‘ಪ್ಯಾಸಾ’ ಚಿತ್ರ ಮಾಡಿದ ಗುರುದತ್, ಆ ಪಾತ್ರವೇ ಅವರಾಗಿದ್ದರು. ಖ್ಯಾತಿ, ಕಾಸು, ಯಶಸ್ಸು ಹೊಂದಿದ್ದರೂ ಅತೃಪ್ತರಾಗಿದ್ದರು. ಉತ್ಕಟ ಪ್ರೇಮ ದುರಂತ ನಾಯಕನನ್ನಾಗಿಸಿತು. ಅಕಾಲಿಕ ಮೃತ್ಯುವನ್ನು ಆಹ್ವಾನಿಸಿತು. ಅನನ್ಯ ಪ್ರತಿಭೆಯ ಅಪರೂಪದ ಚಿತ್ರಜೀವಿ ಗುರುದತ್ ಸತ್ತಿದ್ದು ಅಕ್ಟೋಬರ್ ಹತ್ತು. ಅವರ ನೆನಪಿಗಾಗಿ…
‘ಬದುಕಿನಲ್ಲಿ ಏನಿದೆ? ಇರೋದು ಎರಡೇ- ಒಂದು ಯಶಸ್ಸು, ಇನ್ನೊಂದು ಸೋಲು’ -ಎಂದಿದ್ದ ಗುರುದತ್ ಎರಡನ್ನೂ ಆಸ್ವಾದಿಸಿದ್ದರು, ಅನುಭವಿಸಿದ್ದರು. ಅದನ್ನು ತಮ್ಮ ಸಿನಿಮಾಗಳ ಮೂಲಕ ಸಾಕ್ಷೀಕರಿಸಿಕೊಂಡಿದ್ದರು. ಸಿನಿಮಾ ಅವರ ನರನಾಡಿಗಳಲ್ಲಿ ಇಳಿದುಹೋಗಿತ್ತು. ತಲೆಯಲ್ಲಿ ಇದ್ದದ್ದು ತೆರೆಯ ಮೇಲೆ ಮೂಡಿ ಬಂದಂತೆಲ್ಲ, ಸಿನಿಮಾದ ಬಗೆಗಿನ ವ್ಯಾಮೋಹ ಅತಿಯಾಗಿತ್ತು, ಮೈ ಮನ ತುಂಬಿಕೊಂಡಿತ್ತು. ಈ ವ್ಯಾಮೋಹಕ್ಕೆ ಹೆಣ್ಣು, ಹೆಂಡ, ಸಿಗರೇಟು ತಳಕು ಹಾಕಿಕೊಂಡಿತ್ತು. ಇವೇ ಅವರ ಬದುಕಾಗಿತ್ತು. ಯಾವುದು ಬದುಕಾಗಿತ್ತೋ, ಆ ಅಮಲಿನಲ್ಲಿಯೇ ಬದುಕು ಇಲ್ಲವಾಗಿತ್ತು.
ಸಾಮಾನ್ಯವಾಗಿ ಚಿತ್ರರಂಗದ ನಟರು, ನಿರ್ದೇಶಕರು, ನಿರ್ಮಾಪಕರು ತಮ್ಮೆಲ್ಲ ಸಾಂಸಾರಿಕ ಜಂಜಾಟಗಳ ನಡುವೆಯೂ ದುರಂತದತ್ತ ಸಾಗಿದ್ದು ಬಹಳ ಕಡಿಮೆ. ಆದರೆ, ಅವರ ಚಿತ್ರಗಳ, ಪಾತ್ರಗಳ ಪ್ರಭಾವಕ್ಕೊಳಗಾದ ಚಿತ್ರಪ್ರೇಮಿಗಳು ಮತ್ತು ಹಲವಾರು ನಾಯಕಿಯರು ನೊಂದು, ಬೆಂದು ದುರಂತದ ಪುಟಗಳಲ್ಲಿ ಸೇರಿಹೋದ ಉದಾಹರಣೆಗಳಿಗೇನು ಕೊರತೆಯಿಲ್ಲ. ಹಾಗೆಯೇ ಗುರುದತ್ ಕೂಡ ಅದೇ ಪುಟಗಳಿಗೆ ಸೇರಿಹೋದ ಸಾಧಕ.
ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನ ಹೆಡ್ಮಾಸ್ಟರ್ ಮಗನಾದ ವಸಂತಕುಮಾರ್ ಶಿವಶಂಕರ್ ಪಡುಕೋಣೆ, ಅಮ್ಮ ವಾಸಂತಿ ಪಡುಕೋಣೆಗೆ ಹದಿನಾರು ವರ್ಷವಾಗಿದ್ದಾಗ ಹುಟ್ಟಿದವನು. ಕಷ್ಟವನ್ನು ಕಂಕುಳಲ್ಲಿಯೇ ಕಟ್ಟಿಕೊಂಡು ಬೆಳೆದವನು. ಅಪ್ಪ-ಅಮ್ಮರ ಅತಂತ್ರ ಬದುಕು, ಊರೂರುಗಳ ಅಲೆದಾಟದಲ್ಲಿಯೇ ವಿದ್ಯಾಭ್ಯಾಸ ಮುಗಿಸಿದವನು. ಅನ್ನಕ್ಕಾಗಿ ಅಮ್ಮನ ತಮ್ಮ ಬಾಲಕೃಷ್ಣ ಬೆನೆಗಲ್(ಶ್ಯಾಂ ಬೆನೆಗಲ್ ಸಂಬಂಧಿ)ರನ್ನು ಆಶ್ರಯಿಸಿದವನು. ಅವರು ಚಲನಚಿತ್ರ ಪೋಸ್ಟರ್ ಡಿಸೈನರ್ ಆಗಿದ್ದರು. ಆ ಪೋಸ್ಟರ್‌ಗಳು ಗುರುದತ್ ಮನಸ್ಸಿನಲ್ಲಿ ಅದೆಂತಹ ಬೀಜ ಬಿತ್ತಿದವೋ? ಜೊತೆಗೆ ಅಮ್ಮ ಬೆಂಗಾಲಿ ಕತೆಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದರು. ಆ ಕತೆಗಳು, ಅಮ್ಮ ಮತ್ತು ಕೋಲ್ಕತ್ತಾದ ಬೆಂಗಾಲಿ ಭಾಷೆ ಇನ್ನೆಂತಹ ಸ್ಫೂರ್ತಿ ನೀಡಿದವೋ? ವಸಂತಕುಮಾರ ಎಂಬ ಹೆಸರು ಗುರುದತ್ ಎಂದಾಯಿತು.
ಪ್ರತಿಭಾನ್ವಿತರು ಹುಟ್ಟುವುದು ಮಹಲುಗಳಲ್ಲಲ್ಲ… ಎನ್ನುವುದಕ್ಕೆ ಗುರುದತ್ ಉತ್ತಮ ಉದಾಹರಣೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ ಪತ್ರಿಕೆ, ಪ್ರಪಂಚದ ನೂರು ಕ್ಲಾಸ್ ಫಿಲ್ಮ್‌ಗಳಲ್ಲಿ ಗುರುದತ್‌ರ ‘ಪ್ಯಾಸಾ’ ಕೂಡ ಒಂದು ಎಂದು ಹೇಳಿದೆ. ಅಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಅಂತಹ ಸಾಧನೆ ಗುರುದತ್‌ರಿಂದ ಭಾರತೀಯ ಸಿನಿಮಾಲೋಕಕ್ಕೆ ಸಂದಾಯವಾಗಿದೆ ಎಂದರೆ, ಗುರುದತ್ ಸಾಮಾನ್ಯರಲ್ಲ.
ಹರೆಯಕ್ಕೆ ಕಾಲಿಟ್ಟ ಗುರುದತ್‌ರ ಚಿತ್ತ ಚಿತ್ರರಂಗದತ್ತ ಇತ್ತೋ ಅಥವಾ ಸಮಯ ಸಂದರ್ಭಗಳು ಗುರುದತ್‌ರನ್ನು ಅಲ್ಲಿ ಗಂಟು ಹಾಕಿದವೋ… ಅಂತೂ ಅಮ್ಮನ ಮೂಲಕ ಗುರುದತ್ ಮುಂಬೈನ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಕೆಲಸ ಮಾಡುತ್ತಲೇ ‘ಚಾಂದ್’ ಎಂಬ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಹಿಂದಿ ಚಿತ್ರಲೋಕದೊಳಕ್ಕೆ ಜಿಗಿದಿದ್ದರು. ಕೊರಿಯೋಗ್ರಾಫರ್, ಆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್… ಹೀಗೆ ಕೈಗೆ ಸಿಕ್ಕ ಕೆಲಸವನ್ನೆಲ್ಲ ಮಾಡಿದರು. ಇಷ್ಟಾದರೂ ನಿಲ್ಲಲು ನೆಲೆ ಇಲ್ಲದೆ, ಬದುಕಿಗೊಂದು ಗುರಿಯಿಲ್ಲದೆ ಅನಿಶ್ಚಿತತೆಯನ್ನೇ ಹಾಸಿ ಹೊದ್ದಿದ್ದರು. ಆ ವಯಸ್ಸಿಗೇ, ಅಪ್ಪ-ಅಮ್ಮನ ಒತ್ತಾಯಕ್ಕೆ ಮಣಿದು ಮದುವೆಯಾಗಿ, ಬಿಟ್ಟಿದ್ದೂ ಆಗಿತ್ತು. ಅದೂ ಒಬ್ಬರಲ್ಲ; ಇಬ್ಬರನ್ನು.
ತಲೆ ತುಂಬಾ ಕನಸುಗಳು; ಕೆಲಸಗಳಿಗಾಗಿ ಕಾದ ಕೈಗಳು…. ಅಂತಹ ಸಮಯದಲ್ಲಿ ಗುರುದತ್ ಕೈ ಹಿಡಿದವರು ನಟ ದೇವಾನಂದ್. ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಜೊತೆಯಾಗಿ ಚಿತ್ರಗಳನ್ನು ಮಾಡಿದರು. ಗುರುದತ್ ನಿರ್ದೇಶಿಸಿದ, ದೇವಾನಂದ್ ನಟಿಸಿದ ಮೊದಲ ಚಿತ್ರ ‘ಬಾಜ್’ ಮುಗ್ಗರಿಸಿತು, ಭಾರೀ ಬಿಸಿ ಮುಟ್ಟಿಸಿತು. ಆದರೆ ಗುರುದತ್‌ರ ಅಸಲಿ ಪ್ರತಿಭೆಯ ಬಗ್ಗೆ ಭಾರೀ ವಿಶ್ವಾಸ ಹೊಂದಿದ್ದ ದೇವಾನಂದ್, ಚಿತ್ರನಿರ್ಮಾಣ ಕಾರ್ಯವನ್ನು ಮುಂದುವರೆಸಿದರು. ದೇವಾನಂದ್ ಮತ್ತು ಗುರುದತ್ ಕಾಂಬಿನೇಷನ್‌ನಲ್ಲಿ ಹಲವು ಉತ್ತಮ ಚಿತ್ರಗಳು ಹೊರಬಂದವು. ಈ ಮಧ್ಯೆ ಗುರುದತ್ ಖ್ಯಾತ ಗಾಯಕಿ ಗೀತಾರಾಯ್‌ರನ್ನು ಹಲವು ವಿರೋಧಗಳ ನಡುವೆಯೂ ಮದುವೆಯಾದರು.
ಚಿತ್ರರಂಗದಲ್ಲಿ ಗಟ್ಟಿಗೊಳ್ಳುತ್ತ ಸಾಗಿದ ಗುರುದತ್ ನಟರಾಗಿ, ನಿರ್ದೇಶಕರಾಗಿ ಕಾಗಜ್ ಕೆ ಪೂಲ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ್, ಚೌಂದ್‌ವಿ ಕಾ ಚಾಂದ್, ಮಿಸ್ಟರ್ ಅಂಡ್ ಮಿಸೆಸ್ ೫೫, ಆರ್ ಪಾರ್‌ಗಳಂತಹ ಸಾರ್ವಕಾಲಿಕ ಕಲಾತ್ಮಕ ಚಿತ್ರಗಳನ್ನು ಮಾಡಿ ಕೀರ್ತಿಯ ಶಿಖರವೇರಿದರು.
ಇದೇ ಗಳಿಗೆಯಲ್ಲಿ ಗುರುದತ್ ಮತ್ತು ನಟಿ ವಹೀದಾ ರೆಹಮಾನ್ ನಡುವಿನ ಪ್ರೇಮ ಸುದ್ದಿ ಮಾಧ್ಯಮಗಳಲ್ಲಿ, ಗಾಸಿಪ್ ಕಾಲಂಗಳಲ್ಲಿ ಸದ್ದು ಮಾಡತೊಡಗಿತು. ಇಬ್ಬರ ನಡುವಿನ ಪ್ರೇಮ ಅತಿರೇಕಕ್ಕೆ ಹೋದಾಗ, ಗುರುದತ್ ಕುಡಿತ-ಸಿಗರೇಟಿನ ಮೊರೆ ಹೋಗುತ್ತಿದ್ದರು. ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ, ಸಂಧಾನಕಾರರಾಗಿ ಖ್ಯಾತ ಕ್ಯಾಮರಾಮನ್ ವಿ.ಕೆ.ಮೂರ್ತಿಯವರಿದ್ದರು. ಗುರುದತ್ ಚಿತ್ರಗಳ ಕ್ಯಾಮರಾಮನ್ ಎಂದಾಕ್ಷಣ ಎಲ್ಲರ ಕಣ್ಣು, ಕಿವಿ, ಮನಸ್ಸು ಅರಳುತ್ತದೆ. ‘ಪ್ಯಾಸಾ’ದ ಆ ಕಪ್ಪು ಬಿಳುಪಿನ ನೆರಳು ಬೆಳಕಿನಾಟ, ವಕ್ತ್ ನೇ ಕಿಯಾ ಹಾಡಿನ ಬಿಸಿಲುಕೋಲು ಕಣ್ಮುಂದೆ ಕುಣಿಯುತ್ತದೆ. ಆ ಕಾಲಕ್ಕೇ, ಆ ಸಲಕರಣೆಗಳನ್ನು ಇಟ್ಟುಕೊಂಡೇ ಅಂತಹ ವಿನೂತನ ಪ್ರಯೋಗಗಳನ್ನು ಮಾಡಿದ ಅದ್ಭುತ ಕಲ್ಪನಾಶಕ್ತಿಯುಳ್ಳ ಕ್ಯಾಮರಾಮನ್ ವಿ.ಕೆ.ಮೂರ್ತಿ. ಇವರು ಗುರುದತ್‌ರ ಕಣ್ಣು ಕೂಡ. ಕರ್ನಾಟಕದವರು, ಕನ್ನಡಿಗರು. ಗುರುದತ್‌ರ ಆಪ್ತರು. ಆತನ ಸೃಜನಶೀಲತೆ ಮತ್ತು ತಿಕ್ಕಲುತನವನ್ನು ಸಮಾನವಾಗಿ ಸ್ವೀಕರಿಸಿ, ಸಂಭಾಳಿಸಿದವರು.
ಗುರುದತ್‌ರ ಇಹ-ಪರವೆಲ್ಲ ಮೂರ್ತಿಯವರಿಗೆ ಗೊತ್ತಿತ್ತು. ಗೊತ್ತಿರುವ ಗಳಿಗೆಯಲ್ಲಿಯೇ ಗುರುದತ್‌ರ ಆತ್ಮದಲ್ಲಿ, ಆಂತರ್ಯದಲ್ಲಿ ಮನೆ ಮಾಡಿಕೊಂಡಿದ್ದವರು ವಹೀದಾ ರೆಹಮಾನ್. ಆ ಕಾಲದ ಸುಂದರಿ, ಅನಂತ್‌ನಾಗ್ ಪಾಲಿನ ಬೆಳದಿಂಗಳ ಬಾಲೆ ವಹೀದಾ ರೆಹಮಾನ್, ಹಿಂದಿ ಸಿನಿ ಜಗತ್ತು ಕಂಡ ಅಸಲಿ ಅಭಿನೇತ್ರಿ. ಗುರುದತ್ ಮತ್ತು ವಹೀದಾ ಜೋಡಿ ಆ ಕಾಲದ ಅದ್ಭುತ. ಅವರ ನಡುವಿನ ಪ್ರೇಮವೇ ದುರಂತಕ್ಕೂ ಕಾರಣವಾಗಿತ್ತು.
ಗುರು-ವಹೀದಾ ನಡುವಿನ ಪ್ರೇಮ ಉತ್ಕಟ ಹಂತ ತಲುಪುತ್ತಿರುವಾಗಲೇ, ಗುರು-ಗೀತಾದತ್‌ರ ವೈವಾಹಿಕ ಬದುಕಿನ ದೋಣಿ ದುರಂತದ ದಡ ಮುಟ್ಟಿತ್ತು. ಆ ಗುಂಗಿನಲ್ಲಿಯೇ ಗೀತಾದತ್ ೪೧ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿಗೆ ಅವರಿಬ್ಬರ ವೈವಾಹಿಕ ಜೀವನಕ್ಕೆ ತೆರೆ ಬಿತ್ತು.
ಅಲ್ಲಿಂದ ಗುರುದತ್‌ರ ಬದುಕು ಕವಲುದಾರಿಗಿಳಿಯಿತು. ವಹೀದಾ ರೆಹಮಾನ್ ಬೇಡಿಕೆಯ ನಟಿಯಾಗಿ, ಭವಿಷ್ಯದತ್ತ ಗಮನ ಹರಿಸಿದರು. ಇತ್ತ ಗುರುದತ್ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೆ ಉಳಿದರು. ಕುಡಿತ ಕೈ ಹಿಡಿಯಿತು. ತಮ್ಮನ್ನೇ ತಾವು ಮರೆತರು. ಸ್ನೇಹಿತರು, ಮಕ್ಕಳು, ಜನಪ್ರಿಯತೆ, ಖ್ಯಾತಿ, ಕಾಸು ಎಲ್ಲವೂ ಇತ್ತು. ಆದರೆ ಗುರುದತ್‌ರ ಆತ್ಮ ಬಯಸಿದ್ದು, ಆಂತರ್ಯಕ್ಕೆ ಬೇಕಾದ್ದು ಎಲ್ಲೋ ಕಳೆದುಹೋಗಿತ್ತು. ಅದೇ ಕೊರಗಿನಲ್ಲಿ ಒಂದು ದಿನ ಕುಡಿತದ ಜೊತೆಗೆ ಸ್ಲೀಪಿಂಗ್ ಪಿಲ್‌ಗಳನ್ನು ಅತಿಯಾಗಿ ಸೇವಿಸಿ ಸಾವಿನೊಂದಿಗೇ ಮಲಗಿದ್ದರು.
ಗುರುದತ್ ಉತ್ಕಟಪ್ರೇಮಿ. ಹಾಗೆಯೇ ಅತೃಪ್ತ ಕೂಡ. ಭಗ್ನಪೇಮಿಯ ಪಾತ್ರಗಳನ್ನು ಮಾಡುತ್ತ ಆ ಪಾತ್ರಗಳೇ ಅವರಾಗಿಹೋಗಿದ್ದ ಗುರುದತ್, ಭಾರತೀಯ ಸಿನಿಮಾಲೋಕದ ಸಾರ್ವಕಾಲಿಕ ದುರಂತನಾಯಕ. ತಮ್ಮ ವಿಶಿಷ್ಟ ಪ್ರತಿಭೆಯನ್ನು ಹತ್ತು ಹಲವು ಅತ್ಯುತ್ತಮ ಚಿತ್ರಗಳ ಮೂಲಕ ಕಟ್ಟಿಕೊಟ್ಟ ಕಲಾತ್ಮಕ ಕಲಾಕಾರ. ಇಂತಹ ಅಪರೂಪದ ಅದ್ಭುತ ಆಸಾಮಿ ಅಕ್ಟೋಬರ್ ಹತ್ತರಂದು ಕಣ್ಮುಚ್ಚಿದರು. ಅವರ ನೆನಪಿಗಾಗಿ, ನೆನಪು ಜೀವಂತವಾಗಿ ಉಳಿಯಲಿಕ್ಕಾಗಿ- ‘ಪ್ಯಾಸಾ’ ಚಿತ್ರ ನೋಡಿ… ಸಾಕು.
ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು.