗಿ ಅಷ್ಟೇ ಅಲ್ಲದೆ ಕಥೆಗಾರನಾಗಿ ಭಾವಗೀತಾತ್ಮಕ ಕಥೆಗಳನ್ನು ಬರೆಯಬಲ್ಲನೆಂಬ ಖ್ಯಾತಿಗೆ ತಂದು ನಿಲ್ಲಿಸಿತ್ತು. ಆ ಕಾದಂಬರಿ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದ್ದಲ್ಲದೆ, ಖುದ್ದು ಗಾರ್ಕಿಯೇ ಅದನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿರಲಿಲ್ಲ.
`ದ ವಿಲೇಜ್’ ನಂತರ ಈಗಲೂ ಬುನಿನ್ನನ್ನ ಅತ್ಯುತ್ತಮ ಕೃತಿಗಳೆಂದು ಕರೆಯಲ್ಪಡುವ `ಸುಖ್ದೋಲ್’, `ಸ್ಯಾನ್‍ಫ್ರ್ಯಾನ್ಸಿಸ್ಕೊದ ಮಹನೀಯ’, `ದ ಕಪ್ ಆಫ್ ಲೈಫ್’, ಗಳು ಬಂದವು. `ದ ವಿಲೇಜ್’, ನಿಸ್ಸಂಶಯವಾಗಿ `ಸುಖ್ದೋಲ್’ಗೆ ಜೊತೆಯಾಗಿ, ಸರಿಸಮನಾಗಿ ನಿಲ್ಲುವಂಥ ಕೃತಿಯಾದರೂ, ಶೈಲಿ, ವಸ್ತು ಹಾಗೂ ಅದರ ಒಟ್ಟು ರಾಚನಿಕ ದೃಷ್ಟಿಯಿಂದ ಅದಕ್ಕಿಂತಲೂ ಹೆಚ್ಚು ಬಿಗಿಯಾಗಿ ಹಾಗೂ ಹೆಚ್ಚು ಹತೋಟಿಯಿಂದ ರೂಪುಗೊಂಡಿದೆ. ಇದೇ ವಸ್ತು ಬುನಿನ್ನನ `ಕಡೆಯ ಕೂಡುದಾಣ’ `ಸದ್ದಿಲ್ಲದ ಉಸಿರಾಟ’, `ಸ್ಯಾನ್‍ಫ್ರ್ಯಾನ್ಸಿಸ್ಕೋದ ಮಹನೀಯ’, ಕಥೆಗಳಲ್ಲಿ ಮುಂದುವರೆದಿದೆ. ಆದರೆ `ಸ್ಯಾನ್‍ಫ್ರ್ಯಾನ್ಸಿಸ್ಕೋದ ಮಹನೀಯ’ ಕಥೆಯ ಶೈಲಿ ಹಾಗೂ ಸಮನ್ವಯತೆಯಲ್ಲಿ ಬುನಿನ್ನನ ಭಾಷೆಗೆ ಸಂಪೂರ್ಣ ಪರಿಪೂರ್ಣತೆ ದಕ್ಕಿದೆ. ಇಲ್ಲಿ ಬುನಿನ್ನನ ಭಾಷೆ ನಿರಲಂಕೃತವಾದದ್ದು ಹಾಗೂ ಅಡಕವಾದದ್ದು. ಕಥೆ ಬಿಚ್ಚಿಕೊಳ್ಳುತ್ತಾ ಹೋದಂತೆ ಅದು ಆಗ್ರಹಪೂರ್ವಕವಾಗಿ ನಿರ್ದಯೆಯಿಂದಲೂ ಹಾಗೂ ಅಲೆಗಳಂತೆ ನಿರಂತರ ಅಪ್ಪಳಿಸತೊಡಗುತ್ತದೆ. ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಅಂದರೆ, ಬುನಿನ್ ವಾಡಿಕೆಯ ವೈಯಕ್ತಿಕತೆಯಿಂದ ಆಧ್ಯಾತ್ಮಿಕ ಹಸಿವು ಮತ್ತು ಲೋಕದಲ್ಲಿರುವ ಕೃತ್ರಿಮತೆಯ ಮಾನದಂಡದತ್ತ ತನ್ನ ಗಮನವನ್ನು ತಿರುಗಿಸಿದ್ದಾನೆ. ಇದೊಂದು ನೀತಿಯೇ ಇಲ್ಲದ ನೀತಿ ನಾಟಕ. ಈ ಕಥೆಯ ಪರಿಣಾಮಕಾರಿತ್ವ ಅಡಗಿರುವುದು ಲೇಖಕನ ನಿರ್ಲಿಪ್ತೆಯಲ್ಲಿ. ಇದು ಕೊಂಚ ಮಟ್ಟಿಗೆ ನೀಳ್ಗತೆಗಿಂತ ದೊಡ್ಡ ಕಥೆಯಾದರೂ, ಅದರ ವರ್ಣನಾತ್ಮಕ ವಿವರದ ಸಾಂದ್ರತೆ, ಪಾತ್ರಗಳ ನಿರೂಪಣೆ ಹಾಗೂ ನಿಭಾಯಿಸುವಿಕೆಯ ದೃಷ್ಟಿಯಿಂದ ಇದನ್ನು ಕಾದಂಬರಿ ಅಂತಲೇ ಕರೆಯಬಹುದು.
ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ ಮೂಲಪುರುಷರಾಗಿದ್ದಾರೆ. `ಎ ಹಿಸ್ಟರಿ ಆಫ್ ರಷ್ಯನ್ ಲಿಟರೇಚರ್’ನಲ್ಲಿ ಮರ್‍ಸ್ಕೀ ಅನ್ನುವವನು ಹೇಳುವಂತೆ: ಬುನಿನ್ನನ ಭಾಷೆ `ಕ್ಲಾಸಿಕಲ್’, ಮಿತವಾದ್ದು, ಸಮಚಿತ್ತವಾದ್ದು, ಮೂರ್ತವಾದದ್ದು… ಬಹುಶಃ ಆಧುನಿಕ ರಷ್ಯನ್ ಲೇಖಕರಲ್ಲಿ ಟರ್ಜನೇವ್, ಗಂಚರೋಫ್ `ಕ್ಲಾಸಿಕ್ಸ್’ಗಳಿಂದ ಪ್ರಶಂಸಿಲ್ಪಟ್ಟವನೆಂದರೆ, ಅದು ಬುನಿನ್ ಮಾತ್ರ.’ ಬುನಿನ್ 1903ಕ್ಕೂ ಮುಂಚೆ ಬರೆದ ಭಾವಗೀತಾತ್ಮಕ ಕಥೆಗಳು, ಅದರಲ್ಲೂ ವಿಶೇಷವಾಗಿ `ಆಂಟೆನೋಫ್ಕಾ ಸೇಬುಗಳು’, ಕಥೆಯ ಲಹರಿಯನ್ನು ಟರ್ಜೆನೇವ್‍ನ `ಹಂಟರ್ಸ್ ಸ್ಕೆಚಸ್’, ಗಂಚರೋಫ್‍ನ `ಆಬ್ಲಮೋಫ್ಸ್ ಡ್ರೀಮ್’, ಅಂತೆಯೆ ಚೆಕಾಫ್‍ನ ಪ್ರಬುದ್ಧ ಬರಹಗಳಲ್ಲಿನ ಭಾವಗೀತಾತ್ಮಕ ಭಾವಸ್ಥಿತಿ, ಅದರಲ್ಲೂ ಸ್ಪಷ್ಟವಾಗಿ ಪ್ರಕೃತಿಯನ್ನು ಆರಾಧಿಸುವ ವಿಸ್ತೃತ ಭಾವಗೀತಾತ್ಮಕ ಹಾಡಿನ `ಸ್ಟೆಪ್’ಗಳಲ್ಲಿ ಪತ್ತೆಹಚ್ಚಬಹುದಾಗಿದೆ. ಇಷ್ಟೇ ಅಲ್ಲದೆ, ಕೆಲವೊಮ್ಮೆ ಚೆಕಾಫ್ ಹಾಗೂ ಬುನಿನ್ನನ ವಸ್ತು ಹಾಗೂ ಶೀರ್ಷಿಕೆಗಳಲ್ಲಿ ಕೂಡಾ ಸಾದೃಶ್ಯಗಳಿರುವುದನ್ನೂ ಕಾಣಬಹುದು. ಖಚಿತವಾಗಿ ಹೇಳೋದಾದರೆ, ಕಥಾ ಸಾಹಿತ್ಯಕ್ಕೆ ಬುನಿನ್ನನ ಪ್ರವೇಶವಾಗುವ ಹೊತ್ತಿಗೆ ಆ ಪ್ರಕಾರವಾಗಲೇ ಪ್ರಸಿದ್ಧವಾಗಿತ್ತು. ಸಾಲದ್ದಕ್ಕೆ ಆ ಪ್ರಕಾರವನ್ನು ಬೆಳಸುವಲ್ಲಿ ಮತ್ತು ಅದಕ್ಕೊಂದು ಪರಿಪೂರ್ಣತೆ ತರುವಲ್ಲಿ ಚೆಕಾಫ್‍ನ ಕಾಣಿಕೆ ತುಂಬಾ ದೊಡ್ಡದಿತ್ತು. ಆದರೆ ಬುನಿನ್ ತನ್ನ ಜೀವನಪರ್ಯಂತ ಈ ಪ್ರಕಾರಕ್ಕೇ ಬರವಣಿಗೆಯನ್ನ ಮುಡುಪಾಗಿಟ್ಟ. ಪರಿಣಾಮವಾಗಿ 1930 ಮತ್ತು 1940 ನಡುವೆ ಅತಿ ಹೆಚ್ಚು ಕಥೆಗಳು ಬುನಿನ್‍ನಿಂದ ಬರೆಸಿಕೊಂಡಿವೆ. ಆಗ ಬರೆದವುಗಳಲ್ಲಿ `ಕತ್ತಲ ದಾರಿಗಳು’, `ಕೆಂಬೂತ’ ಕಥೆಗಳು ಅತ್ಯಂತ ಯಶಸ್ವಿ ಕಥೆಗಳಾಗಿವೆ. ಈ ನಿಟ್ಟಿನಲ್ಲಿ ಬುನಿನ್ ತನ್ನ ಭಾಷೆ ಮತ್ತು ಆಶಯಗಳ ದೃಷ್ಟಿಯಿಂದ ರಷ್ಯನ್ ಸಾಹಿತ್ಯ ಪರಂಪರೆಯಲ್ಲಿ ಕೊನೆಯ `ಕ್ಲಾಸಿಕಲ್’ ಲೇಖಕನೆಂದೇ ಹೇಳಬಹುದು. ಅವನ ಸಾವಿನೊಂದಿಗೆ ಅಂಥ ಪರಂಪರೆಯ ಕೊಂಡಿಯೂ ಕಳಚುತ್ತದೆ.
ಕೈಗಾರಿಕಾ ಕ್ರಾಂತಿ ರಷ್ಯಾಕ್ಕೆ ಕೊಂಚ ತಡವಾಗಿ ಬಂತು. ಆದರೆ ಅದು ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಆಂತರಿಕ ಆಸಕ್ತಿ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಿಂದ ಗಮನಾರ್ಹವಾದ ಅನೇಕ ಬೆಳವಣಿಗೆಗಳಿಗೆ ಕಾರಣವಾಯ್ತು. ಇಂಥ ಬದಲಾವಣೆಗಳು ಹಾಗೂ ಅದು ಸಾಂಪ್ರದಾಯಿಕ ರೈತಾಪಿ ಬದುಕಿನ ಮೇಲೆ ಬೀರಿದ ಪರಿಣಾಮಗಳು ಬುನಿನ್‍ನನ್ನು ತಟ್ಟಿದ್ದವು. ಬುನಿನ್‍ಗೆ ನೇರವಾಗಿ ಮಣ್ಣಿನೊಂದಿಗೆ ಗಾಢ ನಂಟನ್ನು ಹೊಂದಿದ್ದವರ ಬಗ್ಗೆ, ಪ್ರಕೃತಿಯನ್ನು ಅಪ್ಪಿಕೊಂಡವರ ಬಗ್ಗೆ, ಮೂಢನಂಬಿಕೆಗಳ ಬಗ್ಗೆ ಹಾಗೂ ತಲತಲಾಂತರದಿಂದ ನಡೆದು ಬಂದಿದ್ದ ಸಂಪ್ರದಾಯಗಳ ಬಗ್ಗೆ ಅಗಾಧವಾದ ಅರಿವಿತ್ತು. ಹಾಗೆಯೇ, ಭೂಸ್ವಾಮ್ಯವುಳ್ಳ ಕುಲೀನರು ಹಾಗೂ ರೈತಾಪಿವರ್ಗದ ನಡುವಿನ ನಿಕಟ ಆಧ್ಯಾತ್ಮಿಕ ಸಂಬಂಧಗಳ ಬಗ್ಗೆಯೂ ಸ್ಪಷ್ಟ ದೃಷ್ಟಿಕೋನವಿತ್ತು. ಆದರೆ ಬುನಿನ್ ಕಣ್ಣಾರೆ ಕಂಡಿದ್ದ ಇಂಥದ್ದೊಂದು ಬದುಕು ನಿಧಾನಕ್ಕೆ ವಿಘಟನೆಗೊಳ್ಳುತ್ತಾ, ಕಣ್ಮರೆಯಾಗುತ್ತಾ, ನೆಲದ ನಂಟನ್ನು ಕಳಕೊಂಡ, ಕೇವಲ ಹಣದ ದುರಾಸೆಯಿಂದ ಪ್ರೇರಣೆಗೊಂಡ, ವಿವೇಕ ಕಳೆದುಕೊಂಡ, ನಿರ್ದಯ ಮಧ್ಯಮ ವರ್ಗದಲ್ಲಿ ಅಸಂವೇದನಾ ಗುಣವೊಂದು ಮೆಲ್ಲಗೆ ಮೇಲೇಳುತ್ತಾ ಹೋಗುತ್ತದೆ.
`ಸುಖ್ದೋಲ್’ ಕಿರು ಕಾದಂಬರಿಯಲ್ಲಿ ಮತ್ತು `ಆಂಟೆನೋಫ್ಕಾ ಸೇಬುಗಳು’ ಕಥೆಗಳಲ್ಲಿ ಕೈಗಾರಿಕರಣದಿಂದಾಗಿ ಊಹೆಗೂ ನಿಲುಕದ ಪರಣಾಮಗಳು ಮತ್ತು ರೈತಾಪಿ ಬದುಕಿನ ಆಂತರಿಕ ವಿನಾಶಗಳ ಚಿತ್ರಣವಿದ್ದರೆ, `ದ ವಿಲೇಜ್’, ಮತ್ತು `ದ ಗುಡ್ ಲೈಫ್’ಗಳು ರೈತಾಪಿ ವರ್ಗದ ಮೇಲಿನ ಪರಿಣಾಮಗಳ ಬಗ್ಗೆ ನೇರವಾಗಿ ಮಖಾಮುಖಿಯಾಗುತ್ತವೆ.
ಆದಾಗ್ಯೂ, ಇಂಥ ನಿರಾತಂಕ ಬದುಕಿನ ಬಗ್ಗೆ ತನ್ನದೇ ಆದ ಆದರ್ಶನಿಷ್ಟ ದೃಷ್ಟಿಕೋನವಿದ್ದರೂ, ಅಲ್ಲಿದ್ದ ಬೇಜವಾಬ್ದಾರಿತನ, ಅಜ್ಞಾನ ಮತ್ತು ಸೋಂಬೇರಿತನಗಳ ಬಗ್ಗೆ ಕೂಡಾ ಬುನಿನ್ ಕುರುಡಾಗಿರಲಿಲ್ಲ. ಅವರುಗಳು ಕೈಗಾರೀಕರಣದಂಥ ಬದಲಾವಣೆಗೆ ಹೊಂದಿಕೊಳ್ಳುವಂಥಾದ್ದೇನನ್ನೂ ಮಾಡಲಿಲ್ಲ, ಅಂತೆಯೇ ಅಂಥ ಬದಲಾವಣೆಯ ಅನುಕೂಲ ಪಡೆದುಕೊಳ್ಳಲೂ ಯತ್ನಿಸಲಿಲ್ಲ ಅನ್ನುವುದು ಬುನಿನ್‍ನ ಆಕ್ಷೇಪಣೆಯಾಗಿತ್ತು. ಇದನ್ನು ನಾವು ಪ್ರಮುಖವಾಗಿ `ಆಂಟನೋಫ್ಕಾ ಸೇಬುಗಳು’ ಮತ್ತು `ಸುಖ್ದೋಲ್’ ಗಳಲ್ಲಿ ಕಾಣಬಹುದು. ಹಂಗಂತ ಅವನು ಕೇವಲ ಗತಕಾಲದ ವೈಭವಗಳಿಗೆ ಜೋತು ಬಿದ್ದಿರಲಿಲ್ಲ ಅಥವಾ ಮತ್ತೆ ಅತ್ತ ಮಖ ಮಾಡಬೇಕು ಅನ್ನುವ ಉದ್ಧೇಶವೂ ಬುನಿನ್‍ದಾಗಿರಲಿಲ್ಲ. ಆದರೆ, ಸ್ವಾಭಾವಿಕವಾಗಿದ್ದ ಮತ್ತು ನಿರಂತರವಾಗಿದ್ದ ನಿಜವಾದ ಮೌಲ್ಯಗಳನ್ನು ಪಕ್ಕಕ್ಕೆ ತಳ್ಳಲ್ಪಟ್ಟು ಅವುಗಳ ಜಾಗದಲ್ಲಿ ಕೃತಕತೆ ಮತ್ತು ಭ್ರಮೆಗಳು ರಾರಾಜಿಸುತ್ತಿರುವುದರ ಬಗ್ಗೆ ವಿಷಾದವಿತ್ತು.
ಇವೆಲ್ಲದಕ್ಕಿಂತ ಮಖ್ಯವಾಗಿ ಬುನಿನ್ ಬರಹಗಳನ್ನು ಆವರಿಸಿಕೊಂಡಿರುವುದು `ಪ್ರೀತಿ’. ಇಲ್ಲಿನ ಕಥೆಗಳಲ್ಲಿ ಹಲವು ಬಗೆಯ ಪ್ರೀತಿಯ ಪಾತಿಗಳಿವೆ. `ಕೆಂಬೂತ’ದಲ್ಲಿ ಹುಡುಗನೊಬ್ಬನ ತಾರುಣ್ಯ ಸಹಜ ಪ್ರೀತಿಯೊಂದು ತನ್ನ ತಂದೆಯ ನಿರ್ದಯತೆಯಿಂದಾಗಿ ಭಂಗಗೊಳ್ಳುವುದು, `ಸುಖ್ದೋಲ್’ ನಲ್ಲಿ ಕೈಗೂಡದ ಪ್ರೀತಿಯಿಂದಾಗಿ ದೂರವಾಗಬೇಕಾದಂಥ ಸ್ಥಿತಿ, `ಕಡೆಯ ಕೂಡುದಾಣ’ದಲ್ಲಿ ತುಂಬಾ ತಡವಾಗಿ ನಿವೇದನೆಗೊಳ್ಳುವ ಪ್ರೀತಿ, `ಕತ್ತಲ ದಾರಿಗಳು’ ಕಥೆಯಲ್ಲಿ ಮತ್ತೊಮ್ಮೆ ಹಿಮ್ಮೊಗವಾಗಿ ಚಲಿಸದ ಪ್ರೀತಿ, ಹೀಗೆ ಪ್ರೀತಿಯ ಹಲವು ಮುಖಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಪಾತ್ರಗಳ ಆರಂಭಿಕ ತೊಡಕು ಅಥವಾ ಸ್ವವಿನಾಶಕಾರಿತನದಿಂದ ವಿಫಲತೆ ಮತ್ತು ಮೋಹ ವಿಮೋಚನೆಗಳು ಮೇಲುಗೈ ಸಾಧಿಸುತ್ತವೆ.
ಆದಾಗ್ಯೂ ಈ ಎಲ್ಲಾ ಆಲೋಚನೆಗಳನ್ನು ಮೀರುವ ನೈತಿಕತೆ ಮತ್ತು ಪಾಪಪ್ರಜ್ಞೆ, ಕಳೆದು ಹೋದ ವಿವೇಕ ಮತ್ತು ಪರಿಶುದ್ಧತೆ, ಕಳೆದು ಹೋದ ಸಹಜತೆ ಮತ್ತು ಪ್ರೀತಿ ಇಲ್ಲಿನ ಕಥೆಗಳಲ್ಲಿ ಸ್ಥಾಯೀಭಾವವಾಗಿ ಅನುರಣಿಸುತ್ತದೆ.
ವಿಶಿಷ್ಟವಾದ ಮನೋಸ್ಥಿತಿ ಮತ್ತು ಗದ್ಯದ ದ್ರವ್ಯ, ಅದರ ನಾವಿನ್ಯತೆ ಮತ್ತು ವೈಶಿಷ್ಟ್ಯತೆಗಳು ಬುನಿನ್‍ನನ್ನು ಅವನ ಸಮಕಾಲೀನ ಲೇಖಕರ ನಡುವೆ ಎದ್ದು ಕಾಣುವಂತೆ ಮಾಡಿವೆ. ಅವನ ಕಾವ್ಯಾತ್ಮಕ ನಿರೂಪಣೆ ಹಾಗೂ ಅದರೊಳಗೆ ಅನಾವರಣಗೊಳ್ಳುತ್ತಾ ಹೋಗುವ ಥರಾವರಿ ಪರಿಮಳಗಳು, ಬಣ್ಣಗಳು ಹಾಗೂ ಸದ್ದುಗಳು, ಕಾಡುಮೇಡು ಮತ್ತು ಅಲ್ಲಿನ ಗಿಡಮರ, ಪ್ರಾಣಿಪಕ್ಷಿ, ಹಳ್ಳಕೊಳ್ಳ, ಅಲ್ಲಿನ ಮಳೆ, ಸುರಿಯುವ ಹಿಮ, ಬೀಸುವ ಚಳಿಗಾಳಿ, ಮೂಡುವ ಮತ್ತು ಮುಳುಗುವ ಸೂರ್ಯ ಚಂದ್ರ, ಬೆಳೆದ ಬೆಳೆಗಳು, ಕಣಗಾಲ, ಬೇಟೆಗಾರನ ಸುತ್ತಾಟ ಹೀಗೆ ತಾನು ಕಂಡದ್ದು ಅಥವಾ ಚಿತ್ರಿಸಿದ್ದು ಎಲ್ಲದೂ ಸೀದಾ ಓದುಗನ ಎದೆಯೊಳಗೆ ನಡೆದುಬಿಡುವಂತೆ, ನೇರವಾಗಿ ಕಣ್ಣಿಗೆ ಕಟ್ಟುವಂತೆ, ಓದುಗನೊಳಗೆ ಅನುರಣಿಸುವಂತೆ ಮಾಡುವ, ಅದರೊಳಗೇ ಮುಳುಗಿ ಹೋದಂಥ ಅನುಭವವನ್ನು ನೀಡಬಲ್ಲಂಥ ಸರಿಸಾಟಿಯಿಲ್ಲದಂತ ನಿರೂಪಣಾ ತಂತ್ರ ಬುನಿನ್‍ದು. ಇಂಥ ಇಂದ್ರಿಯ ಜನ್ಯ ವರ್ಣನಾತ್ಮಕತೆ ಖಚಿತವಾಗಿ ಬುನಿನ್‍ನ ಶೈಲಿಗೆ ಕಾವ್ಯಾತ್ಮಕ ಸಾಂದ್ರತೆಯನ್ನು ತಂದುಕೊಟ್ಟಿದೆ.
ಮೂಲತಃ ಬುನಿನ್ ಒಬ್ಬ ಕವಿ. ನಂತರ ಪದ್ಯ ಹಾಗೂ ಗದ್ಯ ಎರಡರಲ್ಲೂ ಮುಂದುವರೆಯುತ್ತಾ ಕಾವ್ಯದ ಮಿಂಚನ್ನು ಗದ್ಯದಲ್ಲಿ ಹೊಳೆಸಿ ಯಶಸ್ವಿಯಾದವನು. ಕಾವ್ಯದ ಅಚ್ಚುಕಟ್ಟನ್ನು ಹಾಗೂ ಕಾವ್ಯದಲ್ಲಿನ ಲಾಕ್ಷಣಿಕ ಪ್ರತಿಮೆಗಳನ್ನು ಗದ್ಯಕ್ಕೆ ವರ್ಗಾಯಿಸಿದವನು. ಬುನಿನ್‍ನ ಭಾಷೆ ಉತ್ಪ್ರೇಕ್ಷಮಯವಾದದ್ದೂ ಅಲ್ಲ, ಅಲಂಕಾರಿಕವೂ ಅಲ್ಲ. ತನ್ನ ಉದ್ದೇಶವನ್ನು ಅತ್ಯಂತ ಸ್ಪಷ್ಟವಾಗಿ ನಿಖರವಾಗಿ ಸ್ಪುರಿಸಬಲ್ಲಂಥ ಪದಗಳಿಗಾಗಿ ಹುಡುಕಿ ಅಂಥವುಗಳನ್ನು ಮಾತ್ರ ಬುನಿನ್ ಬಳಸುತ್ತಾನೆ. ನಿಕೋಲಯ್ ಸಿಯಸ್‍ನಿಕಾಫ್ ಅನ್ನುವವನೊಂದಿಗೆ ನಡೆಸಿದ ಮಾತುಕತೆಯೊಂದರಲ್ಲಿ, `ಒಂದು ಕಥೆ ಯಶಸ್ವಿಯಾಗುವಲ್ಲಿ ಇರುವ ಅತ್ಯಂತ ಪ್ರಮುಖ ಸಂಗತಿ ಅಂದರೆ, ಅದರ ನಿಜವಾದ ದನಿಯನ್ನು ಹುಡುಕಿಕೊಳ್ಳುವುದು. ಒಮ್ಮೆ ಅದು ಸಿಕ್ಕಿತು ಅಂದ್ರೆ ಕಥೆ ಅದರ ಪಾಡಿಗದು ಬರೆಸಿಕೊಳ್ಳುತ್ತಾ ಹೋಗುತ್ತದೆ… ಆದರೆ ನನ್ನಿಷ್ಟದಂತೆ ನಾನು ಬರಿತೀನಿ, ಅಂತ ಯಾವತ್ತೂ ಬರೆದಿಲ್ಲ. ಅಂಥ ಧೈರ್ಯವೂ ನನಗಿಲ್ಲ…’ ಎಂಬುದಾಗಿ ಬುನಿನ್ ಒಪ್ಪಿಕೊಳ್ಳುತ್ತಾನೆ.
ಬುನಿನ್‍ನ ಬರಹಗಳಲ್ಲಿ ಮನಶ್ಯಾಸ್ತ್ರೀಯ ಪಾತ್ರಸೃಷ್ಟಿಗಳಾಗಲಿ ಅಥವಾ ಮನೋವಿಶ್ಲೇಷಣಾ ವಿಧಾನವಾಗಲಿ ಇರುವುದಿಲ್ಲ. ಬುನಿನ್‍ಗೆ ಆಸಕ್ತಿ ಇರುವುದು ವಸ್ತುಗಳ ಭೌತ ನೋಟ ಮತ್ತು ಅವುಗಳು ಸ್ಪುರಿಸುವ ಭಾವಾತ್ಮಕ ಜವಾಬುಗಳಲ್ಲಿ. ಅವನದು ಅಪ್ಪಟ ಭೌತ ಭಾವಗೀತಾತ್ಮಕತೆ, ಭೌತಿಕ ವಸ್ತುಗಳ ಭಾವಗೀತಾತ್ಮಕತೆ. ಹಾಗಾಗಿ ಅವನ ಭಾಷೆಗೆ ವೈಶಿಷ್ಟ್ಯ ಸೂಚಕ ಸಂಕ್ಷೇಪತೆಯೂ ಹಾಗೂ ಆತ್ಮಸಂಯಮದ ಗುಣವೂ ದಕ್ಕಿದೆ. ಇದು `ಸ್ಯಾನ್‍ಫ್ರ್ಯಾನ್ಸಿಕೋದ ಮಹನೀಯ’ದಲ್ಲಿ ಹಾಗೂ `ಬಿಸಿಲು ಮತ್ತು ಬುಯಕೆ’ಕಥೆಗಳಲ್ಲಿ ಬೇರೆಲ್ಲಾ ಕಥೆಗಳಿಗಿಂತ ಸ್ಪಷ್ಟವಾಗಿ ಗೋಚರಿಸುತ್ತದೆ.
ಆದರೂ ಯಾರಿಗಾದರೂ ಅನ್ನಿಸಬಹುದು: ಬುನಿನ್‍ನ ದೀರ್ಘ ಬರಹಗಳು ಕಾದಂಬರಿಗಳೋ ಅಥವಾ ಕಥೆಗಳೋ? ಒಂದರ್ಥದಲ್ಲಿ ಅವು ಎರಡೂ ಹೌದು. ಅವೆರಡೂ ಪ್ರಕಾರಗಳನ್ನು ಏಕೀಕರಿಸುವ ಅವನ ಕಲಾತ್ಮಕ ಸೃಜನಶೀಲತೆಗೆ, ಅವನ ಉತ್ಕೃಷ್ಟ ಪ್ರತಿಭೆಗೆ, ಅದು ಬಲು ದೊಡ್ಡ ಸಾಕ್ಷಿಯಾಗಿದೆ.
(ಕೃತಿ: ಬುನಿನ್ ಕಥೆಗಳು( ಇವಾನ್ ಬುನಿನ್ ಕಥಾ ಸಂಕಲನ) ಕನ್ನಡಕ್ಕೆ: ಎಸ್, ಗಂಗಾಧರಯ್ಯ, ಪ್ರಕಾಶಕರು: ಬಿಸಿಲ ಕೋಲು ಪ್ರಕಾಶನ, ಬೆಲೆ: 200/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ