ಇರುಳ ಬೆಳಕಲ್ಲಿ ನಾವು ಅದೆಷ್ಟೋ ಗುಟ್ಟಿನ ಕತೆಗಳನ್ನು ಹೇಳಿಕೊಳ್ಳುತ್ತಿದ್ದೆವು. ಬೆಳಕೆಂದರೆ ಅದು ಒಂದಷ್ಟು ನಕ್ಷತ್ರಗಳನ್ನು ಕಟ್ಟಿಕೊಂಡು ಚಂದ್ರನು ರಾಜನಂತೆ ಬೆಳಗುತ್ತಿದ್ದ, ಇರುಳೆಂದರೆ ಅವನನ್ನೂ ಮೀರಿ ತೂರುವ ಹಾಗೆ ಇರುವ ಮಯಮಯ ಮುಗ್ದ ಇರುಳು. ನಾವೆಂದರೆ ಅಲ್ಲಿ ಗಂಡು ಹೆಣ್ಣು ಇದಾವುದೂ ಆಗಿರಲಿಲ್ಲ. ನಡೆಯುತ್ತಿರುವುದೆಲ್ಲಾ ಕಿವಿಯಿಂದ ಹೊಕ್ಕು ಕಾಲ ಬೆರಳಿನ ತುದಿಯಿಂದ ಹೊರ ಬರುವ ಹಾಗಿತ್ತು. ಹೇಳುವುದೇನು ಅನುಭವಿಸುವುದಷ್ಟೇ…
ಬರಹಗಾರ್ತಿ ನಾಗಶ್ರೀ ಶ್ರೀರಕ್ಷ ತೀರಿಕೊಂಡು ಇಂದಿಗೆ ಐದು ವರ್ಷಗಳು ಕಳೆದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಅವರ ನೆನಪಿನಲ್ಲಿ ಅವರದ್ದೊಂದು ಬರಹ ನಿಮ್ಮ ಓದಿಗೆ

ಏನೋ ಒಂದು ಉತ್ಕಟವಾಗಿ ಅನ್ನಿಸುವಾಗಲೇ ಬರೆದುಬಿಡಬೇಕು. ನಮ್ಮ ಗೊಣ್ಣೆಸುರುಕನ ಹಾಗೆ. ಇವನ ಹೆಸರೇ ಹಾಗೆಂದು ಇಟ್ಟುಕೊಳ್ಳಿ, ತುಂಬಾ ಸಲ ಸಾಮಾನ್ಯನೆಂದೂ ಕೆಲವು ಸಲ ಅಸಾಮಾನ್ಯನೆಂದೂ ಕರೆಯಬಹುದಾದ ಇವನು ಸ್ವಲ್ಪ ಚಾಡಿಪುರುಕನೂ ಹೌದು. ಆದರೆ ಮನಸ್ಸು ಮಾತ್ರ ಆಗತಾನೆ ಕರೆದ ನೊರೆನೊರೆ ಹಾಲಿನ ಹಾಗೆ. ನೆಲದ ಮೇಲೆ ಚೆಲ್ಲಿದ ಹಾಲಿಗೆ ಮುದ್ದು ಬರುವ ಹಾಗೆ. ‘ಆಹಾ ನನ್ನ ಗೊಣ್ಣೆಸುರುಕನೇ ಚಾಡಿಪುರುಕನೇ’ ಎಂದು ಕರೆದಷ್ಟು ಬೇಡವೆಂದರೂ ಒಂದು ನವಿರಾದ ಪ್ರೀತಿಯೂ, ತೆಳ್ಳಗೆ ಕಾಣಿಸುವಂತೆ ಇರುವ ಮುನಿಸೂ ಏಕಕಾಲಕ್ಕೆ ಹರಿಯುತ್ತದೆ.

ಬೇಡಬೇಡವೆಂದರೂ ಇವನನ್ನು ಹೀಗೇ ಕರೆಯಬೇಕೆನ್ನಿಸುತ್ತದೆ, ಅಷ್ಟಕ್ಕೂ ಹೆಸರಿನಲ್ಲೇನಿದೆ ಬಿಡಿ!! ಸಣ್ಣವನಿರುವಾಗ ಗೊಣ್ಣೆ ಸುರಿಸಿ ಸುರಿಸಿ, ಮೂಗು ತಿಕ್ಕಿ ತಿಕ್ಕಿಯೇ ಅವನ ಮೂಗು ಕೆಂಪುಕೆಂಪಾಗಿಯೋ ಉದ್ದುದ್ದ ಎಸಳು ಎಸಳಾಗಿ ಚೂಪಾಗಿಯೋ ಇರುವುದು. ಚೂಪು ಮೂಗು ಬಿಟ್ಟರೆ ಬೇರೆಲ್ಲಾ ಸಾಮಾನ್ಯನಂತೆಯೇ ಇರುವನು. ಮೂಗಿನ ತುದಿಯಲ್ಲೇ ಕೋಪಿಸಿಕೊಂಡು ನಿಗುರುವುದು, ಮರೆತು ಅರಳುವುದು, ಕಚಕುಳಿ ಇಟ್ಟು ತೀಡುವುದು, ಬಯಸಿ ಹುಟ್ಟುವುದು…. ಹೀಗೆ ಏನೇನೋ. ಇನ್ನು ಆ ಮೂಗಿನಿಂದ ಆಗಿರುವ ಆಗಬಹುದಾದ ಕಥೆಗಳಿಗೆ ಅನಾಹುತಗಳಿಗೇನು ಕಮ್ಮಿ ಇಲ್ಲ. ಅದೆಲ್ಲಾ ಬರೆದರೆ ಅಪಚಾರವಾದೀತು!!

ಇವನಿಗೊಬ್ಬಳು ಅಜ್ಜಿ ಇದ್ದಳು. ಸಕ್ಕು ಅಜ್ಜಿ. ಯಾವಾಗಲೂ ಅವಳನ್ನು ಸಕ್ಕೂ ಸುಕ್ಕೂ ಎಂದು ಛೇಡಿಸುತ್ತಿದ್ದ. ಅವಳು ಹುಸಿಮುನಿಸಿನಿಂದ ಅಟ್ಟಿಸಿಕೊಂಡು ಬಂದು ಇವನ ಕಿವಿ ಹಿಡಿಯುವ ಬದಲು ಮೂಗು ಹಿಡಿಯುತ್ತಾ ಕುಂಡೆಗೆ ಒಂದು ಕೊಟ್ಟು ಮುದ್ದಿಸುತ್ತಿದ್ದಳು. ಸಣ್ಣವನಿರುವಾಗ ಅವನಿಗೆ ತಾನೇ ಎಣ್ಣೆ ಹಚ್ಚಿ ಮೂಗನ್ನು ತಿಕ್ಕಿ ಸಾಪಾಗಿಸಿದ್ದು ಎಂದು ಅತೀ ಸಲುಗೆಯಿಂದ ಮೂಗೆಳೆಯುತ್ತಿದ್ದಳು. ಇವನು ಅಳುಬುರುಕನೂ ಆಗಿದ್ದನಂತೆ. ರಾಗಿಪಲ್ಲೆಯ ಮಣ್ಣಿಯನ್ನು ತಿನ್ನಿಸುವಾಗ ಬಾಯಿ ಮಾತ್ರವಲ್ಲ ಮೂಗಲ್ಲೂ ತಿಂದುಕೊಂಡು ಇನ್ನಷ್ಟು ಮೂಗು ಕೆಂಪಾಗಿಸಿಕೊಂಡು ಅಳುತ್ತಿದ್ದನಂತೆ. ಕೃಷ್ಣನ ಬಾಯಲ್ಲಿ ಬ್ರಹ್ಮಾಂಡ ಕಂಡರೆ, ಇವನ ಮೂಗಲ್ಲಿ ಬ್ರಹ್ಮಾಂಡ ಕಾಣುತ್ತಿದ್ದಳಂತೆ ಸಕ್ಕು ಅಜ್ಜಿ. ಯಾವ ಕಾರಣಕ್ಕೋ ಏನೋ ಈ ಜನ್ಮಕ್ಕೆ ಸಾಲುವಷ್ಟು ದ್ವೇಷವನ್ನೂ ಪ್ರೀತಿಯನ್ನೂ ಆ ಮೂಗಲ್ಲೇ ನೆಟ್ಟುಕೊಂಡು ಓಡಾಡುತ್ತಿದ್ದ.

ಏನಾದರಾಗಲೀ ಒಂದು ಸಲವೂ ಯಾರ ಗುಟ್ಟುಬಿಟ್ಟುಕೊಟ್ಟವನಲ್ಲ ಇವನು. ಅಯ್ಯೋ ಏನನ್ನುತ್ತೀರಾ? ಇವನದ್ದೊಂದು ವಿಚಿತ್ರ ಸಂಗತಿ ಇದೆ. ಯಾರಾದರೂ ಗೊತ್ತಿರಲಿ ಗೊತ್ತಿಲ್ಲದಿರಲಿ, ಮಾತಿಗೆ ಶುರಮಾಡುವ ಮೊದಲೇ, ಮುಂದೆ ನೀವು ನನ್ನ ಶತ್ರುವಾದರೂ ನಿಮ್ಮ ಗುಟ್ಟನ್ನು ಮಾತ್ರ ಬಿಟ್ಟುಕೊಡೆನು ಎಂದು ಏನೋ ಗಂಭೀರ ವಿಷಯದಂತೆ ಹೇಳುತ್ತಿದ್ದ. ಏನು ಪವಾಡವೋ ಏನೋ ಕೊನೆಗೆ ಎಲ್ಲರೂ ಶತ್ರುಗಳಾಗಿ ಎಲ್ಲಾ ಬರಿದಾಗಿಸಿಕೊಂಡು ಬರೀ ಗುಟ್ಟು ಮಾತ್ರ ಅವನಲ್ಲಿ ಬಿಟ್ಟುಹೋಗುತ್ತಿದ್ದರು, ಗುಟ್ಟುಹಿಡಿದ ಗುರುಗುಮ್ಮನಂತೆ ಏನನ್ನೋ ಗಂಟುಕಟ್ಟಿದವನಂತೆ ಯಾರೂ ಬೇಡವೆಂಬಂತೆ ಅದೃಶ್ಯನಾಗಿ ಬಿಡುತ್ತಿದ್ದ. ಸಕ್ಕು ಅಜ್ಜಿಯೂ ಬೇಡವಾಗುತ್ತಿದ್ದಳು. ಬೇಡವಾಗಿ ಹೋದವನಿಗೆ ಕೆಲವು ಸಲ ಬೇಕಾಗುತ್ತಲೂ ಇತ್ತು.

ನನ್ನಲ್ಲೊಂದು ಉಕವಿತ್ತು. ಅವನಲ್ಲೊಂದು ದಕ, ಇದೇನು ಉತ್ತರಕನ್ನಡ ದಕ್ಷಿಣ ಕನ್ನಡ ಎಂದು ತಿಳಿದುಕೊಂಡಿರೋ!! ಅಲ್ಲವೇ ಅಲ್ಲ, ನಮ್ಮ ಬಳಿ ಕನ್ನಡಿ ಇತ್ತು. ನನ್ನದು ಉರುಟು ಉದ್ದಕ್ಕಿದ್ದ ಕನ್ನಡಿ, ಅವನದ್ದು ದಪ್ಪಗಿರುವ ಕನ್ನಡಿ. ಅದನ್ನು ಉಕ ದಕವೆಂದೇ ಹೇಳುತ್ತಿದ್ದೆವು. ಒಂದು ಸಲ, ಬೆಳಗಿನ ಎಳೆ ಬಿಸಿಲಲ್ಲಿ ಮನೆಯ ಅಂಗಳದ ಎಡಬದಿಯ ಕಟ್ಟೆಯ ಮೇಲೆ ಕುಳಿತಿದ್ದೆವು. ಅವನು ತನ್ನ ದಕದಲ್ಲಿ ಇರುವೆ ತೋರಿಸುತ್ತಾ “ನೋಡೇ ಪೆದ್ದು, ಇರುವೆಯ ತಲೆ, ನಿಂಗೆ ಇದರಷ್ಟಾದರೂ ತಲೆ ಇದ್ಯ” ಎಂದು ಛೇಡಿಸುತ್ತಿದ್ದ. ನಾನು ನನ್ನ ಉಕದಲ್ಲಿ ತೋರಿಸುತ್ತಾ ‘ಲೋಕದಲ್ಲಿ ತಲೆ ಇರುವುದು ನಿನಗೊಬ್ಬನಿಗೆ ಬಿಡು, ಇರುವೆಯ ಪಡೆ ಬರುವುದಾ ನೋಡು, ನಡೆ ಕೆಡುವುದಾ ನೋಡು, ಮಂಡೆ ಆಮೇಲೆ ನೋಡು’ ಎನ್ನುತಿದ್ದೆ.

ಅದೇನು ನೋಡುವುದೋ ನಮ್ಮ ಉಕ ದಕಗಳೆಲ್ಲವೂ ನಮ್ಮ ಚಂದದ ಸುಳ್ಳುಗಳೂ ಸತ್ಯಗಳೂ ಆಗಿದ್ದವು. ಅಥವಾ ಈ ಸುಳ್ಳು ಸತ್ಯವನ್ನು ಮೀರಿದ ಇನ್ನೊಂದು ಯಾವುದೋ ಆಗಿದ್ದವು.

ಒಂದು ದಿನ ಹೀಗಾಯಿತು. ಬೆಳಗ್ಗಿನಿಂದ ಎಲ್ಲಾ ಆಟವಾಡಿ ಮುಗಿಸಿ ಬೇರೆ ಯಾವ ಹೊಸ ಆಟವೂ ಉಳಿದಿರಲಿಲ್ಲ. ಏನು ಮಾಡುವುದೆಂದು ಗೊತ್ತಾಗದೆ, ಕೊನೆಗೆ ಅವನೇ, ನಾವೊಂದು ಮನೆಕಟ್ಟಿದರೆ ಹೇಗೆ ಎಂದ. ಅಯ್ಯೋ ಮನೆ ಆಟವೆಲ್ಲಾ ಬೋರಾಗಿ ಬಿಟ್ಟಿದೆ, ಬೇರೇನಾದರೂ ಹೇಳು ಅಂದರೆ, ಅವನು ಮನೆಕಟ್ಟುವ ಯೋಚನೆಯಲ್ಲೇ ಮುಳುಗಿ ಹೋಗಿದ್ದ. ಸರಿ ಅದೇನು ಮಾಡ್ತೀಯೋ ಮಾಡು ಎನ್ನುವಂತೆ ನಾನೂ ಸುಮನಿದ್ದೆ. ಅಲ್ಲೇ ಹತ್ತಿರದ ಕಾಡುಮನೆಯಲ್ಲಿ ತೆಂಗಿನ ಮರದ ಒಣಗಿದ ಗರಿಯ ಚಾಪೆ ಹೆಣೆದು ಮಾರುವ ರಾಧುವಿನ ಮನೆಯಿತ್ತು. ಅವಳು ಮನೆಯ ಪಕ್ಕದಲ್ಲೇ ಚಾಪೆ ಹೆಣೆದು ಜೋಡಿಸಿಟ್ಟಿರುತ್ತಿದ್ದಳು. ಅಲ್ಲಿಂದ ೬ ಚಾಪೆಗಳನ್ನು ಕದ್ದು ಅದನ್ನು ಯಾರೂ ನೋಡದಂತೆ ತರಬೇಕೆಂದು ನನ್ನನ್ನು ಓಡಿಸಿದ್ದನು. ತಾನು ಮಾತ್ರ ಬಂದಿರಲಿಲ್ಲ. ಅಂತು ನಾನು ಹೇಗೋ ಒಬ್ಬಳೇ ತಂದುದ್ದಾಯಿತು.

ಮನೆಯ ಹಿಂದಿನ ಗೋಡೆಗೆ ಎದುರು ಅಕ್ಕಪಕ್ಕದಲ್ಲಿ ಎರಡೆರಡು ಮಧ್ಯಮ ಗಾತ್ರದ ಬಿದಿರಿನ ಕೋಲನ್ನು ನೆಟ್ಟು, ಎರಡೆರಡು ಚಾಪೆಯನ್ನೂ, ಅದಕ್ಕೆ ಹೊಂದಿಸಿಕೊಂಡು, ಮುಂದೆ ಬಾಗಿಲಿನಂತೆ ಬಲಕ್ಕೊಂದು ಎಡಕ್ಕೊಂದು ಚಾಪೆಯನ್ನೂ ಇಟ್ಟು ಅಂತೂ ಮನೆ ಕಟ್ಟಿದ್ದೆವು. ಇನ್ನೇನೂ ಮನೆಯ ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಚಾಪೆ ಹೆಣೆಯುವವಳು ಲಬೋ ಲಬೋ ಎನ್ನುತ್ತಾ ದೊಡ್ಡಬಾಯಿ ತೆಗೆದು ನಮ್ಮನ್ನೇ ಬೈಯ್ಯುವುದು ದೂರದಿಂದ ಕೇಳಿಸುತಿತ್ತು. ಇದೆಲ್ಲಾ ನೋಡುತ್ತಿದ್ದ ಸಕ್ಕೂ ಅಜ್ಜಿ ‘ಮಾಡಿದ್ದುಣ್ಣೋ ಮಾರಾಯ ಎನ್ನುತ್ತಾ ನಗುತ್ತಿದ್ದರು.

ಅಂತೂ ಚಾಪೆ ಹೆಣೆಯುವವಳಿಗೆ ನಾನು ಕದ್ದದ್ದು ಹೇಗೆ ಗೊತ್ತಾಯಿತೋ ಗೊತ್ತಿಲ್ಲ. ಇವನಂತು, ನಾನೆಲ್ಲಿ ಇವನ ಮೇಲೆ ಚಾಡಿ ಹೇಳುತ್ತೇನೋ ಎಂದು ಹೆದರಿ, ಆಗಲೇ ಅಲ್ಲಿಂದ ಓಡಿ ನನ್ನಕ್ಕಿಂತ ಮೊದಲೇ ಊರಿಡೀ ಡಂಗೂರ ಸಾರಿದ್ದ.

***

ಅವನಿಗೇನಾಗುತ್ತಿತ್ತೋ ಇದ್ದಕ್ಕಿದ್ದ ಹಾಗೆ ಎದ್ದವನು, ‘ಹೀಗೆಲ್ಲಾ ಇರಲು ನಾನೇನು ರಾಮ ಭೀಮ ಚೋಮನಲ್ಲ,’ ಎಂದು ಎದ್ದು ಹೋಗುತ್ತಿದ್ದ. ನಾನು ಇವರಾರೂ ಅಲ್ಲ ಎಂದು ಹಿಂದಿರುಗಿ ಮತ್ತೆ ಕಿರುಚುತ್ತಿದ್ದ. ಏನೋ ಆಗಲು ಹೊರಟವನಿರಬೇಕು. ನಾನು ಜೋರಾಗಿ ನಕ್ಕು, ಹೋಗೋ ಗೊಣ್ಣೆಸುರುಕಾ, ನೀನು ರಾಮನಲ್ಲ, ಭೀಮನಲ್ಲ ಚೋಮನಲ್ಲ, ಚಾಡಿಪುರುಕ ಧೂಮ, ಅಷ್ಟೇ ಎನ್ನುತ್ತಿದ್ದೆ. ಇವೆಲ್ಲಾ ಅರ್ಧ ನಿಜದ ಹಾಗೆಯೂ ಅರ್ಧ ಕನಸಿನ ಹಾಗೆಯೂ ಇರುತ್ತಿದ್ದವು.

ಹೀಗೆ ಒಂದು ದಿನ ಮೋಟುದ್ದ ಮುಖ ಮಾಡಿಕೊಂಡು ಕಟ್ಟಹುಣಿಗಳಲ್ಲಿ ಓಡಿ, ಕಾಡುತೋಡು ದಾಟಿ, ಮಲೆಮೆಳೆಗಳನ್ನು ತುಳಿದು ಏನೋ ಆದವರಂತೆ ಊರಿಡಿ ಓಡಾಡಿಕೊಂಡು ಶಾಪಹಾಕುತ್ತಿದ್ದ. ಅದೇನು ಚಾಡಿ ಹೇಳುತ್ತಾನೋ ಇವನು, ಇನ್ನೂ ಇನ್ನೂ ಕೇಳಬೇಕೆನುವಷ್ಟು ಮುದ್ದಾಗಿ. ಕೊನೆಗೆ ಸಕ್ಕು ಅಜ್ಜಿಯನ್ನೂ ಬಿಡದೆ!! ನನಗಂತೂ ಮುದಿಮುದಿ ಅಜ್ಜಿಯಾಗಿ ನರಳಿ ನರಳಿ ಸಾಯಬೇಕೆಂದೂ, ಜೊತೆಗೆ ಅವನ ಗಂಟಿನಲ್ಲಿದ್ದವರೆಲ್ಲರ ಶಾಪವಿದೆಯೆಂದೂ ಮೂಗು ತಿರುಗಿಸಿಕೊಂಡು ಹೋಗಿದ್ದ. ಹಾಗೆ ಹೋದವನು ಎಲ್ಲಿ ಹೋದನೋ, ಗೊತ್ತಿಲ್ಲ, ಮುದಿ ಅಜ್ಜಿಯಾಗುವ ಕಾಲಕ್ಕಾದರೂ ಅವನ ಮಾಗಿದ ಮೊಂಡು ಮೂಗು ತೋರಿಸಿ ಹೋಗುವನೇನೋ.

ಹಸಿರು ಹುಲ್ಲಿಗಿರುವ ಒಂಥರಾ ಪರಿಮಳದ ಹಾಗೆ ನೆನಪಾಗುವ ನಮ್ಮ ಗೊಣ್ಣೆಸುರುಕ, ಚಾಡಿಪುರುಕ ಎಲ್ಲಿದ್ದರೂ ಹೇಗಿದ್ದರೂ ಚೆನ್ನಾಗಿರಲಿ.