ಸಾಮೂಹಿಕವಾಗಿ ಇಂದು ನಾಟಕಗಳನ್ನು ಆಡಲು ಬಹಳ ಜನರು ಸೇರುತ್ತಿಲ್ಲ. ತಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಆ ಸಂದರ್ಭದ ರಂಗಭೂಮಿಯ ವೈಭವವೇ ಬೇರೆ. ಸಾಂಪ್ರದಾಯಿಕ ವೃತ್ತಿರಂಗಭೂಮಿಯ ನಾಟಕ ಕಂಪನಿಗಳು ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹರ್ಷದಾಯಕ ಬೆಳವಣಿಗೆ. ಅದು ಅವರಿಗೆ ಅನಿವಾರ್ಯವೂ ಕೂಡ ಆಗಿದೆ. ಜನರ ಅಭಿರುಚಿ, ಅಭಿವೃದ್ಧಿಗೆ ತಕ್ಕಂತೆ ನಾಟಕಗಳು ತಮ್ಮ ಶೈಲಿ ಸಂಭಾಷಣೆ ಎಲ್ಲವನ್ನು ಮಾರ್ಪಡಿಸಿಕೊಂಡಿವೆ. ಬಹಳಷ್ಟು ಕಲಾವಿದರು ಸಾಮಾಜಿಕ ನಾಟಕ ಕಂಪನಿಗಳಿಂದ ಬದುಕುವವರಿದ್ದಾರೆ. ಆದರೂ ಕೂಡ ನಾಟಕಗಳಿಂದ ಬಹಳಷ್ಟು ಜನ ಪ್ರೇಕ್ಷಕರು ವಿಮುಕ್ತರಾಗುತ್ತಿರುವುದು ಕೂಡ ದುರಂತ.
ಏಕವ್ಯಕ್ತಿ ರಂಗ ಪ್ರಯೋಗದ ಸವಾಲು ಮತ್ತು ಸಾಧ್ಯತೆಗಳ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ
ಇತ್ತೀಚಿನ ದಿನಮಾನಗಳಲ್ಲಿ ಆಧುನಿಕ ರಂಗಭೂಮಿಯು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದ ಕಡೆಗೆ ಸಾಗುತ್ತಿದೆ ಎಂಬ ಆತಂಕ ಎದುರಾಗಿದೆ. ಏಕೆಂದರೆ ಹಿಂದಿನ ದಿನಮಾನಗಳಲ್ಲಿ ಒಂದು ನಾಟಕ ಪ್ರಯೋಗ ಹಲವಾರು ವ್ಯಕ್ತಿಗಳ ವ್ಯಕ್ತಿತ್ವವನ್ನು ಪರಿಚಯ ಮಾಡಿಸುವಂಥ ಪ್ರಯೋಗವಾಗಿ ರಂಗದ ಮೇಲೆ ತನ್ನ ಪ್ರದರ್ಶನವನ್ನು ತೋರ್ಪಡಿಸುತ್ತಿತ್ತು. ಒಂದು ನಾಟಕದಲ್ಲಿ ಗಂಡು ಹೆಣ್ಣು ಮಕ್ಕಳು ವಸ್ತು ವೇಷಭೂಷಣ, ಪ್ರಾದೇಶಿಕತೆ, ಭಾಷೆ ಎಲ್ಲವೂ ಒಗ್ಗೂಡಿ ಬಹುಶಿಸ್ತನ್ನು ಪ್ರದರ್ಶಿಸುವ ವೇದಿಕೆಯನ್ನು ರಂಗಭೂಮಿ ಒದಗಿಸಿತ್ತು. ಆಧುನಿಕ ರಂಗಭೂಮಿ ಹಿಗ್ಗದೆ ಕುಬ್ಜವಾಗುತ್ತಿದೆ ಎಂಬ ಭಾವ ರಂಗಾಸಕ್ತರನ್ನು ಕಾಡುತ್ತಿದೆ.
ಇಂದು ಈ ರಂಗಭೂಮಿಗೆ ಯಾರ ಹಂಗಿಲ್ಲದೆ ಒಂಟಿಯಾಗಿ ಅನಾಥವಾಗಿ ಓಡಾಡುತ್ತಿದೆ ಎಂಬ ಭಾವನೆ ಹಲವರಲ್ಲಿ ಮನೆ ಮಾಡಿದೆ. ಇತ್ತೀಚಿನ ಆಧುನಿಕ ರಂಗಭೂಮಿಯಲ್ಲಿ ಏಕವ್ಯಕ್ತಿಯ ರಂಗ ಪ್ರಯೋಗಗಳು ಹೆಚ್ಚುತ್ತಿರುವುದು ಸಮಾಜಕ್ಕೆ ಮಾದರಿ ನಡೆಯೋ ಅಥವಾ ಬೇಸರದ ನಡೆಯೋ ಗೊತ್ತಾಗುತ್ತಿಲ್ಲ. ಏಕೆಂದರೆ ಹಲವರು ತಮ್ಮ ಸಮಯವನ್ನು ರಂಗಭೂಮಿಗೆಂದು ಮೀಸಲಿಡುತ್ತಿದ್ದರು. ಆದರೆ ಇಂದು ಅದು ಸಮುದಾಯದ ಪ್ರಜ್ಞೆಯಾಗದೆ ಏಕ ವ್ಯಕ್ತಿಯ ಪ್ರಜ್ಞೆ ಆಗಿರುವುದು ದುರಂತ. ಸಾಮೂಹಿಕವಾಗಿ ಇಂದು ನಾಟಕಗಳನ್ನು ಆಡಲು ಬಹಳ ಜನರು ಸೇರುತ್ತಿಲ್ಲ. ತಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಆ ಸಂದರ್ಭದ ರಂಗಭೂಮಿಯ ವೈಭವವೇ ಬೇರೆ. ಸಾಂಪ್ರದಾಯಿಕ ವೃತ್ತಿರಂಗಭೂಮಿಯ ನಾಟಕ ಕಂಪನಿಗಳು ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹರ್ಷದಾಯಕ ಬೆಳವಣಿಗೆ. ಅದು ಅವರಿಗೆ ಅನಿವಾರ್ಯವೂ ಕೂಡ ಆಗಿದೆ. ಜನರ ಅಭಿರುಚಿ, ಅಭಿವೃದ್ಧಿಗೆ ತಕ್ಕಂತೆ ನಾಟಕಗಳು ತಮ್ಮ ಶೈಲಿ ಸಂಭಾಷಣೆ ಎಲ್ಲವನ್ನು ಮಾರ್ಪಡಿಸಿಕೊಂಡಿವೆ. ಬಹಳಷ್ಟು ಕಲಾವಿದರು ಸಾಮಾಜಿಕ ನಾಟಕ ಕಂಪನಿಗಳಿಂದ ಬದುಕುವವರಿದ್ದಾರೆ. ಆದರೂ ಕೂಡ ನಾಟಕಗಳಿಂದ ಬಹಳಷ್ಟು ಜನ ಪ್ರೇಕ್ಷಕರು ವಿಮುಕ್ತರಾಗುತ್ತಿರುವುದು ಕೂಡ ದುರಂತ. ಗುಬ್ಬಿ ವೀರಣ್ಣನವರಂತಹ ನಾಟಕ ಕಂಪನಿಗಳು ಆ ಕಾಲದ ಮನೋರಂಜನೆಯ ತಾಣಗಳಾಗಿದ್ದವು. ಸಿನಿಮಾ, ಧಾರಾವಾಹಿ ದೂರದರ್ಶನಂತ ಹಲವು ಡಿಜಿಟಲ್ ಮಾಧ್ಯಮಗಳು ರಂಗಭೂಮಿಯನ್ನು ಸದ್ದಿಲ್ಲದಂತೆ ಮಾಡಿರಬಹುದು. ಆದರೆ ಡಿಜಿಟಲ್ ಮಾಧ್ಯಮಕ್ಕೆ ಸಾವಿದೆ ಹೊರತು ರಂಗಭೂಮಿಗೆ ಸಾವಿಲ್ಲ ಎಂಬುವುದನ್ನು ನಾವು ಮರೆಯಬಾರದು.

ಇರಲಿ, ಸಧ್ಯದ ಮಟ್ಟಿಗೆ ಆಧುನಿಕ ರಂಗಭೂಮಿಯಲಾಗುತ್ತಿರುವ ತಲ್ಲಣಗಳನ್ನು ಗಮನಿಸೋಣ.
ಏಕವ್ಯಕ್ತಿ ಪ್ರದರ್ಶನದಿಂದ ಆಗುವ ಲಾಭಗಳೆಂದರೆ ಹಣದ ಉಳಿತಾಯ, ಸಮಯದ ಸದುಪಯೋಗ, ಬಹಳ ಕಡೆ ನಾಟಕ ಪ್ರದರ್ಶನಗಳನ್ನು ಮಾಡುವ ಸಾಧ್ಯತೆಗಳು ಕೂಡ ಹೆಚ್ಚಿವೆ. ಚಿಕ್ಕದಾದ ರಂಗಮಂದಿರ ದೊರೆತರೆ ಸಾಕು. ಯಾರೊಬ್ಬರ ಮೇಲೆ ಹೆಚ್ಚಾಗಿ ಪರಾವಲಂಬಿ ಆಗಿರುವುದಿಲ್ಲ. ಸೀಮಿತ ರಂಗ ಪರಿಕರಗಳು ಬೇಕಾಗುತ್ತವೆ. ನಾನಾಯ್ತು ನನ್ನ ಕೆಲಸವಾಯಿತು ಎಂಬಷ್ಟಕ್ಕೆ ಮಾತ್ರ ಸೀಮಿತವಾಗಬಹುದು, ರಂಗಭೂಮಿಗೆ ವೈಯಕ್ತಿಕ ಕೊಡುಗೆಯು ಆಗಬಹುದು.
ಏಕವ್ಯಕ್ತಿ ರಂಗ ಪ್ರಯೋಗದಿಂದ ಹಲವು ಅನಾನುಕೂಲತೆಗಳು ಕೂಡ ಇವೆ. ಅವುಗಳೆಂದರೆ, ರಂಗದಲ್ಲಿ ಒಬ್ಬನೇ ವ್ಯಕ್ತಿ ಮಾತನಾಡುವುದರಿಂದ ಪ್ರೇಕ್ಷಕರಿಗೆ ಕುತೂಹಲ ಕಡಿಮೆಯಾಗಬಹುದು. ಜಾಣ್ಮೆಯ ಪ್ರೇಕ್ಷಕನಿಗೆ ಮಾತ್ರ ಈ ಪ್ರದರ್ಶನ ಒಗ್ಗುತ್ತದೆ. ಏಕೆಂದರೆ ಹಲವು ಪಾತ್ರಗಳನ್ನು ಏಕ ವ್ಯಕ್ತಿಯೇ ಮಾಡುವುದರಿಂದ ಏಕಾಗ್ರತೆಯಿಂದ ಪ್ರೇಕ್ಷಕನನ್ನು ಸೆಳೆಯುವಲ್ಲಿ ಪಾತ್ರ ವಿಫಲವಾಗಬಾರದು. ದೊಡ್ಡದಾದ ರಂಗಮಂದಿರದಲ್ಲಿ ಇದನ್ನು ಪ್ರಯೋಗಿಸುವುದು ಸ್ವಲ್ಪ ಕಷ್ಟವೇ. ಏಕೆಂದರೆ ಅತಿ ಹೆಚ್ಚು ಜಾಗವನ್ನು ಪಾತ್ರಕ್ಕೆ ಬೇಕಾಗುವಷ್ಟು ಬಳಸಿಕೊಳ್ಳುವಲ್ಲಿ ತೊಂದರೆ ಆಗಬಹುದು. ಪರಿಪೂರ್ಣ ನಟನಾದರೂ ಕೂಡ ಪಾತ್ರವನ್ನು ಜನರಿಗೆ ಮುಟ್ಟಿಸುವಲ್ಲಿ ಸ್ವಲ್ಪ ಮಟ್ಟಿನ ಸೋಲು ಕೂಡ ಉಂಟಾಗಬಹುದು. ಒಮ್ಮೊಮ್ಮೆ ಪಾತ್ರಕ್ಕೆ ತಕ್ಕಂತೆ ಭಾಷೆ ಬದಲಾವಣೆಯಾದಾಗ ಕೇಳುಗರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆಂಬುದು ಊಹೆಗೆ ನಿಲುಕಲಾರದು. ಒಬ್ಬ ವ್ಯಕ್ತಿ ಸಕಲ ಕಲಾವಲ್ಲಭನಾಗಿ ವಿಜೃಂಭಿಸುವುದಕ್ಕೆ ಸೂಕ್ತ ವೇದಿಕೆಯಾದರು ಸರ್ವಾಧಿಕಾರ ಧೋರಣೆ ಆಗಬಹುದು ಎಂಬ ಆತಂಕವು ಕೂಡ ಪಾತ್ರವನ್ನು ಕಾಡುತ್ತಿರಬಹುದು. ಇನ್ನೊಬ್ಬರಿಗೆ ಮೀಸಲಾದ ಪಾತ್ರವನ್ನು ಒಬ್ಬನೇ ವ್ಯಕ್ತಿ ಮಾಡುವುದರಿಂದ ಇನ್ನೊಬ್ಬನು ಕೂಡ ಅವಕಾಶ ವಂಚಿತನಾಗುವ ಸಾಧ್ಯತೆಗಳು ಹೆಚ್ಚಾಗಿವೆ. ವ್ಯಕ್ತಿ ಸಮಷ್ಟಿ ಪ್ರಜ್ಞೆಯಿಂದ ಹೊರಗೆ ಉಳಿಯಬಹುದೆಂಬ ಆತಂಕವು ಕೂಡ ಮನೆ ಮಾಡಿದೆ. ಏಕೆಂದರೆ ಇಂದಿನ ಸಿನಿಮಾಗಳನ್ನು ಗ್ರಹಿಸಿದಾಗ ಕತೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ನಿರ್ದೇಶನ, ಹಾಡುಗಳು, ಎಲ್ಲವೂ ಕೂಡ ಒಬ್ಬನೇ ಪಾತ್ರವಾಗಿ ಸಿನಿಮಾ ಮಾಡಿದ್ದೆ ಆದರೆ ಹಲವು ವ್ಯಕ್ತಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇಂದು ಹೆಚ್ಚಾಗಿವೆ. ಈ ರೀತಿ ರಂಗಭೂಮಿಯಲ್ಲಿ ಕೂಡ ಏಕವ್ಯಕ್ತಿ ಪ್ರದರ್ಶನಕ್ಕೆ ಎಲ್ಲಾ ಅವಕಾಶಗಳನ್ನು ತಾನೊಬ್ಬನೇ ಬಳಸಿಕೊಂಡಾಗ ಇನ್ನೊಬ್ಬ ವ್ಯಕ್ತಿಗೆ ಕೆಲಸವಿಲ್ಲದಂತಾಗುತ್ತದೆ. ಹಾಗಾಗಿ ರಂಗಭೂಮಿಯ ಕಡೆ ಮುಖ ಮಾಡುವವರ ಸಂಖ್ಯೆಯು ಕೂಡ ಕ್ರಮೇಣ ಕಡಿಮೆಯಾಗುತ್ತಿದೆ. ಆಧುನಿಕತೆಯ ಏಐ ತಂತ್ರಜ್ಞಾನ ರಂಗಭೂಮಿಯನ್ನು ಆವರಿಸಿಕೊಳ್ಳುವಲ್ಲಿ ದಾಪುಗಾಲು ಹಾಕುತ್ತಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.
ಏಕ ವ್ಯಕ್ತಿ ಪ್ರದರ್ಶನ ಮಾಡುವ ವ್ಯಕ್ತಿ ನಟನೆಯಲ್ಲಿ ನುರಿತವನಾಗಿರಬೇಕು. ನಟನಾದವನು ಪ್ರೇಕ್ಷಕರೊಂದಿಗೆ ಸದಾ ಕಾಲ ಸಂಭಾಷಣೆ ಮಾಡುತ್ತಲೇ ಇರುವಂತೆ ನಟಿಸುತ್ತಿರಬೇಕು. ಯಾವುದೇ ರೀತಿಯ ಗೊಂದಲಕ್ಕೆ ಪ್ರೇಕ್ಷಕ ಒಳಗಾಗದಂತೆ ತನ್ನ ಮಾತಿನ ಚಾತುರ್ಯವನ್ನು ತಾತ್ಪರ್ಯವನ್ನು ಮಥಿಸುತ್ತಿರಬೇಕು. ಇದು ಒಂದು ರೀತಿಯ ಸಾಹಸವೇ ಸರಿ.
ಕೆಲವು ನಾಟಕಗಳಲ್ಲಿ ಎರಡು ಪಾತ್ರಗಳು ಮಾತ್ರ ಮಾತನಾಡುತ್ತಿರುತ್ತವೆ. ಇದು ಏಕವ್ಯಕ್ತಿಯಂತೆ ಕಂಡರೂ ಸ್ವಲ್ಪ ಮಟ್ಟಿನ ಬದಲಾವಣೆ ನಿರೀಕ್ಷಿಸಬಹುದು. ಮತ್ತೊಂದು ಪಾತ್ರಕ್ಕೆ ಉಸಿರಾಟ ಆಡುವುದಕ್ಕೆ ಸಮಯವಿರುವುದು. ಏಕ ವ್ಯಕ್ತಿ ಪ್ರದರ್ಶನದಲ್ಲಿ ಉಸಿರಾಡುವುದಕ್ಕೂ ಕೂಡ ಸಮಯವಿರುವುದಿಲ್ಲ. ಏಕವ್ಯಕ್ತಿ ಪಾತ್ರ ನಟನೆಯ ಮಧ್ಯದಲ್ಲಿ ನೀರು ಕುಡಿದು ಬಂದು ಪಾತ್ರ ನಿರ್ವಹಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಒತ್ತಡದ ನಿರ್ವಹಣೆಯನ್ನು ನಟನಾದವನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಈ ತರದ ಹಲವು ಸಮಸ್ಯೆಗಳು ಏಕವ್ಯಕ್ತಿ ಪ್ರದರ್ಶನಕ್ಕೆ ಸವಾಲಾಗಿವೆ.
ಆಧುನಿಕ ರಂಗಭೂಮಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣಬೇಕಾದರೆ ಏಕವ್ಯಕ್ತಿ ಪ್ರದರ್ಶನದಿಂದ ಹೊರ ಬರಬೇಕೆನಿಸುತ್ತದೆ. ಬಹು ವ್ಯಕ್ತಿಗಳ ನಾಟಕ ಪ್ರದರ್ಶನಕ್ಕೂ ಇಂದು ನಟರ ಕೊರತೆ ಇದೆ. ಹಾಗಾಗಿ ಏಕವ್ಯಕ್ತಿ ಪ್ರದರ್ಶನ ನಾಟಕ ಹುಟ್ಟಿಕೊಂಡಿರಲುಬಹುದು. ಹವ್ಯಾಸಿ ನಟರು ಇದನ್ನು ತಮ್ಮ ಮಾನದಂಡವಾಗಿ ರೂಪಿಸಿಕೊಂಡಿರಲುಬಹುದು. ಏಕವ್ಯಕ್ತಿ ಪ್ರದರ್ಶನ ಈ ಮೊದಲೇ ಅಲ್ಲ ರಂಗಭೂಮಿ ಕಾಲದಿಂದಲೂ ಕೂಡ ಇದು ಇರುವಂಥದ್ದು. ಇಂದು ತುಸು ಹೆಚ್ಚಾಗಿರಬಹುದು. ಹಾಗಾಗಿ ವೈರುಧ್ಯಗಳು ಕೂಡ ಹೆಚ್ಚಾಗಿವೆ.

ಮಕ್ಕಳಿಗೆ ರಂಗ ಶಿಕ್ಷಣವನ್ನು ಕೂಡ ಕೊಡಬೇಕೆಂಬ ಬಹುದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ರಾಷ್ಟ್ರೀಯ ನಾಟಕ ಶಾಲೆ ಹಾಗೂ ಇನ್ನಿತರ ರಂಗ ಶಾಲೆಗಳಲ್ಲಿ ಪದವಿ ಪಡೆದ ಯುವಕರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಆದಾಯವನ್ನು ನಿರೀಕ್ಷಿಸುವುದು ಕೂಡ ಅಷ್ಟೇ ಕಷ್ಟ ಎಂಬ ಭಾವವು ರಂಗ ನಟರಲ್ಲಿದೆ. ರಂಗಭೂಮಿಯಲ್ಲಿ ಪದವಿ ಪಡೆದ ಶಿಕ್ಷಕರನ್ನು ಶಾಲೆಗಳಿಗೆ ನೇಮಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಬೇಕು.
ಒಂದು ನಾಟಕ ಪ್ರಯೋಗದಿಂದ ಮಗು ಎಲ್ಲಾ ರೀತಿಯ ವಿನ್ಯಾಸಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗತ್ತದೆ ಎಂಬ ಅರಿವನ್ನು ವಿದ್ವಾಂಸರು ಮನಗಂಡಿದ್ದಾರೆ.
ನಾಟಕದ ಓದು, ನಟನೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಬದುಕಿನ ಹಲವು ಘಟನೆಗಳನ್ನು ಅನುಭವಿಸುವುದರ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಾರೆ. ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ರಂಗ ಶಿಕ್ಷಣ ಮಕ್ಕಳಿಗೆ ಇಂದು ಅವಶ್ಯ. ಏಕ ವ್ಯಕ್ತಿಯ ಮಾದರಿಯದಾಗಿರಬಹುದು ಅಥವಾ ಎಲ್ಲಾ ಮಕ್ಕಳು ಕೂಡಿ ನಾಟಕವನ್ನು ಮಾಡಿದಾಗ ಬಹು ಸಂಸ್ಕೃತಿಯ ಆಯಾಮವನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು. ಈಗಾಗಲೇ ರಂಗ ಶಿಕ್ಷಕರಾಗಿ ನೇಮಕಗೊಂಡಿರುವ ಹಲವು ಪದವೀಧರರು ಮಕ್ಕಳನ್ನು ರಂಗಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ರಂಗಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ.

ಒಬ್ಬ ರಂಗ ಶಿಕ್ಷಕ ಮಾಡುವುದನ್ನು ಕೂಡ ಏಕ ವ್ಯಕ್ತಿ ಪ್ರದರ್ಶನವೆಂದು ನಾವು ಕರೆಯಬಹುದು. ಕೇವಲ ರಂಗದ ಮೇಲೆ ಪ್ರದರ್ಶನ ಮಾಡುವುದಕ್ಕಿಂತ ಹಲವು ವ್ಯಕ್ತಿಗಳ ವ್ಯಕ್ತಿತ್ವವನ್ನು ನಿರ್ಮಿಸುವುದಕ್ಕೆ ನಾಟಕದಿಂದ ಮಾತ್ರ ಸಾಧ್ಯವೆಂಬುದನ್ನು ವಿಶ್ವ ರಂಗಭೂಮಿದಿನದಂದು ಮನಗಾಣಬಹುದು.

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.
