ಒಂದು ಕಂದು ಬಣ್ಣದ ನಾಯಿ ಅವನ ಜೊತೆಗೆ. ಅದರ ಮೂತಿ ಕಪ್ಪಾಗಿದೆ. ನೆಲವನ್ನು ಮೂಸುತ್ತ ಬರುತ್ತಿದೆ. ಮೊಣಕಾಲು ಮಟ್ಟದ ಬರ್ಮುಡ ಮತ್ತು ಟಿ ಶರ್ಟ್ ಧರಿಸಿದ್ದಾನೆ. ಅದರ ತುಂಬ ಆಕರ್ಷಣೀಯವಾದ ಬಣ್ಣದಲ್ಲಿ ಮುದ್ರೆಯನ್ನು ಒತ್ತಿರುವ ಚಿತ್ರಗಳು. ಮುದ್ರೆ ಒತ್ತಿರುವ ಕಪ್ಪು ಬಣ್ಣದ ಕೆಂಪು ಚುಕ್ಕಿಗಳಿರುವ ಜೀರುಂಡೆ ಮತ್ತು ಕಪ್ಪು ಬಣ್ಣದ ಮಣ್ಣಿನ ದೀಪಗಳಿರುವ ಚಿತ್ರಗಳು. ಜೀರುಂಡೆಗಳ ಸಾಲು ನೇರವಾಗಿದೆ. ಮಣ್ಣಿನ ದೀಪಗಳ ಸಾಲು ಅಡ್ಡವಾಗಿದೆ.
ಎಚ್.ಆರ್.ರಮೇಶ್ ಬರೆದ ಕತೆ ‘ಯಾಬ್ಲಿ’ ನಿಮ್ಮ ಈ ಭಾನುವಾರದ ಓದಿಗೆ
ಬಯಲು. ಎಲ್ಲೆಯಿಲ್ಲದ ಆಕಾಶದಂತೆ ಇದೆ. ಬಯಲಿನೊಳಗೆ ಮೌನದ ವಿಲಕ್ಷಣ ಸದ್ದು. ‘ಅಲ್ಲಮ’ ಎಂದು ಯಾರೋ ಕೂಗಿದ ಸದ್ದು. ಸುತ್ತ ನೋಡಿದ. ಯಾರೂ ಕಾಣಲಿಲ್ಲ. ಕ್ಷಣ ಬೆಪ್ಪಾದ. ಸುತ್ತ ನೋಡಿದ. ಯಾರೂ ಕಾಣಲಿಲ್ಲ. ಬಯಲನ್ನು ನೋಡುತ್ತ ನಿಂತುಕೊಂಡಿದ್ದಾನೆ. ಮತ್ತೊಮ್ಮೆ ಅವನ ಹೆಸರು ಕಿವಿಗೆ ರಪ್ಪಂತ ಬಡಿಯಿತು. ಇಂಥ ಬಯಲಲ್ಲೂ ಕಾಣದ ಯಾವ ಮೂಲೆಯಿಂದ ‘ಅಲ್ಲಮ ಎನ್ನುವ ಧ್ವನಿ ಬರುತ್ತಿದೆ’ ಎಂದು ಮತ್ತೆ ಸುತ್ತೆಲ್ಲ ನೋಡಿದ. ಸೂರ್ಯ ಅವನ ನೆತ್ತಿ ಮೇಲೆ ಇದ್ದಿದ್ದರಿಂದ ಕ್ಷಣ ಅವನಿಗೆ ದಿಕ್ಕುಗಳು ಗೊತ್ತಾಗದೆ ಗಲಿಬಿಲಿಗೊಂಡ. ಕೆಂಪು ಭೂಮಿ. ಹಬ್ಬಿಕೊಂಡಿದೆ. ಕಣ್ಣುಹಾಯಿಸಿದ್ದಷ್ಟು. ಯಾವುದೋ ಅನ್ಯಗ್ರಹದಲ್ಲಿ ಒಬ್ಬನೇ ನಿಂತಿರುವಂತೆ ಭಾಸವಾಗುತ್ತಿದೆ ಅವನಿಗೆ.
‘ಈ ಕಲ್ಲು ಸವೆಯುವುದು ಯಾರಿಗೂ ಗೊತ್ತಾಗುವುದಿಲ್ಲ ಅಲಾ!?’
‘ಹಾಗೆ ಕಣೆ ಬದುಕು ಸಲೇಖಿ.’
‘ಹೋಗೋ ಪೂರ್ತಿ ಹೆಸರು ಕರೆಯಬೇಡ.’
‘ಮತ್ತೆ?!’
‘ಅದೆ..’
‘ಏನು? ಸಲಿ? ಸಖಿ? ಸಲೇಖನ? ಲೇಖಿ?’
‘ಸಲು ಚೆನ್ನಾಗಿದೆ ಅಲ?’
‘ಹೆಸರಲ್ಲೇನಿದೆಯೇ?’
‘ಹೆಸರಲ್ಲೇನಿದೆ ಅಂದ್ರೆ? ಅವನು ಶೇಕ್ಸ್‌ಪಿಯರ್ ಹೇಳಿಬಿಟ್ಟ, ನೀನು ಕೇಳಿಬಿಟ್ಟೆ!’
‘ನಿಜ ಅಲ್ಲವಾ? ನೀನೇ ಯೋಚಿಸು. ಜಾಜಿ ಹೂವನ್ನು ಗುಲಾಬಿ ಎಂದು, ಗುಲಾಬಿಯನ್ನು ಜಾಜಿ ಎಂದು ಕರೆಯಲ್ಪಡುತ್ತಿದ್ದಿದ್ದರೆ, ಜಾಜಿ ಗುಲಾಬಿ, ಗುಲಾಬಿ ಜಾಜಿ. ಜಗತ್ತಿನ ಸಂಗತಿಗಳನ್ನು ಗುರ್ತಿಸುವುದಕ್ಕೆ ಹೆಸರು ಒಂದು ನೆಪ. ಕಾರಣ. ಅದು ಭಾಷೆಯ ವರ. ಹೆಸರು ಒಂದು ಸೇತುವೆ ಇದ್ದಹಾಗೆ.’
‘ನಾನು ನಾನೇ, ನೀನು ನೀನೆ!’
‘ಏನೇ ತತ್ವ ಗಿತ್ವ ಎಲ್ಲ ಮಾತಾಡ್ತಿದಿಯಾ?!’
‘ನಾನೋ ನೀನೋ?!’
ಅಲ್ಲಮನ ಮನಸ್ಸಿನಲ್ಲಿ ಈ ದೃಶ್ಯ ಮುಂಗಾರಿನ ಮಿಂಚಿನಂತೆ ಕಂಡು ಮಾಯವಾಯಿತು.
ಸಮುದ್ರತೀರದಲ್ಲಿ ಸಂಜೆಯ ಸೂರ್ಯ ತನ್ನ ಕೆಂಬಣ್ಣದಲ್ಲಿ ಮಿಂದು ಮುಳುಗುವ ಹಾಗೆ ನಡು ಮಧ್ಯಾಹ್ನದ ಅಲ್ಲಿ ಕಣ್ಣು ಹರಿಸಿದಷ್ಟು ಹಬ್ಬಿರುವ ವಿಸ್ತಾರಗೊಂಡಿರುವ, ಕೊನೆಯೇ ಇಲ್ಲವೆಂಬಂತೆ ಕೆಂಪುಭೂಮಿಯ ಬಯಲಲ್ಲಿ ನೀರಲ್ಲಿ ತೇಲುತ್ತ ಬರುವ ದೋಣಿಯಂತೆ ಒಂದು ರೂಪ, ಆಕೃತಿ. ಹತ್ತಿರ ಬರುತ್ತಿದ್ದ ಹಾಗೆ ಕಾಣುತ್ತಿದ್ದ ಚಿತ್ರ ಸ್ಪಷ್ಟಗೊಂಡಿತು. ಅದು ಅಲ್ಲಮನ ವಯಸ್ಸಿನಷ್ಟೇ ಇರುವ ಗಂಡಸಿನ ಆಕೃತಿ. ಆಕೃತಿ ಹತ್ತಿರವಾಗುತ್ತ ವ್ಯಕ್ತಿ ಸ್ಪಷ್ಟಗೊಂಡ. ಬೆನ್ನಹಿಂದೆ ಒಂದು ಹಳದಿ ಬಣ್ಣದ ಚೀಲ. ಚೀಲದ ಜಿಪ್ಪನ್ನು ತೂರಿಕೊಂಡು, ಹೊರಗೆ ಇಣುಕುತ್ತಿರುವ ಒಂದು ಮಾರುದ್ದದ ಬಿದಿರಿನ ಬೆತ್ತ. ಎಡಗೈಯಲ್ಲಿ ಒಂದು ಕಪ್ಪನೆಯ ಚೀಲ. ಅದರೊಳಗೆ ಲ್ಯಾಪ್‌ಟಾಪಿರುವುದು ಗೊತ್ತಾಗುತ್ತಿತ್ತು.
ಒಂದು ಕಂದು ಬಣ್ಣದ ನಾಯಿ ಜೊತೆಗೆ. ಅದರ ಮೂತಿ ಕಪ್ಪಾಗಿದೆ. ನೆಲವನ್ನು ಮೂಸುತ್ತ ಅವನ ಜೊತೆಗೆ ಬರುತ್ತಿದೆ. ಮೊಣಕಾಲು ಮಟ್ಟದ ಬರ್ಮುಡ ಮತ್ತು ಟಿ ಶರ್ಟ್ ಧರಿಸಿದ್ದಾನೆ. ಅದರ ತುಂಬ ಆಕರ್ಷಣೀಯವಾದ ಬಣ್ಣದಲ್ಲಿ ಮುದ್ರೆಯನ್ನು ಒತ್ತಿರುವ ಚಿತ್ರಗಳು. ಮುದ್ರೆ ಒತ್ತಿರುವ ಕಪ್ಪು ಬಣ್ಣದ ಕೆಂಪು ಚುಕ್ಕಿಗಳಿರುವ ಜೀರುಂಡೆ ಮತ್ತು ಕಪ್ಪು ಬಣ್ಣದ ಮಣ್ಣಿನ ದೀಪಗಳಿರುವ ಚಿತ್ರಗಳು. ಜೀರುಂಡೆಗಳ ಸಾಲು ನೇರವಾಗಿದೆ. ಮಣ್ಣಿನ ದೀಪಗಳ ಸಾಲು ಅಡ್ಡವಾಗಿದೆ. ಆ ಮನುಷ್ಯ ಬಂದವನು ತನ್ನ ಹಿಂಭಾಗದ ಚೀಲವನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಲ್ಯಾಪ್ ಟಾಪಿನ ಬ್ಯಾಗನ್ನು ಇಟ್ಟ. ನಂತರ ದೊಡ್ಡ ಚೀಲದ ಪಕ್ಕದಲ್ಲಿ ಸಿಕ್ಕಿಸಿಕೊಂಡಿದ್ದ ನೀರಿನ ಬಾಟಲಿಯನ್ನು ತೆಗೆದು ಗಟಗಟ ನೀರನ್ನು ಕುಡಿದು , ಪಕ್ಕದ ನಾಯಿಯ ಕಡೆ ತಿರುಗಿದ. ಅದು ಬಾಯನ್ನು ತೆರೆಯಿತು ಮೆಲ್ಲನೆ ದಾರವು ಮೇಲಿನಿಂದ ಇಳಿಬಿದ್ದಂತೆ ನೀರನ್ನು ಅದರ ಬಾಯಿಯೊಳಗಡೆ ಇಳಿಬಿಟ್ಟ. ಹೀಗೆ ಐದು ಸಲ ಮಾಡಿದ. ಇವನು ಹೀಗೆ ಮಾಡುತ್ತಿದ್ದುದನ್ನು ಅಲ್ಲಮ ನೋಡುತ್ತ ನಿಂತ.
‘ನೀರು ಬೇಕಾ?’ ಎಂದ ಅಲ್ಲಿಗೆ ಬಂದವನು.
ಅಲ್ಲಮ ಸುಮ್ಮನಿದ್ದ.
‘ಕುಡೀರಿ. ನನಗೆ ಗೊತ್ತು ನಿಮ್ಮ ಎದೆ ನೀರನ್ನು ಬಯಸುತ್ತಿದೆ’ ಎಂದು ಅಂದ ತನ್ನ ವಿಶಿಷ್ಟ ಶೈಲಿಯಲ್ಲಿ. ಹಾಗೆ ಅಂದು ತನ್ನ ಬಲಗೈಯಲ್ಲಿ ಬಾಟಲಿಯನ್ನು ಚಾಚಿದ. ಕೈಯ ಮೇಲಿನ ಯಾಬ್ಲಿಯ ಚಿತ್ರದ ಅಚ್ಚೆ. ಅದು ನಿಧಾನಕ್ಕೆ ಚಲಿಸುತ್ತಿದೆಯೇನೋ ಎಂಬಂತೆ ಕಾಣುತ್ತಿದೆ.
‘ಅರೆ ಈ ಅಚ್ಚೆಯನ್ನು ನಾನು ರಾತ್ರಿ ಕನಸಲ್ಲಿ ಕಂಡಿದ್ದೆ, ಏನು ವಿಚಿತ್ರ’ ಎಂದು ಬಾಟಲಿಯನ್ನು ಇಸಿದುಕೊಂಡು ಸ್ವಲ್ಪ ನೀರನ್ನು ಕುಡಿದ. ವಾಪಸ್ಸು ಬಾಟಲಿಯನ್ನು ಕೊಟ್ಟು ತನ್ನ ಬಲಗೈಯಿಯ ಬೆರಳುಗಳನ್ನು ಯಾಬ್ಲಿಯ ಚಿತ್ರದ ಅಚ್ಚೆಯ ಮೇಲೆ ಸ್ಪರ್ಶಿಸಿದ.
‘ಅಲ್ಲರೀ ಅಲ್ಲಮ ನನ್ ಪರ್ಸನಲ್ ಜೀವನದ ಕತೆಯನ್ನು ಬರೆದು ಮೊನ್ನೆ ಸಾಪ್ತಾಹಿಕದಲ್ಲಿ ಪ್ರಕಟಿಸಿದಿರಲ್ಲ, ಇದು ಎಷ್ಟು ಸರಿ?’ ಎಂದು ಕೇಳಿದ.
ಅಲ್ಲಮ, ಈ ಮನುಷ್ಯ ಅಲ್ಲಿಗೆ ಬರುವುದಕ್ಕೆ ಮುಂಚೆ ಹೇಗೆ ನಿಂತುಕೊಂಡಿದ್ದನೋ ಹಾಗೆ ನಿಂತುಕೊಂಡ ತದೇಕ ಚಿತ್ತದಲ್ಲಿ. ಸೂರ್ಯ ನೆತ್ತಿಯ ಮೇಲಿಂದ ಪಕ್ಕಕ್ಕೆ ಸರಿಯುತ್ತಿತ್ತು. ಹೊಸ ಮನುಷ್ಯನ ಬಗ್ಗೆ ಸ್ವಲ್ಪವೂ ಕುತೂಹಲದ ಲಕ್ಷಣಗಳು ಅವನಲ್ಲಿ ಕಾಣುತ್ತಿಲ್ಲ.
‘ನಾಯಿಗೆ ಬಿಸ್ಕತ್ತು ತಿನ್ನಬೇಕು ಅನ್ನಿಸುತ್ತಿದೆ’ ಎಂದ ಅಲ್ಲಮ. ಅದು ಅವನ ಬಾಯಿಯಿಂದ ಸಹಜವಾಗಿ ಬಂದಂತೆ ಇತ್ತು.
‘ಎಕ್ಸಾಟ್ಲಿ. ಇದೇ ನಿಮ್ಮ ಕತೆಯ ಮೊದಲ ವಾಕ್ಯ! ಅಲ್ಲದೆ ಈಗ ನನ್ ನಾಯಿಗೆ ಬಿಸ್ಕತ್ತು ಬೇಕೆಂದು ನಿನಗೆ ಹೇಗೆ ಗೊತ್ತಾಯಿತು?’ ಎಂದು ಕೇಳಿ, ತನ್ನ ಬ್ಯಾಗಿನಿಂದ ಬಿಸ್ಕತ್ತಿನ ಪೊಟ್ಟಣವನ್ನು ಬಿಚ್ಚಿ ನಾಯಿಯ ಬಾಯಿಗೆ ಬೀಳುವಂತೆ ಒಂದೊಂದನ್ನೇ ಹಾಕಿದ. ಅದು ಒಂದನ್ನೂ ನೆಲಕ್ಕೆ ಬೀಳಿಸದೆ ಬಾಯಲ್ಲಿ ಕಚ್ಚಿ ಕಚಕ್ ಕಚಕ್ ಎಂದು ತಿನ್ನತೊಡಗಿತು.
ನೀನೇ ಯೋಚಿಸು. ಜಾಜಿ ಹೂವನ್ನು ಗುಲಾಬಿ ಎಂದು, ಗುಲಾಬಿಯನ್ನು ಜಾಜಿ ಎಂದು ಕರೆಯಲ್ಪಡುತ್ತಿದ್ದಿದ್ದರೆ, ಜಾಜಿ ಗುಲಾಬಿ, ಗುಲಾಬಿ ಜಾಜಿ. ಜಗತ್ತಿನ ಸಂಗತಿಗಳನ್ನು ಗುರ್ತಿಸುವುದಕ್ಕೆ ಹೆಸರು ಒಂದು ನೆಪ. ಕಾರಣ. ಅದು ಭಾಷೆಯ ವರ.
ನಿನ್ನೆ ರಾತ್ರಿ ಸರಿಯಾಗಿ ಒಂಬತ್ತು ಗಂಟೆ ಇಪ್ಪತ್ತು ನಿಮಿಷ. ಆನೆ ಬಾಗಿಲನ್ನು ದಾಟಿ, ಬಲಕ್ಕೆ ತಿರುಗಿ ಪಾತಾಳಲಿಂಗೇಶ್ವರ ದೇವಾಲಯದ ಓಣಿಯನ್ನು ಬಳಸಿಕೊಂಡು ಸ್ವಲ್ಪದೂರ ಹೋದೆ. ಒಂದು ಫರ್ಲಾಂಗು. ಅಥವಾ ಒಂದೂವರೆ. ಕಿರಿದಾದ ಹಾದಿ. ಇಕ್ಕೆಲಗಳಲ್ಲಿ ಕಳ್ಳಿಯ ಗಿಡಗಳು. ಕಪ್ಪಗೆ ಕಾಣುತ್ತಿದ್ದವು. ಅವು ಮನುಷ್ಯರು ನಿಂತಂತೆ ಕಾಣುತ್ತಿದ್ದವು. ರಾತ್ರಿಯ ಮೌನ. ಅದೂ ಒಂದು ತೆರನಾದ ಸದ್ದನ್ನು ಹೊಮ್ಮಿಸುತ್ತಿತ್ತು. ಆ ಸದ್ದಿಗೆ ರಾತ್ರಿಯ ಹುಳ, ಜೀರುಂಡೆ, ಬುವಾಡಿಗಳು ತಮ್ಮ ಲಯಬದ್ದ ಸದ್ದನ್ನು ಸೇರಿಸುತ್ತಿದ್ದವು. ಆ ಹಾದಿಯಲ್ಲಿ ಇನ್ನೂರರಿಂದ ಮುನ್ನೂರು ಹೆಜ್ಜೆಗಳನ್ನು ನಡೆದೆ. ನಂತರ ಬಲಕ್ಕೆ ತಿರುಗಿ ನಿಂತೆ. ತಣ್ಣನೆಯ ಗಾಳಿ ತೇಲಿ ಕೆನ್ನೆಗಳ ಸವರಿ ಕಿವಿಯೊಳಗೆ ಹೋಗುತ್ತಿತ್ತು. ಹತ್ತಿರ ಹೋದ ಹಾಗೆ ಕಪ್ಪೆಗಳ ಸದ್ದು. ಹತ್ತಿರದಲ್ಲೇ ನೀರಿನ ಕೊಳವೋ ಸರೋವರವೋ ಇದ್ದದ್ದು ಸ್ಪಷ್ಟವಾಗುತ್ತ ಹೋಯಿತು. ರಾತ್ರಿಯನ್ನು ಪುಳಕ್ ಪುಳಕ್ ಸದ್ದುಗಳು ರೋಮಾಂಚನಗೊಳಿಸುತ್ತಿದ್ದವು.
ಅವಳು ಹೇಳಿದ್ದ ಗುರುತಿನ ಆಧಾರದಲ್ಲಿ ಹೋಗಿದ್ದ ನಾನು ಎಲ್ಲಿಯೂ ಪರಪಟ್ಟಾಗಿರಲಿಲ್ಲ. ಮತ್ತೆ ಮುಂದಕ್ಕೆ ಹೋದೆ. ಮೈಯಿಗೆ ಒರಟಾದ, ಸೂಜಿಯಿಂದ ಚುಚ್ಚುವಂತಹ ತೆನೆಗಳು ಬಡಿಯ ತೊಡಗಿದವು. ಅವಳು ಹೇಳಿದ್ದ ಸೂರ್ಯಕಾಂತಿ ಹೊಲ ಅದೇ ಎಂದು ಖಾತ್ರಿ ಆಯಿತು. ಹೊಲದ ಮಧ್ಯೆ ಹೋಗಿ ನಿಂತುಕೊಂಡೆ. ಹತ್ತಿರದಲ್ಲಿಯೇ ಒಂದು ದೀಪ ಕಾಣಿಸುತ್ತಿತ್ತು. ಅವಳು ಹೇಳಿದ್ದ ಅವಳ ಸೋಗೆಯ ಗುಡಿಸಲು ಅದೇ ಎಂದು ಮನವರಿಕೆ ಆಯಿತು. ನವಿಲಿನ ಥರ ಕೂಗುವುದಕ್ಕೆ ಅವಳೇ ಕಲಿಸಿದ್ದಳು. ಅದೇ ಥರ ಕೂಗಿದೆ. ‘ಹಾಗೆ ಎರಡು ಸಲ ಕೂಗು. ಕೂಗಿ, ಮುನ್ನೂರು ಎಣಿಸು, ಅಷ್ಟೊತ್ತಿಗೆ ನಿನ್ನ ಬಳಿ ಬಂದಿರುತ್ತೇನೆ’ ಎಂದಿದ್ದಳು. ಕೂಗಿದೆ. ಒಂದು ಸಾವಿರ ಸಲ ಎಣಿಸಿದ್ದೆ. ಅವಳ ಸುಳಿವಿರಲಿಲ್ಲ. ರಾತ್ರಿ, ಹೊಸ ಜಾಗ ಬೇರೆ. ಆದರೂ ನನಗೇನು ಅಂಥ ಭಯವೇನು ಆಗುತ್ತಿರಲಿಲ್ಲ. ಒಂದು ಸಾವಿರ ಎಣಿಸಿ ಅರ್ಧಗಂಟೆಯಾದ ಬಳಿಕ ದೀಪ ಉರಿಯುತ್ತಿದ್ದ ದಿಕ್ಕಿನ ಕಡೆ ನಡೆದೆ. ನಡೆಯುತ್ತಲೇ ಹೋದೆ. ಅದು ಕಾಣುತ್ತಲೇ ಹೋಯಿತು.
ನಾನು ಅದನ್ನು ಮೊದಲು ನಿಂತು ನೋಡಿದಾಗ ಇದ್ದ ಅಂತರ ಅಷ್ಟೇ ಇತ್ತು. ನಾನು ಎಷ್ಟೇ ನಡೆದು ಅದರ ಕಡೆ ಹೆಜ್ಜೆಗಳ ಇಟ್ಟರೂ ಅದರ ಸಮೀಪಕ್ಕೆ ಹೋಗಲಾಗಲೇ ಇಲ್ಲ. ಕಾಣುತ್ತಲೇ ಇತ್ತಲ್ಲ ದೀಪ, ಅದನ್ನು ನೋಡಿಕೊಂಡು ಮುಂದಮುಂದಕ್ಕೆ ಹೋದೆ. ಕ್ರಮೇಣ ದೀಪದ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಿರುವುದು ಕಂಡಿತು. ಈಗ ದೀಪ ಉರಿಯುತ್ತಿದ್ದ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಿದ್ದ! ದೀಪದ ಜಾಗದಲ್ಲಿ ಸೂರ್ಯ. ಅರೆ! ಉರಿಯುತ್ತಿದ್ದ ದೀಪ, ಈಗ ಸೂರ್ಯ. ಏನಾಶ್ಚಾರ್ಯ!’
‘ನಾನು ಕೇಳ್ತಾ ಇರೋದು ಕತೆನಲ್ಲ. ನಿನಗೆ ಹೇಗೆ ಗೊತ್ತಾಯಿತು ಇದೆಲ್ಲ?’
ಈ ಮಾತಿಗೆ ಅಲ್ಲಮ ಏನನ್ನೂ ಮಾತಾಡದೆ ಮುಂದುವರೆಸಿದ ತಾನು ಹೇಳುತ್ತಿದ್ದುದನ್ನು.
ಸೂರ್ಯ ಅದು ನಿಧಾನ ಮೇಲಕ್ಕೆ ಸರಿಯುತ್ತ ಹೋಯಿತು. ಈಗ ಮೇಲಿದೆ. ಮೇಲಿಂದ ಪಕ್ಕಕ್ಕೆ ಸರಿಯುತ್ತಿದೆ.
‘ಅವಳನ್ನು ಹುಡುಕಿಕೊಂಡು ಬಂದು ನಿಂತಿದ್ದೇನೆ.’
‘ಯಾರನ್ನ?! ಸಲುನಾ? ನನಗೆ ನಿನ್ನ ಕತೆ ಬೇಡ ಅಲ್ಲಮ. ಮತ್ತೆ ಘಳಿಘಳಿಗೆಗೂ ಕತೆ ಹೇಳಿ ಯಾಮಾರಿಸಬೇಡ.’
‘ನಿನಗೆ ನನ್ನ ಹೆಸರು ಅಲ್ಲಮ ಎಂದು ಹೇಗೆ ಗೊತ್ತು ಅಂತ ಕೇಳುವುದಿಲ್ಲ’
‘ಇದಲ್ಲ ಉತ್ತರ’
‘ನಿನ್ನ ಹೆಸರೂ ಸಹ ಅಲ್ಲಮ ಎಂದು ಗೊತ್ತು. ಆದರೆ ಅದಕ್ಕೆ ನನಗೆ ಆಶ್ಚರ್ಯವೇನು ಆಗುವುದಿಲ್ಲ. ಕತೆ ನಿಜ. ಆದರೆ ನಿನ್ನದೇ ಅಲ್ಲವಲ್ಲ. ನಿಜವನ್ನಷ್ಟೇ ಬರೆದಿಲ್ಲವಲ್ಲಾ?’ ಅಲ್ಲದೆ ಯಾರ ಕತೆನ ಬರೀಲಿ?
‘ಈಗ ನೋಡು ಅವರು ಕತೆಯಲ್ಲಿರೋದನ್ನ ನಿಜ ಎಂದು’ ದುಂಬಾಲು ಬಿದ್ದಿದ್ದಾರೆ ಮತ್ತೆ ಮುಂದುವರೆದು, ‘ನಿಜಕ್ಕೂ ನಾನು ಅವಳು ತುಂಬಾ ಪ್ರೀತಿಸುತ್ತಿದ್ದೆವು. ಅವಳು ಜೀವ ನನಗೆ. ಒನ್ ಫೈನ್ ಡೇ…. ಸೂರ್ಯ ಉದಯಿಸಿದ್ದ. ಆದರೆ ಅವಳಿರಲಿಲ್ಲ. ನನಗೆ ಅದೆಲ್ಲ ಅಂದರೆ ನಿಜವಾಗಿ ಬದುಕಿದ್ದು ಕಲ್ಪನೆ ಎನ್ನಿಸುತ್ತಿದೆ. ಎಂಥ ದುರಂಥ ನೋಡು. ಅವಳು ಜೊತೆಗೇ ಇದ್ದದ್ದು ನಂತರ ಇಲ್ಲವಾಗಿದ್ದು ಕಲ್ಪನೆಯಂತಾಗಿದೆ. ಅವಳನ್ನು ಏನು ಮಾಡಿದ್ದೀಯ ಹೇಳು? ಅವಳ ಹೆಣನ ಎಲ್ಲಿ ಅವಿಸಿಟ್ಟಿದ್ದೀಯಾ ಹೇಳು? ಅಂತಿದ್ದಾರೆ. ಆದರೆ ನನಗೆ ಗೊತ್ತು ಅವಳು ಸತ್ತಿಲ್ಲ ಎಂದು. ಅವಳ ಜೊತೆ ಬಾಳಿದವನು ನಾನು. ನನಗೆ ಗೊತ್ತು ಅವಳಿಗೆ ಏನೂ ಆಗಿಲ್ಲ, ಸತ್ತೂ ಇಲ್ಲ. ಆದರೆ ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ. ನೋಡು ನನ್ನ ಎದೆಯನ್ನ ಎಂದವನು ತನ್ನ ಟೀ ಶರ್ಟ್‍ನ್ನು ಬಿಚ್ಚಿ ಒಂದು ಹೆಂಗಸಿನ ಮುಖದ ಅಚ್ಚೆಯನ್ನು ತೋರಿಸಿ, ‘ನೋಡು ಅವಳ ಮುಖದ ಚಿತ್ರವನ್ನು ಅಚ್ಚೆ ಹಾಕಿಸಿಕೊಂಡಿದ್ದೇನೆ’ ಎಂದ.
ಅಲ್ಲಮ ಆಶ್ಚರ್ಯದಿಂದ, ‘ಅರೆ!’ ಇವಳನ್ನೇ ನಾನು ಹುಡುಕುತ್ತಿರುವುದು. ಅವಳನ್ನು ಹುಡುಕಿಕೊಂಡೇ ನಾನು ರಾತ್ರಿಯಿಡೀ ನಡೆದು ಇಲ್ಲಿಗೆ ಬಂದಿರೋದು’.
‘ಹಲೋ ಮತ್ತೆ ಕತೆ ಕಟ್ಟಬೇಡ. ಕಟ್ಟಿ ನನ್ನ ಯಾಮಾರಿಸಬೇಡ. ನನ್ನ ಖಾಸಗೀ ಕತೆ ನಿನಗೆ ಹೇಗೆ ಗೊತ್ತು. ಸಲ್ಲು ನಿನಗೆ ಮೊದಲೇ ಗೊತ್ತಾ? ನನ್ನ ಬಗ್ಗೆನೂ?!’ ಮತ್ತೆ ಹೇಳುತ್ತಾ ಹೋದ – ಹೋದ ತಿಂಗಳಷ್ಟೇ ಅವಳ ಮುಟ್ಟು ನಿಂತಿತ್ತು. ಹೆಣ್ಣು ಮಗುವೇ ಆಗುತ್ತೆ ಅಂತ ಡಾಕ್ಟರ್ ಹೇಳಿದ್ದರು. ನಮಗೂ ಹೆಣ್ಣುಮಗುವೇ ಇಷ್ಟವೆಂದು ಗೊತ್ತಾದ ಮೇಲೆ ಡಾಕ್ಟರ್ ಹೇಳಿದ್ದು. ಅಮೇಜಾನ್‌ನಲ್ಲಿ ಉಣ್ಣೆಯನ್ನು ಆರ್ಡರ್ ಮಾಡಿದ್ದಳು ಸ್ವೆಟರ್ ಹೆಣಿಯಲು. ಇನ್ನು ಏನೇನೊ ಕನಸುಗಳ ಬಗ್ಗೆ ಇಬ್ಬರೂ ಮಾತಾಡಿಕೊಳ್ಳುತ್ತಿದ್ದೆವು. ಹುಟ್ಟಲಿರುವ ಹೆಣ್ಣು ಮಗುವಿಗೆ ಹಳೆಕಾಲದ ಒಂದು ಚಂದದ ಹೆಸರನ್ನೂ ಸೆಲೆಕ್ಟ್ ಮಾಡಿದ್ದೆ. ಅವಳು ಸಾಯುವುದಕ್ಕೂ, ಅಲ್ಲಲ್ಲ, ನನ್ನ ಬಾಯಲ್ಲೂ ಅದೇ ಬರುತ್ತಿದೆ. ಈ ಬೋಳಿ ಮಕ್ಕಳ ಕಾಟದಿಂದ, ಕಾಣೆಯಾದಳಲ್ಲ ಅದಕ್ಕೂ ಎರಡು ದಿನಗಳ ಹಿಂದೆ ಒಂದು ಕತೆ ಹೇಳಿದ್ದಳು. ಈಗಷ್ಟೇ ಹೇಳಿದ ಹಾಗಿದೆ ಆ ಕತೆಯನ್ನ. ಅದೇ ಕತೆಯನ್ನು ಸುಮಾರು ಸಲ ಹೇಳಿದ್ದಾಳೆ. ಪ್ರತಿಬಾರಿಯೂ ಯಾವುದಾದರೂ ಒಂದು ಘಟನೆಯನ್ನು ಸೇರಿಸಿ ಇಂಟರೆಸ್ಟಿಂಗ್ ಟ್ವಿಸ್ಟ್ ಕೊಡುತ್ತಿದ್ದಳು:
ಒಂದು ಪುಟ್ಟ ಊರು. ಊರಿನಲ್ಲಿ ಮರಗಳಿಲ್ಲ. ಯಾಕೆ ಅಂಥ ಕೇಳಿದ್ದಕ್ಕೆ ಮುಂದಿನ ಸಲ ಗೊತ್ತಾಗುತ್ತೆ ಎಂದಳು. ಆದರೆ ಊರಿನ ಹೊರಗಡೆ ಊರನ್ನು ಸುತ್ತುವರೆದುಕೊಂಡು ಮರಗಳಿದ್ದಾವೆ. ಆ ಊರಿನ ಅಂಚಿಗೆ ಒಂದು ಪುಟ್ಟ ಕೊಳ. ಆ ಊರು ಮುಂದೊಂದು ದಿನ ನಾಶ ಆಗಿ ಒಂದು ನರಪಿಳ್ಳೆನೂ ಉಳಿಯುವುದಿಲ್ಲ ಅಂತಾನು ಹೇಳಿದ್ದಳು. ಯಾಕೆ ಅಂತ ಕೇಳಿದ್ದಕ್ಕೆ ಸುಮ್ಮನೆ ಕತೆ ಕೇಳು, ನಾಶಕ್ಕೆ ಕಾರಣ ಕೇಳಬೇಡ ಅಂದಿದ್ದಳು. ಇದನ್ನು ಕೊನೆಯ ಬಾರಿ ಹೇಳಿದ್ದಳಲ್ಲ ಆಗ ಸೇರಿಸಿದ್ದಳು. ಮೊದಲು ಇದು ಇರಲಿಲ್ಲ. ಆ ಕೊಳದಲ್ಲಿ ಒಂದು ಯಾಬ್ಲಿ. ಅದು ದಿನಾ ರಾತ್ರಿ ಕಲ್ಲೂ ನೀರು ಕರುಗೋ ಹೊತ್ತಲ್ಲಿ ಕೊಳದಿಂದ ಹೊರ ಬಂದು ಇಡೀ ಊರನ್ನು ಎರಡು ಸುತ್ತು ತಿರುಗಿ ವಾಪಸ್ಸು ಕೊಳದೊಳಗೆ ಹೋಗಿ ಸೇರಿಕೊಳ್ಳುತ್ತಿತ್ತು. ಒಂದು ದಿನ ಏನಾಯ್ತಂದರೆ ಊರಿನ ಗುಡ್ಡದ ಗುಹೆಯಲ್ಲಿ ವಾಸವಾಗಿದ್ದ ನರಿಗೆ ಇದ್ದಕ್ಕಿದ ಹಾಗೆ ಯಾಕೋ ಹೊಟ್ಟೆ ಹಸಿವಾದಂತಾಗಿ ಸಂಕಟವಾತಂತೆ. ಆಗ ಸಂಕಟ ಪಟ್ಟು ಪಟ್ಟು ನಿದ್ದೆ ಹೋತಂಥೆ. ಅದಕ್ಕೆ ಒಂದು ಕನಸು ಬಿತ್ತಂತೆ ನಿದ್ದೆಯಲ್ಲಿ. ಕನಸಲ್ಲಿ ಒಂದು ಯಾಬ್ಲಿ ಗುಂಡುಕಲ್ಲಿನ ಥರ ನಿಧಾನ ಊರ ಸುತ್ತ ಉರುಳಿಕೊಂಡು ಹೋಗ್ತಿತಂತೆ. ಸಡನ್ನಾಗಿ ಎದ್ದು ಕೂತ್ಕಂತಂಥೆ. ಆಮೇಲೆ ಎಲಎಲ ಯಾಬ್ಲಿ ನನಮಗುಂದೆ ಇಷ್ಟುದಿನ ಗುಂಡುಕಲ್ಲಿನ ಥರ ಉರುಳಿಕೊಂಡು ಹೋಗುತ್ತಿದ್ದುದು ನೀನೇನಾ ಅಂದುಕೊಂಡು ಮರುದಿನ ನರಿ ಊರಿನ ದಿಡ್ಡಿಬಾಗಿಲನ್ನು ದಾಟಿ ಈಶ್ವರನ ಗುಡಿತಾಕೆ ಹೋಗಿ ಯಾಬ್ಲಿ ಬರೋದನ್ನೇ ಹೊಂಚು ಹಾಕಿಕೊಂಡು ಕಾಯ್ತಾ ಕುಂತ್ಕಂತಂಥೆ’.
‘ಅದು ಗಂಡು ಯಾಬ್ಲಿಯಂತೆ!’
‘ಅರೆ ನಿನಗೆ ಹೆಂಗೊತ್ತು ಮತ್ತೆ ದಾರಿ ತಪ್ಪಿಸಬೇಡ, ಕತೆ ಕಟ್ಟಿ, ಆದರೂ ನೀನು ಹೇಳ್ತಿರೋದು ನಿಜನೇ. ಅವಳು ನನಗೆ ಹೇಳಿದ ಕತೆ ನಿನಗೆ ಹೆಂಗೆಗೊತ್ತು?’ ಸರಿ, ಮುಂದಕ್ಕೆ ಏನಾಯ್ತಂದರೆ, ‘ಅದು ದಿನಾ ಊರ್ನ ಉರುಳಿಕೊಂಡು ಸುತ್ತುತ್ತಿದ್ದುದು ತನ್ನ ಜತೆಗಾತಿ ಹೆಣ್ಣು ಯಾಬ್ಲಿನ ಹುಡುಕಿಕೊಂಡು ಅಂತೆ. ಅದು ದೇವರು ಗುಡಿತಕೆ ಬರುತ್ತಿದ್ದಾಗೆನೆ ಅಲ್ಲೆ ಹೊಂಚಾಕಿಕೊಂಡು ಕುತ್ಕಂಡಿತ್ತಲ್ಲ ನರಿ ಛಂಗನೆ ಹಾರಿ ಅದರ ಮುಂದೆ ನಿಂತುಕೊಂಡಿತಂಥೆ. ಯಾಬ್ಲಿಗೆ ಭಯವಾಯಿತಂತೆ. ಆದರೂ ಅದನ್ನು ತೋರಿಸಿಕೊಳ್ಳದೆ, ಈ ನರಿಯಿಂದ ಉಪಾಯದಿಂದ ತಪ್ಪಿಸಿಕೊಳ್ಳುವ ಯೋಚನೆ ಮಾಡಿ, ನರಿಯಣ್ಣ ನರಿಯಣ್ಣ ನನಗೂ ಒಬ್ಬನೇ ಇದ್ದೂ ಇದ್ದೂ ಸಾಕಾಗಿದೆ, ನಾನೇ ಸತ್ತೋಗಬೇಕಂತಿದಿನಿ, ಯಂಗೂ ದೇವರುಗುಡಿ ಹತ್ತಿರದಾಗೆ ಐತೆ, ಗುಡಿಯಾಕೆ ಹೋಗಿ ಲಿಂಗದ ಮುಂದಿನ ಬಸವಣ್ಣನ ಕಿವಿಯ ಹತ್ತಿರ ಹೋಗಿ ಒಂದು ಮಾತು ಕೇಳಿ ಬಾ ಇಲ್ಲಂದರೆ ನನ್ನನ್ನು ಯಾರು ತಿನ್ನುತ್ತಾರೋ ಬಸವಣ್ಣನನ್ನು ಕೇಳದೆ ಅವರಿಗೆ ನನ್ನ ಮೈಯಿ ಅಂಟಿಕೊಳ್ಳುತ್ತಂಥೆ. ನರಿ ಹೆಂಗೂ ಸಾಯತೀನಿ ಅಮ್ತಾ ಹೇಳ್ತಾ ಐತೆ, ಅಲ್ಲದೆ ಅದರ ಮೈಯಿ ನನಗೆ ಅಂಟಿಕೊಂಡರೆ ಎಲ್ಲೆ ಸಹವಾಸ ಅಂಥ ಅಂದುಕೊಂಡು, ನರಿ ಗುಡಿಯೊಳಕೆ ಹೋತಂತೆ ಬಸವಣ್ಣನನ್ನು ಕೇಳುವುದಕ್ಕೆ. ಆಮೇಲೆ ಅವಳು ಕತೆಯನ್ನು ಮುಂದುವರೆಸಲಿಲ್ಲ, ಕೇಳಿದ್ದಕ್ಕೆ ನಾಳಿಕ್ಕೆ ಹೇಳ್ತೀನಿ ಅಂತ ಹೇಳಿದಳು. ನರಿ ಬಂತಾ ಯಾಬ್ಲಿ ತಿನ್ನತಾ, ಬಸವಣ್ಣ ಏನು ಹೇಳಿತು?’
ಇಷ್ಟು ಹೊತ್ತು ಸುಮ್ಮನೆ ಇದ್ದ ಅಲ್ಲಮ ‘ಈ ಕತೆ ನನಗೂ ಗೊತ್ತು. ನಾನು ಹುಡುಕಿಕೊಂಡು ಬಂದಿದಿನಲ್ಲ ಅವಳೇ ಇದನ್ನು ನನಗೆ ಹೇಳಿದ್ದು. ಮುಂದೇನಾಯ್ತು ಗೊತ್ತಾ? ಅಲ್ಲಅಲ್ಲ ಮುಂದೇನಾಗುತ್ತೆ ಗೊತ್ತಾ?’ ಅಂದ.
‘ಅದನ್ನು ಹೇಳಿದ್ದಳಾ ಅವಳು!?’
ಆಗ ನಾಯಿ ಬಾಲವನ್ನು ಮೇಲಕ್ಕೆ ಎತ್ತಿ, ಆ ಕಡೆ ಈಕಡೆ ಅಲ್ಲಾಡಿಸಿಕೊಂಡು ಒಂದು ಕ್ಷಣ ಮೇಲಕ್ಕೆ ಹಾರಿ ಕುಣಿಯತೊಡಗಿತು. ಮುಂದಿನದನ್ನು ಕೇಳಿ ರಪ್ಪಂಥ ಕೆಳಕ್ಕೆ ಬಿದ್ದು ತನ್ನ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ನಡುವೆ ತನ್ನ ತಲೆಯನ್ನು ಇಟ್ಟು ಪಿಳಿಪಿಳಿ ಕಣ್ಣು ಬಿಡುತ್ತ ಹಿಂಗಾಲುಗಳ ನಡುವೆ ಬಾಲವನ್ನು ಅವಿಸಿಟ್ಟುಕೊಂಡು ಇವರನ್ನು ನೋಡುತ್ತಿತ್ತು.
‘ನರಿ ಗುಡಿಯೊಳಗಡೆ ಹೋತಂತೆ. ಅಲ್ಲೆ ಬಸವಣ್ಣನೇ ಇರಲಿಲ್ಲವಂತೆ. ಅದರ ಮುಂದೆ ಲಿಂಗಾನೇ ಇರಲಿಲ್ಲವಂತೆ. ಲಿಂಗದ ಕೆಳಗೆ ಯೋನೀನೇ ಇರಲಿಲ್ಲವಂತೆ’.
ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.