ವೃದ್ದರಾದಿರಿ ಹೇಗೆ
ನೀವು ಸದ್ದಿಲ್ಲದೆ?

ಹೇಳಿ,
ಜವಾಬ್ದಾರಿಗಳನ್ನು ನಮ್ಮ
ಹೆಗಲಿಗೇರಿಸಿ
ವೃದ್ಧರಾದಿರಿ ಹೇಗೆ
ನೀವು ಸದ್ದಿಲ್ಲದೆ?

ನಿಮ್ಮ ಸುಕ್ಕುಗಟ್ಟಿದ ಮುಖ
ಬೆಳ್ಳಿಕೂದಲು, ತೀರದ ಕಾಲನೋವು
ಮರೆಯದೇ ನುಂಗುವ ಟ್ಯಾಬ್ಲೆಟು,
ಮನೆ ಈಗ ದವಾಖಾನೆ.

ಅಜೇಯನಂತಿದ್ದ ಅಪ್ಪ
ನನಗೀಗ ವಯಸ್ಸಾಯಿತಪ್ಪ
ಅಂದರೆ, ನಾವು ಸೋತಂತಲ್ಲ,
ಸತ್ತಂತಾಗುತ್ತದೆ.

ವೃದ್ಧರಿಗೆ ನಿದ್ದೆ ಬರದೆಂದು
ನೀವು ಕತ್ತಲಲಿ ತಾರಸಿ
ನೋಡುತ್ತ ಮಲಗಿದ್ದರೆ,
ನಮ್ಮ ಕನಸುಗಳೆಲ್ಲ ಅದೇ
ಕತ್ತಲಲ್ಲಿ ಕರಗಿ ಹೋಗುತ್ತವೆ.

ನಡುರಾತ್ರಿ ದಿಗ್ಗನೆದ್ದು
ಮೊಬೈಲು ತೆಗೆದರೆ
ಗೆಳೆಯನ ತಂದೆಗೆ
ಹೃದಯಾಘಾತವಾದ ಸುದ್ದಿ.

ನೀವು ಕೈ ಹಿಡಿದು
ಸುತ್ತಾಡಿಸಿದ ಪೇಟೆ ಬೀದಿಯಲ್ಲಿ
ಈಗ ಕೊಳ್ಳಲು ನಿಂತರೆ
ಜೇಬೆಲ್ಲ ಖಾಲಿ, ಅದರ ಹಿಂದೆಯೇ
ಪರ್ಸು ಜಾಗ್ರತೆ ಎಂಬ
ಎಚ್ಚರಿಕೆಯ ದನಿ.

ಮರಳಿ
ಮರಮರಳಿ ಬಯಸುತ್ತಿದೆ ಮನಸು
ಆ ಕಿರುಬೆರಳ ಸಾಂಗತ್ಯ,
ಕೈತುತ್ತಿನ ರುಚಿ, ಚಂದಮಾಮನ ಕತೆ
ಸುಂದರ ಹೆಗಲ ಸವಾರಿ.

ಹೇಳಿ, ನೀವೇ ಹೇಳಿ
ವೃದ್ಧರಾದಿರಿ ಹೇಗೆ
ನೀವು ಸದ್ದಿಲ್ಲದೆ,
ವಯಸ್ಸಾಯಿತು ಹೇಗೆ
ನಮಗೆ ಗೊತ್ತಿಲ್ಲದೆ.

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.