ಹೆಚ್ಚೇನು? ಸ್ವತಃ ಪಟ್ಟಾಧಿಕಾರಿಣಿಯಾದ ದೇವಮ್ಮಾಜಿಯೇ ಸಹಿಸಲಿಲ್ಲ. ಇದಕ್ಕಾಗಿ ದೇವಮ್ಮಾಜಿಯೂ, ಮಹದೇವಮ್ಮಾಜಿಯೂ ಅಪ್ಪುಕಳವೆಂಬಲ್ಲಿ ವಾಸಮಾಡುತ್ತಿದ್ದರು. ದುರಾಚಾರಿಯ ದುರ್ವಾಸನೆಯು ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇತ್ತು. ಇದನ್ನು ಸಹಿಸಲಾರದೆ ರಾಜ್ಯಪತನವೆಂದು ತಿಳಿದರೂ ಅದೇ ದೇವಮ್ಮಾಜಿಯು ಕಂಪೆನಿ ಸರಕಾರಕ್ಕೆ ದೂರುಕೊಟ್ಟಳು. ಆಗಲೇ ಬ್ರಿಟಿಷರು ಕಣ್ಣು ತೆರೆದುದು. ಅದೇ ನೆವನದಿಂದ ಕೊಡಗು ರಾಜನನ್ನು ಪದಚ್ಯುತನನ್ನಾಗಿ ಮಾಡಿ ಇಂಗ್ಲಿಷ್ ಸರಕಾರವು ರಾಜ್ಯಭಾರಕ್ಕುಪಕ್ರಮಿಸಿತು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹದಿನಾರನೆಯ ಕಥಾನಕ.

 

ಪಾಳಯಗಾರರ…. ಆಳ್ವಿಕೆಯ ಕುರುಹನ್ನು ನಮ್ಮ ಸೀಮೆಯಾದ ಸುಳ್ಯ ಕೆರೆಮೂಲೆ ಪನ್ನೆಯಲ್ಲಿ ಇರುವ ಅರಮನೆಗಳ ಕಟ್ಟೋಣಗಳ ಆಸ್ತಿವಾರಗಳಿಂದ ತಿಳಿಯಬಹುದು. ಅಲ್ಲಿಯೇ ನಮ್ಮ ಸೀಮೆಯ “ಹಿರಿಯ” ಸ್ಥಾನವಾದ “ಬೀಡು” ಎಂಬ ಕಟ್ಟೋಣವು ಈಗಲೂ ಇದೆ.

ಅಲ್ಲಿ ವರುಷಕ್ಕೊಮ್ಮೆ “ಮಿತ್ತೂರ್ನಾಯರ” ದೈವದ ಭಂಡಾರವು ಶ್ರೀ ಚೆನ್ನಕೇಶವ ದೇವಳ ಜಾತ್ರೆಗೆ ಬರುತ್ತದೆ. ಆ ಜಾತ್ರೆಯು ಧನುರ್ಮಾಸ ಹದಿನೆಂಟರ ಲಾಗಾೈತು (ಅಂದರೆ ಜನವರಿ ತಿಂಗಳ ತಾ. 7) ಇಪ್ಪತ್ತೇಳರವರೆಗೆ ಜರಗುತ್ತದೆ. ಆ ಮಧ್ಯ ಧನುರ್ಮಾಸ ಇಪ್ಪತ್ತೈದರಲ್ಲಿ ನಡೆಯುವ ವಾಲೆಸರಿ ದಿವಸ ಬಂದು ರಾತ್ರೆ ಅದೇ ಬೀಡಿನಲ್ಲಿ ತಂಗಿ ಮರುದಿನ ನಡೆಯುವ ದರ್ಶನದ ಬಲಿಗೆ ಸೇರುತ್ತದೆ. ಅದೇ ಬೀಡಿನಿಂದಲೇ ಕೊಡಗು ಸೀಮೆಯ ಮಹಾರಾಜರ ಕಿಸ್ತು ಮುಹೂರ್ತಾಚರಣೆ (ಪೊಗದಿ ಯಾನೆ ಕಂದಾಯ) ವರುಷಕ್ಕೊಮ್ಮೆ ಕಟ್ಟುತ್ತಿದ್ದರು. ಅಲ್ಲಿಂದಲೇ ಈ ಕಥೆಗೆ ಕಾರಣವಾದ “ಕಲ್ಯಾಣಪ್ಪನ ಕಾಟುಕಾಯಿ” ಎಂಬ ಸಣ್ಣದೊಂದು ದಂಗೆಯು ಎದ್ದಿತ್ತು.
ಅದು ಸಾಲಿಯಾನ 1837ನೆಯ ಇಸವಿಯ ರಾಕ್ಷಸ ಸಂವತ್ಸರದ ಧನುರ್ಮಾಸ (ದಶಂಬರ ತಿಂಗಳು)ದಲ್ಲಿ ನಡೆಯಿತು. ಈ ಕಥೆಯನ್ನು ಸಮೂಲವಾಗಿ ಸರಕಾರವಾಗಲೀ ಯಾರೂ ಬರೆಯಲಿಲ್ಲ. ಕೊಂಚ ವಿವರಣೆಯನ್ನು ಮಾತ್ರ ಕೊಡಗು ಚರಿತ್ರೆಯ ಪುಸ್ತಕದಲ್ಲಿ ಬರೆದಿರುವರು. ಇನ್ನೂ ಸ್ವಲ್ಪ ಹೆಚ್ಚಾಗಿ ಮಡಿಕೇರಿ ಹೈಸ್ಕೂಲು ಉಪಾಧ್ಯಾಯರು ಒಂದು ಸಣ್ಣ ಪುಸ್ತಕವನ್ನು ಬರೆದಿರುವರು. ಈ ದಂಗೆಯ ನಂತರವೇ 1857ರಲ್ಲಿ ಸಿಪಾಯಿ ದಂಗೆಯೊಂದು ಎದ್ದಿತ್ತು. ಆ ಮೇಲೆಯೇ ನಮ್ಮ ಅಹಿಂಸಾ ಸ್ವಾತಂತ್ರ್ಯ ಸಮರದ ಫಲರೂಪವಾಗಿ ಇಂದಿಗೆ ಸ್ವರಾಜ್ಯ ಪ್ರಾಪ್ತಿಯಾಯಿತೆನ್ನುವುದು ಹೆಮ್ಮೆಯ ಮಾತು.

ಸರಕಾರವು ಮಾತ್ರ ಇದನ್ನು ಸಣ್ಣದೊಂದು ಬಂಡಾಯವೆಂದು ಹೀನೈಸಿದರೂ ನಮ್ಮೂರ ಗೌಡ ಗಂಡಾಳುಗಳಿಂದ ಹದಿನೇಳು ದಿನಗಳ ಪರಿಯಂತರ ಪಂಚಪಾಡಿಗೆ ಬಂದಿತ್ತು. ಕಲೆಕ್ಟರನು ಸಮುದ್ರ ಹಾರಿ ಉಪ್ಪು ನೀರೇ ಕುಡಿದನು. ನಾಡೇ ನಡುಗಿತು. ಹದಿಮೂರು ದಿವಸ ನಿಶಾನಿ ಏರಿಸಿ ಬಾವಟೆ ಗುಡ್ಡೆಯಲ್ಲಿ ರಾಜ್ಯವಾಳಿದರು. ನಾಡಜನಾಂಗವು ನಾನಾ ಯಾತನೆ ಅನುಭವಿಸಿತು. ಗೌಡ ಜನಾಂಗವು ಅನೇಕ ಶಿಕ್ಷೆಗೆ ಗುರಿಯಾಯಿತು. ನಮ್ಮ ಕಥಾನಾಯಕ ಕಲ್ಯಾಣಪ್ಪನೂ ಇನ್ನಿತರರೂ ಮರಣದಂಡನೆಗೆ ಗುರಿಯಾದರು. ನಿಜವಾದ ಕಲ್ಯಾಣ ಸ್ವಾಮಿಯು ಬದುಕಿಕೊಂಡನು. ಇದೇ ಕಥಾ ಗುರಿಯು. ಕಥಾಧೋರಣೆಯು ಹೇಗಿದ್ದರೂ ಈ ಕಥೆಯ ಮುಖ್ಯೋದ್ದೇಶವು ಮಾತ್ರ ಬೇರೆಯೇ ಇತ್ತು. ಅಲ್ಲದೆ ಬ್ರಿಟಿಷ್ ಸರಕಾರದ ಆಡಳಿತೆಯ ದಬ್ಬಾಳಿಕೆಯನ್ನು ಅಣಗಿಸುವುದಕ್ಕೂ ಅಲ್ಲ, ಸ್ವಾತಂತ್ರ್ಯಾಭಿಲಾಷೆಗೂ ಅಲ್ಲ, ಶಕ್ತಿ ಪ್ರದರ್ಶನಕ್ಕೂ ಅಲ್ಲ, ಸಮಾಜದ್ರೋಹಿಯ ಶಾಸನಕ್ಕಾಗಿ ಉಂಟಾಯಿತು.

ಆ ಕಾಲದಲ್ಲಿ ನಮ್ಮ ಈ ನಾಡು ಕೊಡಗು ರಾಜನ ಆಳ್ವಿಕೆಗೆ ಸೇರಿತ್ತು. ಆದರೆ ಕೊಡಗು ವೀರರಾಜೇಂದ್ರನಿಗೆ ನಮ್ಮ ಪ್ರಾಂತವು ಸೇರಿದುದಲ್ಲ. ಟಿಪ್ಪುವು ಕೊಡಗು ವೀರರಾಜೇಂದ್ರನಿಂದ ದೊರೆತ ಸಹಾಯಕ್ಕಾಗಿ ನಮ್ಮ ಚಂದ್ರಗಿರಿ ಪರಿಯಂತದ ಸೀಮಾ ಭೂಮಿಗಳನ್ನು ಉಚಿತವಾಗಿ ಕೊಟ್ಟಿದ್ದನು. ಸ್ವತಃ ದಬ್ಬಾಳಿಕೆಶಾಹಿಯಾದ ರಾಜನ ಆಳ್ವಿಕೆಯನ್ನು ಮತ್ತೆ ಹೇಳುವುದೇನು? ಪರಿಣಾಮವು ಮಾತ್ರ ಸುರೆ ಕುಡಿದ ಮರ್ಕಟನಂತಾಯಿತು. ವೀರರಾಜನು ಲಿಂಗಾಯತ ವಂಶಸ್ಥನು. ಶಾಸ್ತ್ರ ಪಂಡಿತನು, ದೃಢಕಾಯನು, ದೈವಭಕ್ತನು, ಧರ್ಮಜ್ಞನೂ ಆಗಿದ್ದನು. ಅವನಿಗಿದ್ದ ಕೊರತೆಯು ಮಾತ್ರ ಕಾಮಲೋಲುಪತೆ. ಪರಸ್ತ್ರೀ ಜಾರನು ಆಗಿದ್ದನು. ಇವನು ಎಷ್ಟೋ ಮಂದಿ ತರುಣಿಯರನ್ನು ವಿವಾಹವಾಗಿರುವನು. ಬಹುಭಾರ್ಯೆಯರೆಂಬ ಪ್ರತೀತಿಯಿದೆ. ಮೊಗಲಶಾಹಿಯಲ್ಲಿ ತಲೆಯೆತ್ತಿದ ಘೋಷಾ ಪದ್ಧತಿಯು, ಬಾಲ್ಯ ವಿವಾಹ ಕಟ್ಲೆಯೂ ಇವನ ಕಾಲದಲ್ಲಿ ಮತ್ತಷ್ಟು ಮಿರುಗು ಕೊಟ್ಟಿತು. ಆತನ ನ್ಯಾಯ ತೀರ್ಮಾನ ಕ್ರಮವೂ ಬಹಳ ವಿಚಿತ್ರವಿತ್ತು. ಆಪಾದಿತರು ಅವರವರೇ ಆತನ ಶಿಕ್ಷೆಗೆ ಹೆದರಿ ತಮ್ಮ ತಮ್ಮ ಬಾಯಿಯಿಂದಲೇ ಸತ್ಯಸತ್ಯವೇ ನುಡಿಯುತ್ತಿದ್ದರು. ಇದರಿಂದ ನ್ಯಾಯದ ಬದಲಿಗೆ ಅನ್ಯಾಯವು ಎಷ್ಟೋ ನಡೆದಿದೆ.

ಕಲೆಕ್ಟರನು ಸಮುದ್ರ ಹಾರಿ ಉಪ್ಪು ನೀರೇ ಕುಡಿದನು. ನಾಡೇ ನಡುಗಿತು. ಹದಿಮೂರು ದಿವಸ ನಿಶಾನಿ ಏರಿಸಿ ಬಾವಟೆ ಗುಡ್ಡೆಯಲ್ಲಿ ರಾಜ್ಯವಾಳಿದರು. ನಾಡಜನಾಂಗವು ನಾನಾ ಯಾತನೆ ಅನುಭವಿಸಿತು. ಗೌಡ ಜನಾಂಗವು ಅನೇಕ ಶಿಕ್ಷೆಗೆ ಗುರಿಯಾಯಿತು. ನಮ್ಮ ಕಥಾನಾಯಕ ಕಲ್ಯಾಣಪ್ಪನೂ ಇನ್ನಿತರರೂ ಮರಣದಂಡನೆಗೆ ಗುರಿಯಾದರು. ನಿಜವಾದ ಕಲ್ಯಾಣ ಸ್ವಾಮಿಯು ಬದುಕಿಕೊಂಡನು.

ಶಿಕ್ಷೆಗಳಲ್ಲಿ ಪ್ರಾಮುಖ್ಯವಾದವುಗಳು : ಭಯಂಕರ ಶಿಖರವಾದ ಕುಂದ್ರುಮೊಟ್ಟೆಯೆಂಬ ಬೆಟ್ಟದಿಂದ ದೂಡಿಸಿ ಹಾಕುವುದು, ಕಾಡು ನೊಣವನ್ನು ಹೊಟ್ಟೆಗೆ ಕಟ್ಟಿಸುವುದು, ಮೂತ್ರ ದ್ವಾರಕ್ಕೆ ಕಡ್ಡಿ ತುರುಕಿಸುವುದು, ಕಿವಿ ಮೂಗು ಮೊಲೆಗಳನ್ನು ಕತ್ತರಿಸುವುದು, ಲಿಂಗಛೇದನ ಪಡಿಸುವುದು, ಕೊರಡೆ ಹೊಡಿಸುವುದು, ಇತ್ಯಾದಿ… ಇತ್ಯಾದಿ ಭಯಂಕರ ಶಿಕ್ಷೆಗಳನ್ನು ಕೊಡಿಸುತ್ತಿದ್ದನು. ಈತನ ಕಾಮವಾಸನೆ ಸಲುವಾಗಿಯೇ ಅನೇಕ ಭೂಮಿಗಳು, ಜಮ್ಮ, ಜಹಗೀರ್ ಆಗಿ ಹೋಗಿದ್ದವು. ಅದು ಈಗಲೂ ತಿಳಿಯುತ್ತಿದೆ.

ಆ ಕಾಲವು ಈಸ್ಟ್ ಇಂಡಿಯಾ ಕಂಪೆನಿ ಸರಕಾರದ ಅಧಿಕಾರಕ್ಕೆ ಒಪ್ಪಿತ್ತು. 1779ರಲ್ಲಿ ಟಿಪ್ಪುವನ್ನು ಕೊಂದ ಬಳಿಕ ರಾಜನು ಬ್ರಿಟಿಷರೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡು ಕೊಡಗು ರಾಜ್ಯವನ್ನು ಆಳುತ್ತಿದ್ದನು. ಕೊಡಗು ರಾಜನ ದಬ್ಬಾಳಿಕೆಯು ಮಾತ್ರ ಪ್ರಜೆಗಳನ್ನು ದಂಗು ಬಡಿಸಿತು. ಅನಾಚಾರಗಳು ಅತಿಯಾಗಿ ನಡೆಯುತ್ತಿದ್ದವು. ಏನಾದರೂ ಬ್ರಿಟಿಷ್ ಸರಕಾರಕ್ಕೆ ಸರಿಯಾದ ವರ್ತಮಾನಗಳು ಸಿಕ್ಕುತ್ತಿರಲಿಲ್ಲ. ತನ್ನ ಆಡಳಿತೆಯ ಯಾವ ಸುಳುವೂ ಸಿಕ್ಕಬಾರದೆಂದು ರಾಜನ ಬಲವಾದ ಪ್ರತಿಬಂಧವೂ ಇತ್ತು. ಏನಾದರೂ ಸಣ್ಣ ಪುಟ್ಟ ದೂರುಗಳು ಬ್ರಿಟಿಷರಿಗೆ ದೊರೆತರೂ ರೆಸಿಡೆಂಟನು ಸುಮ್ಮನಿದ್ದನು. ಹೀಗಾಗಿ ಪ್ರಜೆಗಳು ನಾನಾ ಬಗೆಯ ಪೀಡನೆಗೆ ಗುರಿಯಾಗುತ್ತಿದ್ದರು.

ಹೆಚ್ಚೇನು? ಸ್ವತಃ ಪಟ್ಟಾಧಿಕಾರಿಣಿಯಾದ ದೇವಮ್ಮಾಜಿಯೇ ಸಹಿಸಲಿಲ್ಲ. ಇದಕ್ಕಾಗಿ ದೇವಮ್ಮಾಜಿಯೂ, ಮಹದೇವಮ್ಮಾಜಿಯೂ ಅಪ್ಪುಕಳವೆಂಬಲ್ಲಿ ವಾಸಮಾಡುತ್ತಿದ್ದರು. ದುರಾಚಾರಿಯ ದುರ್ವಾಸನೆಯು ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇತ್ತು. ಇದನ್ನು ಸಹಿಸಲಾರದೆ ರಾಜ್ಯಪತನವೆಂದು ತಿಳಿದರೂ ಅದೇ ದೇವಮ್ಮಾಜಿಯು ಕಂಪೆನಿ ಸರಕಾರಕ್ಕೆ ದೂರುಕೊಟ್ಟಳು. ಆಗಲೇ ಬ್ರಿಟಿಷರು ಕಣ್ಣು ತೆರೆದುದು. ಅದೇ ನೆವನದಿಂದ ಕೊಡಗು ರಾಜನನ್ನು ಪದಚ್ಯುತನನ್ನಾಗಿ ಮಾಡಿ ಇಂಗ್ಲಿಷ್ ಸರಕಾರವು ರಾಜ್ಯಭಾರಕ್ಕುಪಕ್ರಮಿಸಿತು. ಕೊಡಗು ಮಹಾರಾಜನೆಲ್ಲಿಯೋ ತಲೆಮರೆಸಿಕೊಂಡು ತನ್ನ ಸಂತತಿಯು ಸಹ ಕಾಲವಾದನೆಂದು ತಿಳಿಯುತ್ತದೆ. ಹೀಗೆ ಒಂದು ರಾಜಸಂತತಿಯು ಅವಸಾನವನ್ನು ಹೊಂದಿತು. ಆದರೆ ರಾಜ್ಯಗಳಲ್ಲಿ ಸರಿಯಾದ ಶಿಸ್ತುಗಳಿಲ್ಲದ ಕಾಲವಾದುದರಿಂದ ಕೊಡಗು ಕರಣಿಕನಾದ ಲಕ್ಷ್ಮೀನಾರಾಯಣನ ಪ್ರತಿಷ್ಠಾಕಾಲವಾಗಿತ್ತು.

ಇದೇ ಕಾಲದಲ್ಲಿ ನಮ್ಮ ಕಥಾನಾಯಕನಾದ ಅಟ್ಲೂರು ದೊರೆ ರಾಮಪ್ಪಯ್ಯನು ಮೊಗಲ್ ಶಾಹಿ ದರಬಾರವನ್ನೇ ನಡೆಸುತ್ತಿದ್ದನು. ಗೌಡ ಜನಾಂಗಕ್ಕಂತೂ ಆಗರ್ಭ ವಿರೋಧಿಯಾಗಿದ್ದನು. ಜನರೆಲ್ಲಾ ಅವನನ್ನು ಅಟ್ಲೂರು ದೊರೆಯೆಂದು ಸಂಬೋಧಿಸಬೇಕಾಗಿದ್ದಿತು. ವಾತಾವರಣವು ಅದಕ್ಕನುಕೂಲಿಸಿಯೇ ಇತ್ತು. ಕೊಡಗು ಕರಣಿಕ ಲಕ್ಷ್ಮಿನಾರಾಯಣನು ಇವನ ಸೋದರ ಅಣ್ಣನಾಗಿದ್ದನು. ಅವರ ವಾಸ್ತವ್ಯದ ಮನೆತನವು ನಮ್ಮ ಸೀಮೆಯ ಅಜ್ಜಾವರ ಗ್ರಾಮದಲ್ಲಿತ್ತು. ಅವರು ಬಹಳ ಐಶ್ವರ್ಯವಂತರಾಗಿದ್ದರು. ದೊಡ್ಡ ಅನುಕೂಲಸ್ಥರೆಂಬ ಪ್ರತೀತಿಯಿತ್ತು. ಇವರಿಗಿದ್ದ ಮನೆತನದ ದಿವಾನ್ ಗಿರಿಯು ಹೈದರನ ಕಾಲದಲ್ಲೇ ಇತ್ತೆಂದು ತಿಳಿಯುತ್ತದೆ. ಹಾಗಾಗಿ ಕೊಡಗು ದೇಶದೊಡನೆ ಬಂದ ಪದವಿಯಾಗಿದ್ದಿತು.

ಈ ಕಾರಣಗಳಿಂದಲೇ ಅಟ್ಲೂರು ರಾಮಪ್ಪಯ್ಯನನನ್ನು ವಿಚಾರಿಸುವಷ್ಟು ಎದೆಗಾರಿಕೆಯು ಯಾರಿಗೂ ಇರಲಿಲ್ಲ. ವಿಚಾರಿಸಿದರೂ ಕೂಡ ತಮ್ಮ ಸಾವನ್ನು ತಾವು ಬಯಸಿದಂತೆಯೇ ಸರಿ. ಇಷ್ಟರಲ್ಲೂ ಆತನು ಗೌಡ ಜನಾಂಗಕ್ಕೆ ತುಂಬಾ ಕೋಟಳೆಗಳನ್ನು ಕೊಡುತ್ತಿದ್ದನು. ರಿಜಿಸ್ತ್ರಿ ಕರಾರುಗಳಿಲ್ಲದೆ ಆ ಕಾಲವಾದುದರಿಂದ ಅನೇಕ ಜನರು ಆತನಿಗೆ ಶರಣು ಹೊಡೆಯುತ್ತಿದ್ದರು. ಕೇಳಿದಂತೆ ಭೂಮಿಗಳನ್ನು ಬರೆದು ಕೊಡುತ್ತಿದ್ದರು. ಕೆಲವರನ್ನು ಬಚ್ಚಲ ಹಿಂಬದಿ ಕೊಂಡು ಹೋಗಿ ಹೊಡೆದು ವಾಲೆಗರಿಗಳಿಗೆ ಕೈಮುಟ್ಟಿಸುತ್ತಿದ್ದನು. ಸರಿ. ಅಷ್ಟೇ ಆ ಕಾಲಕ್ಕೆ ಸಾಕಾಗಿತ್ತು. ಬರಕೊಡುವವನ ಮೂರು ಗೆರೆಯೆಂದರೆ ಅದೇ ರಿಜಿಸ್ತ್ರಿಯು. ಆತನಲ್ಲಿ ವಾದ ಮಾಡಲಿಕ್ಕೆ ಯಾರಿಗೂ ಎದೆಗಾರಿಕೆಯೂ ಸಾಲದು. ಕೊಡಗು ರಾಜನು ಈ ವಿಷಯಗಳಾವುದನ್ನು ವಿಚಾರಿಸುತ್ತಿರಲಿಲ್ಲ.

ಮೂಲಿ ನಂಬ್ರ …….ನೇ ವರ್ಗದ ಬಾಬ್ತು ಬಂದ ತೀರ್ವೆ ಹಣವೆಂದರೆ ಮುಗಿಯಿತು. ಹಾಗಾಗಿ ತುಂಬಾ ಭೂಮಿಗಳು ಕರಣಿಕರ ಕುಟುಂಬಕ್ಕೆ ಬಂದಿದ್ದವು.
ಈತನ ಪತನಕ್ಕಾಗಿಯೇ ಈ ಕಾಟುಕಾಯಿಯೆಂಬ ದಂಗೆಯು ಉಂಟಾಯಿತು. ಗೌಡ ಜನಾಂಗವಂತೂ ನಿರಕ್ಷರ ಕುಕ್ಷಿಗಳೇ ಆಗಿದ್ದರು…. ಆದರೆ ಎದೆಗಾರಿಕೆಯುಳ್ಳವರು ದೃಢಕಾಯರು, ಗಂಡಾಳುಗಳು, ಶಕ್ತಿವಂತರು, ಆಜಾನುಬಾಹುಗಳು, ಕೆಂಗಣ್ಣು ಹುರಿಮೀಶೆಯವರು ಆಗಿದ್ದರು. ಹೀಗಿದ್ದ ಯೋದ್ಧತನವೇ ಇವರನ್ನು ಹಿಂದು ಮುಂದನ್ನರಿಯದ ಇಂಥಾ ದಂಗೆಗೆ ದೂಡಲ್ಪಟ್ಟಿತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮುಂದಾಗಿ ದೈನಂದಿನ ವಿರೋಧಿಯಾಗಿದ್ದ ಅಟ್ಲೂರು ದೊರೆ ರಾಮಪ್ಪಯ್ಯನನ್ನೇ ಹಿಡಿದರು. ಚಿತ್ರಹಿಂಸೆಗಳನ್ನೇ ಮಾಡಿದರು. ಈ ದಂಗೆಯ ಕಾರ್ಯಕ್ಕೆ ಅನುಮೋದಿಸಿದ ಕೊಡಗರು ಬಾರದುಳಿದರು. ಇವರು ಸತ್ತರು. ಕೊತ್ತಳಿಂಗೆ ಬಾಣದವರೆಂಬ ಬಿರಿದು ಮಾತ್ರ ನಮ್ಮ ಅಮರ ಸುಳ್ಯದ ಈ ಸೀಮೆಗೆ ದೊರಕಿತು.

ಕೊಡಗು ಕರಣಿಕ ಲಕ್ಷ್ಮಿನಾರಾಯಣನು ಇವನ ಸೋದರ ಅಣ್ಣನಾಗಿದ್ದನು. ಅವರ ವಾಸ್ತವ್ಯದ ಮನೆತನವು ನಮ್ಮ ಸೀಮೆಯ ಅಜ್ಜಾವರ ಗ್ರಾಮದಲ್ಲಿತ್ತು. ಅವರು ಬಹಳ ಐಶ್ವರ್ಯವಂತರಾಗಿದ್ದರು. ದೊಡ್ಡ ಅನುಕೂಲಸ್ಥರೆಂಬ ಪ್ರತೀತಿಯಿತ್ತು. ಇವರಿಗಿದ್ದ ಮನೆತನದ ದಿವಾನ್ ಗಿರಿಯು ಹೈದರನ ಕಾಲದಲ್ಲೇ ಇತ್ತೆಂದು ತಿಳಿಯುತ್ತದೆ. ಹಾಗಾಗಿ ಕೊಡಗು ದೇಶದೊಡನೆ ಬಂದ ಪದವಿಯಾಗಿದ್ದಿತು.

ಈ ಕಥೆಯನ್ನು ನಾನು ಪುರಾತನ ಹರಕು ಮುರುಕು ಸಾಹಿತಿಗಳು ಬರೆದ ಯಕ್ಷಗಾನ ಪುಸ್ತಕದ ಆಧಾರದಿಂದಲೂ, ವಯೋವೃದ್ಧರ ಪುರಾಣ ಪರಿಚಯದಿಂದಲೂ, ನನ್ನ ಸ್ವಂತ ತಿಳುವಳಿಕೆಯಿಂದಲೂ ಮೂಲಕಥೆಯು ಹುಟ್ಟಡಗಬಾರದೆಂದು ಯಕ್ಷಗಾನ ರೂಪವಾಗಿ ಬರೆದೆನು. ಈ ಕೃತಿಗೆ ಬಹಳಮಟ್ಟಿಗೆ ಪ್ರೋತ್ಸಾಹ ಹಾಗೂ ಆಶೀರ್ವಾದವನ್ನು ದಯಪಾಲಿಸಿದ ಶ್ರೀಮಾನ್ ರಾಷ್ಟ್ರಕವಿಗಳು ಯಂ. ಗೋವಿಂದ ಪೈಗಳ ಸನ್ನಿಧಿಗೂ, ಹೊಸ ಪ್ರೋತ್ಸಾಹವನ್ನಿತ್ತು ಈ ಕೃತಿಯನ್ನು ಅಚ್ಚು ಹಾಕಿಸಲೇಬೇಕೆಂದು ಇದರ ಸಂಬಂಧವಾಗಿ ಬರೆದ ಕಾದಂಬರಿಯ ಮೂಲ ತಾತರು ಶ್ರೀಮಾನ್ ನಿರಂಜನರವರ ಚರಣಕ್ಕೂ ಅರ್ಪಿಸಿರುವೆನು.

ಕೆಲವು ಪದ್ಯಭಾಗಗಳು:
1. ಕಲ್ಯಾಣಪ್ಪನ ಸೇನೆಯ ನೀತಿಸಂಹಿತೆ:
“ಶರಣಾಗುವವರನು ಬಿಡಬೇಕು | ವಿಪ್ರ | ವರರ ಚೇಷ್ಟೆಯು ಬಹು ಕೆಡಕಕ್ಕು | ತರವರಿದೆಲ್ಲರ ಸುಲಿಬೇಕು | ಹೆಂಗ | ಳರನೆಲ್ಲರ ಮುಟ್ಟಾದೆ ಬಿಡಬೇಕು || 5 || ಹೆಂಡವ ಕುಡಿಯಬೇಡೆಂದರು | ದುಡ್ಡು | ದೆಂಡವ ಮಾಡದಿರೆಂದರು | ಭಂಡು ಸೂಳೆಯ ಸಂಗ ಒಳಿತಲ್ಲ | ನಾವು | ಗಂಡುತನದಿ ಪೋಪುದೆಂದೆಲ್ಲ|| 6 ||”
2. ಸೇನೆಯ ದುಂಡಾವರ್ತಿಯ ವರ್ಣನೆ:
“ಕಾಸರಗೋಡಿಗೆ ಬಂದು | ಆ | ಫೀಸಿನ ಕೋಣೆಯೊಳಂದು | ತಾಸಿಲ್ದಾರನ | ಹಿಡಿದರು ಬಡಿದರು | ಮೀಸಲುಹಣ ಖ | ಜಾನೆಯ ಮುರಿದರು || 1 || ಹನ್ನೆರಡೂ ಸಾವಿರದ | ಹಣ | ವನ್ನವರೂ ಅಲ್ಲಿಂದ | ಬೆನ್ನಿಗೆ ಬಾಸುಂ | ಡೆಯ ಕೈಕಟ್ಟುತ | ಬನ್ನಿಯ ಮರದೊಳು | ತೂಗಿದರಳಲು || 2 || ಬಡಿಯುತಲಾ ಹರದರನೂ | ಹಿಡಿ | ಹಿಡಿಯುತಲಾ ಹೆಂಗಳನು | ಮುಡಿ ಮೂಗೆಳೆದರು | ಕಿವಿಗಳ ಕೊೈದರು | ಮಿಡುಕಿದ ಗಾಳದ | ಕೊಂಕಣರಿಂದ || 3 || ಪಳ್ಳಿಯೊಳೂ ನಲಿದಾಡಿ ಅವ | ರಲ್ಲಿಯ ಮುಕ್ರಿಯ ನೋಡಿ | ಹಲ್ಲನು ಮುರಿದರು | ಸೆಳೆದರು ಬಡಿದರು | ಗಲ್ಲಿ ಗಡರಿಗರ | ಬಡಿಯುತ ನಡಿಯುತ || 4 ||
3. ಮಂಗಳೂರನ್ನು ವಶಪಡಿಸಿಕೊಂಡ ಸನ್ನಿವೇಶದ ವರ್ಣನೆ:
ಬಂದರಾ ಮಂಗ್ಳೂರಿಗಾಗುತ | ಬಂದರಾಗ ||ಪ|| ಬಂದರಾ ಕಲ್ಗುಟಿಕರಂದದಿ | ಮುಂದೆ ಯುದ್ದಾರದೊಳು ಪಳ್ಳಿಯ | ನಂದು ಕೆಡಿಸುತ ಮಾಪಿಳೆಯರ ಸತಿ | ವೃಂದಕಪಮಾನದೊಳು ಕೆತ್ತಿದ | ದರಂದು ಕಿವಿಮೂಗುಗಳನೆಲ್ಲವ | ಚಂದವಾಯ್ತೆಂದೆನುತ ನಗುತಲಿ | ಬಂದು ಬಂದಲ್ಲಿಂದ ಬಡಿಯುತ | ಮುಂದೆಯೂರೊಳಗಾರ್ಭಟೀಸುತ || ಬಂ|| 1|| ಹರದರೊಂದಾಯ್ತಂದು ನಮ್ಮನು | ಪೊರೆವರ ಸೇರಲಿಕೆ ಗುಪ್ತದಿ | ನೆರಹಿಸುತ ಗಂಡಾಳು ಸಾವಿರ | ದೆರಡು ನೂರನು ಮಾಡಿಕೊಳುತಲಿ | ಸರಿದು ಬರೆ ಹಿಂದಿಂದ ಪಾಕಿಮ | ರರಿಯದಂದದಿ ಹಗೆಯ ಸಾಧಿಸಿ | ಬರಲು ಉಳ್ಳಾಲದೊಳು ಇನ್ನೂ |ರಿರದೆ ಹೊಳೆಬದಿ ಕಾಯುತೀರ್ದರು ||ಬಂ||2|| ಮುಂದೆ ನಂದಾವರದಿ ಲೂಟಿಯ | ನಂದು ಮಾಡುತ ಕಂಕನಾಡಿಯ | ಮುಂದಕಿರುತಿಹ ಕ್ರಿಶ್ಚನೀಯರ |ಚಂದಗೆಡಿಸಿದವರಿಗರ್ಜಿಗೆ | ಬಂದು ಗುರುವಿನ ಗಡ್ಡ ಹಿಡಿದೆಳ | ದಂದು ನಾನಾವಿಧ ಕೋಟಳೆ | ಇಂದ ಬಹುದಿಕ್ಕುಗಳಿಗೋಡಿತು | ಮಂದಿ ಪರಿಭವವೇನನೆಂಬೆನು ||ಬಂ||3||
4. ಕ್ರಾಂತಿ ವಿಫಲವಾದ ಮೇಲೆ ಬ್ರಿಟಿಷರ ಸೇನೆ ಊರೂರು, ಮನೆ ಮನೆಗಳಲ್ಲಿ ಭಾಗವಹಿಸಿದವರಿಗಾಗಿ ನಡೆಸಿದ ಹುಡುಕಾಟದ ವರ್ಣನೆ:
ಬಡವ ಕಲ್ಯಾಣನನು ಬಂಗನ | ಹಿಡಿದು ಸುಬ್ರಾಯನನು ಮೂವರ | ಕೊಡಲು ಪಾಶಿ ಬಿಕರ್ನಕಟ್ಟೆಲಿ | ಮಡುಹಲಂದು ||
……………………..
(ರಾಗ – ಕಲ್ಯಾಣಿ – ಝಂಪೆ)
ಕೊಡಗು ಸರಕಾರದಲಿ | ನೇಮವನು ಪಡೆದಂದು | ಕೊಡಗ ಮುಕ್ಕಂಡರರೆ | ಪೊರಟರಬ್ಬರದಿ ||1|| ಘುಡುಗುಡಿವತಿರವಕೆ ಪೊಡವಿ ಕಂಪಿಸಿತಂದು || ನಡೆದು ಮುನ್ನೂರಾಳು | ಇಳಿದಂದು ಬರಲು ||2|| ಕತ್ತಿಕೋವಿಯ ಜನರು | ಮಾಡಿದುಪಹತಿ ನಮಗೆ | ಸತ್ತರೂ ಹೋಗದದು ಕೇಳಿ ನೀವೆಂದು ||3|| ಬಾಲೆಯರು ಮಕ್ಕಳಾ | ಒಡಹುಟ್ಟುಗಳ ಬಿಟ್ಟು | ಬಾಳುವೆಯೆ ಕಾಡೆಂದು | ಹೊಕ್ಕರೆಲ್ಲಂದು ||4|| ಜನಹೊಗದ ದಟ್ಟಡವಿ | ಕಾಡೊಳಗೆ ಬಿಲತೋಡಿ | ವನಮೃಗದ ಗವಿಗಳನು | ಮರದ ಪೊಟರೆಯನು ||5|| ಉಣಲಿಲ್ಲ ಉಡಲಿಲ್ಲ | ಹಣವಿಲ್ಲ ಜನರಿಲ್ಲ | ದಣಿದರೈ ಹೊಗೆ ಹಾಕ | ಲಳಲದಂದನಕ ||6|| ತಾಯಿ ಮಕ್ಕಳ ಬಿಟ್ಟು | ಗಂಡ ಹೆಂಡತಿಯಗಲಿ | ಮಾಯವಾದೆಜಮಾನ | ಸಂಸಾರ ಕಾಣ ||7|| ನೋಯದವರಿಲ್ಲ ಮ | ಕ್ಕಳು ಕೂಗದಂತರುವೆ | ಬಾಯಿಂಗೆ ತುರುಕಲಿ | ಬದುಕಲಂದಲ್ಲಿ ||8|| ಮನೆಯನೊಂದರ ಬಿಡದೆ | ಹುಡುಕಿದರು ಮೂರ್ತಿಂಗ | ಳಿನ ಪರಿಯ ಕಾಲದಲಿ | ಹಿಡಿದು ಕಾಡಿನಲಿ ||9|| ಜನರನೆಳೆತಂದೆಲ್ಲ | ಕಾಲಗೊಪ್ಪಿಸುವಂತೆ | ದನುಜರಂದದೊಳೆಳೆದು | ಕೊಟ್ಟರಂದು ||10||

(ರಾಗ ಮಧು – ಅಷ್ಟ)
ಕೂಡೆ ವಿಚಾರಿಸು | ತಧಿಕಾರಿಗಳನು | ನೋಡಿ ರಿಜೀಸ್ತ್ರಿಯ | ವಿತರಣೆಗಳನು | ಗೌಡಾರೆ ಹದಿನಾಲ್ಕು | ಮಂದಿ ಪಾಶಿಯನು | ಮಾಡಿದರಿನ್ನುಳಿ| ದರಿಗೆ ಸೀಕ್ಷೆಯನು ||1|| ಕೊಟ್ಟರು ರಾಮಯ್ಯ | ನಣ್ಣುವಮ್ಮಣಗೆ | ಭಟ್ಟರೀಶ್ವರರು ಗೌ | ಡಜ್ಜ ಮುಖ್ಯರಿಗೆ | ಒಟ್ಟು ನೂರಿನ್ನೂರು | ಕೈದಿ ಗುಮಾನಿ | ಪಟ್ಟವರೆಂದಾಯ್ತು | ಗೌಡರ ಹಾನಿ ||2||

(‘ಕಲ್ಯಾಣಪ್ಪನ ಕಾಟುಕಾಯಿ ಎಂಬ ಯಕ್ಷಗಾನ ಪ್ರಸಂಗವು: 1956. ಇದಕ್ಕೆ ಕವಿ ಬರೆದ ‘ಹಿನ್ನೆಲೆ’ ಎಂಬ ಪ್ರಸ್ತಾವನೆಯ ಭಾಗ ಮತ್ತು ನಾಲ್ಕು ಯಕ್ಷಗಾನ ಪ್ರಸಂಗ ಪದ್ಯಗಳು.)
ಟಿಪ್ಪಣಿ:
‘ಕಲ್ಯಾಣಪ್ಪನ ಕಾಟುಕಾಯಿ ಎಂಬ ಯಕ್ಷಗಾನ ಪ್ರಸಂಗವು’ ಎಂಬ ಹಾಡುಗಬ್ಬದಲ್ಲಿ ಅಟ್ಲೂರು ರಾಮಪ್ಪಯ್ಯ ಎಂಬ ಬ್ರಾಹ್ಮಣ ಪಟೇಲ ಅಥವಾ ತುಂಡು ಪಾಳೆಯಗಾರನ ವಿರುದ್ಧದ ಗೌಡ ಜನಾಂಗದ ಆಕ್ರೋಶವೇ ದಂಗೆಯಾಗಿ ಪರಿಣಮಿಸಿ, ಜ್ಯೋತಿಷಿಯೊಬ್ಬರ ಸಲಹೆಯಂತೆ ಮಂಗಳೂರಿನ ಕಡೆಗೆ ಸಾಗಿ, ಮುಂದಿನ ಘಟನಾವಳಿಗಳಿಗೆ ಕಾರಣವಾಯಿತು ಎಂಬ ತೀರ್ಮಾನದ ನಾಟಕೀಯ ಪ್ರಸ್ತುತಿ ಇದೆ. ನಿರಂಜನರ ‘ಕಲ್ಯಾಣಸ್ವಾಮಿ’ಯಲ್ಲಿಯೂ, ಪ್ರಭಾಕರ ನೀರ್ ಮಾರ್ಗರ ‘ಮಂಗಳೂರ ಕ್ರಾಂತಿ’ಯಲ್ಲಿಯೂ ಹೋರಾಟದ ಪ್ರಾರಂಭ ಈ ಘಟನೆಯಿಂದಲೇ.
ನಿರಂಜನರ ‘ಕಲ್ಯಾಣಸ್ವಾಮಿ’ಯಲ್ಲಿ ರಾಮಪ್ಪಯ್ಯನ ವರ್ಣನೆ ಹೀಗಿದೆ: “…. ರಾಮಪ್ಪಯ್ಯ ಅಮರ ಸುಳ್ಯದ ತುಂಡು ಪಾಳೆಯಗಾರ. ಜಾತಿಯಲ್ಲಿ ಬ್ರಾಹ್ಮಣ; ವೃತ್ತಿಯಲ್ಲಿ ಚಂಡಾಲ. ಕನ್ನಡ ಜಿಲ್ಲೆಯ ಕಲೆಕ್ಟರ್ ಸಾಹೇಬರಿಗೆ ಸ್ನೇಹಿತ. ಕೊಡಗಿನ ವಿಷಯದಲ್ಲಂತೂ ಸ್ವತಃ ದಿವಾನನ ರಕ್ತಸಂಬಂಧಿಯೇ ಆತ. ಮುನ್ನೂರು ಜನ ಮೂಲದ ಹೊಲೆಯರು. ಕಡಿ – ಎಂದರೆ ಕಡಿಯಬೇಕು. ಸುಡು – ಎಂದರೆ ಸುಡಬೇಕು…. ಸ್ತ್ರೀಯರ ಅಪಹರಣ. ಹಲವರ ಪಾಲಿಗೆ ಆತ ರಾಕ್ಷಸನಾದ….. “ ಇಲ್ಲಿ ರಾಮಪ್ಪಯ್ಯನ ದೌರ್ಜನ್ಯವನ್ನು ನಿರಂಜನರು ಇನ್ನೂ ವರ್ಣಿಸುತ್ತಾರೆ. ಅವೆಲ್ಲ ಶಗ್ರಿತ್ತಾಯರ ಯಕ್ಷಗಾನ ಪ್ರಸಂಗದಲ್ಲಿ ವರ್ಣಿಸಲ್ಪಟ್ಟಂತೆ ಇವೆ.
ರಾಮಪ್ಪಯ್ಯನ ದೌರ್ಜನ್ಯ ತಾಳಲಾರದೆ ಗೌಡ ಮುಂದಾಳುಗಳು ಗುಟ್ಟಾಗಿ ಸೈನ್ಯ ಕಟ್ಟಿದರು, ರಾಮಪ್ಪಯ್ಯನ ಕೊಲೆ ಮಾಡಿದರು. ಅದೇ ಉತ್ಸಾಹದಲ್ಲಿ ಮಂಗಳೂರಿನವರೆಗೆ ಸಾಗಿದರು ಎನ್ನುವುದು ಶಗ್ರಿತ್ತಾಯರ ವಾದ. ಆದರೆ ಅದನ್ನು ಸಮರ್ಥಿಸುವ ಆಧಾರಗಳು ಸಾಲವು. ಈ ಕ್ರಾಂತಿಯಲ್ಲಿ ಗೌಡರು, ಬ್ರಾಹ್ಮಣರು, ಮಲೆಕುಡಿಯರು, ಮುಸಲ್ಮಾನರು ಸಹಿತ ಎಲ್ಲಾ ಜಾತಿಯವರು ಸೇರಿದ್ದರೆನ್ನುವುದು ಸ್ಪಷ್ಟವಾಗಿದೆ. ಕೊಡಗಿನ ಬ್ರಾಹ್ಮಣ ದಿವಾನ ಲಕ್ಷ್ಮೀನಾರಾಯಣನನ್ನು, ಅವನಿಗೆ ಕ್ರಾಂತಿಯ ಅರಿವಿದ್ದೂ ಹೇಳಲಿಲ್ಲವೆಂದು ಅಥವಾ ಭಾಗವಹಿಸಿದ್ದನೆಂದು ಬ್ರಿಟಿಷರು ಸೆರೆಮನೆಯಲ್ಲಿಡುತ್ತಾರೆ. ಅವನ ತಮ್ಮ ಅಟ್ಲೂರು ರಾಮಪ್ಪಯ್ಯ ಕ್ರಾಂತಿಕಾರಿಗಳ ಜತೆಗೇ ಇದ್ದು ವ್ಯೂಹ ರಚಿಸಿದ್ದನೆಂದೂ, ಆದರೆ ನಂತರ ಭಿನ್ನಾಭಿಪ್ರಾಯ ಅಥವಾ ತಪ್ಪು ಕಲ್ಪನೆಯಿಂದ ಅವನನ್ನು ಕೊಂದರೆಂದೂ ಪ್ರಭಾಕರ ನೀರ್ಮಾರ್ಗ ಮುಂತಾದವರು ಸೂಚಿಸಿದ್ದಾರೆ. ಪುರೋಹಿತ ಈಶ್ವರ ಭಟ್ಟರೆಂಬವರು ಕ್ರಾಂತಿಕಾರಿಗಳಿಗೆ ಸಹಾಯ ಮಾಡಿದವರಲ್ಲಿ ಒಬ್ಬರು, ಕಡೆಗೆ ಶಿಕ್ಷೆಗೊಳಗಾಗುತ್ತಾರೆ ಎಂಬ ಶಗ್ರಿತ್ತಾಯರ ಮಾಹಿತಿ ಸರಿ ಇರಬಹುದು.
ರಾಮಪ್ಪಯ್ಯ ಕೊಡಗಿನ ದಿವಾನನಾಗಿದ್ದ ಲಕ್ಷ್ಮೀನಾರಾಯಣಯ್ಯನ ತಮ್ಮ. ರಾಮಪ್ಪಯ್ಯನೂ ಬ್ರಿಟಿಷರ ವಿರುದ್ಧದ ಸಂಚಿನಲ್ಲಿ ಭಾಗವಹಿಸಿದ್ದವನೇ; ಆದರೆ ಅವನ ಮೇಲೆ ಹೋರಾಟಗಾರರಿಗೆ ಸಂಶಯ ಬಂದು ಅವನನ್ನು ಕೊಂದರು ಎನ್ನುವ ವಾದವೂ ಇದೆ. (ಅಣ್ಣ, ಕೊಡಗಿನ ದಿವಾನ ಲಕ್ಷ್ಮೀನಾರಾಯಣನಿಗೆ ಬರೆದ ಪತ್ರವೊಂದರಲ್ಲಿ ಸುಳ್ಯದ ಕ್ರಾಂತಿ ಯಶಸ್ವಿಯಾಗಲಾರದೆಂದು ಆತ ಸಂಶಯ ವ್ಯಕ್ತಪಡಿಸಿದ್ದನಂತೆ. ಆ ಪತ್ರವು ಕ್ರಾಂತಿಕಾರರಿಗೆ ಸಿಕ್ಕಿ, ರಾಮಪ್ಪಯ್ಯನ ಬಗ್ಗೆ ತಪ್ಪಭಿಪ್ರಾಯಕ್ಕೆ ಕಾರಣವಾಯಿತೆಂಬ ವಾದವಿದೆ). ‘ಅಮರ ಸುಳ್ಯದ ಸ್ವಾತಂತ್ರ್ಯ ಸಮರ’ ಎಂಬ ಪುಸ್ತಕ ಬರೆದ ಎನ್. ಎಸ್. ದೇವಿಪ್ರಸಾದ್ ಸಂಪಾಜೆಯವರು ಅಧ್ಯಯನಪೂರ್ವಕವಾಗಿ ಹಾಗೆ ವಾದಿಸಿದ್ದಾರೆ. ಪ್ರಭಾಕರ್ ನೀರುಮಾರ್ಗ ಅವರೂ ತಮ್ಮ ಕಾದಂಬರಿಯಲ್ಲಿ ಹೀಗೆಯೇ ಚಿತ್ರಿಸಿದ್ದಾರೆ.
ದೇವಿಪ್ರಸಾದರು ಹೇಳುವುದು ಹೀಗೆ: “ದಿವಾನ್ ಲಕ್ಷ್ಮೀನಾರಾಯಣ ಒಳಸಂಚಿನಲ್ಲಿ ಭಾಗಿಯಾಗಿದ್ದನೆಂಬ ಅನುಮಾನದಿಂದ ಸೆರೆಮನೆ ಸೇರಬೇಕಾಯಿತು. ಆತನ ಹೆಂಡತಿಯ ಸಹೋದರ ಕೃಷ್ಣಯ್ಯನೇ ಶಿಕ್ಷೆಗೊಳಗಾದವನು. ಕರಣಿಕ ಸುಬ್ಬಯ್ಯ ದಿವಾನರ ಮಗಳ ಗಂಡ. ದಿವಾನರ ತಮ್ಮ ರಾಮಪ್ಪಯ್ಯ ಇವರಿಬ್ಬರ ಪರಮಮಿತ್ರ. ಆತನೂ ದಂಗೆಯ ಒಳಸಂಚಿನಲ್ಲಿ ಭಾಗಿಯಾಗಿದ್ದ. ಆತ ಕೊಲ್ಲಲ್ಪಟ್ಟಾಗ ಇದು ದಂಗೆಯ ನಾಯಕ ರಾಮಯ್ಯ ಗೌಡನ ಅಪ್ಪಣೆಯಂತೆ ನಡೆದಿದೆ ಎಂದು ಬ್ರಿಟಿಷರು ಅಪಪ್ರಚಾರ ಮಾಡಿದರು. ಆದರೂ ಕ್ರಾಂತಿವೀರರು ತಮ್ಮ ನಾಯಕರಲ್ಲಿ ವಿಶ್ವಾಸ ಕಳೆದುಕೊಳ್ಳದೆ ಒಗ್ಗಟ್ಟು ಕಾಯ್ದುಕೊಂಡರು ಎನ್ನುವುದು ಕ್ರಾಂತಿ ನಾಯಕರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.” (2005) ಆದರೆ ನಿರಂಜನ, ಪ್ರಭಾಕರ್ ಇಬ್ಬರೂ ರಾಮಪ್ಪಯ್ಯನನ್ನು ಕ್ರಾಂತಿಕಾರಿಗಳೇ ಕೊಂದದ್ದು ಎಂದು ಚಿತ್ರಿಸಿದ್ದಾರೆ.
ಕಲ್ಯಾಣಪ್ಪನ ಹೋರಾಟ ಸಂಘಟಿತವಾದ ಸುಳ್ಯ ಸೀಮೆಯವರೇ ಆದ ಆಲೆಟ್ಟಿಯ ರಾಮಣ್ಣ ಶಗ್ರಿತ್ತಾಯರು ಪ್ರಾಮಾಣಿಕವಾಗಿ ಆ ಕಾಲದಲ್ಲಿ ಏನು ನಡೆದಿರಬಹುದು ಎಂದು ಜನಪದದಲ್ಲಿ ಮಾಹಿತಿ ಸಂಗ್ರಹ ಮಾಡಿ, ಅದನ್ನು ಒಂದು ಯಕ್ಷಗಾನ ಪ್ರಸಂಗವಾಗಿ ಬರೆದರು. ಅದರ ಪ್ರಸ್ತಾವನೆಯಲ್ಲಿ ಆ ಕಾಲದ ಪರಿಸ್ಥಿತಿಯನ್ನು ತಮ್ಮ ಅಧ್ಯಯನದಿಂದ ಕಂಡುಕೊಂಡಪ್ರಕಾರ, ಜತೆಗೆ ತಾವು ಆ ಹೋರಾಟವನ್ನು ಅರ್ಥಮಾಡಿಕೊಂಡ ಪ್ರಕಾರ ಬರೆದಿದ್ದಾರೆ. ಮೇಲಿನ ಗದ್ಯಭಾಗದಲ್ಲಿ ಅದನ್ನು ಕಾಣಬಹುದು. ಸುಬ್ರಾಯನನ್ನು (ಬಹುಶಃ ಸುಬ್ರಾಯ ಹೆಗಡೆ – ನೋಡಿ: ನಿರಂಜನರ ‘ಕಲ್ಯಾಣಸ್ವಾಮಿ’) ಮಂಗಳೂರಿನಲ್ಲಿ ಬಂಗರಸ ಮತ್ತು ಕಲ್ಯಾಣಪ್ಪನ ಜತೆಗೆ ಗಲ್ಲಿಗೇರಿಸಲಾಯಿತು ಎಂದು ಶಗ್ರಿತ್ತಾಯರ ಯಕ್ಷಗಾನ ಪ್ರಬಂಧ ಹೇಳುತ್ತದೆ. (ಬೇರೆ ಯಾರೂ ಸುಬ್ರಾಯನನ್ನು ಗಲ್ಲಿಗೇರಿಸಿದ್ದನ್ನು ಹೇಳಿಲ್ಲ. ಶಗ್ರಿತ್ತಾಯರ ಮಾಹಿತಿ ಕೆಲವು ಕಡೆ ತಪ್ಪಾಗಿರುವುದು ಸ್ಪಷ್ಟವಾಗಿದೆ. ಕ್ರಾಂತಿ ನಡೆದುದು ಅವರೆನ್ನುವಂತೆ ಧನುರ್ಮಾಸದಲ್ಲಲ್ಲ.).
ಕ್ರಾಂತಿಯನ್ನು ವಿಫಲಗೊಳಿಸಿದ ತರುವಾಯ ಬ್ರಿಟಿಷ್ ಸೈನ್ಯ ಬೆಳ್ಳಾರೆಯವರೆಗೆ ಹೋಗಿ ಜನರಿಗೆ ತಾವು ಅಧಿಕಾರದಲ್ಲಿದ್ದೇವೆ ಎಂಬ ಸಂದೇಶವನ್ನು ಕೊಟ್ಟಿತ್ತು. ಜತೆಗೆ ಊರೂರುಗಳಲ್ಲಿ ಹುಡುಕಿ ಕ್ರಾಂತಿಯಲ್ಲಿ ಭಾಗವಹಿಸಿದ್ದವರನ್ನು ಬಂಧಿಸಿ, ವಿಚಾರಣೆ ನಡೆಸಿ ವಿವಿಧ ಶಿಕ್ಷೆಗಳನ್ನು ಕೊಡಲಾಗಿತ್ತು. ಅದರಲ್ಲಿ ಪಟೇಲಿಕೆ, ಶಾನುಭಾಗತನಗಳಿಂದ ವಜಾಗೊಳಿಸುವುದು, ಅಂಡಮಾನಿಗೆ ಗಡೀಪಾರು, ಜೀವಾವಧಿ ಶಿಕ್ಷೆ, ಜೈಲುಶಿಕ್ಷೆ ಇತ್ಯಾದಿಗಳಿದ್ದವು. ಕೊಡಗಿನ ಸೈನ್ಯವೂ ಹೀಗೆ ಸುಳ್ಯ ಸೀಮೆಯಲ್ಲಿ ಮನೆಮನೆ ಜಫ್ತಿ ಮಾಡಲು ಸಹಕರಿಸಿತ್ತು ಎಂದು ಶಗ್ರಿತ್ತಾಯರು ದಾಖಲಿಸಿದ್ದಾರೆ (ಮೇಲೆ ಉಲ್ಲೇಖಿಸಿದ ನಾಲ್ಕನೆಯ ಪದ್ಯಭಾಗವನ್ನು ನೋಡಿ). ಡಾ. ಪ್ರಭಾಕರ ಶಿಶಿ¯ ಅವರು ತಮ್ಮ ‘ಬೇಟೆ’ ಕತೆಯಲ್ಲೂ ಇದನ್ನು ಸಮರ್ಥಿಸಿದ್ದಾರೆ. ಅವರು ಈ ಕ್ರಾಂತಿಯ ಬಗ್ಗೆ ಅಧ್ಯಯನ ಮಾಡಿದವರು, ಅದಕ್ಕೆ ಸಂಬಂಧಿಸಿದ್ದ ಮನೆತನಗಳ ಈಗಿನ ತಲೆಮಾರಿನ ವ್ಯಕ್ತಿಗಳನ್ನು ಬಲ್ಲವರು ಮತ್ತು ಈ ಘಟನೆಯ ಸುತ್ತ ಸಾಹಿತ್ಯ ಕೃತಿಗಳನ್ನು ರಚಿಸಿದವರು.
ಇದುವರೆಗೆ ಕಲ್ಯಾಣಪ್ಪನ ಹೋರಾಟದ ಹಲವು ಆಯಾಮಗಳನ್ನು ಗಮನಿಸಿದೆವು. ಇವುಗಳಲ್ಲಿ ಮುಖ್ಯವಾಗಿ ಮೂರು ವಾದಗಳಿವೆ – ಬ್ರಿಟಿಷರ ಆಳ್ವಿಕೆಯಲ್ಲಿ ನೆಮ್ಮದಿಯಿತ್ತು, ಕಲ್ಯಾಣಪ್ಪನ ಕಾಟಕಾಯಿಯಿಂದ ಜನರಿಗೆ ತೊಂದರೆಯೇ ಆಯಿತು, ಅವರು ಮೊದಲು ನಡೆಯುತ್ತಿದ್ದ ಕೊಡಗಿನಿಂದ ಇಳಿದುಬರುತ್ತಿದ್ದ ಪುಂಡರ ಕಾಟುಕಾಯಿಯ ಮುಂದುವರಿದ ಭಾಗವೇ ಆಗಿದ್ದರು; ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ; ಹಾಗಾಗಿ ಜನ ಕಲ್ಯಾಣಪ್ಪನ ಹೋರಾಟವನ್ನು ಬೆಂಬಲಿಸಲಿಲ್ಲ ಎನ್ನುವುದು ಒಂದು ನಿಲುವು. ಈ ನಿಲುವು ಈ ವಿದ್ಯಮಾನದ ಪೂರ್ಣ ಅಧ್ಯಯನ ಮಾಡಿದ ನಂತರದ ಸಾಹಿತಿಗಳಲ್ಲಿ ಕಂಡುಬರುವುದಿಲ್ಲ. ಉಳಿದ ಎರಡು ವಾದಗಳ ನಡುವೆ ಸತ್ಯ ಹಂಚಿಹೋಗಿರಬಹುದು.
ಎರಡನೆಯದು: ಕ್ರಾಂತಿಕಾರಿಗಳು ಬಹಳ ಶಿಸ್ತಿನಿಂದ ಸಂಘಟಿತರಾಗಿದ್ದ ಸ್ವಾತಂತ್ರ್ಯ ಸೇನಾನಿಗಳು. ಅವರು ಸಾರ್ವಜನಿಕರಿಗೆ ಅನ್ಯಾಯ ಮಾಡಲಿಲ್ಲ. ದರೋಡೆ, ಹಿಂಸಾಚಾರ, ಸ್ತ್ರೀಯರ ಮಾನಭಂಗ ಇತ್ಯಾದಿಗಳು ನಡೆದಿದ್ದರೆ ಅದಕ್ಕೆ ಕಾರಣ ಕಲ್ಯಾಣಪ್ಪನ ಹೆಸರಿನಲ್ಲಿ ದುಷ್ಕರ್ಮಿಗಳು ಮಾಡಿದ ಸಮಯಸಾಧಕ ಲೂಟಿ – ಎನ್ನುವ ವಾದ.
ಇದಕ್ಕೆ ಬ್ರಿಟಿಷ್ ದಾಖಲೆಗಳೂ ಸಾಕ್ಷ್ಯ ನುಡಿಯುತ್ತವೆ. ಆಗಿನ ಮಂಗಳೂರು ಜಿಲ್ಲಾ ಕಲೆಕ್ಟರ್ ಲೆವಿನ್ ತನ್ನ ವರದಿಯಲ್ಲಿ (ಲೆವಿನ್ ವರದಿ – ದೇವಿಪ್ರಸಾದ್: 2005) ‘ಬಂಡಾಯಗಾರರ ನಡವಳಿಕೆ ಮೇಲ್ಮಟ್ಟದ್ದು’ ಎಂದು ದಾಖಲಿಸಿದ್ದಾನೆ. ‘ಕೆಲವು ಅಧಿಕಾರಿಗಳೊಡನೆ ಕೆಟ್ಟದಾಗಿ ನಡೆದುಕೊಳ್ಳಬೇಕಾಗಿ ಬಂದಲ್ಲಿಯೂ ಕೂಡಾ ನಂತರ ಸಹಮತಕ್ಕೆ ತೆಗೆದುಕೊಂಡು, ಮಾನವೀಯ ನಡವಳಿಕೆ ಮತ್ತುಗೌರವದಿಂದ, ಮುಂದಿನ ಸರಕಾರ ಸ್ಥಾಪನೆಗೆ ಬೆಂಬಲ ಮುಂದುವರಿಯುವಂತೆ ಮಾಡಿದ್ದರಿಂದ, ಇವರ ನಡವಳಿಕೆ ಮೇಲ್ಮಟ್ಟದ್ದು ಮತ್ತು ನ್ಯಾಯಬದ್ಧವಾದದ್ದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.”
ಅವನು ಹೇಳುವ ಪ್ರಕಾರ – “ಇಲ್ಲಿಯ ನಿವಾಸಿಗಳು ಅವರ ನೆರೆಯವರೊಂದಿಗೆ ನಡೆದುಕೊಂಡ ರೀತಿ, ಅಸಹ್ಯ ಹುಟ್ಟಿಸುವಂತಹ ಒಂದು ಸ್ವರೂಪದ್ದಾಗಿತ್ತು. ….. ಹೊಸ ರಾಜ ಸಂತತಿ ಬಂದಿದೆ ಎಂದು ಸಾರುತ್ತಾ ದೊಡ್ಡ ಸಂಖ್ಯೆಯಲ್ಲಿ ದುರಾತ್ಮರ ತಂಡಗಳು ಬರತೊಡಗಿದ್ದವು. ಹಿಂದುಗಳ ದೇವಸ್ಥಾನದ ಸ್ವತ್ತುಗಳನ್ನು ಅಪಹರಿಸಿದರು. ಅವರು ಹೋದಲ್ಲೆಲ್ಲಾ ಗಲಭೆ ಮತ್ತು ಭಯೋತ್ಪಾದನೆ ಹರಡಿತ್ತು”. (ಲೆವಿನ್ ವರದಿ – ದೇವಿಪ್ರಸಾದ್: 2005).
“ಮುಲ್ಕಿ, ಪಣಂಬೂರು ಲೂಟಿ – ಸುಲಿಗೆ: ಮೊದಲು ಸ್ವಲ್ಪ ಕಾಲ ನಿಜವಾದ ಅತೃಪ್ತಿ ಯಾವುದೂ ಇಲ್ಲದಿದ್ದರೂ ಅಸಮಾಧಾನದ ಸುಳಿವು ಪ್ರದರ್ಶಿಸಲ್ಪಟ್ಟಿತು. ಹೊನ್ನಾವರದ ಉತ್ತರದಲ್ಲಿ ಕಾನೂನು ವ್ಯವಸ್ಥೆಯನ್ನು ವಿಫಲಗೊಳಿಸುವುದು, ಮತ್ತು ಮುಲ್ಕಿ ಪಣಂಬೂರು ನಡುವೆ ಸ್ವಹಿತಾಸಕ್ತಿಯಿಂದ ಲೂಟಿ ಸುಲಿಗೆಗಳಾಗುವುದು ಅಲ್ಲಲ್ಲಿ ಕಾಣಿಸಿಕೊಂಡವು. ಆಪತ್ಕಾಲದಲ್ಲಿ ಹುಟ್ಟಿಕೊಳ್ಳುವ ಆಕಾಂಕ್ಷೆಗಳು, ಇಂತಹಸಂದರ್ಭದಲ್ಲಿ ಸರ್ವೇಸಾಧಾರಣವಾಗಿ ತತ್ಪರಿಣಾಮದಿಂದ ಕಾಣಿಸಿಕೊಳ್ಳುತ್ತವೆ’. (ಲೆವಿನ್ ವರದಿ – ದೇವಿಪ್ರಸಾದ್: 2005)
ಲೆವಿನ್ ವರದಿಯ ಅಭಿಪ್ರಾಯವೇನೆಂದರೆ ಈ ಜಿಲ್ಲೆಯ ಜನರಲ್ಲಿ ಸಮಯಸಾಧಕ ಪುಂಡರು ಕಲ್ಯಾಣಪ್ಪನ ಹೆಸರು ಹೇಳಿಕೊಂಡು ದರೋಡೆ ಮಾಡುವ ತಂಡಗಳನ್ನು ಕಟ್ಟಿಕೊಂಡರು ಎನ್ನುವುದು. ಇದು ಸತ್ಯವಾದ ಮಾತು ಅನಿಸುತ್ತದೆ; ಯಾಕೆಂದರೆ ಈ ಬಗ್ಗೆ ಎಲ್ಲಾ ಸಾಹಿತಿಗಳಲ್ಲೂ ಒಮ್ಮತ ಇರುವ ಹಾಗಿದೆ.
ಮೂರನೆಯ ವಾದ: ಈ ಎರಡಕ್ಕಿಂತ ಭಿನ್ನವಾದ ವಾದವೊಂದನ್ನು ಶಗ್ರಿತ್ತಾಯರ ಯಕ್ಷಗಾನ ಪ್ರಸಂಗ ಮಂಡಿಸುತ್ತದೆ. (ಡಾ. ಡಿ. ಕೆ. ಚೌಟರ ‘ಮಿತ್ತಬೈಲ್ ಯಮುನಕ್ಕ’ ಕಾದಂಬರಿಯಲ್ಲಿಯೂ ಈ ಆಯಾಮದ ಚಿತ್ರಣವಿದೆ). ಅವರ ಪ್ರಕಾರ ಕ್ರಾಂತಿಕಾರಿಗಳ ನಾಯಕರು ನ್ಯಾಯಬದ್ಧವಾಗಿ ಧರ್ಮಸಮ್ಮತವಾಗಿ ಸಾಗಲು ಸೈನ್ಯಕ್ಕೆ ಸೂಚನೆ ನೀಡಿದ್ದರು; ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಅವರಿಗೆ ಬೆಂಬಲವಾಗಿರುವವರ ಧನಕನಕಗಳನ್ನು ವಶಪಡಿಸಿಕೊಳ್ಳುವುದು ಮಾತ್ರ ಧರ್ಮಸಮ್ಮತವೆಂದು ಅವರು ಸ್ಪಷ್ಟಪಡಿಸಿದ್ದರು (ನೋಡಿ – ಪದ್ಯ ಭಾಗ 1). ಆದರೆ ಸೈನ್ಯ ಅಶಿಸ್ತಿನಿಂದ ವರ್ತಿಸಿ ಮಹಿಳೆಯರ ಮಾನಭಂಗ ಮತ್ತು ಸಾರ್ವಜನಿಕರ ಧನಕನಕಗಳ ಲೂಟಿಗಳಲ್ಲಿ ಭಾಗಿಯಾಗಿತ್ತು ಎಂದು ಪ್ರಸಂಗ ಹೇಳುತ್ತದೆ (ನೋಡಿ – ಪದ್ಯ ಭಾಗ 2 ಮತ್ತು 3). ಶಗ್ರಿತ್ತಾಯರಿಗೆ ಇದಕ್ಕೆ (ಸೈನ್ಯವೇ ಲೂಟಿಯಲ್ಲಿ ಭಾಗಿಯಾಗಿತ್ತು ಎನ್ನುವುದಕ್ಕೆ) ಪೂರಕವಾದ ಮಾಹಿತಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಿಕ್ಕಿರಬಹುದು. ಆದರೆ ಆ ಕಾಲದಲ್ಲಿ ಸೈನ್ಯ ಸಾಗಿದ ದಾರಿಯಲ್ಲದ ದೂರ ದೂರದ ಊರುಗಳಲ್ಲಿ ಕೂಡ ಕಲ್ಯಾಣಪ್ಪನ ಕಾಟಕಾಯಿಯ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದದ್ದನ್ನು ಜನ ಒಂದೂವರೆ ಶತಮಾನದ ನಂತರವೂ ನೆನಪಿಟ್ಟುಕೊಂಡಿದ್ದರು. (‘ಕಾಟಕಾಯಿ’ ಕತೆಯ ಟಿಪ್ಪಣಿ ನೋಡಿ).
ಶಗ್ರಿತ್ತಾಯರು ಸ್ವಾತಂತ್ರ್ಯೋತ್ತರ ಕವಿಯಾದುದರಿಂದ ಅವರಿಗೂ ಬ್ರಿಟಿಷರನ್ನು ಓಲೈಸುವ ಉದ್ದೇಶ ಇದ್ದಿರಲಾರದು. ತನ್ನ ಅಧ್ಯಯನ ಮತ್ತು ಕ್ಷೇತ್ರ ಕಾರ್ಯಗಳಿಗೆ ದಕ್ಕಿದಷ್ಟು ಮಾಹಿತಿಗಳನ್ನು ಅವರು ಪ್ರಸಂಗದಲ್ಲಿ ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಅವರು ನೀಡುವ ಮಾಹಿತಿಗಳನ್ನು ಪೂರ್ತಿ ನಿರಾಕರಿಸಲಿಕ್ಕೂ ಸಾಧ್ಯವಿಲ್ಲ.
ಒಟ್ಟಿನಲ್ಲಿ ನಾವು ತೀರ್ಮಾನಕ್ಕೆ ಬರಬಹುದಾದುದೇನೆಂದರೆ ಮೇಲಿನ ಮೂರು ಬಗೆಯ ಘಟನೆಗಳೂ ನಡೆದಿರುವ ಸಾಧ್ಯತೆಯಿದೆ. ಈ ಕಥಾಮಾಲಿಕೆಯಲ್ಲಿ ಬಳಸಿಕೊಂಡಿರುವ ಸಾಹಿತ್ಯ ಕೃತಿಗಳನ್ನು ಸಮಗ್ರವಾಗಿ ಓದಿಕೊಂಡಾಗ ಆಗ ನಡೆದಿರಬಹುದಾದ ಘಟನಾವಳಿಗಳ ಒಂದು ಅಸ್ಪಷ್ಟ ಚಿತ್ರಣ ಓದುಗರಿಗೆ ಸಿಗುತ್ತದೆ.
ಐತಿಹಾಸಿಕ ಕಥಾನಕಗಳಲ್ಲಿ ಬರುವ ಹೆಸರು, ಸ್ಥಳ ಇತ್ಯಾದಿ ಮಾಹಿತಿಗಳು ಸತ್ಯವಿರಬಹುದು; ಆದರೆ ಉಳಿದ ವಿವರಗಳು ಸತ್ಯವಾಗಿರಲಾರದು. ಆದರೆ ಸಾಹಿತ್ಯ ಕೃತಿಗಳಲ್ಲಿ ಹೆಸರು, ಸ್ಥಳ ಇತ್ಯಾದಿಗಳು ನಿಜವಿರಲಾರದು. ಆದರೆ ಉಳಿದ ವಿವರಗಳು ನಿಜವಾಗಿರುತ್ತವೆ ಎನ್ನುವ ಮಾತಿದೆ. ಕಲ್ಯಾಣಪ್ಪನ ಹೋರಾಟದ ಕಾಲದ ಚಿತ್ರಗಳನ್ನು ಓದುವಾಗ ಈ ಮಾತು ಸ್ವಲ್ಪಮಟ್ಟಿಗೆ ನಿಜ ಅನಿಸುತ್ತದೆ. ಆದರೂ ನಮ್ಮ ಗದ್ಯ ಕಥಾನಕಗಳು ವಸಾಹತುಶಾಹಿ ಆಡಳಿತದ ವಿರುದ್ಧ 1837 ರಲ್ಲಿ ನಡೆದ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ಹಲವು ಆಯಾಮಗಳನ್ನು ಕಟ್ಟಿಕೊಟ್ಟಿರುವುದು ಕುತೂಹಲಕರವಾಗಿದೆ.