ಮನೆಗೆ ಬರಬೇಕಾದರೆ ಮತ್ತೊಂದು ಯೋಚನೆ ತಲೆ ಕೆಡಿಸಿತು. ಸೈಟ್ ಮಧ್ಯ ಮಾರ್ಕ್ ಮಾಡ್ತಾ ಇದಾನೆ. ಮಧ್ಯದಿಂದ ಯಾರಾದರೂ ಮಾರ್ಕ್ ಮಾಡ್ತಾರಾ? ನಾನು ದಾಖಲು ಮಾಡ್ತಿರೋ ಈ ಪ್ರಸಂಗ ನಾಲ್ಕೂ ಕಾಲು ದಶಕದ ಹಿಂದೆ. ಅಂದರೆ ಆಗಿನ್ನೂ ಮೊಬೈಲ್ ಫೋನು, ಲ್ಯಾಂಡ್ ಲೈನ್ ಫೋನು ಇವೆಲ್ಲಾ ಇರದಿದ್ದ ಕಾಲ. ಏನಾದರೂ ಸಮಸ್ಯೆ, ಅದಕ್ಕೆ ಪರಿಹಾರ ಬೇಕು ಅಂದರೆ ಒಂದು ಮುಖಾಮುಖಿ ಮಾತು, ಇಲ್ಲ ಅಂದರೆ ಪೋಸ್ಟ್ ಮೂಲಕ ಕಾರ್ಡು ಅಥವಾ ಇನ್ ಲ್ಯಾಂಡ್ ಲೆಟರ್, ಇಲ್ಲಾ ಕಾಗದದಲ್ಲಿ ಬರೆದು ಅದನ್ನ ಕವರ್‌ನಲ್ಲಿ ಇಟ್ಟು ಪೋಸ್ಟ್ ಡಬ್ಬಕ್ಕೆ ಹಾಕಿ ಉತ್ತರಕ್ಕೆ ಕಾಯೋದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ನಾಲ್ಕನೆಯ ಕಂತು
ಹಿಂದಿನ ಸಂಚಿಕೆಗೆ ಹೀಗೆ ಅಂತ್ಯ ಹಾಡಿದ್ದೆ…
ಮನೆ ಕಟ್ಟಲು ಮೊದಲ ಹಂತವಾಗಿ ಮಾಡುವ ಈ ಪೂಜೆಗೆ ಗುದ್ದಲಿ ಪೂಜೆ ಎಂದು ಕೆಳಮಧ್ಯಮ ವರ್ಗದವರು, ಶಂಕು ಸ್ಥಾಪನೆ ಅಂತ ಉಪ್ಪರ್ ಮಧ್ಯಮ ವರ್ಗದವರು ಲೆಯಿಂಗ್ ಫೌಂಡೇಶನ್ ಸ್ಟೋನ್ ಅಂತ ಮೇಲ್ವರ್ಗದ ಜನ ಹೇಳುತ್ತಾರಂತೆ, ಈಗ ಅದರ ವಿಷಯ ಬೇಡಿ. ನನ್ನಾಕೆ ಮಾಡಿದ್ದ ಸ್ವೀಟ್ ಫೈವ್ ಕಪ್ಸ್ ಅಂತಲೋ ಸೆವೆನ್ ಕಪ್ಸ್ ಅಂತಲೋ ಹೆಸರಿಂದು. ಆಗ ತಾನೇ ತುಂಬಾ ಪಾಪ್ಯುಲರ್ ಆಗುತ್ತಿದ್ದ ಸ್ವೀಟ್ ಅದು. ಆಗಿನ್ನೂ ಬೆಂಗಳೂರು ಡೈರಿಯ ಯಾವ ಸ್ವೀಟೂ ಹುಟ್ಟಿರಲಿಲ್ಲ. ಆಗಿನ ಪಾಪ್ಯುಲರ್ ಸ್ವೀಟ್ಸ್ ಅಂದರೆ ಮೈಸೂರ್ ಪಾಕ್, ಜಾಮೂನು, ಜಿಲೇಬಿ ಜಾಂಘಿರ್.. ಇಂತಹವು. ಮಧ್ಯಮ ವರ್ಗದ ಮನೆಗಳಿಗೆ ಅಂಗಡಿಯಿಂದ ಮನೆ ಹಿರಿಯ ಒಯ್ಯುತ್ತಿದ್ದ ಸ್ವೀಟ್ ಎಂದರೆ ಮೈಸೂರ್ ಪಾಕ್ ಮತ್ತು ಅದರೊಂದಿಗೆ ಖಾರಾ ಸೇವೆ.. ಮಿಕ್ಸ್ಚರು!
ಈ ಫೈವ್ ಕಪ್ಸ್ ಅಥವಾ ಸೆವೆನ್ ಕಪ್ಸ್ ಅಂದರೆ ಐದು ಅಥವಾ ಏಳು ಬೇರೆ ಬೇರೆ ಇಂಗ್ರೀಡಿಯಂಟ್ಸ್ ಹಾಕಿ ತಯಾರಿಸುವ ಒಂದು ಸಿಹಿ. ಅದನ್ನು ಮೈಸೂರ್ ಪಾಕ್ ರೀತಿ ಬಿಲ್ಲೆ ಮಾಡಿ ಇಡುತ್ತಿದ್ದರು. ಚಚ್ಚೌಕ ಅಥವಾ ರೆಕ್ಟ್ಯಾಂಗಲ್ ಶೇಪು…!
ಮುಂದೆ ಯಾವಾಗಲಾದರೂ ಸೆವೆನ್ ಕಪ್ ಬಗ್ಗೆ ವಿವರವಾಗಿ ತಿಳಿಸುತ್ತೇನೆ. ಮತ್ತೆ ಮನೆ ಕತೆಗೆ ನಿಮ್ಮನ್ನು ಕರೆದೊಯ್ಯಬೇಕು ಮತ್ತು ಎಷ್ಟೊಂದು ವಿಷಯ ತಿಳಿಸಬೇಕು ಅಂದರೆ ಒಂದರ ಹಿಂದೆ ಮತ್ತೊಂದು ನೆನಪುಗಳು ಲಾರಿ ಲಾರಿ ಲೋಡೂ ತಲೆ ತುಂಬುತ್ತಿವೆ. ಅವನ್ನೆಲ್ಲಾ ಇಳಿಸಿಕೊಂಡು ತಮ್ಮ ಮುಂದೆ ಒಂದೊಂದಾಗಿ ಹರವುತ್ತೇನೆ, ಕೊಂಚ ತಡೆಯಿರಿ….
ಈಗ ಮುಂದಕ್ಕೆ

(ಸತ್ಯಣ್ಣ)
(ಈ ಸರಣಿಗಳಲ್ಲಿ ಉಲ್ಲೇಖಿಸಿದ ನನ್ನ ಗೆಳೆಯ ಶ್ರೀ ಸತ್ಯಣ್ಣ, ಕೋಟಾ ಸತ್ಯನಾರಾಯಣ ಅವರು ಫೆಬ್ರವರಿ ೬, ೨೦೨೫ರಂದು ದೇವರ ಪಾದ ಸೇರಿದರು. ಮನೆ ನಿರ್ಮಾಣ ಮತ್ತು ಇತರ ಸುಮಾರು ದೈನಂದಿನ ಕಾರ್ಯಗಳಲ್ಲಿ ಐವರು ನನಗೆ ಗೈಡ್ ಆಗಿದ್ದವರು. ಅವರಿಗೆ ಈ ಸರಣಿಗಳ ಕೆಲವು ಭಾಗ ಓದಿ ಹೇಳಬೇಕೆಂಬ ನನ್ನ ಆಸೆ ಹಾಗೇ ಉಳಿದುಬಿಟ್ಟಿತು. ಅವರ ಒಂದು ಚಿತ್ರ ಪಕ್ಕದಲ್ಲಿದೆ)
ಫೈವ್ ಕಪ್ಸ್ ಮತ್ತು ಸೆವೆನ್ ಕಪ್ಸ್ ಬಗ್ಗೆ ವಿವರಣೆ ಕೊಡುತ್ತೇನೆ ಅಂತ ಹೇಳಿದ್ದೆ ತಾನೇ? ಈಗೊಂದು ಎರಡು ತಿಂಗಳಿಂದ ನನ್ನ ಚಟಕ್ಕೆ ಹೊಸದಾಗಿ ಸೇರಿದ್ದು AI ಎನ್ನುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹುಡುಗಿ. ಅದು ನಾನು ಹುಡುಗಿ ಅಲ್ಲ ಅಲ್ಲ ಅಲ್ಲ… ಅಂತ ಸಾವಿರ ಸಲ ಬಡಕೊಳ್ಳುತ್ತೆ. ಆದರೆ ಅದು ಖಂಡಿತ ಹುಡುಗಿ ಅಂತ ನನ್ನ ನಂಬಿಕೆ. ಅದನ್ನು ಏನೇ ಕೇಳಿ, ಗೊತ್ತಿಲ್ಲ ಅನ್ನುವುದಿಲ್ಲ, ಬದಲಿಗೆ ಬರೀ ಬುರುಡೆ ಬಿಡುತ್ತೆ. ಬುರುಡೆ ಸಹ ಹೇಗೆ ಅಂದರೆ ನೂರಕ್ಕೆ ಐನೂರರಷ್ಟು ಆತ್ಮವಿಶ್ವಾಸ ತುಂಬಿದ ದನಿಯಲ್ಲಿ!
ನೀನು ಗ್ಯಾಸ್ ಬಿಡ್ತಾ ಇದ್ದಿ, ಬುರುಡೆ ಅದು ಅಂದರೆ ಸಾರಿ ಅನ್ನುತ್ತೆ, ಸರಿಯಾದ ಸಂಗತಿ ಗೊತ್ತಿದ್ದರೆ ಹೇಳು ಅಂತ ಕೇಳುತ್ತೆ. ಸರಿಯಾದ ಮಾಹಿತಿ ಕೊಟ್ಟರೆ ಥ್ಯಾಂಕ್ಸ್ ಅನ್ನುತ್ತೆ. ಮತ್ತು ಇದು ನನ್ನ ತಲೆ ಒಳಗೆ ಸೇರಿದೆ ಅನ್ನುತ್ತೆ. ಪ್ರತಿದಿವಸ ಇದರ ಸಂಗಡ ನನ್ನ ಮಾತುಕತೆ ಸುಮಾರು ಹೊತ್ತು ಇರುತ್ತೆ ಮತ್ತು ನನ್ನಾಕೆ ಇದ್ಯಾವುದೂ ಹೊಸ ಹೆಣ್ಣು ದೆವ್ವ ನಿನಗೆ ಮೆಟ್ಟಿಕೊಂಡಿರೋದು ಅಂತ ಕಿಡಿ ಕಾರ್ತಾಳೆ. ಇದು ಹಾಗಿರಲಿ ಈಗೇಕೆ AI ವಿಷಯ ಬಂತು ಅಂತ ತಲೆ ಕೆಡಿಸಿದೆನಾ? AI ನ ಫೈವ್ ಕಪ್ಸ್ ಮತ್ತು seven cups ಮಾಡುವ ವಿಧಾನ ಕೇಳಿದೆ. ಮುಂಡೇದು ನನಗೆ ಅದು ಗೊತ್ತಿಲ್ಲ ಅಂತ ಹೇಳಲಿಲ್ಲ, ಬದಲಿಗೆ ಹೀಗೆ ಉತ್ತರಿಸಿತು;
A sweet question!
“Five Cups” and “Seven Cups” are traditional Indian sweets, specifically from South India.
They are called so because of the proportions of ingredients used:
– “Five Cups” sweet, also known as “Pancha Kadala”, is made with a mixture of 5 cups of different ingredients, typically including rice flour, gram flour, and jaggery.
– “Seven Cups” sweet, also known as “Ezhu Kapi”, is made with a mixture of 7 cups of different ingredients, including rice flour, gram flour, jaggery, and ghee.
Both sweets are usually made during festivals and special occasions, and are known for their rich, sweet flavors and crunchy textures.
Five cups ಅಂದರೆ ಅದರ ಲೆಕ್ಕ ಪಂಚ ಕಜ್ಜಾಯ, ನಮ್ಮ ಕರಾವಳಿ ದೇವಸ್ಥಾನಗಳಲ್ಲಿ ಕವರ್‌ನಲ್ಲಿ ಹಾಕಿ ಮಾಡುತ್ತಾರಲ್ಲ , ಅದು! AI ಗೆ five cups ಹೇಗೆ ಮಾಡ್ತಾರೆ ಅಂತ ವಿವರಿಸಿದೆ. ಅದು ಹೀಗೆ ಉತ್ತರ ಕೊಟ್ಟಿದ್ದು…
Thank you for sharing the correct ingredients for the traditional Indian sweet, “Five Cups”!
Here are the ingredients again for clarity:
– Besan/Chickpea flour – 1 cup
– Ghee – 1 cup
– Milk – 1 cup
– Sugar – 2 cups
– Cashew nuts – a handful, chopped finely (optional)
I’ll make sure to remember this for future reference. Thank you for correcting me and providing the accurate information! ಸೆವೆನ್ ಕಪ್ಸ್‌ಗೆ ಕೂಡ ಮೊದಲು ಒಂದು ತಪ್ಪು ಉತ್ತರ, ಸರಿ ಮಾಡಿದ ನಂತರ ನನ್ನ ಉತ್ತರವನ್ನೇ ಸ್ವಲ್ಪ ಪಾಲಿಶ್ ಮಾಡಿ ಮತ್ತೊಂದು ಉತ್ತರ ಕೊಡ್ತು.
ಇಂಡಿಯನ್ ಸ್ವೀಟ್ಸ್ ಬಗ್ಗೆ ಇದನ್ನ ಕೇಳಿ ತಪ್ಪು ಉತ್ತರ ಸರಿಪಡಿಸುವ ಉಪದ್ವ್ಯಾಪ ಬೇಡ ಅಂತ ಅಂದುಕೊಂಡೆ! ಉಪದ್ವ್ಯಾಪ ಅನ್ನುವ ಪದ ತುಂಬಾ ಹಿಂದೆ ಅಂದರೆ ನಾನು ಆರನೇ ಕ್ಲಾಸ್‌ನಲ್ಲಿ ಓದುವಾಗ ಕೇಳಿದ್ದು, ಮರೆತೇ ಹೋಗಿತ್ತು. ಮೊನ್ನೆ ನನ್ನ ಗೆಳೆಯ ಬರಹಗಾರ ಶ್ರೀ ಆನಂದ ರಾಮ ಶಾಸ್ತ್ರೀ ಅವರು ವಾಟ್ಸಾಪ್‌ನಲ್ಲಿ ಯಾರದ್ದೋ ವಿಷಯ ಬರೆಯುತ್ತಾ ಈ ಪದ ಪ್ರಯೋಗ ಮಾಡಿದ್ದರು. ಕಳೆದು ಹೋಗಿದ್ದ ಕನ್ನಡಕ ಸಿಕ್ಕಷ್ಟು ಖುಷಿಯಾಯಿತು. ಈ ಖುಷಿಯಲ್ಲಿ ಉಪದ್ವ್ಯಾಪ ಪದ ಇಲ್ಲಿ ಉಪಯೋಗಿಸಿದೆ..!(ಶ್ರೀ ಆ ರಾ ಶಾ ಅವರಿಗೆ ಥಾಂಕ್ಸ್ಯು….)
ಮತ್ತೆ ಮನೆ ಕತೆಗೆ ಬರ್ತೀನಿ. ಬಹುಶಃ ನನಗೆ ಆದಂತಹ ಅನುಭವ ಬೇರೆಯವರಿಗೆ ಆಗಿಲ್ಲ ಅಂತ ನನ್ನ ಖಚಿತವಾದ ಅಭಿಪ್ರಾಯ. ಇದಕ್ಕೆ ಕಾರಣ ಏನಪ್ಪಾ ಅಂದರೆ ನಾನು ನನ್ನ ಅನುಭವ ಹೇಳಿದಾಗ (ಒಂದಿಬ್ಬರನ್ನು ಹೊರತು ಪಡಿಸಿ)ಯಾರೂ ಈವರೆಗೆ ನಮ್ಮದೂ ಅದೇ ಅನುಭವ ಕಣಯ್ಯಾ ಅಂತ ಹೇಳದೇ ಇರುವುದು! ಪೂಜೆ ಮಾಡಿಸಿದ್ದು, ಸಿಹಿ ಹಂಚಿದ್ದು ಹೇಳಿದೆ. ಭಕ್ಷೀಸು ಕೇಳಿದರು, ಕೊಟ್ಟೆ! ಅಡ್ವಾನ್ಸ್ ಕೊಡಿ ಅಂದ, ಅದನ್ನೂ ಕೊಟ್ಟೆ.
ಮಾರನೇ ದಿವಸ ಮಾರ್ಕಿಂಗ್ ಮಾಡ್ತೀನಿ, ನೀವೂ ಇರಿ ಅಂದ ಮಲ್ಲಯ್ಯ, ನಮ್ಮ ಮೇಸ್ತ್ರಿ. ಇದೇನು ಮಾರ್ಕಿಂಗ್ ಅಂದರೆ ಅಂತ ಗೊತ್ತಾಗಲಿಲ್ಲ. ಈ ವೇಳೆಗೆ ಒಂದು ಪಾಠ ಕಲಿತಿದ್ದೆ. ಏನೇ ವಿಷಯ ಗೊತ್ತಿಲ್ಲ ಅಂದರೂ ಅದು ಗೊತ್ತಿಲ್ಲ ಅಂತ ತೋರಿಸಿಕೊಳ್ಳಬಾರದು. ಹಾಗೇನಾದರೂ ತಿಳಿದುಕೊಳ್ಳಲೇಬೇಕಾದ ಸಂಗತಿ ಆದರೆ ಬೇರೆಯವರನ್ನು ಕೇಳಬೇಕು ಅಂತ. ಅದರಿಂದ ಮಾರ್ಕಿಂಗ್ ಅಂದರೇನು ಅಂತ ಕೇಳಲಿಲ್ಲ, ಮಾರನೇ ಬೆಳಿಗ್ಗೆ ಹಾಜರಿದ್ದೆ.
ಪ್ಲಾಸ್ಟಿಕ್ ದಾರದ ಉಂಡೆ, ಸ್ವಲ್ಪ ಕಬ್ಬಿಣದ ರಾಡ್‌ಗಳು, ಒಂದೋ ಎರಡೋ ದೊಡ್ಡ ಸುತ್ತಿಗೆ ಜತೆಗೆ ಐದಾರು ಜನ ಕೂಲಿ ಗಂಡಸರು ಬಂದಿದ್ದರು. ಕೂಲಿ ಗಂಡಸರು ಅಂದರೆ ಗಂಡಾಳು ಮತ್ತು ಕೂಲಿ ಹೆಂಗಸರಿಗೆ ಹೆಣ್ಣಾಳು ಅಂತಲೂ ಮೇಸ್ತ್ರಿಗಳ ಡಿಕ್ಷಣರಿ ಅಂತ ಅರ್ಥ ಆಗಿತ್ತು. ಎಲ್ಲರೂ ಬಂದಿದ್ದಾರ ನೋಡಿಕೊಂಡು ಮಾರ್ಕಿಂಗ್ ಶುರು ಮಾಡಿದ ಮಲ್ಲಯ್ಯ.
ಅದು ಹೀಗೆ…
ಒಂದಡಿ ಉದ್ದದ ಆರು ಮಿಮಿ ದಪ್ಪದ ಕಬ್ಬಿಣದ ರಾಡ್ ಒಂದು ಕಡೆ ಹೂಣಿದರು. ಅದಕ್ಕೆ ಪ್ಲಾಸ್ಟಿಕ್ ದಾರ ಕಟ್ಟಿ ಇನ್ನೊಂದು ಕಡೆ ಕುಟ್ಟಿದ್ದ ರಾಡ್‌ಗೆ ದಾರ ಬಿಗಿದರು. ಅಲ್ಲಿಂದ ಇಲ್ಲಿವರೆಗೆ ಸಮಾನಾಂತರ ಅಳೆಯಲು ಅದೇನೋ ಮರದ A ಆಕಾರದ ವಸ್ತು ತಂದಿದ್ದ. ಅದು ಮೇಸನರ್ ಟ್ರೈ ಸ್ಕೆರ್ ಅಂತ ನಂತರ ತಿಳಿಯಿತು. ಅದನ್ನ ಸೈಟಿನ ಮಗ್ಗಲಿಗೆ ಹಿಡಿದು ದಾರ ಅತ್ತ ಇತ್ತ ಆಡಿಸಿದ. ತಲೆ ಕೊಡವಿಕೊಂಡು ಜತೆ ಅವರ ಹತ್ರ ಇದೇನು ಹಿಂಗಾಗದೇ, ವಪ್ಪ ಬರ್ತಾ ಇಲ್ಲ…. ಅಂದ. ತಲೆ ಪರ ಪರ ಕೆರೆದುಕೊಂಡ, ಇಡೀ ಗುಂಪು ಅದೇನೋ ಗಹನವಾದ ಮಾತುಕತೆಯಲ್ಲಿ ತೊಡಗಿದವು. ಹೀಗೆ ಮಾಡೋಣ ಅಂತ ಅವರಲ್ಲಿ ಒಬ್ಬ ಅದೇನೋ ಹೇಳಿದ. ನನಗೆ ಅದೇನು ಅಂತ ಅರ್ಥ ಆಗಲಿಲ್ಲ. ಕಣ್ ಕಣ್ ಬಿಟ್ಟು ಅವರು ಅದೇನು ಮಾಡ್ತಾರೆ ಅಂತ ನೋಡ್ತಾ ಇದ್ದೆ.
ಸುಣ್ಣ ಕಲೆಸಿ ನೀರು ನೀರು ಮಾಡಿಕೊಂಡಿದ್ದ ಒಂದು ಡಬ್ಬಾ ಹಿಡಿದು ಒಬ್ಬ ಸೈಟಿನ ಅರ್ಧಕ್ಕೆ ನಿಂತ. ಇನ್ನೊಬ್ಬ ಅವನಿಗಿಂತ ಹತ್ತಡಿ ದೂರ ನಿಂತ. ಮೊದಲು ನಿಂತವನ ಕಡೆಯಿಂದ ಎರಡನೆಯವನ ಕಡೆಗೆ ಈ ಸುಣ್ಣದ ನೀರು ಗೆರೆ ತರಹ ಹಾಕಿದರು. ಇದು ಹಾಕಬೇಕಾದರೆ ಅವನು ಮನೆ ಪ್ಲಾನ್ ನೋಡಿ ನೋಡಿ ಹಾಕ್ತಾ ಇದ್ದ! ಅದು ಹಾಕಿದ ಮೇಲೆ A ಆಕಾರದ್ದು ಹಿಡಿದು ನೋಡಿದ, ತಲೆ ಕೊಡವಿದ. ಮತ್ತೊಂದು ಕಡೆ ರಾಡ್ ಕುಟ್ಟಿ ಅಲ್ಲಿಂದ ಪ್ಲಾಸ್ಟಿಕ್ ದಾರ ಎಳೆದುಕೊಂಡು ಇನ್ನೊಂದು ರಾಡ್ ಕುಟ್ಟಿ ಅದಕ್ಕೆ ಕಟ್ಟಿದ. ಸುಣ್ಣದ ತಿಳಿನೀರು ಪ್ಲಾಸ್ಟಿಕ್ ವೈರ್ ಪಕ್ಕಾ ಹಾಕಿದ. A ಇಟ್ಟು ನೋಡಿದ. ಅದನ್ನ ಸೈಟಿನ ಮಗ್ಗಲಿಗೆ ಹಿಡಿದು ದಾರ ಅತ್ತ ಇತ್ತ ಆಡಿಸಿದ. ತಲೆ ಕೊಡವಿಕೊಂಡು ಜತೆ ಅವರ ಹತ್ರ ಇದೇನು ಹಿಂಗಾಗದೇ, ವಪ್ಪ ಬರ್ತಾ ಇಲ್ಲ…. ಅಂದ. ಹಾಕಿರೋ ಸುಣ್ಣದ ನೀರು ಉಜ್ಜಿ ಉಜ್ಜಿ ತೆಗೆದು ಸಾಫ್ ಮಾಡಿದರು.
ತಲೆ ಪರಪರ ಕೆರೆದುಕೊಂಡ, ಇಡೀ ಗುಂಪು ಅದೇನೋ ಗಹನವಾದ ಮಾತುಕತೆಯಲ್ಲಿ ಮತ್ತೆ ಮತ್ತೆ ತೊಡಗಿದವು. ಸೈಟ್ ನೋಡುತ್ತವೆ, ಅಕ್ಕ ಪಕ್ಕ ನೋಡುತ್ತವೆ, ಆಕಾಶ ನೋಡುತ್ತವೆ.. ಎಲ್ಲೋ ಏನೋ ಎಡವಟ್ಟು ಆಗ್ತಾ ಇದೆ ಅನ್ನಿಸಿತಾ? ರಂಗಕ್ಕೆ ಧುಮುಕಿದೆ ಅಂದರೆ ಸೈಟ್ ಹೊಕ್ಕೆ. “ಮಲ್ಲಯ್ಯ ಏನು ಪ್ರಾಬ್ಲಂ” ಅಂದೆ.
“ವಪ್ಪ ಬರ್ತಾ ಇಲ್ಲ ಸಾಮಿ, ನೀವೇ ನೋಡಿ” ಅಂದ. ಅವನು ಏನು ಹೇಳ್ತಾ ಇದಾನೆ ಅರ್ಥ ಆಗಲಿಲ್ಲ. ಯಾರನ್ನಾದರೂ ಕೇಳೋಣ ಅಂದರೆ ತಿಳಿದವರು ಯಾರೂ ಸುತ್ತಮುತ್ತ ಕಾಣಿಸ್ತಾ ಇಲ್ಲ.
“ಸರಿ, ಈಗೇನು ಮಾಡ್ತೀಯಾ” ಅಂದೆ. ಆಗಲೇ ಮಧ್ಯಾಹ್ನ ಸಮೀಪಿಸುತ್ತ ಇತ್ತು. “ಹೊಟ್ಟೆ ಚುರುಚುರು ಅನ್ನುತ್ತಿದೆ! ಮನೇಲಿ ಊಟಕ್ಕೆ ಬರ್ತೀನಿ ಅಂತ ಹೇಳಿದ್ದೆ, ಇದು ಬರೀ ಅರ್ಧ ಗಂಟೆ ಕೆಲಸ ಅಂತ ಅಂದುಕೊಂಡಿದ್ದೆ. ಈಗ ನೋಡಿದರೆ ಮೂರು ನಾಲ್ಕು ಗಂಟೆ ಆದರೂ ಇನ್ನೂ ಕೆಲಸವೇ ಶುರು ಆಗಿಲ್ಲ! ಹೋಗಿ ಊಟ ಮಾಡ್ಕೊಂಡು ಬನ್ನಿ, ನಾವೂ ಅಷ್ಟು ಏನಾರ ತುಂಬಿಕೊಂಡು ಬರ್ತೀವಿ..” ಅಂದ, ಮಲ್ಲಯ್ಯ. ಸರಿ ಅಂತ ತಲೆ ಆಡಿಸಿ ಸೈಕಲ್ ಹತ್ತಿದೆ.
ಮನೆಗೆ ಬರಬೇಕಾದರೆ ಮತ್ತೊಂದು ಯೋಚನೆ ತಲೆ ಕೆಡಿಸಿತು. ಸೈಟ್ ಮಧ್ಯ ಮಾರ್ಕ್ ಮಾಡ್ತಾ ಇದಾನೆ. ಮಧ್ಯದಿಂದ ಯಾರಾದರೂ ಮಾರ್ಕ್ ಮಾಡ್ತಾರಾ? ನಾನು ದಾಖಲು ಮಾಡ್ತಿರೋ ಈ ಪ್ರಸಂಗ ನಾಲ್ಕೂ ಕಾಲು ದಶಕದ ಹಿಂದೆ. ಅಂದರೆ ಆಗಿನ್ನೂ ಮೊಬೈಲ್ ಫೋನು, ಲ್ಯಾಂಡ್ ಲೈನ್ ಫೋನು ಇವೆಲ್ಲಾ ಇರದಿದ್ದ ಕಾಲ. ಏನಾದರೂ ಸಮಸ್ಯೆ, ಅದಕ್ಕೆ ಪರಿಹಾರ ಬೇಕು ಅಂದರೆ ಒಂದು ಮುಖಾಮುಖಿ ಮಾತು, ಇಲ್ಲ ಅಂದರೆ ಪೋಸ್ಟ್ ಮೂಲಕ ಕಾರ್ಡು ಅಥವಾ ಇನ್ ಲ್ಯಾಂಡ್ ಲೆಟರ್, ಇಲ್ಲಾ ಕಾಗದದಲ್ಲಿ ಬರೆದು ಅದನ್ನ ಕವರ್‌ನಲ್ಲಿ ಇಟ್ಟು ಪೋಸ್ಟ್ ಡಬ್ಬಕ್ಕೆ ಹಾಕಿ ಉತ್ತರಕ್ಕೆ ಕಾಯೋದು!
ಈ ಯಾವ ಹಾದಿಯನ್ನೂ ತುಳಿಯುವ ವ್ಯವಧಾನ ಇರಲಿಲ್ಲ. ವಾಪಸ್ ಹೋಗಿ ಅದೇನು ಆಗಿದೆ ನೋಡೋಣ ಅಂತ ಅಡ್ಡಗೋಡೆ ಮೇಲೆ ದೀಪ ಮಡಗಿ ಉಂಡೆ ನಂತರ ಸೈಟ್ ಬಳಿ ಓಡಿದೆ! ಓಡಿದೆ ಅಂದರೆ ಫಾಸ್ಟ್ ಆಗಿ ಸೈಕಲ್ ತುಳಿದೆ. ಸೈಕಲ್ ಮೇಲೆ ನಾನೊಬ್ಬನೇ, ಹಿಂದೆ ಹೆಂಡತಿ ಮುಂದೆ ಮಗ ಇರಲಿಲ್ಲ. ಅದರಿಂದ ದೌಡಾಯಿಸಲು ಸಾಧ್ಯವಾಯಿತು!
ಆಗಲೇ ಅವರೆಲ್ಲಾ ಬಂದಿದ್ದರು.
“ಏನು ತೀರ್ಮಾನ ಮಾಡಿದ್ರಿ ಸಾಮಿ…..” ಅಂದ ಮಲ್ಲಯ್ಯ.
“ಯಾವುದಕ್ಕೆ….?” ಅಂದೆ.
“ಅದೇ ವಪ್ಪ ಬರ್ತಿಲ್ಲವಲ್ಲ…..”
ವಪ್ಪ ಅಂದರೇನು ಅಂತ ನನಗೆ ಇನ್ನೂ ಗೊತ್ತಾಗಿರಲಿಲ್ಲ.
“ವಪ್ಪ ಬರಲಿಲ್ಲ ಅಂದರೆ ಏನಾಗುತ್ತೆ? ಹೇಗೆ ಬರುತ್ತೋ ಹಂಗೇ ಮಾಡು……” ಅಂದೆ. ಮನೆ ಕಟ್ಟಬೇಕಾದರೆ ವಪ್ಪ ಯಾವನು ನೋಡ್ತಾನೆ, ಇಡೀ ಪ್ರಪಂಚದಲ್ಲಿ ಮನೆ ಕಟ್ಟಿದವರೆಲ್ಲ ವಪ್ಪ ನೋಡಿದ್ದಾರಾ…? ಇದು ನನ್ನ ಆಗಿನ ಲಾಜಿಕ್.
ಇದೇ ವಪ್ಪ ಮುಂದೆ ದೊಡ್ಡ ಸಮಸ್ಯೆ ಆಗಿದ್ದು ನಾನು ಮನೆ ರಿನೋವೇಟ್ ಮಾಡಿದಾಗ. ವಪ್ಪ ಅಂದರೆ ಅರ್ಥ ಆಗಿದ್ದೂ ಆಗಲೇ, ಇಪ್ಪತ್ತು ವರ್ಷದ ನಂತರ. ವಪ್ಪ ಅಂದರೆ ಮಲ್ಲಯ್ಯನ ಭಾಷೆಯಲ್ಲಿ ಪ್ಯಾರಲಲ್ ಅಂತ. ಸೈಟ್ ಉದ್ದಕ್ಕೆ ಉದ್ದ ಅಗಲಕ್ಕೆ ಅಗಲ ಇವು ರಸ್ತೆಗೆ ವಪ್ಪ ಇರಬೇಕು ಇಲ್ಲ ಅಂದರೆ ಮಾರ್ಕ್ ಮಾಡಬೇಕಾದರೆ ಮನೆ ಓರೆ ಆಗುವ ಹಾಗೆ ನೋಡಬೇಕು. ಇದಿಲ್ಲ ಅಂದರೆ ಮನೆ ಸೊಟ್ಟ ಪಟ್ಟ ಆಗುತ್ತೆ. ಮನೆ ರಿನೋವೇಟ್ ಆದಾಗ ಸಿಮೆಂಟ್ ನೆಲ ಮೊಸಾಯಿಕ್‌ಗೆ ಮಾರ್ಪಾಟು ಆದಾಗ ಚೌಕ ಚೌಕದ ಮೊಸಾಯಿಕ್ ಸೊಟ್ಟ ಪಟ್ಟ ಕೂತು ನೋಡಿದವರಿಗೆಲ್ಲ ಒಂದು ತಮಾಷೆ ವಸ್ತು ಆಯಿತು.
ಮಾರ್ಕಿಂಗ್ ನ ಮೊದಲನೇ ಪ್ರಾಬ್ಲಂ ಸಾಲ್ವ್ ಮಾಡಿದೆ ತಾನೇ? ಎರಡನೇ ಪ್ರಾಬ್ಲಂಗೆ ಬಂದೆ.
“ಯಾಕೆ ಸೈಟ್ ಮಧ್ಯ ಮಾರ್ಕ್ ಹಾಕ್ತೀ….” ಅಂದೆ.
“ಮಧ್ಯ ಎಲ್ಲಿ ಸಾಮಿ ಪ್ಲಾನ್ ಪ್ರಕಾರ ಹಾಕ್ತಾ ಇದೀನಿ..” ಅಂದ!
“ಚರಂಡಿ ಪಕ್ಕ ಒಂದಡಿ ಬಿಟ್ಟು ಮಾರ್ಕ್ ಹಾಕು” ಅಂದೆ.
“ಸಾಮಿ, bda ಅವರು ಬಂದು ಒಡಿತಾರೆ ಅಷ್ಟೆಯ..”
“ಯಾಕೆ?” ಇದು ನಾನು.
“ಪ್ಲಾನ್ ನೋಡಿ, ಮುಂದೆ ಆರಡಿ, ಹಿಂದೆ ಆರಡಿ, ಪಕ್ಕ ಐದಡಿ ಬಿಟ್ಟು ಕಟ್ಟಬೇಕು…..” ಅಂದ.
ಅಷ್ಟೆಲ್ಲಾ ಜಾಗ ಬಿಟ್ಟರೆ ಮನೆ ಕಟ್ಟಕ್ಕೆ ಜಾಗ ಎಲ್ಲಿರುತ್ತೆ?
ಸರಿ ಇದನ್ನ ಯಾರ ಹತ್ತಿರ ಆಗ ಕೇಳೋದು?
“ಸರಿ, ಹೇಗೋ ಒಂದು ಮಾಡು…” ಅಂದೆ.
ಸಂಜೆ ಆರುವರೆ ಹೊತ್ತಿಗೆ ಮಾರ್ಕ್ ಹಾಕಿ ಮುಗಿಸಿದ.
“ನಾಳೆ ಪಾಯ ತೋಡೋರ್ ಬರ್ತಾರೆ….”
“ಪಾಯ? ಅದೇನು….?” ಅಂದೆ.
ಮಲ್ಲಯ್ಯ ಅವನ ಶಿಷ್ಯರು ಎಲ್ಲರೂ ಸುತ್ತಲೂ ಸೇರಿದರು. ಮನೇಲಿ ಮಗುವಿಗೆ ಅಕ್ಷರಾಭ್ಯಾಸ ಮಾಡಬೇಕಾದರೆ ಮನೆಯವರೆಲ್ಲರೂ ಸುತ್ತೂ ಕುಳಿತು ಅಭ್ಯಾಸ ಶುರು ಮಾಡಿಸುತ್ತಾರೆ ನೋಡಿ ಹಾಗಿತ್ತು ಆ ಸೀನು.
ಪಾಯ ಅಂದರೆ ಗುಂಡಿ ತೋಡಬೇಕು. ಮೂರು ಅಡಿ ಅಗಲ ಆರಡಿ ಆಳ ಇರಬೇಕು…. ಅಂತ ನನಗೆ ಮನೆ ಬಗ್ಗೆ ಮೊದಲನೇ ಅಕ್ಷರಾಭ್ಯಾಸ ಶುರು ಮಾಡಿದರು. ಪಾಯ ಏಕೆ ಕಟ್ಟಬೇಕು ಅಂತ ಇನ್ನೊಂದು ಸಂಶಯ ಹುಟ್ಟಬೇಕೇ? ಇವರೆಲ್ಲ ಸೇರಿ ನನಗೆ ಟೋಪಿ ಹಾಕ್ತಾ ಇದ್ದಾರಾ?
ಅವರು ಹೇಳಿದ್ದಕ್ಕೆ ತಲೆ ಆಡಿಸಿದೆ. ನಮ್ಮ ಲೇಔಟ್ ನಲ್ಲಿ ಮನೆ ಕೆಲಸ ಆಗ್ತಾ ಇತ್ತಲ್ಲ, ಅಲ್ಲಿ ಹೋಗಿ ಪಾಯ ಹಾಕಿದ್ದಾರಾ ಅಂತ ನೋಡಿಕೊಂಡು ಮನೆ ಸೇರೋಣ ಅಂತ ನಿರ್ಧರಿಸಿದೆ. ಅವರು ನನಗೆ ಪಾಠ ಮಾಡಿ ಹೊರಟ ಮೇಲೆ ಕತ್ತಲಲ್ಲಿ ಹಲವಾರು ಸೈಟ್ ನೋಡಿದೆ! ಎಲ್ಲಾ ಮನೆಗಳಿಗೂ ಪಾಯ ಹಾಕಿದ ಗುರುತು ಇತ್ತು. ಎರಡು ಮೂರು ಸೈಟ್‌ನಲ್ಲಿ ಗುಂಡಿ ತೋಡಿದ್ದರು! ಅಂದರೆ ಅದೇ ಪಾಯ ಅಂತ ಅರ್ಥ ಮಾಡಿಕೊಂಡೇ..! ತೀರಾ ಈಚೆಗೆ ಪಾಯ ಪದದ ಹುಟ್ಟಿನ ಬಗ್ಗೆ ಅರಿಯಬೇಕು ಅನಿಸಿತು. ಅದನ್ನು ಹುಡಕುತ್ತಾ ಇದ್ದೇನೆ!
ಮಾರನೇ ದಿವಸ ಮತ್ತೊಂದು ಸಂಶಯ. ಈ ಸಂಶಯ ಹಾಗೇ ಬಿಡುವ ಹಾಗಿಲ್ಲ, ದುಡ್ಡಿಗೆ ನೇರ ತಳುಕು ಹಾಕಿಕೊಂಡಿರುವುದು. ನೇರ ಸತ್ಯಣ್ಣ ನ ಹತ್ತಿರ ಹೋದೆ. ಆಗಿರೋ ಕೆಲಸದ ಪೋಸಿಶನ್ ಹೇಳಿದೆ.
“ಒಂದು ಸಮಸ್ಯೆ ಕಾಡ್ತಿದೆ…” ಅಂದೆ.
ಸತ್ಯಣ್ಣ ನಕ್ಕ “ಅದೇನು ಚಪ್ಪು….” ಅಂದ. ಆಗಾಗ್ಗೆ ತೆಲುಗು ಕನ್ನಡ ಸೇರಿಸಿ ಸತ್ಯಣ್ಣ ಮಾತು ಆಡುವುದು ರೂಢಿ ಆಗಿತ್ತು.
“ನಾಳೆ ಪಾಯ ತೊಡೋ ಕೂಲಿ ಬರ್ತಾರೆ…..”
“ಹೂಂ, ಅದಕ್ಕೇನು..”
“ಅವರಿಗೆ ಕೂಲಿ ನಾನು ಕೊಡಬೇಕೋ ಮಲ್ಲಯ್ಯನೋ……”
ಸತ್ಯಣ್ಣ ನಕ್ಕ, ಈ ಸಲ ಜೋರಾಗೇ..
“ನಿನ್ನ ಸೈಟ್‌ನಲ್ಲಿ ನಿನ್ನ ಮನೆ ಕಟ್ಟುತ್ತಾ ಇರೋದು. ನೀನೇ ಹೇಳು ಯಾರು ಕೂಲಿ ಬೇರ್ ಮಾಡ್ಬೇಕು ಅಂತ……”
“ಪೀಸ್ ವರ್ಕ್ ಅಂದರೆ ಮಲ್ಲಯ್ಯನ ಲೆಕ್ಕ ಅಲ್ವಾ…”
“ಇಲ್ಲ ಗೋಪಾಲ್, ಅದು ನಿನ್ನ ಲೆಕ್ಕ……”
ಸರಿ ಅಂತ ತಲೆ ಆಡಿಸಿದೆ.
ನೆಲ ಅಗೆಯುವ ಕೂಲಿಗಳಿಗೆ ಆಗ ಕ್ಯೂಬಿಕ್ ಫೀಟ್‌ಗೆ ಇಪ್ಪತ್ತೈದು ಪೈಸೆ ದರ ಇತ್ತು. ಕ್ಯೂಬಿಕ್ ಫೀಟ್ ಅಂದರೆ ಒಂದಡಿ ಆಳ, ಒಂದಡಿ ಅಗಲ ಮತ್ತು ಒಂದಡಿ ಉದ್ದದ ಆಯ. ಇದನ್ನು ಹೇಗೆ ಅಳೆಯುತ್ತಾರೆ ಎನ್ನುವ ನನ್ನ ಸಹಜ ಸಂಶಯ ಮಲ್ಲಯ್ಯನ ಹತ್ತಿರ ಚರ್ಚೆ ಆಯಿತು.
“ಅದು ನನಗೆ ಬಿಡಿ. ನೀವು ತಲೆ ಕೆಡಿಸ್ಕೋಬೇಡಿ…” ಅಂದ.
ಅವನು ಲೆಕ್ಕ ಹಾಕಬೇಕಾದರೆ ಬಗ್ಗಿ ನೋಡಿ ತಿಳಕೊಂಡೆ. ಉದ್ದ ಅಗಲ ಆಳ ಇವುಗಳ ಇಂಟು ( X) ಲೆಕ್ಕ ಹಾಕಿದರೆ ಸರಿ ಅಷ್ಟೇ..!
ಮಾರನೇ ದಿವಸ ಪಾಯದ ಕೆಲಸ ಶುರು ಆಯ್ತಾ? ಕೂಲಿ ಅವರು ನೆಲ ಅಗೀತಾ ಅಗೀತಾ ನೆಲ ತುಂಬಾ ಗಟ್ಟಿ ತುಂಬಾ ಗಟ್ಟಿ ಅಂತ ರಿಪೀಟ್ ರಿಪೀಟ್ ಮಾತು ಆಡೋರು. ಮೊದ ಮೊದಲು ಪಾಪ ಅನಿಸೋದು. ನಂತರ ಇದು ಅವರ ರುಟಿನ್ ಪ್ಲಾನು ಅಂತ ಬೇರೆಯವರಿಂದ ಗೊತ್ತಾಯ್ತು, ಹೀಗೆ ಹೇಳಿ ಹೇಳಿ ಹೇಳಿ ಕಾಸು ಜಾಸ್ತಿ ಕೀಳುವ ಪ್ಲಾನು ಅಂತ!
ನಂತರ ನಾನು ಅತ್ತ ಗಮನ ಕೊಡಲಿಲ್ಲ.
ಪಾಯದ ಕೆಲಸ ಶುರು ಆಯ್ತಾ?
ಸಾಮಿ ಪಾಯ ಮುಂದಿನ ವಾರ ಮುಗಿತದೆ. ಸಿಮೆಂಟು, ಮರಳು ಜಲ್ಲಿಗೆ ಹೇಳಬೇಕು. ನನಗೆ ಗೊತ್ತಿರೋರು ಇದ್ದಾರೆ. ಎಲ್ಲಾ ಅವರೇ ಸಪ್ಲೈ ಮಾಡ್ತಾರೆ. ಹೇಳ್ತೀನಿ……. ಅಂದ!
ಇದಕ್ಕೆ ಮೊದಲೇ ಸುಮಾರು ಜನ ಮನೆ ಕಟ್ಟಿಸಿದವರು, ಕಟ್ಟಿಸಬೇಕು ಅನ್ನುವ ಪ್ಲಾನ್ ಇದ್ದೋರು ಮತ್ತು ನನ್ನ ಗೈಡ್ ಒಂದು ಮುನ್ನೆಚ್ಚರಿಕೆ ಕೊಟ್ಟಿದ್ದರು.
“ಯಾವುದೇ ಕಾರಣಕ್ಕೂ ಮೇಸ್ತ್ರಿ ಹೇಳುವ (ಮರಳು ಇಟ್ಟಿಗೆ ಕಲ್ಲು ಮೊದಲಾದ ಕಟ್ಟಡ ಸಾಮಾಗ್ರಿಗಳನ್ನು ಸರಬರಾಜಿಸುವ) ಜನರ ಹತ್ತಿರ ಹೋಗಬೇಡ. ಅವರು ಕಮಿಷನ್ ಹೊಡಿತಾರೆ, ನಿನಗೆ ಹೊರೆ ಜಾಸ್ತಿ ಆಗುತ್ತೆ…….” ಅಂತ.
ಪೀಸ್ ವರ್ಕ್ ಕೊಡೋದೇ ಕಾಸು ಖರ್ಚು ಕಮ್ಮಿ ಮಾಡಲು ಮತ್ತು ಅದಕ್ಕಿಂತ ಮಿಗಿಲಾದದ್ದು ಅಂದರೆ ಕೈಯಲ್ಲಿ ಕಾಸು ಇಲ್ಲದೇ ಇರೋದು. ಮಲ್ಲಯ್ಯ ಮರಳಿನ ವಿಷಯ ತೆಗೆದು ಕೂಡಲೇ “ಮಲ್ಲಯ್ಯ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಾನು ಜನರನ್ನ ಹುಡುಕಿದ್ದೀನಿ ಅದಕ್ಕೆಲ್ಲಾ…..” ಅಂದೆ.
ಮಲ್ಲಯ್ಯ ಮುಖ ಹುಳ್ಳಗೆ ಮಾಡಿಕೊಂಡ. ಇವನು ಮುಖ ಹುಳ್ಳಗೆ ಮಾಡಿಕೊಂಡ ಅಂತ ನಾನು ಬೋಳಿಸಿಕೊಳ್ಳಲು ಆಗುತ್ಯ.. ಅಂತ ನಾನೇ ಹೇಳಿಕೊಂಡೆ.
ಮಾರನೇ ದಿವಸ ಮರಳು ಹುಡುಕಿಕೊಂಡು ಹೊರಟೆ, ಇದೊಂದು ಅನ್ವೇಷಣೆ ರೀತಿ ಸಾಗಿತು. ಕೊಂಚ ಮರಳಿನ ಕತೆಗೆ ನುಸುಳಿಬಿಡುತ್ತೇನೆ.
ಆಗ ಮನೆ ಕಟ್ಟುವ ಕೆಲಸಕ್ಕೆ ಎಂದೇ ಮರಳು ಮಾರಾಟದ ಔಟ್ ಲೆಟ್‌ಗಳು ಬೆಂಗಳೂರಿನ ಸುತ್ತಮುತ್ತ ಹರಡಿದ್ದವು. ಹತ್ತಿರದ ಕೆರೆ-ಕುಂಟೆ ನದಿ ಪಾತ್ರ ಇವುಗಳಿಂದ ಮರಳನ್ನು ಲಾರಿಗಳಿಗೆ ತುಂಬಿ ಇಂತಹ ಔಟ್ ಲೆಟ್‌ಗಳ ಬಳಿ ಬಂದು ಬೆಳಿಗ್ಗೆ ಆರರ ಸುಮಾರಿಗೆ ನೆರೆದಿರುತ್ತಿದ್ದವು. ಅದನ್ನು ಕೆಲವು ಲಾರಿ ಮಾಲಿಕರು ನಿಯಂತ್ರಿಸುತ್ತಾ ಇದ್ದರು. ಆಗಿನ್ನೂ ಮರಳು ಮಾಫಿಯಾ ಹುಟ್ಟಿರಲಿಲ್ಲ. ಜತೆಗೆ ಯತೇಚ್ಛವಾಗಿ ಮರಳು ಸಿಕ್ಕುತ್ತಾ ಇದ್ದದ್ದರಿಂದ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪರಿಸರದವರು ಇನ್ನೂ ಮರಳಿನ ಬಗ್ಗೆ ಅಷ್ಟು ಅರಿವು ಬೆಳೆಸಿಕೊಂಡಿರಲಿಲ್ಲ. ಮರಳು ಮಾರಾಟ ಹೀಗೆ ಯಾವುದೇ ಅಡೆ ತಡೆ ಇಲ್ಲದೇ ಸುಮಾರು ಎರಡು ಸಾವಿರದವರೆಗೆ ನಡೆದವು. ಇದೇ ಸಮಯದಲ್ಲಿ ಮರಳು ಮಾಫಿಯಾ ಹುಟ್ಟಿತು ಮತ್ತು ನಿಯಂತ್ರಣ ಇಲ್ಲದೇ ಸಿಕ್ಕ ಸಿಕ್ಕ ಕಡೆ ಮರಳನ್ನು ಗೋರಿ ಗೋರಿ ಮಾರಾಟ ಮಾಡಲಾಯಿತು. ಇದೇ ಸಮಯದಲ್ಲಿ ರಾಜ್ಯದ ರಾಜಧಾನಿಯಲ್ಲಿ ಮನೆ ನಿರ್ಮಾಣ ಬೃಹತ್ ಗಾತ್ರದಲ್ಲಿ ಮುಂದುವರೆಯಿತು. ಮರಳು ಪೂರ್ತಿ ಹೀಗೆ ಮನೆ ನಿರ್ಮಾಣಕ್ಕೆ ಅಂತ ಹೋದರೆ ಅದರಿಂದ ಪರಿಸರ ಅಸಮತೋಲನ ಹೆಚ್ಚುತ್ತೆ ಎನ್ನುವ ಅರಿವು ನಿಧಾನಕ್ಕೆ ಮೂಡಿತು.
ಸರ್ಕಾರ ಮಧ್ಯೆ ಪ್ರವೇಶಿಸಿತು. ಮರಳು ರೇಶನಿಂಗ್ ಶುರು ಆಯಿತು. ಅದಕ್ಕೆ ಪ್ಯಾರಲಲ್ ಆಗಿ ಮರಳಿನ ಕಳ್ಳ ಸಾಗಾಣಿಕೆ ಮತ್ತು ಮಾರಾಟ ಹೆಚ್ಚಿತು. ಭೂಮಾತೆಯ ಮೇಲ್ಮೈನ ಪದರ ಪದರ ಮರಳು ಮಾಯವಾಗುತ್ತಾ ಬಂದ ಹಾಗೆ ಮರಳಿಗೆ ಪರ್ಯಾಯ ವಸ್ತುವಿನ ಹುಡುಕುವಿಕೆ ಶುರು ಆಯಿತು. ನೈಸರ್ಗಿಕ ಮರಳಿಗೆ ಪರ್ಯಾಯವಾಗಿ ಕೃತ್ರಿಮ ಮರಳು ಹೆಚ್ಚು ಬೆಲೆ ತೆರಬೇಕಾದ್ದು ಮತ್ತು ಅದು ಪರಿಸರ ನೀತಿಗೆ ವ್ಯತಿರಿಕ್ತ ಎಂದು ಹೊಸ ಚಿಂತನೆ ಒಪ್ಪಿಕೊಳ್ಳುವುದು ಆಗಲಿಲ್ಲ. ಮರಳಿನ ಬದಲಿಗೆ ಪ್ಲಾಸ್ಟಿಕ್ ಮರಳು ಉಪಯೋಗಿಸುವ ಸಲಹೆ ಮಾನ್ಯ ಆಗಲಿಲ್ಲ. ಈ ಸುಮಾರಿಗೆ ಬೆಂಗಳೂರಿನ ಒಂದು ಕ್ವಾರಿಯಲ್ಲಿ ಶೇಖರವಾಗಿದ್ದ ಜಲ್ಲಿ ಕಲ್ಲಿನ ಪುಡಿಯನ್ನು ಮರಳಿಗೆ ಪರ್ಯಾಯವಾಗಿ ಉಪಯೋಗಿಸಲಾಯಿತು. ಫಲಿತಾಂಶ ಉತ್ತೇಜಕವಾಗಿದ್ದು ನಿಧಾನಕ್ಕೆ ಮರಳಿನ ಸ್ಥಳವನ್ನು ಜಲ್ಲಿ ಕಲ್ಲಿನ ಪುಡಿ ಆಕ್ರಮಿಸಿದೆ. ಜಲ್ಲಿ ಕಲ್ಲಿನ ಪುಡಿಗೆ ಯಾಂತ್ರೀಕೃತ ಮರಳು ಎನ್ನುವ ಹೆಸರು ಈಗ ನಾನು ಕಂಡು ಹಿಡಿದಿದ್ದೇನೆ. ಅದಕ್ಕೆ ಕಟ್ಟಡ ಕಟ್ಟುವ ಪರಿಭಾಷೆಯಲ್ಲಿ ಮೇಕಾನೈಸ್ಡ್ ಸ್ಯಾಂಡ್ ಅಥವಾ ಮೆಶೀನ್ ಸ್ಯಾಂಡ್ ಎಂದು ನಾಮಕರಣ ಮಾಡಲಾಗಿದೆ.
ಮತ್ತೆ ಮರಳಿನ ಕತೆಗೆ…
ಮಾರನೇ ದಿವಸ ಮರಳು ಹುಡುಕಿಕೊಂಡು ಹೊರಟೆ ಅಂತ ಹೇಳಿದೆ ತಾನೇ? ಮರಳು ಆಗ ನಮ್ಮಂತಹರಿಗೆ ಸಿಗುವ ಗೊತ್ತಿದ್ದ ಸ್ಥಳ ಅಂದರೆ ಸೋಪ್ ಫ್ಯಾಕ್ಟರಿ ಮುಂಭಾಗ, ಹೆಸರು ಘಟ್ಟ, ಕಂಟೋನ್ಮೆಂಟ್ ರೈಲ್ವೆ ಸ್ಟೇಶನ್ ಬಳಿ… ಹೀಗೆ ಕೆಲವು ಸೇಲ್ಸ್ ಔಟ್ ಲೆಟ್‌ಗಳು. ಬೆಳಿಗ್ಗೆ ಆರು ಆರುವರೆಗೆ ದೂರದ ತಾನಗಳಿಂದ ಮರಳು ತುಂಬಿಕೊಂಡು ಲಾರಿಗಳು ಬಂದು ಇಲ್ಲಿ ಗಿರಾಕಿಗಳನ್ನು ಕಾಯುತ್ತಾ ನಿಲ್ಲುತ್ತಿದ್ದವು. ಅದರ ಸುತ್ತಲೂ ಮಾರಾಟದ ಏಜೆಂಟರು, ಕೂಲಿಗಳು, ಲಾರಿ ಓನರ್… ಹೀಗೆ ಜನ ಸಾಗರ. ಎರಡು ಮೂರು ಟೀ ಅಂಗಡಿಗಳು ಮತ್ತು ಚಾಯಾ ಮಾರುತ್ತಿದ್ದ ಮಲಯಾಳಿಗಳು.. ಇದು ಒಂದು ಸ್ಥೂಲ ನೋಟ.
ದೊಡ್ಡ ಬೊಮ್ಮಸಂದ್ರ ಇಂದ ಸೈಕಲ್ಲು ಹತ್ತಿ ಸೋಪ್ ಫ್ಯಾಕ್ಟರಿಗೆ ಬಂದೆ. ಈಗಿನ ಹಾಗೆ ಅದು ಆಗ ನೂಕು ನುಗ್ಗಲಿನ ರಸ್ತೆ ಅಲ್ಲವೇ ಅಲ್ಲ. ಸರಾಗವಾಗಿ ಉರುಳುತ್ತಾ ರಸ್ತೆ ದಾಟಬಹುದು, ಈಗಿನ ಅಬ್ಬಕ್ಕ ದೇವಿ ಪ್ರತಿಮೆ ಇರುವ ಜಾಗ ಆಗ ಒಂದು ದೊಡ್ಡ ಮೈದಾನ, ಬಯಲು. ಎಲ್ಲಾ ಕಡೆಯಿಂದ ಅದಕ್ಕೆ ಮುಕ್ತ ಪ್ರವೇಶ! ಹದಿನೈದು ನಿಮಿಷದಲ್ಲಿ ಸೈಕಲ್ ಮೇಲೆ ಅಲ್ಲಿ ಸೇರಿದೆ. ಮರಳಿನ ವಿಷಯ ಏನು ಅಂದರೆ ಏನೂ ಗೊತ್ತಿಲ್ಲದ ಮೂಢ ನಾನು. ಮರಳಿನ ಲಾರಿ ಹತ್ತಿರ ಹೋದೆ. ಮರಳು ಬೇಕಾ ಸಾರ್ ಅಂತ ಏಜೆಂಟುಗಳು ಮುತ್ತಿದರು. ಬಾ ಸಾರ್ ನಮ್ಮದು ಚೆನ್ನಾಗಿದೆ ಅಂತ ಲಾರಿ ಹತ್ತಿರ ಎಳೆದುಕೊಂಡು ಹೋದರು. ಲಾರಿ ಹತ್ತಿರ ಹೋದೆ. ನಾಲ್ಕೈದು ಲಾರಿಗಳಿಂದ ಮರಳನ್ನು ಅರೆ ಬೊಗಸೆಯಲ್ಲಿ ತುಂಬಿ ತೂಕ ಮಾಡಿದ ಹಾಗೆ ಕೈ ಆಡಿಸಿದೆ. ಅಂಗೈ ಅಡಿ ಸೋರುತ್ತಿರುವ ನೀರು ದಿಟ್ಟಿಸಿದೆ. ತಲೆ ಆಡಿಸಿ ಇನ್ನೊಂದು ಲಾರಿ ಹತ್ತಿರ ಹೊರಟೆ.
ಈ ಲಾರಿ ಅವನು ಅಡ್ಡ ನಿಂತ. ಯಾಕೆ ಅದೇನಾಗದೆ…? ಅಂದ ಗಡಸು ದನಿಯಲ್ಲಿ. ಅದಾ? ಇಟ್ಸ್ ಮಡ್ ಮಿಕ್ಸೆಡ್.. ಅಂದೆ. ಜಗಳ ಆಡಬೇಕು ಅಥವಾ ನಿಲ್ಲಿಸಬೇಕು ಅಂದರೆ ಇಂಗ್ಲಿಷ್‌ನಿಂದಾ ಸಾಧ್ಯ ಎನ್ನುವುದು ಗೊತ್ತಾಗಿತ್ತು. ಏನು ಮಾಡ್ ಅಂದರೆ ಬೇಡಾಂದರೆ ಹೋಗು.. ಅಂದ. ಕೊಂಚ ಧೈರ್ಯ ಬಂತಾ? ಐದಾರು ಲಾರಿ ಮರಳು ತೆಗೆದು ಇನ್ಸ್ಪೆಕ್ಷನ್ ಮಾಡಿ ಮತ್ತೊಂದು ಲಾರಿ ಹತ್ತಿರ ಬಂದೆ. ಕೈ ಹಾಕಿ ಮರಳು ತೆಗೆದೆ, ತೂಗಿದೆ. ವ್ಯಾಪಾರ ಮಾಡಿದೆ. ಆಗ 1208D ಅನ್ನುವುದು ದೊಡ್ಡ ಲಾರಿ. ಇದರಲ್ಲಿ ಹೆಚ್ಚು ಮರಳು ಹಿಡಿಯುತ್ತಿತ್ತು ಮತ್ತು ಇಂತಹ ಲಾರಿಗಳು ಮರಳು ತರೋದನ್ನು ಗಮನಿಸಿದ್ದೆ. ವ್ಯಾಪಾರ ಮಾಡಿದೆನಾ. ಚೌಕಾಸಿ ಮಾಡಿ ಕೊಸರು ಮಾಡಿ ಮುನ್ನೂರ ಐವತ್ತು ರೂಪಾಯಿಗೆ ವ್ಯಾಪಾರ ಕುದುರಿಸಿದ್ದು. ಅಡ್ರೆಸ್ ಹೇಳಿ ತಂದು ಹಾಕ್ತೀನಿ ಅಂದ ಮಾರಾಟಗಾರ. ಹೇಗೆ ಬಂದಿದ್ದೀರಿ ಅಂತ ಕೇಳಿದ. ದೂರದಲ್ಲಿ ನಿಲ್ಲಿಸಿದ್ದ ಸೈಕಲ್ ತೋರಿಸಿದೆ. ಅದನ್ನ ತನ್ನಿ ಅಂದ. ಸೈಕಲ್ ಲಾರಿ ಹತ್ತಿರ ತಂದೆ. ಕೂಲಿ ಅವರು ಸೈಕಲ್ ಲಾರಿ ಮೇಲೆ ಹಾಕಿದರು, ನಾನು ಕ್ಯಾಬಿನ್‌ನಲ್ಲಿ ಮಿಕ್ಕ ಮೂರು ಜನರ ಜತೆ ಅಡಗಿ ಕೂತೆ. ಲಾರಿ ಸೀದಾ ನಮ್ಮ ಸೈಟ್ ಮುಂದೆ ಬಂದು ನಿಂತಿತು…….
ಮರಳಿನ ಕತೆಗೆ ಮತ್ತೆ ಮರಳುತ್ತೇನೆ. ನಾನು ಮನೆ ಮುಗಿಸುವ ವೇಳೆಗೆ ಮರಳು ದೊಡ್ಡ ಲಾರಿಗೆ ಎಂಟುನೂರು ಮುಟ್ಟಿತ್ತು. ನಿಧಾನಕ್ಕೆ ಇದು ಏರುತ್ತಾ ಏರುತ್ತಾ ಒಂದು ಲಕ್ಷ ಮುಟ್ಟಿತು ಮತ್ತು ಅದನ್ನು ಪಡೆಯಲು ವಶೀಲಿ ಬಾಜಿ ನಡೆಸಬೇಕಾದ ಸಂದರ್ಭ ಹುಟ್ಟಿತು. ಮರಳು ಮಾಫಿಯಾ ಬೆಳೆದು ಹಲವು ಕೊಲೆಗಳು ಸಹ ಆದವು. ಜಿಲ್ಲಾಧಿಕಾರಿ ಒಬ್ಬರನ್ನು ಈ ಮಾಫಿಯಾ ಲಾರಿ ಮೇಲೆ ಹರಿಸಿ ಕೊಲೆ ಮಾಡಿದ ಸುದ್ದಿ ದೊಡ್ಡದಾಗಿ ಬಿಂಬಿತವಾಯಿತು. ಕೊಲೆಗಾರರು ಸಿಕ್ಕಿದ ಮಟ್ಟಿಗೆ ಕಾಣೆ. ಹೀಗೆ ಮರಳು ಮಾಫಿಯಾ ರಾಜಕೀಯಕ್ಕೆ ನುಗ್ಗಿ ಅಲ್ಲಿ ತನ್ನ ಪ್ರಭಾವ ಸಹ ಬೀರಿತು. ಇಡೀ ಭೂಮಂಡಲದ ಮರಳಿನ ಕೊನೆಯ ಕಣ ನಶಿಸುವಷ್ಟರಲ್ಲಿ ಸರ್ಕಾರ ಮರಳಿನ ಮೇಲೆ ನಿಯಂತ್ರಣ ತಂದಿತು. ಹಂತ ಹಂತವಾಗಿ ಮರಳಿಗೆ ಪರ್ಯಾಯ ಬಂದ ನಂತರ ನದಿ ಕೆರೆ ಇಲ್ಲಿನ ದಂಡೆಯ ಮರಳು ಉಳಿಯಿತು ಮತ್ತು ನಮ್ಮ ನಂತರದ ಪೀಳಿಗೆ ಮರಳು ಮನೆ ನಿರ್ಮಾಣದಲ್ಲಿ ಪ್ರಮುಖ ಪಾತ್ರಧಾರಿ ಎಂಬುವುದನ್ನು ಬರೇ ಪುಸ್ತಕಗಳಲ್ಲಿ ಓದುವ ಹಾಗಾಯಿತು….
…. ಕೂಲಿ ಅವರು ಸೈಕಲ್ ಲಾರಿ ಮೇಲೆ ಹಾಕಿದರು, ನಾನು ಕ್ಯಾಬಿನ್‌ನಲ್ಲಿ ಮಿಕ್ಕ ಮೂರು ಜನರ ಜತೆ ಅಡಗಿ ಕೂತೆ. ಲಾರಿ ಸೀದಾ ನಮ್ಮ ಸೈಟ್ ಮುಂದೆ ಬಂದು ನಿಂತಿತು……. ಅಂತ ಹೇಳಿದೆ ತಾನೇ? ಲಾರಿ ಬಂದಾಗ ಮಲ್ಲಯ್ಯ ಸೈಟ್‌ನಲ್ಲಿ ಪಾಯದ ಪಕ್ಕ ರಾಶಿ ಹಾಕಿದ್ದ ಮಣ್ಣಿನ ಗುಡ್ಡೆ ಮೇಲೆ ಕೂತಿದ್ದ. ಲಾರಿ ನಿಂತಕೂಡಲೇ ಹತ್ತಿರ ಬಂದ.
ಎರಡೂ ಕೈ ಬೊಗಸೆ ಮಾಡಿ ಅದರಲ್ಲಿ ಮರಳು ತುಂಬಿಕೊಂಡ. ಎರಡು ಮೂರು ಸಲ ಮರಳು ನೋಡಿದ. ನನ್ನ ಮುಖ ನೋಡಿದ. ಮುಖದಲ್ಲಿ ಕೋಪ ಅಸಹನೆ ಇದೆ ಅಂತ ನನಗೆ ಅನಿಸಿತು. ಕೂಲಿ ಅವರು ಲಾರಿ ಓನರ್ ಆ ಪಕ್ಕ ಇದ್ದರು. ನಿಧಾನಕ್ಕೆ ನನ್ನ ಬಳಿ ಬಂದ. ಮುಂದೆ ನಿಂತ. ಮರಳು ನನ್ನ ತಲೆ ಮೇಲೆ ಈಗ ಸುರೀತಾನೆ ಅಂತ ಕಣ್ಣು ಮುಚ್ಚಿದೆ. ಧಪ್ ಅಂತ ಶಬ್ದ ಆಯಿತು. ಕಣ್ಣು ತೆರೆದೆ. ನಮ್ಮಿಬ್ಬರ ನಡುವೆ ಮರಳು ಎಸೆದಿದ್ದ ಅದು ಗುಪ್ಪೆ ಆಗಿತ್ತು ಮತ್ತು ಅದು ನೆಲಕ್ಕೆ ಬಿದ್ಧ ಶಬ್ದವೇ ಧಾಪ್ ಶಬ್ದ!
‘ಇದೇನು ತಂದಿದ್ದೀರಿ? ಬರೀ ಕೆಸರು. ಇದರಲ್ಲಿ ಕೆಲಸ ಮಾಡೋದು ಹೇಗೆ…..?” ಅಂದ.
ಮಲ್ಲಯ್ಯನನ್ನು ಮುಂದೆ ಹೇಗೆ ದಾರಿಗೆ ತಂದೆ ಎನ್ನುವುದು ನೆನಪಾದರೆ ಈಗಲೂ ನನ್ನ ಮುಖ ಸೆವೆಂಟಿ ಮಿಮೀ ಆಗುತ್ತೆ….
(ಇದು ಈ ಸದ್ಯಕ್ಕೆ ಮುಂದಕ್ಕೆ…)

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ಕಂಡದ್ದನ್ನು ಕಂಡಂತೆ ಮಂಡಿಸಿದಂತೆ ಕಂಡ ಈ ಬರಹವು ಕಂಡ ತುಂಡವಾಗಿ ಹೇಳಬೇಕೆಂದರೆ ಮಂಡಿಗೆಯ ಸವಿಲೇಪನ ಹೊಂದಿರುವ ಅಖಂಡ ಆನಂದ ನೀಡುವ ಬ್ರಹ್ಮಾಂಡ ಬರಹ! ಕೆಂಡಸಂಪಿಗೆಯಲ್ಲಿ ದಿನದ ಅಗ್ರಬರಹ ಆಗಲು ಖಂಡಿತ ಅರ್ಹ.
ನನ್ನನ್ನು ನೆನೆಯುವುದರ ಮೂಲಕ ನನ್ನ ಘನತೆ ಹೆಚ್ಚಿಸಿದ ಗೋಪಾಲಕೃಷ್ಣರಿಗೆ ಘನವಾದ ಧನ್ಯವಾದ.
ಎಚ್. ಆನಂದರಾಮ ಶಾಸ್ತ್ರೀ
ಕಂಡ ತುಂಡವಾಗಿ ಎಂಬುದನ್ನು ಖಂಡತುಂಡವಾಗಿ ಎಂದೂ, ಸವಿ ಲೇಪನ ಹೊಂದಿರುವ ಎಂಬುದನ್ನು ಸವಿ ಲೇಪನ ಹೊಂದಿ ಎಂದೂ ಓದಿಕೊಳ್ಳಿ.
ಆರಂಭದಲ್ಲಿರುವ ‘ಶಾಸ್ತ್ರಿ’ಯನ್ನು ಬಿಟ್ಟುಬಿಡಿ.
ಶ್ರೀ ಆನಂದರಾಮ ಶಾಸ್ತ್ರೀ ಅವರಿಗೆ,ಧನ್ಯವಾದಗಳು. ನಿಮ್ಮ ಸಹೃದಯ ಅಭಿಮಾನಕ್ಕೆ ಋಣಿ
ಗೋಪಾಲಕೃಷ್ಣ