ಗಂಡನನ್ನು ಕಳೆದುಕೊಂಡಿದ್ದ ಒಬ್ಬ ಬಡ ಹೆಂಗಸು ತನ್ನ ಐವರು ಮಕ್ಕಳೊಂದಿಗೆ ಒಂದು ದೊಡ್ಡ ಅಣೆಕಟ್ಟಿನ ಕೆಳಗಿನ ನೀರಾವರಿ ಕಾಲುವೆಯೊಂದರ ಪಕ್ಕದಲ್ಲಿ ವಾಸವಾಗಿದ್ದಳು. ಕಾಲುವೆಯ ನೀರಿನಿಂದ ಅವಳು ತನ್ನ ಸಂಸಾರಕ್ಕೆ ಸಾಕೂಸಾಲದಷ್ಟು ಬೆಳೆ ತೆಗೆದು ಜೀವಿಸುತ್ತಿದ್ದಳು. ಹೀಗಿರುವಲ್ಲಿ ಅಲ್ಲಿಗೊಬ್ಬ ಹೊಸ ಅಧಿಕಾರಿ ಬಂದ. ಜನರ ಬಗ್ಗೆ ಅವನಿಗೆ ಏನೇನೂ ದಯೆದಾಕ್ಷಿಣ್ಯಗಳಿರಲಿಲ್ಲ. ನಿರಂಕುಶವಾಗಿ ತನ್ನ ಅಧಿಕಾರ ಚಲಾಯಿಸುತ್ತ ಎಲ್ಲರನ್ನೂ ಶೋಷಿಸಲು ಮೊದಲಿಟ್ಟ. ಆ ಬಡ ಹೆಂಗಸು ಮೊದಲಿಂದಲೂ ನೀರು ತೆಗೆದುಕೊಳ್ಳುತ್ತಿದ್ದ ಕಾಲುವೆಗೆ ಒಂದು ತಡೆಗಟ್ಟು ಒಡ್ಡಿ ಅವಳಿಗೂ, ಅವಳಂತೆ ಇತರ ಅನೇಕರಿಗೂ ನೀರು ಸಿಗದಂತೆ ಮಾಡಿದ. ಅವಳ ಹಿರಿಯ ಮಗನಿಗೆ ಈ ಸರ್ವಾಧಿಕಾರಿ ಮಾಡಿದ ಕೆಲಸ ತುಂಬಾ ಅನ್ಯಾಯ ಎನಿಸಿ, ಆ ತಡೆಗಟ್ಟನ್ನು ತೆಗೆದುಹಾಕಲು ಅನೇಕ ಸಲ ಪ್ರಯತ್ನಿಸಿದ. ಆದರೆ ಅವನಿನ್ನೂ ಯುವಕ. ಅವನೊಬ್ಬನಿಗೇ ಆ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಅವನ ತಮ್ಮಂದಿರಂತೂ ಇನ್ನೂ ಕೇವಲ ಬಾಲಕರು. ಅಷ್ಟೇ ಅಲ್ಲದೆ, ಈ ಸರ್ವಾಧಿಕಾರಿ ತುಂಬ ಪ್ರಬಲ ವ್ಯಕ್ತಿ. ತಾನು ಏನು ಮಾಡಿದರೂ ಅದಕ್ಕೆ ಪ್ರತಿಯಾಗಿ ಈ ಸರ್ವಾಧಿಕಾರಿ ಬೇರೊಂದು ಮಾಡಬಲ್ಲ, ಆದ್ದರಿಂದ ತನ್ನ ಕೆಲಸವೆಲ್ಲ ಬರೀ ವ್ಯರ್ಥ ಸಾಹಸವಾದೀತೇನೋ ಎಂದು ಯೋಚಿಸಿ ಯುವಕ ತನ್ನ ಅಸಹಾಯಕತೆಯ ಬಗ್ಗೆ ನಿರಾಸೆಗೊಂಡಿದ್ದ.
ಒಂದು ದಿನ ಆ ಹಿರಿಯ ಮಗನಿಗೆ ಅವನ ತಂದೆ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ಅಪ್ತವಾಗಿ ನಾಲ್ಕು ಬುದ್ಧಿ ಮಾತು ಹೇಳಿದಂತೆ ಭಾಸವಾಯಿತು. ಅದರಿಂದ ಅವನ ಕಂಗಾಲಾಗಿದ್ದ ಮನಸ್ಸಿಗೆ ಮತ್ತೆ ಭರವಸೆ ಮೂಡಿತು, ಎಷ್ಟೋ ನೆಮ್ಮದಿ, ಧೈರ್ಯ ಬಂತು. ಇತ್ತ ಆ ಸರ್ವಾಧಿಕಾರಿ ಈ ಯುವಕನ ಕೆಚ್ಚು, ಸ್ವತಂತ್ರ ಮನೋಭಾವ ನೋಡಿ ಸಹಿಸದೆ ಅವನೊಬ್ಬ ಸಮಾಜಕಂಟಕ ಎಂದು ಅವನ ಮೇಲೆ ಸಲ್ಲದ ಆರೋಪ ಹೊರಿಸಿ ಜನರನ್ನು ಅವನ ಮೇಲೆ ಎತ್ತಿಕಟ್ಟಿದ.
ಹೀಗಾದಮೇಲೆ, ಯುವಕ ತಾನಿನ್ನು ಅಲ್ಲೇ ಇರುವುದು ಸರಿಯಲ್ಲ ಎಂದು ಯೋಚಿಸಿ ಆ ಊರು ಬಿಟ್ಟು ಮತ್ತೊಂದು ಊರಿಗೆ ಹೋದ. ಹೋಗಿ ಅಲ್ಲೊಬ್ಬ ವರ್ತಕನ ಸಹಾಯಕನಾಗಿ ಹಲವಾರು ವರ್ಷ ಕೆಲಸ ಮಾಡಿದ. ಅಲ್ಲಿಂದ ತನ್ನ ಊರ ಕಡೆಗೆ ಹೋಗುತ್ತಿದ್ದ ವ್ಯಾಪಾರಿಗಳ ಮೂಲಕ ತನ್ನ ಮನೆಯವರಿಗೆ ಸಾಧ್ಯವಾದಷ್ಟು ಹಣ ಕಳಿಸುತ್ತಿದ್ದ. ಆದರೆ ಯುವಕನಿಗೆ ಈ ವರ್ತಕರ ಹಂಗಿಗೆ ಒಳಗಾಗುವುದು ಇಷ್ಟವಿರಲಿಲ್ಲ. ಅಲ್ಲದೆ, ತಾನು ಆ ಸರ್ವಾಧಿಕಾರಿಯ ಅವಕೃಪೆಗೆ ಒಳಗಾಗಿದ್ದುದರಿಂದ ತನ್ನಂಥವನ ಮನೆಯವರೊಂದಿಗೆ ಈ ವರ್ತಕರು ಹಣದ ವ್ಯವಹಾರ ಇಟ್ಟುಕೊಂಡಿರುವರೆಂದು ಅವನಿಗೆ ತಿಳಿದರೆ ಮುಂದೆ ಆ ವರ್ತಕರಿಗೇ ಕಷ್ಟವಾಗಬಹುದು ಎಂದು ಯೋಚಿಸಿ ಯುವಕ ಅವರಿಗೆ ಒಂದು ವಿಶೇಷ ಸೂಚನೆ ಕೊಟ್ಟಿದ್ದ: ನೀವು ನನ್ನ ತಮ್ಮಂದಿರಿಗೆ ನೇರವಾಗಿ ನಾನು ಕಳಿಸಿದ ಹಣ ತಲುಪಿಸಬೇಡಿ, ಅವರಿಂದ ನೆಪಕ್ಕೆ ಏನಾದರೂ ಸಣ್ಣ ಪುಟ್ಟ ಕೆಲಸ ಮಾಡಿಸಿಕೊಂಡು ಅದಕ್ಕೆ ಪ್ರತಿಫಲ ರೂಪದಲ್ಲಿ ಈ ಹಣ ಕೊಡಿ – ಎಂದು.
ಹೀಗೆ ಹಲವಾರು ವರ್ಷ ಕಳೆದಮೇಲೆ, ಹಿರಿಯ ಮಗ ಮತ್ತೆ ತನ್ನೂರಿಗೆ ಮರಳುವ ಸಂದರ್ಭ ಒದಗಿ ಬಂತು. ಊರಿಗೆ ಮರಳಿದ ಹಿರಿಮಗ ತನ್ನ ಹಳೆಯ ಮನೆಗೆ ಬಂದರೆ ಅವನ ತಮ್ಮಂದಿರ ಪೈಕಿ ಒಬ್ಬನೇ ಒಬ್ಬನಿಗೆ ಅವನ ಗುರ್ತು ಹತ್ತಿತು – ಅದೂ ಮಸಕುಮಸಕಾಗಿ. ಹಿರಿಯವನಿಗೆ ಅಷ್ಟು ವಯಸ್ಸಾಗಿಹೋಗಿತ್ತು.
‘ನಮ್ಮ ಅಣ್ಣನಿಗೆ ಕರಿಯ ಕೂದಲಿತ್ತಲ್ಲ’ ಎಂದ ತಮ್ಮ.
‘ಹೌದಪ್ಪ, ಈಗ ನನಗೆ ವಯಸ್ಸಾಗಿದೆ’ ಅಂದ ಅಣ್ಣ.
‘ನಾವು ವ್ಯಾಪಾರಿಗಳೇ ಅಲ್ಲ. ಇವನ ವೇಷಭೂಷ ನೋಡು, ಇವನ ಮಾತು ಕೇಳು. ಇವನು ನಮ್ಮವನಾಗಲು ಹೇಗೆ ಸಾಧ್ಯ?’ ಅಂದ ಇನ್ನೊಬ್ಬ ತಮ್ಮ.
ಅಣ್ಣ ಅದಕ್ಕೆ ತಕ್ಕ ಕಾರಣಗಳನ್ನು ಕೊಟ್ಟ, ಅದರೆ ಆ ಕಿರಿಯರಿಗೆ ಅವನ ಮಾತಿನಲ್ಲಿ ವಿಶ್ವಾಸ ಹುಟ್ಟಲಿಲ್ಲ.
‘ನಿಮ್ಮನ್ನೆಲ್ಲ ಚಿಕ್ಕಂದಿನಲ್ಲಿ ಎತ್ತಿ ಆಡಿಸಿ, ನೋಡಿಕೊಂಡವನಲ್ಲವೆ ನಾನು? ನಿಮಗೆ ನೆನಪಿದೆಯೆ – ಆ ಅಣೆಕಟ್ಟಿನ ತೂಬಿನ ಮೂಲಕ ನೀರು ರಭಸವಾಗಿ ಹರಿಯುವುದನ್ನು ನೋಡಲು ನೀವೆಲ್ಲರೂ ಎಷ್ಟು ಕಾತುರಪಡುತಿದ್ದಿರಿ?’
‘ಅದೇನೂ ನಮಗೆ ಜ್ಞಾಪಕವೇ ಇಲ್ಲವಲ್ಲ!’ ಎಂದರು ತಮ್ಮಂದಿರು. ಅಣೆಕಟ್ಟಿನ ಸದ್ಯದ ಸ್ಥಿತಿ ಅದರ ಹಿಂದಿನ ಸ್ಥಿತಿಗಿಂತ ತುಂಬ ಬೇರೆಯಾಗಿದೆ ಎಂಬುದು ಅವರ ಗಮನಕ್ಕೇ ಬಂದಿರಲಿಲ್ಲ.
ಅಣ್ಣ ಮುಂದುವರೆದ: ‘ನಾನು ಪದೇಪದೇ ನಿಮಗೆ ಬಳುವಳಿಯಾಗಿ ಹಣ ಕಳಿಸುತ್ತಿದ್ದೆ. ಈ ಕಾಲುವೆಯಲ್ಲಿ ನೀರು ಬತ್ತಿಹೋದಾಗಿನಿಂದ ನೀವೆಲ್ಲ ನಾನು ಕಳಿಸಿದ ಹಣದಿಂದಲೇ ಅಲ್ಲವೇ ಜೀವನ ನಡೆಸಿರುವುದು?’
‘ನಮಗೆ ಯಾವ ಬಳುವಳಿ ಬಂದಿರುವುದೂ ಗೊತ್ತಿಲ್ಲ. ನಾವೆಲ್ಲರೂ ಇಲ್ಲಿ ಬರುತ್ತಿದ್ದ ವರ್ತಕರಿಗೆ ಅದೂ ಇದೂ ಕೆಲಸಗಳನ್ನು ಮಾಡಿಕೊಟ್ಟು ನಮ್ಮ ಹಣ ನಾವೇ ಸ್ವತಃ ಗಳಿಸಿಕೊಂಡೆವು’ ಎಂದರು ತಮ್ಮಂದಿರು.
‘ಹೋಗಲಿ, ನಮ್ಮ ತಾಯಿ ಹೇಗಿದ್ದಳು ಹೇಳು’ ಎಂದರು ಅವರು ಹಿರಿಯಣ್ಣನನ್ನು ಇನ್ನೂ ಪರೀಕ್ಷಿಸುವ ಸಲುವಾಗಿ.
ಅದರೆ ಆ ತಾಯಿ ಸತ್ತು ಎಷ್ಟೋ ವರ್ಷಗಳಾಗಿಹೋಗಿತ್ತು. ಅವಳ ನೆನಪೂ ಅವರಲ್ಲಿ ಮಸುಕಾಗತೊಡಗಿತ್ತು. ಹೀಗಾಗಿ ಹಿರಿಯವನು ಹೇಳಿದ ಎಲ್ಲ ಮಾತಿಗೂ ಅವನ ತಮ್ಮಂದಿರು ಒಂದಲ್ಲ ಒಂದು ಆಕ್ಷೇಪ ಎತ್ತಿದರು. ಕೊನೆಗೆ ಅವರು,
‘ಹೋಗಲಿ, ನೀನು ನಿಜವಾಗಿ ನಮ್ಮ ಅಣ್ಣನೇ ಆಗಿದ್ದರೂ, ನೀನು ಈಗ ನಮಗೆ ಏನು ಹೇಳಲು ಬಂದಿದ್ದೀಯೆ?’ ಎಂದರು.
ಆಗ ಅಣ್ಣ ಹೇಳಿದ:
‘ನೋಡಿ, ನಮ್ಮನ್ನೆಲ್ಲ ಪೀಡಿಸುತ್ತಿದ್ದ ಆ ದುಷ್ಟ ಸರ್ವಾಧಿಕಾರಿ ಈಗ ಸತ್ತಿದ್ದಾನೆ. ಅವನಿಗೆ ಬೆಂಬಲವಾಗಿದ್ದವರೆಲ್ಲ ಈಗ ಇತರ ಅಧಿಕಾರಿಗಳ ಊಳಿಗದಲ್ಲಿದ್ದಾರೆ. ಈ ಭೂಮಿ ಮೊದಲು ಎಷ್ಟು ಹಸಿರಾಗಿತ್ತು, ಎಷ್ಟು ಸಂತಸದ ಗೆಲುವಿನಿಂದ ನಲಿದಾಡುತ್ತಿತ್ತು, ಅದನ್ನು ಮತ್ತೆ ಆ ಸ್ಥಿತಿಗೆ ತರಲು ಇದೀಗ ಸರಿಯಾದ ಸಮಯ, ಇದನ್ನು ಕೈಬಿಡಬಾರದು.’
‘ನನಗೆ ಇಲ್ಲಿ ಯಾರೂ ನಮ್ಮನ್ನು ಪೀಡಿಸಿದ ಅಧಿಕಾರಿ ಇದ್ದುದೇ ಜ್ಞಾಪಕವಿಲ್ಲವಲ್ಲ?’ ಅಂದ ಮೊದಲ ತಮ್ಮ.
‘ಈ ಭೂಮಿ ಯಾವಾಗಲೂ ಹೀಗೆ ಇದ್ದದ್ದೇ…’ ಅಂದ ಎರಡನೆಯ ತಮ್ಮ.
‘ಸರಿ, ನೀನು ಹೇಳಿದೆ ಅಂತ ನಾವು ನಿನ್ನ ಮಾತು ಯಾಕೆ ಕೇಳಬೇಕು?’ ಅಂದ ಮೂರನೆಯವ.
‘ನನಗೇನೋ ನಿನಗೆ ಸಹಾಯ ಮಾಡೋಣ ಅಂತ ಇಷ್ಟವೇ, ಅದರೆ ನೀನು ಹೇಳುವ ಮಾತೇ ನನಗೆ ಅರ್ಥವಾಗದಲ್ಲ?’ ಅಂದ ನಾಲ್ಕನೆಯವ.
ಆಗ ಮತ್ತೆ ಮೊದಲನೆಯ ತಮ್ಮ ಅಂದ: ‘ನಮಗೆ ಈ ನೀರು ತಾನೆ ಯಾಕೆ ಬೇಕು? ಇಲ್ಲಿ ಒಣಗಿ ನಿಂತಿರುವ ಕುರುಚಲು ಗಿಡಗಳನ್ನೆಲ್ಲ ಒಟ್ಟಾಯಿಸಿಕೊಂಡು ಹೋಗಿ ಬೆಂಕಿ ಹಾಕುತ್ತೇನೆ. ಆ ಕಡೆ ಹೋಗುವ ವರ್ತಕರೆಲ್ಲ ಬೆಂಕಿಯ ಹತ್ತಿರ ಸ್ವಲ್ಪ ಹೊತ್ತು ಬಂದು ಕುಳಿತಿರುತ್ತಾರೆ. ಅವರಿಗೆ ಬೇಕಾದ ಅದೂ ಇದೂ ಕೆಲಸ ಮಾಡಿಕೊಟ್ಟರೆ, ನನಗೆ ಒಂದಷ್ಟು ದುಡ್ಡು ಕೊಡುತ್ತಾರೆ.’
ಆಗ ಎರಡನೆಯವನೆಂದ: ‘ಇಲ್ಲಿ ಮತ್ತೆ ನೀರು ಬಿಟ್ಟರೆ, ನನ್ನ ಪುಟ್ಟ ಕೊಳ ನೀರಲ್ಲಿ ಮುಳುಗಿಹೋಗುತ್ತದೆ. ಅದರಲ್ಲೇ ನಾನು ನನ್ನ ಸುಂದರವಾದ ಸಿಹಿನೀರಿನ ಮೀನುಗಳನ್ನು ಬೆಳೆಸುತ್ತಿರುವುದು. ಎಷ್ಟೋ ಜನ ನನ್ನ ಮೀನುಗಳನ್ನು ನೋಡುವುದಕ್ಕೇ ಬರುತ್ತಾರೆ. ನೋಡಿ ಸಂತೋಷಪಟ್ಟು ನನ್ನ ಕೈಲಿ ನಾಲ್ಕು ಕಾಸು ಹಾಕುತ್ತಾರೆ.’
ಮೂರನೆಯವನು, ‘ನನಗೇನೋ ನೀರು ಬೇಕು, ಆದರೆ ಅದು ಈ ನೆಲವನ್ನು ಹಿಂದಿನ ಸ್ಥಿಗೆ ತರಬಲ್ಲದೆ ಎಂದು ನನಗೆ ಸಂದೇಹ’ ಎಂದ.
ಕಡೆಯ ತಮ್ಮ ಏನೂ ಹೇಳಲಿಲ್ಲ.
‘ಬನ್ನಿ, ಕೆಲಸದಲ್ಲಿ ತೊಡಗೋಣ’ ಅಂದ ಹಿರಿಯಣ್ಣ.
‘ಇಲ್ಲ ತಾಳು, ಆ ವರ್ತಕರು ಇತ್ತಕಡೆ ಬರುತ್ತಿದ್ದಾರೆಯೆ ಮೊದಲು ನೋಡೋಣ’ ಎಂದರು ಎಲ್ಲ ತಮ್ಮಂದಿರೂ.
‘ಅವರಿನ್ನು ಖಂಡಿತ ಬರುವುದಿಲ್ಲ, ಅವರನ್ನು ನಿಮ್ಮಲ್ಲಿಗೆ ಕಳಿಸುತ್ತಿದ್ದವನು ನಾನೇ ಅಲ್ಲವೇ?’ ಅಂದ ಅಣ್ಣ.
ಆಗ ಆ ತಮ್ಮಂದಿರಲ್ಲಿ ಮಾತು ಬೆಳೆಯಿತು. ಅಣ್ಣ ಹೇಳಿದ್ದನ್ನು ಕುರಿತು ಚರ್ಚಿಸಿದರು, ಮತ್ತಷ್ಟು ಚರ್ಚಿಸಿದರು, ಕೊನೆಮೊದಲಿಲ್ಲದಂತೆ ಚರ್ಚಿಸಿದರು… ವರ್ತಕರು ಯಾರೂ ಆ ಕಡೆ ಸುಳಿಯಲಿಲ್ಲ, ಅವರು ಬಳಸುತ್ತಿದ್ದ ದಾರಿಗಳೆಲ್ಲ ಹಿಮದಿಂದ ಮುಚ್ಚಿಹೋಗಿ ಪ್ರಯಾಣಕ್ಕೆ ಅಸಾಧ್ಯವಾಗಿತ್ತು.
ಆ ಹಿಮವೆಲ್ಲ ಕರಗಿ ಮುಂದಿನ ವರ್ಷ ದಾರಿಗಳು ಓಡಾಡಲು ಅನುಕೂಲವಾಗುವ ವೇಳೆಗೆ ಆ ಪ್ರದೇಶಕ್ಕೆ ಮತ್ತೊಬ್ಬ ಸರ್ವಾಧಿಕಾರಿ ಬಂದ. ಅವನಂತೂ ಅ ಹಿಂದಿನವನಿಗಿಂತ ದುಷ್ಟ. ತಾನು ಯಾವಯಾವ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಒಳಗೇ ಹೊಂಚುಹಾಕುತ್ತಿದ್ದ. ಆದರೆ ಹೊರಗೆ ಮಾತ್ರ, ಯಾರೂ ಬಳಸದೆ, ಬೇಸಾಯ ಮಾಡದೆ ಕೈಬಿಟ್ಟಿರುವ ಪ್ರದೇಶಗಳನ್ನು ಮಾತ್ರ ತಾನು ತೆಗೆದುಕೊಳ್ಳುತ್ತೇನೆ ಅಂದ. ಅಲ್ಲಿನ ಅಣೆಕಟ್ಟು, ಯಾರೂ ಅದನ್ನು ಬಳಸದೇ ಬಿಟ್ಟಿದ್ದ ದುಃಸ್ಥಿತಿಯನ್ನು ಕಂಡು ಅವನ ದುರಾಸೆ ಮಿತಿಯಿಲ್ಲದೆ ಬೆಳೆಯಿತು. ಅವನು ಆ ಅಣೆಕಟ್ಟು, ಅದರ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಆಕ್ರಮಿಸಿಕೊಂಡ. ಅಲ್ಲದೆ, ಗಟ್ಟಿಮುಟ್ಟಾಗಿದ್ದ ಈ ಸಹೋದರರನ್ನು ಬಂಧಿಸಿ ಅವರನ್ನು ತನ್ನ ಜೀತದಾಳುಗಳನ್ನಾಗಿ ಮಾಡಿಕೊಳ್ಳಬೇಕೆಂದೂ ಹವಣಿಸಿದ.
ಆದರೆ ಈ ಮಧ್ಯೆ ತಮ್ಮಂದಿರಲ್ಲಿ ಚರ್ಚೆ ಮಾತ್ರ ಇನ್ನೂ ನಡೆಯುತ್ತಲೇ ಇದೆ, ಅದೇನು ಸದ್ಯದಲ್ಲಿ ಮುಗಿಯುವಂತೆ ಕಾಣುತ್ತಿಲ್ಲ. ಇನ್ನು ಈ ಹೊಸ ಸರ್ವಾಧಿಕಾರಿಗೆ ಏನು ತಡೆ?
(ಸೂಫಿ ಸಂತ ಅಬು ಅಲಿ ಮಹಮ್ಮದ ಸಾವಿರ ವರ್ಷಕ್ಕೂ ಹಿಂದೆ ಹೇಳಿದ ಕತೆ ಇದು.)
ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹಿರಿಯ ಲೇಖಕರು.‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರು.