ಒಬ್ಬ ಹೆಣ್ಣು ಅಥವಾ ಗಂಡು ತಾನು ತನ್ನದೇ ಸ್ವಂತ ಮಗುವನ್ನು ಹೆತ್ತು ಅಮ್ಮಅಪ್ಪನಾಗುವ ವಿಷಯದಲ್ಲಿ ಅವರಿಗೆ ಆಯ್ಕೆಯಿದೆ. ಅಷ್ಟರಮಟ್ಟಿಗೆ ಮನುಜಕುಲವೆಂದು ಹೇಳಿಕೊಂಡು ಬೇರೆ ಪ್ರಾಣಿಗಳಿಗಿಂತಲೂ ನಾವುಗಳು ಭಿನ್ನವಾಗಿದ್ದರೂ ಕೂಡ, ಪ್ರತಿಯೊಬ್ಬ ಹೆಣ್ಣು ತಾಯಿಯಾಗಲೇಬೇಕು, ಅದರಲ್ಲೇ ಅವಳ ಸಾರ್ಥಕತೆ ಅಡಗಿದೆ ಎನ್ನುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆ, ಒತ್ತಡಗಳು ಯಾವತ್ತೂ ಇದ್ದದ್ದೇ. ಹೆಣ್ಣೊಬ್ಬಳು ಅಂತರಿಕ್ಷ ಯಾನ ಮಾಡಿಬಂದರೂ ಕೂಡ ಅವಳ ಖಾಸಗಿ, ಸ್ವಂತ ವಿಷಯವಾದ ತಾಯ್ತನದ ಬಗ್ಗೆ ಸಾರ್ವಜನಿಕ ಆಸಕ್ತಿ ಇದ್ದೇಇರುತ್ತದೆ. ಈ ಇಪ್ಪತ್ತೊಂದನೇ ಶತಮಾನದಲ್ಲೂ, ಅವಳಿಗೆ ಗಂಡ ಮತ್ತು ಮಕ್ಕಳು ಇದ್ದಾರೆಯೇ ಎಂಬ ಅಳತೆಗೋಲಿನ ಮೂಲಕವೇ ಹೆಣ್ಣಿನ ಸಬಲತೆಯನ್ನು ಅಳೆಯುವ ಸಮಾಜಗಳು ಇವೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ತಾಯಂದಿರ ದಿನಕ್ಕೂ ಮುನ್ನವೇ ಕೆಲ ಅಂಗಡಿಗಳು ತೆರೆಯಲಿವೆ ಎಂದು ದೇಶದ ಪ್ರಧಾನ ಮಂತ್ರಿಗಳು ಹೇಳಿದಾಗ ಎಲ್ಲೆಡೆಯೂ ಹರ್ಷ ವ್ಯಕ್ತವಾಗಿತ್ತಂತೆ. Mother’s Day ಯಂದು ಅಮ್ಮಂದಿರಿಗೆ ಕೊಡಲು ಉಡುಗೊರೆಗಳನ್ನು ಆರಿಸಲು ಸದವಕಾಶವಾಯಿತು ಎಂದು ಜನರಂದರಂತೆ. ಆನ್ಲೈನ್ ಅಂಗಡಿಗಳನ್ನು ಹುಡುಕಿ, ಅವುಗಳ ಜಾಲತಾಣದಲ್ಲಿ ಕಂಡು ಬರುವ ಅನೇಕಾನೇಕ ಉಡುಗೊರೆ ವಸ್ತುಗಳನ್ನು ಪರಿಶೀಲಿಸಿ, ಆಯ್ದುಕೊಂಡು ಅವನ್ನು ಆರ್ಡರ್ ಮಾಡುವುದು ಕೆಲವರಿಗೆ ಅಸಮಾಧಾನದ ವಿಷಯವೆಂದು ವರದಿಗಳು ಹೇಳುತ್ತವೆ. ಅದು retail therapy ಯಾಗುವುದಿಲ್ಲ! ತಾವೇ ಖುದ್ದಾಗಿ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ನೋಡಿ, ಅವುಗಳ ನಿಜರೂಪವನ್ನು ಪರೀಕ್ಷಿಸಿ ಅಮ್ಮನ ಕೈಯಲ್ಲಿ ಅವು ಕೂತಾಗ ಹೇಗೆ ಕಾಣಬಹುದು, ಅವಳಿಗೆ ಅವು ಒಪ್ಪುತ್ತವೆಯೋ ಇಲ್ಲವೋ, ನೋಡಿದ ನಂತರ ಅವಳು ತನ್ನ ಉಡುಗೊರೆಗಳನ್ನು ಬಳಸಲು ಹೊರಟಾಗ ಅವಳ ಭಾವನೆಗಳು ಹೇಗಿರಬಹುದು ಅನ್ನೋದನ್ನ ಚಿಂತಿಸುತ್ತ ತಮ್ಮ ಮಗಳು ಅಂಗಡಿಗೆ ಹೋಗುತ್ತಾಳೆಂದು ಪರಿಚಯದ ತಂದೆಯೊಬ್ಬರು ಹಿಂದೊಮ್ಮೆ ವಿವರಿಸಿದ್ದರು.

ಹೌದಲ್ಲ, ಅಷ್ಟು ಕಾಳಜಿ ಇರಲೇಬೇಕು. ಅಮ್ಮನೆಂದರೆ ಅದೇನು ಲಘುವಾದ ವಿಷಯವೇ! ತಾನು ಹೊತ್ತು ಹೆತ್ತು ತಾಯಿಯಾದರೂ ಸರಿ ಇಲ್ಲವೇ ಮತ್ತೊಬ್ಬ ಹೆಣ್ಣು ಹೆತ್ತ ಮಗುವನ್ನು ದತ್ತು ಪಡೆದು ತನ್ನದಾಗಿಸಿಕೊಳ್ಳುವ ತಾಯಿಯಾದರೂ ಸರಿ, ತಾಯ್ತನವನ್ನು ಮನುಷ್ಯಕುಲ ಎತ್ತಿ ಕೊಂಡಾಡುತ್ತದೆ. ಎಲ್ಲ ಪ್ರಾಣಿಗಳಿಗೂ ತನ್ನ ಸಂತತಿ ಅಳಿಸದಂತೆ ಪೀಳಿಗೆಯಿಂದ ಪೀಳಿಗೆಗೆ ಅದನ್ನು ಮುಂದುವರೆಸುತ್ತ ಅಭಿವೃದ್ಧಿಪಡಿಸುವ ಕೆಲಸ ಬಹು ಮುಖ್ಯವಾದದ್ದು ಎಂದು ಜೀವವಿಕಾಸ ವಿಜ್ಞಾನ ಹೇಳುತ್ತದೆ. ತಾನು ತನ್ನದೇ ಸಂತಾನವನ್ನು ಹೊಂದಬೇಕೋ ಬೇಡವೋ ಎನ್ನುವ ಆಯ್ಕೆ ಪ್ರಾಣಿಗಳಲ್ಲಿ ಕಂಡುಬರುವುದಿಲ್ಲ. ಅದು ಕಾಣಿಸುವುದು ಮನುಷ್ಯರಲ್ಲಿ.

(ಜೂಲಿಯಾ ಗಿಲ್ಲಾರ್ಡ್)

ಒಬ್ಬ ಹೆಣ್ಣು ಅಥವಾ ಗಂಡು ತಾನು ತನ್ನದೇ ಸ್ವಂತ ಮಗುವನ್ನು ಹೆತ್ತು ಅಮ್ಮಅಪ್ಪನಾಗುವ ವಿಷಯದಲ್ಲಿ ಅವರಿಗೆ ಆಯ್ಕೆಯಿದೆ. ಅವರು ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ. ಅಷ್ಟರಮಟ್ಟಿಗೆ ಮನುಜಕುಲವೆಂದು ಹೇಳಿಕೊಂಡು ಬೇರೆ ಪ್ರಾಣಿಗಳಿಗಿಂತಲೂ ನಾವುಗಳು ಭಿನ್ನವಾಗಿದ್ದರೂ ಕೂಡ, ಪ್ರತಿಯೊಬ್ಬ ಹೆಣ್ಣು ತಾಯಿಯಾಗಲೇಬೇಕು, ಅದರಲ್ಲೇ ಅವಳ ಸಾರ್ಥಕತೆ ಅಡಗಿದೆ ಎನ್ನುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆ, ಒತ್ತಡಗಳು ಯಾವತ್ತೂ ಇದ್ದದ್ದೇ. ಹೆಣ್ಣೊಬ್ಬಳು ಅಂತರಿಕ್ಷ ಯಾನ ಮಾಡಿಬಂದರೂ ಕೂಡ ಅವಳ ಖಾಸಗಿ, ಸ್ವಂತ ವಿಷಯವಾದ ತಾಯ್ತನದ ಬಗ್ಗೆ ಸಾರ್ವಜನಿಕ ಆಸಕ್ತಿ ಇದ್ದೇಇರುತ್ತದೆ. ಈ ಇಪ್ಪತ್ತೊಂದನೇ ಶತಮಾನದಲ್ಲೂ, ಅವಳಿಗೆ ಗಂಡ ಮತ್ತು ಮಕ್ಕಳು ಇದ್ದಾರೆಯೇ ಎಂಬ ಅಳತೆಗೋಲಿನ ಮೂಲಕವೇ ಹೆಣ್ಣಿನ ಸಬಲತೆಯನ್ನು ಅಳೆಯುವ ಸಮಾಜಗಳು ಇವೆ. ಅಂತಹ ಅಳತೆಗೋಲನ್ನು ಪದೇಪದೇ ಉಪಯೋಗಿಸುವ ಕ್ರಮ ಮತ್ತು ನಡೆಯಲ್ಲೇ ನಮ್ಮ ಸಮಾಜಗಳ ಹಿನ್ನೆಡೆಯಿದೆಯೇನೋ!!

ಆಸ್ಟ್ರೇಲಿಯಾದ ಮೊಟ್ಟಮೊದಲ ಮಹಿಳಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್. ಅವರು ೨೦೧೦ ನೇ ವರ್ಷದಲ್ಲಿ ಪ್ರಧಾನಿ ಪಟ್ಟಕ್ಕೆ ಬಂದ ರೀತಿ ಕೆಲ ಏರುಪೇರುಗಳಿಂದ ಕೂಡಿದೆ. ಸುಮಾರು ಮೂರು ವರ್ಷಗಳ ಕಾಲ ಮಾತ್ರ ಅವರು ಪ್ರಧಾನಿಯಾಗಿದ್ದ ದಿನಗಳಲ್ಲಿ ಆಕೆಗೆ ಮಕ್ಕಳಿಲ್ಲ ಎಂಬ ಸಂಗತಿಯನ್ನು ಪದೇಪದೇ ಎತ್ತಿ ತೋರಿಸಲಾಗಿತ್ತು. ಒಮ್ಮೆ ಒಂದು ಪತ್ರಿಕೆಯಲ್ಲಿ ಆಕೆಯ ಅಡುಗೆಮನೆಯ ಚಿತ್ರ ಪ್ರಕಟವಾಗಿತ್ತು. ಅಡುಗೆ ಮನೆ, ಅದರಲ್ಲೂ ಅಡುಗೆ ಮಾಡುವ ಒಲೆಯ ಸುತ್ತಮುತ್ತ ಬಹಳ ಸ್ವಚ್ಛತೆಯಿದ್ದು ಅಲ್ಲಿ ಅಡುಗೆ ಮಾಡುವ ಯಾವುದೇ ಸೂಚನೆಯೂ ಇರಲಿಲ್ಲ ಎಂಬ ವಿಷಯಕ್ಕೆ ಆ ಪತ್ರಿಕೆ ಬೇಕಿಲ್ಲದಷ್ಟು ಪ್ರಾಮುಖ್ಯತೆಯನ್ನ ಕೊಟ್ಟಿತ್ತು. ಈ ವಿಷಯವನ್ನು ಸಾರ್ವಜನಿಕರು, ಮಾಧ್ಯಮದವರು, ಎಲ್ಲರೂ ಮತ್ತು ಆಕೆಯ ಸಹ-ರಾಜಕಾರಣಿಗಳು ಕೂಡ ಪಾರ್ಲಿಮೆಂಟಿನಲ್ಲೂ ಚರ್ಚೆ ಮಾಡುವಷ್ಟು ಆ ವಿಷಯಕ್ಕೆ ಪ್ರಚಾರ ಕೊಡಲಾಗಿತ್ತು. ತನ್ನ ಮನೆಯಲ್ಲಿ ಅಡುಗೆ ಮಾಡದ, ಮಕ್ಕಳಿರದ ಜೂಲಿಯಾ ಅದು ಹೇಗೆ ದೇಶದ ನಾಯಕಿಯಾಗಿರಲು ಸಾಧ್ಯ ಎನ್ನುವುದನ್ನು ಬಾಯಿಗೆ ಬಂದಷ್ಟೂ ರೀತಿ ಆಡಿಕೊಂಡು ಆಕೆಯ ತೇಜೋವಧೆ ಮಾಡಲಾಗಿತ್ತು. ಅದೇ ಮಾಧ್ಯಮದಲ್ಲಿ, ಇಲ್ಲಿಯವರೆಗೆ ಒಬ್ಬ ಪುರುಷ ಪ್ರಧಾನಮಂತ್ರಿ ತನ್ನ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುವ ಚಿತ್ರ ಪ್ರಕಟವಾಗಿಲ್ಲ. ನಮ್ಮ ಸಮಾಜ ಪುರುಷ ನಾಯಕರನ್ನು ಅವರ ಹೆಂಡತಿ ಮಕ್ಕಳೊಡನೆ ಇರುವ ಏಕರೂಪ (stereotype) ಚಿತ್ರವನ್ನು ಕಾಣಲು ಹಂಬಲಿಸುತ್ತದೆ, ಎಂದು ಜೂಲಿಯಾ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ನನ್ನ ಆಪ್ತ ಸ್ನೇಹಿತೆ ಸಿಡ್ನಿ ನಗರದಲ್ಲಿ ಜೂಲಿಯಾರ ಭಾಷಣವನ್ನು ಕೇಳಿಸಿಕೊಂಡು ನಂತರ ಅವರ ಪುಸ್ತಕವನ್ನು ಕೊಂಡು ನನಗೆ ಹೇಳಿದ್ದರು – “ತಾಯ್ತನದ ಅನುಭವವಿಲ್ಲ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಆಕೆ ಪ್ರಧಾನಮಂತ್ರಿಯಾಗಿದ್ದಷ್ಟೂ ದಿನ ಅವರಿಗೆ ಅದೆಷ್ಟು ವಿಧಗಳಲ್ಲಿ ಚುಚ್ಚಿ ಮಾತನಾಡಿ ಹಂಗಿಸಿ ಹಿಂಸೆ ಕೊಟ್ಟಿದ್ದರು ಎನ್ನುವುದನ್ನು ಕೇಳಿದರೆ ಈ ಸಮಾಜದಲ್ಲಿ ನಾವು ಎಳ್ಳಷ್ಟೂ ಕೂಡ ಯಾವುದೇ ಪ್ರಗತಿಯನ್ನೂ ಸಾಧಿಸಿಲ್ಲ.” ಈ ಹಿನ್ನೆಲೆಯಲ್ಲಿ ನಾವ್ಯಾಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಮತ್ತು Mother’s Day ಗೆ ಅಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೀವಿ ಎಂಬ ಅರಿವು ಮತ್ತಷ್ಟು ಗಟ್ಟಿಯಾಗುತ್ತದೆ.

ತಾನು ತನ್ನದೇ ಸಂತಾನವನ್ನು ಹೊಂದಬೇಕೋ ಬೇಡವೋ ಎನ್ನುವ ಆಯ್ಕೆ ಪ್ರಾಣಿಗಳಲ್ಲಿ ಕಂಡುಬರುವುದಿಲ್ಲ. ಅದು ಕಾಣಿಸುವುದು ಮನುಷ್ಯರಲ್ಲಿ.

ಹಿಂದೊಮ್ಮೆ Mother’s Day ಬಗ್ಗೆ ಮಕ್ಕಳ ಶಾಲೆಯಲ್ಲಿ ಪರಿಚಯವಾಗಿದ್ದ ತಾಯೊಬ್ಬರು ಇಬ್ಬರು ಮಕ್ಕಳನ್ನು ಹೆರುವಷ್ಟರಲ್ಲಿ ತಮ್ಮ ದೇಹದ ಆಕೃತಿಯಿರಲಿ, ಮೂಳೆಗಳು ಕೂಡ ಹಿಗ್ಗಿ ತಾವು ಶಾಶ್ವತ ಬೆನ್ನುಮೂಳೆ ನೋವಿಗೆ ಗುರಿಯಾದದ್ದನ್ನು ಹೇಳುತ್ತಾ ಮಕ್ಕಳು ಬೇಕೆಂದು ಬಯಸಿ ಹೆರುವ ನಾವು, ಹೆತ್ತು ಈ ರೀತಿ ರೋಗಗಳಿಗೆ, ನೋವಿಗೆ ಗುರಿಯಾಗುವ ನಮ್ಮನ್ನು ನಮ್ಮದೇ ಮಕ್ಕಳು ಮುಂದೆ ಹೇಗೆ ನೋಡುತ್ತಾರೋ ಏನೋ ಎಂದು ಬೇಸರಿಸಿದ್ದರು. ಈ ಮಾತು ಸಾರ್ವತ್ರಿಕವಾದದ್ದು. ಮಕ್ಕಳು ಬೇಕೆಂದು ಬಯಸುವುದೂ ಹೆಣ್ಣಿನ ಜವಾಬ್ದಾರಿಯಾಗುತ್ತದೆ, ಹೆರುವುದರಿಂದ ಏನಾದರೂ ಕಷ್ಟಕ್ಕೆ ಸಿಲುಕಿದರೂ ಕೂಡ ಅದಕ್ಕೆ ಹೆಂಗಸರೇ ಹೊಣೆಯಾಗಬೇಕಾಗುತ್ತದೆ.

ಹೆಸರುವಾಸಿಯಾದ ಫ್ರೆಂಚ್ ಸ್ತ್ರೀವಾದಿ ಮತ್ತು ಮಹಿಳಾಪರ ಹೋರಾಟಗಾರ್ತಿಯಾದ ಸಿಮೋನ್ ಡಿ ಬುವ್ವಾ ತನ್ನ The Second Sex ಪುಸ್ತಕದಲ್ಲಿ ಹೆಣ್ಣನ್ನು ನೋಡುವ, ಪರಿಶೀಲಿಸುವ, ಅಳೆಯುವ ಮಾಪನಗಳ ಬಗ್ಗೆ, ಸಮಾಜದ ದೃಷ್ಟಿಕೋನಗಳ ಬಗ್ಗೆ ಬರೆಯುತ್ತಾರೆ. ಆಕೆ ತನ್ನದೇ ಸ್ವಂತ ಆಯ್ಕೆಯಿಂದ ಮದುವೆ ಎಂಬ ಆಚಾರವನ್ನು ಪರಿಪಾಲಿಸಲಿಲ್ಲ. ಆದರೆ ತಮ್ಮ ಪ್ರೇಮಸಂಗಾತಿಗಳೊಡನೆ ಅತ್ಯಂತ ಭಾವನಾತ್ಮಕ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಹೊಂದಿದ್ದು ಅವನ್ನು ಶ್ರದ್ಧೆಯಿಂದ ಪೋಷಿಸಿದ್ದರು. ಸಿಮೋನ್ ಎಂದೂ ತಾಯಿಯಾಗಬೇಕೆಂದು ಆಯ್ದುಕೊಳ್ಳಲಿಲ್ಲ. ಜೀವನದಲ್ಲಿ ಅದೊಂದು ಅವಶ್ಯಕತೆಯೆಂಬ ಗಮನವನ್ನೇ ಆಕೆ ಹೊಂದಿರಲಿಲ್ಲ. ಮದುವೆ ಮತ್ತು ತಾಯ್ತನ ಹೆಣ್ಣನ್ನು ಅಳೆಯುವ ಸಾಧನಗಳೆಂದು ಸಮಾಜ ಒಪ್ಪಿರುವುದು ಮತ್ತು ಆ ನಂಬಿಕೆಯನ್ನು ಹೇರುವುದು ಸರಿಯಲ್ಲ ಎಂದು ಆಕೆ ಪ್ರತಿಪಾದಿಸಿದ್ದಾರೆ.

ಒಮ್ಮೆ ಶಾಲೆಯ ಪಠ್ಯಕ್ಕೆ ಬೇಕಿದ್ದ ಪೂರಕ ಕಲಿಕಾ ಕೆಲಸವೆಂದು ನನ್ನ ಮಗ ತಾನು ಭೇಟಿಕೊಟ್ಟಿರುವ ದೇಶಗಳ ಬಗ್ಗೆ ಶಾಲೆಯಲ್ಲಿ ಮಾತನಾಡಿದ್ದ. ಅವನ ಟೀಚರ್, ಪರವಾಗಿಲ್ಲವೇ, ಎಷ್ಟೊಂದು ದೇಶಗಳನ್ನು ನೋಡಿಬಂದಿದ್ದೀಯ, ನಿನ್ನ ತಂದೆ ಒಳ್ಳೆ ಸಂಪಾದನೆಯ ಕೆಲಸದಲ್ಲಿರಬೇಕು, ಅಂದರಂತೆ. ಈ ಪ್ರಸಂಗದಲ್ಲಿ ಟೀಚರ್ ಒಬ್ಬ ಹೆಣ್ಣು. ಒಳ್ಳೆ ಸಂಪಾದನೆಯಿರುವ ಕಲ್ಪನೆಯನ್ನು ತಂದೆಗೆ ಜೋಡಿಸಿ ಆಕೆ ಸಾಮಾಜಿಕ ಏಕರೂಪಗಳನ್ನು (stereotypes) ಮುಂದುವರೆಸಿಬಿಟ್ಟಳು. ಹಾಗೆ ಮಾಡುತ್ತಲೇ, ಆ ಟೀಚರ್ ತನ್ನ ಏಕರೂಪ ನಂಬಿಕೆಯನ್ನು ವಿದ್ಯಾರ್ಥಿಗೂ ದಾಟಿಸಿ ಅವನಲ್ಲಿ ತಂದೆಯ ಪಾತ್ರದ ಬಗ್ಗೆ ಹೊಸ ನಂಬಿಕೆಯನ್ನು ಹುಟ್ಟುಹಾಕಿದಳು. ತಂದೆಯ ಉದ್ಯೋಗ, ಸಂಪಾದನೆ, ತಂದೆಯ ಸಂಪಾದನೆಯಿಂದಲೇ ಮಗನಿಗೆ ಲಭಿಸಿರುವ ಅವಕಾಶಗಳು ಎನ್ನುವ ಸೂಕ್ಷ್ಮಗಳು ನಿಜವೋ, ಅಲ್ಲವೋ ಎನ್ನುವುದರ ಕಡೆ ಆಕೆಯ ಅರಿವು ಇರಲಿಲ್ಲ. ಆದರೆ ಅವು ನಿಜ ಎಂಬ ಕಲ್ಪನೆಯ ನಂಬಿಕೆಯನ್ನು ಮಾತ್ರ ಆಕೆ ನಿಜವಾಗಿಸಿಬಿಟ್ಟಿದ್ದಳು.

ಅದೇ ಟೀಚರ್ ಕೇಳಿದಳಂತೆ, “ನಿನ್ನ ತಾಯಿ ಏನು ಮಾಡುತ್ತಾಳೆ?” ಅಂತ. ಅಂದರೆ, ತಾಯಿಯ ಉದ್ಯೋಗ, ಸಂಪಾದನೆ, ತಾಯಿ ತನ್ನ ಮಕ್ಕಳಿಗಾಗಿ ಒದಗಿಸುವ ಅವಕಾಶಗಳು, ಆಕೆಗೆ ಇರುವ ಸಬಲತೆ ಇದು ಯಾವುದೂ ಆ ಟೀಚರ್ ಕೇಳಿದ ಪ್ರಶ್ನೆಯಲ್ಲಿ ಕಂಡುಬರಲಿಲ್ಲ. ನನ್ನ ಮಗನ ಉತ್ತರ, ‘ನನ್ನಮ್ಮ ಯಾವಾಗಲೂ ಅಡುಗೆ ಮಾಡುತ್ತಾಳೆ,’ ನನ್ನನ್ನು ಚಿಂತೆಗೀಡುಮಾಡಿತು. ತಾಯಿಯ ಪಾತ್ರವನ್ನು, ಮನೆಯೊಳಗಡೆ ನಡೆಯುವ ಒಂದು ನಿರ್ದಿಷ್ಟ (ಅಡುಗೆ ಕೆಲಸ) ಚಟುವಟಿಕೆಯಿಂದ ಕಟ್ಟಿಕೊಡುವ ಪ್ರಯತ್ನ ಪ್ರಶ್ನೆಗಳನ್ನೆಬ್ಬಿಸಿತು. ನಾಳೆಯಿಂದ ನಾನು ಅಡುಗೆ ಮಾಡುವುದಿಲ್ಲ ಎಂದು ನಿರ್ಧರಿಸಿದರೆ ಏನಾಗುತ್ತದೆ, ಎಂದು ಅವನನ್ನ ಕೇಳಿದೆ. ಅವನಿಗೆ ಪೆಚ್ಛೆನಿಸಿತು. “ನಿನ್ನನ್ನು ಶಾಲೆ ಮುಗಿದ ನಂತರ ಮತ್ತೊಂದು ಕಡೆ after-school care ಗೆಂದು ಕಳಿಸದೆ ನಾನೇ ಶಾಲೆಯಿಂದ ನಿನ್ನನ್ನು ಮನೆಗೆ ಕರೆತರುವುದರಿಂದ ನಿನಗೆ ಆಟವಾಡಲು ಅವಕಾಶವಿದೆ. ನಿನ್ನ ತಂದೆ ಸಂಜೆ ಉದ್ಯೋಗದಿಂದ ಮರಳಿದಾಗ ಅವರಿಗೆ ಬಿಸಿಬಿಸಿ ಊಟ ಕಾದಿರುತ್ತದೆ. ನಾನು ಎಲ್ಲರ ಆರೋಗ್ಯಕ್ಕಾಗಿ ಜಾಗರೂಕತೆಯಿಂದ ರಾಸಾಯನಿಕಗಳಿಲ್ಲದ ಆಹಾರ ಪದಾರ್ಥಗಳನ್ನು ಕೊಂಡು ಮನೆಯಲ್ಲಿ ಅಡುಗೆ ಮಾಡುವುದರಿಂದ ನೀನು ಗಟ್ಟಿಮುಟ್ಟಾಗಿದ್ದೀಯ. ಇವೆಲ್ಲಕ್ಕೂ ಹಣದ ಬೆಲೆ ಕಟ್ಟಿದರೆ ನಾನು ಅತ್ಯುತ್ತಮ ಮಟ್ಟದಲ್ಲಿ ಸಂಪಾದಿಸುತ್ತಿದ್ದೀನಿ,” ಎಂದು ವಿವರಿಸಿದೆ.

ಸಮಯ ಸಿಕ್ಕಾಗ ಈಗ ತನ್ನ ಊಟವನ್ನು ಅವನೇ ತಯಾರಿಸಿಕೊಳ್ಳುವುದಲ್ಲದೆ ನಮ್ಮೆಲ್ಲರಿಗೂ ಸಂಜೆ ಊಟವನ್ನು ಸಿದ್ಧಮಾಡುವ ನಡೆಯನ್ನು ಗಮನಿಸಿದಾಗ ಅಂದಿನ ನನ್ನ ವಿವರಣೆ ವ್ಯರ್ಥವಾಗಿಲ್ಲವೆನಿಸುತ್ತದೆ. ಈ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಹೆಣ್ಣಿನ ದನಿಯನ್ನು ಮತ್ತೊಮ್ಮೆ ಕೇಳಿಸಬೇಕೆನ್ನುವ ತುರ್ತು ಇಂದಿಗೂ ಇದೆ.

ಆ ತುರ್ತು ಬರೀ ಹೆಣ್ಣಿನ ದನಿಯ ಬಗ್ಗೆ ಮಾತ್ರವಲ್ಲ, ತಾಯಿಯ ಬಗ್ಗೆಯೂ ಇದೆ. ತಾಯ್ತನವನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನಗಳ ಜೊತೆಗೆ ಅದನ್ನು ವಿಮರ್ಶಾತ್ಮಕವಾಗಿಯೂ ನೋಡಬೇಕು. ಹೆಣ್ಣು ಮತ್ತು ಹೆಣ್ಣಿನ ಜೀವನ ಬರಿಯ ತಾಯ್ತನದಿಂದಲೇ ವ್ಯಾಖ್ಯಾನಕ್ಕೊಳಗಾಗಬಾರದು. ಹೆಣ್ಣಿನ ಸಬಲತೆಯನ್ನು ತಾಯ್ತನದ ಜೊತೆ ಸಂಪೂರ್ಣವಾಗಿ ತಳುಕು ಹಾಕುವುದು ಒಬ್ಬ ವ್ಯಕ್ತಿಯಾಗಿ ಆಕೆಯನ್ನು ಬಡವಾಗಿಸುತ್ತದೆ. ಅಮ್ಮನಾಗಿರುವುದು ಹೆಂಗಸರ ಬಹು ಪಾತ್ರಗಳಲ್ಲಿ ಒಂದು ಭಾಗ. ಅದೇ ಆಕೆಯ ಸಂಪೂರ್ಣ ಅಸ್ಮಿತೆ, ಅನನ್ಯತೆ ಅಥವಾ ವ್ಯಕ್ತಿತ್ವ ಎಂಬ ಸಾಮಾಜಿಕ ನಂಬಿಕೆಗಳು ಬದಲಾಗಬೇಕು. ಅಮ್ಮನಾಗುವ ಪಾತ್ರವನ್ನು ಸ್ವೀಕರಿಸುವ, ಬಿಡುವ ನಿರ್ಧಾರದಲ್ಲಿ ಹೆಂಗಸಿಗೆ ಸ್ವಾತಂತ್ರ್ಯವಿರಬೇಕು. Mother’s Day ಅಮ್ಮನಿಗೆ ಕೊಡುವ ಉಡುಗೊರೆಯಾಗಲಿ. ಆದರೆ ಆ ಉಡುಗೊರೆಯೊಳಗೇ, ಅದರ ಮೂಲಕ ಹೆಣ್ತನವನ್ನು ಬಂಧಿಸಿಡುವ, ವ್ಯಕ್ತಿಯನ್ನು ಬಡವಾಗಿಸುವ ಪ್ರಯತ್ನವಾಗದಿರಲಿ.