ಪ್ರತಿ ದಿನ ಬೆಳಗಿನ ಜಾವ ಅಗಾಧ ಅರಬ್ಬೀ ಕಡಲಿನ ಎದುರಿಗೆ ಕೂತು ಆಗಸ ಕೆಂಪಾಗುತ್ತಿರುವ ಹಾಗೇ ತಮ್ಮ ಕಾಯಕದಲ್ಲಿ ನಿರತರಾಗುವ ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸಲು ಮಹತ್ವದ ಕೊಡುಗೆ ನೀಡಿರುವ ಲೇಖಕ. ಸಮಕಾಲೀನ ವಸ್ತು, ಅನನ್ಯ ನಿರೂಪಣೆ, ಅಚ್ಚರಿಯ ಒಳನೋಟಗಳನ್ನು ಒದಗಿಸುವ ಹಲವಾರು ಕತೆ, ಲೇಖನ , ಕಾದಂಬರಿಗಳನ್ನು ಬರೆದಿರುವ ಚಿತ್ತಾಲರು ಅತ್ಯಂತ ಸರಳ, ಸ್ನೇಹಮಯಿ ವ್ಯಕ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳೂ ಸೇರಿದಂತೆ ಮನ್ನಣೆಯ ಸುರಿಮಳೆ ಸಾಹಿತ್ಯ ಲೋಕದಿಂದ ಅವರಿಗಾಗಿದೆ. ಅವರು ಈಗ ಬರೆಯುತ್ತಿರುವ ಕಾದಂಬರಿ ‘ದಿಗಂಬರ’ದ ಎರಡನೇ ಅಧ್ಯಾಯದ ಮೂಲಕ ಓದುಗರಿಗೆ ತಮ್ಮ ಹೊಚ್ಚ ಹೊಸ ಬರವಣಿಗೆಯ ಇಣುಕುನೋಟ ನೀಡಿದ್ದಾರೆ.
ದೇವಕಿಯ ತವರು ಮನೆಯಿದ್ದ ‘ದಿಲ್ ಖುಶ್’ ಇದ್ದದ್ದು ಮುಂಬಯಿಯ ಉತ್ತರ ದಿಕ್ಕಿನ ಉಪನಗರಗಳಲ್ಲಿ ಒಂದಾದ ಬಾಂದ್ರಾದಲ್ಲಿ. ಪಶ್ಚಿಮದ ಅರಬ್ಬೀ ಸಮುದ್ರದ ದಂಡೆಯ ಮೇಲೆ ನಿಂತಿದೆ. ಈ ಜನವಸತಿಯಲ್ಲಿ ಇದೊಂದೇ ಆರು ಮಜಲುಗಳುಳ್ಳ ಇಷ್ಟು ಎತ್ತರದ ಕಟ್ಟಡ. ಉಳಿದೆಲ್ಲವೂ ಬಣ್ಣ ಕಳೆದುಕೊಂಡ ಹರಕು ಮುರಕು ಬಂಗಲೆಗಳು ಇಲ್ಲವೇ ಎರಡು ಮಜಲು ಮೂರು ಮಜಲುಗಳ ಜುನಾಪುರಾಣಾ ಇಮಾರತುಗಳು. ಬಂಗಲೆಗಳಂತೂ ಸರಿಯಾಗಿ ನೋಡುವವರಿಲ್ಲದೇ ನಿಂತಲ್ಲೇ ಕುಸಿಯುತ್ತ ಆಕಾಶಚುಂಬಿಗಳಿಗೆ ಜಾಗಮಾಡಿ ಕೊಡುವ ತಯಾರಿಯಲ್ಲಿವೆ. ‘ದಿಲ್ ಖುಶ್’ ನ ಆಕರ್ಷಣೆಯೆಂದರೆ ಅವರ ಎದುರಿನ ಸಮುದ್ರ ಹಾಗೂ ಕಪ್ಪು ಬಂಡೆಗಳಿಂದ ಆಚ್ಛಾದಿತವಾದ ಅದರ ದಂಡೆ. ದಕ್ಷಿಣ ದಿಕ್ಕಿನ ನೀರಿನಲ್ಲಿ ಸೊಕ್ಕಿದ ಗೂಳಿಯಂತೆ ಮುನ್ನುಗ್ಗಿದ ಈ ದಂಡೆಯ ತುತ್ತತುದಿ ‘ಲ್ಯಾಂಡ್ಸ್ ಎಂಡ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ನೀರಿನಲ್ಲಿ ಕಾಲು ಪಸರಿಸಿ ಕುಳಿತಂತೆ ತೋರುವ ಗುಡ್ಡದ ಇಳಿಜಾರಿನಲ್ಲಿ ಅಲ್ಲಲ್ಲಿ ತಲೆಯೆತ್ತಿ ನಿಂತಿರುವ ತಾಳೆಮರಗಳು; ಅವುಗಳ ನೆರಳಿನಲ್ಲಿ ಹರಡಿಕೊಂಡ – ಪೋರ್ಚುಗೀಸರ ಕಾಲದಲ್ಲಿ ಕಟ್ಟಿದ್ದು ಎನ್ನಲಾದ – ಪುರಾತನ ಕೋಟೆಯೊಂದರ ಅವಶೇಷಗಳು; ಗುಡ್ಡದ ನೆತ್ತಿಯಲ್ಲಿ ಮೆರೆಯುತ್ತಿದ್ದ ಮೌಂಟ್ ಮೇರಿ ಚರ್ಚ್‌ನ ಶಿಲುಬೆ ಹೊತ್ತ ಶಿಖರ ಎಲ್ಲ ಈ ವಸತಿಗೆ ತನ್ನತನದ ಮೆರುಗನ್ನಿತ್ತ ಭೂವಿಶೇಷಗಳಾಗಿವೆ. ಪಶ್ಚಿಮದ ಸಮುದ್ರದ ನೀರು ಹಾಗೂ ಪೂರ್ವದ ಗುಡ್ಡ ಇವುಗಳ ನಡುವಿನ ಜನವಸತಿಯೇ ಪ್ರಖ್ಯಾತ ‘ಬ್ಯಾಂಡ್‌ಸ್ಟ್ಯಾಂಡ್’! ಬ್ರಿಟಿಶರ ಕಾಲದಲ್ಲಿ, ರವಿವಾರ ಬಿಟ್ಟು ರವಿವಾರ, ಪೋಲೀಸರ ಪಡೆ ಸಿಮೆಂಟಿನಲ್ಲಿ ಕಟ್ಟಿಸಿದ ಇಲ್ಲಿಯ ಒಂದು ಕಟ್ಟೆಗೆ ಬಂದು ಬ್ಯಾಂಡ್ ಬಾರಿಸುತ್ತಿದ್ದರಂತೆ. ಹಾಗೆಂದು ಆ ಹೆಸರು. ಈಗ ಬ್ಯಾಂಡು ಇಲ್ಲ. ಇದ್ದದ್ದು ಸ್ಟ್ಯಾಂಡು ಮಾತ್ರ ಆರು ಕಂಬಗಳ ಮೇಲೆ ಗೋಳಗುಮ್ಮಟ ಹೊತ್ತು ಅನಾಥವಾಗಿ ನಿಂತಿದೆ. ಆದರೆ ಅದು ವಸತಿಗೆ ಇತ್ತ ಹೆಸರು ಮಾತ್ರ ಹಾಗೆಯೇ ಉಳಿದಿದೆ. ಇಲ್ಲಿಯ ಸೂರ್ಯಾಸ್ತವೂ ಪ್ರಖ್ಯಾತವಾದದ್ದು. ಹೊತ್ತು ಕಂತುವ ಹೊತ್ತಿಗೆ ಆಕಾಶಕ್ಕೆ ಕೆಂಪು ಅಡರುವ ದಿವ್ಯ ಬಗೆ ನೋಡಬೇಕು! ಕೆಂಪಿನ ಇಷ್ಟೊಂದು ಪ್ರಭೇದಗಳು ಹುಟ್ಟಿ ಬಂದುವಾದರೂ ಎಲ್ಲಿಂದ? ಆಕಾಶದ ಹೊಟ್ಟೆ ಬಿರಿದು ಬಂದುವೆ? ಮೊದಲೇ ಇದ್ದವುಗಳಿಗೆ ನೀಲಿ ಆಕಾಶವೇ ಹಿನ್ನೆಲೆಯಾಗಿ ನಿಂತಿತೆ? ನೋಡಿದವರಿಗೆ ಆಶ್ಚರ್ಯವಾಗುತ್ತಿತ್ತು. ರಜೆಯ ದಿನಗಳಲ್ಲಿ ಸಂಜೆಯ ಹೊತ್ತಿಗೆ ವಿಹಾರಕ್ಕೆಂದು ಬರುತ್ತಿದ್ದ ಜನ ನಿಜಕ್ಕೂ ಬರುತ್ತಿದ್ದದ್ದು ಈ ಬಣ್ಣಗಳ ಆಡಂಬರವನ್ನು ನೋಡಲಿಕ್ಕೇ ಇರಬೇಕು ಎಂದು ದೇವಕಿಗೆ ಅನ್ನಿಸಿದ್ದುಂಟು. ಅವಳ ಮನೆಯಿದ್ದ ಇಮಾರತನ ಹದಿನೆಂಟೂ ಮನೆಗಳು ಸಮುದ್ರದ ಕಡೆಗೆ ಮುಖಮಾಡಿದ್ದಂತೂ ಈ ಚೇತೋಹಾರಿಯಾದಿ ಸೂರ್ಯಾಸ್ತವನ್ನು ನೋಡಲೆಂದೇ ಎನ್ನುವುದು ಅವಳ ನಂಬಿಕೆಯಾಗಿತ್ತು. ಮೂರನೇ ಮಜಲೆಯ ಮೇಲಿನ ಮನೆಯೊಂದರಲ್ಲಿ ಈಚೆಗಷ್ಟೇ ವಾಸಿಸಲು ಬಂದ ದಂಪತಿಗಳು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ. ಕಾಣಲು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂಥ ಆಕರ್ಷಕ ಜೋಡಿ. ಸದ್ಯವೇ ಮದುವೆಯಾದವರು. ಇರಲು ಬಂದ ಕೆಲವು ದಿನಗಳಲ್ಲಿ ಕಟ್ಟಡದಲ್ಲಿ ಹಲವರ ಕೌತುಕಕ್ಕೆ ವಿಷಯವಾದರು. ದೇವಕಿ ಕಾಲೇಜಿಗೆ ಹೋಗುವಾಗ ಕಣ್ಣಿಗೆ ಬಿದ್ದರೆ ಮುಗುಳ್ನಕ್ಕು ಮುಂದೆ ಸಾಗುತ್ತಿದ್ದರೇ ಹೊರತು ನಿಂತು ಮಾತನಾಡಿಸಿರಲಿಲ್ಲ. ಒಂದು ದಿನ ಆಫೀಸಿಗೆ ಹೊರಟವರನ್ನು ಅವಳೇ ತಡೆದು ತನ್ನ ಪರಿಚಯ ಹೇಳಿದಳು. ಅವರ ಬಗೆಗೂ ಕೇಳಿದಳು: “ಹೌದಲ್ಲ! ನಾವು ಯಾರೆಂದು ತಿಳಿಸಲೇ ಇಲ್ಲ. ನಾವು ಇಲ್ಲಿ ನಿಲ್ಲಲು ಬಂದು ಕೆಲವು ತಿಂಗಳಷ್ಟೇ- ನಾವಿಬ್ಬರೂ ನಿನ್ನ ಅಪ್ಪನ ಜಿಲ್ಲೆಯವರೇ. ನಾನು ರಾಮನಾಥ ಕಿಣಿ. ಇವಳು ಪುಷ್ಪಾ. ಮನೆಯಲ್ಲಿ ನಮ್ಮಿಬ್ಬರ ಹೊರತಾಗಿ ನನ್ನ ಅಮ್ಮ ಇದ್ದಾಳೆ. ನಿನ್ನ ಅಪ್ಪ ನಮ್ಮ ಬಗ್ಗೆ ಹೇಳಿರಬೇಕು ಎಂದುಕೊಂಡಿದ್ದೆ. ಒಮ್ಮೆ ಮನೆಗೆ ಬಾ ಎಂದನು” ರಾಮನಾಥ. ಕಾಲೇಜಿಗೆ ರಜೆಯಿದ್ದ ಒಂದು ದಿನ ದೇವಕಿಯೊಬ್ಬಳೇ ಅವರ ಮನೆಗೆ ಹೋಗಿ ಬಂದಳು. ಅವಳು ಹೋದಾಗ ಮನೆಯಲ್ಲಿ ರಾಧಕ್ಕ ಒಬ್ಬಳೇ ಇದ್ದಳು. ಅರವತ್ತು ದಾಟಿದ ಹಿರಿಯಳು ಮೊದಲ ಭೇಟಿಯಲ್ಲೇ ದೇವಕಿಗೆ ತುಂಬ ಹಿಡಿಸಿದಳು. ಅವಳ ಅಪ್ಪ ಅಮ್ಮರ ಬಗ್ಗೆ ಕೇಳಿದಳು. ನಡುವೆಯೇ ಒಮ್ಮೆ ಅವಳ ಗಲ್ಲ ಹಿಚುಕಿ ಮುದ್ದುಗರೆದಳು. ಅಚಾನಕ್ಕಾಗಿ ಉದ್ಭವಿಸಿದ ಪರಿಸ್ಥಿತಿಯಲ್ಲಿ ಹಿಂದು ಮುಂದಿನ ವಿಚಾರ ಮಾಡುವ ಮೊದಲೇ ಶಂಕರನಿಗೆ ಆಸರೆ ಕೊಟ್ಟ ರಾಮನಾಥನ ಮನೆಯೇ ಮುಂದೆ ಈ ಕಥಾ ಪ್ರಸಂಗದ ಹಲವು ವಿದ್ಯಮಾನಗಳಿಗೆ ರಂಗಸ್ಥಳವಾಯಿತು! |
ಪುಟದ ಮೊದಲಿ |
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ