Advertisement
ಎ.ಎನ್.‌ ಪ್ರಸನ್ನ ಬರೆದ ನಾಲ್ಕು ಅತಿ ಸಣ್ಣ ಕತೆಗಳು

ಎ.ಎನ್.‌ ಪ್ರಸನ್ನ ಬರೆದ ನಾಲ್ಕು ಅತಿ ಸಣ್ಣ ಕತೆಗಳು

ಇದು ಅವರ ಊಹೆಯನ್ನು ಮೀರಿ ನೂರಾರು ಬಗೆಯಲ್ಲಿ ಹಬ್ಬಿತು. ನಾಲಗೆ ಒಳಗೊಂದು ಮೂಳೆ ಇದೆ. ಅದಕ್ಕೆ ಘಾತವಾದರೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಇನ್ನಿಲ್ಲದಷ್ಟು ಬೆಳೆಯಿತು. ಜನರು ಪರಸ್ಪರ ಮಾತನಾಡುವಾಗ ಏನು ಮಾತನಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೇಗೆ ಮಾತನಾಡುತ್ತಿದ್ದಾರೆ, ತಾವು ಮಾತನಾಡುವುದೂ ಅದೇ ಬಗೆಯಲ್ಲಿದೆಯೇ ಅಥವ ಭಿನ್ನವಾಗಿದೆಯೇ… ಹೀಗೆ ಹಲವು ಆಲೋಚನೆಗಳಿಗೆ ಆಸ್ಪದ ಉಂಟಾಯಿತು. ಒಮ್ಮೆ ಅನುಮಾನ ಉಂಟಾದರೆ ಸುಮ್ಮನೆ ಒಂದಿಲ್ಲೊಂದು ನೆಪದ ಕಾರಣ ತೆಗೆದುಕೊಳ್ಳಬೇಕಾದ ಕ್ರಮವನ್ನು ಮುಂದೆ ಹಾಕಲು ಯಾರಿಗೂ ಇಷ್ಟವಾಗುವಂತಿರಲಿಲ್ಲ.
ಎ.ಎನ್.‌ ಪ್ರಸನ್ನ ಬರೆದ ಅತಿ ಸಣ್ಣ ಕತೆಗಳ ಸಂಕಲನ “ಅದೊಂದು ದಿನ” ಕೃತಿಯ ನಾಲ್ಕು ಸಣ್ಣ ಕತೆಗಳು ನಿಮ್ಮ ಓದಿಗೆ

ದರ್ಶನ

ಅವನು ಎಲ್ಲ ವಿಧದಲ್ಲಿ ಶಿಸ್ತನ್ನು ರೂಢಿಸಿಕೊಂಡಿದ್ದ. ಸೂರ್ಯ ಹುಟ್ಟುವುದಕ್ಕೆ ಮುಂಚೆ ಮೈ ಸಣ್ಣಗೆ ಬೆವರುವಷ್ಟು ವ್ಯಾಯಾಮ ಮಾಡುತ್ತಿದ್ದ. ನಂತರ ಆಫೀಸಿನಲ್ಲಿ ಆ ದಿನ ಮಾಡಬೇಕಾದ ಕೆಲಸಗಳ ಪಟ್ಟಿಯ ಮೇಲೆ ಕಣ್ಣಾಡಿಸಿ ಸಹೋದ್ಯೋಗಿಗಳ ಜೊತೆ ಚರ್ಚಿಸಬೇಕಾದುವನ್ನು ಗುರುತು ಹಾಕಿಕೊಳ್ಳುತ್ತಿದ್ದ. ಹೆಂಡತಿ ಮಕ್ಕಳೊಂದಿಗೆ ಮಾತುಗಳೇನಿದ್ದರೂ ಆಫೀಸಿನಿಂದ ಹಿಂತಿರುಗಿದ ಮೇಲೆ. ಆಗೀಗ ಸ್ನೇಹಿತರೊಂದಿಗೆ ಸಂಜೆಯ ಹೊತ್ತು ಸ್ವಲ್ಪ ಸಮಯ ಕಳೆದರೂ ಮನೆಯವರ ಜೊತೆ ರುಚಿಯಾದ ತಿಂಡಿಗಳಿಗಾಗಿ ಸುತ್ತುತ್ತಿದ್ದ. ಅವನು ಯಾವುದರಲ್ಲಿಯೇ ನಿರತನಾಗಿದ್ದರೂ ಆರೋಗ್ಯದ ಜೊತೆಗೆ ತನ್ನ ದೇಹದ ಆಕೃತಿಯನ್ನು ಕಾಪಾಡಿಕೊಳ್ಳುವುದಕ್ಕೆ ವಿಶೇಷ ಗಮನ ಕೊಡುತ್ತಿದ್ದ. ಅದಕ್ಕೆ ಅವನ ಸ್ನೇಹಿತರು ನೀನು ರೆಗ್ಯುಲರ್ ಆಗಿ ಕೀಪಿಂಗ್ ದ ಬಾಡಿ ಪಾಠ ಹೇಳುವುದಕ್ಕೆ ಶುರು ಮಾಡು ಎಂದು ರೇಗಿಸುತ್ತಿದ್ದರು.

ಇತ್ತೀಚಿಗೆ ಅಧ್ಯಾತ್ಮಿಕ ವಿದ್ವಾಂಸರೊಬ್ಬರ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಮಾಧ್ಯಮಗಳ ಮೂಲಕ ಪ್ರಚಲಿತವಾಗಿತ್ತು. ಆ ವಿದ್ವಾಂಸರಿಗೆ ಹೆಚ್ಚು ಹೊಗಳಿಕೆ ಸಿಗುವುದಕ್ಕೆ ಅವರು ದೇಹದ ನಶ್ವರತೆಯ ಬಗ್ಗೆ ಮನದಟ್ಟಾಗುವ ರೀತಿಯಲ್ಲಿ ವಿವರಿಸುತ್ತಿದ್ದರು. ಅವನಿಗೆ ಅಷ್ಟು ಇಷ್ಟವಿಲ್ಲದಿದ್ದರೂ ಅವರಿವರ ಬಲವಂತಕ್ಕೆ ಅವರ ಭಾಷಣ ಕೇಳುವುದಕ್ಕೆ ಹೋದ. ತನ್ನ ದೇಹದ ಬಗ್ಗೆ ಅಷ್ಟೊಂದು ಕಾಳಜಿ ಇದ್ದ ಅವನು ಕೂಡ ಭಲೇ ಭಲೇ ಎಂದು ಹೊಗಳುವಷ್ಟು ಆ ವಿದ್ವಾಂಸರು ಅವನ ಮೇಲೆ ಪ್ರಭಾವ ಬೀರಿದರು. “ನೋಡಿದ್ರಾ? ನಾ ಹೇಳಿರ್ಲಿಲ್ವಾ…” ಎಂದು ಅವನ ಹೆಂಡತಿಯೂ ರೇಗಿಸಿದಳು.

(ಎ.ಎನ್.‌ ಪ್ರಸನ್ನ)

ಇದಾದ ಒಂದು ತಿಂಗಳ ತರುವಾಯ ವಿದ್ವಾಂಸರು ಉಪನ್ಯಾಸದ ಬಳಿಕ ಮೆಟ್ಟಿಲುಗಳನ್ನು ಇಳಿಯುವಾಗ ಆಯ ತಪ್ಪಿ ಬಿದ್ದು ಬಿಟ್ಟರು. ಆಗ ಆಕಸ್ಮಿಕವಾಗಿ ಅವರ ಕಿರುಬೆರಳು ನುಜ್ಜಿ ಹೋಗುವಷ್ಟು ಏಟು ಬಿತ್ತು. ಅದರಿಂದ ಉಂಟಾದ ನೋವು ಮತ್ತು ಗಾಯದ ಕಾರಣ ಅವರು ಉಪನ್ಯಾಸವನ್ನು ನಿಲ್ಲಿಸಬೇಕಾಯಿತು. ಬೇಗ ಗುಣವಾಗಲೆಂದು ವಿಶೇಷ ಬಗೆಯ ಪೇಸ್ಟ್ ಜೊತೆಗೆ ಮತ್ತಿನ್ನೇನನ್ನೋ ಬೆರಳಿಗೆ ಹಚ್ಚಿದ ನಂತರ ಕಿರುಬೆರಳು ಗುಣ ಹೊಂದುವುದಕ್ಕೆ ಬದಲಾಗಿ ಇನ್ನಷ್ಟು ಕೆಟ್ಟ ಸ್ವರೂಪವನ್ನು ಪಡೆಯಿತು. ಅದೇನಾಯಿತೆಂದು ತಿಳಿಯಲಿಲ್ಲ. ಆದರೆ ವಾಸಿಯಾಗುವುದಿಲ್ಲ ಎನ್ನುವಂತಾಯಿತು.

ಬೆರಳಿನ ಗಾಯದ ಯೋಚನೆಯಲ್ಲಿದ್ದ ವಿದ್ವಾಂಸರಿಗೆ ಹಗಲಿರುಳು ಅದರದೇ ಚಿಂತೆಯಾಯಿತು. ಪ್ರಾರಂಭದಲ್ಲಿ ಇತರರೊಂದಿಗೆ ತಮಗುಂಟಾದ ಪರಿಸ್ಥಿತಿಯನ್ನು ಕುರಿತು ಮಾತನಾಡುತ್ತಿದ್ದ ಅವರು ದಿನ ಕಳೆದಂತೆ ನಿದ್ರಿಸುವಾಗಲೂ ಅದರ ಮುಲುಗಾಟದಲ್ಲಿ ಕಳೆಯುವಂತಾಯಿತು. ಡಾಕ್ಟರ್‌ಗಳು ಮತ್ತು ವಿಶ್ವಾಸಿಗಳು ಯಾವ ಬಗೆಯಲ್ಲಿ ತಿಳಿಸಿ ಹೇಳಿದರೂ ಅವರ ಮನಸ್ಸಿಗೆ ನಾಟಲಿಲ್ಲ. ಅವರಿಗೆ ಕಿರುಬೆರಳಿನದೇ ಚಿಂತೆಯಾಗಿ ಅದರಲ್ಲಿಯೇ ಮುಳುಗಿ ಮನಸ್ಸಿನ ಮೇಲೆ ಹಿಡಿತ ತಪ್ಪಿಸಿಕೊಂಡರು. ಇದರಿಂದ ಚೇತರಿಸಿಕೊಳ್ಳಲಾರದೆ ತೀರಿ ಹೋದರು.

ನಾಯಕ

ಅವನು ಐದು ದಶಕಗಳ ಕಾಲ ದೇಶವನ್ನಾಳಿದ ನಾಯಕ. ಅವನು ಅಧಿಕಾರಕ್ಕೆ ಬಂದಾಗ ದೇಶದ ಸರ್ವತೋಮುಖ ಏಳಿಗೆಗಾಗಿ ರೂಪಿಸಿಕೊಂಡ, ಪರಿಕಲ್ಪಿಸಿದ, ಕಾಲಬದ್ಧ ಯೋಜನೆಗಳನ್ನು ಜನತೆಯ ಮುಂದಿಟ್ಟ ಕಾರಣದಿಂದ ಗಂಡು-ಹೆಣ್ಣೆನ್ನದೆ, ಹಿರಿಯರು-ಕಿರಿಯರೆನ್ನದೆ ಎಲ್ಲರಲ್ಲೂ ಹಸನಾದ ನೆಮ್ಮದಿಯ ಬಾಳಿನ ಕನಸು ಚಿಗುರಿತ್ತು. ಜನರು ಅದರ ನಿರೀಕ್ಷಣೆಯಲ್ಲಿಯೇ ಇದ್ದರು. ಅವನು ಆಡಳಿತಕ್ಕೆ ಬಂದ ಮೊದಲ ಕೆಲವು ವರ್ಷಗಳಲ್ಲಿ ವಿವಿಧ ಕ್ಷೇತ್ರದ ಜನರು ಅವನು ಹೇಳಿದ್ದಕ್ಕೆಲ್ಲ ಕೈ ಜೋಡಿಸಿದರು. ಕ್ರಮೇಣ ದೇಶದಲ್ಲಿ, ಅಕ್ಕಪಕ್ಕದ ದೇಶಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವನಿಗೆ ಮನ್ನಣೆ ದೊರಕಿತು. ಅದಕ್ಕನುಗುಣವಾಗಿ ಪ್ರತಿಷ್ಠೆಯೂ ಶೀಘ್ರವಾಗಿ ಉನ್ನತಿ ಹೊಂದುತ್ತಿತ್ತು. ಅವನಿಗೆ ತಾನು ಮಾಡುತ್ತಿರುವಷ್ಟು ಜನಹಿತ ಯೋಜನೆಗಳನ್ನು ಬೇರೆ ಯಾವ ದೇಶದಲ್ಲಿಯೂ ಜಾರಿಗೆ ತಂದಿಲ್ಲ ಮತ್ತು ಈ ರೀತಿಯ ಫಲಪ್ರದವಾದ ಯೋಜನೆಗಳು ಅವರ ಪ್ರಜ್ಞೆಗೆ ಎಟುಕುವಂಥದಲ್ಲ ಎನ್ನಿಸಲು ಮೊದಲಾಯಿತು. ದೇಶದ ಒಟ್ಟಾರೆ ಜನಸಮುದಾಯದ ಅಭಿಪ್ರಾಯವೂ ಇದೇ ನಿಟ್ಟಿನಲ್ಲಿದೆ ಎಂದು ಗುಪ್ತದಳದಿಂದ ತಿಳಿದು ತನ್ನನ್ನು ತೀರ ಭಿನ್ನ ವ್ಯಕ್ತಿ ಎಂದು ಪರಿಗಣಿಸತೊಡಗಿದ. ತಾನು ಸಾಮಾನ್ಯರೊಂದಿಗೆ ಬೆರೆಯುವುದು ತನ್ನ ಸ್ಥಾನಮಾನಕ್ಕೆ ತಕ್ಕದ್ದಲ್ಲ ಎಂದು ತೀವ್ರವಾಗಿ ಅನ್ನಿಸತೊಡಗಿತು. ಅವನು ತನ್ನ ಯೋಜನೆಗಳು ಮುಂದಾಲೋಚನೆಗಳನ್ನು ಕುರಿತಂತೆ ವಿವಿಧವಾದ ಘೋಷಣೆಗಳನ್ನು ರೂಪಿಸಲು ಮತ್ತು ಜನರಿಗೆ ಅವುಗಳನ್ನು ತಲುಪಿಸಲು ಪ್ರತ್ಯೇಕವಾದ ಇಲಾಖೆಯನ್ನು ನಿರ್ಮಾಣ ಮಾಡಿದ. ಅದು ಹೇಗೆ ಕೆಲಸ ಮಾಡುತ್ತಿದೆ ಎಂಬ ವರದಿಯನ್ನು ಗುಪ್ತಮಾರ್ಗದಿಂದ ಪಡೆದುಕೊಳ್ಳುತ್ತಿದ್ದ. ಘೋಷಣಾ ಇಲಾಖೆಯಲ್ಲಿ ಅತಿ ಜಾಣರೂ, ಭಾಷಾ ತಜ್ಞರು ಇದ್ದುದರಿಂದ ನಾಯಕನ ಅಪೇಕ್ಷೆಗೆ ಅನುಸಾರವಾಗಿಯೇ ಎಲ್ಲವೂ ಜರುಗುತ್ತಿತ್ತು. ಈ ಬಗೆಯ ಯಾವ ಕಾರ್ಯಕ್ಕಾದರೂ ಕಾಲಮಿತಿಯನ್ನು ನಿಗದಿಪಡಿಸಿ ಅದನ್ನು ಅನುಸರಿಸಲು ಸಂಬಂಧಪಟ್ಟವರಿಗೆಲ್ಲ ಸೂಚನೆ ನೀಡಲಾಗುತ್ತಿತ್ತು. ಇದರಿಂದ ನಾಯಕ ಕೈಗೊಂಡಿದ್ದ ಕೆಲಸಗಳು ಫಲಕಾರಿಯಾಗುವುದರ ಬಗ್ಗೆ ಸುಳ್ಳು ಮತ್ತು ಕಲ್ಪಿತ ವರದಿಗಳೇ ಸುತ್ತುಹೊಡೆಯಲಾರಂಭಿಸಿದವು. ಇದೆಲ್ಲಕ್ಕೂ ಬೆನ್ನೆಲುಬಾಗಿ ನಿಂತದ್ದು ಮಾಹಿತಿ ಇಲಾಖೆಯಿಂದ ನಾಯಕ ಹೊರಡಿಸುತ್ತಿದ್ದ ಲೆಕ್ಕಕ್ಕೆ ಸಿಗದಷ್ಟು ಘೋಷಣೆಗಳ ಪ್ರವಾಹ.

ನಾಯಕ ತನ್ನ ಬಗ್ಗೆ ತಾನೇ ಆರೋಪಿಸಿಕೊಂಡ ಇಂಥ ಕ್ರಮಗಳಿಂದ ಸಾಮಾನ್ಯ ಜನತೆಯ ದೃಷ್ಟಿ ಸದಾ ಅವನ ವಿಫಲತೆಯ ಕಡೆಗೆ ಇರುತ್ತಿದ್ದದ್ದನ್ನು ಗಮನಿಸಲು ಅವನಿಗೆ ಸಾಧ್ಯವಾಗಲಿಲ್ಲ. ಅವನು ತನ್ನ ಮಂತ್ರಿಗಳ ಜೊತೆ ವಿಚಾರ ವಿನಿಮಯಕ್ಕೆ ದೊರಕುವ ಸಮಯ ಕಡಿಮೆಯಾಗಲು ತೊಡಗಿತು. ಅದನ್ನು ಸರಿದೂಗಿಸಲು ಹೊಸದಾಗಿ ಕೇಳಿಸುವ ಘೋಷಣೆಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸಲು ಪ್ರಾರಂಭಿಸಿದ. ಇವೆಲ್ಲವೂ ಮಹಾಜನತೆಗೆ ಬೇರೆ ರೀತಿಯ ನಿರೀಕ್ಷೆಗೆ ದಾರಿಮಾಡಿಕೊಟ್ಟಿತು.

ಒಂದೆರಡು ದಶಕಗಳು ಕಳೆಯಿತು. ಅವನೊಂದಿಗೆ ಚರ್ಚಿಸಲು ಮಂತ್ರಿಗಳಿಗೂ ಸಾಧ್ಯವಿಲ್ಲದಾಯಿತು. ಪ್ರತಿಯೊಂದಕ್ಕೂ ಅವನ ತೀರ್ಮಾನವೇ ಆಖೈರು. ಆಗೀಗ ಹೊಸ ಬಾಳಿಗೆ ಹೊಂದಿಕೊಳ್ಳುವ, ಹೊಸ ಕಾಲಮಾನಕ್ಕೆ ಅಗತ್ಯವಾದ ಘೋಷಣೆಗಳನ್ನು ಬೇರೆ ಯಾರಿಗೂ ಬಿಡದೆ ಅವನೇ ಹಲವು ರೀತಿಗಳಲ್ಲಿ ದೇಶದುದ್ದಗಲಕ್ಕೂ ಬಿತ್ತರಿಸುತ್ತಿದ್ದ.

ಅವನು ದೇಶದಲ್ಲಿ ಜನಜೀವನಕ್ಕೆ ಬೇಕಾದ್ದನ್ನು ಪೂರೈಸಲು ಸಾಧ್ಯವಾಗಲಿಲ್ಲ. ಮಂತ್ರಿವರ್ಗಕ್ಕೂ ತೀರ್ಮಾನಿಸಲು ಬಿಡಲಿಲ್ಲ. ಅಲ್ಲಿಯೂ ಅವನು ವಾಸ್ತವದಿಂದ ದೂರವಾದ ಪ್ರಪಂಚದಲ್ಲಿಯೇ ಇರತೊಡಗಿದ. ದೇಶದ ಜನತೆ ಎಲ್ಲ ವಿಧದಲ್ಲಿಯೂ ಗತಿಯಿಲ್ಲದ ಪರಿಸ್ಥಿತಿಗೆ ತಲುಪಿದರೂ ತಾನು ನಿಜವಾದ ಜನನಾಯಕನೆಂಬ ಭ್ರಮೆಯಲ್ಲಿಯೇ ಇದ್ದನಲ್ಲದೆ ಘೋಷಣೆಗಳ ಸೃಷ್ಟಿಯನ್ನು ಮಾತ್ರ ತಡೆ ಹಿಡಿಯಲಿಲ್ಲ. ವರ್ಷಗಳು ಕಳೆಯುವಷ್ಟರಲ್ಲಿ ಸಾಕಷ್ಟು ಏಕಾಂತ ವಾಸಿಯಾದ ಅವನು ನಿವಾರಿಸಲಾಗದ ಕಾಯಿಲೆಗೆ ತುತ್ತಾದ.

ನಾಯಕನ ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಇಡೀ ಸ್ಮಶಾನದಲ್ಲಿ ಒಂದರ ಜೊತೆಗೊಂದು ಅವರು ರೂಪಿಸಿದ್ದ ಘೋಷಣೆಗಳು ಕೇಳಿಸುತ್ತಿದ್ದವು. ಇನ್ನಷ್ಟು ಮುಂದೆ ಹೋದರೆ ಸ್ಮಶಾನದ ಉದ್ದಗಲಕ್ಕೆ ಹಬ್ಬಿ ಏರುತ್ತಿದ್ದ ಬಗೆಬಗೆಯ ಘೋಷಣೆಗಳ ಅಬ್ಬರ. ಅವು ಗುಂಪುಗೂಡುತ್ತ ನೆರೆದವರನ್ನು ಹೊರದೂಡುತ್ತಿದ್ದವು.

ಮಾತುಗಳು

ಅವರಿಗೆ ಒಂದೆರಡು ದಿನಗಳಿಂದ ಏನನ್ನಾದರೂ ತಿನ್ನುವುದು ಕಷ್ಟವೆನಿಸುತ್ತಿತ್ತು. ಬಾಯಿ ಆಡಿಸಲು, ಬಾಯೊಳಗೆ ಹಾಕಿಕೊಂಡ ಪದಾರ್ಥವನ್ನು ಅಗೆಯಲು ಕಷ್ಟವಾಗುತ್ತಿತ್ತು. ಅಷ್ಟೇ ಏಕೆ, ಒಮ್ಮೊಮ್ಮೆ ಬಾಯಿಯನ್ನು ಸಾಧಾರಣ ಮಟ್ಟಿಗೆ ತೆಗೆಯಲು ಕೂಡ ಅದೇನೋ ತಡೆದಂತಾಗಿ ನೋವಾಗುತ್ತಿತ್ತು. ಇದೇನು ಮಹಾ ಎಂದುಕೊಂಡು ಅವರ ಫ್ಯಾಮಿಲಿ ಡಾಕ್ಟರ್ ಹಿಂದೊಮ್ಮೆ ತಿಳಿಸಿದಂತೆ ಬೆಳಿಗ್ಗೆ ಸಂಜೆ ಎರಡು ಹೊತ್ತು ಕೊಂಚ ಉಪ್ಪು ಬೆರೆಸಿದ ಬೆಚ್ಚಗಿನ ನೀರನ್ನು ಮುಕ್ಕಳಿಸುತ್ತಿದ್ದರು. ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ. ಸುಮ್ಮನೆ ಹಿಂಸೆ ಅನುಭವಿಸುವುದು ಏಕೆ ಎಂದು ಡೆಂಟಿಸ್ಟ್ ಡಾಕ್ಟರ್ ಕುಮಾರ್ ಅವರ ಬಳಿಗೆ ಹೋದರು.

ಅವರನ್ನು ಪರೀಕ್ಷೆಗೆ ಒಳಪಡಿಸಿ, ʻʻಅಂಥದೇನು ಇಲ್ಲ . . ಇದೆಲ್ಲ ನಿಮಗೆ ಅನ್ನಿಸಿಕೆ ಅಷ್ಟೇ” ಎಂದರು.

ʻʻಏನೂ ಆಗದೆ ಹೋದರೆ ನಂಗೆ ಯಾಕೆ ಈ ಅವಸ್ಥೆ ಬಂದಿದೆ?ʼʼ

ʻʻಅಂಥದೇನೂ ಇಲ್ಲ . . ಒಂದೆರಡು ದಿನ ಮೆತ್ತಗಿನ ಪದಾರ್ಥ ಉಪಯೋಗಿಸಿ.ʼʼ

ʻʻಹಾಗೆ ಒಂದು ಪಕ್ಷ ಅದಕ್ಕೂ ಸರಿ ಹೋಗದೆ ಹೋಗದಿದ್ದರೆ ನೀವೇ ದಾರಿ ತೋರಿಸಬೇಕುʼʼ ಎಂದರು.

ಅಲ್ಲೊಬ್ಬರದು ವಿಶಿಷ್ಟವಾದ ವ್ಯಕ್ತಿತ್ವ. ಅವರ ಎದುರು ಯಾವುದೇ ವಿಷಯವನ್ನು ಕುರಿತು ಮಾತನಾಡಿ ಗೆದ್ದವರಿಲ್ಲ. ಈ ಕಾರಣಕ್ಕಾಗಿ ಅವರು ಮಾತನಾಡುತ್ತಾರೆಂದರೆ ಪ್ರಶ್ನಿಸುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಅವರು ಮಾತನಾಡಿದ್ದನ್ನು ನಂತರ ತಮ್ಮಲ್ಲೇ ವಿಶ್ಲೇಷಿಸಿದಾಗ ಅನೇಕ ಬಾರಿ ತಪ್ಪನ್ನು ಸರಿ ಎನ್ನುವಂತೆ ಮಂಡಿಸುತ್ತಿದ್ದ ಅವರ ವಾದ ಸರಣಿ ಅನೇಕರಿಗೆ ಬೇಸರ ತರಿಸುತ್ತಿತ್ತು.

ಒಮ್ಮೆ ವಿಶೇಷವಾದ ಪ್ರಸಂಗ ನಡೆತು. ಆಗಾಗ ಅವರನ್ನು ಯಾವುದಾದರೂ ಒಂದು ವಿಷಯದ ಪರವಾಗಿ ಅಥವಾ ಅದರ ವಿರುದ್ಧವಾಗಿ ಮಾತನಾಡಲು ಕರೆಯುತ್ತಿದ್ದರು. ಅದರಂತೆ ಆ ದಿನ ಅವರು ಸಂಘಟಕರನ್ನು ಭೇಟಿಯಾದಾಗ ವಿಷಯದ ಪರವಾಗಿ ಮಾತನಾಡಿ ಎಂದು ಸೂಚಿಸಿದ್ದರು. ಸಮಾರಂಭದಲ್ಲಿ ಮಾತನಾಡುವಾಗ ತಿಳಿಸಿದ್ದನ್ನು ತಪ್ಪಾಗಿ ಕೇಳಿಸಿಕೊಂಡು ವಿಷಯದ ವಿರುದ್ಧವಾಗಿ ಮಾತನಾಡಿ ಅವರನ್ನು ಪೆಚ್ಚಾಗಿಸಿದ್ದರು. ವಿರಾಮ ಕಾಲದಲ್ಲಿ ಅವರು ಮಾಡಿದ ತಪ್ಪನ್ನು ಗಮನಕ್ಕೆ ತಂದಾಗ, ʻʻಓಹೋ ಅದಕ್ಕೇನು. ಏನಾದರೂ ಕಾರಣ ಕೊಟ್ಟು ನನಗೆ ಮಾತನಾಡಲು ಬಿಡಿ… ನಾನು ನೋಡ್ಕೋತೀನಿ ಪರವಾಗಿಲ್ಲʼʼ ಎಂದರು. ಅದರಂತೆಯೇ ಸಂಘಟಕರು ಸಂಬಂಧಪಟ್ಟವರಿಗೆ ಅದೇನೋ ಸಬೂಬು ಹೇಳಿ ನಂತರ ಮಾತನಾಡಲು ಹೇಳಿದರು. ನಂತರ ಅವರು ವಿಷಯದ ಪರವಾಗಿ ಅಷ್ಟೇ ಸಮರ್ಥವಾಗಿ ಮಾತನಾಡಿದರು. ಆದರೆ ನಂತರದ ದಿನಗಳಲ್ಲಿ ಗೇಲಿಗೆ ಗುರಿಯಾಗಿದ್ದರು. ಇದರ ನಿವಾರಣಗೆ ಅವರು ತಮ್ಮ ನಾಲಗೆಯೊಳಗೊಂದು ಮೂಳೆ ಇದೆ. ಅದು ಹೀಗೆ ಮಾಡಿಸಿದೆ ಎಂದು ಅಭಿಪ್ರಾಯ ಸೂಚಿಸುವಂತೆ ಮಾತು ಹರಿಬಿಟ್ಟರು.

ಇದು ಅವರ ಊಹೆಯನ್ನು ಮೀರಿ ನೂರಾರು ಬಗೆಯಲ್ಲಿ ಹಬ್ಬಿತು. ನಾಲಗೆ ಒಳಗೊಂದು ಮೂಳೆ ಇದೆ. ಅದಕ್ಕೆ ಘಾತವಾದರೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಇನ್ನಿಲ್ಲದಷ್ಟು ಬೆಳೆಯಿತು. ಜನರು ಪರಸ್ಪರ ಮಾತನಾಡುವಾಗ ಏನು ಮಾತನಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೇಗೆ ಮಾತನಾಡುತ್ತಿದ್ದಾರೆ, ತಾವು ಮಾತನಾಡುವುದೂ ಅದೇ ಬಗೆಯಲ್ಲಿದೆಯೇ ಅಥವ ಭಿನ್ನವಾಗಿದೆಯೇ… ಹೀಗೆ ಹಲವು ಆಲೋಚನೆಗಳಿಗೆ ಆಸ್ಪದ ಉಂಟಾಯಿತು. ಒಮ್ಮೆ ಅನುಮಾನ ಉಂಟಾದರೆ ಸುಮ್ಮನೆ ಒಂದಿಲ್ಲೊಂದು ನೆಪದ ಕಾರಣ ತೆಗೆದುಕೊಳ್ಳಬೇಕಾದ ಕ್ರಮವನ್ನು ಮುಂದೆ ಹಾಕಲು ಯಾರಿಗೂ ಇಷ್ಟವಾಗುವಂತಿರಲಿಲ್ಲ.

ಈ ಸಮಸ್ಯೆಗೆ ಪರಿಹಾರಕ್ಕೆ ಜನರಿಗೆ ಆಯ್ಕೆಗಳೇ ಇರಲಿಲ್ಲ. ಅವರು ತಮಗೆ ವಿಶ್ವಾಸ ಮತ್ತು ನಂಬಿಕೆ ಇದ್ದ ಡಾಕ್ಟರ್‌ ಹತ್ತಿರ ಹೋಗಿ ಅವರು ಒಪ್ಪಲಿ ಬಿಡಲಿ. ತಮ್ಮ ನಾಲಗೆ ಒಳಗಿರುವ ಮೂಳೆ ಭದ್ರವಾಗಿದೆಯೇ ಹೇಗೆ, ಏನಾದರೂ ಡ್ಯಾಮೇಜ್‌ ಆಗಿದೆಯೇ… ನನಗೆ ಡ್ಯಾಮೇಜ್‌ ಆಗಿದೆ ಅಂತ ಖಾತ್ರಿ ಆಗಿದೆ. ಏನಾದ್ರೂ ಮಾಡಿ ಸರಿಪಡಿಸಿ… ಇಲ್ದಿದ್ರೆ ಇದಕ್ಕೆ ಸರ್ಜನ್‌ ಹತ್ರ ಹೋಗಬೇಕಿದ್ದರೆ ಯಾರ ಹೆಸರನ್ನಾದ್ರೂ ಸಜೆಸ್ಟ್‌ ಮಾಡಿ… ನಮಗೆ ಟ್ರೀಟ್ಮೆಂಟ್‌ ಆಗೋದು ಮುಖ್ಯ. ಅವರ ಮಾತುಗಳನ್ನು ಕೇಳಿದ ಡಾಕ್ಟರುಗಳು ಆಶ್ಚರ್ಯದಿಂದ ತಮ್ಮ ಅರಿವಿಗೂ ಬಾರದಿರುವಂಥ ಸಂಗತಿಯೊಂದರ ಅನ್ವೇಷಣೆಯಾಗಿದೆಯೇ ಹೇಗೆಂದು ಯೋಚಿಸಿದರಷ್ಟೆ.

ಇವೆಲ್ಲವುಗಳ ಹೊರತಾಗಿ ಡಾಕ್ಟರುಗಳ ಹತ್ತಿರ ಕಾಯುತ್ತ ನಿಂತವರ ಸಾಲು ಬೆಳೆಯುತ್ತ ಹೋಯಿತು.

ಅಂತರಂಗ

ಇತ್ತೀಚಿನ ಐದು ವರ್ಷಗಳಿಂದ ನಮ್ಮ ನಾಟಕ ಸಂಸ್ಥೆಯಿಂದ ಯಾವುದೇ ಹೊಸ ನಾಟಕ ಪ್ರಸ್ತುತಪಡಿಸಲು ಸಾಧ್ಯವಾಗಿರಲಿಲ್ಲ. ಎರಡು ವರ್ಷದ ಹಿಂದೆ ಆ ವೇಳೆಗಾಗಲೇ ಹಲವು ಬಾರಿ ಪ್ರದರ್ಶಿಸಿದ ನಾಟಕವನ್ನು ಮತ್ತೆ ಮತ್ತೆ ಪ್ರದರ್ಶಿಸಿ ಇನ್ನಷ್ಟು ಪ್ರದರ್ಶಿಸಲು ಇಷ್ಟಪಡದೇ ಸುಮ್ಮನಾಗಿದ್ದೆವು.

ನಾವು ಈ ಬಾರಿ ಹೊಸ ಆಲೋಚನೆ ಮಾಡಿದವು. ಈಗ ಲಭ್ಯವಿರುವ ನಾಟಕಗಳ ಬದಲಿಗೆ ಹೊಸದಾಗಿ ನಾಟಕವನ್ನೇ ರಚಿಸುವ ಏರ್ಪಾಡು ಮಾಡಿ ಆನಂತರ ಅದನ್ನು ಪ್ರಸ್ತುತಪಡಿಸಬೇಕೆಂದು ಯೋಜಿಸಿದೆವು. ಸಂಸ್ಥೆಯ ಆಡಳಿತ ವರ್ಗದವರಂತೂ ಈ ಆಲೋಚನೆಯಿಂದಲೇ ಮೇಲಕ್ಕೆ ಪುಟಿದಂತಿದ್ದರು.

ಪ್ರಾಥಮಿಕವಾಗಿ ನಮಗಾಗಿ ಹೊಸ ನಾಟಕ ಬರೆಯುವರಿಗಾಗಿ ಹುಡುಕಾಟ ಪ್ರಾರಂಭವಾಯಿತು. ಒಂದಿಬ್ಬರ ಜೊತೆ ಚರ್ಚಿಸಿ ವಿಫಲರಾಗಿ ಕೊನೆಗೆ ನಮ್ಮ ಅಪೇಕ್ಷೆಯನ್ನು ಪೂರೈಸುವ ನಾಟಕ ಕರ್ತೃವನ್ನು ಪತ್ತೆ ಹಚ್ಚಿದೆವು. ಅವರು ಈಗಾಗಲೇ ಸಾಹಿತ್ಯ ಮತ್ತು ನಾಟಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದವರಾಗಿದ್ದರು.

ಅವರೊಂದಿಗೆ ಮಾತಾಡಿದಂತೆ ನಾಟಕಕ್ಕೆ ವಸ್ತುವನ್ನು ಸಿದ್ಧಪಡಿಸಿದೆವು – ಅದೊಂದು ಹೆಸರಾಂತ ಸಾಫ್ಟ್ ವೇರ್ ಕಂಪನಿ. ಅದರಲ್ಲಿನ ಹೊಸ ಅನ್ವೇಷಣೆಯ ವಿಷಯ ಹ್ಯಾಕ್ ಆದ ಹಿನ್ನೆಲೆಯಲ್ಲಿ ಆಡಳಿತ ಸ್ಥಾನದ ಮೇಲ್ಮಟ್ಟ-ಕೆಳಮಟ್ಟದ ವ್ಯತ್ಯಾಸಗಳು ತಂದೊಡ್ಡುವ ಮನುಷ್ಯ ಸಂಬಂಧದ ಬದಲಾವಣೆಗಳು, ತೊಡಕುಗಳ ವಿಶ್ಲೇಷಣೆ ಮಾಡುವುದು. ಹಣದ ಅಟ್ಟಹಾಸ, ಕರ್ತವ್ಯ ಮತ್ತು ನಿಷ್ಠೆಯ ಜಗ್ಗಾಟದಲ್ಲಿ ಮೋಸ ಒಳತೂರಿ, ಗೆಲ್ಲುವ ಹಂತ ತಲುಪಿದಾಗ ಎಲ್ಲ ತಲೆಕೆಳಗಾಗುವುದು ಮತ್ತು ಈ ಕ್ರಿಯೆಯಲ್ಲಿ ನಿಸ್ವಾರ್ಥಿಯಾದ ಪಿ ಎ. ಹತಳಾಗುವುದು ಎಂಬುದಾಗಿ ಸಿದ್ಧಪಡಿಸಿದೆವು..
ನಾಟಕದ ವಸ್ತು ಮತ್ತು ಅದರ ಕಥನದ ಚೌಕಟ್ಟು ನಾಟಕಕಾರರಿಗೆ ತುಂಬಾ ಇಷ್ಟವಾಯಿತು. ಯಾವ ಔಪಚಾರಿಕ ಸಂಗತಿಗಳ ಅವಶ್ಯಕತೆ ಇಲ್ಲದೆ ಸಂಸ್ಥೆಯ ಸದಸ್ಯರು ಬಿನ್ನವಿಸಿದ ಅಂದಾಜು ಸಮಯದಲ್ಲಿ ನಾಟಕ ತಪ್ಪದೆ ರಚಿಸಿ ಕೊಡುವ ಆಶ್ವಾಸನೆ ಕೊಟ್ಟರು.

ಆಶ್ಚರ್ಯವೆಂದರೆ ಅವರು ತಮ್ಮ ಮಾತಿನಂತೆ ನಾಟಕ ಬರೆದು ಮುಗಿಸಿದ್ದು. ಕೂಡಲೇ ನಾಟಕ ವಾಚಿಸಲು ಫೋನ್ ಮಾಡಿ ಸಂಸ್ಥೆಯ ಸದಸ್ಯರೆಲ್ಲ ಒಟ್ಟಿಗೆ ಸೇರಿದೆವು. ನಾಟಕದ ಓದು ಪ್ರಾರಂಭವಾಗಿದ್ದಷ್ಟೇ ಗೊತ್ತು. ಅದು ನಮ್ಮನ್ನು ಒಳಗೊಂಡ ರೀತಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ನಾಟಕದ ಓದಿನ ಅವಧಿಯ ತನಕ ಅದರ ದೃಶ್ಯಾವಳಿಗಳು ನಮ್ಮ ಮನಸ್ಸಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಸೃಷ್ಟಿಯಾಗುತ್ತಿದ್ದವು. ನಾಟಕ ರಚನೆಯಲ್ಲಿ ಅವರು ತಕ್ಕಮಟ್ಟಿಗೆ ಬ್ರೆಕ್ಟ್‌ನ ವಿಧಾನವನ್ನು ಅನುಸರಿಸುವಂತೆ ಕಂಡು ನಮ್ಮ ನಾಟಕ ಕ್ಷೇತ್ರಕ್ಕೆ ಇದು ಹೊಸದು ಎನಿಸಿತು.
ನಿರ್ದೇಶಕರನ್ನು ನಟವರ್ಗದವರನ್ನು ಗೊತ್ತುಪಡಿಸಿ ನಾಟಕದ ಬಿಡಿ ಬಿಡಿ ದೃಶ್ಯಗಳ ರಿಹರ್ಸಲ್ ಪ್ರಾರಂಭಿಸಿದೆವು. ಅದು ಸರಾಗವಾಗಿ ಮುಂದುವರಿಯುತ್ತ ಸಮಾಧಾನಕರ ಪ್ರಗತಿ ಕಾಣುತ್ತಿತ್ತು..

ನಾಟಕದ ಪ್ರದರ್ಶನ ದಿನವನ್ನು ಗೊತ್ತು ಮಾಡಿದೆವು. ಅದಕ್ಕೆ ಮುಂಚಿತವಾಗಿ ಇಡೀ ನಾಟಕವನ್ನು ಪ್ರದರ್ಶನಕ್ಕೆ ಒಳಗೊಂಡ ಬಗೆಯಲ್ಲಿ ನೋಡುವುದೆಂದು ನಿರ್ಧರಿಸಿದೆವು. ಆಗಲೇ ಶುರುವಾದದ್ದು ಭಯಂಕರ ಕೋಲಾಹಲ. ನೋಡಿದರೆ ಎತ್ತರದ ಧ್ವನಿಯಲ್ಲಿ ಮಾತನಾಡುತ್ತಿದ್ದದ್ದು ಪಾತ್ರಧಾರಿಗಳಲ್ಲ. ಪಾತ್ರಗಳು! ಅವು ಪಾತ್ರಧಾರಿಗಳು ಮಾತನಾಡುವುದಕ್ಕಿಂತ ತೀರ ಭಿನ್ನವಾಗಿತ್ತು. ಪಾತ್ರಧಾರಿಗಳಾದರೆ ಪಾತ್ರವನ್ನು ತಾನು ಅರ್ಥಮಾಡಿಕೊಂಡ ಬಗೆ, ಅದು ಒಳಗಿಳಿಯುವ ರೀತಿ, ತಾನು ನಿರ್ದೇಶಕನ ಕಲ್ಪನೆಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಪ್ರಯತ್ನಪಡುತ್ತಿರುವುದು ಮುಂತಾದುವನ್ನು ಬಿಡಿಸಿ ಹೇಳುತ್ತಿದ್ದರು. ಆದರೆ ನಾವು ಕಾಣುತ್ತಿದ್ದದ್ದು ಅದಲ್ಲ. ಪಾತ್ರವೊಂದು ವಾಗ್ವಾದ ಮಾಡುತ್ತಿರುವಂತೆ ಕಂಡಿತು. ಆ ಪಾತ್ರ ತನಗೊಂದು ಸ್ವಂತಿಕೆ ಇದೆ. ವರ್ತನೆ ಹಾಗೂ ನಡವಳಿಕೆ ತನ್ನ ಸಹಜ ಸ್ವಭಾವಕ್ಕೆ ತಕ್ಕ ಹಾಗಿರಬೇಕು. ಕೇವಲ ಇನ್ನೊಂದು ಮತ್ತೊಂದು ಪಾತ್ರ ಇಷ್ಟ ಪಟ್ಟಂತೆ ಅಥವಾ ನಿರ್ದೇಶಕರು ಸೂಚನೆ ಕೊಟ್ಟಂತೆ ನಾನು ಮಾಡುವುದಿಲ್ಲ. ಹಾಗೆ ಮಾಡಿ ಎಂದು ಬಲವಂತ ಮಾಡುವ ಹಕ್ಕು ಯಾರಿಗೂ ಇಲ್ಲ. ಪಾತ್ರ ಎಂದ ಕೂಡಲೇ ತಾನೊಂದು ಹುಟ್ಟು ಪಡೆದ ಹಾಗೆ. ಅದರೊಂದಿಗೇ ಹಕ್ಕು ಮತ್ತು ಸ್ವಾತಂತ್ರ್ಯವೂ ಸೇರಿಕೊಳ್ಳುತ್ತದೆ. ಎಲ್ಲವನ್ನು ನಿರ್ಧರಿಸುವುದು ತಾನು ಮಾತ್ರ ಎಂದು ಹಿಡಿದ ಪಟ್ಟು ಬಿಡದೆ ನಾಟಕದಲ್ಲಿ ತನಗೆ ಸಂಬಂಧಿಸಿದ್ದನ್ನು ಗುರಿಯಾಗಿಸಿಕೊಂಡು ತನ್ನ ನಿಲುವನ್ನು ತಿಳಿಸಿತು. ಇದನ್ನು ಕಂಡು ಆ ಪಾತ್ರದ ಪಾತ್ರಧಾರಿ ಪೆಚ್ಚಾಗಿ ಕುಳಿತಿದ್ದರು.

ಇದೇ ರೀತಿ ಇತರ ಪಾತ್ರಗಳು ಒಂದೊಂದಾಗಿ ತಮ್ಮ ನಿಲುವನ್ನು ತೆರೆದಿಟ್ಟವು. ಇವೆಲ್ಲ ಮುಗಿದ ಮೇಲೆ ಎಲ್ಲವೂ ಸ್ತಬ್ಧ. ಸುತ್ತಲ ಗಾಳಿಗೂ ಕಿಟಕಿಯಿಂದಾಚೆ ಹೊರಗೆ ಹೋಗಬೇಕೆಂದು ತೋಚದೆ ಅಲುಗಾಡಲಿಲ್ಲ. ಬೆಳಕಿಗೂ ಕೂಡ ಬೆಳಕು ಬೇಕೆನಿಸಿದ ಆವರಣ. ನಾವು ಮಾತಿಲ್ಲದೆ ಸುಮ್ಮನೆ ಕುಳಿತೆವು. ದಿಢೀರನೆ ಉದ್ಭವಿಸಿದ ಈ ಪ್ರಸಂಗವನ್ನು ನಿಭಾಯಿಸುವುದು ಹೇಗೆ, ಪಾತ್ರ, ಪಾತ್ರಧಾರಿಗಳು ಮತ್ತು ನಿರ್ದೇಶಕರ ನಡುವೆ ಹೊಂದಾಣಿಕೆ ತರಲು ಏನು ಮಾಡಬೇಕು ಮತ್ತು ಹೇಗೆ ಪ್ರಾರಂಭಿಸಿ ಮುನ್ನಡೆಯಬೇಕು ಎಂದು ಯೋಚಿಸುತ್ತ ಕುಳಿತೆವು. ಸುತ್ತಲ ಎಲ್ಲವನ್ನು ನೋಡುತ್ತಿದ್ದ ನಾವು ನಿರ್ದೇಶಕರು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎಂದು ಅವರಿದ್ದ ಕಡೆ ನೋಡಿದರೆ, ಅವರು ಕಾಣಲಿಲ್ಲ.

(ಕೃತಿ: ಅದೊಂದು ದಿನ (ಅತಿ ಸಣ್ಣ ಕತೆಗಳು), ಲೇಖಕರು: ಎ.ಎನ್.‌ ಪ್ರಸನ್ನ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 15o/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ